ವೆರಿಯರ್ ಎಲ್ವಿನ್ಇಂಗ್ಲೆಂಡಿನಲ್ಲಿ ಹುಟ್ಟಿ ಭಾರತದ ಗಿರಿಜನರ ಜೀವನದ ಅಧ್ಯಯನ, ಅವರ ಸೇವೆಗಳಲ್ಲಿ ಬಾಳನ್ನು ಸವೆಸಿದರು. ಭಾರತದ ಗಿರಿಜನರ ಬಗೆಗೆ ಭಾರತೀಯರಿಗೆ ಹೊಸದಾಗಿ ಎಷ್ಟೋ ವಿಷಯ ಗಳನ್ನು ತಿಳಿಸಿಕೊಟ್ಟರು. ಭಾರತ ಸರ್ಕಾರಕ್ಕೆ ನೆರವಾದರು. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ದಾರಿದೀಪವಾದರು.

 ವೆರಿಯರ್ ಎಲ್ವಿನ್

 

ಜಗತ್ತಿನಲ್ಲಿ ಭಾರತವು ಒಂದು ವಿಶಿಷ್ಟವಾದ ಸ್ಥಾನವನ್ನು ಗಳಿಸಿದೆ. ಇಲ್ಲಿ ನಿಸರ್ಗ ವೈವಿಧ್ಯಮಯವಾಗಿದೆ. ಭಾರತ ಪರ್ವತಗಳನ್ನು, ನದಿಗಳನ್ನು, ದಟ್ಟವಾದ ಕಾಡುಗಳನ್ನು ವಿಶಾಲವಾದ ಬಯಲು ಪ್ರದೇಶವನ್ನು ಹೊಂದಿದೆ. ಈ ದೇಶದಲ್ಲೇ ಅನೇಕ ಮತಧರ್ಮಗಳು ಹುಟ್ಟಿದವು. ಈ ದೇಶದಲ್ಲಿನ ವಿವಿಧ ರೀತಿಯ ಸಂಪನ್ಮೂಲಗಳೇ ಒಂದು ಆಕರ್ಷಣೆ.

ಈ ಎಲ್ಲ ಅಂಶಗಳಿಂದಾಗಿ ವಿದೇಶಿಯರು ಬಹಳ ಹಿಂದಿನಿಂದಲೂ ಭಾರತದೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿದ್ದರು. ಈ ರೀತಿಯ ಸಂಪರ್ಕದಿಂದಾಗಿ ಭಾರತದ ಜ್ಞಾನ ಸಂಪತ್ತು ವಿದೇಶಗಳಿಗೆ ಹೋಗುತ್ತಿತ್ತು; ವಿದೇಶಗಳಿಂದ ಭಾರತಕ್ಕೆ ಬರುತ್ತಿತ್ತು. ಈ ವಿಧದ ಕೊಡುವ ಮತ್ತು ಪಡೆಯುವ ಕಾರ್ಯ ಅನೇಕ ಶತಮಾನಗಳಿಂದ ನಡೆಯುತ್ತಾ ಬಂದಿದೆ.

ಕ್ರೈಸ್ತ ಧರ್ಮವನ್ನು ಪ್ರಸಾರ ಮಾಡುವ ಉದ್ದೇಶದಿಂದ ವಿದೇಶಗಳಿಂದ ಅನೇಕರು ಭಾರತಕ್ಕೆ ಬಂದರು. ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲದಲ್ಲೂ ವಿದೇಶಗಳಿಂದ ಕ್ರೈಸ್ತ ಧರ್ಮವನ್ನು ಪ್ರಸಾರ ಮಾಡಲು ನೂರಾರು ಜನರು ಭಾರತಕ್ಕೆ ಬಂದರು. ಇವರಲ್ಲಿ ಅನೇಕರು ಹಿಂದೂಗಳನ್ನು ಕ್ರೈಸ್ತರನ್ನಾಗಿ ಪರಿವರ್ತಿಸುವುದನ್ನೇ ಮುಖ್ಯ ಗುರಿಯಾಗಿ ಮಾಡಿಕೊಂಡರು. ಆದರೆ ಇನ್ನು ಕೆಲವರು ಭಾರತವನ್ನು ಉನ್ನತಿಯೆಡೆಗೆ ಒಯ್ಯಲು ನೆರವಾದರು. ಮಿಷನರಿಗಳು ಮತ್ತು ಪಾದ್ರಿಗಳು ಭಾರತದಲ್ಲಿ ಉತ್ತಮ ಶಿಕ್ಷಣ ನೀಡಲಿಕ್ಕಾಗಿ ಅನೇಕ ವಿದ್ಯಾಸಂಸ್ಥೆಗಳನ್ನು ಆರಂಭಿಸಿದರು. ಭಾರತೀಯ ಭಾಷೆಗಳ ವ್ಯಾಕರಣಗಳನ್ನು ಪ್ರಕಟಿಸಿದರು. ಭಾರತದ ಜಾನಪದ ಸಾಹಿತ್ಯವನ್ನು ಸಂಗ್ರಹಿಸಿದರು. ಇವೆಲ್ಲಕ್ಕಿಂತ ಇಲ್ಲಿನ ಆದಿವಾಸಿಗಳ ಮತ್ತು ಗಿರಿಜನರ ಬಗ್ಗೆ ಅಧ್ಯಯನ ಮಾಡಿದರು. ಇವರಲ್ಲಿ ಮುಖ್ಯರಾದವರು ವೆರಿಯರ್ ಎಲ್ವಿನ್.

ಬಾಲ್ಯದ ದಿನಗಳು

ಮನುಷ್ಯನೂ ಸಹ ಪ್ರಾಣಿಯೇ. ಆದರೆ ಇತರ ಪ್ರಾಣಿಗಳಿಗಿಂತ ಮೇಲ್ಮಟ್ಟದ ಪ್ರಾಣಿ. ಸಹವಾಸ ಮತ್ತು ಆವರಣ ಮನುಷ್ಯನ ಸ್ವಭಾವವನ್ನು ಹೇಗೆ ಬದಲಿಸುತ್ತವೆ. ಎಂದು ಅಧ್ಯಯನ ಮಾಡುವ ಶಾಸ್ತ್ರ ಒಂದಿದೆ. ಇದನ್ನು ‘ಮಾನವ ಶಾಸ್ತ್ರ’ ಎಂದು ಕರೆಯುತ್ತಾರೆ. ಮಾನವ ಶಾಸ್ತ್ರಜ್ಞರಿಗೆ ಕುತೂಹಲಕರವಾದ ಪ್ರದೇಶವೆಂದರೆ ಪಶ್ಚಿಮ ಆಫ್ರಿಕ.

ಬಹಳ ವರ್ಷಗಳ ಹಿಂದೆ ಒಂದು ದಿನ ಮಾನವ ಶಾಸ್ತ್ರದಲ್ಲಿ ಆಸಕ್ತಳಾಗಿದ್ದ ಒಬ್ಬ ಹೆಂಗಸು ಪಶ್ಚಿಮ ಆಫ್ರಿಕಾದಲ್ಲಿ ಆದಿವಾಸಿ ಜನರಿದ್ದ ಹಳ್ಳಿಗಳಲ್ಲಿ ಸಂಚರಿಸುತ್ತಿದ್ದಳು. ಆ ಜನರು ಉಪಯೋಗಿಸುವ ವಸ್ತುಗಳನ್ನು ಸಂಗ್ರಹಿಸುವುದು ಅವಳ ಉದ್ದೇಶ. ಯಾವುದೇ ಬಗೆಯ ರಕ್ಷಣೆಯಿಲ್ಲದ ಆ ಹೆಂಗಸು ದುರದೃಷ್ಟವಶಾತ್ ನರಭಕ್ಷಕರಿದ್ದ ಒಂದು ಹಳ್ಳಿಯನ್ನು ಪ್ರವೇಶಿಸಿದಳು. ಅಲ್ಲಿನ ಜನರೋ ಈಕೆಯನ್ನು ಬಂಧಿಸಿ ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟರು ! ಅವಳಿಗಾಗಿ ಹುಡುಕುತ್ತಿದ್ದ ಅವಳ ಗಂಡ ಅಕಸ್ಮಾತ್ತಾಗಿ ಆ ಹೊತ್ತಿಗೆ ಶಸ್ತ್ರಸಜ್ಜಿತ ಜನರೊಂದಿಗೆ ಓಡಿಬಂದ. ಅಂತೂ ಆಕೆಯನ್ನು ಅಡುಗೆಪಾತ್ರೆಯಿಂದ ಹೊರತೆಗೆಯಲಾಯಿತು ! ಇಂತಹ ಸಾಹಸ ಸ್ತ್ರೀಯ ಮಗ ವೆರಿಯರ್ ಎಲ್ವಿನ್. ಅವರು ಇಂಗ್ಲೆಂಡ್‌ನ ಡೋವರ್‌ನಲ್ಲಿ ೧೯೦೨ ರ ಆಗಸ್ಟ್ ೨೦ ರಂದು ಪ್ರಾತಃಕಾಲ ಹುಟ್ಟಿದರು.

ಎಲ್ವಿನ್ನರ ತಂದೆ ಎಡ್ಮಂಡ್ ಹೆನ್ರಿ ಎಲ್ವಿನ್ ಕ್ರೈಸ್ತ ಧರ್ಮಾಧಿಕಾರಿ. ಅವರು ಪಶ್ಚಿಮ ಆಫ್ರಿಕಾದಲ್ಲಿನ ಒಂದು ಪ್ರಾಂತ್ಯಕ್ಕೆ ಬಿಷಪ್ ಆಗಿದ್ದರು. ಅವರನ್ನು ಇಂಗ್ಲೆಂಡಿಗೆ ವರ್ಗ ಮಾಡಲಾಯಿತು. ಆದರೆ ಇಂಗ್ಲೆಂಡಿಗೆ ಹೋಗುವ ಸಿದ್ಧತೆಯಲ್ಲಿದ್ದಾಗಲೇ ಅವರು ‘ಹಳದಿ ಜ್ವರ’ ಕ್ಕೆ ತುತ್ತಾಗಿ ನಿಧನರಾದರು. ಆಗ ಎಲ್ವಿನ್‌ಗೆ ಏಳು ವರ್ಷ ವಯಸ್ಸು.

ಬಾಲಕ ಎಲ್ವಿನ್ ಬಹಳ ತುಂಟನಾಗಿದ್ದ. ತಂದೆ ತಾಯಿಗಳಿಗೆ ಹುಟ್ಟಿದ ಮೂರು ಮಕ್ಕಳಲ್ಲಿ ಅವನೇ ಹಿರಿಯ. ಅವನ ತಂಗಿ ಎಲ್ಡಿತ್, ಎಲ್ವಿನ್‌ಗಿಂತ ಎರಡು ವರ್ಷ ಚಿಕ್ಕವಳು. ಪುಟ್ಟ ತಮ್ಮ ಬೇಜಿಲ್ ಎಲ್ವಿನ್‌ಗಿಂತ ಐದು ವರ್ಷ ಚಿಕ್ಕವನು. ಬಹಳ ಮುದ್ದಾಗಿದ್ದ ಬೇಜಿಲನನ್ನು ಎಲ್ವಿನ್ ಮತ್ತು ಎಲ್ಡಿತ್ ಸೇರಿ ಬಹಳ ಕಾಡಿಸುತ್ತಿದ್ದರು. ತಾಯಿಗಂತೂ ಎಲ್ವಿನ್ನನ ತುಂಟಾಟ ಕಂಡು ಸಾಕುಸಾಕಾಯಿತು. ಕೊನೆಗೆ ಅವನನ್ನು ಲಂಡನ್ನಿನ ಒಂದು ಖಾಸಗಿ ಶಾಲೆಗೆ ಸೇರಿಸಿದರು.

ಎಲ್ವಿನ್‌ನ ತಾಯಿ ಒಂದೇ ಊರಿನಲ್ಲಿ ನೆಲೆಸದೆ, ಸ್ವಲ್ಪ ಕಾಲ ಊರಿನಲ್ಲಿ ವಾಸಿಸಿದರೆ ಸ್ವಲ್ಪ ಕಾಲ  ಮತ್ತೊಂದು ಊರಿಗೆ ಹೋಗುತ್ತಿದ್ದಳು. ಇದರಿಂದಾಗಿ ಎಲ್ವಿನ್‌ನಿಗೆ ದೀರ್ಘ ಕಾಲದ ಸ್ನೇಹಿತರು ಸಿಗಲಿಲ್ಲ. ಊರನ್ನು ಬದಲಾಯಿಸುತ್ತ ಹೋಗುತ್ತಿದ್ದರಿಂದ ಅವನು ಶಾಲೆಯನ್ನೂ ಬದಲಾಯಿಸುತ್ತಿರಬೇಕಾಯಿತು.

