ವೀಣೆಯ ಬೆಡಗಿದು ಮೈಸೂರು ಎಂಬ ಕವಿವಾಣಿಗೆ ಸ್ಪೀರ್ತಿಯಾಗಿದ್ದವರು ವೈಣಿಕ ಶಿಖಾಮಣಿ ವೀಣೆ ಶೇಷಣ್ಣನವರು. ಇವರು ಮೈಸೂರು ವೀಣೆ ಬಾನಿಯ ಆದ್ಯ ಪ್ರವರ್ತಕರು. ಈ ಭವ್ಯ ಪರಂಪರೆಯ ಮೂರನೇ ತಲೆಮಾರಿಗೆ ಸೇರಿದವರು ವೈಣಿಕ ವಿದ್ವಾನ್‌ ವಿ. ವೆಂಕಟಸುಬ್ಬರಾವ್‌ ಅವರು. ಇವರು ೧.೧.೧೯೧೮ರಂದು ಹಾಸನದಲ್ಲಿ ಜನಿಸಿದರು. ವೀಣೆ ವೆಂಕಟ ಕೃಷ್ಣಪ್ಪ ಹಾಗೂ ಲಕ್ಷ್ಮೀದೇವಮ್ಮ ಇವರ ಹಿರಿಯ ಪುತ್ರರೇ ವೆಂಕಟಸುಬ್ಬರಾವ್‌. ಇವರ ಹಿಂದಿನ ಐದಾರು ತಲೆಮಾರೂ ವೈಣಿಕರದ್ದೇ. ತಂದೆ ವೆಂಕಟಕೃಷ್ಣಪ್ಪನವರು ಶೇಷಣ್ಣನವರ ಶಿಷ್ಯರು. ಶೇಷಣ್ಣನವರ ಪ್ರಮುಖ ಶಿಷ್ಯರಾದ ವೈಣಿಕ ಪ್ರವೀಣ ವೆಂಕಟಗಿರಿಯಪ್ಪನವರು ವೆಂಕಟಸುಬ್ಬರಾಯರ ಚಿಕ್ಕಪ್ಪಂದಿರು.

ವೆಂಕಟಸುಬ್ಬರಾಯರಿಗೆ ಮೂರನೇ ವಯಸ್ಸಿನಿಂದಲೇ ತಂದೆಯವರಿಂದ ವೀಣೆಯ ಶಿಕ್ಷಣ ಪ್ರಾರಂಭವಾಯಿತು. ಸಂಗೀತವೇ ಉಸಿರಾಗಿದ್ದ ವಾತಾವರಣದಲ್ಲಿ ಬಾಲಕನಿಗೆ ತಂದೆಯವರಿಂದ ಸಂಗೀತ ಕಠಿಣ ಶಿಕ್ಷಣ ಲಭ್ಯವಾಯಿತು. ಶಿಕ್ಷಣ ಸಾಧನೆ ಸಾಲದಾದಾಗ ಶಿಕ್ಷೆ ಕಾದಿರುತ್ತಿತ್ತು. ಸತತ ಸಾಧನೆ, ಸ್ವಯಂಪ್ರತಿಭೆ, ಹಿರಿಯರ ಸೂಕ್ತ ಮಾರ್ಗದರ್ಶನದಿಂದ ವೆಂಕಟಸುಬ್ಬರಾಯರು ಹತ್ತುವರುಷದ ಬಾಲಕನಾಗುವ ವೇಳೆಗೇ ಅವರಲ್ಲಿದ್ದ ವೈಣಿಕ ಪ್ರತಿಭೆ ವಿಕಸಿಸುತ್ತಿತ್ತು.

ಹದಿಹರೆಯದ ವೇಳೆಗೆ ಆಗಿನ ಮಹಾರಾಜರ ಮುಂದೆ ವೀಣೆ ನುಡಿಸಿ ತಮ್ಮ ಕಲಾಸಾಮರ್ಥ್ಯವನ್ನು ಹೊರಗೆಡಹಿದ್ದರು ವೆಂಕಟಸುಬ್ಬರಾಯರು.

