ದುಂದುಮೆ ದುಮ್ಮಿ ಸೊಲ್ಲಿಗೆನ್ನಿರಿ

ದುಂದುಮೆ ಬಸವಂತನ ಹಬ್ಬ       |ಪಲ್ಲ|

ಹಿತದಿಂದ ಸರ್ವರಿಗ್ಹೇಳುವೆ ಬ್ರಹ್ಮನ
ಸತಿ ಗಣನಾಥನ ಬಲಗೊಂಡು | ಮಾ
ಮತಿಯ ಪಾಲಿಸೆಂದು ತ್ರಿಜಗದೀಶನ
ಸ್ತುತಿ ಮಾಡುವೆನು ದುಂದುಮಿ ಪದದಿ        ೧

ಕಥೆಯಲ್ಲಿ ಸರ್ವರು ಕಂಡಂಥ ಮಾತನು
ರತಿಯಿಟ್ಟು ಲಾಲಿಸಬೇಕೆಂದು | ಮಾ
ಕ್ಷಿತಿಯೊಳು ಕಿತ್ತೂರ ಮೇಲೆ ಹುಟ್ಟಿದಂಥ
ಮಥನದ ಪರಿಯನು ಪೇಳ್ವೆನು ಮುಂದೆ      ೨

ಮೊದಲು ಥ್ಯಾಕರೆಸಾಯ್ಬ ರಾಜ್ಯ ನಮ್ಮದೆಂದು
ಮುದದಿಂದ ಕಿತ್ತೂರಿಗೆ ಬರಲು | ಮಾ
ಹದುಳಪ್ಪಗೆ ಪಟ್ಟಗಟ್ಟಿ ಅವರು ತಮ್ಮ
ಸದನದಿ ಸುಖದಿಂದ ಇರುತಿರಲು   ೩

ಅದಕಂಡು ಸಾಯ್ಬ ಕೋಪವ ತಾಳುತೈದಾನು
ಇದಕ್ಯಾರಪ್ಪಣೆ ಕೊಟ್ಟರೆಂದು | ಮಾ
ಇದಿರೋಳಿರುವಂಥ ಬಲ್ಲಾಳು ಮುರಿದಾವು
ಸದರ ಬಿಟ್ಟಿಳಿಯೆಂದು ಸಾಯ್ಬ ನುಡಿದ       ೪

ಬಾಲೆ ಬಾ ಮುಂದಕ್ಕೆ ನಿನ್ನ ಗಂಡ ಎನ್ನ
ಪಾಲಿಗೆ ಬದುಕು ಬರೆದು ಕೊಟ್ಟನು | ಬಾಲೆ
ವಾಲಿ ನೋಡೆಂದೊಗೆದನು ಮುಂದೆ          ೫

ಆಲಸ್ಯವ್ಯಾತಕ್ಕೆ ಕೇಳೆನ್ನ ಮಾತನು
ವಾಲಿಸಿ ಹೇಳತಾರೆ ಸುಮ್ಮನೆ | ಮಾ
ಮೇಲೆ ಸುತ್ತಲ ದೇಶ ನಮ್ಮದು ಇದರೊಳು
ಕಾಲಿಟ್ಟು ಧಕ್ಕೆ ತಿನಬ್ಯಾಡ ನೀ       ೬

ಆ ಕ್ಷಣ ಅವನೆಂದ ಮಾತನು ಕೇಳುತ
ಕುಕ್ಷಿಯೊಳಗೆ ಬ್ಯಾಗಿ ಜನಿಸಿತು | ಮಾ
ದಾಕ್ಷಿಣ್ಯ ಇಂದಿಗೆ ತೋರಬಾರದೆಂದು
ಸೂಕ್ಷ್ಮದ ಸೊನ್ನೆಯ ಮಾಡಿದಳಾಗ           ೭

ನೂಕಿವನ ಎದೆ ಹಿಡಿದು ಹಿಂದಕ್ಕೆ ಇದರಿಂದ
ಕಕ್ಸ ಬಂದರೆ ನೋಡಬಹದೆಂದು | ಮಾ
ಅಕ್ಸಿ ಬಾಗಿಲವನ್ನು ಅನಮನವಿಲ್ಲದೆ
ಹಾಕ್ಸ್ಯಾಳು ಕದನಕ್ಕೆ ಮಖವಾದಿತಿನ್ನು        ೮

ಜಗಳದ ಪರಿಯನು ಪೇಳುವೆ ಮನಸಿಟ್ಟು
ಸುಗುಣರು ಚೆಂದಾಗಿ ಕೇಳಿರಿ | ಮಾ
ಮಗಿಮಳಿಯಂತೆ ಗುಂಡ್ಹಾರುತಿರೆ ಮದ್ದಿನ
ಹೊಗೆ ಮುಸುಕಿತು ಕಣ್ಣ ಮುಂದೆ    ೯

ಮಿಗಿಲಾದ ಥ್ಯಾಕರೆಸಾಯ್ಬ ತಾ ಮಡಿದಾನು
ಸಿಗಲಾಗಿ ಉಳಿದವರು ಕೈಸೆರೆಯ | ಮಾ
ನಗೆಯಲ್ಲ ನಾಲ್ಕು ದಿಕ್ಕಿನ ದಂಡು ಮುರಿದು
ಹೆಗಲ ಮ್ಯಾಲಿನ ಕೋವಿ ಒಗದೋಡಿತು      ೧೦

ಸತ್ತ ಥ್ಯಾಕರೆಸಾಯ್ಬ ಎಂಬಂಥ ಸುದ್ದಿಯು
ಹತ್ತಿತು ಧಾರವಾಡ ಪುರಕಿನ್ನು | ಮಾ
ವ್ಯರ್ಥವಾಯಿತೆಂದು ಎಲ್ಲಾರು ಮಾತಾಡಿ
ಉತ್ತರ ಬರೆದಾರು ವಿಲಾಯ್ತಿಗೆ      ೧೧

ಅತ್ತಲಾ ಸುದ್ದಿಯು ಹೋದಾಕ್ಷಣದಲ್ಲಿ
ಕಿತ್ತೂರನಾಳ್ವಂಥ ಜಾಣಿಯು | ಮಾ
ಮುತ್ತಿಗೆ ಬರುತದೆ ಬೇಗನೇಳಿರೆಂದು
ಸಾಹಿತ್ಯ ಪೂರೈಸು ಪುತ್ರಿಯೇನೆಂಬೆ          ೧೨

ಮುಚ್ಚಗಾವಿಯ ಚಣ್ಣ ಮುಂಗೈಯ ಸರಪಳಿ
ಬಿಚ್ಚುಗತ್ತಿಯ ಸಾರ ಕ್ಷತ್ರಿಯರು | ಮಾ
ಹಚ್ಚನ್ನ ಮುಂಡಾಸ ಮೇಲೆ ಸುಮಾನ ಗರಿ
ಹೆಚ್ಚೇನ ಬಂಟರ ಕರೆಸಿ ದಳಕೆ      ೧೩

ಮುಚ್ಚಿ ಹೇಳುವದಿಲ್ಲ ಕೇಳಿರಿ ಮುಂದಿನ್ನು
ಕಿಚ್ಚಿನಂಥ ದಂಡು ಬರತೈತಿ | ಮಾ
ಎಚ್ಚತ್ತುಕೊಳ್ಳಿರಿ ಎನ್ನ ಮಾತ್ರ ನೀವು
ಬಚ್ಚಿಟ್ಟು ಮಾನವ ಕಾಯಬೇಕು      ೧೪

ಕ್ಷೀಣರ ಕೈಯಲ್ಲಿ ಸಿಲ್ಕಿ ಕಟ್ಟಿಗೆ ಎನ್ನ
ಪ್ರಾಣವ ನೀಗುವದು ಹಸನಲ್ಲ | ಮಾ
ಜಾಣತನದಿಂದ ಮೊದಲಿಗೆ ಮದ್ದಿನ
ಕೋಣೆಯ ಹೊಗುವದು ಉತ್ತಮವು           ೧೫

