ವಿ. ದೊರೆಸ್ವಾಮಿ ಐಯ್ಯಂಗಾರ್ಯರು ಹಾಸನ ಜಿಲ್ಲೆಯ ಗಿಡ್ಡಹಳ್ಳಿಯಲ್ಲಿ ಸ್ವತಃ ವೀಣಾ, ಕೊಳಲು ವಿದ್ವಾಂಸರಾಗಿದ್ದ ವೆಂಕಟೇಶ ಐಯ್ಯಂಗಾರ್ಯರು ಮತ್ತು ಶೃಂಗಾರಮ್ಮನವರ ಪುತ್ರನಾಗಿ ೧೧.೮.೧೯೨೦ ರಲ್ಲಿ ಜನಿಸಿದರು.

ಕೇವಲ ಆರೇಳು ವರ್ಷದವರಾಗಿದ್ದಾಗಲೇ ಗಾಯನದಲ್ಲಿ ಕೆಲವು ಕೃತಿಗಳನ್ನು ಕಲಿತು ಶ್ರುತಿ ಶುದ್ಧವಾಗಿಯೂ, ಲಯಬದ್ಧವಾಗಿಯೂ ಹಾಡುತ್ತಿದ್ದರು. ಶಾರೀರವು ಗಡುಸಾದಾಗ ವೀಣೆಯ ಕಡೆ ಇವರ ಒಲವು ಬಲವಾಯಿತು. ಮಗ ದೊರೆಯಲ್ಲಿ ಸುಪ್ತವಾಗಿದ್ದು ಈಗ ಪಲ್ಲವಿಸಿದ ಸಂಗೀತಾಸಕ್ತಿಯನ್ನು, ಅದರಲ್ಲೂ ವೀಣಾವಾದನದ ಕಡೆ ಆತನ ಒಲವು ಮೂಡಿರುವುದನ್ನು ಮನಗಂಡ ವೆಂಕಟೇಶ ಅಯ್ಯಂಗಾರ್ಯರು ಅದಕ್ಕೆ ತಣ್ಣೀರೆರಚದೆ ಮಗನನ್ನು ವೀಣಾ ಶೇಷಣ್ಣನವರ ನೇರ ಶಿಷ್ಯರಾಗಿದ್ದ ವೀಣಾ ವೆಂಕಟಗಿರಿಯಪ್ಪನವರ ಬಳಿ ವೆಂಕಟಗಿರಿಯಪ್ಪನವರಲ್ಲಿ ಶಿಷ್ಯವೃತ್ತಿ ಮಾಡುವ ಸೌಭಾಗ್ಯ ಒದಗಿತು.

ಆರಂಭ ಶಿಕ್ಷಣವನ್ನು ತಂದೆಯವರಲ್ಲೇ ಪಡೆದು, ತಂದೆಯವರಿಗೂ ಗುರುಗಳಾಗಿದ್ದ ವೆಂಕಟಗಿರಿಯಪ್ಪನವರಲ್ಲಿ ಪ್ರೌಢಶಿಕ್ಷಣವನ್ನು ಪಡೆಯಲಾರಂಭಿಸಿದರು. ಶಿಷ್ಯವೃತ್ತಿಯ ಫಲ, ಗುರುಗಳ ಅನುಗ್ರಹ, ಜೊತೆಗೆ ಯಮಸಾಧನೆ ಹೀಗೆ ಚಿಕ್ಕಂದಿನಿಂದಲೇ ವೀಣಾ ಕಚೇರಿಗಳನ್ನು ಮಾಡುವಂತಾಯಿತು. ಮಹಾರಾಜರ ಸಮ್ಮುಖದಲ್ಲಿ ವೀಣೆ ಕಚೇರಿ ಮಾಡುವುದೆಂದರೆ ಸಾಮಾನ್ಯವೇ! ಅದೂ ಹನ್ನೆರಡು ವರ್ಷದ ಬಾಲಕ? ಮಾಡಿ ಸೈ ಎನಿಸಿಕೊಂಡನಲ್ಲವೇ! ಆಸ್ಥಾನ ವಿದ್ವಾಂಸರ ಒಡನಾಟವೂ ಒದಗಿತು. ಗುರುಗಳಾದ ವೆಂಕಟಗಿರಿಯಪ್ಪನವರ ಪಾಠಕ್ರಮ ಬಹಳ ಶಿಸ್ತಿನದು. ವೀಣೆ ನುಡಿಸಿದರೆ ಹೇಗಿರಬೇಕು. ಸುನಾದ, ಸುಸ್ವರ, ಮೃದುವಾದ ಮೀಟು, ಬೆರಳುಗಳ ಚಲನೆ, ಸಂಪ್ರದಾಯ ಶುದ್ಧತೆ ಇವುಗಳ ಸೂಕ್ಷ್ಮವನ್ನು ಬಹಳ ಚೆನ್ನಾಗಿ ವಿವರಿಸುತ್ತಿದ್ದರು. “ವಿದ್ಯೆ, ಸಾಧಕನ ಸ್ವತ್ತು” ಎಂಬುದು ಅವರ ಗುರುಗಳಾದ ವೀಣೆ ಶೇಷಣ್ಣನವರ ನುಡಿಮುತ್ತು.

ದೊರೆಸ್ವಾಮಿ ಐಯ್ಯಂಗಾರ್ಯರು ಕಾಲೇಜು ವಿದ್ಯಾರ್ಥಿಯಾಗಿಯೂ ಕೂಡ ಬಿಡುವು ಮಾಡಿಕೊಂಡು ವೀಣಾ ಶಿಕ್ಷಣಕ್ಕೆಕ ತಮ್ಮ ವೇಳೆಯನ್ನು (ಬಹುತೇಕ) ಮುಡಿಪಾಗಿಟ್ಟಿದ್ದರು. ಅವರ ಅವಿರತ ಸಾಧನೆ, ಪ್ರತಿಭೆಗಳ ಜೊತೆಗೆ ಅದೃಷ್ಟವೂ ಸೇರಿ ಯಶಸ್ಸಿನ ಸೋಪಾನವನ್ನೇರುತ್ತಲೇ ಬಂದರು. ಜೊತೆಗೆ ಸಂಪ್ರದಾಯ ಶೀಲರು, ಅವರ ಆಚಾರ ವಿಚಾರಗಳೆಲ್ಲ ಶಿಷ್ಟ ಸಂಸ್ಕೃತಿಯನ್ನೊಳಗೊಂಡಿತ್ತು.

