ವೀಣಾ ಧನಮ್ಮಾಳ್ದಕ್ಷಿಣ ಭಾರತದ ಶ್ರೇಷ್ಠ ಸಂಗೀತ ಗಾರರಲ್ಲಿ ಒಬ್ಬರು. ಕರ್ನಾಟಕ ಸಂಗೀತದಲ್ಲಿ ಅಸಾಧಾರಣ ಪ್ರೌಢಿಮೆಗಳಿಸಿದ ಇವರು ಹಿಂದೂಸ್ತಾನಿ ಸಂಗೀತವನ್ನೂ ಅಭ್ಯಾಸ ಮಾಡಿ ಕೀರ್ತಿ ಗಳಿಸಿದರು.

 ವೀಣಾ ಧನಮ್ಮಾಳ್

ಭಾರತೀಯ ತಂತೀ ವಾದ್ಯಗಳಲ್ಲಿ ವೀಣೆಯು ಪ್ರಾಚೀನವಾದದ್ದು. ವೇದಜನಿತವಾದದ್ದೆಂಬ ಖ್ಯಾತಿ ಇದೆ. ಕರ್ನಾಟಕ ಸಂಗೀತದಲ್ಲಿ ಅದರ ಪಾತ್ರ ಮಹತ್ತರವಾದದ್ದು. ಮೈಸೂರು, ತಂಜಾವೂರು, ಆಂಧ್ರ ಮತ್ತು ತಿರುವಾಂಕೂರು- ಈ ಪ್ರದೇಶಗಳು ವೀಣೆಯ ಭವ್ಯ ಪರಂಪರೆಯನ್ನು ಬೆಳೆಸಿಕೊಂಡು ಬಂದಿರುವುದರಿಂದ ವೀಣಾವಾದನ ಕ್ರಮದಲ್ಲಿ ಮೈಸೂರು ಶೈಲಿ, ತಂಜೂವೂರು ಶೈಲಿ, ಆಂಧ್ರ ಶೈಲಿ ಮತ್ತು ತಿರುವಾಂಕೂರು ಶೈಲಿ ಎಂಬ ನಾಲ್ಕು ವಿಧವಾದ ಶೈಲಿಗಳು ರೂಪುಗೊಂಡು ಇಂದಿಗೂ ಪ್ರಸಿದ್ಧವಾಗಿವೆ.

ತಂಜೂವೂರು ಶೈಲಿ

ತಂಜಾವೂರು ಶೈಲಿಯು ಆರಂಭವಾದದ್ದು ವೆಂಕಟಮಖಿಯಿಂದ. ಅದನ್ನು ಪೋಷಿಸಿ, ಅಭಿವೃದ್ಧಿಗೊಳಿಸಿದವರಲ್ಲಿ ಸಿದ್ಧ ವಿದ್ಯಾಧರಿ ವೀಣಾ ಧನಮ್ಮಾಳ್ ಒಬ್ಬರು. ಅವರ ಸಾಧನೆ, ಸಿದ್ಧಿ, ಕಲಾ ನೈಪುಣ್ಯ ಎಷ್ಟರಮಟ್ಟಿಗಿತ್ತೆಂಬುದಕ್ಕಕೆ ನಮ್ಮ ತಮಿಳು ಬಾಂಧವರು ಅವರನ್ನು ‘‘ಧನಂ ನಮ್ಮ ಮೂಲಧನ’’ ಎಂದು ಹೇಳುತ್ತಿರುವುದೇ ಸಾಕ್ಷಿ. ಅವರು ವೀಣಾ ಧನಮ್ಮಾಳ್‌ರವರಿಗೆ ದಕ್ಷಿಣಾದಿ ಸಂಗೀತದಲ್ಲಿ ಅಗ್ರಸ್ಥಾನವನ್ನು ಕೊಟ್ಟಿದ್ದಾರೆ. ಅದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ ಎಂಬುದು ಅವರ ಜೀವನ ಚರಿತ್ರೆಯಿಂದ ಗೊತ್ತಾಗುತ್ತದೆ. ವಿದ್ವನ್ಮಣಿಗಳೆನಿಸಿದ ಪಿಟೀಲು ತಿರುಕೊಡಿಕಾವಲ್ ಕೃಷ್ಣ ಅಯ್ಯರ್, ಮಹಾವೈದ್ಯನಾಥ್ ಶಿವನ್, ಕೊಳಲು ಶರಭ ಶಾಸ್ತ್ರಿ, ರಾಮನಾಥಪುರಂ ಪೂಜಿ ಶ್ರೀನಿವಾಸ ಅಯ್ಯಂಗಾರ್, ತಿರುಚಿ ಗೋವಿಂದಸ್ವಾಮಿ ಪಿಳ್ಳೆ, ತಂಜಾವೂರು ಕೃಷ್ಣ ಭಾಗವತರ್, ಕೊನಕ್ಕೋಲು ಪಕ್ಕಿರಿ ಪಿಳ್ಳೆ ಮುಂತಾದವರು ಧನಮ್ಮಾಳ್‌ರವರ ನಾದ ಹಾಗೂ ರಸಮಯ ವೀಣಾವಾದನವನ್ನು ಅನೇಕ ಸಲ ಕೇಳಿದ್ದರೂ, ಒಮ್ಮೆಯಾದರೂ ಧನಮ್ಮಾಳ್‌ರವರಂತೆ ನುಡಿಸುವುದಾಗಲಿ ಹಾಡುವುದಾಗಲಿ ತಮ್ಮಿಂದ ಸಾಧ್ಯವಾಗಲಿಲ್ಲ ಎಂದು ಹೇಳಿ ಅವರ ವೀಮಾ ವಾದನದ ವೈಖರಿಯನ್ನು ಮೆಚ್ಚಿಕೊಂಡಿರುವುದುಂಟು. ಕರ್ನಾಟಕ ಸಂಗೀತದ ಸಂತ್ಸಪ್ರದಾಯವನ್ನು ಉಳಿಸಿಕೊಂಡು, ಅದರ ಪರಿಶುದ್ಧತೆಯನ್ನು ಎತ್ತಿಹಿಡಿದ ಕೆಲವೇ ಕಲಾವಿದರಲ್ಲಿ ವೀಣಾ ಧನಮ್ಮಾಳ್ ಒಬ್ಬರು ಎಂಬುದು ನಿರ್ವಿವಾದ.

ಕಲಾ ಮನೆತನ

ಹತ್ತೊಂಬತ್ತನೆಯ ಶತಮಾನದ ಆದಿ ಭಾಗದಲ್ಲಿ ತಂಜಾವೂರಿನಲ್ಲಿ ಕಾಮಾಕ್ಷಿ ಎಂಬುವರು ಪ್ರಸಿದ್ಧ ನರ್ತಕಿಯಾಗಿದ್ದರು. ಅವರು ಸಂಗೀತದಲ್ಲೂ ಪರಿಣತೆ ಸಂಗೀತ ತ್ರಿಮೂರ್ತಿಗಳಲ್ಲಿ ಹಿರಿಯವರಾದ ಶ್ರೀ ಶ್ಯಾಮಾಶಾಸ್ತ್ರಿಯವರ ಶಿಷ್ಯಪರಂಪರೆಗೆ ಸೇರಿದವರು. ಗಣಪತಿ ಶಾಸ್ತ್ರಿ ಎಂಬ ಖ್ಯಾತ ನಾಟ್ಯಗುರುವಿನಿಂದ ನಾಟ್ಯವನ್ನೂ ಮತ್ತು ಆನಯ್ಯನವರಿಂದ ಸಂಗೀತವನ್ನು ಕಲಿತರು. ಕಾಮಾಕ್ಷಿಯವರು ತಮ್ಮ ಮಗಳು ಸುಂದರಮ್ಮನಿಗೆ ಶ್ಯಾಮಾಶಾಸ್ತ್ರಿಯವರ ಮಗ ಸುಬ್ಬರಾಯ ಶಾಸ್ತ್ರಿಯವರಿಂದ ಸಂಗೀತ ಶಿಕ್ಷಣವನ್ನು ಕೊಡಿಸಿದರು. ಕಾಮಾಕ್ಷಿಯವರ ಕಲಾ ಪ್ರತಿಭೆ ಮಗಳು ಸುಂದರಮ್ಮನಲ್ಲಿ ಮೂಡಿ ಬಂದುದಲ್ಲದೆ ವಂಶಪಾರಂಪರ್ಯವಾಗಿ ಸುಂದರಮ್ಮನವರ ಮಗಳಾದ ಧನಮ್ಮಾಳ್‌ರವರಲ್ಲೂ ಹಾಸುಹೊಕ್ಕಾಗಿ ವಿಕಸಿತಗೊಂಡಿತು. ಧನಂ ೧೮೬೮ರ ಮೇ ತಿಂಗಳಿನಲ್ಲಿ ಮದರಾಸಿನ ನಾಟ್ಟು ಪಿಳ್ಳೆಯಾರ್ ಕೋಯಿಲ್ ಬೀದಿಯಲ್ಲಿದ್ದ ಸುಂದರಮ್ಮನವರು ವಾಸಿಸುತ್ತಿದ್ದ ಮನೆಯಲ್ಲಿ ಜನಿಸಿದರು. ಶೈಶವಾವಸ್ಥೆ ಕಳೆದು ಬಾಲ್ಯದ ದಿನಗಳು ಬಂದವು. ಮಗು ಧನಂ ಪುಟ್ಟ ಹುಡುಗಿಯಾಗಿ ಮನೆಯ ಸಂಗೀತ ವಾತಾವರಣದಲ್ಲಿ ಬೆರೆತುಹೋದಳು.

ಬಾಲೆ ಧನಂ ಒಳ್ಳೆಯ ಶಾರೀರವನ್ನು ಹೊಂದಿದ್ದಳು. ಇದನ್ನು ಮೊದಲು ಗುರುತಿಸಿದವರು ಅವರ ಅಜ್ಜಿ ಕಾಮಾಕ್ಷಿ. ವೀಣೆಯ ಮಾಧುರ್ಯದೊಂದಿಗೆ ಸರಿ ಹೊಂದುವ ಶಾರೀರವದು ಎಂಬುದನ್ನು ಅರಿತರು. ತಾಯಿ ಸುಂದರಮ್ಮ ಸೂಕ್ತ ಶಿಕ್ಷಣವನ್ನಿತ್ತರು. ನಂತರ ಅವಳಿಗೂ ಮತ್ತು ಸಹೋದರಿ ರೂಪವತಿಗೂ ಸಾತ್ತೂರು ಪಂಜು ಅಯ್ಯರ್‌ರವರಿಂದ ಪ್ರೌಢ ರೀತಿಯ ಕಲಿಕೆ ಮುಂದುವರೆಸಿದರು. ಧನಂ ಚಿಕ್ಕಪ್ಪ ಅಪ್ಪಕಣ್ಣು ಉತ್ತಮ ದರ್ಜೆಯ ಪಿಟೀಲು ವಾದಕರಾಗಿದ್ದರು, ಅಕ್ಕತಂಗಿಯರು ಹಾಡುವಾಗ ಪಿಟೀಲು ನುಡಿಸಿ ಅವರ ಲೋಪದೋಷಗಳನ್ನು ತಿದ್ದುತ್ತಿದ್ದರು. ಕೆಲಕಾಲ ಧನಂ ಸಹೋದರಿಯರ ಜೋಡಿ ಚೆನ್ನಾಗಿ ನಡೆಯಿತು. ಅನೇಕ ಕಚೇರಿಗಳನ್ನು ಮಾಡಿ ಯಶಸ್ಸು ಗಳಿಸಿದರು.