ಈ ಕಾರಣದಿಂದಾಗಿ ಕೆಲವು ಕಾಲದ ನಂತರ ಆತ ರಿಗೇಟ್ ಎಂಬ ಊರಿನ ಒಂದು ಶಾಲೆಗೆ ಸೇರಿದ. ಅಲ್ಲಿ ಕೆಲವು ಕಾಲ ಶಿಕ್ಷಣ ಪಡೆದ ನಂತರ ಈಸ್ಟ್ ಬೋರ್ನ್‌ನ ಒಂದು ಶಾಲೆಗೆ ಸೇರಿದ. ಎಲ್ವಿನ್‌ಗೆ ಹದಿಮೂರು ವರ್ಷವಾದಾಗ ಚೆಲ್ಟೆನ್‌ಹಂನ ಒಂದು ಪಬ್ಲಿಕ್ ಸ್ಕೂಲಿಗೆ ಸೇರಿಸಲಾಯಿತು.

ಎಲ್ವಿನ್ ಬಹಳ ತುಂಟ ಹುಡುಗನಾದರೂ, ಅವನಿಗೆ ಅನೇಕ ಒಳ್ಳೆಯ ಹವ್ಯಾಸಗಳಿದ್ದವು. ಅವುಗಳಲ್ಲಿ ಅಂಚೆ ಚೀಟಿಗಳನ್ನು ಸಂಗ್ರಹಿಸುವುದೂ ಒಂದು. ನೂರಾರು ಅಂಚೆಚೀಟಿಗಳನ್ನು ಎಲ್ವಿನ್ ಸಂಗ್ರಹಿಸಿದ್ದ. ಭಾರತದ ಅಂಚೆ ಚೀಟಿಗಳೂ ಅವನ ಸಂಗ್ರಹಕ್ಕೆ ಸೇರುತ್ತಿದ್ದವು. ಅಂಚೆ ಚೀಟಿಗಳನ್ನು ಸಂಗ್ರಹಿಸುವುದೇ ಅಲ್ಲದೆ ಕಾಗದದ ಮೇಲೆ ತನ್ನದೇ ಆದ ಅಂಚೆಚೀಟಿಗಳನ್ನು ಬರೆಯುತ್ತಿದ್ದ. ಎಲ್ವಿನ್‌ನ ಮತ್ತೊಂದು ಅಭ್ಯಾಸವೆಂದರೆ ಕತೆಗಳನ್ನು ಓದುವುದು. ಮಕ್ಕಳ ಕತೆಗಳು ಪ್ರಕಟವಾಗುತ್ತಿದ್ದ ಪತ್ರಿಕೆಯನ್ನು ಕಂಡುಕೊಳ್ಳಲು ಅವನು ತನಗೆ ಸಿಗುತ್ತಿದ್ದ ಪುಡಿಕಾಸನ್ನು ಜೋಪಾನವಾಗಿ ಇಟ್ಟಿರುತ್ತಿದ್ದ.

ಉನ್ನತ ಶಿಕ್ಷಣ

ಮೊದಮೊದಲು ಕತೆಗಳನ್ನು ಮಾತ್ರ ಆಸಕ್ತಿಯಿಂದ ಓದುತ್ತಿದ್ದ ಎಲ್ವಿನ್ ಕವನಗಳನ್ನು ಓದಲಾರಂಭಿಸಿದರು. ’ಅಬ್ಬಾ ! ಈ ಕವನ ಓದಿದರೆ ಹೊಸ ಲೋಕವೊಂದನ್ನು ಪ್ರವೇಶಿಸಿದಂತೆ ಆಗುತ್ತದಲ್ಲ !’ ಎಂದು ಅನಿಸಿತು ಅವರಿಗೆ. ಆಗಿನ ಸುಪ್ರಸಿದ್ಧ ಆಂಗ್ಲ ಕವಿಗಳು ಬರೆದ ಕವನಗಳಿಗೆ ಎಲ್ವಿನ್ ಮಾರುಹೋದರು. ಹೇಗಾದರೂ ಬಿಡಿಗಾಸುಗಳನ್ನೇ ಕೂಡಿಸಿಟ್ಟು ತಮ್ಮ ಮೆಚ್ಚಿನ ಕವಿಗಳ ಕಾವ್ಯಕೃತಿಗಳನ್ನು ಕೊಳ್ಳುತ್ತಿದ್ದರು. ಹರಿಯುತ್ತಿದ್ದ ನದಿಯ ಪಕ್ಕದಲ್ಲೇ ನಡೆಯುತ್ತ ಕವನಗಳನ್ನು ಓದುತ್ತಿದ್ದರು.

ಹೀಗೆ ಸಾಹಿತ್ಯದಲ್ಲಿ ಆಸಕ್ತರಾದ ಎಲ್ವಿನ್ ಇಂಗ್ಲಿಷ್ ಸಾಹಿತ್ಯವನ್ನೇ ಮುಖ್ಯ ವಿಷಯವನ್ನಾಗಿಟ್ಟುಕೊಂಡು ವಿಶ್ವವಿದ್ಯಾನಿಲಯವನ್ನು ಸೇರಿದರು.  ೧೯೨೪ರಲ್ಲಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿ ಪದವಿಯನ್ನು ಪಡೆದರು. ಅನಂತರ ಎಲ್ವಿನ್ ಮತಧರ್ಮ ಶಾಸ್ತ್ರವನ್ನು ಅಧ್ಯಯನ ಮಾಡಿದರು. ಇದರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. ಕೂಡಲೇ ಅವರಿಗೆ ಒಂದು ಕಾಲೇಜಿನಲ್ಲಿ ವೈಸ್ ಪ್ರಿನ್ಸಿಪಾಲ್ ಹುದ್ದೆ ಸಿಕ್ಕಿತು.

ಭಾರತದ ಬಗ್ಗೆ ಆಸಕ್ತಿ

ಎಲ್ವಿನ್‌ರಿಗೂ ಭಾರತಕ್ಕೂ ಬಹಳ ಹಿಂದಿ ನಿಂದಲೂ ಬಾಂಧವ್ಯವಿತ್ತು. ಎಲ್ವಿನ್‌ರ ತಾಯಿ ಹುಟ್ಟಿದ್ದು ಭಾರತದಲ್ಲೇ. ಆಕೆಯ ಮನೆಯವರೆಲ್ಲ ಭಾರತದ ಸಂಪರ್ಕವನ್ನು ಪಡೆದಿದ್ದರು.

ಎಲ್ವಿನ್‌ರ ಕುಟುಂಬದವರು ಹಲವರು ಭಾರತದಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇದ್ದು ಭಾರತದ ಸಂಪತ್ತನ್ನು ದೋಚಿ ತರುತ್ತಿದ್ದರು. ಆಗ ಭಾರತವನ್ನು ಬ್ರಿಟಿಷರೇ ಆಳುತ್ತಿದ್ದರಿಂದ ಅವರಿಗೆ ಯಾವ ಅಡೆ ತಡೆಗಳೂ ಇರಲಿಲ್ಲ. ಎಲ್ವಿನ್‌ರು ಇದನ್ನು ನೋಡಿ ತಾವೊಬ್ಬ ರಾದರೂ ಭಾರತದಿಂದ ಸಂಪತ್ತನ್ನು ತರದೆ, ಭಾರತದ ಜನರ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಳ್ಳಬೇಕೆಂದು ಕೊಂಡರು.

ಮೊದಮೊದಲು ಎಲ್ವಿನ್ನರೂ ಸಹ ಇತರ ವಿದೇಶೀಯರಂತೆ ಭಾರತವೆಂದರೆ ಒಂದು ಅನಾಗರಿಕ ದೇಶ ವೆಂದುಕೊಂಡಿದ್ದರು. ಆದರೆ ಭಾರತದ ಬಗ್ಗೆ ಆಸಕ್ತಿಯಿಂದ ಓದಲು ಆರಂಭಿಸಿದಾಗ ಅವರಿಗೆ ಸತ್ಯ ಸಂಗತಿ ತಿಳಿಯಿತು. ಅಷ್ಟೇ ಅಲ್ಲದೆ ಅವರಿಗೆ ಗಾಂಧೀಜಿಯವರ ಬಗ್ಗೆ, ಹಿಂದೂ ಧರ್ಮದ ಬಗ್ಗೆ ಆಸಕ್ತಿ ಮೂಡಿತು.

ಭಾರತಕ್ಕೆ ಭೇಟಿ

೧೯೨೭ ರಲ್ಲಿ ಭಾರತದಲ್ಲಿ ಕ್ರೈಸ್ತ ಧರ್ಮವನ್ನು ಪ್ರಚಾರ ಮಾಡಲು ‘ಕ್ರಿಸ್ತ ಸೇವಾ ಸಂಘ’ ಎಂಬ ಒಂದು ಸಂಸ್ಥೆ ಪೂನಾದ ಬಳಿ ಸ್ಥಾಪನೆಯಾಗಿತ್ತು. ಭಾರತೀಯರ ಸೇವೆಗಾಗಿ ಈ ಸಂಸ್ಥೆಯ ಮೂಲಕ ದುಡಿಯಬಹುದೆಂದು ಎಲ್ವಿನ್ನರಿಗೆ ಅನಿಸಿತು. ಅಲ್ಲದೆ ಎಲ್ವಿನ್ನರ ಇಬ್ಬರು ಸ್ನೇಹಿತರು ಈ ಸಂಸ್ಥೆಯನ್ನು ಸೇರಲು ಸಿದ್ಧರಾಗಿದ್ದರು. ಕೊನೆಗೆ ಎಲ್ವಿನ್ನರೂ ಕ್ರಿಸ್ತಸೇವಾ ಸಂಘವನ್ನು ಸೇರಲು ತೀರ್ಮಾನಿಸಿದರು.

ಎಲ್ವಿನ್‌ರ ತಾಯಿಗೆ ಈ ವಿಷಯ ತಿಳಿಯಿತು. ತನ್ನ ಮಗ ದೂರದ ದೇಶಕ್ಕೆ ಹೋಗುವುದನ್ನು ಕೇಳಿ ಆಕೆಗೆ ಮೊದಲು ಚಿಂತೆಯಾಯಿತು.  ಆದರೆ ಆಕೆಗೂ ಭಾರತದ ಬಗ್ಗೆ ತುಂಬ ಅಭಿಮಾನವಿತ್ತು. ಗಾಂಧೀಜಿಯನ್ನು ಕಂಡರೆ ಬಹಳ ಗೌರವವಿತ್ತು. ಆದುದರಿಂದ ಮಗನಿಗೆ ಒಪ್ಪಿಗೆ ಸಿಗಲು ತಡವಾಗಲಿಲ್ಲ.

ಎಲ್ವಿನ್ನ್ ಭಾರತಕ್ಕೆ ಪ್ರಯಾಣ ಮಾಡಿದರು. ಪೂನಾ ಬಳಿಯ ಕ್ರಿಸ್ತ ಸೇವಾ ಸಂಘವನ್ನು ತಲುಪಿದರು. ಅಲ್ಲಿ ಕೆಲವು ದಿನಗಳನ್ನು ಕಳೆದರು.

೧೯೨೮ನೇ ಇಸವಿ ಜನವರಿ ತಿಂಗಳಲ್ಲಿ ಗಾಂಧೀಜಿ ಯವರ ಸಬರಮತಿ ಆಶ್ರಮದಲ್ಲಿ ಒಂದು ಸಮ್ಮೇಳನ ನಡೆಯಿತು. ಅದರಲ್ಲಿ ಭಾಗವಹಿಸಲು ಎಲ್ವಿನ್ನ್‌ರೂ ಹೋದರು. ಅಲ್ಲಿ ಎಲ್ವಿನ್ನರು ಗಾಂಧೀಜಿಯವರನ್ನು ಕಂಡರು. ಬಡ ದೇಹದ, ತುಂಡು ಬಟ್ಟೆಯ ಗಾಂಧೀಜಿಯವರ ವ್ಯಕ್ತಿತ್ವಕ್ಕೆ ಎಲ್ವಿನ್ನರು ಮಾರುಹೋದರು. ಸಬರಮತಿ ಆಶ್ರಮವೂ ಎಲ್ವಿನ್ನರ ಮೇಲೆ ಪ್ರಭಾವ ಬೀರಿತು. ಅಲ್ಲಿದ್ದಾಗ ಅವರಿಗೆ ‘ನಾನೂ ಒಬ್ಬ ಭಾರತೀಯನೇ !’ ಎಂದು ಅನಿಸಿತು.

