ವಿ. ಎಸ್. ಶ್ರೀನಿವಾಸ ಶಾಸ್ತ್ರಿಶ್ರೀನಿವಾಸ ಶಾಸ್ತ್ರಿಗಳ ಇಂಗ್ಲಿಷ್ ಭಾಷಣಗಳು ನಾಲ್ಕು ಖಂಡಗಳಲ್ಲಿ ಸಾಮಾನ್ಯರನ್ನೂ ವಿದ್ವಾಂಸರನ್ನೂ ನಾಯಕರನ್ನೂ ಬೆರಗುಗೊಳಿಸಿದವು. ಭಾಷಣಗಳ ಹಿಂದಿದ್ದುದು ಅಸಾಧಾರಣ ವ್ಯಕ್ತಿತ್ವ. ಬಡತನದಲ್ಲಿ ಬೆಳೆದ ಶಾಸ್ತ್ರಿಗಳಿಗೆ ಅಪಾರ ವಿದ್ವತ್ತು, ಪ್ರತಿಭೆ, ತಾಳ್ಮೆ, ನ್ಯಾಯನಿಷ್ಠೆ, ಪ್ರಾಮಾಣಿಕತೆ ಇವೇ ಆಸ್ತಿ. ತಮ್ಮ ಎಲ್ಲ ಶಕ್ತಿಗಳನ್ನೂ ಭಾರತದ ಸೇವೆಗೆ ಅರ್ಪಿಸಿದರು.

ವಿ. ಎಸ್. ಶ್ರೀನಿವಾಸ ಶಾಸ್ತ್ರಿ

ಶಾಲೆಗೆ ಬೇಸಿಗೆ ರಜ ಬಂದರೆ ಆ ಹುಡುಗ ಕುಂಭಕೋಣಂನಿಂದ ಹತ್ತು ಮೈಲಿ ದೂರದಲ್ಲಿದ್ದ ಸಾತನೂರಿಗೆ ಹೋಗಿಬಿಡುತ್ತಿದ್ದ. ಅಲ್ಲಿ ಅವನ ಅಕ್ಕ- ಭಾವ ಇದ್ದರು. ಒಂದು ಸಲ ಬೇಸಿಗೆ ರಜದಲ್ಲಿ ಸಾತನೂರಿಗೆ ಬಂದ ಅವನಿಗೆ ಗೋಲಿ ಆಟದ ಹುಚ್ಚು ಹಿಡಿಯಿತು.

ತಪ್ಪದ ಗುರಿ

ಒಂದುದಿನ ಗೋಲಿಯಾಟ ಭರದಿಂದ ಸಾಗಿತ್ತು.

ಹುಡುಗರ ಗೋಲಿಯಾಟದ ಕುತೂಹಲವನ್ನು ಗಮನಿಸಿದ ಅನೇಕ ಹಿರಿಯರು ಆಟವನ್ನು ನೋಡುತ್ತ ನಿಂತರು. ಆ ಹುಡುಗನ ಗುರಿಯನ್ನು ಪರೀಕ್ಷಿಸಲು ಬಯಸಿದ ಒಬ್ಬರು ದೂರದ ದಿಣ್ಣೆಯ ಮೇಲೆ ಒಂದು ಗೋಲಿಯನ್ನು ಇಟ್ಟರು.

“ಎಲ್ಲಿ, ಅದನ್ನು ಹೂಡಿ ನೋಡೋಣ” ಎಂದರು.

ಆ ಕೂಡಲೇ ಅವನು ಇನ್ನೊಂದು ಗೋಲಿಯನ್ನು ತನ್ನ ಎಡಗೈ ನಡು ಬೆರಳಿಗೆ ಒತ್ತಿ ಎಳೆದು ಹಿಡಿದು, ಅದು ನೆಲದ ಮೇಲೆ ಹೊರಳದಂತೆ ಗುರಿಯಿಟ್ಟು ದಿಣ್ಣೆಯ ಮೇಲಿದ್ದ ಗೋಲಿಗೆ ತಗಲುವಂತೆ ಚಿಮ್ಮಿದ.

ಠಣ್ಣೆಂದು ದಿಣ್ಣೆಯ ಮೇಲಿದ್ದ ಗೋಲಿ ಎಗರಿಬಿದ್ದು ಎರಡು ಹೋಳಾಯಿತು.

“ಭೇಷ್, ಭೇಷ್” ಎಂದು ಅಲ್ಲಿದ್ದವರೆಲ್ಲ ಅವನನ್ನು ಹೊಗಳಿದರು.

ಆ ಹುಡುಗನೇ ಮುಂದೆ ಮಹಾ ಗೌರವಾನ್ವಿತ ಬೆಳ್ಳಿಯ ಕಂಠದ ವಿ. ಎಸ್. ಶ್ರೀನಿವಾಸ ಶಾಸ್ತ್ರಿ ಎಂದು ಹೆಸರುವಾಸಿಯಾದ.

ಹದಿಮೂರನೇ ಸ್ಥಾನ

ತಂಜಾವೂರು ಜಿಲ್ಲೆಯಲ್ಲಿರುವ ವಲಂಗೈಮಾನ್ ಎಂಬ ಊರಿನಲ್ಲಿ ೧೮೬೯ನೇ ಇಸವಿ ಸೆಪ್ಟೆಂಬರ್ ತಿಂಗಳು ೨೨ನೇ ತಾರೀಖು ಶ್ರೀನಿವಾಸ ಜನಿಸಿದ. ಅವನ ತಂದೆಯವರ ಹೆಸರು ಶಂಕರನಾರಾಯಣ ಶಾಸ್ತ್ರಿ: ತಾಯಿಯವರ ಹೆಸರು ಬಾಲಾಂಬಾಳ್.

ಕುಂಭಕೋಣಂನಲ್ಲಿ ಪ್ರೌಢಶಾಲೆಯಲ್ಲಿ ಮೆಟ್ರಿಕ್ಯುಲೇಷನ್ (ಈಗಿನ ಎಸ್. ಎಸ್. ಎಲ್. ಸಿ.)ವರೆಗೆ ಶ್ರೀನಿವಾಸ ಓದಿದ. ೧೮೮೩ ರ ಡಿಸೆಂಬರ್‌ನಲ್ಲಿ ಪರೀಕ್ಷಾ ಫಲಿತಾಂಶ ಪ್ರಕಟವಾಯಿತು. ಶ್ರೀನಿವಾಸ ತೇರ್ಗಡೆಯಾಗಿದ್ದ. ಆದರೆ ಸಂಸಾರದ ಬಡತನದಿಂದ ಆತ ಕಾಲೇಜಿನಲ್ಲಿ ಓದು ಮುಂದುವರಿಸುವಂತಿರಲಿಲ್ಲ.

ಆಗಿನ ಕಾಲದಲ್ಲಿ ಈಗಿನ ತಮಿಳುನಾಡನ್ನು ಮದರಾಸ್ ಪ್ರಾಂತ ಎಂದು ಕರೆಯುತ್ತಿದ್ದರು. ಒಟ್ಟು ೨೧ ಜಿಲ್ಲೆಗಳು ಆ ಪ್ರಾಂತದಲ್ಲಿ ಇದ್ದವು. ಮೆಟ್ರಿಕ್ಯುಲೇಷನ್ ಮತ್ತು ಎಫ್. ಎ. ಪರೀಕ್ಷೆಗಳಲ್ಲಿ ಅತ್ಯುತ್ತಮ ಮಟ್ಟದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಜಿಲ್ಲೆಗೊಬ್ಬರಂತೆ ಆರಿಸಿ ಅವರಿಗೆ ಆಗಿನ ಸರ್ಕಾರ ವಿದ್ಯಾರ್ಥಿ ವೇತನ ನೀಡಿ ಅವರು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಅನುಕೂಲ ಮಾಡಿಕೊಡುತ್ತಿತ್ತು.

ಮೆಟ್ರಿಕ್ ಪರೀಕ್ಷಾ ಫಲಿತಾಂಶ ಪ್ರಕಟವಾಗಿ ಒಂದುವಾರ ಕಳೆಯಿತು. ಯಾರು ಯವ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬ ವಿಚಾರ ತಿಳಿದಿರಲಿಲ್ಲ.

ಶ್ರೀನಿವಾಸನಿಗೆ ಮುಂದೆ ಓದುವ ಆಸೆ. ಆದರೆ ಫಲಿತಾಂಶ ತಿಳಿಯದೆ ಎನೂ ಮಾಡುವಂತಿಲ್ಲ.

ಆ ವಾರದ ಗೆಜೆಟ್ ಬಂತು. ಸಾಯಂಕಾಲ ಕತ್ತಲಾಗುತ್ತಲೂ ಶ್ರೀನಿವಾಸನೂ ಅಂಚೆ ಕಛೇರಿಯ ಬಳಿ ಹೋಗಿ ನಿಂತ. ತನ್ನ ಗತಿ ಏನಾಗಿದೆಯೋ ಎಂಬ ಯೋಚನೆಯಲ್ಲಿ ಅವನಿಗೆ ಒಂದು ನಿಮಿಷ ಒಂದು ಯುಗದಂತೆ ಕಂಡಿತು.

ಅವನ ಶಾಲೆಯ ಅಧ್ಯಾಪಕರೇ ಗೆಜೆಟ್‌ನಲ್ಲಿ ಪ್ರಕಟವಾಗಿದ್ದ ಫಲಿತಾಂಶವನ್ನು ಓದುತ್ತಿದ್ದರು. ಆದರೆ ಶ್ರೀನಿವಾಸ ನಿಂತಿದ್ದ ಸ್ಥಳಕ್ಕೆ ಅದು ಕೇಳಿಸುತ್ತಿರಲಿಲ್ಲ. ಅಲ್ಲಿ ನಿಂತಿದ್ದ ಇತರ ಹುಡುಗರು ತಮ್ಮ ಫಲಿತಾಂಶವನ್ನು ತಿಳಿದು ಅಲ್ಲಿಂದ ಹೊರಟಮೇಲೆ ಅವನು ಮುಂದಕ್ಕೆ ಹೋದ.

ಅವನ ಮುಖವನ್ನು ಕಂಡ ಅಧ್ಯಾಪಕರು, “ಎಷ್ಟು ಹೊತ್ತಿನಿಂದ ನಿನ್ನನ್ನೇ ಹುಡುಕುತ್ತಾ ಇದ್ದೀನಿ. ಎಲ್ಲಿಗೆ ಹೋಗಿದ್ದೆ ?” ಎಂದರು.

“ಏನಾಯಿತು ಸಾರ್ ?” ಎಂದ ಶ್ರೀನಿವಾಸ.

“ಹದಿಮೂರನೇ ಸ್ಥಾನ” ಎಂದು ಅಧ್ಯಾಪಕರು ಉತ್ಸಾಹದಿಂದ, ಹೆಮ್ಮೆಯಿಂದ ನುಡಿದರು.

ಶ್ರೀನಿವಾಸನ ತಾಯಿ ತಂದೆ ಊರಿಗೆ ಹೋಗಿದ್ದರು. ಅಲ್ಲಿಗೆ ಹೋಗಬೇಕಾದರೆ ಕತ್ತಲಲ್ಲಿ ಆರು ಮೈಲಿ ನಡೆಯಬೇಕು. ಶ್ರೀನಿವಾಸ ಊರಿಗೆ ಹೋಗುವುದಾಗಿ ತಿಳಿಸಿ ಜೊತೆ ಹುಡುಗನೊಡನೆ ಆಗಲೇ ಹೊರಟುಬಿಟ್ಟ. ಕತ್ತಲಲ್ಲಿ ನಡೆಯಬೇಕಲ್ಲ ಎಂಬ ಕಷ್ಟವೂ ಅವನಿಗೆ ಕಾಣಲಿಲ್ಲ.

ಊರನ್ನು ಸೇರಿದಾಗ ರಾತ್ರಿ ಹನ್ನೊಂದು ಗಂಟೆಯಾಗಿತ್ತು.

ಅವನ ತಂದೆ ಎದುರು ಮನೆಯ ಜಗುಲಿಯ ಮೇಲೆ ಕುಳಿತು ರಾಮಾಯಣದ ಕಥೆಯನ್ನು ಓದಿ ಹೇಳುತ್ತಿದ್ದರು.

ಮಗನನ್ನು ಕಂಡ ತಾಯಿ ಕುತೂಹಲದಿಂದ, “ಏನಾಯಿತಪ್ಪ ಶ್ರೀನಿವಾಸ ?” ಎಂದು ವಿಚಾರಿಸಿದರು.

ಎಲ್ಲರೆದುರಿಗೆ ತನಗೆ ’ರ‍್ಯಾಂಕ್’ ಬಂದಿದೆ ಎಂದು ಹೇಳಿಕೊಳ್ಳಲೂ ನಾಚಿಕೆ ಶ್ರೀನಿವಾಸನಿಗೆ. ಆಗ ತಾಯಿಗೆ ಏನೂ ಹೇಳಲಿಲ್ಲ. ಮನೆಗೆ ಹೋದಮೇಲೆ ತಾನು ಪ್ರಾಂತದಲ್ಲಿ ಹದಿಮೂರನೇ ಸ್ಥಾನ (ರ‍್ಯಾಂಕ್) ಗಳಿಸಿರುವ ವಿಚಾರವನ್ನು ಹೇಳಿದ.