ಗಾಯಕಿ ಧನಂವೀಣಾಧನಂ’ ಆದರು

ಕ್ರಮೇಣ ಧನಂ ಶಾರೀರವು ರೂಪವತಿಯ ಶಾರೀರ ದೊಂದಿಗೆ ಹೊಂದಿಕೊಳ್ಳಲಿಲ್ಲ. ಕಾರಣವಿಷ್ಟೆ. ಧನಂ ಶಾರೀರದಲ್ಲಿ ಗಾತ್ರವು ಇರಲಿಲ್ಲ. ವೀಣೆಯ ಮೃದು ನುಡಿಕೆಗೆ ಹೊಂದಿಕೊಳ್ಳುವಂತೆ ರೂಪವತಿಯ ಶಾರೀರದ ಗಾತ್ರಕ್ಕೆ ಹೊಂದಿಕೊಳ್ಳುತ್ತಿರಲಿಲ್ಲ. ಕಾಮಾಕ್ಷಿಗೆ ಮುಂದೇನು ಮಾಡಬೇಕೆಂಬ ಜಿಜ್ಞಾಸೆಯುಂಟಾಯಿತು. ಅವರ ಆಶ್ರಯದಾತರಾಗಿದ್ದ ರಂಗೂನ್ ಕೃಷ್ಣಸ್ವಾಮಿ ಮೊದಲಿಯಾರ್ ರವರು ಧನಂ ಮತ್ತು ಅವರ ಇಬ್ಬರು ಸಹೋದರರು – ಪೀಟಲುಗಾರ ನಾರಾಯಣಸ್ವಾಮಿ ಮತ್ತು ಮೃದಂಗವಾದಕ ಮಾಣಿಕ್ಯಂ-ವೀಣೆ ಕಲಿಯುವುದು ಒಳ್ಳೆಯದು ಎಂದು ಕಾಮಾಕ್ಷಿಗೆ ಸಲಹೆಯಿತ್ತುದು ಮಾತ್ರವೇ ಅಲ್ಲ, ಅದಕ್ಕೆ ತಗಲುವ ಖರ್ಚು, ವೆಚ್ಚಗಳನ್ನು ತಾವೇ ನೋಡಿಕೊಳ್ಳುವ ಏರ್ಪಾಡನ್ನೂ ಮಾಡಿದರು. ಇದರಿಂದಾಗಿ ಧನಂ ರೂಪವತಿಯೊಡನೆ ಹಾಡುವುದನ್ನು ನಿಲ್ಲಿಸಿ ವೀಣೆಯ ಅಭ್ಯಾಸಕ್ಕೆ ಗಮನ ಕೊಟ್ಟರು. ‘‘ಗಾಯಕಿ ಧನ’’, ‘‘ವೀಣಾ ಧನಂ’’ ಆದುದು ಹೀಗೆ.

ವೀಣಾ ಶಿಕ್ಷಣ

ಆ ಕಾಲಕ್ಕೆ ಅಳಶಿಂಗಾರಾಚಾರ್ (ಆಳಶಿಂಗರಯ್ಯ ಎಂದೂ ಕರೆಯಲ್ಪಡುತ್ತಿದ್ದರು) ಎಂಬೊಬ್ಬರು ವೀಣಾ ವಾದನದಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಧನಂರವರಿಗೆ ವೀಣಾವಾದನದಲ್ಲಿ ಪ್ರಥಮ ಶಿಕ್ಷಣವನ್ನು ಕೊಡುವ ಹೊಣೆಯನ್ನು ಅವರು ಹೊತ್ತರು. ಸಂಸ್ಕಾರ ಬಲದಿಂದಲೋ ಅಥವಾ ಸಾಕಷ್ಟು ಸಂಗೀತ ವಾತಾವರಣದಲ್ಲಿದ್ದುದ ರಿಂದಲೋ, ಧನಂ ಬಹಳ ಬೇಗ ಕಲಿತರು. ಅದೇನಾ ಶ್ಚರ್ಯವೋ, ಸಹೋದರಿ ರೂಪವತಿಯ ಸ್ವರ ಪ್ರಸ್ತಾರದ ಜಾಣ್ಮೆ ಮತ್ತು ಲಯಬದ್ಧತೆ, ಧನಂರವರನ್ನು ಆಕರ್ಷಿಸಲಿಲ್ಲ. ಅವರು ರಾಗಭಾವ, ಕೃತಿ ನಿರೂಪಣೆ, ಪದ, ಜಾವಳಿಗಳ ಸೊಬಗಿಗೆ ಮನಸೋತರು. ಹಾಗಾಗಿ ಪದ ಜಾವಳಿಗಳ ನಿರೂಪಣೆಯ ಹೊಸ ಪಂಥವೊಂದನ್ನು ಅನುಷ್ಠಾನಕ್ಕೆ ತಂದು, ಅದನ್ನು ಬೆಳಸಿ, ಇಂದಿಗೂ ಅವರ ಪರಂಪರೆಯು ಆ ಪಂಥದ ಅಧಿಕೃತ ನಿರೂಪಣೆಗೆ ಹೆಸರಾಗುವಂತೆ ಮಾಡಿದರು. ಬಾಲ್ಯದಲ್ಲಿ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್, ಮಹಾ ವೈದ್ಯನಾಥ್ ಶಿವನ್, ಭಿಕ್ಷಾಂದಾರ್ ಕೋಯಿಲ್ ಸುಬ್ಬರಾಯರ್, ಕೃಷ್ಣಭಾಗವತರ್ ಮುಂತಾದ ಮಹಾಗಾಯಕರ ಸಂಗೀತವನ್ನು ಮನಸ್ಸು ತೃಪ್ತಿಯಾಗುವಂತೆ ಕೇಳಿ ತಮ್ಮ ವೀಣಾವಾದನವು ಅವರ ಜಾಡಿನಲ್ಲಿ ಹೋಗಬೇಕೆಂಬ ಮಹದಾಕಾಂಕ್ಷೆಯನ್ನು ಹೊಂದಿದ್ದರು. ತಮ್ಮ ಹಾಗೂ ತಮ್ಮ ಸುತ್ತಮುತ್ತಲಿನವರ ವೀಣಾವಾದನವು ತೀರ ಸಪ್ಪೆಯಾಗಿ ಕಂಡು ಬಂದಿತು. ಬರುಬರುತ್ತ ತಮ್ಮಲ್ಲಿ ತಾವೇ ನಂಬಿಕೆ ಕಳೆದುಕೊಂಡು ತಾವು ವೀಣಾವಾದನ ಪರಿಷತ ಳಾಗುವುದು ಒಂದು ಕನಸು ಎನ್ನುವಂತಾದರು. ಹೀಗೆ ಕೆಲವು ದಿವಸಗಳು ಕಳೆದವು.

ಹೊಸ ಪ್ರಭಾವಗಳು

ಪಾಲ್‌ಘಾಟ್‌ನ ಕಲ್ಯಾಣಕೃಷ್ಣ ಭಾಗವತರು ಆಗಿನ ಕಾಲಕ್ಕೆ ಪ್ರಬಲ ವೈಣಿಕರಾಗಿದ್ದರು. ತಿರುವಾಂಕೂರು ಶೈಲಿಯೆಂದು ಪ್ರಸಿದ್ಧಿಗೆ ಬಂದ ಶೈಲಿಯನ್ನು ಪರಿಚಯ ಮಾಡಿಸಿದವರೇ ಅವರು. ಒಮ್ಮೆ ಧನಂ ಅವರ ವೀಣಾ ಕಚೇರಿಯನ್ನು ಕೇಳಿದರು. ಭಾಗವತರ ನುಡಿಕೆ ಅವರನ್ನು ತನ್ಮಯರನ್ನಾಗಿ ಮಾಡಿತು. ‘‘ವೀಣಾವಾದನವೆಂದರೆ ಇದು. ಕಲಿತರೆ ಹೀಗೆ ನುಡಿಸುವುದನ್ನೆ ಕಲಿಯಬೇಕು’’ ಎನ್ನುವ ಗೀಳು ಹಿಡಿಯಿತು. ಭಾಗವತರ ನಾಲ್ಕಾರು ಕಚೇರಿಗಳನ್ನು ಕೇಳಿದ ಮೇಲೆ ಅವರ ನಿರ್ಧಾರವು ದೃಢಪಟ್ಟಿತು. ಸತತ ಸಾಧನೆಯಿಂದ ಧನಂರವರ ವೀಣಾ ವಾದನದಲ್ಲಿ ಮಾರ್ದವತೆ ಉಂಟಾಯಿತು.

ಮೈಲಾಪುರದ ಗೌರಿ ಸುಪ್ರಸಿದ್ಧ ವೀಣಾವಾದಕರಾಗಿದ್ದರು. ಕ್ಷೇತ್ರಯ್ಯನವರ ಪದಗಳ ನಿರೂಪಣೆಯಲ್ಲಿ ಅವರನ್ನು ಸರಿಕಟ್ಟುವವರು ಯಾರೂ ಇರಲಿಲ್ಲ. ಗುರು ಸಾತ್ತೂರು ಪಂಚು ಅಯ್ಯರ್‌ರವರ ಬಿಚ್ಚುಮನಸ್ಸಿನ ಶಿಕ್ಷಣ ಮತ್ತು ಧನಂರವರ ಶ್ರದ್ಧೆಗಳಿಂದಾಗಿ ಕೇವಲ ಅವರ ಹದಿನಾಲ್ಕನೆಯ ವಯಸ್ಸಿನಲ್ಲೇ ವೀಣಾ ಗೌರಿಯಮ್ಮಾಳ್‌ರವರ ಸಮಕ್ಕೆ ಬರುವಂತಾದರು. ಇದೂ ಒಂದು ಪವಾಡವೇ. ಮುಂದೆ ವೀಣಾ ಗೌರಿಯವ ರಿಂದ ಅವರಿಗೆ ‘‘ಬುಲ್ ಬುಲ್’’ ಎಂಬ ಹೆಸರೂ ಇತ್ತು – ಭಾರೀ ಬಳುವಳಿಯಾಗಿ ಪಡೆದ ಕ್ಷೇತ್ರಯ್ಯನವರ ಅಮೂಲ್ಯವಾದ ಪದಗಳ ನಿಧಿ ಹಾಗೂ ಗೌರಿಯವರ ಶಿಷ್ಯ ಬಾಲಾಜೀ ಪೇಟ್ ಬಾಲ್‌ದಾಸ್ ನಾಯುಡು (ವೀಣಾ ಬಾಲಕೃಷ್ಣ ಶ್ರೇಷ್ಠಿ) ಎಂಬುವವರ ಪರಿಚಯವಾಗಿ ಅವರಿಂದ ಅಷ್ಟು ಪದಗಳೂ ಧನಂರವರಿಗೆ ಲಭಿಸಿದವು.

ವಿದ್ವಜ್ಜನರ ಪ್ರಭಾವ

ಮಹಾ ವಾಗ್ಗೇಯಕಾರನೆನಿಸಿದ ಸಂಗೀತ ತ್ರಿಮೂರ್ತಿ ಗಳು-ತ್ಯಾಗರಾಜ, ದೀಕ್ಷಿತರ್ ಮತ್ತು ಶ್ಯಾಮಾಶಾಸ್ತ್ರಿ, ಕರ್ಣಾಟಕ ಸಂಗೀತ ಪಿತಾಮಹ ಪುರಂದರದಾಸರು, ಇವರುಗಳು ಕೃತಿರತ್ನಗಳನ್ನು ಧನಂರವರು ಕಲಿತು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಸುಬ್ರಾಮ್ ಅಯ್ಯರ್, ಘನಂ ಕೃಷ್ಣಯ್ಯರ್ ಮತ್ತು ಗೋಪಾಲ ಕೃಷ್ಣ ಭಾರತಿ ಇವರುಗಳ ಪ್ರಸಿದ್ಧ ತಮಿಳು ಕೃತಿಗಳನ್ನೂ ಅವರು ತಮ್ಮ ಅಮೂಲ್ಯ ಕೃತಿ ಭಂಡಾರಕ್ಕೆ ಸೇರಿಸಿಕೊಂಡರು. ಲೆಕ್ಕವಿಲ್ಲದಷ್ಟು ಉತ್ತಮ ಕೃತಿ, ಜಾವಳಿ, ಪದಗಳನ್ನು ಕಲಿತ ಕೆಲವೇ ಸಂಗೀತಗಾರರಲ್ಲಿ ಧನಂರವರು ಒಬ್ಬರು. ವಾಗ್ಗೇಯಕಾರರ ಪ್ರಭಾವ ಒಂದು ಕಡೆ ಆದರೆ, ಮತ್ತೊಂದು ಕಡೆಯಿಂದ ಧನಂರವರಿಗೆ ಹೆಸರಾಂತ ಸಂಗೀತ ವಿದ್ವಾಂಸ-ಮಿದುಷಿಯರ ಪರಿಚಯವುಂಟಾಗಿ ಅವರುಗಳ ಸಹವಾಸದ ಫಲದಿಂದ ಇನ್ನೂ ಉತ್ತಮ ರಚನೆಗಳನ್ನು ಕಲಿಯುವ ಅವಕಾಶವು ದೊರೆಯಿತು. ಹೀಗೆ ಪರಿಚಯವಾದವರಲ್ಲಿ ಧರ್ಮಪುರಿ ಸುಬ್ಬರಾಯರೊಬ್ಬರು. ಅವರು ಧನಂರವರ ವೀಣಾವಾದನಕ್ಕೆ ಮನಸೋತು ಅವರನ್ನು ಕುರಿತು ಫರಜ್ ರಾಗದಲ್ಲಿ ‘‘ಸ್ಮರ ಸುಂದರಾಂಗುನಿ ಸರಿ ಎವ್ವರೆ’’ ಎಂಬ ಜಾವಳಿಯನ್ನು ರಚಿಸಿ ಅವರಿಗೆ ಕಾಣಿಕೆಯಾಗಿತ್ತರು. ಧರ್ಮಪುರಿ ಸುಬ್ಬರಾಯರ ಪ್ರಸಿದ್ಧ ಜಾವಳಿಗಳನ್ನು ಧನಂರವರು ಬಳಕೆಗೆ ತಂದರು.

ಕಲಿಯುವ ಹಂಬಲ

ಕೊಯಮತ್ತೂರು ರಾಘವ ಅಯ್ಯರ್ ಎಂಬ ಮಹಾವಿದ್ವಾಂಸರು ‘ತೋಡಿ’ ರಾಗ ನಿರೂಪಣೆಗೆ ಹೆಸರಾಗಿದ್ದರು. ಹಾಗಾಗಿ ಅವರಿಗೆ ‘‘ತೋಡಿ ರಾಘವಯ್ಯರ್’’ ಎಂದೇ ಹೆಸರು ಬಂದಿತು. ಅವರಿಗೆ ಸರಿಯಾದ ಶಿಷ್ಯರು ಜೈಜೀ ಎಂಬುವರು. ಅವರ ಮನೋಧರ್ಮಕ್ಕೆ ಯಾವ ಪಕ್ಕ ವಾದ್ಯಗಾರರೂ ಹೊಂದಿಕೊಳ್ಳುತ್ತಿರಲಿಲ್ಲ. ಅಂತಹ ಗಾಯಕರಿಂದ ಧನಂರವರು ಪ್ರಭಾವಿತರಾದುದು ಮಾತ್ರವೇ ಅಲ್ಲ, ಅವರ ಜೊತೆಯಲ್ಲಿ ಅಷ್ಟೇ ಪರಿಣಾಮಕಾರಿಯಾಗಿ ನುಡಿಸುವ ಸಾಮರ್ಥ್ಯವನ್ನು ಧನಂರವರು ಹೊಂದಿದರು. ಸಯಿದಾಪೇಟೆ ತಿರುಮಲಾಚಾರ‍್ಯರು, ಪದಂ ಪೊನ್ನುಸ್ವಾಮಿ ಮೊದಲಾದ ಹಿರಿಯರಿಂದ ಹಲವು ಕೃತಿಗಳನ್ನು ಕಲಿತರು. ಹೀಗೆ ಎಲ್ಲ ಕಡೆಗಳಿಂದಲೂ ನೋಡಿ, ಕೇಳಿ, ಹೇಳಿಸಿಕೊಂಡು, ಅನುಭವದಿಂದ ತಾವೇ ನುಡಿಸಿ ಮೆರುಗನ್ನು ಕೊಟ್ಟು ಕೃತಿ-ಪದ-ಜಾವಳಿಗಳ ಅಪೂರ್ವ ಗಣಿ ಎನಿಸಿಕೊಂಡರೂ, ಧನಂರವರ ಜ್ಞಾನದಾಹ ಇಂಗಲೇ ಇಲ್ಲ. ಇನ್ನೂ ಕೇಳಬೇಕು, ಹೊಸದನ್ನು ಕಲಿಯಬೇಕು, ತಮ್ಮ ವಾದನವನ್ನು ಇನ್ನೂ ಸುಂದರ ಸಂಪನ್ನವಾಗಿ ಮಾಡಬೇಕು ಎಂಬುದೇ ಅವರಿಗೆ ಇದ್ದ ಒಂದೇ ಚಿಂತೆ. ಅದಕ್ಕಾಗಿ ಅವರು ಶ್ರಮಿಸಿದರು. ಸಾಧನೆ ಮಾಡಿದರು. ಸಿದ್ಧಿ ಪಡೆದರು. ತಂಜಾವೂರು ಶೈಲಿಯ ಅದ್ವೀತೀಯ ಪ್ರತಿಪಾದಕರಾದರು. ಮೈಸೂರು ವೀಣೆ ಶೇಷಣ್ಣ, ತಿರುವಾಂಕೂರು ಕಲ್ಯಾಣಕೃಷ್ಣಭಾಗವತರ್, ವಿಜಯನಗರದ ವೆಂಕಟರಮಣ ದಾಸ್, ಕಾರೈಕುಡಿ ಸಹೋದರರು-ಈ ಭವ್ಯ ವಿದ್ವಾಂಸರ ತಾರಾಮಂಡಲದಲ್ಲಿ ಧ್ರುವತಾರೆಯಾಗಿ ಪ್ರಕಾಶಿಸಿದರು.

‘‘ನನ್ನನ್ನು ವೇದಿಕೆಯ ಬಳಿಗೆ ಕರೆದುಕೊಂಡು ಹೋಗಿ’’

ಸುಮಾರು ೧೯೦೦ರಲ್ಲಿ ಒಂದು ಸಂಗತಿ ನಡೆಯಿತು. ಮದರಾಸಿನ ತಂಬೂಚೆಟ್ಟಿ ಬೀದಿಯಲ್ಲಿ ಒಬ್ಬ ಮಿರಾಸ್‌ದಾರ್ ಮನೆಯಲ್ಲಿ ಒಂದು ಸಮಾರಂಭ ಸ್ವಯಂ ಸಂಗೀತಪ್ರಿಯ ಹಾಗೂ ಸಂಗೀತ ವಿದ್ವಾಂಸರ ಆಶ್ರಯದಾತರಾಗಿದ್ದ ಅವರಿಗೆ ಯಾವ ವಿದ್ವಾಂಸರೂ ಯಾವ ಕಾಲದಲ್ಲಿಯಾದರೂ ನೆರವಾಗುತ್ತಿದ್ದರು. ಅವರ ಕರೆಗೆ ಓಗೊಟ್ಟು ಸಮಾರಂಭಕ್ಕೆ ಎರಡು ಮೂರು ದಿನಗಳು ಮುಂಚಿತವಾಗಿಯೇ ಬಂದು ಕಚೇರಿಗಳನ್ನು ಮಾಡಿ, ಅವರಿಂದ ಸನ್ಮಾನಗಳನ್ನು ಪಡೆದು ತೃಪ್ತರಾಗಿ ವಾಪಸು ಅವರವರ ಊರುಗಳಿಗೆ ಹೋಗುತ್ತಿದ್ದುದು ಒಂದು ವಾಡಿಕೆ. ಅಂತಹ ಸಮಾರಂಭವೊಂದರಲ್ಲಿ ರಾಮನಾಥಪುರಂ ಪೂಚಿ ಶ್ರೀನಿವಾಸ ಅಯ್ಯಂಗಾರ‍್ಯರ ಕಚೇರಿ ಏರ್ಪಾಡಾಗಿತ್ತು. ಅಲ್ಲದೆ ಕೊಳಲು ಶರಭಶಾಸ್ತ್ರಿ, ಕೃಷ್ಣಭಾಗವತರು ಮೊದಲಾದ ಮಹಾ ವಿದ್ವಾಂಸರೂ ಬಂದಿದ್ದರು. ಒಂದೊಂದು ದಿವಸ ಒಬ್ಬೊಬ್ಬರ ಕಚೇರಿ ಎಂದು ನಿಗದಿಯಾಗಿತ್ತು. ಧನಂರವರ ವೀಣಾವಾದನಕ್ಕೂ ಅವಕಾಶವಿತ್ತು.

ಪೂಚಿ ಶ್ರೀನಿವಾಸ ಅಯ್ಯಂಗಾರ‍್ಯರ ಕಚೇರಿಯಾದ ಮೇಲೆ ಸ್ವಲ್ಪ ಹೊತ್ತು ವಿರಾಮ. ಅನಂತರ ಧನಂರವರ ಕಚೇರಿ. ವಿರಾಮ ವೇಳೆಯಲ್ಲಿ ವೇದಿಕೆಯ ಹತ್ತಿರದ ಕೋಣೆಯೊಂದರಲ್ಲಿ ಶರಭಶಾಸ್ತ್ರಿಗಳು ವಿಶ್ರಮಿಸಿಕೊಳ್ಳುತ್ತಿದ್ದರು. ಪಾಪ, ಅವರಿಗೆ ಕಣ್ಣು ಕಾಣುತ್ತಿರಲಿಲ್ಲ. ನಿಯಮಿತಕಾಲಕ್ಕೆ ಮುಂಚೆಯೇ ಧನಂರವರು ತಮ್ಮ ವೀಣೆಯ ಸಮೇತ ವೇದಿಕೆಯನ್ನೇರಿ ಕುಳಿತು ಶ್ರುತಿ ಮಾಡಿಕೊಳ್ಳುತ್ತಿದ್ದರು. ನಿದ್ದೆಯ ಗುಂಗಿನಲ್ಲಿದ್ದ ಶರಭಶಾಸ್ತ್ರಿಯವರಿಗೆ ವೀಣೆಯ ಮಂಜುಳ ನೀನಾದವು ಕೇಳಿ, ಎಚ್ಚೆತ್ತು ಎದ್ದುಕುಳಿತು ಧ್ವನಿ ಬಂದ ದಿಕ್ಕಿಗೆ ಕಿವಿಕೊಟ್ಟು ಆಲಿಸಿದರು. ಹೌದು. ಅದೇ ಹಿತವಾದ ನಾದ. ತಮಗೆ ಪರಿಚಯವಿದ್ದದ್ದೇ. ಸ್ವಲ್ಪ ಹೊತ್ತು ಕುಳಿತು ಕೇಳಿದರು. ತರಂಗ ತರಂಗವಾಗಿ ವೀಣೆಯ ಮಧುರ ನುಡಿಕೆಯು ಹೊರಹೊಮ್ಮಿತು. ತಡೆಯಲಾಗಲಿಲ್ಲ. ಅದೇ ಕೋಣೆಯಲ್ಲಿ ವಿಶ್ರಮಿಸಿಕೊಳ್ಳುತ್ತಿದ್ದ ಕೃಷ್ಣ ಭಾಗವತರನ್ನು ಕುರಿತು ‘‘ಭಾಗವತರೇ, ಕೇಳಿದಿರಾ? ಅಮ್ಮಾ, ವೀಣೆ ನುಡಿಸುತ್ತಿದ್ದಾರೆ. ದಯವಿಟ್ಟು ನನ್ನನ್ನು ವೇದಿಕೆಯ ಬಳಿ ಕರೆದುಕೊಂಡು ಹೋಗಿ’’ ಎಂದು ಕೇಳಿಕೊಂಡರು. ಇಬ್ಬರೂ ಹೋಗಿ ವೇದಿಕೆಯ ಬಳಿ ಕುಳಿತರು.

ತುಂಬಿದ ಹೃದಯದ ಮಾತು

ಶರಭಶಾಸ್ತ್ರಿಗಳನ್ನೂ ಮತ್ತು ಕೃಷ್ಣ ಭಾಗವತರನ್ನೂ ಕಂಡೊಡನೆ ಧನಂರವರಿಗೆ ಎಲ್ಲೂ ಇಲ್ಲದ ಸ್ಫೂರ್ತಿ ಬಂದಿತು. ಅದೇ ಸಮಯಕ್ಕೆ ಪೂಚಿ ಶ್ರೀನಿವಾಸ ಅಯ್ಯಂಗಾರ‍್ಯರೂ ಬಂದು ವೇದಿಕೆಯ ಹತ್ತಿರ ಕುಳಿತರು. ಆನಂದ ಪರವಶರಾಗಿ ಧನಂ ಎರಡು ಗಂಟೆಗಳ ಕಾಲ ಆಹ್ಲಾದಕರವಾದ ರೀತಿಯಲ್ಲಿ ವೀಣಾವಾದನವನ್ನು ಮಾಡಿದರು. ಯದುಕುಲ ಕಾಂಬೋದಿಯನ್ನು ಸುಮಾರು ಐದು ನಿಮಿಷಗಳು ವಿಸ್ತರಿಸಿ ಸುಬ್ಬರಾಯಶಾಸ್ತ್ರಿಗಳ ‘‘ನಿನ್ನು ಸೇವಿಂಚಿನ’’ ಕೃತಿಯನ್ನು ನುಡಿಸಿದರು. ರಾಗಭಾವದಿಂದ ತುಳುಕುತ್ತಿದ್ದ ಕೃತಿನಿರೂಪಣೆಯಿಂದ ಶರಭಶಾಸ್ತ್ರಿಗಳು ಮೈಮರೆತರು. ಪೂಚಿ ಶ್ರೀನಿವಾಸ ಅಯ್ಯಂಗಾರ‍್ಯರು ಕಣ್ಣುಮುಚ್ಚಿ ಕುಳಿತು ಆ ದಿವ್ಯವಾದನದ ಸೌಖ್ಯವನ್ನು ಅನುಭವಿಸಿದರು. ಕೃಷ್ಣಭಾಗವತರು ತಾಳವನ್ನು ಹಾಕುವುದನ್ನು ನಿಲ್ಲಿಸಿ ಧನಂರವರ ಬಲಗೈ ತರ್ಜನಿ ಮತ್ತು ಮಧ್ಯದ ಬೆರಳುಗಳು ಮೀಟು ಹಾಕುವಾಗ ತಂತಿಗೆ ತಗುಲುತ್ತಿಲ್ಲವೇನೋ ಎಂಬುದನ್ನೂ, ಗಮಕಗಳನ್ನು ನುಡಿಸುವಾಗ ಬೆರಳುಗಳ ಲಾಲಿತ್ಯವನ್ನೂ, ರೆಪ್ಪೆಹಾಕದೆ ನೋಡುತ್ತ ಕುಳಿತರು. ಕೊನೆಯಲ್ಲಿ ಆನಂಧ ಭೈರವಿ ರಾಗದ ‘ಮಧುರಾನಗರಿಲೋ’ ಜಾವಳಿ. ಶಾಸ್ತ್ರಿಗಳು ಕೃಷ್ಣಭಾಗವತರ ಕಡೆಗೆ ತಿರುಗಿ ‘‘ಭಾಗವತರೇ, ಇದು ಬರಿಯ ಆನಂದ ಭೈರವಿಯಲ್ಲ, ಪರಮಾನಂದ ಭೈರವಿ’’ ಎಂದರು. ಕಚೇರಿ ಮುಗಿಯಿತು. ಶರಭಶಾಸ್ತ್ರಿಗಳು ಧನಂರವರನ್ನು ಸಂಬೋಧಿಸಿ ‘‘ಅಮ್ಮಾ, ಎಷ್ಟು ಮುದ್ದಾಗಿ ಯದುಕುಲ ಕಾಂಬೋದಿ ಮತ್ತು ಆನಂದ ಭೈರವಿಗಳನ್ನು ನುಡಿಸಿದೆ! ಶಿವನ್ ವಾಳ್ (ಮಹಾವೈದ್ಯನಾಥ್ ಶಿವನ್‌ರವರು) ನಿನ್ನ ನುಡಿಕೆ ದೈವಸದೃಶವಾದುದು. ನಿನ್ನ ಸಂಗೀತವು ತ್ರಿಕರಣ ಶುದ್ಧಿಯಿಂದ ಕೂಡಿದೆ ಎಂದು ನನಗೆ ಹೇಳಿದ್ದು ಎಷ್ಟು ನಿಜ ಎಂಬುದನ್ನು ನೀನು ತೋರಿಸಿದೆಯಲ್ಲ. ಎಷ್ಟು ಭಕ್ತಿ ಭಾವದಿಂದ ಹಾಡಿದೆ! ನೀನೇ ಧನ್ಯಳು. ನಿನ್ನ ಸಂಗೀತವನ್ನು ಕೇಳಿ ನಾನು ಬಹಳ ತೃಪ್ತಿಪಟ್ಟೆ’’ ಎಂದು ತುಂಬುಹೃದಯದಿಂದ ಧನಂರವರ ವಾದವನ್ನು ಪ್ರಶಂಸಿಸಿದರು.

