ರಾಜ್ಯಕ್ಕೆ ವೀಣೆಯ ಬೆಡಗಿದು ಮೈಸೂರು ಎಂಬ ಖ್ಯಾತಿ ಬರಲು ಕಾರಣರಾದವರಲ್ಲಿ ವೀಣೆ ಸುಬ್ಬಣ್ಣನವರೂ ಒಬ್ಬರು. ಪ್ರಖ್ಯಾತ ಸಂಗೀತ ವಂಶದಲ್ಲಿ ಹುಟ್ಟಿ, ‘ರಾಜ’ರಂತೆ ಬದುಕಿ, ‘ದೊರೆ’ಗಳಂತೆ ಸಂಗೀತಗಾರರನ್ನು ಪ್ರೋತ್ಸಾಹಿಸಿ, ಹಿರಿಯ ವೈಣಿಕರಾಗಿ, ದಕ್ಷ ಬೋಧಕರಾಗಿ ಬಾಳಿದ ಹಿರಿಯ ಚೇತನವೇ ಸುಬ್ಬಣ್ಣನವರು.

ತಂಜಾವೂರು ಮಹಾರಾಜರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ಕುಪ್ಪಯ್ಯನವರ ಗಂಡು ಸಂತತಿಯಲ್ಲಿಬಂದವರು ಸುಬ್ಬಣ್ಣ. ಹಾಗೇ ಹೆಣ್ಣು ಸಂತತಿಯಲ್ಲಿ ಬಂದವರು ಶೇಷಣ್ಣ. ಕುಪ್ಪಯ್ಯನವರ ಮೊಮ್ಮಕ್ಕಳಾದ ವೆಂಕಟಸುಬ್ಬಯ್ಯನವರ ದತ್ತು ಪುತ್ರರೇ ದೊಡ್ಡ ಶೇಷಣ್ಣನವರು. ಈ ದೊಡ್ಡ ಶೇಷಣ್ಣನವರ ಹಿರಿಯ ಪುತ್ರರೇ ಸುಬ್ಬಣ್ಣನವರು.

ತಂಜಾವೂರು ಮಹಾರಾಜರ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ಕುಪ್ಪಯ್ಯನವರ ಗಂಡು ಸಂತತಿಯಲ್ಲಿ ಬಂದವರು ಸುಬ್ಬಣ್ಣ. ಹಾಗೇ ಹೆಣ್ಣು ಸಂತತಿಯಲ್ಲಿ ಬಂದವರು ಶೇಷಣ್ಣ. ಕುಪ್ಪಯ್ಯನವರ ಮೊಮ್ಮಕ್ಕಳಾದ ವೆಂಕಟಸುಬ್ಬಯ್ಯನವರ ದತ್ತು ಪುತ್ರರೇ ದೊಡ್ಡ ಶೇಷಣ್ಣನವರು. ಈ ದೊಡ್ಡ ಶೇಷಣ್ಣನವರ ಹಿರಿಯ ಪುತ್ರರೇ ಸುಬ್ಬಣ್ಣನವರು.

೧೮೫೪ರಲ್ಲಿ ಜನಿಸಿದ ಸುಬ್ಬಣ್ಣನವರು ರಾಜಕುಮಾರರಂತೆ ಬೆಳೆದವರು. “ಬಾಯಿಯಲ್ಲಿ ಬೆಳ್ಳಿಯ ಚಮಚ; ಮಲಗಲು ಬಂಗಾರದ ತೊಟ್ಟಿಲು”! ದೊಡ್ಡ ಶೇಷಣ್ಣನವರು ಸುಬ್ಬಣ್ಣ ಮತ್ತು ವೀಣೆ ಶೇಷಣ್ಣನವರಿಬ್ಬರಿಗೂ ಸಂಗೀತ ಪಾಠದ ಗುರುಗಳು. ಗಂಟೆಗಟ್ಟಲೆ ಅಖಂಡ ಸಾಧನೆ! ಹತ್ತಾರು ತಾನಗಳ ಅಭ್ಯಾಸ. ಭಿನ್ನರಾಗಗಳಲ್ಲಿ ಅನೇಕ ವರಸೆಗಳ ಅಧ್ಯಾಪನ! ಪಲ್ಲವಿಗಳ ವಿತಾನ! ಆಲಾಪನೆ, ಮಧ್ಯಮ ಕಾಲಗಳ ವಿನಿಕೆ. ಪಲ್ಲವಿಗಳ ಚಮತ್ಕಾರ. ತದೇಕ ಚಿತ್ತರಾಗಿ, ಶ್ರದ್ಧೆಯಿಂದ ಸಂಗೀತದಲ್ಲೇ ಮುಳುಗಡೆ. ಹೀಗೆ, ಹತ್ತಾರು ವರುಷಗಳ ಅಭ್ಯಾಸದಿಂದ ವಾದ್ಯದ ಮೇಲೆ ಪ್ರಭುತ್ವ ಗಳಿಸಿದರು. ಜೊತೆಗೆ ಮೈಸೂರಿನ “ರಾಯಲ್‌ಸ್ಕೂಲ್‌”ನಲ್ಲಿ ವಿದ್ಯಾಭ್ಯಾಸ. ಅರಸು ಮನೆತನದವರ ಒಡನಾಟ. ಸಾಮಾನ್ಯ ಶಿಕ್ಷಣದ ಕಿರೀಟ. ಸುಬ್ಬಣ್ಣನವರಿಗೆ ದೊರೆತ ಇನ್ನೊಂದು ದೊಡ್ಡ ಭಾಗ್ಯವೇ ಗಾಯನ ಗುರುಗಳು. ಮೈಸೂರು ಸದಾಶಿವರಾಯರಲ್ಲಿ ಹಾಡುಗಾರಿಕೆಯನ್ನು ಶೇಷಣ್ಣ, ಸುಬ್ಬಣ್ಣ ಇಬ್ಬರೂ ಮಾಡತೊಡಗಿದರು. ಇವರು “ತ್ರಿಮೂರ್ತಿ”ಗಳಲ್ಲಿ ಜನಪ್ರಿಯರಾದ ತ್ಯಾಗರಾಜರ ಪ್ರಶಿಷ್ಯರು. ಇಂಥ ಹಿರಿಯರಲ್ಲಿ ಕಲಿತ ಸುಬ್ಬಣ್ಣನವರು ಶ್ರೇಷ್ಠ ಗಾಯಕರೂ ಆದುದು ಆಶ್ಚರ್ಯವೇನಲ್ಲ.