ಅರಿಯಕ್ಕುಡಿ ರಾಮಾನುಜಯ್ಯಂಗಾರ್ಯರು, ಪಾಲ್ಘಾಟ್‌ ರಾಮಭಾಗವತರು, ಮುಡಿಕೊಂಡನ್‌ ವೆಂಕಟರಾಮಯ್ಯರ್, ಎಸ್‌.ವಿ. ಪಾರ್ಥಸಾರಥಿ, ಮುಸಿರಿ ಸುಬ್ರಹ್ಮಣ್ಯ ಐಯ್ಯರ್, ಕಾರೈಕ್ಕುಡಿ ಸಾಂಬಶಿವಯ್ಯರ್ ಮುಂತಾದ ಹಿರಿಯರ ಸಂಗೀತ ಕಚೇರಿಗಳನ್ನೂ ಕೇಳಿ, ಅವರುಗಳು ಹಾಡುತ್ತಿದ್ದ, ನುಡಿಸುತ್ತಿದ್ದ ವಿಧಾನ, ಚಿಕ್ಕಂದಿನಿಂದಲೇ ವಿನ್ಯಾಸಕ್ರಮ, ಕೀರ್ತನೆಗಳನ್ನು ನಿರೂಪಿಸುವ ಶೈಲಿ, ಸ್ವರಕಲ್ಪನೆ ಇವುಗಳನ್ನು ಮನನ ಮಾಡಿಕೊಂಡು ಅಭ್ಯಾಸ ಮಾಡುವ ಪರಿಪಾಠವಿಟ್ಟುಕೊಂಡಿದ್ದರು.

ಅಂದು ವೀಣಾ ಸಂಪ್ರದಾಯವೇನಿತ್ತೋ ಅದನ್ನು ಅಚ್ಚೊತ್ತಿದಂತೆ ಹೃದ್ಗತ ಮಾಡಿಕೊಂಡರು. ಗುರುಗಳಂತೂ, ಶಿಷ್ಯನಾಗಿ ದೊರೆತ ಅಮೃತ ಶಿಲೆಯನ್ನು  ವೈಣಿಕ ವಿಗ್ರಹವನ್ನಾಗಿ ರೂಪಿಸಿದರು. ವಿದ್ಯಾರ್ಥಿ, ವಿದ್ಯಾವಂತನಾಗಿ ವಿದ್ವಾಂಸನಾದ. ಸತತ ಸಾಧಕನಾಗಿ ಮೈಸೂರು ವೀಣಾಬಾನಿಯ ಪ್ರತಿನಿಧಿಯ ಆದ ಗುರುವಿನ ಪ್ರಭಾವ, ಅವರ ವೀಣಾವಾದನ ಕ್ರಮದ ಮೇಲೆ ಸತತವಾಗಿದ್ದು ಅಂತಹ ಗುರು ದೊರೆತದ್ದು ತಮ್ಮ ಪುಣ್ಯವೆಂದು ಹೇಳುತ್ತಿದ್ದುದನ್ನು ಅವರ ಬಾಯಿಂದಲೇ ಕೇಳಿದ್ದೇವೆ. ಅವರ ಕಲೆ ಅರಳಿದ್ದು ಗುರುಕುಲದಲ್ಲಿ ಗುರುಸೇವೆಯಿಂದ. ನಿಷ್ಠೆಯ ಸಾಧನೆಯಿಂದ ಸಿದ್ಧಿಸಿ ಬಂದ ಕಲಾಸಂಪತ್ತು ಅವರದು.

ಅವರ ಸಂಗೀತವಾದರೂ ಸಂಪ್ರದಾಯದ್ದೇ. ಸಂಪ್ರದಾಯವೆಂದರೆ ಕೇವಲ ಕುರುಡು ನಂಬಿಕೆಯಲ್ಲ. ಸಾವಿರಾರು ವರ್ಷಗಳ ಚಿಂತನ ಪ್ರಯೋಗ, ಅಧ್ಯಯನ ಮತ್ತು ಅನುಭವಗಳ ಫಲವಾಗಿ ರೂಪಿತವಾದ ಕೆಲವು ಮೂಲಭೂತ ನಿಯಮಗಳು. ಸಂಪ್ರದಾಯದ ತತ್ವ ಮತ್ತು ಉದ್ದೇಶಗಳನ್ನು ಅರ್ಥಮಾಡಿಕೊಂಡು ಅನುಸರಿಸಿದರೆ ನಮ್ಮ ಸಂಗೀತದ ಅಂದ ಚೆಂದಗಳು ಹೆಚ್ಚುತ್ತದೆ. ನಿಯಮಗಳಿಗೆ ಚ್ಯುತಿ ಬಾರದಂತೆ ಹೊಸ ಪ್ರಯೋಗಗಳನ್ನು ಮಾಡಿದರೆ ಸಂಪ್ರದಾಯವನ್ನು ಬೆಳೆಸಿದಂತಾಗುತ್ತದೆ. ಹಿರಿಯರ ಕೊಡುಗೆಗಳನ್ನು ಅರ್ಥಮಾಡಿಕೊಂಡು ಅದನ್ನು ಪಾಲಿಸುವುದು, ಕಾಪಾಡುವುದು ಎಲ್ಲರ ಧರ್ಮ. ಇದು ದೊರೆಸ್ವಾಮಿ ಐಯಂಗಾರ್ಯರ ನುಡಿ ಮುತ್ತುಗಳು.

