“ಅಣ್ಣಾ, “ಕಪ್ಪಲೋಟ್ಟಿಯ ತಮಿಳನ್” ಚಿದಂಬರಂ ಪಿಳ್ಳೈ ಅಂದರೆ ಯಾರು?” ಚಂದ್ರ ತನ್ನ ಅಣ್ಣನನ್ನು ವಿಚಾರಿಸಿದ.

“ಅವರೇ? ವಿ. ಒ. ಚಿದಂಬರಂ ಪಿಳ್ಳೈ ಅಂತ. ಅವರೊಬ್ಬ ದೊಡ್ಡ ದೇಶಪ್ರೇಮಿ. ಬ್ರಟಿಷರು ನಡೆಸುತ್ತಿದ್ದ ಹಡಗಿನ ವ್ಯಾಪಾರದ ವಿರುದ್ಧ ತಾವೇ ಒಂದು ಹಡಗಿನ ಸಂಸ್ಥೆಯನ್ನು ನಡೆಸಿ ಅದರ ಹಡಗುಗಳ ಶ್ರೀಲಂಕಾಗೆ ಹೋಗಿಬರಲು ಏರ್ಪಾಟು ಮಾಡಿದರು. ಅದರಿಂದ “ಹಡಗನ್ನು ನಡೆಸಿದ ತಮಿಳುನಾಡಿನವರು” ಅಂತ ಹೊಗಳಿ ಅವರನ್ನು ಹಾಗೆ ಕರೀತಾರೆ” ಎಂದು ಚಂದ್ರನ ಅಣ್ಣ ನಿತ್ಯಾನಂದ ವಿವರಿಸಿ ಹೇಳಿದ.

“ಅದೇನು ಮಹಾ ದೊಡ್ಡ ಕೆಲಸ? ಹಡಗುಗಳು ಸಾವಿರಾರು ಮೇಲಿ ಹೋಗಿಬರುವುದಿಲ್ಲವೆ? ಭಾರತದಿಂದ ಶ್ರೀಲಂಕಾಕ್ಕೆ ಹೋಗಿಬರುವುದು ಮಹಾ ದೊಡ್ಡ ಸಾಧನೆಯೆ? ಅಷ್ಟಕ್ಕೆ ಇಷ್ಟೊಂದು ಹೊಗಳಬೇಕೆ?” ಎಂದು ಕೇಲುತ್ತ ಅಲ್ಲಿಗೆ ಬಂದ ಚಿಕ್ಕ ತಮ್ಮ ಅಶೋಕ.

“ಹಿಂದೆ ಭಾರತದೇಶ ಬ್ರಿಟಿಷರ ಆಳ್ವಿಕೆಯಲ್ಲಿ ಇತ್ತು. ಹಡಗಿನ ವ್ಯಾಪಾರವೂ ಅವರ ವಶದಲ್ಲೇ ಇತ್ತು. ಅಂಥವರ ವಿರುದ್ಧ ಹೋರಾ ನಡೆಸುವುದು ಅಂದರೆ ಸಮಾನ್ಯವೆ?” ಎಂದ ನಿತ್ಯಾನಂದ. “ಪಾಪ, ಚಿದಂಬರಂ ಪಿಳ್ಳೈಯವರು ಅದರಿಂದ ಎಷ್ಟು ಕಷ್ಟಪಡಬೇಕಾಯಿತು ಗೊತ್ತೆ? ಅವರಿಗೆ ಸೆರೆಮನೆ ವಾಸ ಆಯಿತು. ಅಲ್ಲಿ ಪಡಬಾರದ ಕಷ್ಟಪಟ್ಟರು”.

“ಅಣ್ಣಾ, ಅಂದ ಹಾಗೆ ನಿನಗೆ ಈಗ ರಜಾ ಇದೆಯಲ್ಲ, ನಮಗೆ ಅವರ ವಿಚಾರ ಹೇಳ್ತಿಯಾ?” ಎಂದು ಹೇಳಿದ ಚಂದ್ರ.

“ಓ ಸಂತೋಷವಾಗಿ ಹೇಳ್ತಿನಿ” ಎಂದ ನಿತ್ಯಾನಂದ. ಪಿಳ್ಳೈಯವರ ಜೀವನ ಚರಿತ್ರೆಯನ್ನು ವಿವರಿಸಲು ಪ್ರಾರಂಭಿಸಿದ:

ಚಿದಂಬರಂ ಪಿಳ್ಳೈಯವರ ಹೆಸರು ಕೇಳಿದರೇ ದೇಶಪ್ರೇಮ ಉಕ್ಕುತ್ತೆ. ಅವರ ವಿರುದ್ಧ ಯಾರಾದರೂ ಏನಾದರೂ ಅಂದರೆ ಸಿಟ್ಟು ಕೆರಳುತ್ತೆ. ಒಂದು ಸಲ ಏನಾಯಿತು ಅಂದರೆ…..

ವಕೀಲರ ಕ್ಷೌರ ಅರ್ಧಕ್ಕೆ ನಿಂತಿತು!

ಅನೇಕ ವರ್ಷಗಳ ಹಿಂದೆ –

ತಮಿಳುನಾಡಿನ ತೂತ್ತುಕುಡಿ ಎಂಬ ಊರಿನಲ್ಲಿ ರಂಗಸ್ವಾಮಿ ಎಂಬ ವಕೀಲರು ಇದ್ದರು. ಅವರಿಗೆ ಬ್ರಟಿಷ್ ಚಕ್ರಾಧಿಪತ್ಯದಲ್ಲಿ ಬಹಳ ಅಭಿಮಾನ, ಬ್ರಟಿಷರ ಬಹು ರಾಜಭಕ್ತಿ. ಒಂದು ದಿನ ಅವರು ಕ್ಷೌರ ಮಾಡಿಸಿಕೊಳ್ಳುತ್ತ ಕುಳಿತಿದ್ದರು. ಆಗ ಆ ಮಾತು ಈ ಮಾತು ಬಂದು ದೇಶದಲ್ಲಿ ಆಗ ನಡೆಯುತ್ತಿದ್ದ ಸ್ವಾತಂತ್ಯ್ರ ಹೋರಾಟದ ವಿಚಾರವೂ ಬಂತು.

“ಇವರು ಕೇಳುತ್ತಾರೆ ಅಂತ ದೇಶಾನ ಇವರ ಕೈಲಿ ಕೊಟ್ಟು ಬಿಡ್ತಾರೇನು? ಈ ಚಿದಂಬರಂ ಪಿಳ್ಳೈ ಒಬ್ಬ ಮಹಾ ದೊಡ್ಡ ಮನುಷ್ಯ” ಎಂದು ರಂಗಸ್ವಾಮಿ ತುಂಬ ಹಗುರವಾಗಿ ಮಾತನಾಡಿದರು.

ಅವರ ಮಾತನ್ನು ಕೇಳುತ್ತಿದ್ದ ಕ್ಷೌರಿಕ ಚಿದಂಬರಂ ಪಿಳ್ಳೈಯವರ ಹೆಸರು ಬಂದುಕೂಡಲೇ ತನ್ನ ಕೆಲಸವನ್ನು ಅಷ್ಟಕ್ಕೇ ನಿಲ್ಲಿಸಿ ಅವರ ಮುಖವನ್ನೇ ನೋಡಿದ.

“ಅವರವರು ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಹೋದರೆ ಸರಿ; ಯಾರು ರಾಜ್ಯ ಆಳಿದರೆ ಇವರಿಗೆಲ್ಲ ಏನು?” ಅಂದರು ರಂಗಸ್ವಾಮಿ.

“ಚಿದಂಬರಂ ಪಿಳ್ಳೈಯವರನ್ನು ಹಾಗಂತೀರಲ್ಲ, ಅವರ ಕೈಲಿ ನಮ್ಮ ದೇಶಕ್ಕೆ ಒಳ್ಳೇದು ಮಾಡುವುದಕ್ಕೆ ಆಗುವುದಿಲ್ಲ ಅಲ್ಲವೇ?…. ಹಾಗಾದರೆ ಈಗ ನಾನೂ ನಿಮಗೆ ಮುಂದೆ ಕ್ಷೌರ ಮಾಡುವುದಿಲ್ಲ. ಉಳಿದ ಕ್ಷೌರಾನ ಈ ಊರಲ್ಲಿ ಯಾರು ಮಾಡ್ತಾರೆ ಅಂತ ನೋಡ್ತಿನಿ” ಎಂದ ಕ್ಷೌರಿಕ, ತನ್ನ ಸಾಮಾನುಗಳನ್ನು ಎತ್ತಿಕೊಂಡು ಅಲ್ಲಿಂದ ಸರಸರನೆ ಹೊರಟುಬಿಟ್ಟ.

ರಂಗಸ್ವಾಮಿಗೆ ಅರ್ಧ ಕ್ಷೌರವಾಗಿತ್ತು. ಅವರು ಕೂಗಿಕೊಂಡರು. ಅವನನ್ನು ಹೆದರಿಸಿದರು; ಗೋಗರೆದರು ಅವನು ಹಿಂತಿರುಗಿಯೂ ನೋಡದೆ ಹೊರಟುಹೋದ.

ಅಷ್ಟೇ ಅಲ್ಲ; ಚಿದಂಬರಂ ಪಿಳ್ಳೈಯವರನ್ನು ರಂಗಸ್ವಾಮಿ ಬೈದರು ಎಂದು ಊರಲ್ಲೆಲ್ಲ ಸಾರಿದುದಲ್ಲದೆ ಅವರಿಗೆ ಅರೆಬರೆಯಾಗಿ ನಿಂ ಕ್ಷೌರವನ್ನು ಮಾಡಕೂಡದೆಂದು ತನ್ನ ಕಡೆಯವರಿಗೆ ಹೇಳಿದ.

ಪಾಪ, ರಂಗಸ್ವಾಮಿಗೆ ಕಷ್ಟಕ್ಕಿಟ್ಟುಕೊಂಡಿತು. ಮನೆಯಿಂದ ಹೊರಕ್ಕೆ ಹೋಗುವಂತಿಲ್ಲ, ಮನೆಯಲ್ಲಿ ಉಳಿಯುವಂತಿಲ್ಲ. ಅವರು ಏನು ಮಾಡುತ್ತಾರೆ?

ಪೋಲಿಸರಿಗೆ ಹೇಳಿಕಳುಹಿಸಿದರು; ಅವರ ರಕ್ಷಣೆಯಲ್ಲಿ ತಿರುವನ್ವೇಲಿ ಎಂಬ ಊರಿಗೆ ಹೋಗಿ ಅಲ್ಲಿ ತಮ್ಮ ಕ್ಷೌರವನ್ನು ಪೂರೈಸಿಕೊಂಡು ಬಂದರು.

ಮೇಲೆ ಹೇಳಿದ ಘಟನೆಯಲ್ಲಿ ಬರುವ ಚಿದಂಬರಂ ಪಿಳ್ಳೈಯವರ ಹೆಸರು ಇಲ್ಲಿ ಮುಖ್ಯವಾದುದು. ದಳಪತಿ ಚಿದಂಬರಂ ಪಿಳ್ಳೈ ಎಂದು ಜನರು ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದರು. ಅಂಥ ಮಹನೀಯರನ್ನು ಟೀಕಿಸಿದ ರಂಗಸ್ವಾಮಿಯವರ ಕ್ಷೌರ ನಿಂತಿತು. ಅಷ್ಟರ ಮಟ್ಟಿಗೆ ಜನರಿಗೆ ಅವರಲ್ಲಿ ಭಕ್ತಿ.

ದೇಶಕ್ಕಾಗಿ ಸೆರೆಮನೆ

ಭಾರತ ಈಗ ಸ್ವತಂತ್ರ ದೇಶವಾಗಿದೆ. ಆದರೆ ಆ ಸ್ವಾತಂತ್ಯ್ರ ಸಿಕ್ಕುವುದಕ್ಕೆ ಎಷ್ಟು ವರ್ಷಗಳ ಕಾಲ ಬೇಕಾಯಿತು ಗೊತ್ತೆ? ಲಕ್ಷೋಪಲಕ್ಷ ಜನರು ತ್ಯಾಗ, ಬಲಿದಾನಗಳನ್ನು ಮಾಡಿ ಭಾರತಕ್ಕೆ ಸ್ವರಾಜ್ಯವನ್ನು ತಂದುಕೊಟ್ಟರು.

