ಸುಮಾರು ಇನ್ನೂರು ವರ್ಷಗಳ ಹಿಂದೆ –

ಆಗ ದಕ್ಷಿಣ ಭಾರತದ ಬಹುಭಾಗ ಆರ್ಕಾಟ್ ನವಾಬನ ಅಧೀನದಲ್ಲಿತ್ತು.  ಹೆಸರಿಗೆ ಅವನು ನವಾಬ. ತನ್ನ ಕೈ ಕೆಳಗಿನ ಪಾಳೇಗಾರರಿಂದ ತನಗೆ ಸೇರಬೇಕಾದ ಕಪ್ಪವನ್ನು ವಸೂಲು ಮಾಡುವ ಸಾಮರ್ಥ್ಯವೂ ಅವನಲ್ಲಿರಲಿಲ್ಲ.

೧೭೯೨ರಲ್ಲಿ ಭಾರತದಲ್ಲಿ ವ್ಯಾಪಾರ ಸಂಸ್ಥೆಯಾಗಿದ್ದ ಈಸ್ಟ್ ಇಂಡಿಯಾ ಕಂಪನಿಯವರೊಂದಿಗೆ ನವಾಬ ಗುಟ್ಟಾಗಿ ಒಪ್ಪಂದ ಮಾಡಿಕೊಂಡ. ಕಪ್ಪವಸೂಲು ಮಾಡವ ಅಧಿಕಾರವನ್ನು ಕಂಪನಿಗೆ ವಹಿಸಿಕೊಟ್ಟಿದ್ದ. ಕಂಪೆನಿಯ ಬಿಳಿಯರಿಗೆ ಬೇಕಾದದ್ದು ಹಣ.  ಅಷ್ಟೇ ಅಲ್ಲ ರಾಜ್ಯದಾಹ. ಅವರು ಸಣ್ಣಪುಟ್ಟ ರಾಜರ ಮೇಲೆ ಅಧಿಕಾರ ನಡೆಸತೊಡಗಿದರು. ಹೆಚ್ಚು ಹೆಚ್ಚು ತೆರಿಗೆ ವಿಧಿಸಿದರು. ಅವರ ಕಿರುಕುಳ ಸಹಿಸಲಾರದ ಬಹು ಮಂದಿ ಪಾಳೇಗಾರರು ಅವರ ಅಡಿಯಾಳುಗಳಾದರು.

ಆದರೆ ಒಬ್ಬ ಮಾತ್ರ ಬಿಳಿಯರ ಅಧಿಕಾರಕ್ಕೆ ಜಗ್ಗಲಿಲ್ಲ. ಬೆದರಿಕೆಗೆ ಹೆದರಲಿಲ್ಲ. “ರಾಜಾಧಿರಾಜರುಗಳಿಂದ ಕಪ್ಪಕಾಣಿಕೆ ಸ್ವೀಕರಿಸುವವರು ವ್ಯಾಪಾರಿಗಳಾಗಿ ಬಂದ ಈ ವಿದೇಶಿಗಳಿಗೆ ಕಪ್ಪ ಸಲ್ಲಿಸುವುದೇ? ಎಂದಿಗೂ ಇಲ್ಲ” ಎಂದು ಬಿಟ್ಟ. ಅವನಾರು ಬಲ್ಲಿರಾ? ಅವನೇ ಕಟ್ಟಬೊಮ್ಮ. ತಮಿಳುನಾಡಿನ ಗಂಡುಗಲಿ ವೀರ ಪಾಂಡ್ಯನ್.

ಜಗವೀರನ ನೆಚ್ಚಿನ ಬಂಟ

ಕಟ್ಟ ಬೊಮ್ಮುವಿನ ವಂಶಜರು ಆಂಧ್ರಕ್ಕೆ ಸೇರಿದವರು. ಈ ವಂಶದ ನಲವತ್ತೇಳನೆಯ ತಲೆಮಾರಿನವನು ವೀರಪಾಂಡ್ಯನ್. ಇವನು ಹುಟ್ಟಿದ್ದು ೧೭೬೯ನೆಯ ಇಸವಿ ಜನವರಿ ತಿಂಗಳ ಮೂರರಂದು. ತಂದೆ ಜಗವೀರ ಕಟ್ಟಬೊಮ್ಮನ್. ತಾಯಿ ಆರುಮುಗತ್ತಮ್ಮಾಳ್. ವೀರಪಾಂಡ್ಯನಿಗೆ ಇಬ್ಬರು ಸಹೋದರರು. ಕುಮಾರ ಸ್ವಾಮಿ ಮತ್ತು ದೊರೆಸಿಂಹ. ಕುಮಾರಸ್ವಾಮಿ ಹುಟ್ಟು ಮೂಕ. ಮತ್ತು ಸ್ವಲ್ಪ ಕಿವುಡ. ಇವನನ್ನು ಜನ ಊಮೈದೊರೆ ಎಂದು ಕರೆಯುತ್ತಿದ್ದರು. “ಬೊಮ್ಮು” ಎಂಬುದು ವಂಶದ ಹೆಸರು. ಆದುದರಿಂದಲೇ ವಿರ ಪಾಂಡ್ಯನು ವೀರಪಾಂಡ್ಯ ಕಟ್ಟಬೊಮ್ಮು ಅಥವಾ ಕಟ್ಟಬೊಮ್ಮನ್ ಎಂದು ಹೆಸರಾಯಿತು.

ಬೊಮ್ಮು ಪಾಂಡ್ಯರಾಜ ಜಗವೀರನ ಬಳಿ ದಳಪತಿಯಾಗಿ ಕೆಲಸಕ್ಕಿದ್ದ. ಬಾಲ್ಯವಿಂದಲೂ ಶೂರನೂ, ಸಾಹಸಿಯೂ ಆಗಿದ್ದ. ಬೊಮ್ಮು ಜಗವೀರನ ನೆಚ್ಚಿನ ಬಂಟನೂ ಆಗಿದ್ದ. ಅವನಿಗೆ ಬೊಮ್ಮು ಎಂದರೆ ಅಪಾರ ಪ್ರೀತಿ, ನಂಬಿಕೆ. ತನಗೆ ಸಾವು ಸಮೀಸಿದಾಗ ಬೊಮ್ಮುವನ್ನು ಹತ್ತಿರ ಕರೆದು, “ಬೊಮ್ಮು ನಾನು ಇನ್ನು ಹೆಚ್ಚು ಕಾಲ ಬದುಕಲಾರೆ. ಇನ್ನು ಈ ರಾಜ್ಯಕ್ಕೆ ನೀನೇ ದಿಕ್ಕು. ನಿನ್ನನ್ನು ರಕ್ಷಿಸಿದಂತೆ ಈ ರಾಜ್ಯವನ್ನು ನೀನು ಕಾಪಾಡು” ಎಂದು ರಾಜ್ಯವನ್ನು ಒಪ್ಪಿಸಿದ.

ಪ್ರಜೆಗಳ ಪ್ರೀತಿಯ ರಾಜ

ಬೊಮ್ಮು ಇದ್ದ ಊರು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಪಾಂಚಾಲಂಕುರುಚ್ಚಿ. ಜಗವೀರ ಸತ್ತಮೇಲೆ ಬೊಮ್ಮು  ಊರಿನ ಸುತ್ತ ಒಂದು ಭಾರಿ ಕೋಟೆ ಕಟ್ಟಿಸಿದ. ಪಾಂಚಾಲಂಕುರಚ್ಚಿಯನ್ನು ಸುಂದರ ನಗರವನ್ನಾಗಿ ಮಾಡಿದ. ಪ್ರಜೆಗಳು ಯಾವ ತೊಂದರೆಯೂ ಇಲ್ಲದಂತೆ ಇರಲು ಹಲವಾರು ಸೌಕರ್ಯಗಳನ್ನು ದೊರಕಿಸಿಕೊಟ್ಟ. ೧೭೯೦ನೆಯ ಇಸವಿ ಫೆಬ್ರವರಿ ಎರಡರಂದು ಬೊಮ್ಮುವಿಗೆ ಅವನ ಮೂವತ್ತನೆಯ ವಯಸ್ಸಿನಲ್ಲಿ ಪ್ರಜೆಗಳು ಪಟ್ಟಕಟ್ಟಿದರು. ಬೊಮ್ಮು ಪಟ್ಟಾಭಿಷಕ್ತನಾದ ಕೂಡಲೇ ಬಳ್ಳಾರಿಯಲ್ಲಿದ್ದ ತನ್ನ ಬಂದುಮಿತ್ರರನ್ನು ಬರಮಾಡಿಕೊಂಡ. ಸಣ್ಣ ಪುಟ್ಟ ಸಂಸ್ಥಾನಗಳಿಗೆ ಅಧಿಪತಿಗಳನ್ನು ನೇಮಿಸಿದ. ಬೊಮ್ಮುವಿಗೆ ಅವರೆಲ್ಲರೂ ವಿಧೇಯರಾಗಿದ್ದು ಕಪ್ಪ ಕಾಣಿಕೆ ಸಲ್ಲಿಸಿದ್ದರು.

ಪ್ರಜೆಗಳ ವಿಶ್ವಾಸಕ್ಕೆ ಪಾತ್ರನಾದ ಬೊಮ್ಮು. ಅನ್ಯಾಯ, ಅತ್ಯಾಚಾರಗಳೆಂದರೆ ಅವನಿಗೆ ಸಹಿಸದು. ಹಾಗೆ ಮಾಡಿದವರನ್ನು ಪತ್ತೆ ಹಚ್ಚಿ ಶಿಕ್ಷಿಸಿ ಬುದ್ಧಿ ಹೇಳುತ್ತಿದ್ದ. ವೀರರನ್ನು ಕಂಡರೆ ಬೊಮ್ಮುವಿಗೆ ಬಹು ಆದರ. ಅವರನ್ನು ಬರಮಾಡಿ ತನ್ನ ರಾಜ್ಯದಲ್ಲಿ ಕೆಲಸಕ್ಕಿಟ್ಟುಕೊಳ್ಳುತ್ತ ಇದ್ದ. ಹೀಗೆ ಬಂದವರಲ್ಲಿ ವೆಳ್ಳಿದೇವನೂ ಒಬ್ಬ. ಕೋಣಗಳ ಕಾಳಗದಲ್ಲಿ ಮದಿಸಿದ ಕೋಣವೊಂದನ್ನೆದುರಿಸಿದ ಶೂರ ವೆಳ್ಳಿದೇವ. ಬೊಮ್ಮುವಿಗೆ ಅವನು ನೆಚ್ಚಿನ ವೀರನಾದ. ಪಾಂಚಾಲಂಕುರುಚ್ಚಿ ಜನರು ಬೊಮ್ಮುವಿನ ಆಡಳಿತದಲ್ಲಿ ಸುಖವಾಗಿದ್ದರು.

“ನಾನು ತಲೆಬಾಗುವುದಿಲ್ಲ”

ಪಾಂಚಾಲಂಕುರುಚ್ಚಿಯ ಸುತ್ತಮುತ್ತಲಿನ ಮ್ಯಾಕ್ಸ್‌ವೆಲ್ ಎಂಬಾತ ಆಗಿನ ಕಂಪೆನಿಯ ಅಧಿಕಾರಿ. ಅನೇಕ ಸಂಸ್ಥಾನಗಳ ರಾಜರು ಆಗಲೇ ಬಿಳಿಯರಿಗೆ ಶರಣಾಗಿದ್ದರು. ಅವರಲ್ಲಿ ಎಟ್ಯಾಪುರದ ಎಟ್ಟಪ್ಪನೂ ಒಬ್ಬ. ಅವನೊಬ್ಬ ಹೇಡಿ. ಆಂಗ್ಲರಿಗೆ ಅಧೀನನಾದ. ಮ್ಯಾಕ್ಸ್ ವೆಬ್ ಬೊಮ್ಮುವಿನಿಂದ ಕಪ್ಪ ವಸೂಲು ಮಾಡುವ ಅಧಿಕಾರವನ್ನು ಎಟ್ಟಪ್ಪನಿಗೆ ವಹಿಸಿದ್ದ. ಸರಿಯಾಗಿ ಕತ್ತಿ ಹಿಡಿಯಲೂ ಬಾರದ ಎಟ್ಟಪ್ಪ ಬೊಮ್ಮುವಿನ ಕೋಟೆಯನ್ನು ಪ್ರವೇಶಿಸಲು ಹೆದರಿದ. ಇದನ್ನರಿತ ಮ್ಯಾಕ್ಸ್‌ವೆಲ್ ಬೊಮ್ಮುವಿಗೆ ಹಲವಾರು ಬೆದರಿಕೆ ಪತ್ರಗಳನ್ನು ಬರೆದ. “ಕಪ್ಪ ಸಲ್ಲಿಸಿ, ಇಲ್ಲದಿದ್ದರೆ ಯುದ್ಧಕ್ಕೆ ಬರುತ್ತೇವೆ” ಎಂದು ಹೆದರಿಸಿದ. ಬೊಮ್ಮು ಒಂದು ಬಿಡಿಕಾಸನ್ನು ಕಪ್ಪವಾಗಿ ಕೊಡುವುದಿಲ್ಲ ಎಂದು ತಿಳಿಸಿಬಿಟ್ಟ. ತನ್ನ ರಾಜ್ಯದಲ್ಲಿ ಅನ್ಯರಿಗೆ ಪ್ರವೇಶವಿಲ್ಲ ಎಂದು ಹೇಳಿಕಳುಹಿಸಿದ. ಕಂಪೆನಿಯವರಿಗೆ ಬೊಮ್ಮುವಿನ ರೀತಿ ಸರಿತೋರಲಿಲ್ಲ. ೧೭೯೨ ರಿಂದ ೧೭೯೮ರ ವರೆಗೆ ಅವರು ಆರುವರ್ಷಗಳ ಕಾಲ ಬೊಮ್ಮುವಿನ ಕೂಡ ಸೆಣಸಾಡಿದರು. ಬೊಮ್ಮು ಮಾತ್ರ ಬಗ್ಗಲಿಲ್ಲ.

