೧೯೦೮ರ ಮಾಗಿಯ ಕಾಲದ ಮೊದಲ ದಿನಗಳು. ದೀಪಾವಳೀಗೆ ಕೆಲವೇ ದಿನಗಳು ಉಳಿದಿದ್ದವು.

ಬೆಳಗಿನಿಂದ ಅಲೆದು-ಅಲೆದು ನಿರಾಶೆಗೊಂಡಿದ್ದ ಭಾರತೀಯ ತರುಣರೊಬ್ಬರು ಲಂಡನ್ನಿನ ಪೂರ್ವಭಾಗದತ್ತ ಸರಸರನೇ ನಡೆದು ಹೋಗುತ್ತಿದ್ದರು. ಇಂಡಿಯಾ ಹೌಸಿನಲ್ಲಿ ನೆಲೆಸಿದ್ದ ಆತನೂ ಅತನ ಮಿತ್ರರೂ ಕೂಡಿ  ಆ ವರ್ಷದ ದೀಪಾವಳಿಯನ್ನು ಭಾರತೀಯರ ಒಂದು ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕೆಂದು ನಿರ್ಧರಿಸಿದ್ದರು. ಅವರು ಅಧ್ಯಕ್ಷರು ಬೇಕಾಗಿತ್ತು. ಅಂದು ಬೆಳಗಿನಿಂದ ಆ ತರುಣ ಅಧ್ಯಕ್ಷತೆ ವಹಿಸಲು ಒಬ್ಬರನ್ನು ಹುಡುಕುತ್ತಿದ್ದ.

ಅಧ್ಯಕ್ಷರು ದೊರೆತರು :

ಲಂಡನ್ನಿಗೆ ಬಂದಿದ್ದ ದೊಡ್ಡ ದೊಡ್ಡ ರಾಜಕೀಯ ಮುಖಂಡರನ್ನೆಲ್ಲ ಕಂಡದ್ದಾಗಿತ್ತು. ಗೋಪಾಲಕೃಷ್ಣ ಗೋಖಲೆ, ಬಿಪಿನ್ ಚಂದ್ರಪಾಲ್, ಲಾಲಾಲಜಪತರಾಯ್-ಎಲ್ಲರೂ ಏನಾದರೊಂದು ಕಾರಣ ಹೇಳಿ ಅಧ್ಯಕ್ಷರಾಗಲು ನಿರಾಕರಿಸಿದ್ದರು. “ಇಂಡಿಯಾ ಹೌಸ್,” ಸಂಸ್ಥಾಪಕ ಶ್ಯಾಮಜಿ ಕೃಷ್ಣವರ್ಮ, ಆಗ ಅಲ್ಲಿ ನೆಲೆಸಿದ್ದ. ತರುಣರ ನಾಯಕ ವಿನಾಯಕ ದಾಮೋದರ ಸಾವರಕರ್-ಎಲ್ಲ ಉಗ್ರಕ್ರಾಂತಿಕಾರರೆಂದು ಪ್ರಸಿದ್ಧರಾದವರು. ಅಂತಹವರೊಂದಿಗೆ ಯಾವುದೇ ಕಾರಣಕ್ಕಾಗಲಿ ಸಾರ್ವಜನಿಕವಾಗಿ, ಬಹಿರಂಗವಾಗಿ ಸ್ನೇಹ ಸಂಪರ್ಕ ಬೆಳೆಸುವುದು ಆ ಮುಖಂಡರಿಗೆ ಸರಿತೋರಿರಲಾರದು.

ಯುವಕ ನೋಡಬೇಕಾಗಿದ್ದುದು ಇನ್ನೊಬ್ಬರನ್ನೇ ಗಾಂಧೀಜಿಯವರು, ದಕ್ಷಿಣ ಆಫ್ರಿಕದಲ್ಲಿ ಬಿಳಿಯರು ಭಾರತೀಯರ ಮೇಲೆ ನಡೆಸುತ್ತಿದ್ದ ಅತ್ಯಾಚಾರವನ್ನು ಎದುರಿಸಿ ಅಹಿಂಸಾ ಸಮರ ನಡೆಸಿದ್ದ ಗಾಂಧೀಜಿ ಪ್ರಪಂಚದಲ್ಲೆಲ್ಲ ವಿದ್ಯಾವಂತ ಭಾರತೀಯರಿಗೆ ಪರಿಚಿತರಾಗಿದ್ದರು, ಮಾನ್ಯರಾಗಿದ್ದರು. ಆ ಭಾರತೀಯ ತರುಣ ಹೊರಟಿದ್ದುದು ಗಾಂಧಿಜಿಯವರನ್ನು ಭೇಟಿಯಾಗಲೆಂದೇ.

ಗಾಂಧಿಜಿ ಆತನನ್ನು ಆದರಿಸಿ ಸ್ವಾಗತಿಸಿದರು. ಆತ ತಾನು ಬಂದುದರ ಕಾರಣವನ್ನು ವಿವರಿಸಿದಾಗ, ನಿಮ್ಮ ಸಭೆಯ ಉದ್ದೇಶವೇನು?” ಎಂದು ಕೇಳಿದರು.

“ಈಗ ಈ ಮಹಾನಗರದಲ್ಲಿ ಸುಮಾರು ಏಳು ನೂರು ಮಂದಿ ಭಾರತೀಯರಿದ್ದೇವೆ. ನಾವು ಭಾರತೀಯರು ಎಂಬ ಭಾವನೆ ನಮ್ಮಲ್ಲಿ ಬೇರೂರಲು ಅವಕಾಶವಾಗಲಿ ಎಂದು ಈ ಸಭೆ  ಏರ್ಪಡಿಸಿದ್ದೇವೆ”.

ಬಹಳ ಸಂತೋಷ. ನಾನು ಖಂಡಿತವಾಗಿ ಬರುತ್ತೇನೆ. ಆದರೆ ನನ್ನದು ಎರಡು ಷರತ್ತುಗಳಿವೆ. ನೀವೆಲ್ಲ ಹಣ ಹಾಕಿ ಯಾವುದೋ ಆಂಗ್ಲ ಹೋಟೆಲಿನಲ್ಲಿ ಭೋಜನವನ್ನು ಏರ್ಪಡಿಸಬಾರದು. ಈ ಭೋಜನ ಕೂಟ ಅಚ್ಚ ಭಾರತೀಯದ್ದಾಗಿರಬೇಕು. ಅದರಲ್ಲಿ ಮಾಂಸಹಾರದ ಲವಲೇಶವೂ ಇರಬಾರದು. ಇದಕ್ಕೆ ನೀವು ಒಪ್ಪಿದರೆ ನಾನು ಅಧ್ಯಕ್ಷತೆ ವಹಿಸುತ್ತೇನೆ” ಎಂದರು ಗಾಂಧಿಜಿ.

ಆ ತರುಣ ಸ್ವಲ್ಪ ಹೊತ್ತು ಅಲೋಚಿಸಿ, “ನಿಮ್ಮ ಷರತ್ತುಗಳನ್ನು ನಾವು ಪಾಲಿಸುತ್ತೇವೆ ” ಎಂದ.

ಅಡಿಗೆಯ ಕೆಲಸದಲ್ಲಿ ಸೇರಿಕೊಂಡವರು:

ದೀಪಾವಳಿಯ ದಿನ ಬಂತು. ಆರು ಜನ ಭಾರತೀಯ ಸ್ವಯಂ ಸೇವಕರು ತಮಗೆ ಪರಿಚಯವಿದ್ದ ಅಲ್ಪ ಸ್ವಲ್ಪ ಪಾಕಶಾಸ್ತ್ರವನ್ನು ನಂಬಿ ಭಾರತೀಯ ಸಸ್ಯಾಹಾರಿ ಭೋಜನದ ತಯ್ಯಾರಿಯಲ್ಲಿ ಮುಳುಗಿದ್ದರು. ಆಗ ಅವರಲ್ಲಿಗೆ ಅತ್ಯಂತ ಸಾದಾ ಉಡುಪು  ಧರಿಸಿದ್ದ ಮಧ್ಯ ವಯಸ್ಕರೊಬ್ಬರು ಬಂದು ಕೂಡಿದರು. “ಯಾರೋ, ಬಡವ, ಏನೋ ಕೋರಿ ಬಂದಿರಬೇಕು” ಎಂದು ಭಾವಿಸಿದ ಆ ಸ್ವಯಂ ಸೇವಕರು ಆತನ ಪೂರ್ವಾಪರಗಳನ್ನು ವಿಚಾರಿಸುವ ಗೋಜಿಗೆ ಹೋಗಲಿಲ್ಲ. ಆತ ತಾನಾಗಿ ಕೆಲಸಕ್ಕೆ ಮುಂದಾದರು. ನೀರು ತಂದರು, ಪಾತ್ರೆ ತೊಳೆದರು, ತರಕಾರಿ ಹೆಚ್ಚಿದರು, ಇತರರು ಹೇಳಿದ ಕಲಸಗಳನ್ನೆಲ್ಲ ಮಾಡಿದರು.

ಸಂಜೆಯಾಯಿತು. ಅಡಿಗೆಯು ಎಲ್ಲಿವರೆಗೆ ಬಂಧಿದೆಯೋ ನೋಡಿ ಹೋಗೋಣವೆಂದು ಇದನ್ನೆಲ್ಲ ವ್ಯವಸ್ಥೆ ಗೊಳಿಸಿದ್ಧ ಭಾರತೀಯ ತರುಣ ಅಡಿಗೆ ಮನೆಗೆ ಬಂದರು. ಅಲ್ಲಿನ ವ್ಯವಹಾರ ಕಂಡು ಅವರಿಗೆ ತಲೆ ತಿರುಗಿದಂತಾಯಿತು, ಧ್ವನಿ ಗದ್ಗದವಾಯಿತು.

“ಏನಿದು? ಇವರಿಗೆ ಇಂತಹ ಕೆಲಸಗಳನ್ನು ಹಚ್ಚಿದವರು ಯಾರು ? ಏನಯ್ಯ, ಈ ದಿನದ ಅಧ್ಯಕ್ಷತೆ ವಹಿಸಲೆಂದು ಬಂದವರ ಕೈಲಿ ಪಾತರೆ ಬೆಳೆಗಿಸುವುದೇ? ತಪ್ಪು, ತಪ್ಪು, ಸ್ವಾಮಿ ಗಾಂಧಿಜಿಯವರೇ, ಕ್ಷಮಿಸಿ” ಎಂದು ಕಳಕಳಿಯಿಂದ ಕ್ಷಮೆ ಕೋರಿದರು.

ಅಯ್ಯರ್ಯಾರು, ಯಾರನ್ನು ಕ್ಷಮಿಸಬೇಕು? ಪಾಲಿಸಲು ಬಹು ಕಷ್ಟಸಾಧ್ಯವಾದ ಷರತ್ತುಗಳನ್ನು ನಾನು ವಿಧಿಸಿದೆ. ಆದ್ದರಿಂದ ನನ್ನ ಕೈಲಾದ ಕೆಲಸ ಮಾಡುವುದೂ ನನ್ನ ಕರ್ತವ್ಯ ವೆಂದು ಭಾವಿಸಿದೆ. ಈ ನನ್ನ ಮಿತ್ರರು ನನ್ನಲ್ಲಿ ಅತ್ಯಂತ ವಿಶ್ವಾಸದಿಂದ ನಡೆದುಕೊಂಡಿದ್ದಾರೆ. ನಿಮ್ಮನ್ನೆಲ್ಲ ಕಂಡು ನನಗೆ ತುಂಬಾ ಸಂತೋಷವಾಗಿದೆ” ಎಂದರು ಗಾಂಧಿಜಿ.

ಭೋಜನ ಕೂಟ ನಡೆಯಿತು. ಅನಂತರ ಗಾಂಧಿಜಿಯವರು ಅಹಿಂಸೆಯ ಮಹತ್ವವನ್ನು  ಕುರಿತು ಗಾಂಧೀಜಿಯವರು ಅಹಿಂಸೆಯ ಮಹತ್ವವನ್ನು ಕುರಿತು ಮೇಲ್ನುಡಿಗೆಗಳಲ್ಲಿ ಉಪದೇಶ ಮಾಡಿದರು. ವಂದನಾರ್ಪಣೆಗಾಗಿ ಎದ್ದು ನಿಂತ ಸಾವರ‍ಕರರು ನಾಡಿನ ಹಿರಿಮೆಯನ್ನು ಒತ್ತಿ ಹೇಳಿ ಸ್ವಾತಂತ್ರ ಸಂದೇಶವನ್ನು ಉದ್ಘೋಷಿಸಿದರು.

ಹೀಗೆ ಗಾಂಧೀಜಿ, ಸಾವರಕರ ಅವರ ನಡುವೆ ಸೇತುವೆಯಾದ ಆ ಭಾರತೀಯ ತರುಣರು, ವಿ.ವಿ.ಎಸ್.ಅಯ್ಯರ-ವರಹನೇರಿ ವೆಂಕಟೇಶ ಸುಬ್ರಹ್ಮಣ್ಯ ಅಯ್ಯರ್.