ತಂದೆಯವರ ಶಿಕ್ಷಣದ ಜೊತೆಗೇ ಚಿಕ್ಕಪ್ಪನವರ ಮಾರ್ಗದರ್ಶನವೂ ಇವರಿಗೆ ಲಭ್ಯವಾಗುತ್ತಿತ್ತು. ಬೆಳಗಿನ ಝಾವ ನಾಲ್ಕುಗಂಟೆಗೆ ಸಾಧನೆ ಪ್ರಾರಂಭವಾದರೆ ಶಾಲೆಯ ಸಮಯವನ್ನು ಹೊರತುಪಡಿಸಿ ಉಳಿದೆಲ್ಲಾ ಸಮಯವೂ ಸಂಗೀತ ಸಾಧನೆಗೇ ಮೀಸಲಾಗಿರುತ್ತಿತ್ತು. ಆ ವಯಸ್ಸಿನ ಬಾಲಕರಿಗೆ ಸಹಜವಾದ ಯಾವುದೇ ಆಟಪಾಠಗಳಿಗೂ ಇವರಿಗೆ ಅವಕಾಶವಿರಲಿಲ್ಲೊ. ಮನೆಯ ಹಿರಿಯರೆಲ್ಲಾ ವೈಣಿಕರು. ಅದರೊಂದಿಗೆ ಸಂಗೀತ ದಿಗ್ಗಜಗಳೆನಿಸಿದ್ದ ಮುತ್ತಯ್ಯಭಾಗವತರ್ ಅವರಂಥ ವಿದ್ವಜ್ಜನರ ಸಂಪರ್ಕವೂ ಸೇರಿಕೊಂಡಿತ್ತು. ದೇಶದ ಪ್ರಖ್ಯಾತ ವೈಣಿಕ ಪಟು ಡಾ. ವಿ. ದೊರೆಸ್ವಾಮಿ ಐಯ್ಯಂಗಾರ್ ಅವರೂ ವೆಂಕಟಸುಬ್ಬರಾಯರ ಚಿಕ್ಕಂದಿನ ಒಡನಾಡಿ. ಒಡಹುಟ್ಟಿದ ಸಹೋದರರಾದ ವೆಂಕಟಕೃಷ್ಣ, ರಂಗಸ್ವಾಮಿ, ಅನಂತರಾಮು, ರಾಮಸ್ವಾಮಿ ಎಲ್ಲರೂ ಇವರೊಂದಿಗೆ ವೀಣೆ ಅಭ್ಯಾಸಮಾಡುತ್ತಿದ್ದರು.

ಹೀಗೆ ಹುಟ್ಟಿದಾಗಿನಿಂದ ಒಡನಾಡಿಯಾಗಿದ್ದ ಸಂಗೀತ ಇವರು ಮುಂದಿನ ವೃತ್ತಿ-ಪ್ರವೃತ್ತಿ ಜೀವನದಲ್ಲೂ ಬೆಸೆದುಕೊಂಡಿತು. ೧೯೪೨ರಲ್ಲಿ ಇವರು ಮೈಸೂರು ಆಕಾಶವಾಣಿಗೆ ನಿಲಯಕಲಾವಿದರಾಗಿ ನೇಮಕಗೊಂಡರು. ಅನಂತರ ಬೆಂಗಳೂರು ಆಕಾಶವಾಣಿಯಲ್ಲಿ ೧೯೭೮ರವರೆಗೂ ಸೇವೆಸಲ್ಲಿಸಿದರು.

ಇವರು ರಾಜ್ಯದ ಹಲವಾರು ಪ್ರತಿಷ್ಠಿತ ಸಂಗೀತ ಸಭೆಗಳಲ್ಲಿ ಕಾರ್ಯಕ್ರಮ ನೀಡಿದ್ದರಲ್ಲದೇ, ಮದರಾಸಿನ ಮ್ಯೂಸಿಕ್‌ ಅಕಾಡೆಮಿ, ನಾರದಗಾನಸಭಾ, ಶ್ರೀಕೃಷ್ಣಗಾನಸಭಾ, ತಿರುವಯ್ಯೂರಿನ ಸಂಗೀತೋತ್ಸವಗಳಲ್ಲಿ ಕಾರ್ಯಕ್ರಮ ನೀಡಿ ಜನ ಮನ್ನಣೆ ಪಡೆದಿದ್ದರು. ೧೯೮೩ರಲ್ಲಿ ಕರ್ನಾಟಕ ಗಾನಕಲಾ ಪರಿಷತ್ತಿನ ಅಧ್ಯಕ್ಷಪಟ್ಟ, ಕರ್ನಾಟಕ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ೧೯೮೭ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಹೊಯ್ಸಳ ಕರ್ನಾಟಕ ಸಂಘದ ಪುರಸ್ಕಾರ, ಇವು ಇವರಿಗೆ ಸಂದ ಸನ್ಮಾನಗಳು.

