ವರಗಿರಿಜಾತೆಯ ವದನಾಬ್ಜ ವೀರಶ್ರೀ

ತರುಣಿಯ ನಾಥನಯನ ಪದನೆ | ದಯ
ಭರಿತ ನಂಬಿಗೆ ಕುಂಟಣಿಯಾದನೆ | ಬಾಣ
ಸುರನರಮನೆಯ ಬಾಗಿಲ ಕಾಯ್ದನೆ | ದೇವ
ತರುಣ ನೀನೆಂದು ಪಾಲಿಪುದೆಂದು ಮನದೊಳು
ಬೆರೆದೀಗ ಕೊಡು ಎನ್ನ ಸ್ತುತಿಗೆ ಸನ್ಮತಿಯ    ೧

ವಾಣಿ ಪುಸ್ತಕ ರಮ್ಯಪಾಣಿ ಸುಂದರ ಫಣಿ
ವೇಣಿ ಕಲ್ಯಾಣಿ ನಿಮ್ಮಡಿಗಳನು | ಬೇಗ
ಕಾಣಿಸು ನಾನೀಗ ಪೊಗಳುವೆನು | ಸಲೆ
ಜಾಣ ಗಣಪನೊಮ್ಮೆ ಬೇಡುವೆನು | ಮುಂದೆ
ಕ್ಷೋಣಿಯೊಳು ಗುರುವೆ ಸರಸದಿಂದ ಕೃತಿಬಲ್ಲ
ಜಾಣರಿಗರಿವಂಥ ಮಾಣದೀ ನುಡಿಯ        ೨

ಕ್ಷಿತಿಪತಿ ಕೇಳ್ ಚಕ್ರವ್ಯೂಹದೊಳಭಿಮನ್ಯು
ಅತಿ ರಮ್ಯಯುದ್ಧವ ಮಾಡಿದನು | ಬಹು
ಖಿತಿಯಿಂದ ಶಿರವ ಚಂಡಾಡಿದನು | ಅಲ್ಲೆ
ಹತವಾಗಿ ಮುಕ್ತಿಯ ಕೂಡಿದನು | ಜಯ
ದ್ರತ ಮಸ್ತಕ ನರಹರಿಯು ಎಚ್ಚನುಯೆಂದು
ಯತಿರಾಯ ಪೇಳಿದ ಹಿತದಿ ಭೂವರಗೆ       ೩

ಕುರುಕ್ಷೇತ್ರ ಭೂಮಿಯೋಳ್ಕಲಿಪಾರ್ಥ ಭೀಷ್ಮನ
ಸರಳು ಮಂಚವ ಮಾಡಿ ಮಲಗಿಸಿದ | ಮತ್ತೆ
ದುರ್ಯೋಧನನು ಬಹಳ ಚಿಂತಿಸಿದ | ಮುಂದೆ
ತೆರನೇನು ನಮಗೆಂದು ಯೋಚಿಸಿದ | ಆಗ
ನೆರೆದೀತು ಪರಬಲ ಎಲ್ಲರು ತಲೆಗೂಡಿ
ವರಸೇನಾ ಪಟ್ಟವು ಆರಿಗೆಂದೆನುತ ೪

ಬಲರಾಮ ಪೋದನು ಭೂಮಿ ಪ್ರದಕ್ಷಿಣೆ
ಕಲಿಯಾದ ವೀರನು ಬಿಲ್ಮುರಿದು | ಪೋದ
ಬಲದ ಸಂದಣಿಯು ಪೋದೀತು ಸರಿದು | ಗುರು
ಗಳು ದ್ರೋಣಾಚಾರ್ಯರು ಎಂದರಿದು | ಮುಂದೆ
ದಳಪಟ್ಟ ಅವರಿಗೆ ಸರಿಯೆಂದು ದ್ರೋಣಗೆ
ನಲವಿಂ ಸಲೆ ಪಟ್ಟಗಟ್ಟಿದನಾಗ      ೫

ಪೃಥ್ವೀಪರೆಲ್ಲರು ಕಷ್ಟಕಾಣುತ ಇಷ್ಟು
ಅತ್ಯಂತ ಪ್ರೇಮದಿ ಶರಣೆನಲು | ದ್ರೋಣ
ಮತ್ತೆ ನುಡಿದನತಿ ಗರ್ವದೊಳು | ಭೂಪ
ಚಿತ್ತದ ಬಯಕೆಯ ಬೇಡೆನಲು | ಯಮ
ಪುತ್ರನ ಹಿಡಿತಹುದಿಂದಿಗೆ ಆರಾರ
ಸತ್ವ ಕಾಣೆನೆಂದೆನುತಲಿ ನುಡಿದ    ೬