ಸಬರಮತಿ ಆಶ್ರಮವನ್ನು ಕಂಡ ಎಲ್ವಿನ್ನರು ಮುಂದೆ ಸರಳವಾಗಿ ಜೀವನ ನಡೆಸಬೇಕೆಂದು ನಿರ್ಧರಿಸಿದರು. ಇಷ್ಟು ದಿನಗಳವರೆಗೆ ಕುರ್ಚಿಯ ಮೇಲೆ ಕೂರುತ್ತಿದ್ದ ಅವರು ಈಗ ನೆಲದ ಮೇಳೆ ಕೂಡಲಾರಂಭಿಸಿದರು. ಸೊಗಸಾದ ಮಂಚವನ್ನು ಬಿಟ್ಟು ತಣ್ಣಗಿನ ನೆಲದ ಮೇಲೇ ಮಲಗಲಾರಂಭಿಸಿದರು. ಹೀಗೆ ಇದ್ದಕ್ಕಿದ್ದಂತೆ ಮಾಡಿಕೊಂಡ ಬದಲಾವಣೆಯಿಂದ ಅವರ ಆರೋಗ್ಯ ಕೆಟ್ಟಿತು. ಆರೋಗ್ಯ ಸುಧಾರಣೆಗಾಗಿ ವೈದ್ಯರ ಒತ್ತಾಯದಂತೆ ಎಲ್ವಿನ್ನರು ಇಂಗ್ಲೆಂಡಿಗೆ ಹೋದರು. ಅಲ್ಲಿ ತಾಯಿಯೊಂದಿಗೆ ಒಂದು ವರ್ಷ ಕಾಲ ವಿಶ್ರಾಂತಿ ಪಡೆದು ೧೯೨೯ ರಲ್ಲಿ ಮತ್ತೆ ಭಾರತಕ್ಕೆ ಮರಳಿ ಬಂದರು.

ಮಹಾತ್ಮರ ಮಗ

ಎಲ್ವಿನ್ನರು ಇಂಗ್ಲೆಂಡಿನಿಂದ ಭಾರತಕ್ಕೆ ಬಂದವರೇ ಭಾರತಕ್ಕಾಗಿ ಸೇವೆ ಸಲ್ಲಿಸಲಾರಂಭಿಸಿದರು. ಗಾಂಧೀಜಿ ಯವರೊಡನೆ ಅವರು ಹತ್ತಿರದ ಸಂಬಂಧವನ್ನಿಟ್ಟು ಕೊಂಡಿದ್ದರು. ಎಲ್ವಿನ್ ಭಾರತಕ್ಕೆ ಬಂದು ಕೆಲವೇ ತಿಂಗಳಾಗಿತ್ತು. ಅಷ್ಟರಲ್ಲಿ ಸರದಾರ್ ಪಟೇಲರು ಎಲ್ವಿನ್ನರಿಗೆ ಒಂದು ಕೆಲಸ ವಹಿಸಿದರು. ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಹೊರ ದೇಶದ ಸರ್ಕಾರದ ವಿರುದ್ಧ ಭಾರತೀಯರು ಹೋರಾಟ ನಡೆಸುತ್ತಿದ್ದರು. ಗುಜರಾತಿನ ರೈತರು ಸರ್ಕಾರಕ್ಕೆ ಕಂದಾಯ ಕೊಡುವುದಿಲ್ಲ ಎಂದು ಚಳವಳಿ ಹೂಡಿದರು. ಈ ಸಮಯದಲ್ಲಿ ಪೊಲೀಸರು ಬಹು ಕ್ರೂರವಾಗಿ ನಡೆದುಕೊಂಡರು. ಪೊಲೀಸರು ನಡೆಸಿದ ದೌರ್ಜನ್ಯದ ಬಗ್ಗೆ ವಿಚಾರಣಾ ವರದಿಯೊಂದನ್ನು ಸಿದ್ಧಪಡಿಸಬೇಕೆಂದು ಎಲ್ವಿನ್ನರಿಗೆ ಪಟೇಲರು ಹೇಳಿದರು. ಎಲ್ವಿನ್ನರು ಒಪ್ಪಿ ಆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಇದರಿಂದಾಗಿ ಬ್ರಿಟಿಷರಿಗೆ ಎಲ್ವಿನ್ನರ ಮೇಲೆ ಶಂಕೆಯುಂಟಾಯಿತು. ಎಲ್ವಿನ್ನರ ಕಾರ್ಯಗಳನ್ನು ಗಮನಿಸಲು ಪೊಲೀಸರು ಅವರನ್ನು ಹಿಂಬಾಲಿಸ ಲಾರಂಭಿಸಿದರು.

ಮೊದಲಿನಿಂದಲೂ ಸಬರಮತಿ ಆಶ್ರಮದೊಡನೆ ಸಂಪರ್ಕವಿಟ್ಟುಕೊಂಡಿದ್ದ ಎಲ್ವಿನ್ ಈಗ ಅದನ್ನು ಹೆಚ್ಚಿಸಿಕೊಂಡರು. ಸಬರಮತಿ ಆಶ್ರಮದಲ್ಲಿ ಎಲ್ಲರೂ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುತ್ತಿದ್ದರು. ಎಲ್ಲರೂ ಬಯಲಿನಲ್ಲಿ ಸೇರಿ ಪ್ರಾರ್ಥನೆ ಮಾಡುತ್ತಿದ್ದರು. ಆರು ಗಂಟೆಗೆ ಉಪಾಹಾರ. ಉಪಾಹಾರದ ನಂತರ ಎಲ್ಲರೂ ಏನಾದರೊಂದೊಂದು ಕೆಲಸದಲ್ಲಿ ತಲ್ಲೀನರಾಗುತ್ತಿದ್ದರು.

ಸಂಜೆಯ ಸಮಯದಲ್ಲಿ ಗಾಂಧೀಜಿ ಯವ ರೊಡನೆ ಸುತ್ತಾಟದ ಕಾರ್ಯಕ್ರಮವಿರುತ್ತಿತ್ತು. ಈ ಕಾರ್ಯಕ್ರಮ ಎಲ್ವಿನ್ನರ ಒಂದು ಮೆಚ್ಚಿನ ಕಾರ್ಯಕ್ರಮ ವಾಗಿತ್ತು. ಇದರಂತೆಯೇ ಅವರಿಗೆ ಇಷ್ಟವಾದ ಮತ್ತೊಂದು ಕೆಲಸವೆಂದರೆ ನೂಲು ತೆಗೆಯುವುದು.

ಆಶ್ರಮದಲ್ಲಿ ಮೀರಾ ಬೆನ್ ಎಂಬ ಒಬ್ಬ ತರುಣಿ ಯಿದ್ದಳು. ಮೂಲರ್ತ ಆಕೆ ವಿದೇಶಿಯವಳು. ಆದರೆ ಆಕೆ ತನ್ನದೆನ್ನುವ ಎಲ್ಲವನ್ನೂ ತ್ಯಜಿಸಿ ಸಬರಮತಿ ಆಶ್ರಮಕ್ಕೆ ಬಂದು ನೆಲೆಸಿದ್ದಳು. ಗಾಂಧೀಜಿಯವರು ಆಕೆಯನ್ನು ತಮ್ಮ ಮಗಳೆಂದು ಭಾವಿಸಿದ್ದರು. ಗಾಂಧೀಜಿಯವರಿಗೆ ಎಲ್ವಿನ್ನರೂ ಸಹ ಅಕ್ಕರೆಯ ಶಿಷ್ಯರಾಗಿದ್ದರು. ಒಮ್ಮೆ ಗಾಂಧೀಜಿಯವರು ಎಲ್ವಿನ್ನರೊಡನೆ ಮಾತನಾಡುತ್ತ ‘ಮೀರಾ ಬೆನ್ ನನ್ನ ಮಗಳು. ಹಾಗೆಯೇ ನೀನು ನನ್ನ ಮಗ’ ಎಂದರು.

ಎಲ್ವಿನ್ನರು ಕ್ರಿಸ್ತ ಸೇವಾ ಸಂಘವನ್ನು ಬಿಟ್ಟು ಅಸ್ಪೃಶ್ಯರೊಡನೆ ಬದುಕಬೇಕೆಂದು ಬಯಸಿದ್ದರು. ಆದರೆ ಅಷ್ಟರಲ್ಲೇ ಸರದಾರ್ ಪಟೇಲರು ಗಿರಿಜನರೊಡನೆ ಇದ್ದು ಅವರ ಬಗ್ಗೆ ಅಭ್ಯಾಸ ಮಾಡುವಂತೆ ಸೂಚಿಸಿದರು. ಇದು ಎಲ್ವಿನ್ನರಿಗೆ ಒಪ್ಪಿಗೆಯಾಯಿತು.

ಗಿರಿಜನ ಪ್ರಪಂಚಕ್ಕೆ ಪ್ರವೇಶ

‘ಗಿರಿಜನರೊಂದಿಗೆ ಬಾಳುವುದೇನೋ ಸರಿ- ಆದರೆ ಒಬ್ಬರೇ ಇರುವುದು ಹೇಗೆ?’ ಎಂಬ ಯೋಚನೆ ಎಲ್ವಿನ್ನರನ್ನು ಕಾಡಿತು. ಆಗ ಅವರಿಗೆ ಸ್ನೇಹಿತ ಶ್ಯಾಮರಾವ್ ನೆನಪಿಗೆ ಬಂದರು. ಶ್ಯಾಮರಾವ್ ಸಹ ಎಲ್ವಿನ್ನರಂತೆ ಜನಸಾಮಾನ್ಯ ರಿಗಾಗಿ ಸೇವೆಸಲ್ಲಿಸುವ ಭಾರತೀಯ ಯುವಕರಾಗಿದ್ದರು. ಆದರೆ ಅವರು ಆಗ ಇಂಗ್ಲೆಂಡಿ ನಲ್ಲಿದ್ದರು. ಎಲ್ವಿನ್ನರು ಗಿರಿಜನರೊಂದಿಗೆ ಬಾಳುವ ತಮ್ಮ ಯೋಚನೆಯನ್ನು ಶ್ಯಾಮರಾವ್‌ಗೆ ತಿಳಿಸಿದರು. ಹಾಗೆಯೇ ಶ್ಯಾಮರಾವ್‌ರನ್ನೂ ಸಹ ತಮ್ಮೊಂದಿಗೆ ಇರಲು ಆದೀತೇ ಎಂದು ಕೇಳಿದರು.

ಶ್ಯಾಮರಾವ್ ಒಪ್ಪಿಕೊಂಡರು.  ಆದರೆ ಕೂಡಲೆ ಬರಲು ಅವರಿಗೆ ಆಗಲಿಲ್ಲ. ಆಗ ಗಾಂಧೀಜಿಯವರು ಇಂಗ್ಲೆಂಡಿಗೆ ಹೋಗಿದ್ದರು. ಅವರು ಭಾರತಕ್ಕೆ ಹಿಂದಿರುಗಲು ಇನ್ನೂ ಕೆಲವು ತಿಂಗಳುಗಳಿದ್ದವು. ಅವರೊಂದಿಗೆ ತಾವು ಭಾರತಕ್ಕೆ ಹಿಂದಿರುಗುವುದಾಗಿ ಶ್ಯಾಮರಾವ್ ಉತ್ತರಿಸಿದರು.

ಶ್ಯಾಮರಾವ್ ಬರುವುದರೊಳಗೆ ಒಮ್ಮೆ ಗೋಂಡ್ ಗಿರಿಜನರನ್ನು ನೋಡಬೇಕೆಂದು ಎಲ್ವಿನ್ನರು ಪ್ರಯಾಣ ಹೊರಟರು. ಸಾತ್ಪುರ ಪ್ರಸ್ಥಭೂಮಿಯ ಟೆಟುಲ್‌ಗೆ ಹೋದರು. ಅಲ್ಲಿಂದ ಕಾಲ್ನಡಿಗೆಯಲ್ಲೇ ಘೋರ ಅರಣ್ಯವನ್ನು ಅಲೆದು ಗೋಂಡ್ ಜನರು ವಾಸಿಸುವ ಅನೇಕ ಹಳ್ಳಿಗಳನ್ನು ನೋಡಿದರು. ಪ್ರವಾಸ ಮುಗಿದ ನಂತರ ಎಲ್ವಿನ್ನರು ಆಚಾರ್ಯ ಕೃಪಲಾನಿಯವರಲ್ಲಿಗೆ ಬಂದರು. ಇಬ್ಬರೂ ಮಥುರಾ, ಬೃಂದಾವನ, ಹರಿದ್ವಾರ, ಹೃಷಿಕೇಶ, ಅಯೋಧ್ಯೆ ಮೊದಲಾದ ಊರುಗಳಿಗೆ ಭೇಟಿಕೊಟ್ಟರು. ಹೋದ ಊರುಗಳಲೆಲ್ಲ ಜನರಿಗೆ ಖಾದಿಯ ಬಗ್ಗೆ ತಿಳಿಸಿ ಹೇಳುತ್ತಿದ್ದರು. ಈ ಪ್ರವಾಸದಿಂದಾಗಿ ಎಲ್ವಿನ್ನರಿಗೆ ಬಹಳ ಉಪಯೋಗವಾಯಿತು. ಅವರು ತೆರೆದ ಕಣ್ಣಿನಿಂದ ಭಾರತೀ ಯರ ಪರಿಸ್ಥಿತಿಯನ್ನು ನೋಡುತ್ತಿದ್ದರು. ಇಲ್ಲಿನ ಬಡತನದ ಮತ್ತು ಸಾಮಾಜಿಕ ವ್ಯವಸ್ಥೆಯ ಪರಿಚಯ ಅವರಿಗಾಯಿತು.

