ವಿಶಿಷ್ಟ ಚೇತನ ಎಚ್ಎನ್

ಜಗತ್ತಿನಲ್ಲಿ ನುಡಿದಂತೆ ನಡೆಯುವವರು ತೀರ ಕಡಿಮೆ; ಬೆರಳೆಣಿಕೆಯಷ್ಟೆ. ಜೀವನ ಪರ್ಯಾಂತ, ತಾವು ನಂಬಿದ ಹಾಗೂ ಇತರರಿಗೆ ಉಪದೇಶಿಸಿದ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಬಾಳುವವರೇ ವಿಶಿಷ್ಟರು. ಅಂತಹವರ ಸಾಲಿನಲ್ಲಿ ಎಚ್ಎನ್ ಕೂಡ ಒಬ್ಬರು.

ಎಚ್ಎನ್ ವೈಜ್ಞಾನಿಕ ಮನೋಭಾವ ಪ್ರವರ್ತಕರು, ಮೂಢನಂಬಿಕೆಗಳ ವಿರುದ್ಧ ಹೋರಾಡಿದವರು, ಪ್ರಶ್ನಿಸದೆ ಯಾವುದನ್ನೂ ಒಪ್ಪುತಿರಲಿಲ್ಲ. ಒಂದು ಘಟನೆಯನ್ನು ನೋಡಿ.

ಸೂರ್ಯಗ್ರಹಣವಾದಾಗ ಸೂರ್ಯನನ್ನು ರಾಹುವೋ, ಕೇತುವೋ ಹಿಡಿಯುತ್ತದೆ. ಸಮಯದಲ್ಲಿ ಆಹಾರ ಸೇವನೆ ನಿಷಿದ್ಧಮುಂತಾದವೆಲ್ಲ ಪುರೋಹಿತಶಾಹಿ ನಿರ್ಮಿಸಿದ ಮಢ್ಯದ ಕೋಟೆ. ಇವೆಲ್ಲ ಸ್ವಲಾಭಕ್ಕಾಗಿಯೇ. ವಿಜ್ಞಾನ ಹೇಳುವಂತೆ ಗ್ರಹಣ ಎನ್ನುವುದು ನೈಸರ್ಗಿಕ ಕ್ರಿಯೆ. ಇದರಲ್ಲಿ ಯಾವ ರಾಕ್ಷಸರ ಕೈವಾಡವೂ ಇಲ್ಲ.

ಮೂಢನಂಬಿಕೆಯ ವಿರುದ್ಧ ಎಚ್ಎನ್ರವರು ಕೇವಲ ಉಪನ್ಯಾಸ ನೀಡಲಿಲ್ಲ. ಸೂರ್ಯ ಗ್ರಹಣವಾಗುವಾಗ ಹೊರಗೆ ಕುಳಿತು ಗ್ರಹಣಗ್ರಸ್ತ ಸೂರ್ಯನ ಎದುರಿಗೆ ಆಹಾರ ಸೇವಿಸಿದರು ಮತ್ತು ತಮ್ಮ ಸ್ವಗ್ರಾಮ ಹೊಸೂರಿನಲ್ಲಿ ಗ್ರಾಮಸ್ಥರಿಗೆ ಅರಿವು ಮೂಡಿಸಿದರುಭಾಷಣಕ್ಕಿಂತ ಚರ್ಯೆ ಮಹತ್ತರ ಪರಿಣಾಮ ಬೀರಿತು.

ಎಚ್ಎನ್ ಜೀವನದ ಉದ್ದಕ್ಕೂ ಇಂತಹ ಪ್ರಸಂಗಗಳಿವೆ. ಅದಕ್ಕೇ ಅವರು ವಿಶಿಷ್ಟರು.

