ನಿಮ್ಮ ಕಡೆಯ ರೋಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಏನೇನೋ ಔಷಧ ಕೊಡಲಾಗುತ್ತದೆ. ಅದು ಯಾವ ಔಷಧ ಎಂಬುದು ನಿಮಗೆ ಗೊತ್ತಿಲ್ಲದ ಕಾರಣ, ವೈದ್ಯರು ಸೂಚಿಸಿದ ಪದಗಳೂ ಬಹುಪಾಲು ಕೋಡ್‌ವರ್ಡ್ ಆಗಿರುವುದರಿಂದ ಅದು ಏನೋ ಒಂದು ಎಂದಷ್ಟೇ ಅರ್ಥವಾಗಿರುತ್ತದೆ. ಅದರ ಬದಲು ವೈದ್ಯಕೀಯ ಭಾಷೆಯ ಕನಿಷ್ಠ ತಿಳುವಳಿಕೆ ಇದ್ದಿದ್ದಾದರೆ…

ಇತ್ತೀಚೆಗೆ ನನ್ನ ಗೆಳೆಯನ ತಾಯಿಗೆ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯಲ್ಲಿ ಒಂದೆರಡು ಆಪರೇಷನ್ ಆಯಿತು. ಆದರೂ ರೋಗ ಯಾವುದೆಂದೇ ತಿಳಿಯದೆ ಕೊನೆಗೆ ವೈದ್ಯರು ಮನೆಗೊಯ್ಯಲು ಹೇಳಿದರು. ಸ್ವಲ್ಪ ದಿನಗಳಲ್ಲಿ ಅವರ ತಾಯಿ ತೀರಿಕೊಂಡರು. ