ನಯಮುಗಾನು ದೃಕ್ಕು ನಾಳಂಬುಲೋನುಂಚಿ
ಭಯಮುಲೇಕ ವಟ್ಟಿ ಭ್ರಮಲನು ದ್ರೊಕ್ಕಿ
ಸ್ವಯಮುಗಾನು ಬುದ್ಧಿ ಸಾಧಿಂಚಿ ಚೂಡರಾ
ವಿಶ್ವದಾಭಿರಾಮ ವಿನುರ ವೇಮ ||

‘’ಕುರುಡು ನಂಬಿಕೆ, ಭ್ರಮೆಗಳನ್ನು ತುಳಿದು ನಿರ್ಭಯನಾಗಿ ನಿಂತರೆ ಅಂತರಾಳದಿಂದ ತಾನೇ ತಾನಾಗಿ ನೋಟ ಸ್ಪಷ್ಟವಾಗುತ್ತದೆ. ಸ್ವತಂತ್ರವಾಗಿ ಬುದ್ಧಿ ಗಳಿಸು’’- ಈ ಮಾತನ್ನು ಹೇಳಿದವನು ವೇಮನ. ತೆಲುಗು ಭಾಷೆಯಲ್ಲಿನ ಬಹು ಜನಪ್ರಿಯ ಕವಿ. ಯಾವ ಸಂಪ್ರದಾಯದ ಸಂಕೋಲೆಗೂ ಸಿಕ್ಕಿ ಬೀಳದೆ, ಬೆದರಿಕೆಗೆ ಜಗ್ಗದೆ, ವಿವೇಕ ಕಣ್ತೆರೆದು ಜ್ಞಾನವನ್ನು ಗಳಿಸಬೇಕು ಎಂದು ಅವನು ಉಪದೇಶಿಸಿದ.

ಕಿರಿದರಲ್ಲಿ ಹಿರಿದಾದ ಅರ್ಥ

ಕಿರಿಯ ವಾಕ್ಯದಲ್ಲಿ ಹಿರಿದಾದ ಅರ್ಥವನ್ನು ತುಂಬಿಸಿ ಹೇಳುವ ಚಾತುರ್ಯದಲ್ಲಿ ವೇಮನನಿಗಿಂತ ಶ್ರೇಷ್ಠ ಕವಿ ತೆಲುಗು ಸಾಹಿತ್ಯದಲ್ಲೇ ಬೇರೆ ಯಾರೂ ಇಲ್ಲ. ವೇಮನ ಬಳಸಿದ ‘’ಆಟವೆಲದಿ’’ ಛಂದಸ್ಸು ನಾಲ್ಕು ಸಾಲುಗಳ ಪದ್ಯ – ಇದೇ ತುಂಬಾ ಕಿರಿಯದು ಎಂದು ಕವಿಗಳ ಅಭಿಪ್ರಾಯ. ಅದರಲ್ಲೂ ಒಂದು ಸಾಲನ್ನು ‘’ವಿಶ್ವದಾಭಿರಾಮ ವಿನುರ ವೇಮ’’ ಎಂದು ಬಳಸಿಕೊಂಡು ಉಳಿದ ಮೂರೇ ಸಾಲಿನಲ್ಲಿ ವಾಮನನಂತೆ ಎಲ್ಲವನ್ನೂ ಆವರಿಸಿದ ತ್ರಿವಿಕ್ರಮ. ಜನರ ಮನಸ್ಸಿಗೆ ಹತ್ತಿರವಾಗಿರಬೇಕಾದರೆ ಅವರು ಸುಲಭವಾಗಿ ತಿಳಿಯುವಂಹ ಸಾಮಾನ್ಯ ಭಾಷೆಯನ್ನೇ ಬಳಸಬೇಕೆಂದು ಇಂದಿನ ವಿದ್ವಾಂಸರು ಇತ್ತೀಚೆಗೆ ತಮ್ಮ ಸಾಹಿತ್ಯಕ್ಕೆ ತಮ್ಮ ಆಡುಭಾಷೆಯನ್ನು ಬಳಸುತ್ತಿದ್ದಾರೆ. ಆದರೆ ವೇಮನ ತನ್ನ ಕಾಲದಲ್ಲಿಯೇ ಆಡುಭಾಷೆಯನ್ನು ತನ್ನ ಪದ್ಯಭಾಷೆಯನ್ನಾಗಿಸಿಕೊಂಡಿದ್ದ! ತೆಲುಗು ಸಾಹಿತ್ಯದಲ್ಲಿ ಬಳಕೆಯ ಭಾಷೆಯ ಸೊಗಸನ್ನು ಪದ್ಯರಚನೆಗೆ ಅಂಟಿಸಿದ ಮೊದಲಿಗೆ ವೇಮನ.

ಜನರ ಆಡುಭಾಷೆಯಲ್ಲಿಯೇ ಹೇಳಿದ ಅನೇಕ ಪದ್ಯಗಳು ಇಂದೂ ಬಳಕೆಯಲ್ಲಿ ಸೇರಿಕೊಂಡು ಗಾದೆಗಳಂತೆ ಚಲಾವಣೆಯಲ್ಲಿವೆ – ಕಂಚು ಮ್ರೋಗಿನಟ್ಲು ಕನಕಂಬು ಮ್ರೋಗುನಾ? (ಕಂಚಿನಂತೆ ಚಿನ್ನ ಸದ್ದು ಮಾಡಬಲ್ಲುದೇ?); ಕುಕ್ಕವಂಟಿ ಆಶ ಕೂರ್ಚುಂಡನೀಯದು (ಆಸೆ ನಾಯಿಯಂತೆ, ಒಂದೆಡೆ ಇರಗೊಳಿಸದು); ಧನಮದೆವರಿ ಸೊಮ್ಮು? ಧರ್ಮವೇ ತನ ಸೊಮ್ಮು (ಗಳಿಸಿದ ಹಣವೆಲ್ಲ ಯಾರದೊ! ದಾನ ಮಾಡಿದ್ದೇ ತನ್ನದು); ಪೆದ್ದಲು ಸೂರುಮನ್ನ ಪೆನುಮಂಟಲೆಗೆಯವಾ? (ಹಿರಿಯರನ್ನು ನೋವಿಗೀಡು ಮಾಡಿದರೆ ಪ್ರಳಯಾಗ್ನಿ ಪ್ರಾರಂಭವಾಗದೇ?) ಈ ರೀತಿ ಚಿರಂತನತೆ, ನಿತ್ಯನೂತನತ್ವ ಸಾಧಿಸಿದ ಕವಿ ತೆಲುಗು ಸಾಹಿತ್ಯದಲ್ಲಿ ಬೇರೊಬ್ಬನಿಲ್ಲ.

ಇಂತಹ ವ್ಯಕ್ತಿ ವೇಮನನನ್ನು ಇತ್ತೀಚಿನವರೆಗೂ ಸಾಮಾನ್ಯ ಕವಿ ಎಂದೂ ಗಣನೆಗೇ ತೆಗೆದುಕೊಂಡಿರಲಿಲ್ಲ. ವೇಮನನ ಕೃತಿಗಳಿಗೆ ಅಮರತ್ವ ಕೊಟ್ಟ ಜನತೆಯೂ ಅವನನ್ನು ಕವಿ ಎನ್ನುವುದಕ್ಕಿಂತಲೂ ಹೆಚ್ಚಾಗಿ ‘’ಯೋಗಿ’’ ‘’ಪುಣ್ಯ ಪುರಷ’’, ‘’ಅವತಾರ ಪುರುಷ’’ ಎಂದು ಪೂಜಿಸುತ್ತಿದ್ದರು. ಇಂದಿಗೂ ವೇಮನನ ಶಿಷ್ಯಪರಂಪರೆ, ಮಠ ಎಲ್ಲವೂ ಇವೆ.

ಜನರ ಬಾಯಲ್ಲೇ ಉಳಿದುಕೊಂಡು ಬಂದಿದ್ದ ವೇಮನನ ಪದ್ಯಗಳನ್ನು ಮೊದಲ ಬಾರಿಗೆ ೧೮೨೯ ರಲ್ಲಿ ಸಂಗ್ರಹಿಸಿ, ಸಂಪಾದಿಸಿ, ಇಂಗ್ಲಿಷಿಗೆ ಅನುವಾದ ಮಾಡಿ ಪ್ರಕಟಿಸಿದ್ದು ಚಾರ್ಲ್ಸ್‌ಫಿಲಿಪ್ ಬ್ರೌನ್ ಎಂಬಾತ. ಅಂದಿನಿಂದ ಅನೇಕ ಸಂಗ್ರಹಗಳು ಪ್ರಕಟವಾಗಿವೆ. ಮುಡಿದಂತೆ ವೇಮನನ ಪದ್ಯಗಳ ಮೌಲ್ಯವನ್ನು ಪುನನಿರ್ಣಯಿಸುತ್ತಿದ್ದಾರೆ. ಈಗ ವೇಮನ ಮಹಾಕವಿ ಎಂದು ಎಲ್ಲರೂ ಒಪ್ಪುತ್ತಾರೆ.

ಮನೆತನ

ವೇಮನನ ಬಾಳಿನ ಬಗ್ಗೆ ತಿಳಿಯಲು ಸಾಹಿತ್ಯವಾಗಲಿ, ಚರಿತ್ರೆಯಾಗಲಿ ಹೆಚ್ಚು ನೆರವು ನೀಡದು. ಜನರ ಬಾಯಲ್ಲುಳಿದು ಬಂದಿರುವ ಕಥೆಗಳಿಂದಲೇ ಅವನ ಬಾಳ ಕಥೆ ಕಟ್ಟಬೇಕಾಗುತ್ತದೆ.

ಊರು ಕೊಂಡವೀಡು ಎನಿಕಿ ಪಶ್ಚಿಮ ವೀಧಿ
ಮೂಗಚಿಂತಪಲ್ಲೆ ಮೊದಟಿ ಇಲ್ಲು
ಎಡ್ಡಿ ರೆಡ್ಡಿ ಕುಲಮದೇಮನಿ ತೆಲ್ಪುದು
ವಿಶ್ವದಾಭಿರಾಮ ವಿನುರ ವೇಮ ||

ಇದರಂತೆ ವೇಮನನ ಹುಟ್ಟೂರು ಮೂಗಚಿಂತಪಲ್ಲೆ. ಈ ಗ್ರಾಮ ಇರುವುದು ಆಂಧ್ರಪ್ರದೇಶದ ಚಂದ್ರಗಿರಿ (ಚಿತ್ತೂರು ಜಿಲ್ಲೆ) ತಾಲೂಕಿನಲ್ಲಿ, ಕೊಂಡವೀಡು ಆನಂತರದ ಬೆಳವಣಿಗೆಯ ಪ್ರದೇಶ. ವೇಮನನ ಅಣ್ಣ ಗಂಡಿಕೋಟದ ಕೋಟೆಯ ಮೇಲ್ವಿಚಾರಣಾಧಿಕಾರಿಯಾಗಿದ್ದ ಎಂಬುದನ್ನೂ ಸೂಚಿಸುವ ಪದ್ಯ ಒಂದಿದೆ. ಇವುಗಳಿಂದೊಕ್ಕಲುತನ ನಡೆಸುವುದರಲ್ಲಿ ಹೆಸರಾದ ಪಂಗಡಕ್ಕೆ ಸೇರಿದ ವೇಮನನ ಹಿರಿಯರು ರಾಜ್ಯಾಡಳಿತ ನಡೆಸುತ್ತಿದ್ದರು ಎನಿಸುತ್ತದೆ.

ತಂದೆ ಕೊಮರಗಿರಿ ವೇಮಾರೆಡ್ಡಿ. ಅಣ್ಣ ವ್ಯಾಪಾರಿ ವೆಂಕಾರೆಡ್ಡಿ. ತಾಯಿ ಮಲ್ಲಮ್ಮ. ಅತ್ತಿಗೆ ನರಸಾಂಬ. ಅನವೇಮಾ ರೆಡ್ಡಿ ಇವನ ಪೂರ್ಣ ಹೆಸರು. ಇವರ ಮನೆತನದವರಿಗೆಲ್ಲಾ ವೇಮ ಎಂದು, ವ್ಯಾಪಾರಿ ಎಂದು ಹೆಸರು ಅಂಟಿಬಂದಿದೆ. ಇದು ಹೇಗೆ ಎಂಬುದಕ್ಕೆ ಒಂದು ಕಥೆ ಹೇಳುತ್ತಾರೆ.

