ಭಾರತದ ಖ್ಯಾತ ವೈಣಿಕರಲ್ಲಿ ಸುಬ್ಬಣ್ಣನವರು ಒಬ್ಬರು. ಸುಬ್ಬಣ್ಣನವರ ಜೀವನಕ್ಕೆ ಪೂರಕವಾಗಿ ಅವರ ಪೂರ್ವಜರಾದ ವೀಣೆ ವೆಂಕಟಸುಬ್ಬಯ್ಯನವರ ಜೀವನವನ್ನೂ ಇಲ್ಲಿ ಹೆಣೆಯಲಾಗಿದೆ.

ವೀಣೆಯ ಬೆಡಗಿದು ಮೈಸೂರು

ವೀಣೆ ಎಂದೊಡನೆ ಶೇಷಣ್ಣನವರ ಮತ್ತು ಸುಬ್ಬಣ್ಣನವರ ಹೆಸರು ನೆನಪಿಗೆ ಬರುವುದು. ಈ ಇಬ್ಬರು ವೈಣಿಕರು ತಮ್ಮ ವೀಣೆಯ ನಾದ ಸೌರಭವನ್ನು ದೇಶದಲ್ಲೆಲ್ಲ ಹರಡಿ ಹಿಂದಿನ ಮೈಸೂರು ಸಂಸ್ಥಾನಕ್ಕೆ ’ವೀಣೆಯ ಬೆಡಗಿದು ಮೈಸೂರು’ ಎಂಬ ಖ್ಯಾತಿಯನ್ನು ತಂದುಕೊಟ್ಟರು. ಮೈಸೂರು ಸದಾಶಿವರಾಯರು, ಶೇಷಣ್ಣನವರು, ಸುಬ್ಬಣ್ಣನವರು, ಬಿಡಾರಾಂ ಕೃಷ್ಣಪ್ಪನವರು ಮುಂತಾದ ಕಲಾವಿದರುಗಳಿಂದ ಕೂಡಿದ ಮೈಸೂರು ದೇಶದ ಪ್ರಮುಖ ಸಂಗೀತ ಕ್ಷೇತ್ರವಾಗಿ ಬೆಳಗಿತು.

ಪ್ರತಿಭಾವಂತರ ವಂಶ

ಸುಬ್ಬಣ್ಣನವರ ಜೀವನಚರಿತ್ರೆಯನ್ನು ತಿಳಿಯುವುದೆಂದರೆ ಕರ್ನಾಟಕದ ವೀಣಾ ಪರಂಪರೆಯನ್ನು ತಿಳಿದಂತಾಗುತ್ತದೆ. ಸುಬ್ಬಣ್ಣನವರ ವಂಶದಲ್ಲಿ ವೀಣೆಯನ್ನು ನುಡಿಸಲಾರಂಭಿಸಿದವರು, ಅವರಿಗೆ ಇಪ್ಪತ್ತನಾಲ್ಕು ತಲೆ ಹಿಂದಿನವರಾದ ಅಪ್ಪಯ್ಯ ಎಂಬುವರು. ಇವರು ಹಿಂದಿನ ಮೈಸೂರು ರಾಜ್ಯದ ದೊರೆಗಳ ಮೂಲ ಪುರುಷರಾದ ಯದುರಾಯರ ಕಾಲದಲ್ಲಿದ್ದವರೆಂದು ಪ್ರತೀತಿ. ಇವರ ಪಾಂಡಿತ್ಯ ಎಷ್ಟು ಅಮೋಘವಾಗಿತ್ತೆಂದರೆ ವೀಣೆಯಲ್ಲಿ ಒಂದು ರಾಗವನ್ನು ನುಡಿಸುತ್ತ ಬಾಯಲ್ಲಿ (ನುಡಿಸುತ್ತಿರುವ ರಾಗಕ್ಕೆ ವಿರುದ್ಧವಾದ) ಇನ್ನೊಂದು ರಾಗವನ್ನು ಹಾಡುತ್ತಿದ್ದರಂತೆ. ಏಕೆ ಕಾಲದಲ್ಲಿ ಹೀಗೆ ವಿರುದ್ಧ ರಾಗಗಳನ್ನು ನುಡಿಸುತ್ತಾ ಹಾಡಲು ತುಂಬಾ ಆಳವಾದ ಪಾಂಡಿತ್ಯ ಬೇಕೇಬೇಕು.

ಈ ವಂಶದ ಮತ್ತೊಬ್ಬ ಪ್ರಸಿದ್ಧ ಸಂಗೀತಗಾರರು ವಾಗ್ಗೇಯಕಾರ ವೀಣೆ ಕುಪ್ಪಯ್ಯನವರು ಮತ್ತು ಅವರ ತಮ್ಮ ಅಪ್ಪಯ್ಯ ಎಂಬುವರು ಕಾರಣಾಂತರಗಳಿಂದ ಮೈಸೂರು ಸಂಸ್ಥಾನವನ್ನು ಬಿಟ್ಟು ತಂಜಾವೂರಿಗೆ ಹೋಗಿ ನೆಲಸಿದರು. ಅಲ್ಲಿಯ ಮಹಾರಾಜರು ಅವರ ಸಂಗೀತವನ್ನು ಮೆಚ್ಚಿ ಗೌರವ ಪ್ರಶಸ್ತಿಗಳನ್ನು ನೀಡಿದರು.

ಹತ್ತೊಂಬತ್ತನೆಯ ಶತಮಾನದ ಆರಂಭ ಕಾಲ. ಮೈಸೂರಿಗೆ ಮುಮ್ಮಡಿ ಕೃಷ್ಣರಾಜ ಒಡೆಯರು ಮಹಾರಾಜರಾಗಿದ್ದರು. ಕುಪ್ಪಯ್ಯನವರ ವಂಶಜರಾದ ವೆಂಕಟಸುಬ್ಬಯ್ಯನವರು ತಂಜಾವೂರಿನಲ್ಲಿ ಇರುವುದು ಗೊತ್ತಾಗಿ, ಅವರನ್ನು ಮಹಾರಾಣಿಯವರು ಮೈಸೂರಿಗೆ ಕರೆಸಿಕೊಂಡರು. ಕುಪ್ಪಯ್ಯನವರ ಮೊಮ್ಮಕ್ಕಳಾದ ವೆಂಕಟಸುಬ್ಬಯ್ಯನವರನ್ನು ರಾಜಗುರುಗಳಾಗಿ ನೇಮಿಸಿ, ಅವರಿಗೆ ಅರಮನೆಯಲ್ಲಿ ಮಾಸಾಶನವನ್ನೇರ್ಪಡಿಸಿದರು. ಶುಭದಿನವೊಂದರಲ್ಲಿ ಮಹಾರಾಜ ಕೃಷ್ಣರಾಜ ಒಡೆಯರಿಗೆ ಗಾಯನ-ವಾದನ ಎರಡಲ್ಲೂ ವೆಂಕಟಸುಬ್ಬಯ್ಯನವರಿಂದ ಶಿಕ್ಷಣ ಆರಂಭವಾಯಿತು. ಕೆಲವು ಕಾಲದಲ್ಲೇ ಮಹಾರಾಜರು ಸಂಗೀತ ವಿದ್ಯೆಯಲ್ಲೂ ಉದ್ದಾಮ ವಿದ್ವಾಂಸರಾದರು ಮಹಾರಾಜರು ತಮ್ಮ ಸಂಗೀತ ಗುರುಗಳಾದ ವೆಂಕಟಸುಬ್ಬಯ್ಯನವರಿಗೆ ಚಿನ್ನದ ವೀಣೆ, ಹೆಗ್ಗಡದೇವನಕೋಟೆ ತಾಲೂಕಿನಲ್ಲಿ ಚಕ್ಕೂರು, ಕಾಳಿಹುಂಡಿ, ಶಂಕರಹಳಿ ಎಂಬ ಗ್ರಾಮಗಳನ್ನೂ ಮಂಡ್ಯ ತಾಲ್ಲೂಕಿನಲ್ಲಿರುವ ಹನಕೆರೆ, ಗೌಡಗೆರೆ, ಆಲಕೆರೆ ಗ್ರಾಮಗಳನ್ನೂ ಜಹಗೀರಿಯಾಗಿ ಕೊಟ್ಟಿದ್ದರು. ಇಷ್ಟಲ್ಲದೆ ಕೈಗೆ ಜವಾಹರಿ ತೋಡ, ಕತ್ತಿಗೆ ಮುತ್ತಿನ ಕಂಠಿ ಮತ್ತು ಐನೂರು ವರಹ ಮಾಸಾಶನವನ್ನು ಮಾಡಿ ತಮ್ಮ ಗುರುಭಕ್ತಿಯನ್ನು ಪ್ರದರ್ಶಿಸಿದರು. ವೆಂಕಟಸುಬ್ಬಯ್ಯನವರು ಮಹಾರಾಜರ ಆಪ್ತರಾಗಿ, ಅನೇಕ ವಿಷಯಗಳಲ್ಲಿ ಅವರಿಗೆ ಸಲಹೆಗಳನ್ನು ಕೊಡುತ್ತಿದ್ದರು.

ಭಕ್ಷಿ ವೆಂಕಟಸುಬ್ಬಯ್ಯನವರ ಮನೆಯಲ್ಲಿನ ನಿತ್ಯ ವ್ಯವಹಾರವೆಲ್ಲವೂ ಅರಮನೆ ಪದ್ಧತಿಯಂತೆಯೇ ಇತ್ತು. ಇವರ ಮನೆಯಲ್ಲೇ ಅನೇಕ ಆಶ್ರಿತ ಜನರಿದ್ದರು. ಆ ಆಶ್ರಿತ ವರ್ಗದವರಿಗೆಲ್ಲಾ, ಅವರವರ ಉದ್ಯೋಗಕ್ಕನುಗುಣವಾಗಿ ಮಾಸಾಶನ; ವಾಸಕ್ಕೆ ತಕ್ಕ ಮನೆ; ಆಶ್ರಿತ ಜನರ ಮನೆಯವರಿಗೆಲ್ಲಾ ಇವರ ಮನೆಯಲ್ಲೇ ಎರಡು ಹೊತ್ತು ಭೋಜನದ ಏರ್ಪಾಟು. ವೆಂಕಟಸುಬ್ಬಯ್ಯನವರು ಮೈಸೂರು ನಗರದ ದೊಡ್ಡಕೆರೆ ಎಂಬಲ್ಲಿ ಆಂಜನೇಯ ಮತ್ತು ಈಶ್ವರ ದೇವಾಲಯಗಳನ್ನು ಕಟ್ಟಿಸಿದರು. ಇತರ ಸಂಗೀತಗಾರರ ವಿಷಯದಲ್ಲಿ ಅಸೂಯೆ ಇಲ್ಲದ ವಿಶಾಲ ಹೃದಯ ಇವರದು. ಇವರಿಂದ ಅನೇಕ ಸಂಗೀತಗಾರರ ಪ್ರತಿಭೆ ಮೈಸೂರಿನ ಮಹಾರಾಜರಿಗೆ ತಿಳಿದು, ಆ ಸಂಗೀತಗಾರರಿಗೆ ಮನ್ನಣೆ ಸಿಕ್ಕುವಂತಾಯಿತು.

ವೆಂಕಟಸುಬ್ಬಯ್ಯನವರಿಗೆ ಮಕ್ಕಳಾಗದಿದ್ದರಿಂದ ಅವರ ಪತ್ನಿಯವರು ’ಶೇಷಪ್ಪ’ ಎಂಬುವವರನ್ನು ದತ್ತು ತೆಗೆದುಕೊಂಡರು. ಇವರೇ ಮುಂದೆ ’ದೊಡ್ಡ ಶೇಷಣ್ಣ’ ಎಂದು ಖ್ಯಾತರಾದರು. ಇವರು ತಮ್ಮ ಹತ್ತಿರದ ಸಂಬಂಧಿ ಹಾಗೂ ತಂದೆಯವರ ಶಿಷ್ಯರಾದ ಚಿಕ್ಕರಾಮಪ್ಪನವರಲ್ಲಿ ಸಂಗೀತ ಶಿಕ್ಷಣ ಪಡೆದರು. ಅಲ್ಲದೆ ಚಿಕ್ಕರಾಮಪ್ಪನವರ ನಂತರ ವೀಣಾ ಭಕ್ಷಿಗಳಾಗಿ ಅರಮನೆಯಲ್ಲಿ ಸೇವೆ ಸಲ್ಲಿಸಿದರು.

ಬಾಲ್ಯ-ಶಿಕ್ಷಣ

ದೊಡ್ಡ ಶೇಷಣ್ಣನವರಿಗೆ ಇಬ್ಬರು ಗಂಡು ಮಕ್ಕಳು. ಮೊದಲನೆಯವರೇ ವೀಣೆ ಸುಬ್ಬಣ್ಣನವರು, ಎರಡನೆಯವರು ಅನಂತ. ಅನಂತ ಬಾಲ್ಯದಲ್ಲೇ ತೀರಿಕೊಂಡ.

