ವೀರೇಶಲಿಂಗಂ ಪಂತುಲು

ಸುಮಾರು ೧೨೦ ವರ್ಷಗಳ ಹಿಂದೆ ನಡೆದ ಸಂಗತಿ. ರಾಜಮಹೇಂದ್ರಿಯಿಂದ ಒಂದು ಕುಟುಂಬದ ಕೆಲವರು ಪಲ್ಲಕ್ಕಿಯಲ್ಲಿ ಪ್ರಯಾಣ ಹೊರಟಿದ್ದರು. ಅವರ ಜೊತೆ ಐದು ವರ್ಷದ ಬಾಲಕ. ಬೋಯಿಗಳು ಪಲ್ಲಕ್ಕಿ ಹೊತ್ತು ಹೋಗುತ್ತಿದ್ದಾಗ ಒಂದು ಕಾಲುವೆ ಅಡ್ಡವಾಯಿತು. ಅದು ನೀರು ತುಂಬಿ ಹರಿಯುತ್ತಿತ್ತು. ಪಲ್ಲಕ್ಕಿಯಲ್ಲಿ ನೀರು ಬರದಿರಲೆಂದು ಬೋಯಿಗಳು ಪಲ್ಲಕ್ಕಿಯನ್ನು ಎತ್ತಿಹಿಡಿದು ನಡೆದರು. ಪಲ್ಲಕ್ಕಿಯಲ್ಲಿದ್ದ ಹುಡುಗ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದ. ಇದನ್ನು ಗಮನಿಸಿದ ಬೋಯಿಯೊಬ್ಬ ಸ್ವಲ್ಪ ನೀರು ಕುಡಿದಿದ್ದ ಹುಡುಗನನ್ನು ಎತ್ತಿ ಬದುಕಿಸಿದ. ಹೀಗೆ ನೀರಿನ ಗಂಡಾಂತರದಿಂದ ಪಾರಾದ ಹುಡುಗ, ಚಿಕ್ಕಂದಿನಲ್ಲಿಯೇ ಅನೇಕ ಗಂಡಾಂತರಗಳು ಒದಗಿದರೂ ಬದುಕಿದ ಈ ಹುಡುಗ, ಮುಂದೆ ಅನೇಕ ಉತ್ತಮ ಕೆಲಸಗಳನ್ನು ಮಾಡಿ ತನ್ನ ಜನ್ಮ ಸಾರ್ಥಕಪಡಿಸಿಕೊಂಡ. ಈ ಹುಡುಗನೇ ವಿರೇಶಲಿಂಗಂ ಪಂತಲು.

ಬಾಲ್ಯ

ರಾಜಮಹೇಂದ್ರಿ ಭಾರತದ ಪುರಾತನ ಪಟ್ಟಣಗಳಲ್ಲೊಂದು: ಗೋದಾವರಿ ನದಿಯ ದಡದಲ್ಲಿರುವ ಪ್ರಸಿದ್ಧ ಪಟ್ಟಣ. ತೆಲುಗಿನ ಆದಿಕವಿ ನನ್ನಯ ಮುಂತಾದ ಕವಿಗಳಿಗೆ ಇದು ವಾಸಭೂಮಿಯಾಗಿತ್ತು. ಅಲ್ಲದೆ ರಾಜರಾಜನರೇಂದ್ರ ಮುಂತಾದ ಚಾಲುಕ್ಯ ದೊರೆಗಳ ರಾಜಧಾನಿ. ಈ ಪಟ್ಟಣದಲ್ಲಿ ವೀರೇಶಲಿಂಗಂ ೧೮೪೮ರ ಏಪ್ರಿಲ್ ೧೬ನೇ ತಾರೀಖು ತಮ್ಮ ಹಿರಿಯರ ಮನೆಯಲ್ಲಿ ಹುಟ್ಟಿದರು. ಇವರ ಮನೆ ಆಗಿನ ರಾಜ ಮಹೇಂದ್ರಿಯ ಕೆಲವೇ ದೊಡ್ಡ ಮನೆಗಳಲ್ಲಿ ಒಂದಾಗಿತ್ತು.

ಇವರ ತಂದೆ ಸುಬ್ಬರಾಯುಡು. ಪುನ್ನಮ್ಮ ಇವರ ತಾಯಿ. ತಾಯಿ ಹೆದರಿಕೆಯ ಸ್ವಭಾವದವರು. ಭೂತ ಪ್ರೇತಗಳಲ್ಲಿ ತುಂಬಾ ನಂಬಿಕೆಯುಳ್ಳವರು. ತುಂಬಾ ನಿಶ್ಶಕ್ತರು, ಅಲ್ಲದೆ ಬಲುಬೇಗ ಕೋಪ ಬರುತ್ತಿತ್ತು. ಇಂತಹ ನಿಶ್ಶಕ್ತ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವರಾದ ವೀರೇಶಲಿಂಗಂ ತುಂಬಾ ದುರ್ಬಲ ಶರೀರದವರಾಗಿದ್ದರು. ಅವರು ಚಿಕ್ಕ ಮಗುವಾಗಿರುವಾಗ ತಾಯಿ ಮಾಡಿದ ಅಪಥ್ಯದಿಂದ ಕೆಮ್ಮು, ಉಬ್ಬಸ ಗಂಟುಬಿದ್ದವು. ಇವು ವೀರೇಶಲಿಂಗಂ ಅವರನ್ನು ಜೀವನದುದ್ದಕ್ಕೂ ಕಾಡಿದವು. ವೀರೇಶಲಿಂಗಂಗೆ ನಾಲ್ಕು ವರ್ಷವಾಗಿದ್ದಾಗ ತಂದೆ ತೀರಿಕೊಂಡರು. ದೊಡ್ಡಪ್ಪ ವೆಂಕಟರರತ್ನಂ ಇವರ ಯೋಗಕ್ಷೇಮವನ್ನು ನೋಡಿಕೊಳ್ಳತೊಡಗಿದರು.

ವೀರೇಶಲಿಂಗಂಗೆ ಇನ್ನೂ ಹದಿಮೂರೇ ವರ್ಷ ವಯಸ್ಸಾಗಿದ್ದಾಗ ೧೮೬೧ರಲ್ಲಿ ಮದುವೆಯಾಯಿತು. ಆಗ ಇವರ ಹೆಂಡತಿಗೆ ೯ ವರ್ಷ- ಮದುವೆ ಏನೆಂದರೆ ತಿಳಿಯದ ವಯಸ್ಸು. ಕೇವಲ ಸಂಭ್ರಮ, ತಿಂಡಿ- ತಿನಿಸು, ಊಟ, ವಾದ್ಯಗಳ ಶಬ್ದ, ಕುಣಿತ-ಇವೇ ಮದುವೆ ಎಂಬುದು ಅವರ ಭಾವನೆ. ಇವರ ಹೆಂಡತಿ ಬಾಪಮ್ಮ. ಪಂತಲುರವರ ತಾಯಿ, ಸೊಸೆಗೆ ರಾಜ್ಯಲಕ್ಷ್ಮಿ ಎನ್ನುವ ಹೆಸರನ್ನು ಇಟ್ಟರು.

ಮದುವೆಯಾದ ತರುವಾಯ ವೀರೇಶಲಿಂಗಂ ಅವರ ತಾಯಿಗೂ ದೊಡ್ಡಮ್ಮನಿಗೂ ಮನಸ್ತಾಪ ವುಂಟಾಯಿತು. ಒಂದಾಗಿದ್ದ ಮನೆ ಎರಡಾಯಿತು. ಆದರೂ ಇವರ ದೊಡ್ಡಪ್ಪ ಮೊದಲಿನಂತೆಯೇ ವಿಶ್ವಾಸವನ್ನು ತೋರಿ ಇವರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಿದ್ದರು.

ಪುಸ್ತಕಕ್ಕಾಗಿ

ವೀರೇಶಲಿಂಗಂರವರಿಗೆ ಚಿಕ್ಕಂದಿನಿಂದಲೂ ಆಂಧ್ರ ಕಾವ್ಯಗಳನ್ನು ಓದುವುದರಲ್ಲಿ ಆಸಕ್ತಿ. ತೆಲುಗು ಕಾವ್ಯಗಳಲ್ಲೆಲ್ಲ ’ವಸುಚರಿತ್ರೆ’ ಉತ್ತಮವಾದುದೆಂದು ಹಲವರ ಬಾಯಲ್ಲಿ ಕೇಳಿದ್ದರು. ತಮ್ಮ ಮನೆಯಲ್ಲಿ ಆ ಪುಸ್ತಕವಿರಲಿಲ್ಲ. ಹೇಗಾದರೂ ಮಾಡಿ ಆ ಕಾವ್ಯವನ್ನು ಓದಲೇಬೆಕೆಂಬ ಆಸೆ ಬಲವಾಯಿತು. ಇವರು ತಾಯಿಯನ್ನು ಕೇಳಿದರು. ಇವರ ತಾಯಿ ’ವಸುಚರಿತ್ರೆ’ಯನ್ನು ಕೊಂಡುಕೊಡಲು ಒಪ್ಪಲಿಲ್ಲ. ಹೇಗಾದರೂ ಮಾಡಿ ಈ ಪುಸ್ತಕವನ್ನು ಕೊಂಡುಕೊಳ್ಳಲು ಮನಸ್ಸು ಮಾಡಿದರು.

ಪುಸ್ತಕದ ಬೆಲೆ ನಾಲ್ಕು ರೂಪಾಯಿ. ಆದರೆ ಇವರಲ್ಲಿದ್ದುದು ಎಂಟಾಣೆ ಮಾತ್ರ. ಇವರು ಆ ಕಾವ್ಯವನ್ನು ಓದುವುದರಲ್ಲಿ ತೋರಿದ ಆಸಕ್ತಿಯಿಂದ ಅಂಗಡಿಯ ಮಾಲೀಕ ಇವರು ಅಂಗಡಿಯಲ್ಲೇ ಕುಳಿತು ಓದಲು ಅನುಮತಿ ಕೊಟ್ಟ. ಇವರು ಪಾಠಶಾಲೆಗೆ ಹೋಗುವಂತೆ ನಟಿಸುತ್ತಾ ಬಂದರು. ಶಾಲೆ ಫೀಸನ್ನು ಪುಸ್ತಕ ಕೊಳ್ಳಲು ಉಪಯೋಗಿಸುವುದಾಗಿ ನಿಶ್ಚಯಿಸಿದರು. ಮೋಸ ಬಹುದಿನ ನಡೆಯಲಿಲ್ಲ. ಇವರು ಶಾಲೆಗೆ ತಪ್ಪಿಸಿಕೊಳ್ಳುತ್ತಿದ್ದುದು ಇವರ ತಾಯಿಗೆ ತಿಳಿಯಿತು. ತಾಯಿ ಕೇಳಿದೊಡನೆ ವೀರೇಶಲಿಂಗಂ ನಿಜ ಸಂಗತಿಯನ್ನು ತಿಳಿಸಿದ. ಫೀಸಿಗಾಗಿ ಕೊಟ್ಟ ಹಣವನ್ನು ತಿಂಡಿ- ತೀರ್ಥಗಳಿಗೆ ಖರ್ಚು ಮಾಡಲಿಲ್ಲ ಅಥವಾ ಬೇರೆ ರೀತಿ ಅಪವ್ಯಯ ಮಾಡಲಿಲ್ಲ, ಪುಸ್ತಕ ತೆಗೆದುಕೊಂಡ ಎಂದು ಅವರ ತಾಯಿಗೆ ಸಮಾಧಾನವಾಯಿತು. ಪುಸ್ತಕ ಕೊಳ್ಳಲು ಹಣವನ್ನು ಕೊಟ್ಟರು. ಮತ್ತು ಇವರು ಮತ್ತೆ ಶಾಲೆಗೆ ಹೋಗುವಂತೆ ಮಾಡಿದರು. ಈ ತಮ್ಮ ನಡತೆಗಾಗಿ ವೀರೇಶಲಿಂಗಂ ಬಹುಕಾಲ ದುಃಖಪಡುತ್ತಿದ್ದರು.

ಅಂಗಡಿಯಲ್ಲೇ ಕುಳಿತು ಓದುತ್ತಿದ್ದರು.