ನಾಳೆ ನಾನು ನುಡಿಸಬೇಕಲ್ಲವೇ

ಧನಂರವರು ಎಷ್ಟು ಸಭೆಗಳಲ್ಲಿ ಕಚೇರಿಗಳನ್ನು ಮಾಡಿದರೋ ಗೊತ್ತಿಲ್ಲ. ಆದರೆ ರಾಜಾಸ್ಥಾನಗಳಲ್ಲಿ, ಸ್ನೇಹಿತರ ಮನೆಗಳಲ್ಲಿ, ತಮ್ಮ ಪೋಷಕವರ್ಗದವರ ಸಮ್ಮುಖದಲ್ಲಿ, ಎಲ್ಲಕ್ಕೂ ಹೆಚ್ಚಾಗಿ ತಮ್ಮ ಮನೆಯಲ್ಲಿ ಪ್ರಮುಖ ರಸಿಕರ ಮುಂದೆ ಮಾಡಿರುವ ಕಚೇರಿಗಳಿಗೆ ಲೆಕ್ಕವಿಲ್ಲ ಈಗಿನ ಹಾಗೆ ಆಗ ಧ್ವನಿವರ್ಧಕಗಳಿರಲಿಲ್ಲ. ವೀಣೆಗೆ ತಗುಲಿಸಿಕೊಳ್ಳುವ ಪುಟ್ಟ ಧ್ವನಿವರ್ಧಕ ಯಂತ್ರವಂತೂ (ಕಾಂಟಾಕ್ಟ್ ಮೈಕ್) ಖಂಡಿತ ಇರಲಿಲ್ಲ. ಅವರುಗಳು ಅನುಭವಿಸಿದ ಆನಂದವನ್ನು ಅಳೆಯುವುದು ಸಾಧ್ಯವಿಲ್ಲ.

ಮಲಬಾರಿನ ಕೊಲ್ಲಂಗೋಡಿನ ರಾಜರು ತಮ್ಮ ಮಗಳ ಮದುವೆಯನ್ನು ರಾಜವೈಭದಿಂದ ನೆರವೇರಿಸಿದರು. ಪ್ರತಿದಿನವೂ ತಡೆಯಿಲ್ಲದೆ ಸಂಗೀತ ಕಚೇರಿಗಳು ನಡೆದವು. ಪ್ರಸಿದ್ಧ ಗಾಯಕರಾದ ಪಾಲ್‌ಘಾಟ್ ಅನಂತರಾಮ ಭಾಗವತರು ಅರಮನೆಯ ಪ್ರಮುಖ ವಿದ್ವಾಂಸರಾಗಿದ್ದರಿಂದ ರಾಜರು ಸಂಗೀತ ಕಚೇರಿಗಳ ಏರ್ಪಾಡಿನ ವ್ಯವಸ್ಥೆಯನ್ನು ಭಾಗವತರಿಗೆ ಒಪ್ಪಿಸಿದ್ದರು. ಮದುವೆಯ ಹಿಂದಿನ ಸಂಜೆ ಧನಂರವರು ಬಂದಿಳಿದರು. ಅವರನ್ನು ನೋಡಿದೊಡನೆಯೆ ಭಾಗವತರಿಗೆ ಮದುವೆಯ ಸಂಜೆ ಆರತಕ್ಷತೆಯಾದ ನಂತರ ಭೋಜನ ಕಾಲದಲ್ಲಿ ಧನಂರವರ ವೀಣಾವಾದನವನ್ನು ಏರ್ಪಡಿಸಿದರೆ ಚೆನ್ನಾಗಿರುತ್ತದೆ ಎಂದು ತೋರಿತು. ಅವರನ್ನು ಆದರದಿಂದ ಬರಮಾಡಿಕೊಂಡು ಅವರ ಬಿಡದಿಗೆ ಕರೆದುಕೊಂಡುಹೋಗಿ ಉಪಹಾರ ಮಾಡಿಸಿ, ‘‘ಅಮ್ಮಾ ನನ್ನದೊಂದು ಕೋರಿಕೆ. ನಡೆಸಿಕೊಡುವಿರಾ?’’ ಎಂದು ಕೇಳಿದರು. ಧನಂರವರು ನಗುತ್ತಾ ‘‘ನಾಳೆ ಸಂಜೆ ಆರತಕ್ಷತೆಯಾದನಂತರ ಭೋಜನ ಸಮಯದಲ್ಲಿ ನಾನು ನುಡಿಸಬೇಕಲ್ಲವೇ?’’ ಎಂದರು. ಅನಂತರಾಮ ಭಾಗವತರಿಗೆ ಆತ್ಯಾಶ್ಚರ್ಯವಾಯಿತು. ‘‘ತಾವು ಯಾರೊಡನೆಯೂ ಅದರ ವಿಚಾರವಾಗಿ ಪ್ರಸ್ತಾಪಿಸಿರಲಿಲ್ಲ. ಸ್ವಯಂ ರಾಜರಿಗೆ ಗೊತ್ತಿರಲಿಲ್ಲ. ಇವರಿಗೆ ಹೇಗೆ ಗೊತ್ತಾಯಿತು’’? ಎಂದುಕೊಂಡು,

‘‘ನಿಮಗೆ ಹೇಗೆ ತಿಳಿಯಿತು?’’ ಎಂದು ಕೇಳಿದರು.

‘‘ಅಷ್ಟು ಊಹಿಸಲು ನನಗಾಗದಿದ್ದರೆ ನಿಮ್ಮಂತಹ ಮಹಾವಿದ್ವಾಂಸರ ಜೊತೆಯಲ್ಲಿ ಏಗುವುದು ಹೇಗೆ? ನೀವು ನನ್ನನ್ನು ಕೇಳದಿದ್ದರೂ ನಾನೇ ನಿಮಗೆ ಹೇಳಬೇಕೆಂದಿದ್ದೆ. ಆರತಕ್ಷತೆಯಲ್ಲಿ ನಿಮ್ಮ ಕಚೇರಿ ನಡೆಯಲಿ. ನೀವು ಹಾಡುವ ಕೆಲವು ಅಪರೂಪದ ಸಂಚಾರಗಳನ್ನು ಕದಿಯಲು ಪ್ರಯತ್ನಿಸುತ್ತೇನೆ. ಭೋಜನದ ಸಮಯದಲ್ಲಿ ನಾನು ನುಡಿಸುತ್ತೇನೆ. ರಾಜರಿಗೆ ತಿಳಿಸಿಬಿಡಿ’’ ಎಂದರು.

‘‘ನನ್ನದೊಂದು ಕೋರಿಕೆ’’

ಅಷ್ಟುಹೊತ್ತಿಗೆ ಧನಂರವರು ಬಂದಿಳಿದಿರುವುದು ರಾಜರಿಗೆ ಗೊತ್ತಾಗಿ ಅವರೂ ಅಲ್ಲಿಗೆ ಬಂದರು. ಅನಂತರಾಮ ಭಾಗವತರ ಏರ್ಪಾಡನ್ನು ತಿಳಿದುಕೊಂಡು ಅವರ ವ್ಯವಹಾರ ಕೌಶಲಕ್ಕೆ ತಲೆದೂಗಿದರು. ಧನಂರವರು ಏನನ್ನೋ ಹೇಳಲು ತವಕಪಡುತ್ತಿರುವಂತೆ ತೋರಿತು. ಅವರ ಕುಶಲ ಪ್ರಶ್ನೆಮಾಡಿ  ರಾಜಯೋಗ್ಯವಾದ ಗಾಂಭೀರ್ಯದಿಂದ ‘‘ಧನಮ್ಮಾಳ್ ಅವರೇ, ನಿಮಗೆ ಇಲ್ಲಿ ಎಲ್ಲಾ ಅನುಕೂಲಗಳೂ ಇವೆಯೆ? ಏನಾದರೂ ಕೊರತೆಯಿದ್ದರೆ ಸಂಕೋಚವಿಲ್ಲದೆ ತಿಳಿಸಿ, ಸರಿಪಡಿಸುತ್ತೇನೆ’’ ಎಂದು ಕೇಳಿದರು. ‘‘ಕಲಾವಿದರ ಕಲ್ಪವೃಕ್ಷದಂತಿರುವ ಪ್ರಭುವೇ, ನನಗೆ ಯಾವ ಕೊರತೆಯೂ ಇಲ್ಲ. ಭಾಗವತರು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾರೆ. ನನ್ನದೊಂದು ಸಣ್ಣ ಕೋರಿಕೆ ನಡೆಸಿಕೊಟ್ಟರೆ ತುಂಬ ಸಂತೋಷವಾಗುತ್ತದೆ’’ ಎಂದು ಧನಂರವರು ಹೇಳಿದರು. ‘‘ನೀವು ನಮ್ಮನ್ನು ಕೇಳಿಕೊಳ್ಳುವುದೆ? ಛೆಛೆ, ಎಲ್ಲಿಯಾದರೂ ಉಂಟೇ? ಹೀಗಾಗಬೇಕು ಎಂದು ನಮಗೆ ಅಪ್ಪಣೆ ಮಾಡಬೇಕು’’ ಎಂದರು ರಾಜರು. ‘‘ಹೆಚ್ಚೇನೂ ಇಲ್ಲ, ಮುಹೂರ್ತಕ್ಕೆ ಮುನ್ನ ವಧೂವರರು ಉಯ್ಯಾಲೆ ತೂಗುವಾಗಲೂ, ಮದುವೆಯಾದ ನಂತರ ಮಾರನೆಯ ದಿವಸ ನಡೆಯುವ ಉರುಟಣೆ ಶಾಸ್ತ್ರದ ಸಮಯದಲ್ಲೂ, ನಾನು ವೀಣೆ ನುಡಿಸಲು ಅವಕಾಶ ಕೊಡಬೇಕು. ಹೊಸ ಜಾವಳಿಗಳನ್ನು ಅಭ್ಯಾಸ ಮಾಡಿದ್ದೇನೆ. ತಮ್ಮ ಮುಂದೆ ಅವುಗಳನನು ನುಡಿಸಲು ಇಚ್ಛಿಸುತ್ತೇನೆ’’ ಎಂದರು. ರಾಜರು ಸಂತೋಷದಿಂದ ಒಪ್ಪಿದರು. ಅದರಂತೆಯೇ ಧನಂರವರು ನುಡಿಸಿದರು. ಮದುವೆಯ ಐದಾರು ದಿವಸಗಳೂ ಪ್ರತಿದಿನ ಧನಂರವರ ಕಚೇರಿ ಇದ್ದೇ ಇರುತ್ತಿತ್ತು.