ಚಿನ್ನದ ಆಸೆ

ನೂರಾರು ವರ್ಷಗಳ ಹಿಂದೆ ವೇಮ ಎಂಬ ಹೆಸರಿನ ವ್ಯಾಪಾರಿಯೊಬ್ಬನಿದ್ದ. ಅವನಿಗೆ ಚಿನ್ನ ತಯಾರಿಸಬೇಕೆಂಬ ಹುಚ್ಚು. ಚಿನ್ನದ ಆಸೆ ಯಾರಿಗಿಲ್ಲ? ಸಿರಿತನ ಯಾರಿಗೆ ಬೇಡ? ಮಲ್ಲಿಕಾರ್ಜುನನ ನೆಲೆಯಾದ ಶ್ರೀಶೈಲ ಪರ್ವತ ಶಿವಭಕ್ತರಿಗೆ ಪುಣ್ಯ ಸ್ಥಳ. ಅದರ ಸು‌ತ್ತಲಿನ ಕಾಡು ತುಂಬಾ ದಟ್ಟವಾಗಿತ್ತು. ಕ್ರೂರ ಮೃಗಗಳ ಹಾವಳಿ. ಅಲ್ಲಿಯೇ ಪರಶುವೇದಿಯ ಕುಂಡವಿದೆ ಎಂದು ಜನ ಹೇಳಿಕೊಳ್ಳುತ್ತಿದ್ದರು. ಪರಶುವೇದಿ ಕಬ್ಬಿಣಕ್ಕೆ ಸೋಂಕಿದರೆ ಚಿನ್ನವಾಗಿ ಪರಿವರ್ತಿಸುತ್ತದೆ ಎಂದೂ ನಂಬಿಕೆ. ಶಿವರಾತ್ರಿಗಳಲ್ಲಿ ಮಾತ್ರ ಯಾತ್ರಾರ್ಥಿಗಳು ಜಾಗರಣೆಗೆ ಬಂದು ಶಿವನಿಗೆ ಪೂಜೆ ಸಲ್ಲಿಸುತ್ತಿದ್ದರು. ತಂಡತಂಡಗಳಾಗಿ ಮಾತ್ರ ಜನ ಅಲ್ಲಿಗೆ ಬರುತ್ತಿದ್ದರು. ಒಂಟಿಯಾಗಿ ಯಾತ್ರೆ ನಡೆಸಲು ಕಾಡು ಪ್ರಾಣಿಗಳ ಅಂಜಿಕೆ. ವ್ಯಾಪಾರಿ ವೇಮನೂ ಯಾತ್ರಾರ್ಥಿಯಾಗಿದ್ದ. ಅವನಿಗೆ ಅಲ್ಲಿಯ ಪೂಜೆಗಿಂತಲೂ ಆ ಕಾಡಿನಲ್ಲಿ ಪರಶುವೇದಿಯ ಕುಂಡವನ್ನು ಹುಡುಕುವ ಆಸೆ ಹೆಚ್ಚಾಗಿತ್ತು.

ಜಾಗರಣೆ, ಭಜನೆಗಳ ನಂತರ ಯಾತ್ರಿಕರು ಹಿಂದಕ್ಕೆ ಹೋಗುತ್ತಿದ್ದರು. ವೇಮ ಮಾತ್ರ ಅತಿತ್ತ ಸುತ್ತಾಡುತ್ತಾ ದೇವಾಲಯದಲ್ಲಿಯೇ ಕಾಲ ಕಳೆಯುತ್ತಿದ್ದ. ಅವನ ಪ್ರಶ್ನೆಗಳು, ತೀಕ್ಷ್ಣ ನೋಟ, ಅನುಮಾನಕ್ಕೆಡೆಕೊಡುವ ಓಡಾಟ ಇವನ್ನು ಗುರುತಿಸಿದ ದೇವಾಲಯದ ಹಿರಿಯರು ಒಡನೆಯೇ ಅಲ್ಲಿಂದ ಹೋಗುವಂತೆ ಅಪ್ಪಣೆ ಮಾಡಿದರು. “ಸ್ವಾಮಿ, ನಾನೂ ಶಿವಭಕ್ತ. ಮಲ್ಲಿಕಾರ್ಜುನನ ಸೇವೆಗಾಗಿ ನೂರಾರು ಮೈಲಿಗಳಿಂದ ಬಂದವ. ಆಸೆ ತೀರುವತನಕ ದೇವರ ಸೇವೆ ಮಾಡುವ ಅವಕಾಶ ಕರುಣಿಸಿ” ಎಂದು ಪ್ರಾರ್ಥಿಸಿದ.

ಅವನ ಮೊರೆಗೆ ಕರಗಿದ ಹಿರಿಯರು, “ದೇವಸ್ಥಾನದ ಉತ್ತರ ದಿಕ್ಕಿಗೆ ಮಾತ್ರ ಹೋಗಬೇಡ. ಕಾಡು ತುಂಬಾ ದಟ್ಟವಾಗಿದೆ. ಕ್ರೂರ ಮೃಗಗಳ ಕಾಟವು ಅಲ್ಲಿ ಹೆಚ್ಚು” ಎಂದು ಎಚ್ಚರಿಸಿದರು.

ಈ ಸಾಮಾನ್ಯ ಎಚ್ಚರಿಕೆಯೇ ವ್ಯಾಪಾರಿಯ ಪಾಲಿಗೆ ದಿಕ್ಸೂಚಿಯಾಯಿತು. ಎಲ್ಲರ ಕಣ್ತಪ್ಪಿಸಿ ಉತ್ತರ ದಿಕ್ಕಿನ ಕಾಡನ್ನು ಪ್ರವೇಶಿಸಿದ. ಹೆಜ್ಜೆ ಹಾಕಿದಂತೆಲ್ಲಾ ಸಾಸಿವೆ ಕಾಳನ್ನು ಚೆಲ್ಲುತ್ತಾ ಆ ಕಾಡಿನಲ್ಲಿ ಪರಶುವೇದಿ ಕುಂಡಕ್ಕಾಗಿ ಅಲೆದ. ಭಯಂಕರವಾದ ಕಾಡು. ಅಕ್ಷಯನಿಧಿಯಾಗಬಲ್ಲ ಪರಶುವೇದಿಗಾಗಿ ದಿನಗಟ್ಟಲೆ ಜೀವದ ಹಂಗನ್ನೇ ತೊರೆದು ತಡಕಾಡುತ್ತಿದ್ದ. ಕೊನೆಗೂ ಕಬ್ಬಿಣದ ಸರಳನ್ನು ಚಿನ್ನವನ್ನಾಗಿ ಪರಿವರ್ತಿಸುವ ಪರಶುವೇದಿ ಕುಂಡ ಸಿಕ್ಕಿತು. ಎರಡು ಮಣ್ಣಿನ ಗಡಿಗೆಗಳಲ್ಲಿ ಆ ನೀರನ್ನು ತುಂಬಿಕೊಂಡ.

ದಟ್ಟವಾದ ಕಾಡಿನಿಂದ ಹೊರ ಬೀಳುವುದು ಇನ್ನೊಂದು ಸಮಸ್ಯೆ. ಅದಕ್ಕೆಂದೇ ಬರುವಾಗ ಹಾದಿಯಲ್ಲೆಲ್ಲಾ ಸಾಸಿವೆ ಚೆಲ್ಲಿದ್ದನಲ್ಲ? ಸಾಸಿವೆ ಗಿಡಗಳ ಗುರುತಿನಿಂದಹೊರಬಂದು ಸಾಮಾನ್ಯ ಜನರು ಬಳಸುತ್ತಿದ್ದ ಹಾದಿ ಬಿಟ್ಟು ಶ್ರೀಶೈಲ ಪರ್ವತದಿಂದ ಕೆಳಕ್ಕೆ ಬಂದ. ಹನುಮಕೊಂಡ ಎಂಬ ಹಳ್ಳಿ ಸೇರುವ ವೇಳೆಗೆ ಕತ್ತಲಾಗಿತ್ತು. ದೊಂತಿ ಅಲಿಯರೆಡ್ಡಿ ಎಂಬ ರೈತನ ಕೊಟ್ಟಿಗೆಯಲ್ಲಿ ಪರಶುವೇದಿ ತುಂಬಿಕೊಂಡಿದ್ದ ಕುಂಡಗಳನ್ನು ಇರಿಸಿ ಊಟಕ್ಕಾಗಿ ತನ್ನ ಜಾತಿಯವರ ಮನೆ ಹುಡುಕಿ ಹೊರಟ.

ಅಲಿಯರೆಡ್ಡಿ ಏನೋ ಹುಡುಕುತ್ತಾ ಕೊಟ್ಟಿಗೆಗೆ ಬಂದ. ಇದ್ದಕ್ಕಿದ್ದಂತೆಯೇ ಗಡಿಗೆಗಳ ಬಳಿ ಇದ್ದ ನೇಗಿಲುಗಳು ಚಿನ್ನದಂತೆ ಹೊಳೆಯುತ್ತಿದ್ದುದನ್ನು ನೋಡಿದ. ಗಡಿಗೆಯಲ್ಲಿರುವ ನೀರಿನಿಂದ ಕಬ್ಬಿಣ ಚಿನ್ನವಾಗುತ್ತದೆ ಎಂಬುದನ್ನು ಗುರುತಿಸಿದ. ಕೊಟ್ಟಿಗೆಯಿಂದ ಹಸುಗಳನ್ನು ಹೊರಕ್ಕೋಡಿಸಿ, ಪರಶುವೇದಿಯ ಗಡಿಗೆಗಳನ್ನು ಒಳಕ್ಕೆ ತೆಗೆದುಕೊಂಡು ಹೋದ. ಕೊಟ್ಟಿಗೆಗೆ ಬೆಂಕಿ ಬಿತ್ತು. ದೂರದಿಂದ ಉರಿಯನ್ನು ಕಂಡ ವ್ಯಾಪಾರಿ ವೇಮನ ಓಡಿ ಬಂದ. ತನ್ನ ಸಾಹಸದ ಫಲವಾಗಿ ದೊರೆತಿದ್ದ ಅಮೂಲ್ಯ ದ್ರವ ಬೆಂಕಿಯಲ್ಲಿ ನಾಶವಾಗುತ್ತಿದೆ ಎಂದು ಅದನ್ನು ಹೊರತರಲು ಬೆಂಕಿಗೆ ನುಗ್ಗಿದ. ಕೊಟ್ಟಿಗೆಯೊಂದಿಗೇ ಬೂದಿಯಾದ.

ಲೋಕರೀತಿಯನ್ನು ಬಲ್ಲ ಜಾಣ ಅಲಿಯರೆಡ್ಡಿ ಇದ್ದಕ್ಕಿದ್ದಂತೆಯೇ ಸಿರಿವಂತನಾಗದೆ ಕ್ರಮಕ್ರಮವಾಗಿ ತನ್ನ ಸ್ಥಿತಿಯನ್ನು ಉತ್ತಮಪಡಿಸಿಕೊಂಡ. ಆಸ್ತಿ ಹೆಚ್ಚಿಸಿದ. ಪಶು ಸಂಪತ್ತು ವೃದ್ಧಿಗೊಳಿಸಿದ. ಸಿರಿ ಬೆಳೆದಂತೆ ಅಲಿಯ ರೆಡ್ಡಿಯ ಚಿಂತೆ, ದುಃಖ ಹೆಚ್ಚಿತು. ಮಕ್ಕಳು ಇದ್ದಕ್ಕಿದ್ದಂತೆಯೇ ಸಾಯುತ್ತಿದ್ದರು. ಉಳಿದವ ಒಬ್ಬನೇ ಮಗ. ಅವನಿಗೇನಾದರೂ ಆದರೆ ಎಂಬ ಭಯ. ತನ್ನ ಮನದ ಸಂಕಟ, ಅದಕ್ಕೆ ಕಾರಣ ಯಾರೊಂದಿಗೂ ಹೇಳಿಕೊಳ್ಳಲಾರದೆ ತಾನೇ ಅನುಭವಿಸುತ್ತಿದ್ದ. ಚಿಂತೆ, ದುಃಖ, ಭಯಗಳಿಂದ ಬಳಲಿದ ಅಲಿಯರೆಡಿಗೆ ಒಮ್ಮೆ ಒಂದು ಕನಸಾಯಿತು. ವ್ಯಾಪಾರಿ ವೇಮ ಕನಸಿನಲ್ಲಿ ಕಾಣಿಸಿಕೊಂಡ. ಅಲಿಯರೆಡ್ಡಿ ಅವನ ಕಾಲನ್ನು ಹಿಡಿದು ತನ್ನ ತಪ್ಪನ್ನು ಮನ್ನಿಸಿ ತನ್ನ ವಂಶವನ್ನು ಆವರಿಸಿರುವ ಶಾಪದಿಂದ ರಕ್ಷಿಸಬೇಕೆಂದು ಪ್ರಾರ್ಥಿಸಿದ. ವೇಮ, “ನನ್ನ ವಿಗ್ರಹ ಚಿನ್ನದಲ್ಲಿ ಮಾಡಿಸಿ ಅದನ್ನೇ ಕುಲದೈವವೆಂದು ಪೂಜಿಸಬೇಕು. ಎಲ್ಲಾ ಗಂಡು ಮಕ್ಕಳಿಗೂ ನನ್ನ ಹೆಸರಿರಿಸಬೇಕು. ಹೀಗೆ ಮಾಡುವುದರಿಂದ ವಂಶಾಭಿವೃದ್ಧಿ ಮಾತ್ರವಲ್ಲದೆ ನೂರು ವರ್ಷಗಳ ಕಾಲ ರಾಜ್ಯಭಾರ ನಡೆಸುವುದು ಸಾಧ್ಯವಾಗುತ್ತದೆ” ಎಂದ.