ಅದ ಕೇಳಿ ದ್ರೋಣ ಅಬ್ಬರದಿಂದ ಘರ್ಜಿಸಿ
ಇದಕೇಕೆ ಬಿಡು ಚಿಂತೆ ಮಾಡುವರೆ | ಗೆಲ್ವೆ
ಪದುಮಾಕ್ಷ ಫಲ್ಗುಣ ತಪ್ಪಿದರೆ | ಕೇಳ್
ಪದುಮವ್ಯೂಹಯನೀಗ ರಚಿಸಿದರೆ | ತಡೆ
ಯದೆ ತಂದು ನಿಮ್ಮಯ ಸದನಕೊಪ್ಪಿಸುವೆನು
ಚದುರತನದಿ ವ್ಯೂಹ ರಚಿಪೆ ನೋಡೆಂದ     ೭

ವಾರಿಜವ್ಯೂಹದ ತಾರೀಪವೇನೆಂಬೆ
ವಾರಣ ಹಯ ಉಷ್ಟ್ರ ಸಾಲ್ಗಳಲ್ಲಿ | ಮಿಗೆ
ಮೀರಿದ ಭಟರ ಸಮ್ಮೇಳನದಲ್ಲಿ | ರಥ
ಸೂರೆ ತಾಕ್ಷೋಹಿಣಿ ಸಂಕುಳಲ್ಲಿ | ಸುವಿ
ಜಾರ ವಿಸ್ತಾರ ಪಜ್ತೆಯ ಕಟ್ಟಿ ಕಂಸಾಳ
ಭೇರಿ ನಗಾರಿ ಕಾಳಿಯ ರಭಸದಲಿ  ೮

ಮುಕ್ಕಟ್ಟ ದ್ವಾರಕೆ ಸೈಂಧವನಿಕ್ಕುತ
ಮಿಕ್ಕಿದ ರತಿ ವೀರಬೊಬ್ಬೆಯಲಿ | ಸಣ್ಣ
ಬೆಕ್ಕಡ ಕೀಲಿಸಿದಂದದಲಿ | ಪಾಂಡು
ಮಕ್ಕಳ ಕೋಯೆಂಬುಮೇಯದಲಿ | ಇಂಥ
ಕಿಕ್ಕಿಂದ ಪಾದ ಕಟಿಯ ಕಂಡು ಜನಪತಿ
ಉಕ್ಕಿ ಉಲ್ಹಾಸದೀ ಪರಿಯಲಿಯೆಸೆಯೆ        ೯

ಈ ತಂತ್ರದಿಂದ ನಿರ್ಮಿಸಿ ಸಮಸಪ್ತಕ
ರಾತುರಿ ಬಂದು ನೀ ಭೂಪನೊಳು | ಪೇಳೆ
ತಾತನ ಪೌರುಷ ಸಮರದೊಳು | ನಮ್ಮ
ತಾತನ ಕೊಂದನು ಆತನೊಳು | ಬರಿ
ಮಾತಲ್ಲ ಕಾದೋದು ಸಹಜವೆಂದಾಗೊಬ್ಬ
ದೂತನಟ್ಟಿದರು ಕಿರೀಟಿಯ ಬಳಿಗೆ   ೧೦

ಭರದಿಂದ ಚರ ಬಂದು ಸಮರಕ್ಕೆ  ಏಳು ಒ
ತ್ತರವುಂಟು ಹೊರಡೆಂಬ ನುಡಿಗೇಳುತ | ನರ
ಪರಿತೋಷದಿಂದಲಿ ನಸುನಗುತ | ಬೇಗ
ಬರುವೆನು ತಡವಿಲ್ಲ ನಡಿಯೆನುತ | ಕೇಳಿ
ತಿರುಗಿ ಪೋಗಲು ದೂತ ಕೇಳಿತ್ತ ದ್ರೋಣನ
ಚರನೋರ್ವ ಬಂದು ಧನಂಜಯಗೆಂದ       ೧೧