“ಕಂಪೆನಿಯವರೊಂದಿಗೆ ವೈರ ಬೇಡ. ಏನೋ ಇಷ್ಟು ಸಲ್ಲಿಸಿಬಿಡೋಣ” ಎಂದು ಬೊಮ್ಮುವಿಗೆ ಅವನ ಮಿತ್ರರು ಉಪದೇಶ ಮಾಡಿದರು. “ವ್ಯಾಪಾರಿಗಳ ವೇಷದಲ್ಲಿ ಬಂದು ನಮ್ಮನ್ನು ಹೀರುತ್ತಿರುವ ನಾಡೋಡಿ ಆಂಗ್ಲರಿಗೆ ನಾವು ಗುಲಾಮರಾಗುವುದೇ? ಎಂದಿಗೂ ಇಲ್ಲ” ಎಂದು ಅವರಿಗೆ ಬುದ್ಧಿ ಹೇಳಿದ ಬೊಮ್ಮು.

ಆಂಗ್ಲರಿಗೆ ಬೊಮ್ಮು ತಲೆನೋವಾದ. ಹೇಗಾದರೂ ಬೊಮ್ಮು ತಮಗೆ ವಶನಾದರೆ ಸಾಕೆಂದು ಆಲನ್ ಎಂಬ ದೂತನನ್ನು ಅವನೆಡೆಗೆ ಕಳುಹಿಸಿದರು. “ಕಳೆದ ಆರು ವರ್ಷಗಳಿಂದ ಕೊಡಬೇಕಾದ ತೆರಿಗೆ ಕೊಡಬೇಕಾಗಿಲ್ಲ. ತೆರಿಗೆಯ ಹೆಸರಿನಲ್ಲಿ ಒಂದಿಷ್ಟು ಹಣ ಕೊಟ್ಟರೆ ಸಾಕು” ಎಂದು ಆಲನ್ ಹೇಳಿದ. ಕಟ್ಟಬೊಮ್ಮು ಏನನ್ನೂ ಕೊಡದಿದ್ದೆ ಮಿಕ್ಕ ಪಾಳೇಗಾರರು ತೆರಿಗೆಡ ಕೊಡಲು ನಿರಾಕರಿಸಿ ಬಿಡುತ್ತಾರೆ ಎಂದೂ ಬಿನ್ನವಿಸಿದ. ಬೊಮ್ಮು ನಕ್ಕ. “ಪಾಳೆಯಗಾರರೆಲ್ಲ ಹೇಡಿಗಳಾದರೆಂದು ನನು ತಲೆ ಬಾಗುವುದೇ? ದೇಹದಲ್ಲಿ ತೊಟ್ಟು ರಕ್ತವಿರುವವರೆಗೂ ಈ ಪಾಂಡ್ಯ ವಿದೇಶಿಗಳಾದ ನಿಮಗೆ ತಲೆ ತಗ್ಗಿಸನು. ಹ್ಞು! ಇನ್ನು ಹೊರಡಿ” ಎಂದು ಗರ್ಜಿಸಿದ ಬೊಮ್ಮು. ನಿರಾಶೆಗೊಂಡ ಆಲನ್ ಹಿಂತಿರುಗಿದ.

ಬೊಮ್ಮುವಿನ ಗಂಡುಗಲಿತನ ಕಂಡ ಆಂಗ್ಲರಿಗೆ ದಿಕ್ಕೇ ತೋರದಾಯಿತು ಭೇದೋಪಾಯದಲ್ಲಿ ಚತುರರೆನಿಸಿದ ಅವರು ಹಣದಾಸೆ ತೋರಿಸಿ ಇತರ ಪಾಳೇಗಾರರನ್ನು ತಮ್ಮ ಕಡೆ ಸೇರಿಸಿಕೊಂಡರು. ಎಟ್ಟಪ್ಪನಂತೂ ಕಂಪೆನಿಯವರಿಗೆ ಸಂಪೂರ್ಣ ಶರಣಾಗಿದ್ದ. ಅವನಿಂದ ಬೊಮ್ಮುವಿನ ಬಲಾಬಲಗಳನ್ನರಿತರು ಅಂಗ್ಲರು.

ಬೊಮ್ಮುವಿನಿಂದ ತೆರಿಗೆ ವಸೂಲು ಮಾಡಲು ಕಂಪೆನಿಯವರು ಜಕ್ಸನ್ ಎಂಬ ಹೊಸ ಅಧಿಕಾರಿಯನ್ನು ನಿಯಮಿಸಿದರು. “ಬಹಳ ಗುಡ್ಡಾದ ವಿಷಯವೊಂದನ್ನು ಕುರಿತು ಮತನಡಬೇಕಾಗಿದೆ. ಇದಕ್ಕಾಗಿ ತಿರುನಲ್ವೇಲಿಯಲ್ಲಿ ನನ್ನನ್ನು ಒಂಟಿಯಾಗಿ ಬಂದು ಕಾಣಬೇಕು” ಎಂದು ಬೊಮ್ಮುವಿಗೆ ಜಾಕ್ಸನ್ ಪತ್ರ ಬರೆದ. ಬೊಮ್ಮು ಇದರಿಂದ ತನಗೆ ಒಳಿತಗಬಹುದೆಂದು ಬಗೆದು ಬರಲು ಒಪ್ಪಿದ್ದೇನೆ ಎಂದು ಜಾಕ್ಸನ್‌ಗೆ ತಿಳಿಸಿದ. ತಮ್ಮನ ಸೂಚನೆ ಬೊಮ್ಮುವಿಗೆ ಸರಿ ಎನಿಸಿತು. ವೃದ್ಧ ಮಂತ್ರಿ ತನಾಪತಿ ಪಿಳ್ಳೈ, ಊಮೈದೊರೆ, ವಳ್ಳಿದೇವ ಹಾಗೂ ಕೆಲ ಸೈನಿಕರೊಡನೆ ೧೭೧೮ನೇ ಇಸವಿ ಆಗಸ್ಟ್ ೨೪ರಂದು ಪಲ್ಲಕ್ಕಿಯಲ್ಲಿ ಕುಳಿತು ಹೊರಟ ಬೊಮ್ಮು.

ಆದರೇನು? ಕುತಂತ್ರಿ ಬೇರೆ ಕಡೆಗೆ ಹೋಗಿದ್ದ. ಬೊಮ್ಮು ಅಲ್ಲಿಗೂ ಹೋದ. ಅಲ್ಲಿಯೂ ಜಾಕ್ಸನ್ ಇಲ್ಲ.  ಶಿವಗಿರಿ, ಸೇಟ್ರೂರು, ಶ್ರೀ ವಿಲ್ಲಪುತ್ತೂರು, ಭವಾನಿ, ಕುಟ್ರಾಲಂ ಈ ಎಲ್ಲ ಕಡೆಗೂ ಬೊಮ್ಮು ಹೋದ. ಜಾಕ್ಸನ್ ಮಾತರ ಎಲ್ಲೂ ಇಲ್ಲ.

“ಏನೆಂದುಕೊಂಡ ಈ ವಿದೇಶಿ? ಬರಹೇಳಿ ಹೀಗೆ ಅವಮಾನಿಸುವುದೇ ಅವನ ಉದ್ದೇಶವೇ?” ಎನಿಸಿತು. ಅವರಿಗೆ. ಬೊಮ್ಮುವಿಗೆ ಜಾಕ್ಸನ್‌ನ ನಡವಳಿಕೆ ಸರಿ ತೋರಲಿಲ್ಲ. ತನ್ನಿಂದಾಗಿ ಈ ಮೂವರು ಹಿಂಸೆಗೊಲಗಾದರಲ್ಲ ಎಂದು ನೋಂದುಕೊಂಡ. ಕಡೆಗೆ ಜಾಕ್ಸನ್ ಶೋಕ್ಕಂಪಟ್ಟಿ ಜಮೀನ್ದಾರ ರಾಜಾ ಸೇತುಪತಿಯ ಅತಿಥಿಯಾಗಿ ರಾಮ ಲಿಂಗವಿಲಾಸದಲ್ಲಿದ್ದಾನೆಂದು ಬೊಮ್ಮುವಿಗೆ ತಿಳಿಯಿತು.

ಎಂತಹ ಭೇಟಿ !

ರಾಮಲಿಂಗ ವಿಲಾಸವು ಕಲೆ, ಐಶ್ವರ್ಯಗಳಿಂದ ಸಮೃದ್ಧವಾಗಿದ್ದ ಮಹಾಸೌಧ. ಕವಿಗಳ ಗೂಡು. ಈಗ ಅಲ್ಲಿ ಕೇಳಿಬರುತ್ತಿರುವುದು ಜಾಕ್ಸನ್ನನ ಬಿರುಸು ಮಾತುಗಳು ಸೌಧದ ಸುತ್ತ ಬಂದೂಕು ಹಿಡಿದ ಪಹರೆಯವರು. ಬೊಮ್ಮು ಏಕಾಕಿಯಾಗಿ ಶತ್ರುಪಾಳೆಯವನ್ನು ಪ್ರವೇಶಿಸಿದ. ಅವನ ಸಂಗಡಿಗರು ಗುಪ್ತ ಸ್ಥಾನಗಳಲ್ಲಿ ಅವಿತುಕೊಂಡರು.

ಯಾರಿಗೂ ಹೆದರದೆ ಜಾಕ್ಸನ್ ಇದ್ದೆಡೆಗೆ ಬಂದ ಬೊಮ್ಮು. ಜಾಕ್ಸನ್ ಕುಡಿದಿದ್ದ. ಬೊಮ್ಮುವಿನ ಆಗಮನ ಅವನನ್ನು ನಡಗುವಂತೆ ಮಾಡಿತು. ಸಿಂಹ ಸ್ವಪ್ನವಾಗಿದ್ದ ಬೊಮ್ಮು ಈಗ ತನ್ನೆದುರಿನಲ್ಲಿ!

“ಕರೆಸಿದ ಕಾರನವೇನು?” ಕೇಳಿದ ಬೊಮ್ಮು. “ನೀನು ಕೊಡಬೇಕಾದ ಕಪ್ಪವನ್ನು ಇನ್ನೂ ಏಕೆ ಕೊಟ್ಟಿಲ್ಲ? ಈಗಲೂ ಕೊಡದೆ ಇದ್ದರೆ ನಿನ್ನ ಗತಿ ಏನಾಗುವುದು ಗೊತ್ತಿದೆಯೇ?” ಜಾಕ್ಸನ್ ನುಡಿದ. ಬೊಮ್ಮುವಿನ ಮೈ ಉರಿಯಹತ್ತಿತು. ರೋಷ ಉಕ್ಕಿಬಂತು. “ಏನು ಮಾತಾಡುವಿಯೋ ಕುನ್ನಿ? ಛಿ ! ತೆರಿಗೆ ಕೊಡಬೇಕೆ ನಿನಗೆ ! ನೆನಪಿನಲ್ಲಿಡು, ಇದು ನನ್ನ ಪವಿತ್ರ ತಾಯ್ನಾಡು. ಇಲ್ಲಿಯ ಕಣಕಣವೂ ನನ್ನದು. ನಿನಗೆ ಜೀವದ ಆಸೆ ಇದ್ದರೆ ಈಗಲೇ ತೊಲಗಿಹೋಗು!” ಎಂದು ಅಬ್ಬರಿಸಿದ. ಬೊಮ್ಮುವಿನ ಪರಾಕ್ರಮದ ಮಾತುಗಳಿಗೆ ಜಾಕ್ಸನ್ ಭೂಮಿಗಿಳಿದು ಹೋದ. ಆದರೂ ಅವನ ಕೆಲಸವಾಗಬೇಕಿತ್ತಲ್ಲ! ಮತ್ತೆ ಹೇಳಿದ, “ಬೊಮ್ಮು ! ಸುಮ್ಮನೆ ಹಠ ಮಾಡಬೇಡ. ಕೊಡಬೇಕಾದದ್ದನ್ನು ತಂದೊಪ್ಪಿಸು. ನಿನ್ನ ತಂಟೆಗೆ ನಾವು ಬರುವುದಿಲ್ಲ. ಬೊಮ್ಮು ಕಟಕಟನೆ ಹಲ್ಲು ಕಡಿದ. ಛೇ! ಹೀಗೆ ಹೇಳಲು ನಾಚಿಕೆಯಾಗದೆ ನಿನಗೆ! ಬೇಕಿದ್ದರೆ ದಾನವಾಗಿ ಕೇಳು. ನಿನ್ನ ಹೊಟ್ಟೆ ತುಂಬಿಸುತ್ತೇನೆ. ತೆರಿಗೆ ಎಂದೆಯೋ ತಲೆ ತೆಗೆಯಬೇಕಾದೀತು, ಎಚ್ಚರ!” ಎಂದ ಬೊಮ್ಮು. ಜಾಕ್ಸನ್ ಕ್ಲಾಕ್” ಎಂಬ ತನ್ನ ಕಾರ್ಯದರ್ಶಿಯನ್ನು ಕರೆದ. “ಹಿಡಿಯಿರಿ ಬೊಮ್ಮುವನ್ನು!” ಎಂದು ಆಜ್ಞೆ ಮಾಡಿದ. ಬೊಮ್ಮು ತನ್ನನ್ನು ಹಿಡಿಯಲು ಬಂದ ಸಿಪಾಯಿಗಳತ್ತ ಕತ್ತಿ ಬೀಸಿದ. ಚದುರಿದರು ಸಿಪಾಯಿಗಳು. ಕ್ಷಣದಲ್ಲಿ ಕ್ಲಾರ್ಕ್‌ನ ತಲೆ ಕೆಳಗುರುಳಿತ್ತು. ಜಾಕ್ಸನ್ ಕಂಗಾಲಾದ. ಅವನ ಅರಚಾಟ ಕೇಳಿಸಿಕೊಂಡ ಬೊಮ್ಮುವಿನ ಮಿತ್ರರೂ ಬಂದು ಸೇರಿದರು. ಒಂದು ಸಣ್ಣ ಯುದ್ಧವೇ ನಡೆದು ಹೋಯಿತು. ಬೊಮ್ಮು ಮಿತ್ರರೊಡನೆ ತಪ್ಪಿಸಿಕೊಂಡು ಪಾರಾಗಿದ್ದ. ಆದರೆ, ಹೊರಬರುವಾಗ ವೃದ್ಧ ತಾನಾಪತಿ ಸಿಕ್ಕಿಬಿದ್ದಿದ್ದ. ಬೊಮ್ಮು ದುಃಖಗೊಂಡ. “ಪಿಳ್ಳೈಯವರಿಲ್ಲದೆ ಊರಿಗೆ ಹೇಗೆ ಹೋಗುವುದು?” ಎಂದ. “ತಾವು ಇಲ್ಲೇ ಇದ್ದರೆ ವಿಪತ್ತು ಬಿಟ್ಟಿದ್ದಲ್ಲ. ತಾನಾಪತಿಗಳು ಹೇಗೋ ತಪ್ಪಿಸಿಕೊಂಡು ಬರುವರು. ನಾವು ಇನ್ನು ಹೊರಡೋಣ” ಎಂದು ಊಮೈದೊರೆ ಅಣ್ಣನನ್ನು ಸಂತೈಸಿ ಹೇಳಿದ. ಬೊಮ್ಮು ಪಾಂಚಾಲಂಕುರುಚ್ಚಿಗೆ ಬಂದು ಸೇರಿದ. ಹೊಸ ಅಧಿಕಾರಿಯು ಸಂಚು ವಿಫಲವಾಯಿತು.

