ಮೈಸೂರಿನ ವೀಣಾ ಪದ್ಮನಾಭಯ್ಯನವರ ಏಕೈಕ ಪುತ್ರರು ವೀಣಾ ಶಿವರಾಮಯ್ಯನವರು. ಪದ್ಮನಾಭಯ್ಯನವರು ಸಂಸ್ಕೃತವನ್ನು ಬಲ್ಲವರು ಮತ್ತು ಮೈಸೂರಿನ ಸುಪ್ರಸಿದ್ಧ ವೈಣಿಕ ಆಸ್ಥಾನ ವಿದ್ವಾನ್‌ ವೀಣೆ ಶಾಮಣ್ಣನವರ ಶಿಷ್ಯರು. ಉತ್ತಮ ವಾಗ್ಗೇಯಕಾರರಾಗಿದ್ದ ಪದ್ಮನಾಭಯ್ಯನವರು ಮುಮ್ಮಡಿ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದರು. ಹೀಗೆ ಶಿವರಾಮಯ್ಯನವರಿಗೆ ಹುಟ್ಟಿನಿಂದಲೇ ಸಂಗೀತ ಮತ್ತು ಸಾಹಿತ್ಯಗಳು ರಕ್ತಗತವಾಗಿತ್ತು. ಪದ್ಮನಾಭಯ್ಯನವರು ಮಗನಿಗೆ ತಮ್ಮ ಶಿಷ್ಯ ಸುಂದರ ಶಾಸ್ತ್ರಿಗಳಿಂದ ಸಂಸ್ಕೃತ, ಕಾವ್ಯ, ವ್ಯಾಕರಣ ಸಹಿತವಾಗಿ ನಾಟಕಾದಿಗಳನ್ನು ಕಲಿಯಲೂ ಮತ್ತೊಬ್ಬ ಉಪಾಧ್ಯಾಯರಿಂದ ಇನ್ನಿತರ ಸಾಮಾನ್ಯ ವಿಷಯಗಳಿಗೂ ಮನೆಯಲ್ಲೇ ಶಿಕ್ಷಣದ ಏರ್ಪಾಟು ಮಾಡಿದ್ದರು. ತಾವೇ ಸ್ವತಃ ವೀಣಾ ವಾದನ-ಗಾಯನವನ್ನೂ ಕಲಿಸುತ್ತಿದ್ದರು. ಶಿವರಾಮಯ್ಯನಗವರು ತಮ್ಮ ೧೪ನೇ ವರುಷದ ವೇಳೆಗೆ ಕಾವ್ಯ, ಗಾಯನ, ವೀಣಾ ವಾದನಗಳಲ್ಲಿ ಪ್ರೌಢ ಮಟ್ಟವನ್ನು ತಲುಪಿದ್ದರು. ೧೯೦೦ರಲ್ಲಿ ಶಿವರಾಮಯ್ಯನವರಿಗೆ ಪಿತೃವಿಯೋಗವಾಯಿತು. ೧೪ ವರುಷದ ತರುಣ ಶಿವರಾಮರಿಗೆ ತಾಯಿ ಹಾಗೂ ಇಬ್ಬರು ಸಹೋದರಿಯರನ್ನೊಳಗೊಂಡ ಸಾಂಸಾರಿಕ ಜವಾಬದ್ದಾರಿ ಹೆಗಲಿಗೆ ಬಿತ್ತು. ತಂದೆಯ ನಿಧನದ ನಂತರ ಮೂರು ತಿಂಗಳಲ್ಲೇ ಅರಮನೆಯಲ್ಲಿ ಒಂಬತ್ತು ರೂಪಾಯಿಗಳ ಮಾಸಾಶನದೊಂದಿಗೆ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡರು. ಕೌಟುಂಬಿಕ ಸಮಸ್ಯೆಗಳಿಂದಾಗಿ ಕೆಲವು ಕಾಲ ತಾಯಿ ಮತ್ತು ತಂಗಿಯವರೊಡನೆ ಮಾವ ಭೈರವ ಶಾಸ್ತ್ರಿಗಳಲ್ಲಿ ಆಶ್ರಯ ಪಡೆದರು. ೧೯೦೪ರಲ್ಲಿ ಭೈರವ ಶಾಸ್ತ್ರಿಗಳ ಮಗಳಾದ ವೆಂಕಟಲಕ್ಷ್ಮಮ್ಮನನ್ನು ವಿವಾಹವಾದರು. ೧೯೧೪ರಲ್ಲಿ ಮಾತೃವಿಯೋಗವಾಯಿತು. ಕಡುಕೋಪಿಷ್ಟರಾಗಿದ್ದ ಪದ್ಮನಾಭಯ್ಯನವರ ಸ್ವಭಾವಕ್ಕೆ ತದ್ವಿರುದ್ಧವಾದ ಶಾಂತ ಸ್ವಭಾವ ಮಗ ಶಿವರಾಮಯ್ಯನವರದಾಗಿದ್ದು ಸಹನೆ, ತಾಳ್ಮೆಗಳು ಅವರು ಜೀವನದ ಜಟಿಲತೆಯನ್ನು ಎದುರಿಸುವಲ್ಲಿ ಗುರಾಣಿಯಂತೆ ನಿಂತಿತು. ಕೌಟುಂಬಿಕ ಜಂಜಾಟಗಳೇನಿಲ್ಲದಿದ್ದರೂ ಶಿವರಾಮಯ್ಯನವರು ಸಂಸ್ಕೃತ, ಸಾಹಿತ್ಯಾಭ್ಯಾಸ, ವೀಣಾಭ್ಯಾಸವನ್ನು ಬಿಡದೆ ಕಾಪಾಡಿಕೊಂಡು ಬಂದರು. ಕೆಲವು ಕಾಲ ಕರಿಗಿರಿರಾಯರಲ್ಲೂ ಹಾಗೂ ವಾಸುದೇವಾಚಾರ್ಯರಲ್ಲೂ ಗಾಯನವನ್ನು ಕಲಿತರು. ಅಂದಿನ ದಿನಗಳಲ್ಲಿ ರಾಜಾಸ್ಥಾನದಲ್ಲಿ ಪ್ರಬಲರಾಗಿದ್ದ ವೀಣಾ ಶೇಷಣ್ಣನವರಲ್ಲಿ ವೀಣಾಭ್ಯಾಸವನ್ನು ಮುಂದುವರೆಸಲು, ಇವರ ಹಿತಾಸಕ್ತರು ಕೆಲವರು ಸಲಹೆ ನೀಡಿದರು.

