ನೃತ್ಯ ಕಲೆಯ ಪ್ರದರ್ಶನಕ್ಕಾಗಿ ಕರ್ನಾಟಕದಿಂದ ಮೊಟ್ಟಮೊದಲು ವಿಶ್ವಪರ್ಯಟನ ಮಾಡಿದ ಹೆಗ್ಗಳಿಕೆ ಹಿರಿಯ ಕಲಾವಿದ ವಿ.ಸಿ. ಲೋಕಯ್ಯನವರಿಗೆ ಸಲ್ಲುತ್ತದೆ.

ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಶೈಲಿಯಲ್ಲಿ ಅಪಾರ ಪಾಂಡಿತ್ಯವನ್ನು ಸಂಪಾದಿಸಿದ ಈ ಕಲಾವಿದರಿಗೆ ಇಂದು ೭೨ ವರ್ಷ ವಯಸ್ಸಾಗಿದ್ದರೂ ಅವರ ಆಚಾರ-ವಿಚಾರಗಳಿಗೆ ಮುಪ್ಪು ಹಿಡಿದಿಲ್ಲ.

ಪಂದನಲ್ಲೂರು ಮೀನಾಕ್ಷಿ ಸುಂದರಂ ಪಿಳ್ಳೆಯವರ ಹಿರಿಯ ವಿದ್ಯಾರ್ಥಿಯಾಗಿ ಸುಧೀರ್ಘ ಕಾಲ ತಮ್ಮ ರಂಗ ಜೀವನವನ್ನು ಲೋಕಯ್ಯನವರು ಅರ್ಥಪೂರ್ಣವಾಗಿ ಕಳೆದಿದ್ದಾರೆ. ಈ ಅವಧಿಯಲ್ಲಿ ತಮಿಳು-ತೆಲುಗು ಚಲನಚಿತ್ರಗಳಲ್ಲಿ ಈ ಕಲಾವಿದರು ಅಭಿನಯಿಸಿದ್ದೂ ಉಂಟು.

ಕೇವಲ ರಂಗದ ಮೇಲೆ ರಂಗುರಂಗಿನ ಜೀವನದ ಬೆಡಗಿಗೇ ಮಾರುಹೋಗದೆ ನೃತ್ಯ ಕಲೆ ಜೀವಂತವಾಗಿರಬೇಕಾದರೆ ನಟುವಾಂಗದ ಕಲೆಯನ್ನೂ ಸಹ ಕರಗತ ಮಾಡಿಕೊಳ್ಳಬೇಕೆಂಬ ಅಭಿಲಾಷೆಯಿಂದ ತಾಳವನ್ನು ಹಿಡಿದು ನಟುವಾಂಗದ  ಜಗತ್ತಿನಲ್ಲಿ ಅಪರೂಪದ ಯಶಸ್ಸನ್ನು ಗಳಿಸಿದ್ದಾರೆ.

ನೃತ್ಯರಂಗದ ದಿಗ್ಗಜಗಳಾದ ರಾಂಗೋಪಾಲ್, ಮೃಣಾಲಿನಿ ಸಾರಾಬಾಯ್, ತಾರಾಚೌಧುರಿ, ಶಾಂತಾರಾವ್, ಇಂದ್ರಾಣಿ ರೆಹಮಾನ್, ಕೊರಡಾ ನರಸಿಂಹರಾವ್, ವೈಜಯಂತಿಮಾಲಾ ಮತ್ತು ಯು.ಎಸ್. ಕೃಷ್ಣರಾವ್ ಮುಂತಾದವರಿಗೆ ನಟುವಾಂಗದ ಸಹಕಾರ ನೀಡಿರುವ ಕೀರ್ತಿ ಇವರದು. ಇವರ ಶಿಷ್ಯವೃಂದದಲ್ಲೂ ಸಹ ಅನೇಕರು ನೃತ್ಯರಂಗದ ಕಣ್ಮಣಿಗಳಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೮೮-೮೯ನೇ ಸಾಲಿನ ಗೌರವ ಪ್ರಶಸ್ತಿ ಹಾಗು ’ಕರ್ನಾಟಕ ಕಲಾ ತಿಲಕ’ ಬಿರುದನ್ನು ನಾಟ್ಯಾಚಾರ್ಯ ವಿ.ಸಿ. ಲೋಕಯ್ಯನವರಿಗೆ ನೀಡಿ ಗೌರವಿಸಿದೆ.