೧೮೬೩ – ೬೪ ಈ ವರ್ಷಗಳಲ್ಲಿ ವೀರೇಶಲಿಂಗಂ ಕಾಯಿಲೆಯಿಂದ ನರಳಿದರು. ಜೀವನ- ಸಾವುಗಳ ಮಧ್ಯೆ ಹೋರಾಟ ನಡೆಸಿದರು. ೧೮೬೫ರಲ್ಲಿ ಮತ್ತೆ ಪಾಠಶಾಲೆಯನ್ನು ಸೇರಿದರು. ಅವರು ಶಾಲೆಗೆ ಸೇರುವ ಹೊತ್ತಿಗೆ ಆರು ತಿಂಗಳ ಪಾಠಗಳು ನಡೆದಿದ್ದವು. ಆದರೂ ಇವರೇ ತರಗತಿಗೆಲ್ಲಾ ಮೊದಲನೆಯವರಾಗಿ ಉತ್ತೀರ್ಣರಾದರು. ಅಲ್ಲಿಂದ ಮುಂದೆ ಅವರು ಪಾಠಶಾಲೆಯಲ್ಲಿ ಓದಿದಷ್ಟು ವರ್ಷವೂ ಇವರೇ ಮೊದಲನೆಯವರು. ಇದರಿಂದ ಇವರು ಫೀಸು ಕೊಡಬೇಕಾಗಿರಲಿಲ್ಲ.

ಉತ್ತಮ ನಡತೆಯ ಬಾಲಕ

ಇವರು ನಾಲ್ಕನೆಯ ತರಗತಿ ಓದುತ್ತಿರುವಾಗಲೇ ಇತರ ಹುಡುಗರಿಗೆ ಇವರಲ್ಲಿ ಗೌರವ. ವೀರೇಶಲಿಂಗಂ ಕೆಟ್ಟಕೆಲಸ ಮಾಡುವುದಿಲ್ಲ, ದೇವರಲ್ಲಿ ಭಕ್ತಿ ಅವನಿಗೆ, ಆಡಿದ ಮಾತಿಗೆ ತಪ್ಪುವುದಿಲ್ಲ, ತುಂಬ ಒಳ್ಳೆಯ ಹುಡುಗ ಎಂದು ಅವರಿಗೆಲ್ಲ ಅನ್ನಿಸಿತ್ತು.

ರಾಜಮಹೇಂದ್ರಿಯ ನ್ಯಾಯಾಧೀಶರಾಗಿದ್ದ ಹೆನ್ರಿ ಮಾರಿಸ್ ಅವರು ಒಂದು ದಿನ ಪಾಠಶಾಲೆಯನ್ನು ನೋಡಲು ಬಂದರು. ಅವರು ಹುಡುಗರಿಗೆ ಹೇಳಿದರು : “ನಿಮ್ಮ ಶಾಲೆಯಲ್ಲೆಲ್ಲಾ ತುಂಬಾ ಒಳ್ಳೆಯ ಹುಡುಗ ಯಾರು ಅಂತ ಯೋಚಿಸಿ, ಅವನ ಹೆಸರನ್ನು ಚೀಟಿಯಲ್ಲಿ ಬರೆದುಕೊಡಿ. ಆದರೆ ಒಬ್ಬರು ಇನ್ನೊಬ್ಬರನ್ನು ಕೇಳಕೂಡದು.” ಹುಡುಗರು ಚೀಟಿಯಲ್ಲಿ ಬರೆದುಕೊಟ್ಟರು. ಶಾಲೆಯ ಬಹುಪಾಲು ಹುಡುಗರು ಬರೆದದ್ದು – ವೀರೇಶಲಿಂಗಂ ಪಂತಲುರವರ ಹೆಸರನ್ನೇ. ಮೇಲಿನ ತರಗತಿಯ ವಿದ್ಯಾರ್ಥಿಗಳೂ ಕೆಳಗಿನ ತರಗತಿಯಲ್ಲಿದ್ದ ವೀರೇಶಲಿಂಗಂರವರ ಹೆಸರನ್ನು ಬರೆದಿದ್ದರು.

ನ್ಯಾಯಾಧೀಶರು ಪುಸ್ತಕವನ್ನು ಕೊಳ್ಳಲು ಹತ್ತು ರೂಪಾಯಿಗಳನ್ನು ಬಹುಮಾನವಾಗಿ ಕೊಟ್ಟರು. ಹೀಗೆ ಅಂದು ಅವರು ಕೊಂಡ ಪುಸ್ತಕಗಳು ಇವರಿಗೆ ಬಹಳ ಪ್ರಿಯವಾಗಿದ್ದವು. ತಾವು ಬದುಕ್ಕಿದ್ದಷ್ಟು ದಿನವೂ ಪುಸ್ತಕಗಳನ್ನು ಇಟ್ಟುಕೊಂಡಿದ್ದರು.

ವಿದ್ಯಾಭ್ಯಾಸ ಮುಗಿಯಿತು.

ವೀರೇಶಲಿಂಗಂ ನಾಲ್ಕನೇ ತರಗತಿಯಲ್ಲಿ ಮೊದಲನೆಯವರಾಗಿ ತೇರ್ಗಡೆಯಾದರು. ಆದರೂ ಇವರ ವಿದ್ಯೆಗೆ ಪುನಃ ವಿಘ್ನಗಳು ಒದಗಿಬಂದವು. ಇವರನ್ನು ಅತ್ಯಂತ ಪ್ರೀತಿಯಿಂದ ಬೆಳೆಸಿದ್ದ ಇವರ ದೊಡ್ಡಪ್ಪ ೧೮೬೭ರಲ್ಲಿ ತೀರಿಕೊಂಡರು. ತಂದೆ ಸತ್ತಾಗ ಇವರಿಗೆ ತಂದೆಯ ಸಾವಿನ ಕಷ್ಟವೇನೆಂದು ತಿಳಿಯದು. ಈಗ ಅದನ್ನು ಅನುಭವಿಸಿದರು.

ವೀರೇಶಲಿಂಗಂ ಮತ್ತೆ ಶಾಲೆಗೆ ಸೇರಿದರು. ಮತ್ತೆ ಇವರನ್ನು ಕೆಮ್ಮು ಮತ್ತು ನಿಶ್ಶಕ್ತಿ ಕಾಡಲಾರಂಭಿಸಿದವು. ಓದುವುದಕ್ಕೂ ಬೇರೆ ಕೆಲಸಗಳನ್ನು ಮಾಡುವುದಕ್ಕೂ ಇವರು ಅಶಕ್ತರಾಗಿದ್ದರು. ಆದ್ದರಿಂದ ಇವರು ಪರೀಕ್ಷೆಗೆ ಆ ವರ್ಷ ಕುಳಿತುಕೊಳ್ಳಲಾಗಲಿಲ್ಲ. ಅನಂತರ ೧೮೭೦ರಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಕವಿಯಾಗಬೇಕು, ತಪಸ್ವಿಯಾಗಬೇಕು ಎನ್ನುವ ಆಕಾಂಕ್ಷೆಗಳೇ ಇವರ ತಲೆಯ ತುಂಬ: ಹಣ ಸಂಪಾದಿಸಬೇಕು, ಅಧಿಕಾರಿಯಾಗಬೇಕು ಎನ್ನುವ ಆಸೆಗಳ ಸುಳಿವೇ ಇಲ್ಲ.

೧೮೭೧- ೭೨ರಲ್ಲಿ ಕ್ರಿಮಿನಲ್ ಹೈಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಹಾಗೆಯೇ ೧೮೭೨ರಲ್ಲಿ ಟ್ರಾನ್ಸ್‌ಲೇಷನ್ ಲೋಯರ್ ಪರೀಕ್ಷೆಗೆ ಕುಳಿತು ಸಫಲರಾದರು.

ಸ್ವತಂತ್ರ ವಿಚಾರ ರೀತಿ

ವಿದ್ಯಾಭ್ಯಾಸವಾಯಿತು. ಇನ್ನು ಕೆಲಸ ದೊರಕಿಸ ಬೇಕಲ್ಲವೆ ? ಕೆಲಸ ಹುಡುಕಲು ಪ್ರಾರಂಭಿಸಿದರು. ೧೮೭೨ನೇ ಜ್ಯೇಷ್ಠಮಾಸದಲ್ಲಿ ಕೋರಂಗಿ ಗ್ರಾಮದ ಇಂಗ್ಲಿಷ್ ಪಾಠಶಾಲೆಯ ಮುಖ್ಯೋಪಾಧ್ಯಾಯ ಕೆಲಸ ದೊರಕಿತು. ತಿಂಗಳಿಗೆ ಮೂವತ್ತು ರೂಪಾಯಿ ಸಂಬಳ. ’ಒಳ್ಳೆಯ ದಿನ ಕೆಲಸಕ್ಕೆ ಸೇರಿ’ ಎಂದು ಅವರ ಬಂಧುಗಳೂ ಹಿತೈಷಿಗಳೂ ಅವರಿಗೆ ಬುದ್ಧಿವಾದ ಹೇಳಿದರು. ಆದರೆ ಅವುಗಳನ್ನು ಲಕ್ಷಿಸಿದೆ ಅವರು ಅಮಾವಾಸ್ಯೆಯ ದಿನ ಕೆಲಸಕ್ಕೆ ಸೇರಿದರು.

ಇವರು ಏಕೆ ಹೀಗೆ ಮಾಡಿದರು ? ಜನರ ಮನಸ್ಸಿನಲ್ಲಿ ಗಟ್ಟಿಯಾಗಿ ನಿಂತ ಕುರುಡು ಆಚರಣೆ, ಮೂಢನಂಬಿಕೆಗಳಲ್ಲಿ ಅವರಿಗೆ ವಿಶ್ವಾಸವಿರಲಿಲ್ಲ. ಭೂತ- ಪ್ರೇತಗಳನ್ನು ಇವರು ನಂಬುತ್ತಿರಲಿಲ್ಲ. ಆಗಿನ ಜನರನ್ನು ಎದುರಿಸಿ ಅವರ ನಂಬಿಕೆ, ಆಚರಣೆಗಳು ಸರಿಯಿಲ್ಲ ಎಂದು ತೋರಿಸಿಕೊಟ್ಟರು.

ಇವರ ಮನೆಯ ಬಾಳೆಯ ಗಿಡದಲ್ಲಿ ಹೂವು ಮೇಲೆ ಬಿಡದೆ ಮಧ್ಯದಲ್ಲಿ ಬಿಟ್ಟಿತು. ಇದು ಕೆಡಕನ್ನು ಉಂಟು ಮಾಡುವುದು ಎನ್ನುವುದು ಜನರ ನಂಬಿಕೆ. ಆದ್ದರಿಂದ ಆ ಗಿಡವನ್ನು ಕಡಿಯಬೇಕೆಂದು ಹೇಳಿದರು. ಆದರೆ ವೀರೇಶಲಿಂಗಂ ಆ ಗಿಡದ ಹೂ ಕಾಯಾಗಿ ಹಣ್ಣಾಗುವವರೆಗೂ ಕಾದಿದ್ದು ಅದನ್ನು ತಿಂದರು. ಅದರಿಂದ ಅವರಿಗೆ ಯಾವ ಕೇಡೂ ಆಗಲಿಲ್ಲ.

ಹಾಗೆಯೇ ಇವರ ಮನೆಯ ತೊಲೆಗೆ ಜೇನುಗೂಡು ಕಟ್ಟಿದಾಗಲೂ ಆಯಿತು. ಅವರ ಮನೆಯವರು,’ಇದು ಅಪಶಕುನ ಇದನ್ನು ತೆಗೆಸಿಬಿಡು’ ಎಂದು ಹೇಳಿದರು. ಆದರೆ ವೀರೇಶಲಿಂಗಂ ಜೇನು ಗೂಡುಕಟ್ಟಲು ಬಿಟ್ಟರು. ಮತ್ತು ಆ ಜೇನಿನ ರುಚಿ ನೊಡಿ ಸಂತೋಷಪಟ್ಟರು.

