ಷಭಸೇನರೆಂಬ ರಿಸಿಯರ ಕಥೆಯಂ ಪೇೞ್ವೆಂ :

ಗಾಹೆ || ವಸಈಏ ಪಳಿದಾಏ ವಿಟ್ಠಾಮಚ್ಛೇಣ ಉಸಹಸೇಣೋ ವಿ
ಆರಾಧಣಂ ಪವಣ್ಣೋ ಸಂಘ ಪರಿಸಾ ಎ ಕುಣಾಳಹ್ಮಿ ||

*ವಸಈಏ – ಬಸದಿ, ಪಳಿದಾಏ – ಉರಿಪೆಪಟ್ಟುದಾದೊಡೆ, ವಿಟ್ಠಾಮಚ್ಛೇಣ – ವಿಷ್ಟಮತ್ಸ ನಿಂದಂ, ಉಸಹಸೇಣೋವಿ – ವೃಷಭಸೇನಾಚಾರ್ಯರ್, ಆರಾಧಣಂ – ಮಿಕ್ಕ ದರ್ಶನ ಜ್ಞಾನಚಾರಿತ್ರಂಗಳಾರಾಧನೆಯಂ, ಪವಣ್ಣೋ – ಪೊರ್ದಿದೊಂ, ಸಂಘಪರಿಸಾಎ – ತಮ್ಮ ರಿಸಿಸಮುದಾಯಂ ಬೆರಸು, ಕುಣಾಳಹ್ಹಿ – ಕುಣಾಳಮೆಂಬ ಪೊೞಲೊಳ್*

ಅದೆಂತೆಂದೊಡೆ : ಈ ಜಂಬೂದ್ವೀಪದ ಭರತಕ್ಷೇತ್ರದೊಳ್ ದಕ್ಷಿಣಾಪಥದೊಳ್ ಓಲ*ಲ*ಲhಮೆಂಬುದು ನಾಡಲ್ಲಿ ಕುಣಾಳಮೆಂಬ ಪೊೞಲದನಾಳ್ವೊಂ ಧನದನೆಂಬೊನರಸನಾತನ ಮಹಾದೇವಿ ಪದ್ಮಶ್ರೀಯೆಂಬೊಳ್ ಮಂತ್ರಿ ವಿಷ್ಪಮತ್ಸ ನೆಂಬೊಂ ಪಿರಿಯ ಪಂಡಿತನಂತವರ್ಗಳಿಷ್ಟವಿಷಯ ಕಾಮ ಭೋಗಂಗಳನನುಭವಿಸುತ್ತಂ ಪಲಕಾಲಂ ಸಲೆ ಮತ್ತೊಂದು ದಿವಸಂ ವೃಷಭಸೇನರೆಂಬಾಚಾರ್ಯರ್ ಪಿರಿದು ರಿಸಿಸಮುದಾಯಂ ಬೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಮಾ ಪೊೞಲ್ಗೆ ಬಂದೊಂದು ಬಸದಿಯೊಳಿರ್ದರವರ ಬರವನರಸನುಂ ಪೊೞಲವರುಂ ಕೇಳ್ದು ಪಿರಿದುಂ ಪೂಜೆಯಂ ಕೊಂಡು ಪೋಗಿಯರ್ಚಿಸಿ ಪೂಜಿಸಿ ಪೊಡೆವಡುವುದಂ ವಿಷ್ಟಮತ್ಸ ಂ ಕಂಡು ಸೈರಿಸಲಾಱದೆ ಮಾತ್ಸರ್ಯದಿಂದಂ ತನ್ನ ಪಾಂಡಿತ್ಯದ ಗರ್ವದಿಂದಂ

ವೃಷಭಸೇನರೆಂಬ ಋಷಿಗಳ ಕಥೆಯನ್ನು ಹೇಳುವೆನು – ಕುಣಾಳವೆಂಬ ಪಟ್ಟಣದಲ್ಲಿ ವಿಷ್ಟಮತ್ಸ್ಯನಿಂದ ಬಸದಿ ಉರಿಸಲ್ಪಟ್ಟಾಗ, ವೃಷಭಸೇನಾಚಾರ್ಯರು ತಮ್ಮ ಋಷಿ ಸಮುದಾಯದೊಡನೆ ಶ್ರೇಷ್ಠವಾದ ದರ್ಶನ ಜ್ಞಾನ ಚಾರಿತ್ರಗಳ ಆರಾಧನೆಯನ್ನು ಮಾಡಿದರು. ಅದು ಹೇಗೆಂದರೆ – ಈ ಜಂಬೂದ್ವೀಪದ ಭರತಕ್ಷೇತ್ರದಲ್ಲಿ ದಕ್ಷಿಣಾಪಥದಲ್ಲಿ ಕರಹಟವೆಂಬ ನಾಡಿದೆ. ಅಲ್ಲಿ ಕುಣಾಳವೆಂಬ ಪಟ್ಟಣವಿದೆ. ಅದನ್ನು ಧನದನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ಪದ್ಮಶ್ರೀ ಎಂಬವಳು. ಮಂತ್ರಿ ವಿಷ್ಟಮತ್ಸ್ಯನೆಂಬವನು. ಅವತಿಲ uಶಿಟಲ್ಟ ವಿದ್ವಾಂಸನಾಗಿದ್ದನು. ಅಂತು ಅವರೆಲ್ಲರೂ ತಾವು ಬಯಸಿದ ವಿಷಯದ ಕಾಮಸುಖಗಳನ್ನು ಅನುಭವಿಸುತ್ತಿದ್ದರು. ಹೀಗೆ ಕಾಲ ಕಳೆಯುತ್ತಿತ್ತು. ಆಮೇಲೆ, ಒಂದು ದಿವಸ ವೃಷಭಸೇನರೆಂಬ ಆಚಾರ್ಯರು ಋಷಿಗಳ ದೊಡ್ಡ ಸಮೂಹವನ್ನು ಕೂಡಿಕೊಂಡು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖ ಎಂಬ ಭೂವಿಭಾಗಗಳಲ್ಲಿ ಸಂಚಾರಮಾಡುತ್ತ ಆ ಕುಣಾಳ ಪಟ್ಟಣಕ್ಕೆ ಬಂದು ಒಂದು ಬಸದಿಯಲ್ಲಿದ್ದರು. ವೃಷಭಸೇನಾಚಾರ್ಯರ ಆಗಮನವನ್ನು ರಾಜನೂ ಪಟ್ಟಣಿಗರೂ ಕೇಳಿ ಹೆಚ್ಚಿನ ಪೂಜಾವಸ್ತುಗಳನ್ನು ಕೊಂಡು ಹೋಗಿ, ಅರ್ಚನೆ ಮಾಡಿ, ಪೂಜಿಸಿ ಸಾಷ್ಟಾಂಗ ಪ್ರಣಾಮ ಮಾಡುವುದನ್ನು ವಿಷ್ಟಮತ್ಷ್ಯನು ಕಂಡು ಸಹಿಸಲಾರದೆ ಹೊಟ್ಟೆಕಿಚ್ಚಿನಿಂದ ಕೂಡಿದವನಾಗಿ, ತನ್ನ ಪಾಂಡಿತ್ಯದ ಗರ್ವದಿಂದ ವೃಷಭಸೇನಾಚಾರ್ಯರೊಡನೆ ವಾದ