ಬಿಕೆವಿ ರಾವ್

 

ದೇಶದ ಓರ್ವ ಪ್ರಮುಖ ವಿಚಾರವಂತರು, ಶಿಕ್ಷಣತಜ್ಞರು, ಮಲ್ಯಗಳ ಪ್ರತಿಪಾದಕರು, ಸತ್ಯ-ನೀತಿ ಬೋಧಕರು, ಶೋಧಕರು, ಶಿಸ್ತಿನ ಸಿಪಾಯಿ, ವಿಚಾರವಾದಿ, ಗಾಂಧಿವಾದಿ ಎನಿಸಿದ ಡಾ. ಎಚ್. ನರಸಿಂಹಯ್ಯನವರು ಒಬ್ಬ ವ್ಯಕ್ತಿಯಾಗಿರಲಿಲ್ಲ ಶಕ್ತಿಯಾಗಿದ್ದರು. ಅವರು ಕೈಯಾಡಿಸದ ಕ್ಷೇತ್ರವಿಲ್ಲ ಎನ್ನುವಷ್ಟು ಕ್ರಿಯಾಶೀಲರಾಗಿದ್ದರು. ಬಹುಮುಖ ಪ್ರತಿಭೆಯ ಈ ಸರಳ ಮೂರ್ತಿ ಕೋಲಾರ ಜಿಲ್ಲೆಯ, ಗೌರಿಬಿದನೂರು ತಾಲ್ಲೂಕಿನ ಹೊಸೂರು ಎಂಬಲ್ಲಿ, ಬಡಕುಟುಂಬವೊಂದರಲ್ಲಿ ತಾ. 6.6.1920ರಂದು ಜನಿಸಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ. ಪ್ರಾಥಮಿಕ ಶಿಕ್ಷಣವನ್ನು ಹೊಸೂರಿನಲ್ಲಿ ಮುಗಿಸಿ, ತಮ್ಮ ಪ್ರತಿಭೆಯಿಂದ ಗುರುಗಳ ಪ್ರೀತಿ ಗೆದ್ದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಪಡೆಯುವಲ್ಲಿ ಯಶಸ್ವಿಯಾದರು. ಇದೇ ಸಂಸ್ಥೆಯ ಕಾಲೇಜಿನಲ್ಲಿ ಭೌತವಿಜ್ಞಾನ ಬಿ.ಎಸ್ಸಿ. ಪದವಿ ಗಳಿಸಿ, ಸೆಂಟ್ರಲ್ ಕಾಲೇಜಿನಲ್ಲಿ ಭೌತವಿಜ್ಞಾನ ಸ್ನಾತ್ತಕೋತ್ತರ ಪದವಿ ಮುಗಿಸಿ, 1957ರಲ್ಲಿ ಅಮೆರಿಕದ ಓಹಯೊ ರಾಜ್ಯ ವಿಶ್ವವಿದ್ಯಾಲಯದ ಫುಲ್‌ಬ್ರೈಟ್ ಟ್ರಾವಲ್ ಗ್ರಾಂಟ್ ನೆರವಿನಿಂದ ಬೈಜಿಕ ಭೌತವಿಜ್ಞಾನದಲ್ಲಿ ಪಿಎಚ್‌ಡಿ ಪದವಿ ಪಡೆದು, ಸ್ವದೇಶಕ್ಕೆ ವಾಪಸಾದರು.

ಜೂನ್ 11, 1936ರಂದು ಗಾಂಧೀಜಿಯವರು ಬೆಂಗಳೂರಿಗೆ ಭೇಟಿ ನೀಡಿದಾಗ, ಬಾಲ್ಯದಲ್ಲಿಯೇ ಅವರ ಪ್ರಭಾವಕ್ಕೊಳಗಾಗಿದ್ದ ಎಚ್.ಎನ್. ಗಾಂಧಿವಾದಿಯಾದರು. ತನ್ನ 22ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಬಂಧನಕ್ಕೊಳಗಾದರು. ಬೆಂಗಳೂರಿನ ಅಲಸೂರು ಗೇಟ್ ಪೊಲೀಸ್ ಠಾಣೆ ಇವರ ಮೊದಲ ಸೆರೆಮನೆ. ನಂತರ ಸೆರೆಮನೆಯೆಂದು ಪರಿಗಣಿಸಲಾಗಿದ್ದ ಬೆಂಗಳೂರಿನ ಆನೆಕಲ್ ಅತ್ತಿಬೆಲೆ ಸಮೀಪದಲ್ಲಿ ಬಂಧನ. ಬಳಿಕ ಸೆಂಟ್ರಲ್ ಜೈಲು, ಮೈಸೂರು ಜೈಲು ಸೇರಿದಂತೆ ದೇಶದ ದೊಡ್ಡ ಜೈಲೆನಿಸಿದ ಪೂನಾದಲ್ಲಿರುವ ಯರವಾಡಾ ಜೈಲಿನಲ್ಲೂ ಸೆರಮನೆ ಶಿಕ್ಷೆ ಅನುಭವಿಸಿದರು.