ಇವರ ತಾಯಿಗೆ ದೆವ್ವಪಿಶಾಚಿಗಳಲ್ಲಿ ಅಪಾರ ನಂಬಿಕೆ. ತಮಗೆ ದೆವ್ವ ಹಿಡಿದಿದೆ ಎನ್ನುವ ಅನುಮಾನ ಬಂದಾಗ ಮಂತ್ರವಾದಿಯನ್ನೊ ಭೂತವೈದ್ಯನನ್ನೊ ಕರೆಸಿ ಯಂತ್ರ- ಮಂತ್ರ ಮಾಡಿಸುತ್ತಿದ್ದರು. ವಿರೇಶಲಿಂಗಂ ಕೋರಂಗಿಯಲ್ಲಿರುವಾಗ, ಇವರ ತಾಯಿಗೆ ಪುನಃ ಈ ಭ್ರಮೆಯುಂಟಾಯಿತು. ಆಗ ಆ ಊರಿನ ಜನ, ’ಇವರು ತುಂಬಾ ದೊಡ್ಡ ಭೂತವೈದ್ಯರು’ ಎಂದು ಒಬ್ಬ ಯೋಗಿಯನ್ನು ವೀರೇಶಲಿಂಗಂ ಬಳಿ ಕರೆತಂದರು. ಆತ ದಷ್ಟಪುಷ್ಟವಾಗಿದ್ದ. ಗಡ್ಡವನ್ನೂ ಉಗುರುಗಳನ್ನೂ ಬೆಳೆಸಿದ್ದ. ಕೈಯಲ್ಲಿ ದೊಣ್ಣೆ, ಹಣೆಯಲ್ಲಿ ದೊಡ್ಡದಾದ ಕುಂಕುಮದ ಬೊಟ್ಟು, ಕಾವಿ ಬಟ್ಟೆಯನ್ನುಟ್ಟಿದ್ದ ಇವನು ಭಯಂಕರನಾಗಿ ಕಾಣುತ್ತಿದ್ದ. ವೀರೇಶಲಿಂಗಂಗೆ ಭೂತ- ಪ್ರೇತಗಳಲ್ಲಿ ನಂಬಿಕೆಯಿಲ್ಲದಿದ್ದರೂ ತಾಯಿಯ ಸಮಾಧಾನಕ್ಕಾಗಿ ಯೋಗಿಯು ಔಷಧೋಪಚಾರ ನಡೆಸಲು ಒಪ್ಪಿಗೆಯಿತ್ತರು.

ಈ ಮಂತ್ರವಾದಿ ವೀರೇಶಲಿಂಗಂ ಅವರಿಂದ ಹಣ ಕೀಳಲು ಪ್ರಯತ್ನಿಸಿದ. ಅವರು ಕೊಡದಿದ್ದಾಗ ತನ್ನ ಮಂತ್ರಗಳಿಂದ ಅವರನ್ನು ಕೊಲ್ಲುತ್ತೇನೆ ಎಂದು ಗರ್ಜಿಸಿದ. ಅವರು ನಕ್ಕುಬಿಟ್ಟರು. ಅವನು ಮಂತ್ರಗಳನ್ನು ಪಠಿಸಿದ. ವೀರೇಶಲಿಂಗರ ಸ್ನೇಹಿತರೆಲ್ಲ ಹೆದರಿದರು. ಆದರೆ ವೀರೇಶಲಿಂಗಂ ಅವನನ್ನು ತಿರಸ್ಕಾರದಿಂದ ಕಂಡರು. ಕಡೆಗೆ ಆತ ಸೋತು ತನಗೆ ಯಾವ ಮಂತ್ರವೂ ಬರುವುದಿಲ್ಲ, ಭೂತವೈದ್ಯವೂ ತಿಳಿದಿಲ್ಲ, ಕೇವಲ ಹಣದಾಸೆಯಿಂದ ಹೀಗೆ ವರ್ತಿಸಿದೆ ಎಂದು ಒಪ್ಪಿಕೊಂಡ.

ಸಮಾಜಸೇವೆ ಪ್ರಾರಂಭ

೧೮೭೪ರಲ್ಲಿ ಕೋರಂಗಿಯ ಪಾಠಶಾಲೆಯ ಕೆಲಸಕ್ಕೆ ರಾಜಿನಾಮೆಯನ್ನು ಕೊಟ್ಟು ಧವಳೇಶ್ವರ ಶಾಲೆಯ ಮುಖ್ಯೋಪಾಧ್ಯಾಯರಾದರು. ಇದು ಆಂಗ್ಲ ಮತ್ತು ದೇಶಭಾಷೆಗಳರಡನ್ನೂ ಬೋಧಿಸುತ್ತಿದ್ದ ಶಾಲೆ. ಇವರಿಗೆ ತಿಂಗಳಿಗೆ ೪೪ ರೂಪಾಯಿ ಸಂಬಳ.

ವೀರೇಶಲಿಂಗಂ ತಮ್ಮ ಜೀವನದಲ್ಲಿ ಅನೇಕ ಹಿರಿಯ ಕಾರ್ಯಗಳನ್ನು ಸಾಧಿಸಿದರು. ಈ ಸಾಧನೆಗಳು ಆರಂಭವಾದುದು ಧವಳೇಶ್ವರದಲ್ಲಿ.

ಮೊದಲಿನಿಂದಲೂ ವೀರೇಶಲಿಂಗಂ ಸ್ತ್ರೀಯರ ವಿಷಯದಲ್ಲಿ ಸಹಾನುಭೂತಿ ಇದ್ದವರು. ಸಮಾಜ ಎನ್ನುವ ಬಂಡಿಯ ಎರಡು ಎತ್ತುಗಳು- ಗಂಡಸರು ಮತ್ತು ಹೆಂಗಸರು ಮುಖ್ಯ. ಗಂಡಸರು ದಿನದ ಹೆಚ್ಚು ಹೊತ್ತನ್ನು ಮನೆಯ ಹೊರಗೆ ಕಳೆಯುತ್ತಾರೆ. ಹೆಂಗಸರು ಮನೆಯಲ್ಲಿ ಮಕ್ಕಳಿಗೆ ವಿದ್ಯೆಯನ್ನು ಹೇಳಿಕೊಟ್ಟು ವಿದ್ಯಾವಂತರನ್ನಾಗಿಯೂ ಸತ್ಪ್ರಜೆಗಳನ್ನಾಗಿಯೂ ಮಾಡುವವರು. ಮಕ್ಕಳ ಶಾಲೆ ಮನೆಯಲ್ಲಿ. ತಾಯಿ ಮಕ್ಕಳ ಮೊದಲ ಗುರು. ತಾಯಿಯ ಪಾದದ ಸಮೀಪದಲ್ಲಿ ಮಕ್ಕಳ ಮೊದಲ ಪಾಠ. ಆದ್ದರಿಂದ ಹೆಂಗಸರು ಮುಂದುವರಿಯದೆ ದೇಶ ಮುಂದುವರಿಯುವುದಿಲ್ಲ. ಹೆಂಗಸರು ಮುಂದುವರಿಯಲು ಅವರು ವಿದ್ಯಾವತಿಯಾಗಿರಬೇಕು – ಇದು ಪಂತಲುರವರ ದೃಢವಾದ ನಂಬಿಕೆ. ವೀರೇಶಲಿಂಗಂ ಸ್ತ್ರೀ ವಿದ್ಯಾಭ್ಯಾಸದ ಪರವಾಗಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಉಪನ್ಯಾಸಗಳನ್ನು ಮಾಡಿದರು. ಸ್ತ್ರೀ ವಿದ್ಯಾಭ್ಯಾಸದ ವಿಷಯದಲ್ಲಿ ಜನರ ಮನಸ್ಸಿನ ಮೌಢ್ಯಗಳನ್ನು ಕಿತ್ತುಹಾಕಲು ಪ್ರಯತ್ನಿಸಿದರು.

ಇದರ ಫಲವಾಗಿ ೧೮೭೪ ನೇ ಸೆಪ್ಟೆಂಬರಿನಲ್ಲಿ ಒಂದು ಬಾಲಿಕಾ ಪಾಠಶಾಲೆಯನ್ನು ಧವಳೇಶ್ವರದಲ್ಲಿ ಆರಂಭಿಸಿದರು. ಹಲವು ಮಹನೀಯರು ಇದಕ್ಕೆ ಚಂದಾಹಣ ಕೊಡಲು ಒಪ್ಪಿದರು. ಹೀಗೆ ಚಂದಾಹಣದಿಂದ ಆರಂಭವಾದ ಪಾಠಶಾಲೆ ಇಂದಿಗೂ ನಡೆದುಕೊಂಡು ಬರುತ್ತಿದೆ. ಗಂಡಸರಲ್ಲಿಯೇ ವಿದ್ಯಾವಂತರು ಕಡಿಮೆಯಿದ್ದ ಆ ಕಾಲದಲ್ಲಿ ಒಂದು ಹಳ್ಳಿಯಲ್ಲಿ ಹುಡುಗಿಯರಿಗೆ ಶಾಲೆ ಸಾಧ್ಯವಾದುದು ವೀರೇಶಲಿಂಗಂ ಅವರ ಪರಿಶ್ರಮದಿಂದಲೇ ಎಂದು ಬೇರೆ ಹೇಳಬೇಕಾಗಿಲ್ಲ.

ಇದೇ ಸಮಯದಲ್ಲಿಯೇ ’ಸಂಕ್ಷೇಪ ಲೇಖನ’ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಇದರಿಂದ ಇವರು ಸಬ್‌ಮ್ಯಾಜಿಸ್ಟ್ರೇಟ್ ಪದವಿಗೆ ಅರ್ಹರಾದರು. ಆದರೆ ಆಗ ನ್ಯಾಯಾಲಯಗಳಲ್ಲಿ ನಡೆಯುತ್ತಿದ್ದ ಅನ್ಯಾಯಗಳನ್ನು ಕೇಳಿದ್ದರು. ಹಾಗೆಯೇ ನ್ಯಾಯವಾದಿಗಳಲ್ಲಿಯೂ ಅನ್ಯಾಯವಿದೆ ಎಂದು ಕೇಳಿದ್ದರು. ಆದ್ದರಿಂದ ನ್ಯಾಯಾಧಿಪತಿಯ ಕೆಲಸಕ್ಕೆ ಹೋಗಲು ಇಷ್ಟಪಡಲಿಲ್ಲ.

ಸ್ವತಂತ್ರ ಜೀವನಕ್ಕಾಗಿ

ರಾಜಮಹೇಂದ್ರಿಯಲ್ಲಿ ಇವರ ಮನೆಯ ರಸ್ತೆಯಲ್ಲಿಯೇ ಬಸವರಾಜು ಗವರ್ರಾಜುರವರ ಮನೆ. ಅವರು ರಾಜಮಹೇಂದ್ರಿಯ ಪಾಠಶಾಲೆಯೊಂದರಲ್ಲಿ ಉಪಾಧ್ಯಾಯರು. ವಿರೇಶಲಿಂಗಂ ಅವರ ಶಾಲೆಗೆ ಉಪನ್ಯಾಸ ಮಾಡಲು ಹೋದಂದಿನಿಂದ ಅವರ ಗೆಳೆತನ ದಿನದಿನಕ್ಕೆ ಬೆಳೆಯುತ್ತಾ ಹೋಗಿ ಅವರು ಆಪ್ತ ಗೆಳೆಯರಾದರು. ಬಸವರಾಜುರವರು ತಾವು ಬದುಕಿದಷ್ಟು ಕಾಲವೂ ಪಂತುಲುರವರ ಎಲ್ಲ ಕೆಲಸಗಳಲ್ಲಿಯೂ ಅವರ ಬಲಭುಜದಂತಿದ್ದರು.

ಉಪಾಧ್ಯಾಯ ವೃತ್ತಿ ಸ್ವತಂತ್ರವಾದುದು, ಯಾರ ಹಂಗಿಗೂ ಒಳಗಾದುದಲ್ಲ ಎಂದುಕೊಂಡಿದ್ದರು ವೀರೇಶಲಿಂಗಂ. ಆದರೆ ಈ ವೃತ್ತಿಯೂ ಪರತಂತ್ರವಾದುದೇ ಎಂಬ ಅರಿವಾಯಿತು ಇವರಿಗೆ. ಧವಳೇಶ್ವರದ ಉಪಾಧ್ಯಾಯ ವೃತ್ತಿಗೆ ರಾಜೀನಾಮೆ ಕೊಟ್ಟರು. ಸ್ವತಂತ್ರವಾಗಿ ಪತ್ರಿಕೋದ್ಯಮಿಯಾಗಿಯೂ ಲೇಖಕರಾಗಿಯೂ ಜೀವನ ನಡೆಸುವುದೆಂದು ನಿರ್ಧರಿಸಿದರು.

ಹೀಗೆ ಜೀವನ ನಡೆಸಬಹುದು ಎಂಬ ನಂಬಿಕೆ ಅವರಿಗಿರಲಿಲ್ಲ. ಆದರೆ ಇವರು ಪತ್ರಿಕೆಯಲ್ಲಿ ಬರೆದ ಲೇಖನಗಳನ್ನೂ ಇವರ ಕೃತಿಗಳನ್ನೂ ಮೆಚ್ಚಿಕೊಂಡವರಿದ್ದರು. ಇವರ ಪುಸ್ತಕಗಳು ಕೆಲವು ಪಠ್ಯಪುಸ್ತಕಗಳಾದವು. ಇವರು ರಚಿಸಿದ ವ್ಯಾಕರಣಕ್ಕೆ ಎರಡು- ಮೂರು ತಿಂಗಳಿನಲ್ಲಿ ಇನ್ನೂರು ರೂಪಾಯಿಗಳು ಬಂದವು. ’ನೀತಿ ಚಂದ್ರಿಕ ವಿಗ್ರಹ ತಂತ್ರಮು’ ಎನ್ನುವ ಪುಸ್ತಕಕ್ಕೆ ಸಾವಿರ ರೂಪಾಯಿಗಳ ಗೌರವ ಧನ ಬಂದಿತು.

