ಕಿರಾಣಾ ಫರಾಣೆಯ ಸಂಸ್ಥಾಪಕ ಉಸ್ತಾದ್‌ ಅಬ್ದುಲ್‌ ಕರೀಮ್‌ಖಾನರ ಶಿಷ್ಯರಾಗಿ, ಅವರಿಂದ ಸಂಗೀತ ತಾಲೀಮು ಪಡೆದು ಗಾಯಕರಾಗಿ, ಉತ್ತರ ಕರ್ನಾಟಕದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಜನಪ್ರಿಯಗೊಳ್ಳಲು ಶ್ರಮಿಸಿದ ಶ್ರದ್ಧಾವಂತ ಹಿಂದೂಸ್ಥಾನಿ ಗಾಯಕ ಶ್ರೀ ವೆಂಕಟರಾವ್‌ ರಾಮದುರ್ಗ ಅವರು ಕರ್ನಾಟಕದ ಹಿರಿಯ ತಲೆಮಾರಿನ ಮುಂಚೂಣಿಯ ಕಲಾವಿದರು. ರಂಗಭೂಮಿಯಲ್ಲಿ ಸಂಗೀತ ಜನಪ್ರಿಯ ಮಾಡಿದ ಕಲಾವಿದರು ಅವರು. ಸಂಗೀತವಿಲ್ಲದ, ನಾಟಕವಿಲ್ಲದ ಕಾಲದಲ್ಲಿ ಜನಿಸಿದ ವೆಂಕಟರಾಯರಿಗೆ ಬಾಲ್ಯದಿಂದಲೇ ಸಂಗೀತದ ಗೀಳು. ಐದು ವರ್ಷದ ಬಾಲಕನಾಗಿದ್ದಾಗಲೇ ತಮ್ಮ ಮಧುರ ಕಂಠದಿಂದ ದೇವರನಾಮಗಳನ್ನು ಹಾಡುತ್ತಿದ್ದರು. ಶಾಲೆಯ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. ಶಾಲೆಯನ್ನು ಬಿಟ್ಟ ನಂತರ ಉಪಾಧ್ಯಾಯರಾಗಿ ಕೆಲಸ.

ಸಂಗೀತ ಕಲಿಯಬೇಕೆಂಬ ಕಾರಣದಿಂದ ಉಪಾಧ್ಯಾಯ ವೃತ್ತಿಗೆ ರಾಜೀನಾಮೆಯಿತ್ತು. ಗುರುವನ್ನು ಹುಡುಕಿಕೊಂಡು ಹೊರಟರು. ಆ ಸಂದರ್ಭದಲ್ಲಿ ಸವಾಯಿ ಗಂಧರ್ವರ ಕಾರ್ಯಕ್ರಮವೊಂದನ್ನು ಕೇಳುವ ಅವಕಾಶ. ಅವರು ಇವರ ಬೇಡಿಕೆಗೆ ಒಪ್ಪಿ ತಮ್ಮ ಶಿಷ್ಯರನ್ನಾಗಿ ಪರಿಗ್ರಹಿಸಿದರು.

ಸ್ವರಮಾಧುರ್ಯ ಪ್ರಧಾನವಾದ, ವಿಲಂಬ ಅಲಾಪನೆಗೆ ಒತ್ತು ಕೊಡುವ, ಸರಸಂಚಾರಗಳನ್ನೊಳಗೊಂಡು, ವಕ್ರ ಸಂಚಾರದ ಹಾಗೂ ಜೋಡಿ ರಾಗಗಳು ಕಡಿಮೆ ಇರುವ “ಕಿರಾಣಾ” ಇವರ ಶೈಲಿಯಾಯಿತು. ಆ ಘರಾಣಾದ ಶಿಷ್ಯ ಪರಂಪರೆಯ ಹಿರಿಯ ಗಾಯಕ-ಗಾಯಕಿಯರ ಪಂಕ್ತಿಗೆ ಸೇರಿದವರಾದರು.

ತಮ್ಮ ಕಛೇರಿಗಳ ಜೊತೆಗೆ, ಅನೇಕ ಶಿಷ್ಯರಿಗೆ ವಿದ್ಯಾದಾನ ಮಾಡಿ ಸಂಗೀತ ಕಲೆ ಕರ್ನಾಟಕದಲ್ಲಿ ಜನಪ್ರಿಯವಾಗುವಂತೆ ಮಾಡಿದ್ದಾರೆ ಬೆಳೆಯುವಂತೆ ಮಾಡಿದ್ದಾರೆ ಶ್ರೀಯುತರು.

ವೆಂಕಟರಾವ್‌ ರಾಮದುರ್ಗ ಅವರ ಸಂಗೀತ ಸೇವೆಯನ್ನು ಗಮನಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೬೭-೬೮ನೇ ಸಾಲಿನ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.