ಕೆಲರು ಕಡ್ಡಿಯ ಕಚ್ಚಿ ಕೆಲರು ಜಲವ ಪೊಕ್ಕು
ಕೆಲರು ಶ್ರವವ ಮರೆಗೊಂಬುವರು | ಮತ್ತೆ
ಕೆಲರು ನಿಲ್ಲದೆ ಮುರಿದೋಡುವರು | ಆಗ
ಕೆಲರು ಖಡ್ಗವ ಚೆಲ್ಲಿ ಕೈಮುಗಿವರು | ನಿಂದು
ಬಲವೆಲ್ಲ ಬೆದರಿ ಬಾಯಾರಿ ಕಂಗೆಟ್ಟುದು
ಸಲಹೆಂದು ಅಡಿಯೊಳು ಬೀಳ್ವರು ಕೆಲರು    ೪೧

ಅಣುಗನಧಟವು ಎಷ್ಟಂತ ಬಂದು ಸಂ
ದಣಿಯಲಿ ಕವಿದೊಂದು ಕಾಲದಲಿ | ಮತ್ತೆ
ಗಣೆಯ ಸುರಿದ ಮಳೆಯಂದದಲಿ | ಒಂದು
ಕ್ಷಣದೊಳು ಗಣೆಗಳ ಸವರುತಲಿ | ಫಲು
ಗುಣನ ಕುವರ ಕೊಂಡ ಎಣಿಕೆಯಿಲ್ಲದೆ ನೋಡಿ
ರಣಭೂಮಿ ಹೆಣಮಯವಾಯಿತಾಕ್ಷಣದಿ       ೪೨

ಆವಾಗ ಹೆದೆಗಂಬ ತೊಡಚುವ ಬೇಗದೊ
ಳಾವಾಗ ಸರಳ್ಗಳ ಸೆಳೆಯುವನೊ | ಮತ್ತೆ
ಆವಾಗ ಶಿರದಂಡ ಸದೆಯುವನೊ | ಗುರು
ಅವನೀ ವಿದ್ಯೆಯ ತೋರಿದನೊ | ಎಂದು
ಕೇವಲ ಶಿವನಲ್ಲದಿನ್ನಾರಿಗಳವಲ್ಲ
ದೇವ ತಿಂತಿಣಿ ಚೋದ್ಯವಾದುದಂಬರದಿ      ೪೩

ನೆಗೆದಟ್ಟ ಕುಣಿದು ರಟ್ಟಿಗಳೆಲ್ಲ ಹರಿದು ಕಾ
ಲುಗಳಾಗ ನೆಗೆದವು ಗಗನದೊಳು | ತುರ
ಗಗಳೇರಿ ಜೀವದ ಭಟರುಗಳು | ಬಾಯಿ
ತೆಗೆದು ರಥಿಕರ ಹಿಂಡುಗಳು | ಮಿಕ್ಕ
ಅಗಣಿತವಾದ ಮಾರ್ಬಲ ಮುಳುಗೇಳುತ
ರಗುತದಂಬುಧಿಯೊಳು ಹಗೆಯ ಮೋಹರವು         ೪೪

ಎಡಬಲ ಉಗ್ರದಿ ಬರುವ ರಾವುತರನು
ಹೊಡೆದು ಮುಂಬರುವ ಮಾತಂಗಗಳ | ಲಗ್ಗಿ
ಲಿಡದೆ ಕೊಂದನು ಒಂದು ನಿಮಿಷದೊಳು | ರಥ
ಹುಡಿಹಿಟ್ಟು  ಆದವು ಸಮರದೊಳು | ಆಗ
ಕೆಡಹಿ ಕಾಲಾಳ್ಗಳ ವೊರಸಿ ತಿಕ್ಕುತ ಬಾಲ
ನಡೆಗೆಡಿಸಿದಾಗ ವಿಗಡ ಮೋಹರವ          ೪೫

ಜೋದರರಾನೆಯನಿಳಿದರು ರಾವುತ
ರಾದವರು ತೇಜಿಯನಿಳಿವುತಲಿ | ನಿಂದು
ಕಾದಲಾರದೆ ರಥ ತೊಲಗುತಲಿ | ನಮ
ಗಾದೀತು ಭಯ ಭಟರೆಂಬುತಲಿ | ತಂದೆ
ನೀ ದಯದಿಂದೆಮ್ಮ  ಕೊರಳ ಸಲಹುದೆಂದು
ತಾ ದೆಸೆಗೆಟ್ಟುದು ವೈರಿಸಂದಣಿಯು ೪೬

ಸೊಕ್ಕಿಲೆ ಸದೆವೆಂದೊತ್ತರದಲಿ ಬರ್ಪ
ಮಿಕ್ಕಿರ್ದ ಸುಭಟರ ಕೋಲ್ಗಳನು | ಇದ
ರಿಕ್ಕುತ ಸುರಿಸುತ ಸವರಿದನು  | ಆಗ
ಒಕ್ಕಲಿಕ್ಕುತ ಸೀಳಿ ಅಧಟರನು | ವೀರ
ಮಕ್ಕಳಾಟಕೆ ದೊಡ್ಡ ಮಾರಿಯಾಗುತ ರಣ
ಹೆಕ್ಕಾಡಿ ಕೊಚ್ಚಿತು ವೈರಿರಾಯರನು ೪೭

ಕಲಕಿಸಿ ಬಿಟ್ಟನು ಕರಿಘಟಿ ತೇಜಿಯ
ಉಳಿಯದೆ ಸವರಿದ  ರಥಿಕರನು | ತಿಕ್ಕಿ
ನೆಲಕೊರಸಿದನತಿ ವೀರರನು | ರಕ್ತ
ಜಲಧಿಯೊಳೋಕುಳಿಯಾಡಿದನು | ಕ್ಷತ್ರಿ
ಕುಲದೀಪನಭಿಮನ್ಯು ಭಯವಾಗಿ ರಣಿದೊಳು
ಕಳಚಿದ ಶಿರದಂಡ ರೌದ್ರದಬ್ಬರದಿ   ೪೮

ಸಾರ ಸೌಬಲವೆಲ್ಲ ಮೇಳೈಸಿ ಕೈ ಲಘು
ದೋರಿರಿ ಶೂರ ಕರ್ಣಾದಿಗಳು | ಹಿಂದೆ
ಜಾರದೆ ಕೊಳಲೆನ್ನ ಸರಳುಗಳು | ಸುಕು
ಮಾರನೊಡೆಚ್ಚ ಕೂರಂಬುಗಳು | ಹೊಕ್ಕು
ತೂರುತ ತುಡುಕುತ ಗಾರುಗೆಡಿಸಿ ರಣ
ಧೀರ ಗಂಭೀರವ ಕಂಡ ಕೌರವನು  ೪೯

ಭಲರೆ ಭಲರೆ ಭಾಪು ಬಾಲ ನೀನಹುದೆಂದು
ಕಲಕಿಸಿ ಬಿಟ್ಟೆ ಈ ವ್ಯೂಹವನು | ನಿನ್ನ
ಗೆಲುವವರಾರೊ ಈ ಸಮರವನು | ಚಂದ್ರ
ಕುಲಜಾತ ಮಕುಟವನೊಲೆವುವನು | ಚೆಲ್ವ
ಛಲದಂಕ ಚಪಳ ಚತುರ ಶೌರ್ಯಗುಣ ಪಾಂಡು
ಕುಲರತ್ನ ಸೈ ಸೈಯಿಂದ ಕೌರವನು          ೫೦

ಸುಂದರಿ ಸುಭದ್ರಿ ಹಿಂದೆ ಮಾಡಿದ ಫಲ
ಇಂದುಧರನ ನೋಪಿಯಲ್ಲದಳೆ | ರಣ
ದಂದವೀ ಸಮರದಿ  ಗರುಡಿಗಳೆ | ಗುಣ
ವೃಂದ ವಿಶಾಲ ಶೌರ್ಯಗಳೆ | ಅದ
ರಿಂದೊದಗಿಹುದು ಪಾರ್ಥನ  ಪುಣ್ಯಕೆಣೆಯುಂಟೆ
ದ್ವಂದ್ವ ವಂಶಕೆ ಗತಿಯಾಗಲೇನರಿದು        ೫೧