ತಾವು ನಡೆಸುತ್ತಿದ್ದ ಪತ್ರಿಕೆಗಳನ್ನೂ ಮತ್ತು ಬರೆದ ಪುಸ್ತಕಗಳನ್ನು ಅಚ್ಚುಮಾಡುವುದಕ್ಕೆ ಒಂದು ಮುದ್ರಣಾಲಯವನ್ನು ಆರಂಭಿಸಲು ವೀರಶಲಿಂಗಂ ನಿಶ್ಚಯಿಸಿದರು. ಅವರು ಧವಳೇಶ್ವರದಿಂದ ರಾಜಮಹೇಂದ್ರಿಗೆ ಬರುವ ವೇಳೆಗೆ ಮುದ್ರಣಯಂತ್ರವೂ ಬಂದಿತ್ತು. ೧೮೭೬ನೇ ಇಸವಿ ಎಪ್ರಿಲ್ ತಿಂಗಳಿನಲ್ಲಿ ಮುದ್ರಣಾಲಯವನ್ನು ಅವರ ಮನೆಯಲ್ಲಿಯೇ ಸ್ಥಾಪಿಸಿದರು.

ಧವಳೇಶ್ವರದ ಕೆಲಸ ಬಿಟ್ಟು ಬಂದ ಮೇಲೆ ಮತ್ತೆ ಕೆಲಸಕ್ಕೆ ಸೇರಲು ಅವರಿಗೆ ಮನಸ್ಸಿರಲಿಲ್ಲ. ಆದರೆ ಅವರ ಸ್ನೇಹಿತರು ಬಲವಂತ ಮಾಡಿದರು. ರಾಜಮಹೇಂದ್ರಿಯ ಶಾಲೆಯಲ್ಲಿ ಎರಡನೆಯ ತರಗತಿಯ ತೆಲುಗು ಉಪಾಧ್ಯಾಯರಾಗಿ ೧೮೭೬ನೇ ಇಸವಿ ನವೆಂಬರ್ ತಿಂಗಳಿನಲ್ಲಿ ಸೇರಿದರು. ಸಂಬಳ ತಿಂಗಳಿಗೆ ೨೫ ರೂಪಾಯಿ. ಗವರ್ರಾಜುರವರೂ ಅದೇ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಇದರಿಂದ ಗವರ್ರಾಜು ಅವರ ಗೆಳೆತನ ಮತ್ತೆ ಲಭಿಸಿತು.

ಪತ್ರಿಕೋದ್ಯಮಿ ವೀರೇಶಲಿಂಗಂ

ವೀರೇಶಲಿಂಗಂ ಅವರನ್ನು ಆಧುನಿಕ ತೆಲುಗು ಪತ್ರಿಕೋದ್ಯಮದ ಸಂಸ್ಥಾಪಕ ಎಂದೇ ಕರೆಯುತ್ತಾರೆ. ಇದರ ಅರ್ಥ ತೆಲುಗು ಭಾಷೆಯಲ್ಲಿ ಇವರೇ ಮೊದಲು ಪತ್ರಿಕೆಯನ್ನು ಪ್ರಕಟಸಿದರು ಎಂದಲ್ಲ. ಇವರು ತಮ್ಮ ’ವಿವೇಕ ವರ್ಧಿನಿ’ಯನ್ನು ಆರಂಭಿಸುವುದಕ್ಕೆ ಮುಂಚೆಯೇ ತೆಲುಗು ಭಾಷೆಯಲ್ಲಿ ಕೆಲವು ಪತ್ರಿಕೆಗಳಿದ್ದವು. ಆದರೆ ಆಂಧ್ರದಲ್ಲಿ ಪತ್ರಿಕೆಯನ್ನು ಸಮಾಜವನ್ನು ತಿದ್ದುವ, ಜನತೆಯನ್ನು ಮೇಲೆತ್ತುವ ಧ್ಯೇಯಕ್ಕಾಗಿ ಮೊದಲು ಉಪಯೋಗಿಸಿದವರು ವೀರೇಶಲಿಂಗಂ. ಪತ್ರಿಕೋದ್ಯಮಕ್ಕೆ ಒಂದು ಸುಭದ್ರವಾದ ತಳಹದಿಯನ್ನು ಹಾಕಿ ಅದಕ್ಕೆ ಗೌರವ ಘನತೆಗಳು ದೊರಕುವಂತೆ ಮಾಡಿದವರು ಅವರೇ.

ಅವರೇ ಹೇಳಿರುವಂತೆ ಈ ಪತ್ರಿಕೆಯನ್ನು ಪ್ರಕಟಿಸುವುದರಲ್ಲಿ ಅವರ ಮುಖ್ಯ ಉದ್ದೇಶಗಳು ಎರಡು (೧) ದೇಶಾಭಿವೃದ್ಧಿ (೨) ಭಾಷಾಭಿವೃದ್ಧಿ. ಜನಗಳಲ್ಲಿದ್ದ ದುರಾಚಾರಗಳನ್ನೂ ಕೆಟ್ಟ ನಡತೆಗಳನ್ನೂ ತಿದ್ದಿ ಅವರನ್ನು ನೀತಿವಂತರನ್ನಾಗಿ ಮಾಡಲು ಶ್ರಮಿಸುವುದು: ಲಂಚ ನಿರ್ಮೂಲನೆ, ಸ್ತ್ರೀ ವಿದ್ಯಾಭ್ಯಾಸದ ಪರ ವಾದ, ಬಾಹ್ಯ ತೋರಿಕೆಗಿಂತ ಸದಾಚಾರ ಮುಖ್ಯ ಎನ್ನುವುದನ್ನು ಜನರಿಗೆ ತಿಳಿಸುವುದು- ಮುಂತಾದವು ’ವಿವೇಕ ವರ್ಧಿನಿ’ಯ ಕೆಲಸಗಳಲ್ಲಿ ಕೆಲವು.

ಆಗ ಪ್ರಚಾರದಲ್ಲಿದ್ದ ’ಆಂಧ್ರ ಭಾಷಾ ಸಂಜೀವಿನಿ’ ಪತ್ರಿಕೆಯಲ್ಲಿ ಸ್ತ್ರೀ ವಿದ್ಯಾಭ್ಯಾಸದ ವಿರೋಧವಾಗಿ ಲೇಖನಗಳು ಪ್ರಕಟವಾಗುತ್ತಿದ್ದವು. ವೀರೇಶಲಿಂಗಂರವರು ’ಪುರುಷಾರ್ಥ ಪ್ರದಾಯಿನಿ’ ಮುಂತಾದ ಪತ್ರಿಕೆಗಳಲ್ಲಿ ಇವುಗಳಿಗೆ ಉತ್ತರರೂಪವಾದ ಲೇಖನಗಳನ್ನು ಬರೆಯುತ್ತಿದ್ದರು. ಬೇರೆಬೇರೆ ಪತ್ರಿಕೆಗಳಲ್ಲಿ ಸ್ತ್ರೀ ವಿದ್ಯಾಭ್ಯಾಸದ ಪರವಾಗಿ ಬರೆಯುವುದರ ಬದಲು ತಮ್ಮದೇ ಆದ ಒಂದು ಪತ್ರಿಕೆಯಿರುವುದು ಒಳ್ಳೆಯದೆಂದು ಭಾವಿಸಿದರು. ಆದ್ದರಿಂದ ೧೮೭೪ನೇ ಇಸವಿ ಅಕ್ಟೋಬರ್ ತಿಂಗಳಿನಲ್ಲಿ ’ವಿವೇಕ ವರ್ಧಿನಿ’ ಎನ್ನುವ ಮಾಸಪತ್ರಿಕೆಯನ್ನು ಪ್ರಕಟಿಸಲಾರಂಭಿಸಿದರು.

ಇದು ನಾಲ್ಕು ದೊಡ್ಡ ಪುಟಗಳಿದ್ದ ಪತ್ರಿಕೆ. ಆಗ ರಾಜಮಹೇಂದ್ರಿಯಲ್ಲಿ ಮತ್ತು ಸಮೀಪದಲ್ಲಿ ಮುದ್ರಣ ಯಂತ್ರಗಳಿರಲಿಲ್ಲ. ಆದ್ದರಿಂದ ಪತ್ರಿಕೆಯನ್ನು ಮದರಾಸಿನಲ್ಲಿ ಮುದ್ರಿಸಿ ರಾಜಮಹೇಂದ್ರಿಯಿಂದ ಪ್ರಕಟಿಸುತ್ತಿದ್ದರು. ತೆಲುಗು ವಿಭಾಗದ ಜೊತೆಯಲ್ಲಿ ಒಂದು ಇಂಗ್ಲೀಷ್ ವಿಭಾಗವನ್ನು ತೆರೆದರು. ಮುಂದೆ ’ವಿವೇಕ ವರ್ಧಿನಿ’ ಪಕ್ಷಪತ್ರಿಕೆಯಾಯಿತು, ಎಂದರೆ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತಿತ್ತು.

’ವಿವೇಕ ವರ್ಧಿನಿ’ ಸಮಾಜದಲ್ಲಿ ಆಗ ಆಚರಣೆಯಲ್ಲಿದ್ದ ದುರ್ವ್ಯವಹಾರಗಳನ್ನು ಹೇಗೆ ಬಯಲಿಗೆಳೆದು ಸಮಾಜದ ಸೇವೆ ಮಾಡಿತು ಎನ್ನುವುದಕ್ಕೆ ಒಂದು ಉದಾಹರಣೆಯನ್ನು ಕೊಡಬಹುದು.

ಧೀರ ವೀರೇಶಲಿಂಗಂ

ಆಗಿನ ಕಾಲದಲ್ಲಿ ಲಂಚ ತೆಗೆದುಕೊಳ್ಳುವುದು ತುಂಬಾ ಸಾಮಾನ್ಯವಾಗಿತ್ತು. ಯಾವ ಮುಚ್ಚುಮರೆಯೂ ಇಲ್ಲದೆ ಸೇವಕನಿಂದ ಹಿಡಿದು ಮಂತ್ರಿಯವರೆಗೆ ಎಲ್ಲರೂ ಲಂಚ ಸ್ವೀಕರಿಸುತ್ತಿದ್ದರು. ಲಂಚ ತೆಗೆದುಕೊಳ್ಳದವನನ್ನು ಅನೇಕರು ಅಪ್ರಯೋಜಕ, ಬುದ್ಧಿಹೀನ ಎಂದು ತಿಳಿಯುತ್ತಿದ್ದರು. ಲಂಚ ತೆಗೆದುಕೊಳ್ಳುವವರಾಗಲೀ ಲಂಚ ಕೊಡುವವರಾಗಲೀ ಅದನ್ನು ತಪ್ಪೆಂದು ಭಾವಿಸುತ್ತಿರಲಿಲ್ಲ.

೧೮೭೮ರಲ್ಲಿ ರಾಜಮಹೇಂದ್ರಿಗೆ ಒಬ್ಬ ನ್ಯಾಯಾಧೀಶರು ಬಂದರು. ಈತನ ತಂಗಿಯ ಗಂಡ ಓರ್ವ ಪಬ್ಲಿಕ್ ಪ್ರಾಸಿಕ್ಯೂಟರ್‌ರ ಮಗ. ಇದರಿಂದ ನ್ಯಾಯಾಧೀಶರು ಮತ್ತು ಪ್ರಾಸಿಕ್ಯೂಟರು ಬಂಧುಗಳೂ ಮತ್ತು ಆಪ್ತ ಗೆಳೆಯರೂ ಆಗಿದ್ದರು. ಅಪರಾಧಗಳನ್ನು ಮಾಡಿದವರನ್ನು ಸರ್ಕಾರ ವಿಚಾರಣೆಗೆ ಒಳಗು ಮಾಡುತ್ತದೆ, ಅಲ್ಲವೇ ? ವಿಚಾರಣೆ ನಡೆಯುವಾಗ ಸರ್ಕಾರದ ಪರ ವಕೀಲರಿರುತ್ತಾರೆ. ಅವರಿಗೆ ಪಬ್ಲಿಕ್ ಪ್ರಾಸಿಕ್ಯೂಟರು ಎಂದು ಹೆಸರು. ಹೊಸ ನ್ಯಾಯಾಧೀಶರೂ ಪ್ರಾಸಿಕ್ಯೂಟರೂ ಒಂದಾಗಿ ನ್ಯಾಯಾಲಯದಲ್ಲಿಯೇ ನ್ಯಾಯವನ್ನು ಮಾರಾಟ ಮಾಡುತ್ತಿದ್ದರು. ಅವರು ಎಲ್ಲವನ್ನೂ ಆಹುತಿ ತೆಗೆದುಕೊಳ್ಳುವ ಅಗ್ನಿಯಂತೆ ಹಣವನ್ನು ನುಂಗುತ್ತಿದ್ದರು. ಇದಕ್ಕಾಗಿ ಒಂದು ಹೊಸ ವಾದದ ರೀತಿಯೇ ಬಳಕೆಗೆ ಬಂದಿತು. ವಾದಿಯ ಪರ ವಕೀಲ, “ಕಾನೂನಿನ ಒಂದುನೂರನೆಯ ನಿಯಮವನ್ನು ನೋಡಿ ನಮಗೆ ನ್ಯಾಯ ದೊರಕಿಸಬೇಕು ಸ್ವಾಮಿ” ಎಂದು ನ್ಯಾಯಾಧೀಶರಿಗೆ ಹೇಳಿದರೆ, ಪ್ರತಿವಾದಿಯ ವಕೀಲ, “ಮಹಾಸ್ವಾಮಿ, ಅದು ಕೆಲಸಕ್ಕೆ ಬರುವುದಿಲ್ಲ. ೧೫೦ ನೇ ನಿಯಮವನ್ನು ಗಮನಿಸಿ ನ್ಯಾಯವನ್ನು ನಿರ್ಧರಿಸಬೇಕು” ಎನ್ನುತ್ತಿದ್ದ. ನೂರನೆಯ ನಿಯಮ ಎಂದರೆ ೧೦೦ ರೂ. ಕೊಡುತ್ತೇನೆ ಎಂದೂ ನೂರೈವತ್ತನೆಯ ನಿಯಮ ಎಂದರೆ ಲಂಚ ೧೫೦ ರೂ. ಕೊಡುತ್ತೇನೆ ಎಂದೂ ಅರ್ಥ. ಇದರಿಂದ ವಕೀಲರು ಕಾನೂನು ಪುಸ್ತಕಗಳನ್ನು ಅಭ್ಯಾಸಮಾಡುವ ತೊಂದರೆಯೇ ತಪ್ಪಿತು ! ಯಾರು ಹೆಚ್ಚು ಹಣಕೊಟ್ಟು ಜಡ್ಜಿಯ ಮನ ಒಲಿಸುತ್ತಾರೆಯೋ ಅವರಿಗೆ ಜಯ. ಬಡವರು ಮೊಕದ್ದಮೆಯಲ್ಲಿ, ನ್ಯಾಯವನ್ನು ಪಡೆಯುವ ಮಾತು ಅತ್ಯಂತ ದೂರವಾಯಿತು. ವಿವರವಾಗಿ ಈ ವಿಷಯಗಳನ್ನು ವೀರೇಶಲಿಂಗಂ ತಮ್ಮ ’ವಿವೇಕ ವರ್ಧಿನಿ’ಯಲ್ಲಿ ಬರೆದರು. ನ್ಯಾಯಾಧೀಶ, ಪ್ರಾಸಿಕ್ಯೂಟರ್- ಅವರುಗಳೇ ಲಂಚ ತೆಗೆದುಕೊಳ್ಳುತ್ತಿದ್ದಾರೆ, ಅನ್ಯಾಯ ಮಾಡುತ್ತಿದ್ದಾರೆ, ಪ್ರಜೆಗಳನ್ನು ಗೋಳು ಹೊಯ್ದುಕೊಳ್ಳುತ್ತಿದ್ದಾರೆ ಎಂದು ಪತ್ರಿಕೆಯಲ್ಲಿ ಬರೆಯಲು ಧೈರ್ಯ ಬೇಕು. ಅಷ್ಟೇ ಅಲ್ಲ, ಲಂಚ ತೆಗೆದುಕೊಳ್ಳುವವರೂ ಬುದ್ಧಿವಂತರೇ ! ತಾವು ಅನ್ಯಾಯ ಮಾಡುವಾಗಲೂ ಬುದ್ಧಿವಂತಿಕೆಯಿಂದ ಮಾಡುತ್ತಾರೆ. ಅವರು ತಪ್ಪು ಮಾಡಿದರು ಎಂದು ತೋರಿಸಬೇಕಲ್ಲವೇ ? ಅದಕ್ಕೆ ಸಾಕ್ಷ್ಯ ಬೇಕು. ಸಾಕ್ಷ್ಯ ಯಾರು ಹುಡುಕಬೇಕು ? ತಪ್ಪು ಮಾಡಿದರು ಎಂದು ಹೇಳಿದವರೇ ! ಆದ್ದರಿಂದ ವೀರೇಶಲಿಂಗಂ ಒಬ್ಬ ಪತ್ತೇದಾರನೂ ಆಗಬೇಕಾಯಿತು.

ನ್ಯಾಯಾಧೀಶರು ಪ್ರಾಸಿಕ್ಯೂಟರ್ ಅವರಿಂದ ತೀರ್ಪನ್ನು ಬರೆಸಿ ಅದರ ಶುದ್ಧ ಪ್ರತಿ ಮಾಡಿ ತಾವು ತೀರ್ಪನ್ನು ಓದುತ್ತಿದ್ದರು. ಶುದ್ಧ ಪ್ರತಿಯಾದಮೇಲೆ ಕರಡು ಪ್ರತಿಯನ್ನು ನ್ಯಾಯಾಧೀಶರು ಹರಿದು, ಆ ಕಾಗದದ ಚೂರುಗಳನ್ನು ತಮ್ಮ ಮನೆಯ ಮುಂದಿನ ತೊಟ್ಟಿಗೆ ಎಸೆಯುತ್ತಿದ್ದರು. ಪ್ರಾಸಿಕ್ಯೂಟರ ಮನೆಯ ಬಳಿ ಇದ್ದ ವಕೀಲರೊಬ್ಬರಿಂದ ಈ ವಿಷಯ ವಿರೇಶಲಿಂಗಂ ಅವರಿಗೆ ತಿಳಿಯಿತು. ಹಣಕೊಟ್ಟು ಆ ಕರಡು ಪ್ರತಿಗಳ ಹರಿದ ಹಾಳೆಗಳನ್ನು ಆ ವಕೀಲರ ಮೂಲಕ ತರಿಸಿಕೊಂಡರು. ವಕೀಲರಿಂದ ತರಿಸಿದ ಕಾಗದಗಳನ್ನು ಜಾಗರೂಕತೆಯಿಂದ ಜೋಡಿಸಿದಾಗ ಒಂದು ತೀರ್ಪಿಗೆ ಸಂಬಂಧಿಸಿದ ಪೂರ್ತಿ ಹಾಳೆಗಳು ದೊರೆತವು.

ಈ ವ್ಯಾಜ್ಯದಲ್ಲಿ ಸೋತು ಅನ್ಯಾಯವಾದ ಮನುಷ್ಯನನ್ನು ಹುಡುಕಿ ಅವನನ್ನು ವೀರೇಶಲಿಂಗಂ ವಿಚಾರಿಸಿದರು. “ನಾನು ಬಡವ. ಪ್ರಾಸಿಕ್ಯೂಟರು ಕೇಳಿದಷ್ಟು ಹಣ ನನ್ನಲ್ಲಿರಲಿಲ್ಲ. ಅಷ್ಟು ಹಣವನ್ನ ಪ್ರತಿಕಕ್ಷಿ ಕೊಟ್ಟ. ಜಯ ಅವನದಾಯಿತು” ಎಂದು ಆತ ಹೇಳಿದ. ಈ ವಿವರಗಳನ್ನು ಅರ್ಜಿಯಲ್ಲಿ ಅವನ ಪರವಾಗಿ ಬರೆದು ಕಳುಹಿಸಿದರು. ಸಾಕ್ಷ್ಯಕ್ಕೆ ಅದರೊಡನೆ ತೀರ್ಪಿನ ಹರಿದ ಹಾಳೆಗಳನ್ನು ಕಳುಹಿಸಿದರು. ಈ ಸಮಾಚಾರ ತಿಳಿದಕೂಡಲೇ ಪ್ರಾಸಿಕ್ಯೂಟರು ಆ ಮನುಷ್ಯನಿಗೆ ಆ ವ್ಯಾಜ್ಯದಲ್ಲಿ ಸಿಕ್ಕಬೇಕಾಗಿದ್ದ ಎರಡರಷ್ಟು ಹಣ ಕೊಟ್ಟು ಅರ್ಜಿಯನ್ನು ಹಿಂದಕ್ಕೆ ಪಡೆದರು.

ಈ ವ್ಯಾಜ್ಯದಲ್ಲಿ ರಾಮಯ್ಯನೆಂಬವನು ಒಬ್ಬ ಸಾಕ್ಷಿ. ಈ ರಾಮಯ್ಯನ ಕಡೆಯಿಂದ ವೀರೇಶಲಿಂಗಂ ಅರ್ಜಿ ಹಾಕಿಸಿದರು: ಪ್ರಾಸಿಕ್ಯೂಟರು ಈ ವ್ಯಾಜ್ಯದ ತೀರ್ಪು ಬರೆದದ್ದಕ್ಕೆ ನನ್ನಲ್ಲಿ ಆಧಾರವಿದೆ, ಕೆಲವು ಭಾಗಗಳನ್ನು ನಾನು ಹಾಜರುಪಡಿಸಬಲ್ಲೆ ಎಂದು. ಈ ಮಧ್ಯೆ ವಿರೇಶಲಿಂಗಂ ಕಷ್ಟಪಟ್ಟು ಐದು ಮೊಕದ್ದಮೆಗಳ ಕರಡು ತೀರ್ಪಿನ ಹಾಳೆಗಳನ್ನು ಕಲೆಹಾಕಿದರು. ಈ ವಿಷಯ ತಿಳಿದ ಪ್ರಾಸಿಕ್ಯೂಟರು ಅವುಗಳನ್ನು ಕೊಟ್ಟರೆ ಐದು ಸಾವಿರ ರೂಪಾಯಿ ಕೊಡುವುದಾಗಿ ಆಸೆ ತೋರಿದರು. ಆದರೆ ಅದನ್ನು ಹಿಂದಿರುಗಿಸದೆ ವೀರೇಶಲಿಂಗಂ ಲಂಚದ ವಿರುದ್ಧ ಹೋರಾಟ ನಡೆಸಲು ದೃಢಸಂಕಲ್ಪ ಮಾಡಿದರು. ಈ ತೀರ್ಪಿನ ಹಾಳಗಳು ತಮ್ಮಲ್ಲಿದ್ದರೆ ತೊಂದರೆ ಎಂದು ತಿಳಿದು ನಾಲ್ಕು ಮೊಕದ್ದಮೆಗಳ ತೀರ್ಪುಗಳನ್ನು ಒಂದು ಚೀಲದಲ್ಲಿ ಹಾಕಿ ಮೊಹರು ಮಾಡಿ ಜಿಲ್ಲಾ ನ್ಯಾಯಾಧೀಶರ ಸ್ವಂತ ಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಲು ಕಳುಹಿಸಿದರು. ಇನ್ನೊಂದು ಮೊಕದ್ದಮೆಯ ತೀರ್ಪನ್ನು ತಮ್ಮಲ್ಲಿಯೇ ಭದ್ರವಾಗಿ ಇಟ್ಟುಕೊಂಡರು.