ಒಂದು ರಾತ್ರಿ

ಗಾಂಧೀಜಿಯವರು ಶ್ಯಾಮರಾವ್ ಜೊತೆಗೆ ಭಾರತಕ್ಕೆ ಬಂದರು. ಮುಂಬಯಿಯಲ್ಲಿ ಅವರು ತಂಗಿದ್ದರು. ಎಲ್ವಿನ್ ಅಲ್ಲಿ ಹೋಗಿ ಗಾಂಧೀಜಿಯವರನ್ನು ಕಂಡರು. ಅನಂತರ ಶ್ಯಾಮರಾವ್ ಜೊತೆಗೆ ಸೇರಿ ತಮ್ಮ ಮುಂದಿನ ಯೋಜನೆಯ ಬಗ್ಗೆ ದೀರ್ಘವಾಗಿ ಚರ್ಚಿಸಿದರು. ನಾಲ್ಕನೆಯ ದಿನ ಒಂದು ಸಂಗತಿ ನಡೆಯಿತು.

ಕಾಂಗ್ರೆಸ್ ಮತ್ತು ಬ್ರಿಟಿಷ್ ವೈಸರಾಯರ ನಡುವೆ ಸಂಧಾನ ಸಫಲವಾಗಲಿಲ್ಲ. ಎಲ್ಲೆಲ್ಲೂ ಕೋಲಾಹಲದ ಪರಿಸ್ಥಿತಿ. ನೆಹರೂ ಜೈಲಿನಲ್ಲಿದ್ದರು. ಮುಂಬಯಿಯಲ್ಲಿ ಗಾಂಧೀಜಿಯವರು ತಂಗಿದ್ದ ಮನೆಯಲ್ಲಿ ಮಾತ್ರ ಅಶಾಂತಿಗೆ ಅವಕಾಶವೇ ಇರಲಿಲ್ಲ.  ಮನೆಯ ಮೇಲ್ಭಾಗ ದಲ್ಲಿ ಪುಟ್ಟ ಪುಟ್ಟ ಡೇರೆಗಳನ್ನು ಹಾಕಿದ್ದರು. ಅಲ್ಲಿ ಗಾಂಧೀಜಿಯವರು ಶಾಂತಿಯಿಂದ ನೂಲುತ್ತಾ ಕುಳಿತಿ ರುತ್ತಿದ್ದರು. ಅವರು ಮೌನವ್ರತವನ್ನು ಆಚರಿಸುತ್ತಿದ್ದರು. ಆದರೆ ಎಲ್ವಿನ್ನರು ಮಾತ್ರ ಗಾಂಧೀಜಿಯವರೊಡನೆ ಮಾತನಾಡುತ್ತಿದ್ದರು. ಎಲ್ವಿನ್ನರ ಮಾತುಗಳಿಗೆ ಗಾಂಧೀಜಿ ಯವರು ಕಾಗದದ ಮೇಲೆ ಉತ್ತರವನ್ನು ಬರೆದು ಕೊಡುತ್ತಿದ್ದರು.

ರಾತ್ರಿಯಾಯಿತು. ಎಲ್ಲರೂ ಮಲಗಲು ಸಿದ್ಧತೆ ನಡೆಸಿದರು. ಗಾಂಧೀಜಿಯವರ ಬಳಿಯೇ ಎಲ್ವಿನ್ನರು ಮಲಗಿದರು. ಆಕಾಶದಲ್ಲಿ ಮಿನುಗುತ್ತಿದ್ದ ನಕ್ಷತ್ರಗಳನ್ನೇ ನೋಡುತ್ತಾ ಮಲಗಿದ್ದ ಎಲ್ವಿನ್ನರಿಗೆ ನಿದ್ದೆ ಬಂದದ್ದೇ ತಿಳಿಯಲಿಲ್ಲ. ಇದ್ದಕ್ಕಿದ್ದಂತೆ ಸಣ್ಣ ಗದ್ದಲ ಆರಂಭವಾದಂತೆ ಅವರಿಗೆ ಅನಿಸಿತು.

ಕಣ್ಣು ತೆರೆದು ನೋಡಿದರೆ ಎದುರಿಗೆ ಪೊಲೀಸ್ ಕಮೀಷನರ್ ನಿಂತಿದ್ದರು. ಗಾಂಧೀಜಿಯವರು ಮುಗುಳ್ನಗುತ್ತ ಅವರನ್ನು ಸ್ವಾಗತಿಸಿದರು. ಎಲ್ಲರೂ ಪ್ರಾತಃಕಾಲದ ಪ್ರಾರ್ಥನೆ ಮಾಡಿದರು. ಅನಂತರ ಗಾಂಧೀಜಿಯವರು ತಮ್ಮ ಆಪ್ತರಿಗೆಲ್ಲ ಒಂದೊಂದು ಪತ್ರವನ್ನು ಬರೆದುಕೊಟ್ಟರು. ಎಲ್ವಿನ್ನರಿಗೂ ಒಂದು ಪತ್ರ ಕೊಟ್ಟರು.

ಬಂಧನ  ಗಡೀಪಾರು

ಗಾಂದೀಜಿಯವರು ಸೆರಮನೆಗೆ ಹೋಗುವ ಮುನ್ನ ಎಲ್ವಿನ್ನರು ಮಾಡಬೇಕಾದ ಒಂದು ಕೆಲಸದ ಬಗ್ಗೆ ತಿಳಿಸಿದ್ದರು. ಅದು ಎಲ್ವಿನ್ನರು ಗಡಿಪ್ರದೇಶಕ್ಕೆ ಒಮ್ಮೆ ಹೋಗಿ ಬರಬೇಕೆಂಬುದು. ಅಲ್ಲಿ ನಡೆಯುತ್ತಿದ್ದ ಅಹಿಂಸಾತ್ಮಕ ಚಳವಳಿಯನ್ನು ಸರಕಾರ ಉಗ್ರರೀತಿಯಲ್ಲಿ ವಿರೋಧಿಸು ತ್ತಿತ್ತು. ಅಲ್ಲಿ ನಡೆಯುತ್ತಿದ್ದುದೇ ಒಂದು. ಮುಂಬಯಿಗೆ ಬರುತ್ತಿದ್ದ ವರದಿಗಳೇ ಒಂದು. ಆದ್ದರಿಂದ ಅಲ್ಲಿಗೆ ನೇರವಾಗಿ ಹೋಗಿ ಸಂಚರಿಸಿ ಅಲ್ಲಿನ ನೈಜ ಸಂಗತಿಯ ಬಗ್ಗೆ ತಿಳಿದುಕೊಂಡು ಬರಲು ಗಾಂಧೀಜಿಯವರು ಎಲ್ವಿನ್ನರಿಗೆ ತಿಳಿಸಿದ್ದರು.

ಈ ಕೆಲಸಕ್ಕಾಗಿ ಎಲ್ವಿನ್ನರು ಶ್ಯಾಮರಾವ್  ಜೊತೆಗೆ ಪೆಷಾವರ್‌ಗೆ ಹೋದರು. ಈ ಸುದ್ದಿ ಹೇಗೋ ಸರಕಾರಕ್ಕೆ ತಿಳಿಯಿತು. ಮೊದಲಿನಿಂದಲೂ ಎಲ್ವಿನ್ನರ ಬಗ್ಗೆ ಸಂಶಯ ತಾಳಿದ್ದ ಸರ್ಕಾರ ಈಗ ಅವರನ್ನು ಬಂಧಿಸಲು ಆಜ್ಞೆ ಹೊರಡಿಸಿತು. ಎಲ್ವಿನ್ನರು ಹೊರಟಿದ್ದ ರೈಲನ್ನು ಪೊಲೀಸರು ಪತ್ತೆ ಹಚ್ಚಿದರು. ಪ್ರಥಮದರ್ಜೆಯ ಡಬ್ಬಿಯಲ್ಲಿ ಹುಡುಕಾಡಿ ಒಬ್ಬ ಆಂಗ್ಲ ವ್ಯಾಪಾರಿಯನ್ನು ಎಲ್ವಿನ್ ಎಂದು ಭಾವಿಸಿ ಬಂಧಿಸಿದರು. ಇದರಿಂದ ರೈಲಿನಲ್ಲಿ ಗೊಂದಲವಾಯಿತು. ಎರಡನೇ ದರ್ಜೆಯ ಡಬ್ಬಿಯಲ್ಲಿ ಪ್ರಯಾಣ ಮಾಡುತ್ತಿದ್ದ ಎಲ್ವಿನ್ನರಿಗೆ ವಿಷಯ ತಿಳಿಯಿತು. ತಕ್ಷಣ ಅಲ್ಲಿಂದ ತಪ್ಪಿಸಿಕೊಂಡರು.

ಪೇಷಾವರ್ ತಲುಪಿದ ನಂತರ ಅಲ್ಲಿ ಒಂದು ಪ್ರವಾಸಿ ಮಂದಿರದಲ್ಲಿ ಇಳಿದುಕೊಂಡರು. ಗಾಂಧೀಜಿ ಯವರ ಅಪೇಕ್ಷೆಯಂತೆ ಅಲ್ಲಿನ ವಿದ್ಯಮಾನಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿದರು. ಆದರೆ ಅಷ್ಟರಲ್ಲಿ ಸರ್ಕಾರಕ್ಕೆ ಅವರ ಬಗ್ಗೆ ತಿಳಿದು ಅವರನ್ನು ಬಂಧಿಸಿದರು. ಅವರಿಗೆ ಗಡಿನಾಡಿನಿಂದ ಆಚೆ ಹೋಗಬೇಕೆಂದು ಗಡೀ ಪಾರು ಶಿಕ್ಷೆ ವಿಧಿಸಲಾಯಿತು.

ರಾಜಕೀಯದಿಂದ ನಿವೃತ್ತಿ-ಗಿರಿಜನ ಸೇವೆ

ಪೆಷಾವರ್‌ನಿಂದ ಮುಂಬಯಿಗೆ ಬಂದನಂತರ ಎಲ್ವಿನ್ ಮತ್ತು ಶ್ಯಾಮರಾವ್ ಇಬ್ಬರೂ ಸೇರಿ ಚರ್ಚಿಸಿದರು. ಕೊನೆಗೆ ಇಬ್ಬರೂ ರಾಜಕೀಯದಿಂದ ಹೊರಬಂದು ಗೋಂಡ್ ಜನರಿಗಾಗಿ ದುಡಿಯಬೇಕೆಂದು ತೀರ್ಮಾನಿಸಿ ದರು.

೧೯೩೨ ರ ಜನವರಿ ೨೮ ರಂದು ಎಲ್ವಿನ್ ಮತ್ತು ಶ್ಯಾಮರಾವ್ ಎತ್ತಿನ ಗಾಡಿಯಲ್ಲಿ ಮೂವತ್ತಮೂರು ಮೈಲಿ ದೂರದ ಊರಿಗೆ ಹೊರಟರು. ಕಾಡು ದಾಟಿದರು; ಗುಡ್ಡಗಳ ದಾರಿಯಲ್ಲಿ ಸಾಗಿದರು. ಎರಡು ದಿನ ಹೀಗೇ ಮುಂದುವರೆಯಿತು ಪ್ರಯಾಣ. ಆಯಾಸವೋ ಆಯಾಸ. ಎಲ್ಲಕ್ಕೂ ಹೆಚ್ಚಾಗಿ ಜೇಬಿನಲ್ಲಿರುವುದು ಕೆಲವೇ ರೂಪಾಯಿಗಳು. ಎಲ್ವಿನ್ ಆಯಾಸದಿಂದ ದಾರಿಯಲ್ಲಿ ಕಳಿತುಬಿಟ್ಟರು. ಆಗ ಅವರಿಗನ್ನಿಸಿತು; ‘ಛೆ, ನಾನು ತಪ್ಪು ಮಾಡಿಬಿಟ್ಟೆ ! ಆಕ್ಸ್‌ಫರ್ಡ್‌ನಲ್ಲಿ ಬಂಧುಗಳು, ಆತೀಯರಾದ ಸ್ನೇಹಿತರು ಇದ್ದರು. ಇಲ್ಲಿ ಯಾರಿದ್ದಾರೆ? ಆಕ್ಸ್‌ಫsರ್ಡ್ ನಲ್ಲಿದ್ದಿದ್ದರೆ ಈ ರೀತಿ ಕಷ್ಟ ಬರುತ್ತಿತ್ತೇ ?’

ಕರಂಜಿಯಾ ಎಂಬ ಊರಿಗೆ ಅವರು ಹೊರಟಿದ್ದರು. ಆ ಊರನ್ನು ತಲುಪಿ ರಾತ್ರಿಯನ್ನು ಕಳೆದರು. ಮಾರನೆಯ ದಿನ ಒಬ್ಬಾತ ತನ್ನ ಕೊಟ್ಟಿಗೆಯನ್ನು ಬಾಡಿಗೆಗೆ ಕೊಟ್ಟ. ಅದನ್ನು ವಾಸಕ್ಕೆ ಸಿದ್ಧಗೊಳಿಸಿದನಂತರ ಎಲ್ವಿನ್ನರು ಹಿಂದಿನ ದಿನ ಉಂಟಾಗಿದ್ದ ಭಯವನ್ನು ಬಿಟ್ಟು ನಿಶ್ಚಿಂತರಾಗಿ ಮಲಗಿದರು. ‘ಈ ಗುಡಿಸಲ ಸುತ್ತಲೂ ಇರುವ ಗೋಂಡ್ ಜನರ ಸೇವೆಯಲ್ಲಿ ಸಿಕ್ಕುವ ಶಾಂತಿ ಮತ್ತೆಲ್ಲಿ ಸಿಗುವುದು?’ ಎಂದು ಅವರಿಗೆ ಅನಿಸಿತು.

ಎಲ್ವಿನ್ ಅಲ್ಲಿ ವಾಸಮಾಡಲಾರಂಭಿಸಿದ ಮೇಲೂ ಅವರಿಗೆ ಪೊಲೀಸರ ಕಾಟ ತಪ್ಪಲಿಲ್ಲ. ಅವರು ಆಗಾಗ ಪೀಡಿಸುತ್ತಲೇ ಇದ್ದರು. ಪೊಲೀಸರಿಗಿಂತ ಹೆಚ್ಚು ಕಾಟಕೊಟ್ಟವರೆಂದರೆ ಬಿಷಪ್ ಅವರು. ಎಲ್ವಿನ್ನರು ಭಾರತಕ್ಕೆ ಬಂದದ್ದು ಕ್ರೈಸ್ತಧರ್ಮವನ್ನು ಪ್ರಚಾರ ಮಾಡಲಿಕ್ಕೆಂದು. ಆದರೆ ಅವರು ಭಾರತಕ್ಕೆ ಬಂದನಂತರ ಆ ದಿಶೆಯಲ್ಲಿ ಏನೂ ಮಾಡದೆ ಗಾಂಧೀಜಿಯವರ ಶಿಷ್ಯರಾದದ್ದು ಬಿಷಪರಿಗೆ ಅಸಮಾಧಾನವನ್ನು ಉಂಟುಮಾಡಿತ್ತು. ಇಷ್ಟೇ ಅಲ್ಲದೆ ಎಲ್ವಿನ್ನರೂ ಬ್ರಿಟಿಷರಾದರೂ ಭಾರತವನ್ನು ಆಳುತ್ತಿದ್ದ ಬ್ರಿಟಿಷರಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದರು. ಇದೂ ಸಹ ಬಿಷಪರಿಗೆ ಸಿಟ್ಟಾಗುವಂತೆ ಮಾಡಿತು. ಕೊನೆಗೆ ಎಲ್ವಿನ್ನರು ಕ್ರೈಸ್ತ ಸಂಘ ಸಂಸ್ಥೆಗಳಿಂದ ಸಂಪೂರ್ಣವಾಗಿ ಬಿಡುಗಡೆ ಪಡೆದರು. ೧೯೩೫ ರಲ್ಲಿ ಅವರಿಗೂ ಚರ್ಚಿಗೂ ಇದ್ದ ಸಂಬಂಧ ಮುಕ್ತಾಯಗೊಂಡಿತು.

ಗೋಂಡ್ ಜನಾಂಗದೊಡನೆ

ಭಾರತದ ಮಧ್ಯಭಾಗದಲ್ಲಿ ಸಾತ್ಪುರ ಪರ್ವತಶ್ರೇಣಿ ಇದೆ. ಇಲ್ಲಿ ಹುಟ್ಟುವ ಅನೇಕ ನದಿಗಳಲ್ಲಿ ನರ್ಮದಾ ನದಿಯೂ ಒಂದು. ನರ್ಮದಾ ನದಿ ಹುಟ್ಟುವ ಸ್ಥಳಕ್ಕೆ ಬಹಳ ಹತ್ತಿರದಲ್ಲೇ ಕರಂಜಿಯಾ ಎಂಬ ಪ್ರದೇಶ ಸಿಗುತ್ತದೆ. ಅಲ್ಲಿ ಗೋಂಡ್ ಎಂಬ ಗಿರಿಜನರು ವಾಸಿಸುತ್ತಾರೆ. ಮಧ್ಯ ಭಾರತದಲ್ಲಿ ಅಲ್ಲಲ್ಲಿ ಕಂಡು ಬರುವ ಇವರ ಜೀವನ ವಿಶಿಷ್ಟವಾದುದು.

ಎಲ್ವಿನ್ನರು ಈ ಗೋಂಡರ ಸರ್ವತೋಮುಖ ಅಭಿವೃದ್ಧಿಗಾಗಿ ಯೋಜನೆಗಳನ್ನು ಹಾಕಿದರು. ಗಾಂಧೀಜಿ ಯವರು ತೋರಿಸಿದ ಮಾರ್ಗದಲ್ಲಿ ದುಡಿಯುವ ಕೆಲವು ಯುವಕರನ್ನು ಸಂಘಟಿಸಿದರು. ಈ ಸೇವಾ ಕೇಂದ್ರಕ್ಕೆ ೧೯೪೯ರಲ್ಲಿ ‘ಗಿರಿಜನರ ಅಭ್ಯುದಯ ಮತ್ತು ಸಂಶೋಧನಾ ಕೇಂದ್ರ’ ವೆಂದು ಹೆಸರಿಟ್ಟರು.

ನರ್ಮದಾ ನದಿ ಹುಟ್ಟುವ ಸ್ಥಳದ ಹತ್ತಿರದಲ್ಲಿ ಒಂದು ಗುಡ್ಡ. ಆ ಗುಡ್ಡದ ಮೇಲೆ ಮಣ್ಣು, ಬಿದಿರು, ಹುಲ್ಲಿನಿಂದ ಕಟ್ಟಿದ ಗುಡಿಸಲುಗಳು. ಸುತ್ತಲಿನ ಗೋಂಡರ ಗುಡಿಸಲುಗಳಂತೆಯೇ ಇವೂ ಇದ್ದುವಾದರೂ ಇಲ್ಲಿ ವಾಸಿಸುತ್ತಿದ್ದವರು ಎಲ್ವಿನ್ನರು ಮತ್ತು ಅವರ ಸೇವಾ ಸಂಘದ ಸದಸ್ಯರು. ಇವು ಗೋಂಡ್ ಜನರ ಗುಡಿಸಿಲಿನಂತಿದ್ದರೂ, ಅವುಗಳಿಗಿಂತ ಸ್ವಚ್ಛವಾಗಿದ್ದವು. ಮನೆಯ ಮುಂಭಾಗದಲ್ಲಿ ಹೂಗಿಡಗಳನ್ನು ಬೆಳೆಸಿದ್ದರು. ಹಸುಗಳಿಗೆ, ಕೋಳಿಗಳಿಗೆ ಪ್ರತ್ಯೇಕ ಕೊಠಡಿಗಳಿದ್ದವು. ಈ ಮನೆಗಳ ಒಳಭಾಗವೂ ಗೋಂಡ್ ಜನರ ಮನೆಯ ಒಳಭಾಗದಂತಿದ್ದರೂ. ಗಾಳಿ ಬೆಳಕು ಹೆಚ್ಚಾಗಿ ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಈ ಮನೆಗಳನ್ನು ನೋಡಲು ಬಂದ ಗೋಂಡ್ ಜನರು ಇಲ್ಲಿನ ಸ್ವಚ್ಛತೆ, ಸರಳತೆಯಲ್ಲೂ ಕಾಣುವ ಸೌಂದರ್ಯವನ್ನು ನೋಡಿ ಕಲಿಯುತ್ತಿದ್ದರು.

ಇಲ್ಲಿಂದ ಸ್ವಲ್ಪ ಮುಂದೆ ಹೋದರೆ ಒಂದು ಆಸ್ಪತ್ರೆ. ಇದು ಸುತ್ತಮುತ್ತಲಿನ ಗಿರಿಜನರಿಗೆ ಬಹಳ ಉಪಯುಕ್ತ ವಾಯಿತು. ಅಲ್ಲಿನ ಜನರಿಗೆ ಸರಿಯಾದ ವೈದ್ಯಕೀಯ ನೆರವಿಲ್ಲದೆ ಮೈಲಿಗಳಷ್ಟು ದೂರದ ಹಳ್ಳಿಗಳಿಂದಲೂ ಬರಲಾರಂಭಿಸಿದರು.

ಆಸ್ಪತ್ರೆಯ ಬಳಿ ಒಂದು ತೋಟವಿತ್ತು. ಅಲ್ಲಿ ಹಲವಾರು ಬಗೆಯ ತರಕಾರಿಗಳನ್ನು, ಹಣ್ಣು ಹೂವುಗಳನ್ನು ಬೆಳೆಸಿದ್ದರು. ಹಳ್ಳಿಯವರು ಇಲ್ಲಿಗೆ ಬಂದು ಗಿಡಗಳನ್ನು, ಬೀಜಗಳನ್ನು ಪಡೆದುಕೊಂಡು ಹೋಗುತ್ತಿದ್ದರು.

ಮುಂದೆ ಚಿಕ್ಕ ವಸ್ತುಸಂಗ್ರಹಾಲಯ ಮತ್ತು ಅದಕ್ಕೂ ಸ್ವಲ್ಪ ಮುಂದೆ ಶಾಲೆ ಮತ್ತು ಹಾಸ್ಟೆಲನ್ನು ಕಟ್ಟಿದ್ದರು. ಇದೇ ಎಲ್ವಿನ್ನರ ದೊಡ್ಡ ಸಾಧನೆ. ಇಲ್ಲಿ ಬಾಲಕ ಬಾಲಕಿಯರಿಗೆ ಉತ್ತಮ ಶಿಕ್ಷಣ ಸಿಗುತ್ತಿತ್ತು. ಸಾಮಾನ್ಯ ಶಿಕ್ಷಣದೊಂದಿಗೆ ಮರಗೆಲಸ ಮತ್ತು ಹೊಲಿಗೆ ಶಿಕ್ಷಣವನ್ನೂ ನೀಡಲಾಗುತ್ತಿತ್ತು.

ಶಾಲೆಯನ್ನು ದಾಟಿದರೆ ಅಲ್ಲಿ ಕುಷ್ಠರೋಗಿಗಳ ಆಸ್ಪತ್ರೆಯಿತ್ತು. ಬಹು ಕಷ್ಟಕೊಡುವ ಈ ರೋಗಕ್ಕೆ ಬಲಿಯಾಗುತ್ತಿದ್ದ ರೋಗಿಗಳನ್ನು ಶುಶ್ರೂಷೆ ಮಾಡಲು ಎಲ್ವಿನ್ನರು ಈ ಪ್ರತ್ಯೇಕವಾದ ಆಸ್ಪತ್ರೆಯನ್ನು ಕಟ್ಟಿದ್ದರು. ಇಲ್ಲಿನ ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆಯ ಸೌಲಭ್ಯವಿತ್ತು.

ಇದಿಷ್ಟು ಗಿರಿಜನರ ಅಭಿವೃದ್ಧಿ ಕೇಂದ್ರದ ಮುಖ್ಯಭಾಗ. ಇದರ ಸುತ್ತಲೂ ದೂರ ದೂರದ ಗಿರಿಪ್ರದೇಶ ಅಥವ ಅರಣ್ಯ ಪ್ರದೇಶದಲ್ಲಿ ಶಾಖೆಗಳಿದ್ದವು. ಇವುಗಳ ಸಂಖ್ಯೆ ಎಂಟು. ಈ ಒಂದೊಂದು ಶಾಖೆಯಲ್ಲೂ ಒಂದೊಂದು ಶಾಲೆ, ಹಿಂದಿ ಭಾಷೆಯ ಸರಳವಾದ ಪುಸ್ತಕಗಳ ನ್ನೊಳಗೊಂಡ ಗ್ರಂಥಾಲಯ, ಒಂದು ಚಿಕ್ಕ ಆಸ್ಪತ್ರೆಗಳಿರುತ್ತಿದ್ದವು. ಒಂದೊಂದು ಶಾಖೆಗೂ ಒಬ್ಬೊಬ್ಬ ಮೇಲ್ವಿಚಾರಕರಿರುತ್ತಿದ್ದರು. ಎಲ್ಲರೂ ವಾರಕ್ಕೆ ಒಂದು ಸಲ ಮುಖ್ಯಕೇಂದ್ರಕ್ಕೆ ಬಂದು ಸಭೆ ಸೇರಿ ತಮ್ಮ ತಮ್ಮ ಕ್ಷೇತ್ರದ ಚಟುವಟಿಕೆಗಳ ಬಗ್ಗೆ ಚರ್ಚಿಸುತ್ತಿದ್ದರು.

