ಈ ಘಟನೆ ನಡೆದದ್ದು ಸುಮಾರು ಎಪ್ಪತ್ತು ವರ್ಷಗಳ ಹಿಂದೆ ಮೈಸೂರಿನಲ್ಲಿ.

ಸ್ವತಃ ಘನ ಸಂಗೀತ ವಿದ್ವಾಂಸರಾಗಿದ್ದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರಿನ ಸಂಗೀತ ಕಲೆಯ ಬೆಳವಣಿಗೆಗೆ ನಡೆಸಿದ ಪ್ರಯತ್ನ, ಪ್ರಯೋಗ, ನೀಡಿದ ಪ್ರೋತ್ಸಾಹ ಅಷ್ಟಿಷ್ಟಲ್ಲ. ಉತ್ತರ, ದಕ್ಷಿಣ ಭಾರತದ ಸಂಗೀತ ಪದ್ಧತಿಗಳ ಗಂಗೆ ಕಾವೇರಿಗಳ ಸಂಗಮ ಸ್ಥಾನವಾಯಿತು ಮೈಸೂರು. ಇಷ್ಟೆ ಅಲ್ಲ, ಅರಮನೆಯ ಇಂಗ್ಲಿಷ್ ಬ್ಯಾಂಡ್ ದಳ, ದೇಶದ ಅತ್ಯುತ್ತಮ ದಳಗಳಲ್ಲಿ ಒಂದು ಎನಿಸಿಕೊಂಡಿತು.

ಹಿರಿಯ ವಿದ್ವಾಂಸರಿಗೆ ಪ್ರೋತ್ಸಾಹ ನೀಡಿ, ಅರ ಮನೆಯ ದರ್ಬಾರಿನಲ್ಲಿ ಅವರಿಗೆ ಸ್ಥಾನಮಾನಗಳನ್ನು ಕಲ್ಪಿಸುವುದರ ಜೊತೆಗೆ ಮಹಾರಾಜರು ಕೈಗೊಂಡ ಮತ್ತೊಂದು ಪ್ರಮುಖ ಪ್ರಯತ್ನವೆಂದರೆ ಸಣ್ಣಪುಟ್ಟ ಹುಡುಗರಲ್ಲಿದ್ದ ಕಲಾಭಿರುಚಿಯನ್ನು ಹುಡುಕಿ, ಬೆಳಕಿಗೆ ತಂದು ಬೆಳೆಯುವಂತೆ ಮಾಡಿದುದು. ಹೀಗೆ ಬೆಳಕಿಗೆ ಬಂದ ಹುಡುಗನೊಬ್ಬನ ಕತೆ ಇದು.

ಇದೇ ಸಂಭಾವನೆ !

ಮಧ್ಯಾಹ್ನ ಸುಮಾರು ನಾಲ್ಕು ಗಂಟೆಯ ಸಮಯ. ಅರಮನೆಯ ಆರ್ಗನ್ ರೂಮಿನಲ್ಲಿ ಯುವಕನೊಬ್ಬ ವೀಣೆ ಶ್ರುತಿ ಮಾಡಿಕೊಂಡು ಪ್ರಭುಗಳ ಆಗಮನವನ್ನು ಎದುರು ನೋಡುತ್ತ ಕುಳಿತಿದ್ದ. ಮಹಾಸ್ವಾಮಿಯವರ ಸನ್ನಿಧಿಯಲ್ಲಿ ಹಾಡುವುದು, ನುಡಿಸುವುದು ಎಂದರೆ ಘಟಾನುಘಟಗಳೇ ಎದೆಮುಟ್ಟಿ ನೋಡಿಕೊಳ್ಳುತ್ತಿದ್ದರು. ಇನ್ನು ಈ ಹುಡುಗನ ಪಾಡು ಕೇಳಬೇಕೆ ? ಪ್ರಭುಗಳ ಕೈಯಲ್ಲಿ ಸೈ ಎನಿಸಿಕೊಳ್ಳ ಬೇಕೆಂಬ ಆಸೆ, ಆತುರ, ಉತ್ಸಾಹ ಒಂದೆಡೆ; ರಾಜಸ್ಥಾನ, ಪ್ರಭುಸನ್ನಿಧಿ, ಎಂತೋ ಏನೋ ಎಂಬ ದಿಗಿಲು, ಆತಂಕ ಮತ್ತೊಂದೆಡೆ.

ಮಹಾರಾಜರು ಬಂದು ಕುಳಿತುಕೊಳ್ಳುತ್ತಲೇ, ಯುವಕ ದೇವರನ್ನೂ ಗುರುಹಿರಿಯರನ್ನೂ ಮನಸ್ಸಿನಲ್ಲೇ ವಂದಿಸಿ ವೀಣೆ ನುಡಿಸಲಾರಂಭಿಸಿದ. ಒಂದು ವರ್ಣ, ಮೂರು ನಾಲ್ಕು ಕೀರ್ತನೆಗಳನ್ನು ನುಡಿಸುವಷ್ಟರಲ್ಲಿ ಅರ್ಧ ಗಂಟೆಯಾಯಿತು. ಮಹಾಸ್ವಾಮಿ ಮೇಲೆದ್ದರು. ವೀಣೆ ಯನ್ನು ಕೆಳಗಿರಿಸಿ ಯುವಕ ಭಯಭಕ್ತಿಯಿಂದ ತಲೆಬಾಗಿಸಿ ಕೈಮುಗಿದ.

ಕೆಲ ನಿಮಿಷಗಳಲ್ಲಿ ಮಹಾರಾಜರ ಕಾರ್ಯ ದರ್ಶಿಗಳು ಅವನೆಡೆಗೆ ಬಂದು, “ನಿನ್ನ ವೀಣೆಯನ್ನು ಕೇಳಿ ಪ್ರಭುಗಳಿಗೆ ಆನಂದವಾಯಿತು. ಅದಕ್ಕೆ ತಕ್ಕ ಬಹುಮಾನವನ್ನು ದಯಪಾಲಿಸಿದ್ದಾರೆ. ತೆಗೆದುಕೋ” ಎಂದು ಎರಡು ರೂಪಾಯಿಗಳನ್ನು ಅವನ ಕೈಯಲ್ಲಿತ್ತರು!

‘ಭೂಮಿ ತಾಯಿ ಅಲ್ಲೇ, ಆ ಕ್ಷಣದಲ್ಲೇ ಬಾಯಿ ತೆರೆಯಬಾರದೇ?’ ಎನಿಸಿತು ಯುವಕನಿಗೆ. ಆದರೆ ರಾಜಾಸ್ಥಾನ ; ತುಟಿ ಪಿಟಕ್ಕೆನ್ನುವಂತಿಲ್ಲ. ಮರುಮಾತಾಡದೆ ವೀಣೆಯನ್ನು ಹೆಗಲಮೇಲಿರಿಸಿಕೊಂಡು ಮನೆಯತ್ತ ಸರಸರ  ಕಾಲು ಹಾಕಿದ.

ಅಪಮಾನ, ನಿರಾಸೆ, ಕೋಪತಾಪಗಳ ಗೊಂದಲಕ್ಕೆ ಸಿಕ್ಕಿದ್ದ ಯುವಕನಿಗೆ ಪ್ರಪಂಚವೇ ಬೇಡವಾಯಿತು. ತಲೆ ತಗ್ಗಿಸಿಕೊಂಡು, ಅತ್ತಇತ್ತ ನೋಡದೆ ನಡೆಯುತ್ತಿದ್ದ ಅವನಿಗೆ ಅವನ ಹಿಂದೆಹಿಂದೆಯೇ ಬರುತ್ತಿದ್ದ ಅರಮನೆಯ ಊಳಿಗದವನು ಕಣ್ಣಿಗೇ ಬೀಳಲಿಲ್ಲ !

ಹುಡುಗನ ಬರುವಿಕೆಗಾಗಿ ಮನೆಯ ಮುಂದೆ ಕಾತರರಾಗಿ ನಿಂತಿದ್ದರು ಚಿಕ್ಕಸುಬ್ಬರಾಯರು. ಹುಡುಗ ಮುಖ ಕೆಳಗೆಮಾಡಿ ಬರುತ್ತಿದ್ದುದನ್ನು ದೂರದಿಂದಲೇ ನೋಡಿದ ರಾಯರಿಗೆ ಜಂಘಾಬಲವೇ ಬಿದ್ದುಹೋಯಿತು. ‘ಏನು ಅಚಾತುರ್ಯವಾಗಿ ಹೋಯಿತೋ ಏನೋ ಕಾಣೆನಲ್ಲ !’ ಎಂದು ಗಾಬರಿಗೊಂಡರು.

“ಏನಪ್ಪ, ವೆಂಕಟಗಿರಿ, ಕಛೇರಿ ಹೇಗೆ ನಡೆಯಿತು? ಸರಿಯಾಗಿ, ಧೈರ್ಯವಾಗಿ ನುಡಿಸಿದಿ ತಾನೇ ?” ಎಂದು ಕೇಳುತ್ತಿದ್ದರೂ, ಕೇಳಿಸಿಯೂ ಕೇಳಿಸದವನಂತೆ ಒಳಗಡೆಗೆ ನಡೆದು ವೀಣೆಯನ್ನು ಅದರ ಸ್ಥಳದಲ್ಲಿರಿಸಿ ಬಂದು. ಸುಬ್ಬರಾಯರಿಗೆ ದೀರ್ಘದಂಡ ಪ್ರಣಾಮ ಮಾಡಿದ. “ನೀವು ವಿದ್ಯಾದಾನ ಮಾಡಿದುದು, ಸಂಗೀತ ಕಲಿಯಲು ನಾನು ಪಟ್ಟ ಶ್ರಮ, ಮಾಡಿದ ಸಾಧನೆ, ಎಲ್ಲವೂ ಇಂದಿಗೆ ಸಾರ್ಥಕಗೊಂಡವು” ಎಂದ.

ಸುಬ್ಬರಾಯರು ಸಮಾಧಾನದ ಉಸಿರಾಡಿದರು.

“ಇಗೋ, ಮಹಾಸ್ವಾಮಿಯವರು ತಮ್ಮ ಮೆಚ್ಚುಗೆ ಯನ್ನು ವ್ಯಕ್ತಪಡಿಸಿ ದಯಪಾಲಿಸಿದ ಕೋಟಿವರಹ” ಎಂದು ಆ ಎರಡು ರೂಪಾಯಿಗಳನ್ನು ಸುಬ್ಬರಾಯರ ಮುಂದೆಸೆದ!

ಕಂಗೆಟ್ಟರು ಸುಬ್ಬರಾಯರು. ಏನೊಂದೂ ಅರ್ಥ ವಾಗದೆ ತಬ್ಬಿಬ್ಬಾದರು.

‘ಇದೇನು ಕಡಿಮೆಯೆ ?’

ಅಷ್ಟರಲ್ಲಿ ಏನೂ ತಿಳಿಯದವನಂತೆ ನಟಿಸುತ್ತ ಬಂದ ಅರಮನೆಯ ಊಳಿಗದವನು.

“ಏನು ಬುದ್ಧಿ ! ಇವೊತ್ತು ಚಿಕ್ಕಬುದ್ದಿಯೋರ ಕಛೇರಿಯಾಯಿತಂತೆ ಅರಮನೆಯಲ್ಲಿ ? ಮಹಾಸ್ವಾಮಿ ಯವರು ತುಂಬ ಸಂತೋಷಪಟ್ಟು ಭಾರಿ ಇನಾಮು ದಯಪಾಲಿಸಿದರಂತೆ !” ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದ.

ಸುಬ್ಬರಾಯರು ಸಮಾಧಾನದಿಂದಲೇ ನುಡಿದರು:

“ಮಾದಯ್ಯ, ನಾನು, ನನ್ನ ಸಂಸಾರ, ಎಲ್ಲವೂ ಬದುಕುತ್ತಿರುವುದೇ ಅವರ ಅನ್ನ ಪ್ರಭಾವದಿಂದ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎನ್ನುವಂತೆ ಅವರ ಅನುಗ್ರಹದಿಂದ ಬೆಳೆದ ಈ ಚಿರಂಜೀವಿ ಪ್ರಭುಗಳ ದೃಷ್ಟಿಗೆ ಬೀಳಬೇಕು, ಅವರ ಕೃಪಾಕಟಾಕ್ಷಕ್ಕೆ ಪಾತ್ರವಾಗಬೇಕು ಎಂದು ಎಷ್ಟೋ ದಿನಗಳಿಂದ ಎಣಿಸುತ್ತಿದ್ದೆ. ಆ ಕನಸು ಇಂದು ನನಸಾಯಿತು. ಹುಡುಗನ ವಾದನವನ್ನು ಆಲಿಸುವ ಕೃಪೆ ತೋರಿದರಲ್ಲ ಪ್ರಭುಗಳು, ಅಷ್ಟೇ ನಮ್ಮ ಪುಣ್ಯ. ಅವನಿಗೆ ಅವರು ಸಂಭಾವನೆ ಬೇರೆ ದಯಪಾಲಿಸಬೇಕೆ ? ಅವರ ಕಟಾಕ್ಷ ಒಂದಿದ್ದರೆ ಸಾಲದೆ, ಈ ಎರಡು ರೂಪಾಯಿ ಎರಡು ಕೋಟಿಯಾಗಲು? ಮಹಾಸ್ವಾಮಿಯವರಿಗೆ ಹುಡುಗನ  ನುಡಿಸುವಿಕೆ ಮನಸ್ಸಿಗೆ ಬಾರದಿದ್ದರೂ ಇರಬಹುದು. ಪ್ರಭುಗಳ ಜ್ಞಾನವೇನು ಕಡಮೆಯೆ ? ಇನ್ನೂ ಚಿಕ್ಕ ವಯಸ್ಸು ಹುಡುಗನಿಗೆ. ಚೆನ್ನಾಗಿ ಸಾಧನೆ ಮಾಡಿಸಿ, ಪ್ರಭುಗಳೇ ‘ಶಹಭಾಸ್’ ಎನ್ನಬೇಕು ಹಾಗೆ ಮಾಡುತ್ತೇನೆ.”