ಎಲೊ ಎಲೊ ಕೇಳು ಕೇಳಿಂದ್ರಜವ್ಯೂಹದ
ಕಲಹದ ಪರಿ ಬೇರೆ ಈ ದಿನದಿ | ನೀನು
ಛಲದುಕನೆಂಬರು ಈ ಜಗದಿ | ಗೆದ್ದು
ಬಲವಂತನೆನಿಸಿಕೊ ಈ ರಣದಿ | ಬಹಳ
ಮಲೆತರ ಗಂಡ ಮೂಲೋಕದೊಳೆಂದರಿ ಹರಿ
ಕುಲ ಭಾನುವೆಂಬುದನೆಲ್ಲ ನೋಳ್ಪೆ  ೧೨

ಬರಿಸಿಕೊ ನಿನ್ನ ಸಾರಥಿಯಾದ ಗೋವಳ
ನಿರಿಸಿಕೊ ನಿನ್ನ ಭಾರಿಯ ರಥಕೆ | ಈಗ
ಕರಿಸಿಕೊ ದುರುತಸುತನ ಧ್ವಜಕೆ | ಬೇಗ
ತರಿಸಿಕೊ ಗಾಂಢೀವಧನು ಯುದ್ಧಕೆ | ಬಲು
ನೆರೆಸಿಕೊ ಕುಲದೈವ ಸ್ಮರಿಸಿಕೊ  ಎಂಬುತ
ವಿರಸದ ನುಡಿಯಿಂದ ಪಿಡಿದನು ಸೆರಗ       ೧೩

ಕೇಳುತಲರ್ಜುನ ಆಳಾಗಿ ಬಂದವ
ಬಾಳೊಂದು ಮಾತನಾಡುವದ್ಯಾತಕೆ | ನೀನು
ಕಾಳಗದ ಹರುವ ಹೇಳುವದ್ಯಾತಕೆ | ನಿನ್ನ
ಕೇಳಿ ಬರುವೆನೇನೊ ಸಂಗರಕೆ | ಹೋಗಿ
ಹೇಳೊ ನಿನ್ನಾಳುವ ಒಡೆಯಗೆ ಬರ್ಪೆನೆಂ
ದಾಳುತ್ತ ಕಳುಹಿ ಆಲೋಚಿಸುತಿರ್ದ ೧೪

ಹರಿಯೆ ಭಾಸುರ ಕಲ್ಪತರುವೆ ಬಾ ಭಕ್ತರ
ಪೊರವೆ ಬಾ ಎಂಬುತ ಭಕ್ತಿಯಲಿ | ಪರಿ
ಪರಿಯಿಂದ ನರನು ಕೊಂಡಾಡುತಲಿ | ತುರು
ಕರುವ ನೆನಿಸಿ ಬರುವಂದದಲಿ | ಅಂತಃ
ಕರುಣದಿ ಬಂದು ತರ್ಕೈಸಲು ಭಯ ಸಂ
ಗರಕತ್ತ ತೆರಳುವುದ ತಿಳಿಸೆಂದ ನರನು      ೧೫

ಅಳಿಯನಿರಲು ಮುಂದೆ ಉಳಿವಿಲ್ಲವೆಂಬುದು
ತಿಳಿದೆಲೊ ಪಾರ್ಥನೆ ಕೇಳೆಂದನು | ಪೋಪ
ಹಳಹಳಿಯಾತಕೆ ಈ ರಣವನು | ಗೆದ್ದು
ನಳಿನವ್ಯೂಹವ ಸೂರೆಗೊಂಬುವನು | ಆಸಾ
ಡಳೆ ನಿನ್ನ ಕಜುವರಗೆ ಬಿಡು ಚಿಂತಿ ನಡೆಯೆಂದು
ತಳು ಮಾಡದಾಕ್ಷಣ ತಿರುಹಿದ ರಥವ                  ೧೬

ಹವಕತ್ತ ನರಹರಿ ತೆರಳಲು ವ್ಯೂಹಕೆ
ಪವನಜ ನಕುಲ ಸಾತ್ವಿಕಿ ಮುಖ್ಯರು | ಮಿಕ್ಕಿ
ದವನಿಪರ್ತಟ್ಟಿತದಿಂದಲವರು | ವಾದ್ಯ
ರವಸದಬ್ಬರದಿಂದ ತೆರಳಿದರು | ಪೃಥ್ವಿ
ನವಖಂಡ ಬಿರಿದು ತಲ್ಲಣಿಸಿತು | ಕೋಪದಿ
ಕವಿದರು ಶರಮಳೆ ಉರವಣಿಸುತಲಿ          ೧೭