ಆಗಿನ ಕಾಲದಲ್ಲಿ ತಮಿಳುನಾಡಿನಲ್ಲಿ “ಸ್ವರಾಜ್ಯ” ಎಂಬ ಶಬ್ದವನ್ನು ಉಚ್ಚಾರ ಮಾಡಲೂ ಜನರು ಹೆದರುತ್ತಿದ್ದರು. “ಸ್ವಾತಂತ್ಯ್ರ” ಎಂದು ಅಪ್ಪಿ ತಪ್ಪಿ ಹೇಳಿದರೆ ಅದು ರಾಜದ್ರೋಹವಾಗುತ್ತದೆ ಎಂದು ಜನರಿಗೆ ಅಂಜಿಕೆ. ಅಂಥ ಒಂದು ಕಾಲದಲ್ಲಿ ಚಿದಂಬರಂ ಪಿಳ್ಳೈಯವರು ತಮಿಳುನಾಡಿನಲ್ಲಿ “ವಂದೇ ಮಾತರಂ” ಎಂದು ಘೋಷಣೆ ಕೂಗಿದರು. ಬ್ರಿಟಿಷರ ಚಕ್ರಾಧಿಪತ್ಯದ ವಿರುದ್ಧ ಜನರನ್ನು ಎತ್ತಿಕಟ್ಟಿದರು.

ಸಹಸ್ರಾರು ಸ್ವಾತಂತ್ಯ್ರ ವೀರರನ್ನು ಹುರಿಗೊಳಿಸಿದ ಚಿದಂಬರಂ ಪಿಳ್ಳೈಯವರು ರಾಜದ್ರೋಹದ ಆಪಾದನೆ ಹೊತ್ತು ಆರು ವರ್ಷಗಳ ಕಾಲ ಸೆರೆಮನೆಯಲ್ಲಿ ಕಷ್ಟಪಟ್ಟರು.

“ಯಾರನ್ನೂ ಬಯ್ಯಬೇಡ”

ತಮಿಳುನಾಡು ಎಂದು ಈಗ ಕರೆಯುತ್ತಿರುವ ರಾಜ್ಯವನ್ನು ಆಗ ಮದರಾಸ್ ಪ್ರಾಂತ ಎಂದು ಕರೆಯುತ್ತಿದ್ದರು. ಅಲ್ಲಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಒಟ್ಟಪಿಡಾರಾಂ ಎಂಬ ಊರಿದೆ. ಅಲ್ಲಿ ಉಲಗನಾಥ ಪಿಳ್ಳೈ ಎಂಬ ಮಹನೀಯರು ಇದ್ದರು. ಆಗಿನ ಕಾಲದಲ್ಲಿ ಅವರು ಆ ಜಿಲ್ಲೆಯಲ್ಲೇ ಹೆಸರುವಾಸಿಯಾದ ವಕೀಲರಾಗಿದ್ದರು. ಅವರ ಮನೆತನವೇ ವಕೀಲರ ಮನೆತನ.

ಪರಮಾಯಿ ಅಮ್ಮಾಳ್ ಉಲಗನಾಥ ಪಿಳ್ಳೈಯವರ ಪತ್ನಿ. ಈ ದಂಪತಿಗಳಿಗೆ ೧೮೭೨ ಸಪ್ಟೆಂಬರ್ ೫ ನೇಯ ತಾರೀಖು ಒಬ್ಬ ಮಗ ಜನಿಸಿದ. ಅವನೇ ಚಿದಂಬರಂ ಪಿಳ್ಳೈ.

ಚಿದಂಬರಂ ಬಾಲ್ಯದಿಂದಲೂ ತುಂಬ ಚೂಟಿಯಾಗಿದ್ದ. ತನ್ನ ಮಾತೃಭಾಷೆಯಾದ ತಮಿಳು ಎಂದರೆ ಅವನಿಗೆ ತುಂಬ ಪ್ರೀತಿ. ತನ್ನ ಭಾಷೆಯನ್ನು, ತನ್ನ ದೇಶವನ್ನು ತಾಯಿ ಎಂದು ಅವನು ಪೂಜಿಸುತ್ತಿದ್ದ.

ಚಿದಂಬರಂನ ವಿದ್ಯಾಭ್ಯಾಸ ಮೊದಲು ಒಟ್ಟಪಿಡಾರಂನಲ್ಲೆ ನಡೆಯಿತು. ಆಮೇಲೆ ಅವನು ಸಂತ ಕ್ಸೇವಿಯರ ಕಾಲೇಜಿನಲ್ಲಿ ಓದಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣನಾದ. ಅನಂತರ ಅವನು ವಕೀಲ ಪರೀಕ್ಷೆಗೆ ಓದಿದ. ಅದರಲ್ಲಿ ಉತ್ತೀರ್ಣನಾದ ಮೇಲೆ ತನ್ನ ತಂದೆಯಂತೆ ತಾನೂ ವಕೀಲ ವೃತ್ತಿಯನ್ನು ಪ್ರಾರಂಭಿಸಿದ.

ಚಿದಂಬರಂ ಪಿಳ್ಳೈ ಮೊದಲು ವಳ್ಳಿಯಮ್ಮ ಎಂಬಾಕೆಯನ್ನು ಮದುವೆಯಾದರು. ಆಕೆ ಕಾಯಿಲೆಯಿಂದ ತೀರಿಕೊಳ್ಳಲು ಮೀನಾಕ್ಷಿ ಎಂಬಾಕೆಯನ್ನು ಮತ್ತೆ ಲಗ್ನವಾದರು.

ಪಿಳ್ಳೈಯವರಿಗೆ ಮೂರು ಜನ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಅವರದು ಬಂಗಾರದಂಥ ಗುಣ.

“ಯಾರನ್ನೂ ಬಯ್ಯಬೇಡ; ಬಯ್ಯುವವರು ಜೀವನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಅನ್ನುವ ಮಾತನ್ನು ನಂಬು” ಎಂದು ಅವರು ಆಗಾಗ ಹೇಳುತ್ತಿದ್ದರು.

ಕನ್ನಡದಲ್ಲಿ ಮೂರು ಸಾಲಿನ ವಚನಗಳನ್ನು ಬರೆದಿರುವ ಸರ್ವಜ್ಞನ ಹೆಸರನ್ನು ನೀವು ಕೇಳಿದ್ದೀರಿ. ಅದೇ ರೀತಿಯಲ್ಲಿ ತಮಿಳು ಭಾಷೆಯಲ್ಲಿ “ತಿರುಕ್ಕುರಳ್” ಎಂಬ ಗ್ರಂಥವನ್ನು ತಿರುವಳ್ಳುವರ್ ಎಂಬುವವರು ಬರೆದಿದ್ದಾರೆ. ಆ ಗ್ರಂಥವನ್ನು ಚಿದಂಬರಂ ಪಿಳ್ಳೈ ಧರ್ಮಶಾಸ್ತ್ರ ಎಂದು ನಂಬಿದ್ದರಲ್ಲದೆ ಅದರಲ್ಲಿ ಹೇಳಿರುವಂತೆಯೇ ನಡೆದುಕೊಳ್ಳುತ್ತಿದ್ದರು.

ಒಂದು ಮೊಕದ್ದಮೆ

ಚಿದಂಬರಂ ಪಿಳ್ಳೈಯವರು ವಕೀಲ ವೃತ್ತಿಯನ್ನು ನಡೆಸಿದ ಒಂದು ಮೊಕದ್ದಮೆಯಿಂದ ತಿರುನನ್ವೇಲಿ ಜಿಲ್ಲೆಯಲ್ಲೇ ತುಂಬ ಹೆಸರು ಪಡೆದರು.

ಕುಲಶೇಖರನಲ್ಲೂರು ಎಂಬುದು ಒಂದು ಸಣ್ಣ ಊರು. ಆ ಊರಿನಲ್ಲಿ ಒಬ್ಬ ದುಷ್ಟ ಇದ್ದ. ಅವನು ಊರಿನಲ್ಲಿ ಎಲ್ಲರಿಗೂ ತಲೆನೋವಾಗಿದ್ದ. ಅವನ ಕಾಟದಿಂದ ಜನರು ಭಯಭೀತರಾಗಿದ್ದರು. ಒಂದು ದಿನ ಅವನು ಹುಲ್ಲು ಬಣವೆಯ ಹತ್ತಿರ ಸಿಕ್ಕಿದಾಗ ಅವನನ್ನು ಕೆಲವರು ಅಟ್ಟಿಸಿಕೊಂಡು ಹೋಗಿ ಕೊಲೆ ಮಾಡಿದರು. ಅವರಲ್ಲಿ ಆರು ಜನ ಪೋಲಿಸರಿಗೆ ಸಿಕ್ಕಿ ಬಿದ್ದರಲ್ಲದೇ ಶಿಕ್ಷೆಗೆ ಗುರಿಯಾದರು.

ಕೊಲೆ ಮಾಡಿದವರಲ್ಲಿ ಏಳನೆಯವರು ಒಬ್ಬರಿದ್ದರು ಎಂದು ಪೋಲಿಸರು ಭಾವಿಸಿದರು. ಅವರ ನಿಜವಾದ  ಹೆಸರು ಆರುಮುಗಂ ಪಿಳ್ಳೈ. ಪೋಲಿಸರು ಅವರ ಹೆಸರನ್ನು ಅಳಗಪ್ಪ ಪಿಳ್ಳೈ ಎಂದು ಬರೆದುಕೊಂಡು ಅವರನ್ನು ಹುಡುಕುತ್ತಿದ್ದರು. ತಾವು ಮಾಡದಿರುವ ಅಪರಾಧಕ್ಕಾಗಿ ತಮ್ಮ ಮೇಲೆ ವಿನಾಕಾರಣ ಅಪಾದನೆ ಹೊರಿಸಲಾಗಿದೆ ಎಂದು ಹೆದರಿಕೊಂಡ ಅವರು ಆ ಊರಿನಿಂದ ತಲೆಮರೆಸಿಕೊಂಡು ಓಡಿ ಹೋಗಿ ತಿರುವಾವಡುದುರೈ ಎಂಬ ಊರಿನಲ್ಲಿದ್ದ ಮಠದಲ್ಲಿ ಆರುಮುಗ ತಂಬಿರಾನ್ ಎಂಬ ಹೆಸರಿನಲ್ಲಿ ಸನ್ಯಾಸವನ್ನು ಪಡೆದು ವಾಸವಾಗಿದ್ದರು.

ಕೊಲೆ ನಡೆದು ಆರು ವರ್ಷಗಳಾದ ಮೇಲೆ ಮಣಿಯಾಚ್ಚಿ ಎಂಬ ಊರಿನಲ್ಲಿ ತಂಬಿರಾನ್ ಸನ್ಯಾಸಿಯನ್ನು ಪೋಲಿಸರು ಹಿಡಿದು ಅವರ ಮೇಲೆ ಮೊಕದ್ದಮೆ ಹೂಡಿದರು.

ಚಿದಂಬರಂ ಪಿಳ್ಳೈಯವರು ತಂಬಿರಾನ್ ಸನ್ಯಾಸಿಯ ವಕಾಲತ್ತು ವಹಿಸಿದರು. ನಿರಪರಾಧಿಯಾದ ಅವರ ಪರ ವಾದಿಸಿದರು. ಎದುರು ಪಕ್ಷದ ವಾದಗಳನ್ನೆಲ್ಲ ತಮ್ಮ ಮಾತಿನ ಜಾಣ್ಮೆಯಿಂದ ಕತ್ತರಿಸಿ ಹಾಕಿದರು.

ಕೊಲೆಯ ವಿಚಾರಣೆಯನ್ನು ವ್ಯಾಲೆಸ್ ಎಂಬ ಆಂಗ್ಲ ನ್ಯಾಯಾಧೀಶ ನಡೆಸಿದ. ಅಪರಾಧಿಯ ವಿರುದ್ಧವಿದ್ದ ಸಾಕ್ಷ್ಯಗಳೆಲ್ಲಿ ಮುಗಿಯುತ್ತಲೂ ಚಿದಂಬರಂ ಪಿಳ್ಳೈಯವರ ವಾದವನ್ನು ಕೇಳಿ ಮೊಕದ್ದಮೆಯ ಒಳರಹಸ್ಯವನ್ನು ಅರಿತುಕೊಂಡು. ಅನಂತರ ತಂಬಿರಾನ್ ಸನ್ಯಾಸಿಯನ್ನು ನಿರಪರಾದಿ ಎಂದು ಬಿಡುಗಡೆ ಮಾಡಿದ.

ಚಿದಂಬರಂ ಪಿಳ್ಳೈಯವರ ವಾದ ವೈಖರಿಯನ್ನು ಗಮನಿಸುತ್ತಿದ್ದ ಬ್ಲಾಕ್ ಸ್ಟನ್ ಎಂಗ ಪೋಲಿಸ್ ಅಧಿಕಾರಿ ತಂಬಿರಾನ್ ಸನ್ಯಾಸಿ ನಿರಪರಾಧಿ ಎನ್ನುವ ತೀರ್ಪು ಹೊರಬಿದ್ದ ಕೂಡಲೇ ಚಿದಂಬರಂ ಪಿಳ್ಳೈಯವರ ಬಳಿಗೆ ಬಂದು ಅವರ ಕೈಕುಲುಕಿ ತನ್ನ ಸಂತೋಷವನ್ನು ವ್ಯಕ್ತಪಡಿಸಿದ.

ಈಗ್ಗೆ ಸುಮಾರು ಐವತ್ತು ವರ್ಷಗಳ ಹಿಂದೆ ನಡೆದ ಈ ಕೊಲೆಯ ವಿಚಾರಣೆಯಿಂದ ತಿರುನಲ್ವೇಲಿ ಜಿಲ್ಲೆಯಲ್ಲೆಲ್ಲ ಚಿದಂಬರಂ ಪಿಳ್ಳೈಯವರ ಹೆಸರು ಮನೆಮಾತಾಯಿತು.

ವಿದ್ಯಾರ್ಥಿಗಳ ನಾಯಕ

ಆಗಿನ ದಿನಗಳಲ್ಲಿ ತಿರುನಲ್ವೇಲಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಆಂಗ್ಲರ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸುತ್ತಿದ್ದರು. ಅದಕ್ಕೆ ಕಾರಣ ಒಂದಲ್ಲ ಎರಡಲ್ಲ.

ಅದೇ ವೇಳೆಯಲ್ಲಿ ಬಂಗಾಳ ರಾಜ್ಯವನ್ನು ಎರಡು ಹೋಳುಮಾಡಲಾಗಿತ್ತು. ದೇಶವನ್ನು ಆಳುತ್ತಿದ್ದ ಆಂಗ್ಲರೇ ಸಿಂಹಳ (ಈಗಿನ ಶ್ರೀಲಂಕಾ) ದೇಶಕ್ಕೆ ಹೋಗಿ ಬರುತ್ತಿದ್ದ ಹಡಗಿನ ವ್ಯಾಪಾರವನ್ನು ನಡೆಸುತ್ತಿದ್ದರು. ತೂತ್ತುಕುಡಿಯಲ್ಲಿ ಸ್ಥಾಪನೆಯಾಗಿದ್ದ ಹಾರ್ವಿ ಮಿಲ್ ನಲ್ಲಿ ಕೆಲಸಗಾರರನ್ನು ತಂಬ ಹೀನಾಯವಾಗಿ ಕಾಣಲಾಗುತ್ತಿತ್ತು. ಈ ಎಲ್ಲ ಕಾರಣಗಳಿಂದ ವಿದ್ಯಾರ್ಥಿಗಳು ಹೋರಾಟ ನಡೆಸುವುದು ದಿನ ನಿತ್ಯದ ವ್ಯವಹಾರವೇ ಆಯಿತು. ಈ ವೇಳೆಯಲ್ಲಿ ಚಿದಂಬರಂ ಪಿಳ್ಳೈಯವರು ನಾಯಕತ್ವ ವಹಿಸಲು ಮುಂದೆ ಬಂದರು. ಅವರ ದೇಶ ಭಕ್ತಿ, ನಿಷ್ಕಪಟ ಗುಣ, ವಿಶಾಲ ಹೃದಯ ಮೊದಲಾದವುಗಳಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಗೌರವಿಸಿದರು.

“ದಳಪತಿ”

ವೃತ್ತಿಯಲ್ಲಿ ಚಿದಂಬರಂ ಪಿಳ್ಳೈಯವರು ವಕೀರರಾದರೂ ಅವರನ್ನು ಸದಾಕಾಲವೂ ಒಂದು ವಿಚಾರ ಚೇಳಿನಂತೆ ಕುಟುಕುತ್ತಿತ್ತು.

ತಮಿಳುನಾಡನ್ನು ಆಳುತ್ತಿದ್ದ ಹಿಂದಿನ ರಾಜಮಹಾರಾಜರು ವಿದೇಶಗಳಿಗೆ ಹೋಗಿಬರುವ ಹಡಗಿನ ವ್ಯಾಪಾರವನ್ನು ತಾವೇ ನಡೆಸುತ್ತಿದ್ದರು. ತಮಿಳುನಾಡಿನಲ್ಲಿ ಸಿಕ್ಕುತ್ತಿದ್ದ ಅನೇಕ ಪದಾರ್ಥಗಳು ವಿದೇಶಗಳಿಗೆ ರಫ್ತಾಗುತ್ತಿದ್ದವು. ಈಗ ಹಡಗಿನ ವ್ಯಾಪಾರವೆಲ್ಲ ಇಂಗ್ಲಿಷರ ವಶದಲ್ಲಿತ್ತು. ಈ ಪ್ರಯಾಣಕ್ಕೆ ಬ್ರಟಿಷ್ ಕಂಪನಿಗೆ ಆಗುತ್ತಿದ್ದ ವೆಚ್ಚ ಕಡಿಮೆ. ಆದರೆ ಅವರು ವಸೂಲು ಮಾಡುತ್ತಿದ್ದ ಹಣ – ಖರ್ಚಿನ ಇಪ್ಪತ್ತರಷ್ಟು. ಮೊದಲೇ ಭಾರತ ಬಡದೇಶ. ಇಲ್ಲಿನ ಬಡವರಿಂದ ಹೀಗೆ ಅನ್ಯಾಯವಾಗಿ ಕಿತ್ತುಕೊಂಡ ಹಣ ಶ್ರೀಮಂತ ಇಂಗ್ಲೀಷರ ಜೇಬಿಗೆ. ಸಿಂಹಳಕ್ಕೆ ಹೋಗಬೇಕಾದರೆ ಭಾರತೀಯರಿಗೆ ಬೇರೆ ಹಡಗಿಲ್ಲ. ಅದನ್ನು ನೋಡುವಾಗ ಚಿದಂಬರಂ ಪಿಳ್ಳೈಯವರಿಗಾಗುತ್ತಿದ್ದ ಸಂಕಟ ಅಷ್ಟಿಷ್ಟಲ್ಲ. ಅದೇ ವೇಳಿಯಲ್ಲಿ ಬಂಗಾಳದ ವಿಭಜನೆ ಆಯಿತು. ಚಿದಂಬರಂ ಪಿಳ್ಳೈಯವರೂ ತಮಿಳುನಾಡಿನಲ್ಲಿ ಹೋರಾಟವನ್ನು ಪ್ರಾರಂಭಿಸಿದರು. ಹೆಚ್ಚು ಕಡಿಮೆ ಬ್ರಿಟಿಷ್ ಸರ್ಕಾರದ ವಿರುದ್ಧ ಅವರು ಯುದ್ಧವನ್ನೇ ಸಾರಿದರು; ಆಗಲೇ ಚಿದಂಬರಂ ಪಿಳ್ಳೈಯವರನ್ನು ಜನ ದಳಪತಿ ಚಿದಂಬರಂ ಪಿಳ್ಳೈ ಎಂದು ಪ್ರೀತಿಯಿಂದ ಕರೆಯಲು ಪ್ರಾರಂಭಿಸಿದದು. 

ಚಿದಂಬರ ಪಿಳೈಯವರು ವಿದ್ಯಾರ್ಥಿ ನಾಯಕರಾದರು

ಭಾರತ ಸ್ವತಂತ್ರ ದೇಶವಾಗಬೇಕು ಎಂದು ಜನರ ಮನಸ್ಸಿನಲ್ಲಿ ಆಸೆಗೆ ಚಿದಂಬರಂ ಪಿಳ್ಳೈಯವರು ಉತ್ತೇಜನ ಕೊಟ್ಟರು. ಬೀದಿ ಬೀದಿಗಳಲ್ಲಿ ಜನರ ಗುಂಪನ್ನು ಉದ್ದೇಶಿಸಿ ಮಾತನಾಡಿ ಅವರಲ್ಲಿ ರೋಷವನ್ನು ಉಕ್ಕಿಸಿದರು.

ಭಾರತ ದೇಶದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಸ್ಥಾಪನೆಯಾಗಲು ಮೂಲ ಕಾರಣಕರ್ತರಾಗಿದ್ದವರು ಬ್ರಿಟನ್ನಿನ ವರ್ತಕರು. ಆದ್ದರಿಂದ ಅವರ ಕೈಲಿದ್ದ ಹಡಗಿನ ವ್ಯಾಪಾರವನ್ನು ತಾವು ಕಸಿದುಕೊಳ್ಳಬೇಕು. ಎಂದು ಚಿದಂಬರಂ ಪಿಳ್ಳೈಯವರು ನಿರ್ಧರಿಸಿದರು.

“ಸ್ವದೇಶಿ ನೌಕಾ ಸಂಸ್ಥೆ”

“ಬ್ರಿಟಿಷ್ ಇಂಡಿಯಾ ಸ್ಟೀಮ್ ನ್ಯಾವಿಗೇಷನ್ ಕಂಪೆನಿ” ಯು ಸಿಂಹಳ ದೇಶಕ್ಕೆ ತಮಿಳುನಾಡಿನ ತೂತ್ತುಕುಡಿ ಎಂಬ ಊರಿನಿಂದ ಹಡಗುಗಳನ್ನು ಕಳುಹಿಸುತ್ತಿತ್ತು. ಎರಡು ದೇಶಗಳ ಮಧ್ಯೆ ಪ್ರಯಾಣಿಕರು ಮತ್ತು ಸಾಮಾನುಗಳನ್ನು ಅವುಗಳಲ್ಲಿ ಸಾಗಿಸಲಾಗುತ್ತಿತ್ತು.

೧೯೦೬ನೇಯ ವರ್ಷದಲ್ಲಿ ಚಿದಂಬರಂ ಪಿಳ್ಳೈಯವರು “ಸ್ವದೇಶಿ ನೌಕಾ ಸಂಸ್ಥೆ” ಎಂಬ ಖಾಸಗಿ ಕಂಪನಿಯನ್ನು ಪ್ರಾರಂಭಿಸಿದರು. ಅವರ ಈ ಪ್ರಯತ್ನಕ್ಕೆ ಎಲ್ಲ ಕಡೆಗಳಿಂದ ಬೆಂಬಲ ಸಿಕ್ಕಿತು.

ಎಸ್. ಎಸ್. ಲಾವೋ ಮತ್ತು ಎಸ್. ಎಸ್. ಕಾಲಿಯೋ ಎಂಬ ಎರಡು ಹಡಗುಗಳನ್ನು ಅವರು ಕೊಂಡುಕೊಂಡರು. ಭಾರತದ ತೂತ್ತುಕುಡಿ ಮತ್ತು ಸಿಂಹಳದ ರಾಜಧಾನಿ ಕೊಲಂಬೋಗಳ ನಡುವೆ ಹಡಗಿನ ವ್ಯಾಪಾ ಪ್ರಾರಂಭವಾಯಿತು.

ಅದುವರೆಗೆ ಬ್ರಟಿಷ್ ವರ್ತಕರು ನಡೆಸುತ್ತಿದ್ದ ಹಡಗಿನಲ್ಲಿ ತೂತ್ತುಕುಡಿಯಿಂದ ಕೊಲೊಂಬೋಗೆ ಹೋಗಲು ಪ್ರತಿಯೊಬ್ಬ ನಾಲ್ಕು ರೂಪಾಯಿಗಳನ್ನು ಕೊಡಬೇಕಾಗಿತ್ತು. ಸಾಮಾನುಗಳ ಸಾಗಾಣಿಕೆಗೆ ಪ್ರತ್ಯೇಕ ಹಣವನ್ನು ಸಲ್ಲಿಸಬೇಕಾಗಿತ್ತು. ಆದರೆ ಹೊಸ ಕಂಪನಿಯು ಪ್ರತಿ ಪ್ರಯಾಣಿಕನ ಪ್ರಯಾಣದ ದರವನ್ನು ನಾಲ್ಕು ರೂಪಾಯಿಗಳಿಂದ ನಾಲ್ಕು ಆಣೆಗೆ (ಇಪ್ಪತ್ತೈದು ಪೈಸೆ) ಇಳಿಸಿತು. ಅವರು ತೆಗೆದುಕೊಂಡು ಹೋಗುವ ಸಾಮಾನುಗಳಿಗೆ ಪ್ರತ್ಯೇಕವಾಗಿ ಶುಲ್ಕವನ್ನು ಕೊಡಬೇಕಾಗಿರಲಿಲ್ಲ.