ವಿದ್ಯೆ-ಹಣ ಎರಡರಲ್ಲೂ ಶ್ರೀಮಂತರಾಗಿದ್ದ ವಂಶದಲ್ಲಿ ವೀಣೆ ಸುಬ್ಬಣ್ಣನವರು ೧೮೪೫ರಲ್ಲಿ ಜನಿಸಿದರು.’ಬಾಯಿಯಲ್ಲಿ ಬೆಳ್ಳಿಯ ಚಮಚ, ಮಲಗಲು ಚಿನ್ನದ ತೊಟ್ಟಿಲು’ ಎನ್ನುವಂತೆ ಅವರು ಬೆಳೆದರು. ರಾಜಕುಮಾರನಂತೆ ಬೆಳೆದ ಸುಬ್ಬಣ್ಣನವರಿಗೆ ಕಷ್ಟ ಕಾರ್ಪಣ್ಯಗಳ ಅರಿವೇ ಆಗಲಿಲ್ಲ. ಸುಬ್ಬಣ್ಣನವರಿಗೆ ಸಂಗೀತ ರಕ್ತದಲ್ಲೇ ಬಂದಿತ್ತು. ಮನೆಯಲ್ಲಿ ಸಂಗೀತದ ವಾತಾವರಣ. ಹುಟ್ಟಿನಿಂದ ಬಂದ ಸಂಗೀತದ ಸಂಸ್ಕಾರಕ್ಕೆ ದೊಡ್ಡ ಶೇಷಣ್ಣನವರ ಶಿಕ್ಷಣ ಮೆರುಗನ್ನು ನೀಡಿತು.

ದೊಡ್ಡ ಶೇಷಣ್ಣನವರು ಮಗ ಸುಬ್ಬಣ್ಣನಿಗೆ ಬಾಲ್ಯದಲ್ಲೇ ಸಂಗೀತ ಶಿಕ್ಷಣ ಆರಂಭಿಸಿದರು. ಸುಬ್ಬಣ್ಣ ಮತ್ತು ವೀಣೆ ಶೇಷಣ್ಣನವರು ದೊಡ್ಡ ಶೇಷಣ್ಣನವರಿಂದ ಜೊತೆ ಜೊತೆಯಲ್ಲೇ ವೀಣಾ ಶಿಕ್ಷಣ ಪಡೆದರು. ಅಲ್ಲದೆ ಇಬ್ಬರೂ ಖ್ಯಾತ ವಾಗ್ಗೇಯಕಾರ ಮೈಸೂರು ಸದಾಶಿವರಾಯರಲ್ಲಿ ಹಾಡುಗಾರಿಕೆ ಪಾಠವನ್ನೂ ಕಲಿತರು. ಸದಾಶಿವರಾಯರು ವಾಲಾಜಪೇಟೆ ವೆಂಕಟರಮಣ ಭಾಗವತರ ಶಿಷ್ಯರು. ಎಂದರೆ ತ್ಯಾಗರಾಜರ ನೇರ ಶಿಷ್ಯ ಪರಂಪರೆಗೆ ಸೇರಿದವರು ಹಾಗೂ ತ್ಯಾಗರಾಜರ ಸಮ್ಮುಖದಲ್ಲಿ ಹಾಡಿ ಅವರ ಆಶೀರ್ವಾದ ಪಡೆದ ಭಾಗ್ಯವಂತರು. ಜೊತೆಗೆ ಸದಾಶಿವರಾಯರು ಅಪೂರ್ವ ಕೃತಿಗಳನ್ನು ರಚಿಸಿರುವ ಹತ್ತೊಂಬತ್ತನೇ ಶತಮಾನದ ಖ್ಯಾತ ವಾಗ್ಗೇಯಕಾರರೂ ಹೌದು. ಮನೆಯಲ್ಲಿ ರಾಜಭೋಗವಿದ್ದರೂ ಸುಬ್ಬಣ್ಣನವರು ವಿದ್ಯಾಭ್ಯಾಸದಲ್ಲಿ ಬಹು ಕಷ್ಟಪಟ್ಟು ಅಭ್ಯಾಸ ಮಾಡತೊಡಗಿದರು. ಪ್ರತಿದಿನ ಅನೇಕ ಗಂಟೆಗಳ ಕಾಲ ಶ್ರದ್ದೆಯಿಂದ ಗಾಯನ-ವಾದನದ ಅಭ್ಯಾಸ ಮಾಡಿ ತಮ್ಮ ಕಲಾಜೀವನಕ್ಕೆ ಸದೃಢ ಅಡಿಪಾಯವನ್ನು ಹಾಕಿದರು. ಹೀಗೆ ಹಿರಿಯ ಕಲಾವಿದರಿಂದ ಶಿಕ್ಷಣ ಹಾಗೂ ಶ್ರದ್ಧೆಯ ಸಾಧನೆಯಿಂದ ಸುಬ್ಬಣ್ಣನವರು ಎಳೆಯ ಪ್ರಾಯದಲ್ಲೇ ಹಿರಿಯ ವಿದ್ವತ್ತನ್ನು ಗಳಿಸಿದರು. ಅಲ್ಲದೆ ರಾಜಕುಮಾರರು ಮತ್ತು ಶ್ರೀಮಂತರ ಮನೆತನಗಳ ಹುಡುಗರಿಗಾಗಿ ನಡೆಯುತ್ತಿದ್ದ ಆಗಿನ ಪ್ರತಿಷ್ಠಿತ ಶಾಲೆ ’ರಾಯಲ್ ಸ್ಕೂಲ್’ ನಲ್ಲಿ ವಿದ್ಯಾಭ್ಯಾಸವನ್ನೂ ಮಾಡಿದರು.

ಸುಬ್ಬಣ್ಣನವರ ಇಪ್ಪತ್ತೈದನೆಯ ವಯಸ್ಸಿನಲ್ಲಿ ಅವರ ತಂದೆಯವರು ಸ್ವರ್ಗಸ್ಥರಾದರು. ದೊಡ್ಡ ಶೇಷಣ್ಣನವರು ತಮ್ಮ ಅಂತ್ಯಕಾಲದಲ್ಲಿ ಸುಬ್ಬಣ್ಣನವರ ಅಭಿವೃದ್ಧಿ – ಕ್ಷೇಮಭಾರವನ್ನು ವೀಣೆ ಶೇಷಣ್ಣನವರಿಗೆ ವಹಿಸಿದರು. ತಂದೆಯವರ ನಂತರ ಸುಬ್ಬಣ್ಣನವರು ಶೇಷಣ್ಣನವರಲ್ಲಿ ವೀಣಾ ಅಭ್ಯಾಸ ಮುಂದುವರಿಸಿದರು. ಮುಂದೆ ಸುಬ್ಬಣ್ಣನವರಿಗೆ ಅರಮನೆಯ ಆಸ್ಥಾನ ವಿದ್ವಾಂಸಗಿರಿ ದೊರೆತು ವೀಣಾ ಭಕ್ಷಿ ಪದವಿಯೂ ದೊರೆಕಿತು.

ಇಬ್ಬರು ಗೆಳೆಯರು

ಪ್ರಾರಂಭದಲ್ಲಿ ಶೇಷಣ್ಣ – ಸುಬ್ಬಣ್ಣ ಇಬ್ಬರು ಒಟ್ಟಿಗೇ ಹಲವಾರು ಕಛೇರಿಗಳನ್ನು ಮಾಡಿ, ರಸಿಕರ ಮನದಣಿಸಿದರು. ದ್ವಂದ್ವ ವೀಣಾ ವಾದನದ ಜೊತೆಗೆ ಸುಬ್ಬಣ್ಣನವರು ಇಂಪಾಗಿ ಹಾಡುತ್ತಲೂ ಇದ್ದರು. ಇಬ್ಬರು ಉನ್ನತ ಕಲಾವಿದರ ವಿನಿಕೆಯ ಜೊತೆಗೆ ಇಂಪಾದ ಗಾನವೂ ಸೇರಿ ಶ್ರೋತೃಗಳಿಗೆ ಒಂದು ಅಪೂರ್ವ ಅನುಭವವಾಗುತ್ತಿತ್ತು. ಸುಬ್ಬಣ್ಣನವರು ವೀಣೆಯಂತೆಯೇ ಹಾಡುಗಾರಿಕೆಯಲ್ಲೂ ನಿಷ್ಣಾತಿಯನ್ನು ಪಡೆದಿದ್ದರು. ಯಾವುದೇ ಶ್ರುತಿ ಸಂಚಾರಕ್ಕೂ ಸುಲಭವಾಗಿ ಹೊಂದುತ್ತಿದ್ದಿತು ಅವರ ಶಾರೀರ.

ರಾಜಮನ್ನಣೆ

ಸುಬ್ಬಣ್ಣನವರು ಆಗ ಮೈಸೂರನ್ನು ಆಳುತ್ತಿದ್ದ ಚಾಮರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿ ನೇಮಕರಾದರು. ಅಲ್ಲದೆ ’ರಾಯಲ್ ಸ್ಕೂಲ್’ ನಲ್ಲಿ ಚಾಮರಾಜ ಒಡೆಯರೂ ಸುಬ್ಬಣ್ಣನವರೂ ಸಹಪಾಠಿಗಳಾಗಿ ಒಟ್ಟಿಗೇ ಓದಿದರು. ಚಾಮರಾಜ ಒಡೆಯರು, ಸುಬ್ಬಣ್ಣನವರು ಮತ್ತು ಶೇಷಣ್ಣನವರು ಆತ್ಮೀಯ ಗೆಳೆಯರಾದರು. ಈ ಮೂವರೂ ನಿತ್ಯವೂ ಭೇಟಿಯಾಗಿ ದಿನದ ಬಹು ವೇಳೆ ಒಟ್ಟಿಗೇ ಕಳೆಯುತ್ತಿದ್ದರು. ಅನೇಕ ಸಲ ಒಟ್ಟಿಗೇ ಸಂಗೀತ ಗೋಷ್ಠಿಗಳನ್ನು ನಡೆಸುತ್ತಿದ್ದರು. ಆಗ ಚಾಮರಾಜ ಒಡೆಯರು ಪಿಟೀಲನ್ನೂ ಶೇಷಣ್ಣನವರು ವೀಣೆಯನ್ನೂ ನುಡಿಸುತ್ತಿದ್ದರು. ಇವರೊಂದಿಗೆ ಸುಬ್ಬಣ್ಣನವರು ತಮ್ಮ ಇಂಪಾದ ಶಾರೀರದಿಂದ ಹಾಡುತ್ತಿದ್ದರು. ದೊರೆ ಆಸ್ಥಾನಿಕರು ಎಂಬ ಭೇದವಿಲ್ಲದೆ ನಡೆಯುತ್ತಿದ್ದ ಈ ಗೋಷ್ಠಿ, ಒಂದು ಅಪೂರ್ವ ಸಮಾಗಮ.

ಕಲ್ಯಾಣಿ ರಾಗ

ಶೇಷಣ್ಣ, ಸುಬ್ಬಣ್ಣನವರ ಕಛೇರಿ ಒಂದು ಸಲ ತಂಜಾವೂರಿನಲ್ಲಿ ಏರ್ಪಾಡಾಗಿತ್ತು. ಕಲ್ಯಾಣಿ ಕೃಷ್ಣ ಭಾಗವತರ‍್ ಎಂದೇ ಹೆಸರು ಪಡೆದಿದ್ದ ಅಲ್ಲಿಯ ವಿದ್ವಾಂಸರೊಬ್ಬರು ಕಲ್ಯಾಣ ರಾಗವನ್ನು ಚೆನ್ನಾಗಿ ನುಡಿಸುತ್ತಿದ್ದರು. ಅವರನ್ನು ಬಿಟ್ಟರೆ ಬೇರೆ ಯಾರೂ ಕಲ್ಯಾಣಿ ರಾಗವನ್ನು ಅಷ್ಟು ಚೆನ್ನಾಗಿ ನುಡಿಸಲು ಸಾಧ್ಯವೇ ಇಲ್ಲವೆಂದು ಅಲ್ಲಿಯ ಜನರು ಹೇಳುತ್ತಿದ್ದರು. ಇವರಿಬ್ಬರೂ ಅಲ್ಲಿಗೆ ಹೋದಾಗ ಈ ವಿಷಯ ತಿಳಿಯಿತು. ಶೇಷಣ್ಣ – ಸುಬ್ಬಣ್ಣನವರಿಬ್ಬರ ಸ್ವಾಭಿಮಾನವೂ ಕೆರಳಿತು. ಕಲ್ಯಾಣೀ ರಾಗವನ್ನು ಒಂದು ಸವಾಲಾಗಿ  ಸ್ವೀಕರಿಸಿ ಹತ್ತು ದಿನಗಳ ಕಾಲ ಕಲ್ಯಾಣಿ ರಾಗವನ್ನೇ ಸಾಧನೆ ಮಾಡ ತೊಡಗಿದರು. ಪ್ರಾಮಾಣಿಕ ಶ್ರದ್ಧೆ ಹಾಗೂ ತದೇಕ ಚಿತ್ತದಿಂದ ಕಲ್ಯಾಣಿ ರಾಗದ ನಾನಾ ಭಾವ-ರಸಗಳನ್ನು ಕರಗತ ಮಾಡಿಕೊಂಡರು. ತಮ್ಮ ವಿಶಾಲ ಮನೋಧರ್ಮದಿಂದ ರಾಗ ಮರ್ಮವೆಲ್ಲವನ್ನೂ ವಿನಿಕೆಯಲ್ಲಿ ರೂಢಿಸಿಕೊಂಡರು. ಅನಂತರ ಅಲ್ಲಿಯ ಮಹಾರಾಜರೆದುರಿಗೆ ನುಡಿಸಿದರು. ವೀಣೆಯ ನಾದದೊಡನೆ ಸುಬ್ಬಣ್ಣನವರ ಸೊಗಸಾದ ಶಾರೀರವೂ ಸೇರಿದಾಗ ಕಛೇರಿಯು ಅದ್ಭುತವಾಗಿತ್ತೆಂದು ಪ್ರತ್ಯೇಕವಾಗಿ ಹೇಳುವುದೇ ಬೇಡ. ’ಕಲ್ಯಾಣಿ ರಾಗವು ನಮ್ಮದೇ ಸ್ವತ್ತು ಎಂದುಕೊಂಡಿದ್ದೆ. ಆದರೆ ನೀವಿಬ್ಬರೂ ಆ ರಾಗವನ್ನು ಸಂಪೂರ್ಣವಾಗಿ ಸಿದ್ಧಿಸಿಕೊಂಡಿದ್ದೀರಿ’ ಎಂದು ಆ ಮಹಾರಾಜರು ತುಂಬಾ ಸಂತೋಷಗೊಂಡು ಇಬ್ಬರಿಗೂ ಉಚಿತ ಮರ್ಯಾದೆ ಮಾಡಿದರು. ಹೀಗೆ ಯಾವುದೇ ರಾಗವನ್ನೇ ಆದರೂ ಅದ್ವಿತೀಯವಾಗಿ ನುಡಿಸಿ, ಹಾಡಬಲ್ಲ ಶಕ್ತರಾಗಿದ್ದರು ಸುಬ್ಬಣ್ಣನವರು. ಅವರ ವಿದ್ಯಾಪಾಂಡಿತ್ಯ ಸಾಧನೆ ಮತ್ತು ಮನೋಧರ್ಮ ಅಷ್ಟು ಉನ್ನತವಾಗಿತ್ತು.