ವರವುಂಟು ಸೈಂಧವ ಸರಿವನೆ ಶೀಘ್ರದಿ
ತರಿದು ಬಂದ ಕಣೆಯ ಕೊರೆದು | ಒಬ್ಬ
ರಿರದೆ ದೇಹದ ಎಚ್ಚರ ಮರೆದು | ರಕ್ತ
ಸುರಿದು ಕಂಗೆಟ್ಟು ಓಡಿತು ಮುರಿದು | ಭೀಮ
ಭರದಿ ಮಸ್ತಕ ದಿಮ್ಮ ಸಡಿಲಿಸಿ ಘಾಯದಿ ಹೀಗೆ
ಬರುತಿರಲದ ಕಂಡು ಧರ್ಮನಂದನನು       ೧೮

ಬಲವೋಡಿ ಬರಲಾಗ ಯಮಜಾತ ಮನನೊಂದು
ಬಲು ಚಿಂತೆಯಿಂದಲಿ ವ್ಯೂಹವನು | ಒಬ್ಬ
ಬಲರಾಮ ಕಾಳಗ ಬಲ್ಲವನು | ಬೇಗ
ನಳಿನಾಕ್ಷಿ ಮರಣವ ತಿಳಿದವನು | ಮತ್ತಿ
ನ್ನುಳಿದವರಾರಾರ ಕಾಣೆ ಕೇಳಭಿಮನ್ಯು
ಛಲದಿಂದ ಹೊಗಬಲ್ಲ ತಿರುಗಲಿನ್ನರಿಯ       ೧೯

ಪುಂಡ ಪ್ರಚಂಡ ಉದ್ದಂಡ ಕ್ಷತ್ರಿಯ ಕುಲ
ಗಂಡರಿಕುಲ ಪಾರ್ಥನಂದನನು | ಪಿತನ
ಕಂಡಡೆ ಕಮಲ ದ್ವಂದ್ವವನು | ದೀರ್ಘ
ದಂಡ ಶರಣು ಶರಣೆಂದವನು | ಭೂ
ಮಂಡಲ ಪತಿಯಪ್ಪಣೆ ಕೊಟ್ಟು ಕಳುಹೊ ನೀ
ಭಂಡಬಲವನೆಲ್ಲ ಖಂಡಿಸಿ ಬರುವೆ   ೨೦

ಹಸುಳೆಯ ನುಡಿಕೇಳಿ ನಸುನಕ್ಕು ಧರ್ಮಜ
ಒಸೆದಪ್ಪಿಕೊಂಡು ಮುಂಡಾಡಿದನು | ಸಣ್ಣ
ಸಿಸುವೆಲೆ ಕಂದ ನೀ ಕಲಹವನು | ನಿನ
ಗಸದಳವು ಮಹಾರಥಿಕರನು | ಅವ
ರೆಸುಗೆಯ ನೀನೆಂತು ಸೈರಿವೆ ಪೇಳು ನೀ
ಹಸುಳಾಟವಲ್ಲವೊ ಅಸಮ ಸಂಗರವು        ೨೧

ಶರಧಿಯ ಮಧ್ಯದಿ ಸುಳಿವದು ಕಾಲನ
ಕೊರಳೊಳು ನಾಟ್ಯವಾಡಲಿಬಹುದು | ಮೃತ್ಯು
ತರುಣಿ ಬಾಯೊಳಗಿರಬಹುದು | ಸರ್ಪ
ನೆರೆ ಫಣಿಮಂಡಲೊಳಾಡಬಹುದು | ಚಿಕ್ಕ
ತರುಳ ನೀ ಗೆಲುವಂಥ ಪರಿಯೆಂತೊ ಕಂದನೆ
ಅರಿತವನಲ್ಲವೊ ವ್ಯೂಹ ಭೇದವನು ೨೨

ಧರಣೇಶ ಕೇಳು ಸಂಪಿಗೆ ಪುಷ್ಪದರಳುಂಡು
ಸರಸದಿ ಭ್ರಮರಾಳಿ ಜೀವಿಪುದೆ | ಸರ್ಪ
ಗರುಡನೆ ಕೆಣಕಿ ತಗಾ ಬಾಳುವದೆ | ಗಜ
ಹರಿಯ ಸಮ್ಮುಖಕಿದಿರಾಗುವದೆ | ಬಿಡು
ಸರಕುಮಾಡದೆ ಕೊಲ್ವೆ ಕೇಳು ಕೃತಾಂತನ
ಪುರಕತ್ತ ಕಳುಹಿ ಬಿಡುವೆ ರಿಪುಬಲವ                   ೨೩

