ಸುಮಾರು ಇನ್ನೂರು ವರ್ಷಗಳ ಹಿಂದಿನ ಮಾತು ವ್ಯಾಪಾರಕ್ಕೆಂದು ಭಾರತಕ್ಕೆ ಬಂದ ಇಂಗ್ಲಿಷರು ಕ್ರಮೇಣ ತಮ್ಮ ಹಸ್ತಗಳನ್ನು ಎಲ್ಲ ದಿಕ್ಕುಗಳಲ್ಲಿ ಚಾಚುತ್ತಿದ್ದರು. ಭಾರತದ ಎಷ್ಟೋ ಭಾಗ ಅವರ ಆಡಳಿತಕ್ಕೆ ಬಂದಿತು. ಹಲವಾರು ರಾಜ-ಮಹಾರಾಜರುಗಳು ತಮ್ಮ ತಮ್ಮಲ್ಲಿ ಜಗಳವಾಡಿಕೊಂಡು, ಇಂಗ್ಲಿಷರ ಸಹಾಯ ಬೇಡಿ , ಕಡೆಗೆ ಅವರ ಅಧೀನರಾಗುತ್ತಿದ್ದರು.

ಈಗಿನ ಕೇರಳ ರಾಜ್ಯದ ಒಂದು ಭಾಗಕ್ಕೆ ಆಗ ತಿರುವಾಂಕೂರು ಸಂಸ್ಥಾನವೆಂದು ಹೆಸರಿತ್ತು. ಇದನ್ನು ಒಬ್ಬ ದೇಶೀಯ ರಾಜನೇ ಆಳುತ್ತಿದ್ದನು. ತಿರುವಾಂಕೂರು ಪ್ರಕೃತಿ ಸೌಂದರ್ಯದ ನೆಲೆವೀಡು. ಕನ್ಯಾಕುಮಾರಿಗೆ ಹತ್ತಿರದಲ್ಲಿ ನಾಗರಕೋಯಿಲ್ ಎಂಬ ಪ್ರಸಿದ್ಧ ಪುಣ್ಯಕ್ಷೇತ್ರವಿದೆ. ಇದರ ಉತ್ತರಕ್ಕೆ ಕೆಲವು ಮೈಲಿಗಳ ದೂರದಲ್ಲಿ ತಲಾಕುಲಮ್ ಎಂಬ ಸಣ್ಣ ಹಳ್ಳಿಯಿದೆ.

ಜನನ, ಬಾಲ್ಯ

ಇಲ್ಲಿನ ಶ್ರೀಮಂತ ಕುಟುಂಬವೊಂದರಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಅಪ್ರತಿಮ ಸಾಹಸಿ ವೇಲುತಂಬಿ ೧೯೬೫ನೆ ಇಸವಿ ಮೇ ತಿಂಗಳ ಆರನೆಯ ದಿನಾಂಕದಂದು ಜನಿಸಿದರು. ವೇಲುತಂಬಿಯ ವಂಶಸ್ಥರು ಆಗರ್ಭ ಶ್ರೀಮಂತರಾಗಿದ್ದರು. ಅವರು ವಾಸ ಮಾಡುತ್ತಿದ್ದ ಮನೆ ಒಂದು ಭವ್ಯ ಅರಮನೆಯಾಗಿತ್ತು. ಅವರು ಕಲಾ ಪೋಷಕರೂ ಆಗಿದ್ದರು. ಅನೇಕ ಚಿತ್ರಕಲಾವಿದರಿರೂ, ಸಂಗೀತಗಾರರಿಗೂ ಮತ್ತು ಕವಿಗಳಿಗೂ ಆಶ್ರಯದಾತರಾಗಿದ್ದರು. ಇಂತಹ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ ವೇಲುತಂಬಿ ಬಾಲ್ಯದಲ್ಲೇ ತನ್ನಲ್ಲಿದ್ದ ಅಪ್ರತಿಮ ಧೈರ್ಯ ಸಾಹಸಗಳನ್ನು, ಅಸಾಧಾರಣವಾದ ಸ್ವಾತಂತ್ರ್ಯಭಿಮಾನವನ್ನು ಪ್ರದರ್ಶಿಸುತ್ತಾ ಎಲ್ಲರ ಮೆಚ್ಚಿಗೆಗೂ ಪಾತ್ರನಾಗಿದ್ದನು.

ವೇಲುತಂಬಿಯ ತಂದೆ ತಾಯಿಗಳನ್ನು ಸುಬ್ರಹ್ಮಣ್ಯ ಸ್ವಾಮಿಯ ಪರಮಭಕ್ತರಾಗಿದ್ದರು. ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಮಗ ಹುಟ್ಟಿದನೆಂದು ಅವನಿಗೆ “ವೇಲಾಯುಧನ್” ಎಂದು ನಾಮಕರಣ ಮಾಡಿದರು. ಆದರೆ ಇವನ ಪೂರ್ತಿ ಹೆಸರು ” ವೇಲಾಯುಧನ್ ಚಂಪಕರಾಮನ್ ತಂಬಿ”. ಕಾಲ ಕ್ರಮೇಣ “ವೇಲಾಯುಧನ್ ” ಎಂಬ ಹೆಸರು ಮಾತ್ರ ಬಳಕೆಗೆ ಬಂತು.

ವಿದ್ಯಾಭ್ಯಾಸ

ವೇಲುತಂಬಿ ತನ್ನ ಏಳನೆಯ ವಯಸ್ಸಿನಲ್ಲಿ  ಕುಟುಂಬದ ಗುರುಗಳಾಗಿದ್ದ ಕುಂಚಡೀಶ ಪಿಳ್ಳೆ ಎಂಬುವರಲ್ಲಿ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದನು. ಇವರ ಹತ್ತಿರ ನೂರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಮಲೆಯಾಳಂ ಮಾತೃಭಾಷೆಯಾಗಿದ್ದ ವೇಲುತಂಬಿ ಆ ಭಾಷೆಯ ಜೊತೆಗೆ ಸಂಸ್ಕೃತ, ತಮಿಳು, ಸಾಹಿತ್ಯ, ಜೋತಿಷ್ಯ ಮತ್ತು ವೈದ್ಯ ಶಾಸ್ತ್ರಗಳನ್ನು ಅಭ್ಯಾಸ ಮಾಡಿದನು. ಇದಲ್ಲದೆ ನಾಟಕಾಭಿನಯ, ಚದುರಂಗ, “ಕಲರಿಪಯಟ್ಟು” ಎಂಬ ಮಲ್ಲ ಯುದ್ಧಗಳಲ್ಲೂ ಗುರುಗಳು ತಮ್ಮ ಶಿಷ್ಯನನ್ನು ಚೆನ್ನಾಗಿ ತರಬೇತು ಮಾಡಿದ್ದರು. ಮುಂದೆ ವೇಲುತಂಬಿ ಪರ್ಷಿಯನ್ ಮತ್ತು ಹಿಂದೂಸ್ಥಾನೀ ಭಾಷೆಗಳಲ್ಲೂ ಪಾಂಡಿತ್ಯವನ್ನು ಸಂಪಾದಿಸಿದ್ದನು.

ವೇಲುತಂಬಿ ಬಾಲ್ಯದಿಂದಲೂ ತನ್ನ ಶಾರೀರಕ ಶಿಕ್ಷಣದ ಕಡೆ ಹೆಚ್ಚು ಗಮನವನ್ನು ಕೊಡುತ್ತಿದ್ದನು. ಬೆಳಗಿನ ಜಾವದಲ್ಲೇ ಎದ್ದು ಒಂದೆರಡು ಘಂಟೆಗಳು ಕಠಿಣವಾದ ಮತ್ತು ಶಿಸ್ತಿನ ವ್ಯಾಯಾಮವನ್ನು ಮಾಡುತ್ತಿದ್ದನು. ಜೊತೆಗೆ ಮಲ್ಲಯುದ್ಧದಲ್ಲೂ ತರಬೇತಿ ಪಡೆದಿದ್ದುದರಿಂದ ವೇಲುತಂಬಿ ಆಕರ್ಷಕ ವ್ಯಕ್ತಿತ್ವವನ್ನು ಪಡೆದಿದ್ದನು. ದೃಢಕಾಯಕನಾಗಿ ಸುಂದರ ಯುವಕನಾಗಿದ್ದುದರಿಂದ ಎಲ್ಲರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದು ಬಿಡುತ್ತಿದ್ದನು. ಎಲ್ಲರೂ ಅವನ ಅಸಾಧಾರಣ ಶಕ್ತಿ – ಸಾಮರ್ಥ್ಯಗಳನ್ನೂ, ಧೈರ್ಯ ಸಾಹಸಗಳನ್ನೂ ಮುಕ್ತ ಕಂಠರಾಗಿ ಹೊಗುಳುತ್ತಿದರು.

ಅವ್ಯವಸ್ಥೆಯಲ್ಲಿದ್ದ ರಾಜ್ಯ

ತಿರುವಾಂಕೂರು ಸಂಸ್ಥಾನವನ್ನು ರಾಮವರ್ಮನೆಂಬ ಒಬ್ಬ ದೇಶೀಯ ರಾಜನು ಆಳುತ್ತಿದ್ದನು. ದಕ್ಷನಾದ ರಾಜಾ ಕೇಶವದಾಸ್ ಎಂಬಾತನು ಮುಖ್ಯಮಂತ್ರಿಯಾಗಿದ್ದನು. ಆಗಿನ ಕಾಲದಲ್ಲಿ ದೇಶೀಯ ಸಂಸ್ಥಾನಗಳಲ್ಲಿ , ಸರ್ಕಾರದ ಉನ್ನತ ಅಧಿಕಾರ ಸ್ಥಾನಗಳಿಗಾಗಿ ಅಥವಾ ಮಂತ್ರಿ ಪದವಿಗಳಿಗಾಗಿ ಅನೇಕ ಬಗೆಯ ಪಿತೂರಿಗಳೂ, ವಿದ್ರೋಹದ ಕೃತ್ಯಗಳೂ, ರಾಜಕೀಯ ಕಾರಸ್ಥಾನಗಳೂ ಸರ್ವೇ ಸಾಧಾರಣವಾಗಿ ನಡೆಯುತ್ತಿದ್ದವು.ಇಂತಹ ಚಟುವಟಿಕೆಗಳಲ್ಲಿ ಉನ್ನತ ಅಧಿಕಾರ ಸ್ಥಾನಗಳಲ್ಲಿರುತ್ತಿದ್ದ ಮಂತ್ರಿಗಳೂ, ಸೈನ್ಯಾಧಿಕಾರಿಗಳೂ ಮತ್ತು ಶ್ರೀಮಂತ ಮಾಂಡಲಿಕರೂ ಭಾಗವಹಿಸುತ್ತಿದ್ದರು. ತಿರುವಾಂಕೂರು ಸಂಸ್ಥಾನದಲ್ಲೂ ಇಂತಹ ಪ್ರಕ್ಷುಬ್ದ ರಾಜಕೀಯ ಪರಿಸ್ಥಿತಿ ಇತ್ತು. ಮಹಾರಾಜನಿದ್ದ ಅರಮನೆ ರಾಜದ್ರೋಹಿಗಳ ಮತ್ತು ಪಿತೂರಿಗಾರರ ಕೇಂದ್ರ ಸ್ಥಾನವಾಗಿತ್ತು. ಮಹಾರಾಜನು ತುಂಬಾ ಅಸಮರ್ಥನಾಗಿದ್ದನು. ಜೊತೆಗೆ ರಾಜ್ಯದ ಹಣಕಾಸಿನ ಪರಿಸ್ಥಿತಿಯು ಹದಗೆಟ್ಟು ಹೋಗಿತ್ತು. ತಿರುವಾಂಕೂರು ರಾಜನಿಂದ ಕಂಪನೆಗೆ ಸಂದಾಯವಾಗ ಬೇಕಾಗಿದ್ದ ವಾರ್ಷಿಕ ಪೊಗದಿ ಕೆಲವು ವರ್ಷಗಳಿಂದಲೂ ಬಾಕಿ ನಿಂತು ಹೋಗಿತ್ತು. ಲಕ್ಷಾಂತರ ರೂಪಾಯಿಗಳ ಸಾಲ ಹೊರೆ ರಾಜನ ತಲೆಯ ಮೇಲೆ ಕೂತಿತ್ತು. ಇದರ ಪರಿಣಾಮವಾಗಿ ರಾಜ್ಯ ಬೊಕ್ಕಸದಲ್ಲಿ ತೀವ್ರವಾದ ಹಣಕಾಸಿನ ಕೊರತೆಯಂಟಾಗಿತ್ತು. ಸರ್ಕಾರದ ಉದ್ಯೋಗಸ್ಥರಿಗೆ ನಿಗದಿಯಾಗಿದ್ದ ತಿಂಗಳ ಸಂಬಳವನ್ನು ಕೊಡಲು ಸಾಕಷ್ಟು ಹಣವೂ ರಾಜ್ಯ ಬೊಕ್ಕಸದಲ್ಲಿ ಇರಲಿಲ್ಲ.