ಸನ್ಮಾನ

ಕಲಾವಿದರು ಸಾಮಾನ್ಯವಾಗಿ ಧನಾರ್ಜನೆಗಾಗಿ ರಾಜರನ್ನು ಆಶ್ರಯಿಸುತ್ತಾರೆ. ಆದರೆ ವೀಣೆ ಸುಬ್ಬಣ್ಣನವರು ತಾವೇ ಆಗರ್ಭ ಶ್ರೀಮಂತರಾಗಿದ್ದರಿಂದ ಜೀವನಕ್ಕಾಗಿ ಯಾರನ್ನೂ ಆಶ್ರಯಿಸಬೇಕಾಗಿರಲಿಲ್ಲ. ಆದ್ದರಿಂದ ಸುಬ್ಬಣ್ಣನವರು ರಾಜಠೀವಿಯಿಂದಲೇ ರಾಜರುಗಳನ್ನು ಭೇಟಿ ಮಾಡಿ. ಅವರಿಗೆ ತಾವೇ ಬೆಲೆಯುಳ್ಳ ಕಾಣಿಕೆಗಳನ್ನರ್ಪಿಸಿ, ತನ್ನ ಕಲಾ ಪ್ರದರ್ಶನ ಮಾಡಿ ಬರುತ್ತಿದ್ದರು. ತಮ್ಮ ಆಸ್ಥಾನದ ಮರ್ಯಾದೆಯನ್ನು ಆಯಾ ಮಹಾರಾಜರುಗಳೂ ಕಾಪಾಡಿಕೊಳ್ಳಬೇಕಲ್ಲ! ಅವರೂ ಸುಬ್ಬಣ್ಣನವರಿಗೆ ಅದ್ದೂರಿಯಾಗಿ ಸನ್ಮಾನ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ಕಲೆಗಳಿಗೆ ಯಥೇಚ್ಛವಾಗಿ ಪ್ರೋತ್ಸಾಹ ಕೊಡುತ್ತಿದ್ದ ರಾಜ್ಯಗಳಾದ ರಾಮನಾಥಪುರ, ತಿರುವಾಂಕೂರು, ದೇವಿಕೋಟೆ ಮತ್ತು ನಾಟುಕೋಟಿ ಚೆಟ್ಟಿಯಾರ‍್ ಜನಾಂಗದ ಗುರುಪೀಠವಾದ ’ಪಂಡಾರ ಸನ್ನಿಧಿ’ ಇಲ್ಲೆಲ್ಲಾ ಸುಬ್ಬಣ್ಣನವರು ಸಂಚಾರ ಮಾಡಿ ಜಯಭೇರಿ ಹೊಡೆದು ಬಂದರು. ರಾಮನಾಡಿನಲ್ಲಿ ಸತತವಾಗಿ ಮೂರು ದಿನಗಳು ಇವರ ಕಛೇರಿ ನಡೆದು, ಅಲ್ಲಿಯ ಮಹಾರಾಜ ಸೇತುಪತಿ ಭಾಸ್ಕರರು ಸುಬ್ಬಣ್ಣನವರಿಗೆ ವಿಶೇಷ ಸನ್ಮಾನ ಮಾಡಿದ್ದಲ್ಲದೆ ’ವೈಣಿಕ ವರಕೇಸರಿ’ ಎಂಬ ಬಿರುದನ್ನೂ ಕೊಟ್ಟರು. ಪಂಡಾರ ಸನ್ನಿಧಿಯಲ್ಲಿ”ವೈಣಿಕ ವರ ಚೂಡಾಮಣಿ’ ಎಂಬ ಬಿರುದನ್ನೂ ಗಳಿಸಿದರು. ಇವರು ಹಿಂತಿರುಗಿದ ಮೇಲೆ ಇವೆಲ್ಲಕ್ಕೂ ಕಳಸವಿಟ್ಟಂತೆ ಮೈಸೂರಿನ ಮಹಾರಾಜಾರಾದ ನಾಲ್ವಡಿ ಕೃಷ್ಣರಾಜ ಒಡೆಯರು ’ ವೈಣಿಕ ಪ್ರವೀಣಂ’ ಎಂಬ ಬಿರುದನ್ನು ಉಚಿತ ಮರ್ಯಾದೆಗಳೊಡನೆ ದಯಪಾಲಿಸಿದರು. ಅಲ್ಲದೆ ೧೯೩೦ರಲ್ಲಿ ನಂಜನಗೂಡಿನಲ್ಲಿ ನಡೆದ ಕರ್ನಾಟಕ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ ಗೌರವಕ್ಕೆ ಪಾತ್ರರಾದರು – ಸುಬ್ಬಣ್ಣನವರು.

ವಿದ್ವತ್ ಪಕ್ಷಪಾತಿ

ಕೀರ್ತಿ, ಧನಕ್ಕಾಗಿ ಪದೇ ಪದೇ ಸಂಚಾರ ಮಾಡಲಿಲ್ಲ ಅವರು. ಹೆಚ್ಚು ಕಡಿಮೆ ನಿತ್ಯವೂ ಅವರ ಮನೆಯಲ್ಲೇ ಸಂಗೀತೋತ್ಸವ ನಡೆಯುತ್ತಿತ್ತು. ಪರರಾಜ್ಯಗಳಿಂದ ಮೈಸೂರಿಗೆ ಬಂದ ಕಲಾವಿದರ ಕಛೇರಿಗಳು ಮೊದಲು ಅರಮನೆಯಲ್ಲಿ ನಡೆಯುತ್ತಿದ್ದವು. ಆನಂತರ ಸುಬ್ಬಣ್ಣನವರ ಮನೆಯಲ್ಲಿ ಸಾಮಾನ್ಯವಾಗಿ ನಡೆಯುತ್ತಿದ್ದವು. ಸುಬ್ಬಣ್ಣನವರು ಕಲಾವಿದರ ಒಂದೊಂದು ಉತ್ತಮ ಸಂಗತಿ ಸಂಚಾರಕ್ಕೂ ತಲೆದೂಗಿ, ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದರು. ವಿದ್ಯಾ ಪಕ್ಷಪಾತಿಗಳಾದ ಅವರು ಕಲಾವಿದರಿಗೆ  ನಾನಾ ರೀತಿ ಬೆಂಬಲ ನೀಡುತ್ತಿದ್ದರು. ಮೇಲಾಗಿ ಅರಮನೆಯಲ್ಲಿ ನೀಡಿದಷ್ಟೇ  ಮೊತ್ತದ ಸಂಭಾವನೆಯನ್ನು ತಾವೂ ಕೊಡುಗೈಯಿಂದ ಕೊಡುತ್ತಿದ್ದರು. ಹೀಗೆ ಅವರ ಮನೆ ಒಂದು ಕಲಾದೇಗುಲವಾಗಿ ರಾರಾಜಿಸುತ್ತಿತ್ತು.

ಸುಬ್ಬಣ್ಣನವರು ಸಂಗೀತ ವಿದ್ವಾಂಸರಿಗೆ ಮನೆಯಲ್ಲೇ ಸನ್ಮಾನ ಮಾಡುತ್ತಿದ್ದರು.

ನುಡಿಸುತ್ತಿರುವ ಅಥವಾ ಹಾಡುತ್ತಿರುವ ವ್ಯಕ್ತಿ ಚಿಕ್ಕವನಿರಲಿ, ದೊಡ್ಡವನಿರಲಿ ಅಥವಾ ಆರಂಭ ಸ್ಥಿತಿಯಲ್ಲಿರಲಿ ಸುಬ್ಬಣ್ಣನವರು ಎಲ್ಲರಿಗೂ ಒಂದೇ ರೀತಿಯ ತುಂಬು ಉತ್ಸಾಹದ ಮಾತುಗಳನ್ನಾಡಿ ಪ್ರೋತ್ಸಾಹಿಸುತ್ತಿದ್ದರು.  ವಿಜಯನಗರದ ವೆಂಕಟರಮಣದಾಸರೆಂಬ ವಿದ್ವಾಂಸರೊಬ್ಬರು ಮೈಸೂರಿಗೆ ಬಂದಾಗ ಇವರ ಮನೆಯಲ್ಲೂ ವೀಣೆ ನುಡಿಸಿದರು. ಅದನ್ನು ಕೇಳಿ ಸುಬ್ಬಣ್ಣನವರು, ಇದಲ್ಲವೇ ನಿಜವಾದ ವೀಣೆ! ನಾವೆಲ್ಲ ನುಡಿಸುವುದು ಏಣಿ! ಎಂದರಂತೆ. ಸ್ವತಃ ಅದ್ಭುತವಾಗಿ ವೀಣೆ ನುಡಿಸುತ್ತಿದ್ದವರಿಂದ ಎಂತಹ ಔದಾರ್ಯದ ಮಾತು! ಅಂತಹ ವಿದ್ವತ್ ಪಕ್ಷಪಾತಿ ಮತ್ತು ಅಷ್ಟು ನಿಷ್ಕಲ್ಮಷ ಹೃದಯ ಅವರದು.

ದಾನಶೀಲ

ಮಹಾವೈದ್ಯನಾಥಯ್ಯರ‍್ ಇವರ ಮನೆಯಲ್ಲಿ ಹಾಡಿದಾಗ ಸುಬ್ಬಣ್ಣನವರು ಆ ಹಾಡುಗಾರಿಕೆಗೆ ಮನಸೋತು ತಮ್ಮ ಬೆರಳಿನಲ್ಲಿ ಇದ್ದ ಅತ್ಯಂತ ಬೆಲೆ ಬಾಳುವ ಪಚ್ಚೆಯುಂಗುರವನ್ನೇ ತೆಗೆದು, ಅವರ ಬೆರಳಿಗೆ ತೊಡಿಸಿ, ’ಉಂಗುರಕ್ಕೆ ಇದೇ ಸರಿಯಾದ ಸ್ಥಾನ’ ಎಂದರು. ವೈದ್ಯನಾಥಯ್ಯರು,”ಕೋಟೆಗೆ ಅವರು ಪ್ರಭುಗಳಾದರೆ, ಪೇಟೆಗೆ ನೀವೇ ಪ್ರಭುಗಳು’ ಎಂದು ಸುಬ್ಬಣ್ಣನವರನ್ನು ಕೊಂಡಾಡಿದರು.

ಪೂಚಿ ಶ್ರೀನಿವಾಸಯ್ಯಂಗಾರ‍್ ಎಂಬ ಮದ್ರಾಸಿನ ವಿದ್ವಾಂಸರೊಬ್ಬರು ಮೈಸೂರಿಗೆ ಬಂದಿದ್ದರು. ಅರಮನೆಯಲ್ಲಿ ಅವರ ಕಛೇರಿ ಆದ ನಂತರ ಸುಬ್ಬಣ್ಣನವರ ಮನೆಯಲ್ಲೂ ಅವರ ಕಛೇರಿ ಏರ್ಪಾಡಾಯಿತು. ಎಲ್ಲವೂ ಸಿದ್ಧವಾಯಿತು. ಆದರೆ ವಿದ್ವಾಂಸರ ಮುಖ ಏಕೋ ಸಪ್ಪೆಯಾಗಿತ್ತು. ಏನನ್ನೋ ಹುಡುಕುವಂತೆ ಆಚೀಚೆ ನೋಡುತ್ತಿದ್ದರು. ಏನೆಂದು ಕೇಳೀದಾಗ, ’ಇವತ್ತು ಕಛೇರಿ ಮಾಡುವುದು ಬೇಡ. ರಾಮನಾಡಿನ ಪ್ರಭುಗಳು ನನಗೆ ಕೊಟ್ಟಿದ್ದ ಸೀಮೆಕಮಲದ ಉಂಗುರ ಕಳೆದುಹೋಗಿದೆ.  ನನ್ನ ಮನಸ್ಸು ಸರಿಯಿಲ್ಲ, ಕ್ಷಮಿಸಬೇಕು’. ಎಂದರು ತಕ್ಷಣ ಸುಬ್ಬಣ್ಣನವರು ತಮ್ಮ ಕೊಠಡಿಯಿಂದ ಉಂಗುರಗಳನ್ನು ಇಡುವ ಪೆಟ್ಟಿಗೆಯನ್ನೇ ತರಿಸಿ ಅವರ ಮುಂದಿಟ್ಟು, ’ ಇದರಲ್ಲಿ ಇರುವ ಯಾವ ರತ್ನದುಂಗುರವನ್ನಾದರೂ ತೆಗೆದುಕೊಳ್ಳಿ’ ಎಂದರು. ಶ್ರೀನಿವಾಸಯ್ಯಂಗಾರಿಗೆ ದಿಗ್ಭ್ರಮೆಯಾಯಿತು. ಮೌನವಾಗಿ ಬಿಟ್ಟರು. ಸುಬ್ಬಣ್ಣನವರು ತಾವೇ ಒಂದು ಸೀಮೆಕುಲದ ಉಂಗುರವನ್ನು ಅವರಿಗೆ ತೊಡಿಸಿ, ’ಈಗ ನಿಮ್ಮ ಸಂಗೀತದಿಂದ ನಮ್ಮನ್ನು ಸಂತೋಷ ಪಡಿಸಿ’ ಎಂದರು. ಸಂಗೀತವಾದ ಮೇಲೆ ಮತ್ತೆ ಅವರಿಗೆ ಯಥೇಚ್ಛವಾಗಿ ಸನ್ಮಾನ ಮಾಡಿದರು.