ವಿದ್ಯಾಬ್ಯಾಸಕ್ಕೆಂದು ಲಂಡನ್ನಿಗೆ :

ಸುಬ್ರಹ್ಮಣ್ಯ ಅಯ್ಯರ್ ಅವರ ತಂದೆ ವರಾಹನೇರಿ ವೆಂಕಟೇಶ ಅಯ್ಯರ್ ಅವರು ಮದರಾಸು ಸರಕಾರದಲ್ಲಿ ಶಾಲಾ ಇನ್ಸಪೆಕ್ಟರ್ ಆಗಿದ್ದರು. ಅವರಿಗೆ ಸನಾತನ ಧರ್ಮದಲ್ಲಿ ಆಸ್ಥೆ.

ಅವರ ಧರ್ಮಪತ್ನಿ ಕಾಮಾಕ್ಷಿ ಅಮ್ಮಾಳ್. ಈ ಸುಸಂಸ್ಕೃತ ದಂಪತಿಗಳ ಮಗನಾಗಿ ಸುಬ್ರಹ್ಮಣ್ಯ ಅಯ್ಯರ್ ೧೮೮೧ರ ಏಪ್ರೀಲ್ ೨ರಂದು ಜನಿಸಿದರು. ಸೂಕ್ಷ್ಮ ಬುದ್ಧಿಯ ಬಾಲಕನಾಗಿ ಹನ್ನೆರಡು ವರ್ಷಕ್ಕೆಲ್ಲ ಮೆಟ್ರಿಕ್ಯೂಲೆಷನ್ ಪರೀಕ್ಷೆ ಮುಗಿಸಿದರು. ಹದಿನಾರು ತುಂಬುವ ವೇಳೆಗೆ ಪದವೀಧರರಾದರು. ಅನಂತರ ಕಾನೂನು ವ್ಯಾಸಂಗ ಮಾಡಿ ತಪ್ಪ  ಇಪ್ಪತ್ತನೆಯ ವಯಸ್ಸಿನಲ್ಲಿ ತಿರುಚಿನಾಪಳ್ಳಿ ನಗರದಲ್ಲಿ ವಕೀಲಿ ವೃತ್ತಿಯನ್ನು ಆರಂಭಿಸಿದರು.

ಆಗ ಬರ್ಮಾ ಭಾರತ್  ಸರಕಾರದ ಆಡಳಿತಕ್ಕೊಳಪಟ್ಟಿತ್ತು. ಬರ್ಮಾದ ರಾಜಧಾನಿ ರಂಗೂನಿನಲ್ಲಿ ವಕೀಲಿ ವೃತ್ತಿಯು ಹೆಚ್ಚು ಲಾಭಕಾರಿಯೆಂದು ತಿಳಿದು ಅಯ್ಯರ್ ಅವರು ಅಲ್ಲಿ ಹೋಗಿ ನೆಲೆಸಿದರು. ಆ ವೇಳೆಗಾಗಲೇ ಅವರಿಗೆ ವಿವಾಹವೂ ಆಗಿತ್ತು. ಒಂದೆರಡು ಮಕ್ಕಳು ಆಗಿದ್ದವು.

ಅವರ ಭಾವ ಪಶುಪತಿ ಅಯ್ಯರ್ ಅವರು ನೆರವು ನೀಡಲು ಮುಂದೆ ಬಂದುದರಿಂದ ಅಯ್ಯರ್ ಅವರು ಬ್ಯಾರಿಸ್ಟರ್ ಪದವಿಗಾಗಿ ಶಿಕ್ಷಣ ಪಡೆಯಲು ೧೯೦೬ರಲ್ಲಿ ಲಂಡನ್ನಿಗೆ ಹೋದರು.

ಕಲಿತದ್ದು ಶಸ್ತ್ರಾಭ್ಯಾಸ:

ಲಂಡನ್ನಿನಲ್ಲಿ ಶ್ಯಾಮಜಿ ಕೃಷ್ಣ ವರ್ಮರು ನಡೆಸುತ್ತಿದ್ದ “ಇಂಡಿಯನ್ ಹೋಂ ರೂಲ್ ಸೋಸೈಟಿಯ ಸದಸ್ಯರಾಗಿದ್ದರು. ಭಾರತೀಯ ದೇಶಭಕ್ತರ ನೆಲೆಯಾಗಿದ್ದ “ಇಂಡಿಯಾ ಹೌಸ್”ನಲ್ಲಿ ತಂಗಿದ್ದರು. ಶ್ಯಾಮಜಿ ಕೃಷ್ಣ ವರ್ಮ, ಸಾವರಕರ್, ಲಾಲಾ ಹರದಯಾಳ್, ಮೇಡಂ ಕಾಮಾ, ಭಾಮಾ ಪರಮಾನಂದ ಮೊದಲಾದ ತೀವ್ರವಾದ ದೇಶಭಕ್ತ ಸಂಪರ್ಕ ಬೆಳೆಯಿತು. ಅಯ್ಯರ್ ಅವರು ಮನಸ್ಸು ಮನೆ, ವಕೀಲಿ, ಶಿಕ್ಷಣ, ಪದವಿ ಹಣ, ಇವೆಲ್ಲವುಗಳ ವ್ಯಾಮೋಹದಿಂದ ದೂರ ಸರಿಯಿತು. ಭಾರತವು ಎಷ್ಟು ಬೇಗ ಸ್ವತಂತ್ರವಾದೀತು. ಅದಕ್ಕಾಗಿ ನಾನು ಏನು ಮಾಡಿಯೇನು? ಎಂದು ಸದಾ ತುಡಿದುಕೊಳ್ಳುವ  ಉಜ್ವಲ ದೇಶಭಕ್ತರಾದರು ಅಯ್ಯರ್.

ಆ ದಿನಗಳಲ್ಲಿ ಲಂಡನ್ ನಗರವು ಹಲವಾರು ದೇಶಗಳ ಕ್ರಾಂತಿಕಾರಿಗಳಿಗೆ ದೇಶಭಕ್ತರಿಗೆ ಆಶ್ರಯವಾಗಿತ್ತು. ಇಟಲಿಯ ಗ್ಯಾರಿಬಾಲ್ಡಿಯ ನೇತೃತ್ವದಲ್ಲಿ ಸ್ವಾತಂತ್ರ ಪಡೆದ ಇತಿಹಾಸ ಇನ್ನೂ ಹಚ್ಚ ಹಸುರಾಗಿತ್ತು. ಬೇರೆ ದೇಶದ ಆಡಳಿತಕ್ಕೆ ಒಳಗಾದ ಯಾವುದೇ ದೇಶವಾಗಲಿ ಸ್ವಾತಂತ್ರ ಪಡೆಯಬೇಕಾದರೆ ಶಸ್ತ್ರಗಳನ್ನು ಉಪಯೋಗಿಸಿ ಹೋರಾಡಲೇಬೇಕು ಎಂಬುವುದು ಅನೇಕ ದೇಶಗಳಲ್ಲಿ ಬಹುಮಂದಿಯ ಅಭಿಪ್ರಾಯವಾಗಿತ್ತು.

ಭಾರತೀಯರಿಗೋ, ತಮ್ಮ ದೇಶದಲ್ಲಿಯೇ ಶಸ್ತ್ರ ಪ್ರಯೋಗ ಶಿಕ್ಷಣ ಪಡೆಯುವ ಅವಕಾಶ ಕಡಿಮೆ. ಸರಕಾರದ ಆಶ್ರಯದಲ್ಲಿ ಪೋಲಿಸರು ಮತ್ತು ಸೇನಾದಳದವರಿಗೆ ಮಾತ್ರ ಅಂತಹ ಅವಕಾಶವಿತ್ತು.

ಹೀಗಾಗಿ ಆಯುಧಗಳ ಪ್ರಯೋಗದಲ್ಲಿ ಶಿಕ್ಷಣ ಪಡೆಯುವುದು, ಶಿಕ್ಷಣ ನೀಡುವುದು, ಗುಪ್ತವಾಗಿ ಶಸ್ತ್ರಗಳನ್ನು ಕೊಂಡು ಸಂಗ್ರಹಿಸಿ ಸಾಗಿಸುವುದು ಇವು ಪ್ರಮುಖವಾದ ಹೆಜ್ಜೆಗಳಾಗಿದ್ದವು. ಸಾವರಕರರೂ ಅಯ್ಯರ್ ಅವರೂ ತಾವು ವಾಸಿಸುತ್ತಿದ್ದ ಪ್ರದೇಶದಲ್ಲಿ ನಡೆಯುತ್ತಿದ್ದ ಒಂದು ರೈಫಲ್ ಕ್ಲಬ್ಬಿಗೆ ಸದಸ್ಯರಾಗಲು ಅರ್ಜಿ ಸಲ್ಲಿಸಿದರು. ಆದರೆ ಬಿಳಿಯರಲ್ಲದವರಿಗೆ ಅಂತಹ ಸೌಲಭ್ಯ ಸಿಕ್ಕುವಂತಿರಲಿಲ್ಲ. ಆಗ ಅವರ ಗಮನ ಅಲ್ಲಲ್ಲಿ ನಡೆಯುತ್ತಿದ್ದ “ಗುರಿಯಿಡುವ ಪಂದ್ಯಗಳ ಕಡೆಗೆ ಹರಿಯಿತು. ಒಂದಕ್ಕೆ ಹತ್ತರಷ್ಟು ವೆಚ್ಚ ಮಾಡಿ ಈ ಪಂದ್ಯಗಳಲ್ಲಿ ಭಾಗವಹಿಸಿ ಇಬ್ಬರೂ ರಿವಾಲ್ವಾರ ಪ್ರಯೋಗದಲ್ಲಿ ಪರಿಣಿತರಾದರು.

ಹೊಸ ಸದಸ್ಯ:

೧೯೦೮ರಲ್ಲಿ ಭಾರತದ ಪ್ರಥಮ ಸ್ವಾತಂತ್ರ ಹೋರಾಟದ ಐವತ್ತನೆಯ ವಾರ್ಷಿಕೋತ್ಸವವನ್ನು ಇಂಡಿಯಾ ಹೌಸಿನಲ್ಲಿ ಬಹಳ ಭರ್ಜರಿಯಾಗಿ ಆಚರಿಸಲಾಯಿತು. ಲಂಡನ್ನಿನಲ್ಲಿ ಶಿಕ್ಷಣಕ್ಕೆಂದು ಬಂದಿದ್ದ ಭಾರತೀಯ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಉಕ್ಕಿತು. ಕ್ರಾಂತಿಕಾರಿ ಸಾಹಿತ್ಯ ನಿರ್ಮಾಣವು ಜೋರಾಯಿತು.

ಪರಿಣಾಮವಾಗಿ ಬ್ರೀಟಿಷ ಗೂಢಚಾರ ವಿಭಾಗವಾದ ಸ್ಕಾಟ್ಲೆಂಡ್ ಯಾರ್ಡಿನ ಗಮನ ತೀವ್ರವಾಯಿತು.

೧೯೦೯ರ ಆಧಿಬಾಗದಲ್ಲಿ ಒಂದು ದಿನ ಸಂಜೆ ಯಾರೂ ಅದುವರೆಗೆ ಕಂಡಿರದೇ ಇದ್ದ ಒಬ್ಬಾತನು ಇಂಡಿಯಾ ಹೌಸಿಗೆ ಬಂದನು. ಆತ ಮಹಾರಾಷ್ಟ್ರದವನು. ಹೆಸರು ಕೀರ್ತಿಕರ್. ವಯಸ್ಸು ಮೂವತ್ತರ ಸುಮಾರು. ಆತನು ತನ್ನ ಪರಿಚಯ ಮಾಡಿಕೊಡಲು ಒಂದುಪತ್ರವನ್ನು ಸಹ ತಂದಿರಲಿಲ್ಲ. ಕೊಂಚ ವೇಳೆ ಸಾವರಕರರೊಂದಿಗೆ ಮರಾಠಿಯಲ್ಲಿ ಮಾತನಾಡಿ, ಇಂಡಿಯಾ ಹೌಸಿನಲ್ಲಿಯೇ ತಂಗಲು ಅನುಮತಿ ಪಡೆದ.

ಕೀರ್ತಿಕರ್ ಐದಾರು ಭಾಷೆಗಳಲ್ಲಿ ಪ್ರವೀಣ, ಮುಂಬಯಿಯ ಕೋರ್ಟುಗಳಲ್ಲಿ ಭಾಷಾಂತರ ಮಾಡುತ್ತಿದ್ದ. ಒಂದು ವರ್ಷ ರಜೆ ಪಡೆದು ದಂತ ವೈದ್ಯವನ್ನು ಕಲಿಯಲೆಂದು ಲಂಡನ್ನಿಗೆ ಬಂದಿದ್ದ. ಇಂಡಿಯಾ ಹೌಸಿಗೆ ಬಂದ ಮರುದಿನವೇ ಲಂಡನ್ ಆಸ್ಪತ್ರೆಯ ದಂತ ಚಕಿತ್ಸಾ ವಿಭಾಗದಲ್ಲಿ ಫೀಸು ಕಟ್ಟಿ ವಿದ್ಯಾರ್ಥಿಯಾಗಿ ಸೇರಿದ.