ಕಂದ ಕೇಳಿರಿ ಬಲದಧಟಕೆ ಮಾರುತ
ನಂದನಾದಿಗಳೆಲ್ಲ ಹೆದರಿದರು | ಗುರು
ನಂದನ ರಾಧೆಯ ಶಕುನಿಯರು | ಕೃಪ
ಸೈಂಧವ ದುಶ್ಯಾಸನಾದಿಗಳು | ಕೇಳು
ಇಂದುಧರನು ಬರೆ ಹಿಂದು ಮುಂದೆನಿಸುವ
ರಿಂದಿಗೆ ನೀನೊಬ್ಬ ಹೇಗೆ ಸೈರಿಸುವೆ                   ೨೪

ಕವಿದಟ್ಟಿ ಬರುವ ಕಾವಲದಬ್ಬರಕಿನು
ರವಿ ಕಂಡು ಗಡಣಕೆ ಅಂಜುವನೆ | ಕೇಳು
ಪವನ ಪಾವಕ ದಾಳಿಗ್ಹೆದರುವನೆ | ಜ್ವಾಲೆ
ತವಕದಿ ಬೆರೆವುದೆ ಹಿಮದೊಡನೆ | ಕುಂಭ
ಕುವರ ಕುಮಂತ್ರದೊಡ್ಡಿನ ಭಾವಕಂಜೆನು
ಸವರಿಬಿಡುವೆ ಬಲ ಕಳುಹಿ ನೋಡೆಂದ       ೨೫

ಹರುಷದಿ ಭೂವರ ಕೊಡಲಾಗ ನೇಮವ
ಹರಹರ ಇಂತಪ್ಪರಧಿಕರೊಳು | ಕಾದಿ
ತಿರುಗಿ ಬಂದಂಜಿ ಭೀಮಾದಿಗಳು | ತುಸು
ಕರುಣಿಲ್ಲ ಭೂಪಗೆ ಪಾಪಿಗಳು | ಎಳೆ
ತರುಳನ ಕಾಳಗಗಟ್ಟಿದರಯ್ಯಯ್ಯೊ
ಪರಿವಾರ ಸುರರೆಲ್ಲ ಮರಗುತಲಿಹರು         ೨೬

ಬಿಗಿದು  ಗಂಡುಡುಗೆಯ ಖಡ್ಗ ಕಠಾರಿಯ
ಮಿಗಿಲಾದ ಘಂಟೆಯ ನಾದವನು | ಕಟ್ಟಿ
ಅಗರು ಕಸ್ತೂರಿ ಗಂಧ ಲೇಪವನು | ಆಗ
ಸೊಗಸಿಂದ ಧರಿಸಿದ ಬಿರಿದವನು | ಝಗ
ಝಗಿಪ ರತ್ನದ ತೇರು ಕನಕ ಸತ್ತಿಗೆಯಿಂದ
ಹೊಗಲನುವಾದನಾಹವಕಭಿಮನ್ಯು ೨೭

ಅರಸಗೆ ವಂದು ಭೀಮಾದಿ ನಕುಲರ
ಹರಕೆಯ ಕೈಕೊಂಡು ಹರುಷದಲಿ | ವರ
ತುರುಗಬಲಕೆ ಬೇಗ ನಮಿಸುತಲಿ | ಚಾಪ
ಕರಮುಟ್ಟಿ ನೊಸಲಿಗೆ ಚಾಚುತಲಿ | ರಥ
ತಿರುಗಿಯೆರಗಿ ಭಾರಿ ಭುಜಗಳನೊದರಿಸಿ
ಭರದಿ ರಥವನೇರುತಿರಲಭಿಮನ್ಯು  ೨೮

ತ್ವರಿತದಿ ಸೌಭದ್ರಿ ಮುಂಬಂದು ಹೋಗುವ
ಭರವೆಲೊ ನಿನಗಿದು ತರವಲ್ಲವು | ರಣ
ಸರಸಲ್ಲ ಹಿತವೇನೊ ಪರಲೋಕವು | ಎನ್ನ
ಕೊರಳ ಹರಿದು ಏರು ನೀ ರಥವ | ಸಣ್ಣ
ತರುಳನೆ ನಾ ನಿನ್ನ ಕಳುಹಿ ಜೀವಿಸಲ್ಹ್ಯಾಂಗ
ಇರಲೆಂದು ಹೊರಳುತ ಅಳಲಿದಳವಳು      ೨೯