ಕಲಾಸಾಧನೆ: ದೊರೆಸ್ವಾಮಿ ಐಯ್ಯಂಗಾರ್ಯರು ಒಬ್ಬ ನಾದೋಪಾಸಕ, ಕಲಾತಪಸ್ವಿ, ನಾದಾನುಸಂಧಾನ ನಿರಂತರವಾಗಿದ್ದು ವೀಣೆಯೇ ಅವರ ಸರ್ವಸ್ವವಾಗಿದೆ. ಹೊರಗಿನ ವಾತಾವರಣವಾಗಲಿ, ಬೇರಾವ ಅಡಚಣೆಯಾಗಲಿ, ಇವರ ನಾದೋಪಾಸನೆಗೆ ಅಡ್ಡಿಯಾಗಲಿಲ್ಲ.

ಶ್ರುತಗಾನಂ ಅಭಿರಾಮಾದೊಡಂ ಅಶ್ರುತಗಾನಂ ಅಭಿರಾಮತರಮ್‌ ಎಂದು ಭಾವಿಸಿ, ಅತೀತವಾದ ನಾದವನ್ನು, ಕೈಯಲ್ಲಿ ಅಡಗಿಸಿಕೊಳ್ಳುವ ಭಾವೈಕ್ಯರು. ವ್ಯವಸಾಯ ಮತ್ತು ಸಿದ್ಧಿ ಎರಡರಲ್ಲೂ ಇವರು ತೃಪ್ತಿ ಪಡೆದಿದ್ದರು. ಮನವೇ ಕೈಯಾಗುವವರೆಗೂ, ಮನದಲ್ಲಿ ಬಂದದ್ದು ಕೈಯಲ್ಲಿ ಬರುವವರೆಗೂ ಬಿಡದ ಕಠಿಣ ಸಾಧನೆ ಇವರದು.

ವೀಣೆ ನುಡಿಸುವುದನ್ನು ಬಿಟ್ಟರೆ ದೊರೆಸ್ವಾಮಿ ಐಯಂಗಾರ್ಯರಿಗೆ ಬೇರೆ ಹವ್ಯಾಸವೇ ಇರಲಿಲ್ಲ. ಅವರ ಮನಸ್ಸು ಸದಾಕಾಲವೂ ಸಂಗೀತದ ಚಿಂತನೆಯಲ್ಲಿಯೇ ಇದ್ದು ವೀಣೆಯ ಸಾನ್ನಿಧ್ಯಕ್ಕಾಗಿ ಹಾತೊರೆಯುತ್ತಿತ್ತು. ಅದು ಎಷ್ಟರ ಮಟ್ಟಿಗೆ ಇದ್ದಿತೆಂದರೆ ತಿಂಡಿ, ತೀರ್ಥ, ಊಟ ಉಪಚಾರಗಳ ಬಗ್ಗೆ ಮಾತನಾಡುವಾಗಲೂ ಸಹ “ಸೊಪ್ಪಿನ ಪಲ್ಯ, ಸಾರು, ಅನ್ನ, ಹಪ್ಪಳ, ಸಿಹಿಮೊಸರು ಇವಿಷ್ಟಿದ್ದರೆ ಅದಕ್ಕಿಂತ ಊಟಬೇಕೇ ಸೊಗಸಾದ ಶಂಕರಾಭರಣ ಕೇಳಿದ ಹಾಗೆ ಆಗುತ್ತೆ. ಬಿಸಿಬೇಳೆಬಾತು ಘನರಾಗಗಳಷ್ಟು ಗಟ್ಟಿ, ಕೂಟು-ಗೊಜ್ಜು-ಕದಂಬ ಇವೇ ಪ್ರತಿ ಮಧ್ಯಮ ರಾಗಗಳ ತರಹ ಅಲ್ಲವೇ?” ಎನ್ನುತ್ತಿದ್ದರು. ನಾದವಿದ್ಯೆ ಅವರ ಎದೆಯಾಳದಲ್ಲಿ ಮಡುಗಟ್ಟಿರುವುದು, ಇದರಲ್ಲಿ ವ್ಯಕ್ತವಾಗುತ್ತದೆ. ಹೀಗೆ ಊಟದ ತಿಂಡಿ ತಿನಿಸುಗಳ ರುಚಿಗೆ ಒಂದೊಂದು ರಾಗದ ಸ್ವರೂಪವನ್ನು ಹೋಲಿಸಿ ತಾಳೆ ಮಾಡುತ್ತಿದ್ದರು.

ಸಂಧ್ಯಾವಂದನೆ, ಸಹಸ್ರನಾಮ ಪಾರಾಯಣವನ್ನು ಎಂದಿಗೂ ತಪ್ಪಿಸಿದವರಲ್ಲ. ಎಲ್ಲದರಲ್ಲೂ ಒಂದು ನಿಯಮ, ಶಿಸ್ತು, ಸಂಪ್ರದಾಯ.

ಅವರ ವೀಣಾವಾದನದ ಪ್ರಬುದ್ಧತೆ, ಅದರ ಸೌಂದರ್ಯವನ್ನು ಹೀಗೆ ವರ್ಣಿಸಬಹುದು. ತಾನ ವೈಖರಿಯಲ್ಲಿ ಗೊಮ್ಮಟದ ಶುಚಿಸ್ಮಿತದ ಗಾಂಭೀರ್ಯ, ಚಾರ್ಮುಡಿ ಘಟ್ಟದ ಭವ್ಯತೆ; ಭೈರವಿಯಲ್ಲಿ ಕಾರುಣ್ಯ, ಕಲ್ಯಾಣಿಯಲ್ಲಿ ಷೋಡಶಿಯ ಮಂಗಳಕಾಂತಿ; ದೇವಗಾಂಧಾರಿ, ದೇವಮನೋಹರಿ ಸಾಳಗಭೈರವಿ, ಶ್ರೀರಂಜನಿ ರಾಗಗಳಲ್ಲಿ ಶಿಲಾಬಾಲಿಕೆಯರ ಲಾಲಿತ್ಯ, ಶಂಕರಾಭರಣದಲ್ಲಿ ಕಂಚಿಯ ಗೋಪುರ; ತೋಡಿ, ಕಾಂಬೋಧಿಯ ನಿರ್ದಿಗಂತ ಆಯಾಮ ಸ್ವರ ಪೋಚಾವಣಿಯ ಹೂದೋಟ; ಮಾಳವಿ, ಕೇದಾರಗೌಳ ಗಾಟಕುರಂಜಿ ರುದ್ರಪ್ರಿಯ, ರೀತಿಗೌಳ, ಕನ್ನಡ ಈ ರಾಗ ದೇವತೆಯರ ನೃತ್ಯದ ಕಲಾಭಿಜ್ಞತೆಗೆ ಭ್ರಮೆಪಟ್ಟು, ಜಂಜೂಟಿ, ಕಾಪಿ, ಕಮಾಚ್‌, ಬೇಹಾಗ್‌ಗಳ ಬಿನ್ನಾಣದ ಬೆಡಗಿಗೆ ಶರಣಾಗಿರುವುದಾಗಿ ಐಯ್ಯಂಗಾರ್ಯರ ಶಿಷ್ಯೆಯೂ, ಗುರುಗಳ ಪುತ್ರಿಯೂ  ಆದ ಶ್ರೀಮತಿ ಅಮೃತರವರು ಕೊಂಡಾಡುತ್ತಾರೆ.

ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯಲ್ಲಿ ಇವರು ಚಿತ್ರೀಕರಿಸಿದ ಕಾಂಬೋಧಿ ರಾಗಾಲಾಪನೆ, ಸೌಂದರ್ಯ ಶುದ್ಧತೆ, ಗಾಂಭೀರ್ಯದಿಂದ ಕೂಡಿದ ತಾನಗಳನ್ನು ಕೇಳಿ ಆನಂದಿಸಿದ್ದು ಇನ್ನೂ ಅಂತರಾಳದಲ್ಲಿ ಹಚ್ಚ ಹಸುರಾಗಿ ಉಳಿದಿದೆಯೆಂದು ಸಂಗಿತ ಕಲಾನಿಧಿ ಶೆಮ್ಮಂಗುಡಿ ಶ್ರೀನಿವಾಸಯ್ಯರ್ ರವರು ಮೆಚ್ಚಿಕೊಂಡಿದ್ದಾರೆ.

ಹಲವಾರು ಕಚೇರಿಗಳ ಸಂದರ್ಭದಲ್ಲಿ ಇವರು ನಿರೂಪಿಸಿದಕ ಅನುಪಮ ಷಣ್ಮುಖಪ್ರಿಯ, ನಾರಾಯಣಗೌಳ, ಕಲ್ಯಾಣಿ, ಕಾಪಿ ಮುಂತಾದುವುಗಳನ್ನು ಕೇಳಿ ಸುಖಾನುಭವ ಪಡೆದುದನ್ನು ಆಚಾರ್ಯ ಪು.ತಿ. ನರಸಿಂಹಾಚಾರ್ಯರವರು ಹೇಳಿಕೊಂಡಿದ್ದಾರೆ. ಪು.ತಿ. ನರಸಿಂಹಾಚಾರ್ಯರವರು ಹೇಳಿಕೊಂಡಿದ್ದಾರೆ. ಪು.ತಿ.ನ. ರವರ “ಬೆಳಗು ನನ್ನೀ ದೀವಿಗೆ” ಮತ್ತು “ಭಾಮಾರಮಣ” ಎಂಬೆರಡು ಲಲಿತ ಗೀತೆಗಳು ತಮ್ಮ ಪೂರ್ಣಕಾಂತಿಯ ಚೆಲುವನ್ನೂ, ಸುಮಧುರ ಸಂಗೀತವನ್ನೂ ಐಯ್ಯಂಗಾರ್ಯರ ವೀಣೆಯಲ್ಲಿ ಪಡೆದುವು.

ಭಾರತೀಯ ಸಂಗೀತದಲ್ಲಿ ವೀಣೆಗೆ ಇರುವ ಪ್ರಾಶಸ್ತ್ಯವನ್ನು ಯಾಜ್ಞವಲ್ಕ್ಯಸ್ಮೃತಿ ಹೀಗೆ ಹೇಳಿದೆ.

ವೀಣಾವಾದನ ತತ್ವಜ್ಞಃ ಶ್ರುತಿಜಾತಿ ವಿಶಾರದಃ|

ತಾಳಜ್ಞಶ್ಚಾಪ್ರಯಾಸೇನ ಮೋಕ್ಷಮಾರ್ಗಂ ಸ ಗಚ್ಛತಿ||”

ಗಾಯಕನು ವೀಣೆಯಂತೆ ಹಾಡಬೇಕು, ವೈಣಿಕನು ಗಾಯಕನಂತೆ ನುಡಿಸಬೇಕು, ಇದು ಪೂರ್ವದಿಂದ ಬಂದ ಸೂಕ್ತಿ. ವೈಣಿಕನ ಮೀಟು ಮೃದುವಾಗಿರಬೇಕು. ಸಾಹಿತ್ಯವನ್ನವಲಂಬಿಸಿ ಮೀಟುಗಳನ್ನು ಹಾಕಬೇಕು. ವೈಣಿಕನು ತನ್ನ ಪ್ರದರ್ಶನಕ್ಕಿಂತ ದೈವಿಕವಾದ ಈ ವಾದ್ಯದ ಶ್ರೇಷ್ಠತೆಯು ವೇದ್ಯವಾಗುವಂತೆ ಮೊದಲು ಪ್ರಯತ್ನಿಸಬೇಕು. ಇದು ಐಯ್ಯಂಗಾರ್ಯರವರ ಮಾರ್ಗದರ್ಶನ.

“ನನ್ನ ಯೋಗ್ಯತೆಗೆ ತಕ್ಕಂತೆ ನುಡಿಸುತ್ತೇನೆಯೇ ಹೊರತು ವೀಣೆಯ ಯೋಗ್ಯತೆಗೆ ತಕ್ಕಂತೆ ನುಡಿಸುವ ಶಕ್ತಿ, ನನಗಿಲ್ಲ” ಎಂದು ವೀಣೆ ಶೇಷಣ್ಣನಂಥವರೇ ಹೇಳುತ್ತಿದ್ದರಂತೆ.

