ಭ್ರಮಿಸುವ ವಸ್ತುಗಳೆಂದರೆ ಮಾನವನಿಗೆ ಮೊದಲಿಂದಲೂ ಮೋಹ. ನಾವೆಲ್ಲರೂ ಮಕ್ಕಳಾಗಿದ್ದಾಗ ಬುಗುರಿ ಆಡಿದ್ದೇವೆ. ಜಾತ್ರೆಗಳಲ್ಲಿ ಗಿರಿಗಿಟ್ಟಲೆ ಹಿಡಿದು ಓಡಿದ್ದೇವೆ. ಈಗಲೂ ಅಷ್ಟೇ.  ರೊಯ್ಯನೆ ಹಾರಿಹೋಗುವ ವಿಮಾನಗಳಿಗಿಂತ ರೆಕ್ಕೆಗಳಿರುವ ಹೆಲಿಕಾಪ್ಟರ್ ಮೇಲೆ ನಮಗೆ ವ್ಯಾಮೋಹ ಹೆಚ್ಚು. ಕುತೂಹಲಕಾರಿ ವಿಷಯವೆಂದರೆ ಗಗನದಲ್ಲಿರುವ ಎಲ್ಲಾ ಆಕಾಶಕಾಯಗಳೂ ತಿರುಗುತ್ತವೆ. ಭೂಮಿ ಸೂರ್ಯನ ಸುತ್ತ ತಿರುಗಿದರೆ ಚಂದ್ರ ಭೂಮಿಯ ಸುತ್ತ ತಿರುಗುತ್ತಾನೆ. ಸೂರ್ಯ ಎಲ್ಲಾ ಗ್ರಹ, ಉಪಗ್ರಹಗಳ ಸಮೇತವಾಗಿ ಆಕಾಶಗಂಗೆ ಗೆಲಕ್ಸಿಯ ಕೇಂದ್ರದ ಸುತ್ತ ಸುತ್ತುತ್ತಾನೆ. ಹಲವಾರು ಗೆಲಕ್ಸಿಗಳು ತಮ್ಮ ಸಾಮಾನ್ಯ ಕೇಂದ್ರದ ಸುತ್ತ ತಿರುಗುತ್ತವೆ. ಇದನ್ನು ಪರಿಭ್ರಮಣೆ ಎನ್ನುತ್ತಾರೆ. ಆಕಾಶಕಾಯಗಳಿಗೆ ಮತ್ತೊಂದು ರೀತಿಯ ಚಲನೆಯೂ ಇದೆ. ಎಲ್ಲ ಆಕಾಶಕಾಯಗಳೂ ತಮ್ಮ ಅಕ್ಷದ ಸುತ್ತ ಸುತ್ತುತ್ತವೆ.  ಚಂದ್ರ, ಸೂರ್ಯ, ಎಲ್ಲ ಗ್ರಹಗಳೂ ಹೀಗೆ ತಮ್ಮ ಅಕ್ಷದ ಸುತ್ತ ಸುತ್ತುತ್ತವೆ. ಇದನ್ನು ಭ್ರಮಣೆ ಎನ್ನಬಹುದು. ಈ ರೀತಿ ಭ್ರಮಿಸುವ ಕೆಲವು ಅತ್ಯಂತ ವೇಗದ ಕಾಯಗಳು ಬೆಳಕಿಗೆ ಬಂದಿವೆ.