ಅಲಿಯರೆಡ್ಡಿ ಹಾಗೆಯೇ ಮಾಡಿದ. ಮಗ ಪ್ರೊಲಯ ರೆಡ್ಡಿ ಪ್ರೊಲಯ ವೇಮಾರೆಡ್ಡಿಯಾದ. ಪರಿಸರ ಬದಲಿಸಲೆಂದು ಕೊಂಡವೀಡು ಸೀಮೆಗೆ ಬಂದ. ಅಲಿಯ ವೇಮಾರೆಡ್ಡಿ ಸಾಯುವ ವೇಳೆಗೆ ಮಗ ಪ್ರೊಲಯ ವೇಮಾರೆಡ್ಡಿ ಕೊಂಡ ವೀಡು ಸೀಮೆಯ ಅರಸನಾಗಿದ್ದ. ೧೩೨೮ ರಲ್ಲಿ ಕಾಕತೀಯ ಸಾಮ್ರಾಜ್ಯದ ಒಡಕನ್ನು ಬಳಸಿಕೊಂಡು ಕೊಂಡವೀಡು ಸ್ವತಂತ್ರ ರಾಜ್ಯವಾಯಿತು. ಹನ್ನೊಂದು ವರ್ಷಗಳ ನಂತರ ತಮ್ಮ ಅನಮೋಲ ವೇಮಾರೆಡಿ ಪಟ್ಟಕ್ಕೆ ಬಂದ. ೧೩೭೦ ರಲ್ಲಿ ರಾಜಕುಮಾರ ಕೊಮರಗಿರಿ ವೇಮನನ ಪರವಾಗಿ ಆತನ ಚಿಕ್ಕಪ್ಪ ರಾಜ್ಯ ಸೂತ್ರ ನಿರ್ವಹಿಸುತ್ತಿದ್ದ. ೧೩೮೨ ರಲ್ಲಿ ಕೊಮರಗಿರಿ ವೇಮ ಪಟ್ಟಕ್ಕೆ ಬಂದ. ಆತನಿಗೆ ಇಬ್ಬರು ಮಕ್ಕಳು – ವ್ಯಾಪಾರಿ ವೆಂಕಾರೆಡ್ಡಿ ಮತ್ತು ಅನವೇಮಾ ರೆಡ್ಡಿ. ವೇಮಾರೆಡ್ಡಿಯೇ ಕವಿ ವೇಮನ.

ಇದರಲ್ಲಿ ನಿಜ ಎಷ್ಟು ಎಂದು ಹೇಳುವುದು ಕಷ್ಟ.

ತಾಯಿಯಿಲ್ಲದ ಹುಡುಗ

ವೇಮನನ ಕೃತಿಗಳನ್ನು ಮೊದಲಬಾರಿಗೆ ಸಂಪಾದಿಸಿದ ಬ್ರೌನ್ ಅವರು ಅವನ ಜೀವನದ ವಿವರಗಳನ್ನೂ ಕಂಡು ಹಿಡಿಯಲು ಪ್ರಯತ್ನಿಸಿದರು. ಅಂದಿನ ವಿದ್ಯಾವಂತರಿಗೆ ವೇಮನ ಎಂದರೆ ಲೆಕ್ಕವಿಲ್ಲ. ಅವನು ತನ್ನ ಮೊನಚಾದ ನುಡಿಗಳಿಂದ ಎಲ್ಲ ಜಾತಿಗಳವರ ದ್ವೇಷನ್ನು ಗಳಿಸಿದ್ದ. ಬ್ರೌನ್ ಅವರು ಮೊದಲು ಪ್ರಕಟಿಸಿದ್ದ ಕೃತಿಯ ಐದನೂರು ಪ್ರತಿಗಳಲ್ಲಿ ಪುಸ್ತಕ ಭಂಡಾರಗಿಗೆ, ಅವರ ಮಿತ್ರರಿಗೆ ಸಂದಿದ್ದ ಐವತ್ತು ಪ್ರತಿಗಳ ವಿನಾ ಉಳಿದ ಪ್ರತಿಗಳನ್ನೆಲ್ಲಾ ನಾಶ ಗೊಳಿಸಲಾಯಿತು ಎಂಬುದರಿಂದಲೇ ಅಂದಿನ ಜನರು ವೇಮನನ ಬಗ್ಗೆ ತಳೆದಿದ್ದ ನಿಲುವು ಸ್ಪಷ್ಟವಾಗುತ್ತದೆ. ಅಂತಹ ಸ್ಥಿತಿಯಲ್ಲಿ ಹೆಚ್ಚು ಮಾಹಿತಿ ಸಂಗ್ರಹಿಸಲು ಸಾಧ್ಯವಾಗಲಿಲ್ಲ ವೇನೋ. ಆದರೂ ವೇಮನನ ಅಣ್ಣ ಗಂಡಿಕೋಟೆಯ ಆಳ್ವಿಕೆಯನ್ನು ನಿರ್ವಹಿಸುತ್ತಿದ್ದ ಎಂಬುದನ್ನು ಅವರು ನಿಷ್ಕರ್ಷವಾಗಿ ಹೇಳಿದ್ದಾರೆ.

ವೇಮನ ಅರಸು ಮನೆತನಕ್ಕೆ ಸೇರಿದವನೋ ಅಲ್ಲವೋ, ಅಂತೂ ಸಂಪನ್ನ ಕುಟುಂಬಕ್ಕೆ ಸೇರಿದವ. ಅವರ ಪದ್ಯಗಳಿಗೆ ಅವನ ಅನುಭವ ಭೂಮಿಯಾಗಿ ಕಾಣಿಸುವುದು ರೈತನ ಪ್ರಪಂಚ. ಅವನ ಹುಟ್ಟೂರು ಮೂಗಚಿಂತ ಪಲ್ಲೆಯಾದರೂ ಬೆಳೆದಿದ್ದು ಕೊಂಡವೀಡುವಿನಲ್ಲಿ.

ವೇಮನನ ಕಾಲದ ಬಗ್ಗೆ ಹಲವು ರೀತಿಯ ಅಭಿಪ್ರಾಯಗಳಿವೆಯಾದರೂ ೧೬೫೨ ರಲ್ಲಿ ಹುಟ್ಟಿದ್ದು ಎಂಬುದನ್ನು ಒಪ್ಪಬಹುದು. ನಾಲ್ಕಾರು ಮಂದಿಯನ್ನು ಪೋಷಿಸುವ ಚೈತನ್ಯ ಇದ್ದು ಕುಟುಂಬಕ್ಕೆ ಸೇರಿದವ. ಅಕ್ಕರೆಯ ತಾಯಿಯನ್ನು ಚಿಕ್ಕಂದಿನಲ್ಲಿಯೇ ಕಳೆದುಕೊಂಡಿದ್ದ. ತಂದೆ ಮತ್ತೆ ಮದುವೆ ಯಾದ. ಮಲತಾಯಿ ಬಂದಾಗ ’ನನ್ನ ತಾಯಿ ಸಾಯಲೆಂದೇ ತಂದೆ ಕಾದಿದ್ದನೇ?’ ಎನಿಸಿತು ವೇಮನನಿಗೆ.

ತಾಯಿಯ ಅಗಲಿಕೆಯ ನೋವಿನಿಂದ ಖಿನ್ನನಾಗಿದ್ದ ವೇಮನ ಹೊಸ ತಾಯಿಗೆ ಹಿಡಿಸಲಿಲ್ಲವೇನೋ? ಚಿತ್ರಹಿಂಸೆ ಪ್ರಾರಂಭಿಸಿದಳು. ತಂಗಳೂಟ, ಬೆವರು ಸುರಿಯುವಂತೆ ಕೆಲಸ, ಇದರೊಂದಿಗೆ ತಂದೆಯಿಂದ ಬೈಗಳು. ಇಷ್ಟೆಲ್ಲವನ್ನೂ ಅವನು ಸಹಿಸುತ್ತಿದ್ದದ್ದು ಆಕೆ ತನ್ನ ತಾಯಿಯ ಸ್ಥಾನದಲ್ಲಿರುವಳಲ್ಲಾ ಎಂಬುದಕ್ಕಾಗಿ.

ವೇಮನನ ವಿದ್ಯಾಭ್ಯಾಸ ಸಾಮಾನ್ಯವೆಂದರೂ ಪುರಾಣ, ವೇದ, ಧರ್ಮಶಾಸ್ತ್ರ, ಭಾರತ, ಭಾಗವಂತ, ರಾಮಾಯಣಗಳನ್ನೆಲ್ಲ ಜಾಲಾಡಿ ನೋಡಿರುವವ ಎನಿಸುತ್ತದೆ. ಇವುಗಳ ಸಮಗ್ರ ಜ್ಞಾನ ಅವನ ಪದ್ಯಗಳಲ್ಲಿ ತುಂಬಿದೆ.

ಭಾರತದ ಸಾರವನ್ನು ಭಟ್ಟಿ ಇಳಿಸಿರುವುದು ನೋಡಿ:

ಸಾಟಿವಾರು ನಿನ್ನು ಸಾಧಂಪಗಾಲೇರು
ದೈವಮೆಪುಡು ನೀಕು ತಪ್ಪಕುನ್ನ
ಭಾರತಂಬುಲೋನಿ ಪರಮಾರ್ಥಮಿದೇ ಕದಾ
ವಿಶ್ವದಾಭಿರಾಮ ವಿನುರ ವೇಮ ||

‘’ದೈವಬಲ ನಿನಗಿಲ್ಲದಿದ್ದರೆ ಒಡನಾಡಿಗಳು, ಸಮಾನರು, ಬಂಧುಗಳು ಕೂಡಿ ಪ್ರಯತ್ನಿಸಿದರೂ ನಿನ್ನನ್ನು ಉಳಿಸಿ ಕೊಳ್ಳಲಾರು ಎಂಬುದೇ ಭಾರತದ ಅಂತರಾರ್ಥ.’

ವೇಮನ ಬಾಯಿಗೆ ಬಂದುದನ್ನು ಆಡಿದವನಲ್ಲ. ಮಾತಿನ ಹಿಂದೆ ಅಪಾರ ಅನುಭವ, ಜ್ಞಾನ, ವೇದ ವೇದಾಂತಗಳ ತಿಳಿವಿನ ಸಾಗರವೇ ಇದೆ ಎನಿಸುತ್ತದೆ. ಈ ಅಪಾರ ಜ್ಞಾನ ವೇಮನ ಓದಿ ಸಂಪಾದಿಸಿದ ಎನ್ನಲು ಯಾವ ಆಧಾರವೂ ಸಿಗದು. ಅಂತಹ ಜ್ಞಾನವನ್ನು ಪುಸ್ಕತದ ಬದನೇಕಾಯಿ ಎಂದೂ ನಗೆಮಾಡಿದ್ದಾನೆ.

ಪ್ರೀತಿಗೆ ಸಿಕ್ಕಿದ

ವೇಮನ ಬಾಲ್ಯವನ್ನು ಉಂಡಾಡಿಯಾಗಿಯೇ ಕಳೆದಿರಬೇಕು. ಮನೆಯಲ್ಲಿ ಅವನನ್ನು ಅಕ್ಕರೆಯಿಂದ ಕಾಣುತ್ತಿದ್ದಾಕೆ ಅತ್ತಿಗೆ ಒಬ್ಬಳೇ. ಉಳಿದವರೆಲ್ಲರೂ ಅವನನ್ನು ನಿರುಪಯೋಗಿ ಎಂದೇ ಲೆಕ್ಕಹಾಕಿದ್ದರು. ಅವನ ಸಂಗೀತಪ್ರಿಯತೆಯೋ, ಯೌವನದ ಕಾವೋ, ಮನೆಯ ಮುಜುಗರವೋ ಅಂತೂ ಯುವತಿಯೊಬ್ಬಳ ಪರಿಚಯವಾಯಿತು. ಅವಳನ್ನು ಪ್ರೇಮಿಸಿದ.