ಬಗೆಬಗೆಯಿಂದಲಿ ಪೊಗಳುತ ಕೌರವ
ಮಗುವೆ ನೀ ಸಾಕಯ್ಯ ಪೋಗೆನುತ | ಹೊಡಿ
ಅಗಣಿತಾಸ್ತ್ರದ ಮಳೆ ಸುರಿಸ್ಯಾಡುತ | ವೀರ
ನೆಗೆದಟ್ಟಿ ಬರುತಾಸ್ತ್ರ ಖಂಡಿಸುತ | ನಿಂದು
ಮೊಗನೋಡಿ ನಸುನಕ್ಕು  ಕಲಿಕಂದ ಹೆದರದೆ
ಮಗುಳೆ ನುಡಿದನಾಗ ವೈರಿ ಕೌರವಗೆ        ೫೨

ಹಸುಳನಹುದು ನಾನು ಎಸೆವಂಥ ಬಾಣಕೆ
ಹಸುಳಾಟ ಉಂಟೆನೊ ಸಮರದಲಿ | ಮೊನೆ
ಮಸೆದಂಬು ಕರದಿಂದ ತೆಗೆವುತಲಿ | ತೊಡ
ಕಿಸಿಬಿಟ್ಟ ಪೆರ್ಗಿಡಿ ಉಗುಳುತಲಿ | ಬಂದು
ಮುಸುಕಿತು ರಥ ಮುನ್ನೆ ಮೈಯಹೊಳಂಬುಗಳು ಕೀ
ಲಿಸಿ ರಾಯ ಸಿಕ್ಕುದ ಕಂಡನಾ ದ್ರೋಣ       ೫೩

ಏ ಕಂದ ಮುನ್ನೇಳೊ ಏ ಶಲ್ಯ ತೆರಳೇಳೊ
ಏ ಕರ್ಣ ಕೃತವರ್ಮ ತ್ವರಿತದಲಿ | ಕೃಪ
ನೀ ಕೊಡೊ ದುಶ್ವಾಸ ಮುಂಬಿನಲಿ | ರಣ
ದೀ ಕಲಿ ಕಂದನ ಹಸ್ತದಲಿ | ಸಿಕ್ಕು
ಭೂಕಾಂತತನ ತಪ್ಪಿತು ಮಾರಿಯೊಳಗಾದ
ಏಕಾಗಿ ದುಡುಕಿರೆಂದೊದರಿದ ದ್ರೋಣ        ೫೪

ಅಂದ ನುಡಿಯ ಕೇಳಿ ಬಂದೊಂದು ಕಾಲದಿ
ನಿಂದ್ರದೆ ಕೋಲ್ಗಳ ಸುರಿಸಿದರು | ಕೌರ
ವೇಂದ್ರನತಿಭಯ ಬಿಡಿಸಿದರು | ರಥ
ದಿಂದರಿರಾಯನ ತೆಗೆಸಿದರು | ರಾಹು
ಹೊಂದಿದ ಚಂದ್ರನ ಬಿಡಿಸುವಂದದಿ ಮತ್ತೆ
ಹೊಂದೇರ ಮುತ್ತಿದ ರಥಿಮಹಾರಥರು       ೫೫

ಸುರಪುತ್ರ ನಮ್ಮನು ಕೆಡಿಸುತ ಶಲ್ಯನ
ಭರವ ತಗ್ಗಿಸಿ ಕೃತವರ್ಮನನು | ಗರ್ವ
ಮುರಿದು ಬಾಲ್ಹಿಕ ಸೋಮದತ್ತನನು | ಮತ್ತೆ
ಹುರುಳುಗೆಡಿಸಿ ರಾಯನನುಜನನು | ಆಗ
ಇರದೆ ಸದೆದು ಕೃಪನೋಡಿಸಿಬಿಟ್ಟೊಬ್ಬ
ತರುಳನು ಗೆಲಿದ ನೋಡತಿ ಮಹಾರಥರ     ೫೬

ಮುಳುಗಿದರಂಬಿನ ಘಾಯದಿ ರಥಿಕರು
ಬಳಲುತಲತಿ ನೊಂದು ಓಡುತಲಿ | ಕಂಡು
ಕಲಿಕರ್ಣ ಕೂಗಿ ಮೂದಲಿಸುತಲಿ | ರಣ
ಮಲೆತ ನೆಲವೊ ಮಗುವೆಂಬುತಲಿ | ಧನು
ಝಳೆಪಿಸಿ ಸಾರಥಿಗೆಚ್ಚರ ಸೂಚಿಸಿ
ತೊಲಗು ನೀನೆಂಬುತ ತರುಬಿದ ಕರ್ಣ       ೫೭