ಪ್ರಶಸ್ತಿ-ಪುರಸ್ಕಾರ: ಪ್ರಶಸ್ತಿಗಳ ಸರಮಾಲೆಯೇ ಇವರ ಮಡಿಲಿಗೆ ಬಿದ್ದಿವೆ.

೧೯೬೯ರಲ್ಲಿ ಬೆಂಗಳೂರು ಗಾಯನ ಸಮಾಜದ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಸಂಗೀತ ಕಲಾರತ್ನ ಎಂಬ ಬಿರುದನ್ನು ಪಡೆದರು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್‌; ೧೯೮೧-೮೨ರಲ್ಲಿ ಸುರ್ ಸಾಗರ್ ಸಂಸದ್‌ನಿಂದ ತಂತ್ರೀವಿಲಾಸ್‌ ಎಂಬ ಬಿರುದು; ನಮ್ಮ ಹೆಮ್ಮೆಯ  ರಾಷ್ಟ್ರದ ಹಲವಾರು ಕಲಾವಿದರು, ಸಂಗೀತ ವಿದ್ವಾಂಸರು ಬಯಸುವ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ; ೧೯೮೪ರಲ್ಲಿ ಮದ್ರಾಸ್‌ ಮ್ಯೂಸಿಕ್‌ ಅಕಾಡೆಮಿಯ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಸಂಗೀತ ಕಲಾನಿಧಿ ಬಿರುದು ಹಾಗೂ ಚಿನ್ನದ ಪದಕ; ೧೯೯೦ರಲ್ಲಿ ಮಹಾರಾಜಪುರಂ ವಿಶ್ವನಾಥ ಐಯ್ಯರ್ ಪ್ರಶಸ್ತಿ; ೧೯೯೧ ರಲ್ಲಿ ಹಫೀಸ್‌ ಅಲಿಖಾನ್‌ ಪ್ರಶಸ್ತಿ; ೧೯೯೨ ರಲ್ಲಿ ತಮಿಳ್‌ನಾಡು ಸರ್ಕಾರ ಕಲೈಮಾಮಣಿ ಪ್ರಶಸ್ತಿ; ಹೀಗೆ ಪ್ರಶಸ್ತಿಗಳ ಮಹಾಪೂರವೇ ಹರಿದುಬಂದಿದೆ.

ಇವರು ೧೯೮೩ ರಿಂದ ೮೬ ರವರೆಗೆ ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ರೀತಿ ಎಲ್ಲರ ಮೆಚ್ಚುಗೆ ಪಡೆದಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ, ವಿಭಾಗದ ಮುಖ್ಯಸ್ಥರಾಗಿ ತಾವು ಹೊಸ ಹೊಸ ಹಾದಿಗಳನ್ನು ಹುಡುಕಿಕೊಳ್ಳುವಲ್ಲಿ, ಐಯಂಗಾರ್ಯರು ಮತ್ತೆ ಮತ್ತೆ ಪ್ರದರ್ಶನ ಕಲಾವಿಭಾಗಕ್ಕೆ ಕರೆದಾಗಲೆಲ್ಲಾ ನಿರೀಕ್ಷಕರಾಗಿ, ಪರೀಕ್ಷಕರಾಗಿ, ಸಂಕರಣಕರಾಗಿ ಬಂದದ್ದನ್ನೂ, ಅವರ ವಿನೋದ ಪ್ರವೃತ್ತಿಯನ್ನೂ ನೆನೆದು ಅದನ್ನು ಅದ್ಭುತವಾಗಿ ವರ್ಣಿಸಿದ್ದಾರೆ ಡಾ. ಹೆಚ್‌.ಕೆ. ರಂಗನಾಥ್‌ರವರು.

ವಯಸ್ಸು ಎಪ್ಪತ್ತು ದಾಟಿದಮೇಲೆ ವಿಶ್ರಾಂತಿ ಜೀವನ ಹೇಗಿರಬೇಕು ಎಂಬುದರ ಬಗ್ಗೆ ದೊರೆಸ್ವಾಮಿ ಐಯ್ಯಂಗಾರ್ಯರ ಜೊತೆ ಚರ್ಚೆ ಮಾಡಿದರ ಬಗ್ಗೆ ಹೀಗೆ ಮೆಲಕು ಹಾಕಿದ್ದಾರೆ ಡಾ. ಹೆಚ್‌.ಕೆ. ರಂಗನಾಥ್‌ರವರು.

“ಜಗತ್ತಿನ ಜಂಜಾಟವಿಲ್ಲದೆ ಮನೆಯ ಮಾತನ್ನು ಮನಸ್ಸಿಗೆ ಹಚ್ಚಿಕೊಳ್ಳದೆ ಹಾಯಾಗಿ, ಹಗುರಾಗಿ ಇರಬೇಕು. ವಾಕಯ ಮನದಿಚ್ಛೆಯಂತೆ ವಿಶಾಲವಾದ ಕೊಠಡಿಯಲ್ಲಿ, ಸ್ವಚ್ಛ ಮಾಡಿದ ರೆಡ್‌ ಆಕ್ಸೈಡ್‌ ನೆಲದ ಮೇಲೆ ಮಧ್ಯದೆಲ್ಲಿ ದೊಡ್ಡ ಅಳತೆಯ ಮಂದವಾದ ಮಂದಲಿಗೆ ಇರಬೇಕು. ಕುರ್ಚಿ, ಮೇಜು, ಸೋಫಾ, ಟೀಪಾಯಿಗಳ ಕಾಟ ಅಲ್ಲಿ ಇಲ್ಲ. ಮಂದಲಿಗೆಯ ಮೇಲೆ ಅಲ್ಲಿ ವೀಣೆ, ಸ್ವಚ್ಛಮಾಡಿದ ಬೆಳ್ಳಂಬೆಳಗಿನ ಪಿಲ್ಲೋಕೇಸಿನ ಮೆದುದಿಂಬುಗಳು, ಆ ಪಕ್ಕದ ಬೆಳ್ಳಿಯ ಲೋಟದಲ್ಲಿ ದಂತದ ಬಣ್ಣಕ್ಕೆ ಹದವಾಗಿ ಬೆರೆಸಿರುವ ಬಿಸಿ ಬಿಸಿ ಕಾಫಿ. ಈ ಪಕ್ಕದಲ್ಲಿ ‘ಹಿಂದು’ಪತ್ರಿಕೆ; ಇಷ್ಟು ಬೇಕೇ ಬೇಕು ಇದಿಷ್ಟು ಸಾಕೇ ಸಾಕು” ಎಂಬುದಾಗಿ. ಆದರೆ ಶ್ರೀ ರಂಗನಾಥ್‌ರವರ ಅನುಭವದಲ್ಲಿ ಇವಿಷ್ಟರ ಜೊತೆಗೆ ಅಂಥಾ ವಿಶ್ರಾಂತಿಗೆ, ಮಂಪರಿನ ಕೆನೆ ಕೂಡಿ ಬರಲು ದೊರೆಸ್ವಾಮಿ ಐಯ್ಯಂಗಾರ್ಯರ ವೀಣೆಯ ಕ್ಯಾಸೆಟ್ಟು ಬೇಕೇ ಬೇಕು ಎನಿಸಿದೆ.