ಸ್ವಲ್ಪ ಹೊತ್ತನಲ್ಲೆ ಆ ವಿಚಾರ ಊರಲ್ಲಿ ಎಲ್ಲರಿಗೂ ಗೊತ್ತಾಯಿತು. ಎಲ್ಲರ ಬಾಯಲ್ಲೂ ಅವನ ಹೊಗಳಿಕೆಯೇ.

ಮೊದಲನೆಯ ಸ್ಥಾನ

ಎರಡು ವರ್ಷ ಕಳೆಯಿತು. ಶ್ರೀನಿವಾಸನ ಎಫ್. ಎ. ಪರೀಕ್ಷೆಯ ಫಲಿತಾಂಶ ಪ್ರಕಟವಾಯಿತು.

ಪರೀಕ್ಷೆಯನ್ನು ಮುಗಿಸಿಕೊಂಡ ಶ್ರೀನಿವಾಸ ಅಕ್ಕನ ಊರಿಗೆ ಹೋಗಲಿಲ್ಲ. ಮೇಲಕಾವೇರಿ ಎಂಬ ಊರಿನಲ್ಲಿದ್ದ.

ಒಂದು ದಿನ ಹುಡುಗರೆಲ್ಲ ಸೇರಿ ಆಟದಲ್ಲಿ ತಲ್ಲೀನರಾಗಿದ್ದರು. ಆಗ ಅಲ್ಲಿ ಹಾದುಹೋಗುತ್ತಿದ್ದ ಅಧ್ಯಾಪಕರು ಶ್ರೀನಿವಾಸನನ್ನು ಕರೆದರು. ಅವನು ಗಾಬರಿಗೊಂಡು ಅವರ ಬಳಿಗೆ ಹೋದ.

“ಶ್ರೀನಿವಾಸ, ನೀನು ಎಫ್.ಎ. ಪರೀಕ್ಷೆಯಲ್ಲಿ ಮದರಾಸ್ ಪ್ರಾಂತಕ್ಕೇ ಮೊದಲನೆಯವನು, ಈ ಶುಭ ಸಮಾಚಾರವನ್ನು ಹೋಗಿ ಮನೆಯವರಿಗೆ ತಿಳಿಸು” ಎಂದರು.

ಅವನಿಗೆ ನಂಬಲಾಗಲಿಲ್ಲ.

“ನಿಜ ಕಣಪ್ಪ, ನೀನು ರಾಜ್ಯದ ಇಪ್ಪತ್ತೊಂದು ಜಿಲ್ಲೆಗಳಿಗೆಲ್ಲ ಮೊದಲನೆಯವನು” ಎಂದು ಅವರು ತಮ್ಮ ಶಿಷ್ಯನನ್ನು ವಾತ್ಸಲ್ಯದಿಂದ ಅಪ್ಪಿಕೊಂಡು ಅವನ ಬೆನ್ನು ನೇವರಿಸಿದರು.

ಶ್ರೀನಿವಾಸನಿಗೆ ಆ ಶುಭ ಸಮಾಚಾರವನ್ನು ಆ ಕೂಡಲೇ ತನ್ನ ತಾಯಿ ತಂದೆಯವರಿಗೆ ತಿಳಿಸಬೇಕೆಂಬ ಅತುರ, ಆದರೆ ತನ್ನ ಉತ್ಸಾಹವನ್ನು ಹೊರಗೆ ತೋರ್ಪಸಿಡಿಕೊಳ್ಳದೆ ಅಲ್ಲಿಂದ ಹೊರಟ. ಆ ರಸ್ತೆಯನ್ನು ದಾಟಿದ ಕೂಡಲೇ ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬುದನ್ನು ಅರಿತಕೂಡಲೇ ಅತ್ಯುತ್ಸಾಹದಿಂದ ಎರಡು ಮೂರು ಸಲ ಛಂಗನೆ ಹಾರಿ ಕುಣಿದು, ಕುಪ್ಪಳಿಸಿ ಓಡೋಡುತ್ತ ಬಂದ. ತನ್ನ ತಾಯಿ ತಂದೆಗೆ ಆ ವಿಚಾರವನ್ನು ಹೇಳಿದ.

ಹೆತ್ತವರಿಗೆ ಅದಕ್ಕಿಂತಲೂ ಹೆಚ್ಚು ಸಂತೋಷದ ಸಂಗತಿ ಇನ್ನೇನಿದೆ ?

ಯಾರನ್ನೂ ದ್ವೇಷಿಸುವುದಿಲ್ಲ

ಕೆಲವು ವರ್ಷಗಳ ಹಿಂದಿನ ಮಾತು, ಶ್ರೀನಿವಾಸನಿಗೆ ಆಗ ಹನ್ನೊಂದು ವಯಸ್ಸಾಗಿತ್ತು. ಆಗ ಅವನು ತಾನು ಓದಿದ ನೀತಿ ಕಥೆಗಳಿಂದ ಮತ್ತು ಹಿರಿಯರು ಕಲಿಸಿದ ಪಾಠಗಳಿಂದ ಒಂದು ನಿರ್ಧಾರ ಮಾಡಿದ. ಅದೇನೆಂದರೆ ಯಾರನ್ನೇ ಆಗಲಿ, ಯಾವ ಕಾರಣದಿಂದಲೇ ಆಗಲಿ ದ್ವೇಷಿಸಬಾರದು ಎಂದು. ತನ್ನ ಸಂಗಡ ಮಾತುಬಿಟ್ಟವರ ಬಳಿಗೆ ತಾನೇ ಹೋಗಿ ಸ್ನೇಹ ಬೆಳೆಸಿಕೊಂಡ. ಎಳೆತನದಲ್ಲಿ ತಾನು ಕಲಿತ ಪಾಠವನ್ನು ಅವನು ಕೊನೆಯವರೆಗೆ ನಡೆಸಿದ. ಯಾರನ್ನೂ ದ್ವೇಷ ಮಾಡಲಿಲ್ಲ; ದೇವರಿಗೆ, ಆತ್ಮಸಾಕ್ಷಿಗೆ ಅಂಜಿ ತನ್ನ ಗುಣದ ವಿಮರ್ಶೆ ಮಾಡುತ್ತ ತನ್ನನ್ನು ತಿದ್ದಿಕೊಂಡ. ತನಗೆ ದ್ರೋಹ ಬಗೆದವರ ವಿಚಾರದಲ್ಲಿ ತನ್ನ ಅಭಿಪ್ರಾಯವನ್ನು ತಿಳಿಸಬೇಕಾಗಿ ಬಂದಾಗಲೂ ಆ ವ್ಯಕ್ತಿಯ ದುರ್ಗುಣದ ಬಗ್ಗೆ ಕಡಿಮೆ ಹೇಳಿ ಆತನಲ್ಲಿರುವ ಸದ್ಗುಣವನ್ನು ಶ್ಲಾಘಿಸಿ ಮಾತಾಡುವ ಅಭ್ಯಾಸವನ್ನು ಬೆಳೆಸಿಕೊಂಡ.

ಉಚ್ಚಾರಣೆಯ ಪರೀಕ್ಷೆ

ಬಿ. ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದ ಶ್ರೀನಿವಾಸ ಶಾಸ್ತ್ರಿಯವರು ಕೆಲವು ತಿಂಗಳುಗಳವರೆಗೆ ಯಾವ ನೌಕರಿಯೂ ಸಿಗದೇ ಹಾಗೇ ಇದ್ದರು. ಅವರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರೂ ಅವರಿಗೆ ನೌಕರಿ ಸಿಕ್ಕಿರಲಿಲ್ಲ. ಕಡೆಗೆ ಮಾಯಾವರ ಮುನಿಸಿಪಲ್ ಶಾಲೆಯಲ್ಲಿ ಒಬ್ಬ ಅಧ್ಯಾಪಕರ ಕೆಲಸ ಸಿಕ್ಕಿತು. ಆಗ ಅವರಿಗೆ ಹದಿನೆಂಟು ವರ್ಷ ಮಾತ್ರ.

ಮೂರು ವರ್ಷಗಳನಂತರ ಶಾಸ್ತ್ರಿಯವರು ೧೮೯೧ರಲ್ಲಿ ಮದರಾಸಿನ ಸೈದಾಪೇಟೆಯಲ್ಲಿದ್ದ ಅಧ್ಯಾಪಕರ ತರಬೇತಿ ಕಾಲೇಜಿಗೆ ಸೇರಿದರು. ಅಲ್ಲಿ ಅವರು ಚರ್ಚಾಕೂಟಗಳಲ್ಲಿ, ನಾಟಕಗಳಲ್ಲಿ ಮತ್ತು ಆಟ ಪಾಠಗಳಲ್ಲಿ ವಿಶೇಷ ಆಸಕ್ತಿ ವಹಿಸಿ ಜೊತೆಗಾರರಿಗೆ ಪ್ರಿಯರಾದರು.

ಸೈದಾಪೇಟೆಯ ಕಾಲೇಜಿನಲ್ಲಿ ಆಗ ಪ್ರಿನ್ಸಿಪಾಲರಾಗಿದ್ದವರು ಎ. ಎ. ಹಾಲ್ ಎಂಬವರು. ಒಂದು ದಿನ ಅವರು ಆಂಗ್ಲ ಪಾಠವನ್ನು ಓದುವುದು ಹೀಗೆಂದು ಹೇಳುತ್ತಿದ್ದರು. ವಿದ್ಯಾರ್ಥಿಗಳು ತಾವು ಓದುವಾಗ ಪದಗಳ ಉಚ್ಚಾರದಲ್ಲಿ ಅನೇಕ ತಪ್ಪುಗಳನ್ನು ಮಾಡಿದರು. ಆಗ ಪ್ರಿನ್ಸಿಪಾಲರು ಅವರ ತಪ್ಪುಗಳನ್ನು ತಿದ್ದಿದರು.

ಪರಕೀಯ ಭಾಷೆ. ಅದನ್ನು ಕಲಿಯಲು ಅಷ್ಟು ಸುಲಭವೆ ?

ಶಾಸ್ತ್ರಿಗಳವರ ಸರದಿ ಬಂತು. ಅವರು ಓದಿದರು. ಅವರ ಪದಗಳ ಉಚ್ಚಾರವನ್ನು ಕೇಳಿದ ಹಾಲ್ ತುಂಬ ಸಂತೋಷಗೊಂಡು ಅವರನ್ನು ಬಹುವಾಗಿ ಹೊಗಳಿದರು. ಅಷ್ಟಕ್ಕೆ ನಿಲ್ಲದೆ ಅದೇ ಬಾಯಿಯಲ್ಲಿ ಇತರ ವಿದ್ಯಾರ್ಥಿಗಳನ್ನು ತೆಗಳಿದರು.

ಶಾಸ್ತ್ರಿಯವರು, “ಸರ್, ನನಗೆ ಒಂದು ಮಾತು ಹೇಳಲು ಅವಕಾಶ ಕೊಡಬೇಕು” ಎಂದು ಪ್ರಾರ್ಥಿಸಿದರು.

“ಆಗಬಹುದು. ಅದೇನು ಹೇಳಿ” ಎಂದರು ಪ್ರಿನ್ಸಿಪಾಲ್ ಹಾಲ್.

“ಸರ್, ಆಂಗ್ಲಭಾಷೆ ನಮ್ಮ ಮಾತೃಭಾಷೆಯಲ್ಲ. ಮಿಕ್ಕ ಭಾಷೆಗಳಂತಲ್ಲದೆ ಅತ್ಯಂತ ಕಠಿಣ ಭಾಷೆಯೆಂಬುದು ಗೊತ್ತಿರುವ ವಿಚಾರ. ಅದಲ್ಲದೆ ನಮಗೆ ಬಾಲ್ಯದಿಂದಲೂ ಇಂಗ್ಲಿಷರಿಂದ ಶಿಕ್ಷಣ ದೊರೆತಿರಲಿಲ್ಲ. ಅವರ ಜೊತೆಯಲ್ಲಿ ಮಾತುಕತೆಗಳೂ ಇಲ್ಲ. ವಿಚಾರ ಹೀಗಿರುವಾಗ ನಾವು ಇಷ್ಟರಮಟ್ಟಿಗೆ ಕಲಿತಿದ್ದೇವಲ್ಲ, ಅದೇ ಹೆಚ್ಚು” ಎಂದರು.

ಇದುವರೆಗೆ ಶಾಸ್ತ್ರಿಯವರು ಹೇಳಿದ ಮಾತು ತಪ್ಪಲ್ಲ. ಯಾರಾದರೂ ಹೇಳಲೇಬೇಕಾದುದು. ಆದರೆ ಧೈರ್ಯದಿಂದ ಇನ್ನೊಂದು ಮಾತನ್ನು ಹೇಳಿದರು.