ಸುಬ್ಬಣ್ಣನವರಿಗೆ ಒಂದು ಜಮೀನು ಸೇರಿದ್ದಿತು ಎಂದು ಅವರಿಗೇ ಗೊತ್ತಿರಲಿಲ್ಲವಂತೆ. ಗೃಹಸ್ಥರೊಬ್ಬರು ಬಂದು ಆ ಜಮೀನು ಅವರಿಗೆ ಸೇರಿದ್ದು ಎಂದು ತಿಳಿಸಿ, ’ದಯಮಾಡಿ ಅದನ್ನು ನನಗೇ ಕೊಡಿ’ ಎಂದು ಕೇಳಿದರಂತೆ. ಸುಬ್ಬಣ್ಣನವರು, ’ಆಗಬಹುದು, ಕೃಷ್ಣಾರ್ಪಣ’ ಇನ್ನು ಆ ಭೂಮಿ ನಿಮಗೇ ಸೇರಿದ್ದು’ ಎಂದುಬಿಟ್ಟರಂತೆ.

ಈ ಔದಾರ್ಯ ಸುಬ್ಬಣ್ಣನವರಿಗೆ ಹುಟ್ಟಿನಿಂದಲೇ ಬಂದುದು. ತಮಗೆ ವಂಶಪಾರಂಪರ್ಯವಾಗಿ ಬಂದ ಲಕ್ಷಾಂತರ ರೂಪಾಯಿಗಳ ಆಸ್ತಿಯನ್ನೂ ಹೀಗೇ ಉದಾರವಾಗಿ ನೀಡಿ ಕೊನೆಗಾಲದಲ್ಲಿ ಕಷ್ಟಕ್ಕೆ ಒಳಗಾದರು. ಆದರೂ ಆವರ ಉದಾತ್ತ ಚಿತ್ತ ಬಾಡದೆ ಹಸನ್ಮುಖರಾಗಿಯೇ ಜೀವನ ತಳ್ಳಿದರು.

ಮಹಾರಾಜರ ಔದಾರ್ಯ

ಸುಬ್ಬಣ್ಣನವರದು ಎಷ್ಟು ನಿಷ್ಕಲ್ಮಷ ಮನಸ್ಸೋ ಅವರ ದೊರೆಗಳದ್ದೂ ಸಹ ಅಷ್ಟೇ ಸರಳ ಮತ್ತು ಉದಾರ ಮನಸ್ಸು. ಒಮ್ಮೆ ಮಹಾರಾಜ ಚಾಮರಾಜ ಒಡೆಯರ ಜೊತೆಗೆ ಸುಬ್ಬಣ್ಣನವರು ನೀಲಗಿರಿಗೆ ಪ್ರವಾಸ ಹೋಗಿದ್ದರು. ಅಲ್ಲಿ ಸುಬ್ಬಣ್ಣನವರಿಗೆ ಜ್ವರ ಬಂದು ಅಸ್ವಸ್ಥರಾದರು. ವೈದ್ಯರು ಚಿಕಿತ್ಸೆ ಮಾಡಿ, ಅವರು ಗಂಜಿಯನ್ನು ಮಾತ್ರ ಕುಡಿಯಬೇಕೆಂದರು. ಆದರೆ ಯಾರು ಎಷ್ಟು ಹೇಳಿದರೂ ಸುಬ್ಬಣ್ಣನವರು ಗಂಜಿ ಕುಡಿಯಲು ಒಪ್ಪಲಿಲ್ಲ. ವಿಷಯ ಪ್ರಭುಗಳ ಕಿವಿ ಮುಟ್ಟಿತು. ಅವರೇ ಬಂದು ಸುಬ್ಬಣ್ಣನವರನ್ನು ಸ್ನೇಹದ ಮಾತುಗಳಿಂದ ಒಲಿಸಿ ಗಂಜಿ ಕುಡಿಸಿದರು. ವಾಕರಿಸಿಕೊಂಡ ಸುಬ್ಬಣ್ಣನವರ ಬಾಯಿಂದ ಎಂಜಲು ಸಿಡಿಯಿತು. ಪ್ರಭುಗಳು ಸ್ವಲ್ಪವೂ ಮುಖ ಸಿಂಡರಿಸದೆ, ಅಲ್ಲಿದ್ದ ಬಟ್ಟೆಯಿಂದ ತಮ್ಮ ಮೈಮೇಲೆ ಸಿಡಿದ ಎಂಜಲನ್ನು ಒರೆಸಿಕೊಂಡರು. ’ಮತ್ತೆ ಗಂಜಿ ಕುಡಿಯಲಿ, ಗಲಾಟೆ ಮಾಡಿದರೆ, ನಮಗೆ ತಿಳಿಸಿ’ ಎಂದು ಹೇಳಿ ಹೋದರು. ಅದೆಂತಹ ಪ್ರೀತಿ ವಾತ್ಸಲ್ಯ ಅವರದು!

ಇನ್ನೊಂದು ದಿನ ತಮ್ಮ ಸಂಬಳವನ್ನು ಪಡೆಯಲು ಸುಬ್ಬಣ್ಣನವರು ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅದನ್ನು ದೂರದಿಂದಲೇ ಗಮನಿಸಿದ ಮಹಾರಾಜರು, ’ಇನ್ನು ಮೇಲೆ ಸಂಬಳ ಪಡೆಯಲು ತಾವೇ ಬರಬೇಕಾದ್ದಿಲ್ಲ, ಚೀಟಿ ಬರೆದು ಯಾರನ್ನಾದರೂ ಕಳುಹಿಸಿದರೆ ಸಾಕು’ ಎಂದು ಅಪ್ಪಣೆ ಮಾಡಿದರು. ಅಷ್ಟು ಮೃದು ಮನಸ್ಸು ದೊರೆಗಳದು. ಸುಬ್ಬಣ್ಣನವರು ಅರಮನೆಯಿಂದ ಹೆಸರಿಗೆ ಸಂಬಳ ಪಡೆಯುತ್ತಿದ್ದರು. ವಾಸ್ತವವಾಗಿ ಅದನ್ನು ಅವರು ಉಪಯೋಗಿಸುತ್ತಿರಲಿಲ್ಲ. ಸಂಬಳದ ದಿನಕ್ಕೆ ಮೊದಲೇ ತಿಳಿದ ಜನರಲ್ಲಿ ಯಾರಾದರೂ ತಮ್ಮ ಕಷ್ಟ ತೋಡಿಕೊಂಡು ಸುಬ್ಬಣ್ಣನವರ ’ಸಂಬಳ’ ಪಡೆಯುತ್ತಿದ್ದರು. ತಮ್ಮ ಮನೆಯ ಆಭರಣಗಳು, ವಲ್ಲಿ – ಉಡುಪುಗಳು, ದವಸ-ಧಾನ್ಯ- ಎಲ್ಲವನ್ನೂ ಕೇಳಿದವರಿಗೆ ’ಇಲ್ಲ’ ಎನ್ನದೆ ಕೊಡುತ್ತಿದ್ದರು. ಅನೇಕ ಮಂದಿ ಬಡವರು ತಮ್ಮ ಮನೆಯ ಮದುವೆ ಮುಂಜಿ ಹಾಗೂ ಇತರ ಧಾರ್ಮಿಕ ಕಾರ್ಯಗಳನ್ನು ಸುಬ್ಬಣ್ಣನವರ ನೆರವಿನಿಂದಲೇ ನಡೆಸಿದುದು ಉಂಟು. ಸುಬ್ಬಣ್ಣನವರಾದರೋ ’ಕೆರೆಯ ನೀರನ್ನು ಕೆರೆಗೆ ಚೆಲ್ಲಿ’ ಎಂಬಂತೆ ನಿರ್ಮಲ ಹೃದಯದಿಂದ ಕೊಡುಗೈ ದಾನ ಮಾಡುತ್ತಿದ್ದರು.

ಮೂವರು ಗೆಳೆಯರು (ಶೇಷಣ್ಣ, ಸುಬ್ಬಣ್ಣ, ಚಾಮರಾಜ ಒಡೆಯರು)

ಒಂದು ಪ್ರಸಂಗ

ಅರಮನೆಯಲ್ಲಿ ಗಣಪತಿ ಹಬ್ಬವನ್ನು ಆಚರಿಸುತ್ತಿದ್ದುದೇ ಒಂದು ವೈಶಿಷ್ಟ್ಯ. ರಾಜಮನೆತನಕ್ಕೆ ಸೇರಿದ ಒಬ್ಬೊಬ್ಬರ ಹೆಸರಿನಲ್ಲೂ ಒಂದೊಂದು ಗಣಪತಿ ಕೂಡಿಸಿ, ಪೂಜೆ ಮಾಡಿ, ಒಬ್ಬೊಬ್ಬರ ಗಣಪತಿಗೂ ಪ್ರತ್ಯೇಕ ಮಂಗಳಾರತಿ ಮಾಡುತ್ತಿದ್ದರು. ಈ ಮಂಗಳಾರತಿಯ ದಿನ ಒಂದೊಂದು ಕಡೆ ಒಬೊಬ್ಬ ಆಸ್ಥಾನ ವಿದ್ವಾಂಸರ ಕಛೇರಿ ನಡೆಯುತ್ತಿತ್ತು. ಮಹಾರಾಣಿಯವರು ನಡೆಸುತ್ತಿದ್ದ ಗಣೇಶ ಮಂಗಳಾರತಿಯ ದಿನ ಪ್ರತಿ ವರ್ಷವೂ ಸುಬ್ಬಣ್ಣನವರದೇ ಸಂಗೀತವಾಗುತ್ತಿತ್ತು (ಅವರ ಜೊತೆ ಹಲವಾರು ಬಾರಿ ಹಾಡುವ ಭಾಗ್ಯ ಈ  ಲೇಖಕನಿಗಿತ್ತು)

