ವೇದಾಂತದೇಶಿಕರುಸುಮಾರು ಆರುನೂರು ವರ್ಷಗಳ ಹಿಂದೆ ಬಾಳಿದ ಹಿರಿಯರು. ವಿದ್ವತ್ತು, ಭಕ್ತಿ-ಇವು ಅವರ ಬಾಳಿನಲ್ಲಿ ಸಂಗಮವಾಗಿದ್ದವು. ನಾನು-ನನ್ನದು ಎಂಬ ಭಾವನೆಯನ್ನು ಸಂಪೂರ್ಣವಾಗಿ ಗೆದ್ದು ಭಗವಂತನ ಸೇವೆಯಲ್ಲಿ, ಜನರ ಸೇವೆಯಲ್ಲಿ ಕೃತಾರ್ಥ ಜೀವನ ನಡೆಸಿದರು.

ವೇದಾಂತದೇಶಿಕರು

ಈಗ ಸುಮಾರು ಆರುನೂರೈವತ್ತು ವರ್ಷಗಳ ಹಿಂದೆ ಒಂದು ದಿನ ಮೇಲುಕೋಟೆಯ ಜನರಿಗೆ ಸಂಭ್ರಮವೋ ಸಂಭ್ರಮ! ಜ್ಞಾನಸಂಪನ್ನರೂ ಪರಮವಿರಕ್ತರೂ ಆದ ವೇದಾಂತದೇಶಿಕರು ಅಂದು ಆ ಊರಿಗೆ ಬರುವವರಿದ್ದರು. ಅಂದು ಪ್ರಾತಃಕಾಲದಲ್ಲಿಯೇ ಹೆಂಗಸರು ಗಂಡಸರು ಎಲ್ಲರೂ ಮಿಂದು ಮಡಿಯುಟ್ಟು ಊರ ಹೊರಗಿನ ಮಂಟಪದ ಬಳಿ ನೆರೆದಿದ್ದರು. ಚೆಲ್ವನಾರಾಯಣನ ದೇವಾಲಯದಿಂದ ಸಕಲ ಮರ್ಯಾದೆಗಳೂ ಆಚಾರ್ಯರನ್ನು ಎದುರುಗೊಳ್ಳಲು ಬಂದಿವೆ. ಒಂದು ಕಡೆ ಮಂಗಳವಾದ್ಯ ಆಗುತ್ತಿದ್ದರೆ ಮತ್ತೊಂದು ಕಡೆ ವೇದಘೋಷ ಆಗುತ್ತಿದೆ. ದೇವಾಲಯದ ಅರ್ಚಕರು, ಮತ್ತಿತರ ಭಕ್ತರು ಪೂಜ್ಯ ಭಗವದ್ಭಕ್ತರಾದ ಆಳ್ವಾರರುಗಳು ತಮಿಳು ಪದ್ಯಗಳನ್ನು ಸ್ತೋತ್ರಗಳನ್ನೂ ಸುಸ್ವರದಲ್ಲಿ ಹಾಡುತ್ತಿದ್ದಾರೆ. ಛತ್ರಿ, ಚಾಮರ, ದೀವಟಿಗೆಗಳು ಅಪೂರ್ವ ಶೋಭೆ ನೀಡುತ್ತಿವೆ.

ತೇಜಸ್ಸಿನ ರಾಶಿ

ನಿರೀಕ್ಷಿಸಿದ ಸಮಯಕ್ಕೆ ಸರಿಯಾಗಿ ವೇದಾಂತದೇಶಿಕರು ತಮ್ಮ ಶಿಷ್ಯರೊಡನೆ ಕೂಡಿ ಆಗಮಿಸಿದರು. ಜನರೆಲ್ಲರೂ ಅವರಿಗೆ ವಂದಿಸಿ ಗೌರವ ಸಲ್ಲಿಸಿದರು. ದೇವಾಲಯದ ಅರ್ಚಕರು ಮರ್ಯಾದೆ ಮಾಡಿದರು. ದೇಶಿಕರು ನೆರೆದ ಜನತೆಗೆ ವಂದನೆಯನ್ನರ್ಪಿಸಿದರು. ವೇದಪಾಠಕರು ಮುಂದೆ ನಡೆಯುತ್ತಿರಲು ಸಕಲ ಮರ್ಯಾದೆಗಳೊಡನೆ ಅಲ್ಲಿನ ಜನ ತಮ್ಮ ಪ್ರೀತಿಯ ಆಚಾರ್ಯರನ್ನು ಸ್ವಾಗತಿಸಿ ದೇವಾಲಯಕ್ಕೆ ಕರೆದೊಯ್ದರು. ದೇಶಿಕರ ವ್ಯಕ್ತಿತ್ವ ಎಲ್ಲರ ಮೇಲೂ ಪ್ರಭಾವ ಬೀರಿತು. ತೇಜಸ್ಸಿನ ರಾಶಿಯೇ ಮನುಷ್ಯನ ರೂಪವೆತ್ತಿದೆಯೋ ಎಂಬಂಥ ದಿವ್ಯ ತೇಜಸ್ಸು! ವೇದಾಂತದೇಶಿಕರು ಮದುವೆ ಮಾಡಿಕೊಂಡು ಸಂಸಾರ ನಡೆಸಿದವರು; ಆದರೆ ಸನ್ಯಾಸಿಗಳಿಗಿಂತ ಹೆಚ್ಚಾಗಿ ಆಸೆಯನ್ನು ಬಿಟ್ಟ ವೈರಾಗ್ಯವಂತರು!

ನನಗೆ ಇಂದು ಈ ಭಾಗ್ಯ ಒದಗಿತು

ವೇದಾಂತದೇಶಿಕರು ಆ ಊರಿನ ಮಹಾಜನರೊಡನೆ ಚೆಲ್ವನಾರಾಯಣನ ಮಂದಿರಕ್ಕೆ ದಯಮಾಡಿ ಭುವನಸುಂದರನಾದ ನಾರಾಯಣನ ದರ್ಶನ ಪಡೆದರು. ಅವರ ಕಣ್ಣಿನಿಂದ ಆನಂದಬಾಷ್ಪಗಳು ಉದುರುತ್ತಿದ್ದವು. ಅವರ ಮಾತು ಗದ್ಗದವಾಯಿತು. ‘ಯತಿರಾಜರಾದ ರಾಮಾನುಜರಿಗೆ ಒಲಿದ ಸಂಪತ್ಕುಮಾರನೇ, ನಿನ್ನ ದರ್ಶನದ ಭಾಗ್ಯ ನನಗಿಂದು ಲಭಿಸಿತು. ನನ್ನ ಭಾಗ್ಯವೇ ಭಾಗ್ಯ!’ ಎಂದು ಆನಂದಿಸಿದರು. ದೇವಾಲಯದ ಅಂಗಳದಲ್ಲಿ ನೆರೆದ ಭಕ್ತ ಕೋಟಿಯನ್ನು ಕುರಿತು ದೇಶಿಕರು ಹೇಳಿದರು: ‘‘ಭಾಗವತೋತ್ತಮರೇ, ಶ್ರೀಭಾಷ್ಯಕಾರರಿಗೆ ಪ್ರಿಯನಾದ ಈ ಸ್ವಾಮಿಯನ್ನು ನಿತ್ಯವೂ ಸೇವಿಸುವ ನೀವೇ ಧನ್ಯರು! ದೂರದ ಶ್ರೀರಂಗದಲ್ಲಿದ್ದ ನನಗೆ ಇಂದು ಈ ಭಾಗ್ಯ ಒದಗಿತು! ಅವನ ಅನುಗ್ರಹ ನಮ್ಮೆಲ್ಲರ ಮೇಲೆ ನಿರಂತರವಾಗಿರಲಿ.’’

ಮೇಲುಕೋಟೆ

ಮೇಲುಕೋಟೆಗೆ ತಿರುನಾರಾಯಣಪುರ ಎಂಬ ಹೆಸರೂ ಇದೆ. ಶ್ರೀಮನ್ನಾನಾರಯಣ ಇಲ್ಲಿ ನೆಲಸಿರುವುದೇ ಇದಕ್ಕೆ ಕಾರಣ. ಶ್ರೀ ರಾಮಾನುಜಾಚಾರ್ಯ ಎನ್ನುವವರು ಹನ್ನೊಂದನೆಯ ಶತಮಾನದಲ್ಲಿ ಹುಟ್ಟಿದ ಜ್ಞಾನಿಗಳು. ಅವರು ಶ್ರೀವೈಷ್ಣವ ಮತವನ್ನು ಪ್ರಚಾರ ಮಾಡಿದರು. (ತಾಯಿ ಲಕ್ಷ್ಮಿದೇವಿಯ ಕೃಪೆಯ ಮೂಲಕ ವಿಷ್ಣುವನ್ನು ಒಲಿಸಿಕೊಳ್ಳಲು ಪ್ರಯತ್ನಿಸುವವರು ಶ್ರೀವೈಷ್ಣವರು) ರಾಮಾನುಜರ ಕಾಲದಿಂದ ಮೇಲುಕೋಟೆ ವೈಷ್ಣವ ಧರ್ಮದ ಕೇಂದ್ರವಾಯಿತು. ರಾಮಾನುಜರು ಇಲ್ಲಿ ಹದಿನೆಂಟು ವರ್ಷಗಳ ಕಾಲ ಇದ್ದರು. ಚೆಲ್ವನಾರಾಯಣನ ದೇವಾಲಯ ಕಟ್ಟಿಸಿದವರೂ ಅವನನ್ನು ಪ್ರತಿಷ್ಠೆ ಮಾಡಿಸಿದವರೂ ಅವರೇ. ಮೇಲುಕೋಟೆಯ ಶ್ರೀವೈಷ್ಣವರೆಲ್ಲ, ವಯಸ್ಸಾದವರು ಎಳೆಯರು ವಿದ್ವಾಂಸರು ಸಾಮಾನ್ಯರು ಎಲ್ಲ ಇಷ್ಟು ಸಂಭ್ರಮದಿಂದ, ಗೌರವದಿಂದ ಬರಮಾಡಿಕೊಂಡ ವೇದಾಂತದೇಶಿಕರು ಯಾರು?

ತಂದೆತಾಯಿ ತಿರುಪತಿಗೆ

ಅನೇಕ ಮಂದಿ ಜ್ಞಾನಿಗಳು, ಭಕ್ತಶ್ರೇಷ್ಠರು ಇವರ ಜನ್ಮದ ವಿಷಯವಾಗಿ ಕುತೂಹಲಕರವಾದ ಕಥೆಗಳನ್ನು ಹೇಳುತ್ತಾರೆ. ಈ ಜ್ಞಾನಿಗಳು, ಭಕ್ತಶ್ರೇಷ್ಠರು ಭಗವಂತನ ವಿಶೇಷ ಅನುಗ್ರಹದಿಂದ ಹುಟ್ಟಿದರು, ಅವರಲ್ಲಿ ಭಗವಂತನ ಅಂಶ ಇತ್ತು ಎಂಬುದನ್ನು ಮನದಟ್ಟು ಮಾಡಿಕೊಡುತ್ತವೆ ಈ ಕಥೆಗಳು. ವೇದಾಂತದೇಶಿಕರ ಜನ್ಮದ ವಿಷಯವಾಗಿಯೂ ಭಕ್ತರು ಇಂತಹ ಕಥೆಯನ್ನು ಹೇಳುತ್ತಾರೆ.

ಕಾಂಚೀಪುರದ ಹತ್ತಿರ ತೂಪ್ಪಿಲ್ ಎಂಬ ಅಗ್ರಹಾರವಿದೆ. ವೇದಾಂತದೇಶಿಕರ ತಾಯಿತಂದೆಗಳು ಅಲ್ಲಿನವರು.ಅವರ ತಂದೆ ಅನಂತಸೂರಿ. ತಾಯಿ ತೋತಾರಮ್ಮ.

ಅನಂತಸೂರಿ-ತೋತಾರಮ್ಮ ಇವರಿಗೆ ಬಹಳ ಕಾಲ ಮಕ್ಕಳಿರಲಿಲ್ಲ. ಅದೇ ಅವರಿಗೆ ಒಂದು ದೊಡ್ಡ ಕೊರತೆಯಾಗಿತ್ತು. ಒಂದು ದಿನ ಅವರಿಗೆ ಒಂದು ಕನಸಾಯಿತು.

ತಿರುಪತಿಯ ಶ್ರೀನಿವಾಸನು ಕನಸಿನಲ್ಲಿ ಕಾಣಿಸಿಕೊಂಡು, ‘ಸೂರಿ, ನನ್ನನ್ನು ನೀವು ಸೇವಿಸಿ’ ಎಂದನು. ಅನಂತಸೂರಿಗಳು ಇದನ್ನು ಹೆಂಡತಿಗೆ ಹೇಳಿದರು. ಅವರಿಗೂ ಹಾಗೆಯೇ ಒಂದು ಕನಸಾಗಿತ್ತು. ಪದ್ಮಾವತಿದೇವಿ ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡು ಹೀಗೆಯೇ ಹೇಳಿದ್ದಳು. ‘ಇದು ದೇವರ ಅಪ್ಪಣೆ’  ಎಂದು ಅವರಿಬ್ಬರೂ ತಿರುಪತಿಗೆ ಹೋಗಿ ಶ್ರೀನಿವಾಸನನ್ನು ಸೇವಿಸಿದರು.

ಮತ್ತೊಮ್ಮೆ ಕನಸಿನಲ್ಲಿ ಶ್ರೀನಿವಾಸನು ಕೊಟ್ಟ ಘಂಟೆಯನ್ನು ತೋತಾರಮ್ಮ ನುಂಗಿಬಿಟ್ಟಳು. ಆಗ ಅವರಿಗೆ ಎಚ್ಚರವಾಯಿತು. ಆ ಘಂಟೆಯ ಅಂಶವೇ ವೇದಾಂತದೇಶಿಕರಾಗಿ ಅವತಾರ ಮಾಡಿದುದು. ಹೀಗೆಂದು ಭಕ್ತರ ನಂಬಿಕೆ. ವೇದಾಂತದೇಶಿಕರನ್ನು ‘ಘಂಟಾವತಾರರು’ ಎಂದು ಕರೆಯುವುದುಂಟು.

ವೆಂಕಟೇಶ್ವರನ ಕೃಪೆಯಿಂದ ಜನಿಸಿದವರು ಇವರು. ಅದಕ್ಕಾಗಿ ಇವರಿಗೆ ವೆಂಕಟನಾಥರೆಂದು ಹೆಸರನ್ನಿಟ್ಟರು.

ಬಾಲ್ಯದಲ್ಲೇ ತೀಕ್ಷ್ಣ ಬುದ್ಧಿ

ವೇದಾಂತದೇಶಿಕರನ್ನು ಅವರ ಶುಭ್ರ ಜೀವನಕ್ಕಾಗಿ, ಜ್ಞಾನಕ್ಕಾಗಿ ಮತ್ತು ಇತರರೊಂದಿಗೆ ತಮ್ಮ ಜ್ಞಾನವನ್ನು ಹಂಚಿಕೊಳ್ಳವ ಅವರ ದೊಡ್ಡತನಕ್ಕಾಗಿ ಜನಸಾಮಾನ್ಯರು ಗೌರವಿಸುತ್ತಿದ್ದರು. ಇಂತಹ ಜ್ಞಾನವನ್ನು ಅವರು ಪಡೆಯಲು ಸಾಧ್ಯವಾದದ್ದು ಅವರ ಅಸಾಧಾರಣ ಜ್ಞಾಪಕಶಕ್ತಿಯಿಂದ ಮತ್ತು ಪ್ರತಿಯೊಂದಕ್ಕೂ ಗಮನಕೊಡುವ ಅಭ್ಯಾಸದಿಂದ. ಈ ಗುಣಗಳು ಅವರು ಎಳೆಯವರಾಗಿದ್ದಾಗಲೇ ಪ್ರಕಾಶಕ್ಕೆ ಬಂದವು.

ಆತ್ರೇಯ ರಾಮಾನುಜರು ವೇದಾಂತದೇಶಿಕರ ಸೋದರಮಾವ. ಅವರು ಒಂದು ದಿನ ಇವರನ್ನು ಕರೆದುಕೊಂಡು ತಮ್ಮ ಗುರುಗಳಾದ ವಾತ್ಸ್ಯವರದಾಚಾರ್ಯರ ಉಪನ್ಯಾಸ ಗೋಷ್ಠಿಗೆ ಹೋದರು. ಕಂಚಿಯ ವರದರಾಜಸ್ವಾಮಿ ದೇವಾಲಯದಲ್ಲಿ ವಾತ್ಸ್ಯವರದಾಚಾರ್ಯರು ಪಾಠ ಹೇಳುತ್ತಿದ್ದರು. ಇವರು ಹೋದಕೂಡಲೇ ಅವರು ಪಾಠ ನಿಲ್ಲಿಸಿ, ‘‘ಈ ಬಾಲಕ ಯಾರು?’’ ಎಂದು ಕೇಳಿದರು.

ಆತ್ರೇಯರು, ‘‘ಇವನು, ನನ್ನ ಸೋದರಳಿಯ, ಅನಂತ ಸೂರಿಯವರ ಮಗ’’ ಎಂದು ಉತ್ತರಿಸಿದರು.

ಬಾಲಕನ ವರ್ಚಸ್ಸನ್ನು ನೋಡಿ ಆಚಾರ್ಯರಿಗೆ ಆಶ್ಚರ್ಯವಾಗಿತ್ತು. ಅವನನ್ನು ವಿಶ್ವಾಸದಿಂದ ಮಾತನಾಡಿಸಿದರು.

ಎಲ್ಲರೂ ಕುಳಿತ ಮೇಲೆ ಮತ್ತೆ ಆಚಾರ್ಯರು ಪಾಠ ಆರಂಭ ಮಾಡಬೇಕು. ಆದರೆ ಅವರಿಗೆ ಮೊದಲು ಪಾಠ ಎಲ್ಲಿ ನಿಲ್ಲಿಸಿದ್ದರು ಎಂಬುದು ಮರೆತುಹೋಗಿತ್ತು.

ಆಚಾರ್ಯರು ಶಿಷ್ಯರತ್ತ ತಿರುಗಿ, ‘‘ನಾನು ಪಾಠ ನಿಲ್ಲಿಸಿದಾಗ ಏನು ಹೇಳುತ್ತಿದ್ದೆ?’’ ಎಂದು ಪ್ರಶ್ನಿಸಿದರು.

ಶಿಷ್ಯರು ತಬ್ಬಿಬ್ಬಾದರು. ಅವರಿಗೂ ನೆನಪಿಗೆ ಬರಲಿಲ್ಲ.

ಆಗ ಹುಡುಗನು, ‘‘ಗುರುಗಳೇ, ನಾವು ಬಂದಾಗ ತಾವು ದೇವರ ಗುಣಗಳ ವಿಚಾರ ಹೇಳುತ್ತಿದ್ದಿರಿ. ಅವನಲ್ಲಿ ಎಲ್ಲ ಒಳ್ಳೆಯ ಗುಣಗಳಿವೆ, ದೋಷ ಯಾವುದೂ ಇಲ್ಲ ಎಂದು ತಿಳಿಸುತ್ತಿದ್ದಿರಿ’’ ಎಂದು ಜ್ಞಾಪಕ ಮಾಡಿಕೊಟ್ಟನು.

ಹುಡುಗನ ಮಾತನ್ನು ಕೇಳಿ ವಾತ್ಸ್ಯವರದಾಚಾರ್ಯರಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅವರು ಮನಃಪೂರ್ವಕವಾಗಿ ಮಗುವನ್ನು ಹರಸಿದರು, ‘ಅಪ್ಪಾ ಮಗು, ನೀನು ವೇದಾಂತಾಚಾರ್ಯನಾಗು. ವೇದವರಿತವರು ನಿನ್ನನ್ನು ಗೌರವಿಸಲಿ. ನಿನಗೆ ಎಲ್ಲ ಮಂಗಳಗಳಾಗಲಿ. ನೂರು ವರ್ಷ ಬಾಳಪ್ಪಾ ನೀನು.’’

ವಾತ್ಸ್ಯವರದಾಚಾರ್ಯರ ಹರಕೆ ಸಫಲವಾಯಿತು. ಹುಡುಗ ಬೆಳೆದು ವೇದಾಂತಾಚಾರ್ಯರು ಎಂದು ಕೀರ್ತಿಪಡೆದ.

ಸಕಲವಿದ್ಯಾ ಪಾರಂಗತರು

ವೇದಾಂತದೇಶಿಕರ ಸೋದರಮಾವ ಆತ್ರೇಯ ರಾಮಾನುಜರೇ ಅವರ ಗುರುಗಳು. ಅವರಿಗೆ ಎಲ್ಲ ವಿದ್ಯಾಭ್ಯಾಸ ಮಾಡಿಸಿದವರು ಅವರೇ. ದೇಶಿಕರು ಬಹಳ ಪ್ರತಿಭಾಶಾಲಿಗಳು. ಒಮ್ಮೆ ಹೇಳಿಕೊಟ್ಟರೆ ಸಾಕು, ಎಲ್ಲವನ್ನೂ  ಗ್ರಹಿಸಿಬಿಡುತ್ತಿದ್ದರು. ಇವರು ಇಪ್ಪತ್ತು ವರ್ಷ ವಯಸ್ಸಿನವರಾಗುವುದರಲ್ಲಿ ಸಕಲವಿದ್ಯಾಪಾರಂಗತರಾದರು. ವೇದಗಳು, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ, ಧರ್ಮಶಾಸ್ತ್ರ, ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಮೀಮಾಂಸಾ, ವೇದಾಂತದರ್ಶನಗಳು, ಬೌದ್ಧ-ಜೈನ ಸಿದ್ಧಾಂತಗಳು, ಇತಿಹಾಸ ಪುರಾಣಗಳು ಇವುಗಳೆಲ್ಲವನ್ನೂ  ಅವರು ಅಧ್ಯಯನ ಮಾಡಿ ಕರಗತ ಮಾಡಿಕೊಂಡರು. ಅಷ್ಟು ಚಿಕ್ಕ ವಯಸ್ಸಿನಲ್ಲಿಯೇ ಬಹಳ ದೊಡ್ಡ ಪಂಡಿತರಾದರು.

ವಿದ್ಯಾಭ್ಯಾಸ ಮುಗಿದ ಮೇಲೆ ಆತ್ರೇಯ ರಾಮಾನುಜರೇ ದೇಶಿಕರಿಗೆ ತಿರುಮಂಗೈ ಎಂಬ ವಧುವನ್ನು ತಂದು ಮದುವೆ ಮಾಡಿಸಿದರು. ಆತ್ರೇಯರು ಕಂಚಿಯ ಆಚಾರ್ಯಪೀಠಕ್ಕೆ ತಮ್ಮ ಉತ್ತರಾಧಿಕಾರಿಗಳಾಗಿ ದೇಶಿಕರನ್ನು ಆರಿಸಿದರು.

ತಿರುವಹೀಂದ್ರಪುರಕ್ಕೆ

ಮೊದಲು ಕಂಚಿಯಲ್ಲಿ ದೇಶಿಕರು ಆಚಾರ್ಯರಾಗಿದ್ದರು. ಆತ್ರೇಯ ರಾಮಾನುಜರು ತಾವು ಪೂಜಿಸುತ್ತಿದ್ದ ದೇವರನ್ನೂ ಭಗವದ್ರಾಮಾನುಜರ ಪಾದುಕೆಗಳನ್ನೂ ಇವರಿಗೆ ಕೊಟ್ಟರು. ದೇಶಿಕರು ಶಿಷ್ಯರಿಗೆ ಉಪದೇಶ ಮಾಡುವುದು, ವಿದ್ವಾಂಸರೊಡನೆ ಚರ್ಚೆಮಾಡುವುದು, ಯಾರಾದರೂ ಸಂಶಯಗಳನ್ನು ಕೇಳಿದರೆ ಪರಿಹಾರ ಮಾಡುವುದು-ಇವನ್ನೆಲ್ಲಾ ತಮ್ಮ ದಿನನಿತ್ಯದ ಪೂಜೆ, ತಪಸ್ಸು, ಧ್ಯಾನ, ಜಪ ಇವುಗಳೊಡನೆ ಮಾಡುತ್ತಾ ಬಂದರು.

ಆಚಾರ್ಯರಿಗೆ ತಿರುವಹೀಂದ್ರಪುರಕ್ಕೆ ಹೋಗುವ ಆಸೆ ಇತ್ತು. ಅಲ್ಲಿಯ ಗರುಡ ನದಿ, ಔಷಧಾಚಲ ಪರ್ವತ, ಸುತ್ತಮುತ್ತಲಿನ ಕಾಡುಗಳು, ಅವುಗಳ ನಡುವೆ ಗಜರಾಜನಂತೆ ನೆಲಸಿರುವ ದೇವನಾಯಕಸ್ವಾಮಿ ಇವೆಲ್ಲಾ ಅವರ ಮೇಲೆ ಪ್ರಭಾವ ಬೀರಿದವು. ದೇಶೀಕರು ತಿರುವಹೀಂದ್ರ ಪುರದಲ್ಲಿ ೧೫ ವರ್ಷಗಳ ಕಾಲ ನಿಂತರು. ಇದು ಅವರ ಸಿದ್ಧಿಕ್ಷೇತ್ರ. ಇಲ್ಲಿಯೇ ಅವರು ಗರುಡಮಂತ್ರದ ಸಿದ್ಧಿಪಡೆದರು. ಹಯಗ್ರೀವಸ್ವಾಮಿಯೂ ಅವರಿಗೆ ದರ್ಶನ ನೀಡಿದುದು ಇಲ್ಲಿಯೇ. ಆಚಾರ್ಯರು ಎಲ್ಲಿಹೋದರೂ ಅವರಿಗೆ ವಿರಾಮವಿಲ್ಲದ ಕಾರ್ಯಕ್ರಮವಿತ್ತು. ತಿರುವಹೀಂದ್ರಪುರ ದೇಶಿಕರಿಗೆ ಬಹಳ ಪ್ರಿಯವಾಯಿತು.