ಗಾರುಗೆಡಿಸಿ ಗೆದ್ದಿ ಪೋಗಿನ್ನು ನಮ್ಮೊಳು
ಶೂರತನವೆ ಸಣ್ಣ ಹಸುಳಿಗನು | ರಣ
ಧೀರ ಕರ್ಣನ ನುಡಿಗೇಳಿದನು | ಎಲೊ
ಸಾರ ಕೈಗುಣಗಳ ತೋರಿದನು | ಅಯಿ
ದಾರು ಶರಗಳಿಂದ ಹೊಡೆಯಲಾಕ್ಷಣ ಎದೆ
ಡೋರುವೊಡೆದು ಕರ್ಣ ಹೊರಟಾಯದಲಿ    ೫೮

ಬೆದರಿ ಬೆಂಡಾಗಿ ಚೇತರಿಸದೆ ಮೈ
ಮರೆದುದ ಕಂಡ ಶಲ್ಯನಾಕ್ಷಣದಿ | ಕೆಡ
ಹಿದನೆಂದು ಮೂದಲಿಸುತ ರಣದಿ | ಬಿಡು
ಮದವ ಕರ್ಣನ ಗೆದ್ದೆ ಸಮ್ಮುದದಿ | ಎಲೊ
ನೆದರಿಕ್ಕಿ ನೀ ನೋಡು ಕಲಿ ಶಲ್ಯ ನಾನೆಂದು
ಒದರಿ ಸುರಿದನಾಗ ಅಂಬಿನಂಬುಧಿಯ       ೫೯

ಸುರಿವ ಸರಳ ಮಧ್ಯೆ ಹರಿಯ ಖಂಡಿಸಿ ಎಚ್ಚ
ಮರಳಿ ಕೂರೆಂಬುಗಳೈದರಲಿ | ಶಲ್ಯ
ನುರು ಬಿಚ್ಚಿ ಭೂಮಿಗೆ ಉರುಳುತಲಿ | ತಲೆ
ತಿರುಗಿ ಕಂಗಳು ಬಿಳಿ ಕಲಕುತಲಿ | ತುಟಿ
ಭರದಿಯೊಣಗಿ ರಥ ಮುರಿದುಬ್ಬಸವಳಿ
ದಿರಲಾಗ ಕಂಡನು ಶಲ್ಯನನುಜನನು                   ೬೦

ಕಡುಕೋಪದಿಂದಲಿ ದುಡುಕಿದರಭಿಮನ್ಯು
ಹೊಡೆದನು ಐದಾರು ಬಾಣದಲಿ | ಶಿರ
ಗಡಿದು ಬಿದ್ದುರುಳಿತು ಭೂಮಿಯಲಿ | ಮಾದ್ರ
ಒಡೆಯನ ಬಲ ಮುರಿದೋಡುತಲಿ | ನಿಂದು
ಕಡುವೆಂತೊ ಕಂದನ ಕಡಿದು ವ್ಯೂಹದ ಗೆದ್ದು
ನುಡಿದ ಕೃಪಗೆ ದ್ರೋಣ ಮಗನ ಪೌರುಷವ   ೬೧

ಮಗುವು ನೋಡಭಿಮನ್ಯು ಹೊಗಳಲಸಾಧ್ಯವು
ತೆಗೆದು ಬಿಟ್ಟಂತಿರೆ ರುದ್ರನನು | ಕೋಪ
ಹೊಗರು ಹೊಸೆದು ಸುಕುಮಾರಕನ | ಮುಂದೆ
ತಗೆಬಗೆಗೊಳಿಸಿದ ಬಗೆಬಗೆ ಪೌರುಷ
ಹೊಗಳದ ದ್ರೋಣ ಕೇಳತಿ ಭಯದಿಂದ       ೬೨

ಕೇಳುತ ಕೌರವ ಕನಲಿ ಉಗ್ರದಿ ಎಲೋ
ಲೀಲೆಯಂ ಪೊಗಳ್ದಿರ ವೈರಿಯನು | ನಮ್ಮ
ನೇಳಿಲ ಮಾಡಿದಿ ಸಮರವನು | ಅತಿ
ಖೂಳರೆಂಬೆನೆ ಗುರುವೆನಿಸುವನು | ಎಂದು
ಕಾಳಗದೊಳು ನಿಂತು ಆಡಿದ ನುಡಿಗೇಳಿ
ಕಾಳ ದುಶ್ಯಾಸನು ಕೋಪದಿ ನುಡಿದ         ೬೩