“ನಮ್ಮ ಮೇಲೆ ತಪ್ಪು ಹೇರದೆ ಕರುಣೆ ತೋರಲು ಇನ್ನೂ ಒಂದು ಪ್ರಬಲ ಕಾರಣವಿದೆ. ತಾವು ವಿಶೇಷ ಅನುಮತಿ ನೀಡಿದರೆ ಮಾತ್ರ ಆ ಮಾತನ್ನು ಹೇಳಲು ಸಾಧ್ಯ. ಅನುಮತಿ ಸಿಗುವುದೇ ?”

ಏನೋ ಅನಾಹುತವಾಗಲಿದೆ ಎಂಬ ಹೆದರಿಕೆಯಿಂದ ಇಡೀ ತರಗತಿಯೇ ಶಾಸ್ತ್ರಿಯವರ ಕಡೆ ನೋಡುತ್ತ ಕುಳಿತಿತ್ತು.

“ಅನುಮತಿ ಕೊಟ್ಟಿದ್ದೇನೆ, ಅದೇನು ಹೇಳಿ” ಎಂದು ಬಿಟ್ಟಕಣ್ಣು ಬಿಟ್ಟಂತೆ ನುಡಿದ ಪ್ರಿನ್ಸಿಪಾಲರು ಶಾಸ್ತ್ರಿಯವರನ್ನೆ ನೋಡಿದರು.

“ತಮ್ಮ ಮಾತೃಭಾಷೆಯಲ್ಲೆ ಎಲ್ಲ ವ್ಯವಹಾರಗಳನ್ನೂ ನಡೆಸುವ ತಾವೇ ಈ ಅರ್ಧ ಗಂಟೆಯ ಅವಧಿಯಲ್ಲಿ ಮೂರು ಶಬ್ದಗಳನ್ನು ಒತ್ತಿ ಉಚ್ಚರಿಸಿ ತಪ್ಪು ಮಾಡಿದಿರಿ” ಎಂದರು ಶಾಸ್ತ್ರಿ.

“ಯಾವ ಶಬ್ದಗಳನ್ನು ನಾನು ಹಾಗೆ ತಪ್ಪಾಗಿ ಉಚ್ಚರಿಸಿದೆ ?”  ಪ್ರಿನ್ಸಿಪಾಲರು ಆಶ್ಚರ್ಯದಿಂದ ಕೇಳಿದರು.

ಶಾಸ್ತ್ರಿಗಳು ಆ ಮೂರು ಶಬ್ದಗಳನ್ನು ಹೇಳಿದರು. ಪ್ರಿನ್ಸಿಪಾಲರು ತಮ್ಮ ಉಚ್ಚಾರಣೆಯೇ ಸರಿ ಎಂದರು.

ಕಡೆಗೆ ನಿಘಂಟನ್ನು ತರಿಸಿದಾಗ- ಶಾಸ್ತ್ರಿಗಳ ಉಚ್ಚಾರಣೆ ಸರಿ, ಇಂಗ್ಲಿಷರಾದ ಪ್ರಿನ್ಸಿಪಾಲರ ಉಚ್ಚಾರಣೆ ತಪ್ಪು.

ಪ್ರಿನ್ಸಿಪಾಲರ ಮುಖ ಕೆಂಪಾಯಿತು. ಸ್ವಲ್ಪ ಹೊತ್ತು ಅವರು ಮಾತಾಡಲೇ ಇಲ್ಲ. ಆಮೇಲೆ ಅವರು, “ತಪ್ಪು ನನ್ನದು: ನಾನು ಇನ್ನು ಮುಂದೆ ಶಾಸ್ತ್ರಿ ಇರುವ ಕಡೆ ಇನ್ನೊಬ್ಬರ ತಪ್ಪು ತಿದ್ದುವುದಕ್ಕೆ ಹೆದರುತ್ತೇನೆ” ಎಂದರು.

ಶ್ರೀನಿವಾಸ ಶಾಸ್ತ್ರಿಗಳ ಈ ದಿಟ್ಟತನವನ್ನು ಕಂಡ ಅವರ ಸಹಪಾಠಿಗಳೆಲ್ಲ ತುಂಬ ಸಂತೋಷಪಟ್ಟರು.

ದಿಟ್ಟ ವಿದ್ಯಾರ್ಥಿ

ಎರಡು ತಿಂಗಳಾಯಿತು.

ಎನ್. ವೈದ್ಯನಾಥ ಅಯ್ಯರ್ ಎಂಬ ಪ್ರಾಧ್ಯಾಪಕರು ಸೈದಾಪೇಟೆಯ ಕಾಲೇಜಿಗೆ ವರ್ಗವಾಗಿ ಬಂದರು.

ವೈದ್ಯನಾಥ ಅಯ್ಯರ್ ಬ್ರಿಟಿಷ್ ಸರ್ಕಾರ ಭೂಕಂದಾಯವನ್ನು ಜನರಿಂದ ವಸೂಲು ಮಾಡುವಾಗ ನಡೆದುಕೊಳ್ಳುತ್ತಿದ್ದ ರೀತಿಯನ್ನು ಖಂಡಿಸಿ ಪತ್ರಿಕೆಗೆ ಬರೆದಿದ್ದರು. ಅದೇ ನೆಪಮಾಡಿಕೊಂಡ ಸರ್ಕಾರ ಅವರ ಮೇಲೆ ದೋಷಾರೋಪಣೆ ಹೊರಿಸಿ ಅವರನ್ನು ಸೈದಾಪೇಟೆಗೆ ವರ್ಗಮಾಡಿತು.

ಈ ವಿಚಾರವನ್ನು ತರಗತಿಯಲ್ಲಿ ಪ್ರಸ್ತಾಪ ಮಾಡಿದ ಹಾಲ್, “ಸರ್ಕಾರ ನನ್ನನ್ನು ಕೇಳದೆ ನೇಮಿಸಿದ ಒಬ್ಬ ಹೊಸ ಪ್ರಾಧ್ಯಾಪಕರು ನಿಮಗೆ ಬರುತ್ತಾರೆ. ಸುಳ್ಳು ಹೇಳಿ ಸಿಕ್ಕಿಕೊಂಡು ಜೈಲಿಗೆ ಹೋಗಬೇಕಾಗಿದ್ದವರು ಹೇಗೋ ಪಾರಾದರಂತೆ” ಎಂದರು.

ಈ ಮಾತನ್ನು ಕೇಳಿದ ಶಾಸ್ತ್ರಿಯವರಿಗೆ ವಿಪರೀತ ಸಿಟ್ಟು ಬಂತು.

“ಸರ್, ವಿಷಯವನ್ನು ತಿಳಿಯದೆ ತಾವು ಹೇಳುತ್ತಿದ್ದೀರಿ. ವೈದ್ಯನಾಥ ಅಯ್ಯರ್ ಮಾಡಿದುದು ತಪ್ಪಲ್ಲ: ಸರ್ಕಾರದ ನಿಯಮಕ್ಕೆ ಅದು ವ್ಯತಿರಿಕ್ತವಾಗಿರಬಹುದು. ಆದರೆ ಸತ್ಯಕ್ಕೆ, ಧರ್ಮಕ್ಕೆ ಅವರು ಸರಿಯಾಗಿ ನಡೆದುಕೊಂಡಿದ್ದಾರೆ. ಜೈಲು ಎಂದು ಆ ಮಹಾನುಭಾವರ ಬಗ್ಗೆ ಮಾತಾಡುವುದೇ ಅಧರ್ಮ” ಎಂದರು.

ಅನಂತರ ಕೆಲವು ಕಾಲ ಪ್ರಿನ್ಸಿಪಾಲ್ ಹಾಲ್‌ರಿಗೂ ವೈದ್ಯನಾಥ ಅಯ್ಯರ್ ಅವರಿಗೂ ಹೊಂದಾಣಿಕೆ ಆಗಲೇ ಇಲ್ಲ. ಆಗ ವಿದ್ಯಾ ಇಲಾಖೆಯಲ್ಲಿ ನಿರ್ದೇಶಕರಾಗಿದ್ದ ಡಾಕ್ಟರ್ ಡಂಕನ್ ಎಂಬವರ ಬುದ್ಧಿವಾದದಂತೆ ಹಾಲ್‌ರವರು ವೈದ್ಯನಾಥ ಅಯ್ಯರ್‌ರೊಂದಿಗೆ ಸ್ನೇಹ ಮಾಡಿಕೊಳ್ಳಲು ಬಯಸಿ, ಶಾಸ್ತ್ರಿಗಳ ಸಹಾಯವನ್ನು ಬೇಡಿದರು.

ಶಾಸ್ತ್ರಿಯವರು ಹೇಳುವಂತೆ ಪ್ರಿನ್ಸಿಪಾಲ್ ಹಾಲ್‌ರದು ನಿಜಕ್ಕೂ ಉದಾರ ಬುದ್ಧಿ. ಅವರ ಆ ಹಿರಿಯ ಗುಣದಿಂದ ಶಾಸ್ತ್ರಿಯವರು ಪಾರಾದರು. ಇಲ್ಲದಿದ್ದರೆ ಶಾಸ್ತ್ರಿಯವರ ಜೀವನದ ಗತಿಯೇ ಬದಲಾಗಿ ಹೋಗಿರುತ್ತಿತ್ತು.

ಅಧ್ಯಾಪಕ

ಶಾಸ್ತ್ರಿಯವರು ಮೆಟ್ರಿಕ್ ಓದುತ್ತಿದ್ದಾಗಲೇ ಅಂದರೆ ಅವರಿಗೆ ಹದಿನಾಲ್ಕು ವರ್ಷ ವಯಸ್ಸಾಗಿದ್ದಾಗಲೇ ಪಾರ್ವತಿ ಎಂಬಾಕೆಯೊಡನೆ ವಿವಾಹವಾಯಿತು. ಹನ್ನೆರಡು ವರ್ಷಗಳವರೆಗೆ ಆಕೆ ಅವರೊಡನೆ ಸಂಸಾರ ನಡೆಸಿ ಶಂಕರ ಎಂಬ ಮಗನನ್ನು ಬಿಟ್ಟು ತೀರಿಕೊಂಡರು. ಬಳಿಕ ಅವರು ಲಕ್ಷ್ಮಿ ಎಂಬಾಕೆಯನ್ನು ಲಗ್ನವಾದರು.

ಶಾಸ್ತ್ರಿಯವರಿಗೆ ಬಿ. ಎ. ಆದಮೇಲೆ ವಕೀಲ ವೃತ್ತಿಗೆ ಓದಬೇಕೆಂದು ಆಸೆ ಇತ್ತು. ಆದರೆ ಮನೆಯಲ್ಲಿ ಬಡತನವಿದ್ದುದರಿಂದ ಓದನ್ನು ಮುಂದುವರಿಸಲಾಗಲಿಲ್ಲ.

೧೯೦೨ರಲ್ಲಿ ಮದರಾಸಿನ ಹಿಂದು ಪ್ರೌಢಶಾಲೆಯಲ್ಲಿ ಶಾಸ್ತ್ರಿಯವರು ಮುಖ್ಯೋಪಾಧ್ಯಾಯರಾಗಿದ್ದ ಕಾಲದಲ್ಲಿ ಒಂದು ವರ್ಷ ಮೆಟ್ರಿಕ್ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಲಿಲ್ಲ ಎಂಬ ಕಾರಣದಿಂದ ಮುಖ್ಯೋಪಾಧ್ಯಾಯರ ಕರ್ತವ್ಯದ ವಿಚಾರದಲ್ಲಿ ಶಾಲೆಯ ಆಡಳಿತ ವರ್ಗದವರು ಮಧ್ಯೆ ಪ್ರವೇಶಿಸಿದುದು ಅವರಿಗೆ ಹಿಡಿಸಲಿಲ್ಲ. ಆ ಕಾರಣದಿಂದ ತಮ್ಮನ್ನು ಖಂಡಿಸಿ ಬರೆದ ಪತ್ರವನ್ನು ಆಡಳಿತ ವರ್ಗದವರು ಹಿಂದಕ್ಕೆ ಪಡೆಯದಿದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಶಾಸ್ತ್ರಿ ತಿಳಿಸಿದರು. ಆಡಳಿತ ವರ್ಗ ತಾನು ಬರೆದಿದ್ದ ಕಾಗದವನ್ನು ಹಿಂದಕ್ಕೆ ಪಡೆಯಿತು.