ವ್ಯಕ್ತಿತ್ವ: ದೊರೆಸ್ವಾಮಿ ಐಯ್ಯಂಗಾರ್ಯರು ಗುರುಪುತ್ರರಾಗಿ ರಾಮಕೃಷ್ಣ ಪರಮಹಂಸರಿಗೆ ಸ್ವಾಮಿ ವಿವೇಕಾನಂದರೋಪಾದಿಯಲ್ಲಿ ವೀಣೆಯನ್ನು ಶ್ರದ್ಧೆಯಿಂದ ಕಲಿತು ಭಾರತ ಸಂಸ್ಕೃತಿಯ ಧ್ವಜವನ್ನೇ ಹಾರಿಸಿದ್ದಾರೆ.

ಅವರಿ ನೋಡಲು ಲಕ್ಷಣವಾಗಿದ್ದು, ಸೌಮ್ಯ ಮುಖದಲ್ಲಿ ಮುಗ್ಧತೆಯೂ, ಅಂತರಾಳದಲ್ಲಿ ಹುದುಗಿದ್ದ ಕಲಾಪ್ರತಿಭೆ ಅವರ ಅಯಸ್ಕಾಂತ ಕಣ್ಣುಗಳ ಮೂಲಕವೂ ತೋರುತ್ತಿತ್ತು. ಅವರದು ಸಂಕೋಚ ಪ್ರವೃತ್ತಿ ಹಿತಮಿತವಾದ ನುಡಿ. ಅವರ ವ್ಯಕ್ತಿತ್ವ ಸರಳ, ಸುಸಂಸ್ಕೃತವಾಗಿದ್ದು ಅವರಲ್ಲಿ ಸುಪ್ತವಾಗಿದ್ದ ಸಂಗೀತ ವಿದ್ವತ್ತಿನ ಪ್ರದರ್ಶನಕ್ಕೆ ಅವಕಾಶವೀಯುತ್ತಿರಲಿಲ್ಲ. ಅವರು ಸ್ವಭಾವತಃ ಯಾರನ್ನೂ ಟೀಕೆ ಮಾಡಿ ನೋಯಿಸುತ್ತಿರಲಿಲ್ಲ. ವಿವಾದಾಸ್ಪದವಾದ ವಿಚಾರಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ಹೊರಸೂಸದೆ ಸಂದರ್ಭಕ್ಕನುಸಾರವಾಗಿ ಉಚಿತವಾದ ರೀತಿಯಲ್ಲಿ ಯುಕ್ತಾಯುಕ್ತ ವಿವೇಚನೆ ಮಾಡಿ ಮಾತಾಡುತ್ತಿದ್ದರು. ಸಹ ಕಲಾವಿದರ ಬಗ್ಗೆ ಗೌರವ ತೋರುವುದು ಇವರ ಸ್ವಭಾವ. ಪ್ರತಿಭೆ, ಸಾಧನೆ ಇದ್ದರೂ ಕೂಡ ವಿನಯ ಸೌಜನ್ಯ ಇವುಗಳಿಂದ ಜನಪ್ರಿಯರಾಗಿದ್ದರು ಇವರು. ದೊರೆಸ್ವಾಮಿ ಐಯ್ಯಂಗಾರ್ಯರು ಹಸನ್ಮುಖಿಗಳು. ತಾವೂ ನಕ್ಕು ಜೊತೆಯಲ್ಲಿರುವವರನ್ನು ನಗಿಸುತ್ತಿದ್ದರು. ಅವರ ಸ್ವಭಾವವು ಅವರ ವೀಣಾ ವಾದನದಷ್ಟೇ ಮೃದುವಾಗಿರುತ್ತಿತ್ತು.

ಕಚೇರಿಯ ಸಮಯದಲ್ಲಿ, ಅವರ ವೇಷ ಭೂಷಣಗಳೂ ಅತ್ಯಂತ ಸರಳ. ಸಂಪ್ರದಾಯಾನುಸಾರವಾಗಿ ಉಟ್ಟ ಧೋತ್ರ, ಷರ್ಟು, ಉತ್ತರೀಯ, ಮೆಲುನಗೆಯ ಮುಖ, ಒಲವಿನಿಂದ ವೀಣೆಯ  ಮೇಲೆ ನರ್ತಿಸುತ್ತಿರುವ ಬೆರಳುಗಳು, ಇವು ಅವರ ಸೌಮ್ಯ ಸ್ಭಾವದ ಪ್ರತಿಬಿಂಬ. ಅವರ ವ್ಯಕ್ತಿತ್ವ, ಮುಖಭಾವ, ಬೆರಳುಗಳ ಆಕಾರ ವೀಣೆಗೆ ಸಾಮರಸ್ಯವಾಗಿದೆ. ಅವರ ಸ್ವಭಾವಕ್ಕೂ ವೀಣೆಗೂ ಸೊಗಸಾದ ಹೊಂದಾಣಿಕೆ ಇದೆ. ಅವರು ವೀಣೆಗೆಂದೇ ಹುಟ್ಟಿದವರೆಂದು ಹೇಳಬಹುದು.