ಚೆಪ್ಪುಲೋನಿ ರಾಯಿ ಚೆವಿಲೋನಿ ಜೋರೀಗ
ಕಂಟಲೋನಿ ನಲುಸು ಕಾಲಿಮುಲ್ಲು
ಇಂಟಿಲೋನಿ ಪೊರು ಇಂತಂತ ಗಾದಯಾ
ವಿಶ್ವದಾಭಿರಾಮ ವಿನುರ ವೇಮ||

‘ಎಕ್ಕಡದಲ್ಲಿ ಸಿಕ್ಕಿಕೊಂಡ ಕಲ್ಲು, ಕಿವಿಯಲ್ಲಿ ಸೇರಿದ ತೊಣಚಿ, ಕಣ್ಣಲ್ಲಿ ಬಿದ್ದ ಧೂಳು, ಪಾದವನ್ನು ಹೊಕ್ಕ ಮುಳ್ಳು, ಮನೆಯಲ್ಲಿಯ ಹಿಂಸೆಯ ನೋವು ವಿವರಿಸಲು ಸಾಧ್ಯವಿಲ್ಲದ್ದು.’ ಮನೆಯಲ್ಲಿಯ ಹಿಂಸೆ ಅನುಭವಿಸಿ ಅವನು ಬಹು ಬೇಸರ ಪಟ್ಟಿದ್ದ ಎಂದು ತೋರುತ್ತದೆ. ಆಗ ಒಬ್ಬ ದೇವದಾಸಿ ಅವನಿಗೆ ಮೆಚ್ಚಿನವಳಾದಳು. ಅದಕ್ಕೆ ಅವಳು ಹಾಡುತ್ತಿದ್ದ ತೋಡಿ ರಾಗವೇ ಕಾರಣವೆಂದು ಪ್ರತೀತಿ. ಅವಳಿಗೂ ವೇಮನ ಎಂದರೆ ಅಭಿಮಾನ. ಅವಳ ತಾಯಿಗೆ ವೇಮನ ತರುವ ಹಣದ ಮೇಲೆಯೇ ಕಣ್ಣು. ಅವರ ಮಧ್ಯೆ ಪ್ರೀತಿ ಹೆಚ್ಚಾದಂತೆ ವೇಮನ ಬಂದಿರುತ್ತಿದ್ದುದು ಹೆಚ್ಚಾಯಿತು. ಅವನಿಂದ ಬರುತ್ತಿದ್ದ ವರಮಾನ ಕಡಿಮೆಯಾಯಿತು. ಇದು ತಾಯಿಗೆ ಸರಿತೋರಲಿಲ್ಲ. ಅದಕ್ಕಾಗಿ ವೇಮನನ್ನು ಮೂದಲಿಸಿದಳು. ಅವರಿಬ್ಬರ ಮಧ್ಯೆ ವಿರಸ ಮೂಡಿಸಲು ಪ್ರಯತ್ನಿಸಿದಳು.

ಒಡವೆಗಳು ಕಣ್ಣು ತೆರೆಸಿದವು

ಈ ಹುಡುಗಿಯಲ್ಲಿ ಇಷ್ಟು ಪ್ರೀತಿಯಿಂದಿದ್ದ ವೇಮನ ಅವಳಿಂದ ದೂರವಾದದ್ದು ಹೇಗೆ ಎಂಬುದಕ್ಕೆ ಒಂದು ಕಥೆಯನ್ನು ಹೇಳುತ್ತಾರೆ.

ವೇಮನ ಹುಡುಗಿಯ ಮನೆಯಲ್ಲೆ ಬಹಳ ಕಾಲವನ್ನು ಕಳೆಯುತ್ತಿದ್ದರೂ ಹಣ ತರುತ್ತಿರಲಿಲ್ಲ ಎಂದು ಅವಳ ತಾಯಿಗೆ ಸಿಟ್ಟಿತ್ತಲ್ಲವೆ? ಅವಳು ವೇಮನನಿಗೆ, “ನಿನ್ನ ಅತ್ತಿಗೆಯ ಒಡವೆಗಳನ್ನು ತಂದುಕೊಡು, ಇಲ್ಲದಿದ್ದರೆ ನಮ್ಮ ಮನೆಗೆ ಬರಬೇಡ” ಎಂದಳು. ಅತ್ತಿಗೆಯ ಒಡವೆಗಳನ್ನು ತರಲು ಅವನಿಪಗೆ ಆಗುವುದಿಲ್ಲ. ತಮ್ಮ ಮನೆಗೆ ಬರುವುದನ್ನು ನಿಲ್ಲಿಸುತ್ತಾನೆ ಎಂದು ಅವಳ ನಿರೀಕ್ಷಣೆ.

ವೇಮನ ಮನೆಗೆ ಹೋದ. ಅತ್ತಿಗೆ ಒಡವೆಗಳನ್ನು ಕೇಳುವುದು ಹೇಗೆ? ಮನೆಯಲ್ಲಿ ಅವನಿಗೆ ಪ್ರೀತಿ – ಆದರ ತೋರಿಸುತ್ತಿದ್ದವಳು ಅತ್ತಿಗೆ ಒಬ್ಬಳೇ. ಅವಳನ್ನು ‘ನಿನ್ನ ಒಡವೆಗಳನ್ನು ಕೊಡು’ ಎಂದು ಕೇಳಲು ಸಾಧ್ಯವೇ? ಆದರೆ, ಒಡವೆಗಳಿಲ್ಲದೆ, ಆ ಹುಡುಗಿಯ ಮನೆಗೆ ಹೋಗುವಹಾಗಿಲ್ಲ.

ಎರಡು ದಿನಗಳಾದರೂ ಮನೆ ಬಿಟ್ಟು ಹೊರಡದೆ ಮಂಕಾಗಿ ಕುಳಿತ ವೇಮನ. ಊಟ ಬೇಕಿಲ್ಲ, ನಿದ್ರೆ ಇಲ್ಲ.

ಅವನ ಅತ್ತಿಗೆಗೆ ಅವನಲ್ಲಿ ಬಹಳ ಆದರ. “ಏಕೆ ಹೀಗಿದ್ದೀ?” ಎಂದು ವಿಚಾರಿಸಿದಳು.

ಕಡೆಗೆ ಬಾಯಿಬಿಟ್ಟ ವೇಮನ. “ನಾನು ಪ್ರೀತಿಸಿದ ಹುಡುಗಿಗೆ ನಿಮ್ಮ ಒಡವೆಗಳು ಬೇಕಮತೆ, ಕೊಡುತ್ತೀರಾ?” ಎಂದು ಪ್ರಶ್ನಿಸಿದ.

ಅತ್ತಿಗೆಗೆ, ಹುಡುಗಿಯಲ್ಲಿ ಅವನ ಪ್ರೀತಿ ನೋಡಿ ನಗೆಯೂ ಬಂದಿತು, ಕನಿಕರವೂ ಆಯಿತು.

“ಆಗಬಹುದು, ಒಡವೆಗಳನ್ನು ಕೊಡುತ್ತೇನೆ” ಎಂದು ತೆಗೆದುಕೊಟ್ಟಳು.

ಅವನ್ನು ತೆಗೆದುಕೊಂಡು ಖುಷಿಯಾಗಿ ತನ್ನ ಪ್ರೇಯಸಿಯ ಮನೆಗೆ ಬಂದ ವೇಮನ. ಅವಳೊಬ್ಬಳನ್ನೆ ಕರೆದು ಒಡವೆಗಳನ್ನು ಕೊಟ್ಟ.

ನಾಚಿಕೆ ಇಲ್ಲದೆ ಅವಳು ಸರಸರನೆ ಅವನ್ನು ಎತ್ತಿ ಕೊಂಡದ್ದನ್ನು ವೇಮನ ನೋಡಿದ. ತನ್ನ ಅತ್ತಿಗೆಯ ಉದಾರ ಗುಣ ನೆನಪಾಯಿತು. ’ಇಂತಹ ಹೆಣ್ಣನ್ನು ನಾನು ಪ್ರೀತಿಸಿದೆನೆ, ಅವಳಿಗಾಗಿ ದೇವತೆಯಂತಹ ಅತ್ತಿಗೆಯ ಒಡವೆಗಳನ್ನು ತಂದೆನೆ!’ ಎಂದು ಪರಿತಾಪ ಪಟ್ಟ.

ಬೇಸರ ತಂದ ಹೆಂಡತಿ

ಬಹುಶಃ ಅನಂತರ ಅವನಿಗೆ ಮದುವೆಯಾಗಿರಬೇಕು. ಅವನ ಹೆಂಡತಿ ಗಯ್ಯಾಳಿ ಎಂದು ಕಾಣುತ್ತದೆ. ತುಂಬಾ ಚುರುಕು  ನಾಲಿಗೆಯವಳು. ಒಂದು ಪದ್ಯದಲ್ಲಿ ‘ಗಯ್ಯಾಳಿ ಹೆಂಡತಿಗಿಂತಲೂ ನರಕವೇ ಮೇಲು’ ಎಂದಿದ್ದಾನೆ.

‘ನಿಮ್ಮ ಒಡವೆಗಳು ಬೇಕಂತೆ, ಕೊಡುತ್ತೀರಾ?’

 

ಯತೀಂದ್ರ ಉಪದೇಶ ನೀಡಿದ

 ಆಲು ಮಗನಿ ಮಾಟಕಡ್ಡಂಬು ವಚ್ಚೆನಾ

ಆಲು ಕಾದು ನುದುಟಿ ವ್ರಾಲುಗಾನಿ
ಅಟ್ಟಿಯಾಲು ವಿಡಿಚಿ ಯಡವಿ ನುಂಡಟ ಮೇಲು
ವಿಶ್ವದಾಭಿರಾಮ ವಿನುರ ವೇಮ||

‘ಗಂಡನ ಮಾತಿಗೆ ಅಡ್ಡಿಯಾಗುವ ಹೆಂಡತಿ ಹೆಂಡತಿಯಲ್ಲ. ಅವಳೇ ಗಂಡನ ಗ್ರಹಚಾರ. ಅಂತಹವಳನ್ನು ಬಿಟ್ಟು ಅಡವಿ ಸೇರುವುದೇ ಒಳ್ಳೆಯದು’ ಎಂದು ತೀರ್ಮಾನಿಸಿದ.

ಒಗಟು

ಮೊದಲಿನಿಂದ ವೇಮನನದು ಸುಖವನ್ನು ಕಂಡುಂಡ ಮೈ. ತಾನೂ ತಿಂದು ಇತರರಿಗೂ ಕೊಡುವ ಸ್ವಭಾವ. ಆದ್ದರಿಂದ ಹೆಚ್ಚು ಹಣ ಸಂಪಾದಿಸಬೇಕೆಂಬ ಬಯಕೆ. ಅದಕ್ಕೆ ಸುಲಭವಾದ ಉಪಾಯವೆಂದರೆ ಬಂಗಾರವನ್ನು ತಯಾರಿಸುವ ವಿದ್ಯೆ. ಈ ವಿದ್ಯೆಯ ರಹಸ್ಯ ತಿಳಿಯಲು ಅಲೆದಾಟ ಪ್ರಾರಂಭಿಸಿದ. ಎಲ್ಲರೂ ತಂತ್ರವಾದಿಗಳೇ. ಮಂತ್ರವಾದಿಗಳು ಸಿಗಲಿಲ್ಲ. ಗರಡಿಯವರಂತೆ ವಿನೋದ ಮಾಡುವ ಕರಕುಶಲತೆ ಸಾಧಿಸಿರುವವರೇ. ದಿಟವಾದ ವಿದ್ಯೆ ಯೋಗಿಗಳು ಮಾತ್ರ ಕಲಿಸಬಲ್ಲರು. ಗುರುವನ್ನು ಹುಡುಕುತ್ತ ಸಂಚಾರ ಪ್ರಾರಂಭಿಸಿದ.

ವೇಮನನ ಪದ್ಯಗಳಲ್ಲಿ ರಸವಿದ್ಯೆ ಎನಿಸಿಕೊಳ್ಳುವ ಬಂಗಾರದ ತಯಾರಿಕೆಯ ವಿದ್ಯೆಯ ಬಗ್ಗೆ ಅನೇಕ ಪದ್ಯಗಳಿವೆ. ಈ ಹುಚ್ಚಿನ ಜನ ಇಂದೂ ವೇಮನನ ಈ ಪದ್ಯಗಳಲ್ಲಿ ಅಂತರಾರ್ಥ, ಗೂಡಾರ್ಥಗಳನ್ನು ಹುಡುಕುತ್ತಾ ಬಂಗಾರ ಮಾಡುವ ರಹಸ್ಯ ತಿಳಿಯಲು ಪ್ರಯತ್ನಿಸುತ್ತಾರೆ.

ನಾನಾ ಅನುಭವಗಳನ್ನು ಪಡೆದ ವೇಮನ ಮನೆಯವರ ಪಾಲಿಗೆ ನಿರುಪಯೋಗಿಯಾಗಿದ್ದವ ಮಹಾ ಯೋಗಿ ಆದದ್ದು ಒಂದು ಕಥೆ. ಅಣ್ಣ ಪಾಳ್ಳೇಪಟ್ಟಿನ ಆಡಳಿತ ನೋಡಿಕೊಳ್ಳುತ್ತಿದ್ದ. ಅರಮನೆಯ ಆಭರಣ, ಶಿಲ್ಪ ಕೆಲಸಗಳನ್ನು ನಡೆಸಿಕೊಡಲು ಒಂದು ಕಾರ್ಯಾಗಾರ. ಅದರಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಅಭಿರಾಮಾಚಾರ್ಯನೂ ಒಬ್ಬ. ಚಿನ್ನದ ಕೆಲಸ ಮಾಡುವ ವಿಶ್ವಕರ್ಮ. ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ. ತುಂಬಾ ಸಾತ್ವಿಕ. ನಯವಾದ ಮಾತು. ಆದರೆ ನಿತ್ಯವೂ ಕಾರ್ಯಾಗಾರಕ್ಕೆ ತಡವಾಗಿ ಬರುತ್ತಿದ್ದ.

