ಮೈಸೂರು ವೆಂಕಟೇಶ ಐಯ್ಯಂಗಾರ್ ವೇಣುವಾದನ ವೀಣಾ ವಾದನಗಳೆರಡರಲ್ಲೂ ಪ್ರಸಿದ್ಧರಾದ ವಿದ್ವಾಂಸರಾಗಿದ್ದರು. ಅಂತಹವರ ಒಬ್ಬ ಪುತ್ರ ದೊರೆಸ್ವಾಮಿ ಐಯ್ಯಂಗಾರರು ವೀಣಾವಾದಕವಾಗಿ ಜಗದ್ವಿಖ್ಯಾತರಾದರೆ ಮತ್ತೊಬ್ಬ ಪುತ್ರ ದೇಶಿಕಾಚಾರ್ ವೇಣು ವಾದನದಲ್ಲಿ ಮೇಲಾದ ಸಾಧನೆ ಮಾಡಿ ಕೀರ್ತಿ ಪಾತ್ರರಾದರು. ಇವರ ಜನನ ೧೯೨೨ರಲ್ಲಿ ಬಿ.ಎಸ್‌.ಸಿ. ಪದವೀಧರರಾಗಿದ್ದ ಇವರು ಬಿ. ಶಿವರಾಮಯ್ಯನವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದು ನಂತರ ವಿಶ್ವವಿಖ್ಯಾತ ಟಿ.ಆರ್. ಮಹಾಲಿಂಗಂ ಅವರ ಅಚ್ಚುಮೆಚ್ಚಿನ ಶಿಷ್ಯರಾಗಿ ವೇಣು ವಾದನದಲ್ಲಿ ಸಿದ್ಧಿ ಪಡೆದರು. ಎಲ್‌.ಎಸ್‌. ನಾರಾಯಣಸ್ವಾಮಿ ಭಾಗವತರು, ನಾರಾಯಣಮೂರ್ತಿ, ಬೆಳಕವಾಡಿ ವರದರಾಜ ಐಯ್ಯಂಗಾರ್ ಅವರುಗಳ ಶಿಕ್ಷಣದಲ್ಲಿ ಗಾಯನವನ್ನೂ ಮತ್ತು ಎಚ್‌. ಪುಟ್ಟಾಚಾರ್ ಹಾಗೂ ಸಿ. ಸುಬ್ಬು ಅವರ ಬಳಿ ಮೃದಂಗ ವಾದನವನ್ನೂ ಸಹ ಅಭ್ಯಾಸ ಮಾಡಿದರು. ಸ್ವರ-ಸಾಹಿತ್ಯ-ಲಯ ಜ್ಞಾನ ವಿಶಾರದರಾಗಿ ಇವರು ನೀಡಿದ ಕಛೇರಿಗಳು ಅಸಂಖ್ಯಾತ.

೧೯೪೧ರಲ್ಲಿ ಅಂತರ ವಿಶ್ವವಿದ್ಯಾಲಯದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ೧೯೪೩ ರಿಂದ ಕಛೇರಿ ಜೀವನ ಆರಂಭಿಸಿದ ದೇಶಿಕಾಚಾರ್ ಅವರು ನಾಡಿನ ಹೆಸರಾಂತ ಸಭೆ ಸಂಸ್ಥೆಗಳಿಂದ ಪ್ರತಿಷ್ಠಿತ ವೇದಿಕೆಗಳಿಂದ ಶ್ರೋತೃಗಳಿಗೆ ವೇಣು ಅಮೃತಪಾನ ಮಾಡಿಸಿದರು.

ಇವರಿಗೆ ದೊರೆತ ಅನೇಕ ಪ್ರಶಸ್ತಿಗಳಲ್ಲಿ ‘ವೇಣುಗಾನ ವಿಶಾರದ’, ‘ಗಾನ ಕಲಾ ಭೂಷಣ’, ‘ಗಾಂಧರ್ವ ವಿದ್ಯಾನಿಧಿ’, ‘ಕರ್ನಾಟಕ ಕಲಾ ತಿಲಕ’ ಮುಂತಾದುವು ಉಲ್ಲೇಖಾರ್ಹವಾದುವು.

ಶ್ರೀಯುತರು ಅನೇಕ ಶಿಷ್ಯರನ್ನು ಸಂಗೀತ ಕ್ಷೇತ್ರಕ್ಕೆ ಕೊಡುಗೆಯಾಗಿತತು. ೨೦೦೧ ರಲ್ಲಿ ಭವ ವಿಮುಕ್ತರಾದರು.