 

ಇದು ನನ್ನ ಪವಿತ್ರ ತಾಯ್ನಾಡು

ಜಾಕ್ಸನ್ ತೇಜೋವಧೆ

ಬೊಮ್ಮು ತಪ್ಪಿಸಿಕೊಂಡನಲ್ಲ ಎಂಬುದು ಜಾಕ್ಸನ್‌ನನ್ನು ಕಾಡುತ್ತಿತ್ತು. ಜೊತೆಗೆ, ಎದುರಿಗೆ ಬಂದು ನಿಂತಿದ್ದರೂ ತನ್ನಿಂದ ಅವನನ್ನು ಹಿಡಿಯಲಾಗಲಿಲ್ಲವಲ್ಲ ಎಂಬ ನಾಚಿಕೆ. ಜಾಕ್ಸನ್ ದಿಕ್ಕು ಕಾಣದಾದ. ತಾನು ಬಂಧಿಸಿದ ತಾನಾಪತಿಗೆ ಬೇಡಿ ತೊಡಿಸಿದ. ಅದೇ ಅವನಿಗೆ ಹೆಮ್ಮೆಯ ವಿಷಯ. ಆದರೆ ತಾನು ಸೋತ ವಿಷಯ ಕಂಪೆನಿಯ ಮೇಲಾಧಿಕಾರಿಗೆ ತಿಳಿದರೆ ಏನುಗತಿ ಎಂದುಕೊಂಡ. ತಾನು ತಪ್ಪಿಸಿಕೊಳ್ಳಲು ಕಂಪೆನಿಗೆ ಸುಳ್ಳು ಪತ್ರವೊಂದನ್ನು ಬರೆದ. ಆ ಪತ್ರದಲ್ಲಿ ‘ಪಾಂಚಾಲಕುರುಚ್ಚಿಯ ರಾಜ ಕಟ್ಟ ಬೊಮ್ಮು ನನ್ನನ್ನು ಕಾಣಲು ಇಚ್ಛಿಸಿದ. ಆಗಲಿ ಎಂದು ಒಪ್ಪಿಕೊಂಡೆ. ಆದರೆ, ಅವನು ತನ್ನ ಮಿತ್ರರೊಡನೆ ನಾಲ್ಕು ನೂರು ಸಶಸ್ತ್ರ ಸೈನಿಕರೊಡನೆ ಬಂದ. ಅವರೆಲ್ಲ ಗುಪ್ತವಾಗಿ ಬಂಗಲೆಯ ಸುತ್ತ ಅವಿತುಕೊಂಡಿದ್ದರು. ಬಂದ ಬೊಮ್ಮುವಿನ ಬಳಿ ನಾನು ತೆರಿಗೆ ವಿಷಯ ಪ್ರಸ್ತಾಪಿಸಿದೆ. ಆದರೆ ಬೊಮ್ಮು ನನ್ನನ್ನು ಅವಮಾನಿಸಿದೆ. ಇದನ್ನು ಕಂಡ ನನ್ನ ಕಾರ್ಯದರ್ಶಿ ಕ್ಲಾರ್ಕ ಬೊಮ್ಮುವಿಗೆ ಎದುರಾದ. ಬೊಮ್ಮು ಕ್ಲಾರ್ಕನನ್ನು ಇರಿದು ಬಿಟ್ಟ. ಸಿಪಾಯಿಗಳೂ ಬೊಮ್ಮುವಿನ ಕಡೆಯವರೂ ಕದನ ನಡೆಸಿದರು. ಈ ಮಧ್ಯೆ ಬೊಮ್ಮು ಪಾರಾದ. ಆದರೆ ನಾನು ಅವನ ಮಂತ್ರಿ ತಾನಾಪತಿ ಪಿಳ್ಳೈಯನ್ನು ಬಂಧಿಸಿದ್ದೇನೆ. ಬೊಮ್ಮುವನ್ನು ಕೊನೆಗಾಣಿಸಲು ನನಗೆ ಸೈನ್ಯದ ಅಗತ್ಯವಿದೆ. ಉತ್ತರವನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಬರೆದಿದ್ದ.

ಕಾಗದವನ್ನು ಕಂಡ ಕಂಪೆನಿಯವರು ಜಾಕ್ಸನನ್ನು ಕರೆಸಿದರು. ತಾನಾಪತಿಗಳ ಜೊತೆಗೆ ಜಾಕ್ಸನ್ ತಿರುಚಿಗೆ ಬಂದು ಸೇರಿದ. ಇಬ್ಬರ ವಿಚಾರಣೆ ನಡೆಯಿತು. ಜಾಕ್ಸನ್ ಹೂಡಿದ ಸಂಚನ್ನು, ವೀರಪಾಂಡ್ಯ ನಡೆಸಿದ ಹೊರಾಟವನ್ನು ತಾನಾಪತಿ ವಿವರಿಸಿದ. ಇಷ್ಟಕ್ಕೆಲ್ಲಾ ಜಾಕ್ಸನ್ ಕಾರನ ಎಂದೂ ಹೇಳಿದ. ಆ ವೇಳೆಗೆ ಮತ್ತೊಬ್ಬ ಆಂಗ್ಲ ಅಧಿಕಾರಿ ಡೇವಿಸನ್ ಬರೆದ ಪತ್ರ ಕಂಪೆನಿಯವರ ಕೈಸೇರಿತು. ಭಾರತೀಯರೆಂದರೆ ಡೇವಿಸನ್‌ಗೆ ತುಂಬ ಅಭಿಮಾನ. ಅವರಿಗೆ ಅವಮಾನವಾಗಿದ್ದರೆ ಅದಕ್ಕೆ ಕಾರಣ ತಿಳಿಯುತ್ತಿದ್ದ. ತನ್ನ ಪತ್ರದಲ್ಲಿ, “ಜಾಕ್ಸನ್ನನ್ನೇ ಎರಡು ಕಡೆಯವರಿಗಾದ ಪ್ರಾಣ ಹಾನಿಗೆ ಕಾರಣ. ಅವನ ನೀತಿ ಸರಿಯಲ್ಲ” ಎಂದು ತಿಳಿಸಿದ್ದ. ನ್ಯಾಯಮೂರ್ತಿಗಳೂ ಬೊಮ್ಮುವಿನ ಪದ ವಾದಿಸಿ ಜಾಕ್ಸನ್ನನನ್ನು ಅಧಿಕಾರದಿಂದ ತೆಗೆಯಬೇಕೆಂದು ತೀರ್ಪಿತ್ತರು. ಪಿಳ್ಳೈಯವರಿಗೆ ಬಿಡುಗಡೆಯಾಯಿತು.

ಇನ್ನೊಬ್ಬ ಮದಿಸಿದ ಅಧಿಕಾರಿ

ಜಾಕ್ಸನನ್ನ ಬಳಿಕ ಆ ಸ್ಥಾನಕ್ಕೆ ಎಸ್.ಆರ್. ಲೂಷಿಂಗ್‌ಟನ್ ಎಂಬ ಹೊಸ ಅಧಿಕಾರಿಯನ್ನು ನಿಯಮಿಸಲಾಗಿತ್ತು. ನೂತನ ಅಧಿಕಾರಿ ರಾಮಲಿಂಗ ವಿಲಾಸದ ಹಗರಣವನ್ನು ಮರೆಯಲಿಲ್ಲ. ಬೊಮ್ಮುವಿನ ಮೇಲೆ ಅವನಿಗೆ ದ್ವೇಷ ಹೆಚ್ಚಿತು. ಪಾಂಚಾಲಂಕುರುಚ್ಚಿಯನ್ನು ನೆಲಸಮ ಮಾಡಬೇಕೆಂದು ಕಾಯುತ್ತಿದ್ದ. ರಾಮಲಿಂಗವಿಲಾಸದಲ್ಲಿ ಮಡಿದ ಕ್ಲಾರ್ಕ್‌ನ ಸಂಸಾರಕ್ಕೆ ಪರಿಹಾರ ಧನ ನೀಡಬೇಕೆಂದೂ ಇದುವರೆಗಿನ ತೆರಿಗೆ ಹಣವನ್ನು ಕಂಪೆನಿಯವರಿಗೆ ಈ ಕ್ಷಣ ಕೊಡಬೇಕೆಂದೂ ಸೂಚಿಸಿದ.

ಪತ್ರನೋಡಿ ಸಿಟ್ಟಾದ ಬೊಮ್ಮು, “ರಾಮಲಿಂಗ ವಿಲಾಸದ ಘಟನೆಯಲ್ಲಿ ನಿಮ್ಮವರು ನನ್ನ ಪಲ್ಲಕ್ಕಿ ಮೊದಲಾದವುಗಳನ್ನು ಅಪಹರಿಸಿದ್ದಾರೆ. ಮೊದಲು ಅದನ್ನು ಹಿಂತಿರುಗಿಸಿ. ಕಪ್ಪದ ಮಾತು ಅನಂತರ” ಎಂದು ಉತ್ತರ ಬರೆದ ಲೂಷಿಂಗ್ಟನ್ ಕಿಡಿಕಿಡಿಯಾದ ಅವರಿಗೆ ಬಂದು ಕಾಣಬೇಕು; ಬರುವಾ ಮೂವತ್ತಕ್ಕಿಂತ ಹೆಚ್ಚು ಮಂದಿಯನ್ನು  ಜೊತೆಯಲ್ಲಿ ಕರೆತರಬಾರದು ಎಂದು ಆಜ್ಞೆ ಮಾಡಿ ಕರೆ ಕಳುಹಿಸಿದ.

ವಿದೇಶಿಯನೊಬ್ಬ ಅಧಿಕಾರ ವಾಣಿಯಿಂದ ಮಾತನಾಡಿದ್ದು ಬೊಮ್ಮುವಿಗೆ ಭಾರಿ ನೋವನ್ನು ಉಂಟುಮಾಡಿತು. ಜಾಕ್ಸನ್‌ನ ಭೇಟಿಯ ನೆನಪಾಗಿ ಕಂಪೆನಿಯ ಕರೆಯನ್ನು ನಿರಾಕರಿಸಿದ.

ತಮಿಳುನಾಡಿನ ಹಲವಾರು ಪಾಳೆಯ ಪಟ್ಟುಗಳನ್ನು ವಶಪಡಿಸಿಕೊಂಡಿದ್ದಾಗಿದೆ. ಉಳಿದಿರುವುದು ಪಾಂಚಾಲಂಕುರುಚ್ಚಿ. ಲೂಷಿಂಗ್ಟನ್‌ಗೆ ಭಯ ಹೆಚ್ಚಿತು. ಬೊಮ್ಮುವನ್ನು ಕೊನೆಗಾಣಿಸಲು ದಂಡೋಪಾಯ ಒಂದೇ ಇನ್ನುಳಿದ ದಾರಿ ಎಂದೆನಿಸಿತವನಿಗೆ. ಸೈನ್ಯ ಕಳುಹಿಸಿ ಎಂದು ಮದರಾಸಿನ ಗವರ್ನರ್ ಲಾರ್ಡ್ ಎಡ್ವರ್ಡ್ ಕ್ಲೈವ್‌ನಿಗೆ ಪತ್ರ ಬರೆದ. ಸಿಂಹದೊಡನೆ ಹೋರಾಡಲು ಲೂಷಿಂಗ್‌ಟನ್ ತೀರ್ಮಾನಿಸಿದ್ದ.

ಸೈನ್ಯ ಹೊರಟಿತು

೧೭೯೯ನೆಯ ಇಸವಿಯ ಆಗಸ್ಟ್ ೧೪ರಂದು ಮೇಜರ್ ಜಾನ್ ಬ್ಯಾನರ್ ಮನ್ ಎಂಬುವನ ನಾಯಕತ್ವದಲ್ಲಿ ಬ್ರಿಟಿಷ್ ಸೈನ್ಯ ಹೊರಟಿತು. ಬೊಮ್ಮುವಿನ ಮೇಲೆ ಯುದ್ಧ ಹೂಡುವುದೇ ಸರಿ ಎಂದು ಬ್ಯಾನರ್ ಮನ್‌ಗೆ ತಿಳಿಸಲಾಗಿತ್ತು. ಬೀಡು ಬಿಟ್ಟಿತು. ಲೂಷಿಂಗ್‌ ಟನ್‌ಗೆ ಮತ್ತೊಮ್ಮೆ ಬೊಮ್ಮುವನ್ನು ವಿನಂತಿಸಿಕೊಳ್ಳೊಣ ಎನಿಸಿತು. ಅದಕ್ಕೆ ಒಪ್ಪಿದ ಬ್ಯಾನರ್‌ಮನ್ ಆಗಸ್ಟ್ ೨೦ ರಂದು ಬೊಮ್ಮುವನ್ನು ಸಂಧಿ ಮಾಡಿಕೊಳ್ಳಲು ಕೇಳಿ ಪತ್ರ ಬರೆದ.

ಸ್ವಾತಂತ್ರ್ಯಪ್ರೇಮ್ ಬೊಮ್ಮು ಪರಕೀಯರ ಹಂಗಿನಲ್ಲಿ ಬಾಳುವನೇ! ಎಂದಿಗೂ ಇಲ್ಲ. ಕಂಪೆನಿಯ ಬಿಳಿಯರಿಗೆ ಬುದ್ಧಿ ಹೇಳಿ ಬಾ ಎಂದು ವನ್ನಿಯರ್ ಎಂಬುವನನ್ನು ದೂತನಾಗಿ ಕಳುಹಿಸಿ ಕೊಟ್ಟ ಬೊಮ್ಮು. ಬ್ಯಾನರ್‌ಮನ್‌ ವನ್ನಿಯರ್‌ಗೆ ಹಣದಾಸೆ ತೋರಿಸಿದ. “ನಿಮ್ಮ ಬೊಮ್ಮುವಿಗೆ ಹೇಳು, ಯುದ್ಧ ಮಾಡದೆ ನಾವು ಹಿಂತಿರುಗುತ್ತೇವೆ. ನೀವು ನಮಗೆ ಸಲ್ಲಿಸಬೇಕಾದುದನ್ನು ಸಲ್ಲಿಸಿದರೆ ಸಾಕು. ನಾವು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ” ಎಂದು ಹರಕು ಮುರುಕು ತಮಿಳಿನಲ್ಲಿ ನುಡಿದ ಬ್ಯಾನರ್‌ಮನ್‌. ವನ್ನಿಯರ್ ಸಿಟ್ಟಾದ. “ನಿಮ್ಮಿಂದ ನಾವು ಬಾಳಲು ಕಲಿಯಬೇಕಿಲ್ಲ” ಹೇಗಿರಬೇಕೆಂದು ನಮಗೂ ಗೊತ್ತು” ಎಂದು ಮರು ನುಡಿದ. ವನ್ನಿಯರ್‌ನ ಚರ್ಚೆ ವಿಫಲವಾಯಿತು. ಪರರ ಸ್ವತ್ತನ್ನು ಅಪಹರಿಸಲೆಂದೇ ಬಂದ ಬಿಳಿಯರಿಗೆ ಬುದ್ಧಿವಾದ ಹಿಡಿಸೀತೆ? ಬ್ಯಾನರ್‌ಮನ್‌ ಬಂದವನು ದೂತನೆಂಬುದನ್ನು ಮರೆತು ವನ್ನಿಯರ್‌ನನ್ನು ಕಾರಾಗೃಹದಲ್ಲಿರಿಸಿದ. ಬೊಮ್ಮುವಿನ ಮೇಲೆ ಯುದ್ಧ! ಪಾಂಚಾಲಂಕುರುಚ್ಚಿಯ ಕೋಟೆ ಇನ್ನು ನಮ್ಮ ವಶ. ಹೊರಡಿರಿ ಪಾಂಚಾಲಂಕುರುಚ್ಚಿಯತ್ತ! ಸೈನ್ಯಕ್ಕೆ ಆಜ್ಞೆ ಮಾಡಿದ ಬ್ಯಾನರ್‌ಮನ್‌. ಸೈನ್ಯ ಹೊರಟಿತು.

ರಣೋತ್ಸಾಹ

ಪಾಂಚಾಲಂಕುರುಚ್ಚಿಯ ಕುಲದೇವತೆ ಜಕ್ಕಮ್ಮ. ವೀರರಿಗೆ ಜಕ್ಕಮ್ಮನೇ ಸ್ಫೂರ್ತಿದೇವತೆ. ಅಂದು ತಿರುಚಿಂದೂರಿನಲ್ಲಿ ಜಕ್ಕಮ್ಮನ ಜಾತ್ರೆ, ಊಮೈದೊರೆ, ವಳ್ಳಿದೇವ ಮೊದಲಾದವರೆಲ್ಲ ಜಾತ್ರೆಗೆ ಹೋಗಿದ್ದರು. ಆ ವೇಳೆಗೆ ಬ್ಯಾನರ‍್ಮನ್ ಪಡೆ ಪಾಳೆಯಂಕೋಟ್ಟೈ ಬಿಟ್ಟಾಗಿತ್ತು.

ಪಾಂಚಾಲಂಕುರುಚ್ಚಿ ನಿಶ್ಯಬ್ದವಾಗಿದೆ. ಕೋಟೆಯಲ್ಲಿ ಬೊಮ್ಮು ಇದ್ದಾನೆ. ಕಂಪೆನಿಯ ಸೈನ್ಯ ಯಾವ ಗಳಿಗೆಯಲ್ಲಿ ಬೇಕಾದರೂ ಮುತ್ತಿಗೆ ಹಾಕಬಹುದು. ಎಟ್ಟಪ್ಪ, ಶಿವಗಿರಿ ಐಯ್ಯನ್, ಮರುದಪ್ಪದೇವರೇ ಮೊದಲಾದವರು ನನ್ನಿಂದ ದೂರವಾಗಿದ್ದಾರೆ. ಹೇಡಿಗಳಂತೆ ಆಂಗ್ಲರ ಕೈಗೊಂಬೆಗಳಾಗಿದ್ದಾರೆ. ಆ ಲೂಷಿಂಗ್‌ಟನ್‌ನನೋ ಮೊದಲೇ ಧೂರ್ತ! ಏನು ಮಾಡುವನೋ !” ಎಂದು ಯೋಚಿಸುತ್ತಿದ್ದ ಬೊಮ್ಮು.

ಇನ್ನೇನು ಸ್ವಲ್ಪ ಸಮಯದಲ್ಲೇ ಇಲ್ಲಿಗೆ ಮುತ್ತಿಗೆ ಹಾಕಲು ಕಂಪೆನಿಯ ಸೈನ್ಯ ಬರುತ್ತಿದೆ ಎಂದು ಬೇಹುಗಾರನೊಬ್ಬ ಬೊಮೆಮುವಿಗೆ ತಿಳಿಸಿದ. ಬರುತ್ತಿರುವ ಬ್ಯಾನರ್‌ಮನ್ ತೀರ ಹೊಸಬನೆಂದೂ ಬೊಮ್ಮು ತಿಳಿ. ಆತ ವೀರಪಾಂಡ್ಯನಲ್ಲವೇ? ತಡಮಾಡಲಿಲ್ಲ. ತಿರುಚೆಂದೂರಿಗೆ ಒಬ್ಬನನ್ನು ಕಳುಹಿಸಿದ. ಕೋಟೆಯ ಮೇಲಿನ ಮಂಟಪವನ್ನು ಹತ್ತಿ ನಗಾರಿ, ಗಂಟೆಗಳನ್ನು ಬಾರಿಸುತ್ತ ಇರಲು ಮತ್ತೊಬ್ಬನಿಗೆ ತಿಳಿಸಿದ. ಉಳಿದುದನ್ನು ಪರಿಶೀಲಿಸಲು ತಾನು ಹೊರಟ.

 

ಬೊಮ್ಮು ವೀರಾವೇಶದಿಂದ ಹೋರಾಡುತ್ತಿದ್ದ

ತುತೂರಿ, ಕಹಳೆನಾದ ಮೊಳಗಲಾರಂಭಿಸಿದವು. ಕೋಟೆ ಬಾಗಿಲುಗಳು ಒಮದೊಮದಾಗಿ ಮುಚ್ಚಲ್ಪಟ್ಟವು. ಜಾತ್ರೆಗೆ ಹೋಗಿದ್ದವರು ಹಿಂತಿರುಗಲು ದಕ್ಷಿಣದ ಕಡೆ ಒಂದು ದ್ವಾರ ತೆರೆಯಲಾಗಿತ್ತು. ಕೋಟೆಯಲ್ಲಿ ಎಲ್ಲೆಲ್ಲೂ ರಣೋತ್ಸಾಹ! ವೀರರು ಆಯುಧಗಳನ್ನು ಹಿಡಿದು ನಿಂತರು. ಕೋಟೆ ಗೋಡೆಯ ಮೇಲುಭಾಗದಲ್ಲಿ ಉದ್ದಕ್ಕೂ ಈಟಿ, ಭರ್ಜಿ ಹಿಡಿದು ನಿಂತ ವೀರಯೋಧರು, ಮಹಾದ್ವಾರಗಳಲ್ಲಿ ಬಲವಾದ ಪಹರೆ! ಆತ್ತುರಿನಲ್ಲಿದ್ದ ತಾನಾಪತಿ ಬೇಗನೆ ಬಂದು ಸೇರಿದ.!  ನಗಾರಿ ಶಬ್ದ ಕೇಳಿದೊಡನೆ ಕಯತ್ತಾರು, ವಳ್ಳಿಯಮ್ಮಾಳ್ ಪುರಂಗಳ ಜನ ಆಯುಧಹಿಡಿದು ಕೋಟೆ ತಲುಪಿದರು.

ಬೊಮ್ಮು ಜಕ್ಕಮ್ಮನ ಪೂಜೆ ನೆರವೇರಿಸಿದ. ತನ್ನ ಪತ್ನಿಯನ್ನು ಸಂತೈಸಿ, ಕತ್ತಿ ಝಳಪಿಸುತ್ತ ಹೊರಟ. ಪಾಂಚಾಲಂಕುರುಚ್ಚಿ ಕೋಟೆಯ ಗೋಡೆಯ ಮೇಲೆ ರಣದುದುಭಿ ಮೊಳಗಿತು.

ಸೋಲು

ಕಂಪೆನಿಯ ಸೈನ್ಯ ಪಾಂಚಾಲಂಕುರುಚ್ಚಿ ತಲುಪಿತು. ಬೊಮ್ಮುವಿನ ಸೇನೆಯಲ್ಲಿ ಕಂಪೆನಿಯ ಸೇನೆಯೆಲ್ಲಿ? ಬೊಮ್ಮುವಿನ ಬಳಿ ಕತ್ತಿ ಗುರಾಣಿಗಳು! ಕಂಪೆನಿಯವರ ಬಳಿ ಫಿಂಗಿಗಳು, ಮದ್ದುಗುಂಡುಗಳು! ಎಲ್ಲಿಂದೆಲ್ಲಿಗೆ? ಆದರೆ ವೀರಪಾಂಡ್ಯನ ಕೆಚ್ಚೆದೆಯ ಮುಂದೆ ಎಂತಹವನಾದರೂ ನಡುಗಬೇಕು!

ಯುದ್ಧ ಆರಂಭವಾಯಿತು. ಎರಡೂಸೈನ್ಯಗಳ ಬಲಾಬಲ ಪರೀಕ್ಷೆಗೆ ಮೊದಲಾಯಿತು. ಬಿಚ್ಚುಗತ್ತಿಯ ವೀರರು ರಣೋತ್ಸಾಹದಲ್ಲಿದ್ದರು! ಬರೀ ಗೊಂದಲ. ಫೀರಂಗಿ ಮದ್ದುಗುಂಡುಗಳ ಶಬ್ದ! ಕೋಟೆಯ ಮೇಲಿಂದ ಬೀಳುತ್ತಿದ್ದ ಈಟಿ, ಭರ್ಜಿಗಳಿಗೆ ಬಲಿಯಾದರು ಬಿಳಿಯರು. ಕೋಟೆಯ ಒಳಗೆ ಬರಲೆತ್ನಿಸುತ್ತಿದ್ದವರನ್ನು ಬೊಮ್ಮುವಿನ ಯೋಧರು ಇರಿದು ಕೊಲ್ಲುತ್ತಿದ್ದರು.