ವೇಮನ ಮನೆಗೆ ಹಿಂತಿರುಗಿದ ಮೇಲೆ ಅವನಿಗೆ ಒಂದು ಕೆಲಸ ಇರಬೇಕೆಂದು ಈ ಕಾಯಾðಗಾರದ ಉಸ್ತುವಾರಿಗೆ ನಿಯಮಿಸಲ್ಪಟ್ಟ.

ಅಭಿರಾಮಾಚಾರ್ಯ ನಿತ್ಯವೂ ತಡವಾಗಿ ಬರುವುದನ್ನು ವೇಮನ ಗಮನಿಸಿದ. ಹತ್ತಾರು ಬಾರಿ ಎಚ್ಚರಿಸಿದ. ಕೊನೆಗೊಮ್ಮೆ ಕೆಲಸದಿಂದ ತೆಗೆದುಹಾಕುವುದಾಗಿಯೂ ಬೆದರಿಸಿದ. ಅಭಿರಾಮಾಚಾರ್ಯ ಇನ್ನೂ ಬೇಗ ಕಾರ್ಯಾಗಾರಕ್ಕೆ ಬರಲು ಸಾಧ್ಯವಿಲ್ಲವೆಂದು ನಮ್ರನಾಗಿಯೇ ಬಿನ್ನವಿಸಿಕೊಂಡು ತಾನು ಸಂಜೆ ತಡವಾಗಿ ಹೋಗುತ್ತಿರುವುದನ್ನು ಹೇಳಿದ. ಈ ಒಂದು ಕೊರತೆ ಬಿಟ್ಟು ಆತನಲ್ಲಿ ಮತ್ತಾವ ತಪ್ಪೂ ಇರಲಿಲ್ಲ. ಜೀವನಾಧಾರವಾಗಿರುವ ಕೆಲಸಕ್ಕಿಂತಲೂ ಆತ ತಡವಾಗಿ ಬರುವ ಕಾರಣವೇ ಮುಖ್ಯವೇ! ವೇಮನನಿಗೆ ಇದು ಆಶ್ಚರ್ಯವಾಗಿ ತೋರಿತು.

ಒಗಟಿಗೆ ಉತ್ತರ

ಈ ಒಗಟು ಎಷ್ಟು ಯೋಚಿಸಿದರೂ ಬಗೆಹರಿಯಲಿಲ್ಲ. ಅದಕ್ಕೆಂದೇ ಮರುದಿನ ಮುಂಜಾನೆಯ ವೇಳೆಗೆ ಅಭಿರಾಮಾಚಾರ್ಯನ ಮನೆಯ ಬಳಿಗೆ ಬಂದು ಅಡಗಿ ಕುಳಿತ.

ಅಭಿರಾಮಾಚಾರ್ಯ ನಸುಗತ್ತಲಲ್ಲೇ ಸ್ನಾನ-ಪೂಜೆ ಮುಗಿಸಿಕೊಂಡು ಮಡಿಯಲ್ಲೇ ಪೂಜಾ ಸಾಮ್ರಗ್ರಿ, ಹಣ್ಣು – ಹಂಪಲುಗಳನ್ನು ಎತ್ತಿಕೊಂಡು ಹೊರಟ. ಊರಿನ ಹೊರ ಭಾಗದಲ್ಲಿದ್ದ ಬೆಟ್ಟದ ಗುಹೆಯೊಂದರ ಒಳಕ್ಕೆ ಹೋದ. ಕುತೂಹಲದಿಂದ ಆತನ ಹಿಂದೆಯೇ ಹೋದ ವೇಮನ. ಗುಹೆಯಲ್ಲಿ ಒಬ್ಬ ಯತಿವರ್ಯ ತಪಸ್ಸು ಮಾಡುತ್ತಿದ್ದ. ಅವರ ಮುಂದೆ ಪೂಜಾ ದ್ರವ್ಯಗಳನ್ನು ಇರಿಸಿ ಕೈಮುಗಿದು ನಿಂತ. ಕಣ್ತೆರೆದ ಯತೀಂದ್ರ ಆಚಾರ್ಯನನ್ನು ಆಶೀರ್ವದಿಸಿ, “ಮಗು, ಇಷ್ಟು ದಿನಗಳ ಸೇವೆಯಿಂದ ಸಂಪ್ರೀತರಾಗಿದ್ದೇವೆ. ನಾಳೆ ಸಮಾಧಿಯನ್ನು ಪ್ರವೇಶಿಸಲಿದ್ದೇವೆ. ಆದ್ದರಿಂದ ನಾಳೆ ಬೆಳಗಿನ ಜಾವ ಬಾ” ಎಂದು ಹೇಳಿದರು.

ಇಷ್ಟು ವರ್ಷಗಳ ಸೇವೆ ಫಲ ಕೊಟ್ಟಿತೆಂದು ಹರ್ಷಿತನಾದ ಅಭಿರಾಮಾಚಾರ್ಯ ಅಲ್ಲಿಂದ ಹಿಂತಿರುಗಿದ. ವೇಮನನಿಗೆ ಇದೆಲ್ಲಾ ವಿಚಿತ್ರವೆನಿಸಿತು. ಕೇವಲ ಈ ಯತಿಯ ಉಪದೇಶಕ್ಕಾಗಿ ಅಭಿರಾಮಾಚಾರ್ಯ ತನ್ನ ಕುಟುಂಬ ನಿರ್ವಹಣೆ ನಡೆಸಲು ನೆರವಾಗುತ್ತಿದ್ದ ಅರಮನೆಯ ಕೆಲಸವನ್ನು ಕ್ಷುಲ್ಲಕ ಎಂದು ಭಾವಿಸಿದನೇ? ಅದೇನು ಉಪದೇಶವೋ ಕೇಳಲೇಬೇಕೆಂದು ವೇಮನ ತೀರ್ಮಾನಿಸಿದ. ಮರುದಿನ ಮಧ್ಯಾಹ್ನದವರೆಗೆ ಅಭಿರಾಮಾಚಾರ್ಯನನ್ನು ಕಾರ್ಯಾಗಾರದಲ್ಲಿಯೇ ಇರಿಸಿಕೊಳ್ಳಬೇಕೆಂದು ತೀರ್ಮಾನಿಸಿದ. ಆದರೆ ವೇಮನನ ಮಾತನ್ನು ಅಭಿರಾಮಾಚಾರ್ಯ ಕೇಳುತ್ತಾನೆ ಎಂಬ ನಂಬಿಕೆ ಇರಲಿಲ್ಲ. ಅದಕ್ಕೆಂದೇ ಅತ್ತಿಗೆಯ ಒಪ್ಪಿಗೆಯನ್ನು ಗಳಿಸಲು ಹಟಮಾಡಿ, ಮರುದಿನ ಮಧ್ಯಾಹ್ನದ ನಂತರ ಈ ಕೋರಿಕೆಯ ಕಾರಣ ತಿಳಿಸುವುದಾಗಿ ಮಾತುಕೊಟ್ಟ.

ಯೋಗಿ ವೇಮನ

ಅಭಿರಾಮಾಚಾರ್ಯ ಎಷ್ಟು ಕಾಡಿ ಬೇಡಿದರೂ ಫಲವಿಲ್ಲದಾಯಿತು. ಹತಾಶನಾಗಿ ಆಚಾರ್ಯ ಕಾರ್ಯಾಗಾರದಲ್ಲಿಯೇ ಉಳಿದುಕೊಂಡ. ಮರುದಿನ ಬೆಳಗಿನ ಜಾವಕ್ಕೇ ವೇಮನ ಫಲ-ಪುಷ್ಟ-ಪೂಜಾಸಾಮಗ್ರಿಗಳೊಂದಿಗೆ ಗುಹೆಗೆ ಹೊರಟ. ಯತೀಂದ್ರ ಕಣ್ತೆರೆದ. ಹೊಸ ವ್ಯಕ್ತಿಯನ್ನು ಗಮನಿಸಿ ಅಭಿರಾಮಾಚಾರ್ಯನಿಗಾಗಿ ಕೇಳಿದ. ಅರಮನೆಯಲ್ಲಿ ತುಂಬಾ ಜರೂರಾದ ಕೆಲಸವಿದ್ದುದರಿಂದ ಶಿಷ್ಯನಾದ ತನ್ನನ್ನು ಕಳುಹಿಸಿರುವುದಾಗಿ ಮನವಿ ಮಾಡಿಕೊಂಡ.

ಯತೀಂದ್ರನಿಗೆ ಆಶ್ಚರ್ಯವಾಯಿತು. ತ್ರಿಕಾಲ ಜ್ಞಾನಿಯಾದ ಆತ ನಿಜಸಂಗತಿ ಗ್ರಹಿಸಿದ. ವೇಮನನೂ ಅವತಾರ ಪುರುಷನೆಂಬುದನ್ನು ಗುರುತಿಸಿದ. ಉಪದೇಶ ನೀಡಿದನಾದರೂ ಕೊನೆಗೆ ಒಂದು ಕಟ್ಟಳೆ ಹಾಕಿದ. ಈ ಉಪದೇಶ ಸಿದ್ಧಿಸಬೇಕಾದರೆ ಇದನ್ನೆಲ್ಲಾ ಅಭಿರಾಮಾಚಾರ್ಯನಿಗೆ ಹೇಳಿ ಆತನಿಂದ ಮತ್ತೆ ಉಪದೇಶ ಪಡೆಯಬೇಕು!

ಯತೀಂದ್ರನ ಸಂಪರ್ಕದಿಂದಲೇ ವೇಮನನಲ್ಲಿ ಮನಜಾಗೃತವಾಗಿತ್ತು. ಮುಕ್ತಿಮಂತ್ರವನ್ನು ಮೋಸ ಮಾಡಿ ಗಳಿಸುವುದೇ? ತನ್ನ ಅಪಚಾರಕ್ಕಾಗಿ ತುಂಬಾ ಖತಿಗೊಂಡ. ನೇರವಾಗಿ ಅಭಿರಾಮಾಚಾರ್ಯನ ಬಳಿಗೆ ಬಂದು ಆತನ ಪಾದಗಳನ್ನು ಹಿಡಿದ.

ಅಭಿರಾಮಾಚಾರ್ಯನಿಗೆ ಆಶ್ಚರ್ಯವಾಯಿತು. ತಾನು ಕಾರ್ಯಾಗಾರದಲ್ಲಿ ಕೆಲಸಗಾರ. ವೇಮನ ಮೇಲ್ವಿಚಾರಕ. ಅವನು ಬಂದು ಹೀಗೆ ಕಾಲು ಹಿಡಿಯುವುದೆಂದರೆ!

ವೇಮನ ನಡೆದುದೆಲ್ಲವನ್ನೂ ಹೇಳಿದ. ಯೋಗೀಂದ್ರರ ಆಜ್ಞೆಯನ್ನು ತಿಳಿಸಿದ. “ನಾನು ಮಾಡಿದುದು ತಪ್ಪಾಯಿತು. ನೀನು ಯೋಗಿಗಳ ಬಳಿ ಹೋಗದಂತೆ ನಾನೇ ಅಡ್ಡನಾದೆ. ಕ್ಷಮಿಸು” ಎಂದು ಬೇಡಿದ.

ಅಭಿರಾಮಾಚಾರ್ಯನ ಕಣ್ಣಲ್ಲಿ ನೀರು ಉಕ್ಕಿತು. ಕಂಠ ಕಟ್ಟಿತು, ಈ ರೀತಿಯಲ್ಲಾದರೂ ತನ್ನ ಬಾಳಿನ ಬಯಕೆ ಸಂದಿತಲ್ಲಾ ಎಂದು. ವೇಮನನಿಗೆ ಗುರೂಪದೇಶವೂ ನಡೆಯಿತು. ಹೀಗೆ ಇಬ್ಬರೂ ಪುನೀತರಾದರು.

ಯೋಗೀಂದ್ರನ ಹೆಸರು ಲಂಬಿಕಾ ಶಿವಯೋಗಿ ಎಂದು ಕೆಲವರು ಹೇಳಿದರೆ ಮತ್ತೆ ಹಲವರು ವಿಶ್ವೇಶ್ವರ ಗುರು ಎನ್ನುತ್ತಾರೆ. ಅಂತೂ ವೇಮನ ಯೋಗಿಯಾದ. ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಜ್ಞಾನಿಯಾದ.

