ಡಾ. ಬಿ.ಎಸ್‌. ಗದ್ದಗಿಮಠ ಅವರು ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವರು. ಬಾಗಲಕೋಟೆಯ ಬಸವೇಶ್ವರ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕರಾಗಿ, ಬಿಜಾಪುರ ಹೈಸ್ಕೂಲಿನಲ್ಲಿ ಅರ್ಧಮಾಗದಿ ಮತ್ತು ಕನ್ನಡ ವಿಭಾಗದ ಶಿಕ್ಷಕರಾಗಿ, ಕೆ.ಎಲ್‌.ಇ. ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಅರ್ಧಮಾಗದಿ ಮತ್ತು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿರುವರು. ಬಸಯ್ಯನವರ ತಂದೆಯವರಾದ ಸವಳಿಗಯ್ಯನವರು ಅನೇಕ ಶಿವಶರಣರ ಹಂತಿಯ ಹಾಡುಗಳನ್ನು ಹಾಡುತ್ತಿದ್ದರು. ಈ ಹಾಡುಗಳು ತಮ್ಮ ಮನಸ್ಸನ್ನು ಸೆಳೆದು ಸೂರೆಗೊಳ್ಳುವಂತೆ ಪ್ರಭಾವ ಬೀರಿದ್ದರಿಂದ ಅವುಗಳನ್ನು ಕೋಚೆತ್ತಿ ಹಾಡುವುದನ್ನು ತಮ್ಮ ತಂದೆಯವರಿಂದ ಕಲಿತು ಹಾಡಲಾರಂಬಿಸಿದರು. ಚಿಕ್ಕವಯಸ್ಸಿನಲ್ಲಿ ಜಾನಪದ ಸಾಹಿತ್ಯವು ಬಸಯ್ಯನವರ ಮನಸ್ಸನ್ನು ಸೆರೆಹಿಡಿದಿರುವುದರಿಂದ ಅವುಗಳಿಗೆ ಮರುಳಾಗಿ ಹೈಸ್ಕೂಲಿನಲ್ಲಿ ಓದುತ್ತಿರುವಾಗಲೇ ಜಾನಪದ ಹಾಡುಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ತಮ್ಮನ್ನು ತಾವೇ ಸ್ವತಃ ತೊಡಗಿಸಿಕೊಂಡರು. ಅಲ್ಲದೇ ಹಲಸಂಗಿ ಗೆಳೆಯರ ಗುಂಪಿನ ಕಾರ್ಯ ಚಟುವಟಿಕೆಗಳು ಬಸಯ್ಯನವರಿಗೆ ತುಂಬಾ ಪ್ರೇರಣೆಯನ್ನುಂಟು ಮಾಡಿದವು.

ತಾವು ವಿದ್ಯೆಗಳಿಸಿದ ಬಾಗಲಕೋಟೆಯ ಬಸವೇಶ್ವರ ಮಾಧ್ಯಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುವ ಅಪೂರ್ವ ಅವಕಾಶ ಲಭಿಸಿರುವದು ಬಸಯ್ಯನವರಿಗೆ ತುಂಬಾ ಹೆಮ್ಮೆಯನ್ನುಂಟು ಮಾಡಿತ್ತು. ಆ ವೇಳೆಯಲ್ಲಿ ತಮ್ಮ ಧ್ಯೇಯ ಸಾಧನೆಗಾಗಿ ಐಹೊಳೆ, ಪಟ್ಟದಕಲ್ಲು, ಬದಾಮಿ, ಬಿಜಾಪುರಗಳಲ್ಲಿಯ ಶಿಲ್ಪಕಲೆಗಳ ಬಗ್ಗೆ ಅಧ್ಯಯನ ಆರಂಭಿಸಿ ಮಾಹಿತಿಯನ್ನು ಸಂಗ್ರಹಿಸತೊಡಗಿದರು. ಹಸಿವು ನೀರಡಿಕೆಗಳನ್ನು ಗಣಿಸದೆ ಜ್ಞಾನತೃಷೆಯಲ್ಲಿ ತಲ್ಲೀನರಾದರು.