೧೯೦೬ರಲ್ಲಿ ಶಿವರಾಮಯ್ಯನವರು ಶೇಷಣ್ಣನವರಲ್ಲಿ ವೀಣಾಭ್ಯಾಸಕ್ಕೆಕ ಸೇರಿದರು. ತಂದೆ ಪದ್ಮನಾಭಯ್ಯನವರು, ಶೇಷಣ್ಣನವರೂ ವೃತ್ತಿಪರವಾಗಿ ಮಿತ್ರತ್ವ ಹೊಂದಿರದೆ ಕಡುವೈರಿಗಳಿಂತಿದ್ದವರು. ಆದ ಕಾರಣ ಶಿವರಾಮಯ್ಯನವರಲ್ಲಿ ವಿಶ್ವಾಸ ಹೊಂದಿರದ ಶೇಷಣ್ಣನವರು ಇವರನ್ನ ನೇರವಾಗಿ ಶಿಷ್ಯರೆಂದು ಪರಿಗಣಿಸದೆ, ಕೇವಲ ತಮ್ಮ ವಾದನವನ್ನು ಕೇಳಲು ಮಾತ್ರ ಅವಕಾಶವನ್ನು ನೀಡಿದ್ದರು. ಸೂಕ್ಷ್ಮಗ್ರಾಹಿಯೂ, ತಾಳ್ಮೆ, ಸಹನೆಗಳ ಪ್ರತಿರೂಪವಾಗಿದ್ದ ಶಿವರಾಮಯ್ಯನವರು ಸನ್ನಡತೆಯಿಂದ ಶೇಷಣ್ಣನವರ ಮನಗೆದ್ದರು. ೧೯೦೮ರಲ್ಲಿ ಶೇಷಣ್ಣನವರು ಶಿವರಾಮಯ್ಯನವರನ್ನು ಶಿಷ್ಯರನ್ನಾಗಿ ಒಪ್ಪಿದರು. ಆದರೆ ಪ್ರೌಢಮಟ್ಟದಲ್ಲಿ ನುಡಿಸಬಲ್ಲವರಾಗಿದ್ದಾಗ್ಯೂ ಅವರಿಗೆ ತಮ್ಮ ಸ್ವಂತ ರಚನೆ ಸ್ವರಜತಿಯಿಂದ ಪಾಠವನ್ನು ಆರಂಭಿಸಿದರು. ಕ್ರಮೇಣ ಶಿಷ್ಯನಲ್ಲಿದ್ದ ವಿದ್ಯಾಸಕ್ತಿ, ಸತತಾಭ್ಯಾಸಗಳನ್ನು ಮೆಚ್ಚಿದ ಗುರುಗಳು ಶಿಷ್ಯನಿಗೆ ತಮ್ಮೊಡನೆ ನಾಲ್ವಡಿ ಕೃಷ್ಣರಾಜ ಒಡೆಯರ ಸಮ್ಮುಖದಲ್ಲಿ ಒಂದು ಗಂಟೆ ಕಾಲ ವೀಣಾ ವಾದನದಲ್ಲಿ ಪಾಲ್ಗೊಳ್ಳುವ ಸದವಕಾಶ ೧೯೦೯ರಲ್ಲಿ ಕಲ್ಪಿಸಿದರು.

ಗುರುಗಳೊಡನೆ ನಡೆಸಿದ ಮೊದಲ ಕಚೇರಿಯು ಅರಸರ ಮೆಚ್ಚುಗೆಗೆ ಪಾತ್ರವಾದುದು ಶಿವರಾಮಯ್ಯನವರಿಗೆ ಸಂತಸ, ಸಮಾಧಾನವನ್ನೂ, ಆತ್ಮವಿಶ್ವಾಸವನ್ನೂ ತಂದಿತು. ನಂತರ ಕ್ರಮೇಣದಲ್ಲಿ ಗುರುಗಳೊಂದಿಗೆ ಪಂಚವೀಣಾ ಕಾರ್ಯಕ್ರಮದಲ್ಲಿ ವೆಂಕಟಗಿರಿಯಪ್ಪ, ಲಕ್ಷ್ಮೀನಾರಾಯಣಪ್ಪ, ವೆಂಕಟಕೃಷ್ಣಪ್ಪನವರೊಂದಿಗೆ ಸಹವಾದಕರಾಗಿ ಸೇರ್ಪಡೆಯಾದರು.

ಶೇಷಣ್ಣನವರು ತಮ್ಮ ಪ್ರವಾಸ ಕಾರ್ಯಗಳಿಗೆ ತೆರಳುವಾಗ ಶಿವರಾಮಯ್ಯನವರಿಗೆ ತಮ್ಮ ಅನಪಸ್ಥಿತಿಯಲ್ಲಿ ತಮ್ಮ ಕೆಲವು ಶಿಷ್ಯರಿಗೆ ಪಾಠ ಮಾಡುವ ಹೊಣೆಯನ್ನು ಒಪ್ಪಿಸಿದ್ದರು. ಗುರುಹಿರಿಯರಲ್ಲಿ ಅಪಾರ ಭಕ್ತಿ, ಗೌರವ ಹೊಂದಿದ್ದ ಶಿವರಾಮಯ್ಯ ಗುರುಗಳ ಮಾತಿಗೆ ಚಕಾರವೆತ್ತದೆ ಒಪ್ಪಿದ್ದರು. ಹೀಗೆ ಒಪ್ಪಿದ ಸಂದರ್ಭದಲ್ಲಿ ಗುರುಗಳ ಒಬ್ಬ ಮಹಿಳಾ ಶಿಷ್ಯೆಗೆ ಆಕೆಯ ನಡತೆಯ ಕಾರಣ ಕಸಿವಿಸಿಯುಂಟಾಗಿ ಪಾಠಮಾಡಲು ಒಪ್ಪದೆ ಪಾಠ ನಿಲ್ಲಿಸಿದುದು ಕೊಟ್ಟಮಾತಿಗೆ ಭಂಗ ಬಂದು ಗುರುಗಳ ಅವಕೃಪೆಗೆ ಪಾತ್ರರಾಗಲು ಕಾರಣವಾಯಿತು.

