ನಮ್ಮ ಕರ್ನಾಟಕದ ಹಿರಿಯ ತಲೆಮಾರಿನ ಸುಪ್ರಸಿದ್ಧ ವಿದ್ವಾಂಸರಲ್ಲಿ ರಾಮರತ್ನಂ ಸಹ ಒಬ್ಬರು. ಇವರು ೨೩-೧೨-೧೯೧೭ ರಂದು ಮೈಸೂರಿನಲ್ಲಿ ಜನಿಸಿದರು. ಪಾಲ್ಘಾಟ್‌ ಸೋಮೇಶ್ವರ ಭಾಗವತರ, ಎಲ್‌. ಎಸ್‌. ನಾರಾಯಣಸ್ವಾಮಿ ಭಾಗವತರು, ನಂತರ ಡಿ. ಸುಬ್ಬರಾಮಯ್ಯ, ಮೈಸೂರು ಟಿ. ಚೌಡಯ್ಯನವರಲ್ಲಿ ಸಂಗೀತಾಭ್ಯಾಸ ಮಾಡಿ ನಿರಂತರ ಸಾಧನೆ-ಚಿಂತನೆಗಳಿಂದ ಲಕ್ಷ್ಯ-ಲಕ್ಷಣಗಳೆರಡರಲ್ಲೂ ವೈಚಕ್ಷಣ್ಯ ಪಡೆದರು. ಕೇಂದ್ರ ವಿದ್ಯಾರ್ಥಿ ವೇತನ ಪಡೆದಿದ್ದರು.

ಆಕಾಶವಾಣಿಯ ಮೂಲಕ ಇವರ ಗಾಯನ ಪ್ರಸಾರವಾಗುತ್ತಿತ್ತು. ನಮ್ಮ ದೇಶದಾದ್ಯಂತ ಎಲ್ಲಾ ಪ್ರಸಿದ್ಧ ಸಭೆ-ಸಂಸ್ಥೆಗಳಲ್ಲೂ, ಸಮ್ಮೇಳನಗಳಲ್ಲೂ ಭಾಗವಹಿಸಿ ಕಚೇರಿಗಳನ್ನೂ ಪ್ರಾತ್ಯಕ್ಷಿಕೆ-ಸೋದಾಹರಣ ಭಾಷಣಗಳನ್ನೂ ನೀಡಿರುತ್ತಾರೆ. ಅನೇಕಾನೇಕ ಲೇಖನಗಳನ್ನು ಸಾರಸ್ವತ ಜಗತ್ತಿಗೆ ನೀಡಿದ್ದಾರೆ. ವಿದೇಶಗಳಲ್ಲೂ ಇವರ ಕಾರ್ಯಕ್ರಮಗಳು ನಡೆದಿದ್ದು ಅಲ್ಲಿಯೂ ಜನಮನ್ನಣೆ ಪಡೆದ ಹಿರಿಮೆ ಇವರದು.

ಮೈಸೂರು ಅಯ್ಯಂಗಾರ್ ಸಂಗೀತ ಕಲಾ ಶಾಲೆಯ ಪ್ರಾಧ್ಯಾಪಕರಾಗಿ ಮೈಸೂರು ಲಲಿತಕಲಾ ಕಾಲೇಜಿನ ಪ್ರಾಂಶುಪಾಲರಾಗಿ ಇವರು ಸಲ್ಲಿಸಿರುವ ಸೇವೆ ಅಪಾರ. ಹಲವಾರು ಉತ್ತಮ ವಿದ್ವಾಂಸರಿಗೆ ಮಾರ್ಗದರ್ಶನ ನೀಡಿ ಸಂಗೀತಗಾರರ ತಂಡವನ್ನು ಬೆಳೆಸಿರುತ್ತಾರೆ.

‘ಕರ್ನಾಟಕ ಸಂಗೀತ ಸುಧಾ’, ‘ಕೀರ್ತನ ದರ್ಪಣ’, ‘ನೌಕಾಚರಿತ್ರೆ’, ‘ಸಂಗೀತ ಶಾಸ್ತ್ರ ಪರಿಚಯ’ ಮುಂತಾದ ಪುಸ್ತಕಗಳ ಸಹ ಸಂಪಾದಕರೂ ‘ಸಂಗೀತ ದರ್ಪಣ’ ಮತ್ತು ‘ಟಿ. ಚೌಡಯ್ಯನವರ ಕೃತಿಗಳು’ ಪುಸ್ತಕಗಳ ಪ್ರಧಾನ ಸಂಪಾದಕರೂ ಆಗಿ ಕೆಲಸ ನಿರ್ವಹಿಸಿರುತ್ತಾರೆ.

ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾ ತಿಲಕ’, ಗಾಯನ ಸಮಾಜದ ಸಮ್ಮೇಳನಾಧ್ಯಕ್ಷರಾಗಿ ‘ಸಂಗೀತ ಕಲಾ ರತ್ನ’, ಕರ್ನಾಟಕ ‘ರಾಜ್ಯೋತ್ಸವ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳೂ ಅನೇಕ ಸಭೆ ಸಂಸ್ಥೆಗಳ  ಸನ್ಮಾನಗಳೂ ಶ್ರೀಯುತರಿಗೆ ಲಭಿಸಿದುವು. ವಾಗ್ಗೇಯಕಾರರಾಗಿ ಹಲವು ತೆರೆದ ರಚನೆಗಳನ್ನು ಸಂಗೀತ ಜಗತ್ತಿಗೆ ನೀಡಿರುವ ಇವರು ಇಂದಿಗೂ ಸಂಪ್ರದಾಯ ಸಂಗೀತದ ಪ್ರತಿನಿಧಿಯಾಗಿ ಇದ್ದಾರೆ.