ಹಡೆದವ್ವ ನೀ ಎನ್ನ ತಡೆವುದುಚಿತವೇನ
ಕೊಡು ಗೆದ್ದುಬಾ ಎಂದು ಹರಕೆಯನು | ಶೋಕ
ನುಡಿಸಲ್ಲ ಬಿಡುಬಿಡು ಚಿಂತೆಯನು | ನಿನ್ನ
ನುಡಿಗೇಳಿ ಬಿಡೆನು ನಾನು ಕೇಳಿದನು | ಎಂದು
ಒಡಗೊಂಡು ಸಾರಥಿ ವೀರಬೊಬ್ಬೆಗಳಿಂದ
ಪೊಡಮಟ್ಟು ರಥವೇರಿ ಬರುವದೇನೆಂಬೆ      ೩೦

ಮೊಳಗಿದವಾಕ್ಷಣ ಕಾಳಿ ದುಂದುಭಿ ಭೇರಿ
ಗಳು ಚಿನಿಕಾಳಿ ಹೆಗ್ಗಾಳಿಗಳು | ಲಗ್ಗಿ
ಉರಿವ ನಗಾರಿ ಕಂಸಾಳಗಳು | ಬೊಬ್ಬಿ
ಛಲದಿಂದ ಒದರ್ವಂಥ ಬಾಹುಗಳು | ಗಿರಿ
ಕುಲವೆಲ್ಲ ಉರುಳೆ ಭೂಮಂಡಲ ಬಿರಿದುದು
ಪ್ರಳಯಕಾಲದ ರುದ್ರನೆಂಬರೀ ಬಲಕೆ         ೩೧

ಪೊಡವಿಪನನುಜರು ಸಹಿತಾಗ ಕಳುಹುತ
ಒಡನೆಲ್ಲ ಬಂದು ಸಮೀಪದಲಿ | ಇಂದು
ನಡೆ ಕಂದ ವಿಜಯನಾಗೆಂಬುತಲಿ | ತನು
ದಡಹಿ ನೇಮದಿ ತಾವು ತಿರುಗುತಲಿ | ಘುಡು
ಘುಡಿಸುತ ವೀರ ಬೊಬ್ಬೆಯನಿಕ್ಕಿ | ಶೀಘ್ರದಿ
ನಡೆತರುತಿರಲು ಸಾರಥಿಯೆಂದನಾಗ        ೩೨

ವರ ಕಂದ ಕೇಳೊ ನಿನ್ನಯ ಮಾತು ಒಪ್ಪುವು
ಹರ ಕಾದಲರಿಯ ನೀ ದುರ್ಗದಲಿ | ನಿನ್ನ
ಕೊರಳ ಸತ್ವವ ಮುನ್ನರಿಯದಲಿ | ದೊಡ್ಡ
ಗಿರಿಯ ಹೊರುವರೇನೊ ಸಮರದಲಿ | ಕೃಪ
ತರಣಿಜ ದ್ರೋಣ ಶಕುನಿ ಮುಖ್ಯ ಸಲ್ಯರು
ಇರುವರೆಂಬುತ ಸುತ ಶಿರವ ತೂಗಿದನು     ೩೩

ಮರುಳ ಸಾರಥಿ ಕೇಳೊ ಬರಿಯ ಪೌರುಷವನು
ಪರಕಿಸುವವನಲ್ಲ ಕೇಳಿದನು | ಹರ
ಬರಲು ಸಮ್ಮುಖಕೊಮ್ಮೆ ದಣಿಸುವೆನು | ಸುರ
ವರನ ನೋಡದೆ ಮುನ್ನ ಸದೆವುವೆನು | ಕಾಲ
ನಿರದೆ ಕೊಲ್ಲುವೆ ನರಹರಿಯ ಮ್ಯಾಲ್ಕುಮಿಕಿಲಿ
ಬರಲೊಮ್ಮೆ ನೋಡುವೆನೆಂದಭಿಮನ್ಯು       ೩೪