ಅವರಿಂದ ನಮಗೆಲ್ಲಾ ಹೆಮ್ಮೆ ಎನಿಸಿದರೂ ಅವರಲ್ಲಿ ಗರ್ವವೂ ಅಹಂಕಾರವೂ ಲವಲೇಶವೂ ಕಾಣಲಾಗದು. ವಾಲ್ಮೀಕಿ ರಾಮನನ್ನು ವೀರ್ಯವಾನ್‌ ಸ್ಟೇನ ಮಹತಾ ವೀರ್ಯೇಣ ನ ವಿಸ್ಮಿತಃ (ವೀರ ಆದರೆ, ಅವನ ವೀರ್ಯ ಅವನನ್ನು ಮರುಳು ಮಾಡಿಲ್ಲ) ಎಂದು ಬಣ್ಣಿಸುತ್ತಾರೆ. ಇದು ಐಯ್ಯಂಗಾರ್ಯರಿಗೂ ಒಪ್ಪುತ್ತದೆ. ತಂತಿಯ ಮೇಲೆ ಬೆರಳಾಡಿಸುವಾಗ ತಂತಿಗೆಲ್ಲಿ ನೋವಾದೀತೋ ಎಂಬಂತೆ, ಗಮಕ ನುಡಿಸುವಾಗ ಮಗುವನ್ನು ಆಡಿಸುವಂತೆ ಎಚ್ಚರ, ಸ್ವರಗಳನ್ನು ಹೊರಡಿಸುವಾಗ ತಾವಾಗಿ ಬಂದರೆ ಆದೀತಲ್ಲಾ ಬಲವಂತ ಮಾಡುವುದೇಕೆ? ಎಂಬ ಸಂಕೋಚವೋ! ಹಿರಿಯ ವಾಗ್ಗೇಯಕಾರರ ರಚನೆಗಳ ಹಿರಿಮೆಯನ್ನು ಸರಿತೂಗಿ ಎತ್ತಿತೋರಿಸುವ ಶಕ್ತಿ ತನಗಿದೆಯೇ ಎಂಬ ಅಳುಕು ಅವರದು. ದೊಡ್ಡವನಾಗಿದ್ದಾಗಿಯೂ ತಾನು ದೊಡ್ಡವನು ಎಂದುಕೊಳ್ಳದ ದೊಡ್ಡತನ ಅವರದು ಎಂದು ಹಿರಿಯ ವಿದ್ವಾಂಸರಾದ ಎಸ್‌.ಕೆ. ರಾಮಚಂದ್ರರಾಯರು ಮೆಚ್ಚಿಕೊಂಡಿದ್ದಾರೆ.

ದೊರೆಸ್ವಾಮಿ ಐಯಂಗಾರ್ಯರು ಸ್ನೇಹ ಪರರು. ಅಭಿಮಾನ, ಸಹೃದಯತೆಯುಳ್ಳ ನೈಜಮಿತ್ರರು, ಅವರ ಕರ್ತವ್ಯ ನಿಷ್ಠೆ, ಸಹ ಕಲಾವಿದರಲ್ಲಿ ತೋರುತ್ತಿದ್ದ ಗೌರವ, ಎಲ್ಲರಲ್ಲೂ ತೋರುತ್ತಿದ್ದ ತಾಳ್ಮೆ ಮತ್ತು ಸಂಯಮ ಇವುಗಳಿಂದ ಅವರು ಜನಾನುರಾಗಿಗಳಾಗಿದ್ದರು. ಅವರ ಕೂಡ ಒಡನಾಟ ಮಾತುಕತೆಗಳನ್ನೂ, ಅವರ ಆತ್ಮೀಯತೆ, ಪ್ರೀತಿ, ವಿಶ್ವಾಸ ಹಾಗೂ ಸವಿನುಡಿಗಳನ್ನು ಎಂದೂ ಮರೆಯಲಾಗದು. ಅವರ ಅತಿಥಿ ಸತ್ಕಾರ ವಿಶೇಷವಾಗಿತ್ತು -ಅವರು ಊಟ ತಿಂಡಿಗಳ ವಿಚಾರದಲ್ಲಿ ಬಹಳ ಅಚ್ಚುಕಟ್ಟು ಹಾಗೂ ಹಿತಮಿತವಾಗಿದ್ದು, ಅದರ ಸವಿಯನ್ನು ಅನುಭವಿಸಿ ಆನಂದಿಸಿದ್ದನ್ನು ಅವರ ಸಹಪಾಠಿಗಳೂ ಪರಮ ಮಿತ್ರರೂ ಆದ ಸಂಗೀತ ಕಲಾರತ್ನ ಪ್ರೊ. ಆರ್.ಎನ್‌. ದೊರೆಸ್ವಾಮಿಯವರು ಶ್ಲಾಘಿಸಿದ್ದಾರೆ.