ಗೋಖಲೆಯವರ ಶಿಷ್ಯ

ವಿ. ಕೃಷ್ಣಸ್ವಾಮಿ ಅಯ್ಯರ್ ಎಂಬ ಮಹನೀಯರೊಡನೆ ಶಾಸ್ತ್ರಿಯವರ ಸ್ನೇಹ ಬೆಳೆಯಿತು. ಒಂದು ಸಲ ಅಯ್ಯರ್ ಅವರ ಮನೆಗೆ ಗೋಪಾಕೃಷ್ಣ ಗೋಖಲೆಯವರು ಬಂದಿದ್ದರು. ಅಂದು ಶಾಸ್ತ್ರಿಯವರೂ ಅಲ್ಲಿಗೆ ಬಂದದ್ದು ಮೂವರೂ ಒಟ್ಟಿಗೆ ಭೋಜನ ಮಾಡಿದರು. ಆಗ ನಡೆದ ಸಂಭಾಷಣೆಯ ಫಲವಾಗಿ ೧೯೦೫ರಲ್ಲಿ ಗೋಖಲೆಯವರು ಸ್ಥಾಪಿಸಿದ ಭಾರತೀಯ ಸೇವಕ ಸಂಘದಲ್ಲಿ (ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ) ಅವರಿಗೆ ಸದಸ್ಯತ್ವ ದೊರೆತು ಅನಂತರ ಅವರೊಬ್ಬ ಮಹಾನ್ ವ್ಯಕ್ತಿಯಾಗಲು ಅವರಿಂದ ಸಾಧ್ಯವಾಯಿತು.

೧೯೦೬ರಲ್ಲಿ ಶಾಸ್ತ್ರಿಯವರು ಪುಣೆಯಲ್ಲಿ ಗೋಖಲೆಯವರ ಮನೆಗೆ ತೆರಳಿ ಅಲ್ಲೆ ತಂಗಿದ್ದರು. ಅದುವರೆಗೆ ಬಾವಿಯ ಕಪ್ಪೆಯಂತಿದ್ದ ಅವರಿಗೆ ಹೊರ ಪ್ರಪಂಚದ ಬಗ್ಗೆ, ಒಬ್ಬ ದೇಶಾಭಿಮಾನಿಯ ಕರ್ತವ್ಯದ ಬಗ್ಗೆ ಹಲವು ವಿಚಾರಗಳು ತಿಳಿದವು. ಒಬ್ಬ ಸಜ್ಜನರ ಸಹವಾಸದಿಂದ ಸ್ವಾರ್ಥರಹಿತ ವಿಚಾರಗಳನ್ನು ಆಲೋಚಿಸುವುದ ಕ್ಕಿಂತ ಶ್ರೇಷ್ಠವಾದ ಆನಂದ ಬೇರೆ ಯಾವುದರಲ್ಲಿದೆ ?

ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸದಸ್ಯರಾಗಿ ಭಾರತೀಯ ಬಂಧುಗಳಿಗೆ ಸಲ್ಲಿಸಬಹುದಾದ ಸೇವೆ, ದೇಶದ ಆಗಿನ ಪರಿಸ್ಥಿತಿ ಮೊದಲಾದ ವಿಚಾರಗಳ ಬಗ್ಗೆ ಗೋಖಲೆಯವರು ಶಾಸ್ತ್ರಿಯವರಿಗೆ ಉಪದೇಶ ನೀಡಿದರು. ದಾದಾಭಾಯಿ ನವರೋಜಿ, ರಾನಡೆ, ಭಂಡಾರಕರ್, ಮೆಹ್ತಾ ಮೊದಲಾದ ಮಹನೀಯರನ್ನು ತಾವು ಕಂಡಿದ್ದುದರಿಂದ ಗೋಖಲೆಯವರು ಅವರಿಂದ ತಾವು ಗ್ರಹಿಸಿದ ಹಿರಿಯ ಗುಣಗಳನ್ನು ಶಾಸ್ತ್ರಿಯವರಿಗೆ ಬೋಧಿಸಿದರು. ತಮ್ಮ ಸಂಘದಲ್ಲಿ ಸೇರುವ ವಿಚಾರಕರನ್ನು ಊರಿಗೆ ಹೋಗಿ ಅಲ್ಲಿ ವಿಚಾರಿಸಿ ತಿಳಿಸಿ ಎಂದು ಹೇಳಿದರು.

ಮನೆಯಲ್ಲಿ ಕಡುಬಡತನವಿದ್ದರೂ ಶಾಸ್ತ್ರಿಯವರು ಕೆಲಸವನ್ನು ಬಿಟ್ಟರು. ೧೯೦೭ರ ಜನವರಿ ತಿಂಗಳಲ್ಲಿ ಸರ್ವೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯ ಸದಸ್ಯರಾಗಿ ಸೇರಲು ಶಾಸ್ತ್ರಿಗಳು ಗೋಪಾಲಕೃಷ್ಣ ಗೋಖಲೆಯವರೆದುರು ಪ್ರಮಾಣ ವಚನ ಸ್ವೀಕರಿಸಿದರು.

ಆಗತಾನೆ ಬ್ರಿಟಿಷ್ ಸರ್ಕಾರ ಪೂರ್ವ ಮತ್ತು ಪಶ್ಚಿಮ ಬಂಗಾಳವನ್ನು ಬೇರೆಬೇರೆ ಮಾಡಿತ್ತು. ಮತ್ತೆ ಅದನ್ನು ಒಂದುಗೂಡಿಸಬೇಕೆಂದು ದೊಡ್ಡ ಆಂದೋಳನ ಪ್ರಾರಂಭವಾಗಿತ್ತು. ’ಬ್ರಿಟಿಷರೇ, ಭಾರತವನ್ನು ಬಿಟ್ಟು ತೊಲಗಿ’ ಎಂಬ ಘೋಷಣೆ ದೇಶದ ಮೂಲೆಮೂಲೆಗಳಿಂದಲೂ ಕೇಳಿಬರುತ್ತಿತ್ತು. ಅಂಥ ಸನ್ನಿವೇಶದಲ್ಲಿ ಶಾಸ್ತ್ರಿಯವರನ್ನು ಬಂಗಾಳದಲ್ಲಿ ಸಂಚರಿಸಿ ಬರಲು ಗೋಖಲೆಯವರು ಕಳುಹಿಸಿದರು.

ಇಲ್ಲಿಂದ ಐದು ವರ್ಷಕಾಲ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ನಿಯಮದಂತೆ, ಶಾಸ್ತ್ರಿಯವರು ಬಿಡುವಿಲ್ಲದೆ ಭಾರತದಲ್ಲೆಲ್ಲ ಸಂಚರಿಸಿದರು. ದೇಶದ ವಿವಿಧ ಭಾಗಗಳನ್ನೂ ಆ ಪ್ರದೇಶಗಳ ಜನರನ್ನೂ ಕಣ್ಣಾರೆ ಕಂಡರು. ಜನರ ಸ್ಥಿತಿಗತಿಗಳನ್ನು ತಾವೇ ಅಭ್ಯಾಸಮಾಡಿ ಮನದಟ್ಟು ಮಾಡಿಕೊಂಡರು.

ಶಾಸ್ತ್ರಿಯವರನ್ನು ಕಂಡರೆ ಗೋಪಾಲಕೃಷ್ಣ ಗೋಖಲೆಯವರಿಗೆ ತುಂಬ ಅಚ್ಚುಮೆಚ್ಚು. ಒಂದು ಸಲವೂ ಅವರು ಶಾಸ್ತ್ರಿಗಳ ಮೇಲೆ ಸಿಟ್ಟಾಗಲಿಲ್ಲ. ’ನಿಮ್ಮಲ್ಲಿ ಕೊರತೆ ಕಂಡರಲ್ಲವೆ ನಾನು ನಿಮ್ಮ ಮೇಲೆ ಕೋಪಿಸಿಕೊಳ್ಳಲು ಸಾಧ್ಯ ?’ ಎಂದು ಒಮ್ಮೆ ಗೋಖಲೆ ಹೇಳಿದ್ದರು. ಹಾಗಿತ್ತು ಆ ಗುರು- ಶಿಷ್ಯ ಸಂಬಂಧ.

೧೯೧೫ರಲ್ಲಿ ಗೋಪಾಲಕೃಷ್ಣ ಗೋಖಲೆಯವರು ತೀರಿಕೊಂಡರು. ಆಗ ಸವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಅಧ್ಯಕ್ಷ ಪದವಿಯನ್ನು ಶಾಸ್ತ್ರಿಯವರೇ ವಹಿಸಿಕೊಳ್ಳಬೇಕಾಯಿತು.

೧೯೧೬ರಲ್ಲಿ ಮದರಾಸ್ ವಿಧಾನ ಸಭೆಯಿಂದ ಭಾರತದ ರಾಜ್ಯ ಸಭೆಗೆ (ಇಂಡಿಯನ್ ಲೆಜಿಸ್ಲೆಟಿವ್ ಕೌನ್ಸಿಲ್ ಎಂದು ಆಗಿನ ಹೆಸರು) ನಡದ ಚುನಾವಣೆಯಲ್ಲಿ ಶ್ರೀನಿವಾಸ ಶಾಸ್ತ್ರಿಯವರು ಆರಿಸಿ ಬಂದರು.

ರೌಲತ್ ಮಸೂದೆ

೧೯೧೮ನೇ ವರ್ಷ ಭಾರತಕ್ಕೆ ಅತ್ಯಂತ ಕಷ್ಟದ ಕಾಲ. ೧೯೧೭ ರ ಆಗಸ್ಟ್‌ನಲ್ಲಿ ಮಾಂಟೆಗೂ ವರದಿ ಪ್ರಕಟವಾಯಿತು. ಅದೇ ಜನರಿಗೆ ನಿರಾಸೆಯನ್ನು ತಂದಿತು. ಅದು ಸಾಲದು ಎನ್ನುವಂತೆ ರೌಲತ್ ಮಸೂದೆಯನ್ನು ಜಾರಿಗೆ ಕೊಡಲು ಬ್ರಿಟಿಷ್ ಸರ್ಕಾರ ಪ್ರಯತ್ನ ಮಾಡಿತು. ಶಾಸನವನ್ನು ಜಾರಿಮಾಡದಂತೆ ದೇಶವೇ ಒಂದಾಗಿ ವಿರೋಧಿಸಿತು.

ರೌಲತ್ ಮಸೂದೆ ಜಾರಿಗೆ ಬಂದರೆ ಸರ್ಕಾರಕ್ಕೆ ವಿಶೇಷ ಅಧಿಕಾರ ಲಭ್ಯವಾಗುತ್ತದೆ. ತಾನು ಅಪರಾಧಿ ಎಂದು ಭಾವಿಸುವ ಯಾರನ್ನಾದರೂ ನ್ಯಾಯಾಲಯದ ವಿಚಾರಣೆಯೇ ಇಲ್ಲದೆ ಎಷ್ಟು ಕಾಲದವರೆಗೆ ಬೇಕಾದರೂ ಸೆರೆಮನೆಯಲ್ಲಿಡಲು ಸರ್ಕಾರಕ್ಕೆ ಆ ಮಸೂದೆಯಿಂದ ಸಾಧ್ಯ. ಪ್ರಜೆಗಳ ಹಕ್ಕುಗಳನ್ನು ರಕ್ಷಿಸುವ ನ್ಯಾಯಾಲಯಗಳೂ ಆ ಶಾಸನವನ್ನು ಪ್ರಶ್ನಿಸುವಂತಿಲ್ಲ ಎನ್ನುವಾಗ ಜನರಿಗೆ ಆಗಬಹುದಾದ ಕಷ್ಟನಷ್ಟಗಳು ಎಂಥದು ?

ಆ ಶಾಸನವನ್ನು ಜಾರಿಗೆ ತರದಂತೆ ರಾಜ್ಯಸಭೆಯಲ್ಲಿ ಶಾಸ್ತ್ರಿಯವರು ವಾದಿಸಿದರು. ಆಗ ಅವರು ಮಾಡಿದ ಎರಡು ಭಾಷಣಗಳ ಬಗ್ಗೆ ಇಡೀ ದೇಶವೇ ಹೊಗಳಿತು.

ಪ್ರಪಂಚದ ಮೊದಲನೇ ಮಹಾಯುದ್ಧದ ವೇಳೆಯಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುವುದಾಗಿ ನಂಬಿಸಿ ವಂಚನೆ ಮಾಡಿದ ಕ್ರಮವನ್ನೂ ಅದರ ಜೊತೆಗೆ ಯುದ್ಧದ ವೇಳೆಯಲ್ಲಿ ಭಾರತದಿಂದ ಅಪಾರ ಹಣವನ್ನು ಪಡೆದ ಬ್ರಿಟಿಷ್ ಸರ್ಕಾರದ ಕ್ರಮವನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಶಾಸ್ತ್ರಿಯವರು ಮಾಡಿದ ಭಾಷಣದಲ್ಲಿ, “ನಮ್ಮನ್ನು ಪರೀಕ್ಷಿಸಲು ಅತ್ಯಂತ ಕಷ್ಟವಾದ ಕೆಲಸಗಳನ್ನು ಮಾಡಲು ಹೇಳಿದಿರಿ. ಅವುಗಳನ್ನು ಮಾಡಿ ಮುಗಿಸಿದಾಗ ಇನ್ನೂ ಕಷ್ಟವಾದ ಕೆಲಸಗಳನ್ನು ಹೇಳಿದಿರಿ. ಅವನ್ನೂ ಮಾಡಿದೆವು. ’ಹುಲಿಹಾಲನ್ನು ತನ್ನಿ’ ಎಂದಿರಿ. ಅದನ್ನು ತಂದೆವು. ಆದರೆ ಈಗ ಹೇಳುತ್ತಿದ್ದಿರಿ, ’ನಾವು ಗಂಡುಹುಲಿ ಹಾಲನ್ನು ತರಲು ಹೇಳಿದುದು’ ಎಂದು. ಇದು ನ್ಯಾಯವೆಂದು ನಿಮಗೆ ಕಾಣಿಸುವುದೆ?” ಎಂದರು.