ರಾಣಿಯಳಾಡಿದ ನುಡಿಕೇಳಿ ಬಂಟರ
ತ್ರಾಣವಿನ್ನೆಂತು ಹೇಳಲಿ ನಾ | ಮಾ
ಕ್ಷೀಣರೆಲ್ಲರ ತಲೆ ಬೀಳುವನಕ ನಿನ್ನ
ಕಾಣಗೊಡೆವು ಚಿಂತಿ ಬ್ಯಾಡೆಂದು ಸಾರೆ      ೧೬

ಕಡೆಗು ನಿಮ್ಮನ್ನವನುಂಡು ಇಂದಿಗೆ ನಾವು
ಬೆಡಬಲ್ಲೆವೇ ಸುಮ್ಮನಿರು ಎಂದು | ಮಾ
ತೊಡೆಯ ಚಪ್ಪರಿಸಿ ಮೀಸೆಯ ತಿದ್ದಿ ಮುಂಗೈಯ
ಕಡಿವುತ ಮಾತನಾಡಿದರಿ‌ನ್ನು        ೧೭

ಬಿಡು ಬೇಗ ಮನದಾನ ಚಿಂತೆಯ ಇಂದಿಗೆ
ಮಡದಿಮಕ್ಕಳ ಆಸೆ ನಮಗಿಲ್ಲ | ಮಾ
ಕಡುಸಿಟ್ಟಿನಿಂದ ಕಾಟಕರೆಲ್ಲ ಒಂದಾಗಿ
ನುಡಿದದ್ದು ಕೇಳಿ ಹಿಗ್ಗುತ ಮನದಿ    ೧೮

ಆಡಿದ ಮಾತನು ಕೇಳುತ ಮನದೊಳು
ಪ್ರೌಢೆ ಸಂತೋಷವ ತಾಳುತ | ಮಾ
ಗಾಡಿ ಕುದರಿ ಮಂದಿ ಇರುವಂಥ ಠಾವನು
ನೋಡಬೇಕೆಂದು ಅಪ್ಪಣೆಗೊಟ್ಟಳಾಗ         ೧೯

ಬೇಡಿದ್ದ ಕೊಡುತಿಹಳೆಂಬಂಥ ಸುದ್ದಿಯು
ನಾಡೊಳು ಬೀರುತ ನಡೆದೀತು | ಮಾ
ಜಾಡಿಸಿ ಅವಳೆಂದ ಮಾತನು ಕೇಳುತ
ಕೂಡಿತು ಹದಿನಾರು ಸಾಸಿರ ದಂಡು         ೨೦

ಕಾಳಿ ಕರ್ಣಿಯು ನಪೂರಿ ನಗಾರಿ ನಿ
ಸ್ಸಾಳದ ಅಬ್ಬರ ಧ್ವನಿಯೆಂದು | ಮಾ
ಆಳವೇರಿಯ ಮ್ಯಾಲೆ ಆರ್ಭಟ ಮಾಡುವದ
ಹೇಳಲಿನ್ನೇನು ಕಿತ್ತೂರಿನೈಸಿರಿಯ   ೨೧

ನಾಳಿನ ಮರಣಿಂದೆ ಬರಲಿ ನಮಗೆ ಎಂದು
ಸೋಳಾ ಸಾಸಿರ ದಂಡು ಪುರದಲ್ಲಿ | ಮಾ
ವ್ಯಾಳೆ ವ್ಯಾಳೆಕೆ ಪಾರಿ ತಿರುಗುತಿರಲು ಮತ್ತೆ
ಕೇಳಿರಿ ಮುಂದಾದ ಕಥೆಯ ಜನರು           ೨೨

ಕುಣಿಯುತ ಕುದುರೆಯು ಮಾರ್ಬಲವೊಂದಾಗಿ
ಹಣಿದಟ್ಟಬೇಕಿನ್ನು ಜಗಳಕ್ಕೆ | ಮಾ
ಕಣಗಂಡ ಸುದ್ದಿಯು ಅದಾ ಕ್ಷಣದಲ್ಲಿ
ದಣಿವುತ್ತ ಬಂದಿತು ಧಾರ್ವಾಡ ಪುರಕೆ        ೨೩

