ಅರಸ ಕೇಳಾ ರಣರದ್ಭುತ ದಂದುಗ
ಪರಕಿಸಲರಿಯೆ ನಾನತಿ ಚೊದ್ಯವು | ತುಳಿ
ದೊರಸಿದ ಗಜಹಯ ಉರುಳಿದವು | ಬಿದ್ದು
ನೆರಳರೆ ಘಾಯ ಘೋಳಿಸುತಿರ್ದವು | ಬೊಬ್ಬೆ
ವೊರೆದ್ಹಿಂಗ ಕೊಂದನು ನೋಡಲಾರದೆ | ಕರ್ಣ
ಭರದಿಂದ ತರುಳನ ಕರವ ಖಂಡಿಸಿದ        ೮೬

ಕರ ಹೋಗಲಾಕ್ಷಣ ತ್ವರಿತದಿ ಇನಸುತ
ಸುರಿದರುವತ್ತೈದು ಮಾರ್ಗಣಲಿ | ಬಲು
ಶರ ಹಿಡಿದು ಬಂದು ಬೊಬ್ಬೆಯಲಿ | ರಥ
ಮುರಿಯಲೊದೆದು ಕರ ಗಾಲಿಯಲಿ | ಇಕ್ಕಿ
ತಿರುಹಿ ಹೊಯ್ಯಲು ಶಿರಹರಿದು ಕತ್ತರಿಸಲು
ಹರಿಯ ಕರದ ಚಕ್ರ ಬಂದುದೆಂಬುತಲಿ        ೮೭

ಕೈ ಹೋಗಲಾಕ್ಷಣ ಮುಳ್ಳಿಡಲಿಂಬಿಲ್ಲ
ಮೈಯೊಳಗಂಬಿನ ಘಾಯದಲಿ | ಕಂದ
ಸುಯ್ ಗರೆದು ಹೊಯ್ದಾಡುತಲಿ | ಮತ್ತೆ
ಧೈರ್ಯದಿ ನಿಂದು ಚೇತರಿಸುತಲಿ | ಘಾಯ
ಸಯಿಸಲಾರದೆ ತಿರುಗಿ ಬೀಳುತಲಿರೆ
ಹುಯ್ಯೆಂದು ತಡೆದ ದುಶ್ಯಾಸನಾತ್ಮಜನು    ೮೮

ಕಡುಹಿಲಿ ಗರ್ವದಿ ಬಂದು ಘರ್ಜಿಸಿ ಎಲೊ
ಘಡ ನಿನ್ನ ಬಿಡುವರೆ ಸಂಗರಲಿ | ನಿನ್ನ
ಕಡಿದು ನೋಡದೆ ಬಿಡೆವೆಂಬುತಲಿ | ಕಂದ
ಮಡಿವ ಕಾಲಕೆ ಸಂಗತೆಂಬುತಲಿ | ಕೋಪ
ಕುಡಿವರಿದಾಕ್ಷಣ ಹೊಡೆದು ಕಾಲಡಿಯಲ್ಲಿ
ಕೆಡಹಿ ಮಡಿದನಾಗ ಧುರದ ಮಧ್ಯದಲಿ       ೮೯

ಬಿಗಿದ ಹುಬ್ಬಿನ ಗಂಟು ತೆಗೆದ ಕಂಗಳ ಮುಖ
ಹೊಗರು ತಿದ್ದಿದ ಮೀಸಿ ಕುಣಿವುತಲಿ | ಚೆಲ್ವ
ಬೊಗರೆಗಡ್ಡದ ಭಾವ ಎಸೆವುತಲಿ | ಆಗ
ಜಿಗಿದಂಥ ರಕ್ತ ಜೋರಿಡವುತಲಿ | ಸಲೆ
ನೆಗೆದ ರೋಮಗಳಿಂದ ತುರುಗಿದ ಬಾಣದಿ
ಮಗುವು ಮಡಿದನಾಗ ಶಸ್ತ್ರಶಯನದಲಿ       ೯೦

ಸಾವುವ ಹರಿಯದೆ ಕೌರವಾದಿಗಳೆಲ್ಲ
ಆವ ಸಮರ್ಥರು ಸಮರದಲಿ | ಹಿಂಡು
ಹಾವಿನ ಬಳಗವು ಕೂಡುತಲಿ | ಖಗ
ದೇವನ ಮರಿ ಕೊಂದುದೆಂಬುತಲಿ | ಅಯ್ಯೊ
ಹ್ಯಾವವಿಲ್ಲದೆ ಕೊಂದರತಿರಥರೆನುತಲಿ
ದೇವತಿಂಥಿಣಿ ಗೌರಿದೇವಿ ದುಃಖದಲಿ                   ೯೧