ವೃಷಭಸೇನಾಚಾರ್ಯರೊಡನೆ ವಾದುಗೆಯ್ದು ನೆರವಿಯೊಳ್ ಸೋಲ್ತು ಸಿಗ್ಗಾಗಿ ಪೋಗಿ ನಟ್ಟನಡುವಿರುಳ್ ಬಂದು ಕಿಚ್ಚಂ ತಗುಳ್ಚಿ ಪೋದಂ ಮತ್ತಂ ವೃಷಭಸೇನಾಚಾರ್ಯರ್ ಮೊದಲಾಗೊಡೆಯ ರಿಸಿಯರ್ಕಳ್ ಕ್ಷಮೆಯಂ ಭಾವಿಸಿ ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಯಾವಜ್ಜೀವಂ ನಿವೃತ್ತಿಗೆಯ್ದು ಶುಭಪರಿಣಾಮದಿಂದಂ ಮಿಕ್ಕ ರತ್ನತ್ರಯಂಗಳಂ ಸಾಸಿ ಮುಡಿಪಿಯಲ್ಲಿ ವೃಷಭಸೇನಾಚಾರ್ಯರ್ ಪದಿನಾಲ್ಕನೆಯ ಪ್ರಾಣತಮೆಂಬ ಕಲ್ಪದೊಳ್ ಪುಷ್ಪಕಮೆಂಬ ವಿಮಾನದೊಳಿರ್ಪತ್ತು ಸಾಗರೋಪಮಾಯುಷ್ಯಮನೊಡೆಯ ದೇವನಾಗಿ ಪುಟ್ಟಿದರ್ ಮತ್ತುೞದ ಋಷಿಯರ್ಕಳುಂ ತಂತಮ್ಮ ತಪೋನುಷ್ಠಾನಕ್ಕೆ ತಕ್ಕಂತು ಸೌಧರ್ಮಕಲ್ಪಂ ಮೊದಲಾಗೊಡೆಯ ಸ್ವರ್ಗಂಗಳೊಳ್ ಪುಟ್ಟಿದರ್ ಮತ್ತಂ ಪೆಱರುಂ ಸಂನ್ಯಸನಂಗೆಯ್ದಿರ್ದ ಕ್ಷಪಣಕರುಂ ವೃಷಭಸೇನಾಚಾರ್ಯರ್ ಮೊದಲಾಗೊಡೆಯ ರಿಸಿಯರ್ಕಳಂ ಮನದೆ ಬಗೆದು ಚತುರ್ವಿಧಮಪ್ಪುಪಸರ್ಗಮುಮಂ ಪಸಿವುಂ ನೀರೞ್ಕೆ ಮೊದಲಾಗೊಡೆಯ ಪರೀಷಹಂಗಳಂ ವ್ಯಾಗಳೊಳಪ್ಪ ವೇದನೆಗಳುಮಂ ಸೈರಿಸಿ ಕ್ಷಮೆಯಂ ಭಾವಿಸಿ ಶುಭಪರಿಣಾಮದಿಂದಂ ಪರಮ ಶುದ್ಧ ಸಹಜ ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಸ್ವರ್ಗಾಪವರ್ಗಸುಖಂಗಳನೆಯ್ದುಗೆ