ಶಿವರಾಮಯ್ಯನವರ ಕುಟುಂಬದಲ್ಲಿ ಸಹೋದರಿಯರಿಬ್ಬರು, ತಮ್ಮ ನಾಲ್ಕು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳ ಲಾಲನೆ, ಪೋಷಣೆಯು ಮೊದಲಾಗಿ ಹೊಣೆಗಾರಿಕೆಯೂ ಏರುತ್ತಲಿದ್ದು, ಅವರ ಪಾಂಡಿತ್ಯಕ್ಕೆ, ವಿದ್ವತ್ತಿಗೆ ತಕ್ಕ ಪ್ರೋತ್ಸಾಹ, ಕೆಲಸಗಳು ಅರಮನೆಯಲ್ಲಿ ಬಹುಕಾಲ ದೊರೆಯದೆ, ನೀರಸವಾದ ಕೆಲಸ ಮಾಡಿ ನಿರ್ವಹಿಸುವಲ್ಲಿ ಅತೀವವಾದ ನಿರುತ್ಸಾಹ, ಮನೋವೇದನೆಗಳಿಗೆ ಕಾರಣವಾಯಿತು. ಏನೇ ಆದರೂ ಅವರ ನಿತ್ಯಾಭ್ಯಾಸ, ಕುಂಠಿತವಾಗಲಿಲ್ಲ. ಅಂತೆಯೇ ಮನೆತನದ ಧಾರ್ಮಿಕ ಕಾರ್ಯಕ್ರಮಗಳನ್ನು ಬಿಡದೆ ನಿರ್ವಹಿಸುತ್ತಿದ್ದರು. ತಮ್ಮ ಮನೆಯಲ್ಲಿನ ತಮ್ಮ ಅಭ್ಯಾಸಕೊಠಡಿಯಲ್ಲಿ ತಾವು ಅಭ್ಯಾಸ ಮಾಡುತ್ತಿದ್ದ ಜಾಗದ ಗೋಡೆಯ ಮೇಲೆ ವಿದ್ಯಾಧಿದೇವತೆ ಸರಸ್ವತಿ ತಮ್ಮ ಗುರುಮಠದ ಶೃಂಗೇರಿಯ ಶಾರದೆಯ ಚಿತ್ರಗಳ ಕೆಳಗೆ ಪಿತೃಸಮಾನರು, ಗುರುಗಳಾದ ಶೇಷಣ್ಣನವರ ಚಿತ್ರದ ಇಕ್ಕೆಲಗಳಲ್ಲಿ ವಾಸುದೇವಾಚಾರ್ಯರ ಮತ್ತು ವೀಣಾಸುಬ್ಬಣ್ಣನವರ ಚಿತ್ರಗಳು. ಹೀಗೆ ದೈವದಲ್ಲಿ, ಪೂಜ್ಯಗುರು ಹಿರಿಯರ ಪಾದದಲ್ಲಿ ನಿಷ್ಠೆಯಿಂದ ಕಲಾಭ್ಯಾಸವನ್ನು ಸಾಧನೆಯನ್ನು ನಡೆಸುತ್ತಿದ್ದರು.

ಕೌಟುಂಬಿಕ ಹೊಣೆಯ ಒತ್ತಡ, ವೃತ್ತಿಯಲ್ಲಿ ಆಗಾಗ್ಗೆ ಎದುರಾಗುತ್ತಿದ್ದ ಅನಾದರ, ಅನ್ಯಾಯಗಳನ್ನು ಅತ್ಯಂತ ಸಂಯಮದಿಂದ ನುಂಗಿಕೊಂಡು ರಾಜಾಸ್ಥಾನದ ತಮ್ಮ ಪಾಲಿನ ಕೆಲಸಗಳನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ೧೯೧೦ ರಿಂದ ಕೆಲವು ಕಾಲ ಮೈಸೂರಿನ ವಿಧವಾ ಗೃಹ (widows home) ದಲ್ಲೂ ಸಂಗೀತ ಉಪಾಧ್ಯಾಯರಾಗಿ ಕೆಲಸ ಮಾಡಿದರು.

೧೯೧೬ರಲ್ಲಿ ಅರಮನೆಯ ಚಂದ್ರಶಾಲಾ ತೊಟ್ಟಿಯ ಸಂಗೀತ ಶಾಲೆಯಲ್ಲಿ ಹಿರಿಯ ವಿದ್ವಾಂಸರೊಂದಿಗೆ ಸೇರ್ಪಡೆಯಾದರು. ಶಿವರಾಮಯ್ಯನವರ ಮತ್ತೊಂದು ಸತ್ಸಂಪ್ರದಾಯವೆಂದರೆ ತಮ್ಮ ಪಾಲಿಗೆ ಬಂದ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರೊಂದಿಗೆ ತಮ್ಮೆಲ್ಲ ಕೆಲಸ ಕಾರ್ಯಗಳ ವಿವರಗಳನ್ನೂ, ಅನಿಸಿಕೆಗಳನ್ನೂ, ದಿನ, ತಿಂಗಳು, ಇಸವಿಯೊಂದಿಗೆ ವಿವರವಾಗಿ ಬರೆದಿಡುವ ಹವ್ಯಾಸ. ಇತರರಲ್ಲಿ ಸಾಮಾನ್ಯವಾಗಿ ಇರದ ಈ ಹವ್ಯಾಸ ಅವರಲ್ಲಿದ್ದ ದಾಖಲಾತಿ (preservAtion & documentation) ಸಂರಕ್ಷಣ ಗುಣಗಳಿಗೆ ಸೂಚಕವಾಗಿದೆ. ೧೯೧೬ರಲ್ಲೇ ಕೃಷ್ಣರಾಜ ಒಡೆಯರ ವರ್ಧಂತಿಯಂದು ಮಹಾರಾಜರಿಂದ ೧೦೦ ರೂ.ಗಳ ಬಹುಮಾನವು ತಾವು ಕೆಲಸ ಕಾರ್ಯಗಳು ನಿರ್ವಹಿಸಿದ ಅಚ್ಚುಕಟ್ಟುತನಕ್ಕೆ ದೊರೆತಿದ್ದು ಶಿವರಾಮ್ಯಯನವರಿಗೆ ಸ್ವಲ್ಪ ಸಂತಸವನ್ನು ತಂದು ಕೊಟ್ಟಿತು.

ತಮ್ಮ ಪ್ರತಿಭೆ, ಪಾಂಡಿತ್ಯಗಳಿಗೆ ತಕ್ಕ ಪ್ರೋತ್ಸಾಹ, ಪ್ರದರ್ಶನಾವಕಾಶ ದೊರೆಯದಿದ್ದುದು, ಏರುತ್ತಿದ್ದ ಕೌಟುಂಬಿಕ ಆರ್ಥಿಕ ಒತ್ತಡ ಎಲ್ಲದರ ಪರಿಣಾಮವಾಗಿ ಶಿವರಾಮಯ್ಯನವರಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕಾಗಿ ದೇಶ ಪರ್ಯಟಣೆಯ ಆಕಾಂಕ್ಷೆ ಮೂಡಿತು. ಆ ವೇಳೆಗೆ ಅವರು ಹಲವು ಉತ್ತಮ ಮಟ್ಟದ ಶಿಷ್ಯಂದಿರನ್ನೂ (ಸುಬ್ರಹ್ಮಣ್ಯ ಶರ್ಮ, ಯೋಗೀಶ್ವರರು, ಚೆನ್ನಕೇಶವಯ್ಯ, ಸಿ. ರಂಗಯ್ಯ,) ಹೊಂದಿದ್ದರು.