ಕೂಸಿನ ಮೇಲ್ಹೋಗಿ ವೀರಾದಿವೀರರು
ಮೋಸದಿ ಕೊಂದರು ಯುದ್ಧದಲಿ | ಬಾಳ
ಏಸೊಂದು ಗಜಗಳು ಕೂಡುತಲಿ | ಒಂದು
ಕೇಸರಿಮರಿ ಕೊಂದ ಪರಿಯಂದಲಿ | ಎಂದು
ವಾಸವ ಸಾಸಿರನೇತ್ರದಿ ಜಲಧಾರೆ
ಸೂಸ್ಯಾಡುತಲಿರ್ದ ಪೌತ್ರಮೋಹದಲಿ       ೯೨

ತವಕದಿ ಅಪ್ಪರ ನಾರಿಯರಳಿದರು
ಇವನ ಪೋಲುವರುಂಟೆ ಲೋಕದಲಿ | ಎಂದು
ಯುವತೇರು ಬಗೆಯಿಂದ ಪೊಗಳುತಲಿ || ಇಂದ್ರ
ನವಪೀಠದೊಳಗೊಯ್ದು ಇರಿಸುತಲಿ | ಇಂಥ
ಕುವರನ ನೋಡಲಾರೆನು ಎಂದು ಗಮಕದಿ
ದಿವಕರನಿಳಿದನು ಪಶ್ಚಿಮಾಂಬುಧಿಗೆ          ೯೩

ಧುರದೊಳಗಭಿಮನ್ಯು ಅಳಿದನೆಂಬುದ ಕೇಳಿ
ಹೊರಗಿನ ಪರಿವಾರ ದುಗುಡದಲಿ | ಬಂದು
ಪುರವ ಹೊಕ್ಕಿತು ಆಗ ಬೀದಿಯಲಿ | ಕಲಿ
ತರುಳ ಮಡಿದ ಸುದ್ದಿ ಹರವುತಲಿ | ಪಾಂಡ
ವರ ದೊರೆ ನಾಯಕರತಿ ಚಿಂತೆಯಿಂದಲಿ
ಭರದಿ ಪೊಕ್ಕಿತು ಬಂದು ರಾಜಮಂದಿರವ     ೯೪

ಬವರದೊಳ್ ಕುವರನೇನಾದನೆಂಬುತ ಯಮ
ಕುವರ ಚಿಂತಿಸುತಿರ್ಹ ಸಮಯದಲಿ | ಎಂದ
ರವರಾಗ ರಾಯ ಕೇಳೆಂಬುತಲಿ | ನಿನ್ನ
ಕುವರ ವ್ಯೂಹದಿ ಅತಿ ಶೌರ್ಯದಲಿ | ವೈರಿ
ಕುವರನೋರ್ವನ ಕೊಂದು ಜವಪುರಿಗಟ್ಟಿದ
ತವಕದಿ ಏರಿದನಿಂದ್ರಗದ್ದುಗೆಯ     ೯೫

ನಾಯಕರಾಡಿದ ನುಡಿಗೇಳುತ ಧರ್ಮ
ರಾಯ ದುಃಖದಿ ಸುಕುಮಾರಕನು | ಬಾಣ
ಘಾಯದಿ ಎಷ್ಟೊಂದು ಬಳಲಿದನು | ಕಂದ
ಸಾಯಲಾರದೆ ಎಂತು ಅಳುಕಿದನು | ಅಯ್ಯೊ
ಕೈಯಾರೆ ಕೊಂದೆವೊ ಭೀಮಾದಿ ನಕುಲರು
ಸುಯ್ ಗರೆದು ಪುತ್ರನೇ ಎಂದಳಲಿದರು      ೯೬

ಪೊಡವಿಯೊಳ್ಳಿನ್ನಂಥ ಕಡುಧೀರರುಂಟೆಯೆಂದು
ಪೊಡವಿಪ ಧರ್ಮಜ ದುಃಖದಲಿ | ಎದಿ
ವೊಡೆದು ಬಿದ್ದುರುಳುತ ಭೂಮಿಯಲಿ | ಹಣೆ
ಬಡಿದ್ಹುಡಿಯೊಳು ಮುಳಿಗೇಳುತಲಿ | ಧೂಳೆ
ಅಡರಿ ರೂಪದಿ ಕೆಟ್ಟು ರಾಯ ಹವ್ವನೆ ಹಾರಿ
ಒಡೆಯ ಮೈಮರೆದುದ ಕಂಡರಾ ಭಟರು     ೯೭

ಇದು ಘಾತವಾದಿತೆಂದೊದಗಿ ಮಂತ್ರಿಗಳೆಲ್ಲ
ಎದೆಮುಟ್ಟಿ ಮುಖನೋಡಿ ಶೋಕದಲಿ | ಮುಗಿ
ಲುದಿಸುವ ಉಸುರನಾರೈಸುತಲಿ | ಆಗ
ಕುದಿವ ಉಸುರ ಕಂಡು ಧೈರ್ಯದಲಿ | ಬಾಲ
ಬೆದರದೆ ನಾಯಕರೊಡಲ ಹೊಳೆ ಕಂಡು
ಮುದದಿ ಭೂವರಗುಪಚರಿಸುತಲಿಹರು        ೯೮