ಎಲ್ಲರಿಗೂ ಸ್ನೇಹಿತ

ಎಲ್ವಿನ್ನರ ಸುತ್ತಲೂ ಯಾವಾಗಲೂ ಗಿರಿಜನರ ಮಕ್ಕಳಿರುತ್ತಿದ್ದರು. ಆ ಮಕ್ಕಳೋ, ಕಂಡವರು ದೂರ ಸರಿಯುವಷ್ಟು ಕೊಳಕಾಗಿರುತ್ತಿದ್ದರು. ಅವರು ಸ್ನಾನ ಮಾಡಿ ಎಷ್ಟು ದಿನಗಳಾಗಿತ್ತೊ ! ಸಿಕ್ಕುಗಟ್ಟಿದ ಉದ್ದ ಕೂದಲಿನ ಆ ಮಕ್ಕಳ ಮುಖಕ್ಕೆ ನೊಣಗಳು ಮುತ್ತುತ್ತಿದ್ದವು. ಇನ್ನು ಅವರ ಬಟ್ಟೆಗಳೋ! ಇಷ್ಟೇ ಸಾಲದೆಂಬಂತೆ ರೋಗಗಳಿಗೆ ತುತ್ತಾದ ಮಕ್ಕಳು ಬೇರೆ. ಆದರೆ ಎಲ್ವಿನ್ನರು ಇವು ಯಾವುದನ್ನು ಗಮನಿಸುತ್ತಿರಲಿಲ್ಲ. ಅವರಿಗೆ ಆ ಮಕ್ಕಳೂ ಒಂದೇ, ಇತರ ಮನುಷ್ಯರೂ ಒಂದೇ. ಎಲ್ಲರೂ ಆ ದೇವನ ಮಕ್ಕಳೆಂದೇ ಅವರ ಭಾವನೆ.

ಎಲ್ವಿನ್ನರ ಬಳಿ ಯಾವ ಸೆಳೆತವಿತ್ತೊ-ಅವರ ಸುತ್ತಲೂ ಸೇರುತ್ತಿದ್ದ ಮಕ್ಕಳು ಯಾವಾಗಲೂ ನಗು ನಗುತ್ತಲಿರುತ್ತಿದ್ದರು. ಎಲ್ವನ್ನರು ಅವರಿಗೆ ಕತೆ ಹೇಳುತ್ತಿದ್ದರು. ಅವರಿಂದಲೂ ಕತೆ ಹೇಳಿಸುತ್ತಿದ್ದರು. ಅವರೊಂದಿಗೆ ತಾವೂ ಪುಟ್ಟ ಹುಡುಗನಾಗಿ ಹರಟೆ ಹೊಡೆಯುತ್ತಾ ನಲಿಯುತ್ತಿ ದ್ದರು, ಇದರ ಮಧ್ಯೆ ಆ ಮಕ್ಕಳು ಶುಭ್ರವಾಗಿರುವಂತೆ ಎಲ್ವಿನ್ನರು ನೋಡಿಕೊಳ್ಳುತ್ತಿದ್ದರು. ಎಲ್ವಿನ್ನರ ಮೋಡಿಗೆ ಸಿಕ್ಕಮಕ್ಕಳು ಮಾರನೆಯ ದಿನ ಮತ್ತೆ ಬಂದಾಗ ಸ್ನಾನ ಮಾಡಿ, ಒಗೆದ ಬಟ್ಟೆಯನ್ನು ಧರಿಸುತ್ತಿದ್ದರು.

ಎಲ್ವಿನ್ನರ ಸುತ್ತ ಮಕ್ಕಳಿಲ್ಲದಿದ್ದರೆ ಯಾವುದಾದರೂ ಪ್ರಾಣಿಗಳಿರುತ್ತಿದ್ದವು. ಎಲ್ವಿನ್ನರು ಪ್ರೀತಿಯಿಂದ ಸಾಕಿದ ಪ್ರಾಣಿಗಳಿಗೆ ಲೆಕ್ಕವಿಲ್ಲ. ಚಿಕ್ಕ ಚಿರತೆ ಮರಿಯೊಂದನ್ನು ಅವರು ಸಾಕಿದ್ದರು. ಇದರೊಂದಿಗೆ ಜಿಂಕೆಗಳು, ಪಾರಿವಾಳಗಳು, ಗಿಳಿಗಳು, ಮೊಲಗಳು, ಅಳಿಲು, ಕೊಕ್ಕರೆ – ಹೀಗೆ ಇನ್ನೂ ಅನೇಕ ಪ್ರಾಣಿಗಳು ಎಲ್ವಿನ್ನರ ಅತಿಥಿಗಳಾಗಿದ್ದವು. ಎಲ್ವಿನ್ನರು ಮಕ್ಕಳೊಂದಿಗೆ ಮಾತನಾಡುವಂತೆಯೇ ಇವುಗಳೊಂದಿಗೂ ಮಾತನಾಡುತ್ತಿದ್ದರು. ಪುಟ್ಟ ಅಳಿಲು ಎಲ್ವಿನ್ನರು ಊಟ ಮಾಡುವಾಗ ತನ್ನ ಪಾಲನ್ನು ಬಿಡುತ್ತಿರಲಿಲ್ಲ. ಆ ಅಳಿನಿ ನೊಂದಿಗೆ ಎಲ್ವಿನ್ನರು ಚಹಾ ಕುಡಿಯುತ್ತಿದ್ದರು. ಕೊಕ್ಕರೆಗಂತೂ ವಿಪರೀತ ಕುತೂಹಲ ಬುದ್ಧಿ. ಅದು ಏನಾದರೂ ತುಂಟಾಟ ಮಾಡುತ್ತಲೇ ಇರುತ್ತಿತ್ತು. ಎಲ್ವಿನ್ನರು ಟೈಪು ಮಾಡುತ್ತಿದ್ದಾಗ ಅದೂ ಸಹ ಎಲ್ವಿನ್ನರೊಂದಿಗೆ ಟೈಪು ಮಾಡಲು ಯತ್ನಿಸುತ್ತಿತ್ತು.!

ಜನಪ್ರಿಯ ವ್ಯಕ್ತಿ

ಎಲ್ವಿನ್ನರನ್ನು ಸುತ್ತಲಿನ ಹಳ್ಳಿಯವರೆಲ್ಲ ಗೌರವದಿಂದ ಕಾಣುತ್ತಿದ್ದರು. ಮಾಂಡ್ಲಾ ಎಂಬ ಹಳ್ಳಿಯ ಜನರು ಎಲ್ವಿನ್ ಮತ್ತು ಅವರ ಸ್ನೇಹಿತರನ್ನು ಆಗಾಗ ಔತಣಕ್ಕೆ ಆಹ್ವಾನಿಸುತ್ತಿದ್ದರು. ಅಡುಗೆಯೆಲ್ಲ ಸಿದ್ಧವಾದ ನಂತರ ಗಿರಿಜನ ಯುವಕರು ಎಲ್ವಿನ್ನರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಮೆರವಣಿಗೆಯಲ್ಲಿ ಔತಣಕ್ಕೆ ಒಯ್ಯತ್ತಿದ್ದರು. ಅನೇಕ ಹಳ್ಳಿಗಳವರು ಎಲ್ವಿನ್ನರನ್ನು ಆಹ್ವಾನಿಸುತ್ತಿದ್ದರು. ಕೆಲವೊಮ್ಮೆ ಅವರು ಬಡಿಸಿದ ಅಡುಗೆ ಯಲ್ಲಿ ಕರಿದ ಇಲಿಗಳು, ಕೆಂಪು ಇರುವೆಯ ಚಟ್ನಿ ಮೊದಲಾದುವುಗಳನ್ನು ನೋಡಿ  ಎಲ್ವಿನ್ನರು ಕಣ್ಣು ಕಣ್ಣು ಬಿಡುತ್ತಿದ್ದರು.

ಒಮ್ಮೆಯಂತೂ ಗಿರಿಜನರೇ ಎಲ್ವಿನ್ನರ ಜೀವವನ್ನು  ಉಳಿಸಿದರು. ಅದು ಆದದ್ದು ಹೀಗೆ: ಒಮ್ಮೆ ಎಲ್ವಿನ್ನರಿಗೆ ದೇಹಾರೋಗ್ಯ ಕೆಟ್ಟಿತು. ಯಾವುದೋ ಸಣ್ಣ ಕಾರಣಕ್ಕಾಗಿ ಅವರು ತಮ್ಮ ಆಸ್ಪತ್ರೆಯಲ್ಲೇ ಇದ್ದ ಆಂಟಿಬಯಾಟಿಕ್ ಮಾತ್ರೆಗಳನ್ನು ಉಪಯೋಗಿಸಿದ್ದರು. ಈ ಮಾತ್ರೆಗಳ ದೋಷದಿಂದಾಗಿ ಅವರ ಆರೋಗ್ಯ ತೀರಾ ಹದಗೆಟ್ಟಿತು. ವಿಪರೀತ ನೋವು, ಜ್ವರ ಅವರನ್ನು ಕಾಡಿತು. ಹೆಚ್ಚಿನ ವೈದ್ಯಕೀಯ ನೆರವು ತಕ್ಷಣ ಬೇಕಿತ್ತು. ಆದರೆ ದುರದೃಷ್ಟವಶಾತ್ ಆಗ ಮಳೆಗಾಲ. ವಿಪರೀತ ಮಳೆಯಿಂದಾಗಿ ವಾಹನದ ಸಂಚಾರಕ್ಕೆ ವ್ಯವಸ್ಥೆಯೂ ಇರಲಿಲ್ಲ.

ಆಗ ಅಲ್ಲಿನ ಗಿರಿಜನರು ಒಂದು ತೊಟ್ಟಿಲನ್ನು ತಂದು ಎಲ್ವಿನ್ನರನ್ನು ಅದರಲ್ಲಿ ಕೂರಿಸಿಕೊಂಡು ಹೊರಟರು. ಅವರು ಎದುರಿಸಿದ ಕಷ್ಟ ಅಷ್ಟಿಷ್ಟಲ್ಲ. ಧಾರಾಕಾರವಾಗಿ ಸುರಿಯತ್ತಿದ್ದ ಮಳೆಯಲ್ಲಿ ಕೆಲವೊಮ್ಮೆ ರಾತ್ರಿಯಲ್ಲೂ ಸಾಗಬೇಕಾಗುತ್ತಿತ್ತು. ಆಗಾಗ ತುಂಬು ನದಿಯನ್ನು ದಾಟಬೇಕಾಗುತ್ತಿತ್ತು. ಎಲ್ವಿನ್ನರನ್ನು ಹೊತ್ತು ಕೊಂಡಿದ್ದವರು ಅಂತಹ ಸಂದರ್ಭಗಳಲ್ಲಿ ನದಿಯಲ್ಲಿ ಕುತ್ತಿಗೆಯವರೆಗೆ ಮುಳುಗಬೇಕಾಗುತ್ತಿತ್ತು. ಆದರೆ ಅವರು ಎಲ್ವಿನ್ನರು ನೀರಲ್ಲಿ ನೆನೆಯಬಾರದೆಂದು ತೊಟ್ಟಿಲನ್ನು ನೀರಿಗಿಂತ ಮೇಲಕ್ಕೆ ಎತ್ತಿ ಹಿಡಿಯುತ್ತಿದ್ದರು. ಹೇಗೋ ಆಸ್ಪತ್ರೆಯನ್ನು ತಲುಪಿದಾಗ ವೈದ್ಯರು ಪರೀಕ್ಷಿಸಿ ‘ಇನ್ನು ಕೆಲವು ಗಂಟೆಗಳ ಕಾಲ ಸುಮ್ಮನಿದ್ದರೆ ಪ್ರಾಣಕ್ಕೆ ಅಪಾಯವಾಗುತ್ತಿತ್ತು’ ಎಂದರು.

ಸತತ ಬರಹ

ಎಲ್ವಿನ್ ಉತ್ತಮ ಲೇಖಕರು. ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ಇದರೊಂದಿಗೆ ಗಿರಿಜನರಿಗೆ ಸಂಬಂಧಿಸಿದಂತೆ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ,  ವರದಿಗಳನ್ನು ಸಿದ್ಧಪಡಿಸಿದ್ದಾರೆ. ಗಿರಿಜನರು ಹಾಡುವ ಹಾಡುಗಳನ್ನೂ ಕತೆಗಳನ್ನೂ ಕೇಳಿ ಸಂಗ್ರಹಿಸಿ, ಅನುವಾದಿಸಿ ಪ್ರಕಟಿಸಿದ್ದಾರೆ.    ಇವುಗಳಲ್ಲಿ ಮಖ್ಯವಾದವುಗಳೆಂದರೆ ‘ಮೈಕಲ್ ಗುಡ್ಡದ ಜನಪದ ಹಾಡುಗಳು’, ‘ಚತ್ತೀಸ್‌ಘರದ ಜನಪದ ಹಾಡುಗಳು’ ಮತ್ತು ‘ಪ್ರಪಂಚದ ಬಾಲ್ಯದಲ್ಲಿ’ (ಜನಪದ ಕತೆಗಳು).