ತಮ್ಮ ದೇಶ ಪರ್ಯಟನೆ ಆಸೆ ಪ್ರಬಲವಾಗಲು ೧೯೧೯ರ ಅಕ್ಟೋಬರ್ – ನವೆಂಬರ್ ನಲ್ಲಿ ಶೃಂಗೇರಿಗೆ ತೆರಳಿ ಶಾರದಾಂಬೆ ಹಾಗೂ ಪೀಠಾಧಿಪತಿಗಳ ಸನ್ನಿಧಿಯಲ್ಲಿ ನಾದಸೇವೆ ಸಲ್ಲಿಸಿ ದೈವದ, ಸ್ವಾಮಿಗಳ ಶುಭ ಆಶೀರ್ವಾದ ಪ್ರಸಾದದೊಂದಿಗೆ ಪ್ರವಾಸವನ್ನು ಕೈಗೊಂಡರು. ೧೯೨೧ರಲ್ಲಿ ತಿರುವಾಂಕೂರು, ಕೊಚ್ಚಿನ್‌ ಸಂಸ್ಥಾನಗಳಿಗೆರ ಶಿಷ್ಯ ಸುಬ್ರಹ್ಮಣ್ಯ ಶರ್ಮರೊಡಗೂಡಿ ತೆರಳಿದರು. ಶಿವರಾಮಯ್ಯನವರ ವಿದ್ವತ್ತು ಪಾಂಡಿತ್ಯಕ್ಕೆ ಮನಸೋತ ತಿರುವಾಂಕೂರ ಅರಸರು ಅವರಿಗೆ ವೀರಸಂಗಲಿ ಎಂಬ ಸುವರ್ಣ ಕಟಕ (ತೋಡ)ವನ್ನು ನೀಡಿ ಗೌರವಿಸಿದರು. ಶೃಂಗೇರಿಗೆ ಬಂದು ಮತ್ತೊಮ್ಮೆ ನಾದ ಸೇವೆ ಸಲ್ಲಿಸಿದಾಗ ಪೀಠಾಧಿಪತಿಗಳಿಂದ ಆಶೀರ್ವಾದ ಪುರಸ್ಸರವಗಾಗಿ ಶಾಲು ಜೋಡಿ ಸನ್ಮಾನವನ್ನು ಪಡೆದರು. ಶಿವರಾಮಯ್ಯನವರು ತಮ್ಮ ಪ್ರವಾಸದಲ್ಲಿ ಪಡೆದ ಯಶಸ್ಸು, ಗೌರವ ಕೀರ್ತಿಗಳು, ಆಳರಸರಿಗೆ ಬಹಳ ಸಂತೋಷ, ಮೆಚ್ಚುಗೆಯನ್ನು ಕೊಟ್ಟಿತು. ಅಲ್ಲದೆ, ಪದ್ಮನಾಭಯ್ಯನವರ ಮಗನಾದ ಕಾರಣ ಅದುವರೆಗೂ ಶಿಷ್ಯನಲ್ಲಿದ್ದ ತಾತ್ಸಾರ ಮನೋಭಾವ ಶೇಷಣ್ಣನವರಿಂದ ಹಿಂದೆ ಸರಿದು ಅಭಿಮಾನಕ್ಕೆ ದಾರಿ ಮಾಡಿಕೊಟ್ಟು “ಭೇಷ್‌ ನೀನು ಪದ್ಮನಾಭಯ್ಯನವರ ಮಗನೇ ಸರಿ” ಎಂಬ ಮನಃಪೂರ್ವಕವಾದ ಮೆಚ್ಚುಗೆಯು ಆಶೀರ್ವಾದಕ್ಕೆ ಕಾರಣವಾಯಿತು.

ದಿವಾನ್‌ ಗೋವಿಂದರಾಯರಿಂದ ಪರಿಚಯ ಪತ್ರವನ್ನೂ ಗುರುಗಳಾದ ಶೇಷಣ್ಣ, ವಾಸುದೇವಾಚಾರ್ಯರಿಂದ ಶುಭ ಆಶೀರ್ವಾದವನ್ನೂ ಪಡೆದು ೧೯೨೨ಕ್ಕೆ ಉತ್ತರ ಭಾರತದ ಪ್ರವಾಸ ಕೈಗೊಂಡರು. ಬರೋಡಾ, ಇಂದೋರ್, ಧಾರ್ ಮುಂತಾದ ಕಡೆಗಳಲ್ಲಿ ರಾಜಸಭೆಗಳಲ್ಲಿ ತಮ್ಮ ವಿದ್ವತ್‌ ಪ್ರದರ್ಶಿಸಿ ಅಪಾರವಾದ ಗೌರವ, ಸನ್ಮಾನಗಳನ್ನು ಪಡೆದರು. ಹೀಗೆ ತಮ್ಮ ಪ್ರವಾಸದಿಂದ ನೆರೆ, ಹೊರನಾಡಿನಲ್ಲಿ ಯಶಸ್ಸು, ಕೀರ್ತಿಗಳನ್ನು ಪಡೆದು ಬಂದುದರಿಂದ ತಮ್ಮ ಊರಿನಲ್ಲಿ ತಕ್ಕಮಟ್ಟಿಗೆ ಗೌರವ, ಆದರಗಳೂ ಹೆಚ್ಚಲು ಕಾರಣವಾಯಿತು.

ಮಹಾರಾಜರ ಆದೇಶದಂತೆ ಹಿಂದೂಸ್ತಾನಿ, ಪಾಶ್ಚಾತ್ಯ ಸಂಗೀತವನ್ನು ಕಲಿಯುವ ಅವಕಾಶ ಇವರದಾಯಿತು. ಎರಡೂ ಪದ್ಧತಿಯಲ್ಲಿ ಸಾಕಷ್ಟು ತರಬೇತಿಯನ್ನು ಪಡೆದ ನಂತರ ಮಹಾರಾಜರ ಅಪೇಕ್ಷೆಯಂತೆ ರಾಜರ ಸ್ವಂತ ಪುಸ್ತಕಕ್ಕೆ ರಾಜರಿಗೆ ಪ್ರಿಯವಾಗಿದ್ದ ಕರ್ನಾಟಕ ಮತ್ತು ಹಿಂದೂಸ್ತಾನಿ ರಚನೆಗಳನ್ನು ಪಾಶ್ಚಾತ್ಯ ಸಂಗೀತ ಸ್ವರ ಲಿಪಿಯಲ್ಲಿ ಬರೆದಿಡುವ ಕಾರ್ಯ ಇವರ ಪಾಲಿಗೆ ಬಂತು. ಅರಮನೆಯಲ್ಲಿ ಮಹಾರಾಜರ ಹಾಗೂ ಪ್ರಮುಖ ಅತಿಥಿಗಳ ಎದುರು ಆಗಿಂದಾಗ್ಗೆ ನಡೆಯುತ್ತಿದ್ದ ಸಂಗೀತ ಗೋಷ್ಠಿಗಳಲ್ಲಿ ಭಾಗವಹಿಸುವುದೇ ಅಲ್ಲದೆ ಕಿರಿಯ ವಿದ್ವಾಂಸರಲ್ಲಿ ಕೆಲವರಿಗೆ ಪಾಠ ಹೇಳುವುದು ಮತ್ತು “ರಾಜರ ಶಿವಪೂಜೆ ಸಮಯದಲ್ಲಿ ಕಿರಿಯ ವಿದ್ವಾಂಸರುಗಳನ್ನು ಹಾಗೂ ಅವರು ಹಾಡಬೇಕಿದ್ದ ಮುತ್ತಯ್ಯಭಾಗವತರ ಚಾಮುಂಡೇಶ್ವರಿ ಅಷ್ಟೋತ್ತರ ಶತನಾಮ ಕೃತಿಗಳನ್ನು ಪರೀಕ್ಷಿಸಿ ಪರಿಶ್ರಮ ಹೊಂದಿರುವರೇ ಇಲ್ಲವೇ” ಎಂಬುದಾಗಿ ಭಕ್ಷಿಯವರಿಗೆ ವರದಿಯೊಂದನ್ನು ನಿವೇದಿಸಬೇಕಾದ ಜವಾಬ್ದಾರಿಯೂ ಒದಗಿತ್ತು. ಇಷ್ಟೇ ಅಲ್ಲದೆ ರಾಜಾಜ್ಞೆ ಮೇರೆಗೆ ಆಸ್ಥಾನ ವಿದ್ವಾಂಸರುಗಳಾದ ಯಕ್ಷಗಾನ ಕಲಾವಿದ ಬಿಡಾರಂ ಸುಬ್ಬಯ್ಯ ಭಾಗವತರು, ಅಂಧ ಕಲಾವಿದ ಶಿವಪ್ಪ. ಎಂ, ನಾಗಸ್ವರ ಕಲಾವಿದ ಶ್ರೀನಿವಾಸ (ಶೀನಪ್ಪ) ಇವರುಗಳಿಗೆ ಮನೆಯಲ್ಲಿ ಪಾಠವನ್ನು ಮಾಡಬೇಕಿತ್ತು. ಇವರ ಜೊತೆಗೆ ಶಿವರಾಮಯ್ಯನವರ ಇತರ ಶಿಷ್ಯರು ಎಂ.ಎಚ್‌.ಜಯಮ್ಮ, ರಾ.ಸೀತಾರಾಂ. ಬಿ.ಕೆ.ಪದ್ಮನಾಭರಾಯರು, ಮಗ ಎಸ್‌. ಪದ್ಮನಾಭರಾವ್‌, ಅಂಧ ವಿದ್ಯಾರ್ಥಿ ವೆಂಕಟರಾವ್‌, ಮೊದಲಾದವರಿಗೆ ಶಿಕ್ಷಣವನ್ನು ನೀಡಿತ್ತಿದ್ದರು. ಅವರ ಶಿಷ್ಯರುಗಳಲ್ಲಿ ವೀಣಾ ವಾದನ ಮಾತ್ರವಲ್ಲದೇ ಗಾಯನ, ನಾಗಸ್ವರ ವಾದಕರೂ ಇದ್ದುದು ವಿಶೇಷ.