ಉರಿಬಿದ್ದು ಒಡಲೊಳು ಕರಗಿ ಕಾತರಿಸುತ
ವರ ಕೊಂತಿ ಭೋಜ ವಿರಾಟನನು | ಗಾಳಿ
ತರುಳ ಸಾತ್ವಿಕಿ ದೃಷ್ಟದ್ಯುಮ್ನನನು | ಅಲ್ಲೆ
ಇರುವ ಶಿಖಂಡಿಯ ನಕುಲರನು | ಕಂಡು
ಮರಣದ ಶೋಕದಾತುರದಬ್ದಿಯೊಳಗಾಗೆ
ಹೊರಳ್ಯಾರು ಆ ದುಃಖ ಹರ ಬಲ್ಲನರಸ      ೯೯

ರಾಯ ಮೆಲ್ಲನೆ ಕಣ್ಣು ತೆರೆದು ಎಚ್ಚರ ಹುಟ್ಟಿ
ಹಾಯೆನ್ನ ಪುತ್ರನೆ ಹ್ಯಾಗಿರಲಿ | ಒಮ್ಮೆ
ಕಾಯದೊಳೆಚ್ಚರ ಮರೆವುತಲಿ | ಕಂದಾ
ಬಾಯೆಂದು ಬಯಲು ತಕ್ಕೈಸುತಲಿ | ಅಯ್ಯೊ
ನೀಯೆಮ್ಮನಗಲಿದೆ ಮಗನೆ ನಿನ್ನಯ ಚೆಲ್ವ
ಛಾಯೆ ಪೋಲುವರುಂಟೆ ಮೂರು ಲೋಕದಲಿ                    ೧೦೦

ನರ ಬಂದು ಎನ್ನಯ ತರುಳಂದರೇನ್ಹೇಳೆ
ತರವೇನೊ ಮಡಿದನೆಂದ್ಹೇಳಲೇನೊ | ವೈರಿ
ದೊರೆಯ ಕೈಯಲಿ ಸಿಕ್ಕನೆನ್ನಲೇನೊ | ನಾನೆ
ಕರಮುಟ್ಟಿ ಕೊಂದೆನೆಂದಾಡಲೇನೊ | ಹೇಳ
ಲರಿದಯ್ಯ ಮಗನೆಂದು ಮರುಗಿದ ಕಣ್ಣೀರು
ಸುರಿದವು ನದಿಯಂತೆ ಧರ್ಮನಂದನಗೆ      ೧೦೧

ಅರಸು ಈ ಪರಿಯಿಂದ ದುಃಖಿಸುತಿರಲೊಳ
ಗಿರುವ ನಾರಿಯರಾಗ ಕೇಳಿದರು | ಮತ್ತೆ
ದೊರೆಗಳೊಳಗೆ ದಾರು ಮಡಿದವರು | ಆಗ
ಆರಸಿ ದ್ರೌಪದಿಗದನರುಹಿದರು | ಕೇಳಿ
ಉರಿಯ ತಾಗಿದ ಎಳೆಬಾಳೆಯಂದದಿ ನಾರಿ
ಕರಗಿದಳಾಕ್ಷಣ ಕಂಡು ಸುಭದ್ರಿ      ೧೦೨

ಮುದ್ದು ಮುಖದ ಕಂದ ಬಿದ್ದ ರಣದಿ ಎಂಬ
ಸುದ್ದಿಯ ಕೇಳಿ ಸುಭದ್ರಿಯಳು | ಉರಿ
ಬಿದ್ದೊಡಲೊಳಗಾಗ ಮರುಗಿದಳು | ನಾರಿ
ಬಿದ್ಹೊರಳಿದಳಾಗ ಭೂಮಿಯೊಳು | ಎದಿ
ಗುದ್ದಿ ಹಣೆಯ ಬಡಿದುದ್ದ ನೆಲನ ಪುಟಿ
ದೆದ್ದು ಬೀಳುತಲಾಗ ಪದ್ಮಗಂಧಿಯಳು        ೧೦೩

ಹೊಡ ಮರಳಿ ಬೀಲುತ ನದಿಯೊಳು ಸಿಡಿದಂಥ
ಮಿಡಿ ಮೀನದಪ್ಪಂತೆ ಮಿಡುಕುತಲಿ | ತನ್ನ
ಕಡು ಚೆಲ್ವ ಕಂದನ ನೆನೆಸುತಲಿ | ದೊಡ್ಡ
ಅಡವಿಯೊಳಗೆ ಬಿದ್ದ ಪರಿಯಂದಲಿ | ನೆಲ
ಬಡಿದ್ಹುಡಿದೋರುತ ಸುಲೆನ್ನ ಜನ್ಮವು
ಪೊಡವಿಯೊಳ್ ಕಡು ಪಾಪಿಯೆಂದಳಾ ನಾರಿ         ೧೦೪

ಕಲ್ಲೆದೆ ಕಾಣಿರಿ ಕಳುಹಿ ಕೊಂದಿರಿ ಅಯ್ಯೋ
ನಿಲ್ಲದೆ ಗಿರಿಯ ಮರೆಯ ಹೊಗಲ್ಯಾ | ಅದು
ಅಲ್ಲದೆ ಭೂಮಿಯ ಬಗೆದ್ಹೊಗಲ್ಯಾ | ಈಗ
ಬಲ್ಲಿದಂಬುಧಿಯೊಳು ಮುಳುಗೇಳಲ್ಯಾ | ಕಂದ
ಎಲ್ಲಿದ್ದನಯ್ಯಯ್ಯೊ ಹ್ಯಾಗೆ ಮಾಡಲಿ ನಾನು
ಪುಲ್ಲಶರನ ರೂಪ ಚೆಲ್ವ ಚೆನ್ನಿಗನು            ೧೦೫

ತಾವರೆ ವ್ಯೂಹವ ದಾವಾತ ರಚಿಸಿದ
ನೋ ವೀರನರ್ಜುನನಿಲ್ಲದಾಗೆ | ಮತ್ತೆ
ಹಾವಳಿ ಬಂತು ಕುಮಾರಕಗೆ | ಅಯ್ಯೊ
ತಾವು ಮಕ್ಕಳನೇನ ಹಡೆದಿರಲಿ | ಎಳೆ
ಜೀವವ ಕೊಲ್ಲುವದುಚಿತವೆ ಎಂದಲ್ಲಿದ್ದ
ಭಾವೇರು ಬಳಲಿ ಚಿಂತಿಸುತ ಶೋಕದಲಿ     ೧೦೬

ಮಗನೆ ನಿನ್ನಯ ರೂಪು ಜಗದೊಳು ಕಾಣೆನು
ನಗೆಮೊಗದೋರು ನಾ ನೋಡುವೆನು | ನಿನ್ನ
ಅಗಲಿ ಮಂದಿರದೊಳು ಇರಲಾರೆನು | ಎನ್ನ
ಬಗಲೊಳು ಬಾರೊ ಮುದ್ದಾಡುವೆನು | ನೆಲ
ಬಗಿದು ಸುಗುನಿ ಎನ್ನ ಮಗುವೆ ಮಗುವೆ ಎಂದು
ಗಗನಕ್ಕೆ ಬಾಯನು ತೆಗೆದಳೇನೆಂಬೆ                   ೧೦೭

ಗುಣಗಣಮಹಿಮೆಯ ಗಣಿಸಲಾರೆನು ಕ್ಷಣ
ಕ್ಷಣಕೊಮ್ಮೆ ಪಾಲ್ಬೆಣ್ಣೆ ಉಣಿಸಿದೆನೊ  | ಇಂಥ
ರಣಕಂತೆ ನಾ ನಿನ್ನ ಬೆಳೆಸಿದೆನೊ | ಪ್ರತಿ
ಅಣುಗರು ಇಹರಂತ ಮರೆಯಲೇನೊ | ಅಯ್ಯೊ
ತ್ರಿಣಯನೇತ್ರ ಪುರಾರಿ ಸರಿಯ ನಾರಿಯರೊಳು
ಹಣೆಯಕ್ಕರೀ ಬ್ರಹ್ಮ ಬರೆವರೇನಕಟ           ೧೦೮

ಕೌರವಸೈನ್ಯದಿ ದ್ರೋಣಾದಿ ಅಧಿಕರೋ
ಳಾರಾರು ಪುಣ್ಯಾತ್ಮರು ಪುಟ್ಟಲಿಲ್ಲೆ | ನಿನ್ನ
ಧೀರ ಶೂರತ್ವಕೆ ಮೆಚ್ಚಲಿಲ್ಲೆ | ಬಂದು
ಭೂರಮಣನ ಧರ್ಮ ನಿಲ್ಲಲಿಲ್ಲೆ | ಅಸು
ಸೂರೆಗೊಂಡರು ನಾಯಿನ್ನಾರಿಗ್ಹೇಳಲಿ ಸುಕು
ಮಾರ ಮಾರನ ಪೊಲ್ವ ಧೀರಸುಂದರನೆ     ೧೦೯

ಈ ಸಭೆಯೊಳಗಿರುವಾ ಸುದತಿಯರು | ಕೇಳಿ
ಕೂಸು ಕಂದವ್ವನ ತೋರಿದರೆ | ವರ
ವಾಸದೊಳಗೆ ಚರಿಸ್ಯಾಡಿದರೆ | ಎನ್ನ
ಕ್ಲೇಶದವಾಗ್ನಿಯ ಕೆಡಿಸಿದರೆ | ಮನ
ಬೇಸರಿವಂತಿರೆ ಕನಕ ವಸ್ತುಗಳ
ನಾ ಸದ್ಯ ನಿಮಗೀಗ ಕೊಡುವೆನೆಂಬುವಳು   ೧೧೦