ಅಕ್ಕಿಯಲ್ಲಿ ಹುಳುಗಳಿವೆ

ವೇದಾಂತದೇಶಿಕರು ದೊಡ್ಡ ಭಕ್ತರು, ಜ್ಞಾನಿಗಳು ಮತ್ತು ವೈರಾಗ್ಯಸಂಪನ್ನರು. ದೇವರನ್ನು ಬಿಟ್ಟು ಮತ್ತಾವುದನ್ನೂ ಪಡೆಯಲು ಬಯಸದೆ ಇರುವುದು ವೈರಾಗ್ಯ. ಮನೆ, ಮಠ, ಐಶ್ವರ್ಯ ಇವಾವುದರಲ್ಲಿಯೂ ದೇಶೀಕರಿಗೆ ಮನಸ್ಸಿಲ್ಲ. ಅವರು ಭಿಕ್ಷಾವೃತ್ತಿಯಿಂದ ಜೀವನ ನಡೆಸುವರು. ದಿನದಿನವೂ ಕೆಲವರು ಭಕ್ತರ ಮನೆಗೆ ಹೋಗಿ ಭಿಕ್ಷೆ ಮಾಡಿ ಅಕ್ಕಿ ತರುತ್ತಿದ್ದರು. ಅದನ್ನು ಅಡುಗೆ ಮಾಡಿಸಿ ದೇವರಿಗೆ ನೈವೇದ್ಯ ಮಾಡಿ ಸ್ವೀಕರಿಸುತ್ತಿದ್ದರು. ವೇದಾಂತದೇಶಿಕರ ವೈರಾಗ್ಯ ಅದ್ಭುತವಾದದ್ದು. ಹಣ, ಅಧಿಕಾರ, ಗೌರವ, ಸುಖ ಇವು ಯಾವುವನ್ನೂ ಅವರು ಬಯಸಲಿಲ್ಲ. ಅವು ದೇಶಿಕರನ್ನು ಹುಡುಕಿಕೊಂಡು ಬಂದಾಗಲೂ ಅವನ್ನು ದೂರ ಇಟ್ಟರು.

ಒಬ್ಬರು ಸಜ್ಜನರಿಗೆ ದೇಶಿಕರಲ್ಲಿ ತುಂಬ ಭಕ್ತಿ. ಅವರಿಗೆ ಹಣವನ್ನು ಅರ್ಪಿಸಬೇಕೆಂದು ತುಂಬ ಆಸೆ. ಆದರೆ ಏನಾದರೂ ದೇಶಿಕರು ಹಣ ತೆಗೆದುಕೊಳ್ಳುವರಲ್ಲ. ಕಡೆಗೆ ಭಕ್ತರು ಒಂದು ಕೆಲಸ ಮಾಡಿದರು. ದೇಶಿಕರು ಭಿಕ್ಷೆಗೆಂದು ಹೋಗುತ್ತಿದ್ದರು. ಈ ಭಕ್ತರ ಮನೆಗೆ ಬಂದಾಗ ಭಕ್ತರು ಅಕ್ಕಿಯೊಡನೆ ಚಿನ್ನದ ನಾಣ್ಯಗಳನ್ನು ಬೆರೆಸಿ ತಂಬಿಗೆಗೆ ಹಾಕಿಬಿಟ್ಟರು.

ದೇಶಿಕರಿಗೆ ಇದು ತಿಳಿಯದು. ಮನೆಗೆ ಹೋಗಿ ಪಾತ್ರೆಯಿಂದ ಅಕ್ಕಿಯನ್ನು ಸುರಿದರು. ಅಕ್ಕಿಯ ಜೊತೆಗೆ ನಾಣ್ಯಗಳು ಬಿದ್ದವು-ಥಳಥಳ ಹೊಳೆದವು. ದೇಶಿಕರು ತಮ್ಮ ಹೆಂಡತಿಯೊಡನೆ, ‘ಅಕ್ಕಿಯಲ್ಲಿ ಹುಳುಗಳಿವೆ’  ಎಂದು ಹೇಳಿದರು. ಒಂದು ಕಡ್ಡಿಯನ್ನು ತರಿಸಿ ಅದರಿಂದ ಆ ನಾಣ್ಯಗಳನ್ನು ಹೆಕ್ಕಿ ಹೊರಕ್ಕೆ ಹಾಕಿಸಿದರು. ಇದು ಆಚಾರ್ಯರ ವೈರಾಗ್ಯ!

ದೇವರ ಸೇವೆಗೇ ಬಾಳು ಮೀಸಲು

ವೇದಾಂತದೇಶಿಕರು ಪ್ರತಿನಿತ್ಯ ಭಿಕ್ಷೆಗೆ ಹೋಗುತ್ತಿದ್ದರಲ್ಲವೆ? ಅವರ ಸ್ನೇಹಿತರಾದ ವಿದ್ಯಾರಣ್ಯರಿಗೆ ಇದನ್ನು ತಪ್ಪಿಸಬಹುದು ಎಂದು ತೋರಿತು. ವಿದ್ಯಾರಣ್ಯರು ಬಹು ದೊಡ್ಡ ಜ್ಞಾನಿಗಳು, ವಿಜಯನಗರ ರಾಜ್ಯವನ್ನು ಸ್ಥಾಪಿಸಿದವರು. ಅವರು ದೇಶಿಕರಿಗೆ,‘‘ವಿಜಯನಗರದ ರಾಜರ ಆಸ್ಥಾನಕ್ಕೆ ಬಂದುಬಿಡಿ. ನಿಮ್ಮ ಧ್ಯಾನ, ಅಧ್ಯಯನ, ಪೂಜೆಗಳನ್ನು ಶ್ರಮವಿಲ್ಲದೆ ಮಾಡಿಕೊಂಡು ಹೋಗ ಬಹುದು’’ ಎಂದು ಹೇಳಿಕಳುಹಿಸಿದರು.

ದೇಶಿಕರು ತಮ್ಮ ಉಂಛ ವೃತ್ತಿಯನ್ನು ಎಂದರೆ ಭಿಕ್ಷಾವೃತ್ತಿಯನ್ನು ಬಿಡಲು ಇಚ್ಛಿಸಲಿಲ್ಲ. ‘‘ಹೊಟ್ಟೆ ಹೊರೆಯುವುದಕ್ಕಾಗಿ ಇನ್ನೊಬ್ಬರನ್ನು ಆಶ್ರಯಿಸಲಾರೆ. ಭಗವಂತನನ್ನು ಬಿಟ್ಟು ಮತ್ತೊಬ್ಬನನ್ನು ಸೇವಿಸಲಾರೆ. ಇಲ್ಲಿ ನನಗೆ ನಮ್ಮ ತಾತನ ಸ್ವತ್ತಾಗಿ ವರದರಾಜಸ್ವಾಮಿ ಇದ್ದಾನೆ. ಅವನ ಸೇವೆಗೇ ನನ್ನ ಬಾಳು ಮೀಸಲಾಗಿದೆ.’’ ಎಂದು ಹೇಳಿಕಳುಹಿಸಿದರು.

ಭಕ್ತರು ಹೇಳುವ ಮತ್ತೊಂದು ಕx

ದೇಶಿಕರ ಮಹಿಮೆಯನ್ನು ತೋರಿಸುವ ಒಂದು ಕಥೆಯನ್ನು ಭಕ್ತರು ಹೇಳುತ್ತಾರೆ. ಅವರ ಶಿಷ್ಯರ ಅಪೇಕ್ಷೆಯಂತೆ ಮತ್ತೆ ಕಾಂಚೀಪುರಕ್ಕೆ ಬಂದು ನೆಲಸಿದರು. ಅಲ್ಲೊಬ್ಬ ಬ್ರಹ್ಮಚಾರಿ ಇದ್ದ. ಅವನಿಗೆ ಮದುವೆ ಆಗಬೇಕಿತ್ತು. ಅದಕ್ಕಾಗಿ ಹಣದ ಆವಶ್ಯಕತೆ ಇತ್ತು. ದೇಶಿಕರನ್ನು ಪರೀಕ್ಷೆ ಮಾಡಬೇಕೆಂದು ಕೆಲವರು ಆ ಯುವಕನಿಗೆ, ‘ನೀನು ದುಡ್ಡಿಗೆ ಯೋಚನೆ ಮಾಡಬೇಡ. ದೇಶಿಕರಲ್ಲಿ ಅಪಾರ ಸಂಪತ್ತಿದೆ. ಅವರನ್ನು ಕೇಳು’ ಎಂದು ಹೇಳಿದರಂತೆ. ಆ ಬ್ರಹ್ಮಚಾರಿ ಅದು ನಿಜ ಎಂದು ನಂಬಿದ. ದೇಶಿಕರಲ್ಲಿ ಬಂದು ದುಡ್ಡಿಗಾಗಿ ಅಂಗಲಾಚಿಬೇಡಿದ. ದೇಶಿಕರಲ್ಲಿ ಒಂದು ಕುರುಡುಕಾಸೂ ಇರಲಿಲ್ಲ. ಇತರರು ಅವನನ್ನು ಪ್ರೇರಿಸಿ ಕಳುಹಿಸಿದ್ದಾರೆಂದು ದೇಶಿಕರಿಗೆ ತಿಳಿಯಿತು. ಆ ಬಡ ಬ್ರಹ್ಮಚಾರಿಗೆ ಸಹಾಯ ಮಾಡಬೇಕೆಂಬ ಮನಸ್ಸಾಯಿತು. ಆಗ ಅವರು ‘ಶ್ರೀಸ್ತುತಿ’ ಎಂಬ ಸ್ತೋತ್ರದಿಂದ ಜಗನ್ಮಾತೆ ಲಕ್ಷ್ಮೀದೇವಿಯನ್ನು ಸ್ತುತಿಸಿದರು. ದೇವಿ ಪ್ರಸನ್ನಳಾಗಿ ಆ ಬ್ರಹ್ಮಚಾರಿಗೆ ಚಿನ್ನದ ಮಳೆ ಸುರಿಸಿದಳು. ದೇಶಿಕರನ್ನು ಕೊಂಡಾಡಿ ಅವನು ಅದನ್ನು ತೆಗೆದುಕೊಂಡು ಹೋದ.

ವೇದಾಂತದೇಶಿಕರ ಮಹಿಮೆಯನ್ನು ಕುರಿತು ಭಕ್ತರು ಹೇಳುವ ಕಥೆಗಳಲ್ಲಿ ಇದೊಂದು. ತಮಗಾಗಿ ಏನನ್ನೂ ಬಯಸದೆ ದೇವರಿಗೇ ತಮ್ಮನ್ನು ಸಮರ್ಪಿಸಿಕೊಂಡವರು ಸಾಮಾನ್ಯ ಮನುಷ್ಯರಿಗೆ ಸಾಧ್ಯವಲ್ಲದ ಶಕ್ತಿಯನ್ನು ಪಡೆಯುತ್ತಾರೆ ಎಂದು ನಂಬುವವರು ಈ ವೃತ್ತಾಂತವನ್ನು ನಂಬುತ್ತಾರೆ. ವೇದಾಂತದೇಶಿಕರಲ್ಲಿ ಅವರ ಕಾಲದವರಿಗೇ ತುಂಬ ಗೌರವವಿತ್ತು ಹಾಗೂ ಬಡವರಲ್ಲಿ ಕಷ್ಟದಲ್ಲಿರುವವರಲ್ಲಿ ದೇಶಿಕರಿಗೆ ಕರುಣೆ ಇತ್ತು ಎಂಬುದನ್ನಂತೂ ಇಂತಹ ವೃತ್ತಾಂತಗಳು ತೋರಿಸುತ್ತವೆ.