ಬೈಗಾ ಜನರಿಗೆ ಸಂಬಂಧಿಸಿದಂತೆ ಎಲ್ಲ ವಿವರಗಳ ಸಹಿತ ‘ಬೈಗಾ’ ಎಂಬ ಪುಸ್ತಕವನ್ನು, ಮಧ್ಯಭಾರತದ ಗಿರಿಜನರ ಕಲೆಯನ್ನು ಕುರಿತು ಒಂದು ಪುಸ್ತಕವನ್ನು ಎಲ್ವಿನ್ ಬರೆದಿದ್ದಾರೆ. ‘ಬೊಂಡೋ ಹೈ ಲೆಂಡರ್’ ‘ಇಂಡಿಯಾದ ಗಿರಿಜನವೊಂದರ ಮತ’ ‘ಒರಿಸ್ಸಾದ ಗಿರಿಜನರ ನಂಬಿಕೆಗಳು’ ಮೊದಲಾದ ಪುಸ್ತಕಗಳಲ್ಲಿ ಬಹುಮಂದಿ ಭಾರತೀಯರಿಗೆ ತಿಳಿಯದ ಗಿರಿಜನರ ಜೀವನದ ವಿವರಗಳನ್ನು ಒದಗಿಸಿಕೊಟ್ಟರು. ಈ ಎಲ್ಲ ಪುಸ್ತಕಗಳನ್ನು ಬರೆಯಲು ಅವರು ಗಿರಿಜನರನ್ನು ನೋಡಿ, ಮಾತನಾಡಿಸಿ, ಅವರಿಂದ ಮಾಹಿತಿಗಳನ್ನು ಸಂಗ್ರಹಿಸಬೇಕಾಗುತ್ತಿತ್ತು. ಇದಕ್ಕಾಗಿ ಅವರು ನೂರಾರು ಮೈಲಿ ನಡೆದು ಹಿಡಿದ ಕೆಲಸವನ್ನು ಸಾಧಿಸಿದರು.

ಮಾನವಶಾಸ್ತ್ರಜ್ಞ

ಎಲ್ವಿನ್ನರಿಂದಾಗಿ ಭಾರತದ ಗಿರಿಜನರ ಬಗ್ಗೆ ಎಲ್ಲರಿಗೂ ಆಸಕ್ತಿ ಹುಟ್ಟಿತು. ಭಾರತ ಸರ್ಕಾರ ಎಲ್ವಿನ್‌ರಿಗೆ ಅನೇಕ ಹೊಣೆಗಳನ್ನು ವಹಿಸಿತು. ಇದನ್ನು ಎಲ್ವಿನ್‌ರು ಯಶಸ್ವಿಯಾಗಿ ನಿರ್ವಹಿಸಿದರು. ಒರಿಸ್ಸಾ ಸರ್ಕಾರ ಎಲ್ವಿನ್‌ರನ್ನು ‘ಗೌರವ ಮಾನವಶಾಸ್ತ್ರಜ್ಞ’ನೆಂದು ನೇಮಕ ಮಾಡಿತು. ಈ ಸಂದರ್ಭದಲ್ಲಿ ಅವರು ತಮ್ಮ ಕಾರ್ಯಕ್ಕೆ ಸಂಬಂಧಿಸಿದಂತೆ ಮೂರು ಪುಸ್ತಕಗಳನ್ನು ಬರೆದರು. ಇದರೊಂದಿಗೆ ಸರ್ಕಾರವು ಆಗಾಗ ಗಿರಿಜನರಿಗೆ ಸಂಬಂಧಿಸಿದ ಮಾಹಿತಿಗಳನ್ನು ಎಲ್ವಿನ್‌ರಿಂದ ಕೇಳಿ ಪಡೆಯುತ್ತಿತ್ತು. ಭಾರತವು ಸ್ವತಂತ್ರವಾದ ನಂತರ ಭಾರತೀಯರೇ ಸರ್ಕಾರವನ್ನು ರಚಿಸಿದರು. ಆಗ ಗಿರಿಜನರಿಗೆ ಸಂಬಂಧಿಸಿದಂತೆ ಅನೇಕ ವಿವರಗಳನ್ನು ಎಲ್ವಿನ್ನರು ಸರ್ಕಾರಕ್ಕೆ ಕೊಟ್ಟರು. ಪ್ರಧಾನಮಂತ್ರಿ ಜವಹರ ಲಾಲ್ ನೆಹರೂರವರು ಎಲ್ವಿನ್ನರನ್ನು ನೀಫಾದ ಆಡಳಿತ ವರ್ಗದಲ್ಲಿ ನೇಮಿಸಿದರು. ಗಿರಿಜನರ ಸಮಸ್ಯೆಗಳ ಬಗೆಗೆ ತಿಳಿಸುವುದೇ ಎಲ್ವಿನ್ನರ ಕೆಲಸವಾಗಿತ್ತು. ನೀಫಾಕ್ಕೆ ಹೋದ ನಂತರವೂ ಎಲ್ವಿನ್ನರು ಅಲ್ಲಿನ ಗಿರಿಜನರಿಗೂ ಗೆಳೆಯ ರಾದರು. ನೀಫಾದ ಗಿರಿ ಜನರ ಬಗ್ಗೆ ಅಭ್ಯಾಸ ಮಾಡಿ ಒಂದು ಪುಸ್ತಕ ಬರೆದರು. ಸರ್ಕಾರವೇ ಇದನ್ನು ಪ್ರಕಟಿಸಿತು. ಇದರೊಂದಿಗೆ ನಾಗಾಲ್ಯಾಂಡನ್ನು ಕುರಿತು ಒಂದು ಪುಸ್ತಕವನ್ನು ಬರೆದರು. ಇದಕ್ಕೆ ರಾಷ್ಟ್ರಾಧ್ಯಕ್ಷರ ಪ್ರಶಸ್ತಿ ಲಭಿಸಿತು.

ಭಾರತೀಯರಾದರು

ಎಲ್ವಿನ್ನರು ಒಬ್ಬ ಭಾರತೀಯ ತರುಣಿಯನ್ನು ವಿವಾಹವಾದರು. ಈಕೆ ಪಧಾತನ್ ಯುವತಿ-ಲೀಲಾ. ಲೀಲಾರವರು ಎಲ್ವಿನ್ನರನ್ನು ವಿವಾಹವಾದನಂತರ, ಅವರ ಎಲ್ಲ ಕಾರ್ಯಗಳಲ್ಲೂ ಸಹಕರಿಸಿದರು. ಎಲ್ವಿನ್ನರು ಯಾವ ತೀರ್ಮಾನಗಳನ್ನು ಕೈಗೊಳ್ಳಬೇಕಾದರೂ ಮೊದಲು ಲೀಲಾರೊಂದಿಗೆ ಚರ್ಚಿಸುತ್ತಿದ್ದರು. ಪತಿಯಂತೆಯೇ ಗಿರಿಜನರ ಪ್ರೇಮಿಯಾದ ಲೀಲಾ ಎಲ್ವಿನ್ನರ ಬಾಳು ಬೆಳಗಿದ ಸಂಗಾತಿಯಾದರು. ಭಾರತದ ತರುಣಿಯನ್ನು ವಿವಾಹವಾದ ನಂತರ ಎಲ್ವಿನ್ನರು ಭಾರತದ ಪ್ರಜೆಯಾಗ ಬಯಸಿದರು. ಕೊನೆಗೆ ಅವರು ಭಾರತದ ಪೌರತ್ವವನ್ನು ಪಡೆದರು.

ನೀಫಾದಲ್ಲಿ

ನೀಫಾದ ಗಿರಿಜನರ ಬಗ್ಗೆ ಎಲ್ವಿನ್ನರು ಆಳವಾಗಿ ಅಧ್ಯಯನ ಮಾಡಿ ೧೯೬೦ನೇ ಮಾರ್ಚ್‌ನಲ್ಲಿ ೫೫೦ ಪುಟಗಳ ದೀರ್ಘವಾದ ವರದಿಯೊಂದನ್ನು ಸರ್ಕಾರದ ವಶಕ್ಕೆ ಕೊಟ್ಟರು. ಈ ವರದಿಯಲ್ಲಿ ಗಿರಿಜನರ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಅಲ್ಲದೆ ಗಿರಿಜನರ ಅಭಿವೃದ್ಧಿಯನ್ನು ಹೇಗೆ ಮಾಡಬೇಕೆಂಬ ಬಗ್ಗೆ ವಿವರಗಳಿದ್ದವು. ಇದಕ್ಕಾಗಿ ಸರ್ಕಾರವು ಮೂವತ್ತು ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕೆಂದು ಎಲ್ವಿನ್ನರು ಸೂಚಿಸಿದ್ದರು. ಈ ವರದಿಗೆ ಎಲ್ಲೆಲ್ಲೂ ಸ್ವಾಗತ ಸಿಕ್ಕಿತು. ಈ ವರದಿಯಲ್ಲಿ ಭಾರತ ಸರ್ಕಾರವು ಗಿರಿಜನರ ಅಭಿವೃದ್ಧಿಗಾಗಿ ಏನೇನು ಕ್ರಮಗಳನ್ನು ಕೈಗೊಳ್ಳಬೇಕೆಂದು ಎಲ್ವಿನ್ನರು ಹೇಳಿದ್ದರೋ ಅವನ್ನೆಲ್ಲ ಸರ್ಕಾರ ಒಪ್ಪಿಕೊಂಡಿತು.

ಎಲ್ವಿನ್ನರಿಗೆ ಇದೊಂದು ಸಂತೋಷದ ಸಂಗತಿ. ಅಷ್ಟರಲ್ಲಿ ಒಂದು ದುರ್ಘಟನೆ ಸಂಭವಿಸಿತು. ನೀಫಾ ಭಾರತದ ಗಡಿಪ್ರದೇಶ. ಅದರ ಉತ್ತರ ದಿಕ್ಕಿನಲ್ಲಿ ಚೀನಾ ದೇಶವಿದೆ. ೧೯೬೨ನೇ ಇಸವಿ ಅಕ್ಟೋರ್‌ನಲ್ಲಿ ಚೀನಾ ಈ ಗಡಿಪ್ರದೇಶದ ಮೇಲೆ ಆಕ್ರಮಣ ಮಾಡಿತು. ಚೀನೀ ಸಶಸ್ತ್ರ ಸೈನಿಕರು ನೀಫಾದ ಒಳಭಾಗವನ್ನು ಪ್ರವೇಶಿಸಿದರು. ಒಂದೊಂದೆ ಪ್ರದೇಶವನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಸಮಯದಲ್ಲಿ ಎಲ್ವಿನ್ನರು ಚೀನಾ ಆಕ್ರಮಣ ಸ್ಥಳದಲ್ಲೇ ಇದ್ದರು. ಅವರ ಸ್ನೇಹಿತರು ಅವರನ್ನು ಬೇರೆಕಡೆಗೆ ಹೋಗಲು ಎಷ್ಟು ಒತ್ತಾಯಮಾಡಿದರೂ ಅವರು ಒಪ್ಪಲಿಲ್ಲ. ಲೀಲಾ ಸಹ ಎಲ್ವಿನ್ನರೊಂದಿಗೆ ಧೆರ್ಯದಿಂದ ಅಲ್ಲೇ ಉಳಿದರು. ಯುದ್ಧವೇನೋ ನಿಂತಿತು. ಎಲ್ವಿನ್ನರಿಗೆ ಯಾವ ಅಪಾಯವೂ ಆಗಲಿಲ್ಲ, ತೊಂದರೆಯೂ ಆಗಲಿಲ್ಲ. ಆದರೆ ಈ ಹಿಂಸಾಕಾಂಡವನ್ನು ನೋಡಿ ಅವರಿಗೆ ಬಹಳ ದುಃಖವಾಯಿತು.