೧೯೨೩ರ ನಂತರದಲ್ಲಿ ರಾಜಾಜ್ಞೆಯಕೆಲಸಗಳು ಹೆಚ್ಚಿದವು. ಬೆಳಿಗ್ಗೆ ಮನೆಗೆ ಬರುತ್ತಿದ್ದ ತಮ್ಮ ಖಾಸಗಿ(ವಿದ್ಯಾರ್ಥಿ)ಗಳಿಗೆ ಪಾಠ, ಅನಂತರ ಅಂಧ ವಿದ್ಯಾರ್ಥಿಗಳ ಶಾಲೆಯಲ್ಲಿ ಕೆಲಸ, ಸಂಜೆ ಖಾಸ್‌ ಬಂಗ್ಲೆಯ ಕೆಲಸ, ಹೀಗೆ ಸುಮಾರು ೯.೦೦ ರಿಂದ ೧೦.೦೦ ಗಂಟೆಗಳಿಗೂ ಹೆಚ್ಚು ದುಡಿದು ಹಣ್ಣಾಗಿ ಮನೆಗೆ ಬರುತ್ತಿದ್ದರು. ಇಷ್ಟೆಲ್ಲಾ ಕೆಲಸಗಳನ್ನು ನಿರ್ವಹಿಸಲೂ ಆಗಿದ್ದುದು ಅವರಿಗೆ ಭಗವಂತನಿತ್ತ ಕಾಲುಗಳಲ್ಲಿನ ಶಕ್ತಿ ಸೌಕರ್ಯ ಮಾತ್ರ. ಈಗಿನಂತೆ ಯಾವ ವಾಹನ ಸೌಕರ್ಯವೂ ಇರಲಿಲ್ಲ. ದೀರ್ಘಕಾಲದ ಪ್ರವಾಸ, ಮಿತಿಮೀರಿದ ದುಡಿತದ ಪರಿಣಾಮವಾಗಿ ಸ್ವಲ್ಪ ದೇಹಾಲಸ್ಯದಿಂದ ನರಳಿದ್ದುದೂ ಉಂಟು. ಇಷ್ಟೆಲ್ಲಾ ನಿರ್ವಹಣಾ ಕಾರ್ಯಗಳಿದ್ದರೂ ದೈವಭಕ್ತಿ, ರಾಜಭಕ್ತಿಗಳ ಸಂಗಮವೆನಿಸಿದ್ದ ಶಿವರಾಮಯ್ಯನವರು ಜ್ಞಾನಾರ್ಜನೆ, ಕಲಾಸೇವೆಗೆ ಅವಿರತವಾಗಿ ಸೇವೆ ಸಲ್ಲಿಸಿದ ನಿಷ್ಠಾ ವಿದ್ಯಾರ್ಥಿಯೇ ಆಗಿದ್ದರು. ಬಂಧು ಬಾಂಧವರು ಮತ್ತು ಕಲಾ ಬಂಧುಗಳಲ್ಲಿ ಸ್ನೇಹಪರತೆ ಆತ್ಮೀಯತೆಯನ್ನೂ ಹೊಂದಿದ್ದರು.

ವಂಶವಾಹಿನಿಯಾಗಿ ತಂದೆಯವರಿಂದ ಹರಿದು ಬಂದ ಸಾಹಿತ್ಯ-ಸಂಗೀತಗಳ ಸಂಪತ್ತು, ಶಿವರಾಮಯ್ಯನವರ ವಾಗ್ಗೇಯತ್ವವನ್ನು ದ್ವಿಗುಣಗೊಳಿಸಿತ್ತು. ಕೃಷ್ಣರಾಜರ ಅಪ್ಪಣೆಯಂತೆ ಅಂದಿನ ದಿನಗಳಲ್ಲಿ ಅಷ್ಟಾಗಿ ಬಳಕೆಯಲ್ಲಿ ಇರದ ಅಪೂರ್ವ ರಾಗಗಳಲ್ಲಿ ಕೆಲವು ಸ್ವಂತ ಸಾಹಿತ್ಯ ರಚನೆಗಳೂ, ಕೆಲವಕ್ಕೆ ಆಸ್ಥಾನದ ಹಿರಿಯ ಸಾಹಿತ್ಯ ಮಿತ್ರ ವಿದ್ವಾಂಸರ ಮಾತುಗಳ ನೆರವಿನೊಂದಿಗೆ ಧಾತುಗಳ ರಚನೆಗಳನ್ನು ರಚಿಸಿದರು. ಗುರುಗಳಾದ ವಾಸುದೇವಾಚಾರ್ಯರು ತಮ್ಮ ಗುರುಗಳಾದ ಪದ್ಮನಾಭಯ್ಯನವರಲ್ಲಿ ಇರಿಸಿಕೊಂಡಿದ್ದ ಭಕ್ತಿ, ಗುರುಪುತ್ರನೂ ತಮ್ಮ ಶಿಷ್ಯನೂ ಆದ ಇವರಲ್ಲಿ ಹೊಂದಿದ್ದ ವಾತ್ಸಲ್ಯ, ಅಭಿಮಾನದಿಂದ ತಮಗೆ ಅವಶ್ಯವೆನಿಸಿದಾಗ ಗುರುಗಳ ಹಾಗೂ ಶಿಷ್ಯನ ಮನೆಯಾಗಿದ್ದ ಇವರಲ್ಲಿಗೆ ಬಂದು ಮನೆಯವರಲ್ಲೊಬ್ಬರಂತೆ ಹೊಂದಿಕೊಂಡು ಮನೆಯ ಎಲ್ಲರಿಗೂ ಆಪ್ತರಾಗಿದ್ದರು. ಹೀಗೆ ಇವರಲ್ಲಿ ಉಳಿದಿದ್ದಾಗ ಗುರುಗಳ ರಚನೆಗಳನ್ನು ತಮ್ಮ ಬಿಡುವಿನ ವೇಳೆಯಲ್ಲಿ ಸ್ವತಃ ಬರೆದು ಗುರುಗಳಿಗೆ ಒಪ್ಪಿಸುವುದಾಗಿಯೂ ಉಲ್ಲೇಖಿಸಿರುತ್ತೃಎ ಅಯ್ಯನವರು. ಗುರುಶಿಷ್ಯರಿಬ್ಬರೂ ನಿಖರವಾಗಿ ಶ್ರುತಿಗೆ ಹೊಂದಿಸಿಟ್ಟ ತಂಬೂರಿಯ ನಾದಕ್ಕೆ ಮನಸೋತು ಅಭ್ಯಾಸ ಮಾಡುತ್ತಿದ್ದರೆಂಬುದು ಉಲ್ಲೇಖಾರ್ಹ.