ದುಷ್ಟರಿಂದ ಕಿರುಕುಳ

ಒಮ್ಮೆ ಮಂತ್ರವಾದಿಯೊಬ್ಬ ದೇಶಿಕರನ್ನು ಸ್ಪರ್ಧೆಗೆ ಕರೆದ. ಇವನೊಡನೆ ನನಗೇಕೆ ಸ್ಪರ್ಧೆ ಎಂದು ಅವರು ಸುಮ್ಮನಿದ್ದರು. ಅವನು ಕೆರೆಯ ನೀರು ಅವರ ಕಡೆ ಹರಿಯುವಂತೆ ಮಾಡಿದ. ಅವರು ತಮ್ಮ ಉಗುರಿನಿಂದ ನೆಲದ ಮೇಲೆ ಗೀರಿ ನೀರೆಲ್ಲ ಹರಿದುಹೋಗುವಂತೆ ಮಾಡಿದರು. ಮಂತ್ರವಾದಿ ಸೋಲನ್ನು ಒಪ್ಪಿಕೊಂಡು ಹೊರಟುಹೋದ. ಮತ್ತೊಮ್ಮೆ ಹಾವಾಡಿಗನೊಬ್ಬ ಅವರಿಗೆ ತೊಂದರೆ ಕೊಟ್ಟ. ಹಾವುಗಳನ್ನು ತಂದು ಅವರ ಮೇಲೆ ಬಿಟ್ಟ. ಅವರು ನೆಲದ ಮೇಲೆ ಕೆಲವು ಗೆರೆಗಳನ್ನು ಎಳೆದರು. ಸರ್ಪಗಳು ಆ ಗೆರೆಗಳನ್ನು ದಾಟಲಾರದೆ ಹೋದುವು. ಹಾವಾಡಿಗ ಮಂತ್ರ ಹಾಕಿ ಒಂದು ಘಟಸರ್ಪವನ್ನು ಬಿಟ್ಟ. ಅದು ಹತ್ತಿರ ಬಂದಾಗ ಆಚಾರ್ಯರು ಗರುಡಮಂತ್ರವನ್ನು ಜಪಿಸಿದರು; ಇದ್ದಕ್ಕಿದ್ದಂತೆ ಗರುಡವೊಂದು ಹಾರಿಬಂದು ಸರ್ಪವನ್ನು ಎತ್ತಿಕೊಂಡು ಹೋಯಿತು. ಹಾವಾಡಿಗನ ಗರ್ವ ಮುರಿಯಿತು-ಹೀಗೆ ಭಕ್ತರು ಹೇಳುತ್ತಾರೆ.

ಒಂದು ವಿಷಯವಂತೂ ಸ್ಪಷ್ಟ. ಒಳ್ಳೆಯವರನ್ನು ಕಂಡರೆ ಕೆಟ್ಟವರಿಗೆ ಆಗದು. ತೊಂದರೆ ಕೊಡುತ್ತಲೇ ಇರುತ್ತಾರೆ. ವೇದಾಂತದೇಶಿಕರಿಗೂ ಇಂತಹ ಕಷ್ಟ ತಪ್ಪಲಿಲ್ಲ.

ಅಪಾರ ಮಹಿಮೆಯುಳ್ಳವರು ಎಂದು ಜನ ದೇಶಿಕರನ್ನು ‘ಸರ್ವತಂತ್ರ ಸ್ವತಂತ್ರ’ ಎಂದು ಗೌರವಿಸುತ್ತಿದ್ದರು. ಸರ್ವತಂತ್ರ ಸ್ವತಂತ್ರ ಎಂದರೆ ಎಲ್ಲ ಶಾಸ್ತ್ರಗಳನ್ನೂ ತಿಳಿದವರು, ಎಲ್ಲ ವಿದ್ಯೆಗಳನ್ನೂ ಸ್ವಾಧೀನ ಮಾಡಿಕೊಂಡವರು, ಎಲ್ಲ ಕೆಲಸಗಳಲ್ಲಿಯೂ ಸಮರ್ಥರು ಎಂದರ್ಥ. ಇದನ್ನು ಸರಿಯಾಗಿ ತಿಳಿಯದೆ ದೇಶಿಕರನ್ನು ಪೇಚಿಗೆ ಸಿಕ್ಕಿಸಲು ಕೆಲವರು ಯತ್ನಿಸಿದರು. ಆದರೆ ವಿಫಲರಾದರು. ದೇಶಿಕರಿಗೆ ಖ್ಯಾತಿ, ಲಾಭ ಅಥವಾ ಪೂಜೆ ಇವುಗಳಲ್ಲಿ ಎಷ್ಟೂ ಆಸೆ ಇರಲಿಲ್ಲ. ಆದರೆ ಅವರನ್ನು ಪರೀಕ್ಷಿಸಲು ಬಂದವರ ಮೂಲಕ ಅವರ ಮಹಿಮೆ ಎಲ್ಲರಿಗೂ ಗೊತ್ತಾಯಿತು.

ಕಲ್ಲು ಕಟ್ಟಡ ಕಟ್ಟುವಿರ?

ದೇಶಿಕರ ಜೀವನದ ಒಂದು ಘಟನೆ ಕುತೂಹಲಕಾರಿಯಾಗಿದೆ.

ಒಮ್ಮೆ ಒಬ್ಬ ಕಲ್ಲು ಕೆಲಸದವನು ಅವರ ಬಳಿಗೆ ಬಂದ. ‘‘ನಿಮ್ಮನ್ನು ಎಲ್ಲರೂ ‘ಸರ್ವತಂತ್ರ ಸ್ವತಂತ್ರರು, ಎಲ್ಲ ವಿದ್ಯೆಯನ್ನು ಬಲ್ಲವರು’  ಎಂದು ಹೊಗಳುತ್ತಾರಲ್ಲ, ನಿಮಗೆ ಕಲ್ಲು ಕಟ್ಟಡ ಕಟ್ಟಲು ಬರುತ್ತದೆಯೇ? ಕಟ್ಟಿ ತೋರಿಸಿ. ಆಗ ನೀವು ಸರ್ವತಂತ್ರ ಸ್ವತಂತ್ರರು ಎಂದು ನಂಬುತ್ತೇನೆ’’ ಎಂದ.

ದೇಶಿಕರಿಗೆ ಈ ಪಂಥ, ಈ ಹೊಗಳಿಕೆ ಯಾವುದೂ ಬೇಡ. ಅವರು ಹೇಳಿದರು: ‘‘ಅಪ್ಪಾ, ಜನ ಏನಾದರೂ ಅಂದುಕೊಳ್ಳಲಿ. ಅದರ ಗೊಡವೆ ನನಗಿಲ್ಲ. ನಿನ್ನ ಜೊತೆಗೆ ಈ ಸ್ಪರ್ಧೆಯೂ ನನಗೆ ಬೇಡ.’’

ಆದರೆ ಆ ಮನುಷ್ಯ ಕೇಳಬೇಕಲ್ಲ? ಹಠ ಹಿಡಿದ, ನಾನು ಹೇಳುವುದೇ ಸರಿ ಎಂದು ವಾದಿಸಿದ.

ದೇಶಿಕರಿಗೆ ಬಿರುದು, ಕೀರ್ತಿ ಯಾವುದೂ ಬೇಕಿರಲಿಲ್ಲ. ಆದರೆ ಈ ಮನುಷ್ಯನಿಗೆ ಜ್ಞಾನೋದಯವನ್ನು ಮಾಡಬೇಕು ಎಂದು ತೋರಿತು ಅವರಿಗೆ.

ತಮ್ಮ ಮನೆಯ ಪಕ್ಕದಲ್ಲಿ ಒಂದು ಬಾವಿಯನ್ನು ತೋಡಿ ಕಟ್ಟಿದರು.

ಕಲ್ಲಿನ ಕೆಲಸದವನು ನೋಡಿದ, ಅಚ್ಚುಕಟ್ಟಾದ ಕೆಲಸ! ವರ್ಷಗಟ್ಟಲೆ ಆ ಬಗೆಯ ಕೆಲಸ ಮಾಡಿದ ತಾನೇ ಅದರಲ್ಲಿ ತಪ್ಪು ಕಂಡುಹಿಡಿಯುವಂತಿಲ್ಲ.

‘‘ನನ್ನದು ತಪ್ಪಾಯಿತು’’ ಎಂದು ಅವರ ಕಾಲಿಗೆ ಬಿದ್ದ. ಅವರ ಶಿಷ್ಯನಾದ.

ದೇವರನ್ನು ಒಲಿಸುವ ದಾರಿಗಾಗಿ ಚಿಂತಿಸುವ ಮಹಾ ಜ್ಞಾನಿಗಳಿಗೆ ತಮ್ಮ ಕೈಗಳನ್ನು ಉಪಯೋಗಿಸಿ ದೇಹಶ್ರಮದಿಂದ ಕೆಲಸ ಮಾಡುವುದು ಕೀಳು ಎನಿಸಲಿಲ್ಲ. ಅದನ್ನು ತಾವು ಕಲಿಯಬಾರದು ಎನಿಸಲಿಲ್ಲ. ಯಾವ ಕೆಲಸವನ್ನೂ ಅವರು ಕೀಳು ಎಂದು ಕಾಣಲಿಲ್ಲ.

ಶ್ರೀರಂಗದಲ್ಲಿ

ಮುಂದೆ ಆಚಾರ್ಯರು ಕಂಚಿಯಿಂದ ಶ್ರೀರಂಗಕ್ಕೆ ಹೋಗಿ ನೆಲಸಿದರು. ಶ್ರೀರಂಗದಲ್ಲಿ ಪಿಳ್ಳೈ ಲೋಕಾಚಾರ್ಯರು, ಸುದರ್ಶನ ಭಟ್ಟರು ಮೊದಲಾದ ಹಿರಿಯ ವಿದ್ವಾಂಸರೂ ಭಕ್ತರೂ ಇದ್ದರು. ಅವರು ದೇಶಿಕರನ್ನು ಶ್ರೀರಂಗಕ್ಕೆ ಬರಬೇಕೆಂದು ಕರೆದರು.

ಶ್ರೀರಂಗವೆಂದರೆ ದೇಶಿಕರಿಗೆ ಬಹಳ ಇಷ್ಟ. ಶ್ರೀರಂಗನಾಥನ ಕೈಂಕರ್ಯ ಮಾಡಲು ಅವಕಾಶ ಸಿಕ್ಕಿತೆಂದು ಶ್ರೀರಂಗಕ್ಕೆ ಹೊರಟರು.

ಶ್ರೀರಂಗದ ಆಚಾರ್ಯ ಪೀಠಕ್ಕೆ ಅಲ್ಲಿನ ಶ್ರೀವೈಷ್ಣವರು ದೇಶಿಕರನ್ನು ನೇಮಿಸಿದರು. ಡಿಂಡಿಮ ಹಾಗೂ ಕೃಷ್ಣಮಿಶ್ರ ಎಂಬ ಕವಿಗಳು ದೇಶಿಕರೊಡನೆ ವಾದಕ್ಕೆ ಬಂದರು. ದೇಶಿಕರು ವಾದದಲ್ಲಿ ಎಲ್ಲರನ್ನೂ ಗೆದ್ದರು. ಶ್ರೀರಂಗನಾಥನ ಸಮ್ಮುಖದಲ್ಲಿ ಎಲ್ಲರೂ ನೆರೆದು ದೇಶಿಕರನ್ನು ‘ಸರ್ವತಂತ್ರ ಸ್ವತಂತ್ರ’, ‘ಕವಿತಾರ್ಕಿಕ ಕೇಸರೀ’ ಎಂದು ಕೊಂಡಾಡಿದರು. ಶ್ರೀರಂಗದಲ್ಲಿದ್ದಾಗ ದೇಶಿಕರು ಅನೇಕ ಶಾಸ್ತ್ರಗ್ರಂಥಗಳನ್ನು ರಚಿಸಿದರು. ‘ಯಾದವಾಭ್ಯುದಯ’ ಎಂಬ ಕಾವ್ಯವನ್ನು ಬರೆದರು. ಇದು ಶ್ರೀಕೃಷ್ಣನನ್ನು ಕುರಿತ ಸುಂದರ ಕಾವ್ಯ. ‘ಸಂಕಲ್ಪ ಸೂರ್ಯೋದಯ’  ಎಂಬ ನಾಟಕವನ್ನೂ ರಚಿಸಿದರು. ಅನೇಕ ಸ್ತೋತ್ರಗಳನ್ನೂ ರಚಿಸಿದರು. ಈ ಸಮಯದಲ್ಲಿ ದೇಶಿಕರು ಭಗವದ್ರಾಮಾನುಜರ ಗ್ರಂಥಗಳಿಗೆ ಉತ್ತಮವಾದ ವಿವರಣೆಗಳನ್ನೂ ಬರೆದರು. ದೇಶಿಕರು ತಮ್ಮ ವೇಳೆಯನ್ನೆಲ್ಲಾ ಭಗವತ್ಸೇವೆ, ಕರ್ಮಾನುಷ್ಠಾನ, ಪಂಡಿತರೊಡನೆ ಶಾಸ್ತ್ರವಿಚಾರದಲ್ಲಿ ಚರ್ಚೆ, ಶಿಷ್ಯರಿಗೆ ಉಪದೇಶ ಮತ್ತು ಗ್ರಂಥರಚನೆ ಇವುಗಳಲ್ಲಿ ವಿನಿಯೋಗಿಸಿ ದರು.