ವಿಶ್ವಕರ್ಮನ ಭಕ್ತ

ವೇಮನನ ಬಹುಪಾಲು ಪದ್ಯಗಳ ಕೊನೆಯ ಸಾಲಾದ ‘’ವಿಶ್ವದಾಭಿರಾಮ ವಿನುರ ವೇಮ’’ ಎಂಬುದರ ಅರ್ಥವನ್ನು ವಿವರಿಸಲು ಈ ಕಥೆ ಪ್ರಚಲಿತವಾಗಿದೆ. ಇದರಂತೆ ವಿಶ್ವ (ಎಂದರೆ ಗುರು) ಮತ್ತು ಅಭಿರಾಮಾಚಾರ್ಯ ಇಬ್ಬರೂ ವೇಮನನಿಗೆ ಹೇಳಿದರು ಎಂದು ಅರ್ಥ! ಹಲವರು ಈ ಸಾಲಿನ ಅರ್ಥ ‘’ಪ್ರಪಂಚವನ್ನು ರಸನುಡಿಗಳಿಂದ ರಂಜಿಸುವ ವೇಮ’’ ಎಂದು ಹೇಳುತ್ತಾರೆ. ಆದರೆ ವೇಮನನ ಪದ್ಯಗಳಲ್ಲಿ ರಂಜಿಸುವ ಗುಣ ಮುಖ್ಯವಲ್ಲ. ಆದ್ದರಿಂದ ಈ ಅರ್ಥ ಅಸಂಬದ್ಧ ಎನಿಸುತ್ತದೆ.

ಎಲ್ಲಾ ಕುಲಗಳನ್ನು ಜರಿದ, ಎಲ್ಲಾ ದೇವರನ್ನು ಹಾಸ್ಯ ಮಾಡಿದ ಇವನಿಗೆ ವಿಶ್ವಕರ್ಮ ಎಂದರೆ ಭಕ್ತಿ. ಬಹುಶಃ ಇದಕ್ಕೆ ಕಾರಣ ಅಭಿರಾಮಾಚಾರ್ಯನ ಕುಲದೈವವಾದ್ದರಿಂದ ವಿಶ್ವಕರ್ಮ ’ಗುರುದೈವ’ ಎಂಬ ಭಾವನೆ ಇರಬಹುದು. ವೇಮನನ ಮಾತು ಕೇಳಿ!

ವಿಶ್ವಕರ್ಮ ಲೇಕ ವಿಶ್ವಂಬು ಲೇದುರಾ
ವಿಶ್ವಕರ್ಮ ಚೇಯವೆಲಯು ನನ್ನಿ
ವಿಶ್ವಕರ್ಮ ಲೇನಿ ವಿಶ್ವಂಜೀ ಪಾಡುಲಾ
ವಿಶ್ವದಾಭಿರಾಮ ವಿನುರ ವೇಮ||

‘’ವಿಶ್ವಕರ್ಮ ಎಂದರೆ ಪ್ರಪಂಚವನ್ನೇ ಸೃಷ್ಟಿಸಿದ ದೇವರು ಅಥವ ಅವನಿಂದ ರೂಪುಗೊಂಡ ಕಬ್ಬಿಣ, ಮರ, ಕಂಚ, ಶಿಲ್ಪ, ಚಿನ್ನದ ಕೆಲಸಗಳು. ಈ ದೇವನಿಲ್ಲದೆ ವಿಶ್ವಸೃಷ್ಟಿಯೇ ಇಲ್ಲ. ಬಾಳಿನ ಆರಂಭದಿಂದ ಅಂತ್ಯದವರೆಗೂ ಈ ವಿದ್ಯೆಗಳೇಬೇಕು. ಇವೇ ಇಲ್ಲವಾದರೆ ಪ್ರಪಂಚವೆಲ್ಲಾ ಹಾಳು.

ಸುಖದಲ್ಲಿಯೇ ಆಸಕ್ತನಾಗಿ ಲೌಕಿಕ ಜೀವನದಲ್ಲಿ ಕೆಟ್ಟವನು ಎನಿಸಿಕೊಂಡಿದ್ದವನು ಗುರುವಿನ ಕಟಾಕ್ಷದಿಂದ ಜ್ಞಾನಿಯಾದ; ಯೋಗಿಯಾದ; ಸಿದ್ಧನಾದ, ಜನರ ಕಣ್ಣಿಗೆ ಮಾತ್ರ ಹುಚ್ಚ ಎನಿಸಿಕೊಂಡ. ಯಾವ ಕೆಲಸಕ್ಕೂ ಕೈ ಹಾಕದೆ ಸದಾ ಹುಚ್ಚನಂತೆ ಇರುತ್ತಿದ್ದ. ಮನೆಯವರಿಗೆ ಹೊರೆಯೆನಿಸಿದ.

ಆಚಾರ ಮುಖ್ಯ

ಮೊದಲಿನಿಂದಲೂ ಸತ್ಯಪ್ರಿಯ. ನೇರವಾಗಿ ನಿರ್ಭಯವಾಗಿ ತೋಚಿದ್ದನ್ನು ಆಡುವ ಸ್ವಭಾವ. ಇದು ಯೋಗಿಯಾದನಂತರ ಮತ್ತಷ್ಟು ಮೊನಚಾಯಿತು. ‘’ಸೃಷ್ಟಿಯಲ್ಲಿ ಎಲ್ಲರೂ ಸಮಾನರು, ಮೇಲು-ಕೀಳೆಂಬುದೇ ಇಲ್ಲ’’ ಎಂಬುದನ್ನು ಹೇಳುತ್ತಾ ಎಲ್ಲಾ ಜಾತಿಗಳ ಹಿರಿತನವನ್ನೂ ಪೊಳ್ಳು ಎಂದು ಸಾರಿದ. ತಾನೇ ಶಿವಭಕ್ತ. ನಿಜವಾಗಿ ಶಿವಭಕ್ತಿ ಇಲ್ಲದೆ ಲಿಂಗ ಕಟ್ಟಿಕೊಂಡವರನ್ನು ಹಾಸ್ಯ ಮಾಡಿದ್ದಾನೆ. ಜನಿವಾರ ಧರಿಸಿದ ಮಾತ್ರಕ್ಕೆ ದ್ವಿನನೇ ಎಂದು ತೋರಿಕೆಯ ಬ್ರಾಹ್ಮಣರನ್ನೂ ಹಾಸ್ಯ ಮಾಡಿದ್ದಾನೆ.

ಶಿವುನಿಭಕ್ತುಲೆಲ್ಲ ಭುವಿಮಂಟಪಾಲೈರಿ
ವಾದಮೇಲುದೈವ ಭೇದಮೇಲ
ವಿಷ್ಣು ಭಕ್ತುಲೆಲ್ಲ ವೆಲಿಬೂದಿಪಾಲೈರಿ
ವಿಶ್ವದಾಭಿರಾಮ ವಿನುರ ವೇಮ ||

’ಶೈವ – ವೈಷ್ಣವರ ಹಿರಿತನ ಹೊಡೆದಾಟದ ಫಲವೇನು? ಶಿವಭಕ್ತ ಸತ್ತರೆ ಹೂಳುತ್ತಾರೆ; ವೈಷ್ಣವ ಸತ್ತರೆ ಸುಡುತ್ತಾರೆ. ಇಷ್ಟಕ್ಕೆ ದೇವರಲ್ಲಿಯೇ ವ್ಯತ್ಯಾಸವೇ? ಒಬ್ಬ ಭೂಮಿಯ ಪಾಲು, ಮತ್ತೊಬ್ಬ ಬೂದಿಯ ಪಾಲು!’

ಇನ್ನು ವಿಗ್ರಹ ಆರಾಧನೆ, ದೇವಾಲಯಗಳನ್ನು ಕಟ್ಟಿಸುವುದು ಇವುಗಳ ಬಗ್ಗೆ ಕೇಳಿ:

ಪಲುಗುರಾಳ್ಳಂದೆಚ್ಚಿ ಪರಂಗಗುಡಲು ಕಟ್ಟಿ
ಚೆಲಂಗಿ ಶಿಲಲ ಸೇವ ಜೇಯನೇಲ
ಶಿಲಲ ಸೇವ ಜೇಯ ಫಲಮೇಲ ಗಲ್ಗುರಾ
ವಿಶ್ವದಾಭಿರಾಮ ವಿನುರ ವೇಮ ||

‘’ಗುಡಿ-ಗೋಪುರಗಳನ್ನು ಕಟ್ಟಿ, ಶಿಲೆಗಳನ್ನು ಇರಿಸಿ ಅವುಗಳ ಸೇವೆ ಮಾಡಿದರೇನು ಫಲ?’’

ವೇಮನ ಜಾತಿ ಪದ್ಧತಿಯನ್ನು ಖಂಡಿಸಿದ. ‘’ಅಸ್ಪೃಶ್ಯರು ಯಾರು?’’ ಎಂದು ಪ್ರಶ್ನಿಸಿದ. ಜಾತಿಗಳನ್ನು ಕೊನೆಗೊಳಿಸಲು ರೂಪುಗೊಂಡ ಶೈವ, ವೈಷ್ಣವ ಮತಗಳು ಬೇರೆಯ ಜಾತಿಯಾದದ್ದು ಮಾತ್ರವಲ್ಲದೆ ಅವುಗಳಲ್ಲಿಯೇ ಭೇದಗಳು ಚಿಗುರಿದವು. ಇವೆಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ಖಂಡಿಸಿದ. ಇದರಿಂದ ವೇಮನ ’ಪಾಷಂಡಿ’ ಎನಿಸಿಕೊಂಡ.

ಬೇಸಾಯದ ಕಥೆ

ಮನೆಯವರಿಗೂ ವೇಮನನ ಮಾತುಗಳು ಸಹ್ಯವೆನಿಸಲಿಲ್ಲ. ಅದಕ್ಕೆಂದು ಅವನನ್ನು ಬೇರೆಯಾಗಿಸಿದರು. ಸ್ವಂತ ಬೇಸಾಯ ನಡೆಸಬೇಕಾಯಿತು. ಎಲ್ಲರಂತೆ ಉಳುಮೆ ಮಾಡಿ ಬಿತ್ತನೆ ಮಾಡಿದ. ಹೊಲದ ತುಂಬಾ ದತ್ತೂರಿ ಗಿಡಗಳು. ವೇಮನ ಬೇಸಾಯ ಮಾಡಿದ ಸಂಗತಿಯನ್ನು ಕುರಿತು ಒಂದು ಕಥೆ ಇದೆ. ಅವನು ಬಿತ್ತಿದ್ದೇ ದತ್ತೂರಿ ಬೀಜ. ಬೆಳೆ ಕೊಯ್ಲಿಗೆ ಬಂತು. ದತ್ತೂರಿ ಕಾಯಿಗಳನ್ನು ಬಿಡಿಸಲು ಕೂಲಿಗಳನ್ನೂ ಇಟ್ಟ, ಸಂಜೆಗೆ ಅವರು ಕೂಲಿ ಕೇಳಿದರೆ ಒಂದೊಂದು ದತ್ತೂರಿ ಕಾಯನ್ನು ಕೊಟ್ಟು ಅದನ್ನು ಮಾರಿಕೊಳ್ಳಲು ಹೇಳಿದ. ಮೊದಲೇ ಹುಚ್ಚ ಎಂದು ಜನ ಹೇಳುತ್ತಿದ್ದರು. ಇದರಿಂದ ಅದು ಖಾತ್ರಿಯಾಯಿತು ಎಂದು ಕೊಂಡರು ಕೂಲಿಗಳು. ಒಬ್ಬ ಕೋಪದಿಂದ ಇದನ್ನೇನು ಮಾಡುವುದು ಎಂದು ಆತನ ಮುಂದೆಯೇ ಒಗೆದ. ಕಾಯಿಯೊಡೆದು ಹೊಳೆಯುತ್ತಿರುವ ಚಿನ್ನದ ಬೀಜಗಳು ಚೆಲ್ಲಿದವು! ಇದರಿಂದ ಕೂಲಿಗಳು ಅವರಿಗೆ ಸಿಕ್ಕಷ್ಟು ಕಾಯಿಗಳನ್ನು ಕಳ್ಳತನ ಮಾಡಿಕೊಂಡು ಮನೆಗೆ ಹೋದರು. ಆದರೇನು? ವೇಮನ ಕೊಟ್ಟ ಒಂದು ಕಾಯಿ ವಿನಾ  ಉಳಿದೆಲ್ಲವೂ ಸಾಮಾನ್ಯ ದತ್ತೂರಿ ಕಾಯಿಗಳು.