ಇಡೀ ದೇಶದಲ್ಲಿ ಎಲ್ಲರ ಬಾಯಲ್ಲೂ ಶಾಸ್ತ್ರಿಯವರ ಮಾತೇ .

ಕೆಲವು ಮಂದಿ ಬಿಳಿಯರು ಶಾಸ್ತ್ರಿಯವರ ಭಾಷಣ ಮುಗಿದ ಮೇಲೆ ಅವರ ಬಳಿ ಬಂದು, “ಈ ಕ್ಷಣ ರೌಲತ್ ಮಸೂದೆಯ ಅಂಗೀಕಾರದ ಬಗ್ಗೆ ಅಭಿಪ್ರಾಯ ಕೇಳಿದರೆ ನಾವು ನಿಮ್ಮ ಪರವಾಗಿ ನಮ್ಮ ಮತವನ್ನು ಹಾಕುತ್ತೇವೆ” ಎಂದು ಅವರನ್ನು ಹೊಗಳಿದರು.

ಆ ಬಳಿಕ ರೌಲತ್ ಶಾಸನವು ಕೆಲವು ತಿದ್ದುಪಡಿಗಳೊಡನೆ ಜಾರಿಗೆ ಬಂತು. ಆದರೆ ಜನತಾ ಆಂದೋಲನ ಹೆಚ್ಚಿದುದರಿಂದ ಶಾಸನದಲ್ಲಿ ಅದನ್ನು ಕಾಣಿಸಿದ್ದಂತೆ ಅದನ್ನು ಒಂದು ಸಲವೂ ಬ್ರಿಟಿಷ್ ಸರ್ಕಾರ ಪ್ರಯೋಗ ಮಾಡಲಿಲ್ಲ.

ಆಗಿನ ರಾಜ್ಯಸಭೆಯಲ್ಲಿ ಶಾಸ್ತ್ರಿಯವರು ತಮ್ಮ ಅಪೂರ್ವವಾದ ವಾಕ್ಸಾಮರ್ಥ್ಯದಿಂದ, ವಾದಮಂಡನೆಯಿಂದ ಸಭೆಯ ಗಮನವನ್ನು ಸೆಳೆಯುತ್ತಿದ್ದರು. ಆಗಿನ ವೈಸರಾಯ್ ಆಗಿದ್ದ ಲಾರ್ಡ್ ಷೆಲ್ಮ್ಸ್‌ಫರ್ಡ್ ಲಂಡನ್‌ನಲ್ಲಿ ನಡೆಯಲಿದ್ದ ಇಂಪೀರಿಯಲ್ ಕಾನ್‌ಫರೆನ್ಸ್‌ಗೆ ಶಾಸ್ತ್ರಿಯವರನ್ನು ಆರಿಸಿ ಕಳುಹಿಸಿದರು. ಅವರನ್ನೆ ಆರಿಸಿದುದಕ್ಕೆ ವೈಸರಾಯ್ ನೀಡಿದ ಕಾರಣ, “ಶಾಸ್ತ್ರಿಯವರು ಭಾರತದ ಯೋಗ್ಯ ಪ್ರತಿನಿಧಿ. ಅವರು ಮಾತನಾಡಲು ಬಾಯಿತೆರೆದರೆ ಸಭಾಸದರೆಲ್ಲ ಆಶ್ಚರ್ಯ ಪಡುತ್ತ ಅವರ ಮಾತನ್ನೆ ಕೇಳುತ್ತಾರೆ.”

ದಕ್ಷಿಣ ಆಫ್ರಿಕ ಪ್ರಶ್ನೆ

ಈ ಅಧಿವೇಶನದಿಂದ ಶಾಸ್ತ್ರಿಯವರ ಜೀವನದ ಒಂದು ಮುಖ್ಯ ಅಧ್ಯಾಯ ಪ್ರಾರಂಭವಾಯಿತು. ಅಧಿವೇಶನಕ್ಕೆ ದಕ್ಷಿಣ ಆಫ್ರಿಕದ ಮುಖ್ಯಮಂತ್ರಿಯೂ ಇತರ ನಾಯಕರೂ ಬಂದಿದ್ದರು. ದಕ್ಷಿಣ ಆಫ್ರಿಕದಲ್ಲಿ ಬಿಳಿಯರಲ್ಲದವರಿಗೆ ಮರ್ಯಾದೆ ಇಲ್ಲ. ಅಂಚೆ ಕಚೇರಿಯಲ್ಲಿ ಬಿಳಿಯರಿಗೇ ಬೇರೆ ಕಿಟಕಿ, ಬಣ್ಣದವರಿಗೇ ಬೇರೆ ಕಿಟಕಿ. ಬಿಳಿಯರು ವಾಸವಾಗಿರುವ ಕಡೆ ಅವರು ವಾಸಿಸುವಂತಿಲ್ಲ. ಗಾಂಧೀಜಿ ಅಲ್ಲಿದ್ದಾಗ ಮೊದಲನೆಯ ತರಗತಿಯಲ್ಲಿ ಕುಳಿತರೆಂದು ಬಿಳಿಯರು ಅವರನ್ನು ಹೊರಕ್ಕೆ ನೂಕಿದ್ದರು.

ಇಂಪೀರಿಯಲ್ ಕಾನ್‌ಫರೆನ್ಸ್‌ನಲ್ಲಿ ಶಾಸ್ತ್ರಿಯವರು ಒಂದು ನಿರ್ಣಯವನ್ನು ಮಂಡಿಸಿದರು. ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಸೇರಿದ ರಾಷ್ಟ್ರದಲ್ಲಿರುವವರಿಗೆಲ್ಲ ಚಕ್ರಾಧಿಪತ್ಯದ ಯಾವ ಭಾಗದಲ್ಲೆ ಆಗಲಿ ಸಮಾನತೆ ಇರಬೇಕು ಎಂದು. ದಕ್ಷಿಣ ಆಫ್ರಿಕ ಈ ನಿರ್ಣಯವನ್ನು ಒಪ್ಪಲಿಲ್ಲ.

೧೯೨೬ಲ್ಲಿ ಭಾರತ ಸರ್ಕಾರ ದಕ್ಷಿಣ ಆಫ್ರಿಕಾಕ್ಕೆ ಒಂದು ನಿಯೋಗವನ್ನು ಕಳುಹಿಸಿತು. ಆ ಹೊತ್ತಿಗೆ ಅಲ್ಲಿನ ಸರ್ಕಾರ ಭಾರತೀಯರಿಗಿದ್ದ ತೀರ ಅಲ್ಪ ಅನುಕೂಲಗಳನ್ನು ಕಿತ್ತುಕೊಳ್ಳುವುದರಲ್ಲಿತ್ತು. ಭಾರತ ಸರ್ಕಾರ ಕಳುಹಿಸಿದ ನಿಯೋಗದಲ್ಲಿ ಶ್ರೀನಿವಾಸ ಶಾಸ್ತ್ರಿಗಳು ಸದಸ್ಯರಾಗಿದ್ದರು. ಎರಡು ಸರ್ಕಾರಗಳ ನಡುವೆ ಒಂದು ಒಪ್ಪಂದವೂ ಆಯಿತು. ಭಾರತೀಯರ ಸ್ಥಿತಿ ಸ್ವಲ್ಪ ಉತ್ತಮಗೊಳ್ಳುವಂತೆ ಕಂಡಿತು.

ದಕ್ಷಿಣ ಆಫ್ರಿಕದಲ್ಲಿ

ಎರಡು ಸರ್ಕಾರಗಳ ಸಹಕಾರವನ್ನು ಸುಲಭಗೊಳಿಸಲು ಭಾರತ ಸರ್ಕಾರ ದಕ್ಷಿಣ ಆಫ್ರಿಕದಲ್ಲಿ ’ಏಜೆಂಟ್ ಜನರಲ್’ ಎಂದು ಕರೆಯುವ ಒಬ್ಬ ಅಧಿಕಾರಿಯನ್ನು ನೇಮಿಸಬೇಕು ಎಂದು ತೀರ್ಮಾನವಾಗಿತ್ತು. ಆ ಪದವಿಗೆ ಯಾರನ್ನು ನೇಮಿಸುವುದು ಎಂಬ ವಿಚಾರ ಬಂದಾಗ ಶಾಸ್ತ್ರಿಯವರನ್ನೇ ಆ ಪದವಿಗೆ ನೇಮಕ ಮಾಡಬೇಕು: ಅವರೇ ಅದಕ್ಕೆ ಅರ್ಹ ವ್ಯಕ್ತಿ ಎಂಬುದಾಗಿ ಗಾಂಧಿಯವರು ತಮ್ಮ ಪತ್ರಿಕೆಯಲ್ಲಿ ಬರೆದರಲ್ಲದೆ ವೈಸರಾಯ್‌ಗೂ ಹಾಗೆಯೇ ತಿಳಿಸಿದರು. ಅದರಂತೆ ಸರ್ಕಾರ ಶಾಸ್ತ್ರಿಯವರನ್ನೆ ನೇಮಿಸಿತು. ಹೊಸ ಪದವಿಯನ್ನು ಅವರು ಅಂಗೀಕರಿಸುವುದಕ್ಕೆ ಮುಂಚೆ ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಅಧ್ಯಕ್ಷ ಪದವಿಗೆ ರಾಜಿನಾಮೆ ನೀಡಿದರು.

ದಕ್ಷಿಣ ಆಫ್ರಿಕದಲ್ಲಿ ಭಾರತ ದೇಶದ ಏಜೆಂಟ್ ಜನರಲ್ ಆಗಿ ಶಾಸ್ತ್ರಿಯವರು ಒಂದೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅವರ ಕೆಲಸದಲ್ಲಿ ಹೆಜ್ಜೆಹೆಜ್ಜೆಗೆ ತೊಡಕು. ಬಿಳಿಯರಿಗೆ ಬಣ್ಣದವರನ್ನು ಕಂಡರೆ ತಿರಸ್ಕಾರ, ಭಯ. ಅವರು ಬಣ್ಣದವರಿಗೆ ಯಾವ ಸಹಾನುಭೂತಿಯನ್ನು ತೋರಿಸಲೂ ಸಿದ್ಧವಿರಲಿಲ್ಲ. ಶಾಸ್ತ್ರಿಯವರಿಗೆ ಇಳಿದುಕೊಳ್ಳಲು ಹೋಟೆಲಿನಲ್ಲಿ ಸ್ಥಳ ಸಿಕ್ಕುವುದು ಕಷ್ಟವಾಯಿತು. ಆದರೆ ಶಾಸ್ತ್ರಿಗಳದು ಅಸಾಧಾರಣ ತಾಳ್ಮೆ, ಮೃದು ಮಾತು, ನ್ಯಾಯದೃಷ್ಟಿ. ಅವರ ಸೌಜನ್ಯ ಘನತೆಗಳೇ ಅಲ್ಲಿನ ಭಾರತೀಯರಿಗೆ ಒಂದು ಆಸ್ತಿಯಾಯಿತು.

ಒಂದು ಸಲ ನೆಟಾಲ್ ಸಂಸ್ಥಾನದ ಒಂದು ಪಟ್ಟಣದಲ್ಲಿ ಶಾಸ್ತ್ರಿಯವರ ಭಾಷಣಕ್ಕೆ ಏರ್ಪಾಡಾಗಿತ್ತು. ಜನಸಂದಣಿ ಸೇರಿತ್ತು. ಆಗ ಅಲ್ಲಿಗೆ ಬಂದಿದ್ದ ಒಬ್ಬ ಮಿಲಿಟರಿ ಅಧಿಕಾರಿ, “ನೋಡಿ ಕಾಲ ಹೇಗೆ ಬದಲಾಗಿ ಹೋಗಿದೆ. ಹಿಂದೆ ಭಾರತೀಯರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಬಹುದಾಗಿತ್ತು. ಆಗ ಕೇಳುವವರಿರಲಿಲ್ಲ. ಈಗ ಅವರ ಭಾಷಣವನ್ನು ಕೇಳಿ ಸಹಿಸಬೇಕಾಗಿದೆ” ಎಂದು ಕೂಗಿಕೊಂಡರು.