“ಹಣವೇ ಬೇಡ, ಕರೆದುಕೊಂಡು ಹೋಗುತ್ತೇವೆ” – “ಊಹುಂ!”

ಚಿದಂಬರಂ ಪಿಳ್ಳೈಯವರು ಜನರಿಗೆ ಅಂದಿನ ಕಾಲದ ಪರಿಸ್ಥಿತಿಯನ್ನು ವಿವರಿಸಿ ಹೇಳಿದುದರಿಂದ ಬ್ರಟಿಷ್ ಕಂಪನಿಯ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದವರೆಲ್ಲ ಹೊಸ ಕಂಪನಿಯ ಹಡಗಿನಲ್ಲಿ ಪ್ರಯಾಣ ಮಾಡತೊಡಗಿದರು. ಭಾರತೀಯರೇ ನಡೆಸುವ ಕಂಪನಿ; ಜೊತೆಗೆ ಪ್ರಯಾಣದ ದರವೂ ಬಹಳ ಕಡಿಮೆ.

ಚಿದಂಬರಂ ಪಿಳ್ಳೈಯವರ ಸ್ವದೇಶಿ ನೌಕಾ ಸಂಸ್ಥೆ ದಿನದಿನಕ್ಕೆ ಅಭಿವೃದ್ಧಿ ಹೊಂದತೊಡಗಿತು. ಬ್ರಿಟಿಷ್ ಕಂಪನಿಯ ಹಡಗಿಗೆ ಬರುತ್ತಿದ್ದ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿ ಕೊನೆಗೆ ಅದು ನಿಂತೇಹೋಯಿತು. ಅದನ್ನು ಗಮನಿಸಿದ ಬ್ರಿಟಿಷರು ತಾವು ಮುಂಚೆ ವಿಧಿಸುತ್ತಿದ್ದ ಸಾಮಾನುಗಳ ಸಾಗಾಣಿಕೆ ದರವನ್ನು ಇಳಿಸಿದರು. ತೂತ್ತಕುಡಿಯಿಂದ ಕೊಲೊಂಬೊಗೆ ಹಣವನ್ನೇ ವಸೂಲು ಮಾಡದೆ, ಉಚಿತವಾಗಿ ಪ್ರಯಾಣಿಕರನ್ನು ಕರೆದುಕೊಂಡು ಹೋಗುವುದಾಗಿ ಪ್ರಕಟಣೆ ಹೊರಡಿಸಿದರು.

“ನಾವು ಪ್ರಯಾಣ ಮಾಡುವುದಾದರೆ ಸ್ವದೇಶಿ ನೌಕಾ ಸಂಸ್ಥೆಯ ಹಡಗಿನಲ್ಲೇ ಮಾಡುತ್ತೇವೆ. ನೀವು ಉಚಿತವಾಗಿ ಕರೆದುಕೊಂಡು ಹೋದರೂ ನಿಮ್ಮ ಹಡಗಿನಲ್ಲಿ ಕಾಲಿಡುವುದಿಲ್ಲ.” ಎಂದು ಪ್ರಯಾಣಿಕರು ತಿಳಿಸಿ, ಅವರ ಕಡೆ ತಿರುಗಿ ನೋಡಲಿಲ್ಲ.

ಭಾರತೀಯರ ನೇತೃತ್ವದಲ್ಲಿ ಎರಡು ಹಡಗುಗಳ ಸಂಚಾರ ಪ್ರಾರಂಭವಾದುದನ್ನು ಕಂಡು ಆನಂದ ಪಟ್ಟ ತಮಿಳುನಾಡಿನ ಸುಪ್ರಸಿದ್ಧ ಕವಿಗಳಾದ ಸುಬ್ರಹ್ಮಣ್ಯ ಭಾರತೀಯವರು, “ಬಹಳ ಕಾಲ ಮಕ್ಕಳಿಲ್ಲದ ಹೆಂಗಸಿಗೆ ಒಂದೇ ಬಾರಿಗೆ ಎರಡು ಮಕ್ಕಳಾದರೆ ಅವಳಿಗೆ ಎಷ್ಟು ಸಂತೋಷವಾಗುವುದೋ, ಅಷ್ಟು ನಮ್ಮ ತಾಯಿ ಭಾರತಿಯೂ ತನ್ನ ಈ ಎರಡು ಹಡಗುಗಳನ್ನು ಕಂಡು ಆನಂದ ಪಡುತ್ತಾಳೆ” ಎಂದರು.

“ನಿಮ್ಮ ಹಣ ನನಗೆ ಬೇಕಿಲ್ಲ”

ಇದನ್ನೆಲ್ಲ ನೋಡಿದ ಮೇಲೆ ಬ್ರಿಟಿಷರಿಗೆ ಎಷ್ಟು ಸಂಕಟವಾಗಿರಬೇಕು, ಅಲ್ಲವೆ? ಬರುತ್ತಿದ್ದ ವರಮಾನ ನಿಂತುಹೋಯಿತು. ಅಲ್ಲಿಯವರೆಗೆ ಅವರನ್ನು ಪ್ರಶ್ನಿಸುವವರೇ ಇರಲಿಲ್ಲ. ಈಗ ಒಬ್ಬರು ಸ್ಪರ್ಧೆಗೆ ಹೊಸದಾಗಿ ಹುಟ್ಟಿಕೊಂಡುದೂ ಅಲ್ಲದೆ ತಮ್ಮನ್ನೇ ಹೊಡೆದೋಡಿಸಲು ಪ್ರಯತ್ನ ಮಾಡಿದರು, ಅದರಲ್ಲಿ ವಿಜಯಿಯಾದರು. ಇದನ್ನು ತಪ್ಪಿಸಲು ಏನಾದರೂ ಮಾಡಬೇಕೆಂದು ಯೋಚಿಸಿದರು. ಅವರಿಗೆ ಒಂದು ಉಪಾಯ ಹೊಳೆಯಿತು.

ಚಿದಂಬರಂ ಪಿಳ್ಳೈಯವರಿಗೆ ಹಣದ ಆಸೆಯನ್ನು ತೋರಿಸಿದರೆ?

ತಮ್ಮ ಹಡಗಿನ ವ್ಯಾಪಾರವನ್ನು ನಿಲ್ಲಿಸಿದರೆ ಒಂದು ಲಕ್ಷ ರೂಪಾಯಿಗಳನ್ನು ಕೊಡುವುದಾಗಿ ಚಿದಂಬರಂ ಪಿಳ್ಳೈಯವರಿಗೆ ಅವರು ಹೇಳಿಕಳುಹಿಸಿದರು.

ಲಂಚದ ಹಣಕ್ಕೆ ಚಿದಂಬರಂ ಪಿಳ್ಳೈಯವರು ಕೈಚಾಚಿ ದ್ರೋಹಿಯಾಗುವರೇನು?

“ನಿಮ್ಮ ಹಣಕ್ಕೆ ಆಸೆ ಪಡುವವನು ನಾನಲ್ಲ. ನಿಮ್ ಲಂಚದ ಹಣ ನನಗೆ ಬೇಕಾಗಿಲ್ಲ” ಎಂದು ಅವರು ಹೇಳಿಕಳುಸಿದರು. 

ಚಿದಂಬರ ಪಿಳೈಯವರನ್ನು ಗಾಣಕ್ಕೆ ಕಟ್ಟಿ ಎಣ್ಣೆ ತೆಗೆಯುತ್ತಿದ್ದರು

ರಾಜದ್ರೋಹವಂತೆ!

 

ತಮ್ಮ ತಂತ್ರಕ್ಕೆ ಚಿದಂಬರಂ ಪಿಳ್ಳೈಯವರು ಸಿಕ್ಕಿಬೀಳಲಿಲ್ಲವಲವಲ ಎಂದು ಯೋಚಿಸಿದ ಬ್ರಿಟಿಷರು ಈಗ ಬೇರೆ ದಾರಿ ಹಿಡಿದರು.

ಚಿದಂಬರಂ ಪಿಳ್ಳೈಯವರು ಹಡಗಿನ ವ್ಯಾಪಾರವನ್ನು ಪ್ರಾರಂಭಿಸಿರುವುದು ಬ್ರಟಿಷ್ ಸಾಮ್ರಾಜ್ಯದ ಹಿಡಿತದಿಂದ ಭಾರತವನ್ನು ಸ್ವತಂತ್ರಗೊಳಿಸಲು ನಡೆಸಿರುವ ಪ್ರಯತ್ನ; ಆದ್ದರಿಂದ ಅವರು ನಡೆಸಿರುವ ಈ ಪ್ರಯತ್ನ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ ಮಾಡಿರುವ ರಾಜದ್ರೋಹ ಎಂಬುದಾಗಿ ಪ್ರಚಾರ ಮಾಡಿದರು.

ಹೇಗಾದರೂ ಮಾಡಿ ಚಿದಂಬರಂ ಪಿಳ್ಳೈಯವರ ಹಡಗಿನ ವ್ಯಾಪಾರವನ್ನು ನಡೆಸದಂತೆ ಕಂಪನಿಯನ್ನು ಮುಚ್ಚಿಸಿ ಅವರ ಮೇಲೆ ರಾಜದ್ರೋಹದ ಅಪಾದನೆ ಹೊರಿಸಿ ಅವರನ್ನು ಸೆರೆಮನೆಗೆ ಹಾಕಬೇಕು ಎಂಬುದೇ ಬ್ರಿಟಿಷರ ನಿರ್ಧಾರವಾಗಿತ್ತು.

ಭಾರತ ದೇಶ ಬ್ರಿಟಿಷರ ವಶದಲ್ಲಿ ಇದ್ದಾಗ ಕಾಂಗ್ರೆಸ್ ಪಕ್ಷ ಬಹಳ ಹೆಸರುವಾಸಿಯಾಗಿತ್ತು. ಅದಕ್ಕೆ ಕಾರಣವೇನೆಂದರೆ ಅಂಥ ಕಾಂಗ್ರೆಸ್ ಪಕ್ಷಕ್ಕೆ ಒಂದೇ ಉದ್ದೇಶವಿತ್ತು. – ದೇಶದ ಹಿತಕ್ಕಾಗಿ ಹೋರಾಡುವುದು ಅಂಥ ಕಾಂಗ್ರೆಸ್ ಪಕ್ಷದಲ್ಲೂ ಮಿತವಾದಿಗಳು ಮತ್ತು ಉಗ್ರವಾದಿಗಳು ಎಂಬ ಎರಡು ಪಂಗಡಗಳು ಇದ್ದವು.

ಹಿಂಸೆಗೆ ಕೈಹಾಕದೆ ಅಹಿಂಸೆಯಿಂದಲೇ ದೇಶ ಸ್ವತಂತ್ರವಾಗಿ ಸ್ವರಾಜ್ಯದ ಸ್ಥಾಪನೆ ಆಗಬೇಕು ಎನ್ನುವುದು ಮಿತವಾದಿಗಳ ಉದ್ದೇಶ.

ವಿದೇಶಿಗಳು ಬಂದು ನಮ್ಮ ದೇಶದಲ್ಲಿ ಬೇರೂರಿರುವ ಬ್ರಿಟಿಷರು ಈ ದೇಶದ ಎಲ್ಲ ಸಂಪತ್ತನ್ನೂ ಕೊಳ್ಳೆ ಹೊಡೆಯುತ್ತ ನಮ್ಮ ಮೇಲೆ ಅಧಿಕಾರ ನಡೆಸುತ್ತ ನಮ್ಮನ್ನು ಆಳುತ್ತಿರುವಾಗ, ಅಂಥವನ್ನು ಹೊರಕ್ಕೆ ಓಡಿಸದೆ ಅವರ ಮುಂದೆ ಮಂಡಿ ಊರಿ, ತಲೆಬಗ್ಗಿಸಿ ಅವರ ಮಾತನ್ನು ಕೇಳಿಕೊಂಡು ಗುಲಾಮರಾಗಿ ಬಾಳಬೇಕೆ? ಪ್ರಾರ್ಥನೆ, ವಾದ ಇವುಗಳಿಂದ ಸ್ವಾತಂತ್ಯ್ಯಬರುವುದಿಲ್ಲ, ಉಗ್ರವಾಗಿ ಹೋರಾಡಬೇಕು; ಭಾರತ ದೇಶ ಆದಷ್ಟು ಬೇಗ ಸ್ವರಾಜ್ಯ ಪಡೆದು ಸ್ವತಂತ್ಯ್ರ ರಾಷ್ಟ್ರವಾಗಬೇಕು ಎನ್ನುವುದು ಉಗ್ರವಾದಿಗಳ ಉದ್ದೇಶ. ಈ ಗುಂಪಿಗೆ ಸೇರಿದವರು ಬಾಲಗಂಗಾಧರ ತಿಲಕರು.