ದಕ್ಷಿಣ ದ್ವಾರದ ಬಳಿ ಲೆಫ್ಟಿನೆಂಟ್ ಕಾಲಿನ್ಸ್ ಪಡೆಗೂ ಊಮೈದೊರೆಗೂ ಭಾರಿ ಕಾಳಗವಾಯಿತು. ಊಮೈದೊರೆ ಹುಟ್ಟು ಮೂಕನಾದರೇನು? ಮಹಾ ಪರಾಕ್ರಮಿ, ಸಾಹಸಿ, ಕಾಲಿನ್ಸ್ ಅವನ ಕತ್ತಿಗೆ ಬಲಿಯಾದ. ಎರಡು ತುಂಡಾಗಿ ಬಿದ್ದ. ವಿಷಯ ತಿಳಿದ ಬ್ಯಾನರ್‌ಮನ್ ಕಿಡಿಕಿಡಿಯಾದ. ಮತ್ತಷ್ಟು ಸೈನ್ಯ ಕಳುಹಿಸುವಂತೆ ಕಂಪೆನಿಗೆ ಹೇಳಿ ಕಳುಹಿಸಿದ.

ಕೋಟೆಯ ಉತ್ತರದ ಕಡೆ ಲೆಫ್ಟಿನೆಂಟ್ ಡಲ್ಲಾಸ್ ಮುತ್ತಿಗೆ ಹಾಕಿದ್ದ. ವಿರಾಮವಿಲ್ಲದ ಕಾಳಗ. ಕೋಟೆಯ ನಾಲ್ಕು ದ್ವಾರಗಳೂ ಮದ್ದುಗುಂಡಿಗೆ ಆಹುತಿಯಾದವು. ಕಂಪೆನಿಯ ಸೇನೆ ಒಳಹೊಕ್ಕಿತು. ಕೋಟೆಯ ಮೇಲೆ ಹದ್ದಿನಂತೆ ಕಾಯುತ್ತಿದ್ದ ತಾನಾಪತಿಗೆ ಚಿಂತೆಯಾಯಿತು. ಕೆಳಕ್ಕೆ ನೋಡಿದ. ಬೊಮ್ಮು ವೀರಾವೇಶದಿಂದ ಹೋರಾಡುತ್ತಿದ್ದ . ಈಗ ಇಲ್ಲಿಂದ ತಪ್ಪಿಸಿಕೊಂಡು ಹೋಗಿ ಪುನಃ ಸೈನ್ಯ ಸಜ್ಜುಗೊಳಿಸಬಹುದೆಂದು ಯೋಚಿಸಿದ.  ತಾನಾಪತಿ. ಬೊಮ್ಮು ಇದ್ದಲ್ಲಿಗೆ ಹೋಗಿ ಬಿನ್ನವಿಸಿಕೊಂಡ. “ನನ್ನವರನ್ನೆಲ್ಲಾ ಬಿಟ್ಟು  ರಣಹೇಡಿಯಂತೆ ಓಡಿಹೋಗುವುದೇ? ನನ್ನಿಂದಾಗದು” ಎಂದ ಬೊಮ್ಮು. “ಆಂಗ್ಲರನ್ನು ಈ ನೆಲದಿಂದ ಓಡಿಹೋಗಬೇಕಾದರೆ ಬೇರೆ ದಾರಿಯೇ ಇಲ್ಲ. ಮತ್ತೆ ಜನಸಂಘಟನೆ ಮಾಡುವುದೇ ಉಳಿದಿರುವ ಹಾದಿ” ಎಂದು ಕಡೆಗೆ ತಾನಾಪತಿ ಬೊಮ್ಮುವಿನ ಮನಸ್ಸೊಪ್ಪಿಸಿದ.

ಯುದ್ಧ ನಡೆಯುತ್ತಿತ್ತು. ಬ್ಯಾನರ್ ಮನ್ ತನಗೆ ಜಯ ಎಂದು ಗಟ್ಟಿಮಾಡಿಕೊಂಡ. ಇನ್ನೆನು ಬೊಮ್ಮು ವಶವಾದ ಎಂದು ತಿಳಿದ. ಆದರೆ ಬೊಮ್ಮು ಅವನ ಕಣ್ಣಿಗೆ ಮಣ್ಣೆರಚಿದ್ದ. ತನ್ನ ನೆಚ್ಚಿನ ಮಿತ್ರರೊಡನೆ ತಪ್ಪಿಸಿಕೊಂಡಿದ್ದ. ೧೭೯೯ರ ಸಪ್ಟಂಬರ್ ಏಳರಂದು ಬೊಮ್ಮು ಪಾಂಚಾಲಂಕುರುಚ್ಚಿ ಬಿಟ್ಟಾಗಿತ್ತು.

ಹಿಡಿದು ಕೊಟ್ಟವರಿಗೆ ಬಹುಮಾನ

ಮುಂಜಾನೆಯ ಸಮಯ. ಎಲ್ಲೆಲ್ಲೂ ನಿಶ್ಯಬ್ದ. ತಪ್ಪಿಸಿಕೊಂಡ ಬೊಮ್ಮು, ಅವನ ಸಂಗಡಿಗರು ಕೋಲಾರ್ ಪಟ್ಟಿ ಸೇರಿದ್ದರು. ಅಲ್ಲಿಯ ಪಾಳೇಯಗಾರ ರಾಜಗೋಪಾಲನಾಯಕ. ಬೊಮ್ಮು ಎಂದರೆ ಅವನಿಗೆ ಗೌರವ. ಅವನ ಆಶ್ರಯ ಬಯಸಿ ಬೊಮ್ಮು ಬಂದಿದ್ದ. ಒಂದು ರಾತ್ರಿ ಬೊಮ್ಮು ನಾಯಕನ ಅರಮನೆಯನ್ನು ತಲುಪಿದ. ಬಂದವನು ಬೊಮ್ಮು ಎಂದು ತಿಳಿದ ನಾಯಕ ಎಲ್ಲರನ್ನೂ ಒಳಗೆ ಕರೆದೊಯ್ದ. ಪರಸ್ಪರ ಮಾತುಕತೆ ನಡೆದವು. ನಾಯಕ ಬೊಮ್ಮುವಿನ ಸ್ಥಿತಿಗೆ ಮರುಗಿದ. ಅವರಿಗೆಲ್ಲಾ ಸ್ಥಳಮಾಡಿಕೊಟ್ಟ. ಅವನ ಆಶ್ರಯದಲ್ಲಿ ಬೊಮ್ಮು ನಿಶ್ಚಿಂತೆಯಿಂದಿದ್ದ.

ಬೊಮ್ಮು ಉಪಾಯದಿಂದ ಮರೆಯಾದದ್ದನ್ನು ತಿಳಿದು ಬ್ಯಾನರ‍್ಮನ್ ಕಿಡಿಕಿಡಿಯಾದ. ಅವನು ಎಲ್ಲಿದ್ದರೂ ಸರಿ ಹಿಡಿದು ತರಲೇಬೇಕೆಂದು ತೀರ್ಮಾನಿಸಿದ. ಬೊಮ್ಮುವನ್ನು ಹಿಡಿದುಕೊಟ್ಟವರಿಗೆ ಭಾರಿ ಬಹುಮಾನ ಕೊಡುವುದಾಗಿ ಎಲ್ಲ ಪಾಳೇಗಾರರಿಗೂ ಪತ್ರ ಬರೆದ.

ವಿಪತ್ತಿನಿಂದ ಪಾರಾದ

ಕೆಲವರು ಪಾಳೇಗಾರರು ಬೊಮ್ಮುವನ್ನು ತೋರಿಸಿ ಕೊಡಲು ಹೋಗಿ ವಿಫಲರಾದರು. ಎಟ್ಟಯಾಪುರದ ಎಟ್ಟಪ್ಪನಿಗೆ ಬೊಮ್ಮುವಿಗೂ ನಾಯಕನಿಗೂ ಇರುವ ಸ್ನೇಹದ ವಿಷಯ ತಿಳಿದಿತ್ತು.  ದೇಶದ್ರೋಹಿ ಎಟ್ಟಪ್ಪ ಕೋಲಾರ್ ಪಟ್ಟಿಗೆ ಆಂಗ್ಲ ಸಿಪಾಯಿಗಳೊಡನೆ ಹೊರಟ. ಎಟ್ಟಪ್ಪ ಬಾಳಲಾರದ ಭಂಡ. ಏನೂ ಮಾಡಲು ಹೇಸುವುದಿಲ್ಲ. ಇದು ತಿಳಿದಿತ್ತು ನಾಯಕನಿಗೆ. ಬೊಮ್ಮುವಿಗಂತೂ  ಎಟ್ಟಪ್ಪ ಬರುತ್ತಿರುವುದುದ ಕೇಳಿ ರೋಷ ಉಕ್ಕಿ ಬಂತು. “ವೀರಪಾಂಡ್ಯನು ಸಾಮಾನ್ಯ ಎಟ್ಟಪ್ಪನನ್ನು ಎದುರಿಸಲಾರದಾದನೆ?” ಎಂದು ನೊಂದ ಬೊಮ್ಮು.

ನಾಯಕನು ಬೊಮ್ಮುವನ್ನು ಹೇಗಾದರು ಪಾರು ಮಾಡಬೇಕೆಂದು ಯೋಚಿಸುತ್ತಿದ್ದ. ಅವನಿಗೊಂದು ಉಪಾಯ ಹೊಳೆಯಿತು. ಹಿಂದಿನ ದಿನವೇ ಅವನ ಮನೆಯಲ್ಲಿ ಚಿನ್ನಪೇಂದ್ರ ಎಂಬ ಶ್ರೀಮಂತ ತಂಗಿದ್ದ. ಅವನು ಮಹಾ  ರಸಿಕ. ಕಲಾಪೋಷಕ. ಅವನ ಜೊತೆ ಒಬ್ಬ ಹಾವಾಡಿಗ ಇದ್ದ. ಅವನು ಕಾವಲಿನವರಿಗೆ ಹೆದರಿ ದನದ ಕೊಟ್ಟಿಗೆಯಲ್ಲಿ ಮಲಗಿದ್ದ. ನಾಯಕನ ಕರೆಗೆ ಓಗೊಟ್ಟು ಹಾವಾಡಿಗ ಬಂದು ಕೈ ಜೋಡಿಸಿ ನಿಂತ. “ಏಯ್ ಹಾವಾಡಿಗ! ನಿನ್ನಲ್ಲಿ ಎಷ್ಟು ಹಾವುಗಳಿವೆ?” ಕೇಳಿದ ನಾಯಕ. “ಏಳೆಂಟು” ಎಂದ.  ಹಾವಾಡಿಗ. “ಹಾಗಾದರೆ ಅವನ್ನು ತಾ, ನಾನು ಹೇಳಿದಂತೆ ಮಾಡುವಿಯಂತೆ” ಎಂದ ನಾಯಕ. ಹಾವಾಡಿಗ ತಂದ ಹಾವುಗಳನ್ನು ನಾಯಕ ಹರಿಯಬಿಟ್ಟ. ಹಾವುಗಳು ಒಂದೊಂದಾಗಿ ಹೊರಬಂದವು. ಹೆದರಿದ ಕಾವಲುಗಾರರು ಚದುರಿದರು. ಮೊದಲೇ ಈ ಏರ್ಪಾಟು ತಿಳಿದಿದ್ದ ಬೊಮ್ಮು ಸಂಗಡಿಗರೊಂದಿಗೆ ಹೊರಬಂದ.  ಅಡ್ಡಬಂದ ನಾಲ್ಕಾರು ಮಂದಿ ಕಾವಲಿನವರು ಅವರ ಕತ್ತಿಗಲಿಗೆ ಬಲಿಯಾದರು. ಕ್ಷಣದಲ್ಲಿ ಬೊಮ್ಮು ಮರೆಯಾದ. ಆದರೆ ಮಂತ್ರಿ ತಾನಾಪತಿ ಸಿಕ್ಕಿಬಿದ್ದ! ಮೇಜರ್ ಬ್ಯಾನರ್ ಮನ್‌ನ ವಿಚಾರಣೆಯಲ್ಲಿ  ತಾನಾಪತಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು.

ಪಾಂಚಾಲಂಕುರುಚ್ಚಿ ಕಂಪೆನಿಯವರ ಕೈವಶವಾಯಿತು. ಆದರೆ ಆಂಗ್ಲರಿಗೆ ಬೊಮ್ಮು ಮಾತ್ರ ಸಮಸ್ಯೆಯಾಗಿಯೇ ಉಳಿದಿದ್ದ. ಬ್ಯಾನರ್ ಮನ್  ಬೊಮ್ಮುವಿನ ಆಸ್ತಿ-ಪಾಸ್ತಿಗಳನ್ನು ಸೂರೆ ಮಾಡಿದ. ಅವನ ಹೆಂಡಿರು ಮಕ್ಕಳನ್ನು ಸೆರೆಯಲ್ಲಿರಿಸಿದ. ಬೊಮ್ಮು ಕೈವಶವಾದರೆ ಸಾಕೆಂದುಕೊಂಡಿದ್ದ ಬ್ಯಾನರ್ ಮನ್ ಅವನನ್ನು ಹಿಡಿಯುವುದಕ್ಕೆ ತನ್ನ ಬುದ್ಧಿಯನ್ನೆಲ್ಲಾ ಖರ್ಚು ಮಾಡಿದ್ದ. ಕಟ್ಟುಬೊಮ್ಮು  ರಾಜದ್ರೋಹಿ ಎಂದು ಘೋಷಿಸಿದ.