ಅಗ್ರತಾಂಬೂಲ

ಮದುವೆಯ ಸಮಾರಂಭವೆಲ್ಲ ಮುಗಿದ ನಂತರ ರಾಜರು ದರ್ಬಾರ್ ನಡೆಸಿ ಎಲ್ಲ ವಿದ್ವಾಂಸರಿಗೂ ಉದಾರವಾಗಿ ಉಡುಗೊರೆಗಳನ್ನು ಕೊಟ್ಟು ಸನ್ಮಾನಿಸಿದರು.

ಭಾಗವತರು ಎದ್ದುನಿಂತು ಈ ಸಭೆಯ ಅಗ್ರ ತಾಂಬೂಲವನ್ನು ಪಡೆಯಲು ಅರ್ಹತೆ ಇರುವವರು ಧನಂರವರು. ಅವರಿಗೇ ಅಗ್ರತಾಂಬೂಲವನ್ನು ಕೊಡಬೇಕು’’ ಎಂದರು. ರಾಜರು ಮತ್ತೊಮ್ಮೆ ಭಾಗವತರ ವ್ಯವಹಾರ ಚತುರತೆಗೆ ಬೆರಗಾದರು. ‘‘ನೀವು ಹೇಳಿದ ಮೇಲೆ ಬೇರೆ ಮಾತೇನು? ಆದರೆ ಅಗ್ರತಾಂಬೂಲವನ್ನು ನಿಮ್ಮ ಕೈಯಿಂದ ಕೊಡಿಸಬೇಕೆಂಬುದು ನಮ್ಮ ಇಷ್ಟ. ತಮಗೆ ಅಭ್ಯಂತರವೇನೂ ಇಲ್ಲವಷ್ಟೆ?’’ ಎಂದರು. ಭಾಗವತರು ಒಮ್ಮನಸ್ಸಿನಿಂದ ಒಪ್ಪಿದರು. ರಾಜರು ಒಂದು ದೊಡ್ಡ ಹರಿವಾಣದಲ್ಲಿ ಭಾರಿ ಸೀರೆ, ಖಣ, ವಿಶೇಷ ಖಿಲ್ಲತ್ತು, ಸಂಭಾವನೆಗಳನ್ನು ಇಟ್ಟು ಭಾಗವತರ ಕೈಲಿ ಧನಂರವರಿಗೆ ಕೊಡಿಸಿದರು. ಧನಂರವರಿಗೆ ಕೃತಜ್ಞತೆಯು ಉಕ್ಕಿ ಬಾಯಿಂದ ಮಾತು ಹೊರಡದಾಯಿತು.

ವಿಜಯನಗರಂ ಆಸ್ಥಾನದಲ್ಲಿ

ಆಂಧ್ರಪ್ರದೇಶದ ವಿಜಯನಗರಂ ಸಂಗೀತಕ್ಕೆ ಹೆಸರಾಗಿತ್ತು. ಅಲ್ಲಿನ ರಾಜ ಆನಂದ ಗಜಪತಿಯು ವಿದ್ಯಾಪಕ್ಷಪಾತಿ. ಕಲೆಯಲ್ಲಿ ತೀವ್ರ ಆಸಕ್ತಿ ಇದ್ದವನು. ಆಂಧ್ರದ ಮಹಾವೈಣಿಕರಾಗಿದ್ದ ವೆಂಕಟರಮಣ ದಾಸರ ಪೋಷಕ. ಅವರ ಅರಮನೆಯಲ್ಲಿ ಕಲಾರಾಧನೆ ತಡೆಯಿಲ್ಲದೆ ನಡೆಯುತ್ತಿತ್ತು. ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತ ವಿದ್ವಾಂಸ-ವಿದುಷಿಯರನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡು, ಅವರಿಂದ ಸಂಗೀತ ಕಚೇರಿಗಳನನು ಏರ್ಪಡಿಸಿ, ಹೇರಳವಾದ ಸನ್ಮಾನಗಳನ್ನು ಕೊಟ್ಟು ಕಳುಹಿಸುತ್ತಿದ್ದನು. ಧನಂರವರ ಕೀರ್ತಿ ಅವನ ಕಿವಿ ಮುಟ್ಟಿತ್ತು. ಅವರನ್ನು ಒಮ್ಮೆ ಕರೆಸಿಕೊಂಡು ಅರಮನೆಯಲ್ಲಿ ಅವರ ಕಚೇರಿಯನ್ನುಕೇಳಿ ಆನಂದಪಟ್ಟನು. ಅದರಲ್ಲೂ ಕ್ಷೇತ್ರಯ್ಯ ನವರ ಪದಗಳನ್ನು ಕೇಳಿ ಬೆರಗಾದನು. ಅರಮನೆಗೆ ಸಮೀಪದ ಸರೋವರದಲ್ಲಿ ತೆಪ್ಪವನ್ನು ಕಟ್ಟಿಸಿ, ಅದರಲ್ಲಿ ತಾನೂ ವೆಂಕಟರಮಣ ದಾಸರೂ ಕುಳಿತು, ಧನಂರವರ ವೀಣಾವಾದನವನ್ನು ಕೇಳಿ ಮೈ ಮರೆತರು. ಹುಣ್ಣಿಮೆಯ ಚಂದ್ರನ ಪ್ರತಿಬಿಂಬವು ನೀರಿನಲ್ಲಿ ಕಾಣುತ್ತಿದೆ. ತಂಪಾದ ಗಾಳಿ ಬೀಸುತ್ತಿದೆ. ತೆಪ್ಪದ ಎರಡೂ ಬದಿಗಳಲ್ಲೂ ಸಣ್ಣ ದೋಣಿಗಳಲ್ಲಿ ರಾಣಿವಾಸದವರು ಕುಳಿತು ಧನಂರವರ ವೀಣಾವಾದನವನ್ನು ಏಕಾಗ್ರಚಿತ್ತರಾಗಿ ಕೇಳುತ್ತಿದ್ದಾರೆ. ರಾತ್ರಿಕಳೆದು ಬಾಹ್ಯಲೋಕದ ಪ್ರಜ್ಞೆ ಬಂದುದು. ವೆಂಕಟರಮಣ ದಾಸರು ಆನಂದಭಾಷ್ಪವನ್ನು ಸುರಿಸುತ್ತ ‘‘ಅಮ್ಮಾ ಎಂತಹ ರಸದೌತಣವನ್ನು ಉಣಬಡಿಸಿದೆ? ನೀನು ವಿದ್ಯಾಧರಿಯೇ ಸರಿ’’ ಎಂದರು. ಗಜಪತಿಯು ‘‘ಬರಿಯ ವಿದ್ಯಾಧರಿಯಲ್ಲ, ಸಿದ್ಧ ವಿದ್ಯಾಧರಿ. ನಮಗೆ ಉಂಟಾದ ಆನಂದವನ್ನು ವರ್ಣಿಸಲು ಸಾಧ್ಯವಿಲ್ಲ’’ ಎಂದು ಮುಕ್ತಕಂಠದಿಂದ ಹೊಗಳಿ ವಿಶೇಷ ಮರ‍್ಯಾದೆ ಮಾಡಿ, ಭಾರಿ ಸಂಭಾವನೆಯನ್ನು ಕೊಟ್ಟು ಸನ್ಮಾನಿಸಿದನು.

ಎಲ್ಲ ದೇಶಗಳವರಿಗೆ ಸಂತೋಷ

ಬರೋಡದ ಗಾಯಕವಾಡರೂ, ಮೈಸೂರು, ದರ್ಭಾಂಗ  ಮತ್ತು ತಿರುವಾಂಕೂರಿನ ಆಳರಸರೂ ಧನಂರವರ ವೀಣಾವಾದನದ ಸವಿಯನ್ನುಂಡು ಅವರಿಗೆ ಸೂಕ್ತ ರಾಜಮರ್ಯಾದೆಗಳನ್ನು ಮಾಡಿದ್ದರು. ತಿರುವಾಂಕೂರಿನ ಎಳೆಯರಾಣಿ ಕೆಲಕಾಲ ಧನಂರವರಲ್ಲಿ ಶಿಷ್ಯವೃತ್ತಿ ಮಾಡಿದ್ದರು. ಪಾಶ್ಚಾತ್ಯರಾದ ಲಾರ್ಡ್ ಕಾರ್ಮೈಕೆಲ್, ಲಾರ್ಡ್ ರಿಪ್ಪನ್, ಗ್ರಾಂಟ್ ಡಫ್ ಮತ್ತು ಡಾಕ್ಟರ್ ಮಿಲ್ಲರ್‌ರವರಿಗೆ ಧನಂರವರ ವೀಣೆಯೆಂದರೆ ಪ್ರಾಣ ಅವರ ಕಚೇರಿಗಳಿಗೆ ಹೋಗಿ ಅವರ ವೀಣೆಯ ವಾದನದ ವೈಖರಿಯನ್ನು ಕಂಡು ಕೇಳಿ ಬೆರಗಾಗುತ್ತಿದ್ದರು. ಎಷ್ಟೋ ಸಲ ಅವರ ಮನೆಗೆ ಹೋಗಿ ಅವರನ್ನೇ ವೀಣೆ ನುಡಿಸುವಂತೆ ಕೇಳಿಕೊಳ್ಳುತ್ತಿದ್ದರು. ಧನಂರವರ ಮನಸ್ಸು ಬಲು ಮೃದು. ಯಾರು, ಯಾವಾಗ ಕೇಳಿದರೂ ‘ಇಲ್ಲ’ ವೆನ್ನುತ್ತಿರಲಿಲ್ಲ. ವಯಸ್ಸಾಗಿ ಶರೀರವು ಜರ್ಝರಿತವಾಗಿ ಶಕ್ತಿ ಉಡುಗಿದ್ದರೂ, ಸ್ವಲ್ಪವಾದರೂ ನುಡಿಸಿ ರಸಿಕರನ್ನು ತೃಪ್ತಿಪಡಿಸುತ್ತಿದ್ದರು.

ಉಸ್ತಾದ್ ಅಬ್ದುಲ್ ಕರೀಂಖಾನ ಮೆಚ್ಚುಗೆ

ಕರ್ನಾಟಕ ಸಂಗೀತದ ಮೇಲೆ ಹೀಗೆ ಪ್ರಭುತ್ವ ಸಾಧಿಸಿದರೆ ಸಾಲದೆಂಬಂತೆ ಧನಂ ಹಿಂದೂಸ್ತಾನಿ ಸಂಗೀತವನ್ನು ಕಲಿತರು. ತಾವು ಕಾಶಿಗೆ ಹೋಗಾಗಲೆಲ್ಲ ಅಲ್ಲಿನ ಉಸ್ತಾದರ ಬಳಿ ಶಿಕ್ಷಣ ಪಡೆಯುತ್ತಿದ್ದರು. ಅವರ ಅಗಾಧ ಬುದ್ಧಿಶಕ್ತಿಯನ್ನು ಮೆಚ್ಚಿಕೊಂಡು ಅನೇಕ ಹೆಸರಾಂತ ಉಸ್ತಾದರು ಧನಂರವರಿಗೆ ಹಿಂದೂಸ್ತಾನಿ ಸಂಗೀತವನ್ನು ಹೇಳಿಕೊಟ್ಟರು. ರಾಜಾ ನವಾತ್ ಆಲಿಖಾನ್ ಎಂಬ ರಸಿಕ ಶ್ರೇಷ್ಠರಂತಹವರು ಅವರ ವೀಣಾವಾದನ ಗಾಯನವನ್ನು ತುಂಬಿದ ಹೃದಯದಿಂದ ಹೊಗಳಿದರು. ಹಿಂದೂಸ್ತಾನಿ ರಾಗಗಳನನು ವೀಣೆಯಲ್ಲಿ ನುಡಿಸಿ ಸಂಕೀತ ಕಚೇರಿಗಳನ್ನು ನಡೆಸಿದರು. ಹಿಂದೂಸ್ತಾನಿ ಸಂಗೀತದ ಅತ್ಯುತ್ತಮ ಕಲಾಕಾರನೆನಿಸಿದ ಸಂಗೀತರತ್ನ ಉಸ್ತಾದ್ ಅಬ್ದುಲ್ ಕರೀಂಖಾನ್‌ರವರು ಧನಂರವರ ವೀಣಾವಾದನವನ್ನು ಕೇಳಲು ಆಶಿಸಿ, ಮದರಾಸಿಗೆ ಬಂದಿದ್ದಾಗ ಧನಂರವರ ಮನೆಗೆ ಬಂದು ಅವರ ವೀಣಾವಾದನವನ್ನು ಕೇಳುವ ಅಪೇಕ್ಷೆಯನ್ನು ವ್ಯಕ್ತಪಡಿಸಿದರು. ಜೊತೆಯಲ್ಲಿ ಪ್ರಬಲ ಜಲತರಂಗ್ ವಿದ್ವಾನ್ ರಮಣಯ್ಯ ಚೆಟ್ಟಿಯಾರರೂ ಇದ್ದರು. ಧನಂರವರು ಒಡನೆಯೇ ತಮ್ಮ ವೀಣೆಯನ್ನು ತೆಗೆದುಕೊಂಡು, ಶ್ರುತಿಮಾಡಿಕೊಂಡು, ಸ್ವಲ್ಪ ಅಠಾಣರಾಗವನ್ನು ನುಡಿಸಿದರು. ಆ ರಾಗದ ಮುಖ್ಯ ಸಂಚಾರಗಳನ್ನು ಮೊದಲು ಪರಿಚಯಮಾಡಿಸಿ, ನಂತರ ಕ್ರಮವಾಗಿ ರಾಗವನ್ನು ವಿಸ್ತರಿಸಿ ಭಾವನಾ ಪ್ರಪಂಚಕ್ಕೆ ಕೊಂಡೊಯ್ದರು. ಕರೀಂಖಾನ್‌ರವರು ಮೈಮರೆತು ‘‘ಶಾಭಾಸ್, ನೀವು ಸರಸ್ವತಿಯ ಅವತಾರವೇ’’ ಎಂಬ ಉದ್ಗಾರವು ಅವರ ಬಾಯಿಂದ ತಾನೇ ತಾನಾಗಿ ಹೊರಟಿತು. ನೆರದಿದ್ದ ಶ್ರೋತೃಸಮುದಾಯವು ಖಾನರ ಹಿರಿಮೆಯನ್ನು ಕೊಂಡಾಡಿ, ಕರ್ನಾಟಕ ಸಂಗೀತದ ಅಠಾಣವನ್ನು ಹೋಲುವ ಹಿಂದುಸ್ತಾನಿ ರಾಗವನ್ನು ಹಾಡಿ ತೋರಿಸಬೇಕೆಂದು ಖಾನರನ್ನು ಪ್ರಾರ್ಥಿಸಿತು.

