ಕ್ರಿ.ಪೂ. ಎರಡನೆಯ ಶತಮಾನಕ್ಕೂ ಪೂರ್ವದಲ್ಲಿ ವೈವಿಧ್ಯಮಯವಾದ ನರ್ತನ ಕ್ರಮವೊಂದು ಕರ್ನಾಟಕದ ಸಂಪ್ರದಾಯವಾಗಿದ್ದು, ಕನ್ನಡ ಕವಿ ಪೊನ್ನನು ಅದನ್ನು ಕೈಶಿಕಿ ವೃತ್ತಿಯೆಂದು ಹೆಸರಿಸಿದ್ದಾನೆ. ಕ್ರಿ.ಶ. ಎರಡನೆಯ ಶತಮಾನದಲ್ಲಿ ಚೇರ ರಾಜ ಶೆಂಗುಟ್ಟವನ್‌ ಎಂಬುವನು ಕನ್ನಡಿಗರ ವೈವಿಧ್ಯ ಪೂರ್ಣವಾದ ನರ್ತನವೊಂದನ್ನು ವೀಕ್ಷಿಸಿದನೆಂದು ಶಾಂತಿ ಪುರಾಣದಲ್ಲಿ ಉಲ್ಲೇಖವಾಗಿದೆ. ಅಂದೆ ಮೇಲೆ ಭರತಾಚಾರ್ಯನ ಕಾಲದಿಂದ ಕ್ರಿ.ಶ. ಹದಿನೇಳನೆಯ ಶತಮಾನದವರೆಗೂ, ಸುಮಾರು ಸಾವಿರದ ಆರುನೂರು ವರ್ಷಗಳವರೆಗೂ, ಏಕ ಪ್ರಕಾರವಾಗಿ, ದಕ್ಷಿಣ ಭಾರತದ ತಮಿಳುನಾಡು ಮತ್ತು ಆಂಧ್ರ ಪ್ರದೇಶದ ನೃತ್ಯ ಪ್ರಕಾರಗಳು ಸಹ ಕರ್ನಾಟಕ ನೃತ್ಯ ಸಂಪ್ರದಾಯದಿಂದಲೇ ಮಾರ್ಗದರ್ಶನ ಪಡೆದವು ಎಂದು ಘೋಷಿಸಿ, ಸಿದ್ಧಾಂತಿಸಿದ ಕೆಚ್ಚೆದೆಯ ನೃತ್ಯಾಚಾರ್ಯರೆಂದರೆ ಸುಬ್ರಹ್ಮಣ್ಯ ಕೌಶಿಕರು.

ಹಾಸನ ಜಿಲ್ಲೆಯ ಕೌಶಿಕ ಗ್ರಾಮದಲ್ಲಿ ಸೀತಮ್ಮ-ವೆಂಕಟನಾರಾಯಣಪ್ಪ ದಂಪತಿಗಳ ಪುತ್ರನಾಗಿ ೧೯೨೧ರಲ್ಲಿ ಜನಿಸಿದ ಕೌಶಿಕರು ವಾಮನ ಮೂರ್ತಿಯಂತೆ ಹೆಣೆಗೆ ವಿಭೂತಿ ಧರಿಸಿ, ನೃತ್ಯಕಲೆಯು ವೇದ, ಸಂಗೀತ ಹಾಗೂ ಯೋಗಗಳ ಸಮ್ಮಿಳನ ಎಂದು ನಿರರ್ಗಳವಾಗಿ, ತಾರ್ಕಿಕವಾಗಿ ತಾಸುಗಟ್ಟಲೆ ಭಾಷಣ ಬಿಗಿಯತ್ತಿದ್ದವರು. ಬಾಲ್ಯದಿಂದಲೂ ಶಾಲಾ ವಿದ್ಯಾಭ್ಯಾಸಕ್ಕಿಂತ, ಸಂಗೀತಾಭ್ಯಾಸಕ್ಕೇ ಮಾರುಹೋಗಿ, ತನ್ನ ಬಡತನದ ಬೇಗೆಯನ್ನು ಲಕ್ಷಿಸದೆ, ಕಲಾ ಪ್ರಪಂಚ ಪ್ರವೇಶಿಸಿದವರು.