ಮುನ್ನ ರಣಾಗ್ರಕ್ಕೆ ಪೋಗುವ ಸಮಯದಿ
ಚೆನ್ನಾಗಿ ಮುಖಪದ್ಮ ನೋಡಲಿಲ್ಲೊ | ಗುಣ
ರನ್ನ ಎನ್ನಯ ಮಾತು ಕೇಳಲಿಲ್ಲೊ | ನಿನ್ನ
ಗನ್ನ ಘಾತಕ ಮಾಡಿ ಕೊಂದರಲ್ಲೊ | ಅಭಿ
ಮನ್ಯು ಕುಮಾರನೆ ತಲೆ ಬೀಳುದಕ್ಕಲ್ಲಿ
ನಿನ್ನ ಕಾಲ್ಗತಿಯನು ಎಳಸಿತಯ್ಯಯ್ಯೊ       ೧೧೧

ಭೂಮಿಪ ಕೇಳ್ಹಿಂದೆ ಕಾನನದೊಳು ಸೀತೆ
ಕಾಮಿನಿ ಸೌಮಿತ್ರಿ ಬಿಟ್ಟನಲ್ಲ | ಹಾ ಹಾ
ಕೋಮಲಾಂಗಿಯ ದುಃಖ ಶಿವನೆ ಬಲ್ಲ | ಸದ್ಯ
ಕೀಳ್ಮಡದಿಗೇ ಮಿಗಿಲಾಯಿತಲ್ಲ | ನೃಪ
ಭೀಮ ನಕುಲ ಸಹದೇವ ಮುಂತಾದವ
ರಾ ಮಹಸಭೆಯು ದುಮ್ಮಾನವಾಗಿಹುದು     ೧೧೨

ಹಿಂದಿನ ಜನ್ಮದಿ ಆರಾರ ಶಿಶುವನು
ಕೊಮದಿರ್ದೆನದರಿಂದೀ ಜನ್ಮದಲಿ | ಎನ್ನ
ಕಂದನಿಂದಗಲಿದೆನೆಂಬುತಲಿ | ಅರ
ವಿಂದ ಮುಖವು ಬಾಡಿ ಕಂದುತಲಿ | ಓಡಿ
ಬಂದು ರಾಯನ ಮುಂದಾಗ ಧೊಪ್ಪನೆ ಬಿದ್ದು
ಚೆಂದಾದಿತಯ್ಯ ನಿಮ್ಮನದ ಕಾರ್ಯಗಳು     ೧೧೩

ಎಲೊ ಭೀಮ ನಕುಲ ನೀನಳಲುವದ್ಯಾತಕೆ
ಇಳೆಗೆ ಇದ್ದರೇ ಮೂಲವೆಂಬುತಲಿ | ಮುಂದೆ
ಕಳುಹಿ ಕೊಂದಿರಿ ಈಗ ವ್ಯೂಹದಲಿ | ಮನ
ದೊಳಗಿನ ಹಟ ತೀರಿತೆಂಬುತಲಿ | ಇಂದು
ಲಲನೆ ದ್ರೌಪದಿ ಪಂಚಕುವರರ ನೀವಿನ್ನು
ಘಳಿಲನೆ ಇಡಿರಯ್ಯ ಹಸ್ತಿನಾಪುರಕೆ  ೧೧೪

ಸೃಷ್ಟಿಯೊಳ್ ರಾಯ ಧರ್ಮಿಷ್ಟನೆಂಬರು ನಿನ್ನ
ಹೊಟ್ಟೆಯ ಮಗನಾದರಟ್ಟಿಯೇನೊ | ಶಿಶು
ಹುಟ್ಟಿದಾಕ್ಷಣ ಕೊಲ್ಲಬಾರದೇನೊ | ಬಲು
ದಿಟ್ಹರೈವರು ನೀವು ಧೀರರೇನೊ | ಬಿಡು
ಒಟ್ಟಿಗಿನ್ನೇನದ ಇವರಿದ್ದು ಒಡಲಿಗೆ
ಕೊಟ್ಟರು ಕಿಚ್ಚನೆಂದಾಲಿಪರಿದಳು    ೧೧೫

ತರುಣಿಯಳಾಡಿದ ನುಡಿಗೇಳಿ ರಾಯಗೆ
ಸರಳು ನಟ್ಟಂತೆ ಶರೀರದಲಿ | ಸುಮ್ಮ
ನಿರೆ ನನ್ನ ತಂಗಿಯೆಂದ್ಹೇಳುತಲಿ | ಇಷ್ಟು
ಮರಗು ಸಾಲದೆ ತನಗೆಂಬುತಲಿ | ಬಾಳ
ಉರಿವ ಕಿಚ್ಚಿಗೆ ಘೃತವೆರೆದಂತೆ ಆಡುವ
ಬಿರಿನುಡಿ ಯಾತಕೆಂದಳಲಿ ಧರ್ಮಜನು      ೧೧೬