ಖಾನರು ತಮ್ಮ ಶಿಷ್ಯರನ್ನು ತಮ್ಮ ಬಿಡಾರಕ್ಕೆ ಕಳುಹಿಸಿ ತಂಬೂರಿಯನ್ನು ತರಿಸಿಕೊಂಡು, ಅದನ್ನು ಶುದ್ಧವಾಗಿ ಶ್ರುತಿಮಾಡಿ ಸ್ವಲ್ಪಹೊತ್ತು ಷಡ್ಜದಲ್ಲಿಯೇ ನಿಂತು ಶ್ರುತಿಯೊಡನೆ ಲೀನವಾದ ಶಾರೀರವು ಅದಕ್ಕೆ ಬಂದೊಡನೆಯೆ ಮಿಯಾ ಮಲ್ಹಾರ್ ರಾಗವನ್ನು ವಿಸ್ತರಿಸಿ ಒಂದು ಚೀಸನ್ನು ಹಾಡಿದರು. ಧನಂರವರ ಸಂತೋಷ ಅಷ್ಟಿಷ್ಟಲ್ಲ. ಆರ್ಥಿಕ ಪರಿಸ್ಥಿತಿಯು ಅನುಕೂಲವಾಗಿಲ್ಲದಿದ್ದರೂ ಸ್ವಲ್ಪ ಹಣವನ್ನು ಖಾನರ ಕೈಯಲ್ಲಿಟ್ಟು ‘‘ನಿಮ್ಮ ಗಂಧರ್ವ ಗಾನಕ್ಕೆ ಇದು ನನ್ನ ಅಲ್ಪಕಾಣಿಕೆ. ದಯವಿಟ್ಟು ಸ್ವೀಕರಿಸಬೇಕು’’ ಎಂದರು. ಕರೀಂಖಾನರು ‘‘ನಿಮ್ಮ ಅಠಾಣ ನನಗೆ ಸ್ಫೂರ್ತಿಕೊಟ್ಟಿತು. ಚೆನ್ನಾಗಿ ಬಂದಿದ್ದರೆ ಅದರ ಕೀರ್ತಿ ನಿಮಗೆ’’ ಎಂದು ಹೇಳಿ ಕೈ ಮುಗಿದರು. ಹಿಂದೊಮ್ಮೆ ಉಸ್ತಾದ್ ನಾಸಿರುದ್ದೀನ್ ಖಾನರವರಿಗೂ ಇಂತಹ ಅನುಭವವೇ ಉಂಟಾಯಿತೆಂದು ಧನಂರವರ ಸಮೀಪಪವರ್ತಿಗಳು ಹೇಳಿದ್ದಾರೆ. ಪ್ರಸಿದ್ಧ ಹಿಂದೂಸ್ತಾನಿ ಗಾಯಕಿ ಗೋಹರ್ ಜಾನ್ ಮದರಾಸಿಗೆ ಬಂದಿದ್ದಾಗ, ಅವರೂ ಧನಂರವರೂ ಒಬ್ಬರಾಗುತ್ತಲ್ಲೊಬ್ಬರು ಕಚೇರಿ ಮಾಡಿ ರಸಿಕರನ್ನು ಗಂಧರ್ವ ಲೋಕಕ್ಕೆ ಕೊಂಡೊಯ್ದರಂತೆ.

ಒಂದು ಪ್ರಸಂಗ

ಧನಂರವರ ವೀಣಾವೈಭವಕ್ಕೆ ಮಾರುಹೋದವರಲ್ಲಿ ಪಿಟೀಲು ವಿದ್ವಾನ್ ತಿರುಚಿ ಗೋವಿಂದಸ್ವಾಮಿ ಪಿಳ್ಳೆಯವರೂ ಒಬ್ಬರು. ಪಿಳ್ಳೆಯವರು ಧನಂರವರ ಶಿಷ್ಯರಲ್ಲದಿದ್ದರೂ ಅವರ ಕೃತಿಗಳ ಪಾಠಾಂತರ ಮತ್ತು ಶೈಲಿಗಳಿಂದ ಪ್ರಭಾವಿತರಾಗಿದ್ದರು. ಅವರಲ್ಲಿ ಶಿಷ್ಯವೃತ್ತಿ ಮಾಡಿ ಪ್ರಸಿದ್ಧರಾದ ಪಾಪಾ ಕೆ.ಎಸ್.ವೆಂಕಟರಾಮಯ್ಯನವರು ಧನಂರವರನ್ನು ಅವರ ಮನೆಯಲ್ಲಿ ಮೊಟ್ಟ ಮೊದಲು ನೋಡಿದ್ದು, ಧನಂ ಅವರ ವೀಣಾವಾದನವನ್ನು ಕೇಳಿದ್ದು.

ಒಂದು ದಿನ ಬೆಳಗಿನ ಜೀವ. ಇನ್ನೂ ಕತ್ತಲು ಆವರಿಸಿತ್ತು. ಪಿಳ್ಳೆಯವರಲ್ಲಿ ಗುರುಕುಲವಾಸ ಮಾಡುತ್ತಿದ್ದ ಪಾಪಾ ವೆಂಕಟರಾಮಯ್ಯನವರು ಪಿಳ್ಳೆಯವರ ಮನೆಯ ಹೊರ ಜಗುಲಿಯ ಮೇಲೆ ಮಲಗಿದ್ದರು. ಮನೆಯ ಮುಂದೆ ಏನೋ ಪದಾರ್ಥ ಬೀಳುವ ಶಬ್ದವಾಯಿತು. ಜೊತೆಯಲ್ಲಿ ಹೆಂಗಸಿನ ದೀನಕಂಠ ಸ್ವರವೂ ಕೇಳಿಸಿತು. ಪಾಪಾ ಎದ್ದು ನೋಡಿದರು. ಒಬ್ಬ ವೃದ್ಧೆ ಮನೆಯ ಹೊರಗಿನ ಮೆಟ್ಟಿಲು ಕತ್ತಲಲ್ಲಿ ಸರಿಯಾಗಿ ಕಾಣಿಸದೆ ಎಡವಿ ಏನನ್ನೋ ಎತ್ತಿ ಹಾಕಿದ್ದಾರೆ. ಒಳಗೆ ಆಗ ತಾನೆ ಎಚ್ಚೆತ್ತಿದ್ದ ಪಿಳ್ಳೆಯವರಿಗೆ ಶಬ್ದವು ಕೇಳಿಸಿತು. ‘‘ಬೆಳಗಿನ ಜಾವ ಏನೀ ಗಲಾಟೆ?’’ ಎಂದುಕೊಂಡು ಬಾಗಿಲು ತೆಗೆದು ಲಾಂದ್ರದ ಬೆಳಕನ್ನು ಹೊರಚೆಲ್ಲಿದರು. ಅವರ ಕಣ್ಣಿಗೆ ಬಿದ್ದುದು, ಆ ವೃದ್ಧೆ, ಕಾಲಿನ ಬಳಿ ಒಡೆದು ಬಿದ್ದಿರುವ ವೀಣೆ. ಯಾರೆಂದು ಕೂಡಲೇ ಗೊತ್ತಾಯಿತು. ಅಮ್ಮಾ, ಇದೇನು ಈ ಅವೇಳೆಯಲ್ಲಿ ಇಲ್ಲಿ? ಯಾವಾಗ ಬಂದಿರಿ? ರೈಲಿನಲ್ಲಿ ಬಂದಿರಾ? ಮೊದಲೇ ತಿಳಿಸಿದ್ದರೆ ನಾನೇ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದೆನಲ್ಲ! ಅನ್ಯಾಯವಾಗಿ ವೀಣೆ ಹೊಡೆದು ಹೋಯಿತಲ್ಲ! ಪರವಾಗಿಲ್ಲ. ಒಳಗೆ ಬನ್ನಿ. ನಾನು ವೀಣೆಯನ್ನು ತಕ್ಷಣ ಸರಿಮಾಡಿಸಿಕೊಡುತ್ತೇನೆ’’ ಎಂದು ಆದರದಿಂದ ಧನಂರವರನ್ನು ಒಳಗೆ ಕರೆದುಕೊಂಡು ಹೋಗಿ ಕುಳ್ಳಿರಿಸಿದರು. ಬೆಳಗಾಗುತ್ತಿದ್ದಂತೆಯೇ ಒಬ್ಬ ಕುಶಲನಾದ ವೀಣೆ ಕೆಲಸದವನಿಂದ ವೀಣೆಯನ್ನು ಸರಿಮಾಡಿಸಿ ಕೊಟ್ಟರು. ಶಿಷ್ಯ ಪಾಪಾರವರನ್ನು ಧನಂರವರಿಗೆ ಪರಿಚಯ ಮಾಡಿಸಿ ಧನಂರವರ ಮುಂದೆ ಅವರು ಪಿಟೀಲು ನುಡಿಸುವಂತೆ ಹೇಳಿದರು. ಪಾಪಾರವರನ್ನು ಧನಂರವರಿಗೆ ಪರಿಚಯ ಮಾಡಿಸಿ ಧನಂರವರ ಮುಂದೆ ಅವರು ಪಿಟೀಲು ನುಡಿಸುವಂತೆ ಹೇಳಿದರು. ಪಾಪಾರವರು ಭಯಭಕ್ತಿಯಿಂದ ಕಲ್ಯಾಣಿ ರಾಗದ ವನಜಾಕ್ಷಿ ಅಟತಾಳವರ್ಣವನ್ನು ನುಡಿಸಿದರು. ಪಿಳ್ಳೆಯವರು ಧನಂರವರಿಂದ ಕೆಲವು ಕಚೇರಿಗಳನ್ನು ಮಾಡಿಸಿ ಮದರಾಸಿಗೆ ಕಳುಹಿಸಿಕೊಟ್ಟರು.

‘‘ಗೌಳಿ ರಾಗ ಧನಂ ಅವರ ಸೊತ್ತು’’

ಸ್ವತಃ ಶ್ರೇಷ್ಠ ವೈಣಿಕ ವಿದ್ವಾಂಸರಾಗಿದ್ದ ಗೋವಿಂದಸ್ವಾಮಿ ಪಿಳ್ಳೆಯವರು ಒಮ್ಮೆ ‘‘ಬದರಿ ವನ ಮೂಲ’’ ಎಂಬಸಾಲನ್ನು ಧನಮ್ಮಾಳರು ನುಡಿಸಿದಂತೆಯೇ ನುಡಿಸಬೇಕೆಂದು ಪ್ರಯತ್ನಿಸಿದರು. ನೂರಾರು ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಒಬ್ಬ ಸ್ನೇಹಿತರಿಗೆ ಹೇಳಿದರಂತೆ, ‘‘ನಾನು ಅಮ್ಮಾಳ್ ಅವರ ಹಾಗೆ ನುಡಿಸಬೇಕಾದರೆ ಇನ್ನೊಂದು ಜನ್ಮವನ್ನೆತ್ತಿ ಎತ್ತಬೇಕು’’ ಎಂದು.

