ಶ್ರೀ ವೀರೇಶ್ವರ ಹಿರೇಮಠರು ಕರ್ನಾಟಕದ ಹೆಸರಾಂತ ಹಾರ್ಮೋನಿಯಂ ವಾದಕರಲ್ಲೊಬ್ಬರು. ಅವರು ಜನಿಸಿದ್ದು ೧೯೨೮ರಲ್ಲಿ ಗದಗ ಜಿಲ್ಲೆಯ ರೋಣದಲ್ಲಿ. ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿಗಳಲ್ಲಿ ಅನೇಕ ವರ್ಷ ಸಂಗೀತ ತಾಲೀಮು. ಜೊತೆಗೆ ಸಂಸ್ಕೃತ, ವೈದಿಕ ಅಧ್ಯಯನ ಕಲಾ ಜೀವನದ ಆರಂಭಿಕ ದಿನಗಳನ್ನು ಗಾಯಕರಾಗಿಯೇ ಗುರುತಿಸಿಕೊಂಡ ಅವರು ಅಸ್ತಮಾದ ತೊಂದರೆಯಿಂದಾಗಿ ಹಾಡುವುದರ ಬಲವಾಗಿ ಹಾರ್ಮೋನಿಯಂ ವಾದ್ಯ ನುಡಿಸುವಿಕೆಯಲ್ಲಿ ಅಪಾರ ಸಾಧನೆಗೈದರು.

ಹಿಂದೂಸ್ಥಾನಿ ಸಂಗೀತದಲ್ಲಿ ಅಪಾರ ಹೆಸರು ಪಡೆದಿರುವ ಪಂಡಿತೋತ್ತಮರಾದ ಮಲ್ಲಿಕಾರ್ಜುನ ಮನಸೂರ, ಗಂಗೂಬಾಯಿ ಹಾನಗಲ್ಲ, ಬಸವರಾಜ ರಾಜಗುರು, ಕುಮಾರ ಗಂಧರ್ವ, ಲಕ್ಷ್ಮಿ ಶಂಕರ, ಸಿದ್ಧರಾಮ ಜಂಬಲದಿನ್ನಿ, ಅರ್ಜುನ ಸಾ ನಾಕೋಡ, ಪ್ರಭುದೇವ ಸರ್ದಾರ, ಸರಸ್ವತಿ ರಾಣಿ, ಜಗನ್ನಾಥ ಬುವಾ, ಜಸರಾಜ – ಮುಂತಾದ ದಿಗ್ಗಜರಿಗೆ ಸಮರ್ಥವಾಗಿ ಹಾರ್ಮೋನಿಯಂ ಸಾಥ್‌ ಮಾಡಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.

ರಂಗಭೂಮಿಯಲ್ಲಿ ಅವರ ಸಾಧನೆ ಅಪಾರ. ಬಾಲ ನಟರಾಗಿ, ರಂಗ ಗೀತೆಗಳ ಗಾಯಕರಾಗಿ, ರಂಗ ನಿರ್ದೇಶಕರಾಗಿ, ನಾಟಕ ಕಂಪನಿ ಕಟ್ಟೆ ರಂಗಭೂಮಿ ಸೇವೆ ಮಾಡಿದ್ದಾರೆ. ನಾಟಕಕ್ಕೆ ಬೇಕಾಗುವ ರಂಗ ಪರಿಕರಗಳನ್ನು ಒಂದೂವರೆ ದಶಕಗಳ ಕಾಲ ಪೂರೈಸಿದ ಹೆಗ್ಗಳಿಕೆ ಇವರದು. ಗದುಗಿನಲ್ಲಿ ‘ವೀರೇಶ್ವರ’ ಎಂಬ ರೇಡಿಯೋ ಕಂಪನಿ ಪ್ರಾರಂಭಿಸಿ, ರೇಡಿಯೋ ತಯಾರಿಕೆಯಲ್ಲಿ ಸರ್ಕಾರೇತರ ಪ್ರಥಮ ಸಂಸ್ಥೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ‘ಶ್ರೀ ವೀರೇಶ್ವರ ನಾಟ್ಯ ಸಂಘ’, ‘ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಸ್ಥೆ’ ಸ್ಥಾಪಿಸಿ, ಸ್ತ್ರೀ ಪಾತ್ರ ವಹಿಸಿ ರಂಗಭೂಮಿಗೆ ದುಡಿದಿದ್ದಾರೆ.

ಧಾರವಾಡ ಆಕಾಶವಾಣಿ ಕೇಂದ್ರದ ಶಾಸ್ತ್ರೀಯ ಸಂಗೀತದ ಧ್ವನಿ ಪರೀಕ್ಷಾ ಕಮಿಟಿಯ ಸದಸ್ಯರಾಗಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಜಯಮ್ಮ ಮಾಶಾಸನ ಸಮಿತಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇಂತಹ ಸಾಧನೆ ಗೈದಿರುವ ಶ್ರೀ ವೀರೇಶ್ವರ ಹಿರೇಮಠರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾ ತಿಲಕ’ (೧೯೯೭-೯೮), ‘ಕಲಾಸೌರಭ’, ‘ಸೃರಶ್ರೀ’ ನೀಡಿ ಗೌರವಿಸಿವೆ.