ಅವರು ಸದ್ಗೃಹಸ್ಥರು. ಮನೆಯಲ್ಲಿನ ಹಲವು ಜೀವಂತ ವೀಣೆಗಳೂ ಶ್ರುತಿ ಬದ್ಧವಾಗಿ ಸುಸ್ವರ ನುಡಿಯುವಂತೆ ಕುಶಲತೆಯಿಂದ ನಡೆಸಿಕೊಳ್ಳುತ್ತಿದ್ದುದರಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಮೂಡಿತ್ತು. ಸರಳತೆ, ಸೌಮ್ಯತೆ, ಸೌಜನ್ಯ, ಅವರ ಹುಟ್ಟುಗುಣ. ಒಮ್ಮೆಲೇ ಉದ್ವಿಗ್ನರಾಗುವುದು, ಭಾವುಕರಾಗಿ ಅಭಿಪ್ರಾಯ ವ್ಯಕ್ತಪಡಿಸವೊಲ್ಲರು. ಕುಟುಂಬದಲ್ಲಿ ಕೆಲವು ಸಮಯದಲ್ಲಿ ಸಂಭವಿಸಿದ ದುರ್ಘಟನೆಗಳನ್ನು ಬಹುತಾಳ್ಮೆಯಿಂದ ಸಹಿಸಿಕೊಂಡ ವಿಧಾನ ಇವರ ಸ್ವಭಾವಕ್ಕೆ ದ್ಯೋತಕವೆನ್ನುತ್ತಾರೆ ಶ್ರೀಮತಿ ಅಮೃತ.

ತರುಣ ಪೀಳಿಗೆಯ ವಿದ್ವಾಂಸರು ಕೆಲವು ಅಂಶಗಳನ್ನು ಮನದಲ್ಲಿಟ್ಟುಕೊಂಡರೆ ಒಳ್ಳೆಯದೆಂದು ಐಯಂಗಾರ್ಯರು ಈ ರೀತಿ ಮನವಿ ಮಾಡಿದ್ದಾರೆ. ೧. ನಾದ ಮತ್ತು ಶ್ರುತಿ ಶುದ್ಧತೆಗೆ ಪ್ರಾಧಾನ್ಯತೆ; ೨. ಅತಿ ವಿಳಂಬವೂ ಅತಿ ದುರಿತವೂ ಅಲ್ಲದ ಮಧ್ಯಲಯಪ್ರಧಾನವಾದ ಕಾಲಪ್ರಮಾಣ; ೩. ವಿವಿಧ ಕಾಲಪ್ರಮಾಣಗಳಲ್ಲಿ ಕೃತಿ ನಿರೂಪಣೆ; ೪. ರಕ್ತಿ ಮತ್ತು ಅಪರೂಪ ರಾಗಗಳ ಮುಕ್ತ ಪ್ರಮಾಣ; ೫. ಹಿತ ಮಿತ ರಾಗಾಲಾಪನೆ; ೬. ತಾಳ ವಾದ್ಯಗಳನ್ನೇ ಅವಲಂಬಿಸದ ರೀತಿಯ ಸ್ವತಂತ್ರ ಸ್ವರಕಲ್ಪನೆ; ೭. ಭಾವ ಮತ್ತು ಮನರಂಜನೆಯೇ ಮುಖ್ಯವಾಗುಯಳ್ಳ ರಾಗ, ತಾನ, ಪಲ್ಲವಿ. ೮. ಎರಡು ಅಥವಾ ಎರಡೂವರೆ ಗಂಟೆಗಳಿಗೆ ಮೀರದ ಅನಾವಶ್ಯಕವಾದ ಅಂಶಗಳಿಲ್ಲಿಲ್ಲದ ಕಚೇರಿ. ೯. ಪಲ್ಲವಿಯಂತಹ ನೇರವಾಗಿ ರಸಿಕರ ಹೃದಯಗಳನ್ನು ಮುಟ್ಟುವ ಭಕ್ತಿ ಪ್ರಧಾನವಾದ ರಚನೆಗಳು; ೧೦. ಯಾವಯಾವ ಸಂದರ್ಭಕ್ಕೆ ಯಾವ ಯಾವ ರೀತಿಯ ಸಂಗೀತವನ್ನು ಕೊಡಬೇಕು ಎಂಬ ತಿಳಿವಳಿಕೆ.

ಹೀಗೆ ಸಂದರ್ಭಾನುಸಾರವಾಗಿ ಸಂಗೀತವನ್ನು ನಿರೂಪಿಸಬಲ್ಲ ಸಂಗೀತಗಾರನು ಯಶಸ್ವಿಯಾಗುವನು. ಇದಕ್ಕೆ ವಿಶಾಲವಾದ ಜ್ಞಾನವನ್ನೂ ವೃದ್ಧಿಪಡಿಸಿಕೊಳ್ಳಬೇಕು. ಆಹಾ! ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವಣ್ಣನವರ ಪಟಿಕದ ಸಲಾಕೆಗೆ ಉದಾಹರಣೆಯಾಗಿವೆ, ವೀಣೆಯ ದೊರೆಯ ಈ ನುಡಿಮುತ್ತುಗಳು.

ಇಂಥ ಒಬ್ಬ ಮಹಾನ್‌ ವೈಣಿಕ ಕಲಾತಪಸ್ವಿ ದಿನಾಂಕ ೨೮.೧೦.೧೯೦೭ ರಂದು ನಾದಲೋಕದ ದಿಗಂತದಲ್ಲಿ ಲೀನವಾಗಿ ಧ್ರುವತಾರೆಯಾದರು.

ತನ್ನನ್ನೇ ಅರಸಿ ಬಂದಿಹ ವೀಣೆ ತನ್ನನ್ನು ವೀಣೆಯಾಗಿಸಿ ಮಿಡಿಸಿ, ನುಡಿಸಿರಲು ಮೋಹನದ ಮೃದು ಮಧುರ ನಾದರಸದಲ್ಲಿ ಮಿಂದು, ಹೃದಯ ಮುಗಿಲಿಗೆ ತಾನೂ ನಲಿದು ಕೇಳುಗರನ್ನೂ ನಲಿಸಿ ನಲಿಸಿ ನಲಿಸುತ್ತಲೇ ಒಯ್ಯಾರದಲ್ಲಿ ಲೋಕಮಾತೆ ಸರಸ್ವತಿ ದೇವಿಯ ಪಾದಾರವಿಂದದಲ್ಲಿ ಲೀನವಾದ ವೀಣೆಯೊಡೆಯನ ಬರೀ ನೆನಪೇ ಶಾಶ್ವತವಾಗಿ ಚಿರಸ್ಥಾಯಿಯಾಗಿ ನಂದಾದೀವಿಗೆಯಾಗಿ ಬಿಟ್ಟದೆ.