ಸುಬ್ಬಣ್ಣನವರು ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲಿ ಮೈಸೂರು ಸಂಸ್ಥಾನವನ್ನು ಚಾಮರಾಜ ಒಡೆಯರು ಆಳುತ್ತಿದ್ದರು. ಮಹಾರಾಜರಿಗೆ ಸುಬ್ಬಣ್ಣನವರ ಬಗೆಗೆ ಸಲಿಗೆ, ಸ್ನೇಹ ಹಾಗೂ ಶಾಲೆಯ ಒಡನಾಡಿ. ರಾಜರೊಂದಿಗೆ ಸುಬ್ಬಣ್ಣನವರು ದಿನದ ಬಹುವೇಳೆ ಕಳೆಯುತ್ತಿದ್ದರು. ಪ್ರಭುಗಳ ಫಿಡಲ್‌, ಶೇಷಣ್ಣನವರ ವೀಣೆ ಹಾಗೂ ಸುಬ್ಬಣ್ಣನವರ ಹಾಡುಗಾರಿಕೆ- ಒಂದು ಅಪರೂಪ ಮೇಳ. ಸಂಗೀತ ವಿಷಯದಲ್ಲಿ ಸುಬ್ಬಣ್ಣನವರು ದೊರೆಗಳಿಗೆ ಆಪ್ತ ಸಲಹೆಗಾರರೂ ಆಗಿದ್ದರು. ಅವರನ್ನು ರಾಜರು ಪ್ರೀತಿ, ಸಲುಗೆಯಿಂದ ‘ಸುಬ್ಬು’ ಎಂದೇ ಸಂಬೋಧಿಸುತ್ತಿದ್ದರು. ಚಾಮರಾಜ ಒಡೆಯರ ಕಾಲದಲ್ಲಿ ಆಸ್ಥಾನ ವಿದ್ವಾಂಸರಾದ ಸುಬ್ಬಣ್ಣನವರು ಮುಂದೆ “ಭಕ್ಷಿ”ಗಳೂ ಆದರು. ಮಹಾರಾಜರು ಪರಸ್ಥಳಕ್ಕೆ ಹೋದಾಗಲೆಲ್ಲಾ ಸುಬ್ಬಣ್ಣನವರನ್ನೂ ಜತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು.