ಮಾದಯ್ಯ ಅಲ್ಲಿಂದ ಎಲ್ಲಿಗೋ ಹೋಗುವಂತೆ ಹೊರಟು ಅರಮನೆಗೆ ಹಿಂದಿರುಗಿದ. ನಡೆದ ಸಮಾಚಾರ ವನ್ನೆಲ್ಲ ಪ್ರಭುಗಳ ಸನ್ನಿಧಿಯಲ್ಲಿ ಅರಿಕೆ ಮಾಡಿದ, ಪ್ರಸನ್ನರಾದರು ಮಹಾರಾಜರು.

ವೆಂಕಟಗಿರಿಯಪ್ಪನವರು ಮಹಾರಾಜರು ಏರ್ಪಡಿ ಸಿದ್ದ ವಿಷಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರ ಬಾಳಿನ ಭಾಗ್ಯದ ಬಾಗಿಲು ಅಂದೇ ತೆರೆಯಿತು.

ಕೃಷ್ಣರಾಜ ಒಡೆಯರು ವೆಂಕಟಗಿರಿಯಪ್ಪನಿಗೆ ಸಂಭಾವನೆ ನೀಡಿದರು.

ಮರುದಿನ ಪ್ರಭುಗಳು ಸುಬ್ಬರಾಯರನ್ನೂ ವೆಂಕಟಗಿರಿ ಯಪ್ಪನವರನ್ನೂ ಖಾಸ ಬಂಗಲೆಗೆ ಬರಮಾಡಿಕೊಂಡರು. ವೆಂಕಟಗಿರಿಯಪ್ಪನವರಿಗೆ ಇನ್ನೂರೈವತ್ತು ರೂಪಾಯಿ ಗಳನ್ನೂ ಅವರನ್ನು ತಯಾರು ಮಾಡಿದ ಸುಬ್ಬರಾಯರಿಗೆ ಮುನ್ನೂರು ರೂಪಾಯಿಗಳನ್ನೂ ಸಂಭಾವನೆಯಾಗಿ ನೀಡಿದರು. “ಹುಡುಗನ ಕೈ ಹಿತವಾಗಿದೆ. ಚೆನ್ನಾಗಿ ಪಾಠ ಹೇಳಿ” ಎಂದು ತಮ್ಮ ಸಂತೋಷವನ್ನೂ ವ್ಯಕ್ತಪಡಿಸಿದರು. ಅಂದಿನಿಂದಲೇ ವೆಂಕಟಗಿರಿಯಪ್ಪ ಆಸ್ಥಾನ ವಿದ್ವಾಂಸರಾಗಿ ನೇಮಕವಾದರು.

ಬಾಲ್ಯ

ವೆಂಕಟಗಿರಿಯಪ್ಪ ಹುಟ್ಟಿದ್ದು ಮೈಸೂರಿನಲ್ಲಿ; ೧೮೮೭ರ ಏಪ್ರಿಲ್ ೨೬ ರಂದು. ತಂದೆಯ ಹೆಸರು ವೆಂಕಟರಾಮಯ್ಯ. ತಾಯಿ ನರಸಮ್ಮ.

ವೆಂಕಟಗಿರಿಯಪ್ಪ ಹನ್ನೊಂದು ತಿಂಗಳ ಮಗುವಾಗಿ ದ್ದಾಗಲೇ ವೆಂಕಟರಾಮಯ್ಯ ಕಾಲವಾದರು. ಮಗುವಿನ ಲಾಲನೆ ಪಾಲನೆಗಳನ್ನು ಅದರ ತಾತ, ಎಂದರೆ, ನರಸಮ್ಮನವರ ತಂದೆ, ದೊಡ್ಡ ಸುಬ್ಬರಾಯರು ವಹಿಸಿ ಕೊಂಡರು. ದೊಡ್ಡ ಸುಬ್ಬರಾಯರು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನದಲ್ಲಿ ಹಿರಿಯ ವಿದ್ವಾಂಸರಾಗಿದ್ದರು. ಅವರಿಗೆ ಒಂದು ಗಂಡು, ಎರಡು ಹೆಣ್ಣು ಮಕ್ಕಳು.

ಮಗನಿಗೂ ಸುಬ್ಬರಾಯ ಎಂದು ನಾಮಕರಣ ಮಾಡಬೇಕಾಗಿ ಬಂದ ಸಂದರ್ಭ ಸ್ವಾರಸ್ಯವಾಗಿದೆ. ನಾಮಕರಣದ ದಿನ ಕೃಷ್ಣಸರ್ಪವೊಂದು ಮನೆಯ ಬಾಗಿಲವರೆಗೂ ಹರಿದು ಬಂದು, ಮನೆಯ ಹೊಸ್ತಿಲ ಬಳಿ ಸ್ವಲ್ಪ ಕಾಲ ಹೆಡೆಯಾಡಿಸುತ್ತಿದ್ದು, ಯಾರಿಗೂ ಯಾವ ತೊಂದರೆಯನ್ನೂ ಮಾಡದೆ ಹೊರಟು ಹೋಯಿತಂತೆ. ನಾಗಪ್ಪನೇ ಈ ರೂಪದಲ್ಲಿ ಬಂದು ಅನುಗ್ರಹ ಮಾಡಿದ ನೆಂದು ನಂಬಿದ ಸುಬ್ಬರಾಯರು ಮಗನಿಗೂ ಅದೇ ಹೆಸರಿಟ್ಟರು. ಮಗನನ್ನು ಚಿಕ್ಕಸುಬ್ಬರಾಯರೆಂದು ಕರೆಯು ವುದು ವಾಡಿಕೆಯಾಯಿತು.

ಚಿಕ್ಕ ಸುಬ್ಬರಾಯರೂ ತಂದೆಯಂತೆ ಶ್ರೇಷ್ಠ ವೈಣಿಕರಾಗಿದ್ದರು. ಹುಟ್ಟಿದ ಹದಿನಾಲ್ಕು ಮಕ್ಕಳಲ್ಲಿ ಚಿಕ್ಕ ಸುಬ್ಬರಾಯರ ಪಾಲಿಗೆ ಒಂದಾದರೂ ಉಳಿಯಲಿಲ್ಲ. ಆದುದರಿಂದ ಹಿರಿಯ ತಂಗಿಯ ಮಗ ಕೃಷ್ಣಪ್ಪನವರನ್ನೂ ಕಿರಿಯ ತಂಗಿಯ ಮಗ ವೆಂಕಟಗಿರಿಯಪ್ಪನವರನ್ನೂ ತಮ್ಮ ಮಕ್ಕಳೆಂದೇ ತಿಳಿದು ಪೋಷಿಸುತ್ತ ಬಂದರು.

ವೈಣಿಕ ವಂಶದ ರಕ್ತವನ್ನು ಹಂಚಿಕೊಂಡು ಹುಟ್ಟಿದ್ದ ವೆಂಕಟಗಿರಿಗೆ ಸಹಜವಾಗಿಯೇ ವೀಣೆಯ ಕಡೆಗೇ ಒಲವು. ಶಾಲೆಯ ಪಾಠ ತಲೆಗೆ ಅಂಟಲಿಲ್ಲ. ಹಾಗೂ ಹೀಗೂ ಲೋಅರ್ ಸೆಕೆಂಡರಿಯ ಮೆಟ್ಟಿಲು ಹತ್ತುವಷ್ಟರಲ್ಲಿ ಸಾಕುಸಾಕಾಯಿತು ಹುಡುಗನಿಗೆ. ಇದನ್ನು ಕಂಡುಕೊಂಡ ಚಿಕ್ಕಸುಬ್ಬರಾಯರೂ ದೊಡ್ಡ ಸುಬ್ಬರಾಯರೂ ಹುಡುಗನನ್ನು ಉತ್ತಮ ವೈಣಿಕನನ್ನಾಗಿ ಮಾಡಲು ನಿಶ್ಚಯಿಸಿದರು.

ವೆಂಕಟಗಿರಿ ‘ಸಪಸ’ ಪ್ರಾರಂಭಮಾಡಿದ್ದು ತಾತ ದೊಡ್ಡ ಸುಬ್ಬರಾಯರ ಬಳಿ ; ೧೮೯೨ ರ ವಿಜಯದಶಮಿ ಯಂದು, ಆಗ ಹುಡುಗನಿಗೆ ಕೇವಲ ಐದು ವರ್ಷ. ಅಂದು ಸಹ ಒಂದು ವಿಚಿತ್ರ ಘಟನೆ ನಡೆಯಿತು.

ದೊಡ್ಡ ಸುಬ್ಬರಾಯರು ದರ್ಬಾರನ್ನು ಮುಗಿಸಿ ಕೊಂಡು ಮನೆಗೆ ಹಿಂತಿರುಗಿದರು. ಸಂಧ್ಯಾವಂದನೆ ಮಾಡಿದರು. ಮೊಮ್ಮಗ ವೆಂಕಟಗಿರಿಗೆ ಕೈಕಾಲು ತೊಳೆದು ಕೊಂಡು ಬರುವಂತೆ ಹೇಳಿದರು. ಸುಬ್ಬರಾಯರು ತುಂಬ ದೈವಭಕ್ತರು, ಕರ್ಮಯೋಗಿಗಳು. ವಿಧಿವತ್ತಾಗಿ ದೇವಿ ಶಾರದೆಗೆ ತಾವು ಪೂಜೆಮಾಡಿದ ಬಳಿಕ ಮೊಮ್ಮಗ ನಿಂದಲೂ ಪೂಜೆ ಮಾಡಿಸಿದರು. ಅನಂತರ, “ಎಲ್ಲಿ, ಕೊಠಡಿಯೊಳಗಿರುವ ಆ ಸಣ್ಣ ವೀಣೆಯನ್ನು ತೆಗೆದು ಕೊಂಡು ಬಾ” ಎಂದು ಮಗ ಚಿಕ್ಕ ಸುಬ್ಬರಾಯರಿಗೆ ಹೇಳಿದರು.

ಶಾರದೆಯ ಸನ್ನಿಧಿಯಲ್ಲಿ ಕುಳಿತು ಮೊಮ್ಮಗನಿಗೆ ಶಾಸ್ತ್ರೋಕ್ತವಾಗಿ ವೀಣೆಯ ಪಾಠವನ್ನು ಪ್ರಾರಂಭಿಸಿದರು. ಹುಡುಗ ಒಂದೆರಡು ಬಾರಿ ವೀಣೆಯ ತಂತಿಗಳ ಮೇಲೆ ಬೆರಳಾಡಿಸಿದ. “ಇವೊತ್ತಿಗೆ ಇಷ್ಟು ಸಾಕು” ಎಂದರು ಸುಬ್ಬರಾಯರು. ದೇವಿಗೂ ತಾತನವರಿಗೂ ಸಾಷ್ಟಾಂಗ ಎರಗಿದ ವೆಂಕಟಗಿರಿ.

“ನೋಡು ಸುಬ್ಬು, ವೆಂಕಟಗಿರಿಗೆ ನಾನು ಪಾಠ ಪ್ರಾರಂಭ ಮಾಡಿದ್ದಾಯಿತು, ಇನ್ನು ಅವನನ್ನು ತಯಾರು ಮಾಡುವ ಜವಾಬ್ದಾರಿ ನಿನಗೆ ಸೇರಿದ್ದು. ಚೆನ್ನಾಗಿ ಪಾಠ ಹೇಳು. ಹುಡುಗನಿಗೆ ಶಾರದೆಯ ಅನುಗ್ರಹವಿದೆ. ಮುಂದಕ್ಕೆ ಬರುತ್ತಾನೆ” ಎಂದರು. ಅವರು ಏಕೆ ಹೀಗೆ ನುಡಿಯು ತ್ತಿದ್ದಾರೆ ಎನ್ನುವುದು ಮಗನಿಗಾಗಲೀ ಮೊಮ್ಮಗನಿಗಾಗಲೀ ಅರ್ಥವಾಗಲಿಲ್ಲ.

“ಹೊತ್ತಾಗುತ್ತ ಬಂದಿದೆ. ನೀವೆಲ್ಲರೂ ಊಟಕ್ಕೇಳಿ. ನಾನು ದೇವಿಗೆ ನಾಲ್ಕು ಪ್ರದಕ್ಷಿಣೆ ನಮಸ್ಕಾರ ಹಾಕಿ ಬರುತ್ತೇನೆ” ಎಂದರು ದೊಡ್ಡ ಸುಬ್ಬರಾಯರು.