ಆಗಿನ ರಷ್ಯಾ ರಾಷ್ಟ್ರಾಧ್ಯಕ್ಷರ ಸಮ್ಮುಖದಲ್ಲಿ ಬೆಂಗಳೂರಿನ ಲಾಲ್‌ಬಾಗಿನಲ್ಲಿ ಹಲೀಂ ಜಾಫರ್ ಖಾನ್‌ ಅವರೊಂದಿಗೆ ಇವರು ನೀಡಿದ್ದ ಜುಗಲ್‌ಬಂದಿ ಕಾರ್ಯಕ್ರಮ ಕಲಾರಸಿಕರ ಮನಗೆದ್ದಿತು. ನಮ್ಮ ನಾಡಿನವರಲ್ಲದೇ ಅನೇಕ ವಿದೇಶೀ ಶಿಷ್ಯ ಪರಿವಾರವೂ ಇವರಿಗಿತ್ತು. ೧೯೮೮ರಲ್ಲಿ ಯೂರೋಪ್‌ ಪ್ರವಾಸಮಾಡಿ ಹಲವಾರು ಭಾಗಗಳಲ್ಲಿ ಕಾರ್ಯಕ್ರಮ ನೀಡಿದ್ದರು. ಪಾಶ್ಚಾತ್ಯ ಸಂಗೀತದಲ್ಲಿ ಇವರಿಗಿದ್ದ ಜ್ಞಾನ ಪಾಂಡಿತ್ಯಗಳೂ ಉಲ್ಲೇಖಾರ್ಹ. ಇವರಿಗೆ ಪಿಯಾನೋ ವಾದ್ಯ ಬಹಳ ಮೆಚ್ಚುಗೆಯಾಗುತ್ತಿತ್ತು. ಪಿಟೀಲನ್ನೂ ಚೆನ್ನಾಗಿ ನುಡಿಸಲು ಬಲ್ಲವರಾಗಿದ್ದ ವೆಂಕಟಸುಬ್ಬರಾಯರಿಗೆ ಲಂಡನ್‌ನ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನಿಂದ ಪ್ರಶಸ್ತಿ ಪತ್ರವೂ ಲಭಿಸಿತ್ತು.

ಇವರ ವೀಣಾವಾದನದ ಎರಡು ಧ್ವನಿಸುರುಳಿಗಳು ಬಿಡುಗಡೆಯಾಗಿದೆ. ಇವರ ಬಳಿ ಸುಮಾರು ಮುನ್ನೂರು ವರ್ಷಕ್ಕೂ ಹಿಂದಿನದಾದ ವೀಣೆ ಇತ್ತು. ದಂತದಲ್ಲಿ ಕೆತ್ತಿದ ಲಕ್ಷ್ಮೀ ಸರಸ್ವತಿಯರು ಇವರ ವಾದ್ಯವನ್ನಲಂಕರಿಸಿದ್ದರು. ವೆಂಕಟಸುಬ್ಬರಾಯರಲ್ಲಿ ಸಂಗೀತಕ್ಕೆ ಸಂಬಂಧಪಟ್ಟ ಮತ್ತೊಂದು ವಿಶೇಷ ಅರ್ಹತೆ ಇತ್ತು. ಅದೆಂದರೆ ತಮ್ಮ ವಾದ್ಯದ ರಿಪೇರಿಯನ್ನು ತಾವೇ ಮಾಡಿಕೊಳ್ಳುತ್ತಿದ್ದುದು. ಸಾಮಾನ್ಯವಾಗಿ ವೈಣಿಕರು ವಾದ್ಯದ ಸಣ್ಣಪುಟ್ಟ ರಿಪೇರಿಗಾಗಿ ಕೆಲವೊಮ್ಮೆ ಕಂಗೆಡುವಂಥ ಪರಿಸ್ಥಿತಿ ಎದುರಾಗುತ್ತದೆ. ಆದರೆ ವೀಣೆಯ ಬಗ್ಗೆ ಸರ್ವತೋಮುಖವಾದ ಜ್ಞಾನಹೊಂದಿದ್ದ ವೆಂಕಟಸುಬ್ಬರಾಯರಿಗೆ ಅಂಥ ಪರಿಸ್ಥಿತಿ ಎಂದೂ ಬರಲಿಲ್ಲ. ತಾವೇ ತಮ್ಮ ವಾದ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬಲ್ಲವರಾಗಿದ್ದರಲ್ಲದೇ ಅನೇಕ ಪ್ರಸಿದ್ಧ ಕಲಾವಿದರೂ ಅಪೇಕ್ಷೆ ಪಟ್ಟಾಗ ಅವರಿಂದ ಈ ಬಗ್ಗೆ ಸಲಹೆ, ಸಹಕಾರಗಳನ್ನು ಪಡೆಯುತ್ತಿದ್ದರು.