ಸುಬ್ಬಣ್ಣನವರ ವೀಣೆ ಮತ್ತು ಗಾಯನ-ಎರಡೂ ಘನವಾದುದು. ಶಿಕ್ಷಣ-ಸಾಧನೆಗಳಿಂದ ತಮ್ಮದೇ ಆದ ಶೈಲಿಯೊಂದನ್ನು ರೂಢಿಸಿಕೊಂಡಿದ್ದರು. ತಮ್ಮ ಕಚೇರಿಯಲ್ಲಿ ‘ಚಿಟ್ಟೆ’ಗಿಂತ ಸೃಜನಶೀಲತೆಗೆ ಪ್ರಾಮುಖ್ಯತೆ ಕೊಡುತ್ತಿದ್ದರು. ಕೃತಿಗಳನ್ನು ಆರಿಸಿಕೊಳ್ಳುತ್ತಿದ್ದುದು ಕಡಿಮೆ. ಆಲಾಪನೆ, ತಾನಗಳಿಗೆ ಹೆಚ್ಚು ಸಮಯ ಮೀಸಲು. “ಪಲ್ಲವಿ”ಯೇ ಕಚೇರಿಯ ಪ್ರಧಾನ ಅಂಶ. ಹೀಗಾಗಿ, ಕಾರ್ಯಕ್ರಮದ ಬಹುಭಾಗ ಮನೋಧರ್ಮ ಸಂಗೀತದಿಂದ ಮಿಂಚುತ್ತಿತ್ತು. ಚಪ್ಪಾಳೆಗಾಗಿ ಏನನ್ನೂ ಮಾಡುತ್ತಿರಲಿಲ್ಲ. ವಾದ್ಯ “ತಂತ್ರ”ಕ್ಕಿಂತ ಸಂಗೀತ ಕಲೆಗೆ ಆತುಕೊಂಡ ಮನಸ್ಸು! ಕೆಲವೊಮ್ಮೆ ವೀಣೆಯ ಜೊತೆಗೇ ಹಾಡುತ್ತಿದ್ದರು. (೧) ಅವರದ್ದು ಗಂಧರ್ವ ಶಾರೀರ. ತ್ರಿಸ್ಥಾಯಿಯಲ್ಲೂ ಹೆಚ್ಚು ಶೃತಿಯಲ್ಲೂ ಸುಲಲಿತವಾಗಿ ಸಂಚರಿಸುವ ಕಂಠ! ತಾನು ಸಂಗೀತದಲ್ಲಿ ಲೀನವಾಗಿ “ಅನುಭವಿಸಿ” ನುಡಿಸುತ್ತಿದ್ದುದ್ದರಿಂದ ಕೇಳುಗರಿಗೂ ಗಾಢ ನಾದಾನುಭವ ಉಂಟಾಗುತ್ತಿತ್ತು. ಅವರ ಬತ್ತಳಿಕೆಯಲ್ಲಿ ಸಾಕಷ್ಟು ರಚನೆಗಳು ಇದ್ದವು. ಯಾವ ಹೊಸ ಕೃತಿ ಕಿವಿಗೆ ಬಿದ್ದರೂ ಅದನ್ನು ಬರೆಸಿ ತರಿಸಿಕೊಂಡು ಅಧ್ಯಯನ ಮಾಡಿ ಶಿಷ್ಯರಿಗೆ ಪಾಠ ಮಾಡುತ್ತಿದ್ದರು. ಕಾಂಬೋಧಿ, ಶಂಕರಾಭರಣ, ಕಲ್ಯಾಣಿ, ಕೇದಾರಗೌಳ, ಬೇಗಡೆ ರಾಗಗಳನ್ನು ಸಾಮಾನ್ಯವಾಗಿ ವಿಸ್ತಾರಕ್ಕೆ ಆರಿಸಿಕೊಳ್ಳುತ್ತಿದ್ದರು. ಪ್ರಾರಂಭದಲ್ಲಿ ಒಂದೆರಡು ರಚನೆಗಳನ್ನು ಕಿರಿದಾಗಿ ತೆಗೆದುಕೊಂಡು ಮಧ್ಯಮಕಾಲ, ಪಲ್ಲವಿಗಳಿಗೆ ಸರಿಯುತ್ತಿದ್ದರು. ಕೊನೆಯಲ್ಲಿ, ಜಾವಳಿ, ತಿಲ್ಲಾನಗಳ ಮೇಲೋಗರ ಹೀಗಾಗಿ, ಮೈಸೂರು ಬಾನಿಯ ಪ್ರವರ್ತಕರಲ್ಲಿ ಓರ್ವ ಪ್ರಮುಖರಾಗಿ ಸುಬ್ಬಣ್ಣನವರ ಕಚೇರಿ ಗಾಢ ಪರಿಣಾಮ ಬೀರುತ್ತಿತ್ತು.

ಸಂಗೀತ ಸಾಧಕರ ಸ್ವತ್ತು: ಪ್ರಾರಂಭದಲ್ಲಿ ಶೇಷಣ್ಣ ಮತ್ತು ಸುಬ್ಬಣ್ಣನವರು ಒಟ್ಟಿಗೇ ಕಚೇರಿ ಮಾಡುತ್ತಿದ್ದರು. ಒಮ್ಮೆ ಅಂಥ ಪ್ರವಾಸದಲ್ಲಿ ತಂಜಾವೂರಿಗೆ ಇಬ್ಬರೂ ದಯಮಾಡಿಸಿದರು. ಅಲ್ಲಿಯ ರಾಜರ ಆಸ್ಥಾನದಲ್ಲಿ ಕಲ್ಯಾಣಿ ಕೃಷ್ಣ ಭಾಗವತರು ಎಂಬುವರು ಪ್ರಸಿದ್ಧರಾಗಿದ್ದರು.ಅವರಿಗೆ ಕಲ್ಯಾಣಿ ರಾಗದಲ್ಲಿ ವಿಶೇಷ ಪರಿಣತಿ. ಅವರ ಮುಂದೆ ‘ಕಲ್ಯಾಣಿ, ಹಾಡಲು ಎಲ್ಲರೂ ಹಿಂಜರಿಯುತ್ತಿದ್ದರು. ಈ ವಿಷಯ ಶೇಷಣ್ಣ ಮತ್ತು ಸುಬ್ಬಣ್ಣ ಅವರ ಕಿವಿಗೂ ಬಿದ್ದಿತು. ಇದನ್ನು ಇಬ್ಬರೂ ಸವಾಲಾಗಿ ಸ್ವೀಕರಿಸಿದರು! ತಿಂಗಳ ಕಾಲ ಯಾರಿಗೂ ಕಾಣಿಸಿಕೊಳ್ಳದೆ ಭೂಗತರಾದರು. ದಿನವಿಡೀ ಕಲ್ಯಾಣಿಯ ಸಾಧನೆ ಮಾಡತೊಡಗಿದರು. ಕಲ್ಯಾಣಿಯ ರಚನೆಗಳನ್ನೆಲ್ಲಾ ಪುನಃ ಪುನಃ ಅಭ್ಯಸಿಸತೊಡಗಿದರು. ಕಲ್ಯಾಣಿ ರಾಗದ ಪಲ್ಲವಿಯನ್ನು ವಿವಿಧ ತಾಳ,ನಡೆ, ಎಡಪುಗಳಲ್ಲಿ ಸಾಧಿಸತೊಡಗಿದರು. ಕಲ್ಯಾಣಿ ರಾಗದ ಸರ್ವಮುಖ ದರ್ಶನವಾಗುವಂತೆ ತಾದತ್ಮ್ಯರಾಗಿ ಸಾಧನೆ ಮಾಡಿದರು. ಮಹಾರಾಜರ ಮುಂದೆ ವಿನಿಕೆಯೂ ನಡೆಯಿತು. ತಂಜಾವೂರು ಪ್ರಭುಗಳು. “ಕಲ್ಯಾಣಿ ರಾಗ ನಮ್ಮ ಆಸ್ಥಾನಿಕರ ಸೊತ್ತು ಎಂದು ಕೊಂಡಿದ್ದೆವು, ನೀವಿಬ್ಬರೂ ಆ ರಾಗದ ಸವಿಯನ್ನು ಅಮೃತದಂತೆ ಉಣಬಡಿಸಿದಿರಿ”. ಎಂದು ಹೇಳಿ, ಬಂಗಾರದ ತೋಡ ತೊಡಿಸಿ ಸನ್ಮಾನಿಸಿದರು. ಸುಬ್ಬಣ್ಣನವರ ಸಾಧನೆ ಹಾಗೂ ಸಂಗೀತದ ಛಲ ಅಷ್ಟು ಹಿರಿದಾದುದು!