ಕೌರವ ಕೇಳಿತ್ತ ವೀರರ ಪೌರುಷ
ಹಾರುವರೇನು ಬಲ್ಲರು ಹವವ | ಘೃತ
ಗಾರಿಗೆ ಕ್ಷೀರಾನ್ನ ಸೈ ಅತಿ ಗೆಲವ | ಬಿಡು
ಸಾರ ಭಂಡರ ಬೈದರೇನಹುದು | ಶಿರ
ತೂರಿ ಚಂಡಾಡುವೆನೆಂಬುದ ಕೇಳಿ
ಧಾರುಣಿ ಬಿರಿವಂತೆ ವಾದ್ಯಘೋಷದಲಿ       ೬೪

ಧುರಕೆ ದುಶ್ಯಾಸನನು ಅಣಿದಟ್ಟಲಭಿಮನ್ಯು
ತಿರುಹು ಸಾರಥಿ ತೇಜಿ ಮುಂಬಿನಲಿ | ಈಗ
ಕರುಳ ತಗೆಗೆವೆ ನೋಡೋ ಬೆಂಬಿನಲಿ | ಅಂಜ
ದಿರು ನೀನು ಎಂಬು ಸಮಯದಲಿ | ಬಂದು
ತರಳನ ರಥ ಸುತ್ತ ಬಲವೆಲ್ಲ ಮುತ್ತಲು
ಅರಗಿನ ಮನೆಯು ದಳ್ಳುರಿಗೆ ಸಾಹಸವೆ      ೬೫

ಬಲವಂದು ನಿಮಿಷದೊಳೊರಸಲು ಹೆದರದೆ
ಗೆಲವಲ್ಲ ಮರುಳು ನೀ ಸಮರದಲಿ | ನಿಮ್ಮ
ಫಲ್ಗುಣ ಭೀಮ ನಕುಲ ಬರಲಿ | ನೀನು
ಎಳೆ ಬಾಲ ಕೈಗಾದೆನೆಂಬುತಲಿ | ಖೂಳ
ಕೊಳಚಿಯ ದಾಂಟದೆ ಶರಧಿ ಕಾಲ್ಪೊಳೆಯೆಂಬ
ಬಲು ಭಂಡತನವ ಬಲ್ಲೆನೆಂದನಾ ಕಂದ      ೬೬

ಸರಳ ಸಾಹಸದಿಂದ ಗೆಲಿದೆನ್ನ ಬಳಿಕಾಗ
ನರ ಭೀಮ ನಕುಲರ ಬಯಸೆನುತ | ಹುಚ್ಚ
ಮರುಳೆ ನಿನ್ನೊಡಲಿನ ತಿಳಿರಕುತ | ತಾಯ
ತುರುಬ ನಾದಿಸುವೆ ಕೇಳೆನುತ | ಕಲಿ
ತರುಣನ ನುಡಿಕೇಳಿ ಕೌರವನನುಜನು
ಸುರಿದ ನೂರಂಬ ಕಾತರಿಸದಿರೆನುತ                   ೬೭

ಗಂಧ ಕೆಂದಾವರೆ ತುಂಬಿಗಳುಲಿವಂತೆ
ಹೊಂದೇರ ಕೋಲ್ಗಳು ಮುಸುಕಿರಲು | ಪಾರ್ಥ
ನಂದನ ಗಣಿಗಳ ಸೈರಿಸಲು | ಎಲೊ
ತಂದೆ ಭೀಮನ ಭಾಷೆ ಮುನ್ನಿರಲು | ನಿನ್ನ
ಕೊಂದರೆ ಮತವಲ್ಲವೆಂದು ಭಂಗಿಸಿ ಹೊಯ್ಯೆ
ನೊಂದಿತು ಕುರುಬಲ ಬಳಲಿ ಕಾತರಿಸಿ       ೬೮