ತಪಸಿ ಶಿರೋಮಣಿ ವ್ಯಾಸ ತಿಳಿದು ಚಿಂತಿ
‌ವ್ಯಾಪಕದಿಂ ಬಂದು ಶೀಘ್ರದಲಿ | ಧರ
ಣೀಪತಿ ಕಾಣಲು ಮಮತೆಯಲಿ | ರತ್ನ
ದಾ ಪೀಠದೊಳಗೊಯ್ದು ಇರಿಸುತಲಿ | ಆಗ
ಶ್ರೀಪಾದಕಮಲಕೆ ನಮಿಸಲು ಬಳಲಿದ
ಭೂಪನ ಮುಕುಟವ ಎತ್ತಿದ ದಯದಿ           ೧೧೭

ಇಳೆವತಿಗಾಕ್ಷಣ ತಿಳಿಸಿ ಜ್ಞಾನವ ತನ್ನ
ಸ್ಥಳಕಾಗಮಿಸಿ ಯತೀಶ್ವರನು | ಶರ
ಒಳಗಿತ್ತ ನಳಿನಾಕ್ಷ ಫಲ್ಗುಣನು | ಆಗ
ಖಳರ ಸಂದಣಿಯೆಲ್ಲ ಜಯಿಸಿದನು | ಕೃಷ್ಣ
ಅಳಿಯನಳಿದನೆಂದು ತಿಳಿದು ಮನದೊಳಾಗ
ನಳಿನಾಪ್ತನಿಳಿದನು ಪಶ್ಚಿಮಾಂಬುಧಿಗೆ        ೧೧೮

ಫಲ್ಗುಣ ನಡೆ ಇನ್ನು ಕೌರವ ಯುದ್ಧವ
ನುಳಿದನೆಂಬುತ ರಥ ತಿರುಹುತಲಿ | ಕಂದ
ನಳಿದನೆಂಬುವ ಸುದ್ದಿ ಉಸುರದಲಿ | ಶ್ರಮ
ಕಳಿದು ಹೋಗುವದೆಂದು ಸರಸಿಯಲಿ | ರಥ
ಇಳಿಸಿ ಕಿರೀಟಿಯ ಮುಳುಗಿಸಿ ಕಪಟದಿ
ತಿಳಿಸಿದನಭಿಮನ್ಯುನಳಿದನೆಂಬುದನು                  ೧೧೯

ಜಲದಿಂದ ಜಿಗಿದೆದ್ದು ಎಲೊ ಕೃಷ್ಣ ಅಂಬರ
ದಲಿ ಧ್ವನಿಯಾಯಿತು ಸಮರದಲಿ | ಇಂದು
ನೆಲನೆ ಹಿಗ್ಗಿತು ನಿಂದು ಎಂಬುತಲಿ | ಪಾರ್ಥ
ತಳಮಳಗೊಂಬುತ ಕಣ್ಣಿನಲಿ | ಸೂಸಿ
ಜಲಧಾರೆಗೊಂಡವು ಕನಲಿದ ದೇಹದಿ
ಬಲು ಮೋಸದಂಬಾಗ ನಟ್ಟಂತೆ ನರಗೆ      ೧೨೦

ಪುತ್ರನ ಚಿಂತಿಲಿ ಹತ್ತಿರ್ದ ರಥ ತಿರು
ವುತ್ತ ಪುರಕೆ ಬರುತೀತನಿಗೆ | ದುಃಖ
ಚಿತ್ತದಿ ಸೂಚನೆ ಆ ಗಳಿಗೆ | ಬಹು
ಕುತ್ತಿಗೆ ಬಿಗಿದವು ಪಾರ್ಥನಿಗೆ | ಪುರು
ಷೋತ್ತಮ ಹಿರಿದೆನ್ನ ಬಳಲಿಸಬೇಡವೊ
ಸತ್ಯವ ನುಡಿ ಇಂದು ಎಂದನಾ ನರನು       ೧೨೧

ದೃಢಗೆಡಬೇಡವೋ ಫಲ್ಗುಣ ನಡೆ ನೀನೆಂ
ದೊಡಗೂಡಿ ಈರ್ವರು ಬರುತಿರಲು | ಸೂರ್ಯ
ಅಡಗಿದ ಗಗನವೋಲಂದದಲು | ಮತ್ತೆ
ಜಡಜಾತನಿಲ್ಲದ ಸರಸಿಯೊಲು | ನೋಡಿ
ದಡೆ ಪುರವೀ ಪರಿ ಕಾಣಲು ಪಾರ್ಥಗೆ
ಕಡು ಭಯವಾಯಿತು ಹೊಕ್ಕನಾ ಪುರವ      ೧೨೨