ಸನ್ಮಾನ

ಎಲ್ವಿನ್ನರಿಂದಾಗಿ ಭಾರತದೇಶಕ್ಕೆ ಆದ ಉಪಕಾರ ಬಹಳ. ಪ್ರಪಂಚದಲ್ಲೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನ ಪಡೆದ ಭಾರತದಲ್ಲಿ ನೂರಾರು ತರಹದ ಜನರಿದ್ದಾರೆ. ಇವರೆಲ್ಲ ಪರಸ್ಪರ ಹೊಂದಿಕೊಂಡು ಬಾಳಿದರೆ ರಾಷ್ಟ್ರದ ಐಕ್ಯಮತ್ಯ ಸಾಧ್ಯ. ಹಾಗೆ ಹೊಂದಿಕೊಳ್ಳಬೇಕಾದರೆ ಒಬ್ಬರ ಬಗ್ಗೆ ಮತ್ತೊಬ್ಬರು ತಿಳಿಯಬೇಕಾದದ್ದು ಅವಶ್ಯಕ. ಇಂತಹ ಸ್ಥಿತಿಯಲ್ಲಿ ಭಾರತದ ಒಂದು ದೊಡ್ಡ ಜನಾಂಗದ ಬಗ್ಗೆ ಇತರ ಭಾರತೀಯರು ತಿಳಿಯಲು ಸಹಾಯಕರಾದರು ಎಲ್ವಿನ್. ಅಷ್ಟೇ ಅಲ್ಲದೆ ಆ ಹಿಂದುಳಿದ ಜನಾಂಗವನ್ನೂ ತಮ್ಮ ಸಮಾನರೆಂದು ಪರಿಗಣಿಸಿ ಅವರ ಸರ್ವತೋಮುಖ ಏಳಿಗೆಗಾಗಿ ಎಲ್ವಿನ್ನರು ಮೂರು ದಶಕಗಳ ಕಾಲ ದುಡಿದರು. ‘ಗಿರಿಜನರೂ ಭಾರತದ ನಾಗರಿಕರು. ಇತರ ನಾಗರಿಕರಿಗೆ ಇರುವ ಸೌಲಭ್ಯ ಅವರಿಗೂ ದೊರೆಯಬೇಕು. ಇತರ ನಾಗರಿಕರಿಗೆ ಇರುವ ಹಕ್ಕುಗಳನ್ನು ಅವರಿಗೂ ಕೊಡಬೇಕು’ ಎಂದು ಎಲ್ವಿನ್ನರು ಭಾರತ ಸರ್ಕಾರವನ್ನು ಒತ್ತಾಯ ಮಾಡಿದರು.

ಎಲ್ವಿನ್ನರು ಭಾರತಕ್ಕೆ ಸಲ್ಲಿಸಿದ ಸೇವೆಗಾಗಿ ಅವರಿಗೆ ಸಿಕ್ಕ ಪ್ರಶಸ್ತಿಗಳು ಅನೇಕ. ೧೯೬೧ರ ಜನವರಿ ೨೬ ರಂದು ಭಾರತದ ಗಣರಾಜ್ಯೋತ್ಸವದ ದಿನ ಎಲ್ವಿನ್ನರು ಅಲೋಂಗಿನ ಗಿರಿಜನ ಕಮೀಷನರ್ ಜೊತೆಗೆ ಏನೋ ಮಾತುಕತೆ ನಡೆಸಿದ್ದರು. ಆಗ ರೇಡಿಯೋದಲ್ಲಿ ವಾರ್ತೆ ಬರುತ್ತಿತ್ತು. ಸ್ವಲ್ಪ ಸಮಯದ ನಂತರ ‘ಶ್ರೀ ವೆರಿಯರ್ ಎಲ್ವಿನ್ನರಿಗೆ ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ’ ಎಂದು ಸಮಾಚಾರ ಕೇಳಿಬಂತು. ಮೂರು ತಿಂಗಳ ಅನಂತರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಎಲ್ವಿನ್ನರಿಗೆ ಪ್ರಶಸ್ತಿಯನ್ನು ನೀಡಲಾಯಿತು.

ಗಿರಿಜನ ಸೇವಾ ಮಾನವ ವಿಜ್ಞಾನ ಸಂಸ್ಥೆ‘, ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್‘, ‘ಬಾಂಬೆ ಏಷ್ಯಾಟಿಕ್ ಸೊಸೈಟಿ‘ ಇವೆಲ್ಲ ಎಲ್ವಿನ್ನರಿಗೆ ಸುವರ್ಣ ಪದಕವನ್ನು ನೀಡಿ ಗೌರಿಸಿದವು. ೧೯೬೧ರಲ್ಲಿ ದಾದಾಬಾಯಿ ನವರೋಜಿ ಸುವರ್ಣ ಪದಕವನ್ನು ಎಲ್ವಿನ್ನರಿಗೆ ನೀಡಲಾಯಿತು.

ಎಲ್ವಿನ್ನರು ಇಪ್ಪತ್ತೈದಕ್ಕೂ ಹೆಚ್ಚು ಅಮೂಲ್ಯ ಗ್ರಂಥಗಳನ್ನು ಬರೆದರು. ಇವೆಲ್ಲವೂ ದೇಶವಿದೇಶಗಳಲ್ಲಿ ಪ್ರಕಟವಾಗಿ ಸಾರ್ವಜನಿಕರ ಮೆಚ್ಚುಗೆ ಗಳಿಸಿದವು.

ಇನ್ನಿಲ್ಲದ ಎಲ್ವಿನ್

ಎಲ್ವಿನ್ನರು ನೀಫಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಒಮ್ಮೆ ದೆಹಲಿಗೆ ಬರಬೇಕಾಯಿತು. ಆದರೆ ದೆಹಲಿಯಿಂದ ಮತ್ತೆ ನೀಫಾಗೆ ಹೋಗಲಿಲ್ಲ. ೧೯೬೪ರ ಫೆಬ್ರವರಿ ೨೨ ರಂದು ದೆಹಲಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಸುದ್ದಿ ದೇಶಾದಾದ್ಯಂತ ಹರಡಿತು. ಗಿರಿಜನರು ತಮ್ಮ ಒಬ್ಬ ಆಪ್ತಬಂಧುವನ್ನು ಕಳೆದುಕೊಂಡರು. ಭಾರತ ತನ್ನ ಒಬ್ಬ ಶ್ರೇಷ್ಠ ವ್ಯಕ್ತಿಯನ್ನು ಕಳೆದು ಕೊಂಡಂತಾಯಿತು.

ವ್ಯಕ್ತಿ-ವ್ಯಕ್ತಿತ್ವ

ಎತ್ತರದ ದೃಢಕಾಯದ ವ್ಯಕ್ತಿ ಎಲ್ವಿನ್. ಗಾಂಧೀಜಿಯವರ ಪ್ರಭಾವದಿಂದ ಖಾದಿಯ ಬಟ್ಟೆ ಧರಿಸಿದಾಗ ಭಾರತೀಯನಂತೆಯೇ ಕಾಣುತ್ತಿದ್ದರು. ಬಾಯಲ್ಲಿ ಸದಾ ಚುಟ್ಟ. ಕಣ್ಣುಗಳಲ್ಲಿ ಯಾವಾಗಲೂ ಪ್ರೀತಿಯ ಭಾವ. ಸ್ನೇಹಪ್ರಿಯ ವ್ಯಕ್ತಿ. ಗಾಂಧೀಜಿ, ಪಟೇಲ್, ನೆಹರೂರಂತಹ ದೊಡ್ಡ ವ್ಯಕ್ತಿಗಳ ಸ್ನೇಹವಿತ್ತು. ಆದರೂ ಅದೇ ಬಗೆಯ ಸ್ನೇಹವೇ ಗಿರಿಜನರೊಂದಿಗೂ ಇತ್ತು. ಮೇಳು ಕೀಳು ಎಂಬ ಭಾವನೆ ಎಲ್ವಿನ್ನರ ಬಳಿ ಸುಳಿಯಲಿಲ್ಲ.

ಎಲ್ವಿನ್ನರಿಗೆ ಮಕ್ಕಳೆಂದರೆ ವಾತ್ಸಲ್ಯ. ಗಿರಿಜನರ ಮಕ್ಕಳು ಯಾವಾಗ ಬೇಕಾದರೂ ಎಲ್ವಿನ್ನರ ಕೋಣೆಗೆ ನುಗ್ಗುತ್ತಿದ್ದರು. ಕೆಲವರಂತೂ ಎಲ್ವಿನ್ನ ಬಾಯಲ್ಲಿದ್ದ ಚುಟ್ಟಾ ಕಿತ್ತುಕೊಂಡು ಒಂದು ದಮ್ಮು ಸೇದಿ ವಾಪಾಸ್ಸು ಕೊಟ್ಟು ಓಡಿಹೋಗುತ್ತಿದ್ದರು.

ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಎಲ್ವಿನ್ನ ಭಾರತಕ್ಕೆ ಬಂದಿದ್ದರು. ಆದರೆ ಇಲ್ಲಿಗೆ ಬಂದ ನಂತರ ಅವರು ಹಿಂದೂಧರ್ಮ, ಬೌದ್ಧಧರ್ಮದ ಸೆಳೆತಕ್ಕೆ ಸಿಕ್ಕರು. ‘ಭಾರತಕ್ಕೆ ಇಂಗ್ಲೆಂಡ್ ಸ್ವಾತಂತ್ರ್ಯ ನೀಡಲೇಬೇಕು. ಆಗ ಇಂಗ್ಲೆಂಡಿಗೆ ಗೌರವವಿರುತ್ತದೆ.’ ಎಂದು ಇಂಗ್ಲೆಂಡಿನಲ್ಲಿ ಸಾರ್ವಜನಿಕ ರೆದುರು ಭಾಷಣ ಮಾಡಿದ ಎಲ್ವಿನ್ನರು ಭಾರತದ ಬಗ್ಗೆ ಪೂಜ್ಯಭಾವನೆ ಇರಿಸಿಕೊಂಡಿದ್ದರು. ಹಿಂದೂಗಳನ್ನು, ಅದರಲ್ಲೂ ಏನೂ ಅರಿಯದ ಆದಿವಾಸಿಗಳನ್ನು ಕ್ರೈಸ್ತಧರ್ಮಕ್ಕೆ ಪರಿವರ್ತಿಸುತ್ತಿದ್ದ ಪಾದ್ರಿಗಳ ಬಗ್ಗೆ ಎಲ್ವಿನ್ನರಿಗೆ ತಿರಸ್ಕಾರವಿತ್ತು.

ಹೆಂಡತಿ ಮಕ್ಕಳು ಸಹ ಕ್ರೈಸ್ತ ಧರ್ಮವನ್ನು ಸ್ವೀಕರಿಸುವಂತೆ ಅವರು ಒತ್ತಾಯ ಮಾಡಲಿಲ್ಲ. ಅವರ ಮುದ್ದಿನ ಮಕ್ಕಳಾದ ವಸಂತ್ ‘ನಾನು ಹಿಂದೂ, ಗೋಮಾಂಸ ತಿನ್ನುವುದಿಲ್ಲ!’ ಎಂದು ಪ್ರತಿಜ್ಞೆ ಮಾಡಿದ. ಮತ್ತೊಬ್ಬ ಮಗ ಅಶೋಕ ಬೌದ್ಧಧರ್ಮವನ್ನು ಮೆಚ್ಚಿದ.

ವೈವಿಧ್ಯಮಯವಾದ ಭಾರತದಲ್ಲಿ ಲಕ್ಷಾಂತರ ಮಂದಿ ಗಿರಿಜನರಿದ್ದಾರೆ, ಭಾರತದ ನಾನಾ ಭಾಗಗಳಲ್ಲಿರುವ ಇವರ ಹೊರರೂಪ, ಉಡುಪು, ಭಾಷೆ, ಆಚಾರ ವ್ಯವಹಾರಗಳು, ನಂಬಿಕೆಗಳು, ಪದ್ಧತಿಗಳು ಇವುಗಳೆಲ್ಲ ಬೆರಗುಗೊಳಿಸುವ ವೈವಿಧ್ಯ. ಇವರು ಅನಾಗರಿಕರು ಎಂದು ಅಲಕ್ಷ್ಯ ಮಾಡುವುದು ತಪ್ಪು. ಅವರ ನಡತೆ ನಂಬಿಕೆಗಳಲ್ಲಿ ಹಲವು ಬಾರಿ ಒಳ್ಳೆಯ ಸಂಸ್ಕೃತಿ ಕಾಣುತ್ತದೆ. ಆಧುನಿಕ ವಿಜ್ಞಾನ, ವೈದ್ಯ ವಿಜ್ಞಾನ ಇವುಗಳ ಲಾಭವನ್ನು ಇವರಿಗೆ ತಂದುಕೊಡಬೇಕು, ಆದರೆ ಇವರ ಜೀವನರೀತಿಯನ್ನು ಅನಗತ್ಯವಾಗಿ ಆಧುನಿಕಗೊಳಿಸಬಾರದು. ಸ್ವತಂತ್ರ ಭಾರತ ಇವರಿಂದ ಪಡೆಯಬಹುದಾದ ಸೇವೆ, ಇವರಿಗೆ ಮಾಡ ಬಹುದಾದ ಸಹಾಯ ಬೇಕಾದಷ್ಟು. ಆದರೆ ಒಂದು ಲಕ್ಷ ಮಂದಿ ಭಾರತೀಯರಲ್ಲಿ ಹತ್ತು ಮಂದಿಗೂ ಈ ಗಿರಿಜನರ ವಿಷಯ ಸಾಕಷ್ಟು ತಿಳಿದಿರುವುದಿಲ್ಲ. ಎಲ್ವಿನ್ನರಂತಹವರು ಇವರೊಡನೆ ವಾಸಿಸಿ, ಇವರನ್ನು ಅರ್ಥ ಮಾಡಿಕೊಂಡು ನಮಗೆ ಇವರ ವಿಷಯ ತಿಳಿಸಿ ನಮ್ಮ ಕಣ್ಣುಗಳನ್ನು ತೆರೆಸುತ್ತಾರೆ.