ಸಂಸ್ಥಾನದಲ್ಲಿದ್ದ ಇಂತಹ ಪ್ರಕ್ಷುಬ್ದ ಪರಿಸ್ಥಿತಿಯನ್ನು ತಮ್ಮ ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುವ ದುರುದ್ದೇಶದಿಂದ ಕೆಲವು ದೇಶದ್ರೋಹಿಗಳು ರಹಸ್ಯವಾಗಿ ಪಿತೂರಿ ನಡೆಸುತ್ತಿದ್ದರು. ಇದೇ ಸಮಯದಲ್ಲಿ ಮೈಸೂರಿನ ಹುಲಿ ಟಿಪ್ಪೂ ಸುಲ್ತಾನ್ ಹಠಾತ್ತನೆ ಮಲಬಾರಿನ ಮೇಲೆ ದಾಳಿ ಮಾಡಿದನು. ಆ ಸಮಯದಲ್ಲಿ ಮೂವರು ನಂಬೂದ್ರಿ ಸಹೋದರರು ಮಲಬಾರಿನಿಂದ ಓಡಿ ಹೋಗಿ ತಿರುವಾಂಕೂರಿನ ರಾಜದಲ್ಲಿ ಆಶ್ರಯ ಪಡೆದರು.

ಜಯಂತನ್ ನಂಬೂದ್ರಿ

ಈ ಸಹೋದರರ ಪೈಕಿ ಜಯಂತನ್ ನಂಬೂದ್ರಿ ಎಂಬುವನು ಮಹಾಚತುರ. ತಾನೇ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ರಹಸ್ಯವಾಗಿ ಸಂಚು ನಡೆಸುತ್ತಿದ್ದನು. ಮುಖ್ಯಮಂತ್ರಿಯಾಗಿದ್ದ ಕೇಶವ ದಾಸನನ್ನು ಅಧಿಕಾರಚ್ಯುತನನ್ನಾಗಿ ಮಾಡಿ ಅವನನ್ನು ಸೆರೆಯಲ್ಲಿರಿಸಿದನು. ಅಲ್ಲಿ ಅವನಿಗೆ ವಿಷ ಪ್ರಾಶನ ಮಾಡಿಸಿ ಕೊಲ್ಲಿಸಿದನು. ಕಡೆಗೆ ತನ್ನ ಮಹತ್ವಾಕಾಂಕ್ಷೆಯಂತೆ ಮುಖ್ಯಮಂತ್ರಿಯೂ ಆದನು. ರಾಜ ರಾಮವರ್ಮನು 1979ರಲ್ಲಿ ಕಾಲವಾದನು. ಅವನ ತರುವಾಯ ರಾಜನಾದ ಬಲರಾಮ ವರ್ಮನೂ ಒಬ್ಬ ಅಸಮರ್ಥ ಮತ್ತು ದುರ್ಬಲ ದೊರೆಯಾಗಿದ್ದನು. ರಾಜ್ಯದ ಸಮಸ್ತ ಆಡಳಿತವನ್ನು ತನ್ನ ಮುಖ್ಯಮಂತ್ರಿಯ ವಶಕ್ಕೊಪ್ಪಿಸಿ ಬಿಟ್ಟು ಅವನು ವಿಲಾಸೀ ಜೀವನವನ್ನು ನಡೆಸುತ್ತಿದ್ದನು.

ರಾಜ್ಯದ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದ್ದುದರಿಂದ ಅದನ್ನು ಭರ್ತಿ ಮಾಡಲು ಜಯಂತನ್ ನಂಬೂದ್ರಿ ಹಲವಾರು ಯೋಜನೆಗಳನ್ನು ಜಾರಿಗೆ ತಂದನು. ಶ್ರೀಮಂತರ ಮತ್ತು ಜಮೀನ್ದಾರರ ಮೇಲೆ ಅನೇಕ ತೆರಿಗೆಗಳನ್ನು ಹೇರಿ ಲಕ್ಷಾಂತರ ರೂಪಾಯಿಗಳನ್ನು ಬಲವಂತವಾಗಿ ವಸೂಲು ಮಾಡಿದನು. ಒಂದು ವೇಳೆ ಅವರು ತೆರಿಗೆಗಳನ್ನು ಕೊಡಲು ನಿರಾಕರಿಸಿದರೆ ಅಂಥವರನ್ನು ಬಲವಂತವಾಗಿ ಕಾರಾಗೃಹಕ್ಕೆ ದೂಡುತ್ತಿದ್ದನು. ಅನೇಕ ಶ್ರೀಮಂತರನ್ನು ವಿಚಾರಣೆಗೆ ಗುರಿ ಮಾಡದೆ ಬಹಿರಂಗ ಸ್ಥಳಗಳಲ್ಲೇ ಗಲ್ಲಿಗೇರಿಸಿ ಬಿಡುತ್ತಿದ್ದನು.

ವೇಲುತಂಬಿಗೆ ಕರೆ

ಕಡೆಗೆ ಜಯಂತನ್ ನಂಬೂದ್ರಿಯ ಹದ್ದಿನ ಕಣ್ಣು ವೇಲುತಂಬಿಯ ಮೇಲೂ ಬಿತ್ತು. ಕಡೆಯ ಪಕ್ಷ ಇಪ್ಪತ್ತು ರೂಪಾಯಿಗಳಷ್ಟು ಹಣವನ್ನು ಕೊಡಬೇಕೆಂದು ನಂಬೂದ್ರಿ ವೇಲುತಂಬಿಯನ್ನು ಒತ್ತಾಯ ಪಡಿಸಿದನು. ನಂಬೂದ್ರಿಯ ದುಷ್ಟ ಸ್ವಭಾವನ್ನು ಚೆನ್ನಾಗಿ ತಿಳಿದುಕೊಂಡಿದ್ದ ವೇಲುತಂಬಿ ಆ ಸಂದರ್ಭದಲ್ಲಿ ತುಂಬಾ ಚಾಕಚಕ್ಯತೆಯಿಂದ ನಡೆದುಕೊಂಡನು. ಹಣ ಕೊಡುವುದಿಲ್ಲವೆಂದು ಹೇಳಿ ನಂಬೂದ್ರಿಯ ಕೋಪಕ್ಕೆ ತುತ್ತಾಗುವುದ ಅವನಿಗೆ ಇಷ್ಟವಿರಲಿಲ್ಲ. ವಿವೇಕಶಾಲಿಯೂ, ದೂರದೃಷ್ಟಿಯುಳ್ಳವನೂ ಆಗಿದ್ದ ವೇಲುತಂಬಿ ಹಣವನ್ನು ಸಲ್ಲಿಸಲು ತನಗೆ ಮೂರು ದಿನಗಳ ಕಾಲಾವಕಾಶ ಕೊಡಬೇಕು ಎಂದು ನಂಬೂದ್ರಿಯನ್ನು ಕೇಳಿಕೊಂಡನು. ಅವನು ಒಪ್ಪಿಕೊಂಡನು.

ದುರಾಡಳಿತಕ್ಕೆ ಪ್ರತಿಭಟನೆ

ಆದರೆ ವೇಲುತಂಬಿಯ ಯೋಚನೆಯೇ ಬೇರೆಯಾಗಿತ್ತು. ನೆಟ್ಟಗೆ ತನ್ನ ಊರಿಗೆ ಹೋಗಿ ಊರಿನ ಪ್ರಮುಖರ ಸಭೆಯೊಂದನ್ನು ಸೇರಿಸಿದನು ಆ ಸಭೆಯಲ್ಲಿ ಮುಖ್ಯಮಂತ್ರಿ ನಂಬೂದ್ರಿ ನಡೆಸುತ್ತಿದ್ದ ದುರಾಡಳಿದ ವೈಖರಿಯನ್ನೂ, ಅರಮನೆಯಲ್ಲಿ ನಡೆಸುತ್ತಿದ್ದ ಕುತಂತ್ರ ಮತ್ತು ಕಾರಸ್ಥಾನಗಳನ್ನು ಜನರ ಮನಸ್ಸಿಗೆ ಮುಟ್ಟುವಂತೆ ವರ್ಣಿಸಿದನು. ಅವನ ದುರಾಡಳಿತದಿಂದ ರಾಜ್ಯಕ್ಕೆ ಬಂದೊದಗಿದ್ದ ದೊಡ್ಡ ಗಂಡಾಂತರದ ಬಗ್ಗೆಯೂ ಅವನು ಜನರಿಗೆ ಚೆನ್ನಾಗಿ ಮನವರಿಕೆ ಮಾಡಿಕೊಟ್ಟನು. ಅವನ ಮಾತನ್ನು ಕೇಳಿದ ಊರಿನ ಪ್ರಮುಖರು ನಂಬೂದ್ರಿಯ ವಿರುದ್ಧ ರೊಚ್ಚಿಗೆದ್ದರು. ಅವರೆಲ್ಲರೂ ಅವನ ಬೆಂಬಲಿಗರಾಗಿ ನಿಂತು ಅವನ ನಾಯಕತ್ವವನ್ನು ಒಪ್ಪಿಕೊಂಡರು.

ವೇಲುತಂಬಿಯ ನಾಯಕತ್ವದಲ್ಲಿ ತಿರುವಾಂಕೂರಿಗೆ ಹೋಗಿ, ಮಹಾರಾಜನಿಗೆ ಎಲ್ಲ ವಿಷಯಗಳನ್ನೂ ತಿಳಿಸಬೇಕೆಂದೂ, ಮುಖ್ಯಮಂತ್ರಿಯಾಗಿದ್ದ ನಂಬೂದ್ರಿಯ ದುರಾಡಳಿತನ್ನು ಕೊನೆಗಾಣಿಸುವಂತೆ ಮಹಾರಾಜನ ಮನವೊಲಿಸಬೇಕೆಂದೂ ಎಲ್ಲರೂ ತೀರ್ಮಾನಿಸಿದರು. ವೇಲುತಂಬಿ ಬಹಳ ಸಂತೋಷದಿಂದ ಸ್ವಾತಂತ್ರ್ಯ ಹೋರಾಟದ ನಾಯಕತ್ವವನ್ನು ವಹಿಸಿಕೊಂಡನು.

ವೇಲುತಂಬಿಯ ಸಾವಿರಾರು ಅನುಯಾಯಿಗಳು ಸಶಸ್ತ್ರರಾಗಿ, ತುಂಬಾ ಶಿಸ್ತಿನಿಂದ, ಭೇರಿ, ತುತ್ತೂರಿ ಮುಂತಾದ ರಣವಾದ್ಯಗಳನ್ನು ಮೊಳಗಿಸುತ್ತಾ ಮೆರವಣಿಗೆಯಲ್ಲ ತಿರುವಾಂಕೂರಿನ ಕಡೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ ಸ್ವಾತಂತ್ರ್ಯ ಅಭಿಮಾನಿಗಳಾಗಿ ಸಾವಿರಾರು ಪ್ರಜೆಗಳೂ, ರಾಜ್ಯದ ಸೈನ್ಯ ಪಡೆಯವರೂ ಈ ದೊಡ್ಡ ಮೆರವಣಿಗೆಯಲ್ಲಿ ಸೇರಿಕೊಂಡರು. ಇದರಿಂದ ವೇಲುತಂಬಿಗೆ ಇಮ್ಮಡಿ ಉತ್ಸಾಹ ಮತ್ತು ಸ್ಫೂರ್ತಿ ಬಂದಂತಾಯಿತು.