ತ್ಯಾಗರಾಜರ ‘ವರನಾರದ ನಾರಾಯಣ ಸ್ಮರಣ’ ಎಂಬ ಕೃತಿಯನ್ನು ಕಂಡರೆ ರಾಯರಿಗೆ ತುಂಬ ಪ್ರೀತಿ. ಪ್ರತಿದಿನ ಪ್ರದಕ್ಷಿಣ ನಮಸ್ಕಾರ ಮಾಡುವಾಗ ಅದನ್ನು ಹಾಡುವ ಪದ್ಧತಿಯನ್ನಿಟ್ಟುಕೊಂಡಿದ್ದರು. ಅಂದು ಸಹ ಆ ಕೀರ್ತನೆಯನ್ನು ಹಾಡಿ ದೇವಿಗೆ ದೀರ್ಘದಂಡ ಪ್ರಣಾಮ ಮಾಡಿದರು. ಶಾರದೆಯ ಅಡಿಯಲ್ಲಿಟ್ಟ ಮುಡಿಯನ್ನು ಮತ್ತೆ ಮೇಲೆತ್ತಲೇ ಇಲ್ಲ ಸುಬ್ಬರಾಯರು. ಶಾರದೆಯ ಸನ್ನಿಧಿಯಲ್ಲಿ ಅಸುವನ್ನು ನೀಗಿದ್ದರು.

ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗನೆಂದೇ ತಿಳಿದು ಸುಬ್ಬರಾಯರು ವೆಂಕಟಗಿರಿಯಪ್ಪನವರಿಗೆ ವಿದ್ಯಾದಾನ ಮಾಡಿದರು. ವೀಣೆಯ ಗುಟ್ಟನ್ನೆಲ್ಲ ತಿಳಿಯ ಹೇಳಿದರು. ರಾಯರ ಪ್ರೀತಿವಾತ್ಸಲ್ಯ ವೆಂಕಟಗಿರಿಯಪ್ಪನವರಿಗೆ ಪಿತೃ ವಿಯೋಗದ ದುಃಖವನ್ನೇ ಮರೆಸಿತ್ತು. ಶ್ರದ್ಧೆಯಿಂದ, ಭಕ್ತಿಯಿಂದ ವೀಣೆಯ ಉಪಾಸನೆ ಮಾಡಿದರು. ಸಂಗೀತ ಸರಸ್ವತಿಯನ್ನು ಒಲಿಸಿಕೊಂಡರು.

ಸಂಸಾರ

ಆಗಿನ ಕಾಲಕ್ಕೆ ತಕ್ಕಂತೆ ತೀರ ಚಿಕ್ಕ ವಯಸ್ಸಿನಲ್ಲೆ ಮಾವನವರ ಅಪೇಕ್ಷೆಯಂತೆ ಮದುವೆಯಾದರು ವೆಂಕಟ ಗಿರಿಯಪ್ಪ. ಆಗ ಅವರಿಗೆ ಕೇವಲ ಹದಿನಾರು ವರ್ಷ. ಆದರೆ ದುರದೃಷ್ಟದಿಂದ ಮದುವೆಯಾದ ವರ್ಷದೊಳಗಾಗಿ ಹೆಂಡತಿಯನ್ನೂ ಹುಟ್ಟಿದ ಮಗುವನ್ನೂ ಕಳೆದುಕೊಂಡರು ವೆಂಕಟಗಿರಿಯಪ್ಪ. ಅವರಿಗೆ ಈಗ ಜೀವನವೇ ಭಾರವಾಗಿ ಕಂಡುಬಂದಿತು. ಮನಸ್ಸಿನ ಶಾಂತಿ ನೆಮ್ಮದಿಗಳಿಗಾಗಿ ವೀಣೆಯ ಮೊರೆ ಹೊಕ್ಕರು. ಹಗಲು-ರಾತ್ರಿ ಎನ್ನದೆ ಸಾಧನೆ ಮಾಡತೊಡಗಿದರು. ನಾದಸೌಖ್ಯದಲ್ಲಿ ಬಾಳಿನ ಕಹಿಯನ್ನು ಮರೆಯಲೆತ್ನಿಸಿದರು.

ಬಂಧು-ಬಳಗದವರ ಬಲವಂತಕ್ಕೆ ಒಳಪಟ್ಟು ವೆಂಕಟಗಿರಿಯಪ್ಪ ನಾಲ್ಕು ವರ್ಷದ ನಂತರ ಮತ್ತೆ ಮದುವೆಯಾದರು.

ವೀಣೆ ಶೇಷಣ್ಣನವರ ಶಿಷ್ಯ

ಬಾಲ್ಯ ಪಾಠದಿಂದ ಹಿಡಿದು ರಾಗ-ತಾನ-ಪಲ್ಲವಿ ಗಳನ್ನು ನುಡಿಸುವ ಮಟ್ಟದವರೆಗೂ ಸುಬ್ಬರಾಯರ ಬಳಿ ವಿದ್ಯಾವ್ಯಾಸಂಗ ಅವ್ಯಾಹತವಾಗಿ ನಡೆಯಿತು, ವೆಂಕಟಗಿರಿ ಯಪ್ಪನವರಿಗೆ. ಮಾವನವರ ವಿದ್ವತ್ತಿನ ಬಗೆಗೆ ತುಂಬ ಪೂಜ್ಯ ಭಾವನೆ ಇದ್ದಿತಾದರೂ ಆಸ್ಥಾನದ ಪ್ರಮುಖ ವಿದ್ವಾಂಸರಾದ ವೀಣೆ ಶೇಷಣ್ಣನವರ ವೀಣೆಯನ್ನು ಕೇಳುವುದೆಂದರೆ ವೆಂಕಟಗಿರಿಯಪ್ಪನವರಿಗೆ ಪಂಚಪ್ರಾಣ. ಕಲಿತರೆ ಆ ವೈಣಿಕ ಶಿಖಾಮಣಿಯ ಬಳಿ ಕಲಿಯಬೇಕು ಎಂದು ಅಂದುಕೊಳ್ಳುತ್ತಿದ್ದರು ವೆಂಕಟಗಿರಿಯಪ್ಪ. ಆದರೆ ಮಾವ ಏನೆಂದುಕೊಳ್ಳುತ್ತಾರೋ ಎಂಬ ಭಯ, ಕಳವಳ.

ಹೀಗಾಗಿ ಏಕಲವ್ಯನಂತೆ ಮನಸ್ಸಿನಲ್ಲಿಯೇ ಶೇಷಣ್ಣ ನವರನ್ನು ಗುರುವನ್ನಾಗಿ ಆವಾಹನೆ ಮಾಡಿಕೊಂಡರು. ಅವರ ಕಛೇರಿಗಳನ್ನು ತಪ್ಪದೆ ಕೇಳುತ್ತ ಬಂದರು. ಅವರು ಕೂಡುವ ಭಂಗಿ, ಅವರ ಬೆರಳಿನ ಕ್ರಮ, ನುಡಿಸುವ ಶೈಲಿ, ರಾಗ ಪೋಷಣೆ, ತಾನ ವಿನ್ಯಾಸ, ತಾಳದ ಚಮತ್ಕಾರ – ಎಲ್ಲ ವನ್ನೂ ಮೈಯೆಲ್ಲ ಕಣ್ಣು ಕಿವಿಯನ್ನಾಗಿಸಿಕೊಂಡು ಮನದಟ್ಟುಮಾಡಿಕೊಂಡರು. ತಮ್ಮ ಸಾಧನೆಯನ್ನೂ ಅದೇ ಕ್ರಮದಲ್ಲಿ ಮಾಡುತ್ತ ಬಂದರು.

ಕೊನೆಗೊಂದು ದಿನ, ಮಾವನವರ ಅನುಮತಿ ಪಡೆದರು. ಶೇಷಣ್ಣನವರ ಬಳಿ ಮೂರುನಾಲ್ಕು ವರ್ಷಗಳ ಕಾಲ ಸಾಗಿತು ವೆಂಕಟಗಿರಿಯಪ್ಪನವರ ವಿದ್ಯಾರ್ಜನೆ. ಅವರ ಸಾಮರ್ಥ್ಯವನ್ನು ಮೆಚ್ಚಿ ಶೇಷಣ್ಣ ಮನಬಿಚ್ಚಿ ಪಾಠ ಹೇಳಿದರು. ಅವರನ್ನು ತಮ್ಮ ಪಟ್ಟಶಿಷ್ಯನನ್ನಾಗಿ ಆರಿಸಿಕೊಂಡರು. ಗುರುವಿನ ಪಡಿಯಚ್ಚು ಎನ್ನುವಷ್ಟರ ಮಟ್ಟಿಗೆ, ಗುರುವಿನ ಜಾಡನ್ನು ಹಿಡಿದು ಗುರಿ ಮುಟ್ಟಿದರು ವೆಂಕಟಗಿರಿಯಪ್ಪ.

ಸಂಗೀತಕ್ಕಾಗಿ

ನಾಲ್ವಡಿ ಕೃಷ್ಣರಾಜ ಒಡೆಯರಿಗೆ ವೆಂಕಟಗಿರಿಯಪ್ಪ ನವರನ್ನು ಕಂಡರೆ ತುಂಬ ಪ್ರೀತಿ, ಅಭಿಮಾನ. ಶೇಷಣ್ಣ,  ಸುಬ್ಬಣ್ಣ, ಬಿಡಾರಂ ಕೃಷ್ಣಪ್ಪ, ವಾಸುದೇವಾಚಾರ್ಯ ಇವರೆಲ್ಲ ವಯಸ್ಸಿನಲ್ಲಿ ಹಿರಿಯರೂ ಗುರುಸ್ವರೂಪರೂ ಆಗಿದ್ದುದರಿಂದ ಅವರೊಂದಿಗೆ ಸಲುಗೆಯಿಂದ ವರ್ತಿಸಲು ಪ್ರಭುಗಳು ಹಿಂಜರಿಯುತ್ತಿದ್ದರು.

ಆದರೆ ವೆಂಕಟ ಗಿರಿಯಪ್ಪನವರ ವಿಷಯದಲ್ಲಿ ಮಹಾರಾಜರಿಗೆ ತುಂಬ ಸಲುಗೆ. ಒಂದೊಂದು ವೇಳೆ ಏಕವಚನದಲ್ಲಿ ಸಂಬೋಧಿಸುವಷ್ಟು ಸ್ನೇಹಭಾವ. ತಮಗೆ ಬೇಕೆಂದಾಗ ಅರಮನೆಗೆ ಬರಮಾಡಿಕೊಂಡು ಅವರ ವೀಣೆಯನ್ನು ಕೇಳಿ ಆನಂದಿಸುತ್ತಿದ್ದರು.

ಮಹಾರಾಜರಿಗೆ ಪಾಶ್ಚಾತ್ಯ ಸಂಗೀತದಲ್ಲಿ ಆಳವಾದ ಜ್ಞಾನ, ಅಪಾರ ಆಸಕ್ತಿ. ಕಿರಿಯ ವಯಸ್ಸಿನ ಆಸ್ಥಾನ ವಿದ್ವಾಂಸರು ಪಾಶ್ಚಾತ್ಯ ಸಂಗೀತವನ್ನು ಅಭ್ಯಾಸ ಮಾಡ ಬೇಕು, ಆ ಪದ್ಧತಿಯ ಸೊಬಗು-ಸೊಗಸುಗಳನ್ನು ಅರಿತುಕೊಳ್ಳಬೇಕು, ಸಾಧ್ಯವಾದ ಸಂದರ್ಭಗಳಲ್ಲಿ ಅವನ್ನು ನಮ್ಮ ಸಂಗೀತ ಪದ್ಧತಿಗೆ ಅಳವಡಿಸಿಕೊಳ್ಳಬೇಕು ಎನ್ನುವುದು ಪ್ರಭುಗಳ ಅಭಿಲಾಷೆ. ಇದಕ್ಕಾಗಿ ಪಾಶ್ಚಾತ್ಯ ಸಂಗೀತಪಾಠ ಹೇಳಲು ಹಲಕೆಲ ವಿದ್ವಾಂಸರನ್ನು ನೇಮಿಸಿದ್ದರು. ವೆಂಕಟ ಗಿರಿಯಪ್ಪನವರಿಗೆ ಪಾಠಹೇಳುವ ಭಾರವನ್ನು ಅರಮನೆ ಇಂಗ್ಲಿಷ್ ಬ್ಯಾಂಡಿನ ನಿರ್ದೇಶಕರಾಗಿದ್ದ ಢಫ್ರಿಸ್  ಸಾಹೇಬರಿಗೆ ವಹಿಸಿದರು ಪ್ರಭುಗಳು.

ಮಹಾಸ್ವಾಮಿಯವರ ಅಪ್ಪಣೆ ಎಂದರೆ ವೆಂಕಟ ಗಿರಿಯಪ್ಪನವರಿಗೆ ರಾಮವಾಕ್ಯ. ಎಳೆಯ ಹುಡುಗರನ್ನು ನಾಚಿಸುವ ಆಸಕ್ತಿ, ಉತ್ಸಾಹದಿಂದ ಪಾಶ್ಚಾತ್ಯ ಸಂಗೀತ ವನ್ನು ಕಲಿಯಲಾರಂಭಿಸಿದರು. ವರ್ಷ ಎನ್ನುವುದರೊಳಗೆ ಅಪಾರ ಅನುಭವ ಪರಿಶ್ರಮಗಳನ್ನು ಸಂಪಾದಿಸಿಕೊಂಡರು. ಪಾಶ್ಚಾತ್ಯ ಸಂಗೀತಗಾರರು ಬಳಸುವ ಸಂಕೇತಗಳನ್ನು ಬಳಸಿ, ಕ್ರಮಬದ್ಧವಾಗಿ ಕರ್ಣಾಟಕ ಸಂಗೀತದ ರಚನೆ ಗಳನ್ನು ಸುಮಾರು ಇಪ್ಪತ್ತು ಸಂಪುಟಗಳಲ್ಲಿ ಬರೆದು ಮಹಾರಾಜರಿಗೆ ಸಮರ್ಪಿಸಿದರು. ಮಹಾರಾಜರಿಗೆ ಅತ್ಯಂತ ಸಂತೋಷ ವುಂಟಾಯಿತು.