ರಾಮನಾಥಪುರ, ತಿರುವಾಂಕೂರು, ದೇವಕೋಟೈ-ಅರಮನೆಗಳಲ್ಲಿ ಹಾಗೂ ಪಂಡಾರ ಸನ್ನಿಧಿ, ಮುಂಬಯಿ ಮುಂತಾದ ಕಡೆಗಳಲ್ಲೂ ಸುಬ್ಬಣ್ಣನವರ ಕಚೇರಿಗಳು ನಡೆದವು. ರಾಮನಾಡ್‌ಮಹಾರಾಜ ಭಾಸ್ಕರ ಸೇತುಪತಿಯವರಿಂದ ಸುಬ್ಬಣ್ಣನವರು ವೈಣಿಕರವರ ಕೇಸರಿಹಾಗೂ ಪಂಡಾರ ಸನ್ನಿಧಿಯಲ್ಲಿ ವೈಣಿಕ ವರ ಚೂಡಾಮಣಿಎಂಬ ಬಿರುದುಗಳನ್ನು ಸ್ವೀಕರಿಸಿದ್ದರು. ಇವೆಲ್ಲಕ್ಕೂ ಕಳಶ ಪ್ರಾಯದಂತೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ವೈಣಿಕ ಪ್ರವೀಣ ಎಂಬ ಬಿರುದನ್ನು ತೋಡಾ ಖಿಲ್ಲತ್ತುಗಳೊಡನೆ ದಯಪಾಲಿಸಿ ಸನ್ಮಾನಿಸಿದರು.

ಆಗರ್ಭ ಶ್ರೀಮಂತರಾಗಿದ್ದ ಸುಬ್ಬಣ್ಣನವರು, ಜೀವನ ನಿರ್ವಹಣೆಗಾಗಿ ಕಚೇರಿ ಮಾಡುವ ಅನಿವಾರ್ಯತೆ ಇರಲಿಲ್ಲ. ಹೀಗಾಗಿ, ಕಾರ್ಯಕ್ರಮಗಳನ್ನು ನೀಡಲು ಅವರು ಅಷ್ಟಾಗಿ ಪ್ರವಾಸ ಮಾಡಲಿಲ್ಲ. ತಾವು ಹೋದೆಡೆ ರಾಜರು, ಜಮೀನ್ದಾರರು ಇತರ ವ್ಯವಸ್ಥಾಪಕರುಗಳಿಗೆ ತಾವೇ ಬೆಲೆಬಾಳುವ ಉಡುಗೊರೆಗಳನ್ನು ಅರ್ಪಿಸುತ್ತಿದ್ದರು. ೧೯೩೦ರಲ್ಲಿ ನಂಜನಗೂಡಿನಲ್ಲಿ ನಡೆದ ಪ್ರಥಮ ಕರ್ನಾಟಕ ಸಂಗೀತದ ಸಮ್ಮೇಳನದ ಅಧ್ಯಕ್ಷತೆಯನ್ನೂ ಸುಬ್ಬಣ್ಣನವರು ಅಲಂಕರಿಸಿದರು. ೧೯೩೭ರಲ್ಲಿ ಅವರ ಸಹಸ್ರಚಂದ್ರ ದರ್ಶನದ (೮೦ನೇ ವರ್ಧಂತಿ) ಸಂದರ್ಭದಲ್ಲಿ ಮೈಸೂರಿನ ಸಂಗೀತಗಾರರೂ, ಕಲಾಭಿಮಾನಿಗಳೂ, ಶಿಷ್ಯರೂ ಸೇರಿ ಸಾರ್ವಜನಿಕ ಸಮಾರಂಭದಲ್ಲಿ ಬಿನ್ನವತ್ತಳೆಯನ್ನು ನೀಡಿ ಗೌರವಿಸಿದರು.