ಅಪ್ಪಟ ಗಾಂಧಿವಾದಿಯಾಗಿದ್ದ ಎಚ್‌ಎನ್ ತಾರ್ಕಿಕ ಮನೋಭಾವದವರು. 1943ರಲ್ಲಿ ಮತ್ತೆ ಚಳುವಳಿಗಿಳಿದರು. 1947ರಲ್ಲಿ ಮೈಸೂರು ಚಲೋ ಚಳುವಳಿಯಲ್ಲಿ ಭಾಗವಹಿಸಿ ತಮ್ಮ ಸಹಪಾಟಿ ಕೆ. ಶ್ರೀನಿವಾಸನ್ ಜೊತೆ ಸೇರಿ ‘ಇಂಕ್ವಿಲಾಬ್’ ಎಂಬ ಪತ್ರಿಕೆ ಹೊರಡಿಸಿದರು.

1946-60ರ ಅವಧಿಯಲ್ಲಿ ನ್ಯಾಷನಲ್ ಕಾಲೇಜಿನ ಭೌತ ವಿಜ್ಞಾನ ಉಪನ್ಯಾಸಕರಾಗಿ, 1961-72ರವರೆಗೆ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ಶಿಕ್ಷಣ, ವಿಜ್ಞಾನ, ಗಾಂಧೀತತ್ವ, ಕ್ರೀಡೆ, ನಾಟಕ – ಈ ರೀತಿ ಎಲ್ಲ ವಿಷಯಗಳಿಗೂ ಪೂರಕವಾದ ವಿಭಾಗಗಳನ್ನು ಸ್ಥಾಪಿಸಿ, ನ್ಯಾಷನಲ್ ಕಾಲೇಜನ್ನು ಸಮರ್ಥವಾಗಿ ಅಭಿವೃದ್ದಿ ಪಡಿಸಿದರು. ಅವರ ಅಧಿಕಾರಾವಧಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿ ಸಹ ಶಿಕ್ಷಣ, ಅಧ್ಯಾಪಕರ ಹಾಜರಾತಿ ಸಹಿ ಪದ್ಧತಿ, ಶೈಕ್ಷಣಿಕ-ಪಠ್ಯೇತರ ಚಟುವಟಿಕೆಗಳಿಗೆ ಆದ್ಯತೆ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ವಿಶೇಷ ತರಬೇತಿ – ಹೀಗೆ ಅನೇಕ ಸುಧಾರಣಾ ಕ್ರಮಗಳು ಜರಿಗೆ ಬಂದವು. ಪ್ರತಿವರ್ಷ ರ‍್ಯಾಂಕ್ ಬರುವ ಕಾಲೇಜು ಎಂದು ಅದಕ್ಕೆ ಹೆಸರು ಬಂದಿತು. ನಂತರ ಗೌರಿಬಿದನೂರು, ಬಾಗೇಪಲ್ಲಿ, ಯಲ್ದೂರು, ಮಡಿಯನೂರು, ಸುಬ್ರಮಣ್ಯಪುರ, ಜಯನಗರಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲೆಗಳನ್ನು ತೆರೆದರು.