ದೈಹಿಕ ಶಿಕ್ಷಣದಲ್ಲಿ ವಿಶೆಷ ತರಬೇತಿ ಪಡೆಯುವ ನಿಮಿತ್ತ ಬಸವೇಶ್ವರ ಹೈಸ್ಕೂಲಿನ ಆಡಳಿತ ಮಂಡಳಿಯವರು ಬಸಯ್ಯನವರನ್ನು ಮುಂಬೈ (ಖಾಂದೇವಾಲಿ)ಗೆ ಕಳುಹಿಸಿಕೊಟ್ಟರು. ಈ ಸಂಸ್ಥೆಯವರೇ ಧನಸಹಾಯದ ವ್ಯವಸ್ಥೆಯನ್ನು ಕೊಡುವದಾಗಿ ಒಪ್ಪಿಕೊಂಡಿದ್ದರು. ಮೊದಲನೆಯ ಕಂತಿನ ಹಣ ಮುಗಿಯುವಷ್ಟರಲ್ಲಿ ಸಂಘದೊಂದಿಗೆ ಮನಸ್ತಾಪವುಂಟಾಗಿದ್ದರಿಂದ ಗದ್ದಗಿಮಠ ಅವರು ಆ ಧನಸಹಾಯವನ್ನು ದಿಟ್ಟತನದಿಂದ ತಿರಸ್ಕರಿಸಿ ಪಣ ಪಡೆದ ಸಂಘಕ್ಕೆ ತಕ್ಷಣವೆ ಎಲ್ಲ ಹಣವನ್ನು ಮರುಪಾವತಿ ಮಾಡಿದರು. ಅತ್ಯಂತ ನಿಷ್ಠುರ ಸ್ವಭಾವದವರಾದ ಬಸಯ್ಯನವರು ಯಾರಿಗೂ ತಲೆಬಾಗದ ‘ಛಲದಂಕ ಮಲ್ಲ’ರಂತಹ ವ್ಯಕ್ತಿತ್ವವುಳ್ಳವರಾಗಿದ್ದರು. ಕೊನೆಗೆ ಬಸವೇಶ್ವರ ಹೈಸ್ಕೂಲಿನ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು ಸ್ವಗ್ರಾಮಕ್ಕೆ ತೆರಳಿದರು.

‘ಕಾಯಕವೇ ಕೈಲಾಸ’ ಎನ್ನುವಂತೆ ಹುಟ್ಟೂರಿನಲ್ಲಿ ಕೃಷಿಕಾರ್ಯ ಕೈಕೊಂಡು ಅತ್ಯುತ್ತಮ ಫಸಲು ಬೆಳೆದು “ಪ್ರಗತಿಪರ ಆದರ್ಶ ರೈತ”ರೆಂದು ಖ್ಯಾತಿಗಳಿಸಿ ಪ್ರಶಸ್ತಿ ಸಹಿತ ಬಹುಮಾನ ಗಿಟ್ಟಿಸಿಕೊಂಡರು. ಕೆಲದಿನಗಳ ನಂತರ ಬಿಜಾಪುರದ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆಸಲ್ಲಿಸತೊಡಗಿದರು.  ಶ್ರದ್ಧೆ ಮತ್ತು ನಿಷ್ಠೆಯಿಂದ ಕಾರ್ಯನಿರತರಾದ ಬಸಯ್ಯನವರು ಆಡಳಿತ ವರ್ಗದವರಿಗೆ ಸಹಜವಾಗಿಯೆ ಅಚ್ಚುಮೆಚ್ಚಿನವರಾದರು. ನಂತರ ಎಂ.ಎ. ಅಧ್ಯಯನ ಕೈಕೊಳ್ಳಬೇಕೆಂಬ ಉತ್ಕಟೇಚ್ಛೆಯಿಂದ ಕೊಲ್ಲಾಪುರದ ರಾಜಾರಾಮ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಆರಂಭಿಸಿ ಎಂ.ಎ. ಪರೀಕ್ಷೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ತೇರ್ಗಡೆಯಾದರು.

