ಧಾರವಾಡದ ನಾದಭೂಮಿಯಲ್ಲಿ ಹುಟ್ಟಿ, ಏಕಲವ್ಯನಂತೆ ಸಂಗೀತದಲ್ಲಿ ಸಾಧನೆ ಮಾಡಿ, ಗಾಯಕಿ ಅಂಗದ ಖ್ಯಾತ ಕೊಳಲು ವಾದಕರಾಗಿ, ಸಮರ್ಥ ಹಾರ್ಮೋನಿಯಂ ವಾದಕರಾಗಿ, ಕನ್ನಡ-ಮರಾಠಿ-ಹಿಂದಿ ಗೀತೆಗಳ ಸುಶ್ರಾವ್ಯ ಗಾಯಕರಾಗಿ, ಆಕಾಶವಾಣಿಯ ನಿರ್ದೇಶಕರಾಗಿ ಸಂಗೀತ ಲೋಕದಲ್ಲಿ ಅಪಾರ ಹೆಸರು ಗಳಿಸಿರುವ ಪಂ. ವೆಂಕಟೇಶ ಗೋಡಖಿಂಡಿಯವರು ಕನ್ನಡದ ಮಣ್ಣಲ್ಲಿ ಅರಳಿದ ಖ್ಯಾತ ಕೊಳಲು ವಾದಕರು.

ಪಂ. ವೆಂಕಟೇಶ ಗೋಡಖಿಂಡಿಯವರು ಜನಿಸಿದ್ದು ಧಾರವಾಡದಲ್ಲಿ; ೧೯೪೧ ರ ಮಾರ್ಚ್ ೫ ರಂದು. ಹೈಸ್ಕೂಲು ದಿನಗಳಲ್ಲಿ ಧಾರವಾಡ ಲಕ್ಷ್ಮಿನಾರಾಯಣ ದೇವಸ್ಥಾನದ ಜಾತ್ರೆಯಲ್ಲಿ ಆರಾಣೆ ಬಿದಿರಿನ ಕೊಳಲು ಖರೀದಿಸಿ, ಊದುತ್ತ, ಊದುತ್ತ ಕೊಳಲಿನಲ್ಲಿ ಆಸಕ್ತಿ ತಳೆದು ಕೊಳಲು ವಾದನದಲ್ಲಿ ಆಕಾಶವಾಣಿಯ ‘ಎ ’ಗ್ರೇಡ್‌ ಶ್ರೇಣಿ ತಲುಪಿದವರು. ತಂದೆ-ತಾಯಿಯವರ ಪ್ರೇರಣೆಯಿಂದ ಸಂಗೀತದತ್ತ ಒಲವು ಬೆಳೆಸಿಕೊಂಡರು. ಧಾರವಾಡದ ಶ್ರೀ ನಾರಾಯಣರಾವ ಮುಜುಮದಾರ ಅವರಲ್ಲಿ ಸಂಗೀತ ಶಿಕ್ಷಣ ಪಡೆದು ಏಕಲವ್ಯನಂತೆ ಕೊಳಲಿನಲ್ಲಿ ಸಾಧನೆ ಮಾಡಿ ಹಂತ ಹಂತವಾಗಿ ಮೇಲೆ ಬಂದರು. ವಿಖ್ಯಾತ ಕೊಳಲು ವಾದಕ ಪಂ. ಪನ್ನಾಲಾಲ ಘೋಷ ಹಾಗೂ ಪಂ. ಹರಿಪ್ರಸಾದ ಚೌರಾಸಿಯಾ ಅವರುಗಳನ್ನು ಆದರ್ಶವಾಗಿರಿಸಿಕೊಂಡು ಕೊಳಲಿನಲ್ಲಿ ಸಾಧನೆ ಮಾಡಿದರು. ಸಂಗೀತ ದಿಗ್ಗಜರ ಸಂಗೀತದ ಸಹವಾಸದಿಂದಾಗಿ ಅವರ ಕಲೆ ವೃದ್ಧಿಯಾಯಿತು. ಅಖಿಲ ಭಾರತ ಗಾಂಧರ್ವ ಮಹಾ ವಿದ್ಯಾಲಯದ ‘ಸಂಗೀತ ಅಲಂಕಾರ’ ಹಾಗೂ ಕರ್ನಾಟಕ ಸರ್ಕಾರದ ‘ಸಂಗೀತ ವಿದ್ವತ್‌’ ಪದವಿ ಪಡೆದುಕೊಂಡರು.

