ಕರ್ನಾಟಕದಲ್ಲಿ ಹುಟ್ಟಿ, ಮಹಾರಾಷ್ಟ್ರದಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಮರಳಿ ಕರ್ನಾಟಕಕ್ಕೆ ಬಂದು, ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಶ್ರೀ ವೆಂಕಟೇಶ ಬುರ್ಲಿಯವರು ಗಾಯಕರಾಗಿ, ಸಂಗೀತ ಗುರುವಾಗಿ, ವಾಗ್ಗೇಯಕಾರರಾಗಿ ಹೆಸರು ಪಡೆದವರು.

ವೆಂಕಟೇಶ ಬುರ್ಲಿಯವರು ಜನಿಸಿದ್ದು ಹಾವೇರಿ ಜಿಲ್ಲೆಯ ಗುತ್ತಲ ಎಂಬ ಗ್ರಾಮದಲ್ಲಿ ೧೯೩೦ರಲ್ಲಿ. ಬುರ್ಲಿಯ ವರದು ಸಂಗೀತ ಹಾಗೂ ಭಕ್ತಿಗೆ ಹೆಸರಾದ ಮನೆತನ. ವೆಂಕಟೇಶ ಬುರ್ಲಿಯವರ ಅವರ ಅಜ್ಜ ‘ಹನುಮೇಶ ವಿಠಲ’ರು ದಾಸ ಪರಂಪರೆಯಲ್ಲಿ ಬಹು ಎತ್ತರದ ಹೆಸರು. ‘ಹನುಮೇಶ ವಿಠಲ’ ಎಂಬ ಅಂಕಿತದಲ್ಲಿ ಅನೇಕ ಕೀರ್ತನೆ ರಚಿಸಿದ್ದಾರೆ. ವೆಂಕಟೇಶ ಅವರ ತಂದೆ ಶ್ರೀ ಗುರಣ್ಣನವರು ಸಿತಾರ ವಾದಕರಾಗಿದ್ದರು. ಇಂತಹ ವಾತಾವರಣದಲ್ಲಿ ಜನಿಸಿದ ವೆಂಕಟೇಶರಿಗೆ ಬಾಲ್ಯದಿಂದಲೇ ಸಂಗೀತದತ್ತ ಒಲವು ಬೆಳೆಯಿತು.

ಪಂ. ಪಂಚಾಕ್ಷರಿ ಗವಾಯಿಗಳ ಶಿಷ್ಯರು ಹಾಗೂ ಪಂ. ಮಲ್ಲಿಕಾರ್ಜುನ ಮನಸೂರ ಅವರ ಗುರು ಬಂಧು ಖ್ಯಾತ ಗಾಯಕ ಪಂ. ಗುರು ಬಸವಾರ್ಯ ಹಿರೇಮಠ ಕರೂರ ಅವರು ಬ್ಯಾಡಗಿಯಲ್ಲಿ ೧೨ ವರ್ಷಗಳ ಕಾಲ ವೆಂಕಟೇಶರಿಗೆ ಗ್ವಾಲಿಯರ್ ಘರಾನಾ ಸಂಗೀತ ಶಿಕ್ಷಣ ನೀಡಿದರು. ಸಂಗೀತದಲ್ಲಿ ಅಪಾರ ಸಾಧನೆಗೈದ ವೆಂಕಟೇಶ ಬುರ್ಲಿಯವರನ್ನು ಮಹಾ ರಾಷ್ಟ್ರದ ಪಂಢರಪುರ ಸಮೀಪದ ಬಾರ್ಶಿ ಶಿಕ್ಷಣ ಸಂಸ್ಥೆ ಇವರನ್ನು ತಮ್ಮಲ್ಲಿಗೆ ಕರೆಸಿ ಸಂಗೀತ ಶಿಕ್ಷಕರನ್ನಾಗಿ ನೇಮಿಸಿತು. ಮೂರು ದಶಕಗಳ ಕಾಲ ಅವರು ಮಹಾರಾಷ್ಟ್ರದಲ್ಲಿ ಸಂಗೀತ ಶಿಕ್ಷಕರಾಗಿ, ಗಾಯಕರಾಗಿ ಅನೇಕ ಶಿಷ್ಯರನ್ನು ತಯಾರಿಸಿದರು. ಮುಂಬೈ, ಪುಣೆ ಆಕಾಶವಾಣಿ ಮೂಲಕ ತಮ್ಮ ಗಾಯನ ಪ್ರಸಾರ ಪಡಿಸಿದರು.