ಜನರಲ್ಲಿ ವೈಜ್ಞಾನಿಕ ಅರಿವು ನೀಡುವ ಸಲುವಾಗಿ ಬೆಂಗಳೂರು ಸೈನ್ಸ್ ಫೋರಂ (ಬೆಂಗಳೂರು ವಿಜ್ಞಾನ ವೇದಿಕೆ) ಪ್ರಾರಂಭಿಸಿದರು, ಇಲ್ಲಿ ಪ್ರತಿ ಬುಧವಾರ ಸಂಜೆ ವಿಜ್ಞಾನ ಕಾರ್ಯಕ್ರಮಗಳು ನಡೆಯುತ್ತ ಬಂದಿವೆ.  ಅಲ್ಲದೆ ಇಲ್ಲಿ ಪ್ರತಿವರ್ಷ ಒಂದು ತಿಂಗಳ ಕಾಲ ಬೇರೆ ಬೇರೆ ಕ್ಷೇತ್ರದ ವಿಜ್ಞಾನಿಗಳ ಉಪನ್ಯಾಸ ಕಾರ್ಯಕ್ರಮದ ವ್ಯವಸ್ಥೆಯನ್ನು ಅವರು ಜರಿಗೆ ತಂದರು.

ಇವರ ಸಾಧನೆಗಳನ್ನು ಗುರುತಿಸಿ ಸರ್ಕಾರವು 1972 ರಿಂದ 77ರವರೆಗೆ ಇವರನ್ನು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ನೇಮಿಸಿತು. ಇಲ್ಲಿ ಕೂಡ ವಿದ್ಯಾರ್ಥಿಗಳು ಉಪನ್ಯಾಸಕರ ಮೆಚ್ಚುಗೆಗೆ ಪಾತ್ರರಾಗಿ ವಿಶ್ವವಿದ್ಯಾಲಯದ ಕಾರ್ಯವ್ಯಾಪ್ತಿ, ವಿಸ್ತಾರ, ಘನತೆ ಹೆಚ್ಚಿಸಿದರು. ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ವಿಧಾನ ಸೌಧದಲ್ಲೂ ಅವರು ಕಾರ್ಯನಿರ್ವಹಿಸಿದರು. ಅಲ್ಲಿಯ ಎಲ್ಲಾ ರಾಜಕಾರಣಿಗಳ, ಗಣ್ಯರ ಮೆಚ್ಚುಗೆಗೆ ಪಾತ್ರರಾದರು.

1980ರಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಾಥಮಿಕ ಸ್ಥಾಪಕ ಅಧ್ಯಕ್ಷರಾಗಿ ವಿಜ್ಞಾನ ಬೆಳೆಸುವಲ್ಲಿ ಸಹಕರಿಸಿದರು. ತಮ್ಮ ಕಾರ್ಯದೊತ್ತಡದಲ್ಲಿ ಬೇರೆ ಬೇರೆ ಸಂಸ್ಥೆಗಳ ಕಾರ್ಯನಿರ್ವಹಣೆಯಿಂದ ದೂರವಾಗಿದ್ದರೂ 2004-05 ರಲ್ಲಿ ಪುನಃ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಮಹಾಪೋಷಕರಾಗಿ ಸಂಸ್ಥೆಗೊಂದು ನೆಲೆ ಒದಗಿಸಿದರು. ಬೆಂಗಳೂರು ನಗರದ ಹೃದಯಭಾಗ ಬನಶಂಕರಿ 2ನೇ ಹಂತದಲ್ಲಿ ಬಿಡಿಎ ನಿವೇಶನ ಒದಗಿಸಿ ಕರಾವಿಪದ ಇಂದಿನ ಬೃಹತ್ ಕಟ್ಟಡ ‘ವಿಜ್ಞಾನ ಭವನ’ಕ್ಕೆ ಸಾಕ್ಷಿಯಾಗಿದ್ದಾರೆ. ಜನರಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆ, ಕಂದಾಚಾರ, ಭಾನಾಮತಿ ಇವುಗಳ ಬಗೆಗೆ ಪ್ರಶ್ನೆ ಹುಟ್ಟು ಹಾಕುವ ಪ್ರವೃತ್ತಿ ಯನ್ನು ಜನ ಸಾಮಾನ್ಯರಲ್ಲಿ ಬೆಳೆಸಲು ಅವರು ಶ್ರಮಿಸಿದರು. ಪವಾಡ ಮಾಡುವವರಿಗೆ ಬಹಿರಂಗ ಸವಾಲು ಹಾಕುತ್ತಿದ್ದರು ಎಚ್‌ಎನ್. ಯಾರಿಗೂ ಮಣಿಯದೆ ಪ್ರಶ್ನೆ ಹಾಕುವ ಪ್ರವೃತ್ತಿಯನ್ನು ಅವರು ಹುಟ್ಟು ಹಾಕಿದರು. ಅವರು ಸ್ಥಾಪಿಸಿದ ಸಂಸ್ಥೆಗಳಲ್ಲೆಲ್ಲ ‘?’ ಈ ಚಿಹ್ನೆಯ ಸಂಕೇತವು ಪ್ರದರ್ಶಿಸಲ್ಪಟ್ಟಿರುತ್ತದೆ.