ಭೂರಿ ಕೋಪದಿಂದ ಕಲಿಕರ್ಣ ನಡೆಯುತ
ಸಾರು ಸಾರೆಲೊ ಕಂದ ನೀನೆನುತ | ನೀ ಯಿ
ನ್ನಾರ ಬಸುರ ಹೊಗಬಿಡೆನೆನುತ | ಬಲ್ಲೆ
ಬಾರಯ್ಯ ಕರ್ಣ ಮುನ್ನಾ ಗುರುತ | ಭಂಡ
ಕಾರನೆನುತ ನಸುನಕ್ಕು ಎಂಟಂಬಿಲಿ
ವೀರ ಹೊಯ್ಯಲು ರಥ ತೊಯ್ದು ರಕ್ತದಲಿ     ೬೯

ನರ ನಿನ್ನ ಕೊಲ್ವನೆಂಬುತ ಬಿಟ್ಟೆನೆಂದು ತಾ
ಮುರಿಯಲೆಚ್ಚನು ಧನು ಬಾಣದಲಿ | ಬೇಗ
ಬರಲು ಶಲ್ಯನು ಸುತನಿಲ್ಲದಲಿ | ದಿವ್ಯ
ಸರಳಿಂದ ಶಿರವ ಚೆಂಡಾಡುತಲಿ | ಧರ
ಧುರವೆಲ್ಲ ಕಲಕಿ ಕಾತರಿಸಿ ನಡುಗಿತು
ಧರಣಿ ರಣದ ಬೊಬ್ಬೆ ಕೇಳಿ ಧರ್ಮಜನು      ೭೦

ಕಂದನೇನಾದನೊ ರಣದೊಳಗದ್ಭುತ
ದಂದುಗವೆಂತೊ ಭೀಮನೆಯೆನುತ | ಬೇಗ
ದಿಂದಲಿ ನಕುಲನ ಕಳುಹಿಸುತ | ಆಗ
ಬಂದು ಮುಂದ್ವಾರ ದಾರಿಯ ಕೇಳುತ | ಸಿಕ್ಕು
ಕಂದನ ಹಂಬಲ ಬಿಡು ಹಿಂದಕಡಿಯಿತು
ಇಂದಿಗೆ ವರವುಂಟು ಎಂದ ಸೈಂಧವನು      ೭೧

ಅಣಿದಟ್ಟಿ ಜಯದ್ರಥನೊಡನೆ ಕಾದಲು ಭೀಮ
ರಣಭೂಮಿ ಮಧ್ಯದಿ ಕೌರವನ | ಶತ
ಅಣುಗರು ಬಂದು ಕುಮಾರಕನ | ಆಗ
ಕೆಣಕಲು ಹೊಡೆದು ಸುಯೋಧನನ | ಪ್ರೀತಿ
ಯಣುಗರು ಉಳಿದ ಸುಭಟರ ನೋಡದೆ ಕೊಂದ
ತೃಣಸಮ ಮಾಡಿದ ಲಕ್ಷಣಾದಿಗಳ   ೭೨

ಭೂಮಿಪ ಕೌರವ ನನ್ನ ವೋಲೆಂಬು ವ
ಧೂ ಮೇರು ನಿಮಗೇಕೆ ಪಂಥಗಳು | ಈಗ
ನೇಮದಿ ಕೂಡಿಸು ಭಟರುಗಳು | ರಣ
ಸೀಮೆಯೊಳು ತೋರಿ ಶೌರ್ಯಗಳು | ಪಾರ್ಥ
ನಾ ಮಗನಾಡಿದ ನುಡಿಗೇಳಿ ರಥಿಕರು
ತಾ ಮತ್ತೆ ಮಾತಾಡಿಕೊಂಡು ಕೂಡಿದರು     ೭೩

ಷಡುರಥರೇಕಾಕಿ ದುಡುಕಿದರಭಿಮನ್ಯು
ಗಿಡಗನಂದದಿ ಹೊಕ್ಕು ಕೆಡಹುತಲಿ | ರಥ
ಸಿಡಿದು ಬಿದ್ದವು ಗಿರಿಯಂದದಲಿ | ಘಡು
ಘಡಿಸುತ ರಣಬೊಬ್ಬೆನಾದದಲಿ | ವೈರಿ
ಗಡಣ ಹಿಮ್ಮೆಟ್ಟಿ ಕುವರ ಬಿಟ್ಟ ಕೋಲ್ಗಳ
ತಡೆಯಲಾರೆವು ಎಂದು ಮಿಡುಕಿ ಸೌಬಲನ            ೭೪