“ಸ್ವಾತಂತ್ಯ್ರ ನನ್ನ ಜನ್ಮ ಸಿದ್ಧ ಹಕ್ಕು” ಎಂದು ಅವರು ಹೇಳಿದ್ದ ಮಾತನ್ನು ಕೇಳೀದ್ದೀರಿ ಅಲ್ಲವೆ?

ಅಂತ ಮಹಾನ್ ವ್ಯಕ್ತಿಯಾದ ಬಾಲಗಂಗಾಧರ ತಿಲಕರ ಶಿಷ್ಯರಾಗಿದ್ದರು ನಮ್ಮ ಚಿದಂಬರಂ ಪಿಳ್ಳೈಯವರು ತಮಿಳುನಾಡಿನಲ್ಲಿ ಚಿದಂಬರಂ ಪಿಳ್ಳೈಯವರು ತಮ್ಮ ಪ್ರತಿನಿಧಿ ಎಂಬುದಾಗಿ ಬಾಲಗಂಗಾಧರ ತಿಲಕರು ಹೇಳಿದ್ದರು.

ಸ್ವದೇಶಿ ನೌಕಾ ಸಂಸ್ಥೆಯನ್ನು ಮುಚ್ಚಿಸಲು ತಂತ್ರ ಹೂಡಿರುವ ಬ್ರಿಟಿಷರು ತಮ್ಮ ಮೇಲೆ ರಾಜದ್ರೋಹದ ಮಾಡಿ ಪ್ರಚಾರ ಮಾಡುತ್ತಿದ್ದಾರೆ ಎಂಬುದನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಚಿದಂಬರಂ ಪಿಳ್ಳೈಯವರು ೧೯೦೮ ನೇಯ ವರ್ಷದಲ್ಲಿ ದೇಶಾಭಿಮಾನಿಗಳ ಸಂಘವನ್ನು ತಿರುನಲ್ವೇಲಿಯಲ್ಲಿ ಸ್ಥಾಪನೆಮಾಡಿದರು.

ಬಂಗಾಳದಲ್ಲಿ ಸ್ವಾತಂತ್ಯ್ರಕ್ಕಾಗಿ ಹೋರಾಟ ನಡೆಸುತ್ತಿದ್ದ ಬಿಪಿನ್ ಚಂದ್ರ ಪಾಲರನ್ನು ಬಂಧಿಸಿದ್ದ ಬ್ರಿಟಿಷ್ ಸರ್ಕಾರ ೧೯೦೮ ರಲ್ಲಿ ಅವರನ್ನು ಸೆರೆಮನೆಯಿಂದ ಬಿಡುಗಡೆ ಮಾಡಿತು. ಆ ಸಂತೋಷದ ಸಮಾರಂಭವನ್ನು ತಿರುನಲ್ವೇಲಿಯಲ್ಲಿ ನಡೆಸಲು ಪಿಳ್ಳೈಯವರು ಏರ್ಪಾಟು ಮಾಡಿದರು.

ಪ್ರತಿಬಂಧಕಾಜ್ಞೆ

ಅಂಥ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದ ಸರ್ಕಾರ ತಿರುನಲ್ವೇಲಿಯ ಸರಹದ್ದಿನಲ್ಲಿ ಸಭೆ, ಸಮಾರಂಭಗಳನ್ನು ನಡೆಸಕೂಡದೆಂದು ಆಜ್ಞೆಯನ್ನು ಹೊರಡಿಸಿತು. ತಿರುನಲ್ವೇಲಿ ಜಿಲ್ಲೆಯ ಕಲೆಕ್ಟರ್ ಆಗಿದ್ದ ಮಿಂಚ್ ಎಂಬುವನು ಆ ಆಜ್ಞೆಯನ್ನು ಜಾರಿ ಮಾಡಿದ.

ಆದರೆ ಚಿದಂಬರಂ ಪಿಳ್ಳೈಯವರು ಕಲೆಕ್ಟರ್ ಮಿಂಚ್ ಆಜ್ಞೆಯನ್ನು ಉಲ್ಲಂಘಿಸಿ ಅಪಾರ ಜನಸ್ತೋಮದ ಎದುರು ಭಾಷಣ ಮಾಡಿದರು.

“ಬ್ರಿಟಿಷರನ್ನು ತಮಿಳುನಾಡಿನಿಂದ, ಅನಂತರ ಭಾರತದಿಂದ ಗಂಟುಮೂಟೆ ಕಟ್ಟಿ ಓಡಿಸುವವರೆಗೆ ಭಾರತೀಯರು ಹೋರಾಡಬೇಕು ಎಂದು ಅವರು ವೀರ ಗರ್ಜನೆ ಮಾಡಿದರು.

ಸೆರೆಮನೆಗೆ

ಹಸಿವಿನಿಂದ ಕಂಗಾಲಾದವನೊಬ್ಬ ಒಂದು ಮರದ ಕೆಳಗೆ ಕುಳಿದಿದ್ದಾಗ ಒಂದು ಹಣ್ಣು ಉದುರೆ ಬಿದ್ದರೆ ಅವನಿಗೆ ಎಷ್ಟು ಸಂತೋಷವಾಗುತ್ತದೆ?

ಚಿದಂಬರಂ ಪಿಳ್ಳೈಯವರನ್ನು ಹೇಗಾದರೂ ಮಾಡಿ ಬಂಧಿಸಿ ಸೆರೆಮನೆಯಲ್ಲಿ ಇಡಬೇಕು ಎಂದು ಕಾಯುತ್ತಿದ್ದ ಬ್ರಿಟಿಷರಿಗೆ ಅವರು ಮಾಡಿದ ಭಾಷಣದಿಂದ ತುಂಬ ಸಂತೋಷವಾಯಿತು.

ಜಿಲ್ಲಾ ಕಲೆಕ್ಟರ್ ಮಿಂಚ್ ಚಿದಂಬರಂ ಪಿಳ್ಳೈಯವರನ್ನು ತನ್ನ ಕಛೇರಿಗೆ ಬರುವಂತೆ ಕರೆ ಕಳುಹಿಸಿದ.

ಪಿಳ್ಳೈಯವರು ಅವನ ಕಛೇರಿಗೆ ಹೋದಾಗ ವಿಂಚ್ ಬೇಕೆಂದೇ ಅಲ್ಲಿರಲಿಲ್ಲ.

ಮಾರನೇ ದಿನವೂ ಅವರಿಗೆ ಹೇಳಿಕಳುಹಿಸಿದ. ಅಂದು ಪಿಳ್ಳೈಯವರಿಗೆ ಬೇರೆ ಕೆಲಸ ಇದ್ದುದರಿಂದ ಅಚನ್ನು ಮುಗಿಸಿಕೊಂಡು ವಿಂಚ್ ನನ್ನು ಕಾಣಲು ಹೋದರು.

“ಇಪ್ಪತ್ನಾಲ್ಕು ಘಂಟೆಗಳ ಅವಧಿಯ ಒಳಗೆ ನೀವು ತಿರುನಲ್ವೇಲಿ ಜಿಲ್ಲೆಯನ್ನು ಬಿಟ್ಟು ಹೊರಟು ಹೋಗಬೇಕು” ಎಂದು ವಿಂಚ್ ಆಜ್ಙಾಪಿಸಿದ.

“ನಾನು ಹೋಗುವುದಿಲ್ಲ” ಎಂದರು ಚಿದಂಬರಂ ಪಿಳ್ಳೈ.

“ಹಾಗೆ ಮಾಡಲು ನಿಮಗೆ ಇಷ್ಟವಿಲ್ಲದೆ ಇದ್ದರೆ ನೀವು ಯಾವುದೇ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ಬ್ರಿಟಿಷ್ ಚಕ್ರಾಧಿಪತ್ಯದ ವಿರುದ್ಧ ಮಾತನಾಡುವುದಿಲ್ಲ ಎಂದು ಬರೆದುಕೊಡಬೇಕು. ಹಾಗೆ ಮಾಡುವುದಾದರೆ ನೀವು ಇಲ್ಲೇ ಇರಬಹುದು” ಎಂದು ವಿಂಚ್.
“ನಿಮ್ಮ ಈ ಎರಡೂ ಮಾತುಗಳಿಗೆ ನಾನು ತಲೆ ಬಾಗುವುದುಲ್ಲ. ನಿಮ್ಮ ಆಜ್ಞೆಗೆ ನಾನು ಒಪ್ಪಲಾರೆ” ಎಂದು ಪಿಳ್ಳೈಯವರು ಕಡ್ಡಿ ಮುರಿದಂತೆ ವಿಂಚ್ ಗೆ ಹೇಳಿದರು.

ಅವನಿಗೆ ಅದೇ ಬೇಕಾಗಿತ್ತು.

“ರಾಜದ್ರೋಹದ ಆಪಾದನೆಯ ಮೇಲೆ ನಿಮ್ಮನ್ನು ಬಂಧಿಸಲು ಆಜ್ಞೇ ಮಾಡುತ್ತೇನೆ” ಎಂದು ವಿಂಚ್ ಹೇಳಿದ.

ಚಿದಂಬರಂ ಪಿಳ್ಳೈಯವರು ಬಂಧಿತರಾದರು.

ಅಪರಾಧವೇನು?

ಪಿಳ್ಳೈಯವರ ಆತ್ಮೀಯ ಸ್ನೇಹಿತರಾಗಿದ್ದ ಜನತಾ ಕವಿ ಸುಬ್ರಹ್ಮಣ್ಯ ಬಾರತಿಯವರು ಈ ಘಟನೆಯ ಬಗ್ಗೆ ಒಂದು ಕವಿತೆಯನ್ನು ಬರೆದಿದ್ದಾರೆ. ಅದರಲ್ಲಿ ವಿಂಚ್ ನ ಮಾತುಗಳನ್ನು ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ:

“ದೇಶದಲ್ಲಿ ಸ್ವಾತಂತ್ಯ್ರದ ಕಿಚ್ಚನ್ನು ಹತ್ತಿಸಿದೆ; ಅದಕ್ಕಾಗಿ ನಿನ್ನನ್ನು ಸೆರೆಮನೆಗೆ ನೂಕುತ್ತೇನೆ”. 

ನಿಮ್ಮ ಆಜ್ಞೆಯನ್ನು ನಾನು ಒಪ್ಪಲಾರೆ

“ಜನರನ್ನು ಸೇರೆಸಿ ವಂದೇಮಾತರಂ ಘೋಷಿಸಿದೆ, ನಮ್ಮನ್ನು ದೋಷಿಸಿದೆ, ನಮ್ಮನ್ನು ಓಡಿಸಲು ಹಡಗಿನ ವ್ಯಾಪಾರ ನಡೆಸಿ ಮಸಲತ್ತು ಮಾಡಿದೆ”.

“ಹೇಡಿಗಳಾಗಿದ್ದ ಜನತಿಗೆ ನಿಜವನ್ನೆಲ್ಲ ಹೇಳಿದುದಲ್ಲದೆ ಕಾನೂನನ್ನು ಉಲ್ಲಂಘಿಸಿದೆ; ಗುಲಾಮರಾಗಿದ್ದ ಜನರನ್ನು ಮನುಷ್ಯರನ್ನಾಗಿ ಮಾರ್ಪಡಿಸಿದೆ; ಗುಲಾಮತನವೇ ಸಾಕೆಂದು ಇದ್ದ ಹೇಡಿಗಳಲ್ಲಿ ಧೈರ್ಯ ತುಂಬೆ ಅವರಲ್ಲಿ ಆಸೆಯ ಕಿಚ್ಚನ್ನು ಮೂಡಿಸಿದೆ”.

“ಸೇವೆ ಮಾಡುತ್ತಿದ್ದವರ ಮನಸ್ಸನ್ನು ಕೆಡಿಸಿದೆ; ಕಂಡ ಕಂಡ ಕಸಬುಗಳನ್ನು ಕಲಿಯಲು ಅವರನ್ನು ಹುರಿದುಂಬಿಸಿದೆ; ಅವರಲ್ಲಿ ಮನೆಮಾಡಿಕೊಂಡಿದ್ದ ಜಡತನವನ್ನು ಹೊಡೆದೋಡಿಸಿದೆ”.