ತೊಂಡೈಮಾನನ ಆಹ್ವಾನ

ಬೊಮ್ಮು ಸಂಗಡಿಗರೊಡನೆ ಪುದುಕೋಟ್ಟೈ ಸೀಮೆಗೆ ಬಂದಿದ್ದ ಆ ಸೀಮೆಯ ತಿರುಕ್ಕಳಂಬೂರಿಗೆ ಪ್ರಾನ್ ಮಲೆಗೂ ನಡುವೆ ಒಂದು ಕಾಡು. ಪುದುಕೋಟ್ಟೈಯ ತೊಂಡೈಮಾನ್  ತನ್ನನ್ನು ರಕ್ಷಿಸುವನೆಂಬ ನಂಬಿಕೆಯಿಂದ ಬೊಮ್ಮು ಮತ್ತೇ ಪಾಳೆಗಾರರನ್ನು ಸೇರಿಸಿ ಅವರ ನೆರವಿನಿಂದ ಆಂಗ್ಲರನ್ನು ಹೊಡೆದೋಡಿಸಬೇಕೆಂದು ಹವಣಿಸುತ್ತಿದ್ದ.

ಪುದುಕೋಟ್ಟೈ ಪ್ರಭು ವಿಜಯರಘುನಾಥನು, ತನ್ನ ಸೀಮೆಗೆ ತೊಂಡೈಮಾನನ್ನು ಪಾಳೇಗಾರನನ್ನಾಗಿ ಮಾಡಿದ್ದ. ಬೊಮ್ಮು ಕಾಡಿನಲ್ಲಿ ತಲೆ ಮರೆಸಿಕೊಂಡಿದ್ದಾನೆಂದು ತಿಳಿದ ತೊಮಡೈಮಾನ್ ತನ್ನ ನೆಚ್ಚಿನ ಗೆಳೆಯ ಮುತ್ತುವೈರವನನ್ನು ಬೊಮ್ಮುವನ್ನು ಕರೆತರಲು ಕಳುಹಿಸಿದ. ಮುತ್ತುವೈರವ ಮಾತಿನಲ್ಲಿ ಚತುರ. ಭೇದೋಪಾಯದಲ್ಲಿ ಕುಶಲ. ಬೊಮ್ಮುವನ್ನು ಕಾಣಲು ಕಾಡಿಗೆ ಹೊರಟ.

ಬೊಮ್ಮುವಿನ ಬಳಿ ಊಮೈದೊರೆ, ದೊರೆಸಿಂಹ, ವೆಳ್ಳಿದೇವ ಇತರರು ಇದ್ದರು. ಮುತ್ತುವೈರವ ಬೊಮ್ಮು ಬಳಿ ಬಂದು, “ಪ್ರಭು, ತಾವು ಹೀಗೆ ಕಾಡಿನಲ್ಲಿ ತಲೆ ಮರೆಸಿಕೊಂಡಿರುವುದೇ? ನಮ್ಮ ಪ್ರಭುಗಳು ಇದನ್ನು ಸಹಿಸರು. ತಾವು ಒಪ್ಪುವುದಾದರೆ ನೀವೆಲ್ಲಾ ಅಲ್ಲಿಗೆ ಬಮದಿರಬೇಕೆಂದು ಪ್ರಭುಗಳ ಇಚ್ಛೆ”’ ಎಂದು ನಯವಾಗಿ ಹೇಳಿದ. ಬೊಮ್ಮು ಹಿಂದುಮುಂದು ನೋಡದೆ “ಆಗಲಿ” ಎಂದ. ಊಮೈದೊರೆಗೆ ತೊಂಡೈಮಾನನ ಮೇಲೆ ಅನುಮಾನ. ಈ ಮೊದಲೇ ಅವನಿಗೂ ಆಂಗ್ಲರಿಗೂ ವ್ಯವಹಾರ ನಡೆದಿದೆ ಎಂಬುದು ಅವನಿಗೆ ತಿಳಿದಿತ್ತು. ಬೊಮ್ಮುವಿಗೆ ಹೋಗಬೇಡವೆಂದು ತಡೆದ. ಬೊಮ್ಮು ಪರಿಶುದ್ಧ ಅಂತಃಕರಣದವನು. ಸ್ವಲ್ಪವೂ  ಸಮದೇಹ ಪಡಲಿಲ್ಲ. ಸಂಗಡಿಗರೊಡನೆ ಪುದುಕೋಟ್ಟೈ ಸೇರಿದ.

ಪುದುಕೋಟ್ಟೈಯಲ್ಲಿ ಬೊಮ್ಮುವಿಗೆ ಭಾರೀ ಸ್ವಾಗತವೇ ದೊರಕಿತು. ಸ್ವತಃ ತೊಂಡೈಮಾನನೇ ನಿಂತು ಏರ್ಪಾಟುಗಳನ್ನು ಮಾಡಿದ್ದ. ಇದೆಲ್ಲ ದ್ರೋಹದ ಸ್ವಾಗತವೆಂದು ಬೊಮ್ಮುವಿಗೆ ಹೇಗೆ ತಿಳಿಯಬೇಕು.!

ದ್ರೋಹದ ಪಂಜರ

ಬೊಮ್ಮು ಹಾಗೂ ಅವನ ಸಂಗಡಿಗರಿಗೆ ದಿನಕ್ಕೊಂದು ಬಗೆಯ ಔತಣ, ರಾಜಾತಿಥ್ಯ, “ತೊಂಡೈಮಾನ್ ನನಗೆ ಸೈನ್ಯದ ಸಹಾಯ ಮಾಡುವುದರಲ್ಲಿ  ಸಂಶಯವಿಲ್ಲ. ಇನ್ನು ಆಂಗ್ಲ ಕುನ್ನಿಗಳು ಗಂಟು ಮೂಟೆ ಕಟ್ಟುವುದೇ” ಎಂದು ಬೊಮ್ಮು ಸ್ನೇಹಿತರಿಗೆ ಹೇಳಿದ.

ಬೊಮ್ಮು ಬಂದು ಏಳು ದಿನಗಳಾಗಿದ್ದವು. ೧೭೯೯ನೆಯ ಇಸವಿ. ಅಕ್ಟೋಬರ್ ಒಂದನೆಯ ದಿನ. ತೊಂಡೈಮಾನನು ಬೊಮ್ಮು ಮತ್ತು ಅವನ ಸಂಗಡಿಗರಿಗೆ ವೈಭವೋಪೇತ ಆತಿಥ್ಯ ನೀಡಿದ. ವಿವಿಧ ಭಕ್ಷ್ಯ ಭೋಜ್ಯಗಳನ್ನು ತಯಾರಿಸಿ ಔತಣವಿತ್ತ. ಎಲ್ಲರೂ ಊಟ ಮಾಡಿದರು. ವಿಶ್ರಾಂತಿಗಾಗಿ ಮಹಡಿಯ ಮೇಲಿನ ಕೋಣೆಗೆ ಎಲ್ಲರೂ ಹೋದರು. ಆ ದಿನ ಎಣ್ಣೆಸ್ನಾನ ಮಾಡಿದ್ದರಿಂದ ದಿಂಬಿಗೆ ತಲೆಕೊಟ್ಟು ಮಲಗಿದರು. ಭರ್ಜರಿ ಊಟ ಬೇರೆ. ಸುಖ ನಿದ್ರೆ ಬಂತು.

೧೭೯೯ರ ಸಪ್ಟಂಬರ್ ೨೪ರಂದು ತೊಂಡೈಮಾನ್ ಬ್ಯಾನರ್ ಮನ್‌ಗೆ ಬೊಮ್ಮು ಪತ್ತೆಯಾಗಿದ್ದಾನೆಮದೂ ಅಗತ್ಯವಾದ ಸೈನ್ಯ ತರಬೇಕೆಂದೂ ಕೇಳಿ ಪತ್ರ ಬರೆದಿದ್ದ. ಬೊಮ್ಮುವಿಗೆ ಅದಾವುದೂ ತಿಳಿಯದು. ಸಂಜೆಯವರೆಗೂ ನಿದ್ರೆ ಮಾಡಿದ. ಎಚ್ಚರವಾಗಿ ಕಣ್ಣುಬಿಟ್ಟು ನೋಡಿದರೆ ಅವನಿಗೆ ಕಂಡದ್ದೇನು? ಮಂಚದ ಸುತ್ತ ಕಂಪೆನಿಯ ಸೈನಿಕರು ಒಬ್ಬರಲ್ಲ, ಇಬ್ಬರಲ್ಲ, ಅನೇಕರು. ಎಲ್ಲರ ಕೈಯಲ್ಲೂ ಈಟಿಗಳೂ ಇದೇನು? ಕನಸಲ್ಲವಷ್ಟೇ ಎನಿಸಿತು ಬೊಮ್ಮುವಿಗೆ. ಮುತ್ತುವೈರವ ನಂಬಿಸಿ ದ್ರೋಹ ಮಾಡಿದ್ದ.

ವೀರಪಾಂಡ್ಯನಿಗೆ ಹಿಂದೆಂದೂ ಇಲ್ಲದ ರೋಷ ಉಕ್ಕಿ ಬಂತು. ಮುತ್ತುವೈರವನನ್ನು ಹಾಗೆಯೇ ಅಪ್ಪಳಿಸಿ ಬಿಡಲೇ ಎನಿಸಿತವನಿಗೆ. ಆದರೆ ಏನೂ ಮಾಡುವಂತಿರಲಿಲ್ಲ.  ಕೋಪವನ್ನು ತಡೆದುಕೊಂಡು ಬೊಮ್ಮು ಹೆಚ್ಚು ಮಾತನಾಡದೆ ತಾನೇ ಎದ್ದು ಬೇಡಿ ಹಾಕಿಸಿಕೊಳ್ಳಲು ಕೈ ಮುಂದೊಡ್ಡಿದ. ಆಂಗ್ಲ ಸೈನಿಕರು ಬೊಮ್ಮುವನ್ನು ಬಂಧಿಸಿದರು. ಅವನ ಸಂಗಡಿಗರಿಗೂ ಅದೇ ಗತಿ. ಮುತ್ತುವೈರವ, ತೊಂಡೈಮಾನರಿಗೆ, “ಮುಂದಿನ ಜನ್ಮದಲ್ಲಾದರೂ ಗಂಡಸರಾಗಿ ಹುಟ್ಟಿ ಮಿತ್ರ ದ್ರೋಹ ಮಾಡಹೋಗಬೇಡಿ!” ಎಂದು ಹೇಳುತ್ತಾ ಬೊಮ್ಮು ಹೊರಟ.

ಪಂಜರದಲ್ಲಿಯೂ ಸಿಂಹವೇ

ಬೊಮ್ಮುವಿಗೆ ಗಲ್ಲುಶಿಕ್ಷೆ ವಿಧಿಸುವುದೇ ಸರಿ ಎಂದು ನಿಶ್ಚಯಿಸಿಕೊಂಡಿದ್ದ ಬ್ಯಾನರ್‌ಮನ್‌. ಈ ವಿಷಯವನ್ನು ಮದರಾಸಿನ ಗವರ್ನರ್‌ಗೆ ತಿಳಿಸಿ ಒಪ್ಪಿಗೆಯೂ ಪಡೆದಿದ್ದ. ಆದರೆ ವಿಚಾರಣೆಯ ಆಟವನ್ನಾದರೂ ನಡೆಸದೆ ಏನೂ ಮಾಡುವ ಹಾಗಿಲ್ಲ. ಎಲ್ಲ ಪಾಳೇಯಗಾರರನ್ನೂ ಕರೆಸಿದ. ವಿಚಾರಣೆಗೆ ತಾನೇ ನಿಂತ.

ಬ್ಯಾನರ್‌ಮನ್‌ನ ಮುಂದೆ ಬೊಮ್ಮುವನ್ನು ಕರೆತಂದು ಬಿಳಿಯ ಸೈನಿಕರು ನಿಲ್ಲಿಸಿದರು. ಎಂತಹ ಸನ್ನಿವೇಶ! ವೀರಾಧಿವೀರ ಕಟ್ಟ ಬೊಮ್ಮು ಇಂದು ಬಿಳಿಯರ ಮುಂದೆ ಅಪರಾಧಿಗಳ ಕಟಕಟೆಯಲ್ಲಿ! ಸುತ್ತಲೂ ಮೂಖರಾಗಿ ಕೈಕಟ್ಟಿ ಕುಳಿತ ಹೇಡಿ ಪಾಳೇಗಾರರು!

“ಬೊಮ್ಮು, ಈಗ ನೀನು ನಮ್ಮ ಕೈಯಲ್ಲಿದ್ದೀಯ. ಈಗಲಾದರೂ ನೀನು ಮಾಡಿದುದು ತಪ್ಪು ಎಂದು ಕ್ಷಮೆ ಬೇಡಿಕೊ. ನಿನ್ನ ಪ್ರಾಣವನ್ನು ಉಳಿಸುತ್ತೇನೆ” ಎಂದ ಬ್ಯಾನರ್‌ಮನ್.