ಭಾಷಣ ಮುಗಿದನಂತರ ಸಭಿಕರನೇಕರು ಶಾಸ್ತ್ರಿಯವರನ್ನು ಹಲವು ಪ್ರಶ್ನೆಗಳನ್ನು ಕೇಳಿದರು. ಕೆಲವು ಮನಸ್ಸನ್ನು ನೋಯಿಸುವಂತಹ ಪ್ರಶ್ನೆಗಳು. ಉದ್ವೇಗಗೊಳ್ಳದೆ ಶಾಸ್ತ್ರಿಯವರು ಎಲ್ಲರಿಗೂ ಸಮಂಜಸವಾದ ಉತ್ತರಗಳನ್ನು ನೀಡಿದರು. ಆ ನಿವೃತ್ತ ಮಿಲಿಟರಿ ಅಧಿಕಾರಿಯ ಮಾತಿಗೂ ತಮ್ಮ ಭಾಷಣದಲ್ಲಿ ಉತ್ತರ ಕೊಟ್ಟರು.

ಸಭೆ ಮುಗಿದು ಶಾಸ್ತ್ರಿಯವರು ಹೊರಟಾಗ ಒಬ್ಬ ಮಹಿಳೆ ಮುಂದೆ ಬಂದು, “ದಯವಿಟ್ಟು ಈ ಕಡೆಗೆ ಬನ್ನಿ” ಎಂದು ಕರೆದು ಅವರನ್ನು ಒಂದು ಬದಿಗೆ ಕರೆದುಕೊಂಡು ಹೋದರು. ಅಲ್ಲೊಂದು ಕಡೆ ಸಭೆಯಲ್ಲಿ ಶಾಸ್ತ್ರಿಯವರನ್ನು ನಿಂದಿಸಿದ್ದ ನಿವೃತ್ತ ಮಿಲಿಟರಿ ಅಧಿಕಾರಿ ಬಿಕ್ಕಿಬಿಕ್ಕಿ ಅಳುತ್ತ ನಿಂತಿದ್ದರು.

ಆ ಮಹಿಳೆ ಎಲ್ಲವನ್ನೂ ಶಾಸ್ತ್ರಿಗಳಿಗೆ ತಿಳಿಸಿ, “ತಾವು ದೊಡ್ಡಮನಸ್ಸು ಮಾಡಿ ಅವರನ್ನು ಕ್ಷಮಿಸುವುದಾಗಿ ಹೇಳಿ ಅವರ ಕೈಕುಲಕಬೇಕು” ಎಂದು ಪ್ರಾರ್ಥಿಸಿದರು.

“ಕ್ಷಮಿಸಿದ್ದೇನೆ” ಎಂದ ಶಾಸ್ತ್ರಿಯವರು ಅವರ ಕೈಕುಲುಕಿದರು.

ದಕ್ಷಿಣ ಆಫ್ರಿಕದಲ್ಲಿದ್ದ ಅವಧಿಯಲ್ಲಿ ಶಾಸ್ತ್ರಿಯವರ ಪ್ರಯತ್ನದ ಫವಾಗಿ ಅಲ್ಲಿನ ಭಾರತೀಯ ಸಂಜಾತ ವಿದ್ಯಾಭಿವೃದ್ಧಿಯ ಬಗ್ಗೆ ಆಸ್ತೆ ವಹಿಸಲು ಪ್ರೆಟೋರಿಯ ಸರ್ಕಾರ ಒಂದು ವಿಚಾರಣಾ ಆಯೋಗವನ್ನು ನೇಮಿಸಿತು. ಆ ಸಮಿತಿಯ ವರದಿಯಂತೆ ಅಲ್ಲಿನ ಜನರಿಗೆ ಕೊನೆಯ ಪಕ್ಷ ಮೆಟ್ರಿಕ್‌ವರೆಗಾದರೂ ಶಿಕ್ಷಣ ಲಭಿಸಬೇಕೆಂದು ಬಯಸಿದ ಶಾಸ್ತ್ರಿಗಳು ಆ ಪ್ರಯತ್ನದಲ್ಲಿ ತೊಡಗಿದರು. ಒಂದು ವಿದ್ಯಾಲಯವನ್ನು ಸ್ಥಾಪಿಸಲು ಹಣವನ್ನು ಸಂಗ್ರಹಿಸಿದರು. ದರ್ಬಾನ್ ನಗರದಲ್ಲಿ ಶಾಲೆ ಕಟ್ಟಡಕ್ಕೆ ಮಾತ್ರ ಸ್ಥಳ ಕೊಡುವುದಾಗಿಯೂ ಆದರೆ ಆಟದ ಮೈದಾನಕ್ಕೆ ಸ್ಥಳವನ್ನು ಕೊಡಲು ಸಾಧ್ಯವಿಲ್ಲವೆಂದೂ ಅಲ್ಲಿನ ಪುರಸಭೆ ಹಟಮಾಡಿತು. ಆಗ ನಗರಸಭೆಯ ಮನ ಒಲಿಸಲು ಶಾಸ್ತ್ರಿಯವರು ಮಾಡಿದ ಪ್ರಯತ್ನ ಅಲ್ಪಸ್ವಲ್ಪವಲ್ಲ. ಒಂದು ದಿನ ಪುರಸಭೆಯ ಮೀಟಿಂಗ್ ನಡೆಯುವಾಗ ತಮಗೆ ಮಾತಾಡಲು ಅನುಮತಿ ಕೇಳಿದ ಶಾಸ್ತ್ರಿಯವರು ಪರಸಭಾ ಸದಸ್ಯರೆದುರು ವಿದ್ಯಾನಿಲಯದ ಸ್ಥಾಪನೆಯ ಅಗತ್ಯದ ಬಗ್ಗೆ ವಾದಿಸಿದರು. ಅವರ ಸಾಹಸ ಫಲಿಸಿತು. ಆಟದ ಮೈದಾನವೂ ಸೇರಿದಂತೆ ವಿದ್ಯಾಲಯವನ್ನೂ ಸ್ಥಾಪಿಸಲು ಅನುಮತಿ ಸಿಕ್ಕಿತು.

ಶಾಸ್ತ್ರಿಯವರು ಭಾರತಕ್ಕೆ ಹಿಂದಿರುಗಿದ ಮೇಲೆ ’ಶಾಸ್ತ್ರಿ ಕಾಲೇಜ್’ ಎಂಬ ಹೆಸರಿನಲ್ಲಿ ಆ ವಿದ್ಯಾಲಯ ಪ್ರಾರಂಭವಾಯಿತು.

ಕೀನ್ಯಾದಲ್ಲಿ

ಶ್ರೀನಿವಾಸ ಶಾಸ್ತ್ರಿಗಳು ಹಲವು ವರ್ಷಗಳನ್ನೂ ತಮ್ಮ ಶಕ್ತಿಯನ್ನೂ ಜಗತ್ತಿನ ಬೇರೆಬೇರೆ ಭಾಗಗಳಲ್ಲಿರುವ ಭಾರತೀಯರ ಸೇವೆಗೆ ಅರ್ಪಿಸಿದರು. ಭಾರತೀಯರ ಸ್ಥಿತಿ ಎಲ್ಲಿ ಕಷ್ಟವಾದರೆ ಅಲ್ಲಿಗೆ ಶಾಸ್ತ್ರಿಗಳು ಹೋಗಬೇಕು ಎನ್ನುವಂತಾಯಿತು. ಒಂದು ಉದಾಹರಣೆ ಕೀನ್ಯಾ.

ಬ್ರಿಟಿಷರಿಗಿಂತ ಮೊದಲು ಭಾರತೀಯರು ಕೀನ್ಯಾಕ್ಕೆ ಹೋಗಿ ನೆಲೆಸಿದ್ದರು. ಆ ಪ್ರದೇಶವನ್ನು ತಮ್ಮ ಬೆವರಿನಿಂದ ಅಭಿವೃದ್ಧಿಗೆ ತಂದಿದ್ದರು. ಅದು ಬ್ರಿಟಿಷರ ಕೈ ಸೇರಿದ ಮೇಲೂ ಅವರಿಗಾಗಿ ತಮ್ಮ ರಕ್ತ ಚೆಲ್ಲಿದ್ದರು. ಆದರೆ ಅವರಿಗೆ ಸಮಾನತೆ ದೊರೆಯಲಿಲ್ಲ. ಈ ವಿಷಯವಾಗಿ ಬ್ರಿಟಿಷ್ ಸರ್ಕಾರದೊಡನೆ ಮತ್ತು ಕೀನ್ಯಾ ಸರ್ಕಾರದೊಡನೆ ಮಾತುಕತೆ ನಡೆಸಲು ಶಾಸ್ತ್ರಿಗಳ ನಾಯಕತ್ವದಲ್ಲಿ ಭಾರತ ಸರ್ಕಾರ ಲಂಡನಿಗೆ ನಿಯೋಗವನ್ನು ಕಳುಹಿಸಿತು. ಶಾಸ್ತ್ರಿಗಳಿಗೆ ಬ್ರಿಟಿಷರ ನ್ಯಾಯನಿಷ್ಠೆಯಲ್ಲಿ ತುಂಬಾ ನಂಬಿಕೆ. ತಿಂಗಳುಗಟ್ಟಲೆ ಮಾತುಕತೆ ನಡೆದವು. ಕಾಯಿಲೆಯಿಂದ ಹಾಸಿಗೆ ಹಿಡಿದರೂ ಶಾಸ್ತ್ರಿಗಳು ತಮ್ಮ ಕೆಲಸವನ್ನು ಬಿಡಲಿಲ್ಲ. ಆದರೆ ಕೊನೆಗೂ ಭಾರತೀಯರಿಗೆ ನ್ಯಾಯ ಸಿಕ್ಕದೇ ಹೋದಾಗ ಶಾಸ್ತ್ರಿಗಳು, “ನನ್ನ ದೃಷ್ಟಿಯೇ ಬದಲಾಗಿದೆ…. ಭಾರತೀಯರಿಗೆ ಈಗ ದ್ರೋಹವಾಗಿದೆ, ಬ್ರಿಟಿಷರ ನ್ಯಾಯದಲ್ಲಿ ಭಾರತೀಯರಿಗಿದ್ದ ದೃಢ ನಂಬಿಕೆ ನುಚ್ಚು ನೂರಾಗಿದೆ” ಎಂದರು.

ಅಲ್ಲಿಂದ ಹಿಂದಿರುಗಿದವರು ಕಾಯಿಲೆಯಿಂದ, ಮನಸ್ಸಿನ ನೋವಿನಿಂದ ಹಾಸಿಗೆ ಹಿಡಿದರು. ಚೇತರಿಸಿಕೊಳ್ಳಲು ಒಂದು ವರ್ಷವೇ ಹಿಡಿಯಿತು.

೧೯೨೯ರಲ್ಲಿ ಭಾರತದ ಸರ್ಕಾರ ಅವರನ್ನು ಕೀನ್ಯಾಕ್ಕೆ ತನ್ನ ಪ್ರತಿನಿಧಿಯನ್ನಾಗಿ ಕಳುಹಿಸಿತು. ಬ್ರಿಟಿಷ್ ಸರ್ಕಾರದ ಉಪಮಂತ್ರಿಯೊಬ್ಬರು ಕೀನ್ಯಾಕ್ಕೆ ಬರುತ್ತಿದ್ದರು. ಶಾಸ್ತ್ರಿಗಳು ಕೀನ್ಯಾ ತಲುಪುತ್ತಲೇ ಬ್ರಿಟಿಷ್ ಸರ್ಕಾರ ತಮಗೆ ಮೋಸ ಮಾಡಿದ್ದುದು ತಿಳಿಯಿತು. ಜೊತೆಗೆ ಅಲ್ಲಿನ ಭಾರತೀಯರಿಗೂ ಅವರಲ್ಲಿ ನಂಬಿಕೆ ಇರಲಿಲ್ಲ. ಅವರು ಆಡಿದ ಮಾತನ್ನೆಲ್ಲಾ ತಪ್ಪರ್ಥ ಮಾಡಿಕೊಂಡರು. ಅವರಿಗೆ ತುಂಬ ಅಪಮಾನವಾಯಿತು. ಆದರೆ, ’ನಾನು ಸೋತರೂ ಚಿಂತೆ ಇಲ್ಲ, ನನ್ನ ಸೋಲು ಮುಂದಿನವರ ವಿಜಯಕ್ಕೆ ಹಾದಿಯಾದರೆ ಸಾಕು’ ಎನ್ನುವುದು ಅವರ ದೃಷ್ಟಿ. ಬ್ರಿಟಿಷ್ ಸರ್ಕಾರದ ಮೋಸ, ಬಿಳಿಯರ ವಿರೋಧ, ಭಾರತೀಯರ ಅನುಮಾನ, ತಮ್ಮ ಅನಾರೋಗ್ಯ ಎಲ್ಲದರ ಮಧ್ಯೆ ಕೀನ್ಯಾದ ಭಾರತೀಯರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸಿದರು.

ಅಪ್ರತಿಮ ಭಾಷಣಕಾರ

’ಶಾಸ್ತ್ರಿಯವರ ಭಾಷಣವನ್ನು ಕೇಳಿದ ಮೇಲೆ ನಮ್ಮ ಭಾಷೆಯ ಸೌಂದರ್ಯವನ್ನು ನಾವು ತಿಳಿದುಕೊಂಡೆವು’ ಎಂದು ಅನೇಕ ಬ್ರಿಟಿಷರೇ ಹೇಳುತ್ತಿದ್ದರು: ಹಾಗಿತ್ತು ಅವರ ಭಾಷಣದ ರೀತಿ.