ಹೀಗೆ ಗುರುಗಳೊಡನಾಟ, ಅವರ ಕೃತಿರಚನಾಕಾರ್ಯದಲ್ಲಿ ಸಹಕಾರ ನೀಡುತ್ತಿದ್ದುದು, ಶಿವರಾಮಯ್ಯನವರ ಜ್ಞಾನಭಂಡೃ ಶ್ರೀಮಂತಗೊಳ್ಳಲು ಸಹಾಯಕವಾಯಿತು.

೧೯೩೦ರಲ್ಲಿ ಕೇವಲ ಮೂರು ಸ್ವರಗಳಾದ ಷಡ್ಜ, ಗಾಂಧಾರ, ಪಂಚಮಗಳಿಂದ ಸ.ಗ.ಪ.ಸ. ಎಂಬ ಅಪೂರ್ವವಾದ “ಸ್ವಯಂಭೂ ಸ್ವರ’ರಾಗವನ್ನು ಅನ್ವೇಷಿಸಿದರು. ಈ ರಾಗದಲ್ಲಿ ನಾಲ್ಕು ಸುಂದರ ರಚನೆಗಳನ್ನು ರಚಿಸಿರುವರು. ೧೯೩೪ರಲ್ಲಿ ತಮ್ಮ ಈ ನವೀನ ರಚನೆಯನ್ನು ಸ್ಥಳೀಯ ಸಂಗೀತ ಸಮ್ಮೇಳನದಲ್ಲಿ ಹಿರಿಯ ವಿದ್ವಾಂಶರುಗಳಾದ ವೀಣಾ ಸುಬ್ಬಣ್ಣ, ಗುರುಗಳಾದ ವಾಸುದೇವಾಚಾರ್, ಮುತ್ತಯ್ಯ ಭಾಗವತರುಗಳನ್ನೊಳಗೊಂಡ ವಿದ್ವತ್‌ ಸಭೆಯಲ್ಲಿ ಗಾಯನ ವಾದನಗಳಿಂದ ನಿರೂಪಿಸಿದರು. ಅವರ ಈ ಪ್ರಯೋಗವು ಹಿರಿಯರಿಂದ ಪ್ರಶಂಸೆ, ಆಶೀರ್ವಾದ, ಮಿತ್ರಕಲಾಬಂಧುಗಳ ಮೆಚ್ಚುಗೆಯನ್ನು ಪಡೆಯಿತು. ಅದೇ ವರುಷ ಮುತ್ತಯ್ಯ ಭಾಗವತರ ಸಲಹೆಯ ಮೇರೆಗೆ ಮದ್ರಾಸ್ ಸಂಗೀತ ಅಕಾಡೆಮಿಯ ವಿದ್ವತ್‌ ಗೋಷ್ಠಿಯಲ್ಲಿ ಪ್ರದರ್ಶಿಸಿದಾಗ, ಅಲ್ಲಿಯ ಹಿರಿಯ ವಿದ್ವಾಂಸರುಗಳಿಂದಲೂ ಇವರ ಈ ಅನ್ವೇಷಣೆಗೆ, ಸ್ವಯಂಭೂಸ್ವರ ರಚನೆಗೆ ಅಪಾರ ಮೆಚ್ಚುಗೆ ಪ್ರೋತ್ಸಾಹ, ಮನ್ನಣೆ ಪಡೆದರು. ಕಲಾಸರಸ್ವತಿಯ ಮುಡಿಗೇರಿಸಿದ ತನ್ನ ಅನ್ವೇಷಣದ ನವೀನ ರಾಗ ಕುಸುಮ ಸಮಕಾಲೀನ ವಿದ್ವಾಂಸರಿಂದ ಮನ್ನಣೆ ಪಡೆದುದು ಶಿವರಾಮಯ್ಯನವರಿಗೆ ತನ್ನ ಶ್ರಮಕ್ಕೆ ಸಂತಸ, ಸಮಾಧಾನವನ್ನು ತಂದು ಕೊಟ್ಟಿತು. ಸ್ವಯಂಭುರಾಗದ ಸ್ವರಗಳನ್ನು ಶೃತಿ ಭೇದ ಮಾಡುವುದರಿಂದ ಹೊಸರಾಗಗಳು ಉದಯಿಸುವುದನ್ನು ಗುರುತಿಸಿ ೧೨ ಮೂರ್ಛನಾ ರಾಗಗಳನ್ನು ಪಟ್ಟಿ  ಮಾಡಿರುವರು. ಇವರ ಈ ಪ್ರಯೋಗಶೀಲತೆ ಇತರ ಹಿರಿಯ ಕಿರಿಯ ಕಲಾವಿದರಿಗೂ  ಸ್ಪೂರ್ತಿದಾಯಕವಾಗಿತ್ತೆಂಬುದಕ್ಕೆ ಮುತ್ತಯ್ಯ ಭಾಗವತರ ‘ನಿರೋಷ್ಠ’ ರಾಗ ರಚನೆಯು ನಿದರ್ಶನವಾಗಿದೆ.