ಶನಿಯಲ್ಲದ ಶನಿ

ಮೊದಲು ನಮ್ಮ ಸೌರಮಂಡಲದಲ್ಲಿ ಅತಿ ವೇಗದ ವಸ್ತು ಯಾವುದು ನೋಡೋಣ. ನಾವು ಭೂಮಿಯೊಡನೆ 24ಗಂಟೆಗಳಿಗೊಮ್ಮೆ ತಿರುಗುತ್ತೇವೆ. ಸೂರ್ಯನಿಗೆ ಹೋಲಿಸಿದರೆ ನಾವು ವೇಗವಾಗಿಯೇ ಸುತ್ತುತ್ತಿದ್ದೇವೆ. ಸೂರ್ಯನಿಗೆ ಒಂದು ಸುತ್ತು ಹಾಕಲು ಬರೋಬರಿ 25ದಿನಗಳೇ ಬೇಕು. ಹಾಗೆಂದು ಭೂಮಿಯೇ ಸೌರಮಂಡಲದ ಅತಿ ವೇಗದ ವಸ್ತು ಎಂಬ ಭ್ರಮೆ ಬೇಡ. ನಮಗಿಂತ ಅಗಾಧ ಗಾತ್ರದ ಕಾಯಗಳಾದರೂ ಗುರು ಮತ್ತು ಶನಿಗ್ರಹಗಳು ಕೇವಲ ಹತ್ತು ಗಂಟೆಗಳಿಗೊಮ್ಮೆ ತಮ್ಮ ಸುತ್ತ ಸುತ್ತು ಹಾಕುತ್ತವೆ. ಅವುಗಳಲ್ಲಿ ಗುರುವಿನ ವೇಗವು ಶನಿಗಿಂತ ಸ್ವಲ್ಪ ಹೆಚ್ಚು. ಶನಿ ಎಂದರೆ ಸಂಸ್ಕೃತದಲ್ಲಿ ‘ನಿಧಾನವಾಗಿ ಚಲಿಸುವುದು’ಎಂಬ ಅರ್ಥವಿದೆ. ನಿಜ, ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ಶನಿ 29.46ವರ್ಷಗಳನ್ನು ತೆಗೆದುಕೊಂಡರೂ ತನ್ನ ಸುತ್ತ ಸುತ್ತುವಾಗ ನಮ್ಮ ಭೂಮಿಗಿಂತ ವೇಗವಾಗಿಯೇ ಸುತ್ತುತ್ತದೆ.

ಸೌರಮಂಡಲದಲ್ಲಿ ಇನ್ನೂ ವೇಗವಾಗಿ ಸುತ್ತಬಲ್ಲ ಆಕಾಶಕಾಯಗಳಿವೆಯೆ?ಇವೆ.  ಸೌರಮಂಡಲದ ಅತ್ಯಂತ ವೇಗವಾಗಿ ಸುತ್ತುವ ಕ್ಷುದ್ರಗ್ರಹವೊಂದನ್ನು ಇತ್ತೀಚೆಗೆ ಇಂಗ್ಲೆಂಡಿನ ರಿಚರ್ಡ್ ಮೈಲ್ಸ್ ಎಂಬ ಹವ್ಯಾಸಿ ಆಕಾಶವೀಕ್ಷಕ ಕಂಡುಹಿಡಿದಿದ್ದಾರೆ. 2008hj ಎಂಬ ಹೆಸರಿನ ಈ ಕ್ಷುದ್ರಗ್ರಹ ಕೇವಲ ಒಂದು ಟೆನಿಸ್ ಆಟದ ಮೈದಾನದಷ್ಟಿದೆ. ಆದರೂ ಈ ಕ್ಷುದ್ರಗ್ರಹ ಕೇವಲ 42.7ಸೆಕೆಂಡುಗಳಲ್ಲಿ ತನ್ನ ಸುತ್ತ ಗಿರಕಿ ಹೊಡೆಯುತ್ತದೆ ಎಂದು ರಿಚರ್ಡ್ ಮೈಲ್ಸ್ ಪತ್ತೆಹೆಚ್ಚಿದ್ದಾರೆ. ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ ತಿರುಗುವ ಸೌರಮಂಡಲದ ಏಕೈಕ ಆಕಾಶಕಾಯ ಈ 2008jhಕ್ಷುದ್ರಗ್ರಹ.

ಕುಸಿದ ದೈತ್ಯರು ಮತ್ತು ಕೋನೀಯ ಸಂವೇಗ

ಈಗ ಸೌರಮಂಡಲದ ಹೊರಗೆ ಹೋಗಿ ನೋಡೋಣ. ಇನ್ನೂ ವೇಗವಾಗಿ ಸುತ್ತಬಲ್ಲ ಮತ್ತಾವುದಾದರೂ ಆಕಾಶಕಾಯಗಳು ಸೌರಮಂಡಲದಾಚೆ ನಮಗೆ ಸಿಗಬಲ್ಲವೇ? ಖಂಡಿತ ಸಿಗುತ್ತವೆ. ಈ ಕಾಯಗಳು ತಮ್ಮ ಗುರುತ್ವದ ಆಗಾಧ ಅದುಮುವಿಕೆಯನ್ನು ತಡೆಯಲಾರದೆ, ಕುಸಿದು ಸಣ್ಣಗಾದ, ಅಪಾರ ಸಾಂದ್ರತೆಯ ನಕ್ಷತ್ರಗಳು.