ಹಸುಳನೆಂಬುವ ನುಡಿ ಬಿಡು ನೋಡುಯೆಂದು ಬಿ-
ಲ್ಕಸದು ಹೆದೆಯ ಜೆಗ್ಗಿ ಒದರಿಸಲು | ಆಗ
ವಸುಧೆಯಲ್ಲಾಡಿತು ನಿಲ್ಲದಲು | ಹೆಡಿ
ಕುಸಿದಹಿಯೆದ್ದಿತು ಅಬ್ಬಿಯೊಳು | ಧೂಳ
ಮುಸುಕಿತು ತುರಗ ತೇರಿನ ಛತ್ರದಬ್ಬರದ
ದೆಸೆದಿಕ್ಕು ಏಕಾಗಿ ಅರುಣಛಾಯದಲಿ                  ೩೫

ಅವನ ರಥವಿದು ಅವನ ಸಾರಥಿ ಮಹ
ದೇವನೋ ದೇವಕೀನಂದನನೋ | ಸುರ
ದೇವನೋ ಅತಿವೀರನರ್ಜುನನೋ | ಇದು
ಭಾವಿಸಲರಿದು ಮತ್ತಾವನೋ | ಎಂದು
ತೀವಿದ ಸೌಬಲ ಸೈಂಧವನಾಡಲು
ಆವಾಗ ಶೀಘ್ರದಿ ಬಂದು ಕೂಡಿದರು          ೩೬

ನುಡಿದನು ಸೈಂಧವ ಹುಡುಗ ನೀ  ಬರುವರೆ
ಪಡೆದ ಭೀಮನು ಅಂಜಿ ಓಡಿದನು | ತಿರಿ
ಗಡಿಯಿಡು ನಿನಗೇಕೆ ಈ ಹವನು | ಎಂದು
ಹೊಡೆದನು ತವಕದಿ ಬಾಣವನು | ಕಡಿ
ದ್ಹುಡುಗನೆಂಬುವನುಡಿ ಬಿಡುಬಿಡು ಹಿಡಿಹಿಡಿ
ತೊಡಚಿ ಬಿಟ್ಟನು ಗಣಿಗಡಿಯೆಲೋಯೆನುತ            ೩೭

ಸಿಡಿಲೆರಗಿದ ಪರಿಯೆಂದದಿ ತುಡುಕಲು
ಸಿಡಿದೀತು ರಥ ಮುನ್ನ ತೇಜಿಗಳು | ಅಡಿ
ಯಿಡದೆ ಬಿದ್ದವು ಬೇಗ ಭೂಮಿಯೊಳು | ಸುತ
ಬಿಡದೆ ಬಿದ್ದುರುಳುತ ಮುಂಬಿನೊಳು | ಎದಿ
ಯೊಡೆದು ಭಟರು ತಲ್ಲಣದಿ ಹೆಮ್ಮೆಟ್ಟುತ
ದುಡುಕಿದವಾಕ್ಷಣ ವಿಗಡ ಮೋಹರವ                  ೩೮

ಉಬ್ಬುತ ರಣವೀರ ಬೊಬ್ಬಿಲೆ ವೊಳಪೊಕ್ಕು
ಕೊಬ್ಬಿದ ಬಲವ ಸಂಹರಿಸುತಲೀ | ಭೂತ
ಕ್ಹಬ್ಬುವಾದುದು ರಣಮಂಡಲಲೀ | ಮುಖ
ಕೊಬ್ಬಿರದಾಗೆ ಸಮರದಲೀ | ಪಾರ್ಥ
ನರ್ಭಕ ಸದೆದ ಶೌರ್ಯದಿ ಒಂದು ನಿಮಿಷದೊ
ಳದ್ಭುತವಾದುದು ಅರಸ ಕೇಳೆಂದ  ೩೯

ಮುತ್ತಿತು ಸೌಬಲ ಸುತ್ತಲಿ ಗಜರಥ
ಒತ್ತರ ಹಯಭಟ ಮೊತ್ತಗಳು | ಬೇಗ
ಕಿತ್ತೆಚ್ಚು ಕುವರ ಕೂರಂಬುಗಳು | ಕುಣಿ
ವುತ್ತಲಿ ಹಸ್ತಿ ತುರಗ ಲೆಕ್ಕವಿಲ್ಲದೆ
ಸತ್ತಿತು ರಭಭೂಮಿ ನೆತ್ತರಂಬುಧಿಯು        ೪೦