ಸುಬ್ಬಣ್ಣನವರಂತಹ ಉದಾರಿ ಕಲಾವಿದರು ತುಂಬಾ ವಿರಳ. ತಮ್ಮ ಸಿರಿವಂತಿಕೆಯ ಬಹುಭಾಗವನ್ನು ದಾನ-ಧರ್ಮಗಳಿಂದಲೇ ಕಳೆದರು. ಮೈಸೂರಿಗೆ ಆಗಮಿಸಿ, ಅರಮನೆಯಲ್ಲಿ ಕಚೇರಿಯಾದನಂತರ ಹೊರಗಿನ ಕಲಾವಿದರ ವಿನಿಕೆ ಸುಬ್ಬಣ್ಣನವರ ಮನೆಯಲ್ಲಿಯೂ ನಡೆಯುವುದು ವಾಡಿಕೆಯಾಗಿತ್ತು. ಒಮ್ಮೆ ಮಹಾವೈದ್ಯನಾಥ ಅಯ್ಯರ್‌ಅವರು ಇವರ ಮನೆಯಲ್ಲಿ ಹಾಡಿದಾಗ, ಆ ದಿವ್ಯಗಾನಕ್ಕೆ ಮನಸೋತು ಬಹು ಬೆಲೆ ಬಾಳುವ ತಮ್ಮ ಪಚ್ಚೆ ಉಂಗುರವನ್ನೇ ಸುಬ್ಬಣ್ಣನವರು ಗಾಯಕರಿಗೆ ತೊಡಿಸಿ-“ಈ ಉಂಗುರಕ್ಕೆ ಇದೇ ಸರಿಯಾದ ಸ್ಥಾನ” ಎಂದರು ಅದಕ್ಕೆ ಮಹಾ ವೈದ್ಯನಾಥ ಅಯ್ಯರ್” ಕೋಟೆಗೆ ‘ಅವರು’ ಪ್ರಭುಗಳಾದರೆ ಸಂಗೀತಕ್ಕೆ ‘ನೀವೇ’ ಪ್ರಭುಗಳು”.- ಎಂದು ಕೊಂಡಾಡಿದರು. ಹಾಗೆಯೇ ಒಮ್ಮೆ ಪೂಚಿ ಶ್ರೀನಿವಾಸ್ಯೆಯ್ಯಂಗಾರ್ ಅವರು ಕಚೇರಿ ಪ್ರಾರಂಭಿಸದೆ, ಏನೋ ತಡಕಾಡುತ್ತಿದ್ದರು. ಏನೆಂದು ಕೇಳಲು ‘ರಾಮನಾಡಿನ ಮಹಾರಾಜರು ನನಗೆ ಕೊಟ್ಟಿದ್ದ ಸೀಮೆ ಕಮಲದ ಉಂಗುರ ಕಳೆದು ಹೋಗಿದೆ, ಮನಸ್ಸುಖಿನ್ನವಾಗಿದೆ. ಹಾಡಲಾರೆ! ಕ್ಷಮಿಸಬೇಕು’ ಎಂದರು. ಸುಬ್ಬಣ್ಣನವರು ತಕ್ಷಣ ತಮ್ಮ ಉಂಗುರದ ಪೆಟಾರಿಯನ್ನೇ ಕಲಾವಿದರ ಮುಂದಿಟ್ಟು, “ಯಾವ ರತ್ನದ ಉಂಗುರವನ್ನಾದರೂ ತೆಗೆದುಕೊಳ್ಳಿ! ಈಗ ನಿಮ್ಮ ಸಂಗೀತದಿಂದ ನಮ್ಮನ್ನು ಸಂತೋಷಪಡಿಸಿ” ಎಂದರು. ತಮಗೆ ಅರಮನೆಯಿಂದ ಬರುತ್ತಿದ್ದ ಸಂಬಳವನ್ನೂ ಹೀಗೆ ವಿನಿಯೋಗಿಸುತ್ತಿದ್ದರು. ಸಂಬಳದ ದಿನಕ್ಕೆ ಮೊದಲೇ ತಮ್ಮ ಕಷ್ಟವನ್ನು ತೋಡಿಕೊಂಡು ಸುಬ್ಬಣ್ಣನವರ ಸಂಬಳವನ್ನು ಗಿಟ್ಟಿಸಿಕೊಳ್ಳುತ್ತಿದ್ದ ಅನೇಕ ಜನರೂ ಇದ್ದರು. ಈ ಔದಾರ್ಯ ಅವರಿಗೆ ಹುಟ್ಟಿನಿಂದಲೇ ಬಂದುದು.