‘ಸುಧಾರಂಗ’ ಎಂಬ ಅಂಕಿತದಿಂದ ಅವರು ಅನೇಕ ಬಂದೀಶ ರಚಿಸಿದ್ದಾರೆ. ಹಿಂದಿನ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರು ‘ಪ್ರಿಯದರ್ಶಿನಿ’ ಎಂಬ ಹೆಸರಿನ ರಾಗ ಕಂಡು ಹಿಡಿದು ಅದರಲ್ಲಿ ಬಡಾಖ್ಯಾಲ, ಛೋಟಾಖ್ಯಾಲ ರಚನೆ ಮಾಡಿ ಅದನ್ನು ಇಂದಿರಾ ಗಾಂಧಿಯವರಿಗೆ ಕಳಿಸಿದ್ದರು. ಇಂದಿರಾ ಅವರು ಅದನ್ನು ನೋಡಿ ಅವರಿಗೆ ಪ್ರಶಂಸಾ ಪತ್ರ ಕಳಿಸಿದ್ದರು. ‘ಪ್ರಿಯದರ್ಶಿನಿ’ ರಾಗ ಉತ್ತರ ಪ್ರದೇಶದ ‘ಹಾಥರಸ’ದ ಸಂಗೀತ ಪತ್ರಿಕೆ (೧೯೮೪) ಪ್ರಕಟಿಸಿದೆ. ವೆಂಕಟೇಶ ಅವರು ಅನೇಕ ದೇವರನಾಮ, ಭಕ್ತಿಗೀತೆ, ಹಿಂದಿ ಭಜನ್‌, ದಾಸರ ಪದಗಳಿಗೆ ಸ್ವರ ಸಂಯೋಜಿಸಿ ಹಾಡಿದ್ದಾರೆ. ಅವರು ಹಾಡಿದ ಅನೇಕ ಬಂದೀಶ ಹಾಗೂ ಭಜನೆಗಳನ್ನು ಹೆಚ್‌.ಎಂ.ವಿ. ಕಂಪನಿ ಧ್ವನಿ ಮುದ್ರಿಸಿಕೊಂಡಿದೆ.

ವೆಂಕಟೇಶ ಬುರ್ಲಿಯವರ ಶಿಷ್ಯ ಸಂಪತ್ತು ಅಪಾರ. ಅಂಥವರಲ್ಲಿ ಅಮೋಲ ಸುಲಾಖೆ, ಜಿಲವತಿ ಪುಣೆ, ಲಿಮಕರ ಬಾರ್ಶಿ, ಶ್ರೀಮತಿ ಸುಲಾಖೆ ಬಾರ್ಶಿ, ಶ್ರೀಮತಿ ಹಿಂಗಣಿ ಪುಣೆ ಹಾಗೂ ಮಗ ಡಾ. ಹನುಮಂತ ಬುರ್ಲಿ ಸಂಗೀತ ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ. ಡಾ. ಹನುಮಂತ ಬುರ್ಲಿಯವರು ಸಂಗೀತದಲ್ಲಿ ಎಂ.ಎ. ಹಾಗೂ ಪಿ.ಹೆಡ್‌.ಡಿ. ಪದವಿ ಪಡೆದಿದ್ದಾರೆ. ವೆಂಕಟೇಶರಿಗೆ ಅನೇಕ ಪ್ರಶಸ್ತಿ-ಪುರಸ್ಕಾರ ಬಂದಿದೆ. ಅಂಥವುಗಳಲ್ಲಿ ಅಕ್ಕಲಕೋಟದ ಸ್ವಾಮಿ ಸಂಗೀತ ಸಂಸತ್‌ನ ‘ಸೂರಲೋಕ’, ‘ಗಾನ ರಸಾಮೃತ ಭಾಜನ’ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ೧೯೯೮-೯೯ರ ವಾರ್ಷಿಕ ಪ್ರಶಸ್ತಿ ಮುಂತಾದವುಗಳು ಉಲ್ಲೇಖನೀಯವಾಗಿವೆ.