ಕ್ಷಣಮಾತ್ರ ಆಲಸ್ಯ ಮಾಡಲಾಗದು ಎಂದು
ಗುಣವಂತರೆಲ್ಲರು ತಲೆಗೂಡಿ | ಮಾ
ಒಣ ಮಾತಿನಿಂದೇನು ಫಲವಿಲ್ಲವೆನುತಲ
ಪ್ಪಣೆಗೊಟ್ಟರು ಜಾನ ಮಂಡಲಿಗೆ ಬೇಗ       ೨೪

ಹಿಂಡುಮಂದಿಯೊಳಗೆ ಧೀರನಾದ ಜಾನ
ಮಂಡಲ ಸಾಯ್ಬನ ಕರಿಸ್ಯಾರು | ಮಾ
ದಂಡಿಗೆ ಹೋಗೆಂದು ಆತಗಪ್ಪಣೆ ಕೊಟ್ಟು
ಹೊಂಡಿಸ್ಯಾರು ಬೀಳುಕೊಟ್ಟಾರು ಬೇಗ       ೨೫

ಗುಂಡು ಮದ್ದಿಗೇನು ಕಡಿಮಿಲ್ಲ ತೋಪಿನ
ಬಂಡಿಗಳ ತಯ್ಯಾರ ಮಾಡೆಂದು | ಮಾ
ಹೊಂಡಬೇಕು ನಾಳ್ಗೆಂದು ಚಮತ್ಕಾರ
ಝಂಡೇವ ಹೊರೆಯಕ್ಕೆ ನಿಲಿಸಿದರಾಗ        ೨೬

ಮುಂಗಾರಿ ಸಿಡಿಲಿಗೆ ಸಾದೃಶ್ಯವಾದ ಫಿ
ರಂಗಿಯ ಚಕ್ಕಡಿ ಇನ್ನೂರು | ಮಾ
ಮುಂಗಡೆ ಏರಿ ಬಾರೊ ನಡುವೆ ಕುದರಿಮಂದಿ
ಹಿಂಗಡೆಯಲಿ ಪರಂಗೇರ ಘೋರ   ೨೭

ಹೀಂಗಾಗೆ ಜಾನ ಮಂಡಲಿ ಸಾಯ್ಬ ದಂಡೀನ
ಸಿಂಗಾರ ಮಾಡಿದ ಪರಿಯೆಂತು | ಮಾ
ಮಂಗಳವಾರ ಸಂಜೀ ವ್ಯಾಳೆದಲ್ಲಿ ಬೆಳ
ದಿಂಗಳ ಬೆಳಕೀಲಿ ಇಳದೀತು ಫೌಜು         ೨೮

ಒಂಬತ್ತು ಒಂಟಿಯ ಮೇಲೆ ನಗಾರಿಯು
ಅಂಬಾರಿ ಆನೆಗೆ ಬಿಗಿದಾರು | ಮಾ
ಸಂಭ್ರಮದಿಂದಲಿ ಜಾನ ಮಂಡಲಿ ಸಾಯ್ಬ
ಬೆಂಬತ್ತಿ ಜೋರ್ದಾರ ಜಗಳಕ್ಕೆ ಬಂದ        ೨೯

ಕುಂಭಿನಿಯೊಳು ಬಾಳ ಚೆಲುವಾಗಿ ಮೆರೆವ ಕು
ಸುಂಬೆಯ ಚಾಯದ ದಂಡಿನ್ನು | ಮಾ
ಇಂಬಾಗಿ ಕಿತ್ತೂರ ಬಿಟ್ಟು ಹರದಾರೀ
ತೆಂಬಕ್ಕೆ ಇಳದೀತು ಕೇಳಿರಿ ದಂಡು           ೩೦