 

 

ಸದಾ ಜನಜಂಗುಳಿಯ ಮಧ್ಯದಲ್ಲಿ, ನಗುತ್ತಾ ‘ಕುಶಲ ಕುಶಲೋಪರಿ’ ವಿಚಾರಿಸುತ್ತ, ಊಟೋಪಚಾರಗಳನ್ನು ತಾವೇ ವಹಿಸಿಕೊಂಡು, ತಮ್ಮ ಜೀವಮಾನವನ್ನೆಲ್ಲಾ ವಿದ್ಯಾರ್ಥಿ ನಿಲಯಗಳಲ್ಲೆ ಕಳೆದ ಈ ಮಹಾನುಭಾವರು ವಿದ್ಯಾರ್ಥಿಗಳೇ ತನ್ನ ಮಕ್ಕಳೆಂಬತೆ ಕಂಡರು. ಸಮಾಜ ಸೇವೆಯಲ್ಲಿ ಜೀವನವನ್ನು ಕಳೆದರು. ನ್ಯಾಷನಲ್ ಕಾಲೇಜಿನ ಚಿಕ್ಕ ಕೊಠಡಿಯಲ್ಲಿ ಕೊನೆಯವರೆಗೆ ಬದುಕು ನಡೆಸಿದರು. ಒಂದು ಟೆಲಿಫೋನ್, ಒಂದು ಚಾಪೆ, ಒಂದು ಚಿಕ್ಕ ಟೇಬಲ್ ಇವೇ ಅವರ ಆಸ್ತಿಗಳು. ಯಾರಾದರೂ ಅತಿಥಿಗಳು ತಂದ ಹಣ್ಣುಗಳು ಅಲ್ಲಿ ಇರುತ್ತಿದ್ದವು. ಅವರ ಶಿಷ್ಯಗಣ ದೊಡ್ಡದು. ಬಿಳಿ ಅಂಗಿ, ಪಂಚೆ, ಟೋಪಿ ಧರಿಸಿ, ಜನಪ್ರಿಯತೆಯ ತುಟ್ಟ ತುದಿಗೇರಿದ್ದರು ಎಚ್‌ಎನ್.

1968ರಲ್ಲಿ ಶೈಕ್ಷಣಿಕ ರಂಗದ ಸಾಧನೆಗಾಗಿ ರಾಜ್ಯಪ್ರಶಸ್ತಿ, 1984ರಲ್ಲಿ ದೇಶದ ಪ್ರತಿಷ್ಠಿತ ಪ್ರಶಸ್ತಿ ಪದ್ಮಭೂಷಣಗಳೊಂದಿಗೆ ಇನ್ನೂ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದವು. ಯಾವದಕ್ಕೂ ಹಿಗ್ಗದೇ ಕುಗ್ಗದೇ ಸಾರ್ವಜನಿಕ ಕ್ಷೇತ್ರದಲ್ಲಿ ಮಲ್ಯಾಧಾರಿತ ಬದುಕು ಸಾಗಿಸಿದ ಧೀಮಂತ ಎಚ್‌ಎನ್ ನಮಗೆಲ್ಲ ಆದರ್ಶಪ್ರಾಯರು.