ದುರಾಡಳಿತ ಕೊನೆಗೊಂಡಿತು

ತನ್ನ ಅರಮನೆಯ ಕಡೆ ಬರುತ್ತಿದ್ದ ಪ್ರಜಾಸಮುದಾಯದ ಈ ಬೃಹತ್ ಮೆರವಣಿಗೆಯನ್ನು ಕಂಡು, ರಣಹೇಡಿಯೂ, ಅಸಮರ್ಥನು ಆಗಿದ್ದ ಮಹಾರಾಜನ ಕೈಕಾಲುಗಳು ಥರಥರನೆ ನಡುಗಲಾರಂಭಿಸಿದವು. ರೊಚ್ಚಿಗೆದ್ದಿದ್ದ ಪ್ರಜೆಗಳಿಂದ ಮುಂದೊದಗಬಹುದಾದ ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಜಯಂತ್ ನಂಬೂದ್ರ ಮತ್ತು ಅವನ ಬೆಂಬಲಿಗರು ಅರಮನೆಯಿಂದ ತಲೆಮರೆಸಿಕೊಡು ಓಡಿ ಹೋದರು. ಅಸಹಾಯಕನಾಗಿದ್ದ ಮಹಾರಾಜನು ಬೇರೆ ಮಾರ್ಗವಿಲ್ಲದೆ ತನ್ನ ರಾಯಭಾರಿಯೊಬ್ಬನನ್ನು ಕಳಿಸಿ ವೇಲುತಂಬಿ ಮತ್ತು ಅವನ ಕೆಲವು ಮಿತ್ರರನ್ನು ಅರಮನೆಗೆ ಕರೆಸಿಕೊಂಡನು. ಅವರ ಅಹವಾಲನ್ನೂ ಬೇಡಿಕೆಗಳನ್ನೂ ಸಾವಧಾನವಾಗಿ ಕೇಳಿ ತಿಳಿದುಕೊಂಡನು. ಅವರ ಬೇಡಿಕೆಗಳನ್ನೆಲ್ಲಾ ಖಂಡಿತವಾಗಿ ಈಡೇರಿಸುವುದಾಗಿ ಒಪ್ಪಿಕೊಂಡನು. ದುರಾಡಳಿತ ನಡೆಸುತ್ತಾ ರಾಜ್ಯ ಕಂಟಕನಾಗಿದ್ದ ಜಯಂತನ್ ನಂಬೂದ್ರಿಯನ್ನು ತಕ್ಷಣ ಮುಖ್ಯಮಂತ್ರಿ ಪದವಿಯಿಂದ ವಜಾ ಮಾಡಬೇಕು ಎಂದು ವೇಲುತಂಬಿ ಮಹಾರಾಜರನ್ನು ಆಗ್ರಹ ಪಡಿಸಿದನು. ಅವನ ಬೇಡಿಕೆಯನ್ನು ಮನ್ನಿಸಿ ಮಹಾರಾಜರು ನಂಬೂದ್ರಿಯನ್ನು ತಕ್ಷಣ ಮುಖ್ಯಮಂತ್ರಿ ಹುದ್ದೆಯಿಂದ ವಜಾ ಮಾಡಿ ಅವನಿಗೆ ದೇಶಾಂತರ ಶಿಕ್ಷೆಯನ್ನು ವಿಧಿಸಿದನು. ನಂಬೂದ್ರಿಯ ಇನ್ನಿಬ್ಬರು ಸಹೋದ್ಯೋಗಿಗಳಾಗಿದ್ದ ಶಂಕರ ನಾರಾಯಣನ್ ಚೆಟ್ಟಿ ಮತ್ತು ಮಧುತಾರಕನ್ ಎಂಬುವರನ್ನು ಪ್ರಜೆಗಳ ಮುಂದೆ ವಿಚಾರಣೆಗೆ ಗುರಿಪಡಿಸಲಾಯಿತು. ಅವರಿಬ್ಬರೂ ಅಪರಾಧಿಗಳೆಂದು ಕಂಡು ಬಂದುದರಿಂದ ಅವರ ಕಿವಿಗಳನ್ನು ಕತ್ತರಿಸಿ ಕ್ರೂರವಾಗಿ ಶಿಕ್ಷಿಸಲಾಯಿತು.

ದಿವಾನ್ ವೇಲುತಂಬಿ

ಜಯಂತನ್ ನಂಬೂದ್ರ ಕಾನೂನು ಬಾಹಿರವಾಗಿ ಮತ್ತು ಬಲವಂತವಾಗಿ ಪ್ರಜೆಗಳಿಂದ ವಸೂಲಿ ಮಾಡಿದ್ದ ತೆರಿಗೆಯ ಹಣವನ್ನು ಪುನಃ ಅವರಿಗೆ ಹಿಂದಿರುಗಿಸುವಂತೆ ಮಹಾರಾಜನು ಆಜ್ಞೆ ಮಾಡಿದನು. ಉಪ್ಪಿನ ಮೇಲೆ ಹಾಕಿದ್ದ ತೆರಿಗೆಯನ್ನು ತೆಗೆದು ಹಾಕಲಾಯಿತು. ನಂಬೂದ್ರಿಯ ಇನ್ನಿಬ್ಬರು ಸಹೋದರರನ್ನು ರಾಜ್ಯದ ಹೊರಗೆ ಗಡಿಪಾರು ಮಾಡಲಾಯಿತು.

ಮಹಾರಾಜರು ಕೈಗೊಂಡ ದಿಟ್ಟ ಕ್ರಮಗಳಿಂದ ವೇಲುತಂಬಿಗೂ ಪ್ರಜೆಗಳಿಗೂ ಸಂತೃಪ್ತಿ ಸಮಾದಾನಗಳು ಉಂಟಾದವು. ರೊಚ್ಚಿಗೆದ್ದಿದ್ದ ಪ್ರಜೆಗಳು ಸಮಾಧಾನ ಚಿತ್ತರಾಗಿ ತಮ್ಮ ಹೋರಾಟವನ್ನು ನಿಲ್ಲಿಸಿದ್ದನ್ನು ನೋಡಿ ಮಹಾರಾಜನಿಗೂ ಸಂತೋಷವಾಯಿತು.

ಹೀಗೆ ವೇಲು ತಂಬಿ ಪ್ರಜೆಗಳ ಬೆಂಬಲದಿಂದ ಪ್ರಾರಂಭಿಸಿದ್ದ ಸ್ವಾತಂತ್ರ್ಯ ಹೋರಾಟ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಇದರಿಂದ ಅವನ ಕೀತಿ ಇಡೀ ರಾಜ್ಯದಲ್ಲೆಲ್ಲಾ ವ್ಯಾಪಿಸಿತು. ಪ್ರಜೆಗಳು ಅವನನ್ನು ತಮ್ಮ ಮುಂದಿನ ನಾಯಕನೆಂದು ಒಪ್ಪಿಕೊಂಡರು. ಅವನೇ ರಾಜ್ಯದ ಮುಖ್ಯಮಂತ್ರಿಯಾಗಬೇಕೆಂಬ ಆಗ್ರಹ  ಪೂರ್ವಕವಾದ ಬೇಡಿಕೆಯನ್ನು ಮಹಾರಾಜನಲ್ಲಿ ಮಂಡಿಸಿದರು. ಮಹಾರಾಜನಿಗೆ ವೇಲುತಂಬಿಯಲ್ಲಿದ್ದ ಮಹಾನಾಯಕ ಗುಣಗಳ ಪರಿಚಯ ಚೆನ್ನಾಗಿ ಆಗಿದ್ದುದರಿಂದ ಬಹಳ ಸಂತೋಷದಿಂದ ವೇಲುತಂಬಿಯನ್ನು ರಾಜ್ಯದ ಮುಖ್ಯಮಂತ್ರಿಯ ಹುದ್ದೆಗೆ ನೇಮಿಸಿದನು. ಅವನನ್ನು “ದಿವಾನ್ ” ಎಂದು ಕರೆದನು.

ಬೃಹತ್‌ಮೆರವಣಿಗೆಯ ನಾಯಕನಾಗಿ ಹೊರಟ ವೇಲುತಂಬಿ

ವೇಲುತಂಬಿ ದಿವಾನ್ ಪದವಿಯನ್ನು ಆಲಂಕರಿಸಿದಾಗ (೧೮೦೧) ಅವನಿಗೆ ಕೇವಲ ಮೂವತ್ತಾರು ವಯಸ್ಸಾಗಿತ್ತು. ಅವನು ರಾಜ್ಯಕ್ಕೆ ತಕ್ಷ ಆಡಳಿತವನ್ನು ಕೊಡುವನೆಂಬ ದೃಢ ವಿಶ್ವಾಸವನ್ನು ಪ್ರಜೆಗಳು ಹೊಂದಿದ್ದರು.

ಪ್ರಜಾಹಿತದ ದಕ್ಷ ಆಡಳಿತ

ವೇಲುತಂಬಿ ರಾಜ್ಯದ ದಿವಾನನಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಜನರಿಗೆ ಬಹಳ ಉಪಯುಕ್ತವಾದ ಅನೇಕ ಸುಧಾರಣೆಗಳನ್ನು ಜಾರಿಗೆ ತಂದನು. ರಾಜ್ಯದ ಹಣಕಾಸಿನ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದುದರಿಂದ ಮೊದಲು ಅದನ್ನು ಉತ್ತಮ ಪಡಿಸುವುದರ ಕಡೆಗೆ ಅವನು ಗಮನವಿತ್ತನು.

ಮಹಾರಾಜನು ಈಸ್ಟ್ ಇಂಡಿಯಾ ಕಂಪೆನಿಗೆ ಕೊಡಬೇಕಾಗಿದ್ದ ವಾರ್ಷಿಕ ಪೊಗದಿ ಲಕ್ಷಾಂತರ ರೂಪಾಯಿಗಳನ್ನು ಬಾಕಿ ನಿಂತಿಹೋಗಿತ್ತು. ಹಿಂದಿನ ಮುಖ್ಯಮಂತ್ರಿಯಾಗಿದ್ದ ಜಯಂತನ್ ನಂಬೂದ್ರಿ ಖಜಾನೆಯಲ್ಲಿದ್ದ ಹಣವನ್ನೆಲ್ಲಾ ದುರುಪಯೋಗಪಡಿಸಿ ಕೊಂಡಿದ್ದನು. ಅನೇಕ ದುಂದು ವೆಚ್ಚಗಳನ್ನು ಮಾಡಿ ಖಜಾನೆಯನ್ನು ಬರಿದು ಮಾಡಿ ಹೋಗಿದ್ದನು. ಅದನ್ನು ಭರ್ತಿ ಮಾಡುವ ಜವಾಬ್ದಾರಿ ವೇಲುತಂಬಿಯ ಮೇಲೆ ಬಿತ್ತು. ಮೊದಲು ಅವನು ಕಂಪೆನಿಗೆ ಕೊಡಬೇಕಾಗಿದ್ದ ವಾರ್ಸಿಕ ಪೊಗದಿಯ ಬಾಕಿಯನ್ನು ಪೂರ್ತಿ ಸಲ್ಲಿಸಿದನು. ಅರಮನೆಯಲ್ಲಿ ಮತ್ತು ಸರ್ಕಾರದ ಇಲಾಖೆಗಳಲ್ಲಿ ನಡೆಯುತ್ತಿದ್ದ ದುಂದು ಖರ್ಚನ್ನು ತಡೆಗಟ್ಟಿ ಖಜಾನೆಯಲ್ಲಿ ಹಣವನ್ನು ಶೇಖರಿಸಿಟ್ಟನು.

ಆಹಾರ ಬೆಳೆಗಳ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ವೇಲುತಂಬಿ ಸಾವಿರಾರು ಎಕರೆಯಷ್ಟು ಪಾಳು ಬಿದ್ದಿದ್ದ ಜಮೀನನ್ನು ವ್ಯವಸಾಯೋಪಯೋಗಿಯನ್ನಾಗಿ ಮಾಡಿದನು. ಆ ಜಮೀನಿನಲ್ಲಿ ಆಹಾರ ಬೆಳೆಗಳನ್ನು ಬೆಳೆಯಲು ರೈತರಿಗೂ, ಜಮೀನ್ದಾರರಿಗೂ ಅಗತ್ಯವಾದ ಹಣದ ನೆರವನ್ನು ನೀಡಿದರು. ಹಣದ ಜತೆಗೆ ವ್ಯವಸಾಯದ ಉಪಕರಣಗಳನ್ನೂ, ಉಳ್ಳುವುದಕ್ಕೆ ಎತ್ತುಗಳನ್ನೂ ಒದಗಿಸಿದನು. ಅಗತ್ಯವಾದ ಕಡೆಗಳಲ್ಲಿ ನೀರಾವರಿ ಸೌಕರ್ಯಗಳನ್ನೇರ್ಪಡಿಸಿದನು.