ಇಳಿದಂಥ ಫೌಜನು ಕಾಣುತ ಕಿತ್ತೂರ
ಒಳಗಿರ್ದ ಸರ್ದಾರರೊಂದಾಗಿ | ಮಾ
ಬೆಳೆದಂಥ ಆರ್ಭಟೆ ಹೊರಬಿದ್ದು ಮೂಡಿದ ಜ
ಗಳದ ಪರಿಯೆಂತು ವರ್ಣಿಸಲಿನ್ನು   ೩೧

ಮಳೆಯಂತೆ ನಾಲ್ಕು ದಿಕ್ಕಿಲಿ ಗುಂಡು ಸುರಿಯಲು
ಅಳಿದು ಬಿದ್ಹೆಣಗಳ ತುಳಿಯುತ | ಮಾ
ತಳಮಳಗೊಳ್ಳುತ ನಿಲ್ಲದೆ ಸಾಯ್ಬನ
ದಳ ಮುರಿದೋಡಿತು ದಾರಿಯ ತಪ್ಪಿ         ೩೨

ಸರದಾರರಳಿದಾರು ಜಾನ ಮಂಡಳಿ ಸಾಯ್ಬ
ಇರಿದಂಥ ಈಟೀಯ ಗಾಯದಿ | ಮಾ
ಮರಗೂತ ಬಿದ್ದಾನೆಂಬುವ ಸುದ್ದಿ ಧಾರ್ವಾಡ
ಪುರದೊಳು ಮುಂದಾಗಿ ಹತ್ತಿದಾಕ್ಷಣದಿ       ೩೩

ಮರುದಿನ ಮೈಸೂರ ದಂಡು ಕೂಡಿಕೊಂಡು
ಭರದಿಂದ ಚಾಪಾಲಿ ಸಾಯ್ಬನು | ಮಾ
ಗುರಿ ಮಡಿ ಇನ್ನೂರ ತೋಪೊಮ್ಮೆ ಹೂಡಿದ
ಪರಿಯನು ಲಾಲಿಸಿ ಕೇಳಿರಿ ಜನರು ೩೪

ನೇತ್ರಗಳಿಂದಲಿ ಕೋಟೆಯ ನೋಡಿ ಭಾರಿ
ಶಸ್ತ್ರಗಳ ತರಿಸಿದರೊಳಗಿಂದ | ಮಾ
ರಾತ್ರಿ ಹಗಲೆ‌ನ್ನದೆ ರಭಸದಿಂದ್ಹೊಡೆಯಲು
ಧಾತ್ರಿಯು ನಡಗೀತು ತೋಪಿನ ಭರಕೆ       ೩೫

ಒತ್ರವಾಗಿ ಗುಂಡುಮದ್ದು ಒಮ್ಮೆಗೆ ಹಾರಲು
ಕತ್ರಿಸಿ ಹೂಡೇವು ಬೀಳುತಲಿ | ಮಾ
ತತ್ರಿಸಿ ಒಳಗಿರ್ದ ದಂಡೆಲ್ಲ ನಡಗೀತು
ಸೂತ್ರ ಹರಿದ ಮೇಲೆ ಕಾದುರುಂಟೆ ೩೬

ನಡಗುತ್ತ ಉಳಿದ ಕಾಟಕರೆಲ್ಲ ಒಂದಾಗಿ
ಕಡಿದಾಡೋ ಯತ್ರವು ಮೀರಿತು | ಮಾ
ಪಿಡಿದಂಥ ಕತ್ತಿಯ ನೆಲಕೊಗೆದಾಕ್ಷಣ
ತಡವೇನು ಠಾಣೇವು ಬೀಳ್ವುದು ಎನ್ನು        ೩೭

ಹೊಡೆವ ಫಿರಂಗಿಯ ರಭಸಿಗೆ ತಾಳದೆ
ಸಡಲಿತು ಸುತ್ತಣ ಗೋಡೆಯು | ಮಾ
ಮಡಿದಂಥ ಮಂದಿಯ ಎಣಿದೆಯಗೊಳ್ಳದೆ
ನಡೆಯಿತು ಇಂಗ್ರೇಜಿ ದಳ ಮುಂದಕೊತ್ತಿ     ೩೮