ವಿಜ್ಞಾನದಲ್ಲಿ ‘ಕೋನೀಯ ಸಂವೇಗ ಸಂರಕ್ಷಣೆ’ (Conservation of Angular Momentum) ಎಂಬ ಪ್ರಖ್ಯಾತ ಭೌತನಿಯಮವೊಂದಿದೆ. ಅದರ ಪ್ರಕಾರ ಯಾವುದೇ ಆಕಾಶಕಾಯ ತನ್ನ ಮೊದಲಿನ ಕೋನೀಯ ಸಂವೇಗ (Angular Momentum)ವನ್ನು ಕಾಪಾಡಿಕೊಳ್ಳುತ್ತದೆ.  ನಕ್ಷತ್ರವೊಂದು ಕೆಂಪು ದೈತ್ಯನಾಗಿ ಹಿಗ್ಗಿದರೆ ಅದು ತನ್ನ ಮೊದಲಿನ ಕೋನೀಯ ಸಂವೇಗವನ್ನು ಕಾಪಾಡಿಕೊಂಡು ನಿಧಾನವಾಗಿ ತಿರುಗುತ್ತದೆ. ಅದೇ ನಕ್ಷತ್ರ ಗುರುತ್ವದ ಬಲದಿಂದ ಕುಸಿದು ಸಣ್ಣಗಾದರೆ ಮೊದಲಿನ ಸಂವೇಗವನ್ನು ಕಾಪಾಡಿಕೊಂಡು ಇನ್ನಷ್ಟು ವೇಗವಾಗಿ ಸುತ್ತುತ್ತದೆ. ನಮ್ಮ ‘ಕಥಕ್’, ಬ್ಯಾಲೆ ನೃತ್ಯಗಾರರೂ ಈ ನಿಯಮದ ಪ್ರಯೋಜನ ಪಡೆಯುತ್ತಾರೆ. ತಮ್ಮ ಕೈಗಳನ್ನು ಚಾಚಿ ನೃತ್ಯ ಮಾಡುತ್ತಾ, ಚಾಚಿದ ಕೈಗಳನ್ನು ಒಳಗೆಳೆದುಕೊಂಡಾಗ ಅವರು ತಿರುಗುವ ವೇಗ ಹೆಚ್ಚಾಗುತ್ತದೆ.

ಈಗ ನಮ್ಮ ಸೂರ್ಯನ ಉದಾಹರಣೆ ತೆಗೆದುಕೊಳ್ಳೋಣ. ಏಳು ಲಕ್ಷ ಕಿಲೊ ಮೀಟರ್ ತ್ರಿಜ್ಯ ಹೊಂದಿರುವ ಸೂರ್ಯ ಅಗಾಧವಾದ ಗಾತ್ರದ ಕಾಯ. ತನ್ನೆಲ್ಲಾ ಇಂಧನವನ್ನು ತಿಂದು ಮುಗಿಸಿದ ನಂತರ ಮುಂದೊಂದು ದಿನ ಅದು ‘ಬಿಳಿ ಕುಬ್ಜ’ (White Dwarf) ಎಂಬ ಅಪಾರ ಸಾಂದ್ರತೆಯ, ಆದರೆ ಗಾತ್ರದಲ್ಲಿ ಕಿರಿದಾದ ನಕ್ಷತ್ರವಾಗುವುದು ಖಚಿತ. ಬಿಳಿ ಕುಬ್ಜವಾದಾಗ ಅದರ ಗಾತ್ರ ಈಗಿನ ಗಾತ್ರದ ಕೇವಲ ಸೇಕಡ ಒಂದರಷ್ಟಿರುತ್ತದೆ. ಅಂದರೆ ಅದರ ಆಗಿನ ತ್ರಿಜ್ಯ ಸುಮಾರು ಏಳು ಸಾವಿರ ಕಿ.ಮೀ. ಗಾತ್ರದಲ್ಲಿ ಕುಗ್ಗಿದರೂ ತನ್ನ ಮುಂಚಿನ ಕೋನೀಯ ಸಂವೇಗವನ್ನು ಕಾಪಾಡಿಕೊಳ್ಳುವ ಸೂರ್ಯ ಆಗ ಕೇವಲ 3.5 ನಿಮಿಷಕ್ಕೊಮ್ಮೆ ಸುತ್ತುತ್ತಾನೆ.  ಇದು ಉತ್ಪ್ರೇಕ್ಷೆಯೇನೂ ಅಲ್ಲ. ಆಕಾಶದ ಬೇರೆ ಬಿಳಿಕುಬ್ಜಗಳನ್ನು ಅಧ್ಯಯನ ಮಾಡಿದರೆ ಅವುಗಳು ಸರಾಸರಿ ಇದೇ ವೇಗದಲ್ಲಿ ಸುತ್ತುತ್ತವೆ ಎಂದು ತಿಳಿದುಬರುತ್ತದೆ. ನಮಗೆ ತಿಳಿದುಬಂದಿರುವ ಅತ್ಯಂತ ವೇಗದ ಬಿಳಿಕುಬ್ಜ 33ಸೆಕೆಂಡುಗಳಿಗೊಮ್ಮೆ ಸುತ್ತುತ್ತದೆ.

