ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೂಸ್ಥಾನಿ ಸಂಗೀತದ ಪ್ರಸಾರ ಕಾರ್ಯ ಕೈಗೊಂಡ ಪ್ರಮುಖ ಸಂಗೀತಗಾರರಲ್ಲಿ ಶ್ರೀ ವ್ಹಿ.ವ್ಹಿ. ಉತ್ತೂರಕರರೂ ಒಬ್ಬರು. ಇವರ ಮನೆತನ ಸಂಗೀತದ್ದು. ತಂದೆ ವಿಷ್ಣು ಕೇಶವ ಉತ್ತೂರಕರರು. ಬೆಳಗಾವಿಯ ವನಿತಾ ವಿದ್ಯಾಲಯದಲ್ಲಿ ಸಂಗೀತ ಅಧ್ಯಾಪಕರಾಗಿದ್ದು ಹೆಸರು ಪಡೆದು ನಿವೃತ್ತರಾದವರು. ಅವರು ಸಂಗೀತವನ್ನು ಕಲಿತದ್ದು ಸುಪ್ರಸಿದ್ಧ ಬಾಲಕೃಷ್ಣ ಬುವ, ಇಚ್ಛಲಕರಂಜಿಕರ್ ಮತ್ತು ಮಿರಜಿನ ನೀಲಕಂಠಾಬುವಾಜಂಗಮಠ ಬಳಿ, ವ್ಹಿ. ವ್ಹಿ. ಉತ್ತೂರಕರರ ಜನನ ಮೀರಜಿನಲ್ಲಿ ೧೪-೩-೧೯೧೪ ರಂದು. ತಂದೆಯವರಿಂದಲೇ ಮೊದಲ ಶಿಕ್ಷಣ; ಮುಂದೆ ಅವರ ಗುರುಗಳಾದವರು ಹಿಂದಿನ ತಲೆಮಾರಿನಲ್ಲಿ ಪ್ರಸಿದ್ಧರಾಗಿದ್ದ ಪುಣೆಯ ಪಂಡಿತ ವೈ.ಎಸ್‌. ಮಿರಾಶಿಯವರು. ಗುರುಗಳು ಗ್ವಾಲಿಯರ್ ಘರಾಣಾದ ಹೆಸರಾದ ಗಾಯಕರು, ಕೇಂದ್ರ ಸಂಗೀತ ನಾಟಕ ಅಕಾಡೆಮಿಯಿಂದ ಪುರಸ್ಕೃತರಾಗಿದ್ದವರು. ಅಲ್ಲಿಂದ ಮುಂದೆ ಉತ್ತೂರಕರರು ಆಗ್ರಾ ಘರಾಣಾದ ದಿವಂಗತ ವಿಲಾಯತಖಾನರ ಪಟ್ಟ ಶಿಷ್ಯರಾದ ಧಾರವಾಡದ ಪಂಡಿತ ಹನುಮಂತರಾವ್‌ ವಾಳ್ವೇಕರರೆಂಬ ಹಾರ್ಮೋನಿಯಂ ವಾದಕರಲ್ಲಿ ಶಿಷ್ಯ ವೃತ್ತಿ ಮಾಡಿದರು. ಪುಣೆಯ ತಿಲಕ ಮಹಾರಾಷ್ಟ್ರ ವಿದ್ಯಾಪೀಠದಿಂದ ೧೯೩೯ರಲ್ಲಿ ‘ಸಂಗೀತ ವಿಶಾರದ’ ಪ್ರಶಸ್ತಿಯನ್ನು ಪಡೆದುಕೊಂಡರು.

ಉತ್ತೂರಕರರು ಗ್ವಾಲಿಯರ್ ಘರಾಣಾ ಮತ್ತು ಟಪ್ಪ ಖಾಯಲ್‌ ಹಾಡುವುದರಲ್ಲಿ ಹೆಸರಾದವರು. ಹಲವಾರು ಸಾರ್ವಜನಿಕ ಸಭೆಗಳಲ್ಲೂ. ಆಕಾಶವಾಣಿ ಕೇಂದ್ರಗಳಿಂದಲೂ ಹಾಡಿ ರಸಿಕರನ್ನು ತಣಿಸಿದ್ದಾರೆ. ಆಕಾಶವಾಣಿಯ ಆಯ್ಕೆ ಸಮಿತಿ ಸದಸ್ಯರಾಗಿ ಕರ್ತವ್ಯವನ್ನು ನಿರ್ವಹಿಸಿದ್ದಾರೆ.

ಮುಂಬಯಿ ವಿಶ್ವವಿದ್ಯಾನಿಲಯದ ಕಲಾ ವಿಭಾಗದ ಮೊದಲ ವರ್ಷ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಬೆಳಗಾವಿಯ ಲಿಂಗರಾಜ ಕಾಲೇಜಿನಿಂದ ಟಿ.ಡಿ. ಪರೀಕ್ಷೆಯನ್ನೂ ಮುಗಿಸಿದ್ದಾರೆ. ಬೆಳಗಾವಿಯ ವನಿತಾ ವಿದ್ಯಾಲಯದಲ್ಲಿ ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿ ೧೯೭೪ರಲ್ಲಿ ನಿವೃತ್ತರಾದರು. ಗದಗಿನ ಪಂಚಾಕ್ಷರಿಬುವಾ ಪುಣ್ಯಾಶ್ರಮದಲ್ಲಿ ಇವರಿಗೆ ಸಾರ್ವಜನಿಕ ಸನ್ಮಾನವು ೧೯೭೧ರಲ್ಲಿ ನಡೆದು ಹುಬ್ಬಳ್ಳಿಯ ಮೂರು ಸಾವಿರ ಮಠದ ಸ್ವಾಮಿಗಳಿಂದ ‘ಸಂಗೀತ ಸಾಗರ’ ಎಂಬ ಪ್ರಶಸ್ತಿ ದೊರೆಯಿತು. ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೭೯-೮೦ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.