ಹೊಕ್ಕಿತು ಕೇಳಿರಿ ಒಂದಾರು ತಾಸಿಲಿ
ನಾಲ್ಕು ದಿಕ್ಕಿನ ದಂಡು ಏಕಾಗಿ | ಮಾ
ಮುಂಕೋಟೆ ಅಗಸಿಯ ಬಾಗಿಲ ಕಾಯ್ವಂಥ
ಸೊಕ್ಕಿದ ಹಬ್ಸೇನ ಜಗಳವ ಕೇಳಿ    ೩೯

ತೆಕ್ಕಿಯೊಳವಚಿ ಕೊಂದನು ನೂರುಮಂದಿಯ
ಮಿಕ್ಕಿ ಬಂದವರನ್ನು ಕಡಿವುತ | ಮಾ
ಜಕ್ಕನೆ ಜರಿದು ಚಾಪಲಿ ಸಾಯ್ಬ ಮುಂದೆ
ಇಕ್ಕದೆ ಹೆಜ್ಜೆಯ ನಿಂತು ನೋಡಿದ   ೪೦

ಬಲ್ಲಿದ ಹಬ್ಸೇನ ಬಲ ಮುರಿಯಬೇಕೆಂದು
ಎಲ್ಲ ದಂಡನು ಸುತ್ತಗಟ್ಟುತ | ಮಾ
ನಿಲ್ಲದೆ ಎಡಬಲ ಗುಂಡ್ಹಾರಿದಾಕ್ಷಣ
ತಲ್ಲಣಿಸುತ ಬೀಳೆ ನಡೆದನು ಸಾಯ್ಬ         ೪೧

ಹುಲ್ಲುಕಡ್ಡಿಯ ಕಚ್ಚಿದಂಥ ಕಾಟಕರಿಗೆ
ಚಲ್ಲಣ ಕಡಿದು ಲಂಗುಟಿ ಹಾಕಿ | ಮಾ
ನಿಲ್ಲದೆ ಸರ್ದಾರ ಧರ್ಮಸಾಲೆಯ ಬಿಟ್ಟು
ಅಲ್ಲಿಂದ ಅರಮನೆ ಹೊಕ್ಕಾನು ತಾ ೪೨

ಮಂದಿರದೊಳಗಿರ್ದ ಮಾನಿನಿ ಪೆಸರ್ಗೊಂಡು
ಚೆಂದದಿ ಸಾಯ್ಬನ ಇದರಿಗೆ | ಮಾ
ಮುಂದಕ್ಕೆ ಬಾರೆಂದು ರಾಣಿಯ ಕರೆದಾನು
ಸಂದೇಹ ಬೇಡ ಮನದೊಳಗೆನುತ ೪೩

ಎಂದ ಮಾತನು ಕೇಳಿ ಆ ಜಾಣಿ ಪೌರುಷದಿ
ಛಂದದಿ ಸಾಯ್ಬನ ಇದರಿಗೆ | ಮಾ
ಸಂದಂಥ ಕಾಂತನ ಕರುಣದಿ ನೀ ಎನ್ನ
ತಂದೆಯ ಸರಿ ಎಂದು ಶಿರಬಾಗಲು           ೪೪

ಸೀಮೆಯೆಲ್ಲವ ಜಾಣೆ ಉಂಭೋಗ ಬರಕೊಟ್ಟು
ನೇಮದಿ ಅಪ್ಪಣೆಗೊಂಡಾಳು | ಮಾ
ಗ್ರಾಮದೊಳಿರುವಂಥ ಬದುಕೆಲ್ಲ ಒಪ್ಪಿಸಿ
ತಾ ಮಾತ್ರ ಹೊಂಗಲಕೆ ನಡೆದಾಳು          ೪೫

ಕುಸುಮಬಾಣನ ಮಾತು ಪೆಸರಿನ ಪುರದೊಳು
ವಶವಾದ ಮಾಗಡಿ ಬಸವನು | ಮಾ
ವಸಧೆಯೊಳು ತನ್ನ ಕುಶಲದಿ ಪಾಡಿರುತ
ಉಸುರಿದ ಕವಿತೆ ಪೊಸತು ಕೇಳಿ    ೪೬