ಭಂಗ ಮಾಡಿದನೆಂದು ಕುಂಭಿನೀಕಾಂತ ಪ
ತಂಗಸುತನ ಕರದ್ಹೇಳುತಲಿ | ನೀನು
ಬೆಂಗಡೆಯೊಳು ಬಂದು ನಿಲ್ಲುತಲಿ | ಕರ
ಹಿಂಗಡೆ ಖಂಡಿಸು ಶೀಘ್ರದಲಿ | ರಾಯ
ನ್ಹಂಗಿಗರಾದೆವು ಹಿಂಗಲಾರೆವು ಸಮ
ರಂಗರಾಜನ ಕಾರ್ಯವೆಂದನು ದ್ರೋಣ      ೭೫

ಅಂದ ನುಡಿಯ ಕೇಳಿ ಬಂದು ಬೆಂಗಡೆಯಲ್ಲಿ
ನಿಂದನು ಕರ್ಣ ಧನುವ ಪಿಡಿದು | ಗುರು
ನಂದನ ದ್ರೋಣ ಶಲ್ಯರು ನಡೆದು | ಬಂದು
ಮುಂದಿಟ್ಟು ಕಾದಲು ತಡೆದು ಬಂದು | ಕರ್ಣ
ಹಿಂದಿಂದೆ ಕಾರ್ಮುಖ ಕಡಿದು ಮುಕ್ಕಡಿಯಾಗೆ
ಕಂದ ತಿರುಗಿ ಕಂಡ ಕರ್ಣನ ಮುಖವ                  ೭೬

ಭಾಪುರೆ ಕರ್ಣ ಸೈ ಧೀರ ಕ್ಷತ್ರಿಯ ಕುಲ
ದೀಪ ನೀನಹುದೊ ಮಾಡಿದ ಕಲಹ | ರಣ
ದೀ ಪಂಥಗಾರ ಗೆಲೆದೀ ಹವವ | ಹಿಂದೆ
ಚಾಪ ಖಂಡಿಸಿ ತೋರ್ದೆ ಸಾಹಸವ | ಕಂದ
ನಾ ಪರಿಹಾಸ್ಯದ ನುಡಿಗೇಳಿ ಭಾನುವಿ
ನಾ ಪುತ್ರ ಲಜ್ಜಿತನಾದನಾ ಕ್ಷಣದಿ    ೭೭

ಹಿಂದಿದ್ದ ಇನಸುತ ಧನುವ ಮುರಿಯೆ ದ್ರೋಣ
ಹೊಂದೇರ ಕಡಿದನು ತವಕದಲಿ | ಗುರು
ನಂದನ ಸಾರಥಿ ಸವರುತಲಿ | ಕೃಪ
ಚಂದುಳ್ಳ ತೇಜಿಯ ಕೆಡಹುತಲಿ | ಶಲ್ಯ
ಕಂದನ ರೆಕ್ಕೆಯ ಛೇದಿಸಿ ಬೊಟ್ಟಿಟ್ಟು
ದಂದುಗ ಬಂದೊಮ್ಮೆ ಧುಮುಕಿತಬ್ಬರದಿ      ೭೮

ತುಡುಕುವೆನೆಂದರೆ ಧನುವಿಲ್ಲ ಮುಂದಕೆ
ನಡಸೇನೆಂದರೆ ಇಲ್ಲ ಸಾರಥಿಯು | ಹೂಡು
ವಡೆಯಿಲ್ಲ ನೋಡು ಮಹಾಹಯವು | ಮುನ್ನೊ
ಡೆದು ಚೂರಾಯಿತು ವರರಥವು | ಅಂತು
ಕಡುಧೀರ ಕಲಿವೀರ ಕುವರ ತಾ ಹೆದರದೆ
ಕಡುಗ ಕರದಿ ಕೊಂಡು ಕೂಗಿ ಬೊಬ್ಬಿರಿದು    ೭೯

