ಮೈಸೂರು ಜಿಲ್ಲೆಯ ಚಾಮರಾಜ ತಾಲ್ಲೂಕಿನ ವೆಂಕಟಯ್ಯನ ಛತ್ರ ಅಗ್ರಹಾರದಲ್ಲಿ ೧-೧೦-೧೯೨೫ ರಂದು ಜನಿಸಿರುವ ಸಂಪತ್ಕುಮಾರಾಚಾರ್ಯರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. (ಆನರ್ಸ್) ಬಿ.ಎಡ್‌. ರಾಷ್ಟ್ರಭಾಷಾ ವಿಶಾರದ ಪದವಿಗಳನ್ನು ಪಡೆದು ಕಾಶಿಯ ಹಿಂದೂ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ‘ಹೊಯ್ಸಳ ಯುಗದ ಜನಜೀವನ’ ಎಂಬ ಸಂಶೋಧನಾತ್ಮಕ ಮಹಾ ಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್‌ಪದವಿ ಪಡೆದರು.

ತಮಿಳುನಾಡಿನ ಪ್ರೌಢಶಾಲೆಯೊಂದರಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ ಕರ್ನಾಟಕ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆದರೆ ಪ್ರವೃತ್ತಿಯಾದ ಸಂಗೀತ ಸಾಹಿತ್ಯ ಕ್ಷೇತ್ರದಲ್ಲಿನ ಇವರ ಸೇವೆ ಅವ್ಯಾಹತವಾಗಿ ನಡೆದು ಬಂದಿದೆ. ಇವರು ನೀಡಿರುವ ಸೋದಾಹರಣ ಭಾಷಣಗಳು ಸಂಗೀತದ ಅನೇಕ ವಿಷಯಗಳನ್ನು ಕುರಿತಾದ ಲೇಖನಗಳು ಕ್ಷೇತ್ರದ ಇವರ ಅಪೂರ್ವ ಕೊಡುಗೆಯಾಗಿವೆ.

ಸಂಗೀತ ಮತ್ತು ಅದರ ಇತಿಹಾಸ ವಾದ್ಯಗಳು, ನಾನಾ ನೃತ್ಯ ಪ್ರಕಾರಗಳು, ಶಾಸ್ತ್ರ ಗ್ರಂಥಗಳು, ಸಂಗೀತಜ್ಞರು, ಸಂಗೀತಗಾರರು ಮುಂತಾದ ನಾನಾ ವಿವರಣೆಗಳನ್ನೊಳಗೊಂಡು ವಿಶ್ವಕೋಶದಂತಿರುವ ‘ಕರ್ನಾಟಕ ಸಂಗೀತ ಪಾರಿಭಾಷಿಕ ಶಬ್ದಕೋಶ’ ಎರಡು ಸಂಪುಟಗಳಲ್ಲಿ ಇವರ ಕೊಡುಗೆಯಾಗಿ ಕ್ಷೇತ್ರಕ್ಕೆ ಸಂದಿದೆ. ‘ಕರ್ನಾಟಕ ಸಂಗೀತ ಸುಧಾ’, ‘ಸದ್ಗುರು ತ್ಯಾಗರಾಜರು’, ಶ್ರೀ ತ್ಯಾಗರಾಜ ಕೃತಿ ಮಂಜರಿ’, ‘ಸಂಗೀತ ರಸಿಕ ರಂಜನಿ’, ‘ಸಂಗೀತ ಕಲೆಗೆ ಮೈಸೂರು ಒಡೆಯರ ಪ್ರೋತ್ಸಾಹ’, ‘ಶ್ರೀ ತ್ಯಾಗರಾಜ ವಿಜಯ’, ‘ಕರ್ನಾಟಕ ಸಂಗೀತ ದೀಪಿಕೆ’, ಎಳೆಯರಿಗೆ ಸಂಗೀತ ಸುಧಾರಸ’, ‘ರಾಜರು ಮತ್ತು ರಾಜ್ಯಗಳು’, ‘ಕೃಷ್ಣದೇವರಾಯನ ವಿಸ್ತಾರ ದಿನಚರಿ’ ಮುಂತಾದ ಕನ್ನಡ ಕೃತಿಗಳು ಶ್ರೀ ಆಂಡಾಳ್‌ತಿರುಪ್ಪಾವೈ ಶ್ರೀ ಯಮುನಾಚಾರ್ಯರ ಚತುಃಶ್ಲೋಕಿ ಸ್ತೋತ್ರ ರತ್ನಗಳ ಅನುವಾದ ಕನಕದಾಸರ ನವ ವಿಧಭಕ್ತಿ ಇತ್ಯಾದಿ ಪ್ರೌಢ ಆಂಗ್ಲ ಲೇಖನಗಳು – ಪುಸ್ತಕಗಳು  ಸಂಗೀತ ಸರಸ್ವತಿಗೆ ಶ್ರೀಯುತರು ಸಮರ್ಪಿಸಿರುವ ಸೇವಾ ಪುಷ್ಪಗಳು.

ಮೈಸೂರು ಬೆಂಗಳೂರಿನ ಹಲವಾರು ಪ್ರತಿಷ್ಠಿತ ಸಂಸ್ಥೆಗಳೂ ಸಭೆಗಳೂ ಇವರ ಸೇವೆಯನ್ನು ಗುರುತಿಸಿ ಆದರಿಸಿವೆ. ಮೊಟ್ಟಮೊದಲ ಬಾರಿಗೆ ಶ್ರೀ ತ್ಯಾಗರಾಜರ ಸಮಗ್ರ ರಚನೆಗಳ ಪೂರ್ಣ ಪಾಠ ತಾತ್ಪರ್ಯ ಪದಶಃ ಅರ್ಥ ಟಿಪ್ಪಣಿಗಳನ್ನೊಳಗೊಂಡ ಸಂಪುಟವನ್ನು ರಚಿಸಿರುವ ಶ್ರೀಯುತರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ‘ಕರ್ನಾಟಕ ಕಲಾ ತಿಲಕ’, ‘ಲಲಿತ ಕಲಾಶ್ರಯ’ ಮುಂತಾದ ಪ್ರಶಸ್ತಿಗಳೂ ಪ್ರಾಪ್ತವಾಗಿವೆ.