ಕನ್ನಡದ ಹಿರಿಯ ಕವಿಗಳಲ್ಲಿ ವಿ. ಸೀತಾರಾಮಯ್ಯನವರು ಒಬ್ಬರು. ಇವರು ಬೆಂಗಳೂರು ಜಿಲ್ಲೆಯ ಬೂದಿಗೆರೆಯಲ್ಲಿ ೧೮೯೯ ಅಕ್ಟೋಬರ್ ೨ ರಂದು ಜನಿಸಿದರು. ಸಾಹಿತ್ಯವಲಯದಲ್ಲಿ ವಿ.ಸೀ. ಎಂದೇ ಪ್ರಸಿದ್ದರಾಗಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದರು. ಸಾಹಿತ್ಯದಲ್ಲಿನ ಆಸಕ್ತಿಯಿಂದಾಗಿ ಸರ್ಕಾರಿ ಇಲಾಖೆಯ ಹುದ್ದೆಯನ್ನು ತೊರೆದು ಮೈಸೂರಿನ ಶಾರದಾವಿಲಾಸ ಪ್ರೌಡ ಶಾಲೆಯಲ್ಲಿ ಉಪಾಧ್ಯಾಯರಾದರು. ಎ.ಆರ್.ಕೃಷ್ಣಶಾಸ್ತ್ರಿಗಳ ಅಬಿಲಾಷೆಯಿಂದಾಗಿ ಬೆಂಗಳೂರಿಗೆ ಬಂದು ಕಾಲೇಜಿನ ಕನ್ನಡ ಅಧ್ಯಾಪಕರಾದರು. ವಿದ್ವಾಂಸರು, ವಾಗ್ಮಿಗಳು, ಮತ್ತು ವಿಚಾರವಂತರು ಆಗಿದ್ದ ವಿ. ಸೀ. ಮೌಲ್ಯಯುತವಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಮೊದಲ ಕೃತಿ ಪಂಪಯಾತ್ರೆ, ಕನ್ನಡದ ಮೊದಲ ಪ್ರವಾಸಕಥನ. ಇವರ ಇವರ ಕವನ ಸಂಕಲನಗಳು ಗೀತಗಳು(೧೯೨೧), ದೀಪಗಳು, ನೆಳಲು ಬೆಳಕು, ದ್ರಾಕ್ಷಿ-ದಾಳಿಂಬೆ, ಹೆಜ್ಜೆಪಾಡು, ಕದಂಬ, ಅರಲುಬರಲು, ಹಗಲುಇರುಳು. ಇವರ ದ್ರಾಕ್ಷಿದಾಳಿಂಬೆ -ಸಂಕಲನದಲ್ಲಿ ಬೇಲೂರಿನ ಚನ್ನಕೇಶವ ದೇವಾಲಯದ ಬಗೆಗೆ ಕವಿ ಹೃದಯ ಮಿಡಿದಿದೆ.

ವಿ. ಸೀ ಯವರು ಲಲಿತ ಪ್ರಬಂಧಕಾರರಾಗಿ ತನ್ನ ಸ್ವಾನುಭವ ಮತ್ತು ಲೋಕಾನುಭವವನ್ನು ಭಾವಪೂರ್ಣಾವಾಗಿ ಅಬಿವ್ಯಕ್ತಿಸಿದ್ದಾರೆ. ಬೆಳದಿಂಗಳು (೧೯೫೯), ಸೀಕರಣೆ(೧೯೭೦), ಇವರ ಲಲಿತ ಪ್ರಬಂಧ ಸಂಕಲನಗಳು. ಈ ಸಂಕಲನಗಳಲ್ಲಿ ಪ್ರಸಿದ್ದವಾದ ಪ್ರಬಂಧಗಳು ಮೈಸೂರು ರುಮಾಲು, ಕಾಯಿಲೆಗಳು, ಬೆಳದಿಂಗಳು, ಮಳೆ, ಹೆಣ್ಣು, ಮದುವೆ, ಸಾವು. ಬೆಳದಿಂಗಳು-ಪ್ರಬಂಧದಲ್ಲಿ ಬೆಳದಿಂಗಳಿನ ಸ್ವರೂಪ, ತ್ಯಾಗದ ಪ್ರತೀಕನಾದ ಚಂದ್ರ, ಪ್ರಣಯಗಳ ಹಬ್ಬ, ಇವೆಲ್ಲವನ್ನು ನೇರವಾಗಿ ಪ್ರಸ್ತಾಪಿಸಿ ಬೆಳದಿಂಗಳಿಂದ ಆಗುವ ಪ್ರಯೋಜಗಳಂತೆ ಹಾನಿಗಳೂ ಆಗುತ್ತವೆನ್ನುತ್ತಾರೆ. ಬೆಳದಿಂಗಳಿಂದ ಕುರೂಪಿಯಾದ ಎಷ್ಟೋಮುಖಗಳು ಸುಂದರವಾಗಿ ಕಂಡು ಮೋಸಹೋಗುವುದುಂಟು ಎಂದು ಹಾಸ್ಯಮಾಡಿದ್ದಾರೆ.