ಕೆ.ಎಲ್‌.ಇ. ಸಂಸ್ಥೆಯ ಲಿಂಗರಾಜ ಕಾಲೇಜ ಬೆಳಗಾಂವಿಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಸೇವೆ ಆರಂಭಿಸಿದರು. ಆ ಸಂದರ್ಭದಲ್ಲಿ ಕೆ.ಎಲ್‌.ಇ. ಸಂಸ್ಥೆಯವರೊಂದಿಗೆ ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿರುವುದರಿಂದ ರಾಜೀನಾಮೆಯಿತ್ತು ಸ್ವಗ್ರಾಮಕ್ಕೆ ಪ್ರಯಾಣ ಬೆಳೆಸಿದರು. ಖ್ಯಾತ ಕನ್ನಡ ಪಂಡಿತರಾದ ಪ್ರೊ. ಕೆ.ಜಿ. ಕುಂದಣಗಾರ ಅವರ ಮಾರ್ಗದರ್ಶನದಲ್ಲಿ ಪಿಎಚ್‌.ಡಿ. ಅಧ್ಯಯನದಲ್ಲಿ ನಿರತರಾದರು. ಪ್ರೊ. ಕುಂದಣಗಾರ ಅವರ ಮಾರ್ಗದರ್ಶನದಿಂದ ಅವರ ಬಾಳಿಗೆ ಕುಂದಣವಿಟ್ಟಂತಾಯಿತು. ಕೆ.ಜಿ. ಕುಂದಣಗಾರ ಅವರ ವಿಶಿಷ್ಟ ವ್ಯಕ್ತಿತ್ವ, ಕರ್ತವ್ಯ ನಿಷ್ಠೆ, ಮಾರ್ಗದರ್ಶನಗಳಿಂದ ಪ್ರಭಾವಿತರಾಗಿ “ಕನ್ನಡ ಜಾನಪದ ಗೀತೆಗಳು” ವಿಷಯ ಕುರಿತು ಸಂಶೋಧನೆ ಮಹಾಪ್ರಬಂಧವನ್ನು ಅರ್ಪಿಸಿ ಜನಪದ ಸಾಹಿತ್ಯದ ಪ್ರಥಮ ಪಿಎಚ್‌.ಡಿ. ಪದವೀಧರರೆಂಬ ಕೀರ್ತಿಗೆ ಭಾಜನರಾದರು. ನಂತರ ಸಂಶೋಧನಾ ಕ್ಷೇತ್ರದಲ್ಲಿ ಅವರ ದಾಹ ಮೊಗೆದಷ್ಟು ವರ್ಧಿಸಲಾರಂಭಿಸಿತು.