ವಾಣಿಜ್ಯ ವ್ಯಾಪಾರಗಳಿಗೆ ನೆರವು

ಆಗಿನ ಕಾಲದಲ್ಲಿ ತಿರುವಾಂಕೂರು ಮತ್ತು ಮಲಬಾರ್ ರಾಜ್ಯಗಳಿಂದ ಮೆಣಸು ಮುಂತಾದ ಸಾಂಬಾರ ಪದಾರ್ಥಗಳನ್ನೂ, ಹೊಗೆ ಸೊಪ್ಪು ಮುಂತಾದ ವಾಣಿಜ್ಯ ಬೆಳೆಗಳೂ, ಯುರೋಪ್ ಮತ್ತಿತರ ಪಾಶ್ಚಾತ್ಯ ದೇಶಗಳಿಗೆ ಹೇರಳವಾಗಿ ರಫ್ತು ಮಾಡಲ್ಪಡುತ್ತಿದ್ದವು. ಈ ವಿದೇಶೀ ರಫ್ತು ವ್ಯಾಪಾರದಿಂದ ರಾಜ್ಯದ ಬೊಕ್ಕಸಕ್ಕೆ ತುಂಬಾ ಹಣ ಬರುತ್ತಿತ್ತು. ಆದರೆ ಈ ವಿದೇಶೀ ವ್ಯಾಪಾರ, ವಹಿವಾಟುಗಳು ಕೇವಲ ಸರ್ಕಾರ ಸ್ವಾಮ್ಯದಲ್ಲಿತ್ತು. ಖಾಸಗೀ ವ್ಯಾಪಾರಸ್ಥರು ಅದರಲ್ಲಿ ಭಾಗವಹಿಸುವುದಕ್ಕೆ ಅವಕಾಶವಿರಲಿಲ್ಲ. ವೇಲುತಂಬಿ ಖಾಸಗೀ ವ್ಯಾಪಾರಸ್ಥರೂ ಈ ವಿದೇಶೀ ವ್ಯಾಪಾರದಲ್ಲ ಭಾಗವಹಿಸಬಹುದೆಂದು ಅವಕಾಶ ಕೊಟ್ಟ. ಮೆಣಸು ಮುಂತಾದ ಸಾಂಬಾರ ಪದಾರ್ಥಗಳನ್ನು ಬೆಳೆಯುವುದಕ್ಕೆ ರೈತರಿಗೂ ಮತ್ತು ಜಮೀನ್ದಾರರಿಗೂ ಪ್ರೋತ್ಸಾಹ ಕೊಟ್ಟ. ಅವರಿಗೆ ಅಗತ್ಯವಾಗಿದ್ದ ಸಾಧನೆ ಸಲಕರಣೆಗಳನ್ನು ಸರ್ಕಾರದ ಖಿರ್ಚಿನಲ್ಲಿ ಒದಗಿಸಲು ಏರ್ಪಾಡು ಮಾಡಿದ. ಅವರು ತಮ್ಮ ಜಮೀನಿನಲ್ಲಿ ಬೆಳೆಯುತ್ತಿದ್ದ ಬೆಳೆಗಳನ್ನು ನಿಗದಿಯಾದ ನ್ಯಾಯಬೆಲೆಗೆ ಖರೀದಿ ಮಾಡಿ ಅದನ್ನು ವಿದೇಶಗಳಿಗೆ ರಫ್ತು ಮಾಡುವ ಹೊಸ ವ್ಯಾಪಾರ ಮಾಡುವ ಪದ್ಧತಿಯನ್ನು ಜಾರಿಗೆ ತಂದನು. ಈ ಹೊಸ ವ್ಯಾಪಾರ ನೀತಿಯಿಂದ ಪ್ರೋತ್ಸಾಹ ಪಡೆದ ರೈತರೂ, ಜಮೀನ್ದಾರರೂ ಹೆಚ್ಚು ಪ್ರಮಾಣದಲ್ಲ ವಾಣಿಜ್ಯ ಬೆಳೆಗಳನ್ನು ಬೆಳೆಯಲಾರಂಭಿಸಿದರು. ಅವರಿಗೆ ಹೇರಳವಾದ ಲಾಭ ದೊರೆಯುತ್ತಿತ್ತು, ಅಲ್ಲದೆ ರಾಜ್ಯದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿಗಳ ಆದಾಯ ಬರುತ್ತಿತ್ತು. ಇದರಿಂದ ಖಾಲಿಯಾಗಿದ್ದ ಖಜಾನೆ ಭರ್ತಿಯಾಗಿ ರಾಜ್ಯದ ಹಣಕಾಸಿನ ಪರಿಸ್ಥಿತಿ ಬಹುಮಟ್ಟಿಗೆ ಸುಧಾರಿಸಿತು.

ವೇಲುತಂಬಿ ವ್ಯವಸಾಯಕ್ಕೆ ಕೊಟ್ಟಷ್ಟೇ ಪ್ರೋತ್ಸಾಹವನ್ನು ವ್ಯಾಪಾರ ಮತ್ತು ಗೃಹ ಕೈಗಾರಿಕೆಗಳ ಅಭಿವೃದ್ಧಿಗೂ ಕೊಟ್ಟನು. ವಿದೇಶೀ ವ್ಯಾಪಾರ ಹತ್ತು ಪಟ್ಟು ಹೆಚ್ಚಿತು. ಗೃಹ ಕೈಗಾರಿಕೆಗಳಲ್ಲಿ ತೊಡಗಿದ್ದವರಿಗೆ ಹಣ ಸಹಾಯವನ್ನು ನೀಡಿದ, ಅಲ್ಲದೆ ಅವರಿಗೆ ಅಗತ್ಯವಾಗಿದ್ದ ಉಪಕರಣಗಳನ್ನೂ ಒದಗಿಸಿ ಅವರ ಉತ್ಪಾದನೆಯನ್ನು ಹೆಚ್ಚಿಸಿದನು. ಅವರು ತಯಾರಿಸುತ್ತಿದ್ದ ಪದಾರ್ಥಗಳಿಗೆ ಮಾರುಕಟ್ಟೆಯನ್ನು ಹುಡುಕಿಕೊಟ್ಟ ಅವರ ಸಂಪಾದನೆಯನ್ನು ಹೆಚ್ಚಿಸಿದನು.

ಭ್ರಷ್ಟಾಚಾರಕ್ಕೆ ಕೊಡಲಿ

ಸರ್ಕಾರದ ಅಧಿಕಾರಿಗಳಲ್ಲಿ ಲಂಚಕೋರತನ, ಭ್ರಷ್ಟಾಚಾರ, ಅಧ್ಯಕ್ಷತೆ ತುಂಬಿದ್ದವು. ಇವನ್ನು ನಿವಾರಿಸುವ ಉದ್ದೇಶದಿಂದ ವೇಲುತುಂಬಿ ಕೆಲವು ಮುಖ್ಯ ಕಾರ್ಯಕ್ರಮಗಳನ್ನು ಕೈಗೊಂಡನು. ಸರ್ಕಾರದ ವಿವಿಧ ಇಲಾಖೆಗಳನ್ನು ಪುನರ್ ರಚಿಸಿ ಅವುಗಳು ಪರಸ್ಪರ ಹೊಂದಾಣಿಕೆಯಿಂದ ಮತ್ತು ಸಮನ್ವಯತೆಯಿಂದ ಕೆಲಸ ಮಾಡುವಂಥೆ ವ್ಯವಸ್ಥೆ ಮಾಡಿದನು. ಸರ್ಕಾರದ ಅಧಿಕಾರಿಗಳು ಯಾರ ಭಯವು, ದಯಾದಕ್ಷಿಣ್ಯಗಳೂ ಇಲ್ಲದಂತೆ ತಮ್ಮ ಕರ್ತವ್ಯ ಪಾಲನೆ ಮಾಡಿಕೊಂಡು ಹೋಗುವಂತೆ ಅವರಿಗೆ ಆದೇಶಗಳನ್ನು ನೀಡಿದನು. ಅವರು ತನ್ನ ಆದೇಶಗಳಂತೆ ಕೆಲಸ ಮಾಡುತ್ತಾರೋ ಇಲ್ಲವೋ ಎಂಬ ವಿಷಯದಲ್ಲ ತನಗೆ ಸುದ್ದಿ ತಿಳಿಸುವುದಕ್ಕೆ ಗೂಢಚಾರರ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡನು. ಅವರು ವೇಲುತಂಬಿಗೆ ಸರ್ಕಾರದ ಉನ್ನತ ಅಧಿಕಾರಿಗಳ ಚಲನ-ವಲನಗಳ ಬಗ್ಗೆ ರಹಸ್ಯವಾಗಿ ವರದಿಗಳನ್ನು ನೀಡುತ್ತಿದ್ದರು. ತಪ್ಪಿತಸ್ಥರೆಂದು ಕಂಡು ಬಂದ ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತಿದ್ದನು.

ವೇಲುತುಂಬಿಯ ಸೈನ್ಯಕ್ಕೂ ಇಂಗ್ಲಿಷರ ಸೈನ್ಯಕ್ಕೂ ಯುದ್ಧವಾಯಿತು.

ಪ್ರಜೆಗಳ ಕುಂದು ಕೊರತೆಗಳನ್ನು ಕೇಳಿ ತಿಳಿದುಕೊಳ್ಳುವುದಕ್ಕೂ, ಅವರ ಅಹವಾಲುಗಳನ್ನು ಖುದ್ದಾಗಿ ಪರಿಶೀಲಿಸುವುದಕ್ಕೂ, ವೇಲುತಂಬಿ ರಾಜ್ಯದ ಮೂಲೆ, ಮೂಲೆಗಳಗಳಲ್ಲೂ ಸಂಚಾರ ಮಾಡುತ್ತಿದ್ದನು. ಇದರಿಂದ ದಿವಾನನಾಗಿದ್ದ ಅವನಿಗೆ ಪ್ರಜೆಗಳೊಡನೆ ನೇರವಾದ ಮತ್ತು ನಿಕಟ ಸಂಪರ್ಕ ಬೆಳೆಸುವುದಕ್ಕೆ ಅವಕಾಶ ಏರ್ಪಟ್ಟಿತು. ಹೀಗೆ ಸಂಚಾರದಲ್ಲಿದ್ದಾಗ ಜನರ ಕುಂದು-ಕೊರತೆಗಳನ್ನು ಕೇಳಿ ತಿಳಿದುಕೊಂಡು ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಸ್ಥಳದಲ್ಲೇ ಸರಕಾರಿ ಅಧಿಕಾರಿಗಳಿಗೆ ಆದೇಶಗಳನ್ನು ಕೊಡುತ್ತಿದ್ದನು.ಜಮೀನು ವ್ಯಾಜ್ಯಗಳು, ಕುಟುಂಬ ಕಲಹಗಳು, ಸರಕಾರಿ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆಪಾದನೆಗಳು ಮುಂತಾದ ಪ್ರಕರಣದಲ್ಲಿ, ಆಯಾ ಊರಿನ ಗಣ್ಯ ವ್ಯಕ್ತಿಗಳನ್ನೊಳಗೊಂಡ ವಿಚರಣಾ ಸಭೆಗಳನ್ನೇರ್ಪಡಿಸಿ, ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯಲ್ಲಿ ನ್ಯಾಯ ತೀರ್ಪುಗಳನ್ನು ಕೊಡುತ್ತಿದ್ದನು. ಅಪರಾಧಿಗಳೆಂದು ಕಂದು ಬಂದ ವ್ಯಕ್ತಿಗಳನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುತ್ತಿದ್ದನು.

ಸರ್ಕಾರದ ಲೆಕ್ಕ ಪತ್ರಗಳಲ್ಲಿ ಮತ್ತು ದಾಖಲೆಗಳಲ್ಲಿ ಸುಳ್ಳು ಅಂಕಿ ಅಂಶಗಳನ್ನು ಸೇರಿಸಿ, ಜನರಿಗೂ, ಸರ್ಕಾರಕ್ಕೂ ದ್ರೋಹ ಬಗೆಯಿತ್ತಿದ್ದ ಭ್ರಷ್ಟ ಅಧಿಕಾರಿಗಳನ್ನು ವೇಲುತಂಬಿಯು ಕ್ರೂರವಾಗಿ ಶಿಕ್ಷಿಸುತ್ತಿದ್ದನು. ಅವರ ಬೆರಳುಗಳನ್ನೇ ಕತ್ತರಿಸಿ ಹಾಕುವಂತೆ ಆದೇಶಗಳನ್ನಿತ್ತು, ಅವನ್ನು ತನ್ನ ಕಣ್ಣೆದುರಿನಲ್ಲೇ ಕಾರ್ಯಗತ ಗೊಳಿಸುತ್ತಿದ್ದನು.

ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ

ವೇಲುತಂಬಿ ರಾಜ್ಯಕ್ಕೆ ಆಡಳಿತವನ್ನು ಕೊಟ್ಟ ನಂತರ, ವಿದ್ಯಾಭ್ಯಾಸ ಪದ್ಧತಿಯ ಸುಧಾರಣೆಯ ಕಡೆಗೆ ಗಮನ ಹರಿಸಿದನು. ಅವನ ಕಾಲದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹಳ್ಳಿಗಳಲ್ಲಿ ವ್ಯವಸ್ಥಿತವಾದ ರೀತಿಯಲ್ಲಿ ಸಾಕಷ್ಟು ಶಾಲೆಗಳಿರಲಿಲ್ಲ. ಶ್ರೀಮಂತರ ಮಕ್ಕಳು ಉಪಾಧ್ಯಾಯರುಗಳನ್ನು ತಮ್ಮ ಮನೆಗೇ ಬರಮಾಡಿಕೊಂಡು ತಮ್ಮ ಮಕ್ಕಳಿಗೆ ಪಾಠ ಹೇಳಿಸುತ್ತಿದ್ದರು. ಆದರೆ ಬಡವರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲಗಳಿರಲಿಲ್ಲ. ಇದನ್ನು ಮನಗಂಡ ವೇಲುತಂಬಿ ಪ್ರತಿಯೊಂದು ಹಳ್ಳಿಯಲ್ಲೂ ಒಂದು ಶಾಲೆಯನ್ನು ಪ್ರಾಥಮಿಕ ಶಾಲೆಯನ್ನು ಸ್ಥಾಪಿಸುವುದಕ್ಕೆ ಸೂಕ್ತ ಕ್ರಮ ಕೈಗೊಂಡನು.