ಜೂನ್ ೨೬, ರಾಮಯ್ಯನ ಅರ್ಜಿ ವಿಚಾರಣೆಯ ದಿನ. ಪಾಸಿಕ್ಯೂಟರ್ ನ್ಯಾಯಾಲಯದ ಶಿರಸ್ತೇದಾರನ ಸಹಾಯದಿಂದ ಅದೇ ದಿನ ಬೆಳಿಗ್ಗೆ ಜಿಲ್ಲಾ ನ್ಯಾಯಾಧೀಶರ ಪೆಟ್ಟಿಗೆಯಲ್ಲಿದ್ದ ಕರಡು ಪ್ರತಿಗಳನ್ನು ಬದಲಿಸಿದರು. ಆದರೆ ಇದನ್ನು ವೀರೇಶಲಿಂಗಂ ಮತ್ತು ಅವರ ಸ್ನೇಹಿತರು ಕಂಡರು. ವೀರೇಶಲಿಂಗಂ ಕಾಕಿನಾಡಕ್ಕೆ ಹೋಗಿ ಪೋಲಿಸ್ ಅಧಿಕಾರಿಗಳ ಸಹಾಯವನ್ನು ಪಡೆದರು. ಇದರಿಂದ ಶಿರಸ್ತೇದಾರ ಮತ್ತು ಅವನಿಗೆ ಸಹಾಯ ಮಾಡಿದ ಗುಮಾಸ್ತೆ ಇವರನ್ನು ಬಂಧಿಸಲಾಯಿತು. ಆದರೂ ಕೃಷ್ಣ ಜಿಲ್ಲೆಯ ನ್ಯಾಯಾಲಯದಲ್ಲಿ ವೀರೇಶಲಿಂಗಂ ಕೊಟ್ಟ ಕಾಗದಗಳು ಯಾವುದು ಎನ್ನುವುದನ್ನು ಯಾರೂ ನೋಡಿಲ್ಲ. ಶಿರಸ್ತೇದಾರರು ಇದನ್ನು ಬದಲಾಯಿಸಿದರು ಎಂದು ಹೇಳಲು ಸಾಕಷ್ಟು ಆಧಾರಗಳಿಲ್ಲ. ಶಿರಸ್ತೇದಾರರು ನಿರ್ದೋಷಿ ಎಂದು ತೀರ್ಪಿತ್ತರು. ಶಿರಸ್ತೇದಾರರ ಬಿಡುಗಡೆಯಾಯಿತು.

’ವಿವೇಕ ವರ್ಧಿನಿ’ಯಲ್ಲಿ ಪ್ರಕಟವಾದ ಲೇಖನಗಳಿಂದ ಸರ್ಕಾರ ನ್ಯಾಯಾಧೀಶರ ಮತ್ತು ಪ್ರಾಸಿಕ್ಯೂಟರ ವಿಚಾರಣೆ ಮಾಡಲು ತೀರ್ಮಾನಿಸಿತು. ಜಿಲ್ಲಾ ನ್ಯಾಯಾಧೀಶರು ವಿಚಾರಣೆ ನಡೆಸಿದರು.

ವಿರೇಶಲಿಂಗಂ ತಮ್ಮ ಬಳಿಯಿದ್ದ ತೀರ್ಪನ್ನು ಜಿಲ್ಲಾ ನ್ಯಾಯಾಧೀಶರಿಗೆ ತೋರಿಸಿದರು. ಆ ಮೊಕದ್ದಮೆ ಎಲ್ಲ ಕಾಗದ ಪತ್ರಗಳನ್ನು ಕೆಳ ನ್ಯಾಯಾಲಯದಿಂದ ತರಿಸಲಾಯಿತು. ಆ ಮೊಕದ್ದಮೆ ತೀರ್ಪು ವೀರೇಶಲಿಂಗಂ ಬಳಿ ಇದ್ದ ಕರಡು ಪ್ರತಿಯ ಶುದ್ಧ ಪ್ರತಿಯಾಗಿತ್ತು. ಕರಡು ಪ್ರತಿಯನ್ನು ಬರೆದವರು ಪ್ರಾಸಿಕ್ಯೂಟರು ಎನ್ನುವುದರಲ್ಲಿ ಯಾವ ಅನುಮಾನವು ಇರಲಿಲ್ಲ. ಅವರು ಅದೇ ದಿನ ವಿಷ ಸೇವಿಸಿ ಪ್ರಾಣ ಬಿಟ್ಟರು. ಶಿರಸ್ತೇದಾರರಿಗೂ ರೆಕಾರ್ಡು ಗುಮಾಸ್ತೆಗೂ ಕೆಲಸ ಹೋಯಿತು. ಲಂಚ ತಿಂದ ನ್ಯಾಯಾಧೀಶರು ಅಕಸ್ಮಾತ್ ಮರಣ ಹೊಂದಿದರು. ಇದರಿಂದ ’ವಿವೇಕ ವರ್ಧಿನಿ’ಯ ಹೆಸರು ಲಂಚ ತೆಗೆದುಕೊಳ್ಳುವವರಿಗೆ ಭಯಂಕರವಾಯಿತು. ಅನಂತರ ವೀರೇಶಲಿಂಗಂ ವಿವೇಕ ವರ್ಧಿನಿ’ಯಲ್ಲಿ ಹೀಗೆ ಬರೆದರು : “ಈಶ್ವರ ಬಲದ ಮುಂದೆ, ಸತ್ಯದ ಬಲದ ಮುಂದೆ ಮನುಷ್ಯ ಬಲ, ಧನಬಲಗಳು ಕೆಲಸಕ್ಕೆ ಬರುವುದಿಲ್ಲ. ನಾವು ಈ ಪತ್ರಿಕಾ ಪ್ರಕಟಣೆಯನ್ನು ಕೈಗೊಂಡಿರುವುದು ದೇಶಕ್ಕೂ ಪ್ರಜೆಗಳಿಗೂ ಕ್ಷೇಮವಾಗುವುದಕ್ಕೆ, ಹಣ ಗಳಿಕೆಗಲ್ಲ. ಕೆಲವರ ವಿರೋಧ ಗಳಿಸಿದರೂ ಪ್ರಜೆಗಳ ಅಭ್ಯುದಯದಲ್ಲಿ ಸಹಭಾಗಿಗಳಾದೆವಲ್ಲ ಎನ್ನುವ ಸಂತೋಷ ನಮ್ಮದು.”

ತೀರ್ಪನ್ನು ನ್ಯಾಯಾಧೀಶರಿಗೆ ತೋರಿಸಿದರು.

೧೮೭೮ನೇ ಸೆಪ್ಟೆಂಬರ್‌ನಲ್ಲಿ ಇವರ ತಾಯಿ ದೈವಾಧೀನರಾದರು. ವೀರೇಶಲಿಂಗಂ ಅರಿಗೆ ಬಹಳ ದುಃಖವಾಯಿತು. ಇದೇ ಸಮಯದಲ್ಲಿ ಆರೋಗ್ಯವಿಲ್ಲದೆ ಅನೇಕ ಕಷ್ಟಗಳಿಗೆ ಸಿಕ್ಕಿದರು. ಜನ ಇದು ದೊಡ್ಡವರೊಡನೆ ವೈರ ಕಟ್ಟಿಕೊಂಡದ್ದರ ಫಲ ಎಂದರು. ಆದರೆ ಇದಾವುದರಿಂದಲೂ ವೀರೇಶಲಿಂಗಂ ವಿಚಲಿತರಾಗಲಿಲ್ಲ. ತಾವು ಸತ್ಯವೆಂದು ನಂಬಿದ್ದನ್ನು ಕಡೆತನಕ ಹಿಡಿದು ಸಾಧಿಸಿದರು.

ವೀರೇಶಲಿಂಗಂ ’ವಿವೇಕ ವರ್ಧಿನಿ’ಯೇ ಅಲ್ಲದೆ ಅನೇಕ ಪತ್ರಿಕೆಗಳನ್ನು ಸಂಪಾದಿಸಿ ಪ್ರಕಟಿಸುತ್ತಿದ್ದರು. ಅವುಗಳಲ್ಲಿ ’ಹಾಸ್ಯಸಂಜೀವಿನಿ’- ಹಾಸ್ಯಕ್ಕೆ ಮೀಸಲಾದ ಪತ್ರಿಕೆ, ’ಸತೀ ಹಿತ ಬೋಧಿನಿ’- ಹೆಂಗಸರ ಅಭ್ಯುದಯಕ್ಕೆ ಮೀಸಲಾದದ್ದು ಮತ್ತು ’ಸತ್ಯವಾದಿನಿ’ ಎನ್ನುವುದು ಸತ್ಯವನ್ನು ಎತ್ತಿತೋರುವುದಕ್ಕೆ ಮುಡಿಪಾದದ್ದು- ಇವು ಮುಖ್ಯವಾದವು.

ಲೇಖಕ ವೀರೇಶಲಿಂಗಂ

ಇವರು ರಚಿಸಿರುವ ಪುಸ್ತಕಗಳು ೧೨೦ ಕ್ಕೂ ಹೆಚ್ಚಿಗೆ ಇವೆ. ತಾವು ೧೮೯೮ ರ ವರೆವಿಗೂ ರಚಿಸಿದ ಕೃತಿಗಳನ್ನು ಸ್ವತಃ ತಾವೇ ಹತ್ತು ದೊಡ್ಡ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರದಲ್ಲಿಯೂ ಇವರು ರಚನೆ ಮಾಡಿದ್ದಾರೆ. ಇವರು ಕವಿತೆಗಳನ್ನು ರಚಿಸಿದ್ದಾರೆ. ಕಾದಂಬರಿಗಳನ್ನು ಬರೆದಿದ್ದಾರೆ. ನಾಟಕ ಪ್ರಹಸನಗಳನ್ನಂತೂ ಹೇರಳವಾಗಿ ರಚಿಸಿ ಜನಮನವನ್ನು ಆಕರ್ಷಿಸಿ ಸಮಾಜ ಸುಧಾರಣೆಗೆ ಬಳಸಿಕೊಂಡಿದ್ದಾರೆ. ಜ್ಞಾನಾರ್ಜನೆಗೆ ಉಪಯೋಗವಾಗುವ ವಿಜ್ಞಾನದ ಕೃತಿಗಳನ್ನು ರಚಿಸಿದ್ದಾರೆ. ಮಕ್ಕಳಿಗಾಗಿಯೂ ಸ್ತ್ರೀಯರಿಗಾಗಿಯೂ ಇವರು ಹಲವಾರು ಕೃತಿಗಳನ್ನು ಕೊಟ್ಟಿದ್ದಾರೆ. ಇವುಗಳಲ್ಲಿ ವೈವಿಧ್ಯವನ್ನೂ ಅವರ ಪ್ರತಿಭೆಯನ್ನೂ ನಾವು ಕಾಣಬಹುದು.

’ರಾಜಶೇಖರ ಚರಿತ್ರೆ’ ಎನ್ನುವ ಕಾದಂಬರಿಯನ್ನು ಇಂಗ್ಲಿಷ್ ಕಾದಂಬರಿಯ ಆಧಾರದ ಮೇಲೆ ಬರೆದರು. ಇದು ಮೊದಲು ’ವಿವೇಕ ವರ್ಧಿನಿ’ಯಲ್ಲಿ ಪ್ರಕಟವಾಯಿತು. ’ರಾಜಶೇಖರ ಚರಿತ್ರೆ’ಯನ್ನು ಪತ್ರಿಕೆಗಳೂ ಜನರೂ ಹೊಗಳಿದರು.

ವೀರೇಶಲಿಂಗಂ ನಾಟಕಕಾರರಾಗಿ ತುಂಬ ಪ್ರಸಿದ್ಧರಾಗಿದ್ದಾರೆ. ಇವರು ನಾಟಕಗಳನ್ನು ಸಾಮಾಜಿಕ ಸುಧಾರಣೆಗಾಗಿ ಉಪಯೋಗಿಸುತ್ತಿದ್ದರು. ಹಲವಾರು ಸಾಮಾಜಿಕ ಮತ್ತು ಪೌರಾಣಿಕ ನಾಟಕಗಳನ್ನು ರಚಿಸಿದ್ದಾರೆ. ಸಂಸ್ಕೃತದಿಂದ ಮತ್ತು ಇಂಗ್ಲಿಷಿನಿಂದ ಹಲವಾರು ನಾಟಕಗಳನ್ನು ಇವರು ಅನುವಾದ ಮಾಡಿದರು.

ತೆಲುಗಿನಲ್ಲಿ ವಿಜ್ಞಾನದ ಪುಸ್ತಕಗಳನ್ನು ಬರದವರಲ್ಲಿ ವೀರೇಶಲಿಂಗಂ ಅವರೇ ಮೊದಲಿಗರು.

ತೆಲುಗು ಸಾಹಿತ್ಯದ ಮೊಟ್ಟಮೊದಲ ಚರಿತ್ರೆಯನ್ನು ಬರೆದವರು ಇವರೇ. ಇವರ ಕೃತಿಗಳಲ್ಲೆಲ್ಲಾ ಈ ’ಆಂಧ್ರ ಕವುಲ ಚರಿತ್ರಮು’ ಅತ್ಯಂತ ಮಹತ್ವಪೂರ್ಣವಾದ ಗ್ರಂಥ. ಇದರಲ್ಲಿ ಆರಂಭದಿಂದ ಇತ್ತೀಚಿನವರೆವಿಗೂ ಇರುವ ೨೦೦ಕ್ಕೂ ಹೆಚ್ಚು ಜನ ಕವಿಗಳ ವಿಚಾರವನ್ನು ಪ್ರಮಾಣ ಪೂರ್ವಕವಾಗಿ ತಿಳಿಸಿದ್ದಾರೆ. ಯಾವ ವಿಷಯದ ಚರಿತ್ರೆಯನ್ನೇ ಬರೆಯಲು, ಖಚಿತವಾಗಿ ತಿಳಿದುಕೊಂಡು ಬರೆಯಬೇಕು ಎಂದು ತೋರಿಸುವುದಕ್ಕೆ ಇದು ಮೇಲ್ಪಂಕ್ತಿಯಾಯಿತು.