ಒಮ್ಮೆ ಬಿಡಾರಂ ಕೃಷ್ಣಪ್ಪನವರು ಚರುಪಿನ ದಿನ ’ನೀಮದಿ ಚೆಲ್ಲಗ’ ಎಂಬ ಆನಂದಭೈರವಿ ರಾಗದ ಹೊಸ ಕೀರ್ತನೆಯನ್ನು ಹಾಡಬೇಕೆಂದು ಸಿದ್ಧರಾಗುತ್ತಿದ್ದರು. ಆದರೆ ಸುಬ್ಬಣ್ಣನವರಿಗೆ ಆ ಕೀರ್ತನೆಯನ್ನು ಅವರಿಗಿಂತ ಮೊದಲು ತಾವೇ ಹಾಡಬೇಕೆಂದು ಆಸೆ. ಆದರೆ ಆ ಕೀರ್ತನೆಯ ಸಾಹಿತ್ಯ ಅವರಿಗೆ ಪೂರ್ತಿ ಬರುತ್ತಿರಲಿಲ್ಲ. ಪಲ್ಲವಿ ಮಾತ್ರ ಗೊತ್ತಿತ್ತು. ತಮ್ಮ ಕಛೇರಿಯ ದಿನ ’ನೀಮದಿ ಚೆಲ್ಲಗ’ ಎಂದು ಕೀರ್ತನೆಯನ್ನೂ ಆರಂಭಿಸಿಯೇ ಬಿಟ್ಟರು. ಪ್ರಭುಗಳು ಆಸಕ್ತಿಯಿಂದ ಕೇಳುತ್ತಿದ್ದರು. ಪಲ್ಲವಿ ಮುಗಿಯಿತು. ಅನುಪಲ್ಲವಿಯಲ್ಲಿ ’ಸೋಮಶೇಖರುನೀ ರಾಣಿ’ ಎಂಬಷ್ಟು ಸಾಹಿತ್ಯ ಮಾತ್ರ ಗೊತ್ತಿತ್ತು. ಸರಿ, ಅದನ್ನೇ ಹಾಡಲು ಶುರು ಮಾಡಿ ಅದಕ್ಕೇ ನೆರವಲ್ ಮಾಡಿದರು. ಸ್ವರವನ್ನು ಹಾಕಲೂ ಆರಂಭಿಸಿದರು. ಸ್ವರ ಕಲ್ಪನೆ ವಿಸ್ತಾರವಾಗುತ್ತಾ ಹೋಯಿತು. ಮುಗಿಯಲೇ ಇಲ್ಲ! ಒಳಗುಟ್ಟನ್ನೂ ಊಹಿಸಿದ ಪ್ರಭುಗಳು ತಕ್ಷಣ ಎದ್ದು ಒಳಗೆ ಹೊರಟು ಹೋದರು. ’ಬದುಕಿದೆ’ ಎಂದುಕೊಂಡು ಸುಬ್ಬಣ್ಣನವರು ಕಛೇರಿಯನ್ನು ಮುಗಿಸಿದರು. ಅಷ್ಟರಲ್ಲಿ ಮಹಾರಾಜರಿಂದ ಕರೆ ಬಂತು. ಇನ್ನೇನು ಕಾದಿದೆಯೋ ಎಂದು ಹೆದರುತ್ತಾ ಒಳಗೆ ಹೋದರು ಸುಬ್ಬಣ್ಣನವರು ಪ್ರಭುಗಳು, ’ತಮಗೆ ಆ ಕೀರ್ತನೆ ಪೂರ್ತಿಯಾಗಿ ಬರುವುದಿಲ್ಲವೆ?’ ಎಂದು ಕೇಳಿಯೇ ಬಿಟ್ಟರು. ಕೃಷ್ಣಪ್ಪನವರಿಗಿಂತ ಮೊದಲೇ ಹಾಡಬೇಕೆಂದು ಉಂಟಾದ ತಮ್ಮ ಆಸೆಯನ್ನು ತಿಳಿಸಿ, ಕ್ಷಮಿಸಬೇಕೆಂದು ಸುಬ್ಬಣ್ಣನವರು ಕೇಳಿಕೊಂಡರು. ಪ್ರಭುಗಳು ನಕ್ಕು, ’ನಿಮ್ಮ ಉತ್ಸಾಹವೇನೋ ಮೆಚ್ಚುವಂಥಾದ್ದು. ಆದರೆ ನಮಗಾಗುವ ಬೇಸರವನ್ನು ಗಮನಿಸಬೇಕು’ ಎಂದರು. ಸುಬ್ಬಣ್ಣನವರಿಗೆ ಹೊಸ ಹೊಸ ಕೃತಿಗಳನ್ನು ಕಲಿಯಲು ಹಂಬಲ – ಉತ್ಸಾಹ. ಯಾವಾಗಲೂ ಹೊಸ ರಚನೆಗಳು ಇರುವುದು ಅವರ ಗಮನಕ್ಕೆ ಬಂದರೆ, ತಕ್ಷಣವೇ ತಮ್ಮ ಶಿಷ್ಯರನ್ನು ಕಳುಹಿಸಿ ಆ ಹೊಸ ರಚನೆಯನ್ನು ಬರೆಯಿರಿ – ತರಿಸಿ, ತಾವೂ ಕಲಿತು, ತಮ್ಮ ಶಿಷ್ಯರುಗಳಿಗೂ ಪಾಠ ಮಾಡುತ್ತಿದ್ದರು. ಸುಬ್ಬಣ್ಣನವರದು ಒಬ್ಬ ನೈಜ ಕಲಾವಿದನ ಮನೋಧರ್ಮ.

ತಿರುಕ್ಕೋಡಿಕಾವಲ್ ಕೃಷ್ಣಯ್ಯರ‍್

ಶೇಷಣ್ಣ ಮತ್ತು ಸುಬ್ಬಣ್ಣನವರು ಸಮೀಪ ಬಂಧುಗಳು. ಅಲ್ಲದೆ ಇಬ್ಬರೂ ಒಟ್ಟಿಗೆ ಬೆಳೆದವರು. ಆಟ – ಪಾಠ, ಸಂಗೀತ-ಶಿಕ್ಷಣಗಳೆಲ್ಲವನ್ನೂ ಒಟ್ಟಿಗೇ ಅನುಭವಿಸಿದವರು. ಅಲ್ಲದೆ ತಮ್ಮ ತಂದೆಯ ನಂತರ ಸುಬ್ಬಣ್ಣನವರು ಶೇಷಣ್ಣವರಲ್ಲಿ ವೀಣಾ ಅಭ್ಯಾಸವನ್ನು ಮುಂದುವರಿಸಿದರು. ಹೀಗಾಗಿ ಶೇಷಣ್ಣನವರಿಗೆ ಸುಬ್ಬಣ್ಣನವರಲ್ಲಿ ವಿಶೇಷವಾದ ಪ್ರೀತಿ ವಿಶ್ವಾಸ. ಸುಬ್ಬಣ್ಣನವರಿಗೆ ಶೇಷಣ್ಣನವರಲ್ಲಿ ವಿಶೇಷ ಗೌರವ ಆದರ. ಮುಂದೆ ಅರಮನೆಯಲ್ಲಿ ಇಬ್ಬರೂ ಒಟ್ಟಿಗೆ ವೀಣಾವಾದನವನ್ನೂ ನಡೆಸಿದರು. ಈ ದ್ವಂದ್ವ ವೀಣಾವಾದನದ ಜೊತೆಗೆ ಸುಬ್ಬಣ್ಣನವರು ಹಾಡುತ್ತಿದ್ದುದೂ ಉಂಟು.

ಶೇಷಣ್ಣ ಮತ್ತು ಸುಬ್ಬಣ್ಣನವರು  ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯ. ಇಬ್ಬರೂ ಚಾಮರಾಜ ಒಡೆಯರ ಆಸ್ಥಾನ ವಿದ್ವಾಂಸರಾಗಿ ನೇಮಿತರಾದ ತರುಣದಲ್ಲಿ ತಿರುಕ್ಕೋಡಿಕಾವಲ್ ಕೃಷ್ಣಯ್ಯರ‍್ ಅವರು ಮೈಸೂರಿಗೆ ಬಂದರು. ಆಗಿನ ಖ್ಯಾತ ಪಿಟೀಲು ವಿದ್ವಾಂಸರಾದ ಇವರು ಮೈಸೂರಿನ ಪ್ರಮುಖ ಸಂಗೀತಗಾರರ ಮನೆಗಳಿಗೆ ಭೇಟಿಕೊಟ್ಟರು. ಆಗ ಕೃಷ್ಣಯ್ಯರ‍್ ರವರು ಭೇಟಿ ಮಾಡಿದ ಪ್ರತಿಯೊಬ್ಬ ವಿದ್ವಾಂಸರೂ ಒಬ್ಬರಿಗೊಬ್ಬರು ತಿಳಿಯದೆ, ಆಕಸ್ಮಿಕವಾಗಿ ಒಂದೇ ರಾಗದ (ಕಲ್ಯಾಣಿ) ಪಲ್ಲವಿಯನ್ನು ನುಡಿಸಿ ಹಾಡಿದರು. ಕೃಷ್ಣಯ್ಯರ‍್ ರವರು, ’ಮೈಸೂರಿನ ವಿದ್ವಾಂಸರಿಗೆ ಕಲ್ಯಾಣಿ ರಾಗ ಪಲ್ಲವಿಯನ್ನು ಬಿಟ್ಟರೆ ಬೇರೇನೂ ಬರುವುದಿಲ್ಲ’ ಎಂದು ಲಘುವಾಗಿ ಮಾತನಾಡಿದರು. ಈ ಮಾತು ಶೇಷಣ್ಣ ಸುಬ್ಬಣ್ಣನವರ ಕಿವಿಯನ್ನೂ ಮುಟ್ಟಿತು. ಶೇಷಣ್ಣನವರು ಈ ಮಾತನ್ನು ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆದರೆ ಸುಬ್ಬಣ್ಣನವರ ಸ್ವಾಭಿಮಾನ ಕೆರಳಿ ಕೋಪಗೊಂಡು ಈ ವಿಷಯವನ್ನು ಮಹಾರಾಜರಿಗೆ ತಿಳಿಸಿದರು. ಮತ್ತು ಇದಕ್ಕೆ ಪರಿಹಾರವಾಗಿ ಶೇಷಣ್ಣನವರ ವೀಣಾವಾದನದ ಜೊತೆಯಲ್ಲಿ ಕೃಷ್ಣಯ್ಯರ‍್ ರವರ ಪಿಟೀಲು ಏರ್ಪಡಿಸಲು ಸಲಹೆ ಮಾಡಿದರು.  ಅಂತೆಯೇ ಶೇಷಣ್ಣನವರ ವೀಣೆಯ ಜೊತೆಗೆ ಕೃಷ್ಣಯ್ಯರ‍್ ರವರ ಪಿಟೀಲು ಕಛೇರಿ ಏರ್ಪಾಡಾಯಿತು. ಕಛೇರಿ ಶುರುವಾದ ಸ್ವಲ್ಪ ಹೊತ್ತಿನಲ್ಲೇ ಕೃಷ್ಣಯ್ಯರ‍್ ಅವರು ಪಿಟೀಲನ್ನು ಕೆಳಗಿಟ್ಟು ಶೇಷಣ್ಣನವರ ವಾದನ – ಪಾಂಡಿತ್ಯಕ್ಕೆ ತಲೆದೂಗಿದರು. ಹೀಗೆ ಸುಬ್ಬಣ್ಣನವರ ಪ್ರಯತ್ನದಿಂದ ಮೈಸೂರಿನ ಸಂಗೀತಗಾರರ ಗೌರವ ಸ್ವಾಭಿಮಾನ ಹೆಚ್ಚಿತಲ್ಲದೆ, ಶೇಷಣ್ಣನವರ ಕೀರ್ತಿಯೂ ಹರಡಿತು.

ತಿರುಕ್ಕೋಡಿಕಾವಲ್ ಕೃಷ್ಣಯ್ಯನವರಿಗೆ ಸಂಬಂಧಿಸಿದಂತೆ ಮತ್ತೊಂದು ಸಂಗತಿ ನಡೆಯಿತು. ಒಮ್ಮೆ ಚಾಮರಾಜ ಒಡೆಯರು ಅವರಿಗೆ ಅರಮನೆಗೆ ಬಂದು ಸಂಗೀತ ಕಛೇರಿ ನಡೆಸುವಂತೆ ತಂತಿ ಕಳಹಿಸಿದರು. ಕೃಷ್ಣಯ್ಯರ‍್ ಅವರು ಬಹು ದೊಡ್ಡ ಸಂಗೀತಗಾರರು, ಅವರಂತೆ ಪಿಟೀಲು ನುಡಿಸುವವರು ಬಹು ವಿರಳ. ಆದರೆ ಸ್ವಭಾವ ವಿಚಿತ್ರ. ಅವರು ಮೈಸೂರಿಗೆ ಬಂದವರು ನೇರವಾಗಿ ಅರಮನೆಯೊಳಕ್ಕೆ ಹೋಗಲು ಪ್ರಯತ್ನಿಸಿದರು. ಕಾವಲುಗಾರ ತಡೆದ. ಸುಬ್ಬಣ್ಣನವರು ಅವರಿಗೆ ಸಮಾಧಾನ ಮಾಡಿ ತಮ್ಮ ಮನೆಗೆ ಕರೆದುಕೊಂಡು ಹೋದರು. ಊಟಕ್ಕೆ ಕುಳಿತಾಗ ಕೃಷ್ಣಯ್ಯರ‍್ ರವರು, ತಮ್ಮ ಕಛೇರಿ ಅಂದೇ ಮಧ್ಯಾಹ್ನ  ಆಗಬೇಕು, ಮಹಾರಾಜರು ಐದುನೂರು ರೂಪಾಯಿಗಳ ಬಹುಮಾನ ಕೊಡಬೇಕು, ಹಾಗೆ ಸುಬ್ಬಣ್ಣನವರು ಭರವಸೆ ಕೊಟ್ಟರೆ ಮಾತ್ರ ತಾವು ಊಟ ಮಾಡುವುದಾಗಿ ಹೇಳಿದರು. ಸುಬ್ಬಣ್ಣನವರು ಎಷ್ಟು ಸಮಾಧಾನ ಹೇಳಿದರೂ ಕೇಳಲಿಲ್ಲ. ಕಡೆಗೆ ಸುಬ್ಬಣ್ಣನವರು ಒಪ್ಪಿದರು. ಊಟವಾದ ನಂತರ ಮಹಾರಾಜರ ಬಳಿಗೆ ಹೋಗಿ ನಡೆದ ಸಂಗತಿಯನ್ನು ತಿಳಿಸಿದರು. ಮಹಾರಾಜರು ಒಪ್ಪಿದರು.

ಕೃಷ್ಣಯ್ಯರ‍್ ಅವರ ಪಿಟೀಲು ವಾದನ ನಡೆಯಿತು  ಆನಂತರ ಮಹಾರಾಜರು ಅವರಿಗೆ, ’ ನಿಮ್ಮ ಸಂಗೀತ ಕಛೇರಿ ಅಮೋಘವಾಗಿತ್ತು. ಐದು ಸಾವಿರ ರೂಪಾಯಿ ಕೊಟ್ಟರೂ ಕಡಿಮೆಯೇ. ಆದರೆ ನೀವು ಐದು ನೂರು ರೂಪಾಯಿಗಳನ್ನೇ ಕೊಡಬೇಕೆಂದು ಹೇಳಿದಿರಂತೆ’ ಎಂದು ಹೇಳಿ ತಟ್ಟೆಯಲ್ಲಿ ಐದು ನೂರು ರೂಪಾಯಿಗಳನ್ನು ಇಟ್ಟು ಕೊಟ್ಟರು!