ತಿರುಚಿನಾಪಳ್ಳಿಯಿಂದ ಬಂದಿದ್ದ ಡಾಕ್ಟರ ಸೌಂದರರಾಜನ್ ಉನ್ನತ ವೈದ್ಯಕೀಯ ಶಿಕ್ಷಣ ಪಡೆಯಲು ಅದೇ ಆಸ್ಪತ್ರೆಯಲ್ಲಿ ಸೇರಿಕೊಂಡಿದ್ದರು. ಕೀರ್ತಿಕರ ಮತ್ತು ರಾಜನ್ ಇಬ್ಬರೂ ಬೆಳಿಗ್ಗೆ ಒಟ್ಟಿಗೆ ಆಸ್ಪತ್ರೆಗೆ ಹೋಗುತ್ತಿದ್ದರು. ಒಂದೆರಡು ವಾರಕಳೆದ ಮೇಲೆ ಕೀರ್ತಿಕರ್ ತನ್ನ ಅಧ್ಯಯನದ ಬಗ್ಗೆ ಅನಾಸಕ್ತಿ ತಳೆದ. ಮನೆಯಲ್ಲಿಯೇ ಹೆಚ್ಚು ಕಾಲ ಕಳೆಯತೊಡಗಿದ.

ಇಂಡಿಯಾ ಹೌಸಿನಲ್ಲಿ ಒಬ್ಬಳು ಸೇವಕಿಯಿದ್ದಳು. ಅವಳೊಂದಿಗೆ ಕೀರ್ತಿಕರ ಚೆಲ್ಲಾಟವಾಡತೊಡಗಿದ. ಇತರರು ಈ ಬಗ್ಗೆ ಸಾವರಕರರಲ್ಲಿ ದೂರು ನೀಡಿದಾಗ ಅವರು, “ಅವರ ಜನ ಯಾವಾಗಲೂ ಸುಖಾಭಿಲಾಷಿಗಳು” ಎಂದು ಹೇಳಿಬಿಟ್ಟರು.

ಯಾರೀತ?

ಇತರರು ಸುಮ್ಮನಿರದೆ ಆ ಕೆಲಸದವಳನ್ನು ತೆಗೆದು ಹಾಕಿದರು. ಕೀರ್ತಿಕರ ಅವಳಿಗಾಗಿ ಅಲೆದಾಡಿ ನೆರೆಯ ಮನೆಯೊಂದರಲ್ಲಿ ಕೆಲಸ ಕೊಡಿಸಿದ. ತನ್ನ ಚೆಲ್ಲಾಟವನ್ನು ಮುಂದುವರೆಸಿದ. ಆದರೆ ಒಂದು ಸಭೆಗೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಚರ್ಚೆಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದ. ತಿಂಗಳ ಚಂದಾ ಹಣದ  ಜೊತೆಗೆ ಸಂಘದ ಕೆಲಸ ಕಾರ್ಯಗಳಿಗೆಂದು ಒಂದು ಪೌಂಡು ಸಹಾಯಧನ ನೀಡುತ್ತಿದ್ದ.

ಆದರೆ ಸೌಂಧರರಾಜನ್ ಅವರಿಗೆ ಅವನು ತರಗತಿಗಳಿಗೆ ಹೋಗದಿದ್ದುದನ್ನು ಕಂಡು ಸಂಶಯ ಮೂಡಿತು. ಅವರು ಆಸ್ಪತ್ರೆಯ ದಂತ ಚಕಿತ್ಸಾ ವಿಭಾಗದಲ್ಲಿ ವಿಚಾರಿಸಲು ಕೀರ್ತಿಕರ  ನಾಲ್ಕಾರು ದಿನಗಳಿಗಿಂತ ಹೆಚ್ಚಿಗೆ ತನ್ನ ತರಗತಿಗಳಿಗೆ ಹೋಗಿರಲಿಲ್ಲವೆಂಬುವುದು ಖಚಿತವಾಯಿತು. ಆಗ ರಾಜನ್ ಅವರು ಅಯ್ಯರ್‌ವರೊಂದಿಗೆ, “ಕೀರ್ತಿಕರನ ವಿಚಾರ ಏನೋ ರಹಸ್ಯವಿದೆ. ಅವನು ಸ್ಕಾಟ್ಲೆಂಡ್ ಯಾರ್ಡಿನ ಕಡೆಯವನೋ? ಎಂದು ತಮ್ಮ ಸಂಶಯವನ್ನು ತಿಳಿಸಿದರು. ಅಯ್ಯರ್ವರ ಮನದಲ್ಲಿಯೂ ಅಂತಹ ಸಂಶಯ ಮೂಡಿತು.

ಯಾರೆಂದು ತಿಳಿಯಿತು

ಒಂದು ಸಂಜೆ ಕೀರ್ತಿಕರ್ ತನ್ನ ಪ್ರೇಯಸಿಯೊಂದಿಗೆ ನಾಟಕ ನೋಡಲು ಹೋಗಿದ್ದ. ಅದೇ ಸಮಯವೆಂದು ಅಯ್ಯರ್ ನಕಲಿ ಬೀಗದ ಕೈ ಬಳಸಿ ಅವನ ಕೋಣೆಯನ್ನು ತೆರೆದರು. ಅವನ ಹಾಸಿಗೆ, ಮೇಜು ಎಲ್ಲವನ್ನು ಶೋಧಿಸಿದರು. ಕೊನೆಗೆ ಪೆಟ್ಟಿಗೆಯನ್ನು ತೆರೆದು ನೋಡಿದರು. ಮೇಲುಗಡೆಯೇ ಕೀರ್ತಿಕರ ಬರೆದಿದ್ದ ನಾಲ್ಕಾರು ಪುಟಗಳ ಹಸ್ತಪ್ರತಿಯೊಂದಿತ್ತು. ಅದನ್ನು ಓದಿದಾಗ ಅವರ ಸಂಶಯ ಧೃಡಪಟ್ಟಿತು. ಅದು ಕೀರ್ತಿಕರ ಸಿದ್ಧಪಡಿಸಿಟ್ಟಿದ್ದ ಆ ವಾರದ ವರದಿ. ಇಂಡಿಯಾ ಹೌಸಿನಲ್ಲಿದ್ದವರ, ಬಂದು ಹೋದವರ, ಕಾರ್ಯ ಚಟುವಟಿಕೆಗಳ ವಿವರ, ಸ್ವಾತಂತ್ರ ಸಂಘದ ಸಭೆಯ ಕಾರ್ಯಕಲಾಪಗಳ  ಮಾಹಿತಿ ಎಲ್ಲ ಇದ್ದವು ಅದರಲ್ಲಿ. ಸ್ಕಾಟ್ಲೆಂಡ್ ಯಾರ್ಡಿನ  ಭಾರತದ ವಿಭಾಗದ ಮುಖ್ಯಸ್ಥರ ಹೆಸರಿಗೆ ಅದು ಕಳಿಸಲ್ಪಡಲು ಸಿದ್ಧವಾಗಿತ್ತು.

ಅಯ್ಯರ್ ಅವರ ಹೊಣೆ

ಅಯ್ಯರ್ ಅದನ್ನು ಮಾತ್ರ ತೆಗೆದುಕೊಂಡು, ಕೋಣೆಗೆ ತಾವು ಬಂಧುದರ ಸೂಚನೆಯಿರದಂತೆ ಎಲ್ಲವನ್ನೂ  ಮೊದಲಿನಂತೆಯೇ ಸಜ್ಜುಗೊಳಿಸಿ ಕೋಣೆಗೆ ಬೀಗ ಹಾಕಿದರು. ಅನಂತರ ಅಯ್ಯರ, ಸಾವರಕರ, ಸೌಂಧರರಾಜನ ಎಲ್ಲ ಕೂಡಿ ಮುಂದಿನ ಕ್ರಮವನ್ನು ಕುರಿತು ಚರ್ಚಿಸಿದರು.

ಕೀರ್ತಿಕರನನ್ನು ಹೊರಕಳಿಸುವುದೇನೋ ಸುಲಭ. ಆದರೆ ಅವನ ಬದಲಿಗೆ ಅವನಿಗಿಂತ ಸಮರ್ಥ ಬೇಹುಗಾರ ಬರಬಹುದು. ಅದ್ದರಿಂದ ಅವನನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬೇಕು. ಅವನು ಏನು ವರದಿ ಮಾಡುತ್ತಾನೋ ಅದರ ವಿವರ ತಮಗೆ ತಿಳಿದಿರಬೇಕು. ಹೀಗೆ ನಿರ್ಧಾರ ಮಾಡಿದರು. ಅದನ್ನು ಕಾರ್ಯಗತಗೊಳಿಸುವ ಹೊಣೆಯನ್ನು ಅಯ್ಯರ್ ಅವರಿಗೆ ವಹಿಸಲಾಯಿತು.

ಅಯ್ಯರ್ತಮ್ಮ ರಿವಾಲ್ವಾರುಗಳಲ್ಲಿ ಒಂದನ್ನು ತೆಗೆದು ಅದಕ್ಕೆ ಗುಂಡುಗಳನ್ನು ಹಾಕಿ ಸಿದ್ಧ ಮಾಡಿಕೊಂಡು ಚೀಲದಲ್ಲಿಟ್ಟುಕೊಂಡರು. ಕೀರ್ತಿಕರನ ವರದಿಯನ್ನೂ ಅದರಲ್ಲಿಟ್ಟುಕೊಂಡರು.

ಕೀರ್ತಿಕರ್ ರಾತ್ರಿ ಮನೆಗೆ ಹಿಂತಿರುಗಿದ. ಅಯ್ಯರ್ ಅವನ ಕೋಣೆಗೆ ಹೋಗಿ ಅಂದಿನ ನಾಟಕದ ವಿಚಾರವಾಗಿ ಮಾತು ತೆಗದರು.  ಅವನು ಲಂಡನ್ನಿನಲ್ಲಿ ಮಾಡುತ್ತಿದ್ದ ಕೆಲಸಗಳನ್ನು ಕುರಿತು ವಿಚಾರಿಸಿದರು. ಕೊನೆಗೆ ಅವನು ಸ್ಕಾಟ್ಲೆಂಡ್ ಯಾರ್ಡಿನ ಬೇಹುಗಾರನೆಂಬುವುದು ತಮಗೂ ಗೊತ್ತು ಎಂದರು. ಕೀರ್ತಿಕರನು ತಾನು ಅಂತಹ ಹೀನ ಕೆಲಸದಲ್ಲಿ ತೊಡಗುವವನಲ್ಲವೆಂದೂ ಅವರಂತಯೇ ತಾನೂ ದೇಶಭಕ್ತನೆಂದೂ  ಹೇಳಿಕೊಂಡ.

ಹೊಸ ಏರ್ಪಾಡು

ಆಗ ಅಯ್ಯರ್ಕೋಣೆಯ ಕದ ಮುಚ್ಚಿ ಒಳಗಿನಿಂದ ಅಗಣಿ ಹಾಕಿದರು. ಹೊರಗೆ ಇತರ ಮಿತ್ರರು ಈ ಮಾತು ಎಲ್ಲಿಗೆ ಬಂದು ನಿಲ್ಲತ್ತದೋ ಎಂದು ಕಾತುರರಾಗಿ ಕಾದಿದ್ದರು.

ಅಯ್ಯರ್ ತಮ್ಮ ರಿವಾಲ್ವರನ್ನು ತೆಗೆದು ಕೀರ್ತಿಕರನಿಗೆ ತೋರಿಸಿದರು. “ನೋಡು, ಇದರಲ್ಲಿ ಆರು ಗುಂಡುಗಳಿವೆ. ನೀನು ಸತ್ಯ ನುಡಿದರೆ ಸರಿ. ಇಲ್ಲವೋ ಕ್ಷಣದಲ್ಲಿ ನಿನ್ನ ಕತೆ ಮುಗಿಯುತ್ತದೆ” ಎಂದು ಎಚ್ಚರಿಕೆ ನೀಡಿದರು. ಕೀರ್ತಿಕರ ತನ್ನ ಪಟ್ಟು ಬಿಡಲಿಲ್ಲ.

ಆಗ ಅಯ್ಯರ್ ಕೀರ್ತಿಕರ ಸಿದ್ಧಪಡಿಸಿದ್ದ ವರದಿಯನ್ನು ಎತ್ತಿ ಹಿಡಿದು ಆಡಿಸುತ್ತ, “ಇದು ನಿನ್ನ ಕೈಬರವೇ ತಾನೆ? ಈ ನಿನ್ನ ಅಮೋಘ ಕೃತಿಯನ್ನು ನೀನು ಇಲ್ಲದಿರುವಾಗ ನಿನ್ನ ಪೆಟ್ಟಿಗೆ ತೆಗೆದು ಪಡೆದುಕೊಂಡೆ. ಇದೂ ನಿನ್ನದಲ್ಲವೆಂದು ಹೇಳುವುದಾದರೆ ಹೇಳಿಬಿಡು. ಮುಂದಿನ ಕೆಲಸ ಮಾಡುತ್ತೇನೆ ಎಂದು ಘರ್ಜಿಸಿದರು.