ಹರಿದಾಸರ ಪಾದರಕ್ಷೆಗಳು

ಆಚಾರ್ಯರು ಶ್ರೀರಂಗದಿಂದ ಹೊರಟುಬಿದ್ದದ್ದು ಒಂದು ದೊಡ್ಡ ಕಥೆ. ಇವರ ಪಾಂಡಿತ್ಯ, ವೈರಾಗ್ಯ ಮತ್ತು ವಿನಯಗಳನ್ನು ಕಂಡು ಅನೇಕರಿಗೆ ಇವರ ಮೇಲೆ ಅಸೂಯೆ ಉಂಟಾಯಿತು. ಆಚಾರ್ಯರು ಶ್ರೀರಂಗದಲ್ಲಿದ್ದಷ್ಟು ಕಾಲವೂ ಒಂದಲ್ಲ ಒಂದು ರೀತಿಯಲ್ಲಿ ಕೆಲವರು ಅವರಿಗೆ ತೊಂದರೆಯನ್ನೇ ಉಂಟುಮಾಡಿದರು. ಆಚಾರ್ಯರಿಗೆ ಕೆಲವರು ಶ್ರೀವೈಷ್ಣವರಿಂದಲೇ ತೊಂದರೆ ಆರಂಭವಾಯಿತು.

ಶ್ರೀವೈಷ್ಣವರದಲ್ಲಿ ಒಬ್ಬರು ಆಚಾರ್ಯರನ್ನು ವಾದಕ್ಕೆ ಕರೆದರು. ದೇಶಿಕರು, ‘‘ನಮ್ಮನಮ್ಮಲ್ಲಿ ವಾದವೇಕೆ? ವಾದ ನಡೆದರೆ ಅಂತಃಕಲಹ ಉಂಟಾಗುತ್ತದೆ. ಭಾಗವತರ ತೇಜೋಭಂಗವಾಗುತ್ತದೆ. ನಾನು ವಾದಕ್ಕೆ ಸಿದ್ಧನಿಲ್ಲ’’ ಎಂದುಬಿಟ್ಟರು.

ಇದರಿಂದ ಅವರನ್ನು ವಾದಕ್ಕೆ ಕರೆದವರಿಗೆ ಕೋಪ ಬಂತು. ದೇಶಿಕರಿಗೆ ಅವಮಾನ ಮಾಡಬೇಕೆಂದು ತೀರ್ಮಾನಿಸಿದರು.

ಅವರು ಮಾಡಿದ ಕೆಲಸ ನೀತಿನಡತೆಗಳನ್ನು ತಿಳಿದವರಿಗೆ ಅಸಹ್ಯವಾಗುವಂತಹದು.

ದೇಶಿಕರ ಮನೆಯ ಬಾಗಿಲಿಗೆ ಪಾದರಕ್ಷೆಗಳ ತೋರಣವನ್ನು ಅವರು ಕಟ್ಟಿದರು. ದೇಶಿಕರು ಮನೆಯಿಂದ ಹೊರಗೆ ಬಂದು ನೋಡಿದಾಗ ಪಾದರಕ್ಷೆಯ ತೋರಣ ಇದೆ!

ಈ ಕೆಲಸ ಯಾರದು ಎಂದು ಅವರಿಗೆ ತಿಳಿಯಿತು. ಯಾರಿಗಾದರೂ ಎಷ್ಟು ಕೋಪ ಬರುವ ಸನ್ನಿವೇಶ! ಆದರೆ ವೇದಾಂತದೇಶಿಕರು ತಮ್ಮ ಸಹಜವಾದ ಸಹನೆಯಿಂದ ಹೇಳಿದರು: ‘‘ಕೆಲವರು ಕರ್ಮವನ್ನನುಸರಿಸುತ್ತಾರೆ. ಮತ್ತೆ ಕೆಲವರು ಜ್ಞಾನವನ್ನವಲಂಬಿಸುತ್ತಾರೆ. ನಾವು ಹರಿದಾಸರ ಪಾದರಕ್ಷೆಗಳನ್ನು ಅವಲಂಬಿಸುತ್ತೇವೆ.’’

ನಾನು ಎಂಬ ಭಾವವನ್ನು ಸಂಪೂರ್ಣವಾಗಿ ಜಯಿಸಿ, ದೇವರಿಗೆ ತಮ್ಮನ್ನು ಸಮರ್ಪಣೆ ಮಾಡಿಕೊಂಡವರಿಗೆ ಮಾತ್ರ ಇಂತಹ ತಾಳ್ಮೆ, ದೊಡ್ಡತನ ಬಂದೀತು.

ದೇಶಿಕರು ಸಹನೆ ತೋರಿದಷ್ಟೂ ಅವರಿಗೆ ಹೊಟ್ಟೆಕಿಚ್ಚಿನ ಜನ ಕಿರುಕುಳ ಕೊಡುವುದು ಹೆಚ್ಚಾಯಿತು.

ಅವರೇ ನನಗಿಂತ ಶ್ರೇಷ್ಠ ಕವಿಗಳು

ಅಳಹಿಯ ಮಣವಾಳ ನಾಯನಾರ್ ಎಂಬವರು ತಮಿಳಿನಲ್ಲಿಯೂ ಸಂಸ್ಕೃತದಲ್ಲಿಯೂ ಕವನ ರಚಿಸುತ್ತಿದ್ದರು. ಅವರು ತಮಿಳು ಭಾಷೆಯಲ್ಲಿ ಕವನ ರಚಿಸಲು ತಮ್ಮೊಡನೆ ಸ್ಪರ್ಧಿಸಬೇಕೆಂದು ಆಚಾರ್ಯರನ್ನು ಕರೆದರು. ಆಚಾರ್ಯರಿಗೆ ಈ ಬಗೆಯ ಸ್ಪರ್ಧೆ ಇಷ್ಟವಿಲ್ಲ. ಅದಕ್ಕಾಗಿ ಅವರು ಇದಕ್ಕೆ ಒಪ್ಪಲಿಲ್ಲ. ಪ್ರತಿಯಾಗಿ ಅವರು ರಚಿಸಿದ್ದ ದೇಶಿಕ ಪ್ರಬಂಧವನ್ನು ಕಳುಹಿಸಿಕೊಟ್ಟರು. ನಾಯನಾರ್ ಅವರು ಸುಮ್ಮನಾಗಲಿಲ್ಲ. ಒಂದುಸಲ ದೇವಾಲಯದಲ್ಲಿ ಎಲ್ಲರೂ ನೆರೆದಿದ್ದಾಗ ನಾಯನಾರ್ ಅವರು ದೇಶಿಕರನ್ನು ಸಂಸ್ಕೃತ ಕವಿತಾಸ್ಪರ್ಧೆಗೆ ಕರೆದರು. ‘ನಿಮ್ಮನ್ನು ಜನ ಕವಿತಾರ್ಕಿಕಸಿಂಹ ಎಂದು ಕರೆಯುತ್ತಾರಲ್ಲ, ಅದು ಸರಿಯಲ್ಲ. ರಂಗನಾಥನ ಮೇಲೆ ಸಾವಿರ ಶ್ಲೋಕಗಳನ್ನು ನಾಳೆಯೊಳಗೆ ನಮ್ಮಿಬ್ಬರಲ್ಲಿ ಯಾರು ರಚಿಸುವರೋ ಅವರಿಗೇ ಕವಿತಾರ್ಕಿಕಸಿಂಹ ಎಂಬ ಬಿರುದು ಸಲ್ಲಬೇಕು’’ ಎಂದರು. ನಮ್ಮನಮ್ಮಲ್ಲಿ  ಸ್ಪರ್ಧೆ ಯುಕ್ತವಲ್ಲವೆಂದು ಆಚಾರ್ಯರು ಹೇಳಿದರೂ ನಾಯನಾರ್‌ರವರು ತಮ್ಮ ಹಠವನ್ನು ಬಿಡಲಿಲ್ಲ. ನೆರೆದಿದ್ದ ಮಹಾಜನರು ಸ್ಪರ್ಧೆಗೆ ದೇಶಿಕರು ಒಪ್ಪಬೇಕೆಂದು ಒತ್ತಾಯಮಾಡಿದರು.

‘ದೇವರ ಇಚ್ಛೆ ಇದ್ದಂತಾಗಲಿ’ ಎಂದು ದೇಶಿಕರು ಸ್ಪರ್ಧೆಗೆ ಒಪ್ಪಿದರು.

ಆ ರಾತ್ರಿ ದೇಶಿಕರು ರಂಗನಾಥನ ಪಾದುಕೆಗಳ ಮೇಲೆ ಸಹಸ್ರ ಶ್ಲೋಕಗಳನ್ನು ಲೀಲಾಜಾಲವಾಗಿ ರಚಿಸಿಬಿಟ್ಟರು.

ಬೆಳಗಾಯಿತು. ರಂಗನಾಥನ ದೇವಾಲಯದಲ್ಲಿ ಜನ ಸೇರಿದರು. ಎಲ್ಲರಿಗೂ ಕುತೂಹಲ. ಏನಾಗುತ್ತದೋ, ಸ್ಪರ್ಧೆಯಲ್ಲಿ ಯಾರು ಗೆಲ್ಲುವರೋ ಎಂದು. ದೇಶಿಕರು ತಾವು ರಚಿಸಿದ ‘ಪಾದುಕಾಸಹಸ್ರ’ವನ್ನು ಹಾಡಿದರು.

ಅನಂತರ ನಾಯನಾರ್ ಅವರು ಹಾಡಬೇಕು. ಅವರು ಆರಂಭಿಸಿದ ‘ಪದಕಮಲಸಹಸ್ರ’ ದಲ್ಲಿ ಕೇವಲ ಮುನ್ನೂರು ಶ್ಲೋಕಗಳು ಮಾತ್ರ ಮುಗಿದಿದ್ದವು.

ಎಲ್ಲರೂ ದೇಶಿಕರನ್ನು ಕೊಂಡಾಡಿ ಬಿರುದು ದೇಶಿಕರಿಗೇ ಸಲ್ಲುವುದೆಂದು ತೀರ್ಮಾನಿಸಿದರು.

ಆ ಸಂದರ್ಭದಲ್ಲಿ ದೇಶಿಕರು ಹೇಳಿದ ಮಾತುಗಳು ಮರೆಯಲಾಗದವು. ಇಂತಹ ಸಂದರ್ಭದಲ್ಲಿ ಗೆದ್ದವರು ಹೆಮ್ಮೆಯಿಂದ, ಕಡೆಯ ಪಕ್ಷ ಸಂತೋಷದಿಂದ ಮಾತನಾಡುವುದು ಸಹಜ, ಅಲ್ಲವೆ? ಅದರಲ್ಲಿಯೂ ವೇದಾಂತ ದೇಶಿಕರು ಈ ಸ್ಪರ್ಧೆಯನ್ನು ಅಪೇಕ್ಷಿಸಲಿಲ್ಲ. ಅದನ್ನು ತಪ್ಪಿಸಲು ತುಂಬಾ ಪ್ರಯತ್ನಿಸಿದರು. ನಾಯನಾರರೇ ಅಹಂಕಾರದಿಂದ ಹಠ ಹಿಡಿದವರು. ಆದರೆ ದೇಶಿಕರು ತಾವು ಜಯಶೀಲರಾದರೂ ನಾಯನಾರರ ಮನಸ್ಸನ್ನು ನೋಯಿಸಲಿಚ್ಛಿಸಲಿಲ್ಲ. ಅವರು, ‘‘ನಾಯನಾರ್ ಅವರು ನನಗಿಂತ ಶ್ರೇಷ್ಠ ಕವಿಗಳು, ಅವರ ಕಾವ್ಯ ಬಹಳ ಶ್ರೇಷ್ಠವಾದುದು’’ ಎಂದು ಅವರನ್ನು ಕೊಂಡಾಡಿದರು. ಅಂತೂ ಆ ಸನ್ನಿವೇಶದ ಕಾರಣ ನಮಗೆ ‘ಪಾದುಕಾ ಸಹಸ್ರ’ ಲಭ್ಯವಾಯಿತು.

