ಉತ್ತರ ಕರ್ನಾಟಕದಲ್ಲಿ ತಬಲಾ ವಾದನ ಪ್ರಸಾರಗೊಳ್ಳಲು ಪರಿಶ್ರಮಿಸಿ, ಅನೇಕ ತಬಲಾ ಕಲಾವಿದರನ್ನು ನಾಡಿಗೆ, ದೇಶಕ್ಕೆ ನೀಡಿರುವ ಹುಬ್ಬಳ್ಳಿಯ ಶ್ರೀ ವೀರಣ್ಣ ಕಾಮಕರ ಅವರು ಕರ್ನಾಟಕದ ಹೆಸರಾಂತ ತಬಲಾ ವಾದಕರಲ್ಲೊಬ್ಬರು. ದಿನಾಂಕ ೯-೧-೧೯೨೬ ರಂದು ಹುಬ್ಬಳ್ಳಿಯಲ್ಲಿ ಜನಿಸಿದ ವೀರಣ್ಣಾ ನಿಂಗಪ್ಪಾ ಕಾಮಕರ ಅವರದು ಸಂಗೀತದ ಮನೆತನ. ತಾಯಿ ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಆರಂಭದಲ್ಲಿ ಇವರಿಗೆ ತಾಯಿಯಿಂದಲೇ ಜಾನಪದ ಗಾಯನದಲ್ಲಿ ಶಿಕ್ಷಣ ಹಾಗೂ ಹನುಮಂತ ತಾಪಸೆಯವರಲ್ಲಿ ರಂಗಗೀತೆ ಮತ್ತು ಅಭಿನಯದಲ್ಲಿ ತರಬೇತಿ. ಆದರೆ ಇವರ ಆಸಕ್ತಿ ಸಂಗೀತದ ಕಡೆಗೆ. ಹಾಗಾಗಿ ಮುಂದೆ ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಯರಗುಪ್ಪಿಯ ಲಿಂಗರಾಜ ಬುವಾ ಅವರಲ್ಲಿ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ಪಡೆದು ಮುಂಬೈನ ಸಂಗೀತ ನಿರ್ದೇಶಕ ವಸಂತ ದೇಸಾಯಿ ಅವರಲ್ಲೂ ಸಾಕಷ್ಟು ಶಿಕ್ಷಣ ಹೊಂದಿ ಮುಂದೆ ಆರ್.ಎಸ್‌. ಜಂತಲಿ, ರಂಗಣ್ಣಾ ಜೋಶಿಯವರಲ್ಲೂ ಮಾರ್ಗದರ್ಶನ ಪಡೆದು ಹೂಗಾರ ಕಲ್ಲಪ್ಪನವರಲ್ಲಿ ತಬಲಾ ವಾದನದಲ್ಲಿ ಶಿಕ್ಷಣ ಪಡೆದರು ಉಸ್ತಾದ್‌. ಬಾಲೇಖಾನ್‌ ಅವರಲ್ಲಿ ಸಿತಾರ್ ವಾದನದಲ್ಲೂ ಶಿಕ್ಷಣ ಪಡೆದು ಅದರಲ್ಲೂ ಸಾಕಷ್ಟು ಪ್ರಾವಿಣ್ಯತೆ ಗಳಿಸಿದ್ದಾರೆ.

ಹೆಸರಾಂತ ತಬಲಾ ವಾದಕ ಪಂ. ಬಸವರಾಜ ಬೆಂಡಿಗೇರಿಯವರಲ್ಲೂ ತಬಲಾ ವಾದನದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಅಲ್ಲದೆ ಉಸ್ತಾದ್‌ ಹಿದಾಯತ್‌ ಖಾನರಲ್ಲಿ ಸಾಕಷ್ಟು ತರಬೇತಿ ಪಡೆದು ಈಗ ಹಿಂದುಸ್ಥಾನೀ ಕ್ಷೇತ್ರದ ಹಿರಿಯ ತಬಲಾ ವಾದಕರೆನಿಸಿದ್ದಾರೆ.

ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠದಲ್ಲಿ ಸತತ ೩೦ ವರ್ಷಗಳ ಕಾಲ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಮುಂದೆ ತಮ್ಮದೇ ಆದ ‘ಗಾಯತ್ರೀ ಗಾಯನ ಶಾಲೆ’ಯನ್ನು ಸ್ಥಾಪಿಸಿ ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇವರ ಶಿಷ್ಯರುಗಳಲ್ಲಿ ಇಂದು ರಾಷ್ಟ್ರ ಖ್ಯಾತಿಗಳಿಸಿರುವ ರಘುನಾಥ ನಾಕೋಡ, ವಿಶ್ವನಾಥ ನಾಕೋಡ, ರಾಜೇಂದ್ರ ನಾಕೋಡ, ರವೀಂದ್ರ ಯಾವಗಲ್‌,ರಾಜೇಂದ್ರ ಧವಳೆ ಮುಂತಾದವರು ಪ್ರಮುಖ ಸ್ಥಾನ ಗಳಿಸಿದರೆ ಮಗಳು ಗಾಯತ್ರೀ, ಅಲ್ಲದೆ ವಿದ್ಯಾಮಹಲೆ, ಚಂದ್ರಾ ಜೇವೂರ್, ಲತಾ ಭೋಸಲೆ ಅವರು ಗಾಯಕರ ಸಾಲಿನಲ್ಲಿ ಹೆಸರು ಗಳಿಸಿದ್ದಾರೆ.

ಇವರು ಅಪಾರ ಬೇಡಿಕೆಯುಳ್ಳ ಕಲಾವಿದರು. ಸಂಗೀತ ಕ್ಷೇತ್ರದ ಎಲ್ಲ ದಿಗ್ಗಜರಿಗೂ ತಬಲಾ ಸಾಥಿ ನೀಡಿದ್ದಾರೆ. ಯಾರಿಗೆ ನುಡಿಸಿದ್ದಾರೆ ಎನ್ನುವುದಕ್ಕೆ ಯಾರಿಗೆ ನುಡಿಸಿಲ್ಲ ಎಂದು ಕೇಳಿದರೆ ಉತ್ತರ ಸಿಗುವುದು ಕಷ್ಟ.

ನಿತ್ಯೋತ್ಸಾಹಿಯಾಗಿ ಕಲಾಸೇವೆ ಮಾಡುತ್ತಿರುವ ವೀರಣ್ಣಾ ನಿಂಗಪ್ಪಾ ಕಾಮಕರ ಅವರ ಪಾಂಡಿತ್ಯವನ್ನು ಗುರುತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೨೦೦೨ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ಪ್ರಶಸ್ತಿ ನೀಡಿ ಗೌರವಿಸಿದೆ.