ಅವರ ಮಾತು ಮುಗಿಯುವುದರಲ್ಲಿ ಕೀರ್ತಿಕರ ಅವರ ಪಾದಗಳ ಮೇಲೆ ಬಿದ್ದು ಹೊರಳಿದ. ಕ್ಷಮೆ ಕೋರಿದ. ತನ್ನ ಪ್ರತಿ ವರದಿಯನ್ನೂ ಅವರಿಗೆ ತೋರಿಸಿ ಕಳಿಸುವುದಾಗಿ ಒಪ್ಪಿಕೊಂಡ. ತಾನು ಸಹಾಯ ಧನವಾಗಿ ಎರಡು ಪೌಂಡು ನೀಡುವುದಾಗಿ ವಚನವಿತ್ತ. ಈ ಏರ್ಪಾಡು ಕೆಲವು ಕಾಲ ಸಾಗಿತು.

"ಇದು ನಿನ್ನ ಕೈ ಬರಹವೇ ತಾನೆ?

ಮತ್ತೊಬ್ಬ ಸದಸ್ಯ:

ಇದೇ ಕಾಲದಲ್ಲಿ ಮದರಾಸಿನ ತಿರುವಲ್ಲಿಕ್ಕೇನರಿಯಲ್ಲಿ ವಾಸಿಸುತ್ತಿದ್ದ ತಿರುಮಲಾಚಾರಿಯೆಂಬ ಒಬ್ಬ ದೇಶಭಕ್ತ ಯುವಕನು ಲಂಡನಿಗೆ ಬಂದು ಇಂಡಿಯಾ ಹೌಸಿನಲ್ಲಿ ತಂಗಿದ್ದ. ಒಂದೆರಡು ತಿಂಗಳ ಕಾಲ ಅವನ ನಡತೆಯನ್ನು ಪರಿಶೀಲಿಸಿ ಅಯ್ಯರ್ ಅವರು ಅವನು ಬೇಹುಗಾರನಲ್ಲವೆಂದು ದೃಢಪಡಿಸಿಕೊಂಡರು. ಆತನ ಜೀವನಕ್ಕೂ ಒಂದು ದಾರಿ ಹುಡುಕಬೇಕಾಗಿ ಬಂತು. ಅಯ್ಯರ್ಅವರು ಅವನೊಡನೆ ಸ್ಕಾಟ್ಲೆಂಡ್ ಯಾರ್ಡಿಗೆ ಹೋಗಿ “ನಾನು ಇಂಡಿಯಾ ಹೌಸಿನ ವಿದ್ಯಮಾನಗಳನ್ನು ವರದಿ ಮಾಡುತ್ತೇನೆ ಎಂದು ಹೇಳು” ಎಂದರು. ಕೀರ್ತಿಕರ್ ಕಳುಹಿಸುತ್ತಿದ್ದ ವರದಿಗಳನ್ನು ದೃಢಪಡಿಸಿಕೊಳ್ಳಲು ಇದು ಒಳ್ಳೆಯ ಅವಕಾಶವೆಂದು ಸ್ಕಾಟ್ಲೆಂಡ್ ಯಾರ್ಡಿನ ಅಧಿಕಾರಿಗಳು ಅವನಿಗೆ ತಿಂಗಳೀಗೆ ಐದು ಪೌಂಡ್ ಸಂಬಳ ನೀಡಲು ಒಪ್ಪಿದರು. ಹೀಗಾಗಿ ಹಲವು ಕಾಲ ಬ್ರೀಟಿಷ ಅಧಿಕಾರಿಗಳಿಗೆ ಅಯ್ಯರ್ ಅವರು ಪರಿಶೀಲಿಸಿ ಕಳೂಹಿಸಿದ ಕೀರ್ತಿಕರನ ವರದಿಗಳು, ಬಾಯಿ ಮಾತಿನಲ್ಲಿ ತಿರುಮಲಾಚಾರಿಯ ಮೂಲಕ ಕಳುಹಿಸುತ್ತಿದ್ದ  ವರದಿಗಳು ಮಾತ್ರ ತಲುಪುವಂತಾಯಿತು.

ಅಣ್ಣ ಇದು ಸ್ವತಂತ್ರ ಫ್ರಾನ್ಸ ದೇಶ

ಆಫ್ರಿಕಕ್ಕೆ ತರುಣರು :

 

ಆಯುಧಗಳ ಸಂಗ್ರಹ, ಆಯುಧಗಳ ಪ್ರಯೋಗದಲ್ಲಿ ಪರಿಣತಿ ಇವೆಲ್ಲವ ಸ್ವಾತಂತ್ರ ಸಮರಕ್ಕೆ ಪೀಠಿಕೆಗಳು ಅಷ್ಟೇ,  ಅವು ಸ್ವಾತಂತ್ರ ಸಮರವನ್ನು ಆರಂಭಿಸಲೋ ಯಶಸ್ವಿಯಾಗಿ ನಡೆಸಲೋ ಅವಕಾಶ ಮಾಡಿಕೊಡಲಾರವು. ತಾತ್ವೀಕವಾಗಿ, ತಾಂತ್ರಿಕವಾಗಿ ಯುದ್ಧವನ್ನು ಅರಿಯಬೇಕು. ನಿಜವಾಗಿ ರಣರಂಗದಲ್ಲಿ, ಸೇನಾ ಚಲನ ವಲನಗಳಲ್ಲಿ ಪಾತರ ವಹಿಸಿ ಇಂತಹ ಜ್ಞಾನವನ್ನು ಪಡೆಯಬೇಕು. ನೂರು ಯುದ್ಧಗಳನ್ನು ಕುರಿತು ಪುಸ್ತಕಗಳನ್ನು ಓದಿದರೂ ಒಂದೇ ಒಂದರಲ್ಲಿ ಪ್ರತ್ಯೇಕ್ಷವಾಗಿ ಪಾತ್ರವಹಿಸಿ ದೊರೆಯುವಂತಹ ಅನುಭವಕ್ಕೆ ಸಾಟಿಯಾಗಲಾರದು.

ಈ ರೀತಿಯಲ್ಲಿ ಅಯ್ಯರ್ ಅವರೂ ಅವರ ಮಿತ್ರರೂ ಯೋಚಿಸುತ್ತಿದ್ದರು.  ಉತ್ತರ ಆಫ್ರಿಕದ ಮೊರಾಕೋವಿನಲ್ಲಿ ಮೂರ್ ಜನಾಂಗಕ್ಕೂ ಸ್ಪೇನ್ ದೇಶಕ್ಕೆ ಸೇರಿದ ಜನರಿಗೂ ೧೯೦೯ರಲ್ಲಿ ಕದನ ಆರಂಭವಾಯಿತು. ಅಯ್ಯರ್ಅವರೂ ಅವರ ಸ್ನೇಹಿತರೂ ತಮಗೆ ಅಗತ್ಯವಾದ ಅನುಭವ ಗಳಿಸಲು ಅದು ಒಂದು ಸದಾವಕಾಶವೆಂದು ಭಾವಿಸಿದರು.ತಮ್ಮ ತಂಡದಲ್ಲಿದ್ದ ತಿರುಮಲಾಚಾರಿ  ಮತ್ತಿಬ್ಬರು ಯುವಕರು-ಹೀಗೆ ಮೂವರನ್ನು ಆ ಯುದ್ಧದಲ್ಲಿ ಯಾವುದಾದರೊಂದು ಪಕ್ಷಕ್ಕೆ ಸೇರಿ ಹೋರಾಟದಲ್ಲಿ ಭಾಗವಹಿಸಲು ಆಯ್ದರು. ಅವರಿಗೆಲ್ಲ ಬಂದೂಕುಗಳನ್ನೂ ಉಡುಪುಗಳನ್ನೂ ಒದಗಿಸಿಕೊಟ್ಟು ಮೊರಾಕೋವಿಗೆ ಕಳೂಹಿಸಿದರು.

ಏಳು ತಿಂಗಳು ಕಳೆದು ಅವರಲ್ಲಿ ಇಬ್ಬರು ಅತ್ಯಂತ ನಿಶ್ಯಕ್ತರಾಗಿ, ನಿರಾಶರಾಗಿ ಹಿಂತಿರುಗಿದರು. ಇನ್ನೊಬ್ಬರು ಪತ್ತೇಯಾಗಲಿಲ್ಲ. ಮೊರಾಕೋವಿಗೆ ಹೋದ ಅವರುಗಳನ್ನು ಎರಡು ಪಕ್ಷಗಳವರೂ ಎದುರು ಪಕ್ಷದ ಬೇಹುಗಾರರೋ ಎಂದು ಅನುಮಾನಪಟ್ಟು, ತಮ್ಮೊಂದಿಗೆ ಸೇರಿಸಿಕೊಳ್ಳಲು ನಿರಾಕರಿಸಿದರು. ಅತ್ಯಂತ  ಕೆಳದರ್ಜೆಯ ಸಿಪಾಯಿಗಳಾಗಲೂ ಸಹ ಅವಕಾಶ ದೊರೆಯಲಿಲ್ಲ. ಇಡೀ ಪ್ರಯತ್ನದಲ್ಲಿ ಮುನ್ನೂರು ಪೌಂಡುಗಳು ವ್ಯರ್ಥ ವೆಚ್ಚದ ಹೊರತು ಬೇರಾವ ಪ್ರತಿಫಲವೂ ದೊರೆಯಲಿಲ್ಲ.

ಸಾವರ್ಕರರಿಗೆ ಅಪಾಯ

೧೯೦೯ರಲ್ಲಿ ಭಾರತೀಯ ದೇಶಭಕ್ತ ಮದನಲಾಲ್ ಧಿಂಗ್ರನು ಸರ್ ವಿಲಿಯಂ ಕರ್ಜನ ವಾಯ್ ಲಿ ಎಂಬ ಅಧಿಕಾರಿಯನ್ನು ಒಂದು ಸತ್ಕಾರ ಕೂಟದಲ್ಲಿ ಕೊಲೆ ಮಾಡಿದನು. ಇದರಿಂದ ಇಂಡಿಯಾ ಹೌಸ್ ನ ಕಾರ್ಯಕ್ರಮಗಳ ಮೇಲೆ ಪೋಲಿಸರ ಗಮನ ಬಿಗಿಯಾಯಿತು. ಕ್ರಾಂತಿಕಾರಿಗಳು ಇನ್ನು ಲಂಡನ್ನಿನಲ್ಲಿರುವುದು ಕಠಿಣವೆಂದು ಅರಿತರು. ಸಾವರಕರ, ಮೇಡಂ ಕಾಮಾ, ಶ್ಯಾಮಜಿ ಕೃಷ್ಣವರ್ಮ ಎಲ್ಲರೂ ಲಂಡನ್ ಬಿಟ್ಟು ಪ್ಯಾರಿಸಿನಲ್ಲಿ ನೆಲೆಸಿದರು.

೧೯೦೯ರಲ್ಲಿ ಆದಿಭಾಗದಲ್ಲಿ ಸಾವರಕರ್ರು ಪ್ಯಾರಿಸಿನಿಂದ ಇಪ್ಪತ್ತು ಬ್ರೌನಿಂಗ್ ಪಿಸ್ತೂಲಗಳನ್ನೂ ಅವಕ್ಕೆ ಬೇಕಾಗುವಷ್ಟು ಗುಂಡುಗಳನ್ನೂ ಖರೀದಿ ಮಾಡಿದ್ದರು. ಅವುಗಳನ್ನ ಇಂಡಿಯಾ ಹೌಸಿನಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದ ಚತುರ್ಭುಜ ಅಮೀನ್ ಎಂಬಾತನು ಭಾರತಕ್ಕೆ ಹಿಂತಿರುಗುವಾಗ ಅವನ ಮೂಲಕ ಕಳುಹಿಸಿಕೊಟ್ಟಿದ್ದರು. ವಿನಾಯಕ ದಾಮೋದರ ಸಾವರಕರರ ಅಣ್ಣ ಗಣೇಶ ಸಾವರಕರರ ಮೇಲೆ ನಾಸಿಕದಲ್ಲಿ ನಡೆಯುತ್ತಿದ್ದ ಮೊಕದ್ದಮೆಯನ್ನು ವಿಚಾರಿಸುತ್ತಿದ್ದ ಆಂಗ್ಲ ಅಧಿಕಾರಿ ಜಾಕ್ಸನ್ನನ್ನು ನಾಸಿಕದಲ್ಲಿ ಕೊಲೆ ಮಾಡಲಾಯಿತು. ಡಿಸೆಂಬರ ೧೯೦೯ರಲ್ಲಿ ನಡೆದ ಈ ಕೊಲೆಗೆ ಬ್ರೌನಿಂಗ್ ಪಿಸ್ತೂಲನ್ನು ಬಳಸಲಾಗಿದುದರಿಂದ  ಅದಿ ಸಾವರಕರರು ಕಳುಹಿಸಿದ ಪಿಸ್ತೂಲಗಳಲ್ಲೇ ಒಂದು ಎಂದು ಹೇಳಿ ಅವರ ಮೇಲೆ ಮೊಕದ್ದಮೆ ಹೂಡಿ ಅದರ ವಾರಂಟನ್ನು ಲಂಡನ್ನಿಗೆ ಕಳುಹಿಸಲಾಗಿತ್ತು.