33ಸೆಕೆಂಡೇನೂ ಕಡಿಮೆಯಲ್ಲ ಎಂದು ನಮಗೆ ಅನ್ನಿಸಬಹುದು. ಏಕೆಂದರೆ ನಮ್ಮ 2008hj ಕ್ಷುದ್ರಗ್ರಹವೇ 42.7ಸೆಕೆಂಡುಗಳಲ್ಲಿ ಸುತ್ತುತ್ತದಲ್ಲ. ಆದರೆ ಗಮನಿಸಿ. ಕ್ಷುದ್ರಗ್ರಹದ ಗಾತ್ರ 12×24ಮೀಟರ್. ಬಿಳಿಕುಬ್ಜದ ತ್ರಿಜ್ಯ ಏಳು ಸಾವಿರ ಕಿ.ಮೀ!

ಮತ್ತೆ ಗುರುತ್ವಬಲದಿಂದ ಕುಸಿದ ನಕ್ಷತ್ರಗಳ ಕಡೆ ಗಮನ ನೀಡೋಣ. ಎಲ್ಲಾ ನಕ್ಷತ್ರಗಳೂ ಕುಸಿದು ಬಿಳಿಕುಬ್ಜಗಳಾಗಿ ಅಂತ್ಯ ಕಾಣುವುದಿಲ್ಲ. ಬಿಳಿಕುಬ್ಜವಾಗಿ ಕುಸಿದ ನಂತರವೂ ಅಗಾಧ ದ್ರವ್ಯರಾಶಿಯನ್ನು ಉಳಿಸಿಕೊಂಡಿರುವ ಕೆಲವು ನಕ್ಷತ್ರಗಳು ಎರಡನೇ ಹಂತದ ಕುಸಿತ ಕಂಡು ಪ್ರಖ್ಯಾತವಾದ, ಬರಿಯ ನ್ಯೂಟ್ರಾನ್‌ಗಳಿಂದಲೇ ರೂಪಿಸಲ್ಪಟ್ಟಿರುವ ‘ನ್ಯೂಟ್ರಾನ್ ನಕ್ಷತ್ರ’ಗಳಾಗುತ್ತವೆ. ಬಿಳಿಕುಜ್ಬಗಳ ತ್ರಿಜ್ಯ ಸಾವಿರ ಕಿ.ಮೀ.ಗಳಲ್ಲಿದ್ದರೆ, ನ್ಯೂಟ್ರಾನ್ ನಕ್ಷತ್ರಗಳ ತ್ರಿಜ್ಯ ಕೇವಲ ಕೆಲವೇ ಕಿ.ಮೀ. ಗಳಷ್ಟಿರುತ್ತದೆ. ಇಷ್ಟೆಲ್ಲ ಕುಸಿತದ ನಂತರವೂ ‘ನ್ಯೂಟ್ರಾನ್ ನಕ್ಷತ್ರ’ಗಳು ತಮ್ಮ ಮೊದಲಿನ ಕೋನೀಯ ಸಂವೇಗವನ್ನು ಕಾಪಾಡಿಕೊಳ್ಳುತ್ತವೆ.  ಅಕಸ್ಮಾತ್ ನಮ್ಮ ಸೂರ್ಯ ‘ನ್ಯೂಟ್ರಾನ್ ನಕ್ಷತ್ರ’ ವಾದರೆ ಅವನು ಸುತ್ತುವ ವೇಗ ಕೇವಲ ಇಪ್ಪತ್ತು ಮಿಲಿಸೆಕೆಂಡುಗಳು (0.002 ಸೆಕೆಂಡ್‌ಗಳು). ನ್ಯೂಟ್ರಾನ್ ನಕ್ಷತ್ರಗಳ ಕುರಿತು ತಿಳಿದುಬಂದಿರುವ ಮಾಹಿತಿಯ ಪ್ರಕಾರ ಅತ್ಯಂತ ವೇಗವಾಗಿ ತಿರುಗುವ ‘ನ್ಯೂಟ್ರಾನ್ ನಕ್ಷತ್ರ’ತನ್ನ ಸುತ್ತ ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯ ಕೇವಲ 1.4ಮಿಲಿಸೆಂಕಡುಗಳು (0.00014ಸೆಕೆಂಡುಗಳು).