ಬೊಮ್ಮುವಿಗೆ ಕೋಪ ಉಕ್ಕಿ ಬಂತು. ಜ್ವಾಲಾಮುಖಿಯ ಅಗ್ನಿಯ ತುಣುಕುಗಳನ್ನು ಉಗುಳುವಂತೆ ಘರ್ಜಿಸಿದ. “ಛೀ, ಕುನ್ನಿ ! ನಿನ್ನಲ್ಲಿ ನಾನು ಕ್ಷಮೆ ಬೇಡಬೇಕೆ? ಹೇಡಿ! ವೀರರನ್ನು ಕಾಸಿಗೆ ಮಾರಿದೆ. ಕುತಂತ್ರದಿಂದ ನಮ್ಮ ಒಗ್ಗಟ್ಟನ್ನು ಮುರಿದೆ. ಜೋಕೆ! ಇನ್ನೊಮ್ಮೆ ಹಾಗೆ ಕೇಳಿಯೇ!”

ಬ್ಯಾನರ್‌ಮನ್‌ಗೆ  ಕೆನ್ನೆಗೆ ಅಪ್ಪಳಿಸಿದಂತಾಯಿತು. “ನಿನಗಿನ್ನೂ ಅಹಂ ಇಳಿದಿಲ್ಲ”ಎಂದ.

ಬೊಮ್ಮು ನಕ್ಕ. “ನನ್ನ ಅಹಂ ಇಳಿದಿಲ್ಲವಲ್ಲವೆ. ಸ್ವಜನ ದ್ರೋಹಗಳಾದ ಎಟ್ಟಪ್ಪನೂ ತೊಂಡೈಮಾನನೂ ಹುಟ್ಟದಿದ್ದರೆ ನನ್ನ ಅಹಂ ಇಂಗುತ್ತಿತ್ತು” ಎಂದ ಬೊಮ್ಮು.

ಅಲ್ಲೇ ಇದ್ದ ಎಟ್ಟಪ್ಪ, ಸ್ನೇಹಿತರನ್ನು ನಿಂದಿಸಬೇಡ” ಎಂದು ಗೊಣಗಿದ.

ಅವನ ಧ್ವನಿಯನ್ನು ಕೇಳಿದೊಡನೆ ಬೊಮ್ಮುವಿಗೆ ಕೋಪ ತಡೆಯಲಾಗಲಿಲ್ಲ. “ಎಟ್ಟಪ್ಪ! ಸುಮ್ಮನಿರು. ನೀನು ಒಬ್ಬ ಮಿತ್ರನೇ? ಅವಿವೇಕಿ! ವೈರಿಗೆ ನಿನ್ನನ್ನು ಮಾರಿಕೊಂಡೆ, ಹೇಡಿಯಾದೆ, ಸಾಲದೆಂದು ನನ್ನನ್ನು ತೋರಿಸಿಕೊಟ್ಟೆ. ನಾವಿಬ್ಬರೂ ಒಂದೇ ಮಣ್ಣಿನಲ್ಲಿ ಹುಟ್ಟಿ ಬೆಳೆದವರು. ಈ ಬಿಳಿಯರು ಇಂದು ಇದ್ದು ನಾಳೆ ತೊಲಗುವವರು. ಇವತ್ತು ನನ್ನನ್ನು ನುಂಗುವವರು ನಾಳೆ ನಿನ್ನನ್ನು ನುಂಗುತ್ತಾರೆ.  ಇವರನ್ನು ನಂಬಬೇಡ” ಎಂದು ಗುಡುಗಿದ.

ಬ್ಯಾನರ್‌ಮನ್‌ನನ್ನು ಇದು ಕೆಣಕಿತು. ಸಾಕು ನಿಲ್ಲಿಸು ನಿನ್ನ ತಲೆಹರಟೆ! ಎಲ್ಲ ಪಾಳೆಯಗಾರರೂ ನಮಗೆ ತಲೆಬಾಗಿದರು. ನೀನು ಮಾತ್ರ ಇನ್ನೂ ಸೆನಸುತ್ತಿರುವೆ. ಇದು ಬುದ್ಧಿವಂತಿಕೆಯೇ?” ಎಂದ.

“ಅಭಿಮಾನ, ಶೌರ್ಯ, ದೇಶಭಕ್ತಿ ಇವುಗಳ ನಡುವೆ ಹುಟ್ಟಿ ಬೆಳೆದ ಬೊಮ್ಮು ಎಂದಿಗೂ ತಲೆಬಾಗುವುದಿಲ್ಲ, ಬ್ಯಾನರ್‌ಮನ್! ತನ್ನ ಸೌಖ್ಯಕ್ಕಾಗಿ ತನ್ನನ್ನೇ ಮಾರಿಕೊಂಡನಲ್ಲ ಆ ಆರ್ಕಾಟ್ ನವಾಬ, ಎಲ್ಲರೂ ಅವನ ಹಾಗೆ ಎಂದುಕೊಂಡೆಯಾ?” ಎಂದ ಬೊಮ್ಮು. “ನಾನು ಭಾರತೀಯ. ನನ್ನ ದೇಶ ಸ್ವತಂತ್ರವಾಗಬೇಕು. ನನ್ನ ರಕ್ತದ ಕೊನೆಯ ಕಣವಿರುವವರೆಗೂ ನಾನು ಕ್ಷಮೆ ಯಾಚಿಸುವುದಿಲ್ಲ”

ಬೊಮ್ಮುವಿನ ಮಾತು ಕೇಳಿದ ಬ್ಯಾನರ್‌ಮನ್ ವಾದವನ್ನು ಮುಂದುವರೆಸಲಿಲ್ಲ. ಬೊಮ್ಮುವಿಗೆ ಗಲ್ಲುಶಿಕ್ಷೆ ವಿಧಿಸಿ ಎಂದು ತೀರ್ಪಿತ್ತ.  ಉಳಿದವರಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿದ. “ಮುಂದೆ ಯಾರಾದರೂ ವೀರಪಾಂಡ್ಯನಂತೆ ನಮ್ಮ ವಿರುದ್ಧ ಹೋರಾಡಲು ಪ್ರಯತ್ನಿಸಿದರೆ ಅವರಿಗೂ ಇದೇ ಶಿಕ್ಷೆ” ಎಂದು ಎಚ್ಚರಿಸಿದ.

ಮತ್ತೇ ಇದೇ ಮಣ್ಣಿನಲ್ಲಿ ಹುಟ್ಟುತ್ತೇನೆ

೧೭೯೯ನೆಯ ಇಸವಿಯ ಅಕ್ಟೋಬರ್ ೧೬. ಕಯತ್ತಾರುವಿನಲ್ಲಿ ಒಂದು ಹುಣಸೆಮರ. ಮರದ ಕೊಂಬೆಯೊಂದಕ್ಕೆ ಹಗ್ಗ ನೇತು ಬಿದ್ದಿದೆ. ನೇಣು ಕುಣಿಕೆ ಬಿಗಿದಿದೆ. ಹಗ್ಗದ ಕೆಳಗೆ ಒಂದು ಕಾಲುಮಣೆ. ಆ ಮರಕ್ಕೆ ಬೊಮ್ಮುವನ್ನು ನೇಣು ಹಾಕಲು ತೀರ್ಮಾನವಾಗಿದೆ.

ಆ ದಿನ ಎಲ್ಲ ಪಾಳೇಯಗಾರರು ಅಲ್ಲಿಗೆ ಬರಬೇಕೆಂದು ಆಜ್ಞೆ ಮಾಡಿದ. ಬ್ಯಾನರ್‌ಮನ್. ಕಟ್ಟಬೊಮ್ಮುವಿನ ಸ್ಥಿತಿಯನ್ನು ನೋಡಿ ಅವರೆಲ್ಲ ಬಿಳಿಯರ ಶಕ್ತಿಗೆ ಹೆದರಲಿ ಎಂದು ಅವನ ಎಣಿಕೆ. ಪಾಂಚಾಲಂಕುರುಚಿಯ ಭೂಪತಿ ವೀರಪಾಂಡ್ಯ ಕಟ್ಟಬೊಮ್ಮನ್ ನೇಣುಗಂಬದೆಡೆಗೆ ನಡೆದ. ತಲೆಯ ಮೇಲೆ ಕಿರೀಟವಿಲ್ಲ. ಜಡೆಗಟ್ಟಿದ ಕೂದಲು, ಕೆನ್ನೆಯ ತುಂಬ ಕಪ್ಪು ಗಡ್ಡ, ಆದರು ಮುಖದಲ್ಲಿ ವೀರಕಳೆ. ಕ್ಷಾತ್ರ ತೇಜಸ್ಸು. ಹುಣಸೆಮರದ ಬಳಿಗೆ ಬೊಮ್ಮು ನಡೆದೇ ಬಂದ. ಯಾರಿಗೂ ಜಗ್ಗದ ವೀರ ಪಾಂಡ್ಯನಿಗೆ ಇಮತಹ ಸಾವೇ ಎಂದು ಹಲವರು ಮರುಗಿದರು. ಆಂಗ್ಲ ಸಿಪಾಯಿಗಳು ಬೊಮ್ಮುವನ್ನು ನಿಲ್ಲಿಸಿ ಅವನ ಕಟ್ಟುಗಳನ್ನು ಬಿಡಿಸಿದರು. ಕೂಡಲೇ ಬೊಮ್ಮು ಬಗ್ಗಿ ನೆಲದ ಮೇಲಿನ ಮಣ್ಣನ್ನು ಎತ್ತಿಕೋಂಡು ಹೇಳಿದ, “ಅಮ್ಮಾ! ನಿನ್ನನ್ನು ಸ್ವತಂತ್ರಳನ್ನಾಗಿ ಕಾಣುವ ಅಭಿಲಾಷೆ ನನಗಿತ್ತು. ಆದರೆ ಕೆಲವು ಸ್ವಜನದ್ರೋಹಿಗಳಿಂದ ಅದು ಕೈಗೂಡಲಿಲ್ಲ. ಆದರೇನು? ನಾನು ಮತ್ತೊಮ್ಮೆ ಇದೇ ಮಣ್ಣಿನಲ್ಲಿ ಹುಟ್ಟುತ್ತೇನೆ. ನಿನ್ನನ್ನು ಈ ಬಂಧನದಿಂದ ಬಿಡಿಸುತ್ತೇನೆ”.

ಬೊಮ್ಮು ಕಾಲುಮಣೆ ಮೇಲೆ ನಿಂತ. ಸ್ವಲ್ಪವೂ ಭಯಪಡಲಿಲ್ಲ. ಆ ವೀರನು ಗಲ್ಲಿಗೇರುವ ದೃಶ್ಯ ನೋಡಲಾರದೆ ಜನರು ಬೊಬ್ಬಿಡಲಾರಂಭಿಸಿದರು. ಎಷ್ಟೋ ಮಂದಿ ಹೆಂಗಸರು ತಮ್ಮ ಮಗುವನ್ನು ಕಳೆದುಕೊಳ್ಳುವ ಹಾಗೆಯೇ  ಅಳಲಾರಂಭಿಸಿದರು.

ಬೊಮ್ಮು ತನ್ ಕೊನೆಯ ಮಾತುಗಳನ್ನು ಹೇಳಿದ ; “ಪಾಳೇಯಗಾರರೇ! ನಿಮ್ಮಲ್ಲಿ ಯಾರ ಮೇಲೂ ನನಗೆ ಅಸಮಾಧಾನವಿಲ್ಲ. ಇನ್ನು ಕೆಲವೇ ಕ್ಷಣಗಳಲ್ಲಿ ನನ್ನ ಪ್ರಾಣಪಕ್ಷಿ ಹಾರಿ ಹೋಗುತ್ತದೆ. ಆದರೆ ನಾನು ಕಂಡ ಕನಸು ನನಸಾಗಲಿಲ್ಲ. ಇನ್ನು ಎಷ್ಟೆಷ್ಟು ಜನ್ಮಗಳೆತ್ತಿದರೂ ಇದೇ ಪಾಂಚಾಲಂಕುರುಚ್ಚಿ ಮಣ್ಣಿನಲ್ಲಿ ಹುಟ್ಟುತ್ತೇನೆ. ಸ್ವತಂತ್ರವಾದ ಸ್ವದೇಶವನ್ನು ಕಾಣುತ್ತೇನೆ. ಇವೇ ನನ್ನ ಕಡೆಯ ಮಾತುಗಳು…..”

ನೇಣು ಹಾಕುವ ಸಮಯ ಸಮೀಪಿಸಿತು. ಮೇಜರ್ ಬ್ಯಾನರ್‌ಮನ್ ಆದೇಶ ನೀಡಿದ. ಬೊಮ್ಮುವಿನ ಕೊರಳಿಗೆ ಕುಣಿಕೆ ಹಾಕಲು ಆಂಗ್ಲ ಸಿಪಾಯಿಯೊಬ್ಬ ಮುಂದೆ ಬಂದ.  ಬೊಮ್ಮು ಅವನನ್ನು ಹಿಂದಕ್ಕೆ ಕಳುಹಿಸಿದ. ತಾನೇ ನೇಣು ಹಗ್ಗವನ್ನು ಹಿಡಿದುಕೊಂಡ. ಅದಕ್ಕೆ ಮುತ್ತಿಟ್ಟ. ಕುತ್ತಿಗೆಯಲ್ಲಿ ಧರಿಸಿಕೊಂಡ. ಸುತ್ತಲೂ ನಿಂತಿದ್ದ ಜನರ ಅಳು ಗಗನ ಮುಟ್ಟಿತು. ಬೊಮ್ಮು ಶಾಂತವಾಗಿ ಕಣ್ಣುಮುಚ್ಚಿಕೊಂಡು ಜಕ್ಕಮ್ಮನ ಪ್ರಾರ್ಥನೆ ಮಾಡಿದ. ಕಾಲುಮಣೆಯನ್ನು ದೂರಕ್ಕೊದ್ದು, ನೇಣುಗಂಬಕ್ಕೆ ಇಳಿಬಿದ್ದು ತೂಗಾಡಲಾರಂಭಿಸಿದ. ಮರದ ಕೊಂಬೆ ಜಗ್ಗಿತು. ವಿಧಿ ತನ್ನ ಕಾರ್ಯವನ್ನು ಜರುಗಿಸಿತು. ಬೊಮ್ಮು ತಾಯ್ನಾಡಿಗಾಗಿ ಪ್ರಾಣಕೊಟ್ಟಿದ್ದ.