ಅಯ್ಯರ್ಅವರಿಗಾಗಲಿ, ಸಾವರಕರ ರಿಗಾಗಲಿ ಇದರ ಸುಳಿವು ಸಹ ಇರಲಿಲ್ಲ. ಸಾವರಕರ ಪ್ಯಾರಿಸ್ಸಿಗೆ ಹೋದ ನಂತರ ಸಂಘದ ಕಾರ್ಯಕ್ರಮಗಳ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಬೇಕಾದ ಸಂದರ್ಭವೊಂದು ಒದಗಿತು. ಅಯ್ಯರ್ ಅವರು ಸಾವರಕರರಿಗೆ ಲಂಡನ್ನಿಗೆ ಬನ್ನಿರೆಂದು ತಂತಿ ಕಳುಹಿಸಿದರು.

ಸಾವರಕರರು ಲಂಡನ್ನಿಗೆ ಬರುವರೆಂದು ತಿಳಿದ ಬ್ರೀಟಿಷ ಪೋಲಿಸ ಅಧಿಕಾರಿಗಳು ಡೋವರ ಎಂಬಲ್ಲಿ ಹೊಂಚು ಹಾಕುತ್ತಿದದರು. ಡೋವರ ನಲ್ಲಿ ಇಳಿದ ಕೂಡಲೇ ಭಾರತದಿಂದ ಬಂದಿದ್ದ ವಾರಂಟಿನ ಮೇಲೆ ಅವರನ್ನು ಬಂಧಿಸಲಾಯಿತು. ಸಿಂಹವು ತಾನಾಗಿ ಬೋನಿನೊಳಕ್ಕೆ ಹೊಕ್ಕಂತಾಯಿತು!

ಬಿಡಿಸಿಕೊಳ್ಳಬೇಕು

ಸೆರೆಯಾಗುವ ಅಪಾಯದಿಂದ ಪಾರಾಗಲು  ಸರ್ವ ಮುನ್ನೆಚ್ಚರಿಕೆಗಳನ್ನು ವಹಿಸಿದ್ದರೂ ಅವೆಲ್ಲ ಕ್ಷಣ ಕಾಲದಲ್ಲಿ ವ್ಯರ್ಥವಾಗಿ, ಹೀಗೆ  ಸಾವರಕರ್ರು ಬಂಧಿತರಾದರು. ಆ ಕ್ಷಣದಿಂದ ಹೇಗಾದರೂ ಅವರನ್ನು ಸ್ವತಂತ್ರಗೊಳಿಸುವದೇ ತಮ್ಮ ಮುಖ್ಯ ಕರ್ತವ್ಯವಾಗಿ ಅಯ್ಯರ್ ಭಾವಿಸಿದರು. ಸಾವರಕರ ಅವರನ್ನು ಸೆರೆಮನೆಗೆ ಹಲವು ಬಾರಿ ಭೇಟಿಯಾಗಿ ತಪ್ಪಿಸಿಕೊಳ್ಳುವ ಪೂರ್ಣ ಯೋಜನೆಯನ್ನು ಸಿದ್ಧಗೊಳಿಸಿ ಯಾರಿಗೂ ಸುಳಿವು ನೀಡದೇ ಪ್ಯಾರಿಸಿಗೆ ಬಂದರು. ಅಲ್ಲಿ ಮೇಡಂ ಕಾಮಾ, ಶ್ಯಾಮಜಿ, ಕೃಷ್ಣವರ್ಮ, ಲಾಲಾ ಹರದಯಾಳ, ಮೊದಲಾದ ಮಿತ್ರರೊಂದಿಗೆ ಸಮಾಲೋಚನೆ ಮಾಡಿ ಸಕಲ ಸಿದ್ಧತೆಗಳೊಂದಿಗೆ ಮಾರ್ಸೆಲ್ಸಿಗೆ ಹೋದರು.

ಅಷ್ಟರಲ್ಲಿ ಲಂಡನ್ನಿನ ಕೋರ್ಟು ಸಾವರಕರರ ಪರವಾಗಿ ಸಲ್ಲಿಸಿದ ಮನವಿಯನ್ನು ನಿರಾಕರಿಸಿ ಅವರನ್ನು ಸೂಕ್ತ ಕಾವಲಿನಲ್ಲಿ ಭಾರತಕ್ಕೆ ಕಳುಹಿಸಬೇಕೆಂದು ಅಪ್ಪಣೆ ಮಾಡಿತು. ಸಾವರಕರರನ್ನು ಮೋರಿಯಾ ಎಂಬ ಜಹಜಿನಲ್ಲಿ ತಕ್ಕ ಕಾವಲು ಏರ್ಪಾಡಿನೊಂದಿಗೆ ಲಂಡನ್ನನಿಂದ  ಭಾರತಕ್ಕೆ ರವಾನೆ ಮಾಡಿದರು.

ಫ್ರಾನ್ಸಿನ ನೆಲದ ಮೇಲೆ

ಒಂದು ವಾರ ಪ್ರಯಣ ಮಾಡಿ ಆ ಹಡಗು ಫ್ರಾನ್ಸ್ ದೇಶದ ದಕ್ಷಿಣ ತೀರದ ಮಾರ್ಸೆಲ್ಸ ಬಂದರಿನಲ್ಲಿ ಬಂದು ನಿಂತಿತು. ಸಾವರಕರರು ತಾವು ಶೌಚ ಗೃಹಕ್ಕೆ ಹೋಗಬೇಕಾಗಿದೆಯೆಂದು ಕಾವಲುಗಾರರಿಗೆ ತಿಳಿಸಿದರು. ಬೇಡಿಯನ್ನು ಬಿಚ್ಚಿ ಅವರನ್ನು ಕಾವಲುಗಾರನೊಬ್ಬ ಶೌಚಗೃಹಕ್ಕೆ ಕರೆತಂದ. ಸಾವರಕರರು ಶೌಚಗೃಹದೊಳಗೆ ಹೋಗಿ ಕದವಿಕ್ಕಿಕೊಂಡರು.

ಆ ಶೌಚಗೃಹಕ್ಕೆ ಒಂದು ಸಣ್ಣ ಕಿಟಕಿಯಿತ್ತು. ಅದರ ಮೂಲಕ ಹೊರಬೀಳು ಪ್ರಯತ್ನಿಸಿದರು. ಆದರೆ ಅದು ಬಹಳ ಸಣ್ಣದಾಗಿತ್ತು. ಸಾವರಕರರು ತಮ್ಮ ಉಡುಪುಗಳನ್ನೆಲ್ಲ ಕಳಚಿದರು. ಕಷ್ಟಪಟ್ಟು ಹೊರಬರುವುದು ಸಾಧ್ಯವಾಯಿತು. ಯಾವ ರೀತಿಯ ಶಬ್ದಕ್ಕೂ ಎಡೆಗೊಡದೆ ನೀರಿಗೆ ಇಳಿದರು. ಅವರು ಈಜುವುದರಲ್ಲಿ ನಿಷ್ಣಾತರು. ಸರಸರನೆ ಫ್ರೆಂಚ್ ತೀರದತ್ತ ಈಜಿದರು.

ಹಡಗಿನ ಮೇಲ್ಭಾಗದಲ್ಲಿ ನಿಂತು ನಗರ ವೀಕ್ಷಣೆ ಮಾಡುತ್ತಿದ್ದ ಇತರ ಪ್ರಯಾನಿಕರು ಮೋಜಿನಿಂದ ಆ ಈಜುಗಾರನನ್ನು ನೋಡುತ್ತ ಕೋಲಾಹಲ ಮಾಡಿದರು ಇದರಿಂದ ಕಳವಳಗೊಂಡ ಕಾವಲುಗಾರರು ಮೇಲೆ ಬಂದು ನೋಡಿದರೆ ತಮ್ಮ ಕಾವಲಿನಲ್ಲಿದ್ದ ಖೈದಿಯು ಪರಾರಿಯಾಗುತ್ತಿದ್ದಾನೆ! ಅವರಿಬ್ಬರೂ ಕಳ್ಳ! ಕಳ್ಳ! ಎಂದು ಕೂಗುತ್ತ ತಾವೂ ನೀರಿಗೆ ಧುಮುಕಿದರು. ಅತ್ಯಂತ ತೀವ್ರವಾದ ಈಜುಗಾರಿಕೆ ಪಂದ್ಯವೇ ಆರಂಭವಾಯಿತು. ಮುಂದೆ ತನ್ನ ಸ್ವಾತಂತ್ರವನ್ನು ಕಾಪಾಡಿಕೊಂಡು ನಾಡಿನ ಬಿಡುಗಡೆಗೆ ಹೋರಾಡಲು ಪಣತೊಟ್ಟಿದ್ದ ವೀರ. ಹಿಂದೆ ಬಿಟ್ಟೇವೋ ಕೆಟ್ಟೇವು ಎಂದು ಹೆದರಿ ಹೇಗಾದರೂ ಅವನನ್ನು ಹಿಡಿಯಲೇಬೇಕೆಂದು ಹಟ ಹಿಡಿದ ಸಂಬಳದ ಸಿಪಾಯಿಗಳು.

ಸಾವರಕರರು ತೀರವನ್ನು  ಮುಟ್ಟಿದರು. ಅವರು ತೀರಕ್ಕೆ ತಲುಪಿದ ಜಾಗದಿಂದ ಎರಡು ಫರ್ಲಾಂಗ್ ದೂರದಲ್ಲಿ ಅಯ್ಯರ್, ಮೇಡಂ ಕಾಬಾ, ಲಾಲಾ ಹರದಯಾಳ, ಇವರೆಲ್ಲ ಒಂದು ಕಾರಿನಲ್ಲಿ ಪಕ್ಕದಲ್ಲಿ ನಿಂತು ಕಾಯುತ್ತಿದ್ದರು. ನೆಲವನ್ನು ಮುಟ್ಟಿದ ಸಾವರ್ಕರ್ ಕಾರಿನತ್ತ ಓಡತೊಡಗಿದರು. ಕಾವಲಿನವರು ಅವರ ಬೆನ್ನಟ್ಟಿದರು. ಈಜು ಪಂದ್ಯ ಓಟದ ಪಂದ್ಯವಾಯಿತು. ಕಾವಲಿನವರು ಆಗಾಗ್ಗೆ “ಕಳ್ಳ! ಕಳ್ಳ!” ಎಂದು ಕೂಗುತ್ತಿದ್ದರು.

ಅಯ್ಯರ್ ಸೋತರು

ಚಡ್ಡಿ ಹೊರತು ಬೆತ್ತಲೆಯಾಗಿ ಓಡುತ್ತಿದ್ದ ವ್ಯಕ್ತಿಯ ಮೇಲೆ ಫ್ರೆಂಚ್ ಪೋಲಿಸನೊಬ್ಬನ ಗಮನ ಹರಿಯಿತು. ಅವನು ಸಾವರಕರ್ರನ್ನು ತಡೆದು ನಿಲ್ಲಿಸಿದ. ಒಂದು ಕಡೆಯಿಂದ ಕಾವಲುಗಾರರು, ಇನ್ನೊಂದು ಕಡೆಯಿಂದ ಅಯ್ಯರ್ ಮತ್ತು ಮಿತ್ರರು ಓಡಿಬಂದರು. ಕಾವಲುಗಾರರು ತಮ್ಮ ಖೈದಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕೆಂದು ಕೇಳಿದರು. ಅಯ್ಯರ್ ತಾವು ಕಲಿತಿದ್ದ ಫ್ರೆಂಚ್ ಭಾಷೆಯಲ್ಲಿ ನಿರರ್ಗಳವಾಗಿ, “ಅಣ್ಣ, ಇದು ಸ್ವತಂತ್ರ ಫ್ರಾನ್ಸ್ ದೇಶ. ಈ ನೆಲದಲ್ಲಿ ಬ್ರಟಿಷ್ ಅಧಿಕಾರಿಗಳು ಬಂದು ಯಾರನ್ನು ಬಂಧಿಸಲಾಗದು. ಅದು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧ ಎಂದು ವಾದಿಸಿದರು. ಆದರೆ ಆ ಫ್ರೆಂಚ್ ಪೋಲಿಸನಿಗೆ ಬ್ರೀಟಿಷ್ ಕಾವಲುಗಾರರ ಮಾತೇ ಮೆಚ್ಚಿತು. ಕಾವಲುಗಾರರು ಸಾವರಕರ್ರನ್ನು ಮತ್ತೇ ಹಿಡಿದುಕೊಂಡು ಹಡಗಿಗೆ ಒಯ್ದರು.

ಈ ಪ್ರಸಂಗವನ್ನು ಫ್ರಾನ್ಸಿನ ಪಾರ್ಲಿಮೆಂಟ್ ಹೇಗ್ನಲ್ಲಿದ್ದ ಅಂತರರಾಷ್ಟ್ರೀಯ ನ್ಯಾಲಯ-  ಇಲ್ಲೆಲ್ಲ ಪ್ರಸ್ತಾಪಿಸಿದರೂ ಸಾವರ್ಕರರು ಮಾತ್ರ ಸೆರೆಯಿಂದ ಮುಕ್ತರಾಗಲಿಲ್ಲ.

ಅಯ್ಯರ್ಗೆ ಇನ್ನಿಷ್ಟು ಪೇಚು

ಇಷ್ಟು ಸಾಲದೋ ಎಂಬಂತೆ ಇನ್ನು ಎರಡು ದ್ರೋಹ ಪ್ರಸಂಗಗಳು ಅಯ್ಯರ್ ಅವರನ್ನು ಪೇಚಿಗೆ ಈಡು ಮಾಡಿದವು. ಲಂಡನ್ನಿನಲ್ಲಿ  ಕೋರ್ಟಿನಲ್ಲಿ ಸಾವರಕರ್ರನ್ನು ಭಾರತಕ್ಕೆ ಕಳುಹಿಸಬೇಕೇ ಎಂಬ ವಿಚಾರದಲ್ಲಿ ಮೊಕದ್ದಮ್ಮೆ ನಡೆದಾಗ ಭಾರತ ಸರಕಾರದ ಪರವಾಗಿ ದಾಖಲಾದ  ಪತ್ರಗಳಲ್ಲಿ ಸುಮಾರ ನೂರಿಪ್ಪತ್ತು ಪುಟಗಳ ವರದಿಯೂ ಒಂದು. ಅದನ್ನು ಸಿದ್ಧಪಡಿಸಿದಾತ ಕೊರೆಗಾಂವ್ಕರ್ ಎಂಬ ಮರಾಠ ತರುಣ. ಆತ ಉನ್ನತ ಶಿಕ್ಷಣಕ್ಕಾಗಿ ಲಂಡನ್ನಿಗೆ ಬಂದಿದ್ದ. ಆತನ ಹೆಸರು ಹರಿಶ್ಚಂದ್ರ ಕೋರೆಗಾಂವಕರ್. ಗ್ವಾಲಿಯರ ರಾಜ್ಯ ಸರಕಾರದಿಂದ ಪ್ರತಿ ತಿಂಗಳು ಇಪ್ಪತ್ತು ಪೌಂಡ್ ಸಹಾಯಧನ ಪಡೆಯುತ್ತಿದ್ದ ಈತ ತನ್ನ ವೆಚ್ಚ ಕಳೆದು ಮಿಕ್ಕ ಹಣವನ್ನೆಲ್ಲ ಸ್ವಾತಂತ್ರ ಸಂಘಕ್ಕೆ ಸಲ್ಲಿಸುತ್ತಿದ್ದ. ಪ್ರತಿ ಸಭೆಯಲ್ಲಿಯೂ ಉತ್ಸಾಹದಿಂದ ಭಾಗವಹಿಸುತ್ತಿದ್ದ. ಸಾವರಕರ್ರೊಂದಿಗೆ ಗಂಟೆಗಟ್ಟಲೆ ರಹಸ್ಯವಾಗಿ ಚರ್ಚಿಸುತಿದ್ದ.

ಇಂತಹ ವ್ಯಕ್ತಿ ಹರಿಶ್ಚಂದ್ರ ಕೋರೆಗಾಂವಕರ್ ಭಾರತಕ್ಕೆ ಮರಳಿದೊಡನೆ ಮಾಡಿದ ದೇಶಸೇವೆಯೇ ಕೋರ್ಟಿನಲ್ಲಿ ದಾಖಲಾದ ವರದಿ. ಅದಕ್ಕೆ ಪೀಠಿಕೆಯಾಗಿ, “ಸಾವರಕರ ಅವರ ತಂಡದಿಂದ ನಾನು ತಪ್ಪುದಾರಿಗೆ ಎಳೆಯಲ್ಪಟ್ಟಂತೆ ಇತರ ಭಾರತೀಯರ ವಿದ್ಯಾರ್ಥಿಗಳು ಮರುಳಾಗದಿರಲಿ ಎಂದು ಸ್ವ-ಇಚ್ಛೆಯಿಂದ, ಯಾರ ಪ್ರೇರಣೆಯೂ ಇಲ್ಲದೆ ಈ ವರದಿಯನ್ನು ಸಲ್ಲಿಸುತ್ತಿದ್ದೆನೆ ಎಂದು ತನ್ನ ಹೀನ ಕಾರ್ಯಕ್ಕೆ ಸಮಾಧಾನ ಹೇಳಿಕೊಂಡಿದ್ದ. ಭಾರತೀಯರು ಲಂಡನ್ನಿನಲ್ಲಿ ನಡೆಸುತ್ತಿದ್ದ ಸ್ವಾತಂತ್ರ ಪ್ರಯತ್ನಗಳ ಸಂಪೂರ್ಣ ವರದಿ ಇದು. ೧೯೧೯ರಲ್ಲಿ ಹೊರಬಂದ ರೌಲತ್ ವರದಿಯ ಮೊದಲ ಮೂರು ಅಧ್ಯಾಯಗಳಿಗೆ ಇದೇ ಮೂಲ ವಸ್ತು.

ಹರಿಶ್ಚಂದ್ರ ಮರೆಮಾಚಬೇಕಾದ ರಹಸ್ಯವನ್ನು ಬಹಿರಂಗಗೊಳಿಸಿ ದ್ರೋಹ ಮಾಡಿದ.

ಇನ್ನೊಬ್ಬ ಸುಳ್ಳುಗಾರ

ರಾಮರಾವ್ ಎಂಬುವನೊಬ್ಬನು ತನ್ನನ್ನು  ಉಳಿಸಿಕೊಳ್ಳಳು ಸುಳ್ಳುಸಾಕ್ಷ್ಯ ನೀಡಿ ದ್ರೋಹ ಮಾಡಿದ. ರಾಮರಾವ್ ರಂಗೂನಿನಲ್ಲಿ ಸ್ಯಾನಿಟರಿ ಇನ್ಸಫೆಕ್ಟರ್ ಆಗಿದ್ದು, ಉನ್ನತ ಶಿಕ್ಷಣ ಪಡೆದು ಉದ್ಯೋಗದಲ್ಲಿ ಮೇಲೇರಬೇಕೆಂದು ಲಂಡನ್ನಿಗೆ ಬಂದವನು. ರಂಗೂನಿನಲ್ಲಿ ಆತನ ಸ್ನೇಹಿತರಾಗಿದ್ದು, ಇಂಡಿಯಾ ಹೌಸಿನಲ್ಲಿದ್ದು, ಉನ್ನತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಡಾಕ್ಟರ್ ಸೌಂಧರರಾಜನ್. ಅವರ ಮೂಲಕ ಅಯ್ಯರ್ಅವರಿಗೂ ರಾಮರಾವಗೂ ಪರಿಚಯ ಬೆಳೆದು ಗಾಢ ಸ್ನೇಹವಾಗಿ ಮಾರ್ಪಟ್ಟಿತು.  ರಾಮರಾವ್ ಭಾರತಕ್ಕೆ ಹಿಂದಿರುಗುವಾಗ ಅಯ್ಯರ್ ಕೆಲವು ರಿವಾಲ್ವಾರುಗಳನ್ನು ಆತನ ಮೂಲಕ ಕಳುಹಿಸಿದರು.  ಬೇಹುಗಾರರು ಇದರ ಸುಳಿವು ಅರಿತು ರಾಮರಾವ ಮುಂಬೆಯಿಯಲ್ಲಿ ಇಳಿದ ಕೂಡಲೇ ಆತನನ್ನು ಬಂಧಿಸಿದರು. ಆತನಿಗೆ ಎರಡು ವರ್ಷ ಕಠಿಣ ಸಜಾ ವಿಧಿಸಲಾಯಿತು.

ಸೆರೆಯಿಂದ ಹೊರಬರಬೇಕು, ತನ್ನ ಉದ್ಯೋಗದಲ್ಲಿ ಮೇಲೇರಬೇಕೆಂಬ ಕಾತುರದಲ್ಲಿ ರಾಮರಾವ ಸರಕಾರಕ್ಕೆ ಸಂತೋಷವಾಗುವಂತಹ ಸಾಕ್ಷ್ಯವನ್ನು- ಅದು ಸುಳ್ಳೇ ಆದರೂ- ಕೊಡಲು ಮುಂದೆ ಬಂದ. ಅವನು ಸಾವರ್ಕರ್ರನ್ನು ಕಂಡೇ ಇರಲಿಲ್ಲವಾದರೂ ಅವರೇ ತನಗೆ ಸಾಗಾಣಿಕೆಗಾಗಿ ಪಿಸ್ತೂಲಗಳನ್ನು ನೀಡಿದುದಾಗಿ ಸಾಕ್ಷ್ಯ ನೀಡಿದ. ಬಿಡುಗಡೆ ಪಡೆದು ರಹಸ್ಯ ಪೋಲಿಸ್ ನೌಕರಿ ಗಳಿಸಿದ.

ಈ ನಿರಾಶೆಗಳ ಸರಮಾಲೆ ಅಯ್ಯರ್ ಅವರನ್ನೂ ಲಂಡನ್, ಪ್ಯಾರಿಸ್ ಗಳಲ್ಲಿದ್ದ ಇತರ ದೇಶಭಕ್ತರನ್ನೂ ತಲ್ಲಣಗೊಳಿಸಿತು. ಅಯ್ಯರ್ ಲಂಡನ್ನಿಗೋ, ಭಾರತಕ್ಕೋ ಹಿಂತಿರುಗಿದ್ದರೆ ಅವರ ಮೇಲೆ ಹಲವು ಮೊಕದ್ದಮೆಗಳನ್ನೂ ಹೂಡಲು ಸರಕಾರ ಸಿದ್ಧತೆ ಮಾಡಿಕೊಂಡಿತು. ತಮ್ಮ ಚಳುವಳಿಯನ್ನು ಮುಂದುವರೆಸಲು ಯಾವ ದಾರಿಯೂ ಕಾಣದ ವ್ಯರ್ಥವಾಗಿ ಪ್ಯಾರಿಸ್ನಲ್ಲಿ ಕಾಲ ಕಳೆಯುವುದು ಹೇಗೆ ?

ಪಾಂಡಿಚೇರಿಗೆ

ಹೇಗಾದರೂ ಭಾರತಕ್ಕೆ ಹಿಂತಿರುಗಲು ನಿರ್ಧರಿಸಿ ಅಯ್ಯರ್ ದಾರಿ ಬೆಳೆಸಿದರು. ಮುಸ್ಲಿಂ ಧರ್ಮಾಚಾರಗಳನ್ನು ಕಲಿತರು. ಅನುಮಾನ ಹುಟ್ಟಿಸದೇ ಮಾತನಾಡುವಷ್ಟು ಅರಬ್ಬೀ, ಉರ್ದುಗಳನ್ನು ಕಲಿತರು. ಒಬ್ಬ ಮುಸಲ್ಮಾನ ಫಕೀರನ ವೇಷ ಧರಿಸಿ ಯಾವ ಬೇಹೂಗಾರನಿಗೂ ಪತ್ತೇಯಾಗದಂತ ಈಜಿಪ್ತಿಗೆ ಹೋದರು. ಅಲ್ಲಿಂದ ಕೋಲಂಬೋವಿನ ಮಾರ್ಗವಾಗಿ ಪಾಂಡಿಚೇರಿಗೆ ಬಂದರು. ಆಗ ಅಲ್ಲಿದ್ದ ಶ್ರೀನಿವಾಸಾಚಾರ್ಯ ಎಂಬುವರ ಮನೆ ದೇಶಭಕ್ತರಿಗಾಗಿ ಏರ್ಪಟ್ಟ ಧರ್ಮಛತ್ರದಂತಿತ್ತು. ಅಲ್ಲಿ ನೆಲೆಸಿ ಪಾಂಡಿಚೇರಿಯಲ್ಲಿ ವಾಸಮಾಡುತ್ತಿದ್ದ ಅರವಿಂದ ಘೋಷ್, ಸುಬ್ರಹ್ಮಣ್ಯ ಭಾರತಿ ಮೊದಲಾದವರ ಸ್ನೇಹ ವಾತಾವರಣದಲ್ಲಿ ತಮ್ಮ ಮುಂದಿನ ಕಾರ್ಯಗಳತ್ತ ಗಮನ ಹರಿಸಿದರು.