ಧನಂರವರ ನುಡಿಕೆ ಪಾಪಾರವರ ಮೇಲೆ ಅಗಾಧವಾದ ಪರಿಣಾಮವನ್ನುಂಟುಮಾಡಿತು. ಗುರು ಪಿಳ್ಳೆಯವರ ನುಡಿಕೆಯ ಶೈಲಿಯ ಜೊತೆಯಲ್ಲಿ ಧನಂರವರ ರಾಗ ಕಲ್ಪನೆಯನ್ನು ಮಿಲನಗೊಳಿಸಿ, ತಮ್ಮ ನುಡಿಕೆಯನ್ನು ಇನ್ನೂ ವೈಶಿಷ್ಟ್ಯಪೂರ್ಣವನ್ನಾಗಿ ಮಾಡಿಕೊಂಡರು. ಒಮ್ಮೆಗುರುಗಳು ಪಾಠ ಹೇಳಿಕೊಡುತ್ತಿದ್ದಾಗ, ಅವರು ನುಡಿಸಿದ ಗೌಳರಾಗದ ತುಣುಕು ಪಾಪಾರವರನ್ನು ಆಕರ್ಷಿಸಿತು. ‘ಗೌಳ’ ರಾಗವನ್ನು ವಿಸ್ತಾರವಾಗಿ ನುಡಿಸಿ ತೋರಿಸಬೇಕೆಂದು ಕೇಳಿಕೊಂಡರು. ಪಿಳ್ಳೆಯವರು ‘‘ಏನು, ನಾನು ಗೌಳ ನುಡಿಸಬೇಕೇ? ಅದು ಧನಂರವರ ಸ್ವತ್ತು. ಅವರ ಹಾಗೆ ಯಾರೂ ಆ ರಾಗವನ್ನು ವಿಸ್ತರಿಸಲಾರರು. ಅವರ ಹತ್ತಿರ ಕೆಲವು ಕಾಲ ಇದ್ದು ಗೌಳ, ಆನಂದ ಭೈರವಿ, ಯದುಕುಲ ಕಾಂಬೋದಿ, ಹಮೀರ್ ಕಲ್ಯಾಣಿ ಹುಸೇನಿ ರಾಗಗಳ ಸೊಬಗನ್ನು ಅವರಿಂದ ತಿಳಿದುಕೊ ಎಂದರು.

ಪಾಪಾ ವೆಂಕಟರಾಮಯ್ಯನವರು ಮದರಾಸಿಗೆ ಹೋಗಿ ಅಲ್ಲಿ ಸ್ವಲ್ಪಕಾಲವಿದ್ದು ಧನಂರವರು ಆ ರಾಗಗಳನ್ನೂ, ಮತ್ತಿತರ ಶಕ್ತಿ ರಾಗಗಳನ್ನೂ ನುಡಿಸುವ ವೈಖರಿಯನ್ನು ಕಂಡು, ತಾವೂ ತಮ್ಮ ನುಡಿಕೆಯನ್ನು ಧನಂರವರ ಶೈಲಿಗೆ ಸರಿಹೊಂದುವಂತೆ ಪರಿವರ್ತಿಸಿಕೊಂಡರು. ಅವರು ಹಮೀರ್ ಕಲ್ಯಾಣಿ ರಾಗ ನುಡಿಸುವುದನ್ನು ಕೇಳಿ ಅರಿಯಕುಡಿ ರಾಮಾನುಜ ಅಯ್ಯಂಗಾರ್ಯರಂತಹ ಘನ ವಿದ್ವಾಂಸರೇ ಹೊಗಳಿದ್ದಾರೆ.

ನಾದೋಪಾಸಕರು

ಧನಂರವರ ನಾದೋಪಾಸನೆಯಲ್ಲಿ ಒಂದು ಕ್ರಮವಿತ್ತು. ಪ್ರತಿ ಶುಕ್ರವಾರ, ಶ್ರೀಕೃಷ್ಣ ಜಯಂತಿ, ಯುಗಾದಿ ಹಬ್ಬದ ದಿನ ಸಂಜೆ ಅವರು ತಮ್ಮ ಮನೆಯಲ್ಲಿ ಎರಡು ಘಂಟೆಗಳಿಗೆ ಕಡಮೆ ಇಲ್ಲದೆ ವೀಣೆ ನುಡಿಸುವ ಪದ್ಧತಿಯನ್ನಿಟ್ಟು ಕೊಂಡಿದ್ದರು. ಅದನ್ನು ಕೇಳಲು ರಸಿಕ ತಂಡ ಸಿದ್ಧವಾಗಿರುತ್ತಿತ್ತು.

ಧನಂರವರು ನಾದೋಪಾಸನೆಯಲ್ಲಿ ತಲ್ಲೀನರಾಗಿದ್ದಾಗ ರಸಭಂಗವಾದರೆ ಸಹಿಸುತ್ತಿರಲಿಲ್ಲ. ಅವರು ಯಾರಾದರೂ ಸರಿ, ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಅವರಿಗೆ ಬೇಕಾಗಿದ್ದುದು ಸಂಗೀತವನ್ನು ತಿಳಿದವರ ಗೋಷ್ಠಿ. ಆಡಂಬರದವರ ಕೂಟವಲ್ಲ. ಅದರಿಂದಲೇ ಅವರ ಕಚೇರಿಗೆ ಬರುತ್ತಿದ್ದ ರಸಿಕರೆಲ್ಲರೂ ವೇಳೆಯ ಬಗ್ಗೆ ಚಿಂತನೆ ಮಾಡುತ್ತಿರಲಿಲ್ಲ. ಅಂದರೆ ಅವರ ವೀಣಾವಾದನದಲ್ಲಿ ಎಂತಹ ಮೋಡಿ ಅಡಗಿತ್ತೆಂಬುದು ಗೋಚರವಾಗುತ್ತದೆ.

ಅವರ ವೀಣಾವಾದನದಲ್ಲಿನ ಮುಖ್ಯ ಗುಣಗಳು

ವೀಣಾ ಧನಮ್ಮಾಳ್‌ರವರ ವಾದನದಲ್ಲಿನ ಮುಖ್ಯಾಂಶಗಳನ್ನು ವಿವರವಾಗಿ ಪರಿಶೀಲಿಸಿದರೆ ನೈಜ ಶುದ್ಧ ಸಂಗೀತದ ಗುಣಗಳು ಏನೆಂಬುದು ಗೊತ್ತಾಗುತ್ತದೆ. (೧) ಸುಸ್ವರ (೨) ಹ್ರಸ್ವತೆ (೩) ಲಯ ಶುದ್ಧತೆ (೪) ರಾಗ ಭಾವ (೫) ಸಂಪ್ರದಾಯ ಶರಣತೆ (೬) ಸಾಹಿತ್ಯ ನಿರೂಪಣೆಯಲ್ಲಿ ಒಂದು ವೈಶಿಷ್ಟ್ಯ (೭) ರಸ ಪ್ರಧಾನತೆ (೮) ಬಾಯಿ ಹಾಡಿಕೆಯಲ್ಲಿನ ಅಂತಃಸತ್ವ (೯) ಮನೋಧರ್ಮ ಮತ್ತು (೧೦) ವಿಪುಲವಾದ ಕೃತಿಸಂಪತ್ತು. ಈ ಹತ್ತು ಅಂಶಗಳು ಅವರ ನುಡಿಕೆಯ ತಿರುಳು ಎನ್ನಬಹುದು. ಮೊಟ್ಟ ಮೊದಲನೆಯದಾಗಿ ಧನಂರವರು ಶ್ರುತಿಗೆ ಹೆಚ್ಚು ಗಮನಕೊಡುತ್ತಿದ್ದರು. ಬಿರಟೆಗಳನ್ನು ತಿರುಗಿಸಿ ಸರಿಯಾಗಿ ಶ್ರುತಿ ಮಾಡಿಕೊಂಡು ಷಡ್ಜ, ಪಂಚಮ, ಮಂದ್ರಗಳನ್ನೂ, ತಾಳದ ತಂತಿಗಳನ್ನೂ ಸ್ವಲ್ಪಹೊತ್ತು ಮೀಟಿ ನೋಡಿ ಎಲ್ಲವೂ ಶ್ರುತಿ ಸೇರಿದ್ದರೇನೇ ಅವರು ನುಡಿಸಲು ಆರಂಭಿಸುತ್ತಿದ್ದರು. ಕೂದಲೆಳೆ ವ್ಯತ್ಯಾಸವಾಗುವುದನ್ನು ಅವರು ಸಹಿಸುತ್ತಿರಲಿಲ್ಲ. ಹೀಗೆ ಶ್ರುತಿ ಸೇರಿದ ನಂತರ ಅವರ ಹಿತವಾದ ಮೀಟಿನ ಸಹಾಯದಿಂದ ಸುಸ್ವರ ಹೊರಡುತ್ತಿತ್ತು.

ರಾಗ ನುಡಿಸುವಾಗ ಧನಂ ತುಂಬಾ ಮಿತವಾಗಿರುತ್ತಿದ್ದರು. ಗಮಕಕ್ಕೆ ಎಷ್ಟು ಬೇಕೋ ಅಷ್ಟೇ ಸಂಚಾರಗಳು. ಉದ್ದುದ್ದವಾದ ವಾಕ್ಯಗಳಿಲ್ಲ. ನುಡಿಸಿದ್ದನ್ನೇ ನುಡಿಸುವ ಹವ್ಯಾಸವಿಲ್ಲ. ಕೆಲವೇ ಪ್ರಯೋಗಗಳಿದ್ದರೂ ರಾಗ ಭಾವವೂ ಸ್ಫುಟವಾಗಿ ಎದ್ದು ಕಾಣುತ್ತಿತ್ತು.

ಕೃತಿಕರ್ತರ ವೈಶಿಷ್ಟ್ಯ ತೋರಿಸುವ ಕೌಶಲ

ಲಯಶುದ್ಧತೆಯ ಹೆಸರಿನಲ್ಲಿ ಚಿಲ್ಲರೆ, ಚಮತ್ಕಾರ ಕೆಲಸಗಳಿರಲಿಲ್ಲ. ತಾಳದ ಮೇಲೆ ಸರ್ವಸ್ವಾಮ್ಯವನ್ನು ಹೊಂದಿದ್ದರೂ, ಆರ್ಭಟಕ್ಕೆ ಎಡೆಕೊಡುತ್ತಿರಲಿಲ್ಲ. ಶ್ಯಾಮಾ ಶಾಸ್ತ್ರಿಯವರ ಮಿಶ್ರಛಾಪು ತಾಳದ ಭೈರವಿ ಸ್ವರಜತಿ ‘‘ಕಾಮಾಕ್ಷಿ’’ ಅವರ ಅಚ್ಚುಮೆಚ್ಚಿನ ಹಾಡಾಗಿತ್ತು. ಸಂಪ್ರ ದಾಯಕ್ಕೆ ಸಂಪೂರ್ಣ ಶರಣರಾಗಿದ್ದು, ಒಳ್ಳೆಯ ಪಾಠಾಂತರದಿಂದ ಕೃತಿಗಳ ನಿರೂಪಣೆಯಲ್ಲಿ ಹೆಸರು ಪಡೆದಿದ್ದರು. ಶೃಂಗಾರಾದಿ ನವರಸಗಳನ್ನು ಕೃತಿಗಳಲ್ಲಿ ಅಚ್ಚುಕಟ್ಟಾಗಿ ತೋರಬಲ್ಲ ಸಾಮರ್ಥ್ಯವಿತ್ತು. ಧನಂರವರ ವೀಣಾವಾದನವು ತಾನ ಪ್ರಧಾನವಾಗಿತ್ತು. ಘನ ರಾಗಗಳೆನಿಸಿದ ನಾಟ, ಗೌಳ, ಅರಭಿ, ವರಾಳಿ ಮತ್ತು ಶ್ರೀ ಇವುಗಳಲ್ಲಿ ತಾನವನ್ನು ಲಯಬದ್ದವಾಗಿ ನುಡಿಸುವ ಕಲೆಯಲ್ಲಿ ಸಿದ್ಧಹಸ್ತರು. ಮೊದಲೇ ಹೇಳಿದಂತೆ ಅನೇಕ ಅತ್ಯಮೂಲ್ಯ ರಚನೆಗಳ ಭಂಡಾರವಾಗಿದ್ದರು. ದೀಕ್ಷಿತರ ಕೃತಿಗಳ ಗಮಕಗಳನ್ನೂ, ಪುರಂದರರ ರಚನೆಗಳ ಉದಾತ್ತತೆಯನ್ನೂ, ತ್ಯಾಗರಾಜರು ಕೃತಿಗಳ ಭಕ್ತಿಭಾವವನ್ನೂ, ಶ್ಯಾಮಾಶಾಸ್ತ್ರಿಗಳ ಕೃತಿಗಳ ಭಕ್ತಿಭಾವವನ್ನೂ, ಶ್ಯಾಮಾಶಾಸ್ತ್ರಿಗಳ ಕೃತಿಗಳಲ್ಲಿ ಹೆಚ್ಚಾಗಿ ಕಂಡುಬರುವ ಕರುಣಾರಸವನ್ನೂ, ಕ್ಷೇತ್ರಯ್ಯನವರ ಪದಗಳಲ್ಲಿನ ನಾಯಕ ನಾಯಕಿ ಭಾವವನ್ನೂ, ಉಮಾದಾಸರ ಕೃತಿಗಳ ಸಮಗ್ರತೆಯನ್ನೂ ಮತ್ತು ಇತರ ಕೃತಿಕರ್ತರ ರಚನೆಗಳ ಹೆಚ್ಚಳವನ್ನೂ ಸರ್ವಾಂಗ ಸುಂದರವಾಗಿ ನಿರೂಪಿಸುವ ಕೌಶಲವು ಧನಮ್ಮಾಳ್‌ರವರಿಗೆ ಇದ್ದುದರಿಂದ, ಅವರ ವೀಣಾವಾದನವು ಕೇಳಿದವರನ್ನು ಭಾವನಾ ಲೋಕಕ್ಕೆ ಕೊಂಡೊಯ್ಯುತ್ತಿತ್ತೆಂದರೆ ಅದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆಯಿಲ್ಲ.