ಪರೀಕ್ಷೆಯ ಮೇಲೆ ಪರೀಕ್ಷೆ

ಇಷ್ಟಾದರೂ ಅವರಲ್ಲಿ ಇತರರು ಅಸೂಯೆ ಬಿಡಲಿಲ್ಲ. ಒಮ್ಮೊಮ್ಮೆ ಬಹಳ ಕಠಿಣವಾದ ಪರೀಕ್ಷೆಗೊಳಪಡಿಸುತ್ತಿದ್ದರು ಅವರು. ಒಮ್ಮೆ ದೇಶಿಕರು ತಮ್ಮ ತಂದೆಯವರ ಶ್ರಾದ್ಧಕ್ಕೆ ಭಾಗವತರನ್ನು ಆಹ್ವಾನಿಸಿದ್ದರು. ಕೆಲವರು ಅಸೂಯಾಪರರು ಆ ಭಾಗವತರಿಗೆ ಹೆಚ್ಚಾಗಿ ಹಣಕೊಟ್ಟು ಆ ದಿನ ಅವರು ದೇಶಿಕರ ಮನೆಗೆ ಹೋಗದಂತೆ ಮಾಡಿದರು. ಎಲ್ಲವನ್ನೂ ಸಿದ್ಧಮಾಡಿಕೊಂಡು ದೇಶಿಕರು ಮನೆಯಲ್ಲಿ ಕಾಯುತ್ತಿದ್ದರು. ಅವರಿಗೆ ತಮ್ಮ ಶತ್ರುಗಳ ಕುತಂತ್ರ ಯಾವುದೂ ತಿಳಿಯದು. ಬಹಳ ಹೊತ್ತಾದರೂ ಯಾರೂ ಬರಲಿಲ್ಲ. ಅವರಿಗೆ ಆಗ ಬಹಳ ಆತಂಕವಾಯಿತು, ದುಃಖವಾಯಿತು. ಆಗ ಭಗವಂತನನ್ನೇ ಅನನ್ಯಭಾವದಿಂದ ಅವರು ಪ್ರಾರ್ಥಿಸಿದರು. ಆ ಹೊತ್ತಿಗೆ ಸರಿಯಾಗಿ ಅಪರಿಚಿತರಾದ ಭಾಗವತರೊಬ್ಬರು ಬಂದರು; ಅವರ ತಂದೆಯ ಶ್ರಾದ್ಧವನ್ನು ನಡೆಸಿಕೊಟ್ಟರು. ಆಗ ದಯಾಮಯನಾದ ದೇವರೇ ಅಪರಿಚಿತರಾದ ಭಾಗವತರ ರೂಪದಲ್ಲಿ ಬಂದ ಎಂದು ಅವರಿಗೆ ಎನಿಸಿತು.

ಮತ್ತೊಮ್ಮೆ ದೇಶಿಕರು ಮನೆಯ ಜಗಲಿಯ ಮೇಲೆ ಕುಳಿತು ಪಾಠ ಹೇಳುತ್ತಿದ್ದರು. ಆಗ ಕಂದಾಡೆ ಲಕ್ಷ್ಮಣಾಚಾರ್ಯರೆಂಬ ಗುರುಗಳು ತಮ್ಮ ಶಿಷ್ಯರೊಡನೆ ಆ ಬೀದಿಯಲ್ಲಿ ಬಂದರು. ದೇಶಿಕರು ಪಾಠ ಹೇಳುವುದರಲ್ಲಿ ಮಗ್ನರಾಗಿದ್ದರು.  ಲಕ್ಷ್ಮಣಾಚಾರ್ಯರು ಬಂದುದನ್ನು ಕಾಣಲಿಲ್ಲ; ಆದುದರಿಂದ ಎದ್ದುನಿಂತು ಗೌರವ ತೋರಿಸಲಿಲ್ಲ. ಇದನ್ನೇ ಅಪರಾಧವೆಂದು ಭಾವಿಸಿ ಲಕ್ಷ್ಮಣಾಚಾರ್ಯರ ಶಿಷ್ಯರು ಕೋಪಗೊಂಡು ಆಚಾರ್ಯರ ಕಾಲುಗಳೆರಡನ್ನೂ ಹಿಡಿದು ಎಳೆದುಬಿಟ್ಟರು. ಆಚಾರ್ಯರಿಗೆ ಬಹಳ ನೋವಾಯಿತು. ಆ ಸಂದರ್ಭ ಗೊತ್ತಾಗಿ ಆಚಾರ್ಯರು ಲಕ್ಷ್ಮಣಾಚಾರ್ಯರಲ್ಲಿ ಹೋಗಿ ಕ್ಷಮಾಪಣೆಯನ್ನು ಕೇಳಿದರು. ಇದಾದನಂತರ ವೇದಾಂತದೇಶಿಕರು ಬಹಳ ನೊಂದುಕೊಂಡರು. ‘ನಾವು ಇನ್ನು ಶ್ರೀರಂಗದಲ್ಲಿ ನಿಲ್ಲುವುದು ಬೇಡ. ಬೇರೆ ಕಡೆ ಹೋಗೋಣ. ಮೊದಲು ಭಾಷ್ಯಕಾರರು ಪೂಜಿಸಿದ ಚೆಲ್ವನಾರಾಯಣನನ್ನು ಸೇವಿಸಿ ಬರೋಣ’ ಎಂದು ತಮ್ಮ ನಿಶ್ಚಯವನ್ನು ತಿಳಿಸಿದರು. ಅದರಂತೆ ಆಚಾರ್ಯರು ಮೇಲುಕೋಟೆಗೆ ಹೋದರು.

ಮೇಲುಕೋಟೆಗೆ  ಹೊಸ ಕಳೆ

ದೊಡ್ಡವರು ತಾವು ಮನಸ್ಸಿನ ಶಾಂತಿ ಕಂಡುಕೊಂಡರೆ ಸಾಕು ಎಂದು ಭಾವಿಸುವುದಿಲ್ಲ. ತಾವು ಕಂಡುಕೊಂಡ ದಾರಿಯನ್ನು ಸಾಮಾನ್ಯ ಜನರಿಗೂ ತೋರಿಸುತ್ತಾರೆ; ತಾವು ಶ್ರಮದಿಂದ, ಶ್ರದ್ಧೆಯಿಂದ ಗಳಿಸಿದ ಅನುಭವವನ್ನೂ ಜ್ಞಾನವನ್ನೂ ಇತರರೊಂದಿಗೆ ಹಂಚಿಕೊಳ್ಳುತ್ತಾರೆ. ವೇದಾಂತದೇಶಿಕರು ಇಂತಹ ಹಿರಿಯರು.

ಮೇಲುಕೋಟೆಗೆ ದೇಶಿಕರು ಬಂದಮೇಲೆ ಆ ಊರಿಗೇ ಒಂದು ಹೊಸ ಕಳೆ ಬಂದಿತು. ದೇಶಿಕರ ಸಂದರ್ಶನಕ್ಕೆ ಜನರು ಎಲ್ಲೆಲ್ಲಿಂದಲೋ ಬರುತ್ತಿದ್ದರು. ಅವರ ಉಪದೇಶವನ್ನು ಕೇಳಲು ಜನ ಕಾತುರರಾಗಿದ್ದರು. ದೇಶಿಕರು ಶ್ರೀಭಾಷ್ಯದ ಅರ್ಥಗಳನ್ನು ವಿವರಿಸುತ್ತಿದ್ದರು. ನಿತ್ಯವೂ ದೇವಾಲಯದಲ್ಲಿ ನೆರೆದ ಭಕ್ತ ಜನರಿಗೆ ಆಳ್ವಾರರ ಪ್ರಬಂಧಗಳ ಅರ್ಥಗಳನ್ನೂ ಸ್ವಾರಸ್ಯವನ್ನೂ ವಿವರಿಸುತ್ತಿದ್ದರು. ಭಗವಂತನ ಗುಣಗಳನ್ನು ಹೃದಯಂಗಮವಾಗಿ ವರ್ಣಿಸಿ ಎಲ್ಲರೂ ಅವನಲ್ಲಿ ಭಕ್ತಿ ಹೊಂದುವಂತೆ ಮಾಡುತ್ತಿದ್ದರು. ವೇದಾಂತದ ಅರ್ಥವನ್ನು ಸುಲಭವಾಗಿ ಬೋಧಿಸಿ ಜನರಲ್ಲಿ ಸಂದೇಹಗಳೆಲ್ಲಾ ಹೋಗುವಂತೆ ಮಾಡಿದರು.

ನಾವು ಭಗವಂತನಿಗೆ ಸೇರಿದವರು

ಅಲ್ಲಿಂದ ಮುಂದೆ ಆಚಾರ್ಯರು ಸತ್ಯಮಂಗಲಕ್ಕೆ ಹೊರಡಲು ನಿಶ್ಚಯಿಸಿದರು. ದೇಶಿಕರು ತಮ್ಮನ್ನು ಬಿಟ್ಟುಹೋಗುವರಲ್ಲಾ ಎಂದು ಅವರೆಲ್ಲರಿಗೆ ಬಹಳ ದುಃಖವಾಯಿತು. ಅಂದು ಭಕ್ತರನ್ನು ಕುರಿತು ದೇಶಿಕರು ಹೇಳಿದರು: ‘‘ಭಾಗವತೋತ್ತಮರೇ, ನಿಮ್ಮೆಲ್ಲರ ಜೊತೆಗೆ ಚೆಲ್ವನಾರಾಯಣನನ್ನು ಸೇವಿಸುವ ಭಾಗ್ಯ ನನ್ನದಾಯಿತು. ಭಗವಾನ್ ಭಾಷ್ಯಕಾರರ ಶ್ರೀಸೂಕ್ತಿಗಳ ಅನುಸಂಧಾನ ನಾವು ಮಾಡಿದೆವು. ಈ ಕಾಲ ಒಳ್ಳೆಯ ಕಾಲ. ನಮ್ಮ ಆಚಾರ್ಯರು ತೋರಿಕೊಟ್ಟ ಮಾರ್ಗದಲ್ಲಿ ನಾವು ಮುಂದುವರಿಯೋಣ. ಭಗವಂತನಲ್ಲಿ ನಮ್ಮನ್ನೂ ನಮ್ಮ ರಕ್ಷಣೆಯ ಭಾರವನ್ನೂ ನಮ್ಮ ರಕ್ಷಣೆಯ ಫಲವನ್ನೂ ಅರ್ಪಿಸೋಣ. ನಾವು ಆ ಭಗವಂತನಿಗೇ ಸೇರಿದವರು. ಅವನೇ ಅವನ ಇಚ್ಛೆಯಂತೆ ಅವನ ಸಂತೋಷಕ್ಕಾಗಿ ಅವನಿಗೇ ಸೇರಿದ ನಮ್ಮಿಂದ ಇದನ್ನು ನಡೆಸಿಕೊಳ್ಳಲಿ.’’

ಆಚಾರ್ಯರ ಉಪದೇಶದಿಂದ ಅಲ್ಲಿನ ಜನ ಕೃತಾರ್ಥರಾದರು. ಮನಸ್ಸಿಲ್ಲದ ಮನಸ್ಸಿನಿಂದ ದೇಶಿಕರಿಗೆ ಬೀಳ್ಕೊಡುಗೆಯನ್ನಿತ್ತು ಕಳುಹಿಸಿಕೊಟ್ಟರು. ‘ಮತ್ತೆ ನಮ್ಮ ಸಮಾಗಮ ಬೇಗ ಆಗಲಿ’ ಎಂದು ಹಾರೈಸಿ ದೇಶಿಕರು ಸತ್ಯಮಂಗಲವನ್ನು ಕುರಿತು ಪ್ರಯಾಣ ಮಾಡಿದರು.

ಸತ್ಯಮಂಗಲ

ಮೇಲುಕೋಟೆಯಿಂದ ಹೊರಟ ವೇದಾಂತದೇಶಿಕರು ಅನೇಕ ಕ್ಷೇತ್ರಗಳನ್ನು ಸಂದರ್ಶಿಸಿ ಸತ್ಯಮಂಗಲಕ್ಕೆ ಬಂದು ನಿಂತರು. ಸತ್ಯಮಂಗಲದ ಸನ್ನಿವೇಶ ಅವರಿಗೆ ಬಹಳ ಹಿಡಿಯಿತು. ಅಲ್ಲಿನ ನದಿ, ದೇವಾಲಯ, ಶಾಂತವಾದ ವಾತಾವರಣ, ಆಸ್ತಿಕರಾದ ಜನ-ಇವುಗಳನ್ನು ಅವರು ಬಹಳ ಮೆಚ್ಚಿಕೊಂಡರು. ಶ್ರೀರಂಗಕ್ಕೆ ಈ ಸ್ಥಳ ಹತ್ತಿರವಾಗಿದ್ದು, ಬೇಕಾದಾಗ ಶ್ರೀರಂಗನಾಥನ ಸೇವೆಗೆ ಹೋಗಬಹುದಾಗಿತ್ತು. ಆಚಾರ್ಯರು ಸತ್ಯಮಂಗಲದಲ್ಲಿ ನಲವತ್ತು ವರ್ಷ ಕಾಲ ಸಂಸಾರ ಸಮೇತ ವಾಸಿಸಿದರು. ಯಾರ ಕಿರುಕುಳವೂ ಇಲ್ಲದೆ ಶಾಂತವಾದ ಪರಿಸ್ಥಿತಿಯಲ್ಲಿ ಹಿತವಾದ ಜೀವನವನ್ನು ಅವರು ನಡೆಸಿದುದು ಇಲ್ಲಿಯೇ. ಲೆಕ್ಕವಿಲ್ಲದಷ್ಟು ಮಂದಿ ಶಿಷ್ಯರು ಅವರನ್ನಿಲ್ಲಿ ಆಶ್ರಯಿಸಿದರು.