ಆಷ್ ಸಾಹೇಬನ ಕೊಲೆ

೧೯೧೧ರಲ್ಲಿ ಒಂದು ದಿನ ಅಯ್ಯರ್ ಅವರಲ್ಲಿಗೆ ಸುಮಾರು ಅವರಷ್ಟೇ ವಯಸ್ಸಿನ ಒಬ್ಬ ತರುಣ ಬಂದನು. ಆತನ ಹೆಸರು ವಾಂಚಿ ಅಯ್ಯರ. ಅವನ ಜನ್ಮ ಸ್ಥಳ ತಮಿಳುನಾಡು-ಕೇರಳಗಳ ಗಡಿನಾಡಾದ ಶೆಂಕೋಟಾ. ತಿರುವಾಂಕೂರು ಸಂಸ್ಥಾನದ ಅರಣ್ಯ ಇಲಾಖೆಯಲ್ಲಿ ನೌಕರಿ. ಆತನ ಸಮೀಪ ಬಂಧು ಶಂಕರ ಕೃಷ್ಣ ಅಯ್ಯರ್ ಪರಮ ದೇಶಭಕ್ತ, ವಾಂಚಿಯೂ ಭಾರತಿ ಅಯ್ಯರ್, ನೀಲಕಂಠ ಬ್ರಹ್ಮಚಾರಿ ಮೊದಲಾದವರ ಲೇಖನಗಳನ್ನೋದಿ ಉತ್ಕಟ ದೇಶಪ್ರೇಮಿಯಾಗಿದ್ದ.

ಇಷ್ಟೊಂದು ಜನ ಭಾರತೀಯರನ್ನು ಕೆಲವೇ ಮಂದಿ ಬ್ರೀಟಿಷರು ತಮ್ಮ ಹತೋಟಿಯಲ್ಲಿಟ್ಟುಕೊಳ್ಳುವುದೆಂದರೇನು ಎಂಬುವುದು ಅತನ ಸಮಸ್ಯೆ. ಬಂಗಾಳದ ಜುಗಾಂತರ ಮತ್ತು ಅನುಶೀಲನ ಸಮಿತಿಗಳ ಸಾಹಿತ್ಯದಿಂದ ಪ್ರಭಾವಿತನಾಗಿ ತನ್ನ ಸಮಸ್ಯಗೆ ಉತ್ತರ ದೊರೆಯಿತೆಂದು ಭಾವಿಸಿದ. ಆಂಗ್ಲ ಅಧಿಕಾರಿಗಳ ಕೊಲೆ ಆತನಿಗೆ ದೊರೆತ ಉತ್ತರ.

ಒಮ್ಮೆ ಈ ಬಗ್ಗೆ ನಿರ್ಧಾರ ಕೈಗೊಂಡವನು ಪಾಂಡಿಚೇರಿಗೆ ಧಾವಿಸಿದ. ಅಯ್ಯರ, ಅವರ ಶಿಷ್ಯನಾಗಿ ಮೂರು ತಿಂಗಳ ಕಾಲ ರಿವಾಲ್ವಾರ ಪ್ರಯೋಗದಲ್ಲಿ ಪರಿಣಿತಿ ಪಡೆದ. ಅಯ್ಯರ್ ಅವರಿಂದಲೇ ಒಂದು ರಿವಾಲ್ವಾರನ್ನೂ ಪಡೆದುಕೊಂಡು ತಿರುನೇಲ್ವಿಲಿಗೆ ಬಂದ.

ಆಗ ತಿರುನೇಲ್ವೇಲಿ ಜಿಲ್ಲೆಗೆ ಆಷ್ ಎಂಬ ಆಂಗ್ಲ ಅಧಿಕಾರಿ ಜಿಲ್ಲಾ ಮ್ಯಾಜಿಸ್ಟ್ರೇಟನಾಗಿದ್ದ. ವಾಂಚಿಯು ತನ್ನ ಗುರಿಯಾಗಿ ಆತನನ್ನು ಆಯ್ದ. ೧೯೧೧ರ ಜೂನ್ ೧೧ ರಂದು ಆಷ್ ಸಾಹೇಬ ರೇಲ್ವೆ ಗಾಡಿಯಲ್ಲಿ  ಪ್ರಯಾಣ ಹೊರಟ. ಮಣಿಯಾಡಿ ರೇಲ್ವೆ ಜಂಕ್ಷನ್ನಿನಲ್ಲಿ ರೈಲು ನಿಂತಿತ್ತು. ಆಷ್ ಕುಳಿತ್ತಿದ್ದ ಡಬ್ಬಿಗೆ ವಾಂಚಿಯು ನುಗ್ಗಿದ. ತನ್ನ ರಿವಾಲ್ವರನಿಂದ ಒಂದು ಗುಂಡನ್ನು ಹಾರಿಸಿ ಅವನನ್ನು ಮುಗಿಸಿದ.

ಪೋಲಿಸರ ಕೈಗೆ ಸಿಕ್ಕಿ ವಿಚಾರಣೆಗೆ ಗುರಿಯಾಗಿ ತನ್ನ ಒಡನಾಡಿಗಳನ್ನೆಲ್ಲ ಎಳೆದು ಚಿತ್ರಹಿಂಸೆಗೆ ಗುರಿಯಾಗಿ ಕೊನೆಗೆ ಫಾಸಿಗೆ ಏರುವುದಕ್ಕಿಂತ ತನ್ನ ಕೈಯಾರ ಪ್ರಾಣತ್ಯಾಗ ಮಾಡುವುದೇ ಮೇಲು ಎನ್ನಿಸಿತು. ತನ್ನ ಮೇಲೆ ಒಂದು ಗುಂಡು ಹಾರಿಸಿಕೊಂಡು ಆಸು ನೀಗಿದ.

ತಮಿಳುನಾಡಿನಲ್ಲಿ ನಡೆದ ಅಪರೂಪದ ರಾಜಕೀಯ ಹತ್ಯೆ ಇದು.

ಗಾಂಧೀಜಿಯ ಅಹಿಂಸಾ ಫಥದಲ್ಲಿ

೧೯೧೭ರಲ್ಲಿ ಗಾಂಧಿಜಿಯಿವರು ಪಾಂಡಿಚೇರಿಗೆ ಭೇಟಿ ನೀಡಿದಾಗ ಅಯ್ಯರ್ ಅವರು ಅವರೊಂದಿಗೆ ವಿಚಾರ ವಿನಿಮಯ ನಡೆಸಿದರು.  ಗಾಂಧೀಜಿ, ದೇಶದ ಸ್ವಾತಂತ್ರಕ್ಕಾಗಿ ಅಹಿಂಸೆಯಿಂದ ಹೋರಾಟ ನಡೆಸುವ ತತ್ವವನ್ನೂ ಮಾರ್ಗವನ್ನೂ ವಿವರಿಸಿದರು. ಅಯ್ಯರ್ ಅವರು ಗಾಂಧೀಜಿಯವರ ಅಹಿಂಸಾ ಮಾರ್ಗಕ್ಕೆ ಪರಿವರ್ತಿತರಾದರು. ರಚನಾತ್ಮಕ ಕಾರ್ಯಕ್ರಮಕ್ಕೆ ಕಂಕಣ ತೊಟ್ಟರು. ಆದರೆ ಅವರು ಬ್ರೀಟಿಷ ಆಡಳಿತದಲ್ಲಿದ್ದ ಭಾರತದ ಪ್ರದೇಶಗಳಿಗೆ ಕಾಲಿಡುವಂತಿರಲಿಲ್ಲ.

ಮೊದಲನೆಯ ಮಹಾಯುದ್ಧ ಮುಗಿದ ನಂತರ ೨೯೨೦ರಲ್ಲಿ ರಾಜಕೀಯ ಖೈದಿಗಳ ಬಿಡುಗಡೆಯಾಯಿತು. ತಪ್ಪಿಸಿಕೊಂಡಿದ್ದವರ ಮೇಲಿನ ವಾರಂಟುಗಳು ಹಿಂತೆಗೆದುಕೊಳ್ಳಲ್ಪಟ್ಟವು. ಆಗ ಅಯ್ಯರ್ ಮದರಾಸಿಗೆ ಬಂದು ನೆಲೆಸಿದರು. “ದೇಶಭಕ್ತನ್” ಎಂಬ ತಮಿಳು ದಿನಪತ್ರಿಕೆಗೆ ಸಂಪಾದಕರಾದರು. ೧೯೨೧೪ಲ್ಲಿ ಅಸಹಕಾರ ಚಳುವಳಿ ಆರಂಭವಾದಾಗ,  ಅವರು ಪತ್ರಿಕೆಯಲ್ಲಿ ಬರೆದ ಸಂಪಾದಕೀಯಗಳು, ಲೇಖನಗಳಿಂದಾಗಿ ರಾಜದ್ರೋಹದ ಆಪಾದನೆಗೆ ಗುರಿಯಾಗಿ ಒಂದು ವರ್ಷ ಕಾಲ ಸೆರೆವಾಸಕ್ಕೆ ಗುರಿಯಾದರು.

ಗುರುಕುಲಾಶ್ರಮ

ಸೆರೆವಾಸ ಮುಗಿದೊಡನೆಯೇ ತಿರುನಲ್ವೇಲಿ ಜಿಲ್ಲೆಯ ಶರ್ಮಾದೇವಿ ಎಂಬ ಊರಿನ ಪಕ್ಕದಲ್ಲಿಯೇ ಒಂದು ಗುರುಕುಲಾಶ್ರಮವನ್ನು ತೆರದರು. ಉತ್ತರ ಭಾರತದಲ್ಲಿ ಸ್ವಾಮಿ ಶ್ರದ್ಧಾನಂದರು ನಡೆಸುತ್ತಿದ್ದ ಗುರುಕುಲಾಶ್ರಮಗಳ ರೀತಿಯಲ್ಲಿ ಅದನ್ನು ವ್ಯವಸ್ಥೆಗೊಳಿಸಿದರು. ತಮಿಳುನಾಡಿನ ಜನರಲ್ಲಿ ಸಾಹಸ, ದೇಶಭಕ್ತಿ, ಧರ್ಮಶ್ರದ್ದೇಗಳನ್ನು ಪ್ರಚೋದಿಸಿ, ಅವರಲ್ಲಿ ಒಂದು ತಂಡವನ್ನಾದರೂ ಸಿಖ್ ಜನರಂತೆ ವೀರರನ್ನಾಗಿ ಪರಿವರ್ತಿಸಬೇಕೆಂಬುವುದೇ ಅಯ್ಯರ್ ಅವರ ಆಶಯವಾಗಿತ್ತು.

ಗಾಂಧೀಜಿ ಮತ್ತು ವಿ.ವಿ.ಎಸ್. ಅಯ್ಯರ್.

ತಿರುನೆಲ್ವೇಲಿಯಲ್ಲಿ ವಕೀಲರಾಗಿದ್ದ ಮಹಾದೇವಿ ಅಯ್ಯರ್ ಎಂಬ ದೇಶಭಕ್ತರು ಈ ಕಾರ್ಯದಲ್ಲಿ ವಿ.ವಿ.ವಿ.ಎಸ್. ಅಯ್ಯರ್ ರವರ ನೆರವಿಗೆ ನಿಂತರು. ಈ ಕಾರ್ಯಕ್ಕೆ ತಮಿಳುನಾಡು ಕಾಂಗ್ರೆಸ್ ಬೆಂಬಲ ನೀಡಿತ್ತು. ತಾನು ಏರ್ಪಡಿಸಿದ್ದ “ರಾಷ್ಟ್ರೀಯ ಶಿಕ್ಷಣ ನಿಧಿ” ಯಿಂದ ಹತ್ತು ಸಾವಿರ ರೂಪಾಯಿಗಳನ್ನು ನೀಡಲು ವಾಗ್ದಾನ ಮಾಡಿ, ಮೊದಲ ಕಂತಾಗಿ ಐದು ಸಾವಿರ ರೂಪಾಯಿಗಳನ್ನು ನೀಡಿತು. ಮಹಾದೇವ ಅಯ್ಯರ್, ಬರ್ಮಾ, ಮಲಯಾ ದೇಶಗಳಲ್ಲಿ ಪ್ರಚಾರ ಕಾರ್ಯ ಮಾಡಿ ಅಲ್ಲಿ ನೆಲೆಸಿದ್ದ ತಮಿಳುನಾಡಿನ ಚೆಟ್ಟಿಯಾರುಗಳಿಂದ ಇಪ್ಪತ್ತು ಸಾವಿರ ರೂಪಾಯಿಗಳನ್ನು ಕೂಡಿಸಿ ಅದನ್ನು ಬಡ್ಡಿ ಬರುವ ನಿಧಿಯಾಗಿ ಆ ಜನರಲ್ಲಿಯೇ ಮುಡುಪಾಗಿ  ಇಟ್ಟು ಬಂದರು.