ಪ್ರಾಮಾಣಿಕತೆಯ ಶತ್ರುಗಳು

ವೇಲುತಂಬಿ ಜಾರಿಗೆ ತಂದ ಆಡಳಿತ ಸುಧಾರಣೆಗಳಿಂದಲೂ, ಶಿಸ್ತಿನ ಕ್ರಮಗಳಿಂದಲೂ, ಸರಕಾರದ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯಲು ಅವಕಾಶವಾಯಿತು. ಅವನು ರಾಜ್ಯಕ್ಕೆ ಕೊಟ್ಟ ದಕ್ಷ ಆಡಳಿತದಿಂದ ಸಾಮಾನ್ಯ ಪ್ರಜೆಗಳು ಸಂತುಷ್ಟರಾಗಿದ್ದರು. ಆದರೆ ವೇಲುತಂಬಿಗೆ ಶತ್ರುಗಳಿಲ್ಲದೇ ಇರಲಿಲ್ಲ. ತನ್ನ ಕಟ್ಟು-ನಿಟ್ಟಾದ ಮತ್ತು ಶಿಸ್ತಿನ ಆಡಳಿತ ನೀತಿಯಿಂದ ಅವನು ಸರ್ಕಾರದ ಹಿರಿಯ ಅಧಿಕಾರಿಗಳ ಮತ್ತು ಅವರ ಬಾಲಬುಡುಕರಾಗಿದ್ದ ಶ್ರೀಮಂತರ ದ್ವೇಷವನ್ನು ಕಟ್ಟಿಕೊಳ್ಳಬೇಕಾಯಿತು. ಭ್ರಷ್ಟಾಚಾರದಲ್ಲಿ ನಿರತರಾಗಿದ್ದ ಹಿರಿಯ ಅಧಿಕಾರಿಗಳ ಪಾಲಿಗೆ ವೇಲುತಂಬಿ ಸಿಂಹಸ್ವಪ್ನವಾಗಿದ್ದನು. ಹಿಂದಿನಂತೆ ಅವರು ಮನಸ್ಸು ಬಂದಂತೆ ಅಧಿಕಾರ ಚಲಾಯಿಸುವಂತಿರಲಿಲ್ಲ. ಬಡವರನ್ನು ಹೆದರಿಸಿ ಪ್ರಜೆಗಳನ್ನು ಹಿಂಸಿಸಿ ಹಣ ಮಾಡಿಕೊಳ್ಳುವಂತಿರಲಿಲ್ಲ. ಅವರೆಲ್ಲರೂ ಅವನ ಶಿಸ್ತಿನ ಕ್ರಮಗಳನ್ನು ಪ್ರತಿಭಟಿಸ ತೊಡಗಿದರು. ದಿವಾನ್ ಪದವಿಯಿಂದ ಅವನನ್ನು ಹೊರಗಟ್ಟಲು ನಾನಾ ಬಗೆಯ ಕುತಂತ್ರಗಳನ್ನು ನಡೆಸಿದರು. ಆದರೆ ಅವರ ಗೊಡ್ಡು ಬೆದರಿಕೆಗಳಿಗೆ ಸ್ವಲ್ಪವೂ ಜಗ್ಗದ ವೇಲುತಂಬಿ ಅವರ ಗುಪ್ತ ಕಾರಸ್ಥಾನಗಳನ್ನೆಲ್ಲಾ ಬಯಲಿಗೆಳೆದು ಅವರಿಗೆ ತಕ್ಕ ಶಿಕ್ಷೆಯನ್ನು ವಿಧಿಸಿದನು. ಇಂಗ್ಲಿಷರ ಪರವಾಗಿ ರಾಜ್ಯದಲ್ಲಿ ಒಬ್ಬ ಅಧಿಕಾರಿ ಇರುತ್ತಿದ್ದನು. ಅವನನ್ನು “ರೆಸಿಡೆಂಟ್” ಎಂದು ಕರೆಯುತ್ತಿದ್ದರು. ಈ ದಿನಗಳಲ್ಲಿ ರೆಸಿಡೆಂಟ್ ಆಗಿದ್ದ ಕರ್ನಲ್ ಮೆಕಾಲೆಯ ಸಂಪೂರ್ಣ ಸಹಕಾರ ಪಡೆದಿದ್ದ ವೇಲುತಂಬಿಗೆ ದಂಗೆಕೋರ ಅಧಿಕಾರಿಗಳ ಹುಟ್ಟಡಗಿಸುವುದು ಕಷ್ಟವೇನಾಗಲಿಲ್ಲ. ವೇಲುತಂಬಿ ಜಾರಿಗೆ ತಂದ ಹಲವಾರು ಆಡಳಿತ ಸುಧಾರಣೆಗಳನ್ನೂ ಅವನ ದಕ್ಷ ಆಡಳಿತ ಕ್ರಮವನ್ನೂ ರೆಸಿಡೆಂಟನು ಬಹಳ ಮೆಚ್ಚಿ ಕೊಂಡಿದ್ದನು.

ಕಾಳಸಂತೆ ಮತ್ತು ಕಳ್ಳ ಸಾಗಾಣಿಕೆ ಮುಂತಾದ ದುರ್ವ್ಯಹಾರಗಳಲ್ಲಿ ತೊಡಗಿದ್ದ ಸಮಾಜದ್ರೋಹಿಗಳೂ ವೇಲುತಂಬಿಯನ್ನು ಕಂಡರೆ ಬಹಳ ಭಯ ಪಡುತ್ತಿದ್ದರು. ಅವನು ಯಾವ ದಾಕ್ಷಿಣ್ಯ ಮತ್ತು ಭೀತಿಯೂ ಇಲ್ಲದೆ ಅಪರಾಧಿಗಳನ್ನು ಶಿಕ್ಷಿಸುತ್ತಿದ್ದುದೇ ಇದಕ್ಕೆ ಕಾರಣ.

ಮಹಾರಾಜನ ಪಾತ್ರ

ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದ ಭ್ರಷ್ಟಚಾರೀ ಅಧಿಕಾರಿಗಳು, ಮಹಾರಾಜನ ಆಪ್ತ ಮಿತ್ರರಾಗಿದ್ದ ಕೆಲವು ಶ್ರೀಮಂತರೂ ಒಟ್ಟಿಗೆ ಸೇರಿಕೊಂಡು ವೇಲುತಂಬಿಯ ವಿರುದ್ಧ ರಹಸ್ಯವಾಗಿ ಪಿತೂರಿಯಲ್ಲಿ ತೊಡಗಿದ್ದರು. ಅವರೆಲ್ಲರೂ ವೇಲುತಂಬಿಯ ಮೇಲೆ ಸುಳ್ಳು ಆಪಾದನೆಗಳನ್ನು ಸೃಷ್ಟಿಸಿ ಮಹಾರಾಜನ ಕಿವಿಯಲ್ಲಿ ಚಾಡಿ ಚುಚ್ಚುತ್ತಿದ್ದರು. ಇಂತಹ ಪಿತೂರಿಯ ನಾಯಕತ್ವವನ್ನು ಅರಮನೆಯ ಹಿರಿಯ ಅಧಿಕಾರಿಯಾಗಿದ್ದ ಕುಂಜನೀಲನ್ ಪಿಳ್ಳೆ. ರಾಜ್ಯದ ಸೈನ್ಯಾಧಿಕಾರಿ ಸುಬ್ಬಯ್ಯ, ಮೇಜರ್ ಪದ್ಮನಾಭ್ ಚಂಪಕರಾಮನ್ ಮುಂತಾದವರು ವಹಿಸಿಕೊಂಡಿದ್ದರು.

ತನ್ನ ಶತ್ರುಗಳೆಲ್ಲರೂ ಒಟ್ಟಿಗೆ ಸೇರಿಕೊಂಡು ತನ್ನ ವಿರುದ್ಧ ಗುಪ್ತ ಕಾರಸ್ಥಾನ ನಡೆಸುತ್ತಿದ್ದ, ಸಮಾಚಾರ ವೇಲುತಂಬಿಗೂ ತಿಳಿದಿತ್ತು. ಆದರೆ ಅವನು ಸ್ವಲ್ಪವೂ ವಿಚಲಿತನಾಗದೆ ತನ್ನ ಕರ್ತವ್ಯ ಲೋಪವಾಗದಂತೆ, ದಿವಾನ್ ಪದವಿಯ ಘನತೆ, ಗೌರವಗಳನ್ನು ಕಾಪಾಡಿಕೊಂಡು ಬರುತ್ತಿದ್ದನು. ತುಂಬಾ ದಕ್ಷತೆಯಿಂದಲೂ, ನಿಸ್ಪೃಹತೆಯಿಂದಲೂ ಆಡಳಿತ ನಡೆಸುತ್ತಿದ್ದನು.

ಮಹಾರಾಜನು ವೇಲುತಂಬಿಯನ್ನು ಮೆಚ್ಚಿ ಅವನನ್ನು ದಿವಾನನನ್ನಾಗಿ ನೇಮಿಸಿದ್ದು ನಿಜ. ಆದರೆ ಅವನಿಗೆ ಸ್ವತಃ ಸರಿಯಾಗಿ ಯೋಚಿಸುವ ಶಕ್ತಿ ಇರಲಿಲ್ಲ. ಚಾಡಿಕೋರರ ಮತ್ತು ಸ್ವಾರ್ಥ ಸಾಧಕರ ಮಾತುಗಳಿಗೆ ಕಿವಿಗೊಡುತ್ತಿದ್ದವನು ವೇಲುತಂಬಿಯನ್ನು ದ್ವೇಷಿಸುವುದಕ್ಕೆ ಪ್ರಾರಂಭಿಸಿದನು.

ಸಿಪಾಯಿಗಳ ದಂಗೆ
ವೇಲುತಂಬಿ ಜನಪ್ರಿಯತೆಯನ್ನೂ ಕಳೆದುಕೊಳ್ಳುವಂತೆಯೂ ಆಯಿತು. ಇದಕ್ಕೆ ಕಾರಣ ಅವನು ಸೈನ್ಯದ ವೆಚ್ಚದಲ್ಲಿ ಜಾರಿಗೆ ತಂದ ಮಿತವ್ಯಯ ಕ್ರಮ. ಇದನ್ನು ಸಿಪಾಯಿಗಳು ತೀವ್ರವಾಗಿ ವಿರೋಧಿಸಿದರು. ಸೈನಿಕರಿಗೆ ಯುದ್ಧ ಕಾಲದಲ್ಲಿ ಕೊಡುತ್ತಿದ್ದ ಕೆಲವು ಭತ್ಯೆಗಳನ್ನು ಖೋತಾ ಮಾಡಿದ, ಇದರಿಂದ ಸೈನಿಕರೂ, ಅಧಿಕಾರಿಗಳೂ, ವೇಲುತಂಬಿಯ ವಿರುದ್ಧ ತಿರುಗಿ ಬಿದ್ದರು. ಸೈನಿಕರು ದಂಗೆ ಎದ್ದರು. ಆದರೆ ರೆಸಿಡೆಂಟ್ ಮಕಾಲೆಯ ಬೆಂಬಲದಿಂದಲೂ, ಕಂಪೆನಿಯ ಸೈನ್ಯ ಸಹಾಯದಿಂದಲೂ ವೇಲುತಂಬಿ ಸಿಪಾಯಿಗಳ ದಂಗೆಯನ್ನೂ ಸಂಪೂರ್ಣವಾಗಿ ಅಡಗಿಸಿದನು.

ಇಂಗ್ಲಿಷರ ಕುತಂತ್ರ

ಇಂಗ್ಲಿಷರು ನಡೆಸುತ್ತಿದ್ದ ಈಸ್ಟ್ ಇಂಡಿಯಾ ಕಂಪೆನಿಯು, ಆಗಲೇ ಹೇಳಿದಂತೆ ಕ್ರಮೇಣ ತನ್ನ ಪ್ರಭುತ್ವವನ್ನು ಬೆಳೆಸುತ್ತಿತ್ತು. ಇಲ್ಲಿನ ರಾಜರುಗಳು ನಡುವಿನ ದ್ವೇಷ, ಅಸೂಯೆ, ರಾಜ್ಯಗಳಲ್ಲಿ ಅಶಿಸ್ತು ಇವನ್ನೇ ಗಮನಿಸುತ್ತಿದ್ದು ಅವುಗಳ ಲಾಭ ಪಡೆಯುತ್ತಿತ್ತು. ಕಂಪೆನಿಯ ಅಧಿಕಾರಿಗಳು ಮೊದಲಿನಿಂದಲೂ ತಿರುವಾಂಕೂರಿನಲ್ಲಿದ್ದ ಅರಾಜಕತೆಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ನೆಪ ಮಾತ್ರಕ್ಕೆ ಸಿಂಹಾಸನದ ಮೇಲೆ ಕುಳಿತಿದ್ದ ಮಹಾರಾಜನ ದೌರ್ಬಲ್ಯವನ್ನೂ, ಅಸಮರ್ಥತೆಯನ್ನೂ ಕಂಪೆನಿಯ ಅಧಿಕಾರಿಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು. ಅವನ ಮೇಲಿನ ತಮ್ಮ ಹಿಡಿತವನ್ನು ಬಲಪಡಿಸಿಕೊಂಡು ಹೇಗಾದರೂ ಮಾಡಿ ತಿರುವಾಂಕೂರು ರಾಜ್ಯವನ್ನು ಕಂಪೆನಿಯ ಆಡಳಿತಕ್ಕೆ ಸೇರಿಸಿಕೊಂಡು ಬಿಡಬೇಕೆಂದು ಅವರ ಒಳಸಂಚಾಗಿತ್ತು.