ಮತ್ತೆ ಪಾಂಚಾಲಂಕುರುಚ್ಚಿಗೆ

ಬೊಮ್ಮು ಸತ್ತ. ಆದರೂ ಬೊಮ್ಮುವಿನ ಅನುಯಾಯಿಗಳ ಮೇಲೆ ಬ್ಯಾನರ್‌ಮನ್‌ನ ಭಯ ಹೋಗಿರಲಿಲ್ಲ. ಎಲ್ಲರನ್ನೂ ಪಾಲೆಯಂಕೋಟ್ಟೈನ ಸೆರೆಮನೆಯಲ್ಲಿರಿಸಿದ್ದ. ಪಾಂಚಾಲಂಕುರುಚ್ಚಿ ಕೋಟೆಯನ್ನು ಅರ್ಧಂಬರ್ಧ ನಾಶ ಮಾಡಿದ್ದ.

ಊಮೈದೊರೆ ಅಣ್ಣನ ಸಾವಿನ ವಾರ್ತೆ ತಿಳಿದು ನೊಂದ. ಜೊತೆಗೆ ರೋಷಗೊಂಡ. ಮತ್ತೆ ಕೋಟೆ ಕಟ್ಟಿಸಬೇಕು. ಆಂಗ್ಲರನ್ನು ಓಡಿಸಬೇಕು. ಇದೇ ಅವನ ಆಸೆ. ಸೆರೆಮನೆಯ ಸರ್ಪ ಕಾವಲಿನಿಂದ ತಪ್ಪಿಸಿಕೊಂಡು ಹೋಗುವ ಬಗೆ ಯೋಚಿಸುತ್ತಿದ್ದ.

ಬೊಮ್ಮುವಿನ ಮಿತ್ರರು ಚಿನ್ನಪ್ಪ, ವೀರಣ್ಣ ಎಂಬುವರು ಹುಲ್ಲು ಮಾರುವವರ ವೇಷದಲ್ಲಿ ಪಾಳೆಯಂಕೊಟ್ಟೈ ಸೆರೆಮನೆ ತಲುಪಿದರು. ಆಗ ಅಲ್ಲಿ ಮೆಕಾಲೆ ಎನ್ನುವವನು ಕಂಪೆನಿಯ ಅಧಿಕಾರು. ಧ್ಯಪಾನದ ಅಮಲಿನಲ್ಲಿದ್ದ. ಚಿನ್ನಪ್ಪ ಆಂಗ್ಲರ ಮೇಲೆ ಕೈ ಮಾಡಿದ. ಹೋರಾಟ ನಡೆಯಿತು. ಸಮಯ ನೋಡಿ ವೀರಣ್ಣನು ಊಮೈದೊರೆ, ದೊರೆಸಿಂಹ ಇತರರನ್ನು ಬಿಡಿಸಿದ.

ಸೆರೆಮನೆಯಿಂದ ತಪ್ಪಿಸಿಕೊಂಡು ಎಲ್ಲರೂ ಒಟ್ಟಿ ಪಿಡಾರಂ ಎಂಬ ಗ್ರಾಮ ತಲುಪಿದರು. ಊಮೈದೊರೆ ಅಲ್ಲಿಯ ಜನರ ಸಹಾಯ ಕೋರಿ ಮತ್ತೇ ಪಾಂಚಾಲಂಕುರುಚ್ಚಿಯ ಕೋಟೆ ಕಟ್ಟಲು ನಿಶ್ಚಯಿಸಿದರು. ವೀರರಿಗೆ ಉತ್ಸಾಹ, ಬೊಮ್ಮುವಿನ ಆಸೆ ನೆರವೇರಿಸಲು ಕಾತರ. ಎಲ್ಲರೂ ಪಾಂಚಾಲಂಕುರುಚ್ಚಿಯತ್ತ ನಡೆದರು.

ಮೆಕಾಲೆಯ ಸೋಲು

ಊಮೈದೊರೆ ತಪ್ಪಿಸಿಕೊಂಡು ಹೋದ! ವಿಷಯ ತಿಳಿದ ಮೆಕಾಲೆ ಕೈ ಕೈ ಹಿಸುಕಿಕೊಂಡ. ಭಯಗೊಂಡ. ತನ್ನ ಉದಾಸೀನ ಆಪತ್ತನ್ನೇ ತಂದಿತು ಎನಿಸಿತವನಿಗೆ. ನಿಮಿಷವೂ ತಡ ಮಾಡದೆ ಸೈನ್ಯದೊಡನೆ ನೆಲ್ಲೂರಿಗೆ ಬಂದ. ಡೇರೆಗಳನ್ನು ಹಾಕಿದ. ಮದ್ದುಗುಂಡುಗಳನ್ನು ಶೇಖರಿಸಿದ.

ಊಮೈದೊರೆ, ಚಿನ್ನಪ್ಪ ಇವರಿಗೆ ಮೆಕಾಲೆಯ ಆಗಮನ ತಿಳಿಯಿತು. ತಮ್ಮ ಬಳಿ ಸಾಕಷ್ಟು ಸೈನ್ಯವಿಲ್ಲ. ಉಪಾಯದಿಂದ ಕೆಲಸ ಸಾಧಿಸಬೇಕು ಎಂದುಕೊಂಡರು. ಸ್ವಲ್ಪ ಜನರೊಡನೆ ಮೆಕಾಲೆ ಇದ್ದಲ್ಲಿಗೆ ಬಂದರು. ರಾತ್ರಿಯಾಗಿತ್ತು. ಮೆಕಾಲೆ ಕುಡಿದು ಮಲಗಿದ್ದ. ಆಂಗ್ಲ ಸಿಪಾಯಿಗಳು ಅಲ್ಲಲ್ಲಿ ಓಡಾಡುತ್ತಿದ್ದರು.  ಹೆಚ್ಚು ಜನಕ್ಕೆ ಎಚ್ಚರವಿರಲಿಲ್ಲ. ಊಮೈದೊರೆ ಡೇರೆಯೊಳಕ್ಕೆ ನುಗ್ಗಿ ಮೆಕಾಲೆ ಎದುರಿಗೆ ನಿಂತ. ಮೆಕಾಲೆಗೆ ಎಚ್ಚರವಾಯಿತು. ಮಹಾಕಾಯದ ಊಮೈದೊರೆಯನ್ನು ನೋಡಿ ದಿಗಿಲಾಯಿತು. ಅಷ್ಟು ಹೊತ್ತಿಗೆ ಚಿನ್ನಪ್ಪ, ವೀರಣ್ಣ ಇತರರು ಡೇರೆಯಲ್ಲಿರಿಸಿದ್ದ  ಮದ್ದುಗುಂಡುಗಳನ್ನು ಹೊರತಂದು ಹಳ್ಳವೊಂದರಲ್ಲಿ ಅಡಗಿಸಿಟ್ಟರು. ಮೆಕಾಲೆ ತನ್ನ ಗತಿ ಮುಗಿಯಿತೆಂದುಕೊಂಡು ಊಮೈದೊರೆಗೆ ಶರಣಾದ. ಉಳಿದ ಸೈನಿಕರು ಕತ್ತಿ ಏಟುಗಳಿಗೆ ಬಲಿಯಾದರು.

ಊಮೈದೊರೆ ಮೆಕಾಲೆಗೆ ಅಭಯ ನೀಡಿ, “ಇನ್ನು ಈ ನೆಲದಲ್ಲಿ ಕಾಲಿಡಬೇಡ, ತೊಲಗಾಚೆ” ಎಂದು ಓಡಿಸಿದ.

ಮೆಕಾಲೆ ಸೋತ ಸುದ್ದಿ ಆಂಗ್ಲರನ್ನು ಕೆರಳಿಸಿತು. ಮತ್ತೆ ಪಾಂಚಾಲಂಕುರುಚ್ಚಿ ಕೋಟೆ ನಿರ್ಮಾಣವಾಗುತ್ತಿದೆ ಎಂದು ತಿಳಿದು ಅವರ ಜಂಘಾಬಲವೇ ಉಡುಗಿತು. ತಿರುಚಿನಾಪಳ್ಳಿಯಲ್ಲಿದ್ದ ಕರ್ನಲ್ ಆಕ್‌ನ್ಯೂ ನಾಯಕತ್ವದಲ್ಲಿ ಪಾಂಚಾಲಂಕುರುಚ್ಚಿಯತ್ತ ಸೈನ್ಯ ಹೊರಟಿತು. ಎಷ್ಟಾದರೂ ಪರರ ಹೊನ್ನಿಗಾಸೆಪಟ್ಟವರಲ್ಲವೇ ಆಂಗ್ಲರು!

ಬೊಮ್ಮುವಿನ ಬಂಟರೂ ……..

ಸೈನ್ಯ ಬರುತ್ತಿದೆ ಎಮಬ ಸುದ್ದಿ ತಿಲಿದ ಊಮೈದೊರೆ ಮತ್ತಷ್ಟು ಮೂಖನಾದ! ಜಕ್ಕಮ್ಮನೇ ಗತಿ ಎಂದುಕೊಂಡ. “ಗೆದ್ದರೆ ಸ್ವಾತಂತ್ರ, ಸೋತರೆ ವೀರಸ್ವರ್ಗ! ಹೋರಾಟಕ್ಕೆ ಸಿದ್ಧರಾಗಿ!” ಎಮದು ತನ್ನ ಎಲ್ಲ ಮಿತ್ರರಿಗೂ ತಿಳಿಸಿದ. ಸೈನ್ಯ ಬಂದೇ ಬಂದಿತು. ಆಕ್‌ನ್ಯೂವಿನ ಪಡೆ ಕೋಟೆಯನ್ನು ಧ್ವಂಸಮಾಡಿತು. ಹೆಣಗಳ ರಾಶಿಯೇ ಬಿದ್ದಿತು. ಊಮೈದೊರೆ ತನಗಾದ ಅವಮಾನವನ್ನು ಸಹಿಸಲಾರದೆ ಹಸಿದ ಹುಲಿಯಂತೆ ರಣರಂಗದಲ್ಲಿ ಧುಮುಕಿದ. ಜೀವದ ಹಂಗು ತೊರೆದು ಕಾದಾಡಿದ. ಕೊನೆಗೂ ತಗುಲಿತೊಂದು ಗುಂಡು! ಊಮೈದೊರೆ ನೆಲಕ್ಕೊರಗಿದ. ಚಿನ್ನಪ್ಪ, ವೀರಣ್ಣನೇ ಮೊದಲಾಗಿ ಉಳಿದೆಲ್ಲರೂ ಮಡಿದರು. ಊಮೈದೊರೆ ಯಿಂದ ಹಿಡಿದು ಎಲ್ಲ ವೀರರೂ ಬೊಮ್ಮುವಿನ ಕೀರ್ತಿಯನ್ನೂ ಬೆಳಗಿಸಿದ್ದರು. ಆದರೆ, ಮೃಗಶಕ್ತಿ ದಬ್ಬಾಳಿಕೆಗೆ ತಾತ್ಕಾಲಿಕ ಜಯ ಲಭಿಸಿತು. ಆದರೂ ಕಡೆಗೆ ಬೊಮ್ಮು ನೆಟ್ಟ ಸ್ವಾತಂತ್ರ ಸಮರದ ಸಸಿ ಚಿಗುರಿತು.

ತ್ಯಾಗವೀರರು

ಬೊಮ್ಮು, ಊಮೈದೊರೆ ಈ ಇಬ್ಬರೂ ಸಹೋದದರ ಜಿವನವೆಲ್ಲಾ ತಾಯ್ನಾಡಿಗಾಗಿಯೇ. ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರಕ್ಕೆ ಅಂದು ಬೊಮ್ಮು ಹೋರಾಡಿದ. ನೇಣಿಗೆ ಕೊರಳೊಡ್ಡಿದ. ಈ ಇಬ್ಬರು ಸಹೋದರರು ತ್ಯಾಗವೀರರು.

ತಮಿಳುನಾಡಿನ ಹೆಣ್ಣು ಮಕ್ಕಳು ತಮಗೆ ಹುಟ್ಟುವ ಮಕ್ಕಳು ಬೊಮ್ಮುವಿನಂತೆ ಪರಾಕ್ರಮಿಗಳಾಗಬೇಕೆಂದು ಆಶಿಸುತ್ತಾರೆ. ಅವನನ್ನು ಕುರಿತು ವೀರಗೀತೆಗಳನ್ನು ಹಾಡುತ್ತಾರೆ. ಪಾಂಚಾಲಂಕುರುಚ್ಚಿ ಮಣ್ಣನ್ನು ಹಾಲಿನಲ್ಲಿ ಕಲಸಿ ಮಕ್ಕಳಿಗೆ ಕುಡಿಸುತ್ತಾರೆ. ಬೊಮ್ಮುವಿನಂತೆ ವೀರನಾಗಲೆಂದು! ಅಂಥ ವೀರನ ಚೇತನ ಭಾರತೀಯರಿಗೆಲ್ಲ ಸ್ಫೂರ್ತಿಯ ಸೆಲೆ.