ದಿನಾಂಕ ೪-೪-೧೯೩೨ರಂದು ಜನಿಸಿದ ಪ್ರೊ. ವಿ. ನಾಗಭೂಷಣಾಚಾರ್ ಅವರ ಗೌರವಸ್ಥ ಕುಟುಂಬಕ್ಕೆ ಸೇರಿದವರು. ಚಿಕ್ಕಂದಿನಿಂದಲೂ ಲಯವಾದ್ಯಗಳ ಕಡೆಗೆ ಆಸಕ್ತಿಯಿದ್ದು ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ನಾದ ಪ್ರವೀಣ ಎಂ. ವೆಂಕಟೇಶ ದೇವರು ಅವರ ಬಳಿ ಗುರುಕುಲ ಪದ್ಧತಿಯಲ್ಲಿ ಸುಮಾರು ೧೫ ವರ್ಷಗಳ ಕಾಲ ಮೃದಂಗ ವಾದನ ಕಲಿತದ್ದೇ ಅಲ್ಲದೆ ಇತರ ಉಪವಾದ್ಯಗಳಾದ ಘಟ, ಖಂಜರಿ, ಮೋರ್ಚಿಂಗ್ ವಾದನ ಹಾಗೂ ಕೊನಗೋಲಿನಲ್ಲೂ ಸಾಕಷ್ಟು ಪ್ರಾವೀಣ್ಯತೆ ಗಳಿಸಿದ್ದಾರೆ. ಮೈಸೂರು ಸಂಸ್ಥಾನದ ಆಳರಸರ ಆಸ್ಥಾನ ವಿದ್ವಾಂಸರಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಮಹಾ ವಿದ್ಯಾಲಯದಲ್ಲಿ ಮೃದಂಗ ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಸುಮಾರು ೨೫ ವರ್ಷಗಳಿಗೂ ಮಿಕ್ಕಿ ಸೇವೆ ಸಲ್ಲಿಸಿ ೧೯೯೨ರಲ್ಲಿ ನಿವೃತ್ತರಾಗಿರುವ ಇವರು ಮೈಸೂರು ಆಕಾಶವಾಣಿಯ ಕಲಾವಿದರೂ ಕೂಡ.

ಇವರು ಸಂಗೀತ ದಿಗ್ಗಜರೆನಿಸಿರುವ ಮೈಸೂರು ಟಿ.ಚೌಡಯ್ಯ, ಟಿ.ಆರ್. ಮಹಾಲಿಂಗಮ್, ಡಿ.ಕೆ. ಪಟ್ಟಮ್ಮಾಳ್ ಮುಂತಾದ ಹಿರಿಯ ವಿದ್ವಾಂಸರ ಕಚೇರಿಗಳಿಗೆ ಅನೇಕ ಬಾರಿ ಮೃದಂಗ ನುಡಿಸಿದ್ದು ಮುಂದೆ ತಮ್ಮ ಹೆಚ್ಚಿನ ಕಾಲವನ್ನು ನೃತ್ಯ ಕ್ಷೇತ್ರಕ್ಕೆ ಮೀಸಲಿಟ್ಟು ನೃತ್ಯ ಕ್ಷೇತ್ರಕ್ಕೆ ಮೀಸಲಿಟ್ಟು ನೃತ್ಯಕ್ಕೆ ಮೃದಂಗ ನುಡಿಸುವಲ್ಲಿ ಸುಮಾರು ೪೦ ವರ್ಷಗಳಿಗೂ ಹೆಚ್ಚು ಅನುಭವ ಹೊಂದಿದ್ದಾರೆ.

ಡಾ.ಕೆ. ವೆಂಕಟಲಕ್ಷ್ಮಮ್ಮನವರೊಡನೆ ಬಹುಕಾಲವಿದ್ದು ಅವರ ಕಾರ್ಯಕ್ರಮಗಳಿಗೆ ಮೃದಂಗ ನುಡಿಸುತ್ತಿದ್ದುದೇ ಅಲ್ಲದೆ ಅವರು ನಡೆಸುತ್ತಿದ್ದ ಕಮ್ಮಟ, ಶಿಕ್ಷಣ ಶಿಬಿರ, ಪ್ರಾತ್ಯಕ್ಷಿಕೆಗಳಲ್ಲಿ ಜೊತೆ ಜೊತೆಯಾಗಿ ದುಡಿದು ಸೂಕ್ತ ಮಾರ್ಗದರ್ಶನ ನೀಡುತ್ತಾ ಬಂದಿದ್ದು ಒಂದು ವಿಶಿಷ್ಟ ದಾಖಲೆಯೆನ್ನಬಹುದು. ಇದಲ್ಲದೆ ನಂದಿನಿ ಈಶ್ವರ್, ಶಕುಂತಲ, ಉಮಾರಾವ್ ಮುಂತಾದ ನೃತ್ಯ ಕಲಾವಿದರಿಗೂ ಅವರ ಶಿಷ್ಯ ವೃಂದಕ್ಕೂ ನಿಸ್ಪೃಹತೆಯಿಂದ ಪಕ್ಕವಾದ್ಯ ನುಡಿಸುತ್ತಾ ಬಂದಿದ್ದಾರೆ.

ಭಾರತೀಯ ನೃತ್ಯಕಲಾ ಪರಿಷತ್ತು, ಕರ್ನಾಕಟ ಗಾನಕಲಾ ಪರಿಷತ್ತು, ನಟರಾಜ ನೃತ್ಯ ಕಲಾನಿಕೇತನ ಮುಂತಾದ ನೃತ್ಯ ಹಾಗೂ ಸಂಗೀತ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.

ಹೀಗೆ ಲಯ ವಾದ್ಯಗಾರರಾಗಿ ನೃತ್ಯ ಕ್ಷೇತ್ರದ ಮೇರುವೆನಿಸಿರುವ ನಾಗಭೂಷಣಾಚಾರ್ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೨-೦೩ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.