ಆದರೆ ದಕ್ಷ ದಿವಾನನಾಗಿದ್ದ ವೇಲುತಂಬಿ ಕಂಪೆನಿಯ ಒಳ ಸಂಚು ಕಾರ್ಯ ರೂಪಕ್ಕೆ ಬರದಂತೆ ಅವರ ವಿರುದ್ಧ ಸ್ವಾತಂತ್ರ್ಯ ಸಂಗ್ರಾಮವನ್ನು ಹೂಡಿದ್ದನು. ಅವನನ್ನು ಕಂಡರೆ ಕಂಪೆನಿಯ ಹಿರಿಯ ಅಧಿಕಾರಿಗಳಿಗೆ ಅಪಾರ ಭಯ ಮತ್ತು ಗೌರವಗಳಿದ್ದವು.

ಅವನು ದಿವಾನ್ ಪದವಿಯಲ್ಲಿ ಇವರುವವರೆಗೂ ತಮ್ಮ ಆಟವೇನೂ ಸಾಗುವುದಿಲ್ಲ ಎಂದು ಅವರು ಚೆ‌ನ್ನಾಗಿ ಮನಗಂಡಿದ್ದರು. ಆದ್ದರಿಂದ ಹೇಗಾದರೂ ಮಾಡಿ ಅವನನ್ನು ತಮ್ಮ ಬುಟ್ಟಿಯೊಳಕ್ಕೆ ಹಾಕಿಕೊಳ್ಳಬೇಕು ಎಂದು ಸನ್ನಾಹ ಮಾಡುತ್ತಿದ್ದರು. ತಿರುವಾಂಕೂರು ಸಂಸ್ಥಾನ ಕಂಪೆನಿಗೆ ಕೊಡಬೇಕೆಂದು ನಿಗದಿಯಾಗಿದ್ದ ವಾರ್ಷಿಕ ಪೊಗದಿಯ ಹಣ ಬಾಕಿ ನಿಂತು ಹೋದರೆ, ಅಂತಹ ಸಂದರ್ಭದಲ್ಲಿ ಕಂಪೆನಿಯೇ ಸಂಸ್ಥಾನದ ಆಡಳಿತವನ್ನು ವಹಿಸಿಕೊಳ್ಳತಕ್ಕದ್ದು ಎಂಬ ವಿಚಿತ್ರ ಕರಾರಿಗೆ ಒಪ್ಪಿಕೊಳ್ಳಬೇಕು ಎಂದು ಕಂಪೆನಿಯ ಅಧಿಕಾರಿಗಳೂ ವೇಲುತಂಬಿಯನ್ನು ಒತ್ತಾಯ ಪಡಿಸಿದರು.

ಮೊದಲ ಸೋಲು

ಇಂತಹ ವಿಚಿತ್ರ ಹಾಗೂ ಅವಮಾನಕರವಾದ ಕರಾರಿಗೆ ಒಪ್ಪಿಕೊಳ್ಳುವುದಕ್ಕೆ ಸುತರಾಂ ಸಿದ್ಧನಾಗಿರಲಿಲ್ಲ ವೇಲುತಂಬಿ. ಅಪಾರ ದೇಶಪ್ರೇಮಿಯೂ, ಹುಟ್ಟು ಸ್ವಾತಂತ್ರ್ಯ ಹೋರಾಟಗಾರನೂ ಆಗಿದ್ದ ಅವನು ಕಂಪೆನಿಯ ಈ ಹೊಸ ಕರಾರನ್ನು ತೀವ್ರವಾಗಿ ಪ್ರತಿಭಟಿಸಿದನು. ಇದರ ಪರಿಣಾಮವಾಗಿ ಅವನಿಗೂ ಕಂಪೆನಿಗೂ ನಡುವೆ ಕೆಲವು ತಿಂಗಳ ಕಾಲ ಸಂಧಾನದ ಮಾತುಕತೆಗಳು ನಡೆದವು. ಕಂಪೆನಿ ತರುತ್ತಿದ್ದ ಒತ್ತಾಯಕ್ಕೆ ವೇಲುತಂಬಿ ಕಡೆಗೂ ಮಣಿಯಲೇ ಬೇಕಾಯಿತು. ಹೊಸ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಅವನು ಮಹಾರಾಜನನ್ನು ಕೋರಿದನು. ಅವನಿಷ್ಟದಂತೆಯೇ ಮಹಾರಾಜನು ಸಹಿ ಹಾಕಿದನು.

ಕಷ್ಟ ಪರಂಪರೆ

ಹೊಸ ಒಪ್ಪಂದಕ್ಕೆ ಮಹಾರಾಜನ ಸಹಿ ಬಿದ್ದ ಕೂಡಲೇ ಕಂಪೆನಿಯ ನೀತಿಯೇ ಸಂಪೂರ್ಣವಾಗಿ ಬದಲಾಯಿಸಿತು. ರೆಸಿಡೆಂಟ್ ಮೆಕಾಲೆಯ ಉದ್ಧಟತನ ಹತ್ತು ಪಟ್ಟು ಜಾಸ್ತಿಯಾಯಿತಲ್ಲದೆ, ಅವನು ದಿನನಿತ್ಯದ ಆಡಳಿತದಲ್ಲಿಯೂ ತಲೆ ಹಾಕಲು ಪ್ರಾರಂಭಿಸಿದನು. ಸರ್ಕಾರದ ಅಧಿಕಾರಿಗಳಿಗೆ ನಾನಾ ರೀತಿಯ ಕಿರುಕುಳ ಕೊಡಲಾರಂಭಿಸಿದನು. ಕಂಪೆನಿಗೆ ಸಲ್ಲಿಸದೆ ಬಾಕಿ ನಿಂತುಹೋಗಿದ್ದ ವಾರ್ಷಿಕ ಪೊಗದಿಯ ಹಣವನ್ನು ಒಂದೇ ಕಂತಿಗೆ ಕೊಟ್ಟು ಬಿಡಬೇಕು ಎಂದು ಮೆಕಾಲೆ ವೇಲುತಂಬಿಯನ್ನು ಒತ್ತಾಯ ಮಾಡಿದನು. ಇದರಿಂದ ಆಡಳಿತ ತೀರಾ ಹದಗೆಟ್ಟು ಹೋಯಿತು. ಎಲ್ಲೆಲ್ಲೋ ಲಂಚಕೋರತನ ಮತ್ತು ಭ್ರಷ್ಟಾಚಾರಗಳು ತಾಂಡವ ವಾಡತೊಡಗಿದವು.

ಮೆಕಾಲೆಯ ಉದ್ಧಟತನ ಮತ್ತು ದಬ್ಬಾಳಿಕೆಯನ್ನು ತೀವ್ರವಾಗಿ ಪ್ರತಿಭಟಿಸಬೇಕೆಂದು ವೇಲುತಂಬಿ ನಿರ್ಧರಿಸಿದನು. ಆಗಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಕಂಪೆನಿಯ ವಿರುದ್ಧ ಬಂಡಾಯ ಏಳುವುದು ಅನಿವಾರ್ಯವೆಂದು ಅವನಿಗೆ ಮನವರಿಕೆಯಾಯಿತು. ಅವನಿಗೂ ಮೆಕಾಲೆಗೂ ವಿರೋಧ, ವೈಮನಸ್ಸಗಳು ಏರ್ಪಟ್ಟವು. ಇಂತಹ ಸಂದರ್ಭಕ್ಕಾಗಿಯೇ ಹೊಂಚು ಹಾಕುತ್ತ ಕುಳಿತಿದ್ದ ವೇಲುತಂಬಿಯ ಶತ್ತುಗಳೆಲ್ಲರೂ ಈಗ ಮೆಕಾಲೆಯ ಪಕ್ಷಕ್ಕೆ ಸೇರಿಕೊಂಡರು. ದಿನೇ ದಿನೇ ಶತ್ರು ಪಕ್ಷ ಪ್ರಬಲವಾಗತೊಡಗಿತು. ಅಂತಹ ಅಗ್ನಿ ಪರೀಕ್ಷೆಯ ಕಾಲದಲ್ಲಿ ಏನು ಮಾಡಬೇಕೆಂಬುದು ವೇಲುತಂಬಿಗೆ ದೋಚದೆ ಹೋಯಿತು.

ಹೊಸ ಸ್ನೇಹಿತ

ಆದರೂ ವೇಲುತಂಬಿ ಧೈರ್ಯಗೆಡದೆ ಕೊಚಿನ್ ರಾಜ್ಯದಲ್ಲಿ ಮಂತ್ರಿಯಾಗಿದ್ದ ಪಲಿಯಾಥ್ ಆಚನ್ ಎಂಬ ದಕ್ಷ ಅಧಿಕಾರಿಯು ಸ್ನೇಹ ಹಸ್ತವನ್ನು ಕೋರಿದನು. ವೇಲುತಂಬಿಯಂತೆಯೇ ಸ್ವಾತಂತ್ರ್ಯ ಪ್ರೇಮಿಯೂ, ಅಸಾಧಾರಣ ಧೈರ್ಯಶಾಲಿಯೂ ಮತ್ತು ದಕ್ಷ ಆಡಳಿತಗಾರನೂ ಆಗಿದ್ದ ಆಚನ್ ಕೂಡಲೇ ವೇಲುತಂಬಿಗೆ ಬೆಂಬಲ ಕೊಟ್ಟನು. ಅವನೂ ಸಹ ಮೆಕಾಲೆಯ ದಬ್ಬಾಳಿಕೆಯನ್ನು ತೀವ್ರವಾಗಿ ಪ್ರತಿಭಟಿಸುತ್ತಿದ್ದನು. ಅವನ ವಿರುದ್ಧ ಹೋರಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದನು. ಸಮಾನ ಸ್ವಭಾವ ಮತ್ತು ಧ್ಯೇಯ, ಧೋರಣೆಗಳನ್ನು ಹೊಂದಿದ್ದ ವೇಲುತಂಬಿ ಮತ್ತು ಆಚನ್ ಒಂದು ಮೈತ್ರಿ ಕೂಟವನ್ನು ಸ್ಥಾಪಿಸಿಕೊಂಡರು.