ಸೊಹ್ರಾಬ್‌ರುಸ್ತುಂ, ಮತ್ತು ಆಗ್ರಹ, ಇವರ ನಾಟಕಗಳು. ಪಿರ್ದೂಷಿಯ ಶಹನಾಮ ಕಾವ್ಯದಲ್ಲಿ ಬರುವ ಸನ್ನವೇಶ ಒಂದನ್ನು ಆಧರಿಸಿ ಸೊಹ್ರಾಬ್ರುಸ್ತುಂ, ರಚಿತವಾಗಿದೆ. ಅದೇರೀತಿ ಮಹಾಭಾರತ ಸನ್ನಿವೇಶವೊಂದರ ನಾಟಕೀಯ ಚಿತ್ರಣ ಆಗ್ರಹ.

ಹಣಪ್ರಪಂಚ(೧೯೩೭), ಕೃತಿಯಲ್ಲಿ ವಿ. ಸೀ. ಯವರಿಗಿದ್ದ ಅರ್ಥಶಾಸ್ತ್ರದಲ್ಲಿನ ಆಳವಾದ ಜ್ಞಾನ ಮತ್ತು ಪ್ರತಿಭೆಗಳು ಮೈದಾಳಿವೆ. ಪಾಶ್ಚಾತ್ಯ ಕಲಾ ವಿಮರ್ಶಕರನ್ನು ಅಭ್ಯಸಿಸಿದ ಇವರು ಶಾಕುಂತಲ, ನಾಟಕಕ್ಕೆ ಬರೆದ ವಿಮರ್ಶೆ ಒಂದು ವಿಶಿಷ್ಟ ಕೃತಿಯಾಗಿದೆ. ಇಂಗ್ಲಿಷಿನಲ್ಲಿ ಬರೆದ ಕೃತಿಗಳಲ್ಲಿ-ಕವಿಪಂಪ, ಪುರಂದರದಾಸ, ಕೆ. ವೆಂಕಟಪ್ಪ ಪ್ರಮುಖವಾದವು. ಇವರ ಪ್ರಮುಖ ಅನುವಾದಗಳು-ಪಿಗ್ಮೇಲಿಯನ್, ರಿಸರ್ವ್‌ಬ್ಯಾಂಕ್‌ಕಾರ್ಯಕಲಾಪಗಳು, ಬಂಗಾಳೀ ಸಾಹಿತ್ಯಚರಿತ್ರೆ. ವಿ.ಸೀ ಯವರ ಇತರ ಪ್ರಮುಖ ಕೃತಿಗಳು-ಕವಿಕಾವ್ಯದೃಷ್ಟಿ, ಸಾಹಿತ್ಯ ವಿಮರ್ಶೆಯಲ್ಲಿ ಅರ್ಥಮತ್ತು ಮೌಲ್ಯ, ಮಹನೀಯರು. ಇವರ ಸಾಹಿತ್ಯ ಸೇವೆಗೆ ಸಂದ ಗೌರವ- ಪ್ರಶಸ್ತಿಗಳು- ಅರಲುಬರಲು ಕೃತಿಗೆ ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ, ೩೬ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನ ನೀಡಿ ಗೌರವಿಸಲಾಗಿದೆ. ವಿ.ಸೀ.ಯವರು ಕನ್ನಡದ ಸ್ಮರಣೀಯ ಲೇಖಕಲ್ಲಿ ಒಬ್ಬರು.