ಗುಬ್ಬಿನಾಟಕ ಕಂಪನಿಯ ಪಿಟೀಲು ವಾದ್ಯಗಾರ ಚಿನ್ನಯ್ಯನವರಲ್ಲಿ ಶಿಷ್ಯವೃತ್ತಿಮಾಡಿ, ಸಂಗೀತದಲ್ಲಿ ಸಾಕಷ್ಟು ಪಾಂಡಿತ್ಯ ಪಡೆದ ಕೌಶಿಕರು, ಅಷ್ಟಕ್ಕೇ ತೃಪ್ತರಾಗದೆ, ನೃತ್ಯಕಲೆಯೆಡೆಗೆ ದಾಪುಗಾಲು ಹಾಕಿದರು. ಕಲೆಗಳ ಉನ್ನತಿ ಅವನತಿಗಳು ರಾಜಕೀಯ ಬದಲಾವಣೆಗಳನ್ನವಲಂಬಿಸಿದೆಯೆನ್ನುವುದಕ್ಕೆ ಮೈಸೂರು ಶೈಲಿಯ ಭರತನಾಟ್ಯದ ಏಳು-ಬೀಳುಗಳೇ ಸಾಕ್ಷಿಯಾಗಿದೆ. ವಿಜಯನಗರ ಸಾಮ್ರಾಜ್ಯ ಪತನಾನಂತರ, ಅಲ್ಲಿದ್ದ ಅನೇಕ ನೃತ್ಯಾಚಾರ್ಯರೂ ನೃತ್ಯ-ಪಟುಗಳೂ, ಮೈಸೂರು ಆಸ್ಥಾನದ ಆಶ್ರಯ ಪಡೆದು, ಮೈಸೂರು ಶೈಲಿಯ ಭರತನಾಟ್ಯ ರೂಪಿಸಿ ಅದನ್ನು ಉಚ್ಛ್ರಾಯ ಸ್ಥಿತಿಗೆ ತಂದರು. ಆದರೆ ಯದುವಂಶದ ಆಳ್ವಿಕೆ ಕೊನೆಗೊಂಡು, ದೇವದಾಸೀ ಪದ್ಧತಿ ನಿರ್ಮೂಲನ ಕಾನೂನು ಜಾರಿಗೆ ಬಂದಾಗಿನಿಂದ, ವಿಷಮ ಕಾಲ ಆರಂಭವಾಗಿ, ಆಸ್ಥಾನದಲ್ಲಿದ್ದ ಬಹುತೇಕ ನೃತ್ಯ ಪಟುಗಳು ನೃತ್ಯಾಚಾರ್ಯರೂ ದಿಕ್ಕುಗೆಟ್ಟು ಕಲಾಪ್ರಪಂಚದಿಂದಲೇ ನಿರ್ಗಮಿಸಲಾರಂಭಿಸಿದರು. ಸುಸಂಸ್ಕೃತರು ಈ ಕಲೆಯ ಬಗ್ಗೆ ಪೂರ್ವದೂಷಿತ-ಉದಾಸೀನ ಧೋರಣೆ ತಳೆದುದು ಈ ಕಲೆಗೆ ಅಸ್ಪೃಶ್ಯತೆಯ ಸೋಂಕು ತಗುಲಿತೆನ್ನಬಹುದು. ಇಂತಹ ಇಕ್ಕಟ್ಟಿನ ಸಮಯದಲ್ಲೇ ವೇದವಿತ್ತರೂ, ಸುಸಂಸ್ಕೃತರೂ ಆಗಿದ್ದ ಕೌಶಿಕರು ಈ ಕಲೆಯ ಪುನರುತ್ಥಾನಕ್ಕೆ ಕಂಕಣತೊಟ್ಟಿದ್ದು ಕನ್ನಡ ನಾಡಿನ ಸುದೈವ. ಗುಬ್ಬಿ ಕಂಪನಿಯಲ್ಲಿ ನೃತ್ಯಗಾತಿಯಾಗಿದ್ದ ನಂಜನಗೂಡು ರಾಜಮ್ಮ (ನಾಟ್ಯಾಚಾರ್ಯ ಮೈಸೂರು ದಾಸಪ್ಪನವರ ಶಿಷ್ಯೆ) ನವರ ನೃತ್ಯ ಶೈಲಿಗೆ ಮಾರುಹೋಗಿ ಅವರ ನೃತ್ಯದಲ್ಲಿ ಪ್ರಕಾಶಗೊಳ್ಳುತ್ತಿದ್ದ ಹಸ್ತಗಳು, ನೃತ್ಯ ಜೋಡಣೆ ಹಾಗೂ ಭಕ್ತಿ ಭಾವಗಳನ್ನು ಅಪಾರವಾಗಿ ಮೆಚ್ಚಿದ ಕೌಶಿಕರು ಈ ವಿಶಿಷ್ಠ ಶೈಲಿಯನ್ನೇ ತಮ್ಮ ಕಲಾಸಾಧನೆಗೆ ಆಧಾರವಾಗಿಸಿಕೊಂಡು, ಆ ನಂತರ ಆ ಕಂಪೆನಿಯಲ್ಲೇ ಹಲವು ಕಾಲ ನೃತ್ಯಾಚಾರ್ಯರಾಗಿ ಸೇವೆ ಸಲ್ಲಿಸಿದರು. ಜೊತೆಗೆ ಸೋಹನ್‌ಲಾಲ್‌ರವರ ಬಳಿ ಕಥಕ್‌ ನೃತ್ಯ ಕಲಿತು, ಸ್ವಂತ ಸಾಧನೆಯಿಂದ ನೃತ್ಯ ಪ್ರಾವೀಣ್ಯತೆಯ ಚೌಕಟ್ಟನ್ನು ಹಿಗ್ಗಿಸಿಕೊಂಡರು. ಭರತ ನಾಟ್ಯದಲ್ಲಿನ ಸತ್ವದ ಬಗ್ಗೆ ಆಳವಾಗಿ ಅಭ್ಯಾಸಿಸಿ, ಸಂಸ್ಕೃತ ಭಾಷೆಯನ್ನು ಕಲಿತು, ನಾಟ್ಯಶಾಸ್ತ್ರದ ಆಧಾರ ಗ್ರಂಥಗಳನ್ನಲ್ಲದೆ ವೇದ ಉಪನಿಸತ್‌ಗಳ ಅಧ್ಯಯನ ಮಾಡಿದರು. ಕಲೆ-ಮತ್ತು-ಕಲಾವಿದ ಪರಿಮಳಿಸಲು ಆಂಗ್ಲಭಾಷೆಯ ಮಾಧ್ಯಮದ ಅಗತ್ಯತೆಯನ್ನು ಅರಿತು, ಅದನ್ನೂ ಕರಗತ ಮಾಡಿಕೊಂಡರು.

ಹೀಗೆ ತನ್ನ ಜ್ಞಾನಸಂಪತ್ತು ಮೇಧಾ ಶಕ್ತಿಗಳನ್ನು ವೃದ್ಧಿಸಿಕೊಂಡ ಕೌಶಿಕರು, ನಾಟಕ ಕಂಪನಿಗಳನ್ನು ತೊರೆದು ನಾಟ್ಯಾಚಾರ್ಯರಾಗಿ ಸುಮಾರು ಮೂರು ದಶಕಗಳ ಕಾಲ ವಿಜೃಂಭಿಸಿದರು. ತಾವು ೧೯೪೬ರಲ್ಲಿ ಸ್ಥಾಪಿಸಿದ ಸನಾತನ ಕಲಾಕ್ಷೇತ್ರ ಸಂಸ್ಥೆಯಡಿಯಲ್ಲಿ ಅಪಾಋ ಶಿಷ್ಯವೃಂದವನ್ನೇ ಬೆಳೆಸಿದರು. ಸೃಜನ ಶೀಲತೆಯಿಂದ ಹಳೆಯದರಲ್ಲಿ ಹೊಸತನ್ನು ಸೃಷ್ಟಿಸುವುದು ಅವರ ನೃತ್ಯಕಾರ್ಯಕ್ರಮಗಳ ವೈಶಿಷ್ಟ್ಯತೆ. ಕರ್ನಾಟಕ ಸಂಗೀತದ ದಿಗ್ಗಜರಾದ ತ್ಯಾಗರಾಜರ, ಮುತ್ತುಸ್ವಾಮಿ ದೀಕ್ಷಿತರ, ಸ್ವಾತಿ ತಿರುನಾಳರ ಕೃತಿಗಳ ನೃತ್ಯ ಸಂಯೋಜನೆಗಳಿಂದ ರಸಿಕ ವೃಂದದ ಮೆಚ್ಚುಗೆ ಗಳಿಸಿದರು. ವೇದಾಂತ ದೇಶಿಕರ ಸಂಕಲ್ಪ ಸೂರ್ಯೋದಯವನ್ನು ಆಧಾರವಾಗಿರಿಸಿಕೊಂಡು ಶ್ರೀ ರಾಮಕಥಾ ಚೂರ್ಣಿಕೆ, ಅಲ್ಲದೆ ಪ್ರಪ್ರಥಮವಾಗಿ ಕನ್ನಡದ ಡಿ.