ಬಿ.ಎ. ಪದವಿ ಹಾಗೂ ಎಸ್‌.ಟಿ.ಸಿ. ಟ್ರೈನಿಂಗ್‌ ಪಡೆದು ಮೂರು ವರ್ಷ ಶಾಲಾ ಶಿಕ್ಷಕರಾಗಿ ಸೇವೆ ಮಾಡಿದರು. ನಂತರ ೧೯೬೫ರಲ್ಲಿ ಆಕಾಶವಾಣಿಯಲ್ಲಿ ಅನೌನ್ಸರ್ ರೆಂದು ನೇಮಕ ಹೊಂದಿ, ಮ್ಯೂಜಿಕ್‌ ಪ್ರೊಡ್ಯೂಸರ್ ಆಗಿ, ಎ.ಎಸ್‌.ಡಿ. ಆಗಿ ನಂತರ ಆಕಾಶವಾಣಿ ಕೇಂದ್ರದ ನಿರ್ದೇಶಕರಾಗಿ ಮೂರು ದಶಕಗಳ ಕಾಲ ಸೇವೆ ಮಾಡಿ ನಿವೃತ್ತಿ ಹೊಂದಿ ಈಗ ಬೇಂಗಳೂರಿನಲ್ಲಿ ನೆಲೆಸಿದ ಅವರು ಉತ್ತಮ ಹಾರ್ಮೋನಿಯಂ ವಾದಕರೂ ಹೌದು. ಪಂ. ಮಲ್ಲಿಕಾರ್ಜುನ ಮನಸೂರ, ಡಾ. ಗಂಗುಬಾಯಿ ಹಾನಗಲ್ಲ, ಪಂ. ಬಸವರಾಜ ರಾಜಗುರು, ಪಂ. ಮಾಲಿನಿ ರಾಜೂರಕರ – ಮುಂತಾದ ಖ್ಯಾತ ನಾಮ ಗಾಯಕರಿಗೆ ಅವರು ಹಾರ್ಮೋನಿಯಂ ಸಾಥ್‌ ನೀಡಿದ್ದಾರೆ. ಶಾಸ್ತ್ರೀಯ ಹಾಗೂ ಸುಗಮ ಸಂಗೀತದ ಬಿ. ಹೈಗ್ರೇಡ್‌ ಕಲಾವಿದರಾಗಿರುವ ಅವರು ಅನೇಕ ಕನ್ನಡ, ಮರಾಠಿ, ಹಿಂದಿ ಗೀತೆಗಳಿಗೆ ರಾಗ ಸಂಯೋಜಿಸಿ ಆಕಾಶವಾಣಿ, ದೂರದರ್ಶನದಲ್ಲಿ ಹಾಡಿದ್ದಾರೆ. ಆಕಾಶವಾಣಿಯ ರಾಷ್ಟ್ರೀಯ ಕಾರ್ಯಕ್ರಮ ಹಾಗೂ ರೇಡಿಯೋ ಸಂಗೀತ ಸಮ್ಮೇಳನದಲ್ಲಿ ಕೊಳಲು ಕಚೇರಿ ನೀಡಿದ್ದಾರೆ. ನಟರಾಗಿ, ರಂಗ ಗೀತೆಗಳ ಸುಶ್ರಾವ್ಯ ಗಾಯಕರಾಗಿ ಹೆಸರು ಮಾಡಿದ್ದಾರೆ. ಅವರ ಹಿರಿಯ ಮಗ ಕಿರಣ ತಬಲಾ ವಾದಕ ಹಾಗೂ ಕಿರಿಯ ಮಗ ಪ್ರವೀಣ ಇಂದು ಸಂಗೀತ ಲೋಕದಲ್ಲಿ ಅಪಾರ ಹೆಸರು ಪಡೆದಿದ್ದಾರೆ. ಬಿದುರಿನ ಕೊಳವೆ ತಂದು ತಮ್ಮ ಕೊಳಲನ್ನು ತಾವೇ ತಯಾರಿಸುವ ವೆಂಕಟೇಶ ಗೋಡಖಿಂಡಿಯವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ‘ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ (೧೯೯೭-೯೮) ನೀಡಿ ಗೌರವಿಸಿದೆ. ಪ್ರವೀಣ (ಮಗ), ಕೆ. ಶ್ರೀನಿವಾಸ ಅವರ ಶಿಷ್ಯರಾಗಿದ್ದಾರೆ.