“ಎಲ್ಲೆಲ್ಲೂ ಸ್ವರಾಜ್ಯದ ಬೀಜವನ್ನು ಬಿತ್ತಿದೆ. ಈ ಎಲ್ಲ ಅಪರಾಧಕ್ಕಾಗಿ ನಿನ್ನನ್ನು ಸೆರೆಮನೆಗೆ ನೂಕುತ್ತೇನೆ, ನಿನ್ನನ್ನು ಶಿಕ್ಷಿಸುತ್ತೇನೆ; ನಿನ್ನ ಮೇಲಿನ ಸೇಡನ್ನು ತೀರಿಸಿಕೊಳ್ಳುತ್ತೇನೆ”.

“ಇವು ವಿಂಚ್ ಆಡುವ ಮಾತುಗಳು ಎಂದು ನಾವು ಓದಬೇಕು. ಬ್ರಟಿಷರ ಕಣ್ಣಿಗೆ ಯಾವುದು ಅಪರಾಧವಾಗಿ ಕಾಣುತ್ತಿತ್ತು ಎಂಬುದಕ್ಕೆ ಈ ಮಾತುಗಳು ಕನ್ನಡಿಯಾಗಿವೆ.

ಸೆರೆಮನೆವಾಸದ ತೀರ್ಪು-ಎಷ್ಟು ವರ್ಷಗಳು?

ಚಿದಂಬರಂ ಪಿಳ್ಳೈಯವರ ಮೇಲೆ ರಾಜದ್ರೋಹದ ಅಪಾದನೆಯನ್ನು ಹೊರಿಸಲಾಯಿತು. ಮೊದಲು ಅಡಿಷನಲ್ ನ್ಯಾಯಾಧೀಶರ ಮುಂದೆ, ಆಮೇಲೆ ಸೆಷನ್ಸ್ ನ್ಯಾಯಾಲಯದಲ್ಲಿ ೧೯೦೮ ನೇಯ ವರ್ಷ ವಿಚಾರಣೆ ನಡೆಯಿತು. ಅದೇ ವರ್ಷ ಜುಲೈ ತಿಂಗಳು ೭ ನೇಯ ತಾರೀಖು ತೀರ್ಪು ಹೊರಬಿತ್ತು.

ಚಿದಂಬರಂ ಪಿಳ್ಳೈ ಯವರ ಮೇಲೆ ಈ ಕೆಳಕಂಡ ಅಪಾದನೆಗಳು ನ್ಯಾಯಾಲಯದಲ್ಲಿ ಸ್ಥಿರಪಟ್ಟವು:

ಬ್ರಟಿಷ್ ಚಕ್ರಾಧಿಪತ್ಯದ ವಿರುದ್ಧ ದಂಗೆ ಏಳುವಂತೆ ಅವರು ಜನರನ್ನು ಹುರಿದುಂಬಿಸಿದುದು ಮೊದಲನೇ ಅಪರಾಧ.

ಸುಬ್ರಹ್ಮಣ್ಯಶಿವ ಎಂಬುವರೊಡನೆ ಒಳಸಂಚು ನಡೆಸಿ ಬ್ರಿಟಿಷ್ ಸಾಮ್ರಾಜ್ಯವನ್ನು ಉರುಳಿಸಲು ನಡೆಸಿದ ಪಿತೂರಿ, ಅವರ ಎರಡನೇ ಅಪರಾಧ.

ಈ ಎರಡೂ ಅಪರಾಧಗಳಿಗೂ ತಲಾ ಇಪ್ಪತ್ತು ವರ್ಷಗಳಂತೆ ಒಟ್ಟು ನಲವತ್ತು ವರ್ಷಗಳ ಶಿಕ್ಷೆಯನ್ನು ಚಿದಂಬರಂ ಪಿಳ್ಳೈಯವರು ಅನುಭವಿಸಬೇಕೆ ಎಂಬುದಾಗಿ ನ್ಯಾಯಾಧೀಶರು ಆಜ್ಞೆ ಮಾಡಿದರು.

ಅವರು ತಮ್ಮ ತೀರ್ಪಿನಲ್ಲಿ, “ಚಿದಂಬರಂ ಪಿಳ್ಳೈಯವರ ಮಾತನ್ನೂ ಸುಬ್ರಹ್ಮಣ್ಯ ಭಾರತಿ ಅವರ ಗೀತೆಗಳನ್ನು ಕೇಳುವ ಹೆಣವೂ ಮತ್ತೆ ಜೀವ ಪಡೆದುಕೊಳ್ಳುತ್ತದೆ” ಎಂದು ಹೇಳಿದರು.

ನಲವತ್ತರಿಂದ ಆರಕ್ಕೆ

ತೀರ್ಪು ಹೊರಬಿದ್ದು ಕೂಡಲೇ ಅದನ್ನು ಕೇಳಿದವರು ಅತ್ತರು. ತೀರ್ಪು ನ್ಯಾಯವನ್ನು ನೀಡಿಲ್ಲ ಎಂದು ಪತ್ರಿಕೆಗಳು ಬರೆದವು. ಆಗ ಭಾರತದಲ್ಲಿ ಸಚಿವರಾಗಿದ್ದ ಮಾರ್ಲೆ ಎಂಬ ಆಂಗ್ಲರು, “ತೀರ್ಪು ನ್ಯಾಯಯುತವಾಗಿಲ್ಲ” ಎಂಬುದಾಗಿ ಹೇಳಿದರು.

ತಮಗೆ ವಿಧಿಸಿದ ಶಿಕ್ಷೆ ಅನ್ಯಾಯದಿಂದ ತುಂಬಿದೆ ಎಂದು ಪಿಳ್ಳೈಯವರು ಮದರಾಸ್ ಹೈಕೋರ್ಟಿನಲ್ಲಿ ಅಪೀಲು ಹೂಡಿದರು,

ಅವರಿಗೆ ವಿಧಿಸಿದ್ದ ಎರಡೂ ಶಿಕ್ಷೆಗಳಲ್ಲಿ ತಲಾ ಹತ್ತು – ಹತ್ತು ವರ್ಷಗಳನ್ನು ಇಳಿಸಿದ ಹೈಕೋರ್ಟು ಎರಡೂ ಶಿಕ್ಷೆಗಳನ್ನೂ ಏಕಕಾಲದಲ್ಲಿ ಹತ್ತು ವರ್ಷಗಳ ಕಾಲ ಅನುಭವಿಸಬೇಕೆಂದು ಆಜ್ಞೆ ಮಾಡಿತು.

ಆಗಿನ ಕಾಲದಲ್ಲಿ ಈಗಿನಂತೆ ಸುಪ್ರಿಂ ಕೋರ್ಟು ಇರಲಿಲ್ಲ. ಕೆಳಗಿನ ನ್ಯಾಯಾಲಯಗಳಲ್ಲಿ ನ್ಯಾಯ ಸಿಕ್ಕದಿದ್ದರೆ ಲಂಡನ್ನಿನ ಪ್ರೀವಿ ಕೌನ್ಸಿಲ್ ನಲ್ಲಿ ಅಪೀಲು ಮಾಡಬೇಕಾಗಿತ್ತು. ಅದರಂತೆ ಪಿಳ್ಳೈಯವರು ಪ್ರೀವಿಕೌನ್ಸಿಲ್ ಗೆ ಅಪೀಲು ಮಾಡಿದರು.

ಪ್ರೀವಿ ಕೌನ್ಸಿಲ್ ತಲಾ ಹತ್ತು ವರ್ಷಗಳ ಶಿಕ್ಷೆಯನ್ನು ತಲಾ ಆರು ವರ್ಷಗಳಂತೆ ಏಕಕಾಲದಲ್ಲಿ ಅನುಭವಿಸುವಂತೆ ಆಜ್ಞಾಪಿಸಿತು.

ಚಿದಂಬರಂ ಪಿಳ್ಳೈಯವರು ಒಟ್ಟು ಆರು ವರ್ಷಗಳ ಕಾಲ ಸೆರೆಮನೆಯಲ್ಲಿದ್ದರು. ತಿರುನಲ್ವೇಲಿ, ಪಾಳಯಂ ಕೋಟೆ ಮತ್ತು ಕಡಲೂರುಗಳಲ್ಲಿದ್ದ, ಸೆರೆಮನೆಗಳಲ್ಲಿ ಅವರನ್ನು ಇಡಲಾಗಿತ್ತು. ಸೆರೆಮನೆಗೆ ಹೋದಾಗ ಅವರಿಗೆ ಮೂವತ್ತಾರು ವರ್ಷ ವಯಸ್ಸು.

ಗಾಣಕ್ಕೆ ಕಟ್ಟಿದರು

ದಾರಿಹೋಕರನ್ನು ಸುಲಿಗೆ ಮಾಡುವ ಕಳ್ಳರು, ಕೊಲೆಪಾತಕಿಗಳು, ದರೋಡೆಕೋರರ ಜೊತೆಯಲ್ಲಿ ಚಿದಂಬರಂ ಪಿಳ್ಳೈಯವರನ್ನು ಸೆರೆಮನೆಯಲ್ಲಿ ಇಟ್ಟಿದ್ದರು. ಅಲ್ಲಿ ಅವರು ಕಷ್ಟದ ಕೆಲಸಗಳನ್ನು ಮಾಡಬೇಕಾಗಿತ್ತು. ದಪ್ಪನಾದ ಬೆಣಚುಕಲ್ಲಿಗಳನ್ನು ಕುಟ್ಟಿ ಪುಡಿಮಾಡಬೇಕಾಗಿತ್ತು. ಸ್ವಲ್ಪ ತಪ್ಪಾದರೆ ಚಾಟಿಯ ಏಟು ತಿನ್ನಬೇಕಾಗಿತ್ತು. ಕಕ್ಕಸುಗಳನ್ನು ಶುದ್ಧಿಮಾಡಿ ತೊಳೆಯ ಬೇಕಾಗಿತ್ತು. ಸೆರೆಮನೆಯ ಅಧಿಕಾರಗಳು ಅವರನ್ನು ಗಾಣಕ್ಕೆ ಕಟ್ಟಿ ಎತ್ತಿನಂತೆ ದುಡಿಸಿ ಎಣ್ಣೆ ತೆಗೆಸುತ್ತಿದ್ದರು. ಪಿಳ್ಳೈಯವರು ಮರುಮಾತಾಡದೆ ಎಲ್ಲ ಕಷ್ಟಗಳನ್ನೂ ಅನುಭವಿಸಿದರು. ಕೈಗಳಲ್ಲಿ ಹೊಪ್ಪಳೆ ಎಎಉ ಯರುಯುವುದು. ಮತ್ತೆ ಅದೇ ಕೈಲಿ ಗಾಣವನ್ನು ಎಳೆಯಬೇಕು. ಎಂಥ ಮಹನೀಯರಿಗೆ ಎಂಥ ದುರ್ವಿಧಿ?

ಚಿದಂಬರಂ ಪಿಳ್ಳೈಯವರು ಸೆರೆಮನೆಯಲ್ಲಿ ಇದ್ದಾಗ ಅವರ ಹೆಂಡತಿ, ಮಕ್ಕಳ ಗತಿಯೇನು? ಪಾಪ, ಅವರು ತುಂಬ ಕಷ್ಟಪಟ್ಟರು.

ಹೆಂಡತಿ, ಮಕ್ಕಳಿಂದ ಬರುವ ಕಾಗದವನ್ನು ಓದುವರು, ಕಣ್ಣೀರು ಸುರಿಸುವರು, ಅಷ್ಟೆ.

ಆಗಲೂ ಅವರು ಸರ್ಕಾರದ ಕ್ಷಮೆ ಕೇಳಿದ್ದರೆ, ಮತ್ತೆ ನಾವು ಸ್ವಾತಂತ್ಯ್ರದ ಮಾತನ್ನು ಎತ್ತುವುದಿಲ್ಲ ಎಂದು ಮಾತು ಕೊಟ್ಟಿದ್ದರೆ, ಸರ್ಕಾರ ಅವರನ್ನು ಬಿಡುಗಡೆ ಮಾಡುತ್ತಿತ್ತು. ಮತ್ತೆ ವಕೀಲರಾಗಿ ಹಣ ಸಂಪಾದಿಸಿ ಸುಖವಾಗಿ ಇರಬಹುದಾಗಿತ್ತು.

ಆದರೆ ಚಿದಂಬರಂ ಪಿಳ್ಳೈಯವರ ಮನಸ್ಸು ಅತ್ತ ಹೋಗಲಿಲ್ಲ. ಅವರ ದೇಶಾಭಿಮಾನ ಕುಂದಲಿಲ್ಲ.