ವಿ. ಗುಂಡಪ್ಪನವರ ಅನ್ತಃಪುರ ಗೀತೆಗಳ ನೃತ್ಯ ಅವತರಿಣಿಕೆಗಳು, ಕಲಾಪ್ರೇಮಿಗಳಿಗೆ ನೃತ್ಯನಾವೀನ್ಯತೆಯ ಸೊಗಡನ್ನು ಕೊಟ್ಟವು. ಅವರ ಕನ್ನಡ ದೇವರ ನಾಮಗಳ ನೃತ್ಯ ಸಂಯೋಜನೆಗಳು, ಕರ್ನಾಟಕದ ಸೀಮೋಲ್ಲಂಘನ ಮಾಡಿ, ತಮಿಳುನಾಡಿನ ರಸಿಕರ ಅಪಾರ ಪ್ರಶಂಸೆಗೆ ಪಾತ್ರವಾಯಿತು. ಶಿಷ್ಯವೃಂದದೊಂದಿಗೆ ಉತ್ತರ ಭಾರತದ ಪ್ರವಾಸ ಕೈಗೊಂಡು ದೆಹಲಿ-ಮುಂಬಯಿನಗರಗಳಲ್ಲಿ ಕರ್ನಾಟಕದ ನೃತ್ಯಕಲೆಯ ಜಯಭೇರಿ ಬಾರಿಸಿದ ಕೀರ್ತಿ ಕೌಶಿಕರದು.

ದೈವದತ್ತವಾದ ಭರತನಾಟ್ಯ ಕಲೆಗಿರುವ ಆಧ್ಯಾತ್ಮದ ಹಿನ್ನಲೆ-ವೈಜ್ಞಾನಿಕವೆಂದೂ ಶಾಸ್ತ್ರೀಯವೆಂದು ವಾಗ್ವೈಖರಿಯಿಂದ ನಿರೂಪಿಸಿದರೆ ಸಾಲದೆಂಬ ಅಭಿಪ್ರಾಯಕ್ಕೆ ಬಂದ ಕೌಶಿಕರು ನೃತ್ಯ ಶಿಕ್ಷಣದಲ್ಲಿ ತಮ್ಮ ಸಿದ್ಧಾಂತಗಳನ್ನು ಅಡಕಮಾಡಿ, ಪ್ರತ್ಯಕ್ಷ ಪ್ರಮಾಣಗಳನ್ನು ಅನುಷ್ಠಾನಕ್ಕೆ ತಂದರು.  ಕಠಿಣ ನೃತ್ಯಾಭ್ಯಾಸದೊಂದಿಗೆ, ಶಾಸ್ತ್ರಾಧ್ಯಯನ ಮತ್ತು ಆಯುರ್ವೇದದ ಶಾಸ್ತ್ರದಂತೆ ಆಹಾರ, ನೃತ್ಯ ಭಂಗಿಗಳಿಗೆ ತತ್ಸಮಾನವಾದ ಯೋಗಾಸನಗಳನ್ನು ಅಳವಡಿಸಿ, ಸಮಗ್ರ ನೃತ್ಯಶಿಕ್ಣ ನೀಡುತ್ತಿದ್ದುದು ಆಚಾರ್ಯರ ಶಿಕ್ಷಣ ವೈಶಿಷ್ಟ್ಯತೆ. ನೃತ್ಯಕಲೆಯ ಹಿನ್ನಲೆ-ಸತ್ವಗಳನ್ನು ಅರಿಯದೇ ಅದು ಕೇವಲ ಮನೋರಂಜನೆಯ ಸಾಧನವಾಗಿ ಕಾಣುವ ಹಗುರ ಮನೋಭಾವದವರು ಅವರ ಬಳಿ ಸುಳಿಯಲೂ ಸಾಧ್ಯವಿರಲಿಲ್ಲ. ಕಠಿಣವಾದ ಕಲಾ ನಿಷ್ಠೆಗೆ ಅವರದು ಯಾವಾಗಲೂ ಅಗ್ರಸ್ಥಾನವಿತ್ತು. ಮೈಸೂರು ದಾಸಪ್ಪನವರ ಪರಂಪರೆ ಬೆಳೆಯಲು ಬೀಜಾಂಕಪ್ರಾಯರಾಗಿ ಕರ್ನಾಟಕ ನೃತ್ಯಕಲೆಯ ಕಾಯಕಲ್ಪಕ್ಕೆ ಕಾರಣರಾದರು.

ನೃತ್ಯ ಸಂಗೀತ ಕಲೆಗಳ ಪುರೋಭಿವೃದ್ಧಿಗಳ ಬಗ್ಗೆಯೇ ಚಿಂತನೆ ಮಾಡುತ್ತಿದ್ದ ಕೌಶಿಕರು ಹೊಸದೊಂದು ಗುರಿಯನ್ನು ಕಂಡುಕೊಂಡರು. ನಾಟ್ಯಶಾಸ್ತ್ರದಲ್ಲಿ ವರ್ಣಿತವಾದ ಸಭಾಂಗಣ; ರಂಗಮಂಟಪಗಳ ತದ್ರೂಪವನ್ನು ನಿರ್ಮಿಸುವ ನಿರ್ಧಾರಕ್ಕೆ ಬಂದರು. ಇದಕ್ಕೆ ಬೇಕಾದ ಮೂಲಧನ, ತಾಂತ್ರಿಕ ನಿಪುಣರ ಸಹಾಯ-ಸಹಕಾರಗಳನ್ನು ಕ್ರೋಢೀಕರಿಸಿ ನಿರ್ಮಾಣ ಆರಂಭಿಸಿಯೇ ಬಿಟ್ಟರು.

ಸುಮಾರು ಐದು ವರ್ಷಗಳ ಕಾಲ ಅಹರ್ನಿಶಿ ಶ್ರಮಿಸಿ ಬೆಂಗಳೂರಿನ ಜಯನಗರದಲ್ಲಿ ‘ಕನಕಸಭಾ’ ರಂಗ ಮಂಟಪ ಪೂರ್ಣಗೊಳಿಸಿ, ಜನರಲ್‌ ಕಾರಿಯಪ್ಪನವರಿಂದ ಸಾಹಸಸಿಂಹ ನೆಂಬ ಶಾಭಾಷ್‌ಗಿರಿಯನ್ನೂ ಪಡೆದರು. ಕನಕಸಭೆಯ ಪ್ರವೇಶ ದ್ವಾರದಲ್ಲಿ ಚಿತ್ರಿಸಿರುವ ನೃತ್ಯ ಮುದ್ರ ಪ್ರಭಾವಳಿ, ಹಾಗೂ ಇದರ ಚೌಕಟ್ಟಿನಲ್ಲಿ ಚಿತ್ರಿಸಿರುವ ಅಮೃತ ಮಂಥನದ ಕಥಾನಿರೂಪಣೆ, ಭವ್ಯ ಸ್ವಾಗತ ಕೋರುತ್ತವೆ. ರಂಗ ಮಂಟಪದ ಒಳಗಡೆ ತಾಳೆಗರಿಯ ತದ್ರೂಪದಂತಿರುವ ನಾಟ್ಯಶಾಸ್ತ್ರದ ಆಯ್ದ ಶ್ಲೋಕಗಳು, ಕರಣಗಳ ಕೆತ್ತನೆ, ನೃತ್ಯಾಭ್ಯಾಸಿಗಳಿಗೆ ನೃತ್ಯ ಪಟುಗಳ ಕಣ್ಣಿಗೆ ಹಬ್ಬವನ್ನೂ-ಮನಸ್ಸಿಗೆ ನಾಟ್ಯ ಪರಿಸರವನ್ನು ಕೊಡುವ ಉತ್ತಮ ಸಾಧನವಾಗಿದೆ. ನಾಟ್ಯಾಭ್ಯಾಸಿಗಳಿಗೆ, ಎಂತಹ ಪರಿಸರ ಸೃಷ್ಟಿ?-ಭಾವಿಸಿ.