ಹೋರಾಟ ಪ್ರಾರಂಭ

ಈ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರೂ ಮೈತ್ರಿಕೂಟವೊಂದನ್ನು ಸ್ಥಾಪಿಸಿಕೊಂಡು ತನ್ನ ಮತ್ತು ಕಂಪೆನಿಯ ವಿರುದ್ಧ ಬಂಡಾಯ ನಡೆಸುವ ಸಿದ್ಧತೆಯಲ್ಲಿದ್ದಾರೆ ಎಂಬ ಸುದ್ದಿ ಅದು ಹೇಗೋ ಮೆಕಾಲೆಯ ಕಿವಿಗೆ ಬಿದ್ದಿತು. ಕೂಡಲೇ ಅನು ಮಲಬಾರ್ ಮತ್ತು ತಿರುಚಿನಾಪಳ್ಳಿಗಳಿಂದ ಸುಸಜ್ಜಿತವಾದ ಎರಡು ಬ್ರಿಟಿಷ್ ಸೈನ್ಯಗಳ ತುಕಡಿಗಳನ್ನು ತಿರುವಾಂಕೂರಿಗೆ ಕರೆಸಿಕೊಂಡನು. ಪ್ರಬಲವಾದ ಬ್ರಿಟಿಷ್ ಸೈನ್ಯಗಳನ್ನು ಎದುರಿಸುವಷ್ಟು ಸೈನ್ಯ ಬಲ, ತಿರುವಾಂಕೂರಿನಲ್ಲಿ ಇರಲಿಲ್ಲವಾದ್ದರಿಂದ ವೇಲುತಂಬಿ ತನ್ನ ದಿವಾನ್ ಪದವಿಗೆ ರಾಜೀನಾಮೆ ಕೊಡಬೇಕು ಎಂದು ಆಲೋಚಿಸಿದನು. ಆದರೆ ಅವನ ಸ್ನೇಹಿತನಾಗಿದ್ದ ಆಚನ್‌ಅವನಿಗೆ ಧೈರ್ಯ ಹೇಳಿ ಅವನನ್ನು ತಡೆದನು. ಬಳಿಕ ಇನ್ನಿಬ್ಬರು ಶೂರ ಸೈನ್ಯಾಧಿಕಾರಿಗಳ ಜತೆ ಸೇರಿಕೊಂಡು ಕೊಚಿನ್ ಕೋಟೆಯಲ್ಲಿ ಬಿಡಾರ ಹೂಡಿದ್ದ ಮೆಕಾಲೆಯನ್ನು ಕೊಲೆ ಮಾಡಲು ಪ್ರಯತ್ನಿಸಿದನು. ಆದರೆ ದುರದೃಷ್ಟದಿಂದ ಅವನ ಪ್ರಯತ್ನ ವಿಫಲವಾಯಿತು. ಈ ಹತ್ಯಾಕಾಂಡದ ಪಿತೂರಿಯಿಂದ ಮೆಕಾಲೆ ಹೇಗೋ ಪಾರಾಗಿ ಬ್ರಿಟಿಷ್ ಹಡಗೊಂದನ್ನು ಹತ್ತಿ ತನ್ನ ಜೀವ ಉಳಿಸಿಕೊಂಡನು. ಇಷ್ಟರ ಮಧ್ಯೆ ವೇಲುತಂಬಿ ಕ್ವಿಲಾನಿಗೆ ಹೋಗಿ ಸುಸಜ್ಜಿತವಾದ ಸೈನ್ಯವೊಂದನ್ನು ಸಂಘಟಿಸುವ ಪ್ರಯತ್ನದಲ್ಲಿ ತೊಡಗಿದನು. ಸೈನ್ಯದ ನಾಯಕತ್ವನ್ನು ತಾನೇ ವಹಿಸಿಕೊಂಡನು. ಕ್ವಿಲಾನಿನಿಂದ ಸೈನ್ಯವನ್ನು ತೆಗೆದುಕೊಂಡು ತಿರುವಾಂಕೂರಿಗೆ ಬರುತ್ತಿದ್ದಾಗ ದಾರಿಯಲ್ಲಿ ಅವನ ಸೈನ್ಯಕ್ಕೂ ಬ್ರಿಟಿಷ್ ಸೈನ್ಯಕ್ಕೂ ಘರ್ಷಣೆ ಉಂಟಾಯಿತು. ಮೂವರು ಬ್ರಿಟಿಷ್ ಸೈನ್ಯಾಧಿಕಾರಿಗಳೂ, ಒಬ್ಬ ಹೆಂಗಸೂ, ಮೂವತ್ತಮೂರು ಮಂದಿ ಭಾರತೀಯ ಸಿಪಾಯಿಗಳೂ, ಹದಿಮೂರು ಬ್ರಿಟಿಷ್ ಸಿಪಾಯಿಗಳೂ ವೇಲುತಂಬಿಯ ಸೈನಿಕರಿಂದ ಹತರಾದರು. ಹೆಂಗಸಿನ ಜೀವವನ್ನು ಮಾತ್ರ ಅವನ ಸಿಪಾಯಿಗಳು ಉಳಿಸಿದರು.

ಇಂತಹ ಕೆಲವು ಸಣ್ಣ ಪುಟ್ಟ ಹತ್ಯಾಕಾಂಡಗಳಿಂದ ವೇಲುತಂಬಿಗೆ ತೃಪ್ತಿಯಾಗಿರಲಿಲ್ಲ. ತಿರುವಾಂಕೂರು ಮತ್ತು ಕೊಚಿನ್ ರಾಜ್ಯಗಳಿಂದ ಕಂಪೆನಿಯ ಅಧಿಕಾರಿಗಳನ್ನೂ, ಅದರ ಸೈನ್ಯಗಳನ್ನೂ ಸಂಪೂರ್ಣವಾಗಿ ಓಡಿಸಬೇಕು ಎಂದು ಅವನು ದೃಢಸಂಕಲ್ಪ ಮಾಡಿದ್ದನು. ತನ್ನ ಸಂಕಲ್ಪವನ್ನು ಈಡೇರಿಸಿಕೊಳ್ಳುವುದಕ್ಕೆ ತನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರಾಟ ನಡೆಸುತ್ತಿದ್ದನು.

ಸ್ವಾತಂತ್ರ್ಯ ಸಂದೇಶ

ರಣಹೇಡಿಯಂತೆ ತನ್ನ ಪ್ರಾಣ ಉಳಿಸಿಕೊಂಡು ತಲೆ ತಪ್ಪಿಸಿಕೊಂಡು ಓಡಿಹೋಗಿದ್ದ ಮೆಕಾಲೆಯನ್ನು ಹೇಗಾದರೂ ಸೆರ ಹಿಡಿಯಬೇಕು ಎಂದು ವೇಲುತಂಬಿ ಊರುರು ಅಲೆದನು. ಕಾಡು ಮೇಡುಗಳನ್ನು ಸುತ್ತಿದನು. ಆದರೆ ಮೆಕಾಲೆ ಅವನ ಕೈಗೆ ಸಿಗಲಿಲ್ಲ. ಕ್ವಿಲಾನಿಗೆ ಸ್ವಲ್ಪ ದೂರದಲ್ಲಿ ಕುಂದರ ಎಂಬ ಹಳ್ಳಿಯನ್ನು ತನ್ನ ಕಾರ್ಯ ಕ್ಷೇತ್ರವನ್ನು ಮಾಡಿಕೊಂಡು ವೇಲುತಂಬಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ತನ್ನ ಸ್ವಾತಂತ್ರ್ಯ ಸಂಗ್ರಾಮವನ್ನು ಮುಂದುವರೆಸಿದನು.

ಅಲ್ಲಿ ತನ್ನ ಸ್ವಂತ ಸೈನ್ಯವನ್ನು ಸಂಘಟಿಸಿದನು. ಸಾವಿರಾರು ಜನರ ಬೃಹತ್ ಸಭೆಗಳನ್ನು ಸೇರಿಸಿ, ವೀರಾವೇಶದ ಭಾಷಣಗಳನ್ನು ಮಾಡಿ, ಜನರಲ್ಲಿ ಸ್ವಾತಂತ್ರ್ಯದ ಸ್ಫೂರ್ತಿಯನ್ನು ಪ್ರಚೋದಿಸಿದನು. ಜನರೆಲ್ಲರೂ ತನ್ನ ಬೆಂಬಲಿಗರಾಗಿ ನಿಂತು ಬ್ರಿಟಿಷರ ವಿರುದ್ಧ ದಿಟ್ಟತನದಿಂದ ಸ್ವಾತಂತ್ರ್ಯ ಹೋರಾಟ ನಡೆಸಬೇಕು ಎಂದು ಕರೆಕೊಟ್ಟನು. ಮಾತೃಭೂಮಿಯ ಸ್ವಾತಂತ್ರಯವನ್ನು ಕಾಪಾಡಿಕೊಳ್ಳಬೇಕು ಎಂದು ಘಂಟಾಘೋಷವಾಗಿ ಸಾರಿ ಜನರನ್ನು ಹುರಿದುಂಬಿಸಿದನು. ಹೀಗೆ ವೇಲುತಂಬಿ ತನ್ನ ಪ್ರಜೆಗಳಿಗೆ ಘೋಷಣೆಯ ರೂಪದಲ್ಲಿ ನೀಡಿದ ಸ್ವಾತಂತ್ರ್ಯ ಸಂದೇದ “ಕುಂದರ ಘೋಷಣೆ” ಎಂಬ ಪ್ರಸಿದ್ಧ ಚಾರಿತ್ರಿಕ ದಾಖಲೆಯಾಗಿದೆ. ಅತ್ಯಂತ ಐತಿಹಾಸಿದ ಮಹತ್ವವುಳ್ಳ ಈ ಘೋಷಣೆಯಿಂದ ಸ್ಫೂರ್ತಿ ಪಡೆದ ಜನರು ಬ್ರಿಟಿಷರ ವಿರುದ್ಧ ರೊಚ್ಚಿಗೆದ್ದರು. ಅವರನ್ನು ಹೇಗಾದರೂ ತಮ್ಮ ರಾಜ್ಯದಿಂದಲೇ ಹೊಡೆದೋಡಿಸಬೇಕು ಎಂದು ಪವಿತ್ರವಾದ ತಮ್ಮ ಮಾತೃಭೂಮಿಯ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳಬೇಕೆಂದೂ ಸಂಕಲ್ಪ ಮಾಡಿದರು. ಎಲ್ಲರೂ ವೇಲುತಂಬಿಯನ್ನು ತಮ್ಮ ಏಕೈಕ ನಾಯಕನನ್ನಾಗಿ ಸ್ವೀಕರಿಸಿ ಅವನಿಗೆ ಸಂಪೂರ್ಣ ಸಹಕಾರ ಮತ್ತು ಬೆಂಬಲಗಳನ್ನು ನೀಡಿದರು.

ವೇಲುತಂಬಿ ಏಕಾಕಿಯಾದ
ಜನರ ಬೆಂಬಲ ದೊರೆತ ಕೊಡಲೇ ವೇಲುತಂಬಿ ಬ್ರಿಟಿಷರ ವಿರುದ್ಧ ತನ್ನ ಸ್ವಾತಂತ್ರ್ಯ ಸಂಗ್ರಾಮವನ್ನು ಇನ್ನೂ ತೀವ್ರತರವಾಗಿ ಮುಂದುವರೆಸಿದನು. ಅವನ ಸೈನ್ಯಕ್ಕೂ ಕಂಪೆನಿಯ ಸೈನ್ಯಕ್ಕೂ ಅನೇಕ ಸ್ಥಳಗಳಲ್ಲಿ ಘರ್ಷಣೆಗಳು ನಡೆದವು. ಆದರೆ ಸುಸಜ್ಜಿತವಾದ ಬ್ರಿಟಿಷ್ ಸೈನ್ಯವನ್ನು ಎದುರಿಸಿ ಹೋರಾಡುವಷ್ಟು ಸೈನ್ಯ ಬಲ ವೇಲುತಂಬಿ ಕಡೆ ಇರಲಿಲ್ಲ. ಆದ್ದರಿಂದ ಅನೇಕ ಕದನಗಳಲ್ಲಿ ಅವನ ಸೈನಿಕರು ಸೋಲನ್ನು ಅನುಭವಿಸಬೇಕಾಯಿತು. ಬ್ರಿಟಿಷ್ ಸೈನಿಕರ ಗುಂಡುಗಳಿಗೆ ಸಿಕ್ಕಿ ಸಾವಿರಾರು ಸಿಪಾಯಿಗಳು ಪ್ರಾಣ ತೆತ್ತರು.

ಕೊಚಿನ್ ನಲ್ಲಿ ಆಚನ್‌ಬ್ರಿಟಿಷ್ ಸೈನ್ಯಗಳ ವಿರುದ್ಧ ದಿಟ್ಟತನದಿಂದ ಹೋರಾಟ ನಡೆಸುತ್ತಿದ್ದನು. ಅವನ ಸೈನ್ಯ ಪಡೆಯುಲ್ಲಿದ್ದ ಸಾವಿರಾರು ಸಿಪಾಯಿಗಳು ಬ್ರಿಟಿಷರ ಬಂದೂಕುಗಳಿಗೆ ಬಲಿಯಾದರು. ಕಡೆಗೆ ಅವನು ವಿಧಿಯಿಲ್ಲದೆ ಬ್ರಿಟಿಷರಿಗೆ ಶರಣಾಗುವುದೇ ಒಳ್ಳೆಯದೆಂದು ಯೋಚಿಸಿ ಅವರೊಂದಿಗೆ ಸಂಧಾನದ ಮಾತುಕತೆಗಳನ್ನು ಪ್ರಾರಂಭಿಸಿದನು. ತನ್ನ ಮಿತ್ರ ಆಚನ್ ಅನಿರೀಕ್ಷಿತವಾಗಿ ಹೀಗೆ ತನ್ನ ಕೈಬಿಟ್ಟರೂ, ಸ್ವಲ್ಪವೂ ಹಿಂಜರಿಯದೆ ವೇಲುತಂಬಿಯೊಬ್ಬನೇ ತನ್ನ ಸ್ವಾತಂತ್ರ್ಯ ಸಂಗ್ರಾಮವನ್ನು ಮುಂದುವರಿಸಿದನು.

ಮಹಾರಾಜನೂ ಕೈಬಿಟ್ಟ

ಈ ಸಮಯದಲ್ಲಿ ಮೆಕಾಲೆ ಸಿಂಹಳ(ಈಗಿನ ಶ್ರೀಲಂಕಾ) ಮತ್ತು ತಿರುಚನಾಪಳ್ಳಿಯಿಂದ ಸುಸಜ್ಜಿತವಾದ ಎರಡು ಬ್ರಿಟಿಷ್ ಸೈನ್ಯಗಳ ತುಕಡಿಗಳನ್ನು ತಿರುವಾಂಕೂರಿಗೆ ಕರೆಸಿಕೊಂಡನು. ಈ ಸೈನ್ಯಗಳನ್ನು ನೋಡಿದ ತಕ್ಷಣ ರಣಹೇಡಿಯಾಗಿದ್ದ ತಿರುವಾಂಕೂರಿನ ಮಹಾರಾಜನೂ ಪ್ರಾಣಭಯದಿಂದ ನಡುಗಿ ಹೋದನು. ಕೂಡಲೇ ಅವನು ಬ್ರಿಟಿಷರ ಶಾಂತಿ ಸಂಧಾನದ ಮಾತುಕತೆಯನ್ನು ಪ್ರಾರಂಭಿಸಿ, ಯುದ್ಧ ನಿಂತಿತು ಎಂದು ಘೋಷಿಸಿದನು.