ಅಶ್ರಮದಲ್ಲಿಯೇ ಒಂದು ಮುದ್ರಣಾಲಯವನ್ನು ಸ್ಥಾಪಿಸಿ ಅಯ್ಯರ್ ಅವರ ಸಂಪಾದಕತ್ವದಲ್ಲಿ “ಬಾಲ ಭಾರತಿ” ಎಂಬ ಮಕ್ಕಳ ಮಾಸಪತ್ರಿಕೆಯನ್ನು ಆರಂಭಿಸಿದರು. ಮಕ್ಕಳಿಗಾಗಿ ಒಂದು ಪುಸ್ತಕ ಮಾಲೆಯನ್ನು ಆರಂಭಿಸಿ ದೇಶಭಕ್ತರು, ಸಂತರ ಜೀವನ ಚರಿತ್ರೆಗಳನ್ನು ಪ್ರಕಟಿಸಲು ವ್ಯವಸ್ಥೆ ಮಾಡಿದರು. ಆ ಮಾಲೆಯಲ್ಲಿ ಮೊದಲ ಪುಸ್ತಕವಾಗಿ ಗುರು ಗೋವಿಂದ ಸಿಂಹನ ಜೀವನ ವೃತ್ತ ಪ್ರಕಟವಾಯಿತು.

ಆಶ್ರಮಕ್ಕೆ ಬಾಲಗ್ರಹ:

ಎರಡು ವರ್ಷ ಕಾಲ ಆಶ್ರಮ ನಡೆಯುವಷ್ಟರಲ್ಲಿ ಅದಕ್ಕೆ ಬಾಲಗ್ರಹ ಬಡಿಯಿತು. ಆಶ್ರಮದಲ್ಲಿ ವಿದ್ಯಾರ್ಥಿಗಳಾಗಿದ್ದ ಒಂದು ಜಾತಿಯ  ಕೆಲವು ಬಾಲಕರು ಇತರ ಜಾತಿಯ ವಿದ್ಯಾರ್ಥಿಗಳೊಂದಿಗೆ ಒಂದೇ ಪಂಕ್ತಿಯಲ್ಲಿ ಕುಳಿತು  ಊಟ ಮಾಡುವುದಿಲ್ಲವೆಂದರು.

ಅಯ್ಯರ್ ಅವರು ಈ ವಿಷಯದಲ್ಲಿ ಬಲವಂತ ಸಲ್ಲದೆಂದೂ ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡಬೇಕೆಂಬುವುದನ್ನು ತಾವು ಕಡ್ಡಾಯಗೊಳಿಸಲು ಸಿದ್ಧರಿಲ್ಲವೆಂದೂ ನಿರ್ಧಾರವಾಗಿ ಹೇಳಿಬಿಟ್ಟರು. ಜಾತಿ ಅಳಿಯಬೇಕು, ಎಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಬೇಕು ಎಂಬ ಅಭಿಪ್ರಾಯವು ಬಲಗೊಳ್ಳುತ್ತಿದ್ದ ಸಮಯದಲ್ಲಿ ಇದು ಕೋಲಾಹಲವನ್ನು ಎಬ್ಬಿಸಿತು.

ಇದರ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರುಗಳಲ್ಲಿ ವಿಫುಲವಾಗಿ ಚರ್ಚೆ ನಡೆಯಿತು. ಹಲವಾರು ಮುಂದಾಳುಗಳು ಆಶ್ರಮದ ವಿರುದ್ಧ ಕ್ರಮ  ನಡೆಸಬೇಕೆಂದು ಒತ್ತಾಯ ಮಾಡಿದರು. ಈ ವಿಚಾರ ಮಹಾತ್ಮಗಾಂಧಿಯವರಿಗೆ ಹೋಯಿತು. ಆವರು ಸಹಾ ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು, ಈ ಜಾತಿ ಆ ಜಾತಿ ಎಂಬ ಭಾವನೆ ಇರಬಾರದು, ಅದರೆ ಇದನ್ನು ಬಲವಂತದಿಂದ ಕಲಿಸಲು ಪ್ರಯತ್ನಿಸಬಾರದು, ಬುದ್ಧಿ ಹೇಳಿ ಮನಸ್ಸನ್ನು ತಿದ್ದಬೇಕು ಎಂದರು.

ಜಾತಿಯ ಭಾವನೆ ಬೆಳೆದು ಆಶ್ರಮದ ಹಣಕಾಸಿನ ಸ್ಥಿತಿ ಹೀನಗೊಂಡಿತು. ಕಾಂಗ್ರೆಸ್ ತಾನು ವಾಗ್ದಾನ ಮಾಡಿದ್ದಂತೆ ಹಣ ನೀಡದೇ ಈಗಾಗಲೇ ನೀಡಿದ್ದುದನ್ನು ಹಿಂತಿರುಗಿಸಬೇಕೆಂದು ಒತ್ತಾಯ ಮಾಡಿತು. ಬರ್ಮಾ, ಮಲಯಾ ದೇಶಗಳಿಂದ ಚೆಟ್ಟಿಯಾರರು ನೀಡುತ್ತಿದ್ದ ನೆರವೂ ನಿಂತಿತು. ವಿದ್ಯಾರ್ಥಿಗಳ ಸಂಖ್ಯೆಯೂ ಇಳಿದು ಹೋಯಿತು.

ಸಾವು ಸೆಳೆದುಕೊಂಡಿತು:

ಪರಿಸ್ಥಿತಿ ಹೀಗೆ ಬಿಗಡಾಯಿಸಿದಾಗ ಆಕಸ್ಮಿಕವೊಂದರಲ್ಲಿ ಅಯ್ಯರ್ ಅವರು ತೀರಿಕೊಂಡರು. ೧೯೨೫ರ ಜುಲೈ ೩ ರಂದು ಅವರು ತಮ್ಮ ಮಗಳೊಂದಿಗೆ ಪಾಪನಾಶಂ ತೀರ್ಥದಲ್ಲಿ ಸ್ನಾನ ಮಾಡಲು ಹೋಗಿದ್ರು. ಅಲ್ಲಿ ಸ್ನಾನ ಮಾಡುವಾಗ ಮಗಳು ಕಾಲು ಜಾರಿ ನೀರಿಗೆ ಬಿದ್ದಳು. ಅವಳನ್ನು ಕಾಪಾಡಲು ಮುಂದುವರೆದ ಅಯ್ಯರರು ಜಲಪಾತದ ಹೊಡೆತಕ್ಕೆ ಸಿಕ್ಕಿ ತೀರಿಕೊಂಡರು.

ಆಗ ಅಯ್ಯರ್ ಅವರಿಗೆ  ನಲವತ್ತನಾಲ್ಕೇ ವರ್ಷ ವಯಸ್ಸು. ಅವರು ಆರಂಭಿಸಿದ ಆಶ್ರಮವು ತೊಂದರೆಗಳಿಂದ ಪಾರಾಗಿ ನಿಲ್ಲಲು ಅವಕಾಶವೇ ಆಗಲಿಲ್ಲ. ಸ್ವಾತಂತ್ರದ ಕನಸು ಕಂಡು, ಅದರ ಸಾಧನೆಗಾಗಿ ಕಹಿ ಉಂಡು, ಹೋರಾಟದ ನಟ್ಟ ನಡುವೆ ಅವರು ತೀರಿಹೋದರು.

ಸಾಹಿತ್ಯ ಸಾಧನೆ:

ಅಯ್ಯರ್ ತಮಿಳು ಭಾಷೆಯಲ್ಲಿ ಉತ್ತಮ ಪಂಡಿತರು. ಇಂಗ್ಲೀಷ್, ಹಿಂದಿ, ಫ್ರೆಂಚ್, ಲ್ಯಾಟಿನ್-ಹೀಗೆ ಹಲವು ಭಾಷೆಗಳಲ್ಲಿ ಪರಿಣಿತರು. ಸಂಸ್ಕೃತದಲ್ಲಿ ವಿಶೇಷ ಜ್ಞಾನ ಉಳ್ಳವರು.

ಈ ಬಹುಭಾಷಾ ವಿದ್ವತ್ತನ್ನು ಬಳಸಿಕೊಂಡು ತಮಿಳು ಸಾಹಿತ್ಯದ ಸೊಬಗನ್ನು ಜಗತ್ತಿಗೆ ಪರಿಚಯ ಮಾಡಿಸಲು ಮುಂದಾದರು. ಪುರಾತನ ತಮಿಳುನಾಡಿನ ಮಹಾನ್ ಕೃತಿಯಾದ ತಿರುಕ್ಕುರಳನ್ನು ಇಂಗ್ಲೀಷ್‌ಗೆ ಭಾಷಾಂತರ ಮಾಡಿದರು. ಸಂಗಂ ಸಾಹಿತ್ಯದ ಅಪೂರ್ವ ಕೃತಿಗಳ ಕುರುಂ ತೊಗೈ ಎಂಬ ಸಂಗ್ರಹವನ್ನು ಇಂಗ್ಲೀಷಿಗೆ ಅನುವಾದ ಮಾಡಿದರು.

ಅಮೇರಿಕದ ಕವಿ ಎಮರ್ಸನರ ಕೃತಿಗಳನ್ನು ತಮಿಳಿಗೆ ತಂದರು. ನೆಪೋಲಿಯನ್, ಅಮೇರಿಕದ ಪ್ರಸಿದ್ಧ ನಿಗ್ರೋ ನಾಯಕ ಬೂಖರ್, ಟಿ.ವಾಷಿಂಗ್ಟನ್ ಮೊದಲಾದವರ  ಜೀವನ ವೃತ್ತಗಳನ್ನು ತಮಿಳಿನಲ್ಲಿ ಬರೆದರು.

ವನಸುಮ :

ಹೊರದೇಶದ ಸರಕಾರ ಇಲ್ಲಿ ಪ್ರಭುತ್ವ ನಡೆಸುತ್ತಿದ್ದಾಗ ಭಾರತಕ್ಕೆ ಬಿಡುಗಡೆ ತರಲು ಆಯುಧಗಳನ್ನು ಪರದೇಶಿಯರ ಸರಕಾರದ ವಿರುದ್ಧ ಉಪಯೋಗಿಸಬೇಕೆಂದು ಹಲವರು ನಂಬಿದ ಕಾಲ ಅದು. ಈ ದೇಶಕ್ಕೆ ಗುಲಾಮಗಿರಿ ತಂದಿದ್ದ ಆ ಹೊರಗಿನವರ ವಿರುದ್ಧ ಅಯುಧಗಳನ್ನು ಬಳಸಿದರು ಅಯ್ಯರ್ ಅವರು. ತಮ್ಮ ಕೆಲಸ, ಆಸ್ತಿ, ಯೋಗಕ್ಷೇಮ ಎಲ್ಲವನ್ನೂ ಕಡೆಗಣಿಸಿದರು. ದೇಶದಿಂದ ದೇಶಕ್ಕೆ ಓಡಾಡಿದರು. ಹಣ ಕಳೆದುಕೊಂಡರು. ಗಾಂಧಿಜಿಯ ಶಿಷ್ಯರಾಗಿ ಅಹಿಂಸೆಯ ಮಾರ್ಗವನ್ನು ಒಪ್ಪಿದರು. ಮತ್ತೇ ದೇಶಕ್ಕಾಗಿ ಹೋರಾಡಿ ಸೆರೆಮನೆ ಸೇರಿದರು.

ದೇಶ ಸೇವೆ ಎಂಬುವುದು ಒಂದು ಮಹಾನ್ ಯಜ್ಞ. ನೂರಾರು ವರ್ಷಕಾಲ ಪರಾಡಳಿತಕ್ಕೆ ಗುರಿಯಾದ ದೇಶವೊಂದು ಬಿಡುಗಡೆ ಪಡೆಯುವುದು ಅದಕ್ಕೆ ತಕ್ಕ ಪ್ರಮಾಣದಲ್ಲಿ ತ್ಯಾಗ ಮಾಡಿದಾಗ ಮಾತ್ರ. ಪ್ರತಿಫಲ ನಿರೀಕ್ಷಿಸದೇ ತ್ಯಾಗದಿಂದ ಈ ನಾಡಿಗೆ ಸಹಸ್ರಾರು ಮಂದಿ ದೇಶಭಕ್ತರು ರಕ್ತಾಭಿಷೇಕ ಮಾಡಿ ಸ್ವಾತಂತ್ರವನ್ನು ತಂದುಕೊಟ್ಟರು. ಅವರಲ್ಲಿ ಬಹುಮಂದಿ ಎಲೆ ಮರೆಯ ಕಾಯಿಗಳು; ವನಸುಮದಂತೆ ಯಾರ ಗಮನಕ್ಕೂ ಬಾರದೆ ಸೌರಭ ಬೀರಿದವರು. ಅಂತಹವರಲ್ಲಿ ಅಯ್ಯರ್ ಅಗ್ರ ಪಂಕ್ತಿಗೆ ಸೇರಿದವರು. ಅವರ ಸ್ಮರಣೆ ಚೈತನ್ಯದಾಯಿ.