ಕೃಷ್ಣಯ್ಯರ‍್ ಅವರಿಗೆ ತಾವು ಮಾಡಿದ್ದು ತಪ್ಪು ಎಂದು ತಿಳಿಯಿತು. ಮನಸ್ಸಿಗೆ ವ್ಯಥೆಯಾಯಿತು. ಸುಬ್ಬಣ್ಣನವರ ಮನೆಗೆ ಬಂದು, ’ಏನು ಸುಬ್ಬಣನವರೇ ಹೀಗೆ ಮಾಡಿದಿರಿ, ನನಗೆ ಬರುತ್ತಿದ್ದ ಹೆಚ್ಚಿಗೆ ಸಂಭಾವನೆ ತಪ್ಪಿಹೋಯಿತು’ ಎಂದು ಆಕ್ಷೇಪಿಸಿದರು. ಸುಬ್ಬಣ್ಣನವರು, ’ನಾನು ನಿಮಗೆ ಹೇಳಿದೆ. ಸಂಭಾವನೆಯ ವಿಷಯ ಮಹಾರಾಜರಿಗೆ ಬಿಡಿ ಎಂದು. ನೀವೇ ಹಠ ಹಿಡಿದಿರಿ. ಒಪ್ಪದಿದ್ದರೆ ಊಟ ಮಾಡುವುದಿಲ್ಲ ಎಂದು. ಹಠ ಹಿಡಿದಿದ್ದು ಸರಿಯೇ?’ ಎಂದು ಕೇಳಿದರು.

ಬೇರೆ ಯಾರಾದರೂ ಆಗಿದ್ದಲ್ಲಿ, ಕೃಷ್ಣಯ್ಯರ‍್ ಅವರ ಹಠಕ್ಕೆ ತಕ್ಕ ಶಿಕ್ಷೆಯಾಯಿತು ಎಂದು ಅಲ್ಲಿಗೇ ಬಿಡುತ್ತಿದ್ದರು. ಆದರೆ ಸುಬ್ಬಣ್ಣನವರು ಮತ್ತೆ ಮಹಾರಾಜರನ್ನು ಕಂಡು, ’ಕೃಷ್ಣಯ್ಯರ‍್ ಮಾಡಿದ್ದು ತಪ್ಪು. ಈಗ ಅವರಿಗೆ ತಪ್ಪು ಗೊತ್ತಾಗಿದೆ. ತಾವು ಕ್ಷಮಿಸಿ ಮತ್ತೆ ಅವರ ಸಂಗೀತ ಕೇಳಬೇಕು’ ಎಂದು. ವಿನಂತಿ ಮಾಡಿದರು. ಅರಮನೆಯಲ್ಲಿ ಮತ್ತೆ ಕೃಷ್ಣಯ್ಯರ‍್ ಅವರ ಸಂಗೀತವನ್ನು ಏರ್ಪಡಿಸಿದರು. ಮಹಾರಾಜರು ಅವರಿಗೆ ಒಂದು ಸಾವಿರ ರೂಪಾಯಿಗಳನ್ನು ವಜ್ರದ ಉಂಗುರವನ್ನೂ ಕೊಟ್ಟರು. ಸುಬ್ಬಣ್ಣನವರು ತಮ್ಮ ಮನೆಯಲ್ಲೂ ಕೃಷ್ಣಯ್ಯರ‍್ ಅವರ ಕಛೇರಿಯನ್ನು ಏರ್ಪಡಿಸಿ ತಾವೂ ಅವರಿಗೆ ಸನ್ಮಾನ ಮಾಡಿ ಕಳುಹಿಸಿದರು. ಇಂತಹ ಔದಾರ್ಯ ಸುಬ್ಬಣ್ಣನವರದು.

ಶೇಷಣ್ಣನವರಿಗಾಗಿ

ಇನ್ನೊಂದು ಘಟನೆಯೂ ಇಲ್ಲಿ ಸ್ಮರಣಾರ್ಹ. ಒಮ್ಮೆ ಶೇಷಣ್ಣನವರು ಮಹಾರಾಜ ಚಾಮರಾಜ ಒಡೆಯರಲ್ಲಿ ಆರ್ಥಿಕ ನೆರವನ್ನು ಕೋರಿದರು. ಪ್ರಭುಗಳು ಕಾರ್ಯ ಬಾಹುಳ್ಯದಿಂದ ಈ ನೆರವು ಕೇಳಿದ್ದನ್ನು ಮರೆತರು. ಶೇಷಣ್ಣನವರು ನೊಂದ ಹೃದಯದಿಂದ ಕೆಲವು ದಿನಗಳು ಅರಮನೆಗೇ ಹೋಗಲಿಲ್ಲ. ಆದರೆ ನಿತ್ಯವೂ ಮಹಾರಾಜರ ಮೇಲೆ ಒಂದೊಂದು ತಿಲ್ಲಾನವನ್ನು  ರಚಿಸಿ, ಸುಬ್ಬಣ್ಣನವರಿಗೆ ಅವನ್ನು ಪಾಠ ಮಾಡಿದರು. ಸುಬ್ಬಣ್ಣನವರು ಈ ತಿಲ್ಲಾನಗಳನ್ನು ಮಹಾರಾಜರೆದುರಿಗೆ ಅವರ ಮನ ಒಲಿಸುವಂತೆ ಹಾಡಿ, ಶೇಷಣ್ಣನವರು ಕೇಳಿದ್ದ ನೆರವನ್ನು ಕೊಡಿಸಿದರು. ಹೀಗೆ ಸುಬ್ಬಣ್ಣನವರು ಶೇಷಣ್ಣನವರ ಕಷ್ಟ ಸುಖದಲ್ಲಿ ಬೆರೆತ ಆತ್ಮೀಯರಾದರು.

ಕಹಿಯನ್ನು ಕಳೆದ ಸಂಗೀತ

ಆದರೆ ಯಾವ ಮಾತನ್ನೇ ಆಗಲಿ ನಂಬಿ ಬಿಡುವ ಸುಬ್ಬಣ್ಣನವರ ಮುಗ್ಧ ಸ್ವಭಾಗದ ದುರುಪಯೋಗವನ್ನು ಕೆಲವರು ಪಡೆದುಕೊಂಡು, ಅವರಿಬ್ಬರ ಸ್ನೇಹಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಿದ್ದರು. ಹೀಗಾಗಿ ಅವರಿಬ್ಬರ ಮಧ್ಯೆ ಆಗಾಗ ಮೌನ ತಲೆ ಎತ್ತುತ್ತಿತ್ತು. ಒಮ್ಮೆ ಅವರಿಬ್ಬರಲ್ಲಿ ಈ ಮೌನದ ಗೋಡೆ ಎದ್ದಾಗ ಸುಬ್ಬಣ್ಣನವರಿಗೆ ಹೊಸ ಚಪ್ಪಲಿ ಕಚ್ಚಿ ಕಾಲಿನಲ್ಲಿ ಒಂದು ಸಣ್ಣ ಗಾಯವಾಯಿತು. ಆದರೆ ಅದು ಬೆಳೆದು ವ್ರಣವಾಗಿ ಅವರ ಪ್ರಾಣಕ್ಕೆ ಅಪಾಯವುಂಟಾಗುವಂತಾಯಿತು. ಸಾಯುವುದಕ್ಕೆ ಮುಂದೆ ಶೇಷಣ್ಣನವರ ವೀಣೆಯನ್ನಾದರೂ ಕೇಳಿ ಸಾಯೋಣವೆಂದು ನಿರ್ಧರಿಸಿ ಸುಬ್ಬಣ್ಣನವರು ಅವರಿಗೆ ಹೇಳಿ ಕಳುಹಿಸಿದರು. ಸುಬ್ಬಣ್ಣನವರ ಖಾಯಿಲೆಯ ವಿಷಯ ಕೇಳಿ ದುಃಖಿತರಾದ ಶೇಷಣ್ಣನವರು ಒಡನೆಯೇ ವೀಣೆಯನ್ನು ತೆಗೆದುಕೊಂಡು ಅವರ ಮನೆಗೆ ಹೋದರು. ಸುಬ್ಬಣ್ಣನವರ ತಲೆ ನೇವರಿಸಿ, ಸಾಂತ್ವನದ ಮಾತುಗಳನ್ನಾಡಿ, ’ಯಾವ ರಾಗವನ್ನು ನುಡಿಸಲಿ?’ ಎಂದು ಕೇಳಿದರು. ಇಬ್ಬರಿಗೂ ಪ್ರಿಯವಾದ ಬೆಹಾಗ್ ರಾಗವನ್ನು ನುಡಿಸಿ ಜಿಂಝೋಟಿ ರಾಗಾಲಾಪನೆಗೆ ಆರಂಭಿಸಿದರು. ಈ ರಾಗ ಶೇಷಣ್ಣನವರಿಗೆ ಒಲಿದು ಬಂದದ್ದು. ಆ ನಾದ ಮಾಧುರ್ಯದಲ್ಲಿ ಮುಳುಗಿದ ಸುಬ್ಬಣ್ಣನವರಿಗೆ ಅರಿವೇ ಇಲ್ಲದಂತೆ ನಿದ್ದೆ ಬಂದಿತು. ಹದಿನೈದು ದಿನಗಳಾಗಿತ್ತು ಸುಬ್ಬಣ್ಣನವರು ನಿದ್ದೆ ಮಾಡಿ. ಶೇಷಣ್ಣನವರ ನೆಮ್ಮದಿಯ ವೀಣಾವಾದನವನ್ನು ಕೇಳಿ ಮಗುವಿನಂತೆ ಮಲಗಿದರು. ಶೇಷಣ್ಣನವರು ’ಎಚ್ಚರವಾದಾಗ ನನಗೆ ತಿಳಿಸಿ’ ಎಂದು ಹೇಳಿ ಹೊರಟರು. ಮಾರನೆಯ ದಿನ ಬೆಳಿಗ್ಗೆ ಸುಬ್ಬಣ್ಣನವರು ಎದ್ದಾಗ ಬಾಧೆ ಕೊಡುತ್ತಿದ್ದ ಅವರ ಕಾಲಿನ ಗಾಯ ಒಡೆದು, ನೋವೆಲ್ಲಾ ಮಾಯವಾಗಿತ್ತು. ಕೆಲವು ದಿನಗಳಲ್ಲೇ ಪೂರ್ತಿ ಚೇತರಿಸಿಕೊಂಡು ಶೇಷಣ್ಣನವರ ಮನೆಗೆ ಹೋಗಿ ಎರಡು ಸಾವಿರ ರೂಪಾಯಿ ನಗದು, ಒಂದು ಜೊತೆ ಕಲಾಪತ್ತಿನ ಪಂಚೆ ಮತ್ತು ದುಪ್ಪಟಗಳನ್ನು ಸಮರ್ಪಿಸಿ ಅವರಿಗೆ ದೀರ್ಘದಂಡ ನಮಸ್ಕಾರ ಮಾಡಿದರು. ಇಬ್ಬರ ಕಣ್ಣುಗಳೂ ಹನಿಗೂಡಿದ್ದವು.

ಸುಬ್ಬಣ್ಣನವರು ಶೇಷಣ್ಣನವರಿಗೆ ಉಡುಗೊರೆ ಸಮರ್ಪಿಸಿದರು.

ರಸಿಕತೆ

ಸುಬ್ಬಣ್ಣನವರು ರಸಿಕಾಗ್ರೇಸರ, ಗಂಧ, ಹೂ, ಸುಗಂಧ ದ್ರವ್ಯಗಳೆಂದರೆ ಅವರಿಗೆ ಬಲು ಪ್ರಿಯ. ದೊಡ್ಡ ಅಂಚಿನ ಸೊಗಸಾದ ಜರಿಯ ಪಂಚೆ, ಜರಿಯ ಪೇಟ, ಬೆಲೆಬಾಳುವ, ಸುಗಂಧ ಪೂಸಿದ ನಿಲುವಂಗಿಯನ್ನು ಧರಿಸಿ, ಬೆಳ್ಳಿಯ ಹಿಡಿಯ ಕರೀಮರದ ಬೆತ್ತ ಹಿಡಿದು ಸುಂದರವಾದ ಪಾದರಕ್ಷೆಯನ್ನು ಧರಿಸಿ ಸುಬ್ಬಣ್ಣನವರು ಹೊರಟರೆ ಎಂಥವರೂ ಒಂದು ಕ್ಷಣ ದಂಗಾಗಿ ನೋಡುವಂತಾಗುತ್ತಿತ್ತು. ಒಂದು ಫರ್ಲಾಂಗ್ ದೂರದಿಂದಲೇ ಘಮಘಮಸಿಸುವ ವಾಸನೆಯಿಂದ ಸುಬ್ಬಣ್ಣನವರು ಬರುತ್ತಿದ್ದಾರೆಂದು ಹೇಳಬಹುದಾಗಿತ್ತು.

ಔದಾರ್ಯ – ಶಿಷ್ಟವಾತ್ಸಲ್ಯ

ನೋಡಲು ಸುಂದರ ವ್ಯಕ್ತಿ. ಒಳ್ಳೆಯ ಬಿಳುಪು, ರಾಜಠೀವಿಯ ನಡಿಗೆ, ಅಗಲವಾದ ಕಿವಿ. ಎದ್ದು ಕಾಣುವ ಮೂಗು, ಒಟ್ಟಿನಲ್ಲಿ ಆಕರ್ಷಕ ವ್ಯಕ್ತಿತ್ವ. ಸ್ವಭಾವ ಮಗುವಿನಷ್ಟೇ ಸರಳ. ಬಹು ಮೃದು ಮನಸ್ಸು. ಬೇಡಿದವರಿಗೆ ಹಿಂದೆ ಮುಂದೆ ನೋಡದೇ ಸಹಾಯ ಮಾಡುವ ಉದಾರ ಮನಸ್ಸು. ವಿಶಾಲ ಮನಸ್ಸಿನ ನಿರಹಂಕಾರಿ.