ಆಚಾರ್ಯರ ಸಾಹಸ

ಒಮ್ಮೆ ದೇಶಿಕರು ಶ್ರೀರಂಗಕ್ಕೆ ಹೋಗಿದ್ದರು. ಅವರು ಅಲ್ಲಿದ್ದಾಗ ಶ್ರೀರಂಗಕ್ಕೆ ದೊಡ್ಡ ವಿಪತ್ತು ಬಂದಿತು. ಮುಸ್ಲಿಮರು ಆ ನಗರದ ಮೇಲೆ ದಾಳಿಮಾಡಿದರು. ಆಗ ದೇವರ ಉತ್ಸವವೊಂದು ನಡೆಯುತ್ತಿತ್ತು. ಕಾವೇರಿಯ ಆಚೆಯ ದಡದಲ್ಲಿ ದಾಳಿಕಾರರ ಸೇನೆ ಬಂದಿದೆಯೆಂದು ಗೊತ್ತಾಯಿತು. ಕೂಡಲೇ ಶ್ರೀರಂಗದಲ್ಲಿದ್ದ ಭಕ್ತರು ಒಟ್ಟಾಗಿ ದೇವಾಲಯವನ್ನೂ ದೇವರ ವಿಗ್ರಹವನ್ನೂ ಸಂರಕ್ಷಿಸುವ ಯೋಚನೆ ಮಾಡಿದರು. ದೇವರ ಉತ್ಸವ ವಿಗ್ರಹವನ್ನು ಒಡವೆಗಳೊಡನೆ ಪಲ್ಲಕ್ಕಿಯಲ್ಲಿಟ್ಟು ಶ್ರದ್ಧಾವಂತರಾದವರ ರಕ್ಷಣೆಯಲ್ಲಿ ಗುಪ್ತಮಾರ್ಗದಿಂದ ನಗರದ ಹೊರಕ್ಕೆ ಕಳುಹಿಸಿಕೊಟ್ಟರು. ಹಿರಿಯ ಭಕ್ತರಾಗಿದ್ದ ಪಿಳ್ಳೆ  ಲೋಕಾಚಾರ್ಯರು ದೇವರ ಉತ್ಸವಮೂರ್ತಿಯೊಡನೆ ಹೊರಟರು. ಗರ್ಭಗುಡಿಯ ಸುತ್ತಲೂ ಕಲ್ಲುಗೋಡೆ ಹಾಕಿ ಕೃತ್ರಿಮ ವಿಗ್ರಹಗಳನ್ನಿಟ್ಟರು. ಅಷ್ಟರಲ್ಲಿ ಶತ್ರುಗಳ ದಂಡು ದೇವಾಲಯವನ್ನು ಕೊಳ್ಳೆ ಹೊಡೆಯಲು ಬಂದೇಬಿಟ್ಟಿತು. ಅಲ್ಲಿ ದೇವಾಲಯದ ರಕ್ಷಣೆಗೆ ನಿಂತ ಜನರೆಲ್ಲ ಹತರಾದರು. ಸುದರ್ಶನ ಭಟ್ಟರು, ಅಳಹಿಯ ಮಣವಾಳ ನಾಯನಾರ್ ಮೊದಲಾದವರು ದೇವಾಲಯವನ್ನು ರಕ್ಷಿಸುವ ಕೆಲಸದಲ್ಲಿ ಪ್ರಾಣವನ್ನಿರ್ಪಿಸಿದರು.

ಸುದರ್ಶನ ಭಟ್ಟರು ಬರೆದ ‘ಶ್ರುತ ಪ್ರಕಾಶಿಕಾ’ ಎಂಬ ಗ್ರಂಥವನ್ನೂ ಅವರ ಮಕ್ಕಳಾದ ವೇದಾಚಾರ್ಯ ಮತ್ತು ಪರಾಂಕುಶ ಭಟ್ಟ ಇವರನ್ನೂ ರಕ್ಷಿಸುವ ಹೊಣೆ ದೇಶಿಕರ ಮೇಲೆ ಬಿದ್ದಿತ್ತು. ದೇಶಿಕರು ಆ ಕೃತಿಯನ್ನು ಕಾವೇರಿಯ ಮರಳಿನಲ್ಲಿ ಗೊತ್ತಾದ ಕಡೆ ಹೂತಿಟ್ಟರು. ತಾವು ಇಬ್ಬರು ಮಕ್ಕಳೂ ದಾಳಿಗೊಳಗಾಗಿ ಸತ್ತುಬಿದ್ದಿದ್ದ ಹೆಣಗಳ ಮಧ್ಯೆ ಅವಿತುಕೊಂಡಿದ್ದರು. ಶತ್ರುಸೇನೆ ಹೋದಮೇಲೆ ದೇಶಿಕರು ಆ ಅಮೂಲ್ಯವಾದ ಕೃತಿಯನ್ನು ತೆಗೆದುಕೊಂಡು ಸುದರ್ಶನ ಭಟ್ಟರ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಸತ್ಯಮಂಗಲಕ್ಕೆ ಬಂದರು. ಶ್ರೀರಂಗಕ್ಕೆ ಒದಗಿದ ಆಪತ್ತನ್ನು ಕಂಡು ದೇಶಿಕರಿಗೆ ಬಹಳ ದುಃಖವುಂಟಾಯಿತು. ಶ್ರೀರಂಗವನ್ನು ರಕ್ಷಿಸಬೇಕೆಂದು ದೇವರಲ್ಲಿ ‘ಅಭೀತಿಸ್ತವ’ ಎಂಬ ಸ್ತೋತ್ರವನ್ನು ಹಾಡಿ ಬೇಡಿದರು.

ಮತ್ತೆ ಒಳ್ಳೆಯ ದಿನಗಳು

ಹೀಗೆಯೇ ಸ್ವಲ್ಪಕಾಲ ಕಳೆಯಿತು. ಅದೃಷ್ಟವಶಾತ್ ಶ್ರೀರಂಗಕ್ಕೆ ಒದಗಿದ್ದ ವಿಪತ್ತು ಪರಿಹಾರವಾಯಿತು. ವಿಜಯನಗರದ ಬುಕ್ಕರಾಯನ ಸೇನಾನಾಯಕ ಗೋಪಣ್ಣದಂಡನಾಯಕ ಶ್ರೀರಂಗದಿಂದ ಮುಸ್ಲಿಮರನ್ನು ಸೋಲಿಸಿ ಓಡಿಸಿದನು. ಮತ್ತೆ ಭಕ್ತರು ಆ ಪುಣ್ಯಕ್ಷೇತ್ರಕ್ಕೆ  ಬರತೊಡಗಿದರು. ಅದುವರೆಗೂ ತಿರುಪತಿಯಲ್ಲಿಟ್ಟು ಪೂಜಿಸುತ್ತಿದ್ದ ದೇವರ ಉತ್ಸವ ಮೂರ್ತಿಯನ್ನು ಮತ್ತೆ ಶ್ರೀರಂಗಕ್ಕೆ ತಂದರು. ಗೋಪಣ್ಣ ದಂಡನಾಯಕ ಮತ್ತೆ ದೇವರ ಪ್ರತಿಷ್ಠೆ ಮಾಡಿಸಿದನು. ಈ ಸುದ್ದಿಯನ್ನು ಕೇಳಿದಾಗ ದೇಶಿಕರಿಗೆ ಆದ ಆನಂದ ಅಷ್ಟಿಷ್ಟಲ್ಲ. ಶತ್ರುಗಳ ಬಾಧೆಯನ್ನು ಹೋಗಲಾಡಿಸಿ ಪುನಃ ದೇವರ ಪ್ರತಿಷ್ಠೆ ಮಾಡಿಸಿದ ಗೋಪಣ್ಣ ದಂಡನಾಯಕನಿಗೆ ಆಚಾರ್ಯರು ಮನಃಪೂರ್ವಕ ಆಶೀರ್ವದಿಸಿದರು. ಶ್ರೀರಂಗದ  ದೇವಾಲಯದಲ್ಲಿ ಶಾಸನವೊಂದರಲ್ಲಿ ಈ ವಿಷಯ ಬರೆಯಲಾಗಿದೆ.

ಶ್ರೀರಂಗಕ್ಕೆ ಮೊದಲಿನಂತೆ ಕಳೆ ಬಂದಿತು. ಭಕ್ತರು ಗುಂಪುಗುಂಪಾಗಿ ಬಂದು ದೇವರ ಸೇವೆಯಲ್ಲಿ ತೊಡಗಿದರು. ವೇದಾಂತದೇಶಿಕರಿಗೆ ಆಗ ತೊಂಬತ್ತೈದು ವರ್ಷ ವಯಸ್ಸಾಗಿತ್ತು. ಅವರು ತಮ್ಮ ಶಿಷ್ಯರೊಡಗೂಡಿ ಶ್ರೀರಂಗಕ್ಕೆ ಬಂದು ಶ್ರೀರಂಗನಾಥನ ಸೇವೆಯಲ್ಲಿ ನಿರತರಾದರು. ಆ ಇಳಿವಯಸ್ಸಿನಲ್ಲಿಯೂ ಆಚಾರ್ಯರು ಹಿರಿಯ ಜ್ಞಾನಿಗಳ ಗ್ರಂಥಗಳನ್ನು, ಉಪದೇಶಗಳನ್ನು ಜನರಿಗೆ ವಿವರಿಸಿ ಹೇಳುತ್ತಿದ್ದರು. ದೇವಾಲಯದಲ್ಲಿ ಉತ್ಸವಗಳು ಕ್ರಮವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದರು. ಆಗ ಆಚಾರ್ಯರು ಬರೆದ ಶ್ರೇಷ್ಠವಾದ ಕೃತಿ ‘ರಹಸ್ಯತ್ರಯಸಾರ’ ಎಂಬುದು ಅವರ ಪರಿಪಕ್ವವಾದ ಜ್ಞಾನದ ಫಲ.

ಪರಮ ಸಾತ್ವಿಕ ಜೀವನ

ವೇದಾಂತದೇಶಿಕರು ತಮ್ಮ ಜೀವಮಾನದ ಕೊನೆಯ ಕಾಲವನ್ನು ಶ್ರೀರಂಗದಲ್ಲಿ ಕಳೆದರು. ಅವರು ಆಗಲೂ ತಮ್ಮ ನಿಷ್ಠೆಯನ್ನು ಉಳಿಸಿಕೊಂಡು ಬಂದರು. ಶಿಷ್ಯರಿಗೆ ಉಪದೇಶ ಮಾಡುವುದು, ಶಾಸ್ತ್ರಪಾಠ ಹೇಳುವುದು, ಗ್ರಂಥರಚನೆ ಮಾಡುವುದು, ಭಗವತ್ಸೇವೆಯಲ್ಲಿ ನಿರತರಾಗುವುದು ಇವುಗಳಲ್ಲಿ ಅವರು ತಮ್ಮ ಕಾಲವನ್ನು ಕಳೆದರು. ಆಚಾರ್ಯರು ಶಾಂತಚಿತ್ತರೂ ಭಕ್ತಿನಮ್ರರೂ ಆಗಿದ್ದರು. ತಮ್ಮ ಗುರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದ ದೇಶಿಕರು ಈ ಲೋಕದ ಜೀವನದಲ್ಲಿ ಯಾವ ಪ್ರಯೋಜನಗಳನ್ನೂ ಬಯಸಲಿಲ್ಲ. ಆಶೆ ಆಕಾಂಕ್ಷೆಗಳ ಬಲೆಗೆ ಬೀಳಲಿಲ್ಲ. ಪರಮ ಕರುಣಾಕರನಾದ ಭಗವಂತನಲ್ಲಿ ಅಚಲವಾದ ನಂಬಿಕೆಯಿಟ್ಟು ಅವನ ಪಾದಗಳನ್ನಾಶ್ರಯಿಸಿದರು. ಯಾವ ಬಗೆಯ ಭಯಕ್ಕೂ ಒಳಗಾಗದೆ ಯಾರಿಗೂ ನೋವುಂಟುಮಾಡದೆ ಪರಮ ಸಾತ್ವಿಕವಾದ ಜೀವನವನ್ನು ನಡೆಸಿದರು.

ಆಚಾರ್ಯರ ಪಾಂಡಿತ್ಯ ಅಸಾಧಾರಣವಾದುದು. ಅವರು ಶ್ರೇಷ್ಠವರ್ಗದ ಕವಿಗಳು. ಹಾಗೆಯೇ ‘ತಾರ್ಕಿಕ ಸಿಂಹ’ ಎಂದರೆ ತರ್ಕಬದ್ದವಾಗಿ ವಾದ ಮಾಡುವುದರಲ್ಲಿ ಅಸಮಾನರು. ಬಹಳ ದೊಡ್ಡ ಭಕ್ತರು. ಭಗವಂತನ ದಿವ್ಯನಾಮಗಳನ್ನು ಹೇಳುವಾಗಲೇ ಮೈಮರೆಯುತ್ತಿದ್ದರು. ಭಗವಂತನಲ್ಲಿ ಅವರ ಭಕ್ತಿ ಅಪಾರ. ಈ ಭಕ್ತಿಯ ಹಿನ್ನೆಲೆಯಲ್ಲಿ ಅವರ ಕವಿತ್ವವೂ ಪಾಂಡಿತ್ಯವೂ ಬೆಳಗುತ್ತಿದ್ದವು.