ಈ ಪೇೞ್ದ ಪತ್ತೊಂಬತ್ತು ಕಥೆಗಳಂ ಶಿವಕೋಟ್ಯಾಚಾರ್ಯರ್ ಪೇೞ್ದೂರ್
ವಡ್ಡಾರಾಧನೆ ಸಂಪೂರ್ಣಂ

ಮಾಡಿ ಸಭೆಯಲ್ಲಿ ಸೋತು ನಾಚಿಕೆಪಟ್ಟನು. ಅವನು ಹೋಗಿ ನಟ್ಟನಡುವಿನ ರಾತ್ರಿಯಲ್ಲಿ ಬಂದು ಬಸದಿಗೆ ಬೆಂಕಿ ಹಚ್ಚಿ ಹೋದನು. ವೃಷಭಸೇನಾಚಾರ್ಯರು ಮೊದಲಾದ ಋಷಿಗಳು ವಿಷ್ಟಮತ್ಸ್ಯನ ಮೇಲೆ ಕೋಪಗೊಳ್ಳದೆ ಕ್ಷಮೆಯನ್ನು ಭಾವಿಸಿಕೊಂಡು ನಾಲ್ಕು ವಿಧವಾದ ಆಹಾರಕ್ಕೂ ಶರೀರಕ್ಕೂ ಜೀವವಿರುವ ತನಕವೂ ಪರಿಹಾರ ಮಾಡಿ (ಅರ್ಥಾತ್ ಆಹಾರ ಸೇವಿಸದೆ ಮತ್ತು ಶರೀರವನ್ನು ಲಕ್ಷ ಮಾಡದೆ), ಶುಭವಾದ ಪರಿಣಾಮದಿಂದ ಶ್ರೇಷ್ಠವಾದ ದರ್ಶನ – ಜ್ಞಾನ – ಚಾರಿತ್ರ ಎಂಬ ರತ್ನತ್ರಯವನ್ನು ಸಾಸಿ ಸತ್ತರು. ಅಲ್ಲಿ ವೃಷಭಸೇನಾಚಾರ್ಯರು ಹದಿನಾಲ್ಕನೆಯ ಪ್ರಾಣತವೆಂಬ ಸ್ವರ್ಗದಲ್ಲಿ ಪುಷ್ಪಕವೆಂಬ ಏಳು ಅಂತಸ್ತಿನ ಅರಮನೆಯಲ್ಲಿ ಇಪ್ಪತ್ತುಸಾಗರಕ್ಕೆ ಹೋಲಿಕೆಯಾಗುವ ಆಯುಷ್ಯವುಳ್ಳ ದೇವರಾಗಿ ಹುಟ್ಟಿದರು. ಆಮೇಲೆ ಉಳಿದ ಋಷಿಗಳೂ ತಮ್ಮತಮ್ಮ ತಪಸ್ಸಿನ ಆಚರಣೆಗೆ ತಕ್ಕ ಹಾಗೆ ಸೌಧರ್ಮಕಲ್ಪ ಮುಂತಾಗಿ ಉಳ್ಳ ಸ್ವರ್ಗಗಳಲ್ಲಿ ಹುಟ್ಟಿದರು. ಅನಂತರ, ಸಂನ್ಯಸನ ಮಾಡಿರುವ ಇತರ ಜೈನಯತಿಗಳೂ ವೃಷಭಸೇನಾಚಾರ್ಯರೇ ಮೊದಲಾಗುಳ್ಳ ಋಷಿಗಳನ್ನು ಮನಸ್ಸಿನಲ್ಲಿ ಧ್ಯಾನಿಸಿಕೊಂಡು ನಾಲ್ಕು ವಿಧಗಳಾದ ಉಪಸರ್ಗಗಳನ್ನೂ ಹಸಿವು ನೀರಡಿಕೆ ಮೊದಲಾಗಿರತಕ್ಕ ಪರೀಷಹಗಳನ್ನೂ ರೋಗಗಳಿಂದ ಉಂಟಾಗತಕ್ಕ ನೋವುಗಳನ್ನೂ ಸಹಿಸಿಕೊಂಡು ಕ್ಷಮಾಗುಣವನ್ನೇ ಭಾವಿಸಿ ಶುಭಪರಿಣಾಮದಿಂದ ಶ್ರೇಷ್ಠವೂ ನಿರ್ಮಲವೂ ಸಹಜವೂ ಆದ ದರ್ಶನ ಜ್ಞಾನ ಚಾರಿತ್ರಗಳನ್ನು ಸಾಸಿ ಸ್ವರ್ಗ ಮೋಕ್ಷ ಸುಖಗಳನ್ನು ಪಡೆಯಲಿ ! ಈಗ ಹೇಳಿದ ಹತ್ತೊಂಬತ್ತು ಕಥೆಗಳನ್ನು ಶಿವಕೋಟ್ಯಾಚಾರ್ಯರು ಹೇಳಿದರು. ವಡ್ಡಾರಾಧನೆ ಸಂಪೂರ್ಣವಾಯಿತು.