“ನಿಮ್ಮ ಮುದ್ದಿನ ಮಗ…..”

ಒಂದು ದಿನ ಚಿದಂಬರಂ ಪಿಳ್ಳೈಯವರು ಆಲೋಚನೆಯಲ್ಲಿ ಮುಳುಗಿ ಸೆರೆಮನೆಯಲ್ಲಿ ಕುಳಿತಿದ್ದರು. ಅವರ ಮನಸ್ಸಿನಲ್ಲಿ ತಮ್ಮ ಕಿರಿಯ ಮಗನ ಬಗ್ಗೆ ಚಿಂತೆ ಬಂದಿತ್ತು. ಅದೇ ಆಲೋಚನೆಯಲ್ಲಿದ್ದ ಅವರ ಕೈಗೆ ಸೆರೆಮನೆಯ ಆಳು ಒಂದು ಕಾಗದವನ್ನು ಕೊಟ್ಟು ಹೋದ. ಅಚು ಅವರ ಹೆಂಡತಿ ಬರೆದ ಕಾಗದ.

“ನಿನ್ನೆಯ ದಿನ ಭಾರತಿಯವರು ನಮ್ಮ ಮನೆಗೆ ಬಂದಿದ್ದರು. ಅವರು ನಿಮ್ಮ ಮುದ್ದಿನ ಮಗನನ್ನು ಕರೆದು ಕೂರಿಸಿಕೊಂಡು, “ನೀನು ನಿಮ್ಮ ತಂದೆಯವರಿಗಿಂತಲೂ ಚೆನ್ನಾಗಿ ಮಾತಾಡುವಂತೆ ಆಗಬೇಕು; ಹಾಗೆ ಜನಪ್ರಿಯವಾಗಿ ಅವರಿಗೆ ಕೀರ್ತಿ ತರಬೇಕು” ಅಂದರು. ಅದಕ್ಕೆ ನಮ್ಮ ಹುಡುಗ, “ಖಂಡಿತ ಹಾಗೇ ಮಾಡ್ತೀನಿ” ಅಂದ” ಎಂಬುದಾಗಿ ಪಿಳ್ಳೈಯವರ ಹೆಂಡತಿ ತಮ್ಮ ಕಾಗದದಲ್ಲಿ ಬರೆದಿದ್ದರು.

ಸೊರಗಿ ಕುಳಿತಿದ್ದ ಚಿದಂಬರಂ ಪಿಳ್ಳೈಯವರು ಹೊಸ ಶಕ್ತಿ ಬಂದವರಂತೆ ಸರಿಯಾಗಿ ಎದ್ದು ಕುಳಿತರು. ಅವರ ಕೈ ತಾನಾಗಿ ಮುಖದ ಮೇಲೆ ಹೋಗಿ ಮೀಸೆಯನ್ನು ಹುರಿ ಮಾಡಿತು.

ಚಿದಂಬರಂ ಪಿಳ್ಳೈಯವರು ಡೆರೆಮನೆಯಲ್ಲಿ ಅಷ್ಟು ಕಷ್ಟಪಡುತ್ತಿದ್ದರಲ್ಲ, ಅವರಿಗೆ ಕೊಡುತ್ತಿದ್ದ ಆಹಾರವೇನು ಗೊತ್ತೇ? ಉಪ್ಪ ಹಾಕದ ರಾಗಿ ಅಂಬಲಿಯನ್ನು ಕೊಡುತ್ತಿದ್ದರು, ಅಷ್ಟೆ; ಇನ್ನೇನೂ ಇಲ್ಲ. ಅವರು ಸಪ್ಪೆ ಗಂಜಿಯನ್ನೇ ಕುಡಿಯುತ್ತಿದ್ದರು.

ಸೆರೆಮನೆಯಲ್ಲೂ ಸೇವೆ

ಸೆರೆಮನೆಯಲ್ಲಿದ್ದ ಅವಧಿಯಲ್ಲಿ ಚಿದಂಬರಂ ಪಿಳ್ಳೈಯವರು ತಿರುವಳ್ಳುವರ್ ರಚಿಸಿದ “ತಿರುಕ್ಕುರಳ್” ಗ್ರಂಥವನ್ನು ಸುಲಭವಾಗಿ ತಮಿಳು ಭಾಷೆಯಲ್ಲಿ ಬರೆದರು. ತಮಿಳು ವ್ಯಾಕರಣ ತೋಲ್ಕಾಪ್ಪಿಯಂ ಗ್ರಂಥಕ್ಕೆ ಅರ್ಥ ವಿವರಣೆ ಬರೆದರು. ತಮ್ಮ ಜೀವನಕ್ಕೆ ಸಂಬಂಧಿಸಿದಂತೆ ಒಂದು ಕಾವ್ಯವನ್ನು ಬರೆದರು. ಜೇಮ್ಸ್ ಅಲೆನ್ ಎಂಬ ಮಹನೀಯನ ಇಂಗ್ಲೀಷ್, ಗ್ರಂತವನ್ನು ತಮಿಳು ಭಾಷೆಗೆ ಭಾಷಾಂತರಿಸಿದರು.

ಸೆರೆಮನೆಯಲ್ಲಿ ಖೈದಿಗಳಲ್ಲಿ ಓದುಬರಹ ಬರದವರಿಗೆ ಅದನ್ನು ಕಲಿಸಿದರು. ಒಳ್ಳೆಯ ಗ್ರಂಥಗಳನ್ನು ಓದಿ ಅವುಗಳಿಗೆ ಅರ್ಥ ತಿಳಿಸಿ ಖೈದಿಗಳನ್ನು ಸುಸಂಸ್ಕೃತರನ್ನಾಗಿ ಮಾಡಿದರು.

ನಲವತ್ತು ವರ್ಷಗಳ ಅವರ ಸೆರೆಮನೆ ಶಿಕ್ಷೆ ಹತ್ತು ವರ್ಷಕ್ಕಿಳಿದು ಆಮೇಲೆ ಅದು ಆರು ವರ್ಷಗಳಿಗೆ ಕಡಿಮೆಯಾಗಿ ಅನಂತರ ಆ ಶಿಕ್ಷೆಯ ಅವಧಿಯೂ ಮುಗಿದ ಮೇಲೆ ಚಿದಂಬರಂ ಪಿಳ್ಳೈಯವರು ಸೆರೆಮನೆಯಿಂದ ಬಿಡುಗಡೆಯಾದರು.

ಸೆರೆಯಿಂದ ಬಂದ ಮೇಲೆ

ಚಿದಂಬರಂ ಪಿಳ್ಳೈಯವರು ಸೆರೆಮನೆಗೆ ಹೋದ ಮೇಲೆ ಅವರು ಸ್ಥಾಪಿಸಿದ್ದ ಸ್ವದೇಶಿ ನೌಕಾ ಸಂಸ್ಥೆ ಚಿವಾಳಿಯಾಯಿತು. ಮೊದಲು ಅವರ ಜೊತೆಗಿದ್ದ ಸ್ನೇಹಿತರೆಲ್ಲ ಈಗ ಅವರ ಕೈಬಿಟ್ಟುದಲ್ಲಚೆ, ನೌಕಾ ಸಂಸ್ಥೆಯೊಡನೆ ತಮಗಿದ್ದ ಸಂಬಂಧಗಳನ್ನೂ ಕಡಿದುಕೊಂಡರು.

ಬಿಡುಗಡೆಯಾದ ಪಿಳ್ಳೈಯವರು ಸೇವೆಯ ಕ್ಷೇತ್ರವನ್ನು ಬದಲಾಯಿಸಿದರು. ಇದುವರೆಗೆ ದೇಶಕ್ಕಾಗಿ ತಮ್ಮ ಎಲ್ಲವನ್ನೂ ಧಾರೆ ಎರೆದಿದ್ದ ಅವರು ಈಗ ತಮ್ಮ ಮಾತೃ ಭಾಷೆಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಮದರಾಸಿನಲ್ಲಿ ನೆಲೆಸಿದರು. ಆ ದಿನಗಳಲ್ಲಿ ಅವರು ತುಂಬಾ ಕಷ್ಟದ ಜೀವನ ನಡೆಸಬೇಕಾಯಿತು. ಹಿಂದೆ ನಡೆಸುತ್ತಿದ್ದ ವಕೀಲ ವೃತ್ತಿಯನ್ನು ಪ್ರಾರಂಭಿಸಲು ಬ್ರಿಟಿಷ್ ಸರ್ಕಾರ ಅವರಿಗೆ ಅನುಮತಿ ನೀಡಿರಲಿಲ್ಲ. ಆದ್ದರಿಂದ ಸ್ವಲ್ಪ ಕಾಲ ಒಂದು ಎಣ್ಣೆ ಅಂಗಡಿಯನ್ನು ನಡೆಸಿದರು; ಅನಂತರ ಒಂದು ದಿನಸಿ ಅಂಗಡಿಯನ್ನು ನಡೆಸಿದರು.

ಆಗ ಮದರಾಸ್ ಹೈಕೋರ್ಟಿನಲ್ಲಿ ನ್ಯಾಯಾಧೀಶರಾಗಿದ್ದ ವ್ಯಾಲೆಸ್ ಎಂಬ ಮಹನೀಯರು ಚಿದಂಬರಂ ಪಿಳ್ಳೈಯವರಿಗೆ ಮತ್ತೆ ವಕೀಲ ವೃತ್ತಿಯನ್ನು ನಡೆಸಲು ಅನುಮತಿ ನೀಡುವಂತೆ ಪ್ರತ್ನ ಮಾಡಿದರು. ಅವರ ಶ್ರಮದ ಫಲವಾಗಿ ಚಿದಂಬರಂ ಪಿಳ್ಳೈಯವರು ಮತ್ತೆ ವಕೀಲರಾದರು.

ಕೃತಜ್ಞತೆಯ ಸಲ್ಲಿಕೆ

ಉಪಕಾರ ಮಾಡಿದವರ ಹೆಸರುಗಳನ್ನು ತಮ್ಮ ಮಕ್ಕಳಿಗೆ ಇಟ್ಟು ಅವರ ಉಪಕಾರವನ್ನು ಸ್ಮರಿಸಿಕೊಳ್ಳುವುದು ಹಿಂದಿನವರ ರೂಢಿ. ಚಿದಂಬರಂ ಪಿಳ್ಳೈಯವರು ಅದೇ ರೀತಿಯಲ್ಲಿ ತಮಗೆ ಒಂದಲ್ಲ ಒಂದು ರೀತಿಯಲ್ಲಿ ಉಪಕಾರ ಮಾಡಿದವರಿಗೆಲ್ಲ ಕೃತಜ್ಞತೆ ಸೂಚಿಸುವಂತೆ ತಮ್ಮ ಎಲ್ಲ ಮಕ್ಕಳಗೂ ಒಬ್ಬೊಬ್ಬ ಮಹನೀಯರ ಹೆಸರನ್ನು ಇಟ್ಟರು.

ತಮಗೆ ತಮಿಳು ಭಾಷೆಯನ್ನು ಕಲಿಸಿದ ಗುರುವಿನ ಹೆಸರನ್ನು ಒಬ್ಬ ಮಗಳಿಗೆ ಇಟ್ಟು ಆಕೆಗೆ ಜ್ಞಾನವಲ್ಲಿ ಎಂದು ನಾಮಕರಣ ಮಾಡಿದರು. ತಮ್ಮ ಕಷ್ಟದ ಸಮಯದಲ್ಲಿ ಉಪಕಾರ ಮಾಡಿ ಆರಮುಗಂ ಪಿಳ್ಳೈ ಎಂಬ ಮಹನೀಯರ ಹೆಸರನ್ನು ಒಬ್ಬ ಮಗನಿಗೆ ಇಟ್ಟಿದ್ದಾರೆ. ಕೊಯಮತ್ತೂರಿನಲ್ಲಿ ವಕೀಲರಾಗಿದ್ದ ಸಿ. ಕೆ. ಸುಬ್ರಹ್ಮಣ್ಯ ಮುದಲಿಯಾರ್ ಎಂಬುವು ನ್ಯಾಯಾಲಯದಲ್ಲಿ ತಮ್ಮ ಪರ ವಕಾಲತ್ತು ವಹಿಸಿದುದರ ನೆನಪಿಗೆ ಒಬ್ಬ ಮಗನಿಗೆ ಸುಬ್ರಹ್ಮಣ್ಯ ಎಂಬ ಹೆಸರನ್ನು ಇಟ್ಟಿದ್ದಾರೆ. ವೇದಿಯಾ ಪಿಳ್ಳೈ ಎಂಬ ಮಹನೀಯರು ಮಾಡಿದ ಉಪಕಾರದ ಸ್ಮರಣೆಗೆ ತಮ್ಮ ಇನ್ನೊಬ್ಬ ಮಗಳನ್ನು ವೇದವಲ್ಲಿ ಎಂದು ಕರೆದರು. ತಾವು ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ತಮಗೆ ಮಿಂಚಿನಂತೆ ವಕೀಲ ವೃತ್ತಿಯನ್ನು ನಡೆಸಲು ಸಹಾಯ ಮಾಡಿದ ವ್ಯಾಲೆಸ್ ಎಂಬ ನ್ಯಾಯಾಧೀಶರ ನೆನಪಿಗೆ ತಮ್ಮ ಇನ್ನೊಬ್ಬ ಮಗನನ್ನು ವಾಲೇಶ್ವರ ಎಂದು ಕರೆದರು.

