ರಂಗನಾಥನ್‌ ಅವರ ಜನನ ೧೯೧೮ರಲ್ಲಿ ಬೆಂಗಳೂರಿನಲ್ಲಿ ಆಯಿತು. ಇವರ ತಂದೆ ಶ್ರೀ ವಿಶ್ವನಾಥ ಶಾಸ್ತ್ರಿಗಳು ವೈಣಿಕ ವಿದ್ವಾಂಸರು. ಆದರೆ ರಂಗನಾಥನ್‌ ಅವರ ಆಸಕ್ತಿ ಮೃದಂಗ ವಾದಕರಾಗುವುದಾಗಿತ್ತು. ತಿರುವಯ್ಯಾರ್ ಶಂಕರನಾರಾಯಣ ಭಾಗವತರ್ ಅಯ್ಯಾಮಣಿ ಅಯ್ಯರ್, ವಿ. ಶ್ರೀನಿವಾಸರಾವ್‌, ಪಂಡಮಂಗಲಂ ಕೃಷ್ಣಸ್ವಾಮಿ ಅಯ್ಯರ್ ಇವರುಗಳ ಶಿಕ್ಷಣದಲ್ಲಿ ಮೃದಂಗ ವಾದನ ಹಾಗೂ ಕೊನ್ನಕೋಲು ಹೇಳುವುದನ್ನು ಅಭ್ಯಾಸ ಮಾಡಿದರು. ಜೊತೆಗೆ ಖಂಜರಿ ವಾದನದಲ್ಲೂ ಪರಿಣತಿ ಪಡೆದರು.

ರಂಗನಾಥನ್‌ ಅವರ‍ ತಾತ ಮೈಸೂರು ಆಸ್ಥಾನ ವಿದ್ವಾಂಸರಾಗಿದ್ದ ಭಾರತಿ ಅಣ್ಣಯ್ಯನವರು. ಹೀಗೆ ಸಂಗೀತದ ಮನೆತನದಲ್ಲಿ ಜನಿಸಿ-ಬೆಳೆದಿದ್ದ ರಂಗನಾಥನ್‌ ಬಾಲ್ಯದಿಂದಲೂ ಭಜನೆ, ಹರಿಕಥೆಗಳಿಗೂ ಮೃದಂಗ ನುಡಿಸುವ ಅಭ್ಯಾಸ ಹೊಂದಿದ್ದರಿಂದ ಸುಶಿಕ್ಷಿತರಾದ ಬಳಿಕ ಎಂತಹ ಕಛೇರಿಗಳಲ್ಲಿಯೂ, ಎಂತಹ ವಿದ್ವಾಂಸರಿಗಾದರೂ ಪಕ್ಕವಾದ್ಯ ನುಡಿಸುವ ಯಶಸ್ವಿವಾದಕರಾದರು. ಟೈಗರ್ ವರದಾಚಾರ್ ಮತ್ತು ಕುಳಿತ್ತಲೈ ಕೃಷ್ಣಸ್ವಾಮಿ ಅವರ ಮಾರ್ಗದರ್ಶನವೂ ಹೆಚ್ಚಿನ ಸಾಮರ್ಥ್ಯ ನೀಡಿ ರಂಗನಾಥನ್‌ ಅತ್ಯಂತ ಉನ್ನತ ಮಟ್ಟದ ಮೃದಂಗ ವಾದಕರಾಗಿ ಕ್ಷೇತ್ರದಲ್ಲಿ ಮಾನ್ಯತೆ ಪಡೆಯಲು ಸಾಧ್ಯವಾಯಿತು. ಆಕಾಶವಾಣಿಯ ನಿಲಯದ ಕಲಾವಿದರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

‘ತಾಳ ವಾದ್ಯ ದುರಂಧರ’, ‘ತಾಳ ವಾದ್ಯ ಕಲಾನಿಧಿ’, ‘ಕಲಾನಿಧಿ’, ‘ಕರ್ನಾಟಕ ಕಲಾ ತಿಲಕ’ ಇತ್ಯಾದಿ ಪ್ರಶಸ್ತಿಗಳನ್ನು ಪಡೆದ ಇವರನ್ನು ಹಲವಾರು ಸಂಘ-ಸಂಸ್ಥೆಗಳೂ ಪುರಸ್ಕರಿಸಿವೆ.

ವಯೋವೃದ್ಧರೂ, ಜ್ಞಾನ ವೃದ್ಧರೂ ಆಗಿರುವ ರಂಗನಾಥನ್‌ ಅವರು ಈಗ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.