ಬೆಡಗಿನ ವೀಣೆಗೆ ಹೆಸರಾದ ಮೈಸೂರಿನಲ್ಲಿ ೧೯೨೦ರಲ್ಲಿ ದೊರೆಸ್ವಾಮಿ ಅಯ್ಯಂಗಾರ್ ಅವರು ಶ್ರೀಮತಿ ಶೃಂಗಾರಮ್ಮ – ವೀಣಾ ವಿದ್ವಾನ್‌ ವೆಂಕಟೇಶ ಅಯ್ಯಂಗಾರ್ ಅವರ ಸತ್ಪುತ್ರರಾಗಿ ಜನಿಸಿದರು. ಮೊದಲಿಗೆ ತಂದೆಯವರಲ್ಲಿ ನಂತರ ತಂದೆಯವರ ಗುರುಗಳಾಗಿದ್ದ ವೀಣೆ ವೆಂಕಟ ಗಿರಿಯಪ್ಪನವರಲ್ಲಿ ಶಿಕ್ಷಣ ಪಡೆದು ನಿರಂತರ ಸಾಧನೆಯಿಂದ, ಶಾಸ್ತ್ರೀಯತೆಯ ಶಿಸ್ತಿನಿಂದ, ವಿಕಸಿತವಾದ ಮನೋಧರ್ಮದಿಂದ ಅತ್ಯುತ್ತಮ ವೈಣಿಕರಾಗಿ ಮೆರೆದರು. ಸರಳತೆ, ಸಜ್ಜನಿಕೆಗಳ ಸಾಕಾರವೆಂಬಂತಿದ್ದ ಅಯ್ಯಂಗಾರ್ಯರು ಮೈಸೂರು ಸಂಸ್ಥಾನದ ವಿದ್ವಾಂಸರೂ ಆಗಿದ್ದರು. ಪದವೀಧರರಾಗಿದ್ದ ಶ್ರೀಯುತರು ಬೆಂಗಳೂರು ಆಕಾಶವಾಣಿಯ ಸಂಗೀತ ನಿರ್ಮಾಪಕರಾಗಿ ಹಲವಾರು ಉತ್ತಮ ಗೇಯ ರೂಪಕಗಳ ರೂವಾರಿಯಾದರು. ಅಂತರರಾಷ್ಟ್ರೀಯ ಸಂಗೀತೋತ್ಸವಗಳಲ್ಲಿ ಭಾರತವನ್ನು ಪ್ರತಿನಿಧಿಸಿ ವಿಶ್ವದ ಅನೇಕ ಪ್ರಮುಖ ನಗರಗಳಲ್ಲಿ ವೀಣೆಯ ಬೆಡಗನ್ನು ಪ್ರದರ್ಶಿಸಿ ಕರ್ನಾಟಕ ಸಂಗೀತದ ಸೊಬಗನ್ನು ವಿಶ್ವದಾದ್ಯಂತ ಹರಡಿದ ಧವಳ ಕೀರ್ತಿ ಇವರಿಗೆ ಸಲ್ಲುತ್ತದೆ.

ಗಾಯನ ಸಮಾಜದಿಂದ ‘ಸಂಗೀತ ಕಲಾರತ್ನ’; ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌; ಸುರ್‍ಸಾಗರ್ ಸಂಸತ್ತಿನಿಂದ ‘ತಂತ್ರೀವಿಲಾಸ್‌’; ಕೇಂದ್ರ ಸರ್ಕಾರದ ‘ಪದ್ಮಭೂಷಣ’ ಹಾಗೂ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ; ತಮಿಳುನಾಡು ಸರ್ಕಾರದ ‘ಕಲೈಮಾಮಣಿ’; ಮಹಾರಾಜಪುರಂ ವಿಶ್ವನಾಥ ಅಯ್ಯರ್ ಪ್ರಶಸ್ತಿ; ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ‘ಸಂಗೀತ ಕಲಾನಿಧಿ’; ಹಫೀಸ್‌ ಅಲಿಖಾನ್‌ ಪ್ರಶಸ್ತಿ; ರಾಜ್ಯ ಸಂಗೀತ ನಾಟಕ ಅಕಾಡೆಮಿಯ ೧೯೭೧-೭೨ರ ಪ್ರಶಸ್ತಿ; ರಾಜ್ಯೋತ್ಸವ ಪ್ರಶಸ್ತಿ – ಹೀಗೆ ಪ್ರಶಸ್ತಿ ಗೌರವಗಳ ಮಾಲೆಯಿಂದಲೇ ಸಮಲಂಕೃತರಾಗಿದ್ದ ಶ್ರೀಯುತರು ಅನೇಕ ಶಿಷ್ಯ – ಪ್ರಶಿಷ್ಯರನ್ನು ಕ್ಷೇತ್ರಕ್ಕೆ ನೀಡಿ ೧೯೯೭ರಲ್ಲಿ ನಾದಲಹರಿಯಲ್ಲಿ ಒಂದಾದರು.