’ಸ್ವೀಯ ಚರಿತಮು’ ವೀರೇಶಲಿಂಗಂ ಬರೆದಿರುವ ಅವರದೇ ಜೀವನ ಚರಿತ್ರೆ. ಇದು ತೆಲುಗು ಭಾಷೆಯ ಮೊದಲನೆಯ ಆತ್ಮಚರಿತ್ರೆ. ಇದರಲ್ಲಿ ಯಾವ ಮುಚ್ಚುಮರೆಯೂ ಇಲ್ಲದೆ ತಮ್ಮ ಜೀವನದ ಘಟನೆಗಳನ್ನು ವಿವರಿಸಿದ್ದಾರೆ. ತಮ್ಮ ದೌರ್ಬಲ್ಯಗಳನ್ನು ಕುರಿತು ಮಾತನಾಡಿದ್ದಾರೆ. ತಮ್ಮ ಸಾಧನೆಗಳನ್ನು ವಿವರಿಸಿ ಸಂತೋಷಪಟ್ಟಿದ್ದಾರೆ. ಆದರೆ ಎಲ್ಲಿಯೂ ಸತ್ಯಕ್ಕೆ ಅಪಚಾರವಾಗುವಂತೆ ಬರೆದಿಲ್ಲ.

ಸಮಾಜ ಸುಧಾರಕ

ವೀರೇಶಲಿಂಗಂ ಮಾಡಿದ ಬಹು ದೊಡ್ಡ, ಧೈರ್ಯದ ಕೆಲಸವೆಂದರೆ ಸುತ್ತ ಸಮಾಜದಲ್ಲಿ ಕಂಡ ತಪ್ಪುಗಳನ್ನು ನಿರ್ಭಯವಾಗಿ ತೋರಿಸಿದ್ದು: ಸರಿಪಡಿಸಲು ಪ್ರಯತ್ನಿಸಿದ್ದು. ನೂರಾರು ವರ್ಷಗಳಿಂದ ಬಂದ ಪದ್ಧತಿಗಳು ತಪ್ಪು ಎಂದರೆ ಅನೇಕ ಜನಕ್ಕೆ ಸಿಟ್ಟು ಬರುತ್ತದೆ. ಹಿಂದಿನ ಪದ್ಧತಿಗಳಲ್ಲಿ ಗೌರವ ಇರುವವರು ಕೆಂಡ ಆಗುತ್ತಾರೆ, ತಪ್ಪು ತೋರಿಸಿದವರ ಮೇಲೆ ಬೀಳುತ್ತಾರೆ, ಅಲ್ಲವೆ ? ಅವರ ಕಾಲದ ಸಮಾಜದ ಸ್ಥಿತಿಗತಿಗಳನ್ನು ತಿಳಿದುಕೊಂಡರೆ ವೀರೇಶಲಿಂಗಂ ಅವರು ಸಮಾಜ ಸುಧಾರಕರಾಗಿ ಮಾಡಿದ ಕೆಲಸಗಳ ಪರಿಚಯವಾಗುತ್ತವೆ.

ಎರಡು-ಮೂರು ವರ್ಷಕ್ಕೇ ಹುಡುಗಿಯ ಮದುವೆ ಎಂದರೆ ಎಷ್ಟು ಅನ್ಯಾಯ ! ಹಾಗೆಯೇ ಹುಡುಗಿಯರ ಇಷ್ಟವನ್ನೇ ಕೇಳದೆ, ಹಣ ತೆಗೆದುಕೊಂಡು ಅವರನ್ನು ಯಾರಿಗಾದರೂ ಮಾರಿಬಿಡುವುದು. ಇಲ್ಲವೇ ತುಂಬಾ ವಯಸ್ಸಾದವರಿಗೆ ಚಿಕ್ಕ ಹುಡುಗಿಯರನ್ನು ಮದುವೆ ಮಾಡಿಕೊಡುವುದು ಇಂತಹ ಪರಿಸ್ಥಿತಿ. ಹೆಂಗಸೊಬ್ಬಳ ಗಂಡ ತೀರಿಕೊಂಡರೆ ಅವಳನ್ನು ಕಸದಂತೆ, ಪ್ರಾಣಿಯಂತೆ ಕಾಣುವುದು. ಅವಳು ತಲೆಗೂದಲನ್ನು ತೆಗೆಸಬೇಕು: ಒಳ್ಳೆಯ ಬಟ್ಟೆಗಳನ್ನು ಹಾಕಿಕೊಳ್ಳಬಾರದು: ಹಬ್ಬ, ಮದುವೆಯಂತಹ ಸಂತೋಷ ಸಮಾರಂಭಗಳಿಂದ ದೂರವಿರಬೇಕು- ಹೀಗೆ ಶಿಕ್ಷೆ ಕೊಡುತ್ತಿದ್ದರು. ಅವರ ಜೀವನವೇ ಗೋಳಾಗುತ್ತಿತ್ತು. ಹೆಂಗಸರು ಕಲಿಯಬಾರದು, ಶಾಲೆಗೆ ಹೋಗಬಾರದು. ಹೆಂಗಸರು ವಿದ್ಯಾಭ್ಯಾಸ ಮಾಡಿದರೆ ಸಮಾಜಕ್ಕೆ ಕೇಡು ಎನ್ನುವುದು ಆಗ ಬಹುಜನರ ನಂಬಿಕೆ.

ವಿಧವಾ ವಿವಾಹ

ಆಗಿನ ಸಮಾಜವು ವಿಧವೆಯರು ಎರಡನೆಯ ಬಾರಿ ಮದುವೆಯಾಗದೆ ಎಷ್ಟೇ ಕೆಟ್ಟ ರೀತಿಯಲ್ಲಿ ಬದುಕಿದರೂ ಸುಮ್ಮನಿರುತ್ತಿತ್ತು. ಆದರೆ ಅವರು ಮದುವೆಯಾಗಿ ಗೌರವದ ಜೀವನ ನಡೆಸುವುದಕ್ಕೆ ಅವಕಾಶ ಕೊಡುತ್ತಿರಲಿಲ್ಲ. ಗಂಡನನ್ನು ಕಳೆದುಕೊಂಡವಳಿಗೆ ಮತ್ತೆ ಮದುವೆಯೆಂದರೆ ಮಹಾಪಾಪ ಎಂದು ಜನ ತಿಳಿದುಕೊಂಡಿದ್ದರು.

ವಿಧವೆಯರ ಬಾಳಿನ ಗೋಳನ್ನು ಕಂಡು ವೀರೇಶಲಿಂಗಂಗೆ ದುಃಖವಾಯಿತು; ಸಮಾಜದ ಅನ್ಯಾಯ ಕಂಡು ಕೋಪವಾಯಿತು. ಭಾಷಣಗಳಲ್ಲಿ, ಲೇಖನಗಳಲ್ಲಿ ಕರುಣೆ ಹುಟ್ಟುವಂತೆ ವಿಧವೆಯರ ದುರವಸ್ಥೆಯನ್ನು ವರ್ಣಿಸಿದರು. ವಿಧವಾ ವಿವಾಹವನ್ನು ಸಮರ್ಥಿಸಿದರು. ಅನೇಕ ವಿಧವಾ ವಿವಾಹಗಳನ್ನು ಮಾಡಿಸಿದರು.

ಇವರ ಪ್ರಯತ್ನದಿಂದ ೧೮೮೧ ರ ಡಿಸೆಂಬರ್ ೧೧ ರಂದು ರಾಜಮಹೇಂದ್ರಿಯಲ್ಲಿ ವೀರೇಶಲಿಂಗಂ ಅವರ ಮನೆಯಲ್ಲಿ ಮೊದಲ ವಿಧವಾ ವಿವಾಹ ನಡೆಯಿತು. ಇದಾದ ನಾಲ್ಕನೆಯ ದಿನವೇ ಎರಡನೇ ವಿಧವಾ ವಿವಾಹ ಜರುಗಿತು. ಈ ಇಬ್ಬರು ನವದಂಪತಿಗಳನ್ನು ಆ ಪಟ್ಟಣದಲ್ಲಿ ಅತ್ಯಂತ ವೈಭವದಿಂದ ಮೆರವಣಿಗೆ ಮಾಡಿದರು. ಹೀಗೆಯೇ ಅನೇಕ ಮದುವೆಗಳು ಒಂದಾದಮೇಲೊಂದು ನಡೆದವು.

ವೀರೇಶಲಿಂಗಂ ಬಹಳ ವಿರೋಧವನ್ನು ಎದುರಿಸಬೇಕಾಯಿತು. ಕೆಲವರು ಅವರಿಗೆ ಬಹಿಷ್ಕಾರ ಹಾಕುವುದಾಗಿ ಹೆದರಿಸಿದರು. ಕೆಲವರು ಇವರನ್ನು ನ್ಯಾಯಾಲಯದ ಮೆಟ್ಟಿಲು ಹತ್ತಿಸಲು ಪ್ರಯತ್ನಿಸಿದರು. ಇವರನ್ನು ಹೊಡೆಯಲೂ ಅನೇಕ ಸಲ ಪ್ರಯತ್ನಿಸಿದರು. ಆದರೆ ಇದಾವುದಕ್ಕೂ ಜಗ್ಗಲಿಲ್ಲ ಪಂತುಲು. ವಿವಾಹವಾದ ದಂಪತಿಗಳಿಗೆ ಇರಲು ಮನೆಯನ್ನೂ ಜೀವನ ಸಾಗಿಸಲು ಅನೇಕ ಅನುಕೂಲಗಳನ್ನೂ ತಮ್ಮ ಸ್ವಂತ ವೆಚ್ಚದಿಂದ ಮಾಡಿಕೊಡುತ್ತಿದ್ದರು ವೀರೇಶಲಿಂಗಂ. ಈಶ್ವರಚಂದ್ರ ವಿದ್ಯಾಸಾಗರರೂ ಸೇರಿದಂತೆ ಅನೇಕರು ಇವರನ್ನು ಅಭಿನಂದಿಸಿ ಪತ್ರಗಳನ್ನು ಬರೆದರು.

ವಿಧವಾ ಗೃಹಗಳನ್ನು ಸ್ಥಾಪಿಸುವುದು, ಅನಾಥ ಹುಡುಗರಿಗೆ ಸಂರಕ್ಷಣಾಲಯಗಳನ್ನು ನಡೆಸುವುದು, ಪಾಠಶಾಲೆಗಳನ್ನು ತೆರೆಯುವುದು ಮತ್ತು ಈ ಸಂಸ್ಥೆಗಳು ಸತತವಾಗಿ ತಮ್ಮ ಕೆಲಸ ಸಾಗಿಸಿಕೊಂಡು ಹೋಗಲು ವ್ಯವಸ್ಥೆ ಮಾಡುವುದು  ಈ ಉದ್ದೇಶಗಳಿಗಾಗಿ ‘ಹಿತಕಾರಿಣಿ ಸಮಾಜ’ ವನ್ನು ಸ್ಥಾಪಿಸಿದರು. ಈ ಸಮಾಜಕ್ಕೆ ತಮ್ಮ ಎಲ್ಲ ಹಣವನ್ನೂ ಮತ್ತು ಆಸ್ತಿಯನ್ನೂ ಬಿಟ್ಟರು. ಇವುಗಳ ಮೊತ್ತ ಸುಮಾರು ೪೩,೫೦೦ ರೂಪಾಯಿಗಳು.

ಕಷ್ಟದಲ್ಲಿರುವ ವಿಧವೆಯರಿಗೆ ಸಹಾಯ ಮಾಡಬೇಕೆಂದು ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಇದೇ ’ವಿತಂತು ಶರಣಾಲಯ’. ಇದಕ್ಕಾಗಿ ತಾವೇ ೨,೫೦೦ ರೂಪಾಯಿ ಖರ್ಚುಮಾಡಿ ಒಂದು ತೋಟವನ್ನು ಕೊಂಡರು. ಅನಂತರ ೬೦೦ ರೂಪಾಯಿ ಕೊಟ್ಟು ಪಕ್ಕದ ತೋಟವನ್ನೂ ಕೊಂಡರು. ಇವರ ಶಿಷ್ಯರೂ ಅಭಿಮಾನಿಗಳೂ ಆದ ಒಬ್ಬರು ಈ ಸ್ಥಳದಲ್ಲಿ ವಿತಂತು ಶರಣಾಲಯಕ್ಕೆ ಕಟ್ಟಡವನ್ನು ಕಟ್ಟಿಸಿಕೊಟ್ಟರು.