ಒಬ್ಬ ಕೋಪದಿಂದ ಒಂದು ಕಾಯಿಯನ್ನು ಒಗೆದ

ಈ ಪವಾಡ ಕೇಳಿದ ಅಣ್ಣನಿಗೆ ವೇಮನನಿಂದ ಚಿನ್ನ ಮಾಡುವ ವಿದ್ಯೆ ಕಲಯಬೇಕೆಂಬ ಬಯಕೆ. ಅಣ್ಣನಿಗೆ ವೇಮನ ಒಂದು ಪಾಠ ಕಲಿಸಿದ : “ತಾನು ಬಂಗಾರವಾಗದೆ ಬಂಗಾರ ಮಾಡಲು ಸಾಧ್ಯವಿಲ್ಲ” ಎಂದ. ತಾನು ಬಂಗಾರವಾಗುವುದು ಎಂದರೆ ಆತ್ಮವಿದ್ಯೆಯನ್ನು ಅರಿಯುವುದು. ಅನಂತರ ಅವನಿಗೆ ಬಂಗಾರವೂ ಮಣ್ಣಿನಂತೆಯೇ. ಬೇಕೆಂದು ಅಲೆದಾಗ ಸಿಕ್ಕದ ಲಕ್ಷ್ಮಿ ಬೇಡವೆನಿಸಿದಾಗ ಒಲಿದು ಬಂದೂ ಪ್ರಯೋಜನವೇನು?

ಬೈರಾಗಿ

ಯೋಗಿಯಾದನಂತರ ವೇಮನ ಮನೆ ಬಿಟ್ಟ. ಬೈರಾಗಿಯಾಗಿ ಸುತ್ತಾಡಿದ. ಎಲ್ಲರಿಗೂ ತಾನು ಒಳ್ಳೆಯದೆಂದು ಕಂಡುಕೊಂಡದ್ದನ್ನೇ ಹೇಳಲು ಪ್ರಯತ್ನಿಸಿದ. ಜನಸಾಮಾನ್ಯರ ಬಾಯಲ್ಲಿ ಸುಲಭವಾನಿ ನಿಲ್ಲಬಲ್ಲ ಪದ್ಯಗಳನ್ನು ರಚಿಸಿ ಅನೇಕ ಸತ್ಯಗಳನ್ನು ಅದರಲ್ಲಿ ಅಡಗಿಸಿದ. ಅನೇಕ ರೀತಿಯ ಛಂದಸ್ಸುಗಳನ್ನು ವೇಮನ ಬಳಸಿರುವ ಪದ್ಯಗಳ ಕೊನೆಯಲ್ಲಿ ’ವೆರ‍್ರಿ ವೇಮ’ (ಹುಚ್ಚ ವೇಮ) ಎಂದು ಹೇಳಿರುವವೂ ಇವೆ. ಆದರೆ ಆಟವೆಲದಿ ಛಂದಸ್ಸಿನಲ್ಲಿ ಹೇಳಿರುವ ಪದ್ಯಗಳೇ ತುಂಬ ಜನಪ್ರಿಯವಾದವು. ತೆಲುಗು ಸಾಹಿತ್ಯದಲ್ಲಿ ಆಟವೆಲದಿ ಛಂದಸ್ಸಿಗೆ ಒಂದು ರೂಪ ಕೊಟ್ಟು ಅದಕ್ಕೆ ಸ್ಥಾಯಿಯಾದ ಸ್ಥಾನ ಕಲ್ಪಿಸಿದ್ದು ವೇಮನನ ರಚನೆ.

ವೇಮನನ ಸ್ಥಳದ ಬಗ್ಗೆ ಹೆಚ್ಚು ಚರ್ಚೆಗೆ ಅವಕಾಶವಿಲ್ಲ. ಕಡಪ, ಕರ್ನೂಲು ಜಿಲ್ಲೆಗಳಲ್ಲಿ ಸಂಚರಿಸಿದ ವ್ಯಕ್ತಿ  ಎನ್ನಬಹುದು. ಆದರೆ ಆತನ ಕಾಲದ ಬಗ್ಗೆ ವಿಪುಲ ಚರ್ಚೆ ಇದೆ. ಕಡಪ ಜಿಲ್ಲೆಯ ಕಂದಿಮಲ್ಲಯ್ಯ ಪಲ್ಲೆಯಲ್ಲಿದ್ದ ತೆಲುಗು ದೇಶದಲ್ಲೆಲ್ಲಾ ‘ಕಾಲಜ್ಞಾನಿ’ ಎಂದು ಪ್ರಖ್ಯಾತರಾಗಿರುವ ಪೋತಲೂರು ವೀರ ಬ್ರಹ್ಮೇಂದ್ರ ಸ್ವಾಮಿಗಳನ್ನು ವೇಮನ ಕಂಡಿದ್ದ ಎಂಬುದು ಪ್ರತೀತಿ. ಇದರಿಂದ ಇಂದಿನ ವಿದ್ವಾಂಸರು ಬಹು ಪಾಲು ಒಪ್ಪಿರುವ ೧೬೫೨ನೇ ವರ್ಷವೇ ಸರಿ ಎಂದು ಹೇಳಬಹುದು.

ಕೊನೆಗೆ ವೇಮನ ಬರಿಮೈಯಲ್ಲಿ ಸುತ್ತಾಡುತ್ತಿದ್ದನೇನೋ? ‘ಹುಟ್ಟುವಾಗ ಇರದ ಬಟ್ಟೆ, ಸತ್ತ ನಂತರ ಇರದ ಬಟ್ಟೆಯನ್ನು ಮಧ್ಯೆ ಧರಿಸಿ ಓಡಾಡುವುದು ನಗೆಪಾಟಲಲ್ಲವೇ’ ಎಂದೂ ಹೇಳಿದ್ದಾನೆ. ಬದುಕಿದ್ದಾಗ ಹೆಚ್ಚು ಮಂದಿಯ ಪಾಲಿಗೆ ಈತ ಹುಚ್ಚನೆನಿಸಿದ್ದ. ಅದಕ್ಕೆಂದೇ

ಉರ್ವಿಜನುಲು ಪರಮಯೋಗೀಶ್ವರುನಿ ಜೂಚಿ
ತೆಗಡುವಾರೇ ಗಾನಿ ತೆಲಿಯಲೇರು

ಅಮೃತ ಸ್ವಾದರುಚಲ ಹಸ್ತಮೇಮೆರುಂಗುನು
ವಿಶ್ವದಾಭಿರಾಮ ವಿನುರ ವೇಮ ||

ಅಮೃತದ ರುಚಿಯನ್ನು ಕೈ ಸವಿಯುವುದು ಸಾಧ್ಯವಿಲ್ಲ. ಅಂತೆಯೇ ಸಾಮಾನ್ಯ ಜನರು ಪರಮಯೋಗಿಯನ್ನು ನೋಡಿ ತೆಗಳುತ್ತಾರೆ. ಆತನನ್ನು ಅರಿಯುವುದು ಅವರಿಗೆ ಅಸಾಧ್ಯವಾದ ಕೆಲಸ ಎಂದು ನುಡಿದಿದ್ದಾನೆ.

೧೭೨೫ ರಲ್ಲಿ ವೇಮನ ಕಡಪ ಜಿಲ್ಲೆಯ ಪಾಮೂರಿನ ಬಳಿಯ ಗುಹೆಯೊಂದರಲ್ಲಿ ಹೋಗಿ ಕಾಣದಾದ ಎಂದು ಜನರು ಇಂದಿಗೂ ಹೇಳುತ್ತಾರೆ. ಆದರೆ ವೇಮನನ ವಂಶದವರೇ ಕಟಾರಪಲ್ಲೆಯಲ್ಲಿ ವೇಮನನ ಸಮಾಧಿಯನ್ನು ಪೂಜಿಸುತ್ತಾ ಮಠವನ್ನು ಇಂದೂ ನಿರ್ವಹಿಸುತ್ತಿದ್ದಾರೆ. ವೇಮನ ಶಿಷ್ಯಪರಂಪರೆಯವರು ಇಂದೂ ಇರುವರು.

ಕವಿ-ಯೋಗಿ

ಮಹಾಕವಿ, ಪರಮಯೋಗಿ, ವೈರಾಗ್ಯ-ಜ್ಞಾನಿಗಳ ಸಂಗಮವಾದ ವೇಮನನ್ನು ತೆಲುಗು ಸಾಹಿತ್ಯ ಚರಿತ್ರೆ ಇತ್ತೀಚಿನವರೆಗೂ ಕೈಬಿಟ್ಟು ಸಾಮಾನ್ಯ ಉಲ್ಲೇಖವೂ ಮಾಡದೆ ಇದ್ದುದಕ್ಕೆ ಕಾರಣ ವೇಮನನ ಮೊನಚು ಮಾತುಗಳೇ. ವೇದ- ಮತ ವಿರೋಧಿ, ಪಾಷಂಡಿ ಎಮಬ ಹೆಸರು ಗಳಿಸಿದ. ಎಲ್ಲಾ ಕುಲಗಳನ್ನು ನಿರ್ಮತ್ಸರವಾಗಿ ಖಂಡಿಸಿ ಎಲ್ಲರ ದ್ವೇಷಗಳಿಸಿದ. ಜನರಿಗೆ ಆಡುಭಾಷೆಯ ಕಾವ್ಯಭಾಷೆ ಅಲ್ಲ ಎಂಬ ಭಾವನೆ. ’ಪದವಿ, ಬಿರುದುಗಳನ್ನು ಗಳಿಸಿದ, ಪಂಡಿತರ ವರ್ಗಕ್ಕೆ ಸೇರದವನ ಕೃತಿಯಲ್ಲಿ ಎಂತಹ ಪಾಂಡಿತ್ಯ ವಿದ್ದೀತು?’ ಎಂಬ ಲಘು ನೋಟ.

ವೇಮನ ಯಾರನ್ನೂ ಮೆಚ್ಚಿಸಲು ಪದ್ಯ ಬರೆದವನಲ್ಲ. ಕವಿಗಿಂತಲೂ ಆತ ಯೋಗಿ. ವೇದಾಂತ ರಹಸ್ಯಗಳನ್ನು ಜನರಿಗೆ ಹೇಳಿ ಅದು ಅವರ ಮನದಲ್ಲಿ ಸುಲಭವಾಗಿ ನಿಂತಿರಲು ಪದ್ಯಗಳನ್ನು ಹೆಳಿದವ. ಅದರೊಂದಿಗೆ ಜನರ ರೀತಿ-ನೀತಿಗಳನ್ನು, ಡೊಂಕುಗಳನ್ನು ಎತ್ತಿ ಹೇಳಿದ.

ವಾಮನನ ಮೂರು ಪಾದಗಳಂತೆ ಮೂರೇ ಸಾಲುಗಳಿಂದ ಬಾಳಿನ ಸಾರ ಸರ್ವವನ್ನೆಲ್ಲಾ ಭಟ್ಟಿ ಇಳಿಸಿ, ಅದನ್ನು ಜನರ ಆಡುಮಾತಿನಲ್ಲಿಯೇ ಅವರಿಗೆ ಉಣ ಬಡಿಸಿ, ಅವರ ನಾಲಿಗೆಯ ಮೇಲೆ ಜೀವಂತವಾಗಿರುವಂತೆ ಪದ ರಚನೆ ಮಾಡಿದ. ಅವನು ಜನರ ಬಾಳನ್ನು ಚಿರಂತನವಾದ ಸ್ಥಾಯೀ ಮೌಲ್ಯದತ್ತ ತಿರುಗಿಸಲು ಪ್ರಯತ್ನಿಸಿದ ಸಿದ್ಧ.

ಹಣ

ವೇಮನನ ಪದ್ಯಗಳು ಜೀವನದ ವಿಶಾಲವಾದ ಅನುಭವದಿಂದ ಬಂದವು. ಸಮಾಜದಲ್ಲಿ ಯಾವುದಕ್ಕೆ ಬೆಲೆ ಎಂಬುದನ್ನು ತಿಳಿದವನು ಆತ. ಹಣವೇ ಸಮಾಜದಲ್ಲಿ ಮುಖ್ಯವಾಗಿದೆ. ಗುಣ – ಯೋಗ್ಯತೆಗಳಿಗೆ ಬೆಲೆ ಇಲ್ಲ ಎಂದು ಬೇಸರದಿಂದ ಹೇಳುತ್ತಾನೆ.

ದೋಸಕಾರಿಯೈನ ದೂಸರಿವಾಡೈನ
ಬಗತುಡೈನ ವೇದಬಾಹ್ಯುಡೈನ
ಧನಿಕುನೆಲ್ಲವಾರು ತನಿಯಿಂಪುಚಂದ್ರು

‘ದೋಷಿಯಾದರೂ ನೀಚನಾದರು ವೇದಬಾಹ್ಯನಾಗಿದ್ದರೂ ಶತ್ರುವೇ ಆಗಿದ್ದರೂ ಹಣವಂತನನ್ನು ಎಲ್ಲರೂ ಆದರಿಸಿ ತೃಪ್ತಿಪಡಿಸುತ್ತಾರೆ.’

