ಉತ್ತಮ ಕಲಾವಿದರ ಮನೆತನದಲ್ಲಿ ೧೯೧೮ರಲ್ಲಿ ಜನಿಸಿದ ನಾರಾಯಣಸ್ವಾಮಿ ಅವರ ಮೊದಲ ಗುರುಗಳು ತಂದೆಯವರಾದ ವೆಂಕಟಪ್ಪ ಹೆಚ್ಚಿನ ಶಿಕ್ಷಣಕ್ಕಾಗಿ ಮುನಿಸ್ವಾಮಪ್ಪ, ಕಾಂಚೀಪುರಂ ಶ್ರೀನಿವಾಸುಲು, ತಂಜಾವೂರು ಸುಬ್ರಹ್ಮಣ್ಯ ಪಿಳ್ಳೆ ಮಾಯಾವರಂ ಮತ್ತು ಸ್ವಾಮಿ ಪಿಳ್ಳೆ ಮುಂತಾದವರನ್ನು ಆಶ್ರಯಿಸಿ ಅವರ ಮಾರ್ಗದರ್ಶನದ ಲಾಭ ಪಡೆದು ಅತ್ಯುತ್ತಮ ಡೋಲು ವಾದಕರೆಂಬ ಖ್ಯಾತಿಯನ್ನು ಪಡೆದರು. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳ ಸಂಸ್ಥೆ-ಸಭೆಗಳಲ್ಲೂ, ವಿಶೇಷ ಉತ್ಸವದ ಸಂದರ್ಭಗಳಲ್ಲೂ ನಾಗಸ್ವರಕ್ಕೆ ಮಾತ್ರವಲ್ಲದೆ ಕ್ಲಾರಿಯೊನೆಟ್‌, ಕೊಳಲು ವಾದನಗಳಿಗೂ ಪಕ್ಕ ವಾದ್ಯವಾಗಿ ಡೋಲು ನುಡಿಸಿದ್ದರು. ಆಕಾಶವಾಣಿಯ ‘ಎ’ ಶ್ರೇಣಿಯ ಕಲಾವಿದರಾಗಿ ಸಂಗೀತ ಸಮ್ಮೇಳನಗಳಲ್ಲೂ ಭಾಗವಹಿಸಿದ್ದರು.

ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿ ಡೋಲು ವಾದಕರ ಪರಂಪರೆ ಮುಂದುವರೆಯುವಂತೆ ಶ್ರಮಿಸಿದವರು. ಇವರಿಗೆ ಅನೇಕ ಸಂಘ-ಸಂಸ್ಥೆಗಳ ಸನ್ಮಾನ ದೊರಕಿತು. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ೧೯೯೦-೯೧ ರ ಸಾಲಿನಲ್ಲಿ ಇವರಿಗೆ ‘ಕರ್ನಾಟಕ ಕಲಾತಿಲಕ’ ಪ್ರಶಸ್ತಿ ನೀಡಿ ಗೌರವಿಸಿತು.

ನಾರಾಯಣಸ್ವಾಮಿಯವರು ಇಂದು ನಮ್ಮೊಡನೆ ಇಲ್ಲದಿದ್ದರೂ ಅವರ ವಾದನವನ್ನು ಸ್ಮರಿಸುವ ಅನೇಕ ರಸಿಕರು ಇದ್ದಾರೆ. ನಾಗಸ್ವರ ವಾದಕರಂತೂ ಅವರನ್ನು ಮರೆಯುವುದು ಸಾಧ್ಯವಲ್ಲ.