 

ಕೌಶಿಕರು ನಾಟ್ಯ ಶಾಸ್ತ್ರದಲ್ಲಿಯೂ , ಕಲೆಯಲ್ಲಿಯೂ ಸಿದ್ಧಹಸ್ತರಾಗಿದ್ದವರು. ಅವರಿಗಿದ್ದ ಖಚಿತ ಶಾಸ್ತ್ರ ಪ್ರಜ್ಞೆ ಕಲೆಯಲ್ಲಿನ ಅಪಾರ ಪರಿಶ್ರಮ ಮತ್ತು ತಾರ್ಕಿಕ ಸಂಪತ್ತಿನ ಧೃಡ ವಿಶ್ವಾಸದ ಫಲವೇ ಅವರು ಕೈಗೊಂಡ ಸಂಶೋಧನೆಗಳಿಗೆ ಒತ್ತಾಸೆಯಾಯಿತು. ನೃತ್ಯ ಕಾರ್ಯಕ್ರಮಗಳ ಪಟ್ಟಿಯಲ್ಲಿ ಪ್ರೌಢಿಮೆಗೆ ನಿದರ್ಶನವಾದ ರಾಗ ತಾನ ಪಲ್ಲವಿಯು ಸೇರದೇ ಪ್ರತ್ಯೇಕವಾಗಿ ಉಳಿದಿದ್ದ ಬಗ್ಗೆ ಗಾಢವಾದ ಚಿಂತನೆ, ತಾರ್ಕಿಕ ವಿಮರ್ಶೆ ಮತ್ತು ಪ್ರಯೋಗ ಪರಿಶ್ರಮಗಳಿಂದ ಪ್ರದರ್ಶಿತವಾದ ನೃತ್ಯ ಸಂಪ್ರದಾಯದಲ್ಲಿ ಪಲ್ಲವಿ ನೃತ್ಯ ಜೋಡಣೆಯು ವಿದ್ವಾಂಸರ ವಿಮರ್ಶಕರ ಹಾಗೂ ತಜ್ಞರ ಪ್ರಶಂಸೆ ಪಡೆಯಿತು.

 

ಭರತನಾಟ್ಯದ ವೈದಿಕ ಹಿನ್ನೆಲೆಯನ್ನು ಯೋಗದ ತಾತ್ಪರ್ಯವನ್ನೂ ವಿವರಿಸಿ ಭಾಷಣ ಸರಮಾಲೆಗಳ ಮೂಲಕ ಭರತನಾಟ್ಯವು ವಿಲಾಸಿಗಳಿಗೆ ಮೀಸಲಾದ ಕಲೆಯಲ್ಲವೆಂದು ಸಿದ್ಧಾಂತಿಸಿದರು.