ಜನ, ‘ಪ್ರಭುನಿದಿಚ್ಚಿನಟ್ಟು ಪೇದಲಕಿಯ್ಯರು’ (ಪ್ರಭುವಿಗೆ ಕೊಟ್ಟ ಹಾಗೆ ಬಡವರಿಗೆ ಕೊಡುವುದಿಲ್ಲ). ಪ್ರಭುವಿಗೆ ಕೊಟ್ಟರೆ ಅವನಿಗೆ ಸಂತೋಷವಾಗುತ್ತದೆ. ಕೊಡದಿದ್ದರೆ ಅವನು ಕಿತ್ತುಕೊಳ್ಳುತ್ತಾನೆ. ಬಡವನಿಗೆ ಯಾರೂ ಕೊಡರು. ಆದರೆ, ಜೀವನದ ವಿಶಾಲ ಅನುಭವವಿದ್ದ ವೇಮನ ಹಣವೇ ಬೇಡ ಎಂದು ಸಾರಲಿಲ್ಲ. ಹಣವಿಲ್ಲದಿದ್ದರೆ ಬದುಕುವುದು ಹೇಗೆ?

ತಲ್ಲಿ ಬಿಡ್ಡಲಕು ದಗವು ಪುಟ್ಟೆಂಚೆಡು
ಧನಮು ಸುಖಮು ಗೂರ್ಪದನಿ ವಂಚಿತ್ರು
ಕಾನಿ ಗಡನ ಲೇಕ ಗಡಚುಟ ಎಟ್ಲರಾ?

ಹಣದಿಂದ ತಾಯಿ-ಮಕ್ಕಳಿಗೂ ಜಗಳವಾಗುತ್ತದೆ, ಹಣದಿಂದ ಸುಖವಿಲ್ಲ ಎನ್ನುತ್ತಾರೆ. ಆದರೆ ಹಣವಿಲ್ಲದೆ ಬದುಕುವುದು ಹೇಗೆ? ಬಡತನದ ಕಷ್ಟವನ್ನು ಅವನು ಬಹು ಚೆನ್ನಾಗಿ ವರ್ಣಿಸುತ್ತಾನೆ ; ಬಡವನನ್ನು ಹೆಂಡತಿ ಚುಚ್ಚು ಮಾತನಾಡಿ ನೋಯಿಸುತ್ತಾಳೆ, ಗಂಡನನ್ನು ಪ್ರಯೋಜನವಿಲ್ಲದ ಹೆಣವಂತೆ ಭಾವಿಸುತ್ತಾಳೆ. ಹಣವಿಲ್ಲದವನಿಗೆ ಧೈರ್ಯವೇ ಉಳಿಯುವುದಿಲ್ಲ. ಆದುದರಿಂದ ವೇಮನ ಹೇಳುತ್ತಾರೆ, ಹಣವಿರಬೇಕು – ಅದರ ಜೊತೆಗೆ ದಾನ ಮಾಡುವ ಬುದ್ಧಿಯೂ ಬೇಕು.

ಅರಯ ನಾಸ್ತಿಯನಕ ನಡ್ಡ ಮಾಟಾಡಕ
ತೊಟ್ರು ಬಡಕ ಮದಿನಿ ತನ್ನ ಕೊನಕ
ತನು ದಾ ಗನುಗೊನಿ ತಾ ಬೆಟ್ಟೆ ನದಿ ಪೆಟ್ಟು

‘ಯಾರಾದರೂ ಬೇಡಿದಾಗ ಇಲ್ಲ ಎನ್ನದೆ, ಅಡ್ಡ ಮಾತನಾಡದೆ, ಯೋಚನೆ ಮಾಡದೆ, ಮನಸ್ಸಿನಲ್ಲಿ ಒದ್ದಾಟವಿಲ್ಲದೆ, ನಿನ್ನ ಯೋಗ್ಯತೆಯರಿತು ದಾನ ಮಾಡು.’

ಆಸೆಗೆ ಪಾರವೇ ಇಲ್ಲ ಎಂಬುದನ್ನು ವೇಮನ ಬಹು ಸ್ವಾರಸ್ಯವಾಗಿ ಹೇಳಿದ್ದಾನೆ. ಅವನ ಒಂದು ಪದ್ಯದ ಅರ್ಥ ಹೀಗೆ : ’ಕ್ಷೀರಸಾಗರದಲ್ಲಿಯೆ ಮಲಗಿದ ಶ್ರೀಹರಿ ಗೊಲ್ಲರ ಹಳ್ಳಿಯ ಹಾಲನ್ನು ಏಕೆ ಬಯಸಬೇಕು? ಕಾರಣ ಇಷ್ಟೆ – ಇನ್ನೊಬ್ಬರ ದ್ರವ್ಯ ಎಲ್ಲರಿಗೂ ಸಿಹಿ. ಮತ್ತೊಂದು ಪದ್ಯದಲ್ಲಿ ಹೇಳುತ್ತಾನೆ:

‘ಈಶ್ವರ ಸದಾ ಚಿನ್ನದ ಬೆಟ್ಟದ ಮೇಲೆಯೇ ಇರುತ್ತಾನೆ; ಚಿನ್ನದ ಬೆಟ್ಟವೇ (ಮೇರು ಪರ್ವತ) ಅವನ ಧನುಸ್ಸು. ಆದರೂ ಭಿಕ್ಷೆ ಎತ್ತುತ್ತಾನೆ!’

ಮನುಷ್ಯನ ಜೀವನದಲ್ಲಿ ಮುಖ್ಯವಾದದ್ದು ಒಳಗಿನ ಶುದ್ಧಿ, ಮನಸ್ಸಿನ ಶುದ್ಧಿ.

ಒಳಗಿನ ಶುದ್ಧಿ

ಒಂದು ಪದ್ಯದಲ್ಲಿ ವೇಮನ ಹೇಳುತ್ತಾನೆ : ‘ತೀರ್ಥಗಳಲ್ಲಿ ಸ್ನಾನ ಮಾಡುವುದರಿಂದಲೇ ಮುಕ್ತಿ  ದೊರೆಯುವ ಹಾಗಿದ್ದರೆ ನೀರುಕೋಳಿ ಏನು ಪಾಪ ಮಾಡಿದೆ? ಅದಕ್ಕೂ ಮುಕ್ತಿ ದೊರೆಯಬೇಕಲ್ಲವೇ? ಅದು ಸದಾ ನೀರಿನಲ್ಲಿ ಮುಳುಗುತ್ತಲೇ ಇರುತ್ತದೆ!

ಬೋಡಿತಲಲನೆಲ್ಲ ಬೂಡಿದ ಪೂತಲ
ನಾಸನಮುಲ ಮಾರುತಾಸನಮುಲ
ಯೋಗಿಗಾಡು ಲೋನು ಬಾಗುಗಾಕುಂಡಿನ

‘ಬೋಳು ತಲೆಗಳು, ಬೂದಿ ಹಚ್ಚಿಕೊಳ್ಳುವಿಕೆ, ಯೋಗಾಸನಗಳನ್ನು ಮಾಡುವಿಕೆ – ಇವುಗಳಿಂದ ಯಾರೂ ಯಾವಾಗಲೂ ಯೋಗಿಯಾಗಲಾರ, ಒಳಗೆ ಶುದ್ಧನಾಗಿಲ್ಲದೆ ಹೋದರೆ.’

ಜ್ಞಾನದ ಮಾರ್ಗ

ಮನುಷ್ಯ ಮುಖ್ಯವಾಗಿ ತನ್ನ ಮನಸ್ಸನ್ನು ಅಂಕೆಯಲ್ಲಿ ಇಡಬೇಕು. ಅದಿಲ್ಲದೆ ಜ್ಞಾನ ಲಭಿಸುವುದಿಲ್ಲ.

ಮಾಟಲಾಡವಚ್ಚು ಮನಸು ನಿಲ್ಪಗರಾದು
ತೆಲುಪವಚ್ಚುದನ್ನು ದೆಲಿಯರಾದು
ಸುರಿಯ ಬಟ್ಟವಚ್ಚು ಶೂರುಂಡು ಗಾರಾದು

‘ಜನರು ಬೇಕಾದಷ್ಟು ಬಾಯಿಯಲ್ಲಿ ಹೇಳಬಹುದು. ಆದರೆ ಮನಸ್ಸನ್ನು ಹಿಡಿದು ನಿಲ್ಲಿಸುವುದು ಸಾಧ್ಯವಿಲ್ಲ. ಅದು ಬಹು ಚಂಚಲ. ಆತ್ಮಸ್ವರೂಪವನ್ನು ಇತರರಿಗೆ ಹೇಳಬಹುದು. ತಾನೇ ಅನುಭವಕ್ಕೆ ತಂದುಕೊಳ್ಳುವುದು ಕಷ್ಟ. ಕೈಯಲ್ಲಿ ಕತ್ತಿ ಹಿಡಿಯಬಹುದು, ಆದ ಮಾತ್ರಕ್ಕೆ ಮನುಷ್ಯ ಶೂರ ಆದಾನೇ?’

ಬ್ರಹ್ಮಚರ್ಯಮಹಿಂಸನಾ ಬರಗು ಪರಮ
ಧರ್ಮಮುಲು ರೆಂಡು ಸುವ್ವೆ ಯುತ್ತಮ ತಪಂಬು
ದಾನಿಗಲವಾಡು ನಿರ್ಮಲ
ಜ್ಞಾನಯೋಗವಂತುಡೈ ಜೂಡನೇರ್ಚು ಸರ್ವಂಬು ವೇಮ

‘ಬ್ರಹ್ಮಚರ್ಯೆ, ಅಹಿಂಸೆ ಇವೆರಡೇ ಪರಮ ಧರ್ಮಗಳು. ಅವನ್ನು ಸಾಧಿಸುವುದೇ ಅತಿ ಶ್ರೇಷ್ಠ ತಪಸ್ಸು. ಅವನ್ನು ಉಳ್ಳವನು ನಿರ್ಮಲ ಜ್ಞಾನಿಯಾಗಿರುತ್ತಾನೆ, ಎಲ್ಲವನ್ನೂ ತಿಳಿದುಕೊಳ್ಳಬಲ್ಲ.’

ವೇಮನ ತಾನೇ ಪದ್ಯಗಳನ್ನು ಬರೆದಿಡಲಿಲ್ಲ ಎಂದು ಕಾಣುತ್ತದೆ. ಅವನು ಅವನ್ನು ಹೇಳಿದಾಗ ಶಿಷ್ಯರೋ, ಹತ್ತಿರ ಇದ್ದವರೋ ಬರೆದಿಟ್ಟುಕೊಂಡಿರಬೇಕು. ಎಷ್ಟೋ ಪದ್ಯಗಳು ಕಳೆದುಹೋಗಿರಬಹುದು. ಇದುವರೆವಿಗೂ ವೇಮನನ ಐದು ಸಾವಿರಕ್ಕೂ ಹೆಚ್ಚು ಪದ್ಯಗಳು ಸಂಗ್ರಹವಾಗಿವೆ. ಎಲ್ಲಾ ರೀತಿಯ ವಿಷಯಗಳ ಬಗ್ಗೆಯೂ ಪದ್ಯಗಳು ದೊರೆಯುತ್ತವೆ. ವೇಮನನು ಹೇಳಿದ ಮಾತುಗಳು ಸಕಲ ವೇದಗಳ ಸಾರ. ಜನಸಾಮಾನ್ಯರ ಭಾಷೆಯಲ್ಲಿ ಅವರ ಅನುಭವದಿಂದಲೇ ಆರಿಸಿದ ಉದಾಹರಣೆ ಗಳಿಂದ, ಸುಲಭವಾಗಿ ಮನಸ್ಸಿಗೆ ಹಿಡಿಯುವಂತೆ ಜೀವನ ಇರಬೇಕಾದ ಮಾರ್ಗವನ್ನು ತೋರಿಸಿಕೊಟ್ಟ ಈತ ಜನತೆಯ ಕವಿ. ಅವೆಲ್ಲವನ್ನೂ ಓದುತ್ತಿದ್ದರೆ –

ವೇಮನ್ನಾ ನೀ ಮಹಿಮಲು
ನೇಮನ್ನಾ ತೆಲಿಯದಿಂಕ ನೆಟುವಲೆನನ್ನಾ
ವೇಮನ್ನಾ ನೀ ಚಿತ್ತಮು
ವೇಮನ್ನಾ ನೀವೆ ಮಾಕು ನೆರುಕಗನ್ನು ||

‘ವೇಮನಾ, ನಿನ್ನ ಮಹಿಮೆಗಳು ನಮಗೇನೂ ತಿಳಿಯವು. ನಿನ್ನನ್ನು ಹೇಗೆ ಸಂಭೋಧಿಸಬೇಕೋ ಅದೂ ತಿಳಿಯದು. ಎಲ್ಲವೂ ನಿನ್ನ ಚಿತ್ತ. ನೀನೇ ನಮ್ಮ ಪಾಲಿಗೆ ಜ್ಞಾನಚಕ್ಷುವಾಗು, ನಮ್ಮ ಬಾಳಿಗೆ ಬೆಳಕು ನೀಡು’ ಎಂದು ನಾವೂ ಬೇಡೋಣ ಎನಿಸುತ್ತದೆ.