ಖ್ಯಾತ ಪಿಟೀಲುವಾದಕ ತಿರುಕ್ಕೋಡಿ ಕಾವಲ್‌ಕೃಷ್ಣಯ್ಯರ್‌ಮೈಸೂರಿಗೆ ಮೊದಲಾವರ್ತಿ ಬಂದಾಗ ಸ್ಥಳೀಯ ಕಲಾವಿದರ ಮನೆಗಳಿಗೆ ಭೇಟಿ ಕೊಟ್ಟರು. ಸ್ಥಳೀಯ ಕಲಾವಿದರು ತಮಗೆ ಪರಸ್ಪರ ಅರಿವಿಲ್ಲದಂತೆ ಆಕಸ್ಮಿಕವಾಗಿ ಒಂದೇ ರಾಗ ಪಲ್ಲವಿಯನ್ನು ಹಾಡಿ ನುಡಿಸಿದರು. ಕೃಷ್ಣಯ್ಯರ್‌ಅವರು “ಮೈಸೂರು ವಿದ್ವಾಂಸರಿಗೆ ಕಲ್ಯಾಣಿ ರಾಗ ಪಲ್ಲವಿಯನ್ನು ಬಿಟ್ಟರೆ, ಇನ್ನೇನೂ ಬರುವುದಿಲ್ಲ” ಎಂದು ಲಘುವಾಗಿ ಆಡಿಕೊಳ್ಳತೊಡಗಿದರು. ಇದರಿಂದ ಕೆರಳಿದ ಸುಬ್ಬಣ್ಣನವರು, ಒಂದು ಕಾರ್ಯಕ್ರಮದಲ್ಲಿ ಶೇಷಣ್ಣನವರ ವೀಣೆ ಜತೆಯಲ್ಲಿ ಕೃಷ್ಣಅಯ್ಯರ್ ಅವರ ಪಿಟೀಲನ್ನೂ ಜತೆಗೂಡಿಸಿ ಕಚೇರಿ ಏರ್ಪಡಿಸಿದರು. ಕಚೇರಿ ಪ್ರಾರಂಭವಾದ ಸ್ವಲ್ಪ ಹೊತ್ತಿನಲ್ಲೇ ಕೃಷ್ಣಯ್ಯರ್‌ಅವರು ಪಿಟೀಲನ್ನು ಕೆಳಗಿಟ್ಟು ಶೇಷಣ್ಣನವರ ಸಂಗೀತ ಸೌಖ್ಯಕ್ಕೂ ಪಾಂಡಿತ್ಯಕ್ಕೂ ತಲೆದೂಗುತ್ತಾ “ಇಂಥ ಸಂಗೀತವನ್ನು ನಾನು ಈವರೆಗೆ ಕೇಳಿದ್ದಿಲ್ಲ, ಇದು ನಿಜವಾಗಿ ದೇವ ಸಂಗೀತ”. ಎಂದು ಉದ್ಗರಿಸಿದರು. ಹೀಗೆ ಸುಬ್ಬಣ್ಣನವರ ಪ್ರಯತ್ನದಿಂದ ಮೈಸೂರಿನ ಸಂಗೀತಗಾರರ ಗೌರವ ಸ್ವಾಭಿಮಾನಗಳು ಹೆಚ್ಚಿತಲ್ಲದೆ, ಶೇಷಣ್ಣನವರ ಕೀರ್ತಿಯೂ ಹರಡಿತು.