೧೯೨೨ ರಲ್ಲಿ ಜಿನೀವ, ಆಸ್ಟ್ರೇಲಿಯ, ನ್ಯೂಜಿಲೆಂಡ್, ಕೆನಡಾ ಮೊದಲಾದ ದೇಶಗಳಲ್ಲಿ ಶಾಸ್ತ್ರಿಯವರು ಪ್ರವಾಸಮಾಡಿದರು. ಭಾರತದ ವಿಷಯ ಆ ದೇಶಗಳಿಗೆ ಏನೇನೂ ತಿಳಿಯದು ಎಂದೇ ಹೇಳಬೇಕಾಗಿಲ್ಲ. ಅಲ್ಲಿ ಬಹುಮಂದಿ ಭಾರತ ಕಾಡುಜನರ ದೇಶ ಎಂದೇ ಭಾವಿಸಿದ್ದರು.

ಎಲ್ಲ ಕಡೆ ಶಾಸ್ತ್ರಿಗಳು ತಮ್ಮ ಮಾತಿನ ಪ್ರತಿಭೆಯಿಂದ ಮನ್ನಣೆ ಪಡೆದರು.

ಕೆನಡಾದಲ್ಲಿ ಶಾಸ್ತ್ರಿಯವರ ಮಾತನ್ನು ಕೇಳಿದ ಪ್ರಮುಖರೊಬ್ಬರು ಮುಂಬಯಿಯ ತಮ್ಮ ಮಿತ್ರರಿಗೆ ಬರೆದಿದ್ದ ಒಂದು ಪತ್ರ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರಲ್ಲಿ, ’ಭಾರತದ ಬಗ್ಗೆ ಮೊದಲೇ ನನಗೆ ಸ್ವಲ್ಪ ತಿಳಿದಿತ್ತು. ಕೆನಡಾದಲ್ಲಿ ಶಾಸ್ತ್ರಿಯವರು ಮಾಡಿದ ಭಾಷಣಗಳಿಂದ ಇನ್ನೂ ಹೆಚ್ಚಾಗಿ ತಿಳಿದುಕೊಂಡೆ. ನಿಮ್ಮ ದೇಶದಲ್ಲಿ ಪ್ರಜಾ ಪ್ರತಿನಿಧಿ ಸರ್ಕಾರದ ಆಡಳಿತ ಎಷ್ಟರಮಟ್ಟಿಗೆ ಮುಂದುವರೆದಿದೆ ಎಂಬ ವಿಚಾರ ನನಗೆ ಗೊತ್ತಿರಲಿಲ್ಲ. ಶಾಸ್ತ್ರಿಯವರಂತಹ ಮಹನೀಯರು ಇರುವುದು ಭಾರತದ ಭಾಗ್ಯ’ ಎಂದು ತಿಳಿಸಿದ್ದರು.

ಬ್ರಿಟಿಷ್ ಸರ್ಕಾರದ ಪರವಾಗಿ ಶಾಸ್ತ್ರಿಯವರು ಎರಡು ಬಾರಿ ಅಮೆರಿಕಕ್ಕೆ ತೆರಳಿದ್ದರು. ಅವರು ವಾಷಿಂಗ್‌ಟನ್ ನಗರದಲ್ಲಿ ಮಾತನಾಡಿದ ಬಗ್ಗೆ ಎಲ್ಮರ್ ಡೇವಿಸ್ ಎಂಬುವರು ನ್ಯೂಯಾರ್ಕ್ ಟೈಂಸ್ ಪತ್ರಿಕೆಯಲ್ಲಿ ಹೀಗೆ ಬರೆದರು :

“ಈ ಮುಂಚೆ ಶಾಸ್ತ್ರಿಗಳ ಬಗ್ಗೆ ಯಾರಿಗೂ ಏನೂ ತಿಳಿದಿರಲಿಲ್ಲ. ಆದರೆ ಈಗ ಅವರ ಬಗ್ಗೆ ಏನಾದರೂ ಕೇಳದ ದಿನವೇ ಇಲ್ಲ. ಬ್ರಿಟಿಷ್ ಸಾಮ್ರಾಜ್ಯಷಾಹಿ ಪರವಾಗಿ ಅವರು ಮಾತನಾಡುವರೆಂದು ನಂಬಿದ್ದವರ ಮಾತನ್ನು ಹುಸಿ ಮಾಡಿದರು. ಭಾರತಕ್ಕೆ ಸ್ವರಾಜ್ಯ ಲಭ್ಯವಾಗಬೇಕು ಎಂಬ ವಿಚಾರವನ್ನು ತಿಳಿಸಲು ಅವರು ಹಿಂದೆಮುಂದೆ ನೋಡಲಿಲ್ಲ. ಬ್ರಿಟನ್ ಮತ್ತು ಅಮೆರಿಕಾದ ಪ್ರತಿನಿಧಿಗಳಿಗಿಂತಲೂ ಅವರು ಸ್ಪಷ್ಟವಾಗಿ ಆಂಗ್ಲ ಶಬ್ದಗಳನ್ನು ಉಚ್ಚಾರ ಮಾಡುತ್ತಾರೆ.”

“ನಿಮ್ಮ ದೇಶದ ಬಗ್ಗೆ ನಮಗಿದ್ದ ತಪ್ಪು ಅಭಿಪ್ರಾಯಗಳು ದೂರವಾದವು” ಎಂದರು ಆಸ್ಟ್ರೇಲಿಯಾದ ಪ್ರಧಾನಿ ಹ್ಯೂಸ್, ಶಾಸ್ತ್ರಿಗಳು ಅಲ್ಲಿ ಪ್ರವಾಸ ಮಾಡಿದ ಮೇಲೆ.

ನ್ಯಾಯಪೀಠದ ಮುಂದೆ ಸಮಾನತೆ

ಭಾರತದಲ್ಲಿ ಬ್ರಿಟಿಷ್ ಸರ್ಕಾರವಿದ್ದ ಕಾಲದಲ್ಲಿ ಕ್ರಿಮಿನಲ್ ಕಾನೂನಿನಲ್ಲಿ ಬ್ರಿಟಿಷರಿಗೇ ಒಂದು ನ್ಯಾಯ, ಭಾರತೀಯರಿಗೇ ಒಂದು ನ್ಯಾಯವಿತ್ತು. ಈ ರೀತಿಯ ಪಕ್ಷಪಾತದಿಂದ ಎರಡೂ ವರ್ಗದ ಜನರಲ್ಲಿ ಶತಮಾನಗಳಿಂದ ಬದ್ಧದ್ವೇಷವಿತ್ತು. ಈ ವ್ಯತ್ಯಾಸವನ್ನು ಕಡೆಗಾಣಿಸಲು ಶಾಸ್ತ್ರಿಯವರು ಮಾಡಿದ ಪ್ರಯತ್ನ ವಿಫಲವಾಗಿತ್ತು. ಮತ್ತೆ ಶಾಸ್ತ್ರಿಯವರು ಪ್ರಯತ್ನ ನಡೆಸಿ ಅಪರಾಧ ಕಾನೂನಿಗೆ ತಿದ್ದುಪಡಿ ಸೂಚಿಸಿದರು. ಅವನ್ನು ಒಪ್ಪಿಕೊಂಡ ಬ್ರಿಟಿಷ್ ಸರ್ಕಾರ ಸಣ್ಣಪುಟ್ಟ ಅಂಶಗಳ ಹೊರತು ಉಳಿದಂತಿದ್ದ ಪಕ್ಷಪಾತವನ್ನು ನಿವಾರಿಸಿತು.

ಇಂಗ್ಲೆಂಡಿನ ಮನ್ನಣೆ

ಶಾಸ್ತ್ರಿಯವರು ಹಲವು ಬಾರಿ ಇಂಗ್ಲೆಂಡಿಗೆ ತೆರಳಿದ್ದರು. ೧೯೨೯ ಮತ್ತು ೧೯೩೧ರಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಅವರು ಭಾಗವಹಿಸಿದರು.

ಸಾರ್ವಜನಿಕ ಜೀವನದಲ್ಲಿ ಶಾಸ್ತ್ರಿಯವರು ಸಲ್ಲಿಸಿದ ಸೇವೆಗಾಗಿ ಅವರಿಗೆ ಪ್ರೀವಿ ಕೌನ್ಸಿಲರ್ ಪದವಿ ಲಭ್ಯವಾಯಿತು. (ಬ್ರಿಟಿಷ್ ಚಕ್ರವರ್ತಿ ಆಗಿನ ಕಾಲದಲ್ಲಿ ಗೌರವ ಸೂಚಿಸುತ್ತಿದ್ದ ರೀತಿಗಳಲ್ಲಿ ‘ಪ್ರೀವಿ ಕೌನ್ಸಿಲರ್’ ಎಂದು ನೇಮಕ ಮಾಡುವುದು ಒಂದಾಗಿತ್ತು.) ಅದರ ಗುರುತಾಗಿ ಅವರನ್ನು ಮಹಾ ಘನತೆವೆತ್ತ (‘ರೈಟ್ ಆನರಬಲ್’) ಎಂಬ ಗೌರವದಿಂದ ಕರೆಯುವುದು ವಾಡಿಕೆಯಾಯಿತು. ಬಿರುದು ಬಾವಲಿಗಳಿಗೆ ಅವರು ಹೆಚ್ಚಾಗಿ ಆಸೆಪಟ್ಟವರಲ್ಲ. ಬ್ರಿಟಿಷ್ ಸರ್ಕಾರ ನೀಡಬಂದ ಕೆ.ಸಿ.ಎಸ್.ಐ ಬಿರುದನ್ನು ನಿರಾಕರಿಸಿದರು.

ಲಂಡನ್ ಮಹಾನಗರದ ಪೌರ ಸ್ವಾತಂತ್ರ್ಯದ ಗೌರವದ ಹಕ್ಕನ್ನು ಶಾಸ್ತ್ರಿಯವರಿಗೆ ನೀಡಿ ಅವರನ್ನು ಗೌರವಿಸಲಾಯಿತು. ಪ್ರಖ್ಯಾತ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ರೋಡ್ಸ್ ಸ್ಮಾರಕ ಉಪನ್ಯಾಸ ಕೊಡಲು ಯಾರನ್ನಾದರೂ ಆಹ್ವಾನಿಸಿದರೆ ಅದು ಬಹುದೊಡ್ಡ ಗೌರವ ಎಂದು ಎಣಿಕೆ. ಶಾಸ್ತ್ರಿಗಳಿಗೆ ಈ ಆಹ್ವಾನ ಬಂದಿತು. ಬಹು ವಿನಯದಿಂದ ಅವರು ಅದನ್ನು ಸ್ವೀಕರಿಸದೆ ಬಿಟ್ಟರು.

ಕರ್ತವ್ಯನಿಷ್ಠೆ

ಸೇವಾ ಕಾರ್ಯದಲ್ಲಿ ತಮ್ಮ ಕಷ್ಟವನ್ನು ಮರೆತು ಶಾಸ್ತ್ರಿಯವರು ಕೆಲಸವನ್ನು ಮಾಡುತ್ತಿದ್ದರು. ಅವರಿಗೆ ಆಗಾಗ ಎದೆನೋವು ಬರುತ್ತಿತ್ತು. ಅಂಥ ಒಂದು ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಅವರನ್ನು ಡಾ. ಅಭಯಾಂಬಾಳ್ ದತ್ತಿಯ ವಿಶೇಷೋಪನ್ಯಾಸ ನೀಡಲು ಕರೆಯಿತು. ಡಾ. ಅಭಯಾಂಬಾಳ್ ಬದುಕಿದ್ದ ಕಾಲದಲ್ಲಿ ಅವರನ್ನು ಶಾಸ್ತ್ರಿಯವರು ಬಲ್ಲರು. ಆಕೆಯ ಶ್ರೇಷ್ಠ ಗುಣಗಳನ್ನು ಮೆಚ್ಚಿಕೊಂಡಿದ್ದರು. ಅವರು ಉಪನ್ಯಾಸ ನೀಡಲು ಒಪ್ಪಿದರು. ಮಾತನಾಡುವಾಗ ಎದೆ ನೋವಿದ್ದರೂ ಸಹಿಸಿಕೊಂಡು ಉಪನ್ಯಾಸವನ್ನು ಮುಗಿಸಿದರು.

ಉಪಕುಲಪತಿ

ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಐದು ವರ್ಷಗಳ ಕಾಲ ಉಪಕುಲಪತಿಗಳಾಗಿ ಶಾಸ್ತ್ರಿಯವರು ಸೇವೆ ಸಲ್ಲಿಸಿದರು. ಶಾಸ್ತ್ರಿಗಳು ವಿಶ್ವವಿದ್ಯಾನಿಲಯದ ಅಭಿವೃದ್ಧಿಗಾಗಿ ಶ್ರಮವನ್ನೇ ಲೆಕ್ಕಿಸದೆ ದುಡಿದರು. ವಿದ್ಯಾರ್ಥಿಗಳನ್ನು ಬಹು ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ಶಿಸ್ತನ್ನು ಬಿಟ್ಟುಕೊಡುವವರಲ್ಲ.