ವೆಂಕಟಸುಬ್ಬರಾಯರದು ಬಹಳ ವಿಶಿಷ್ಟವಾದ ವ್ಯಕ್ತಿತ್ವ. ಸರಳಜೀವಿಯಾಗಿದ್ದರೂ ಯಾವ ವಿಷಯಕ್ಕೂ ಸುಲಭವಾಗಿ ಮನಸ್ಸನ್ನು ಇಳಿಬಿಡದಂಥ ಗಟ್ಟಿ ವ್ಯಕ್ತಿತ್ವ ಇವರದು. ಮಿತಭಾಷಿ, ಸ್ವಾಭಿಮಾನಿ.

ಇವರು ತಮ್ಮ ವೃತ್ತಿ ಪ್ರವೃತ್ತಿಗಳಲ್ಲಾಗಲೀ, ಕೌಟುಂಬಿಕ ವಿಷಯಗಳಲ್ಲಾಗಲೀ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿರಲಿಲ್ಲ. ಆದರೂ ಕೌಟುಂಬಿಕ ಜೀವನದಲ್ಲಿ ಬಹಳ ನೆಮ್ಮದಿಯನ್ನು ಪಡೆದಿದ್ದರು. ೧೯೪೬ರಲ್ಲಿ ಇವರ ಕೈಹಿಡಿದ ಶ್ರೀಮತಿ ಶಾಂತಮ್ಮನವರು ನೆಮ್ಮದಿಯ ಬಾಳ್ವೆಗೆ ಪೂರ್ಣಸಹಕಾರ ನೀಡಿದ್ದರು. ಮಕ್ಕಳ ವಿದ್ಯೆ, ಪ್ರಗತಿ, ಉನ್ನತಿಗಳಿಂದಲೂ ಈ ದಂಪತಿಗಳಿಗೆ ಸಂತೃಪ್ತಿ ದೊರೆಯುತಿತ್ತು.

ವೆಂಕಟಸುಬ್ಬರಾಯರಿಗೆ ನಮ್ಮ ನಾಡು, ನುಡಿ, ಸಂಸ್ಕೃತಿ-ಪರಂಪರೆಗಳ ಬಗ್ಗೆ ಬಹಳ ಅಭಿಮಾನ, ಗೌರವ. ಮೈಸೂರು ವೀಣಾ ಬಾನಿಯ ಬಗ್ಗೆ ಬಹಳ ಶ್ರದ್ಧೆ ನಿಷ್ಠೆಯನ್ನು ಜೀವನಪರ್ಯಂತ ಕಾಪಾಡಿಕೊಂಡು ಬಂದ ಹಿರಿಯಚೇತನ ಇವರು. ಜನಪ್ರಿಯತೆಗಾಗಿ ಹಂಬಲಿಸಿದವರಲ್ಲ, ಪ್ರಶಸ್ತಿ ಪುರಸ್ಕಾರಗಳಿಗೆ ಹಲುಬಿದವರೂ ಅಲ್ಲ. ಬೇರೆ ರಾಜ್ಯದ ಅನೇಕ ಸುಪ್ರಸಿದ್ಧ ಕಲಾವಿದರು ಇವರನ್ನು ಹುಡುಕಿಕೊಂಡು ಬಂದು ಇವರ ವೀಣಾವಾದನವನ್ನು ಆಲಿಸಿ ಹೋಗುತ್ತಿದ್ದರಂತೆ.

ಶುದ್ಧಮನಸ್ಕರೂ, ನಿಷ್ಕಲ್ಮಶ ಹೃದಯಿಗಳೂ ಆಗಿದ್ದ ಇವರಿಗೆ ಎಷ್ಟೋವೇಳೆ ಮುಂದಾಗುವ ಘಟನೆಗಳ ಬಗ್ಗೆ ಮುನ್ಸೂಚನೆಗಳು ತಿಳಿಯುತ್ತಿದ್ದವಂತೆ. ಹೀಗಾಗಿ ಅನೇಕ ಜನಸಾಮಾನ್ಯರು ಇವರಿಂದ ಆಶೀರ್ವಾದ ಪಡೆಯಲು ಬರುತ್ತಿದ್ದರು. ಇಂತಹ ಅಪೂರ್ವ ವ್ಯಕ್ತಿತ್ವದ ಹಾಗೂ ಶೇಷಣ್ಣನವರ ಪರಂಪರೆಯ ಗಟ್ಟಿಕೊಂಡಿಯಂತಿದ್ದ ವೆಂಕಟಸುಬ್ಬರಾಯರು ೧೯೮೯ರಲ್ಲಿ ಇಹಲೋಕವನ್ನು ತ್ಯಜಿಸಿದರು.