ಬಂದರು ರಾಜಬೀದಿಗಳೊಳು ಪಾರ್ಥನು
ಕಂದ ಮುಂಬರುವದ ಕಾಂಬುವೆನೊ | ಮುದ್ದು
ನಂದನನಿರವನು ನೋಡುವೆನೊ | ವೈರಿ
ಕೊಂದರೆಂಬುದ ನಾನು ಕೇಳುವೆನೊ | ಮನ
ನೊಂದು ಹೃದಯ ಕಳೆಗುಂದಿ ಬಳಲಿ ನರ
ಬಂದು ಹೊಕ್ಕನು ಆಗ ರಾಜಮಂದಿರವ      ೧೨೩

ಹೊಕ್ಕು ನೋಡಲು ಭಟರೆತ್ತದೆ ಮುಖ ಮುಸು
ಕಿಕ್ಕಿದ ಬಲವೆಲ್ಲ ಕಾಣುತಲಿ | ಮಗ
ಅಕ್ಕಟಕಟ ಸತ್ತನೆಂಬುತಲಿ | ಆಗ
ಉಕ್ಕಿತು ಕೋಪವು ಮಸಗುತಲಿ | ಕಂಡು
ಮುಕ್ಕುಂದ ಯಾದವಗಡಣದಲಿ ಬಂದು
ಹೊಕ್ಕಡಗಿದನಾಗ ಬಂದು ಸೂಭದ್ರಿ ೧೨೪

ಕಂದಿದ ಕಾಂತನ ಮುಂದೆ ಧೊಪ್ಪನೆ ಬಿದ್ದು
ಕಂದನ್ಯಾವಲ್ಲಿಹನೆಂಬುತಲಿ | ನಯ
ದಿಂದಾಡ ಪೋಗ್ಯಾನ ಓಣಿಯಲಿ | ನಾರಿ
ನೊಂದಡಿಯೊಳು ಬಿದ್ದು ಹೊರಳುತಲಿ | ಇಂದ್ರ
ನಂದನ ಬಂದು ಕಣ್ಣೀರು ಸುರಿದು ಯಮ
ನಂದನ ಮುಖವನು ನಿಂದು ನೋಡಿದನು              ೧೨೫

ಬಳಲಿ ಯುದ್ಧದಿ ನಾನು ಬರಲಾಗ ತಾ ಬಂದು
ಪೊಳೆವ ರಥವನೇರಿ ಆಡುವನು | ದೇಹ
ದೊಳು ನಟ್ಟ ಘಾಯವ ನೋಡುವನು | ಯುದ್ಧ
ಗಳ ಮಾಡಿ ದಣಿದೆ ನೀನೆಂಬುವನು | ಎನ್ನ
ಬಳಲಿಕೆ ಹೋಗದು ಎಲೆ ರಾಯ ಕಂದನ
ಸುಳುವು ಕಾಣೆ ತಂದು ತೋರೊ ನೀನೆನಲು ೧೨೬

ವರವ್ಯೂಹದೊಳು ಪೊಕ್ಕು ಸಾಯುವದ್ಯಾತಕೆಂ
ದ್ಹೊರಗಣ ಮಾರಿಯು ಹೊರಗಾಗಲಿ | ಎಂದು
ಧುರವ ಕಟ್ಟಿ ಕೊಂದಿರಿ ಮಮತೆಯಲಿ | ಕಿಚ್ಚು
ಸುರಿದಿರಿ ಒಡಲೊಳಗೆಂಬುತಲಿ | ಬಹಳ
ಮರುಗಿಸಬ್ಯಾಡವೊ ಭೂಪತಿ ಮಗುವಿಗೆ
ಮರಣವ ತಂದವ ದಾವ ಪೇಳೆನಲು                   ೧೨೭

ಕಂದ ವ್ಯೂಹದಿ ಪೋಗಿ ಸಿಕ್ಕನೆಂಬುತ ಬೇಗ
ದಿಂದಲಿ ಕಳುಹಿದೆ ಕಮುಕವನು | ಇರ್ಪ
ಮುಂದೆ ಬಾಗಿಲದೊಳು ಜಯದ್ರಥನು | ಬಲು
ಹಿಂದೆ ಕಾದಿದ ಕಾಣೊ ಕೋಟಿಯನು | ಹೊಕ್ಕು
ವೊಂದಾರೆ ಬಿಡದೆ ಕಟ್ಟಿದ ಮುದ್ದುಬಾಲನ
ಕೊಂದವ ಸೈಂಧವನೆಂದು ಪೇಳಿದನು                 ೧೨೮

ಕೇಳಿದಾಕ್ಷಣ ನರ ತಾಳಿ ಕೋಪವ ಅಯ್ಯೋ
ಖೂಳ ನಿಂದಕನಾದ ಸೈಂಧವನಾ | ದಿನ
ನಾಳೆ ಹೊತ್ತಿರಲಾಗ ನಾನವನು | ಶಿರ
ಹೋಳು ಮಾಡದೆ ಬಿಜೆ ನಾನವನಾ | ಈಗ
ಬೀಳುವೆನಗ್ನಿಯೊಳ್ ಸಟೆಯಲ್ಲೆಂಬುತ
ಸೂರಪಾಲ ತನಯನಾಗ ಶಪಥಮಾಡಿದನು ೧೨೯

ನರನ ಅರ್ಭಾಟಕೆ ನಡುಗಿತು ಸುರಲೋಕ
ಪುರಂಧರ ಬೆದರಿ ತಾ ಬಾಯಿಬಿಡಲು | ಯಮ
ಪುರದಿಂದ ಗೂಲೆಯವ ತೆಗೆದಿರಲು | ಮೃತ್ಯು
ತರುಣಿಯು ಈಶನ ಮೊರೆ ಹೋಗಲು | ಆಗ
ತ್ವರಿತದಿ ಶ್ರೀಹರಿ ಬಂದೆಲೊ ಪಾರ್ಥನೆ
ಸರಿ ನಿನ್ನ ಶಪಥಕೆ ಮೆಚ್ಚಿದೆನನಲು  ೧೩೦

ನಡೆ ತಡವ್ಯಾತಕೆಂದೊಡಗೂಡಿ ನರಹರಿ
ಪೊಡವಿಯು ಬಿರಿವಂತೆ ವಾದ್ಯದಲಿ | ಮುಂಗೈ
ಕಡಿದು ಕೂಗುತ ಸಿಂಹನಾದದಲಿ | ಪೊಕ್ಕು
ಕೆಡಹಿದನರಿಬಲ ವ್ಯೂಹದಲಿ | ಮುನ್ನ
ನಡುವೆ ಸೈಂಧವನಿಟ್ಟು ಬಲ ಸುತ್ತ ಕವಿದಾಗ
ಅಡಗಿಸಿದರು ಆರು ಕಾಣದಂದದಲಿ ೧೩೧

ಏತ್ತೆತ್ತ ನೋಡಲು ಸುತ್ತಲು ಪಾರ್ಥನು
ಮುತ್ತಿದ ಬಲವ ಸಂಹರಿಸಿದನು | ನೋಡು
ಮತ್ತೆಲ್ಲಿ ಕಾಣನು ಸೈಂಧವನು | ಕೃಷ್ಣ
ಹೊತ್ತು ಸ್ವಲ್ಪುಳಿದೀತು ನೋಡಿದನು | ಆಗ
ಎತ್ತಿದ ಚಕ್ರವ ಸೂರ್ಯಮಂಡಲಕಾಗ
ಕತ್ತಲೆ ಮುಸುಕಿತು ಹತ್ತು ದಿಕ್ಕಿನಲಿ            ೧೩೨

ನುಡಿದಂಥ ಭಾಷೆಗೆ ಹಾನಿ ಬಾಹುದು ಎಂದು
ಕಡಿಸಿ ಧನಂಜಯ ಕೊಂಡವನು | ಕಾಷ್ಟ
ಸುಡಿಸಿ ಮಾಡಿದನಾಗ ಅಗ್ನಿಯನು | ಬಿಲ್ಲು
ಹಿಡಿದೆತ್ತಿ ಗಮಕದಿ ತಿರುಗಿದನು | ಕೊಂಡ
ದುಡುಕುವ ಸಮಯದಿ ಹರಿಯೆಂದ ಸಂಶಯ
ಹಿಡಿಯದೆ ಹೊಡೆಯೆನಲಾಗ ಸಿರಗಡಿದ       ೧೩೩

ಮತ್ತೊಂದು ಬಾಣವ ತೆಗೆದೆಚ್ಚಲಾ ಶಿರ
ಹೆತ್ತವನ ಹಸ್ತದಿ ಬೀಳುತಲಿ | ನೋಡಿ
ಪೃಥ್ವಿಗೆ ಚೆಲ್ಲಿದ ಶೀಘ್ರದಲಿ | ಆಗ
ಮಸ್ತಕ ಶತ ಹೋಳಾಗುತಲಿ | ಇದ
ಚಿತ್ತಿಟ್ಟು ಹರುಷದಿ ಕೇಳಲು ಭೋಗ ಸಂ
ಪತ್ತುಗಾಂಬುದು ಸತ್ಯವೆಂದನಾ ಮುನಿಪ     ೧೩೪

ವಸುಧೆಗೆ ಒಪ್ಪುವ ಎಸೆವ ಶ್ರೀ ಕುಂದಗೋಳ
ಅಸಮಾಕ್ಷ ಗುರುಪಾದ ಕರುಣದಲಿ | ಅತಿ
ಪೆಸರ್ವಡೆದಿಹ ದ್ರೋಣಪರ್ವದಲಿ | ತೆಗೆ
ದುಸುರಿದೆನಿದರೊಳು ತಪ್ಪಿರಲಿ | ನೋಡಿ
ರಸಿಕರು ಜರಿಯದೆ ಬಸಲಿಂಗ ರಚಿಸಿದ
ಹಸನಾಗಿ ಲಾಲಿಸಿ ಕುಶಲ ಕೋವಿದರು       ೧೩೫