ಮಹಾರಾಜನ ಹೇಡಿತನದ ವರ್ತನೆಯಿಂದ ಹತಾಶನಾದ ವೇಲುತಂಬಿ ತನ್ನ ಹೋರಾಟವೆಲ್ಲವೂ ವ್ಯರ್ಥವೆಂಬ ತೀರ್ಮಾನಕ್ಕೆ ಬಂದನು. ಆವರೆಗೆ ಮಹಾರಾಜನಲ್ಲಿ ಅವನಿಗೆ ಸಂಪೂರ್ಣ ವಿಶ್ವಾಸವಿತ್ತು. ಅವನೇ ವೇಲುತಂಬಿಯ ಆಶಾಕಿರಣವಾಗಿದ್ದನು. ಅವನೂ ಸಹ ಈ ಬ್ರಿಟಿಷರಿಗೆ ಶರಣಾಗತನಾದ ಮೇಲೆ ಪ್ರಬಲವಾದ ಬ್ರಿಟಿಷ್ ಸೈನ್ಯದ ವಿರುದ್ಧ ತಾನೊಬ್ಬನೇ ಹೋರಾಟ ಮುಂದುವರಿಸುವುದು ಸಾಧ್ಯವಿಲ್ಲವೆಂದು ಮನವರಿಗೆಯಾಯಿತು.

ಬಳಿಕ ವೇಲುತಂಬಿ ತಿರುವಾಂಕೂರಿಗೆ ಹೋಗಿ ಮಹಾರಾಜನನ್ನು ಭೇಟಿಯಾದನು. ಅದುವೆರೆಗೆ ನಡೆದಿದ್ದ ಘಟನೆಗಳಿಗೆ ತಾನೇ ಸಂಪೂರ್ಣ ಜವಾಬ್ದಾರನೆಂದು ಮಹಾರಾಜನಿಗೆ ತಿಳಿಸಿದನು. ತನ್ನ ಒಬ್ಬನೇ ತಮ್ಮನಾದ ಪದ್ಮನಾಭನ್ ತಂಬಿಯ ಜೊತೆಯಲ್ಲಿ ತಿರುವಾಂಕೂರಿನಿಂದ ಹೊರಟು ಬಿಟ್ಟನು.

ಸಾವಿಗೆ ಸ್ವಾಗತ

ತಕ್ಷಣ ಮಹಾರಾಜನು ವೇಲುತಂಬಿಯನ್ನು ದಿವಾನ್‌ಪದವಿಯಿಂದ ವಜಾ ಮಾಡಿ ಆಜ್ಞೆಯನ್ನು ಘೋಷಿಸಿದನು. ತನಗೆ ಆಪ್ತನಾಗಿದ್ದ ಉಮ್ಮಿನಿತಂಬಿ ಎಂಬಾತನನ್ನು ದಿವಾನ್‌ಹುದ್ದೆಗೆ ನೇಮಿಸಿದನು. ಕಂಪೆನಿಯ ಅಧಿಕಾರಿಗಳೊಡನೆ ಸಂಧಾನಕ್ಕಾಗಿ ಮಾತುಕತೆಗಳನ್ನು ಪ್ರಾರಂಭಿಸಿದನು.

ಹೊಸದಾಗಿ ದಿವಾನ್‌ಹುದ್ದೆಗೆ ನೇಮಕಗೊಂಡಿದ್ದ ಉಮ್ಮಿನಿತಂಬಿ ಮೆಕಾಲೆಯ ಆದೇಶದಂತೆ ವೇಲುತಂಬಿಯನ್ನು ಪತ್ತೆ ಹಚ್ಚಿ, ಕರೆ ತರುವುದಕ್ಕೆ ರಾಜ್ಯದ ಮೂಲೆ ಮೂಲೆಗೂ ಗೂಢಾಚಾರರನ್ನು ಕಳಿಸಿದನು. ಅವನನ್ನು ಹಿಡಿದು ತಂದು ಒಪ್ಪಿಸುವ ವ್ಯಕ್ತಿಗೆ ಐವತ್ತು ಸಾವಿರ ರೂಪಾಯಿಗಳ ಬಹುಮಾನವನ್ನು ಘೋಷಿಸಿದನು. ಆಗ ವೇಲುತಂಬಿ ತನ್ನ ಸಹೋದರರೊಂದಿಗೆ ಕ್ವಿಲಾನಿಗೆ ಸ್ವಲ್ಪ ದೂರದಲ್ಲಿ ಮನ್ನಾಡಿ ಎಂಬ ಹಳ್ಳಿಯಲ್ಲಿ ಪೂಜಾರಿಯ ಮನೆಯಲ್ಲಿ ಆಶ್ರಯ ಪಡೆದಿದ್ದನು. ಗೂಢಚಾರರಿಗೆ ವೇಲುತಂಬಿ ಆಶ್ರಯ ಪಡೆದಿದ್ದ ಸ್ಥಳ ಪತ್ತೆಯಾಗಿ ಹೋಯಿತು. ಕೂಡಲೇ ಸೈನ್ಯ ಸಮೇತರಾಗಿ ವೇಲುತಂಬಿಯನ್ನು ಸೆರೆಹಿಡಿಯಲು ಮನ್ನಾಡಿ ಹಳ್ಳಿಗೆ ಧಾವಿಸಿದರು. ಇನ್ನು ತನ್ನ ಶತ್ರುಗಳ ಕೈಯಿಂದ ತಪ್ಪಿಸಿಕೊಳ್ಳುವ ಮಾರ್ಗವಿಲ್ಲವೆಂದು ವೇಲುತಂಬಿಗೆ ಖಚಿತವಾಯಿತು.

ಬ್ರಿಟಿಷರ ಗುಲಾಮನಾಗಿದ್ದ ಮಹಾರಾಜನ ಸೈನಿಕರ ಕೈಗೆ ಸಿಕ್ಕಿ ಹತನಾಗುವುದಕ್ಕಿಂತಲೂ, ಆತ್ಮಹತ್ಯೆ ಮಾಡಿಕೊಂಡು ವೀರಸ್ವರ್ಗವನ್ನು ಪಡೆಯುವುದೇ ತನಗೆ ಸರ್ವಥಾ ಯೋಗ್ಯವೆಂದು ವೇಲುತಂಬಿ ತೀರ್ಮಾನಿಸಿ ಕೊಂಡನು. ತಾನು ಧರಿಸಿದ್ದ ವೀರಖಡ್ಗವನ್ನು ತೆಗೆದು ಅದನ್ನು ತನ್ನೆದೆಯಲ್ಲಿ ತಿವಿದುಕೊಂಡನು. ಆದರೆ ಅವನ ಪ್ರಾಣ ಬೇಗನೆ ಹೋಗಲಿಲ್ಲ. ಆಗ ಅಲ್ಲೆ ಇದ್ದ ತನ್ನ ಸಹೋದರ ಪದ್ಮನಾಭನ್ ತಂಬಿಯನ್ನು ಹತ್ತಿರ ಕರೆದು, ಅದೇ ಖಡ್ಗದಿಂದ ತನ್ನನ್ನು ಪೂರ್ತಿ ಕೊಂದು ಬಿಡುವಂತೆ ಆದೇಶವಿತ್ತನು. ಪದ್ಮನಾಭನ್ ತಂಬಿ ತನ್ನಣ್ಣನ ಆಜ್ಞೆಯನ್ನು ಪಾಲಿಸಿದನು.

ಮೆಕಾಲೆಯ ಅನಾಗರಿಕ ವರ್ತನೆ

ವೇಲುತಂಬಿಯ ದುರಂತ ಮರಣದ ಸುದ್ದಿಯನ್ನು ಮೆಕಾಲೆ ಮತ್ತು ಕಂಪೆನಿಯ ಎಲ್ಲ ಹಿರಿಯ ಅಧಿಕಾರಿಗಳೂ ಬಹಳ ಸಂತೋಷದಿಂದ ಸ್ವಾಗತಿಸಿದರು. ಮೆಕಾಲೆಯ ಆದೇಶದಂತೆ ವೇಲುತಂಬಿಯ ಪಾರ್ಥಿವ ಶರೀರವನ್ನು ತಿರುವಾಂಕೂರಿಗೆ ತೆಗೆದುಕೊಂಡು ಹೋದರು. ಅಲ್ಲಿ ಸಾರ್ವಜನಿಕರಿಗೆ ಪ್ರದರ್ಶಿಸಲಾಯಿತು. ವೇಲುತಂಬಿಯ ಬೆಂಬಲಿಗರು ಮತ್ತು ಅಭಿಮಾನಿಗಳು ತಮ್ಮ ನಾಯಕನ ದುರಂತ ಮರಣಕ್ಕೆ ಬಹಳ ದುಃಖಪಟ್ಟರು. ಮೆಕಾಲೆಯ ಆಜ್ಞಾನುಸಾರ ಪದ್ಮನಾಭನ್ ತಂಬಿಯನ್ನು ಗಲ್ಲಿಗೇರಿಸಿದರು. ಅವನ ಮನೆಯನ್ನು ಸಂಪೂರ್ಣವಾಗಿ ನಾಶಗೊಳಿಸಿದರು. ಅವನ ಕುಟುಂಬ ವರ್ಗದವರನ್ನು ಮಾಲ್ಡೀವ್ ದ್ವೀಪದಲ್ಲಿ ಬಂಧನದಲ್ಲಿಟ್ಟರು.

ಮೆಕಾಲೆ ನಡೆಸಿದ ಈ ಅಮಾನುಷ ಕೃತ್ಯಕ್ಕಾಗಿ ಪ್ರಜೆಗಳೆಲ್ಲರೂ ಅವನನ್ನು ಶಪಿಸಿದರು. ಭಾರತದಲ್ಲಿ ಆಗ ಗೌರ್ನರ್ ಜನರಲ್ ಆಗಿದ್ದ ಲಾರ್ಡ್‌ಮಿಂಟೋ ಸಹ ಮೆಕಾಲೆಯ ಈ ಘೋರ ಕೃತ್ಯವನ್ನು ತೀವ್ರವಾಗಿ ಖಂಡಿಸಿದರು.

“ಯಾವ ನಾಗರಿಕ ಸರ್ಕಾರವೂ ಇಂತಹ ಹೇಯ ಕೃತ್ಯ ಮಾಡುವುದಿಲ್ಲ” ಎಂದು ಅವನು ಹೇಳಿದ.

ವೇಲುತಂಬಿ ವೀರಖಡ್ಗದಿಂದ ತಿವಿದುಕೊಂಡನು.

ವ್ಯಕ್ತಿತ್ವ

 

ವೇಲುತಂಬಿ ಹುಟ್ಟು ಸ್ವಾತಂತ್ರ್ಯ ಹೋರಾಟಗಾರ. ಅವನಲ್ಲಿದ್ದ ಅಸಾಧಾರಣ ಧೈರ್ಯ ಮತ್ತು ತಾನು ಹಿಡಿದ ಕೆಲಸವನ್ನು ಸಾಧಿಸಿಯೇ ತೀರಬೇಕೆಂಬ ವಜ್ರ ಸಂಕಲ್ಪವು ಇವು ಆದರ್ಶಪ್ರಾಯವಾಗಿದೆ. ತನ್ನ ಗುರಿನ್ನು ಸಾಧಿಸಲು ಎಂತಹ ತ್ಯಾಗಕ್ಕಾದರು ಸಿದ್ಧನಾಗುವಂಥ ಅಚಲ ನಿರ್ಧಾರ ಮತ್ತು ಅದನ್ನು ಸಾಧಿಸಲು ಅವನು ನಡೆಸಿದ ಅಪ್ರತಿಮ ಹೋರಾಟ, ಇವು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡಲ್ಪಡಬೇಕಾದ ಮಹತ್ವದ ಸಂಗತಿಗಳಾಗಿವೆ.

ವೇಲುತಂಬಿಯ ಜೀವಿತ ಕಾಲ ಕೇವಲ ನಲವತ್ನಾಲ್ಕು ವರ್ಷ (೧೭೬೫ ರಿಂದ ೧೯೦೯ರವರೆಗೆ). ಆದರೂ ತನ್ನ ಜೀವಿತ ಕಾಲದಲ್ಲಿ ಅಸಾಧಾರಣ ಸ್ವಾತಂತ್ರ್ಯ ಪ್ರೇಮ, ಮಾತೃಭೂಮಿಯ ಪ್ರೇಮ, ಅನ್ಯಾದೃಶ ಧೈರ್ಯ ಹೋರಾಟ ಮನೋಭಾವವನ್ನು ಪ್ರದರ್ಶಿಸಿ, ಭಾರತದ ಸ್ವಾತಂತ್ರ್ಯ  ಸಂಗ್ರಾಮದ ಚರಿತ್ರೆಯಲ್ಲಿ ಅಮರನಾಗಿದ್ದಾನೆ.