ಶಿಷ್ಯವಾತ್ಸಲ್ಯ: ಮಕ್ಕಳು ಇಲ್ಲದಿದ್ದ ಸುಬ್ಬಣ್ಣನವರು ತಮ್ಮ ಶಿಷ್ಯರನ್ನೇ ಪುತ್ರವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು.ಅವರಿಂದ ಶಿಕ್ಷಣ ಪಡೆಯುವುದೇ ಒಂದು ಮಹಾ ಸುಯೋಗವಾಗಿತ್ತು.ಬೆಳಗಿನ ಹೊತ್ತು ಶಿಷ್ಯರ ಜೊತೆ ತಾವೂ ನುಡಿಸುತ್ತಾ ಮಾರ್ಗದರ್ಶನ ಮಾಡುತ್ತಿದದರು.ನಿತ್ಯ ಸಾಧನೆಗೆ ಮೋಹನದ ಸ್ವರಜತಿ, (ವಿಜಯನಗರದ ಗುರುರಾಯರ ರಚನೆ) ಕಾಪಿ ರಾಗದ ಸ್ವರಜತಿ (ಅವರದೇ ಸ್ವಂತ ರಚನೆ), ಭೈರವಿ ರಾಗದ “ವಿರಿಬೋಣಿ” ವರ್ಣ-ಇವುಗಳನ್ನು ಅಭ್ಯಾಸ ಮಾಡಿಸುತ್ತಿದ್ದರು. ಅನೇಕ ಶಿಷ್ಯರುಗಳನ್ನು ತಮ್ಮ ಮನೆಯಲ್ಲೇ ಸಾಕಿಕೊಂಡು ವಿದ್ಯಾದಾನ ಮಾಡಿದರು. ಚಿಕ್ಕರಾಮರಾಯರು, (ಹಿರಿಯ) ಬೆಳಕವಾಡಿ ಶ್ರೀನಿವಾಸಯ್ಯಂಗಾರ್‌, ಸ್ವರಮೂರ್ತಿ ವಿ.ಎನ್‌.ರಾವ್‌, ಸುಬ್ಬಮ್ಮ (ಅಕ್ಕಮ್ಮಣ್ಣಿ) ಮತ್ತು ಕುಮುದಾ-ಆಂಡಾಳ್‌ಸಹೋದರಿಯರು-ಇವರುಗಳು ಸುಬ್ಬಣ್ಣನವರಿಂದ ಕ್ರಮವಾದ ಶಿಕ್ಷಣ ಪಡೆದವರು. ಅಲ್ಲದೇ, ಹೆಚ್‌.ಪಿ. ಕೃಷ್ಣರಾವ್‌, ಜಸ್ಟೀಸ್‌ಮಹದೇವಯ್ಯ, ವೀಣೆ ವೆಂಕಟಗಿರಿಯಪ್ಪ, ಪಿಟೀಲು ಚೌಡಯ್ಯ, ಆರ್.ಎಸ್‌. ಕೇಶವಮೂರ್ತಿ, ಆರ್.ಕೆ. ವೆಂಕಟರಾಮಾಶಾಸ್ತ್ರಿ ಮುಂತಾದವರುಗಳು ಸುಬ್ಬಣ್ಣನವರಿಂದ ಆಗಾಗ್ಗೆ ಮಾರ್ಗದರ್ಶನ ಪಡೆಯುತ್ತಿದ್ದರು. ಇದಲ್ಲದೆ, ಅರಮನೆ ಚಂದ್ರಶಾಲಾ ತೊಟ್ಟಿಯಲ್ಲಿ ಕಿರಿಯ ವಿದ್ವಾಂಸರುಗಳಿಗೆ ಪಾಠವನ್ನು ತಿದ್ದುತ್ತಾ ಪರಿಷ್ಕಾರಗೊಳಿಸುತ್ತಿದ್ದರು. ಸುಬ್ಬಣ್ಣನವರು ಸ್ವರಜತಿ, ವರ್ಣ, ಕೃತಿಗಳನ್ನು ರಚಿಸಿದ್ದಾರೆ. ಕಾಂಬೋಧಿ, ಕರ್ನಾಟಕ ಕಾಪಿ, ಕೀರವಾಣಿ ರಾಗಗಳಲ್ಲಿ ಸ್ವರಜತಿಗಳನ್ನೂ, ಅಠಾಣ, ಪೂರ್ವಿ ಕಲ್ಯಾಣಿ ರಾಗಗಳಲ್ಲಿ ವರ್ಣಗಳನ್ನೂ, ಧರ್ಮವತಿ, ಧೇನುಕ, ಋಷಭಪ್ರಿಯ ರಾಗಗಳಲ್ಲಿ ಕೃತಿಗಳನ್ನೂ, ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರವರ ವಿವಾಹ ಮಹೋತ್ಸವ ಸಂದರ್ಭದಲ್ಲಿ ನವರಾಗಮಾಲಿಕೆಯೊಂದನ್ನೂ ಅವರು ರಚಿಸಿದ್ದಾರೆ.

ನಿಜ ಜೀವನದಲ್ಲಿ ಭೋಗಿಯಾಗಿದ್ದೂ, ಯೋಗಿಯಂತೆ ಇದ್ದವರು.ಹಾಸ್ಯಪ್ರಿಯರು, ರಸಿಕರು, ಹಸನ್ಮುಖಿ, ದೇವರಲ್ಲಿ ಭಕ್ತಿ, ದಾನಶೂರನಂತೆ ಔದಾರ್ಯ! ಇವುಗಳು ಮೂರ್ತಿವೆತ್ತಂತೆ ಬಾಳಿದವರು ಬೆಳಗಿದವರು.