ಢಫ್ರಿಸ್ ಸಾಹೇಬರ ಅನಂತರ ಇಂಗ್ಲಿಷ್ ಬ್ಯಾಂಡಿನ ಮುಖ್ಯಸ್ಥರಾಗಿ ಬಂದಿದ್ದ ಸ್ಮಿತ್ ಎಂಬವರಿಗೆ ಅದನ್ನು ತೋರಿಸಿದರು. ಸ್ಮಿತ್ ಅವರು ವೆಂಕಟಗಿರಿಯಪ್ಪನವರ ಪಾಂಡಿತ್ಯವನ್ನು ಮುಕ್ತಕಂಠದಿಂದ ಕೊಂಡಾಡಿದರು. ಇದರಿಂದ ಸುಪ್ರೀತರಾದ ಪ್ರಭುಗಳು ವೆಂಕಟಗಿರಿಯಪ್ಪ ನವರನ್ನು ಅರಮನೆಯ ಕರ್ಣಾಟಕ ಬ್ಯಾಂಡಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಿದರು. ಶೇಷಣ್ಣ ಮತ್ತು ಸುಬ್ಬಣ್ಣನವರ ಕಾಲಾನಂತರ ಅರಮನೆಯ ವಿದ್ವಾಂಸರ ವಾದ್ಯಗೋಷ್ಠಿಗೂ ವೆಂಕಟಗಿರಿಯಪ್ಪನವರೇ ಮುಖಸ್ಥ ರಾದರು.

ಸಂಪ್ರದಾಯ ಶರಣರಾದರೂ ಸಂಕುಚಿತ ಮನೋ ಭಾವದವರಾಗಿರಲಿಲ್ಲ ವೆಂಕಟಗಿರಿಯಪ್ಪ. ಹಳೆಯದನ್ನು ಉಳಿಸಿಕೊಂಡು ಹೊಸದನ್ನು ಬೆಳೆಸಿಕೊಳ್ಳಬೇಕು ಎಂಬ ಮನೋವೃತ್ತಿ ಅವರದ್ದು. ಮಹಾರಾಜರ ವಿಚಾರ ಧೋರಣೆಯೂ ಅಂತೆಯೇ ಇದ್ದಿತು. ತಮ್ಮ ಮನಸ್ಸಿನಲ್ಲಿ ಮೂಡಿ ಬಂದ ಹೊಸಹೊಸ ಪ್ರಯೋಗಗಳನ್ನು ಕಾರ್ಯರೂಪಕ್ಕೆ ತರಲು ವೆಂಕಟಗಿರಿಯಪ್ಪನವರನ್ನು ನೇಮಿಸಿಕೊಳ್ಳುತ್ತಿದ್ದರು ಮಹಾರಾಜರು. ಈ ಕಾರಣ ದಿಂದಾಗಿ ಪ್ರಭುಗಳ ಸಮೀಪವರ್ತಿಗಳಾದರು ವೆಂಕಟ ಗಿರಿಯಪ್ಪ.

ಅರಮನೆಯಲ್ಲಿ ಇವರ ಕಾರ್ಯಕ್ಷೇತ್ರ ವಿಸ್ತಾರ ಗೊಂಡಿತು. ಮಹಾರಾಜರ ಅಪ್ಪಣೆಯ ಮೇರೆಗೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಪುತ್ರಿಯರಾದ ವಿಜಯ ಮತ್ತು ಸುಜಯ ಇವರಿಗೆ ವೀಣೆಯ ಗುರುಗಳಾದರು. ಈ ಪಾಠ ಪ್ರವಚನಗಳು ಜರುಗುತ್ತಿದ್ದುದು ಯುವರಾಜರ ಬಂಗಲೆಯಲ್ಲಿ. ಪಾಠ ಮುಗಿದನಂತರ ಅರಮನೆಯ ಚಂದ್ರಶಾಲೆಯ ತೊಟ್ಟಿಯಲ್ಲಿ ಪ್ರತಿದಿನ ನಡೆಯುತ್ತಿದ್ದ ಸಂಗೀತ ಶಾಲೆಯಲ್ಲಿಯೂ ಸಂಗೀತ ಶಿಕ್ಷಣ ನೀಡುವಂತೆ ಮಹಾರಾಜರ ಅಪ್ಪಣೆಯಾಗಿತ್ತು.

ಶೇಷಣ್ಣನವರ ಶಿಷ್ಯ.

‘ನಿಮ್ಮಂಥ ಆದರ್ಶ ಗುರುಗಳು ಸಿಕ್ಕಿದ್ದು ವಿದ್ಯಾರ್ಥಿನಿಯರ ಪುಣ್ಯ.’

ಕರ್ಣಾಟಕ ಸಂಗೀತದ ಬೆಳವಣಿಗೆಗೆ ಪ್ರಭುಗಳು ಕೈಗೊಂಡ ಹಲವಾರು ಯೋಜನೆಗಳಲ್ಲಿ ಈ ಸಂಗೀತ ಶಾಲೆ ಒಂದು. ಆಸ್ಥಾನ ವಿದ್ವಾಂಸರು ಅವರವರಿಗೆ ನಿಗದಿಯಾಗಿದ್ದ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದರು. ಸಂಗೀತ ಕಲೆಯಲ್ಲಿ ಅಭಿರುಚಿಯುಳ್ಳ, ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಪರೀಕ್ಷೆ ಮಾಡಿ ಚುನಾಯಿಸಿಕೊಂಡು ಅವರಿಗೆ ಉಚಿತವಾಗಿ ಶಿಕ್ಷಣ ನೀಡಲಾಗುತ್ತಿತ್ತು. ಎಷ್ಟೋ ಸಂದರ್ಭಗಳಲ್ಲಿ ಮಹಾರಾಜರು ಗೋಪ್ಯವಾದ ಸ್ಥಳದಲ್ಲಿ ನಿಂತು ಪಾಠ ಪ್ರವಚನಗಳು ಸರಿಯಾಗಿ ನಡೆಯುತ್ತಿವೆಯೋ ಇಲ್ಲವೋ ಎಂಬುದನ್ನು ಸ್ವತಃ ಪರೀಕ್ಷಿಸುತ್ತಿದ್ದರು. ಶ್ರದ್ಧೆಯಿಂದ ಪಾಠ ಹೇಳಿದ ವಿದ್ವಾಂಸರಿಗೂ ಕಲಿತ ವಿದ್ಯಾರ್ಥಿಗಳಿಗೂ ಹೇರಳವಾದ ಪ್ರೋತ್ಸಾಹ ನೀಡುತ್ತಿದ್ದರು.

ಒಂದು ಪ್ರಸಂಗ

ಸರ್ಕಾರಿ ತರಬೇತಿ ಕಾಲೇಜಿನಲ್ಲೂ ಮಹಾರಾಣಿ ಯವರ ಪ್ರೌಢಶಾಲೆಯಲ್ಲಿಯೂ ವೆಂಕಟಗಿರಿಯಪ್ಪ ಸಂಗೀತದ ಅಧ್ಯಾಪಕರಾಗಿ ಅನೇಕ ಮಂದಿಗೆ ವಿದ್ಯಾದಾನ ಮಾಡಿದರು. ಶಿಷ್ಯರಿಗೆ ಪಾಠ ಹೇಳುವುದೆಂದರೆ ಎಲ್ಲಿಲ್ಲದ ಆನಂದ ಅವರಿಗೆ. ತಮಗೆ ತಿಳಿದುದನ್ನೆಲ್ಲಾ ಶಿಷ್ಯರಿಗೆ ಧಾರೆಯೆರೆಯಬೇಕೆಂಬ ಆಸೆ ಅವರಿಗೆ.

ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ತರಗತಿಗಳು ಮುಗಿದ ಮೇಲೂ ವಿದ್ಯಾರ್ಥಿನಿಯರಿಗೆ ಒಂದು-ಒಂದೂವರೆ ಘಂಟೆಯಷ್ಟು ಕಾಲ ಪಾಠ ಹೇಳಿ ವಿದ್ಯಾರ್ಥಿನಿಯರ ಒಂದು ವಾದ್ಯಗೋಷ್ಠಿಯನ್ನು ರೂಪಿಸಿದರು. ಮಹಾರಾಜರ ಸನ್ನಿಧಿಯಲ್ಲಿ ಈ ವಾದ್ಯಗೋಷ್ಠಿ ನಡೆಯುವಂತೆ ಏರ್ಪಾಡು ಮಾಡಿದರು.

ಇದಾದ ಕೆಲವೇ ದಿನಗಳಲ್ಲಿ ಒಂದು ಸ್ವಾರಸ್ಯ ಪ್ರಸಂಗ ನಡೆಯಿತು. ಪ್ರೌಢಶಾಲೆಗೆ ಇನ್‌ಸ್ಪೆಕ್ಟರ್ ಸಾಹೇಬರು ಭೇಟಿ ಕೊಡುವವರಿದ್ದರು. ಸಕಾಲಕ್ಕೆ ಎಂದೂ ಶಾಲೆಗೆ

ಹೋದವರಲ್ಲ ವೆಂಕಟಗಿರಿಯಪ್ಪ. ಇದರಿಂದ ಮುಖ್ಯೋಪಾಧ್ಯಾಯಿ ನಿಗೆ ಅಸಮಾಧಾನವಾಗಿತ್ತು. ಇನ್‌ಸ್ಪೆಕ್ಟರು ಬರುವ ದಿನವಾದರು ನಿಗದಿಯಾದ ವೇಳೆಗೆ ಬರಬಹುದೆಂದು ನಿರೀಕ್ಷಿಸಿದ್ದರು ಆಕೆ. ಆದರೆ ಎಂದಿನಂತೆ ಅಂದೂ ಸಾವಕಾಶವಾಗಿ ಶಾಲೆಗೆ ಹೋದರು. .

ಮಧ್ಯಾಹ್ನ ಮೂರು ಘಂಟೆಯ ಸಮಯಕ್ಕೆ ವೆಂಕಟಗಿರಿಯಪ್ಪ ಶಾಲೆಗೆ ಬಂದು ನೇರವಾಗಿ ತರಗತಿಗೆ ಹೋದರು. ಬರುವಾಗ ಹಣ್ಣು ಹಂಪಲು, ಸಿಹಿ ತಿಂಡಿಗಳನ್ನು ಕೊಂಡು ತಂದು ವಿದ್ಯಾರ್ಥಿನಿಯರಿಗೆ ಹಂಚುವ ಪದ್ಧತಿ. ಅಂದೂ ಸಹ ತಂದಿದ್ದ ಹಣ್ಣುಗಳನ್ನು ಎಲ್ಲರಿಗೂ ಹಂಚಿ, ಉಳಿದ ನಾಲ್ಕಾರು ಹಣ್ಣುಗಳನ್ನು ಮೇಜಿನ ಮೇಲಿರಿಸಿ ತಾವು ಕೂಡ ಹಣ್ಣನ್ನು ತಿನ್ನ ತೊಡಗಿದರು! ಆ ಸಮಯಕ್ಕೆ ಸರಿಯಾಗಿ ಮುಖ್ಯೋಪಾಧ್ಯಾಯಿನಿಯರೊಡಗೂಡಿ ಇನ್‌ಸ್ಪೆಕ್ಟರು ತನಿಖೆಗೆ ಬಂದರು. ವಿದ್ಯಾರ್ಥಿನಿಯರು ಗಾಬರಿಯಾದರು. ವೆಂಕಟಗಿರಿಯಪ್ಪ ಮಾತ್ರ ಸ್ವಲ್ಪವೂ ಆತಂಕಪಡಲಿಲ್ಲ. ಎದ್ದು ನಿಂತು ನಮಸ್ಕರಿಸಿ, ಇಬ್ಬರನ್ನೂ ತುಂಬ ಮರ್ಯಾದೆಯಿಂದ ತರಗತಿಗೆ ಬರಮಾಡಿಕೊಂಡರು. ಮೇಜಿನ ಮೇಲಿದ್ದ ಹಣ್ಣನ್ನು ಇಬ್ಬರಿಗೂ ಕೊಟ್ಟು ತಿನ್ನಬೇಕೆಂದು ಕೇಳಿ ಕೊಂಡರು. ವಿದ್ಯಾರ್ಥಿನಿಯರ  ಪರಿಚಯ ಮಾಡಿಸಿದ ಬಳಿಕ ಹಿಂದಿನ ವಾರ ಪ್ರಭುಗಳ ಸನ್ನಿಧಿಯಲ್ಲಿ ನಡೆದ ವಾದ್ಯಗೋಷ್ಠಿ ಕಾರ್ಯಕ್ರಮದ ವಿಷಯವನ್ನೂ ಪ್ರಭುಗಳು ಮೆಚ್ಚುಗೆ ವ್ಯಕ್ತಪಡಿಸಿದ ಸಂಗತಿಯನ್ನೂ ಇನ್‌ಸ್ಪೆಕ್ಟರಿಗೆ ತಿಳಿಸಿದರು.

ಇದನ್ನು ಕೇಳಿ ಇನ್‌ಸ್ಪೆಕ್ಟರಿಗೆ ಒಳಗೊಳಗೇ ಸಂತೋಷವಾದರೂ ಶಾಲೆಯ ಶಿಸ್ತಿಗೆ ಇವರು ಮರ್ಯಾದೆ ಕೊಡುತ್ತಿಲ್ಲವಲ್ಲ, ತಮ್ಮ ಸಂಗಡವೇ ಅಷ್ಟೊಂದು ಸಲುಗೆಯಿಂದ ವರ್ತಿಸಿದರಲ್ಲ ಎಂಬ ಅಸಮಾಧಾನ ಅವರ ಮುಖದ ಮೇಲೆ ಸ್ಪಷ್ಟವಾಗಿ ಕಾಣುತ್ತಿತ್ತು. “ಅದೆಲ್ಲ ಸರಿ ವೆಂಕಟಗಿರಿಯಪ್ಪನವರೇ, ತುಂಬ ಸಂತೋಷ. ಆದರೆ, ಶಾಲೆಗೆ ಸರಿಯಾದ ವೇಳೆಗೆ ಏಕೆ ಬರುವುದಿಲ್ಲ ನೀವು?” ಎಂದರು ಇನ್‌ಸ್ಪೆಕ್ಟರು ತಮ್ಮ ಸ್ಥಾನಮಾನಗಳ ದರ್ಪ ತೋರುತ್ತ. “ಸರಿಯಾಗಿ ಬರಬೇಕು ಎಂದರೆ ಹೇಗೆ ಸಾಧ್ಯ? ಪ್ರತಿದಿನ ಬೆಳಿಗ್ಗೆ ಅರಮನೆಗೆ ಹೋಗಬೇಕಲ್ಲ ನಾನು? ಮಹಾರಾಜರ ಅನುಮತಿ ಪಡೆದು ಮನೆಗೆ ಬರುವಷ್ಟರಲ್ಲಿ ಮಧ್ಯಾಹ್ನ ಹನ್ನೆರಡು ಆದರೂ ಆಯಿತು, ಒಂದಾದರೂ ಆಯಿತು ! ಊಟ ಮಾಡಿದ ಮೇಲೆ ವಿಶ್ರಾಂತಿ ಬೇಡವೆ? ವಿಶ್ರಾಂತಿ ತೆಗೆದುಕೊಂಡು ಕಾಫಿ ಮುಗಿಸಿ ಬರುವಷ್ಟರಲ್ಲಿ ಮೂರು ಘಂಟೆಯಾಗಿ ಬಿಡುತ್ತೆ. ನಾನೇನು ಮಾಡಲಿ, ಹೇಳಿ?” ಎಂದರು ವೆಂಕಟಗಿರಿಯಪ್ಪ.

ಅವರ ಮುಗ್ಧ ಸ್ವಭಾವವನ್ನು ಕಂಡು ಇನ್‌ಸ್ಪೆಕ್ಟರಿಗೆ ಒಳಗೇ ನಗು ! “ಹೋಗಲಿ, ಪಾಠಕ್ರಮದ ಪ್ರಕಾರ ಪಾಠ ಹೇಳಿದ್ದೀರಾ? ಪಾಠ ಹೇಳುವುದಕ್ಕೆ ಸಿದ್ಧ ಮಾಡಿಕೊಂಡ ಟಿಪ್ಪಣಿ ಎಲ್ಲಿ ನೋಡೋಣ ?” ಎಂದು ಪ್ರಶ್ನಿ ಸಿದರು.“ಕ್ಷಮಿಸಬೇಕು. ನನಗೆ ಅದೊಂದೂ ಬರೆದು ಅಭ್ಯಾಸವಿಲ್ಲ. ಮಹಾಸ್ವಾಮಿಯವರ ಅಪ್ಪಣೆಯ ಮೇರೆಗೆ ಇಲ್ಲಿಗೆ ಬಂದು ಪಾಠ ಹೇಳುತ್ತಿದ್ದೇನೆ. ಸುಮಾರು ಮೂವತ್ತು, ಮೂವತ್ತೈದು ಕೀರ್ತನೆಗಳನ್ನು ಪಾಠ ಹೇಳಿದ್ದೇನೆ. ಟಿಪ್ಪಣಿ ಬರೆದೇ ಕೊಡಬೇಕು ಎಂದರೆ. ಎರಡು-ಮೂರು ದಿನ ಅವಕಾಶ ಕೊಡಿ. ಬರೆಯಲು ಪ್ರಯತ್ನಿಸುತ್ತೇನೆ. ಈಗ ಹೇಗಿದ್ದರೂ ದಯಮಾಡಿಸಿದ್ದೀರಿ. ಮಕ್ಕಳು ನುಡಿಸುವುದನ್ನು ಕೇಳಿ ಅವರಿಗೆ ಆಶೀರ್ವಾದ ಮಾಡಿ” ಎಂದು ವಿನಯದಿಂದ ಪ್ರಾರ್ಥಿಸಿದರು ವೆಂಕಟಗಿರಿಯಪ್ಪ.

ಅಯ್ಯೋ ಪಾಪ ಎನಿಸಿತು ಇನ್‌ಸ್ಪೆಕ್ಟರಿಗೆ. ವಾದ್ಯ ಗೋಷ್ಠಿಯನ್ನು ಕೇಳಿ ಆನಂದಪಟ್ಟು ತಮ್ಮ ಸ್ವಂತ ಹಣದಿಂದ ನೂರು ರೂಪಾಯಿಗಳನ್ನು ವಿದ್ಯಾರ್ಥಿನಿಯರಿಗೆ ಬಹು ಮಾನವಾಗಿ ಕೊಟ್ಟರು. ವೆಂಕಟಗಿರಿಯಪ್ಪನವರನ್ನು ಕುರಿತು, “ನಿಮ್ಮಂಥ ಆದರ್ಶ ಗುರುಗಳು ತುಂಬ ಅಪರೂಪ. ಈ ವಿದ್ಯಾರ್ಥಿನಿಯರ ಪುಣ್ಯವೇ ಪುಣ್ಯ” ಎಂದು ಮನಸಾರ ಹೊಗಳಿದರು.

ಮುಖ್ಯೋಪಾಧ್ಯಾಯಿನಿಯ ಕೊಠಡಿಗೆ ಹೋಗಿ ಪಾಠದ ಪಟ್ಟಿಯನ್ನು ಪರಿಶೀಲಿಸಿದರು. ಆ ತರಗತಿಗೆ ಕೇವಲ ಹದಿನೈದು ಕೀರ್ತನೆಗಳು ಮಾತ್ರ ಪಾಠವಾಗ ಬೇಕಾಗಿದ್ದಿತು. ಆದರೆ ವೆಂಕಟಗಿರಿಯಪ್ಪ ಮೂವತ್ತು ಕೀರ್ತನೆಗಳಿಗೂ ಹೆಚ್ಚು ಪಾಠ ಹೇಳಿದ್ದರು. ಇದನ್ನು ನೋಡಿ ಇನ್‌ಸ್ಪೆಕ್ಟರಿಗೆ ಮಹದಾನಂದವಾಯಿತು.

ಮೈಸೂರು ಸರ್ಕಾರದವರು ನಡೆಸುವ ಸಂಗೀತ ಪರೀಕ್ಷೆಗಳ ಸಮಿತಿಗೆ ಅಧ್ಯಕ್ಷರಾಗಿ ಹತ್ತಾರು ವರ್ಷಗಳ ಕಾಲ ಸೇವೆ ಸಲ್ಲಿಸಿದರು ವೆಂಕಟಗಿರಿಯಪ್ಪ. ಪರೀಕ್ಷೆಗೆ ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಪರೀಕ್ಷಿಸುವುದಕ್ಕೆ ಮುನ್ನ, ಅವರಿಗೆ ಬಿಸ್ಕತ್ತು, ಚಾಕೊಲೇಟು, ಕಾಫಿ ಮುಂತಾದವನ್ನು ಕೊಟ್ಟು, “ಗಾಬರಿಯಾಗಬೇಡಿ. ನಿಮಗೆ ಬಂದುದನ್ನು ನಿರ್ಭಯವಾಗಿ ಹಾಡಿ, ನುಡಿಸಿ. ಪಾಸಾಗುತ್ತೆ” ಎಂದು ಹುರಿದುಂಬಿಸುತ್ತಿದ್ದರು.

ವೆಂಕಟಗಿರಿಯಪ್ಪನವರದು ತುಂಬ ಮೃದು ಹೃದಯ, ಸರಳ ಸ್ವಭಾವ. ಶಾಲೆಗಳಲ್ಲಿ ಸಂಗೀತಪಾಠ ಹೇಳುತ್ತಿದ್ದ ಉಪಾಧ್ಯಾಯರು ಸಹ ಕಡ್ಡಾಯವಾಗಿ ಸರ್ಕಾರಿ ಸಂಗೀತ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಮಾತ್ರ ಹೆಚ್ಚಿನ ಸಂಬಳ ಸಾರಿಗೆಗಳಿಗೆ ಅರ್ಹರಾಗುತ್ತಿದ್ದರು. ಹೆಂಡತಿ ಮಕ್ಕಳನ್ನು ಕಟ್ಟಿಕೊಂಡ ಉಪಾಧ್ಯಾಯರಿಗೆ ಸಂಗೀತವನ್ನು ಅಭಿವೃದ್ಧಿ ಪಡಿಸಿಕೊಂಡು ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವುದಕ್ಕೆ ಮನಸ್ಸೆಲ್ಲಿಂದ ಬರಬೇಕು ? ಸಮಯವೆಲ್ಲಿಂದ ಬರಬೇಕು?

ಸಾಲುಸಾಲಾಗಿ ಬಂದು ವೆಂಕಟಗಿರಿಯಪ್ಪನವರಿಗೆ ಸಾಷ್ಟಾಂಗವೆರಗುತ್ತಿದ್ದರು. ಕಾಪಾಡಬೇಕು ಎಂದು ಕೇಳಿ ಕೊಳ್ಳುತ್ತಿದ್ದರು. ಉಪಾಧ್ಯಾಯರ ಗೋಳಿನ ಕತೆಯನ್ನು ಕೇಳಿದಾಗ ಅವರಿಗಿಂತ ಹೆಚ್ಚಾಗಿ ವೆಂಕಟಗಿರಿಯಪ್ಪನವರಿಗೇ ಕಣ್ಣೀರು ಉಕ್ಕಿ ಬರುತ್ತಿತ್ತು. “ಹೋಗಿ, ದೇವರಿದ್ದಾನೆ, ಸ್ವಲ್ಪ ಶ್ರುತಿ, ತಾಳಗಳ ಮೇಲೆ ಗಮನವಿಟ್ಟು ಹಾಡಿ, ಸಾಕು” ಎಂದು ಕಳುಹಿಸುತ್ತಿದ್ದರು.

ಸನ್ಮಾನ

ಪಾಂಡಿತ್ಯ ಪ್ರದರ್ಶನ ಮಾಡುವ ಉದ್ದೇಶದಿಂದ ಸುದೀರ್ಘ ಪ್ರವಾಸವನ್ನು ಕೈಗೊಂಡ ವೆಂಕಟಗಿರಿಯಪ್ಪ, ಮೈಸೂರಿನ ಕೀರ್ತಿಶ್ರೀಯನ್ನು ಭಾರತದ ಉದ್ದಗಲಕ್ಕೂ ಹರಡಿ ಬಂದರು. ಅರಮನೆ ಗುರುಮನೆಗಳಲ್ಲಿ ನೂರಾರು ಕಛೇರಿಗಳನ್ನು ಮಾಡಿ ಬಿರುದುಬಾವಲಿಗಳನ್ನೂ ವಸ್ತ್ರಾಭರಣಗಳನ್ನೂ, ನಗದು ಹಣವನ್ನೂ ಹೇರಳವಾಗಿ ಸಂಪಾದಿಸಿದರು.

ಕೊಲ್ಲಂಗೋಡು, ತಿರುವಾಂಕೂರು, ಭರತಪುರ, ಕೋಠಾಸಂಗಾಣಿ, ಧರ್ಮಪುರಂ, ಬರೋಡ, ಜಯಪುರ, ಜೋಧಪುರ, ಪುದುಕೋಟೆ, ಬಂಗನಪಲ್ಲಿ ಸಂಸ್ಥಾನಾ ಧೀಶರು ವೆಂಕಟಗಿರಿಯಪ್ಪನವರ ವೀಣಾ ವಾದನವನ್ನು ಕೇಳಿ ಅವರ ಪಾಂಡಿತ್ಯವನ್ನು ಮುಕ್ತ ಕಂಠದಿಂದ ಹೊಗಳಿದರು.

೧೯೪೦ ರಲ್ಲಿ ವೆಂಕಟಗಿರಿಯಪ್ಪ ತಿರುವಾಂಕೂರಿಗೆ ಭೇಟಿಯಿತ್ತರು. ಸರ್ ಸಿ. ಪಿ. ರಾಮಸ್ವಾಮಿ ಅಯ್ಯರ್ ಆಗ ತಿರುವಾಂಕೂರಿನ ದಿವಾನರಾಗಿದ್ದರು. ಮಹಾರಾಜರ ಸಮ್ಮುಖದಲ್ಲಿ ಕಛೇರಿಯನ್ನು ಏರ್ಪಡಿಸುವ ಮುನ್ನ ದಿವಾನರು ವೆಂಕಟಗಿರಿಯಪ್ಪನವರನ್ನು ತಮ್ಮ ಬಂಗಲೆಗೆ ಬರಮಾಡಿಕೊಂಡರು. ರಸಿಕರ ಒಂದು ಸಣ್ಣ ಕೂಟ ಸೇರಿತ್ತು. ಅವರೆಲ್ಲರಿಗೂ ವಿದ್ವಾಂಸರ ಪರಿಚಯ ಮಾಡಿ ಕೊಟ್ಟು, “ಅಭ್ಯಂತರವಿಲ್ಲದಿದ್ದಲ್ಲಿ ಅರ್ಧ ಗಂಟೆಯ ಕಾಲ ನುಡಿಸಬಹುದಲ್ಲ ?” ಎಂದು ಪ್ರಾರ್ಥಿಸಿದರು ದಿವಾನರು. “ಅಗತ್ಯವಾಗಿ ಆಗಬಹುದು” ಎಂದು ನುಡಿಸಲು ಪ್ರಾರಂಭಿ ಸಿದರು ವೆಂಕಟಗಿರಿಯಪ್ಪ. ಮೂರು ಗಂಟೆಗಳ ಕಾಲ ನಡೆಯಿತು ಕಛೇರಿ. ಒಬ್ಬರಿಗಾದರೂ ಗಂಟೆಗಳು ಉರುಳಿ ದ್ದರ ಅರಿವೇ ಇರಲಿಲ್ಲ. ಅಷ್ಟು ಅಮೋಘವಾಗಿತ್ತು ಅಂದಿನ ವಾದನ. ಸುಪ್ರೀತರಾದ ಸಿ. ಪಿ. ಯವರು ಮಾರನೆಯ ದಿನವೇ ಅರಮನೆಯಲ್ಲಿ ಕಛೇರಿಯನ್ನು ಗೊತ್ತುಮಾಡಿದರು.

ವೆಂಕಟಗಿರಿಯಪ್ಪನವರ ಮಾತಿನಲ್ಲೇ ಹೇಳಬೇಕಾದರೆ ಅದೊಂದು ಗಂಧರ್ವ ಸಭೆ. ಮಹಾರಾಜರ ಆಪ್ತವರ್ಗಕ್ಕೆ ಸೇರಿದವರು, ಅರಮನೆಯ ವಿದ್ವಾಂಸರು, ಉನ್ನತ ಅಧಿಕಾರಿಗಳು, ಎಲ್ಲರೂ ಸಭೆಯಲ್ಲಿ ಉಪಸ್ಥಿತರಿದ್ದರು. ಸ್ವಯಂ ವೀಣಾವಾದನ ನಿಪುಣರಾಗಿದ್ದ ಮಹಾರಾಣಿ ಸೇತೂಪಾರ್ವತಿ ಬಾಯಿಯವರೂ ಸಭೆಗೆ ದಯಮಾಡಿ ಸಿದ್ದರು.

ಮಹಾರಾಜ ಸ್ವಾತಿ ತಿರುನಾಳರ ಶಂಕರಾಭರಣ ರಾಗ, ಅಟ್ಟತಾಳದ ವರ್ಣದಿಂದ ಕಛೇರಿ ಪ್ರಾರಂಭವಾಯಿತು. ಆ ಬಳಿಕ ಮೂರು-ನಾಲ್ಕು ಕೀರ್ತನೆಗಳನ್ನು ನುಡಿಸಿ ವೆಂಕಟಗಿರಿಯಪ್ಪ ರಾಗ-ತಾನ-ಪಲ್ಲವಿಯ ವಿನ್ಯಾಸ ಕ್ಕೆಂದು ಕಲ್ಯಾಣಿ ರಾಗವನ್ನು ಎತ್ತಿಕೊಂಡರು. ಸರ್ವಾಂಗ ಸುಂದರವಾಗಿ ಮೂಡಿಬಂದಿತು ಕಲ್ಯಾಣಿಯ ಆಲಾಪನೆ. ಘನರಾಗಗಳು ಎಂದರೆ ನಾಟ, ಗೌಳ, ಆರಭಿ, ವರಾಳಿ, ಶ್ರೀರಾಗಗಳಲ್ಲಿ ತಾನ ನುಡಿಸಲಾರಂಭಿಸಿದಾಗ ಸಭೆ ಸನ್ಮೋಹನಾಸ್ತ್ರಕ್ಕೆ ಒಳಪಟ್ಟಂತೆ ತೋರುತ್ತಿತ್ತು. ಹೊಳೆಯಂತೆ ಹರಿಯುತ್ತಿದ್ದ ಕಲ್ಪನೆ, ಮೀಟಿನ ಮಾರ್ದವತೆ, ನಾದದ ಗಾಂಭೀರ್ಯಗಳನ್ನು ಕಂಡು ಮಹಾರಾಣಿಯವರು ರೋಮಾಂಚಿತರಾದರು. ಅಂತರ್ಮುಖಿಗಳಾಗಿ ಭಾವ ಪರವಶತೆಯಿಂದ ನುಡಿಸುತ್ತಿದ್ದ ವೆಂಕಟಗಿರಿಯಪ್ಪನವರ ಸಮೀಪಕ್ಕೆ ಬಂದು, ಭಕ್ತಿ ಪುರಸ್ಸರದಿಂದ ಎರಡು ಕೈಗಳನ್ನೂ ಜೋಡಿಸಿ ನಿಂತು, “ದಯವಿಟ್ಟು, ಎರಡು ಕ್ಷಣ ನುಡಿಸುವುದನ್ನು ನಿಲ್ಲಿಸಬೇಕಾಗಿ ಕೇಳಿಕೊಳ್ಳುತ್ತೇನೆ” ಎಂದರು.

ವೆಂಕಟಗಿರಿಯಪ್ಪನವರಿಗೆ ಏನೊಂದೂ ಅರ್ಥವಾಗಲಿಲ್ಲ. “ಅಪ್ಪಣೆ” ಎಂದು ತೊಡೆಯ ಮೇಲಿಂದ ವೀಣೆಯನ್ನು ಕೆಳಗಿರಿಸಿದರು. ಅಷ್ಟರಲ್ಲಿ ಸೇವಕರು ಜಾಜಿಯ ಬಿಡಿ ಮೊಗ್ಗುಗಳು ತುಂಬಿದ್ದ ಮೂರು-ನಾಲ್ಕು ಬೆಳ್ಳಿಯ ತಟ್ಟೆಗಳನ್ನು ತಂದು ಮಹಾರಾಣಿಯವರ ಮುಂದೆ ಹಿಡಿದರು. ಮಹಾರಾಣಿಯವರು ವೆಂಕಟಗಿರಿಯಪ್ಪನವರ ಮೇಲೂ ವೀಣೆಯ ಮೇಲೂ ಪುಷ್ಪವೃಷ್ಟಿಗರೆದರು.

ವೀಣೆಗೆ ಪೂಜೆಮಾಡಿದ್ದ ಹೂಗಳಲ್ಲಿ ಒಂದೆರಡನ್ನು ತೆಗೆದುಕೊಂಡು ತಮ್ಮ ಕಣ್ಣುಗಳಿಗೊತ್ತಿಕೊಂಡು ಕಛೇರಿಯನ್ನು ಮುಂದುವರಿಸುವಂತೆ ಪ್ರಾರ್ಥಿಸಿದರು. ‘ತಮ್ಮ ಜನ್ಮ ಸಾರ್ಥಕವಾಯಿತು ಇಂದು ಎಂದುಕೊಂಡು ಮತ್ತೆ ನುಡಿಸಲಾರಂಭಿಸಿದರು ವೆಂಕಟಗಿರಿಯಪ್ಪ.

ಮಹಾರಾಜರ, ಮಹಾರಾಣಿಯವರ ಆನಂದಕ್ಕೆ ಪಾರವೇ ಇರಲಿಲ್ಲ. ರತ್ನಖಚಿತವಾದ ತೋಡಾ, ಒಂದು ಜೊತೆ ಶಾಲು, ನಗದು ಒಂದು ಸಹಸ್ರ ರೂಪಾಯಿಗಳನ್ನು ಬಹುಮಾನವಾಗಿ ನೀಡಿ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.

ಮತ್ತೆ ಮರುದಿನ ಮಹಾರಾಣಿಯವರು ವೆಂಕಟಗಿರಿ ಯಪ್ಪನವರನ್ನು ಅರಮನೆಗೆ ಬರಮಾಡಿಕೊಂಡು ಒಂದೆರಡು ಗಂಟೆಗಳ ಕಾಲ ಅವರ ವಾದನವನ್ನು ಕೇಳಿ ಸಂತೋಷ ಪಟ್ಟರು. “ಪಾಶ್ಚಿಮಾತ್ಯ ಸಂಗೀತದಲ್ಲಿಯೂ ತಮಗೆ ಪರಿಶ್ರಮವಿದೆಯಂತಲ್ಲ ?” ಎಂದು ಕೇಳಿದರು ಮಹಾರಾಣಿಯವರು. “ನನ್ನ ಪ್ರಭು ಕೃಷ್ಣರಾಜ ಒಡೆಯರ ಅನುಗ್ರಹ ಅದು” ಎಂದು ಉತ್ತರಿಸಿ, ಪಾಶ್ಚಿಮಾತ್ಯ ಸಂಗೀತದ ಪ್ರಕಾರ ಪೀಠಿಕೆಗಳನ್ನು ರಚಿಸಿದ್ದ ತಮ್ಮ ಎರಡು ಸ್ವಂತ ರಚನೆಗಳನ್ನು ನುಡಿಸಿದರು ವೆಂಕಟಗಿರಿಯಪ್ಪ.

ಶೃಂಗೇರಿ, ಕಂಚಿ ಮತ್ತು ಕುಂಭಕೋಣಂ ಮೊದ ಲಾದ ಮಠಾಧಿಪತಿಗಳ ಸನ್ನಿಧಿಯಲ್ಲಿ ನುಡಿಸಿ, ಅವರ ಸಂಪೂರ್ಣ ಅನುಗ್ರಹವನ್ನು ಸಂಪಾದಿಸಿದರು. ಕುಂಭ ಕೋಣದ ಶ್ರೀಗಳವರು ‘ವೈಣಿಕ ಶಿಖಾಮಣಿ’ ಎಂಬ ಪ್ರಶಸ್ತಿಯನ್ನು ನೀಡಿ ಆಶೀರ್ವದಿಸಿದರು.

ವರ್ಣ, ಕೃತಿ, ತಿಲ್ಲಾನ, ರಾಗಮಾಲಿಕೆ, ನಗಮ ಮುಂತಾದ ಪ್ರಕಾರಗಳಲ್ಲಿ ಸುಮಾರು ನಲವತ್ತು-ಐವತ್ತು ರಚನೆಗಳನ್ನು ಮಾಡಿದ್ದಾರೆ ವೆಂಕಟಗಿರಿಯಪ್ಪನವರು. ಪ್ರಭುಪ್ರಿಯ, ಶಂಕರಪ್ರಿಯ, ಕುಲಭೂಷಿಣಿ, ಗೌಳೀಪಂತು, ಭುವನಗಾಂಧಾರಿ, ಬುಧಮನೋಹರಿ, ಶಾರದಾ ಪ್ರಿಯ, ಸುನಾದವಿನೋದಿನಿ ಮುಂತಾದ ಅಪರೂಪ ರಾಗಗಳಲ್ಲೂ ಮೇಳಕರ್ತ ರಾಗಗಳಲ್ಲೂ ಇವೆ ಇವರ ರಚನೆಗಳು.

ಬೆಹಾಗ್ ಮತ್ತು ಕೀರವಾಣಿ ರಾಗಗಳನ್ನು ಸುಂದರ ವಾಗಿ ಬೆರೆಸಿಕೊಂಡು ‘ನಗಮ’ ಪ್ರಕಾರದ ಒಂದು ರಚನೆ ಯನ್ನು ಮಾಡಿದ್ದಾರೆ ವೆಂಕಟಗಿರಿಯಪ್ಪ. ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಪುತ್ರಿ ರಾಜಕುಮಾರಿ ವಿಜಯ ಅವರು ಲಂಡನ್ನಿಗೆ ಹೋಗಿದ್ದಾಗ ಆ

ರಚನೆಯನ್ನು ಬಿ.ಬಿ.ಸಿ. (ಇಂಗ್ಲೆಂಡಿನ ಆಕಾಶವಾಣಿ)ಯಿಂದ ಪ್ರಸಾರ ಮಾಡಿದರು. ಪಂಡಿತ ಪಾಮರರಾದಿಯಾಗಿ  ಎಲ್ಲರೂ ಅದನ್ನು ಮೆಚ್ಚಿದರು. ರಾಜಕುಮಾರಿಯವರನ್ನು ಪ್ರಶಂಸಿದರು.

ಸ್ವದೇಶಕ್ಕೆ ಹಿಂದಿರುಗಿ ಮೈಸೂರನ್ನು ತಲುಪಿದಾಗ ರಾತ್ರಿ ಹತ್ತುಗಂಟೆ ಮೀರಿತ್ತು. ಆ ಸರಿಹೊತ್ತಿನಲ್ಲಿ ಯುವರಾಜರು ತಮ್ಮ ಆಪ್ತ ಕಾರ್ಯದರ್ಶಿಯವರನ್ನು ಕರೆದು, “ಈಗಲೇ ವೆಂಕಟಗಿರಿಯಪ್ಪನವರ ಮನೆಗೆ ಹೋಗಿ, ಬಿ.ಬಿ.ಸಿ.ಯಲ್ಲಿ ನಡೆದ ಪ್ರಸಾರವನ್ನು ತಿಳಿಸಿ ಈ ಒಂದು ಸಹಸ್ರ ರೂಪಾಯಿಗಳನ್ನು ನಮ್ಮ ಬಹುಮಾನವೆಂದು ಹೇಳಿ ಅವರಿಗೆ ಕೊಟ್ಟು ಬನ್ನಿ” ಎಂದು ಕಳುಹಿಸಿದರು.

೧೯೩೬ ರಲ್ಲಿ ಮೈಸೂರು ಸರ್ಕಾರದ ಅಪ್ಪಣೆಯ ಮೇರೆಗೆ ವಿದ್ವತ್ ಪರೀಕ್ಷೆಗೆ ಕೂಡುವ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ‘ಸಂಗೀತಾಮೃತಸಾರ’ ಎಂಬ ಗ್ರಂಥವೊಂದನ್ನು ವೆಂಕಟಗಿರಿಯಪ್ಪ ರಚಿಸಿದರು.

ಸಂಗೀತ ಕ್ಷೇತ್ರದಲ್ಲಿ ಹಲವು ಮುಖ ಸೇವೆ ಸಲ್ಲಿಸಿದ ವೆಂಕಟಗಿರಿಯಪ್ಪನವರಿಗೆ, ೧೯೪೬ ರಲ್ಲಿ ಜಯಚಾಮ ರಾಜೇಂದ್ರ ಒಡೆಯರವರು ‘ಸಂಗೀತ ವಿಶಾರದ’ ಎಂಬ ಬಿರುದನ್ನೂ, ಗಂಡಭೇರುಂಡ ಪದಕದ ನವರತ್ನ ಹಾರ ವನ್ನೂ ನೀಡಿ ಗೌರವಿಸಿದರು.

೧೯೫೧ ರಲ್ಲಿ ಮಹಾವಿದ್ವಾಂಸರು ನಮ್ಮನ್ನಗಲಿದಾಗ ವೈಣಿಕ ಸಂಪ್ರದಾಯದ ಚಿನ್ನದ ಕೊಂಡಿಯೊಂದು ಕಳಚಿದಂತಾಯಿತು.

ಗುರುಗಳಾಗಿ

ಕರ್ಣಾಟಕ ಸಂಗೀತಲೋಕಕ್ಕೆ ವೆಂಕಟಗಿರಿಯಪ್ಪ ನವರು ಸಲ್ಲಿಸಿದ ಮಹತ್ತಾದ ಸೇವೆಯೆಂದರೆ ಅವರ ವಿಶಾಲವಾದ ಶಿಷ್ಯವರ್ಗ. ನೂರಾರು ಶಿಷ್ಯರಿಗೆ ಮನಃ ಪೂರ್ವಕವಾಗಿ, ಶ್ರದ್ಧೆಯಿಂದ, ಪ್ರೀತಿಯಿಂದ ಪಾಠ ಹೇಳಿ, ಅವರಿಗೆ ಜೀವನೋಪಾಯವನ್ನು ಕಲ್ಪಿಸಿಕೊಟ್ಟು ಪುಣ್ಯ ಶಾಲಿಗಳಾದರು. ವಿ. ದೊರೆಸ್ವಾಮಿ ಅಯ್ಯಂಗಾರ್ಯರು ಮತ್ತು ಅನೇಕ ಮಂದಿ ಪ್ರಸಿದ್ಧ ಸಂಗೀತ ವಿದ್ವಾಂಸರು ಅವರ ಶಿಷ್ಯರು.

ವಿ. ದೊರೆಸ್ವಾಮಿ ಅಯ್ಯಂಗಾರ್ಯರನ್ನೂ, ಆರ್. ಎನ್. ದೊರೆಸ್ವಾಮಿಯವರನ್ನೂ ತಮ್ಮ ಎರಡು ಕಣ್ಣುಗಳು ಎಂದು ಭಾವಿಸಿದರು ವೆಂಕಟಗಿರಿಯಪ್ಪ. ಒಮ್ಮೆ ಕಂಚಿಯ ಶಂಕರಾಚಾರ್ಯರ ಮಠದಲ್ಲಿ ವೆಂಕಟಗಿರಿಯಪ್ಪನವರು ವೀಣೆ ನುಡಿಸುವಂತೆ ಶ್ರೀಗಳು ಸೂಚಿಸಿದರು. “ಇಷ್ಟು ದಿನ ನನಗೆ ತಾವು ಅನುಗ್ರಹ ಮಾಡಿದ್ದಾಗಿದೆ, ಈಗ ನನ್ನ ಶಿಷ್ಯನ ಕಛೇರಿ ಕೇಳಿ ಆರ್ಶೀವದಿಸಬೇಕು” ಎಂದು ಹೇಳಿ ವೆಂಕಟಗಿರಿಯಪ್ಪ ನವರು ದೊರೆಸ್ವಾಮಿ ಅಯ್ಯಂಗಾರ್ಯರ ಕಛೇರಿಯನ್ನು ಏರ್ಪಡಿಸಿದರು.

ವ್ಯಕ್ತಿತ್ವ

ಮೈಸೂರಿನ ಸಂಗೀತ ವಿದ್ವಾಂಸರಲ್ಲಿ ರಸಿಕ ಶಿಖಾ ಮಣಿಗಳೆಂದರೆ ವೀಣೆ ಸುಬ್ಬಣ್ಣನವರು ಒಬ್ಬರು, ವೆಂಕಟ ಗಿರಿಯಪ್ಪನವರು ಇನ್ನೊಬ್ಬರು. ಸುಬ್ಬಣ್ಣನವರಿಗೆ ಹೂವು, ಗಂಧದ ಷೋಕಿಯಾದರೆ, ವೆಂಕಟಗಿರಿಯಪ್ಪನವರಿಗೆ ಬಟ್ಟೆ ಬರೆಯ ಷೋಕಿ.

ವೆಂಕಟಗಿರಿಯಪ್ಪನವರನ್ನು ಅತಿ ದೂರದಿಂದಲೇ ಸುಲಭವಾಗಿ ಗುರುತಿಸಬಹುದಾಗಿತ್ತು, ಅವರು ಧರಿಸುತ್ತಿದ್ದ ಜರಿಪೇಟ, ವಲ್ಲಿ, ಕಿನ್‌ಕಾಪಿನ ಅಂಗಿ, ಭಾರಿ ಅಂಚಿನ ಕಚ್ಚೆಪಂಚೆ ಮತ್ತು ಅವರು ಹಿಡಿಯುತ್ತಿದ್ದ ಬಣ್ಣದ ಛತ್ರಿಯಿಂದ. ಸ್ವಲ್ಪ ಸ್ಥೂಲವೆನ್ನಬಹುದಾದ ಶರೀರ, ಗಿಡ್ಡ ದೇಹ, ದುಂಡು ಮುಖ. ಬಣ್ಣ ಎಣ್ಣೆಗೆಂಪು.

ಊಟ ಉಪಚಾರಗಳಲ್ಲಿ ತುಂಬ ಸುಖಿ. ದಿನನಿತ್ಯ ಹಿತಮಿತವಾದ, ರುಚಿರುಚಿಯಾದ, ಬಗೆಬಗೆಯ ಊಟ ಉಪಚಾರಗಳಾಗಬೇಕು ಅವರಿಗೆ. ಅವರಿಗಷ್ಟೆ ಅಲ್ಲ, ಮನೆಗೆ ಬಂದ ಇಷ್ಟಮಿತ್ರರಿಗೆ, ಪಾಠ ಹೇಳಿಸಿಕೊಳ್ಳುವ ಶಿಷ್ಯರಿಗೆ ಎಲ್ಲರಿಗೂ ನಡೆಯುತ್ತಿತ್ತು ಸಂತರ್ಪಣೆ !

ವೆಂಕಟಗಿರಿಯಪ್ಪನವರ ಉದಾರತೆಯನ್ನು ಕಂಡು ನಾಲ್ವಡಿ ಕೃಷ್ಣರಾಜ ಒಡೆಯರೇ ಒಮ್ಮೆ ಮೂಗಿನ ಮೇಲೆ ಬೆರಳಿಟ್ಟರು. ಸಂದರ್ಭ ಇದು :

ವೆಂಕಟಗಿರಿಯಪ್ಪ ತಮ್ಮ ಹಿರಿಯ ಮಗನಿಗೆ ಉಪನಯನ ಮಾಡಲು ನಿಶ್ಚಯಿಸಿದರು. ವೆಂಕಟ ಗಿರಿಯಪ್ಪ ನವರು ಉಪನಯನದ ಆಮಂತ್ರಣ ಪತ್ರಿಕೆಯನ್ನು ಮಹಾರಾಜರಿಗೆ ಸಮರ್ಪಿಸಿದರು. ಪ್ರಭುಗಳು ೫೦೦ ರೂಪಾಯಿಗಳ ಬಹುಮಾನವನ್ನೂ ಅರಮನೆಯಿಂದ ದವಸಧಾನ್ಯಗಳನ್ನೂ ಚಿರಂಜೀವಿಗೆ ಉಚಿತವಾಗಿ ಖಿಲ್ಲತ್ತನ್ನೂ ದಯಪಾಲಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.

ವೆಂಕಟಗಿರಿಯಪ್ಪ ತಮ್ಮ ಕೃತಜ್ಞತೆಯನ್ನು ಸಲ್ಲಿಸಿ,  “ಮನೆಯಿಂದ ಊಟವನ್ನು ತಂದೊಪ್ಪಿಸಲು ಅನುಮತಿ ಯನ್ನು ದಯಪಾಲಿಸಬೇಕು” ಎಂದು ಪ್ರಭುಗಳಲ್ಲಿ ಪ್ರಾರ್ಥಿಸಿಕೊಂಡರು. “ಆಗಬಹುದು” ಎಂದರು ಮಹಾ ರಾಜರು. ವೆಂಕಟಗಿರಿಯಪ್ಪನವರ ಮನೆಯಿಂದ ಬಂದ ಭಕ್ಷ್ಯಭೋಜ್ಯಗಳನ್ನು ಸವಿದ ಮಹಾರಾಜರು, “ಪ್ರತಿನಿತ್ಯ ನೀವು ಇಂಥ ಅಡುಗೆ ಊಟಮಾಡುತ್ತ ಬಂದರೆ, ಅರಮನೆಯ ಖಜಾನೆಯನ್ನು ನಿಮಗೆ ಕೊಟ್ಟರೂ ಹೇಗೆ ಸಾಕಾದೀತು ?” ಎಂದು ವಿನೋದವಾಗಿ ಹೇಳಿದರು.

ಔದಾರ್ಯ

ವೆಂಕಟಗಿರಿಯಪ್ಪನವರ ಕೊಡುಗೈಗೆ ಹಿಡಿತಡೆಯೇ ಇರಲಿಲ್ಲ. ಸಾಲವಾದರೂ ಮಾಡಿ ‘ದೇಹಿ’ ಎಂದು ಬಂದ ವರಿಗೆ ‘ಅಸ್ತು’ ಎನ್ನುತ್ತಿದ್ದರೇ ವಿನಾ ‘ನಾಸ್ತಿ’ ಎಂದದ್ದೇ ಇಲ್ಲ. ಸಂತೋಷವಾದಾಗಲಂತೂ ಅವರ ಮೇಲೆ

ದಾನಶೂರ ಕರ್ಣನ ಆವಾಹನೆಯೇ ಆಗುತ್ತಿತ್ತು ಎನ್ನುವುದಕ್ಕೆ ನಿದರ್ಶನಗಳು ಹಲವಾರು. ನವರಾತ್ರಿಯ ಉತ್ಸವಕ್ಕೆ ಆಗಮಿಸಿದ್ದ ವಿದ್ವಾನ್ ಹುಲಗೂರು ಕೃಷ್ಣಾಚಾರ್ಯರು ವೆಂಕಟಗಿರಿಯಪ್ಪನವರ ಮನೆಯಲ್ಲಿ ಇಳಿದುಕೊಂಡಿದ್ದರು.

ವಲ್ಲಿಯನ್ನು ನಾಗಸ್ವರದವನಿಗೆ ಹೊದಿಸಿದನು.

ಒಂದು ರಾತ್ರಿ ಸುಮಾರು ಹತ್ತು ಘಂಟೆಯ ಸಮಯದಲ್ಲಿ ಮದುವೆಯ ಮೆರವಣಿಗೆಯೊಂದು ಇವರ ಮನೆಯನ್ನು ಸಮೀಪಿಸುತ್ತಿತು, ನಾಗಸ್ವರ ವಿದ್ವಾಂಸನಿಗೆ ವೆಂಕಟಗಿರಿಯಪ್ಪನವರ ದಾನಶೂರತ್ವದ ಪರಿಚಯವಿದ್ದಂತೆ ತೋರುತ್ತದೆ. ಮನೆಯ ಮುಂದೆ ನಿಂತು ಅವರೇ ರಚಿಸಿದ ‘ಶ್ರೀರಾಜರಾಜೇಶ್ವರಿ’ ಎಂಬ ಕೀರ್ತನೆಯನ್ನು ನುಡಿಸ ಲಾರಂಭಿಸಿದ. ಆತನ ವಾದನ ತಕ್ಕಮಟ್ಟಿಗೆ ಹಿತವಾಗಿತ್ತು. ಶ್ರುತಿ ಶುದ್ಧತೆಯಿಂದ ಕೂಡಿತ್ತು. ಇದನ್ನು ಕೇಳಿ ವೆಂಕಟಗಿರಿಯಪ್ಪನವರು ಬಾಗಿಲನ್ನು ತೆರೆದುಕೊಂಡು ಹೊರಗೆ ಬಂದರು. ನಾಗಸ್ವರದವನಿಗೆ ಉತ್ಸಾಹ ಇಮ್ಮಡಿ ಯಾಯಿತು. ಮತ್ತಷ್ಟು ಹುರುಪಿನಿಂದ ನುಡಿಸಲಾರಂಭಿಸಿದ. ವೆಂಕಟಗಿರಿಯಪ್ಪನವರಿಗೆ ಅತ್ಯಂತ ಆನಂದವಾಯಿತು. ಒಡನೆಯೇ ಮನೆಯೊಳಗೆ ಹೋಗಿ ಪಂಚೆ, ವಲ್ಲಿಗಳಿಗಾಗಿ ಹುಡುಕಾಡಿದರು. ಏನು ಕಾರಣವೋ ಏನೋ ಅಂದು ಮನೆಯಲ್ಲಿ ವಿದ್ಯುದ್ದೀಪವಿರಲಿಲ್ಲ. ಸಣ್ಣ ಬುಡ್ಡಿಯೊಂದು ಮಿನುಗುತ್ತಿತ್ತು. ಎಲ್ಲರೂ ಮಲಗಿ ನಿದ್ದೆ ಹೋಗುತ್ತಿದ್ದರು. ಯಾರನ್ನೂ ಎಚ್ಚರಿಸುವುದಕ್ಕೆ ಇಷ್ಟಪಡದೆ ಆ ಮಂಕು ದೀಪದ ಮುಸುಕು ಬೆಳಕಿನಲ್ಲಿ ಕಣ್ಣಿಗೆ ಬಿದ್ದ ಕುರ್ಚಿಯ ಮೇಲಿದ್ದ ಕಲಾಪತ್ತಿನ ವಲ್ಲಿಯನ್ನೇ ತೆಗೆದುಕೊಂಡು ಬಂದು ನಾಗಸ್ವರದವನಿಗೆ ಹೊದ್ದಿಸಿ ಅವನ ಭುಜ ತಟ್ಟಿದರು. ಬ್ರಹ್ಮಾನಂದವಾಯಿತು ಅವನಿಗೆ. ಮೆರವಣಿಗೆ ಮುಂದೆ ಸಾಗಿತು.

ಮರುದಿನ ಬೆಳಿಗ್ಗೆ ಕೃಷ್ಣಾಚಾರ್ಯರು ತಮ್ಮ

ವಲ್ಲಿಗಾಗಿ ಹುಡುಕುತ್ತಿದ್ದಾಗ ವೆಂಕಟಗಿರಿಯಪ್ಪನವರಿಗೆ ಅರ್ಥವಾಯಿತು – ಹಿಂದಿನ ರಾತ್ರಿ ತಾವು ದಾನ ಮಾಡಿದ ವಲ್ಲಿ ಮನೆಯಲ್ಲಿ ತಂಗಿದ್ದ ಅತಿಥಿ ದೇವರದೆಂದು ! ನಡೆದ ಸಮಾಚಾರವನ್ನು ಆಚಾರ್ಯರಿಗೆ ತಿಳಿಸಿ ಕ್ಷಮೆ ಕೋರಿದರು. ‘ಚಿಂತೆಯಿಲ್ಲ’ ಅಂದು ಆಚಾರ್ಯರು ಸಮಾಧಾನಪಡಿಸುತ್ತಿದ್ದರೂ ಅವರ ಮಾತನ್ನು ಕಿವಿಯ ಮೇಲೆಯೇ ಹಾಕಿಕೊಳ್ಳದೆ, ನೇರವಾಗಿ ದೊಡ್ಡಪೇಟೆಯಲ್ಲಿದ್ದ ಜವಳಿ ಅಂಗಡಿಗೆ ಬಂದರು. ಬೆಲೆಬಾಳುವ ಶಲ್ಯವೊಂದನ್ನು ಖರೀದಿ ಮಾಡಿದರು. ಲೆಕ್ಕದ ಪುಸ್ತಕದಲ್ಲಿ ಗುರುತು ಮಾಡಿಸಿದರು. ಮನೆಗೆ ಬಂದು ವಲ್ಲಿಯನ್ನು ಆಚಾರ್ಯರಿಗೆ ಹೊದಿಸಿ ಸಾಷ್ಟಾಂಗವೆರಗಿದರು. “ನನ್ನದು ಸಾಧಾರಣ ವಲ್ಲಿ. ಇಷ್ಟು ಭಾರೀ ವಲ್ಲಿಯನ್ನೇಕೆ ತಂದಿರಿ ವೆಂಕಟ ಗಿರಿಯಪ್ಪನವರೇ ? ದಯಮಾಡಿ ಹಿಂತಿರುಗಿ ಕೊಟ್ಟುಬಿಡಿ” ಎಂದು ಎಷ್ಟು ವಿಧದಲ್ಲಿ ಕೇಳಿಕೊಂಡರೂ ವೆಂಕಟಗಿರಿಯಪ್ಪ ಒಪ್ಪಲಿಲ್ಲ.

ಇನ್ನೊಮ್ಮೆ ಮೈಸೂರಿನ ಕುರುಡ-ಮೂಕರ ಶಾಲೆ ಯಲ್ಲಿ ಚೌಡಯ್ಯನವರ ಕಛೇರಿ ಏರ್ಪಾಡಾಗಿತ್ತು. ವೆಂಕಟಗಿರಿಯಪ್ಪನವರೂ ಕಛೇರಿಗೆ ದಯಮಾಡಿಸಿದ್ದರು. ಚೌಡಯ್ಯ ನುಡಿಸಿದ ಧನ್ಯಾಸಿ ರಾಗವನ್ನು ಕೇಳಿ ಮೈಮರೆತರು ವೆಂಕಟಗಿರಿಯಪ್ಪ. ಸದ್ದಿಲ್ಲದೆ ಹೊರಬಂದು ಜವಳಿ ಅಂಗಡಿಯ ಕಡೆಗೆ ಹೊರಟರು. ವೆಂಕಟಗಿರಿಯಪ್ಪ ನವರು ಬಂದರೆಂದರೆ ಸಾಧಾರಣ ಬೆಲೆಯ ಬಟ್ಟೆಗಳನ್ನು ಹೊರಗೇ ತೆಗೆಯುತ್ತಿರಲಿಲ್ಲ ಅಂಗಡಿಯವರು ! ಸುಮಾರು ೫೦-೬೦ ರೂಪಾಯಿ ಬೆಲೆ ಬಾಳುವ ಅಂಗವಸ್ತ್ರ ವೊಂದನ್ನು ಕೊಂಡುಕೊಂಡು ಸರಸರನೆ ಹಿಂತಿರುಗಿ ಬಂದರು. ಚೌಡಯ್ಯನವರಿಗೆ ವಸ್ತ್ರವನ್ನು ಹೊದಿಸಿ ಆನಂದದ ಕಣ್ಣೀರು ಸುರಿಸಿದರು. ಚೌಡಯ್ಯ ಕೃತಜ್ಞತೆ ಯಿಂದ ತಲೆತಗ್ಗಿಸಿದರು.

ಸುಮಾರು ೧೯೫೦ ರಲ್ಲಿ ನಡೆದ ಈ ಘಟನೆ ವೆಂಕಟ ಗಿರಿಯಪ್ಪನವರ ದಾನಶೀಲತೆಗೆ ಮತ್ತೊಂದು ಉದಾಹರಣೆ. ಇತಿಮಿತಿಯಿಲ್ಲದ ದಾನಧರ್ಮಗಳಿಂದಾಗಿ ಆ ವೇಳೆಗೆ ಅವರ ಕೈ ಬರಿದಾಗಿತ್ತು. ನಿತ್ಯ ಉಡುವ ಬಟ್ಟೆಯನ್ನೂ ಸಾಲಮಾಡಿ ತರಬೇಕಾದ ಸ್ಥಿತಿಯಲ್ಲಿದ್ದರು. ಒಂದು ದಿನ ಬೆಳಗ್ಗೆ ಭಿಕ್ಷುಕನೊಬ್ಬ ಇವರ ಮನೆಯ ಮುಂದೆ ನಿಂತು, ‘ಕಣ್ಮರೆಯಾಯಿತೇ ಕಾಂತಿ’ ಎಂಬ ದೇವರನಾಮವನ್ನು ಹಾಡಲುಪಕ್ರಮಿಸಿದ. ಅದನ್ನು ಕೇಳುತ್ತಿದ್ದಂತೆಯೇ ವೆಂಕಟಗಿರಿಯಪ್ಪನವರ ಕಣ್ಣುಗಳಿಂದ ನೀರು ಸುರಿಯಿತು.

ಎರಡು ವರ್ಷದ ಹಿಂದೆ ತಮ್ಮನ್ನು ಅಗಲಿದ್ದ ಮಗನ ನೆನಪಾಯಿತು. ಅಂದುತಾನೆ ಒಂದು ಜೊತೆ ಮಲ್ಲುಪಂಚೆ ಸಾಲಮಾಡಿ ತಂದಿದ್ದರು. ಒಂದನ್ನು ತಾವು ಉಟ್ಟಿದ್ದರು. ಇನ್ನೊಂದು ಒಂಟಿ ಪಂಚೆ ಹಾಗೆಯೇ ಉಳಿದಿತ್ತು. ಶಿಷ್ಯ ಆರ್. ಎನ್. ದೊರೆಸ್ವಾಮಿಗಳನ್ನು ಕರೆದು, “ಆ ಪಂಚೆ ಯನ್ನು ತಾ” ಎಂದರು. ಗುರುಗಳ ಉದಾರ ಹೃದಯ, ಅವರ ಈಗಿನ ಕಷ್ಟಪರಿಸ್ಥಿತಿ ಎರಡೂ ಚೆನ್ನಾಗಿ ಗೊತ್ತಿದ್ದಿತು ದೊರೆಸ್ವಾಮಿಗಳಿಗೆ. ಪಂಚೆಯನ್ನು ಹೊರ ತೆಗೆದರೆ ಅದು ಭಿಕ್ಷುಕನ ಪಾಲಾಗುತ್ತದೆ, ಗುರುಗಳಿಗೆ ಉಡಲು ಎರಡನೆಯ ಪಂಚೆಯಿರುವುದಿಲ್ಲ ಎಂದು ಎಣಿಸಿದರು.

ಗುರುಗಳ ಮಾತನ್ನು ಕೇಳಿಸಿಕೊಳ್ಳದವರಂತೆ ಸುಮ್ಮನಿದ್ದರು. ಆದರೆ ಅವರು ಬಿಡುತ್ತಾರೆಯೆ ? ಮತ್ತೆ ಕೂಗಿದರು. ದೊರೆಸ್ವಾಮಿ ಸ್ವಲ್ಪ ಧೈರ್ಯ ಮಾಡಿ ತಮ್ಮ ಮನಸ್ಸಿನಲ್ಲಿದ್ದ ಅಭಿಪ್ರಾಯವನ್ನು ಗುರುಗಳಲ್ಲಿ ನಿವೇದಿಸಿಕೊಂಡರು. ವೆಂಕಟ ಗಿರಿಯಪ್ಪನವರಿಗೆ ಶಿಷ್ಯನ ಮಾತು ರುಚಿಸಲಿಲ್ಲ. “ಸುಮ್ಮನೆ ತೆಗೆದುಕೊಂಡು ಬಾರಯ್ಯ. ಮನೆಗೆ ಕಾಂತಿ ನೀಡುತ್ತಿದ್ದ ಮಗನೇ ಕಣ್ಮರೆಯಾದ ಮೇಲೆ ಈ ಹಾಳು ಒಂಟಿ ಪಂಚೆಯ ಮೇಲೇಕೆ ಇಷ್ಟು ಅಭಿಮಾನ?” ಎಂದು ಗುಡುಗಿದರು. ಪಂಚೆಯನ್ನು ಭಿಕ್ಷುಕನಿಗೆ ಕೊಟ್ಟು “ದೇವರಿಗೆ ಪ್ರೀತಿಯಾಗಲಿ” ಎಂದರು.

ನಿರಂತರ ಕೀರ್ತಿ

ಸಂಗೀತವನ್ನು ವೃತ್ತಿಯನ್ನಾಗಿ ಬಳಸಿಕೊಳ್ಳದಿದ್ದರೂ ವಂಶದ ಉಸಿರಾದ ವೀಣೆಯ ಆರಾಧನೆಯನ್ನು ಕಡೆಗಣಿ ಸದೆ, ತೆರೆಯಮರೆಯಲ್ಲಿದ್ದುಕೊಂಡೇ ತಂದೆಯವರ ಹಿರಿಮೆ ಯನ್ನೂ ಪರಂಪರೆಯನ್ನೂ ಕಾಪಾಡಿಕೊಂಡು, ಬೆಳೆಸಿಕೊಂಡು ಬರುತ್ತಿದ್ದಾರೆ ವೆಂಕಟಗಿರಿಯಪ್ಪನವರ ಮೂವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು.

ವೆಂಕಟಗಿರಿಯಪ್ಪನವರ ಭೌತಿಕ ಶರೀರ ಕಣ್ಮರೆ ಯಾದರೂ ಅವರ ತುಂಬು ಬದುಕು, ಸಂಗೀತ ಸಾಧನೆ, ವಿದ್ವತ್ತಿನ ಹಿರಿಮೆ, ಹೃದಯಶ್ರೀಮಂತಿಕೆ ಇಂದಿಗೂ ಜೀವಂತ.