ಭರತನಾಟ್ಯ ಪ್ರದರ್ಶನ ಪ್ರಣಾಳಿಕೆಯ ಪ್ರತ್ಯಂಗಕ್ಕೂ ಅಧ್ಯಾತ್ಮಿಕವಾದ ಅಂತರಾರ್ಥವಿದೆಯೆಂದು ಪ್ರತಿಪಾದಿಸುವ ಮೂಲೋದ್ದೇದಿಂದಲೇ ರಚಿಸಿದ “ಭರತನಾಟ್ಯ ದಿಗ್ದರ್ಶನ”ವು ಕೌಶಿಕರ ಸಾಧನೆಯ ಫಲವಾಗಿದೆ. ಅನ್ಯನಾಟ್ಯ ಗ್ರಂಥಗಳಲ್ಲಿ ಲಭ್ಯವಿಲ್ಲದ ಆದರೆ ನಾಟ್ಯ ಪ್ರದರ್ಶನಕ್ಕೆ ತುಂಬ ಸಂಗತವಾದ ಹಲವಾರು ತಾಂತ್ರಿಕ ವಿಷಯಗಳನ್ನು ರಂಗಮಂದಿರ, ನರ್ತನ ಯೋಜನೆ, ಬೆಳಕಿನ ಪ್ರಸರಣ, ವರ್ಣ ದ್ರವ್ಯಗಳ ಆವರಣ, ವಿಕ್ಷೇಪ ಮತ್ತು ಗಹನವಾಗಿಯೇ ಉಳಿದಿದ್ದ ನಾಟ್ಯ ಯೋಗ, ನಾಟ್ಯ ಕರ್ಮ, ನಾಟ್ಯ ಶಿಲ್ಪ ಇವುಗಳ ಸಂಬಂಧವನ್ನು ಚಿತ್ರಗಳ ಮೂಲಕ ವಿವರಿಸಿ, ಆರ್ಷೇಯ ನಾಟ್ಯ ವಿದ್ವಾಂಸರ ಇಂಗಿತವನ್ನು ಸಿದ್ಧಾಂತಿಸಿ ತರುಣ ಬುದ್ಧಿ ಜೀಔಇಗಳ ಸಂಶೋಧನೆಗೆ ನೆರವಾಗಬಲ್ಲ ಸ್ವತಂತ್ರ ಗ್ರಂಥ. ಈ ಮಹಾಗ್ರಂಥವು ಕನ್ನಡದಲ್ಲಿದ್ದು ಇಂದಿಗೂ ನಾಟ್ಯಾಚಾರ್ಯರ; ನಾಟ್ಯಾಭ್ಯಾಸಿಗಳ, ಏಕೈಕ ಕೈಪಿಡಿಯಾಗಿದೆ.

ನೃತ್ಯ ಕಲೆಯು ಕರ್ನಾಟಕದಲ್ಲಿ ಗೌರವದಿಂದ ಪ್ರಗತಿ ಕಾಣಬೇಕು; ನಮ್ಮ ಜನರಿಂದ ಹಾಗೂ ಹೊರಗಿನ ಜನರಿಂದ ಸನ್ಮಾನಿಸಲ್ಪಡಬೇಕು, ಕಲಾವಿದರ ಬದುಕು ಹಸನಾಗಿ ಅವರು ಭಾರತೀಯ ಸಂಸ್ಕೃತಿಯ ಪ್ರತಿನಿಧಿಗಳಂತೆ ರಾಷ್ಟ್ರ ಪ್ರಜ್ಞೆಯುಳ್ಳವರಾಗಬೇಕು ಎಂಬ ಸಂದೇಶವನ್ನು ವಿಶ್ವ ಕನ್ನಡ ಸಮ್ಮೇಳನದಲ್ಲಿ ಸಾರುವ ಮೊದಲೇ ತಮ್ಮ ಲ೬೨ನೇ ವಯಸ್ಸಿನಲ್ಲಿ ದಿನಾಂಕ ೨೭.೨.೧೯೮೩ ರಂದು ಹೃದಯಾಘಾತದಿಂದ ಮರೆಯಾದದ್ದು, ಕರ್ನಾಟಕ ನೃತ್ಯ ಪ್ರಕಾರ ರೂಪಿಸಲು ಬೀಜಾಂಕಪ್ರಾಯರಾಗಿದ್ದ ಗುರುವರ್ಯ ಸುಬ್ರಹ್ಮಣ್ಯ ಕೌಶಿಕರನ್ನು ಕನ್ನಡ ನಾಡು ಕಳೆದು ಕೊಂಡಂತಾಯಿತು.