ಇವೆಲ್ಲದರ ಜೊತೆಗೆ ಅವರ ಕಠೋರವಾದ ವೈರಾಗ್ಯ ಆಶ್ಚರ್ಯಕರವಾದುದು. ಅವರ ಶಿಷ್ಯರ ಸಂಖ್ಯೆ ಬಹು ದೊಡ್ಡದು. ಊರಿನಲ್ಲೆಲ್ಲ ಅವರೆಂದರೆ ಬಹು ಗೌರವ. ಆದರೆ ಅವನ ಮನೆ ಬಡವರ ಮನೆ. ಅವರು ಬಳಸುತ್ತಿದ್ದ ಪಾತ್ರೆ ಪರಿಕರಗಳು ಕಳ್ಳನಿಗೂ ಬೇಡವಾದಂತಹವು. ಅವರು ಸೇವಿಸುತ್ತಿದ್ದ ಆಹಾರ ಪರಮ ಸಾತ್ವಿಕವಾದುದಾಗಿತ್ತು. ಅವರು ಸದ್ಗುಣಗಳ ನಿಧಿಯಾಗಿದ್ದರು.

ಭಗವಂತನ ಕರೆ ಬಂದಿದೆ

ಇಂಥ ಮಹಾನುಭಾವರಾದ ದೇಶಿಕರು ನೂರು ವರ್ಷಗಳ ಕಾಲ ಬಾಳಿದರು. ದೇಶಿಕರಿಗೆ ತಾವು ಈ ಲೋಕವನ್ನು ಬಿಟ್ಟು ಹೋಗುವ ಕಾಲ ಹತ್ತಿರ ಬರುತ್ತಿದೆ ಎನಿಸಿತು. ತಮ್ಮ ಶಿಷ್ಯರನ್ನು ಕರೆದು ಹೇಳಿದರು, ‘‘ಇಲ್ಲಿ ನಾನು ಮಾಡಬೇಕಾದ ಸೇವೆ ಮಾಡಿ ಆಯಿತು. ನನಗೆ ಭಗವಂತನ ಕರೆ ಬಂದಿದೆ. ಗುರುಗಳ ಅನುಗ್ರಹದಿಂದ ನನ್ನ ಕಾರ್ಯ ಸುಗಮವಾಗಿ ನಡೆಯಿತು. ಭಗವದ್ರಾಮಾನುಜರ ಸೂಕ್ತಿಗಳ ಅನುಸಂಧಾನವನ್ನು ನಿರಂತರವಾಗಿ ಮಾಡಿ ಆಯಿತು. ಸಜ್ಜನರ ಪ್ರಸನ್ನತೆ ಲಭಿಸಿತು. ದಯಾಮಯನೂ  ರಕ್ಷಕನೂ ಆದ ಸ್ವಾಮಿಯು ನನ್ನನ್ನು ತನ್ನಲ್ಲಿಗೆ ಇಲ್ಲಿಂದ ಕರೆಯಿಸಿಕೊಳ್ಳುವವನಾಗಿದ್ದಾನೆ.’’

ಈ ಮಾತನ್ನು ಕೇಳಿದ ಶಿಷ್ಯರ ಕಣ್ಣಲ್ಲಿ ನೀರು ತುಂಬಿಬಂತು. ತಮ್ಮ ನೆಚ್ಚಿನ ಗುರುಗಳು ತಮ್ಮನ್ನು ಅಗಲಿಹೋಗುವರಲ್ಲಾ ಎಂದು ಬಹಳವಾಗಿ ದುಃಖಿಸಿದರು. ಆಚಾರ್ಯರು ಅವರಿಗೆ ಸಮಾಧಾನ ಮಾಡಿದರು. ಸಾವಧಾನಚಿತ್ತರಾಗಿ ಒಬ್ಬೊಬ್ಬರೂ ಮಾಡಬೇಕಾದ ಕರ್ತವ್ಯಗಳನ್ನು ತಿಳಿಸಿಕೊಟ್ಟರು. ಉಪನಿಷತ್ತು ಗಳನ್ನೂ ಪ್ರಬಂಧಗಳನ್ನೂ ಪಾರಾಯಣ ಮಾಡುವಂತೆ ತಿಳಿಸಿದರು. ಆ ದಿವ್ಯ ಸೂಕ್ತಿಗಳನ್ನು ಶ್ರವಣಮಾಡುತ್ತಾ ತಮ್ಮ ಗುರುಗಳ ಪದದ್ವಯವನ್ನು ಮನದಲ್ಲಿ ನೆನೆಯುತ್ತಾ ವೇದಾಂತದೇಶಿಕರು ತಮ್ಮ ಭೌತಿಕ ಶರೀರವನ್ನು ತ್ಯಾಗ ಮಾಡಿ ಪರಮಪದವನ್ನು ಸೇರಿದರು. ಕಾರಣ ಪುರುಷನೊಬ್ಬನ ಸಮಾಪ್ತಿಯಾಯಿತು.

ಗ್ರಂಥ ರಚನೆ

ವೇದಾಂತದೇಶಿಕರು ನೂರು ವರ್ಷಗಳ ತುಂಬಿದ ಜೀವನವನ್ನು (೧೨೬೮ ರಿಂದ ೧೩೬೯) ಬಾಳಿದರು. ಧರ್ಮಪ್ರಚಾರಕ್ಕಾಗಿ ವಿರಾಮವಿಲ್ಲದೆ ದುಡಿದರು. ತಮ್ಮಲ್ಲಿ ಬಂದವರಿಗೆಲ್ಲಾ ಜ್ಞಾನೋಪದೇಶ ಮಾಡಿದರು. ಅಷ್ಟೇ ಅಲ್ಲದೆ ಜನರಿಗೆ ಎಂದೆಂದೂ ಉಪಕಾರವಾಗಲೆಂದು ಅನೇಕ ಗ್ರಂಥಗಳನ್ನೂ ಬರೆದರು. ಈಗ ಸಿಕ್ಕಿರುವಂತೆ  ೫೩ ತತ್ವಗ್ರಂಥಗಳನ್ನೂ ೫ ಕಾವ್ಯಗಳನ್ನೂ ೨೮ ಸ್ತೋತ್ರಗಳನ್ನೂ ೧೯ ತಮಿಳು ಕೃತಿಗಳನ್ನೂ ಇವರು ರಚಿಸಿದ್ದಾರೆ. ಇವರು ಬರೆದರೆಂದು ಹೇಳುವ ಇನ್ನೂ ಅನೇಕ ಕೃತಿಗಳು ನಷ್ಟವಾಗಿಹೋಗಿವೆ. ನಮ್ಮ ದೇಶದಲ್ಲಿ ನೂರಕ್ಕಿಂತ ಹೆಚ್ಚು ಗ್ರಂಥಗಳನ್ನು ಬರೆದಿರುವ ಅಸಾಧಾರಣವಾದ ಕೆಲವೇ ಮಂದಿ ಮಹಾನುಭಾವರಲ್ಲಿ ಇವರೂ ಒಬ್ಬರು.

ಉಪದೇಶ- ಅದರಂತೆ  ಆಚರಣೆ

ವೇದಾಂತದೇಶಿಕರು ಮನುಷ್ಯರು ಹೇಗೆ ಬಾಳಬೇಕು ಎಂದು ಜನಸಾಮಾನ್ಯರಿಗೆ ತಿಳಿಸಿಕೊಟ್ಟರು. ಅದಕ್ಕಿಂತ ಮುಖ್ಯವಾದ ಅಂಶ ಎಂದರೆ ತಾವು ಉಪದೇಶಿಸಿದ ತತ್ವಕ್ಕನುಸಾರವಾಗಿ ನಡೆದು ತೋರಿದರು ವೇದಾಂತದೇಶಿಕರು. ‘ರಾಗ ದ್ವೇಷಗಳಿಂದ ಮನಸ್ಸು ದೂರವಾಗಬೇಕು. ಮಾತಿನಲ್ಲಿ ಸುಳ್ಳು ಬರಬಾರದು. ಮತ್ತೊಬ್ಬರನ್ನು ಹಿಂಸಿಸಬಾರದು.’ ‘ಭಗವಂತನಲ್ಲಿ ಭಕ್ತಿಯನ್ನು ಬೇಡಬೇಕು, ಜ್ಞಾನವನ್ನು ಬೇಡಬೇಕು. ಬೇರೆ ಯಾವ ಪ್ರಯೋಜನವನ್ನೂ ಬೇಡಬಾರದು.’  ‘ಸಾತ್ವಿಕರನ್ನು ಸಂತೋಷಪಡಿಸಬೇಕು, ಸಜ್ಜನರ ನಡೆಯನ್ನು ಅನುಸರಿಸಬೇಕು. ಪಾಪಕ್ಕೆ ಹೆದರಬೇಕು. ಐಹಿಕವಾದ ಪ್ರಯೋಜನವನ್ನು ತೃಣಸಮಾನವಾಗಿ ಕಾಣಬೇಕು. ಭಗವಂತನಲ್ಲಿ ರಕ್ಷಣೆಯ ಭಾರವನ್ನು ವಹಿಸಬೇಕು. ಅವನ ದಯೆಗೆ ಕಾಯಬೇಕು.’ ಇದು ಅವರ ಉಪದೇಶ.

ಇದಕ್ಕನುಸಾರವಾಗಿ ಅವರು ಬಾಳಿದರು. ಸನ್ಮಾನವಾದಾಗ ಅವರು ಹಿಗ್ಗಲಿಲ್ಲ. ಅಪಮಾನವಾದಾಗ ಕುಗ್ಗಲಿಲ್ಲ. ಗಂಗೆಯ ಮಡುವಿನಂತೆ ಗಂಭೀರವಾಗಿ ಬಾಳಿದರವರು.

ಎಲ್ಲರಿಗೆ ಪೂಜ್ಯರು

ಅವರು ಶ್ರೀವೈಷ್ಣವರಿಗೆ ಮಾತ್ರ ಪೂಜ್ಯರಲ್ಲ. ವಿದ್ವತ್ತನ್ನೂ ಶುಭ್ರ ಜೀವನವನ್ನೂ ನಿರಹಂಕಾರವನ್ನೂ ಗೌರವಿಸುವ ಎಲ್ಲರಿಗೆ ಪೂಜ್ಯರು. ಅವರ ಕಾಲದಲ್ಲಿ ಅವರನ್ನು ವಾದದಲ್ಲಿ ಸೋಲಿಸಬಲ್ಲ ವಿದ್ವಾಂಸರೂ ತರ್ಕಬಲ್ಲವರೂ ಇರಲಿಲ್ಲ. ಆಚಾರ್ಯರು ಎಂದೂ ತಾವಾಗಿ ವಾದಮಾಡಲು ಬಯಸಿದವರಲ್ಲ. ವಾದದಲ್ಲಿ ಗೆದ್ದಾಗ ದೊಡ್ಡ ರೀತಿಯಲ್ಲಿ ನಡೆದುಕೊಂಡವರು. ತಮಗೆ ಅಪಮಾನವಾದಾಗಲೂ ಕೋಪ ಮಾಡಿಕೊಂಡವರಲ್ಲ. ಗಾಂಭೀರ್ಯ ದಿಂದ ದೊಡ್ಡ ರೀತಿಯಲ್ಲಿ ನಡೆದುಕೊಂಡವರು. ತಮ್ಮ ವಿದ್ವತ್ತು, ಜ್ಞಾನ ಇವನ್ನು ತಾವು ಕೀರ್ತಿ ಪಡೆಯಲು ಅಥವಾ ಹಣ ಸಂಪಾದಿಸಲು ಬಳಸಿದವರಲ್ಲ. ರಾಜನ ಆಸ್ಥಾನಕ್ಕೆ ಹೋಗಿ ನೆಮ್ಮದಿ, ಕೀರ್ತಿಗಳನ್ನು ಪಡೆಯುವ ಅವಕಾಶ ತಾನಾಗಿ ಬಂದರೂ ನಿರಾಕರಿಸಿದವರು. ತಮಗಾಗಿ ಅವರು ಬಯಸಿದ್ದು ಭಗವಂತನ ಕೃಪೆ, ಸಜ್ಜನರ ಸಹವಾಸ; ಇವನ್ನು ಬಿಟ್ಟು ಬೇರೇನನ್ನೂ ಬಯಸಲಿಲ್ಲ. ಭಗವಂತನ ಸೇವೆ, ಜನರ ಸೇವೆ ಇದಕ್ಕಾಗಿ ಬಾಳಿದ ಬಹೂದೊಡ್ಡ ವ್ಯಕ್ತಿ ವೇದಾಂತದೇಶಿಕರು.