ಶೇಷಣ್ಣನವರು ದಿವಂಗತರಾದ ಮೇಲೆ ಸುಬ್ಬಣ್ಣನವರಲ್ಲಿ ಶಿಕ್ಷಣ ಮುಂದುವರಿಸಬೇಕೆಂದು ಈ ಲೇಖಕನಿಗೆ ನಾಲ್ವರಿ ಕೃಷ್ಣರಾಜರು ಅಪ್ಪಣೆ ಮಾಡಿದರು. ಒಮ್ಮೆ ಅನಿರೀಕ್ಷಿತವಾಗಿ ಈ ಶಿಷ್ಯನನ್ನು ಪ್ರಭುಗಳು ಪರೀಕ್ಷಿಸಿ, ಶಿಕ್ಷಣ ತೃಪ್ತಿಕರವಾಗಿದೆಯೆಂದು ಸಂತೋಷಪಟ್ಟರು. ತಮ್ಮ ಮೆಚ್ಚಿಗೆಯನ್ನು ಸೂಚಿಸಲು ಸುಬ್ಬಣ್ಣನವರಿಗೆ ಐದು ನೂರು ರೂಪಾಯಿಗಳ ಸಂಭಾವನೆಯನ್ನು ದಯ ಪಾಲಿಸಿದರು. ಆದರೆ ಆಚಾತುರ್ಯದಿಂದಾಗಿ ಅರಮನೆಯ ದರ್ಬಾರು ಭಕ್ಷಿಗಳವರು ಆ ಹಣವನ್ನು ಸುಬ್ಬಣ್ಣನವರ ಬದಲು ಶಿಷ್ಯನಿಗೆ ಕೊಟ್ಟುಬಿಟ್ಟರು. ಮೂರು ದಿನಗಳ ನಂತರ ಭಕ್ಷಿಗಳು ಇಬ್ಬರನ್ನೂ ತಮ್ಮ ಕಛೇರಿಗೆ ಕರೆಸಿ, ನಡೆದ ಆಚಾತುರ್ಯವನ್ನು ಹೇಳಿದರು. ತಕ್ಷಣವೇ ಸುಬ್ಬಣ್ಣನವರು, ’ನಾನೇ ಸಂತೋಷವಾಗಿ ಆ ದುಡ್ಡನ್ನು ವೆಂಕಟನಾರಾಯಣನಿಗೆ (ಶಿಷ್ಯನಿಗೆ) ಕೊಟ್ಟಿದ್ದೇನೆಂದು ಮಹಾರಾಜರಿಗೆ ತಿಳಿಸಿಬಿಡಿ’ ಎಂದು ಹೇಳಿಬಿಟ್ಟರು. ಸ್ವಲ್ಪವಾದರೂ ಹಿಂದೆ ಮುಂದೆ ನೋಡಲಿಲ್ಲ. ಅಂಥ ಉದಾರ ಸ್ವಭಾವ ಅವರದು.

ಹೀಗೆಯೇ ಕಡೆಗಾಲದಲ್ಲಿ ತಾವು ನುಡಿಸುತ್ತಿದ್ದ ಬೆಳ್ಳಿ – ರತ್ನ ಖಚಿತವಾದ ವೀಣೆಯನ್ನು ಸಹ ತಮ್ಮ ಶಿಷ್ಯರಲ್ಲೊಬ್ಬರಾದ ಕೇಶವಮೂರ್ತಿಗಳಿಗೆ ನೀಡಿ ಅನುಗ್ರಹಿಸಿದರು. ಅವರಿಂದ ಶಿಕ್ಷಣವನ್ನು ಹೊಂದುವುದೆಂದರೆ ಅದೊಂದು ಮಹಾ ಸುಯೋಗ. ಶಿಷ್ಯರನ್ನು ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಸುಬ್ಬಣ್ಣನವರಿಗೆ ಗುರುರಾಜ ಎಂಬ ಮಗನಿದ್ದ. ಮೂರು ವರ್ಷವಾಗಿದ್ದಾಗಲೇ ಹುಡುಗ ತೀರಿಕೊಂಡ. ಸುಬ್ಬಣ್ಣನವರು ಶಿಷ್ಯರನ್ನೇ ಮಕ್ಕಳೆಂದು ಭಾವಿಸಿದ್ದರು. ಅವರಿಗೆ ಎಂಬತ್ತು ವರ್ಷ ವಯಸ್ಸಾದಾಗ ಮಿತ್ರರೂ ಶಿಷ್ಯರೂ ಅವರನ್ನು ಅಭಿನಂದಿಸಲು ಒಂದು ಸಮಾರಂಭವನ್ನು ಏರ್ಪಡಿಸಿದ್ದರು. ಅಲ್ಲಿ ಮಾತನಾಡುತ್ತ ಸುಬ್ಬಣ್ಣನವರು, ಶಿಷ್ಯರನ್ನು ಕುರಿತು, ’ಮಕ್ಕಳನ್ನು ಕಳೆದುಕೊಂಡ ನನಗೆ ಕುಂದುಂಟಾಗದಂತೆ ನೀವುಗಳು ಪುತ್ರರಂತೆ ವರ್ತಿಸುತ್ತಾ ನನ್ನ ನೆರಳಿನಂತಿರುವುದರಿಂದ ನನ್ನ ದುಃಖಗಳನ್ನೆಲ್ಲ ಮರೆತು ಶಾಂತನಾಗಿದ್ದೇನೆ’ ಎಂದರು.

ಸುಬ್ಬಣ್ಣನವರು ಶಿಷ್ಯರಿಗೆ ಮನಸ್ಸಿಟ್ಟು ಪಾಠ ಹೇಳುತ್ತಿದ್ದರು. ಆದರೆ ಮನಸ್ಸು ಬಂದಾಗ ಮಾತ್ರ ಪಾಠ ಹೇಳುವರು.  ಆ ಒಂದು ದಿನದ ಪಾಠ ಅನೇಕ ದಿನಗಳ ಸಾಧನೆಗೆ ವಸ್ತುವಾಗುತ್ತಿತ್ತು. ಅನೇಕ ಸಲ ಶಿಷ್ಯರ ಜೊತೆಯಲ್ಲಿ ತಾವೂ ನುಡಿಸಿ, ಅವರ ಜ್ಞಾನ ಹೆಚ್ಚುವಂತೆ ಮಾಡುತ್ತಿದ್ದರು. ಸಾಧನೆ ಮಾತ್ರ ನಿತ್ಯವೂ ನಡೆಯುತ್ತಿತ್ತು. ವಿಜಯನಗರದ ಗುರು ಯಾರು ರಚಿಸಿದ ಮೋಹನ ರಾಗದ ಸರಸ್ವತಿ, ಭೈರವಿ ರಾಘದ ವಿರಿಭೋಣಿ ವರ್ಣ, ತಮ್ಮ ಸ್ವಂತ ರಚನೆಯಾದ ಕರ್ನಾಟಕ ಕಾಪಿ ರಾಗದ ಸ್ವರಜತಿ ಇವುಗಳನ್ನು ನಿತ್ಯವೂ ೩ ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿದ್ದರು. ಶಂಕರಾಭರಣ ರಾಗದ ಮೇಲೆ ಅವರಿಗೆ ತುಂಬಾ ಪ್ರೀತಿ. ಆ ರಾಗದಲ್ಲಿ ತ್ಯಾಗರಾಜರ ಕೃತಿ ’ಸ್ವರರಾಗ ಸುಧಾರಸ ಕೀರ್ತನೆಯನ್ನು ಪದೇ ಪದೇ ನುಡಿಸುತ್ತಿದ್ದರು.

ಸುಬ್ಬಣ್ಣನವರ ಸಂಗೀತ ಶೈಲಿ

ಸುಬ್ಬಣ್ಣನವರು ಸಿದ್ಧ ಪುರುಷರು. ಮೈಸೂರು ಸದಾಶಿವರಾಯರು, ದೊಡ್ಡ ಶೇಷಣ್ಣನವರು, ವೀಣೆ ಶೇಷಣ್ಣವರಂಥ ಪ್ರತಿಭಾನ್ವಿತರಿಂದ ಶಿಕ್ಷಣ ಪಡೆದು, ಹಠ ಸಾಧನೆಯಿಂದ ತಮ್ಮದೇ ಆದ ಶೈಲಿ ರೂಪಿಸಿಕೊಂಡಿದ್ದರು. ಸಕಲ ರಾಗಗಳ ತತ್ತ್ವ ಮರ್ಮವನ್ನು ಅವರು ಅರಿತಿದ್ದರು. ಅವರದು ಮನೋಧರ್ಮಯುತವಾದ ಸಂಗೀತ. ತಮ್ಮ ಕಛೇರಿಯ ಬಹು ಭಾಗವನ್ನು ರಾಗ, ಮಧ್ಯಮ ಕಾಲ, ಪಲ್ಲವಿಗಳಿಗೇ ಮೀಸಲಾಗಿಡುತ್ತಿದ್ದರು. ರಾಗವನ್ನು ಹಂತಹಂತವಾಗಿ ವಿಸ್ತರಿಸುತ್ತಾ, ರಾಗದ ಭಾವ ರಸವನ್ನು ಪೂರ್ಣವಾಗಿ ಹೊರಹೊಮ್ಮಿಸಿ ಪರಿಣಾಮಕಾರಿಯಾಗಿ ನಾದಾನುಭಾವ ಉಂಟುಮಾಡುತ್ತಿದ್ದರು. ಕೊನೆಯಲ್ಲಿ ರಂಜನೆಗಾಗಿ ದೇಶೀ ರಾಗಗಳು, ತಿಲ್ಲಾನಗಳನ್ನು ನುಡಿಸುತ್ತಿದ್ದರು. ಸಂಗೀತ ಕಛೇರಿಯಲ್ಲಿ ಕೇಳುವವರ ಹೃದಯವನ್ನು ಮುಟ್ಟುವಂತೆ, ಮನಸ್ಸಿಗೆ ಸಂತೋಷವಾಗುವಂತೆ ಹಾಡುತ್ತಿದ್ದರು. ತಂತ್ರಕ್ಕೆ ವಿಶೇಷ ಲಕ್ಷ್ಯಕೊಟ್ಟು ಕಸರತ್ತು ಮಾಡುತ್ತಿರಲಿಲ್ಲ.

ಭೋಗದ ನಡುವೆ ಯೋಗಿ

ಅಷ್ಟು ಐಶ್ವರ್ಯವಂತರಾಗಿ, ಭೋಗಿಳಾಗಿದ್ದರೂ ಅಂತರಂಗದಲ್ಲಿ ಅವರು ಯೋಗಿಯೇ ಆಗಿದ್ದರು. ಬಿಡುವಿನ ಸಮಯದಲ್ಲೆಲ್ಲಾ ತಮ್ಮ ಕುಲದೈವವಾದ ಶ್ರೀನಿವಾಸನ ಹಾಗೂ ಗುರು ರಾಘವೇಂದ್ರ ಸ್ವಾಮಿಗಳ ನಾಮಸ್ಮರಣೆ ಮಾಡುತ್ತಿದ್ದರು. ನೋಡುವವರಿಗೆ ಅವರ ಭೋಗ ಹೆಚ್ಚಾಗಿ ಕಂಡು ಬಂದರೂ ಅವರಿಗೆ ವಿಶೇಷವಾದ ಗುರುಭಕ್ತಿ. ನಿತ್ಯವೂ ಮನೆಯಲ್ಲಿ ದೇವತಾರ್ಚನೆ, ಅತಿಥಿಗಳಿಗೆ ಅಪೋಶನ ಹಾಕಿ, ಆನಂತರ ತಾವು ತೀರ್ಥವನ್ನು ತೆಗೆದುಕೊಂಡೇ ಭೋಜನಕ್ಕೆ ಆರಂಭಿಸುತ್ತಿದ್ದರು. ರಾತ್ರಿ ಊಟವಾದ ನಂತರ ಯಾವುದಾದರೂ ಪುರಾಣ ಕಥೆಯನ್ನು ಕೇಳಿ ಮಲಗುತ್ತಿದ್ದರು. ಐಶ್ವರ್ಯ ಇದ್ದಾಗ ಅಹಂಭಾವ ಇರಲಿಲ್ಲ. ಆಗಿನ ಕಾಲದ ಹತ್ತು ಹನ್ನೆರಡು ಲಕ್ಷ ರೂಪಾಯಿಗಳ (ಈಗ ಸುಮಾರು ಎರಡು ಕೋಟಿ ರೂಪಾಯಿಗಳ) ಆಸ್ತಿ ಎಲ್ಲ ಬಹುಮಟ್ಟಿಗೆ ದಾನದಿಂದ ಕರಗಿಹೋಯಿತು. ತಮ್ಮ ಎಂಬತ್ತನೆಯ ವರ್ಷದ ಸಮಾರಂಭದಲ್ಲಿ ಅವರೇ, ’ಈಗ ಒಂದು ಕವಡೆಯೂ ನನ್ನ ಕೈಯಲ್ಲಿಲ್ಲ’ ಎಂದರು. ಅಷ್ಟು ಆಸ್ತಿ ಹೊರಟು ಹೋದಾಗ, ಹೋಯಿತೆಂದು ಕೊರಗಲೂ ಇಲ್ಲ. ತಾವರೆಯ ಎಲೆ ಮೇಲಿನ ನೀರ ಹನಿಯಂತೆ ಸಂಸಾರಕ್ಕೆ  ಅಂಟಿಯೂ ಅಂಟದಂತಿದ್ದರು.