ಬಾಲಕ ವೆಂಕಟನಾರಾಯಣನಿಗೆ (ಸ್ವರಮೂರ್ತಿ ವಿ.ಎನ್‌.ರಾವ್‌) ಸುಬ್ಬಣ್ಣನವರಲ್ಲಿ ವೀಣಾಭ್ಯಾಸ ಮುಂದುವರೆಸಲು ಅರಮನೆಯಿಂದ ಸೂಚನೆಯಾಯಿತು. ಕೆಲ ವರ್ಷಗಳ ನಂತರ ಈ ಬಾಲಕನ ಪ್ರಗತಿಯನ್ನು ಮಹಾರಾಜರು ಪರೀಕ್ಷಿಸಿದರು. “ಸುಬ್ಬಣ್ಣನವರೇ! ಚೆನ್ನಾಗಿ ಪಾಠ ಮಾಡಿದ್ದೀರಿ, ವೆಂಕಟನಾರಾಯಣನೂ ಸೂಕ್ಷ್ಮವಾಗಿ ಗ್ರಹಿಸಿ ಸಾಧನೆ ಮಾಡಿದ್ದಾನೆ” ಎಂದು ಹೇಳಿದ ಮಹಾರಾಜರು ಸಂತೋಷಪಟ್ಟು ನಗದು ಬಹುಮಾನವನ್ನು ಸುಬ್ಬಣ್ಣನವರಿಗೆ ನೀಡಲು ಅಪ್ಪಣೆ ಮಾಡಿದರು. ಆದರೆ ಅರಮನೆ ದರ್ಬಾರ್‌ಭಕ್ಷಿಯವರ ಕಚೇರಿಯಲ್ಲಿ ಆಕಸ್ಮಿಕವಾಗಿ ಆದ ಅಚಾತುರ್ಯದಿಂದ ಈ ಮೊತ್ತವು ಗುರುಗಳ ಬದಲು ಶಿಷ್ಯನಿಗೆ (ವೆಂಕಟನಾರಾಯಣರಾವ್‌) ತಲುಪಿತು! ಕೆಲವು ದಿನಗಳ ನಂತರ ಈ ಪ್ರಮಾದದ ಅರಿವಾಗಿ ವೆಂಕಟನಾರಾಯಣರಾವ್‌ಸುಬ್ಬಣ್ಣನವರಲ್ಲಿ ಕ್ಷಮೆ ಕೋರಿದರು. “ಅಂಥ ಪ್ರಮಾದವೇನೂ ಆಗಿಲ್ಲ. ಈ ನಗದನ್ನು ನಾನೇ ಬಹುಮಾನವಾಗಿ ಕೊಟ್ಟೆ ಎಂದು ಭಾವಿಸಿಕೋ” ಎಂದು ಹೇಳಿದ ಸುಬ್ಬಣ್ಣನವರ ಔದಾರ್ಯ, ಶಿಷ್ಯ ವಾತ್ಸಲ್ಯಗಳಿಗೆ ಎಣೆಯುಂಟೇ? ಹಾಗೆಯೇ ಬೆಳ್ಳೆ ರತ್ನ ಖಚಿತವಾದ ತಮ್ಮ ವೀಣೆಯನ್ನೂ ಸಹ ತಮ್ಮ ಶಿಷ್ಯರಲ್ಲೊಬ್ಬರಾದ ಆರ್.ಎಸ್‌. ಕೇಶವಮೂರ್ತಿಗಳಿಗೆ ನೀಡಿದರು.

ಆಸ್ಥಾನ ವಿದ್ವಾಂಸರಾಗಿ ಸುಬ್ಬಣ್ಣನವರು ಅರಮನೆಯ ನಿತ್ಯದ ಶಿವಪೂಜೆ(೧), ನವರಾತ್ರಿ ದರ್ಬಾರ್‌, ಮಹಾರಾಜರ ವರ್ಧಂತಿ, ಗಣೇಶನ ಕಟ್ಲೆ, ದೇವಿಕೂಟದಲ್ಲಿ ಚಾಮುಂಡೇಶ್ವರಿ ತೆಪ್ಪೋತ್ಸವ ಮುಂತಾದ ಸಂದರ್ಭಗಳಲ್ಲಿ ಕಚೇರಿ ಮಾಡುತ್ತಿದ್ದರು. ಅಲ್ಲದೆ ಅರಮನೆಗೆ ಬರುತ್ತಿದ್ದ ವಿಶೇಷ ಗಣ್ಯರ ಮುಂದೆಯೂ ಅವರ ವಿನಿಕೆ ನಡೆಯುತ್ತಿತ್ತು. ಮೈಸೂರಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸುಬ್ಬಣ್ಣನವರ ಉಪಸ್ಥಿತಿ ಒಂದು ಹಿರಿಮೆಯ ಸಂಕೇತವಾಗಿತ್ತು. ಅವರೊಂದಿಗೆ ಬಿಡಾರಂ ಕೃಷ್ಣಪ್ಪ, ವೆಂಕಟಗಿರಿಯಪ್ಪ, ಮುತ್ತಯ್ಯ ಭಾಗವತರು ಜೊತೆಗೂಡುತ್ತಿದ್ದರು. ಚಿಕ್ಕವರು ಹಾಡುತ್ತಿದ್ದ ಒಂದೊಂದು ಒಳ್ಳೆಯ ಸಂಗತಿಗೂ ತಲೆದೂಗಿ ಶಹಬಾಸ್‌ಗಿರಿ ಹೇಳಿ ಪ್ರೋತ್ಸಾಹಿಸುತ್ತಿದ್ದ ಅವರ ಹಿರಿತನ ಆದರ್ಶಪ್ರಾಯವಾದುದು. ವಿಶೇಷ ಸಂದರ್ಭಕ್ಕಾಗಿ ಪಂಚವೀಣೆ, ಗಾಯಕರ ಗೋಷ್ಠಿ, ವಾದ್ಯಗೋಷ್ಠಿಗಳನ್ನು ನಿರ್ದೇಶನ ಮಾಡುತ್ತಿದ್ದರು.

ಪ್ರಮಾಥಿ ಸಂವತ್ಸರದ ಆಷಾಢ ಬಹುಳ ಏಕಾದಶಿಯಂದು (೧೩.೭.೧೯೩೯) ಸುಬ್ಬಣ್ಣನವರು ಸರಸ್ವತಿಯ ಪಾದಾರವಿಂದಗಳನ್ನು ಸೇರಿದರು. ಸುಬ್ಬಣ್ಣನವರ ನಿಧನದೊಂದಿಗೆ ಮೈಸೂರು ವೀಣಾ ಪರಂಪರೆಯ ಒಂದು ಭವ್ಯ ಕೊಂಡಿ ಕಳಚಿಕೊಂಡಿತು.