ಆ ಸುತ ರಣದೊಳು ರೋಷದಿ ಕಡಿದನು
ಬ್ಯಾಸರಿಲ್ಲದೆ ಖಡ್ಗದಲಿ ಹೆಣನು | ಹಾಸಿ
ತು ರಣದೊಳು ರಾಶಿಯಲಿ ಹೆಣನು | ಭೂತ
ಸಂತೋಷದಿ ಉಂಡುಂಡು ತೇಗುತಲಿ | ಬಲು
ಘಾಸಿಯಾದಿತು ಬಲ ಕಾದಲಾರದೆ ಜನ
ನಾಶವಾಗುತ್ತ ರಕ್ತ ಸೂಸ್ಯಾಡುತಿರಲು        ೮೦

ನೂಕು ನುಗ್ಗಾಯಿತು ದ್ರೋಣಾದಿ ನಾಯಕ
ರೇಕಾಗಿ ನಿಂದುಸುರ್ಗರೆವುತಲಿ | ರಣ
ಸಾಕು ಸಾಕಿನ್ನೆಮಗೆಂಬುತಲಿ | ಕರ್ಣ
ನೀ ಕೈಯ ಮರೆಯಬೇಡೆಂಬುತಲಿ | ಮುಂದೆ
ಹಾಕ್ಯಾಡುತಿರಲಿತ್ತ ಕರ್ಣ ಕೇ
ಳಾಕ್ಷಣದಿ ಕತ್ತಿಕಡಿಯಲು ಮರಳಿ ಭಂಗಿಸಿದ  ೮೧

ಕ್ಷತ್ರಿಯ ಸಂತಾನದಲಿ ಪುಟ್ಟಿದರೆ ಇಂಥ
ಕೃತ್ಯವನೆಸಗ್ಯಾನು ಅಂಬಿಗರ | ಕೆಟ್ಟ
ತೊತ್ತಿನ ಮಗನೆಂದು ಈ ಸಮರ | ಸೈ
ಮತ್ತೆಲ್ಲಿ ಕಾಣೆ ನಿನ್ನಂಥವರ | ತಿರಿ
ಗುತ್ತರ ಕೊಡದೆ ತಗ್ಗಿಸಿ ಮುಖ ಬೆರಳ ತೀ
ಡುತ್ತಲಿ ನೆಲ ನೋಡುತಿರ್ದನಾ ಕರ್ಣ         ೮೨

ಕದನದೊಳ್ ಖಡ್ಗವು ಹೋದರೇನಾದುದೆಂ
ದೊದರಿ ಚೀರುತ ಸಿಂಹನಾದದಲಿ | ಆಗ
ಗದೆಯ ಪಿಡಿದು ದಳ ತುಡುಕುತಲಿ | ಗದ
ಗದಿಸಿ ಭಟರ ಸಂಹರಿಸುತಲಿ | ಕಂದ
ಗಿದಿರಿಲ್ಲ ನೋಡು ರಣದ ಮಂಡಳಿಕರ
ಸದೆದ ಶಾಕಿನಿಯರು ಉಂಡುವುಲಿವುತಲಿ    ೮೩

ವರ ಅಶ್ವತ್ಥಾಮನ ಸಾರಥಿ ಕೆಡಹಿದ
ಗುರುವಿನ ರಥ ಹುಡಿಮಾಡಿದನು | ಮದ್ರ
ದರಸನ ತುರಗವ ನೂಕಿದನು | ಶಲ್ಯ
ನಿರದೆ ಬೇಗದಿ ನಡೆಗೆಡಿಸಿದನು | ಒಳ್ಳೆ
ದೊರೆದೊರೆ ನಾಯಕರುಳಿಯದೆ ಮಡಿದರು
ಮರಳಿ ಕಡಿದ ಕರ್ಣ ಕಂದನ ಗದೆಯ                  ೮೪

ಕಡಿದಂಥ ಗದೆಯಾಗ ಪೊಡವಿಗೆ ಬಿದ್ದಿತು
ಹಿಡಿದ ಆಯುಧವೆಲ್ಲ ಖಂಡಿಸುತ | ಭಟರ‍್
ಕಡುಹಿಂದೆ ಶರಗಳ ಸೂರ್ಯಾಡುತ | ಬಂದು
ನಡೆದು ಮೈಯೊಳು ಬಾಣಮಯವಾಗುತ | ಘಾಯ
ತಡೆದು ಬೊಬ್ಬಿರಿದುಡಿಕಿ ಬಂದೊದ್ದು
ಕೆಡಹಿದನರಿಬಲ ರಣದ ಮಧ್ಯದಲಿ  ೮೫