ಪುಲಿಗೆರೆ (ಈಗಿನ ಲಕ್ಷ್ಮೇಶ್ವರ) ಬಗ್ಗೆ ಸಂಶೋಧನೆ ನಡೆಸುವ ಉತ್ಕಟ ಅಭಿಲಾಷೆಯಿಂದ ಲಕ್ಷ್ಮೇಶ್ವರಕ್ಕೆ ಗದ್ದಗಿಮಠ ಅವರು ಪ್ರಯಾಣ ಬೆಳೆಸಿದಾಗ ಆಲೂರಿನ ಶ್ರೀಮಾನ್‌ತಟ್ಟಿಯವರು ಇವರ ಸಂಶೋಧನಾ ಶಕ್ತಿಯನ್ನು ಗುರುತಿಸಿ ಕ್ರಿ.ಶ. ೧೯೫೫ ರಲ್ಲಿ ಉಮಾ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರನ್ನಾಗಿ ನೇಮಣೂಕಿ ಮಾಡಿಕೊಂಡು ಗದ್ದಗಿಮಠ ಅವರ ಬಗೆಗಿದ್ದ ತಮ್ಮ ಮೆಚ್ಚುಗೆಯನ್ನು ಅಭಿಮಾನವನ್ನು ವ್ಯಕ್ತಪಡಿಸಿ ಸಂಶೋಧನಾ ಕಾರ್ಯದಲ್ಲಿಯು ಸಹಕಾರ ನೀಡಿ ಹುರಿದುಂಬಿಸಿದರು. ಲಕ್ಷ್ಮೇಶ್ವರದ ಐತಿಹಾಸಿಕ ಮಂದಿರ ಮಠಗಳ ಬಗ್ಗೆ ಆಳವಾಗಿ ಅಧ್ಯಯನಗೈಯುತ್ತ ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ರಚಿಸಿ ವಿವಿಧ ಪತ್ರಿಕೆಗಳಲ್ಲಿ ಪ್ರಕಟಪಡಿಸಿದರು . ಜೊತೆಗೆ ಹೈಸ್ಕೂಲಿನ ಸರ್ವತೋಮುಖ ಪ್ರಗತಿಗೆ ಹೆಣಗಾಡಿ ಆದರ್ಶ ಶಿಕ್ಷಕ, ಆದರ್ಶ ಆಡಳಿತಗಾರರೆಂದು ಜಹಪ್ರಿಯತೆಗಳಿಸಿದರು. ಲಕ್ಷ್ಮೇಶ್ವರದ ಲಕ್ಷ್ಮೀಲಿಂಗನಗುಡಿ, ಸೋಮೇಶ್ವರ ಗುಡಿ, ಮಹಂತನ ಮಠ, ಕಲ್ಲುಮಠ, ಜೈನಬಸದಿ, ಜುಮ್ಮಾ ಮಸೀದಿ, ಹಾಗೂ ತೀರ್ಥಗಳನ್ನು ಅಭ್ಯಾಸ ಮಾಡಿ ‘ಆಳಿದುಳಿದ ಪುಲಿಗೇರಿ’ ಎಂಬ ಸಂಶೋಧನಾತ್ಮಕ ಪ್ರಬಂಧವನ್ನು ಬರೆದರು. ಅಲ್ಲದೆ ತಮ್ಮ ವಿದ್ಯಾರ್ಥಿಗಳಲ್ಲಿಯೂ ಸಂಶೋಧನಾಭಿರುಚಿಯನ್ನು ಮೂಡಿಸಿದರು. ಇವರ ದಕ್ಷ ಆಡಳಿತಕ್ಕೆ ಹಾಗೂ ವಿದ್ವತ್ತಿಗೆ ಮತ್ಸರ ಪಡಲಾರಂಭಿಸಿದ ಕೆಲವರು ಗದ್ದಗಿಮಠ ಅವರಿಗೆ ಕಿರುಕುಳ ಕೊಟ್ಟು ಮನಸ್ಸನ್ನು ಘಾಸಿಗೊಳಿಸಿದ್ದರಿಂದ ದಿನಾಂಕ ೨೮.೫.೧೯೫೬ ರಂದು ಮುಖ್ಯೋಪಾಧ್ಯಾಯ ವೃತ್ತಿಗೆ ರಾಜೀನಾಮೆಯಿತ್ತರು. ನಂತರ ೧೯೫೬ ರಿಂದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಸೇವೆ ಸಲ್ಲಿಸತೊಡಗಿದರು.  ಡಾ. ಗದ್ದಗಿಮಠ ಅವರು ೧೯೬೦ ನವ್ಹಂಬರ ೨ ರಂದು ಆಕಸ್ಮಿಕ ಮರಣಕ್ಕೀಡಾಗಿದ್ದರಿಂದ ಜಾನಪದ ಕ್ಷೇತ್ರ ತಬ್ಬಲಿಯಾಗಿ ಉಳಿಯುವ ಪ್ರಸಂಗ ಬಂದಿತು.