ತಮ್ಮ ಮನೆಯ ಹೆಣ್ಣು ಮಕ್ಕಳು ದೇವತಾದಿ ಪೂಜಾಕಾರ್ಯಗಳಲ್ಲಿ ಹಾಡಿಕೊಳ್ಳುವ ಸಲುವಾಗಿ ಕನ್ನಡದಲ್ಲಿ ಹಾಡುಗಳನ್ನು ರಚಿಸಿ ಸರಳವಾದ ಶಾಸ್ತ್ರದ ಚೌಕಟ್ಟಿನಲ್ಲಿ ಹುದುಗಿಸಿದ್ದಾರೆ. “ಬಾಲಿಕಾ ಗೀತ ಮುಕ್ತ ಕಲಾಪ” ಎಂಬುದು ಮೈಸೂರಿನ ವಿಧವಾ ಗೃಹ (Widows Home) ದಲ್ಲಿ ಪಾಠ ಹೇಳಲು ಅನುವಾಗುವಂತೆ ರಚಿಸಿದ್ದ ಪುಸ್ತಕ. ಅದರ ಕೆಲವು ಪದಗಳಿಗೆ ವರ್ಣಮಟ್ಟನ್ನು ರಚಿಸಿದ್ದಾರೆ. “ಸಂಗೀತಲಕ್ಷಣ ಪ್ರಶ್ನೋತ್ತರ ರತ್ನಾವಳಿ” ಅಂಧ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ರಚಿಸಿದ ಪುಸ್ತಕಗಳಾಗಿವೆ. ಮೈಸೂರು ಮತ್ತು ಮದ್ರಾಸಿನ ಆಕಾಶವಾಣಿಯಲ್ಲಿ ಇವರ ವೀಣಾ ವಾದನವು ಪ್ರಸಾರವಾಗುತ್ತಿತ್ತು. ಇವರ ವೀಣಾ ವಾದನವನ್ನು ಕೇಳಲು ಆಶಿಸಿ ತಮ್ಮ ಮನೆಗೆ ಬಂದವರಿಗೆ ಸಂತೋಷದಿಂದ ನಾದಾಮೃತವನ್ನು ಉಣಬಡಿಸಿ ರಸದೌತಣವನ್ನು ನೀಡುತ್ತಿದ್ದರು. ಆಗ್ಗಾಗ್ಗೆ ನಡೆಯುತ್ತಿದ್ದ ರಾಮೋತ್ಸವ, ಕೃಷ್ಣೋತ್ಸವ, ತ್ಯಾಗರಾಜ ಆರಾಧನಾ ಉತ್ಸವಗಳಲ್ಲಿ, ಸಂಗೀತೋತ್ಸವಗಳಲ್ಲಿ ತಪ್ಪದೆ ಭಾಗವಹಿಸಿ, ತಮ್ಮ ವಾದನ ಸೇವೆಯನ್ನೂ ಗೈಯ್ಯುತ್ತಿದ್ದರು. ಹಿರಿಯ ವಿದ್ವಾಂಸರ ಕಚೇರಿಗೆ ಹೋಗಿ ಜ್ಞಾನವೃದ್ಧಿಸಿಕೊಳ್ಳುವಂತೆ, ಕಿರಿಯ ವಿದ್ವಾಂಸರ ಕಚೇರಿಗೂ ತಪ್ಪದೆ ಹೋಗಿ ಸಾವಧಾನವಾಗಿ ಕೇಳಿ, ಕಿರಿಯರಿಗೆ ಪ್ರೋತ್ಸಾಹಕರವಾದ ಹಿತನುಡಿಗಳನ್ನು ಹೇಳಿ ಬರುತ್ತಿದ್ದರು.

ಅಂತೆಯೇ ಶಿವರಾಮಯ್ಯನವರ ಮತ್ತೊಂದು ವಿಶೇಷತೆ ಏನೆಂದರೆ ಹಿಂದಿನವರಲ್ಲಿ ಕೆಲವರು ಗರ್ಭಿಣಿ ಹೆಣ್ಣು ಮಕ್ಕಳ ಸೀಮಂತದಲ್ಲಿ ವೀಣಾವಾದನ ಶ್ರವಣ ಶಾಸ್ತ್ರೋಕ್ತವಾಗಿ ನಡೆಸುವ ಪದ್ಧತಿ ಇದ್ದು ಅಂತಹ ಸಂದರ್ಭದಲ್ಲಿ ಆಹ್ವಾನಿತರಾದಾಗ ಪ್ರತಿಫಲದ ನಿರೀಕ್ಷಣೆ ಇಲ್ಲದೆ ಸ್ವಸಂತೋಷದಿಂದ ಶಾಸ್ತ್ರೋಕ್ತವಾಗಿ ತಮ್ಮ ವೀಣಾವಾದನದ ಝೇಂಕಾರವನ್ನು ತುಂಬಿ ಬರುತ್ತಿದ್ದರು. ಶಿವರಾಮಯ್ಯನವರಿಗೆ ಸಹಜವಾಗಿಯೇ ಗುರುಗಳಾದ ವಾಸುದೇವಾಚಾರ್ಯರ ಗಾಯನ ಹಾಗೂ ಶೇಷಣ್ಣನವರ ವಾದನದ ಪ್ರಭಾವ ಬಹಳವಾಗಿತ್ತು. “ಇವರ ವೀಣಾವಾದನವು ಶೇಷಣ್ಣನವರ ವಾದನದ ನೆನಪು ತರುತ್ತಿತೆಂಬುದು”, ಇವರ ವಿನಿಕೆಯನ್ನು ಕೇಳಿ ಮೈ ಮರೆತವರ ಸಂತಸದ ನುಡಿ.

೧೯೪೧ರಲ್ಲಿ ಶಿವರಾಮಯ್ಯನವರಿಗೆ ಜಯಚಾಮರಾಜರ ಆಳ್ವಿಕೆಯಲ್ಲಿ ಚಿನ್ನದ ತೋಡಾ ಖಿಲ್ಲತ್ತು ಸಮೇತ ವೈಣಿಕ ಪ್ರವೀಣ ಬಿರುದು ಸಂದಿತು. ಆಸ್ಥಾನದ ಈ ಮರ್ಯಾದೆಗೆ ಗೌರವವಿದ್ದರೂ ಸಕಾಲದಲ್ಲಿ ಕೃಷ್ಣರಾಜರ ಆಳ್ವಿಕೆಯಲ್ಲಿ ಬಂದಿದ್ದರೇ ಎಂಬ ಪರಿತಾಪವೂ ಇತ್ತು. ಇಷ್ಟೆಲ್ಲಾ ಪಡೆದರೂ ಅವರ ಆರ್ಥಿಕ ಪರಿಸ್ಥಿತಿಗೆ ಅರಮನೆಯಿಂದ ೧೯೪೪ರಲ್ಲೂ ೩ ಅಂಕೆಯೆಂದರೆ, ೧೦೦ ರೂಗಳನ್ನು ಮೀರಿರಲಿಲ್ಲ.