ಕೃತಿ ರಚನೆ

ಅನೇಕ ಕೃತಿಗಳನ್ನೂ ಸುಬ್ಬಣ್ಣನವರು ರಚಿಸಿದ್ದಾರೆ. ಕಾಂಬೋದಿ, ಕರ್ನಾಟ ಕಾಪಿ, ಕೀರವಾಣಿ ರಾಗಗಳಲ್ಲಿ ಸ್ವರಜತಿ- ವರ್ಣಗಳು; ಧರ್ಮವತಿ, ಧೇನುಕ, ಋಷಭಪ್ರಿಯ, ಗಮನಶ್ರಮ ರಾಗಗಳಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅಠಾಣ ರಾಗದ ವರ್ಣವು ಹೆಚ್ಚು ಪ್ರಖ್ಯಾತವಾದುದು. ಒಂದು ನವರಾಗ ಮಾಲಿಕೆಯನ್ನು ಕನ್ನಡ ಸಾಹಿತ್ಯದಲ್ಲಿ ರಚಿಸಿದ್ದಾರೆ.

ಅವರಿಗೆ ಎಂಬತ್ತು ವರ್ಷಗಳಾದಾಗ ಅವರ ಶಿಷ್ಯರು ಹಾಗೂ ಅಭಿಮಾನಿಗಳೆಲ್ಲ ಸೇರಿ ಅವರ ಸನ್ಮಾನೋತ್ಸವವನ್ನು ಮೈಸೂರಿನಲ್ಲಿ ಏರ್ಪಡಿಸಿದರು. ಆಗ ಅವರುಗಳು ಸುಬ್ಬಣ್ಣನವರಿಗೆ ಅರ್ಪಿಸಿದ ಅಭಿನಂದನಾ ಪತ್ರಿಕೆಯನ್ನು ಹಾಗೂ ಅದಕ್ಕೆ ಉತ್ತರವಾಗಿ ಸುಬ್ಬಣ್ಣನವರು ಹೇಳಿರುವ ಮಾತುಗಳನ್ನು ನೋಡಿದರೆ ಸುಬ್ಬಣ್ಣನವರಲ್ಲಿ ಸಂಗೀತ ರಸಿಕರಿಗೆ ಇದ್ದ ಪ್ರೀತಿ ಅಭಿಮಾನಿಗಳು ಹಾಗೂ ಸುಬ್ಬಣ್ಣನವರ ಉದಾತ್ತ ಭಾವನೆಗಳು ವ್ಯಕ್ತವಾಗುತ್ತವೆ. ಅಂದು ಸುಬ್ಬಣ್ಣನವರು ಹೇಳಿದ ಕೆಲವು ಮಾತುಗಳು ಇವು ’ಪ್ರಿಯ ಶಿಷ್ಯರೆ, ನಾನು ನಿಮಗೆ ಪಾಠ ಹೇಳಿರುವುದು ಸ್ವಲ್ಪವಾದರೂ ನಿಮ್ಮ ಸ್ವಂತ ಬುದ್ಧಿಯಿಂದಲೂ ದೊಡ್ಡವರಾದ ಘನ ವಿದ್ವಾಂಸರ ಸಂಗೀತ ಶ್ರವಣದಿಂದಲೂ ನಿಮ್ಮ ಅಮೋಘವಾದ ಸಾಧನೆಯಿಂದಲೂ ಅನುಭವದಿಂದಲೂ ವಿದ್ಯೆಯನ್ನು ಹೆಚ್ಚಿಸಿಕೊಂಡಿರುತ್ತೀರಿ’.

ಪಾಶ್ಚಾತ್ಯರನ್ನು ಮೆಚ್ಚಿಸಿದ ಸಂಗೀತ

ರಾಮನಾಥಪುರದ ಖ್ಯಾತ ಸಂಗೀತ ವಿದ್ವಾಂಸರಾದ ಪೂಚಿ ಶ್ರೀನಿವಾಸಯ್ಯಂಗಾರ‍್ ಅವರು ಸುಬ್ಬಣ್ಣನವರ ಸಂಗೀತ ಕಛೇರಿಯನ್ನು ಮದ್ರಾಸಿನ  ’ಕೊಂಡಮಂಡಲ್ ಪಾಠಶಾಲೆ’ ಯಲ್ಲಿ ವ್ಯವಸ್ಥೆ ಮಾಡಿದರು. ಅಂದಿನ ಪ್ರಸಿದ್ಧ ವಿದ್ವಾಂಸರುಗಳಾದ ಆಳಗನಂಬಿ ಪಿಳ್ಳೆಯವರ ಮೃದಂಗ ಮತ್ತು ಮಾಮಂಡಿಯ ಪಿಳ್ಳೆ ಅವರ ಖಂಜಿರ ಪಕ್ಕವಾದ್ಯವನ್ನು ಏರ್ಪಡಿಸಿದರು. ಕರ್ನಾಟಕ ಸಂಗೀತದ ಖ್ಯಾತ ವಿದ್ವಾಂಸನ ಸಂಗೀತ ಕೇಳಲು ಸಭೆ ತುಂಬಿಹೋಗಿತ್ತು.  ವೀಣೆಯ ನಾದ ಸಭೆಯಲ್ಲೆಲ್ಲಾ ಝೇಂಕರಿಸತೊಡಗಿತು. ಸುಬ್ಬಣ್ಣನವರ ವೀಣೆಯ ಮೀಟು ಶ್ರೋತೃಗಳ ಹೃದಯ ಮಿಡಿಯತೊಡಗಿಸಿತು. ಅದರೊಡನೆ ಅವರ ಇಂಪಾದ ಶಾರೀರದ ಹಾಡಿಕೆಯೂ ಕೂಡಿತು. ಜೇನಿನಂಥ ಶಾರೀರದ ಗಾಯನ, ಸಕ್ಕರೆಯಂಥ ವಿನಿಕೆ – ಎರಡೂ ಸೇರಿ ಶ್ರೋತೃಗಳಿಗೆ ಮರೆಯಲಾಗದ ಅಪೂರ್ವ ಅನುಭವವಾಯಿತು. ವೈಣಿಕ – ಶ್ರೋತೃಗಳಿಬ್ಬರೂ ಸಮಯದ ಪರಿವೆಯಿಲ್ಲದೆ ಅನೇಕ ಗಂಟೆಗಳ ಕಾಲ ನಾದಲೋಕದಲ್ಲಿ ಸಂಚರಿಸಿದರು. ಸುಬ್ಬಣ್ಣನವರ ಉನ್ನತಮಟ್ಟದ ಗಾನಸಹಿತವಾದ ವೀಣಾ ವಾದನದಿಂದ ಆನಂದಭರಿತರಾದ ಅಲ್ಲಿಯ ಶ್ರೋತೃಗಳು, ಅವರಿಗೆ ರತ್ನಖಚಿತವಾದ ತೋಡಾವನ್ನು ಕೊಟ್ಟು ಗೌರವಿಸಿದರು.

ಸುಬ್ಬಣ್ಣನವರ ಸಂಗೀತದ ಖ್ಯಾತಿ ಅಂದಿನ ಮದರಾಸಿನ ಗರ್ವನರ‍್ ಅವರಿಗೂ ಮುಟ್ಟಿತು. ಅವರ ಸಮ್ಮುಖದಲ್ಲೂ ಸುಬ್ಬಣ್ಣನವರ ಕಛೇರಿ ಏರ್ಪಾಡಾಯಿತು. ಭಾರತೀಯ ಸಂಗೀತದ ಗಂಧವೂ ಇಲ್ಲದ ಆ ಪಾಶ್ಚಾತ್ಯ ಅಧಿಕಾರಿಯನ್ನೂ ಸುಬ್ಬಣ್ಣನವರ ಸಂಗೀತ ಸೆರೆ ಹಿಡಿಯಿತು. ಸುಬ್ಬಣ್ಣವರ ಸಂಗೀತದ ನಾದ ಮಾಧುರ್ಯಕ್ಕೆ ವಶವಾಗಿ ಗವರ್ನರ‍್ ಅವರು ಗೊತ್ತುಪಡಿಸಿದ್ದಕ್ಕಿಂತ ಹೆಚ್ಚು ವೇಳೆ ಸಂಗೀತ ಕೇಳುತ್ತಾ ಕುಳಿತರು. ಕಛೇರಿಯ ನಂತರ ಗವರ್ನರ‍್ ಸುಬ್ಬಣ್ಣನವರನ್ನು ಮನಸಾರೆ ಅಭಿನಂದಿಸಿ ಗೌರವಿಸಿದರು.

ಸಂಗೀತ ಕಲೆಗೆ ದೇಶ ಭಾಷೆಗಳ ಗಡಿಯಿಲ್ಲ. ಉನ್ನತ ಕಲೆ ಯಾವುದೇ ದೇಶ ಸಂಸ್ಕೃತಿಯ ಜನರ‍ನ್ನು ಸೆರೆ ಹಿಡಿಯಬಲ್ಲದು ಎಂಬುದಕ್ಕೆ ಸುಬ್ಬಣ್ಣನವರೇ ಸಾಕ್ಷಿ. ಮೈಸೂರು ಅರಮನೆಗೆ ಬಂದ ಅನೇಕ ಪಾಶ್ಚಾತ್ಯ ಅತಿಥಿಗಳ ಮುಂದೆ ಸುಬ್ಬಣ್ಣನವರ ವೀಣಾ ವಾದನ ನಡೆದಿದೆ. ಸುಬ್ಬಣ್ಣನವರ ಸಂಗೀತ ಮಾಧುರ್ಯಕ್ಕೆ ಮಾರು ಹೋದ ಈ ವಿದೇಶೀಯರು ತಮ್ಮ ಗ್ರಂಥಗಳಲ್ಲಿ ಸುಬ್ಬಣ್ಣನವರ ಗಾನ ಮಾಧುರ್ಯ ಸುಖವಾದ ವೀಣಾ ವಾದನ, ಉನ್ನತ ಪಾಂಡಿತ್ಯವನ್ನು ಮೆಚ್ಚಿ ಹೊಗಳಿ ಬರೆದಿದ್ದಾರೆ.

ಶಿಷ್ಯ ಪರಂಪರೆ

ಸುಬ್ಬಣ್ಣನವರ ಮನೆತನ ಮೈಸೂರಿನ ಸಂಗೀತ ಪರಂಪರೆಗೆ ಆಧಾರ ಸ್ತಂಭದಂತಿತ್ತು. ಮೈಸೂರು ನಗರವನ್ನು ಒಂದು ಪ್ರಮುಖ ಸಂಗೀತ ಕೇಂದ್ರವನ್ನಾಗಿಸುವುದರಲ್ಲಿ ಈ ವಂಶದವರ ಪಾತ್ರ ಅತ್ಯಂತ ಪ್ರಮುಖವಾದುದು. ಸುಬ್ಬಣ್ಣನವರು ತಮ್ಮ ಹಿರಿಯರ ಮೇಲ್ಪಂಕ್ತಿಯನ್ನು ಅನುಸರಿಸಿ ಅನೇಕ ಜನರಿಗೆ ವಿದ್ಯಾ ದಾನ ಮಾಡಿದರು. ಅನೇಕರಿಗೆ ತಮ್ಮ ಮನೆಯಲ್ಲೇ ಊಟ ವಸತಿ ಹಾಗೂ ಸಂಗೀತ ವಾದ್ಯಗಳ ಸೌಕರ್ಯವನ್ನೂ ಏರ್ಪಡಿಸಿ ನೆರವಾದರು. ಅವರ ಶಿಷ್ಯರುಗಳಲ್ಲಿ ಕೆಲವರು ದಿವಂಗತ ಚಿಕ್ಕರಾಮರಾಯರು, ದಿವಂಗತ ಬೆಳಕವಾಡಿ ಶ್ರೀನಿವಾಸಯ್ಯಂಗಾರರು ಹಾಗೂ ಆರ‍್.ಎಸ್. ಕೇಶವಮೂರ್ತಿ, ವಿ. ಶ್ರೀಕಂಠಯ್ಯರ‍್, ವಿ.ಎನ್. ರಾವ್ ಮತ್ತು ಶ್ರೀಮತಿ ಸುಬ್ಬಮ್ಮ.

ಆಗರ್ಭ ಶ್ರೀಮಂತ ವಿದ್ಯಾವಂತರ ಮನೆಯಲ್ಲಿ ಜನಿಸಿ, ಉನ್ನತ ಕಲಾವಿದರಲ್ಲಿ ಶಿಕ್ಷಣ ಪಡೆದು, ಹಾಡುಗಾರಿಕೆ ವೀಣೆ ಎರಡರಲ್ಲೂ ಶ್ರೇಷ್ಠ ಕಲಾವಿದರಾದ ಸುಬ್ಬಣ್ಣನವರು ತಾವು ಹುಟ್ಟಿದ ವಂಶ ಹಾಗೂ ನಾಡು ಎರಡಕ್ಕೂ ಕೀರ್ತಿಯನ್ನು ತಂದರು. ಎಂಬತ್ತೈದು ವರ್ಷಗಳ ಕಾಲ ಉನ್ನತ ಕಲಾವಿದನ ಮತ್ತು ತುಂಬು ರಸಕ ಜೀವನ ನಡೆಸಿದ ಸುಬ್ಬಣ್ಣನವರು ೧೯೩೯ರ ಆಷಾಢ ಬಹುಳ ಏಕಾದಶಿ ದಿನ ಸರಸ್ವತಿಯ ಪಾದಾರವಿಂದವನ್ನು ಸೇರಿದರು. ಕರ್ನಾಟಕ ಸಂಗೀತದ ಶಾಶ್ವತ ತಾರೆಯಾದ ಅವರು ಸಂಗೀತ ಅಭ್ಯಾಸಿಗಳಿಗೆ ರಸಿಕರಿಗೆ ಎಂದೆಂದಿಗೂ ಸ್ಫೂರ್ತಿಯಾದರು.