ಜಾನಪದ ಸಾಹಿತ್ಯದಲ್ಲಿ ವಿಶೆಷ ಅಭಿರುಚಿವುಳ್ಳವರಾದ ಡಾ. ಗದ್ದಗಿಮಠ ಅವರು ಜಮಖಂಡಿ, ಗಲಗಲಿ, ಮರೆಗುದ್ದಿ, ನಾಗರಾಳ, ಹಲಗಲಿ, ಬಾಗಲಕೋಟೆ, ಕೂಡಲಸಂಗಮ, ತಾಳಿಕೋಟಿ, ಮಮದಾಪುರ, ಬಬಲೇಶ್ವರ, ಇನ್ನೂ ಅನೇಕ ಊರುಗಳಿಗೆ ಪ್ರಯಾಣ ಕೈಕೊಂಡು ಜಾಣಪದ ಹಾಡುಗಳನ್ನು, ಕಥೆಗಳನ್ನು ಸಂಗ್ರಹಿಸಿದ್ದಾರೆ. ಬಾದಾಮಿ ಚಾಲುಕ್ಯರ ಬಗ್ಗೆ ಸಂಶೋಧನೆ ಮಾಡುತ್ತಿರುವ ಸಂದರ್ಭದಲ್ಲಿ ಬಾದಾಮಿ ಗುಹೆಗಳ ಬಗ್ಗೆ, ಐಹೊಳೆ, ಪಟ್ಟದಕಲ್ಲು, ಕರ್ನಾಟಕದ ನೆಟಗಲ್ಲು ಮುಂತಾದವುಗಳ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ.

ಪ್ರಬುದ್ಧ ಕರ್ನಾಟಕ, ಸಂಯುಕ್ತ ಕರ್ನಾಟಕ, ಶೂನ್ಯಸಂಪಾದನೆ, ಪ್ರಚಂಡ ಜೀವನಶಿಕ್ಷಣ, ಕರ್ಮವೀರ ಮೊದಲಾದ ಪತ್ರಿಕೆಗಳಲ್ಲಿ ಉತ್ತರ ಕರ್ನಾಟಕದ ಕೆಳದಿ ಮತ್ತು ಸ್ವಾದಿ ಮನೆತನದವರ ಬಗ್ಗೆ ಸಂಶೋಧನಾತ್ಮಕ ಲೇಖನಗಳು ಪ್ರಕಟವಾಗಿರುತ್ತವೆ. ದುರಗಮುರಗಿ, ಗೊಂದಲಿಗರು, ಶಿಶುನಾಳ ಶರೀಫರು ಮತ್ತು ಕನ್ನಡ ಲಾಲಿಜೋಗುಳಗಳು, ಅನುಭವ ಸಾಹಿತ್ಯ, ಅಳಿದುಳಿದ ಪುಲಿಗೆರೆ ಇತ್ಯಾದಿ ಲೇಖನಗಳನ್ನು ಡಾ. ಗದ್ದಗಿಮಠ ಅವರು ರಚಿಸಿದ್ದಾರೆ. ಅನುಭವ ಸಾಹಿತ್ಯ ಗದ್ದಗಿಮಠ ಅವರ ಪ್ರಸಿದ್ಧ ಲೇಖನ.

೧೯೬೭ರಲ್ಲಿ ಅಖಿಲ ಕರ್ನಾಟಕ ಮೊದಲ ಜಾನಪದ ಸಮ್ಮೇಳನದಲ್ಲಿ ಮೈಸೂರು ಮಹಾರಾಜರು “ಗದ್ದಗಿಮಠ ಮಂಟಪ” ಎಂದು ಮಂಟಪಕ್ಕೆ ನಾಮಕರಣ ಮಾಡಿ ಗೌರವ ಅರ್ಪಿಸಿದ್ದಾರೆ. ಮಾರನೆಯ ಜಾನಪದ ಸಮ್ಮೇಳನದಲ್ಲಿಯೂ “ಗದ್ದಗಿಮಠ ಮಂಟಪ” ಎಂದು ಹೆಸರಿಟ್ಟು ಜನತೆ ಗೌರವ ಸಲ್ಲಿಸಿದೆ.