ಅಖಿಲ ಭಾರತ ಖ್ಯಾತಿ

ಚಿದಂಬರಂ ಪಿಳ್ಳೈಯವರು ಭಾರತದಲ್ಲಿ ಮೊದಮೊದಲಿಗೆ ಕಾರ್ಮಿಕರ ಹೋರಾಟಗಳಿಗೆ ಕಾರಣ ಕರ್ತರು. ತೂತ್ತುಕುಡಿಯಲ್ಲಿದ್ದ ಹಾರ್ವಿ ಮಿಲ್ ಕೆಲಸಗಾರರು ಅನುಭವಿಸುತ್ತಿದ್ದ ಕಷ್ಟಗಳನ್ನು ನಿವಾರಿಸಲು ಅವರು ಬಹಳ ಶ್ರಮಪಟ್ಟರು. ಮದರಾಸಿನಲ್ಲಿರುವ ಪೆರಂಬೂರ್ ರೈಲ್ವೆ ಕೆಲಸಗಾರರ ಸಂಘದಲ್ಲಿ ಸಹಾಯಕ ಕಾರ್ಯದರ್ಶಿಯಾಗಿಯೂ ಅವರು ಕೆಲಸ ಮಾಡಿದರು.

೧೯೩೫ ನೇಯ ವರ್ಷದಲ್ಲಿ ಬಾಬು ರಾಜೇಂದ್ರ ಪ್ರಸಾದರು ತಮಿಳುನಾಡಿಗೆ ಬಂದಿದ್ದರು. ಅವರು ಮದರಾಸಿಗೆ ಬಂದಾಗ ಚಿದಂಬರಂ ಪಿಳ್ಳೈಯವರೂ ಅಲ್ಲೇ ಇದ್ದರು.

ಚಿದಂಬರಂ ಪಿಳ್ಳೈಯವರು ಇರುವ ಊರಿಗೆ ಬರುವ ಸೌಭಾಗ್ಯ ನನಗೆ ಸಿಕ್ಕತು. ಅವರ ಸೆರೆಮನೆಗೆ ಹೋದರು ಎಂಬುದನ್ನು ಕೇಳಿದ ಮೇಲೆ ನನಗೆ ದೇಶಾಭಿಮಾನ ಬಂತು” ಎಂದರು ರಾಜೇಂದ್ರಪ್ರಸಾದ್.

ಒಂದು ದುರದೃಷ್ಟದ ವಿಚಾರವೆಂದರೆ ತಿರುನಲ್ವೇಲಿಯಿಲ್ಲೆಯ ಹೊರಗಿನ ಜನರು ಚಿದಂಬರಂ ಪಿಳ್ಳೈಯವರ ಬಗ್ಗೆ ತಿಳಿದಿರಲಿಲ್ಲ. ಅಖಿಲ ಭಾರತ ಮಟ್ಟದಲ್ಲಿ ಹೆಸರುವಾಸಿಯಾಗಿದ್ದ ಗಾಂಧೀಜಿ, ಬಾಲಗಂಗಾಧರ ತಿಲಕರು, ಬಾಬು ರಾಜೇಂದ್ರಪ್ರಸಾದ್, ಸಿ. ರಾಜಗೋಪಾಲಚಾರಿಯವರು, ಲಾಲಾಲಜಪತರಾಯ್ ಮೊದಲಾದ ಮಹನೀಯರು ಚಿದಂಬರಂ ಪಿಳ್ಳೈಯವರನ್ನು ತಿಳಿದ್ದ್ದ ಮಟ್ಟಿಗೂ ಅವರ ಹೆಸರನ್ನು ತಮಿಳುನಾಡಿನ ಜನ ಅರಿತಿರಲಿಲ್ಲ ಎಂದರೆ ಅದು ದುರದೃಷ್ಟವಲ್ಲವೆ?

ದೇಶವನ್ನು ನೆನೆಯುತ್ತ

೧೯೩೬ನೇಯ ವರ್ಷ ನವೆಂಬರ್ ತಿಂಗಳಲ್ಲಿ ತಮಿಳುನಾಡಿನ ವೀರಾಗ್ರಣಿ ದಳಪತಿ ಚಿದಂಬರಂ ಪಿಳ್ಳೈಯವರು ಸ್ವರ್ಗಸ್ಥರಾದರು. ಪ್ರಾಣ ಬಿಡುವುದಕ್ಕೆ ಮುಂಚೆ ಅವರು ಭಾರತಿಯವರ ದೇಶಭಕ್ತಿ ಗೀತೆಗಳನ್ನು ಹಾಡಲು ಹೇಳಿ, ಅವುಗಳನ್ನು ಕೇಳುತ್ತಲೇ ಇದ್ದು ಆಮೇಲಿ ತಮ್ಮ ಈ ಪ್ರಪಂಚದ ಸಂಬಂಧವನ್ನು ತ್ಯಜಿಸಿದರು. ಭಾರತದ ಕೋಟಿಗಟ್ಟಲೆ ಜನ ಬಡತನದಲ್ಲಿ ನರಳುತ್ತಿರುವುದನ್ನು ನೆನೆದು ಅವರ ಕಷ್ಟಗಳನ್ನು ನಿವಾರಿಸಲು ತಮ್ಮಿಂದ ಆಗಲಿಲ್ಲವಲ್ಲ ಎಂದು ಕಣ್ಣೀರು ಸುರಿಸುತ್ತ ಪ್ರಾಣ ಬಿಟ್ಟರು.

ಹದಿಮೂರು ವರ್ಷಗಳ ನಂತರ

ಮದರಾಸ್ ಪಟ್ಟಣದಿಂದ ಐನೂರು ಮೈಲಿ ದೂರದಲ್ಲಿ ತೂತ್ತಕುಡಿ ಎಂಬ ಊರಿದೆ. ಅದೊಂದು ಸಣ್ಣ ಬಂದರು.

೧೯೪೯ ನೇಯ ವರ್ಷ ಫೆಬ್ರುವರಿ ತಿಂಗಳು ೯ ನೇಯ ತಾರೀಖು ಒಂದು ಶುಭದಿವಸ.

ಭಾರತ ಸ್ವತಂತ್ರವಾಗಿತ್ತು. ಭಾರತೀಯರೊಬ್ಬರು ಈ ದೇಶದ ಗವರ್ನರ್ ಜನರಲ್ ಆಗಿದ್ದರು.

ಸಂಭ್ರಮದ ಉತ್ಸವ. ಗವರ್ನರ್ ಜನರಲ್ ಸಿ. ರಾಜಗೋಪಾಲಚಾರಿಯವರು ಒಂದು ಹಡಗನ್ನು ಸಮುದ್ರದಲ್ಲಿ ಸಂಚರಿಸಲು ಬಿಡುಗಡೆ ಮಾಡಿದರು. ಹಡಗಿನ ಹೆಸರು – “ಚಿದಂಬರಂ ಪಿಳ್ಳೈ”.

ಈ ಹಿಂದೆ ಚಿದಂಬರಂ ಪಿಳ್ಳೈಯವರು ಭಾರತ ಮತ್ತು ಶ್ರೀಲಂಕಾಗಳ ಮಧ್ಯೆ ಹಡಗಿನ ವ್ಯಾಪಾರ ನಡೆಸುತ್ತಿದ್ದಂತೆಯೇ ಅವರ ಹೆಸರನ್ನೇ ಬೆಳಗುತ್ತಿದ್ದ ಈ “ಚಿದಂಬರಂ ಪಿಳ್ಳೈ” ಹಡಗು ಕೊಲೊಂಬೋಗೆ ಹೋಗಿ ಬರಲು ಪ್ರಾರಂಭ ಮಾಡಿತು.

ಚಿದಂಬರಂ ಪಿಳ್ಳೈಯವರ ಹೆಸರಿನಲ್ಲಿ ತೂತ್ತುಕುಡಿಯಲ್ಲಿ ಒಂದು ಕಾಲೇಜು ನಡೆಯುತ್ತಿದೆ. ಮದರಾಸಿನ ಸಮುದ್ರ ತೀರದಲ್ಲಿ ಅವರ ಒಂದು ಶಿಲಾಮೂರ್ತಿಯನ್ನು ಸ್ಥಾಪಿಸಲಾಗಿದೆ.

ಚಿದಂಬರಂ ಪಿಳ್ಳೈಯವರು ದೇಶಕ್ಕಾಗಿ ದುಡಿದು ಅಮರರಾದರು. ಈ ದೇಶದಲ್ಲಿ ಒಳ್ಳೆಯ ಜನ ಇರುವವರೆಗೆ, ದೇಶಾಭಿಮಾನ – ಕೃತಜ್ಞತೆ ಇವು ಇರುವವರೆಗೆ ಅವರ ಹೆಸರೂ ಉಳೀದಿರುತ್ತದೆ.

ಚಿದಂಬರಂ ಪಿಳ್ಳೈಯವರ ಕಥೆಯನ್ನು ನಿಲ್ಲಿಸಿದ ನಿತ್ಯಾನಂದ, “ಅವರು ಬದುಕಿದ್ದ ಕಾಲದಲ್ಲಿ ಜನ ಅವರನ್ನು ಮರೆತು ಬಿಟ್ಟರು. ಆಗ ಭಾರತ ಇನ್ನೂ ಸ್ವಾತಂತ್ಯ್ರ ಪಡೆದು ಸ್ವರಾಜ್ಯ ಆಗಿರಲಿಲ್ಲ. ಈಗಲೂ ಬಡತನ ಇರುವ ಹಾಗೆ ಆಗಲೂ ಇತ್ತು. ಚಿದಂಬರಂ ಪಿಳ್ಳೈಯವರಿಗೆ ಆ ಜನರ ಕಷ್ಟ ನೀಗಲಿಲ್ಲ ವಲ್ಲ ಅನ್ನುವ ಸಂಕಟ. ಪಾಪ, ಅದೇ ವ್ಯಸನದಲ್ಲಿ ಅವರು ತೀರಿಕೊಂಢರು” ಎಂದ.

“ಹಾಗಾದರೆ ಅವರು ದೊಡ್ಡ ವಿದ್ವಾಂಸರು, ತ್ಯಾಗಿ ಅಂದ ಹಾಗೆ ಆಯಿತು” ಎಂದ ಅಶೋಕ.

“ಅವರಿಗೆ ತಮಿಳು, ಇಂಗ್ಲಿಷ್, ತೆಲಗು, ಮಲೆಯಾಳಂ ಭಾಷೆಗಳು ತಿಳಿದಿದ್ದವು. ವ್ಯಾಕರಣ ಅಂದರೆ ಅವರಿಗೆ ನೀರು ಕುಡಿದ ಹಾಗೆ”.

“ಅಣ್ಣಾ, ಚಿದಂಬರಂ ಪಿಳ್ಳೈ ಜೇಮ್ಸ್ ಅಲೆನ್ ಅನ್ನೋರು ಬರೆದ ಪುಸ್ತಕಾನ ಭಾಷಾಂತರ ಮಾಡಿದ್ದರು. ಅಂದೆಯಲ್ಲ, ಅದರ ಹೆಸರೇನು? ಎಂದು ಚಂದ್ರ ಕೇಳಿದ.

“ಅದು “ಏಸ್ ಎ ಮ್ಯಾನ್ ಥಂಕತ್” ಅಂತ ಅದನ್ನು ನೀವು ಅದೆಷ್ಟು ಬೇಗ ಓದಬೇಕು” ಎಂದ ನಿತ್ಯಾನಂದ.

“ಖಂಡಿತ ಓದ್ತೀವಿ ಕಣಣ್ಣಾ” ಎಂದು ಚಂದ್ರ, ಅಶೋಕ ಇಬ್ಬರೂ ಹೇಳಿದರು.