ಶಿಷ್ಯ ಪರಂಪರೆ

ಧನಮ್ಮಾಳ್‌ರವರಿಗೆ ರಾಜಲಕ್ಷ್ಮಿ, ಲಕ್ಷ್ಮಿರತ್ನಂ, ಜಯಮ್ಮಾಳ್ ಮತ್ತು ಕಾಮಾಕ್ಷಿಯಮ್ಮಾಳ್ ಎಂಬ ನಾಲ್ವರು ಹೆಣ್ಣುಮಕ್ಕಳು. ಎಲ್ಲರಿಗೂ ತಾಯಿಯೇ ಗುರು, ಅಜ್ಜಿ ಕಾಮಾಕ್ಷಿಯವರ ನಾಟ್ಯಶಾಲೆಯ ಮೊಮ್ಮಗಳು (ಜಯಮ್ಮಾಳ್ ಮಗಳು) ಬಾಲಸರಸ್ವತಿಯಲ್ಲಿ ವಿಕಸಿತಗೊಂಡು ಅವರ ಭರತನಾಟ್ಯ ಮತ್ತು ಅಭಿನಯದಲ್ಲಿ ಅದ್ವಿತೀಯರೆನಿಸಿಕೊಂಡಿದ್ದಾರೆ. ಜಯಮ್ಮಾಳ್ ತಾಯಿ ಧನಂರವರಿಂದ ಅನೇಕ ಪದಗಳನ್ನು ಕಲಿತುಕೊಂಡು ಬಾಲಸರಸ್ವತಿಯ ನಾಟ್ಯಕ್ಕೆ ಹಿಮ್ಮೇಳ ಹಾಡುತ್ತಿದ್ದರು. ಜಯಮ್ಮಾಳ್ ರವರ ಇತರ ಮೂವರು ಹೆಣ್ಣುಮಕ್ಕಳು ಬೃಂದ, ಮುಕ್ತ, ಮತ್ತು ಅಭಿರಾಮಸುಂದರಿ ಉತ್ತಮ ವಿದುಷಿಯರಾದರು. ಅಭಿರಾಮಸುಂದರಿ ಪಿಟೀಲು ವಾದನದಲ್ಲಿ ಕೀರ್ತಿ ಪಡೆದರು. ಗಂಡುಮಕ್ಕಳು ಟಿ.ರಂಗನಾಥನ್ ಪಳನಿ ಮುತ್ತೆ ಯ್ಯ ಪಿಳ್ಳೆಯವರಿಂದ ಮೃದಂಗ ಕಲಿತರು. ಟಿ.ವಿಶ್ವನಾಥನ್ ವೇಣುವಾದನದಲ್ಲಿ ಖ್ಯಾತರಾಗಿದ್ದಾರೆ. ಅವರೇ ಅಮೆರಿಕದ ಜಾನ್ ಬಿ. ಹಿಗ್ಗಿನ್ಸ್ ರವರ ಗುರು. ‘‘ಕೃತಿಮಣಿ ಮಾಲೈ’’ ಎಂದು ಆರು ಭಾಗಗಳಲ್ಲಿ ಸಂಗೀತ ತ್ರಿಮೂರ್ತಿಗಳು ಮತ್ತು ಇತರ ವಾಗ್ಗೇಯಕಾರರ ಕೃತಿಗಳ ಸ್ವರ ಸಂಯೋಜನೆಯನ್ನು ಮಾಡಿ ಪ್ರಕಟಿಸಿರುವ ವೈಣಿಕ ಆರ್. ರಂಗರಾಮಾನುಜ ಅಯ್ಯಂಗಾರ‍್ಯರು ಧನಮ್ಮಾಳ್‌ರವರ ನೇರ ಶಿಷ್ಯರು. ಕರ್ಣಾಟಕ ಸಂಗೀತದ ಸಂಪ್ರದಾಯತೆಯು ಇನ್ನೂ ಅಚ್ಚಳಿಯದೆ ಉಳಿದಿರುವುದಕ್ಕೆ ಧನಮ್ಮಾಳ್‌ರವರ ಮನೆತನ ಹಾಗೂ ಶಿಷ್ಯವರ್ಗವು ಬಹುಮಟ್ಟಿಗೆ ಕಾರಣ. ತಿರುಚಿ ಗೋವಿಂದಸ್ವಾಮಿ ಪಿಳ್ಳೆಯವರು ಧನಂರವರಿಂದ ಕೃತಿ, ಪದ, ಜಾವಳಿಗಳನ್ನು ಕಲಿತುಕೊಂಡರು. ಕೆಲವು ರಾಗಗಳ ವಿಸ್ತರಣೆಯಲ್ಲಿ ಧನಂರವರ ಮಾರ್ಗವನ್ನು ಅನುಸರಿಸುತ್ತಿದ್ದರು.

ವೀಣಾವಾದನವು ಮುಗಿಯಿತು

ರಾಜಮಹಾರಾಜರುಗಳಿಂದಲೂ, ಭಾರೀ ಜಮೀ ನ್ದಾರರುಗಳಿಂದಲೂ ಪೋಷಿಸಲ್ಪಟ್ಟರೂ, ಧನಂರವರ ಕೊನೆಯ ದಿನಗಳು ಬಡತನದಲ್ಲಿ ಪರ್ಯವಸಾನವಾಯಿತು. ಇದು ಒಂದು ದುರದೃಷ್ಟ. ಸಾಲದುದಕ್ಕೆ  ಅವರ ಕುಟುಂಬ ವರ್ಗವೂ, ಅವರ ಆಶ್ರಯದಲ್ಲಿ ಬಾಳಿದವರೂ ಸ್ವಲ್ಪ ಭಾರೀ ಪ್ರಮಾಣದಲ್ಲಿಯೇ ಇದ್ದುದು ಅವರ ಬಡತನಕ್ಕೆ ಮತ್ತೊಂದು ಕಾರಣ. ೧೯೨೮ರ ಸುಮಾರಿಗೆ ಅವರ ಶರೀರ ಬಲವು ಕುಗ್ಗಲಾರಂಭಿಸಿತು. ಆದರೂ ಅವರು ಪ್ರತಿದಿನ ದ್ವಾರಂ ವೆಂಕಟಸ್ವಾಮಿ ನಾಯುಡು, ತಿರುಪ್ಪಾಂಬರಂ ಸ್ವಾಮಿನಾಥ ಪಿಳ್ಳೆ ಮತ್ತು ತಿರುವಾಡುದುರೈ ರಾಜರತ್ನಂ ಪಿಳ್ಳೆ ಮುಂತಾದ ಕೆಲವು ಪ್ರಮುಖ ವಿದ್ವಾಂಸರನ್ನು ಸಂಜೆ ತಮ್ಮ ಮನೆಗೆ ಬರಮಾಡಿಕೊಂಡು, ಅವರ ಸಂಗೀತವನ್ನು ಸ್ವಲ್ಪಹೊತ್ತು ಆಲಿಸಿ, ತಾವೂ ಒಂದು ಹತ್ತಾರು ನಿಮಿಷ ವೀಣೆ ನುಡಿಸಿ ವಿಶ್ರಾಂತಿ ತೆಗೆದುಕೊಳ್ಳುವ ಪರಿಪಾಠವನ್ನಿಟ್ಟುಕೊಂಡಿದ್ದರು.

೧೯೩೮ರ ನವರಾತ್ರಿಯ ಹೊತ್ತಿಗೆ ದೇಹವು ಇನ್ನೂ ದುರ್ಬಲಗೊಂಡಿತು. ಆದರೂ ಹಠದಿಂದ ಪ್ರತಿದಿನ ನವರಾತ್ರಿ ಪೂಜೆಯನ್ನು ಮಾಡುತ್ತಿದ್ದರು. ಕೊನೆಯ ದಿನ ಜ್ವರವು ಅಧಿಕವಾಯಿತು. ಡಾಕ್ಟರ್ ಗುರುಸ್ವಾಮಿ ಮೊದಲಿಯಾರದು ಒಂದು ಚಿಕಿತ್ಸೆ ನಡೆಸಿದರು. ‘‘ಪಿರವಿವೇಂಡೇನ್’’ (ಪುನರ್ಜನ್ಮ ಬೇಡ) ಎಂದು ಹಾಡಿಕೊಂಡೇ ಇದ್ದರು. ‘‘ನನಗೆ ಬಾಳಿನಲ್ಲಿ ಒಂದು ಕೊರತೆಯೂ ಇರಲಿಲ್ಲ. ಆದರೆ ವೀಣೆಯನ್ನು ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ’’  ಎಂದು ಹೇಳಿದರು. ಶ್ರೀಕೃಷ್ಣ ಅವರ ಇಷ್ಟದೈವ. ಅವರ ತುಟಿಗಳು ಶ್ರೀ ಕೃಷ್ಣ ಕರ್ಣಾಮೃತದ ಶ್ಲೋಕ ಒಂದನ್ನು ಹಾಡುತ್ತಿದ್ದವು. ವೀಣೆಯನ್ನು ತುಂಬು ಶ್ರಮದಿಂದ ಕೈಗೆತ್ತಿಕೊಂಡು ಒಂದು ಸಲ ಪ್ರಯಾಸದಿಂದ ಮೀಟಿದರು. ಅದೇ ಕೊನೆ. ರಾತ್ರಿ ಒಂದು ಘಂಟೆಗೆ ಉಸಿರು ನಿಂತುಹೋಯಿತು.

ಧನಮ್ಮಾಳ್ ೧೯೩೮ ರ ಅಕ್ಟೋಬರ್ ೧೫ ರಂದು ತಮ್ಮ ಪಾರ್ಥಿವ ಶರೀರವನ್ನು ತೊರೆದರು. ವಾದನವು ಮುಗಿಯಿತು. ದೀಪವು ಆರಿತು.

ಭಾರತದಲ್ಲಿ ಸಂಗೀತದಲ್ಲಿ ಮುಖ್ಯವಾದವು ಎರಡು ಪಂಥಗಳು-ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ. ಯಾವುದಾದರೊಂದರಲ್ಲಿ ಪ್ರೌಢಿಮೆ ಪಡೆಯುವುದು, ಅದನ್ನು ತಿಳಿದವರಿಂದ ಮೆಚ್ಚುಗೆ ಪಡೆಯುವುದು ಸಹ ಕಷ್ಟ. ಎರಡು ಪಂಥಗಳಲ್ಲಿಯೂ ಸಾಧನೆ ಮಾಡಿ ಮೆಚ್ಚುಗೆ ಗಳಿಸುವವರು ವಿರಳ. ಧನಮ್ಮಾಳ್ ಅವರು ಇಂತಹ ವಿರಳ ಪಂಕ್ತಿಗೆ ಸೇರಿದವರು. ಇದು ಅವರಿಗೆ ಸಾಧ್ಯವಾದದ್ದು ಅವರ ಪ್ರತಿಭೆಯಿಂದ ಮಾತ್ರವಲ್ಲ, ಎಷ್ಟು ಕಲಿತರೂ ಸಾಲದು ಇನ್ನೂಕಲಿಯಬೇಕು ಎಂಬ ಹಂಬಲದಿಂದ ಮತ್ತು ಶ್ರದ್ಧೆಯಿಂದ, ಭಕ್ತಿಯಿಂದ ಅಭ್ಯಾಸಮಾಡುವ ಸ್ವಭಾವದಿಂದ. ಸಂಗೀತವನ್ನು ತಪಸ್ಸಾನ್ನಾಗಿ ಮಾಡಿಕೊಂಡು ಬಾಳಿದವರು, ತಮ್ಮ ವಿದ್ಯಾಗೆ ವಿನಯದ ಮೆರುಗನ್ನು ಕೊಟ್ಟು ಇತರ ಸಂಗೀತ ವಿದ್ವಾಂಸರ ಸ್ನೇಹವನ್ನು ಗಳಿಸಿದವರು ಧನಮ್ಮಾಳ್.