ವಾಸುದೇವಾಚಾರ್ಯರು, ಚಿಕ್ಕರಾಮರಾಯರು ಮತ್ತು ಶಿವರಾಮಯ್ಯನವರ ಸ್ನೇಹ ಬಂಧನ ಹಿರಿದಾದುದು. ಇವರ ಸಭೆಯಲ್ಲಿ ಹೊಸ ಕೃತಿಗಳ ಪ್ರದರ್ಶನ, ವಿಮರ್ಶೆ ಮುಂತಾದವುಗಳೇ ವಿಶೇಷವಾಗಿರುತ್ತಿತ್ತು. ಶಿವರಾಮಯ್ಯನವರು ೧೯೩೫ರಲ್ಲಿ ತಮ್ಮ “ಸ್ವಯಂಭೂಸ್ವರ ರಾಗ ಕೀರ್ತನ ಪಂಚರತ್ನಂ” ಎಂಬ ಪುಸ್ತಕವನ್ನು ಶ್ರೀಮತ್‌ಗ ತ್ಯಾಗರಾಜರ ಜಯಂತೀ ಮಹೋತ್ಸವ ಸಮಾರಂಭದಲ್ಲಿ ತ್ಯಾಗರಾಜ ಪಾದಾರವಿಂದದಲ್ಲಿ ಸಮರ್ಪಣೆ ಮಾಡಿದ್ದಾರೆ. ಶಿವರಾಮಯ್ಯನವರು ತಮ್ಮ ಅರವತ್ತೊಂದನೇ ವಯಸ್ಸಿನಲ್ಲಿ ೧೩-೦೩-೧೯೪೬ ರಂದು ನಾದಸಾಗರದಲ್ಲಿ ಒಂದಾಗಿ ಇಹಲೋಕದಿಂದ ತೆರಳಿದರು.

ಅವರ ನಂತರ ಅವರ ಮಕ್ಕಳಲ್ಲಿ ಆಸ್ಥಾನ ವಿದ್ವಾಂಸರಾಗಿದ್ದ ಎಸ್‌. ಅನಂತ ಪದ್ಮನಾಭರಾವ್‌ ತಂದೆಯ ವೀಣೆಯ ನಾದ ತರಂಗಗಳನ್ನು ಕಾಪಾಡಿಕೊಂಡುಬಂದರು. ಎಂ.ಎಸ್‌. ನಾರಾಯಣ ಮೂರ್ತಿಯವರಿಗೂ ಹಾಗೂ ವಂಶದ ಕುಡಿಗಳಾದ ಸುಬ್ಬುಲಕ್ಷ್ಮೀ, ಪ್ರಭಾವತಿ, ರೋಹಿಣಿ, ಅನಂತಲಕ್ಷ್ಮೀ, ವಿಮಲ, ಎ.ವಿ.ಉಷಾ ಅವರಿಗೂ ಸಂಗೀತದಲ್ಲಿ ಶಿಕ್ಷಣವನ್ನು ಇತ್ತಿರುವರು.

ಶಿವರಾಮಯ್ಯನವರ ದ್ವಿತೀಯ ಪುತ್ರರಾದ ಎಂ.ಎಸ್‌. ನಾರಾಯಣ ಮೂರ್ತಿಗಳು ತಮ್ಮ ತಂದೆಯವರಾದ ಆಸ್ಥಾನ ವಿದ್ವಾನ್‌ ವೈಣಿಕ ಪ್ರವೀಣ ವೀಣಾ ಶಿವರಾಮ್ಯಯ್ಯನವರ ಸಂಗೀತ ರಚನೆಗಳನ್ನು ಸಂಗ್ರಹಿಸಿ ಸಂಪಾದಿಸಿ “ಶಿವರಾಮ ಸಂಗೀತ ಸುಧಾ-ಭಾಗ ೧” ಗ್ರಂಥವನ್ನು ಅನನ್ಯ ಜಿ.ಎಂ.ಎಲ್‌. ಕಲ್ಚರಲ್‌ ಅಕಾಡೆಮಿಯಿಂದ ೨೦೦೧ ಡಿಸೆಂಬರ್ ನಲ್ಲಿ ಪ್ರಕಟ ಮಾಡಿದ್ದಾರೆ. ಇದರಲ್ಲಿ ಶಿವರಾಮಯ್ಯನವರ ೧೦ ಸ್ವರಜತಿ, ೩೦ ಕೃತಿ (ಕನ್ನಡ ಸಾಹಿತ್ಯ), ೧೦ (ಸಂಸ್ಕೃತ ಸಾಹಿತ್ಯ) ೨ (ತೆಲುಗು ಸಾಹಿತ್ಯಗಳು) ಹಾಗೂ ಸಂಗೀತ ಕಲಾರತ್ನ ರಾ. ಸತ್ಯನಾರಾಯಣರ ವಿದ್ವತ್‌ ಪೂರ್ಣ ಮುನ್ನುಡಿ, ಶಿವರಾಮಯ್ಯನವರ ಆಪ್ತ ಶಿಷ್ಯ ವಿದ್ವಾನ್‌ ರಾ. ಸೀತಾರಾಂ ಬರೆದಿರುವ ತಮ್ಮ ಗುರುಗಳ ಮನೆಯ ಅಪೂರ್ವ ರೇಖಾ ಚಿತ್ರಗಳು ವಿಶೇಷವಾಗಿದೆ.

ಇದಲ್ಲದೆ “ಶಿವರಾಮ ಸಂಗೀತ ಸುಧಾ -ಭಾಗ ೨” ರಲ್ಲಿ ಶಿವರಾಮಯ್ಯನವರ ೩೦ಕ್ಕೂ ಹೆಚ್ಚು ಕೃತಿಗಳನ್ನು ತರುವ ಆಶಯ ಅವರ ಪುತ್ರ ಎಂ.ಎಸ್‌. ನಾರಾಯಣ ಮೂರ್ತಿಯವರದು.

ವೀಣಾ ಪದ್ಮನಾಭಯ್ಯನವರಿಂದ ಅಂಕುರವಾದ ನಾದ ಬಿಂದು ಇವರ ಮನೆತನದಲ್ಲಿ ಮಗ ವೀಣಾ ಶಿವರಾಮಯ್ಯನವರು, ಮೊಮ್ಮಗ ವೀಣಾ ಅನಂತ ಪದ್ಮನಾಭರಾವ್‌ರವರಿಂದ ಪಲ್ಲವಿಸಿ ಮೊಮ್ಮಗಳಾದ ಎ.ವಿ.ಉಷಾ ಅತ್ಯುತ್ತಮ ಗಾಯಕಿಯಿಂದ ಮಾರ್ದನಿಗೊಳ್ಳುತ್ತಲಿದೆ. ಇವರು ರಾಜ್ಯಕ್ಕೇ ಪ್ರಥಮ ಅಂಧ ಮಹಿಳಾ ಪಧವೀದರೆಯೆನಿಸಿದ್ದಾರೆ. ಸಂಗೀತದಲ್ಲಿ ಎಂ.ಎ. ಪದವೀಧರರಾಗಿ ತಾತ ಶಿವರಾಮಯ್ಯನವರ, ಮುತ್ತಾತ ಪದ್ಮನಾಭಯ್ಯನವರ ಹೆಸರಿಗೆ ಕೀರ್ತಿ ಪ್ರಾಯರಾಗಿದ್ದು ಪ್ರಸಕ್ತ ಸಂಗೀತ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವರು.