ಕರ್ನಾಟಕದ ಸಂಗೀತದ ಚರಿತ್ರೆಯಲ್ಲಿ ಒಂದು ಕಾಲವನ್ನು ’ಶೇಷಣ್ಣನವರ ಯುಗ’ ಎಂದೇ ಕರೆಯುವುದುಂಟು.

ಯಾರಾದರೂ ಒಂದು ಕ್ಷೇತ್ರದಲ್ಲಿ ಸಾಮಾಜಿಕ ಜೀವನದಲ್ಲಿ, ರಾಜಕೀಯ ಜೀವನದಲ್ಲಿ, ನಾಡಿನ ಚರಿತ್ರೆಯಲ್ಲಿ, ಸಾಹಿತ್ಯದಲ್ಲಿ, ಸಂಗೀತದಲ್ಲಿ – ಬಹಳ ಪ್ರತಿಭಾವಂತರಾಗಿದ್ದು, ಅನೇಕರ ಮೇಲೆ ಅವರು ಪ್ರಭಾವ ಬೀರಿದ್ದರೆ ಅವರ ಕಾಲವನ್ನು ಅವರ ಯುಗ ಎಂದು ಕರೆಯುವುದು ವಾಡಿಕೆ.

ಹಿಂದಿನ ಮೈಸೂರು ಸಂಸ್ಥಾನದ ಹೆಸರು ಸಂಗೀತ ಪ್ರಪಂಚದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವಂತೆ ಮಾಡಿದ ಹಿರಿಯರಲ್ಲಿ ಒಬ್ಬರು ವೈಣಿಕ ಶಿಖಾಮನಿ ಶೇಷಣ್ಣನವರು. ಅವರ ಕಾಲವನ್ನು ’ಶೇಷಣ್ಣನವರ ಯುಗ’ ಎಂದು ಕರೆಯುತ್ತಾರೆ.

ಸಂಗೀತ ಸರಸ್ವತಿಯ
ಅನುಗ್ರಹ ಪಡೆದ ವಂಶ

ಹಿಂದಿನ ಮೈಸೂರು ಸಂಸ್ಥಾನದಲ್ಲಿ ಹತ್ತೊಂಬತ್ತು ಇ‌ಪ್ಪತ್ತನೆಯ ಶತಮಾನಗಳಲ್ಲಿ ಹಲವು ಮನೆತನಗಳು ಸಂಗೀತಕ್ಕೆ ಅಪಾರ ಸೇವೆ ಸಲ್ಲಿಸಿದವು. ಈ ಮನೆತನಗಳಲ್ಲಿ ಪ್ರತಿಭಾವಂತ ಸಂಗೀತ ವಿದ್ವಾಂಸರು ಹುಟ್ಟಿದರು. ಇವು ಬಹಳ ವೈಭವದಿಂದ, ಕೀರ್ತಿಯಿಂದ ಬದುಕಿದವು. ಇವುಗಳಲ್ಲಿ ವೀಣಾವಾದನಕ್ಕೆ ಹೆಸರಾದ ’ವೈಣಿಕ ಶಿಖಾಮಣಿ’ ಗಳದೊಂದು ಮನೆ ಮತ್ತು ’ವೈಣಿಕ ಪ್ರವೀಣ’ರದು ಇನ್ನೊಂದು ಮನೆ. ಹಿಂದಿನಕಾಲದಿಂದಲೂ ಈ ಎರಡು ಮನೆತನಗಳಿಗೂ ಬಾಂಧವ್ಯವು ಬೆಳೆದಿತ್ತು. ಕಲೆಯಲ್ಲಿಯೂ ಹಾಗೆಯೇ. ಒಂದು ಮನೆತನದ ವಿದ್ವಾಂಸರು ಮತ್ತೊಂದು ಮನೆತನದ ಸಂಗೀತ ವಿದ್ಯಾರ್ಥಿಗಳಿಗೆ ಗುರುಗಳಾಗುತ್ತಿದ್ದರು.

ಶೇಷಣ್ಣನವರು ೧೮೫೨ರಲ್ಲಿ ಮೈಸೂರಿನಲ್ಲಿ ಜನಿಸಿದರು. ಅವರ ತಂದೆ ಚಿಕ್ಕರಾಮಪ್ಪನವರು. ಅವರ ಮಕ್ಕಳಲ್ಲಿ ಮೊದಲನೆಯವರಿಬ್ಬರೂ ಹೆಣ್ಣುಮಕ್ಕಳು, ಮೂರನೆಯವರು ಸುಬ್ಬಣ್ಣನವರು. ಕೊನೆಯವರು ಶೇಷಣ್ಣನವರು. ಆರು-ಏಳು ವರ್ಷದ ಹುಡುಗ ಶೇಷಣ್ಣ ಪಲ್ಲವಿ ಹಾಡುವಷ್ಟು ಪ್ರತಿಭೆಯನ್ನು ಸಂಪಾದಿಸಿದ್ದ. ತಂದೆಯವರಿಂದ ಪಾಠ ಹೇಳಿಸಿಕೊಂಡಿದ್ದು ಎಲ್ಲವನ್ನೂ ಲೀಲಾಜಾಲವಾಗಿ ಚಾಛೂ ತಪ್ಪದೆ ಒಪ್ಪಿಸುತ್ತಿದ್ದ. ಸದಾ ಸಂಗೀತನ್ನೇ ಚಿಂತಿಸುತ್ತಿದ್ದ.

ಕಿರಿಯರ ಹಿರಿತನ

ಶೇಷಣ್ಣ ಚಿಕ್ಕ ಹುಡುಗನಾಗಿದ್ದಾಗಲೇ ಒಂದು ಘಟನೆ ನಡೆಯಿತು. ಹಿಂದಿನ ಮೈಸೂರಿನ ಮಹಾರಾಜರು ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲ. ಪ್ರತಿ ಶಿವರಾತ್ರಿ ವಿಶೇಷ ಕಾರ್ಯಕ್ರಮ ಅವರಮನೆಯಲ್ಲಿರುತ್ತಿತ್ತು. ಆಸ್ಥಾನದ ಹಾಗೂ ಹೊರಗಿನ ವಿದ್ವಾಂಸರುಗಳಿಂದ ಕಛೇರಿಗಳು ನಡೆಯುತ್ತಿದ್ದವು. ಅದರ ಕ್ರಮ ಹೀಗೆ : ಒಬ್ಬ ವಿದ್ವಾಂಸರು ಹಾಡಿದ ಪಲ್ಲವಿಯನ್ನು ಉಳಿದ ವಿದ್ವಾಂಸರು ಹಾಡಬೇಕು. ಅನಂತರ ಇನ್ನೊಬ್ಬ ವಿದ್ವಾಂಸರ ಸರದಿ. ಹೀಗೆ ಶಿವರಾತ್ರಿ ಜಾಗರಣೆ ಆಗುತ್ತಿತ್ತು. ಅಂತಹ ಶಿವರಾತ್ರಿ ಸಮಾರಂಭದಲ್ಲಿ ತಮಿಳುನಾಡಿನ ಪ್ರಸಿದ್ಧ ವಿದ್ವಾಂಸದರಿಂದ ಸಂಗೀತ ಏರ್ಪಾಡಾಗಿತ್ತು.

ಚಿಕ್ಕರಾಮಪ್ಪನವರು ಅರಮನೆಯಲ್ಲಿ ಭಕ್ಷಿ ಎಂದರೆ ಒಬ್ಬ ಅಧಿಕಾರಿ. ಅವರೂ ಮಗನನ್ನು ಕರೆದುಕೊಂಡು ಹೋಗಿದ್ದರು. ಹೊರನಾಡಿನ ವಿದ್ವಾಂಸರೊಬ್ಬರು ಅಂದು ಹಾಡಿದರು. ಹುಡುಗ ಶೇಷಣ್ಣ ’ನಾನೂ ಪಲ್ಲವಿ ಹಾಡುತ್ತೇನೆ’ ಎಂದು ತಂದೆಯನ್ನು ಕೇಳುತ್ತಿದ್ದ ’ಸುಮ್ಮನಿರು’ ಎಂದು ತಡೆಯುತ್ತಿದ್ದರು ತಂದೆ. ಮಹಾರಾಜರ ಆಸ್ಥಾನದಲ್ಲಿ ಹೆಸರು ಪಡೆದ ಸಂಗೀತಗಾರರು ಎಷ್ಟೋ ಮಂದಿ. ಆದರೆ ಹೊರಗಡೆಯಿಂದ ಬಂದ ವಿದ್ವಾಂಸರ ಗಾಯನ ಎಷ್ಟು ಅದ್ಭುತವಾಗಿತ್ತೆಂದರೆ ಅವರು ಹಾಡಿದ ನಂತರ ಸ್ಥಳೀಯ ಆಸ್ಥಾನ ವಿದ್ವಾಂಸರಾರಿಗೂ ಹಾಡುವ ಧೈರ್ಯ ಬರಲಿಲ್ಲ.

ಹೊರಗಿನ ವಿದ್ವಾಂಸರು ಹಾಡಿದ ನಂತರ ಒಬ್ಬಿಬ್ಬರು ಪ್ರಯತ್ನಿಸಿದರು. ಊಹುಂ, ಆಗಲಿಲ್ಲ. ಮಹಾರಾಜರಿಗೆ ತುಂಬಾ ಕೋಪ, ಬೇಸರ. ವಿದ್ವಾಂಸರ ಮುಖಗಳನ್ನು ನೋಡಿದರು. ಭಕ್ಷಿ ಚಿಕ್ಕರಾಮಪ್ಪನವರಿಗೆ, ಒಂದು ಮೊರದಲ್ಲಿ ಅರಿಶಿನ, ಕುಂಕುಮ, ಬಿಚ್ಚೋಲೆ ತರಿಸಪ್ಪ ಎಂದರು. ವಿದ್ವಾಂಸರ ವಿಷಯಕ್ಕೆ ಅಷ್ಟು ಬೇಸರ ಅವರಿಗೆ.

ವಿದ್ವಾಂಸರು ಅವಮಾನಭಾರದಿಂದ ತಲೆ ಮೇಲಕ್ಕೆ ಎತ್ತದೆ ಕುಳಿತಿದ್ದರು. ಆಗ ಚಿಕ್ಕರಾಮಪ್ಪನವರು, ’ಪ್ರಭುಗಳು ಕೋಪಿಸಿಕೊಳ್ಳಬಾರದು. ಇದು ಮಹಾ ಕಷ್ಟ ಎಂದು ನಮ್ಮ ವಿದ್ವಾಂಸರು ಹಾಡಬೇಕೆ? ತಮ್ಮ ಅಪ್ಪಣೆಯಾದರೆ ಆ ವಿದ್ವಾಂಸರು ಹಾಡಿದ ಪಲ್ಲವಿಯನ್ನು ನನ್ನ ಮಗ ಶೇಷಣ್ಣ ಹಾಡುತ್ತಾನೆ’ ಎಂದರು. ಮಹಾರಾಜರು ಬೆರಗಾದರು. ’ಆಗಲಿ’ ಎಂದರು.

ಏಳು ವರ್ಷದ ಶೇಷಣ್ಣ ಗಂಟಲು ಸರಿಮಾಡಿಕೊಂಡು ಪ್ರಾರಂಭ ಮಾಡಿದ. ಅನಾಯಾಸವಾಗಿ ಆ ಪಲ್ಲವಿಯನ್ನು ಅರ್ಧ ಗಂಟೆಗಳ ಕಾಲ ವಿಸ್ತರಿಸಿ ಹಾಡಿದ.

ಮಹಾರಾಜರಿಗೆ ಬೆರಗು ಹೆಚ್ಚಿತು, ಹಿಡಿಸಲಾರದಷ್ಟು ಆನಂದವಾಯಿತು. ಮಗುವನ್ನು ಬಾಚಿ ತಬ್ಬಿಕೊಂಡು, ಶಾಲು ಜೋಡಿಯನ್ನು ಕೊಟ್ಟು ತಮ್ಮ ಕುತ್ತಿಗೆಯಲ್ಲಿದ್ದ ಕಂಠೀಹಾರವನ್ನು ತೆಗೆದು ಬಾಲಕನ ಕುತ್ತಿಗೆಗೆ ತಾವೇ ಹಾಕಿದರು. ಇತರರ ಹೋದ ಮೇಲೆ ಚಿಕ್ಕರಾಮಪ್ಪನವರಿಗೆ, ’ನಿನ್ನ ಮಗ ಒಬ್ಬ ರತ್ನ. ಇವನನ್ನು ಕಂಡು ಇತರರಿಗೆ ಹೊಟ್ಟೆಕಿಚ್ಚು ಬಂದೀತು. ಜಾಗ್ರತೆಯಾಗಿ ನೋಡಿಕೋ’ ಎಂದು ಹೇಳಿದರು.

ಸಂಗೀತಾಭ್ಯಾಸ

ಚಿಕ್ಕರಾಮಪ್ಪನವರು ಶೇಷಣ್ಣನಿಗೆ ಸಂಗೀತ ಶಿಕ್ಷಣವನ್ನು ಮುಂದುವರಿಸಿದರು. ಏಳು ವರ್ಷಕ್ಕೆ ವೀಣೆ ಮತ್ತು ಹಾಡುವುದು – ಎರಡರಲ್ಲೂ ಶಿಕ್ಷಣ ದೊರೆಯಿತು. ಮುಂದೆ ಐದು ವರ್ಷಗಳಲ್ಲಿ ಚಿಕ್ಕರಾಮಪ್ಪನವರು ವಿಧಿವಶರಾದರು.

ಚಿಕ್ಕ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದ ಶೇಷಣ್ಣನನ್ನು ಕಾಪಾಡುವ ಭಾರ ಅವನ ಹಿರಿಯ ಅಕ್ಕ ವೆಂಕಮ್ಮನ ಮೇಲೆ ಬಿದ್ದಿತು. ಈಕೆಗೆ ಸಂಗೀತದಲ್ಲಿ ಅಪಾರವಾದ ಜ್ಞಾನವಿದ್ದಿತು. ಶೇಷಣ್ಣನ ಅಗಾಧ ಸಾಧನೆಗೆ ವೆಂಕಮ್ಮ ಪ್ರೇರಕ ಶಕ್ತಿಯಾಗಿದ್ದರು. ಹಿರಿಯ ವಿದ್ವಾಂಸರಾಗಿದ್ದ ದೊಡ್ಡ ಶೇಷಣ್ಣನವರಲ್ಲಿ ವೀಣೆ ಪಾಠವನ್ನೂ ಮತ್ತು ಮೈಸೂರು ಸದಾಶಿವರಾಯರಲ್ಲಿ ಬಾಯಿ ಹಾಡುಗಾರಿಕೆ ಪಾಠವನ್ನೂ ಕಲಿಯುವಂತೆ ಏರ್ಪಾಡು ಮಾಡಿದರು. ಶೇಷಣ್ಣನವರು ಶ್ರದ್ಧಾಭಕ್ತಿಗಳಿಂದ ಸಂಗೀತವನ್ನು ಕಲಿಯಲಾರಂಭಿಸಿದರು.

ಆಗಿನ ಕಾಲದಲ್ಲಿ ಗುರುಗಳಿಂದ ವಿದ್ಯೆ ಕಲಿಯುವ ಕ್ರಮವೇ ವಿಶಿಷ್ಟವಾಗಿತ್ತು. ಶಿಷ್ಯರಿಗೆ ಯಾವಾಗಲೂ ಪಾಠವಾಗುತ್ತಿರಲಿಲ್ಲ. ಗುರುಗಳಿಗೆ ಮನಸ್ಸು ಬಂದಾಗ ಪಾಠವನ್ನು ಹೇಳಿ ಕೊಡುತ್ತಿದ್ದರು. ಶಿಷ್ಯ ಅದನ್ನು ಬಹಳ ಆಸಕ್ತಿಯಿಂದ ಕಲಿಯಬೇಕಾಗಿದ್ದಿತು. ಗುರುಸೇವೆ ಮಾಡುತ್ತಾ ತಾಳ್ಮೆಯನ್ನು ತಂದುಕೊಂಡು ಗುರುಗಳ ಮನಸ್ಸಿಗೆ ಸಂತೋಷವಾಗುವಂತೆ ನಡೆಯಬೇಕಾಗಿತ್ತು. ಇವೆಲ್ಲವನ್ನು ಅನುಸರಿಸುವುದು ಶೇಷಣ್ಣನವರಿಗೆ ಕಷ್ಟವಾಗಲಿಲ್ಲ. ಪ್ರತಿದಿನ ಏಳು ಗಂಟೆಗಳ ಕಾಲ ಸಾಧನೆ ಮಾಡುತ್ತಿದ್ದರು. ಗುರುಗಳು ಇವರು ನುಡಿಸಿದ್ದೆಲ್ಲವನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ.

ಒಮ್ಮೆ ಶೇಷಣ್ಣನವರು ಬೇಗಡೆ ರಾಗವನ್ನು ಬಹಳ ಕಷ್ಟಪಟ್ಟು ಸಾಧನೆ ಮಾಡಿ‌ದ್ದೇನೆ ಎಂದು ಭಾವಿಸಿದರು. ಗುರುಗಳು ಈ ದಿನ ಮೆಚ್ಚುತ್ತಾರೆ ಎಂದುಕೊಂಡು ಹೋದರು. ಗುರುಗಳ ಮುಂದೆ ವಾದನ ನಡೆಯಿತು. ಒಂದು ಬಾರಿಯೂ ಗುರುಗಳು ತಲೆಗೂರಲಿಲ್ಲ. ಪಾಠ ಮುಗಿದಾಗ ’ಸಾಧಕ ಸಾಲದು’ ಎಂದರು. ಶೇಷಣ್ಣ ಪೆಚ್ಚಾಗಿ ಮನೆಗೆ ಹೋದರು. ಇಡೀ ದಿನ ಮತ್ತೆ ಸಾಧನೆ ಮಾಡಿದರು. ಮತ್ತೆ ಮರುದಿನ ನುಡಿಸಿದರು. ’ ಇಂದು ಗುರುಗಳು ಮೆಚ್ಚಿಯೇ ಮೆಚ್ಚುತ್ತಾರೆ ಎಂದು ಅವರ ನಂಬಿಕೆ. ಮತ್ತೆ ಗುರುಗಳು ಸಾಧಕ ಸಾಲದು ಎಂದರು. ಇನ್ನೆಷ್ಟು ಸಾಧನೆ ಮಾಡಬೇಕು? ಎಂದುಕೊಂಡರು ಶಿಷ್ಯ. ಸಮಾಧಾನ ಅವರ ಮುಖದಲ್ಲಿ ಕಾಣಿಸಿತು.

ಗುರುಗಳಿಗೆ ಅರ್ಥವಾಯಿತು. ’ಶೇಷಣ್ಣ, ಕುಳಿತುಕೋ. ನಾನು ನುಡಿಸುತ್ತೇನೆ ಕೇಳು’ ಎಂದರು. ತಮ್ಮ ವೀಣೆಯನ್ನು ತೆಗೆದುಕೊಂಡು ಶಿಷ್ಯ ನುಡಿಸಿದುದನ್ನೆ ನುಡಿಸಿದರು.

ಕೇಳುಕೇಳುತ್ತ ಶೇಷಣ್ಣನವರ ಕಣ್ಣಿನಲ್ಲಿ ನೀರು ಚಿಮ್ಮಿತು. ಅವರ ನುಡಿಸುವುದನ್ನು ನಿಲ್ಲಿಸುತ್ತಲೆ ಅವರ ಕಾಲಿಗೆರಗಿದರು. ’ನನ್ನಷ್ಟು ಸಾಧನೆ ಮಾಡುವವರೇ ಇಲ್ಲ ಎಂದು ಜಂಭ ನನಗಿತ್ತು. ಕ್ಷಮಿಸಿ’ ಎಂದು ಬೇಡಿದರು.

ಏಳು ವರ್ಷದ ಹುಡುಗ ಅದ್ಭುತವಾಗಿ ಹಾಡಿದ.

ಗುರುಗಳು, ’ಶೇಷಣ್ಣ ನಿನ್ನ ಮನಸ್ಸನ್ನು ನೋಯಿಸಬೇಕು ಎಂದು ನಾನು ಹಾಗೆ ಮಾತನಾಡಲಿಲ್ಲ. ನಿನ್ನ ಒಳ್ಳೆಯದಕ್ಕೆ ಹೇಳಿದೆ. ನಾನು ಸಾಧಕ ಮಾಡಿದ ರೀತಿಯನ್ನು ಹೇಳುತ್ತೇನೆ, ಕೇಳು. ಒಂದೊಂದು ತಾನವನ್ನು ನೂರುನೂರು ಆವೃತ್ತಿ ನುಡಿಸಿ ಅಭ್ಯಾಸ ಮಾಡಿದೆ’ ಎಂದು ಹೇಳಿದರು. ಶ್ರಮವನ್ನು ಲಕ್ಷಿಸದೆ ಬೇಸರ ಪಡದೆ ಸಾಧನೆ ಮಾಡಿಮಾಡಿ ಶೇಷಣ್ಣನವರು ವೀಣೆಯ ವಾದನದಲ್ಲಿ ಅಸಮಾನರು ಎನಿಸಿಕೊಂಡರು. ಹೀಗೆ ಸುಮಾರು ಹತ್ತು ಹನ್ನೆರಡು ವರ್ಷಗಳ ಕಾಲ ಎಡೆಬಿಡದೆ ಗುರುಸೇವೆ ಮಾಡಿ ಸಂಗೀತವನ್ನು  ಕಲಿತರು.

ಪ್ರಭುಗಳ ಸ್ನೇಹ ಹಸ್ತ

ದೊಡ್ಡ ಶೇಷಣ್ಣನವರು ತಮ್ಮ ಮನೆಯಲ್ಲಿ ಎಲ್ಲ ಸಂಗೀತ ವಿದ್ವಾಂಸರನ್ನು ಬರಮಾಡಿಕೊಂಡು ಅವರ ಎದುರಿನಲ್ಲಿ ಶೇಷಣ್ಣನವರಿಂದ ಕಛೇರಿ ಮಾಡಿಸಿದರು. ಅವರ ಅಮೋಘವಾದ ವೀಣಾವಾದನವನ್ನು ಕೇಳಿ ದೊಡ್ಡ ಶೇಷಣ್ಣನವರು ಬಹಳ ತೃಪ್ತಿಪಟ್ಟು ಶಿಷ್ಯನಿಗೆ ಶಾಲು ಜೋಡಿಯನ್ನು ಕೊಟ್ಟು ಆಶೀರ್ವಾದ ಮಾಡಿದರು.

ಶೇಷಣ್ಣನವರು ಹೀಗೆ ಶುಕ್ಲಪಕ್ಷದ ಚಂದ್ರನಂತೆ ದಿನೇ ದಿನೇ ಪ್ರವರ್ಧಮಾನಕ್ಕೆ ಬಂದರು. ಆಗತಾನೆ ಮೈಸೂರಿನ ರಾಜ್ಯಾಡಳಿತವನ್ನು ತಮ್ಮ ಕೈಗೆ ವಹಿಸಿಕೊಂಡಿದ್ದ ಚಾಮರಾಜ ಒಡೆಯರು ಶೇಷಣ್ಣನವರ ಪಾಂಡಿತ್ಯವನ್ನು ಮೆಚ್ಚಿದರು. ಅವರನ್ನು ಆಸ್ಥಾನ ವಿದ್ವಾಂಸರನ್ನಾಗಿ ಮಾಡಿದುದಲ್ಲದೆ ತಮ್ಮ ಗುರುಗಳನ್ನಾಗಿ ನೇಮಿಸಿಕೊಂಡರು. ಈ ರೀತಿ ದೊರೆಗಳಿಂದ ಆದರಿಸಲ್ಪಟ್ಟ ಶೇಷಣ್ಣನವರು ಅವರ ಆತ್ಮೀಯ ಗೆಳೆಯರೂ ಆದರು. ಅನೇಕ ದಿನ ಸಂಜೆ ರಾಜರು ತಮ್ಮ ಖಾಸಗೀ ಕೋಣೆಯಲ್ಲಿ ಶೇಷಣ್ಣನವರನ್ನು ಮತ್ತು ಭಕ್ಷಿ ಸುಬ್ಬಣ್ಣನವರನ್ನು ಕುಳ್ಳಿರಿಸಿಕೊಂಡು ಸಂತೋಷವಾಗಿ ಕಾಲ ಕಳೆಯುತ್ತಿದ್ದರು.

ಶೇಷಣ್ಣನವರು ಆಸ್ಥಾನ ವಿದ್ವಾಂಸರಾದ ಕೆಲವು ದಿವಸಗಳಲ್ಲಿ ಆಶ್ಚರ್ಯಕರವಾದ ಘಟನೆ ಒಂದು ನಡೆಯಿತು. ತಮಿಳುನಾಡಿನ ಸುಪ್ರಸಿದ್ಧ ಪಿಟೀಲು ವಿದ್ವಾಂಸ ತಿರುಕ್ಕೋಡಿ ಕಾವಲ್ ಕೃಷ್ಣಯ್ಯರ್ ಎಂಬುವರು ಮಹಾರಾಜರ ದರ್ಶನವನ್ನು ಮಾಡಿ ತಮ್ಮ ವಿದ್ಯೆಯನ್ನು ಪ್ರದರ್ಶಿಸಬೇಕೆಂಬ ಉದ್ದೇಶದಿಂದ ಮೈಸೂರಿಗೆ ಬಂದರು. ಅವರದು ಅಸಾಧಾರಣ ಸಾಮರ್ಥ್ಯ. ಅವರ ಪರಿಚಯ ಮಾಡಿಕೊಳ್ಳಲು ಆಸ್ಥಾನ ವಿದ್ವಾಂಸರೆಲ್ಲರೂ ತವಕಪಡುತ್ತಿದ್ದರು. ಅದಕ್ಕೆ ಸರಿಯಾಗಿ ಕೃಷ್ಣಯ್ಯರ್ ತಾವೇ ಸ್ವಂತವಾಗಿ ಎಲ್ಲರ ಮನೆಗೂ ಹೋಗಿ ಅವರಿಂದ ಸ್ವಲ್ಪ ಕಾಲ ಹಾಡಿಸಿಯೋ ನುಡಿಸಿಯೋ ಕೇಳುತ್ತಿದ್ದರು. ಅಕಸ್ಮಾತ್ತಾಗಿ ಒಂದು ಸಂಗತಿ ನಡೆಯಿತು. ಪ್ರತಿಯೊಬ್ಬ ವಿದ್ವಾಂಸರೂ ಕಲ್ಯಾಣಿ ರಾಗವನ್ನೇ ಹಾಡಿದರು. ಇದರಿಂದ, ’ಮೈಸೂರಿನ ಸಂಗೀತ ವಿದ್ವಾಂಸರಿಗೆ ಕಲ್ಯಾಣಿ ರಾಗವನ್ನು ಬಿಟ್ಟು ಮತ್ತೊಂದು ರಾಗವನ್ನು ಹಾಡುವುದಕ್ಕೆ ಬರುವುದಿಲ್ಲ’ ಎಂದು ಕೃಷ್ಣಯ್ಯರ್ ಅವರು ಹೇಳಿದರು. ಇದು ಮಹಾರಾಜವರೆಗೆ ಹೋಯಿತು. ಇದನ್ನು ಕೇಳಿದ ಸುಬ್ಬಣ್ಣನವರಿಗೆ  ಅಸಮಾಧಾನವಾಯಿತು. ಈ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಬೇಕು ಎಂದು ತೀರ್ಮಾನಿಸಿದರು. ತಮ್ಮ ನೆಂಟರೊಬ್ಬರ ಮನೆಯಲ್ಲಿ ಮದುವೆಯ ಸಮಾರಂಭದ ಆರತಕ್ಷತೆಯ ಸಂದರ್ಭದಲ್ಲಿ ಶೇಣ್ಣನವರ ವೀಣೆಯ ಕಛೇರಿಯನ್ನು ಏರ್ಪಡಿಸಿದರು. ತಿರುಕ್ಕೋಡಿಕ್ಕಾವಲ್ ಕೃಷ್ಣಯ್ಯರ್ ಅವರನ್ನೇ ಪಿಟೀಲುವಾದನಕ್ಕೆ ಕರೆದರು. ಮಹಾರಾಜರ ಬಳಿಗೆ ಹೋಗಿ, ’ಶೇಷಣ್ಣನವರ ಕಛೇರಿ ಇದೆ, ಜೊತೆಗೆ ತಿರುಕ್ಕೋಡಿಕ್ಕಾವಲ್ ಕೃಷ್ಣಯ್ಯರ್ ರ ಪಿಟೀಲು, ಮಹಾಸ್ವಾಮಿಗಳು ದಯಮಾಡಿಸಬೇಕು ’ ಎಂದು ಪ್ರಾರ್ಥಿಸಿದರು. ಮಹಾರಾಜರು ವೇಷ ಮರೆಸಿಕೊಂಡು ಹೋದರು. ಶೇಷಣ್ಣನವರು ನುಡಿಸಿದ ವಿವಿಧ ರಾಗಗಳನ್ನು ಕೇಳಿ ಮಹಾರಾಜರ ಆನಂದ ವರ್ಣಿಸಲಾಗದು. ಅವರಿಗೆ ವಿಶೇಷ ಬಹುಮಾನಗಳನ್ನು ಕೊಟ್ಟು ಸನ್ಮಾನ ಮಾಡಿದರು.

ವೆಂಕಮ್ಮನವರ ಪ್ರಭಾವ

ಶೇಷಣ್ಣನವರ ಪ್ರಭಾವ, ಪ್ರತಿಷ್ಠೆ ಮತ್ತು ಕೀರ್ತಿಗಳಿಗೆ ಹಲವಾರು ಕಾರಣಗಳನ್ನು ಕೊಡಬಹುದು. ಹೆತ್ತತಾಯಿ ಲಕ್ಷಮ್ಮನವರು ಶೇಷಣ್ಣನವರ ಎಂಟನೆಯ ವಯಸ್ಸಿನಲ್ಲಿಯೇ ತೀರಿಕೊಂಡರು. ಮನೆಯಲ್ಲಿ ಹಿರಿಯ ಹೆಂಗಸು ಎಂದರ  ಶೇಷಣ್ಣನವರ ಹಿರಿಯ ಅಕ್ಕ ವೆಂಕಮ್ಮ. ಅವರು ತಮ್ಮ ಒಬ್ಬ ತಂಗಿ ಮತ್ತು ತಮ್ಮಂದಿರ ಸಂರಕ್ಷಣೆಯ ಭಾರವನ್ನು ಹೊತ್ತರು.

ಹೀಗೆ ಶೇಷಣ್ಣನವರದು ನೊಂದ ಜೀವ. ಬಾಲ್ಯದಲ್ಲಿ ಮಾತಾಪಿತೃಗಳ ವಿಯೋಗ, ಅನಂತರ ಹೆಂಡತಿ ಮಕ್ಕಳ ಸಾವು. ಹೀಗೆಲ್ಲಾ ದುಃಖವನ್ನು ಅನುಭವಿಸಿ ಹಣ್ಣಾದರು. ಅದೇ ರೀತಿಯಾಗಿ ಅಕ್ಕ ವೆಂಕಮ್ಮನವರ ಜೀವನದಲ್ಲಿಯೂ ಸುಖವೆಂಬುದು ಸ್ವಪ್ನಪ್ರಾಯವಾಗಿದ್ದಿತು. ಕೈಹಿಡಿದ ಗಂಡ ತೀರಿಕೊಂಡ. ಅತ್ತ ತಂದೆ ತಾಯಿಗಳೂ ಇಲ್ಲವಾದರು. ಹೀಗಾಗಿ ಅವರು ತಮ್ಮ ಒಡಹುಟ್ಟಿದವರ ಯೋಗಕ್ಷೇಮ ಮತ್ತು ಅಭ್ಯುದಯ ಇವುಗಳಿಗಾಗಿ ತಮ್ಮ ಜೀವನವನ್ನೇ ತೇದರು. ಶೇಷಣ್ಣನವರ ಪಾಲಿಗೆ ಅವರು ಅಕ್ಕ ಮಾತ್ರವಲ್ಲ. ಸಾಕ್ಷಾಥ್ ದೇವತೆಯಾಗಿದ್ದರು. ತಮ್ಮನು ವೀಣೆಯಲ್ಲಿ ನುಡಿಸುತ್ತಿದ್ದುದನ್ನೆಲ್ಲಾ ಆಕೆ ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ.  ಅದಕ್ಕಾಗಿ ಶೇಷಣ್ಣನವರು ಶಕ್ತಿ ಮೀರಿ ಸಾಧನೆ ಮಾಡುತ್ತಿದ್ದರು. ’ಯಾರನ್ನು ಬೇಕಾದರೂ ಒಪ್ಪಿಸಬಹುದು. ಆದರೆ ನನಗೆ ತಾಯಿಯಂತಿರುವ ನನ್ನ ಅಕ್ಕ ವೆಂಕಮ್ಮನವರ ಒಪ್ಪಿಗೆ ಮುದ್ರೆ ಬಿದ್ದರೇನೇ ನನ್ನ ಶ್ರಮ ಸಾರ್ಥಕ’ ಎಂದು ಕೃತಜ್ಞತೆಯಿಂದ, ಪೂಜ್ಯಭಾವದಿಂದ ಶೇಷಣ್ಣನವರು ವೆಂಕಮ್ಮನವರನ್ನು ನೆನೆಯುತ್ತಿದ್ದರು. ಇದರಿಂದಾಗಿ ಶೇಷಣ್ಣನವರ ಸಾಧನೆಯು ಪರಮಾವಧಿ ಮುಟ್ಟಿ ಅವರು ಮಹಾವೈಣಿಕರಾದರು.

ವೆಂಕಮ್ಮನವರು ಶೇಷಣ್ಣನವರ ಕೀರ್ತಿ, ವೈಭವಗಳನ್ನು ಕಂಡು ಸಂತೋಷಪಟ್ಟರು. ಆದರೆ ಅವರಿದ್ದಾಗಲೇ ಶೇಷಣ್ಣನವರು ತೀರಿಕೊಂಡರು.

ಪ್ರಶಸ್ತಿ ಪರಂಪರೆ

ಶೇಷಣ್ಣನವರ ಭಾಗ್ಯರವಿ ಪ್ರಕಾಶಕ್ಕೆ ಬಂದ. ಅವರ ಸಂಗೀತ ದಿಗ್ವಿಜಯವು ಆರಂಭವಾಯಿತು. ದೆಹಲಿಯಿಂದ ಕನ್ಯಾಕುಮಾರಿಯವರೆಗೂ ಸಂಚರಿಸಿ ತಮ್ಮ ವೀಣಾವಾದನದಿಂದ ರಾಜಾಧಿರಾಜರುಗಳನ್ನೂ ವಿದ್ವಜ್ಜನರನ್ನೂ ಸಾಮಾನ್ಯ ಜನರನ್ನೂ ಬೆರಗುಗೊಳಿಸಿದುದು ಮಾತ್ರವೇ ಅಲ್ಲ, ಕೊನೆಗೆ ವಿದೇಶೀಯರೂ ಅವರ ವಾದನಕ್ಕೆ ತಲೆದೂಗುವಂತೆ ಮಾಡಿದರು. ಶೇಷಣ್ಣನವರು ಗಳಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ; ಪಡೆದ ಮರ್ಯಾದೆಗಳಿಗೆ ಕೊನೆಯಿಲ್ಲ. ಅವರ ಕೀರ್ತಿ ಮೇರುಪರ್ವತದಷ್ಟು ಕೊಯಮತ್ತೂರಿನಲ್ಲಿನ ಸಂಗೀತ ರಸಿಕರು ಶೇಷಣ್ಣನವರನ್ನು ಬರಮಾಡಿಕೊಂಡು ಅವರ ವೀಣಾವಾದನವನ್ನು ಏರ್ಪಡಿಸಿದರು. ಶೇಷಣ್ಣನವರು ಮೈಸೂರು ಸಂಸ್ಥಾನದ ಹೊರಗೆ ಕಛೇರಿಗಳನ್ನು ಮಾಡಿ ಪ್ರಸಿದ್ಧರಾಗಿರಲಿಲ್ಲ. ಆದುದರಿಂದ ಕೊಯಮತ್ತೂರಿನಲ್ಲಿ ಕಛೇರಿಗೆ ಬಂದ ಬಹುಮಂದಿ, ’ ಇವರಿಗೇನು ಬರುತ್ತದೆ?’ ಎಂದು ತಿರಸ್ಕಾರದಿಂದಲೇ ಕುಳಿತುಕೊಂಡರು. ಶೇಷಣ್ಣನವರ ಕಛೇರಿ ಪ್ರಾರಂಭವಾಯಿತು. ಕೇಳುತ್ತಕೇಳುತ್ತ ರಸಿಕರು ತಲೆದೂಗಿದರು. ಅವರ ಸಂತೋಷಕ್ಕೆ ಪಾರವಿಲ್ಲ ಬಿಚ್ಚುಮನಸ್ಸಿನಿಂದ ಶೇಷಣ್ಣನವರ ಪಾಂಡಿತ್ಯವನ್ನು ಹೊಗಳಿ ಊರಿನ ಪ್ರಮುಖರು ಮತ್ತು ಕಲಾವಿದರು ಸಹಿ ಮಾಡಿದ ಪ್ರಶಸ್ತಿ ಪತ್ರವನ್ನು ಕೊಟ್ಟು ಗೌರವಿಸಿದರು. ಮುಂಬಯಿಯ ಗವರ್ನರ್, ರಾಮನಾಡಿನ ರಾಜರು, ನಂಜನಗೂಡಿನ ರಾಘವೇಂದ್ರ ಸ್ವಾಮಿಗಳ ಮಠದ ಸ್ವಾಮಿಗಳು, ಸೋಸಲೆ ವ್ಯಾಸರಾಯ ಸ್ವಾಮಿಗಳು ಅವರನ್ನು ಗೌರವಿಸಿದರು. ಹೀಗೆ ಅರಮನೆ – ಗುರುಮನೆಗಳಲ್ಲಿ ಅವರಿಗೆ ಗೌರವ ಸಂದಿತು. ಹಲವಾರು ಸಂಸ್ಥೆಗಳು ಅವರಿಗೆ ಸನ್ಮಾನ ಮಾಡಿದವು. ರಾಮನಾಡಿನ ಮಹಾರಾಜರು ತಾವೇ ಉತ್ತಮ ಸಂಗೀತ ವಿದ್ವಾಂಸರು. ಅವರು ಶೇಷಣ್ಣನವರನ್ನು ನವರಾತ್ರಿಯ ಸಂದರ್ಭದಲ್ಲಿ ಬರಮಾಡಿಕೊಂಡು ಏಳು ದಿನಗಳು ಅವರಿಂದ ಕಛೇರಿ ಮಾಡಿಸಿ, ಅವರ ವೀಣಾವಾದನದಿಂದ ಅಮಿತಾನಂದವನ್ನು ಹೊಂದಿ, ತಾವು ದಿನವೂ ಧರಿಸಿಕೊಂಡು ಬರುತ್ತಿದ್ದ ಒಡವೆಗಳನ್ನೆಲ್ಲಾ ಶೇಷಣ್ಣನವರಿಗೆ ಅರ್ಪಿಸಿಬಿಟ್ಟರು. ಒಂಬತ್ತನೆಯ ದಿನ ಆನೆಯ ಮೇಲೆ ಅಂಬಾರಿಯಲ್ಲಿ ಶೇಷಣ್ಣನವರನ್ನು  ಕೂರಿಸಿ ಮೆರವಣಿಗೆ ಮಾಡಿಸಿದರಂತೆ, ಸೀಮೆಕಮಲದಿಂದ ಕೆತ್ತಿದ ಕಂಠೀಹಾರವನ್ನು ಶೇಷಣ್ಣನವರ ಕುತ್ತಿಗೆಗೆ ಹಾಕಿ ಎರಡು ಬೆರಳುಗಳಿಗೆ ರತ್ನಖಂಡ ಉಂಗುರಗಳನ್ನು ತೊಡಿಸಿ ಗೌರವಿಸಿದರು.

ಪಲ್ಲಕ್ಕಿ ಮೆರವಣಿಗೆ

ಬರೋಡ ಸಂಸ್ಥಾನವು ಸಂಗೀತ ಕೇಂದ್ರಗಳಲ್ಲಿ ಹೆಸರುವಾಸಿಯಾಗಿತ್ತು. ಅಲ್ಲಿನ ದೊರೆ ಸಯ್ಯಾಜಿರಾವ್ ಗಾಯಕವಾಡರು ವಿದ್ಯಾಪಕ್ಷಪತಿಗಳೂ ಉದಾರಿಗಳೂ ಕಲಾಪೋಷಕರೂ ಆಗಿದ್ದರು. ಅವರು ಶೇಷಣ್ಣನವರನ್ನು ಬರಮಾಡಿಕೊಂಡು ಮೂರು ದಿನಗಳು ಅವರ ವೀಣಾವಾದನವನ್ನು ಕೇಳಿ ಆನಂದಿಸಿದರು. ಗಾಯಕ ವಾಡರು ತುಂಬಾ ಸಂತೋಷಟ್ಟು ತಮ್ಮ ತಾಯಿಯವರು ಉಪಯೋಗಿಸುತ್ತಿದ್ದ ಮೇನೆ (ಪಲ್ಲಕ್ಕಿ)ಯನ್ನು ಕೊಟ್ಟು, ಅದರಲ್ಲಿ ಕೂರಿಸಿ ಮೆರವಣಿಗೆ ಮಾಡಿಸಿದರು.

ಈ ಸುದ್ದಿಯು ಮೂಸೂರನ್ನು ಮುಟ್ಟಲು ತಡವಾಗಲಿಲ್ಲ. ತಮ್ಮ ಆಸ್ಥಾನ ವಿದ್ವಾಂಸರೂ ಹಾಗೂ ತಮ್ಮ ಗುರುಗಳೂ ಆದ ಶೇಷಣ್ಣನವರಿಗೆ ದೊರೆತ ಮರ್ಯಾದೆಯ ಸುದ್ದಿಯನ್ನು ಕೇಳಿ ಮೈಸೂರು ಮಹಾರಾಜರಾದ ಕೃಷ್ಣರಾಜ ಒಡೆಯರಿಗೆ ಬಹಳ ಸಂತೋಷವಾಯಿತು. ತಾವು ಉತ್ಸವ ಕಾಲದಲ್ಲಿ ಉಪಯೋಗಿಸುತ್ತಿದ್ದ ಸಕಲ ರಾಜಮರ್ಯಾದೆಗಳೊಡನೆ ಅರಮನೆಯ ಕೋಟೆಯೊಳಗಿನ ಎಲ್ಲಾ ರಾಜಬೀದಿಗಳಲ್ಲಿಯೂ ಶೇಷಣ್ಣನವರನ್ನು ಗಾಯಕವಾಡರು ಕೊಟ್ಟ ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆ ಮಾಡಿಸಿದರು. ಇಂತಹ ಗೌರವ ಯಾವ ವಿದ್ವಾಂಸರಿಗೂ ಲಭಿಸಿರಲಿಲ್ಲ.

ಅಗ್ರ ತಾಂಬೂಲ

ದಕ್ಷಿಣಾದಿ ಸಂಗೀತ ಕೇಂದ್ರಗಳಲ್ಲಿ ಮೈಸೂರು, ತಂಜಾವೂರು, ತಿರುವನಂತಪುರ ಮತ್ತು ಮದರಾಸು ಇವು ಮುಖ್ಯವಾದವು. ತಂಜಾವೂರಿನ ಸಂಗೀತ ಪ್ರೇಮಿಗಳು ಆಗಾಗ ಪ್ರಸಿದ್ಧ ಸಂಗೀತ ವಿದ್ವಾಂಸರನ್ನು ಕರೆಸಿ ಸಂಗೀತಗೋಷ್ಠಿ, ಚರ್ಚೆಗಳನ್ನು ನಡೆಸುತ್ತಿದ್ದರು. ಅಂತಹವರಲ್ಲಿ ಕೃಷ್ಣಸ್ವಾಮಿ ನಾಯಕರು ಒಬ್ಬರು.

ತಂಜಾವೂರಿನ ಶ್ರೀಮಂತರು, ಕಲಾಭಿಮಾನಿಗಳಲ್ಲದೆ ಉದಾರ ಪೋಷಕರೂ ಆಗಿದ್ದರು. ಅನೇಕ ವಿದ್ವಾಂಸರು  ಪ್ರತಿವರ್ಷ ತ್ಯಾಗರಾಜರ ಆರಾಧನಾ ಉತ್ಸವದಲ್ಲಿ ಭಾಗವಹಿಸುತ್ತಿದ್ದುದಲ್ಲದೆ ಕೃಷ್ಣಸ್ವಾಮಿ ನಾಯಕರ ಬಳಿ ಬಂದು ಕಛೇರಿ  ಮಾಡಿ ಸನ್ಮಾನಿತರಾಗಿ ಹೋಗುತ್ತಿದ್ದರು. ಅಂತಹ ಒಂದು ಸನ್ನಿವೇಶ. ವೀಣೆ ಶೇಷಣ್ಣನವರಲ್ಲದೆ ಮಹಾವೈದ್ಯನಾಥಯ್ಯರ್, ಕೊಳಲು ಶರಭ ಶಾಸ್ತ್ರಿಗಳು, ಪಿಟೀಲು ವಿದ್ವಾನ್ ತಿರುಕ್ಕೋಡಿಕ್ಕಾವಲ್ ಕೃಷ್ಣಯ್ಯರ‍್, ಮೃದಂಗಂ ನಾರಾಯಣಸ್ವಾಮಿಯಪ್ಪ ಎಂಬ ಪ್ರಸಿದ್ಧ ವಿದ್ವಾಂಸರು ಸೇರಿದ್ದರು. ನಾಯಕರು, ’ಇಂತಹ ಅಸಾಧಾರಣ ಸಂಗೀತ ವಿದ್ವಾಂಸರು ಇಷ್ಟು ಮಂದಿ ಒಟ್ಟಿಗೆ ಸೇರುವುದು ವಿರಳ. ವಿದ್ವಾಂಸರಲ್ಲಿ ಅತ್ಯಂತ ಶ್ರೇಷ್ಠರಾದವರನ್ನು ಈ ಸಭೆಯಲ್ಲಿಯೇ ಆಯ್ಕೆ ಮಾಡಬೇಕು’ ಎಂದು ಯೋಚಿಸಿದರು. ಮನೆಯೊಳಕ್ಕೆ ಹೋಗಿ ತಮ್ಮ ಪೆಟ್ಟಿಗೆಯಿಂದ ಒಂದು ಹೊಳೆಯುವ ಸೀಮೆ ಕಮಲದ ವಜ್ರದ ಉಂಗುರವನ್ನು ತೆಗೆದುಕೊಂಡು ಬಂದು ಸಭೆಯ ಮಧ್ಯದಲ್ಲಿ ಎಲ್ಲರಿಗೂ ಕಾಣುವಂತೆ ಅದನ್ನು ತೂಗುಹಾಕಿದರು. ಅನಂತರ ಹೇಳಿದರು. ’ತಾವೆಲ್ಲ ಘನ ವಿದ್ವಾಂಸರು. ತಮ್ಮೆಲ್ಲರ ಸಂಗೀತ ಕೇಳಬೇಕೆಂದು ಆಸೆಯಾಗಿದೆ. ದಯವಿಟ್ಟು ನಡೆಸಬೇಕು. ಮತ್ತೊಂದು ಪ್ರಾರ್ಥನೆ. ಈ ವಜ್ರದ ಉಂಗುರ ತಾವೆಲ್ಲ ಯಾರನ್ನು ಶ್ರೇಷ್ಠ ವಿದ್ವಾಂಸರೆಂದು ಆರಿಸುತ್ತೀರೋ ಅವರಿಗೆ ಸೇರುತ್ತದೆ. ತಾವೇ ತೀಮಾರ್ನಿಸಬೇಕು. ಎಂದು ಹೇಳಿ ಕುಳಿತರು. ಸ್ಪರ್ಧೆ ಆರಂಭವಾಯಿತು. ಒಬ್ಬರನೊಬ್ಬರು ಮೀರಿಸುವಂತೆ ಹಾಡಿದರು. ಇಲ್ಲವೆ ವಾದ್ಯಗಳನ್ನು ನುಡಿಸಿದರು. ಎಲ್ಲರ ಕಛೇರಿಯೂ ಮುಗಿಯಿತು.

ಗಾಂಧೀಜಿಯವರ ಬಿಡಾರದಲ್ಲಿ ಶೇಷಣ್ಣನವರ ಕಛೇರಿ ನಡೆಯಿತು.

’ಯಾರಿಗೆ ಉಂಗುರ? ಅನೇಕ ವಿದ್ವಾಂಸರಿಗೆ ’ನಮಗೇ ಬರಬೇಕು ಎಂದು ಸಹಜವಾಗಿ ಅಭಿಪ್ರಾಯ. ಕಡೆಗೆ ಒಬ್ಬ ವಿದ್ವಾಂಸರು ಎದ್ದು ನಿಂತು, ’ನನ್ನ ಅಭಿಪ್ರಾಯದಲ್ಲಿ  ಇಂದಿನ ಸ್ಪರ್ಧೆಯಲ್ಲಿ ಜಯಶೀಲರಾದವರು ಶೇಷಣ್ಣನವರು, ಅವರು ನಾದದ ಹೊಳೆಯನ್ನೇ ಹರಿಸಿದ್ದಾರೆ. ಈ ಉಂಗುರವನ್ನು ಧರಿಸಲು ಅವರೇ ಯೋಗ್ಯರು ಎಂದರು. ಇತರ ವಿದ್ವಾಂಸರು ಅದನ್ನು ಅನುಮೋದಿಸಿದರು. ನಾಯಕರವರ ಪ್ರಾರ್ಥನೆಯ ಪ್ರಕಾರ ಆ ವಜ್ರದ ಉಂಗುರವನ್ನು ಶೇಷಣ್ಣನವರ ಬೆರಳಿಗೆ ತೊಡಿಸಿ ಗೌರವಿಸಿದರು. ಹೀಗೆ ಅಗ್ರ ಪಂಕ್ತಿಯ ವಿದ್ವಾಂಸರಲ್ಲಿ ಶೇಷಣ್ಣನವರಿಗೆ ಅಗ್ರ ತಾಂಬೂಲ ದೊರೆಯಿತು.

ಜಂಝಾಟಿ

ಕರ್ನಾಟಕ ಸಂಗೀತದಲ್ಲಿ ಇರುವ ಅನೇಕ ರಾಗಗಳಲ್ಲಿ ’ಜಂಝೂಟಿ’ ಒಂದು. ಇದರಲ್ಲಿ ಹಾಡನ್ನು ರಚಿಸುವುದು ಸುಲಭವಲ್ಲ. ಶೇಷಣ್ಣನವರು ಈ ರಾಗವನ್ನು ಆವಾಹಿಸಿ ಅದರಲ್ಲಿ ಕೆಲವು ಸುಂದರವಾದ ರಚನೆಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಸ್ವರಜತಿ ಮತ್ತು ಧಿರನಾ ಎಂಬ ತಿಲ್ಲಾನ ಬಹು ಪ್ರಸಿದ್ಧಿಯನ್ನು ಹೊಂದಿದೆ. ಜಂಝೂಟಿ ತಿಲ್ಲಾನವನ್ನು ಶೇಷಣ್ಣನವರು ರಚಿಸಿದ ಸನ್ನಿವೇಶವು ಸ್ವಾರಸ್ಯವಾದ ಪ್ರಸಂಗವೇ.

ಒಮ್ಮೆ ಶೇಷಣ್ಣನವರಿಗೆ ಹಣದ ಕೊರೆತೆಯುಂಟಾಯಿತು. ಆಗಿನ ಮಹಾರಾಜರಾದ ಚಾಮರಾಜ ಒಡೆಯರನ್ನು ೮೦೦೦ ರೂಪಾಯಿಗಳ ಸಾಲ ಕೇಳಿದರು. ಮಹಾರಾಜರು ಅದನ್ನು ಅಷ್ಟಾಗಿ ಮನಸ್ಸಿಗೆ ತಂದುಕೊಳ್ಳಲಿಲ್ಲ. ಎಂಟು ಹತ್ತು ದಿನಗಳಾದರೂ ಮಹಾರಾಜರು ಸುಮ್ಮನಿದ್ದರು. ಈ ಉದಾಸೀನ ಮನೋಭಾವವನ್ನು ಕಂಡು ಶೇಷಣ್ಣನವರು ಅರಮನೆಗೆ ಹೋಗುವುದನ್ನು ನಿಲ್ಲಿಸಿದರು. ಮಹಾರಾಜರಿಗೂ ಶೇಷಣ್ಣನವರನ್ನು ಮೂರು ನಾಲ್ಕು ದಿನಗಳು ನೋಡದೇ ಬೇಸರವಾಗಿತ್ತು. ಕೊನೆಗೆ ಮಹಾರಾಜರ ಧೋರಣೆಯನ್ನು ನೋಡಿ ಸಹಿಸಲಾರದೆ “ಫರಜ್’ ರಾಗದಲ್ಲಿ ಒಂದು ತಿಲ್ಲಾನವನ್ನು ರಚಿಸಿದರು. ಅದರ ಚರಣದಲ್ಲಿ ’ಚಿಕ್ಕಂದಿನಿಂದಲೂ ನಿನ್ನನ್ನೇ ನಂಬಿದ್ದೇನೆ, ನೀನೆ ನನ್ನನ್ನು ಕಾಪಾಡುತ್ತಿರುವೆ. ನಿನ್ನ ದರ್ಶನವಿಲ್ಲದೆ ಹೇಗಿರಲಿ ಚಾಮರಾಜ ಪ್ರಭುವೇ?’ ಎಂದು ಮೊರೆಯಿಟ್ಟರು. ಸುಬ್ಬಣ್ಣನವರಿಗೆ, ’ ಆ ತಿಲ್ಲಾನವನ್ನು ಮಹಾಸ್ವಾಮಿಯವರ ಮುಂದೆ ಹಾಡಿ ಏನು ನಡೆಯುತ್ತದೆ ಎಂಬುದನ್ನು ತಿಳಿಸು’ ಎಂದು ಹೇಳಿದರು. ಮಹಾರಾಜರು ತಿಲ್ಲಾನವನ್ನು ಕೇಳಿ,’ ರಚನೆ ಯಾರದ್ದು?”ಎಂದು ಕೇಳಿದರು. ಸುಬ್ಬಣ್ಣನವರು, ’ಅವರ ಹೆಸರನ್ನು ಈಗ ಹೇಳುವುದಿಲ್ಲ’ ಎಂದು ಹೇಳಿದರು.

ಶೇಷಣ್ಣನವರು ಪ್ರತಿನಿತ್ಯವೂ ಒಂದು ತಿಲ್ಲಾನವನ್ನು ರಚಿಸಿ ಅದರ ಚರಣದಲ್ಲಿ ಅಳಲನ್ನು ತೋಡಿಕೊಂಡು ಮಹಾರಾಜರಿಂದ ಸಹಾಯವನ್ನು ಅಪೇಕ್ಷಿಸುತ್ತಿದ್ದರು. ಆದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಜಂಝೂಟಿ ರಾಗದ ತಿಲ್ಲಾಣವನ್ನು ರಚಿಸಿ ಅವರ ಚರಣದಲ್ಲಿ, ’ಎನ್ನಿವಿಧಮುಗ ವೇಡುಕೊಂದರಾ ನಿನ್ನೇ ನಮ್ಮಿನಾನುರಾ ಸುಗುಣಸಾಂದ್ರ ಶ್ರೀ ಚಾಮರಾಜೇಂದ್” ಎಂದು ಸಂಕಟದಿಂದ ಮೊರಯಿಟ್ಟರು. ಸುಬ್ಬಣ್ಣನವರು ಈ ತಿಲ್ಲಾನವನ್ನು ಮಹಾರಾಜರ ಎದುರಿಗೆ ಹಾಡಿದರು. ಚರಣವು ಮನಸ್ಸಿಗೆ ನಾಟಿತು. ತಕ್ಷಣ ದರ್ಬಾರ್ ಭಕ್ಷಿಯವರನ್ನು ಕರೆಯಿಸಿ ಶೇಷಣ್ಣನವರ ಮನೆಗೆ ೮೦೦೦ ರೂಪಾಯಿಗಳನ್ನು ಕಳುಹಿಸಿಕೊಟ್ಟರು. ಆದರೆ ಆ ವೇಳೆಯಲ್ಲಿ ಶೇಷಣ್ಣನವರು ಮನೆಯಲ್ಲಿರಲಿಲ್ಲ. ಅವರು ಇದ್ದ ಸ್ಥಳಕ್ಕೆ ಸುದ್ದಿ ತಲುಪಿ ಮನೆಗೆ ಬಂದು ಹಣವನ್ನು ಸ್ವೀಕರಿಸಿ ಸುಬ್ಬಣ್ಣನವರ ಜೊತೆಯಲ್ಲಿ ಅರಮನೆಗೆ ಹೋಗಿ ಮಹಾರಾಜರ ದರ್ಶನ ಪಡೆದರು. ಮಹಾರಾಜರು ಸಂತೋಷದಿಂದ, ’ಹಣವನ್ನು ಸಾಲವಾಗಿ ಕೊಟ್ಟಿಲ್ಲ. ಸಂತೋಷದಿಂದ ನಿಮಗೇ ಕೊಟ್ಟಿದ್ದೇನೆ’ ಎಂದು ಹೇಳಿದರು.

ವೈಣಿಕ ಶಿಖಾಮಣಿ

ಆಶ್ರಿತ ಜನರ ಕಲ್ಪವೃಕ್ಷ ಎಂದು ಹೆಸರು ಪಡೆದಿದ್ದ ಚಾಮರಾಜ ಒಡೆಯರು ತಮ್ಮ ಮೂವತ್ತೆರಡನೆಯ ವಯಸ್ಸಿನಲ್ಲಿಯೇ ಅಕಾಲ ಮರಣಕ್ಕೀಡಾದರು.  ಇಡೀ ನಾಡೇ ಶೋಕಸಾಗರದಲ್ಲಿ ಮುಳುಗಿತು. ಶೇಷಣ್ಣನವರಿಗಂತೂ ಸಹಿಸಲಾರದಷ್ಟು ದುಃಖ ಉಂಟಾಯಿತು. ಮಹಾರಾಣಿಯವರನ್ನು ಭೇಟಿಯಾಗಿ ಅವರಿಗೆ ಸಮಾಧಾನ ಹೇಳಲು ಅರಮನೆಗೆ ಹೋದರು. ಆದರೆ ಅವರಿಗೆ ಸಮಾಧಾನ ಹೇಳುವುದಿರಲಿ, ತಮ್ಮ ದುಃಖವನ್ನೇ ತಡೆಯಲಾರದೆ ತಾವೇ ಅಳುತ್ತಾ ಕುಳಿತರು. ಕೊನೆಗೆ ಮಹಾರಾಣೀಯವರೇ ಸಮಾಧಾನ ಹೇಳಬೇಕಾಯಿತು.

ರಾಜಕುಮಾರ ನಾಲ್ವಡಿ ಕೃಷ್ಣರಾಜ ಒಡೆಯರಿಗೂ ವೀಣೆ ಪಾಠ ಹೇಳಿಕೊಡಲು ಮಹಾರಾಣಿಯವರೂ ಶೇಷಣ್ಣನವರನ್ನು  ನಿಯಮಿಸಿದರು. ಒಂದು ಶುಭದಿನ ಕೃಷ್ಣರಾಜ ಒಡೆಯರಿಗೆ ವೀಣಾಭ್ಯಾಸವನ್ನು ಆರಂಭಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರು ೧೯೦೨ರಲ್ಲಿ ಪಟ್ಟಕ್ಕೆ ಬಂದರು. ಅವರು ರಾಜ್ಯಾಡಳಿತವನ್ನು ವಹಿಸಿಕೊಂಡ ಮಾರನೇ ದಿನವೇ ವಿಶೇಷ ದರ್ಬಾರನ್ನು ನಡೆಸಿ ಶೇಷಣ್ಣನವರಿಗೆ ’ವೈಣಿಕ ಶಿಖಾಮಣಿ’ ಎಂಬ ಬಿರುದನ್ನು ನೀಡಿ ಎರಡು ಕೈಗಳಿಗೂ ರತ್ನಖಚಿತವಾದ ತೋಡಾಗಳನ್ನು ವಿಶೇಷವಾದ ಖಿಲ್ಲತ್ತನ್ನೂ ಕೊಟ್ಟು ಗೌರವಿಸಿದರು. ಅಷ್ಟೇ ಸಾಲದೆಂಬಂತೆ ಅರಮನೆಯ ಸಕಲ ಮರ್ಯಾದೆಗಳೊಡನೆ ಅವರ ಬಿರುದು ಬಾವಲಿಗಳ ಸಮೇತ ಮೆರವಣಿಗೆಯನ್ನು ಮಾಡಿಸಿದರು. ಹೀಗೆ ಪ್ರಶಸ್ತಿಗಳಲ್ಲಿಯೂ ಮಹೋನ್ನತವಾದ ಹಾಗೂ ಅನ್ವರ್ಥವಾದ ಪ್ರಶಸ್ತಿಯನ್ನು ಗಳಿಸಿದ ಕೀರ್ತಿ ಶೇಷಣ್ಣನವರದು.

ಕವಿ ಕಂಡ ವೈಣಿಕ

ವಿಶ್ವಕವಿ ರವೀಂದ್ರನಾಥ ಠಾಕೂರರು ಒಮ್ಮೆ ಮೈಸೂರಿಗೆ ಬಂದು ಮಹಾರಾಜರ ಅತಿಥಿಗಳಾಗಿದ್ದರು. ಅವರ ಮುಂದೆ ಶೇಷಣ್ಣನವರದೇ ಕಛೇರಿ. ನಾಲ್ಕು ಗಂಟೆಗಳ ಕಾಲ ನಡೆಯಿತು. ರವೀಂದ್ರರಿಗೆ ಕೇಳಿ ಸಾಕು ಎನಿಸಲಿಲ್ಲ. ಮಾರನೇ ದಿವಸ ಬೆಳಗ್ಗೆ ಏಳೂವರೆ ಗಂಟೆಗೆ ಶೇಷಣ್ಣನವರ ಮನೆಗೆ ಬಂದರು. ಅವರ ಮನೆಯಲ್ಲಿನ ದಿವ್ಯವಾದ ಸಂಗೀತ ವಾತಾವರಣವನ್ನು ನೋಡಿ ಬೆರಗಾದರು. ಶೇಷಣ್ಣನವರು ರವೀಂದ್ರ ಅಪೇಕ್ಷೆಯಂತೆ ಗಂಟೆಗಟ್ಟಲೆ ವೀಣೆಯನ್ನು ನುಡಿಸಿ ಅವರನ್ನು ತೃಪ್ತಿಪಡಿಸಿದರು. ರವೀಂದ್ರರು ಶೇಷಣ್ಣನವರನ್ನು ಆಲಂಗಿಸಿ, ಇದು ದೇವಲೋಕದ ಸಂಗೀತ, ಇಂತಹ ಸಂಗೀತವನ್ನು ಹಿಂದೆ ಕೇಳಿಲ್ಲ, ಮುಂದೆಯೂ ಕೇಳುವುದು ಸಾಧ್ಯವಿಲ್ಲ. ಎಂದು ಹೇಳಿ ಅವರ ಎರಡು ಕೈಗಳನ್ನು ಕಣ್ಣಿಗೆ ಒತ್ತಿಕೊಂಡರು. ಶೇಷಣ್ಣನವರ ನಾದಾನುಸಂಧಾಮನದ ಗಂಗೆಯಲ್ಲಿ ಮಿಂದ ವಿಶ್ವಕವಿ ರವೀಂದ್ರರು  ಆ ದಿನ ಮತ್ತಾವ ಕಾರ್ಯಕ್ರಮಗಳನ್ನೂ ಇಟ್ಟುಕೊಳ್ಳಲಿಲ್ಲ. ಬೆಳಿಗ್ಗೆ ಕೇಳಿದ ಸಂಗೀತವನ್ನೇ ಮೆಲುಕು ಹಾಕುತ್ತಾ ಇಡೀ ದಿನವನ್ನು ಕಳೆದರು.

ಕಡಲಾಚೆಗೆ ಕೀರ್ತಿ

ಶೇಷಣ್ಣನವರ ಸಂಗೀತಕ್ಕೆ ಮಾರು ಹೋಗಿದ್ದವರು ಭಾರತೀಯರು ಮಾತ್ರ ಅಲ್ಲ. ಮೈಸೂರಿನ  ಮಹಾರಾಜರ ಅತಿಥಿಗಳಾಗಿ ಬಂದ ಅನೇಕ ಮಂದಿ ಪಾಶ್ಚಾತ್ಯ ಅಧಿಕಾರಿಗಳೂ ಇತರ ಕೀರ್ತಿವಂತ ಪಾಶ್ಚಾತ್ಯರೂ ಶೇಷಣ್ಣನವರ ವೀಣಾ ವಾದನವನ್ನು ಕೇಳುತ್ತಿದ್ದರು. ಭಾರತೀಯ ಸಂಗೀತವೆಂದರೆ ಏನೆಂಬುದೇ ಗೊತ್ತಿಲ್ಲದ ಆ ವಿದೇಶೀಯರು ಸಹ ಶೇಷಣ್ಣ ನವರ ವೀಣಾವಾದನಕ್ಕೆ ಮಾರು ಹೋಗಿದ್ದರು.

ಬ್ರಿಟನ್ನಿನ ಚಕ್ರವರ್ತಿ ಐದನೆಯ ಜಾರ್ಜ್‌ರವರು ದೆಹಲಿಗೆ ಬಂದು ಒಂದು ರಾಜಸಭೆ ನಡೆಸಿದರು. ಶೇಷಣ್ಣನವರೂ ಆ ಸಭೆಗೆ ಆಹ್ವಾನಿತರಾಗಿದ್ದರು. ಅವರು ಜಾರ್ಜ್‌ರ  ಸಮ್ಮುಖದಲ್ಲಿ ವೀಣೆಯನ್ನು ನುಡಿಸಿ ಅವರ ಹೃದಯವನ್ನು ಗೆದ್ದರು. ಜಾರ್ಜ್‌ ದೊರೆ ಶೇಷಣ್ಣನವರಿಗೆ ವಿಶೇಷ ಸನ್ಮಾನವನ್ನು ಮಾಡಿದರು. ಅಷ್ಟೇ ಅಲ್ಲ, ತಾವು ಕೇಳಿದ ಅಮೋಘ ಸಂಗೀತದ ಸವಿನೆನಪಿಗಾಗಿ ಅವರ ಒಂದು ಭಾವಚಿತ್ರವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋದರು. ಆ ಭಾವಚಿತ್ರವನ್ನು ಬಕಿಂಗಂ ಅರಮನೆಯ ಕಲಾಭವನದಲ್ಲಿ ಈಗಲೂ ನೋಡಬಹುದು. ಪ್ರಾಯಶಃ ಇಂತಹ ಗೌರವ ಮತ್ತೆ ಯಾವ ಭಾರತೀಯ ಸಂಗೀತ ವಿದ್ವಾಂಸರಿಗೂ ಲಭ್ಯವಾಗಿಲ್ಲ.

ದೇಶನಾಯಕರೊಡನೆ ವೈಣಿಕ ಶಿಖಾಮಣಿ

ಶೇಷಣ್ಣನವರ ತುಂಬು ಜೀವನದಲ್ಲಿ ಅನೇಕ ಮರೆಯಲಾಗದ ಘಟನೆಗಳು ನಡೆದವು. ಅವುಗಳಲ್ಲಿ ಕೆಲವನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ೧೯೨೪ರಲ್ಲಿ ಬೆಳಗಾವಿಯಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಮಹಾಧಿವೇಶನ ನಡೆಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅಧ್ಯಕ್ಷರು, ಬೆಳಗ್ಗೆ ಚರ್ಚೆಗಳಾದ ನಂತರ ವಿರಾಮ ಕಾಲವಿರುತ್ತಿತು. ಆಗ ಹಿರಿಯ ನಾಯಕರಿಗೆ ಮೈಸೂರಿನ ವೀಣಾವಾದನದ ಪರಿಚಯವನ್ನು ಮಾಡಿಕೊಡುವುದಕ್ಕೋಸ್ಕರ ವ್ಯವಸ್ಥಾಪಕರು ಶೇಷಣ್ಣನವರನ್ನು ಬೆಳಗಾವಿಗೆ ಬರಮಾಡಿಕೊಂಡರು. ಆಗ ಶೇಷಣ್ಣನವರಿಗೆ ಎಪ್ಪತ್ತೆರಡು ವರ್ಷ ವಯಸ್ಸು! ಬೆಳಿಗ್ಗೆ ತಡೆಯಿಲ್ಲದ ಕಾರ್ಯಕ್ರಮ ನಡೆದು ಮಧ್ಯಾಹ್ನ ಭೋಜನವಾದ ನಂತರ ಶೇಷಣ್ಣನವರ ವೀಣಾ ಕಛೇರಿ ನಡೆಯಿತು. ಗಾಂಧೀಜಿಯವರು ಅರ್ಧ ಗಂಟೆ ಮಾತ್ರವೆಂದು ಕಾಲಾವಧಿ ಹಾಕಿಕೊಟ್ಟಿದ್ದರು. ಅರ್ಧ ಗಂಟೆಯಾದ ನಂತರ ಶೇಷಣ್ಣನವರು ವೀಣೆ ನುಡಿಸುವುದನ್ನು ನಿಲ್ಲಿಸಿ, ’ಮುಗಿಸಲೇ? ಎಂದು ಕೇಳಿದರು. ಗಾಂಧೀಜಿಯವರು ಮುಗುಳು ನಗೆಯನ್ನು ಬೀರಿ,”ಬೇಡ ಮುಂದುವರೆಸಿರಿ’ ಎಂದರು. ಒಂದು ಗಂಟೆಯಾಯಿತು, ಒಂದೂವರೆ ಗಂಟೆಯಾಯಿತು. ಕೇವಲ ಅರ್ಧ ಗಂಟೆಯೆಂದು ನಿಗದಿಯಾಗಿದ್ದ ಶೇಷಣ್ಣನವರ ಕಛೇರಿಯು ಎರಡು ಗಂಟೆಗಳ ಕಾಲ ನಡೆಯಿತು. ಮತ್ತೊಮ್ಮೆ ಗಾಂಧೀಜಿಯವರ ಬಿಡಾರದಲ್ಲಿಯೇ ಸುಮಾರು ಒಂದು ಗಂಟೆ ಕಾಲ ಕಛೇರಿ ನಡೆಯಿತು.  ಅಂದೂ ಅರ್ಧ ಗಂಟೆಯೆಂದೇ ನಿಗದಿಯಾಗಿದ್ದಿತು. ಗಾಂಧೀಜಿಯವರು ಮೊದಲು ಕಾರ್ಯಕ್ರಮವನ್ನು ಹಾಕಿಕೊಂಡಿದ್ದ ಪ್ರಕಾರ ಅರ್ಧ ಗಂಟೆ ಶೇಷಣ್ಣನವರ ವೀಣೆಯನ್ನು ಕೇಳಿ ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿದ್ದಿತು. ಆದರೆ ಶೇಷಣ್ಣನವರ ವಾದಕ್ಕೆ ಮನಸೋತು ಗಾಂಧೀಜಿಯವರು ಕುಳಿತೇ ಇದ್ದರು. ಗಾಂಧೀಜಿ ತಾವು ಗೊತ್ತು ಮಾಡಿಕೊಂಡ ಕಾರ್ಯಕ್ರಮವನ್ನು ಮಾರ್ಪಡಿಸುವವರೇ ಅಲ್ಲ. ಅಂದು ಅವರು ಸಂಗೀತ ಕಛೇರಿಯಲ್ಲಿ ಕುಳಿತದ್ದು ಎಲ್ಲರಿಗೂ ಆಶ್ಚರ್ಯ. ಗಾಂಧೀಜಿಯವರಿಗೆ ’ಮುಂದಿನ ಕಾರ್ಯಕ್ರಮಕ್ಕೆ ಹೊತ್ತಾಯಿತು’ ಎಂದು ಒಬ್ಬರು ನೆನಪು ಮಾಡಿಕೊಟ್ಟರೂ ಮೌನವ್ರತದಲ್ಲಿದ್ದ ಬಾಪೂಜಿ ’ಹೊತ್ತಾದರೂ ಚಿಂತೆಯಿಲ್ಲ”ಎಂದು ಚೀಟಿ ಬರೆದುಕೊಟ್ಟರು.

ಕಾಂಗ್ರೆಸ್ ಅಧಿವೇಶನ ನಡೆಯುತ್ತಿದ್ದಾಗ ದೇಶದ ಹಿರಿಯ ನಾಯಕಿ ಸರೋಜಿನಿ ನಾಯ್ಡು ಶೇಷಣ್ಣನವರ ಬಿಡಾರಕ್ಕೆ ಬಂದು ಅವರ ವೀಣಾವಾದನವನ್ನು ಕೇಳಿದರು. ಆಗಲೇ ಜವಾಹರಲಾಲ್ ನೆಹರು ಅವರು ಬಂದು ಒಳಕ್ಕೆ ಬರಬಹುದೇ? ಎಂದು ಚೀಟಿ ಕಳಹಿಸಿದರು. ಅವರೂ ಒಳಕ್ಕೆ ಬಂದರು. ಹೀಗೆ ದೇಶದ ನಾಯಕರೆಲ್ಲ ಬಂದು ಒಂದು ಗಂಟೆ ವೀಣಾವಾದನದಲ್ಲಿ ಮೈಮರೆತರು. ಅಂದು ಆ ವಾದನವನ್ನು ಕೇಳಿದ ಮದನಮೋಹನ  ಮಾಳವೀಯ ಶೇಷಣ್ಣನವರನ್ನು ಕಾಶಿಗೆ ಆಹ್ವಾನಿಸಿದರು.

ಒಂದು ಸ್ವಾರಸ್ಯದ ಪ್ರಸಂಗ

ವೀಣೆಯನ್ನು ನುಡಿಸಲು ಕುಳಿತರೆ ಶೇಷಣ್ಣನವರು ಪ್ರಪಂಚವನ್ನೆ ಮರೆಯುತ್ತಿದ್ದರು. ಸಂಗೀತಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ಬಿಡುತ್ತಿದ್ದರು. ಒಮ್ಮೆ ಒಂದು ಸ್ವಾರಸ್ಯವಾದ ಸಂಗತಿ ನಡೆಯಿತು. ಮದರಾಸಿನ ತಿರುವಲ್ಲಿಕ್ಕೇಣಿಯಲ್ಲಿ ಪಾರ್ಥಸಾರಥಿಸ್ವಾಮಿ ಸಂಗೀತ ಸಭೆಯಲ್ಲಿ ಶೇಷಣ್ಣವರ ವೀಣಾವಾದನ ನಡೆಯಿತು. ಸಭೆಯಲ್ಲಿ ಎಳ್ಳು ಹಾಕುವುದಕ್ಕೂ ಸ್ಥಳವಿಲ್ಲದಷ್ಟು ಜನ. ಸುಮಾರು ಅರ್ಧಗಂಟೆ ಕಛೇರಿ ನಡೆದಿರಬಹುದು. ಇದಕ್ಕಿದ್ದಂತೆ ಒಂದು ಭಾರಿ ನಾಗರಹಾವು ಶೇಷಣ್ಣ ನುಡಿಸುತ್ತಿದ್ದ ವೇದಿಕೆಯೇರಿ ಅವರ ಮುಂದೆ ಹೆಡೆ ಆಡಿಸುತ್ತಿತ್ತು. ಶೇಷಣ್ಣನವರು ಕಣ್ಣುಮುಚ್ಚಿ ಹೊರಗಿನ ಪ್ರಪಂಚದ ಅರಿವೇ ಇಲ್ಲದೆ ಸಂಗೀತದಲ್ಲೇ ಮುಳುಗಿದರು. ಹಾವು ಬಂದದೂ ಅವರಿಗೆ ಅರಿವಿಲ್ಲ. ಸಭೆಯಲ್ಲಿ ಜನರು ಕಿಕ್ಕಿರಿದು ನೆರೆದದ್ದು ಅರಿವಿಲ್ಲ. ಮೃದಂಗ ವಿದ್ವಾಂಸರು ಹಾವನ್ನು ಕಂಡ ಒಡನೆಯೇ ಹೆದರಿ ಓಡಿದರು. ಸಂಗೀತ ಕೇಳುತ್ತಿದವರಲ್ಲಿ ಗುಸುಗುಸು, ಗಾಬರಿ.”ಶೇಷಣ್ಣನವರ ಗತಿ ಏನು?’ ಎಂದು ಎಲ್ಲರೂ ತವಕ ಪಡುತ್ತಿದ್ದರು. ಆಗ ಸಭಿಕರಲ್ಲಿ ಒಬ್ಬರು ಎದ್ದುನಿಂತು ಕೈ ಜೋಡಿಸಿ. ದಯವಿಟ್ಟು ಯಾರೂ ಗಲಾಟೆ ಮಾಡಬೇಡಿ. ಈ ಹಾವು ಸಾಮಾನ್ಯವಲ್ಲ. ಸಾಕ್ಷಾತ್ ಸುಬ್ರಹ್ಮಣ್ಯನೇ ಹಾವಾಗಿ ಕಾಣಿಸಿಕೊಂಡು ಶೇಷಣ್ಣನವರ ದೈವಿಕ ಸಂಗೀತವನ್ನು ಕೇಳುವುದಕ್ಕೆ ಬಂದಿದ್ದಾನೆ. ಯಾರಿಗೂ ಏನೂ ಅಪಾಯವಿಲ್ಲ. ನಿಶ್ಯಬ್ಧವಾಗಿ ಕೇಳಿ ಎಂದು ಪ್ರಾರ್ಥಿಸಿಕೊಂಡರು. ಗಲಾಟೆ ನಿಂತಿತು. ಜನರು ಸಂಗೀತವನ್ನು ಕೇಳುತ್ತಾ ಕುಳಿತರು. ಒಂದು ಗಂಟೆಯಾದ ಅನಂತರ ಹಾವು ತಾನಾಗಿಯೇ ಮಾಯವಾಯಿತು.

ಹಾವು ಬಂದದ್ದು ಶೇಷಣ್ಣನವರಿಗೆ ಅರಿವಿಲ್ಲ

ಈ ಪ್ರಸಂಗದಿಂದ ಒಂದು ಒಳ್ಳೆಯದು ಆಯಿತು. ಅಂದಿನ ಕಛೇರಿಯಲ್ಲಿ ಶ್ರೀನಿವಾಸಯ್ಯಂಗಾರ‍್ರೆಂಬ ಧನಿಕ ರಸಿಕರೂ ಇದ್ದರು. ಅವರು ತಮ್ಮ ಜಿಪುಣತನಕ್ಕೆ ಹೆಸರಾದವರು. ಹಾವಿನ ಪ್ರಸಂಗವನ್ನು ಕಣ್ಣಾರೆ ಕಂಡರು. ಅದು ಅವರ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮವನ್ನು ಬೀರಿತು. ಮಾರನೇ ದಿನವೇ ಶೇಷಣ್ಣನವರ ಬಿಡಾರಕ್ಕೆ ಬಂದು ತಾವು ಮಾಡಿಸಿ ತಂದಿದ್ದ ಪಚ್ಚೇಮಣಿಯ ನಾಲಿಗೆಯುಳ್ಳ ಬೆಳ್ಳಿ ನಾಗರಹಾವನ್ನು ಶೇಷಣ್ಣನವರ ವೀಣೆಗೆ ಜೋಡಿಸಿ ಅವರಿಗೆ ಕಲಾಬತ್ತಿನ ಮಗುಟವನ್ನು ಹೊದಿಸಿದರು.

ವಿದ್ವತ್ತಿನ ವೈಶಾಲ್ಯ

ಶೇಷಣ್ಣನವರಿಗೆ ಅನೇಕ ವಾದ್ಯಗಳಲ್ಲಿ ಪರಿಶ್ರಮವಿತ್ತು. ಅವರು ಜಲತರಂಗ ನುಡಿಸುವುದನ್ನು ಕಲಿತದ್ದು ಒಂದು ಸ್ವಾರಸ್ಯದ ಸಂಗತಿ. ಮೌಲಾನಾ ಬಕ್ಷ್ ಎಂಬ ಸಂಗೀತ ವಿದ್ವಾಂಸ ಬರೋಡದಿಂದ ಮೈಸೂರು ಮಹಾರಾಜರ ಆಸ್ಥಾನಕ್ಕೆ ಬಂದ, ಜಲತರಂಗ ನುಡಿಸಿದ. ಅವನ ವಾದನವನ್ನು ಕೇಳಿ ಮಹಾರಾಜರು ತುಂಬ ಸಂತೋಷಪಟ್ಟರು. ’ನೋಡಿದೆಯಾ ಶೇಷಣ್ಣ ಹೇಗಿದೆ ಈ ವಾದ್ಯ” ಎಂದರು

’ಅಪ್ಪಣೆಯಾದರೆ ಈ ಸಂಜೆ ನಾನು ನುಡಿಸುತ್ತೇನೆ”ಎಂದರು ಶೇಷಣ್ಣ

ಮಹಾರಾಜರಿಗೆ ತುಂಬ ಆಶ್ಚರ್ಯ. ಮೌಲಾನಾ ಬಕ್ಷ್ ಗೆ ಹೇಳಿ ವಾದ್ಯವನ್ನು ಅರಮನೆಯುಲ್ಲಿ ಇರಿಸಿಕೊಂಡರು. ಶೇಷಣ್ಣನವರು ಸಂಜೆ ಅದನ್ನು ಮಹಾರಾಜರೆದುರಿಗೆ ಸೊಗಸಾಗಿ ನುಡಿಸಿಯೂ ಬಿಟ್ಟರು.

ಶೇಷಣ್ಣನವರು ಪಿಟೀಲು, ಪಿಯಾನೊ ಮತ್ತು ಸ್ವರಬತ್ತು ಎಂಬ ವಾದ್ಯಗಳನ್ನು ನುಡಿಸುತ್ತಿದ್ದರು.

ಶಿಷ್ಯವೃಂದ

ನಮ್ಮ ನಾಡಿನ ಸಂಗೀತ ಕ್ಷೇತ್ರದಲ್ಲಿ ವೀಣೆ ಶೇಷಣ್ಣನವರು ಮತ್ತು ಬಿಡಾರಾಂ ಕೃಷ್ಣಪ್ಪನವರು ಎರಡು ಮಹಾ ವೃಕ್ಷಗಳಂತೆ. ಅಂದರೆ ಆ ಮರಗಳ ನೆರಳಿನಲ್ಲಿ ಆಶ್ರಯ ಪಡೆದು ಎಷ್ಟೋ ಮಂದಿ ಶಿಷ್ಯರು ಪ್ರಗತಿ ಪಡೆದರು. ಖ್ಯಾತ ಕಲಾವಿದ ವೆಂಕಟಪ್ಪ, ಮದರಾಸಿನ ಶರ್ಮದೇವಿ ಸುಬ್ರಹ್ಮಣ್ಯ ಶಾಸ್ತ್ರಿ, ವೆಂಕಟಗಿರಿಯಪ್ಪ, ಭಾರತಿ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ತಿರುಮಲೆ ರಾಜಮ್ಮನವರು, ಸ್ವರಮೂರ್ತಿ ವಿ.ಎನ್., ರಾಯರು, ಎಚ್. ಭೀಮರಾಯರು, ಎ.ಎಸ್. ಚಂದ್ರಶೇಖರಯ್ಯ ಮತ್ತು ಶ್ರೀರಂಗದ ಡಿ. ರಾಮಸ್ವಾಮಿ ಅಯ್ಯಂಗಾರ್ ಇವರು ಶೇಷಣ್ಣನವರ ಬೃಹತ್ ಶಿಷ್ಯವೃಂದದಲ್ಲಿ ಪ್ರಮುಖರು. ಸ್ವರಮೂರ್ತಿ ವಿ.ಎನ್. ರಾಯರ ಬಳಿ ಶೇಷಣ್ಣನವರು ನುಡಿಸುತ್ತಿದ್ದ ವೀಣೆ (ಬೆಳ್ಳಿ ಹಾವಿನ ಸಮೇತ) ಇದೆ. ಶೇಷಣ್ಣನವರು ರಚಿಸಿದ ಸ್ವರಜತಿಗಳು, ಕೃತಿಗಳು ಮತ್ತು ತಿಲ್ಲಾನಗಳನ್ನು ಮೈಸೂರಿನ ಸಂಗೀತ ಕಲಾಭಿವರ್ಧಿನೀ ಸಭೆಯು ಪರಿಷ್ಕರಿಸಿ ಪ್ರಕಟಿಸಿದೆ.

ಶ್ರೀರಾಮ ಸನ್ನಿಧಿಗೆ

ಶೇಷಣ್ಣನವರು ೭೪ ವರ್ಷಗಳ ಕಾಲ ಬದುಕಿದ್ದರು. ಜ್ಯೋತಿಷ್ಯ ಶಾಸ್ತ್ರ ಗೊತ್ತಿದ್ದುದರಿಂದ ತಾವು ಕಾಲವಾಗುವ ದಿನವನ್ನು ಮೊದಲೇ ತಿಳಿದಿದ್ದರು ಎಂದು ಹೇಳುತ್ತಾರೆ. ಅವರಿಗೆ ಸಾವನ್ನು ಎದುರಿಸಬೇಕಲ್ಲ ಎಂಬ ಯೋಚನೆ ಇರಲಿಲ್ಲ. ಆದರ ತಮ್ಮನ್ನು ಕಾಪಾಡಿದ ವೀಣೆಯನ್ನು ಬಿಟ್ಟು ಹೋಗಬೇಕಲ್ಲ ಎಂದು ವ್ಯಥೆ ಪಡುತ್ತಿದ್ದರು. ೧೯೨೬ ರ ಜುಲೈ ೨೫ ರಂದು ಬೆಳಿಗ್ಗೆ ೮-೪೫ ಗಂಟೆಗೆ ಶ್ರೀರಾಮನಾಮಸ್ಮರಣೆ ಮಾಡುತ್ತ ಕಣ್ಣು ಮುಚ್ಚಿದರು. ಅವರ ನಿಧನದ ವಾರ್ತೆ ಕೇಳಿ ಇಡೀ ನಾಡೇ ಶೋಕಸಾಗರದಲ್ಲಿ ಮುಳುಗಿತು.

ಜೀವನದಲ್ಲಿ ಬೇವು

ಅಸಾಧಾರಣ ಸಂಪತ್ತು, ವೈಭವಗಳನ್ನು ಕಂಡರು ಶೇಷಣ್ಣನವರು. ಆದರೆ ಅವರು ಅಪಾರ ದುಃಖವನ್ನೂ ಕಂಡಿದ್ದರು. ಶೇಷಣ್ಣನವರ ತಂದೆ ಚಿಕ್ಕರಾಮಪ್ಪನವರು ಮಗನಿಗೆ ಹನ್ನೆರಡು ವರ್ಷ ವಯಸ್ಸಾದಾಗ ವಿಧಿವಶರಾದರು. ಅಷ್ಟು ಹೊತ್ತಿಗೆ ಶೇಷಣ್ಣನವರಿಗೆ ಮದುವೆಯಾಗಿತ್ತು. ಹೆಂಡತಿ ಕಾಳಮ್ಮನವರಿಗೆ ಇಬ್ಬರು ಮಕ್ಕಳು. ಶೇಷಣ್ಣನವರ ದುರದೃಷ್ಟ ಹೆಂಡತಿಯೂ ಉಳಿಯಲಿಲ್ಲ, ಮಕ್ಕಳೂ ಉಳಿಯಲಿಲ್ಲ.

ಶೇಷಣ್ಣನವರ ಎರಡನೇ ಹೆಂಡತಿಗೆ ಇಬ್ಬರು ಮಕ್ಕಳು. ಈ ಹೆಂಡತಿಯೂ ಮಕ್ಕಳೂ ಉಳಿಯಲಿಲ್ಲ.

ಎಲ್ಲ ಕಷ್ಟಗಳನ್ನೂ ದುಃಖಗಳನ್ನೂ(ನುಂಗಿಕೊಂಡು ಸಂಗೀತದಲ್ಲಿ ತಮ್ಮ ಬಾಳನ್ನು ಬೆರಸಿಬಿಟ್ಟರು ಶೇಷಣ್ಣನವರು. ಅವರಿಗೆ ವೀಣೆ ಒಂದು ಸಂಗೀತ ವಾದ್ಯವಾಗಿರಲಿಲ್ಲ. ತಮ್ಮನ್ನೂ ಈ ಜಗತ್ತನ್ನೂ ಮರೆತು ದಿವ್ಯಶಕ್ತಿಯೊಂದರಲ್ಲಿ ಲೀನವಾಗಿಸುವ ದಿವ್ಯ ಸಾಧನವಾಗಿತ್ತು. ಸಂಗೀತ ಬರಿಯ ಸಂತೋಷದ ಸಾಧನವಾಗಿರಲಿಲ್ಲ. ತಮ್ಮ ಚೇತನವನ್ನೇ ಮೇಲೆತ್ತಿ, ಮಾತುಗಳಿಂದ ವರ್ಣಿಸಲು ಸಾಧ್ಯವಾಗದ ದಿವ್ಯ ಅನುಭವವೊಂದನ್ನು ತಂದುಕೊಡುವ ಮಹಾಶಕ್ತಿಯಾಗಿತ್ತು.

ಔದಾರ್ಯ

ಶೇಷಣ್ಣನವರ ಔದಾರ್ಯ ಅಸಾಧಾರಣವಾದ್ದು. ಅವರ ಜೀವಿತ ಕಾಲದಲ್ಲಿ ಅವರಿಗೆ ಬಂದ ಬಹುಮಾನಗಳು, ಉಡುಗೊರೆಗಳಿಗೆ ಲೆಕ್ಕವಿಲ್ಲ. ಪಲ್ಲಕ್ಕಿ, ನಲವತ್ತೆಂಟು ತೋಡಾಗಳು ಅಲ್ಲದೆ ಲೆಕ್ಕವಿಲ್ಲದಷ್ಟು ಪದಕಗಳು, ಉಂಗುರಗಳು, ವಸ್ತ್ರಗಳು ಅವರಿಗೆ ಬಂದಿದ್ದವು. ಎಲ್ಲವನ್ನೂ ದಾನ ಮಾಡಿಬಿಟಿದ್ದರು. ರಾಮೋತ್ಸವದ ಕಾಲದಲ್ಲಿಯೂ ಇತರ ದಿನಗಳಲ್ಲಿಯೂ ಅವರ ಮನೆಯಲ್ಲಿ ಸಂಗೀತ ಕಛೇರಿ. ಸ್ವತಃ ಘನವಿದ್ವಾಂಸರಾದ  ವೈಣಿಕ ಶಿಖಾಮಣಿಗಳು ಇತರ ಸಂಗೀತ ವಿದ್ವಾಂಸರನ್ನು ಆಹ್ವಾನಿಸುವರು. ಅವರಿಗೆ ಸನ್ಮಾನ ಮಾಡಬೇಕು. ಕೈಯಲ್ಲಿ ಹಣವಿಲ್ಲದಿದ್ದರೆ ಸಾಲ ತಂದಾದರೂ ಬಹುಮಾನ ಕೊಡಬೇಕು. ವಿದ್ವತ್ತು ಎಂದರೆ ಅಂತಹ ಆದರ ಅವರಿಗೆ. ಒಮ್ಮೊಮ್ಮೆ ಸಂಗೀತ ಕಛೇರಿ, ಹರಿಕಥೆ ಮಾಡಲು ಬಂದವರು ಹೆಚ್ಚು ಸಾಮರ್ಥ್ಯ ಇಲ್ಲದವರು. ಅವರ ಸಂಗೀತ ಅಥವಾ ಹರಿಕಥೆಯನ್ನು ಕೇಳುವುದು ಕಷ್ಟವಾಗುತ್ತಿತ್ತು. ಆದರೆ ಶೇಷಣ್ಣನವರು ತಾಳ್ಮೆಯಿಂದ ಕುಳಿತು ಕೇಳುತ್ತಿದ್ದರು. ಇತರರು ನಗುತ್ತ ಗಲಾಟೆ ಮಾಡುತ್ತಿದ್ದರೆ ಅವರಿಗೆ ಕೋಪ, ಅವರ ಕೋಪಕ್ಕೆ ಹೆದರಿ ಇತರರೂ ತಾಳ್ಮೆಯಿಂದ ಕೇಳುವಂತೆ ಆಗುತ್ತಿತ್ತು. ತಮಗಿಂತ ವಯಸ್ಸಿನಲ್ಲಿ ಕಿರಿಯರಾದವರ ಸಂಗೀತವನ್ನು ಕೇಳಿ ಹೊಗಳುತ್ತಿದ್ದರು. ಕೊಳಲನ್ನು ನುಡಿಸುವುದನ್ನು ಅಭ್ಯಾಸ ಮಾಡಿದ ಮದುವಣಿಗ ತರುಣರೊಬ್ಬರು ಶೇಷಣ್ಣನವರನ್ನು ಮದುವೆಗೆ ಆಹ್ವಾನಿಸಿದರು. ಮದುವೆಯ ಮರುದಿನ ಆತನ ಗೆಳೆಯರೂ ಇತರರೂ ಸೇರಿದ್ದಾಗ ವೀಣೆಯನ್ನು ನುಡಿಸುವಂತೆ ಆತ ಪ್ರಾರ್ಥಿಸಿದ. ನಾನು ಬಂದಿರುವುದು ಮಧೂವರರನ್ನು ನೋಡುವುದಕ್ಕೆ, ನೀನು ಕೊಳಲನ್ನು ನುಡಿಸು ಎಂದುಬಿಟ್ಟರು ಶೇಷಣ್ಣನವರು. ತಾವೇ ಕುಳಿತು ತರುಣನ ಕೊಳಲುವಾದನ ಕೇಳಿ,”ಭೇಷ್ ಭೇಷ್’ ಎನ್ನುತ್ತಾ ಪ್ರೋತ್ಸಾಹ ಕೊಟ್ಟರು. ವಾಸುದೇವಾಚಾರ್ಯರು ನಮ್ಮ ದೇಶದ ಅತ್ಯಂತ ಹಿರಿಯ ಸಂಗೀತಗಾರರಲ್ಲಿ ಒಬ್ಬರು. ಅವರು ತರುಣರಾಗಿದ್ದಾಗ ಗುರುಗಳ ಬಳಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿಗೆ ಬಂದವರೇ ಶೇಷಣ್ಣನವರ ಮನೆಗೆ ಹೋಗಿ ಆಶೀರ್ವಾದ ಪಡೆದರು. ವಾಸುದೇವಾಚಾರ್ಯರಿಗೆ ಮೈಸೂರಿನಲ್ಲಿ ಮೊದಲ ಬಾರಿ ಸನ್ಮಾನವಾದಾಗ ಶೇಷಣ್ಣನವರು ತಮಗೆ ಬಂದಿದ್ದ ತೋಡಾವನ್ನೇ ಕೊಟ್ಟುಬಿಟ್ಟರು!

ವಿನಯ

ಶಿಷ್ಯರಲ್ಲಿ ಅವರದು ಅಪಾರ ಮಮತೆ. ಅವರ ಶಿಸ್ತಿನಿಂದ ಅವರು ಕಠಿಣ ಮನಸ್ಸಿನವರೇನೋ ಎಂದು ತೋರುತ್ತಿತ್ತು. ಒಮ್ಮೆ ಅವರ ಶಿಷ್ಯೆಯೊಬ್ಬರು ಪಾಠ ಒಪ್ಪಿಸುವಾಗ ತಪ್ಪಿದರು. ’ನಾಳೆ ಸರಿಯಾಗಿ ಅಭ್ಯಾಸ ಮಾಡಿ ಒಪ್ಪಿಸುತ್ತೇನೆ ಗುರುಗಳೇ” ಎಂದರು. ಅದೆಲ್ಲಾ ಆಗುವುದಿಲ್ಲ. ಸಂಜೆಯವರೆಗೆ ಇಲ್ಲಿಯೇ ಅಭ್ಯಾಸ ಮಾಡು. ನಾನು ಈಗ ಸ್ನೇಹಿತರ ಮನೆಗೆ ಹೋಗಿ ಬರುತ್ತೇನೆ. ನಾನು ಬರುವವರೆಗೆ ಅಭ್ಯಾಸ ಮಾಡಿ, ಒಪ್ಪಿಸಿ ಮನೆಗೆ ಹೋಗಬೇಕು ’ಎಂದರು ಸರಿ, ಸಂಜೆಯವರಿಗೆ ಶಿಷ್ಯೆ ಗುರುಗಳ ಮನೆಯಲ್ಲೆ ಅಭ್ಯಾಸ ನಡೆಸಿದರು. ಆರು ಗಂಟೆಗೆ ಹಿಂದಕ್ಕೆ ಬಂದ ಶೇಷಣ್ಣನವರು ಶಿಷ್ಯೆಯ ಸಂಗೀತವನ್ನು ಕೇಳಿ ಮೆಚ್ಚಿದರು. ಮೆಚ್ಚಿಗೆಯ ಮಾತನ್ನು ಆಡಿದರು.’ ನೋಡಿದೆಯಾ? ಕಷ್ಟಪಡದೆ ಪಟ್ಟು ಹಿಡಿಯದೆ ಈ ವಿದ್ಯೆ ಹೇಗೆ ಬರುತ್ತದೆ” ಎಂದರು. ಶಿಷ್ಯೆ ತಿಂಡಿ ಕಾಫಿ ಕೊಟ್ಟರು. ನಿನ್ನನ್ನು ಆಗಲೇ ಮನೆಗೆ ಕಳುಹಿಸಿಬಿಟ್ಟಿದ್ದರೆ ರಾತ್ರಿ ನನಗೆ ನಿದ್ರೆ ಬರುತ್ತಿರಲಿಲ್ಲ. ಎಂದರು. ತಮ್ಮಲ್ಲಿ ಕಲಿಯುವವರ ವಿದ್ಯೆ ಪರಿಪೂರ್ಣವಾಗಬೇಕು ಎಂದೇ ಅವರ ಆಸೆ. ಅದರಿಂದ ಹೊರನೋಟಕ್ಕೆ ಕಠಿಣ ಎಂದು ಕಾಣುವ ಮಮತೆ.

ಅದ್ಭುತ ಸಂಗೀತ ಪ್ರಭುವಾಗಿದ್ದ ಶೇಷಣ್ಣನವರದು ನಿರಂಹಕಾರದ ಸ್ವಭಾವ. ವಿದ್ವಾಂಸರೊಬ್ಬರು ಅವರನ್ನು ಕೇಳಿದರಂತೆ: ಇಪ್ಪತ್ತೆರಡು ಶ್ರುತಿಗಳು ಎಂದು ಕೆಲವರು ಹೇಳುತ್ತಾರೆ, ಇಪ್ಪತ್ತನಾಲ್ಕು ಎಂದು ಕೆಲವರು ಹೇಳುತ್ತಾರೆ. ಯಾವುದು ಸರಿ? ಶೇಷಣ್ಣನವರ ಹೇಳಿದರು : ’ಒಟ್ಟಿನ ಮೇಲೆ ಇಪ್ಪತ್ತೆರಡು ಇನ್ನೆರಡು ಯಾವುದು? ಅದನ್ನು ಯಾರು ಕಂಡು ಕೊಂಡಿದ್ದರೋ ಏನೋ, ಹಾಗೆ ಹೇಳಿದವರು ಒಂದು ವೇಳೆ ಕಂಡಿದ್ದೇ ಹೇಳೀದ್ದಾರು’ ಅಗಾಧ ವಿದ್ಯೆ, ಅನುಭವ ಇದ್ದರೂ ಅಷ್ಟು ವಿನಯ ಅವರ‍ದು. ಬರೋಡಾ ಮಹಾರಾಜರು ಅವರನ್ನು ಪಲ್ಲಕ್ಕಿಯಲ್ಲಿ ಕೂಡಿಸಿ ಮೆರವಣಿಗೆ ಮಾಡಿದರು. ಮೈಸೂರಿನ ಮಹಾರಾಜರೂ ಹಾಗೆ ಮಾಡಿದರು. ಶೇಷಣ್ಣನವರಿಗೆ ಇದರಿಂದ ತುಂಬ ಸಂಕೋಚ. ಇದು ದೇವರಿಗೆ, ಗುರುಗಳಿಗೆ ಸಲ್ಲಬೇಕಾದ ಮರ್ಯಾದೆ, ನನ್ನಂತಹವರಿಗೆ ಇಷ್ಟು ದೊಡ್ಡ ಮರ್ಯಾದೆ ಒಪ್ಪುವುದಿಲ್ಲ ಎನಿಸಿತು. ಆ ಪಲ್ಲಕ್ಕಿಯನ್ನು ವ್ಯಾಸರಾಯ ಸ್ವಾಮಿಗಳಿಗೆ ಕಾಣಿಕೆಯಾಗಿ ಅರ್ಪಿಸಿಬಿಟ್ಟರು.

ನಾಧಯೋಗಿ

ವೀಣೆಗಾಗಿಯೇ ಬದುಕಿದ್ದರು ಶೇಷಣ್ಣನವರು ಎಂಬಂತಾಗಿತ್ತು ಅವರ ರೀತಿ. ವೀಣೆಯಿಂದಲೇ ಮನಸ್ಸಿಗೆ ಶಾಂತಿ, ಅದರಿಂದಲೇ ಮನಸ್ಸು ಮೇಲಕ್ಕೇರುವುದು. ಒಮ್ಮೆ ಪ್ರಸಿದ್ಧ ಸಂಗೀತ ವಿದ್ವಾಂಸರಾದ ಬಿಡಾರಂ ಕೃಷ್ಣಪ್ಪನವರಿಗೆ ಯಾವುದೋ ಕಾರಣದಿಂದ ಮನಸ್ಸಿಗೆ ತುಂಬ ಬೇಸರವಾಯಿತಂತೆ. ಶೇಷಣ್ಣನವರ ಮನೆಗೆ ಹೋದರು. ಅವರ ಮುಖವನ್ನು ನೋಡುತ್ತಲೇ ಮನಸ್ಸಿನ ಸ್ಥಿತಿಯನ್ನು ಶೇಷಣ್ಣನವರು ಗ್ರಹಿಸಿದರು. ’ಏಕೆ ಏನಾಯಿತು” ಎಂದು ವಿಚಾರಿಸಿದರು.”ಏನೋ ಬೇಸರ  ಮನುಷ್ಯ ಜನ್ಮಕ್ಕೆ ಅಂಟಿರುವುದು ತಾನೇ ’ಎಂದರು ಕೃಷ್ಣಪ್ಪನವರು. ಶೇಷಣ್ಣನವರು ವೀಣೆಯನ್ನು ಎತ್ತಿಕೊಂಡರು. ನುಡಿಸಲು ಪ್ರಾರಂಭಿಸಿದರು. ಅನಂತರ ಕೃಷ್ಣಪ್ಪನವರು ಹಾಡಿದರು. ವೀಣಾವಾದನ, ಹಾಡು ಇವುಗಳಲ್ಲಿ ಗಂಟೆಗಟ್ಟಲೆ ಕಳೆದು ಹೋಯಿತು. ಎಷ್ಟೋ ಗಂಟೆಗಳ ನಂತರ ಇಬ್ಬರೂ ಸಂಗೀತ  ಪ್ರಪಂಚದಿಂದ ವಾಸ್ತವಿಕ ಪ್ರಪಂಚಕ್ಕೆ ಬಂದಾಗ ಗಂಗೆಯಲ್ಲಿ ಮಿಂದುಬಂದಂತೆ ಮೈ ಮನಸ್ಸುಗಳಿಗೆ ಸಂತೋಷವಾಗಿತ್ತಂತೆ. ಕೃಷ್ಣಪ್ಪನವರು, ಶೇಷಣ್ಣನವರು ಇಂತಹವರಿಗೆ ಸಂಗೀತವೇ ತಪಸ್ಸು.

ಮಹಾಸಂಗೀತ ವಿದ್ವಾಂಸರೂ ಶೇಷಣ್ಣನವರ ವೀಣಾ ವಾದನವನ್ನು ಕೇಳಿ ಬೆರಗಾಗುತ್ತಿದ್ದರು. ಆದರೆ ಶೇಷಣ್ಣನವರಿಗೆ ವೀಣೆಯ ಮೇಲೆ ತಮಗೆ ಪ್ರಭುತ್ವವಿದೆ ಎನ್ನುವ ಭಾವನೆಯೇ ಇರಲಿಲ್ಲ. ಅವರು ಹೇಳುತ್ತಿದ್ದರಂತೆ: ’ವೀಣೆಯ ಶಕ್ತಿಗೆ ತಕ್ಕ ಹಾಗೆ ನುಡಿಸಬಲ್ಲವರು ಯಾರು? ’