ಈಗ ಸ್ವಲ್ಪ ಗಣಿತದ ನೆರವನ್ನು ಪಡೆಯೋಣ. ಐದು ಕಿ.ಮೀ. ತ್ರಿಜ್ಯದ ಒಂದು ನ್ಯೂಟ್ರಾನ್ ನಕ್ಷತ್ರ 1.4ಮಿಲಿಸೆಕೆಂಡುಗಳಲ್ಲಿ ತಿರುಗುತ್ತದೆ ಎಂದರೆ ಅದರ ವೇಗ ಎಷ್ಟಿರಬಹುದು? ಗಾಬರಿಯಾಗಬೇಡಿ. ಅದು ಸೆಕೆಂಡಿಗೆ 30,000ಕಿ.ಮೀ.ವೇಗದಲ್ಲಿ ತನ್ನ ಸುತ್ತ ಗಿರಿಕಿ ಹೊಡೆಯುತ್ತದೆ. ಅಂದರೆ ಬೆಳಕಿನ ವೇಗದ ಸೇಕಡ ಹತ್ತರಷ್ಟು ಹೆಚ್ಚು.

ಆಕಾಶಕಾಯಗಳು ಇನ್ನೂ ವೇಗವಾಗಿ ಸುತ್ತಬಲ್ಲವೇ? ಸುತ್ತಬಲ್ಲವು. ಆದರೆ ಅವು ಆಗ ‘ನ್ಯೂಟ್ರಾನ್ ನಕ್ಷತ್ರ’ಗಳಾಗಿಯೂ ಉಳಿಯುವುದಿಲ್ಲ. ಮತ್ತಷ್ಟು ವೇಗವಾಗಿ ಕುಸಿದು ‘ಕಪ್ಪು ಕುಳಿ’ (Black Hole)ಗಳಾಗುತ್ತವೆ. ಆದರೆ ಅವು  ಯಾರಿಗೂ ಕಾಣಲಾರವು. ಏಕೆಂದರೆ ‘ಕಪ್ಪು ಕುಳಿ’ಯೊಳಗೆ ಬರುವ ಯಾವುದೇ ಬೆಳಕಿನ ಕಿರಣಗಳು ಹೊರಹೋಗಲಾರವು.  ಆದರೆ ‘ಕಪ್ಪು ಕುಳಿ’ಯ ಹತ್ತಿರ ಅದರ ಸುತ್ತ ಪ್ರದಕ್ಷಿಣೆ ಹಾಕುವ ವಸ್ತುಗಳು ಕೂಡ ಅತಿವೇಗವಾಗಿ, ಅಂದರೆ ಬೆಳಕಿನ ವೇಗದ ಸೇಕಡ ಹತ್ತರಷ್ಟು ವೇಗದಲ್ಲಿ, ಸೆಕೆಂಡಿಗೆ 30,000ಕಿ.ಮೀ. ವೇಗದಲ್ಲಿ ಚಲಿಸುತ್ತವೆ.