ದಿನಾಂಕ ೧-೧-೧೯೬೦ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ವೈಜಯಂತಿ ಕಾಶಿ ಹೆಸರಾಂತ ಕಲಾವಿದರ ಮನೆತನದಿಂದ ಬಂದವರು. ನಾಟಕರತ್ನ ಗುಬ್ಬಿ ವೀರಣ್ಣನವರು ಇವರ ತಾತ.

ಇವರು ತಮ್ಮ ನೃತ್ಯ ಶಿಕ್ಷಣವನ್ನು ಮೊದಲಿಗೆ ನಾಟ್ಯಾಚಾರ್ಯ ತುಮಕೂರಿನ ಕೆ.ಎ. ರಾಮನ್‌ರವರಲ್ಲಿ ಅಭ್ಯಸಿಸಿ ಮುಂದೆ ಅಹಮದಾಬಾದಿನ ದರ್ಪಣ ಸಂಸ್ಥೆಯ ಹಿರಿಯ ನಾಟ್ಯಾಚಾರ್ಯ ಸಿ.ಆರ್. ಆಚಾರ್ಯಲು, ಗುರು ವೇದಾಂತಂ ಪ್ರಹ್ಲಾದ ಶರ್ಮ, ಪದ್ಮಭೂಷಣ ಡಾ|| ನಟರಾಜ ರಾಮಕೃಷ್ಣ ಮುಂತಾದ ದಿಗ್ಗಜಗಳ ಬಳಿ ಕೂಚಿಪುಡಿ ನೃತ್ಯ ಕಲೆಯಲ್ಲಿ ಶಿಕ್ಷಣ ಪಡೆದು ಅದರ ಸಂಶೋಧನೆಯನ್ನು ನಡೆಸಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಫೆಲೋಷಿಪ್ ಪಡೆದ ಕರ್ನಾಟಕದ ಪ್ರಥಮ ಮಹಿಳಾ ಕಲಾವಿದೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ರಾಷ್ಟ್ರೀಯ-ಅಂತರಾಷ್ಟ್ರೀಯ ಖ್ಯಾತಿ ಹೊಂದಿರುವ ವೈಜಕಯಂತಿ ದೂರದರ್ಶನ ಕೇಂದ್ರದ ’ಎ’ ದರ್ಜೆ ಕಲಾವಿದರು.ಅನೇಕ ನೃತ್ಯೋತ್ಸವಗಳಲ್ಲಿ ಕಾರ್ಯಕ್ರಮಗಳೇ ಅಲ್ಲದೆ ಸೋದಾಹರಣ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ. ವಂಶಪಾರಂಪರ್ಯವಾಗಿ ಬಂದ ರಂಗವೃತ್ತಿಯನ್ನು ಕೂಡ ತ್ಯಜಿಸಿ ರಂಗಭೂಮಿಯಲ್ಲೇ ಅಲ್ಲದೆ ಇತ್ತೀಚಿನ ಅನೇಕ ಧಾರಾವಾಹಿ ಚಿತ್ರಣಗಳಲ್ಲೂ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ತಮ್ಮದೇ ಆದ ’ಶಾಂಭವಿ ನೃತ್ಯ ಶಾಲೆ’ ಹಾಗೂ ನಾಟ್ಯ ಶಾಸ್ತ್ರದ ’ಡ್ಯಾನ್ಸ್ ನೃತ್ಯ ಕೇಂದ್ರ’ ಸಂಸ್ಥಾಪಕಿ ನಿರ್ದೇಶಕಿಯಾಗಿ ಅನೇಕ ಪ್ರಯೋಗಗಳನ್ನು ವೇದಿಕೆಯ ಮೇಲೆ ಪ್ರದರ್ಶಿಸಿದ್ದಾರೆ. ಅನೇಕ ಪ್ರಸಂಗಗಳನ್ನು ಸಂಯೋಜನೆ ಮಾಡಿದ್ದಾರೆ. ಇತ್ತೀಚೆಗೆ ಕೆಂಗೇರಿ ಉಪನಗರದಲ್ಲಿ ತಮ್ಮದೇ ಆದ ನಾಟ್ಯ ಮಂದಿರವನ್ನೂ ನಿರ್ಮಿಸಿದ್ದಾರೆ. ಇವರಕಾರ್ಯಕ್ರಮಗಳ ಕುರಿತು ಅನೇಕ ವಿಮರ್ಶಾತ್ಮಕ ಲೇಖನಗಳು ರಾಷ್ಟ್ರದ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ’ಕೂಚಿಪುಡಿ ನೃತ್ಯ ಸಂಪ್ರದಾಯ’, ’ಮಂತ್ರಗಳ ಶಕ್ತಿ’ ಮುಂತಾದ ಧ್ವನಿ ದೃಶ್ಯ ಸುರುಳಿಗಳನ್ನು ಹೊರ ತಂದಿದ್ದಾರೆ.

’ಸಿಂಗಾರ್‌ಮಣಿ’, ’ಆರ್ಯಭಟ’ ಪ್ರಶಸ್ತಿಗಳೂ ಇವರಿಗೆ ಲಭಿಸಿವೆ. ಹೀಗೆ ನೃತ್ಯ ಕ್ಷೇತ್ರದಲ್ಲಿ ಮನೆ ಮಾತಾಗಿರುವ ವೈಜಯಂತಿ ಕಾಶಿ ಅವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ೨೦೦೧-೦೨ನೇ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.