ಒಮ್ಮೆ ವಿದ್ಯಾರ್ಥಿಗಳು ಮುಷ್ಕರ ಹೂಡಿದರು. ಶಾಸ್ತ್ರಿಗಳು ಬಹು ತಾಳ್ಮೆಯಿಂದ ನಡೆದುಕೊಂಡರು. ಪೋಲೀಸರು ಯಾರನ್ನು ಮುಟ್ಟಲೂ ಅವಕಾಶ ಕೊಡಲಿಲ್ಲ. ಶಾಸ್ತ್ರಿಗಳ ಮಾತಿನಂತೆ ನಡೆಯಬೇಕೆಂದು ಗಾಂಧೀಜಿಯವರೇ ಹೇಳಿದರೂ ಫಲವಾಗಲಿಲ್ಲ.

ಮುಷ್ಕರ ಮುಗಿದಾಗ ವಿಶ್ವವಿದ್ಯಾನಿಲಯದಿಂದ ಕೆಲವರು ತಂಟೆಕೋರರನ್ನು ಹೊರಹಾಕಬೇಕಾಯಿತು. ಆದರಲ್ಲಿ ಒಬ್ಬ ಶಾಸ್ತ್ರಿಗಳ ಆತ್ಮೀಯ ಸ್ನೇಹಿತರಾಗಿದ್ದ ಶ್ರೀಮತಿ ನಾಯ್ಡು ಎನ್ನುವವರ ಮಗ. ಆಕೆಯ ಮಗನು ಶಾಸ್ತ್ರಿಗಳು ಉಪಕುಲಪತಿಗಳಾಗಿದ್ದ ವಿಶ್ವವಿದ್ಯಾನಿಲಯದಲ್ಲಿ ಓದಬೇಕೆಂಬ ಆಸೆಯಿಂದ ಅವನನ್ನು ದಕ್ಷಿಣ ಆಫ್ರಿಕಾದಿಂದ ಕಳುಹಿಸಿದ್ದರು. ಈಗ ಅವನನ್ನು ಕ್ಷಮಿಸಬೇಕೆಂದು ಶಾಸ್ತ್ರಿಗಳಿಗೆ ಹೇಳಿದರು. ರಾಜಕುಮಾರಿ ಅಮೃತ ಕೌರ್ ಅವರಿಂದ ಹೇಳಿಸಿದರು. ಆದರೆ ಶಾಸ್ತ್ರಿಗಳು ಒಪ್ಪಲಿಲ್ಲ.

ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ಶಾಸ್ತ್ರಿಗಳು ಸಲ್ಲಿಸಿದ ಸೇವೆಯ ಮತ್ತು ಅವರ ಅಸಾಧಾರಣ ಪಾಂಡಿತ್ಯದ ಕುರುಹಾಗಿ ವಿಶ್ವವಿದ್ಯಾನಿಲಯದಲ್ಲಿ ಅವರ ಹೆಸರಿನಲ್ಲಿ ಒಂದು ಭವನವನ್ನು ಕಟ್ಟಿಸಿ ಅವರ ತೈಲಚಿತ್ರವನ್ನು ಅನಾವರಣ ಮಾಡಲಾಯಿತು.

ಮಲಯಾ ದೇಶಕ್ಕೆ ಹಿಂದೆ ಅನೇಕ ಭಾರತೀಯರು ರಬ್ಬರ್ ತೋಟಗಳಲ್ಲಿ ಕೆಲಸಕ್ಕಾಗಿ ಹೋದರು. ಅವರ ಸಂಸಾರಗಳೂ ಅಲ್ಲಿಯೇ ನೆಲೆಸಿದವು. ಅಲ್ಲಿ ಅವರಿಗೆ ಬಹಳ ಕಷ್ಟವಿತ್ತು. ಆ ದೇಶದವರೊಂದಿಗೆ ಸಮಾನತೆ ಇರಲಿಲ್ಲ.

ಶಾಸ್ತ್ರಿಗಳು ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿ ಯಾಗಿದ್ದ ವೇಳೆಯಲ್ಲಿ ಭಾರತ ಸರ್ಕಾರ ಅವರನ್ನು ಮಲಯಾ ದೇಶದಲ್ಲಿನ ಭಾರತೀಯ ಕಾರ್ಮಿಕರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ಸಿದ್ಧಪಡಿಸಲು ಕೇಳಿತು. ಜನೋಪಕಾರಿ ಕಾರ್ಯಗಳಲ್ಲಿ ಎಂದೂ ಹಿಂದೆ ಬೀಳದ ಅವರು ಆ ಕೆಲಸವನ್ನು ಸಂತೋಷವಾಗಿ ಒಪ್ಪಿಕೊಂಡು ಮುಗಿಸಿಕೊಟ್ಟರು.

೧೯೪೪ ರಲ್ಲಿ ಮದರಾಸಿನ ಸಂಸ್ಕೃತ ಕಾಲೇಜಿನಲ್ಲಿ ಶಾಸ್ತ್ರಿಯವರು ವಾಲ್ಮೀಕಿ ರಾಮಾಯಣದ ಮೇಲೆ ಹಲವು ಉಪನ್ಯಾಸಗಳನ್ನು ನೀಡಿದರು. ಆ ಉಪನ್ಯಾಸಗಳು ಆ ಬಳಿಕ ಗ್ರಂಥರೂಪದಲ್ಲಿ ಪ್ರಕಟವಾಗಿ ಅತ್ಯಂತ ಲೋಕಪ್ರಸಿದ್ಧವಾಯಿತು.

೧೯೪೬ ರ ಏಪ್ರಿಲ್ ೧೭ ರಂದು ಶಾಸ್ತ್ರಿಗಳು ನಿಧನರಾದರು.

ಎಲ್ಲ ದೇಶಕ್ಕಾಗಿ

ಶಾಸ್ತ್ರಿಗಳ ವಿದ್ವತ್ತು ಅಸಾಧಾರಣವಾದದ್ದು; ನಾಲ್ಕು ಖಂಡಗಳ ನಾಯಕರನ್ನೂ ವಿದ್ವಾಂಸರನ್ನೂ ಬೆರಗುಗೊಳಿಸಿದ್ದು. ರಾಮಾಯಣದ ಮೇಲೆ ಎಷ್ಟು ಅಧಿಕಾರದಿಂದ ಮಾತನಾಡುತ್ತಿದ್ದರೋ ಇಂಗ್ಲಿಷ್ ಭಾಷೆಯ ಒಂದು ಪದದ ಉಚ್ಚಾರಣೆಯ ವಿಷಯದಲ್ಲೂ ಅಷ್ಟೇ ಅಧಿಕಾರದಿಂದ ಮಾತನಾಡುತ್ತಿದ್ದರು. ಜನಸಾಮಾನ್ಯರಿಂದ ಹಿಡಿದು ದೇಶಗಳ ನಾಯಕರು, ವಿಶ್ವವಿದ್ಯಾನಿಲಯಗಳ ಮಹಾವಿದ್ವಾಂಸರು ಅವರ ಉಪನ್ಯಾಸಗಳಿಗೆ ತಲೆದೂಗುತ್ತಿದ್ದರು.

ಇಂತಹ ವಿದ್ವತ್ತಿಗೆ ಶೋಭಿಸುತ್ತ, ಅದು ನಿಜವಾದ ವಿದ್ವತ್ತು ಎಂಬುದಕ್ಕೆ ಸಾಕ್ಷ್ಯವಾದ ನೈಜ ವಿನಯ ಅವರದು. ಇದರಿಂದಲೇ ಆಕ್ಸ್‌ಫರ್ಡ್‌ನಲ್ಲಿ ಅವರು ಭಾಷಣ ಮಾಡಲು ಒಪ್ಪಲಿಲ್ಲ. ಎಂದೂ ಅವರು ಇತರರನ್ನು ಹೀಯಾಳಿಸಿದವರಲ್ಲ, ತಮ್ಮನ್ನು ಹೊಗಳಿಕೊಂಡವರಲ್ಲ. ಸಣ್ಣತನ, ಹೊಟ್ಟೆಕಿಚ್ಚು ಅವರ ಹತ್ತಿರ ಸುಳಿಯವು.

ತಮ್ಮ ಅಸಾಧಾರಣ ಪ್ರತಿಭೆ-ಶಕ್ತಿಗಳನ್ನು ಅವರು ತಮಗಾಗಿ ಬಳಸಲಿಲ್ಲ, ದೇಶಕ್ಕಾಗಿ ಬಳಸಿದರು. ಇದ್ದ ಕೆಲಸವನ್ನು ಬಿಟ್ಟು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ ಸೇರಿದರು. ಹೆಚ್ಚಿನ ಸಂಬಳವಿಲ್ಲ, ಅಧಿಕಾರವಿಲ್ಲ, ಸೇವೆಯೇ ಈ ಬಾಳಿನ ತಿರುಳು. ಈ ದೇಶಸೇವೆಯಲ್ಲಿ ಅವರ ಮಂತ್ರ  ಎದುರಾಳಿಯ ವಿಷಯದಲ್ಲೂ ನ್ಯಾಯವಾಗಿರು, ತಾಳ್ಮೆಯಿಂದಿರು, ಪ್ರಮಾಣಿಕವಾಗಿರು ಎಂದು. ಅವರು ಕ್ರಾಂತಿಕಾರರಲ್ಲ. ಅತಿಯಾಯಿತು ಎನ್ನುವಷ್ಟು ತಾಳ್ಮೆ. ಅನೇಕ ವರ್ಷಗಳ ಕಾಲ ಅವರಿಗೆ ಬ್ರಿಟಿಷರ ನ್ಯಾಯಬುದ್ಧಿಯಲ್ಲಿ ವಿಶೇಷ ನಂಬಿಕೆ. ಗಾಂಧೀಜಿಯವರ ಅಸಹಕಾರ ಧೋರಣೆಯನ್ನು ಅವರು ವಿರೋಧಿಸಿದರು. ಇಷ್ಟಾದರೂ ಗಾಂಧೀಜಿಗೆ ಅವರಲ್ಲಿ ಅಪಾರ ಗೌರವ. ೧೯೩೨ ರಲ್ಲಿ ಅವರು ಉಪವಾಸ ಕೈಗೊಂಡಾಗ ಬೆಳಗಿನ ಜಾವ ಮೂರು ಗಂಟೆಯಲ್ಲಿ ಶಾಸ್ತ್ರಿಗಳಿಗೆ ಕಾಗದ ಬರೆದರು: ‘ನೀವು ನನ್ನ ಅಣ್ಣನಂತೆ, ಒಂದು ತಿಂಗಳಿಂದ ನಿಮ್ಮಿಂದ ಕಾಗದವಿಲ್ಲ. ಸಿಟ್ಟು ಬಂದಿದ್ದರೆ ಬಯ್ದುಬಿಡಿ, ಇಲ್ಲವೇ ಆಶೀರ್ವಾದ ಮಾಡಿ.’

ಈ ಪ್ರೀತಿಗೆ, ಗೌರವಕ್ಕೆ ಕಾರಣ ಶ್ರೀನಿವಾಸ ಶಾಸ್ತ್ರಿಗಳ ಪರಿಪೂರ್ಣ ಪ್ರಾಮಾಣಿಕತೆ. ಅವರದು ಅತಿ ತಾಳ್ಮೆ, ಬ್ರಿಟಿಷರನ್ನು ತುಂಬಾ ನಂಬಿದರು ಎಂದು ಆಕ್ಷೇಪಿಸುವವರೂ ಅವರ ದೇಶಭಕ್ತಿಯನ್ನು ಮೆಚ್ಚಿಕೊಂಡರು. ಅವರಿಗೆ ತೀರ ಕಾಯಿಲೆಯಾಗಿದ್ದಾಗ ಅವರ ಸಾವಿಗೆ ಕೆಲವೇ ದಿನಗಳ ಮೊದಲು ಅವರನ್ನು ನೋಡಲು ಗಾಂಧೀಜಿ ಹೋದರು. ಆ ಭೇಟಿಯನ್ನು ಕುರಿತು ಗಾಂಧೀಜಿ ಹೀಗೆ ಬರೆದಿದ್ದಾರೆ: “ಅವರು ಭಾರತಕ್ಕಾಗಿ, ಭಾರತದ ಸಂಸ್ಕೃತಿಗಾಗಿ ಬದುಕಿದರು. ಪ್ರಾಣ ಕೊಟ್ಟರು. ಕಳೆದ ಬಾರಿ ನಾನು ಅವರನ್ನು ಕಂಡಾಗ ಭಾರತ-ಭಾರತದ ಸಂಸ್ಕೃತಿ ಇವನ್ನು ಬಿಟ್ಟು ಬೇರೆ ವಿಷಯ ಮಾತನಾಡಲೇ ಇಲ್ಲ.”