ಆಸ್ತಿಕ ಪಾಠಶಾಲೆ

ಇವರು ೧೯೦೪ರಲ್ಲಿ ಕೆಲಸದಿಂದ ನಿವೃತ್ತರಾದರು. ಆಸ್ತಿಕ ಪಾಠಶಾಲೆಯನ್ನು ಸ್ಥಾಪಿಸಬೇಕೆಂದು ಆಸೆಪಟ್ಟಿದ್ದರು. ಅದರಂತೆಯೇ ನಿವೃತ್ತರಾದಮೇಲೆ ಇದಕ್ಕಾಗಿ ಅ ಸ್ನೇಹಿತರು ನಡೆಸುತ್ತಿದ್ದ ಶಾಲೆಯನ್ನು ತಮಗೆ ಒಪ್ಪಿಸುವಂತೆ ಕೇಳಿದರು. ಅವರು ಸಂತೋಷದಿಂದ ವೀರೇಶಲಿಂಗಂ ಅವರಿಗೆ ಅದನ್ನು ಕೊಟ್ಟರು. ಅದಕ್ಕಾಗಿ ಒಂದು ಸ್ಥಳ ಗೊತ್ತುಮಾಡಿ ಪ್ರೌಢಶಾಲೆಯನ್ನು ಆರಂಭಿಸಿದರು. ಈ ಶಾಲೆಗೆ ಇವರ ಅಭಿಮಾನಿಗಳಾದ ಪೀಠಾಪುರದ ರಾಜಾರವರು ೪೦ ಸಾವಿರ ರೂಪಾಯಿ ದಾನ ಮಾಡಿದರು. ೬೦ ಸಾವಿರದ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಯಿತು. ೧೯೧೧ ರ ನವೆಂಬರ್ ತಿಂಗಳಿನಲ್ಲಿ ಇದು ಪ್ರಾರಂಭವಾಯಿತು. ಇದರಲ್ಲಿ ಬಾಲಕರೊಡನೆ ಬಾಲಕಿಯರೂ ಕಲಿಯಬಹುದಾಗಿತ್ತು. ಹರಿಜನರಿಗೂ ಇದರಲ್ಲಿ ಪ್ರವೇಶದ ಅವಕಾಶವಿತ್ತು. ಹರಿಜನರು ಮತ್ತು ಬಾಲಕಿಯರು ಶಿಕ್ಷಣ ಶುಲ್ಕ ಕೊಡಬೇಕಾಗಿರಲಿಲ್ಲ. ಈ ಶಾಲೆಗೆ ವೀರೇಶಲಿಂಗಂರವರ ಹೆಸರನ್ನೇ ಜನತೆ ಇಟ್ಟು ತಮ್ಮ ಗೌರವವನ್ನು ತೋರಿಸಿದರು.

ಪುರಭವನ

ರಾಜಮಹೇಂದ್ರಿ ಪಟ್ಟಣಕ್ಕೆ ಒಂದು ಪುರಭವನವಿರಲಿಲ್ಲ. ಇದಕ್ಕೆ ಜನರ ಸಹಾಯ ಕೋರಿದರು. ಆದರೆ ಸಾಕಷ್ಟು ಸಹಾಯ ಸಿಕ್ಕಲಿಲ್ಲ. ಆದ್ದರಿಂದ ತಮ್ಮ ಪುಸ್ತಕಗಳ ಮಾರಾಟದಿಂದ, ತಮ್ಮ ಕೃತಿಗಳಿಗೆ ಬಂದ ಗೌರವಧನದಿಂದ ಪುರಭವನ ಕಟ್ಟಲು ನಿಶ್ಚಯಿಸಿದರು. ಇವರ ಸ್ನೇಹಿತರು ಕೆಲವರು ಸಹಾಯ ಮಾಡಿದರು. ೭,೦೦೦ ರೂಪಾಯಿಗಳ ವೆಚ್ಚದಲ್ಲಿ ಇವರ ಯೋಜನೆಯಂತೆ ಕಟ್ಟಡ ಸಿದ್ಧವಾಯಿತು. ೧೮೯೦ ರ ಅಕ್ಟೋಬರಿನಲ್ಲಿ ರಾಜಮಹೇಂದ್ರಿ ಜನರಿಗೆ ಇದನ್ನು ಅರ್ಪಿಸಿದರು. ಪುರಭವನ ಕಟ್ಟಲು ಸಾಲದೆ ಬಂದ ಹಣವನ್ನು ಸಾಲ ಮಾಡಿದರು. ಸ್ವಂತ ದುಡಿಮೆಯಿಂದ ಸಂಪಾದಿಸಿದ ಹಣ ಕೊಟ್ಟು ಈ ಸಾಲ ತೀರಿಸಿದರು. ಪುರಭವನಕ್ಕೆ ಇವರ ಹಸರನ್ನೇ ಇಡಬೇಕೆಂದು ಬಹಳ ಜನ ಇಷ್ಟಪಟ್ಟರು. ಆದರೆ ವೀರೇಶಲಿಂಗಂ ಇದಕ್ಕ ಒಪ್ಪಲಿಲ್ಲ.

ಕಡೆಯ ವರ್ಷಗಳು

೧೯೧೦ ಆಗಸ್ಟ್ ೧೨ ನೇ ದಿನ ವೀರೇಶಲಿಂಗಂರವರ ಹೆಂಡತಿ ರಾಜ್ಯಲಕ್ಷ್ಮಿಯವರು ನಿಧನರಾದರು. ರಾಜ್ಯಲಕ್ಷ್ಮಿಯವರು ’ಸಹಧರ್ಮಿಣಿ’ ಎನ್ನುವುದನ್ನು ಸಾರ್ಥಕಪಡಿಸುವಂತೆ ಜೀವನ ನಡೆಸಿದರು. ಗಂಡನು ನಡೆಸಿದ ಸಮಾಜ ಸುಧಾರಣೆಯ ಕೆಲಸಗಳಲ್ಲಿ ಅವರಿಗೆ ನೆರಳಾಗಿದ್ದವಳು. ಹೆಂಡತಿಯ ಮರಣದಿಂದ ವೀರೇಶಲಿಂಗಂ ಅನಾಥರಾದರು. ಅವರ ಧೈರ್ಯ, ಉತ್ಸಾಹಗಳು ಕಡಿಮೆಯಾದವು.

ಮುಂದೆ ಇವರು ಒಂಬತ್ತು ವರ್ಷಗಳು ಬದುಕಿದ್ದರು. ಈ ದಿನಗಳಲ್ಲಿ ಇವರಿಗೆ ಸಂಕಟ, ದುಃಖಗಳೇ ಹೆಚ್ಚಾಗಿದ್ದವು. ೧೯೧೯ರ ಮೇ ೨೭ ರಂದು ತಮ್ಮ ಆತ್ಮಚರಿತ್ರೆಯನ್ನು ಬರೆಯುತ್ತಿರುವಾಗ ಲೇಖನಿ ಇವರ ಕೈಯಿಂದ ಜಾರಿ ಬಿದ್ದಿತು. ಸಾಹಿತಿಗಳಾದ ವೀರೇಶಲಿಂಗಂರವರ ಮರಣ ಸಾಂಕೇತಿಕವಾಗಿತ್ತು.

ಗೌರವ ಸನ್ಮಾನಗಳು

ವೀರೇಶಲಿಂಗಂ ಅವರ ಜೀವನದ ಉತ್ತರಾರ್ಧದಲ್ಲಿ ಅವರನ್ನು ದೂಷಿಸಿ ಕಲ್ಲು ತೂರುವ ಕಾಲ ಹೋಗಿ ಗೌರವಿಸಿ ಹಾರ ಹಾಕುವ ಕಾಲ ಬಂದಿತ್ತು. ೧೮೯೩ ರಲ್ಲಿ ಬ್ರಿಟಿಷ್ ಸರ್ಕಾರ ಇವರ ಸಮಾಜ ಸೇವೆಯನ್ನು ಮೆಚ್ಚಿ ಇವರಿಗೆ ’ರಾವ್ ಬಹದ್ದೂರ್’ ಎಂಬ ಬಿರುದನ್ನು ಕೊಟ್ಟು ಗೌರವಿಸಿತು. ಇವರ ಸೇವೆಯನ್ನು ಹೊಗಳಿ, ಇವರನ್ನು ಅಭಿನಂದಿಸಿ ತೆಲುಗು, ಇಂಗ್ಲಿಷ್ ಪತ್ರಿಕೆಗಳು ಲೇಖನಗಳನ್ನು ಪ್ರಕಟಿಸಿದವು.

’ಹಿತಕಾರಿಣಿ ಸಮಾಜ’ಕ್ಕೆ ಹಣ ಕೂಡಿಸಲು ಇವರು ಹೋದಕಡೆಗಳಲ್ಲೆಲ್ಲಾ ಪೌರರು ಇವರನ್ನು ಸತ್ಕರಿಸಿ ಗೌರವಿಸಿದರು. ೧೯೦೭ ರಲ್ಲಿ ಕಲ್ಕತ್ತಾದಲ್ಲಿ ಬ್ರಹ್ಮಸಮಾಜದವರು ಇವರನ್ನು ಆದರಿಸಿದರು. ಮುಂಬಯಿಯಲ್ಲಿ ಇವರನ್ನು ಸನ್ಮಾನಿಸಲು ಒಂದು ಸಭೆ ಏರ್ಪಟ್ಟಿತು.

ಸಿಕಂದರಾಬಾದಿಗೆ ಇವರು ಹೋದಾಗ ಸರೋಜಿನಿ ನಾಯುಡುರವರು ಇವರನ್ನು ಮನೆಗೆ ಆಹ್ವಾನಿಸಿದರು. ಇವರನ್ನು ಕಂಡರೆ ತಂದೆಯಷ್ಟು ಗೌರವ ಸರೋಜಿನಿ ದೇವಿಯವರಿಗೆ. ಸರೋಜಿನಿ ನಾಯುಡುರವರ ಮದುವೆ ಮಾಡಿಸಿದವರು ಪಂತಲುರವರೇ. ೧೯೦೮ರಲ್ಲಿ ಇವರ ೬೦ನೇ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಉತ್ಸಾಹದಿಂದ ಆಂಧ್ರದ ಹಲವೆಡೆ ಆಚರಿಸಲಾಯಿತು.

ಭಾರತ ಸರ್ಕಾರ ೧೯೭೪ ರಲ್ಲಿ ಇವರ ನೆನಪಿಗಾಗಿ ಇವರ ಭಾವಚಿತ್ರವಿರುವ ಅಂಚೆಚೀಟಿಯನ್ನು ಪ್ರಕಟಿಸಿದೆ.

ಇವರು ಸಮಾಜ ಸುಧಾರಕರು. ಆದರ್ಶ ಉಪಾಧ್ಯಾಯರು. ಸಮಾಜದ ಓರೆಕೋರೆಗಳನ್ನು ತಿದ್ದಿದ ಪತ್ರಿಕೋದ್ಯಮಿಗಳು. ವೈವಿಧ್ಯಮಯ ಕೃತಿಗಳನ್ನು ರಚಿಸಿದ ಸಾಹಿತಿಗಳು. ತಮ್ಮ ಶ್ರದ್ಧೆ ಮತ್ತು ದುಡಿಮೆಯಿಂದ ಅಪಾರ ಆಸ್ತಿಯನ್ನು ಸಂಪಾದಿಸಿ ಮತ್ತೆ ಸಮಾಜಕ್ಕೆ ದಾನಮಾಡಿದ ದಾನಿಗಳು. ಇಡೀ ಸಮಾಜವನ್ನೇ ಏಕಾಂಗಿಯಾಗಿ ಎದುರಿಸಿ ತಾವು ಸತ್ಯವೆಂದೂ ಸರಿಯಾದುದೆಂದೂ ನಂಬಿದುದನ್ನು ಕಡೆತನಕ ಹಿಡಿದು ಸಾಧಿಸಿದ ಕಾರ್ಯತತ್ಪರರು: ಉತ್ತಮ ನಡತೆಯ ಧ್ಯೇಯವಾದಿಗಳು. ಸಾಹಿತ್ಯಕ್ಕೆ ಹೊಸ ಗೌರವ ತಂದ ಧೀರರು.

* * *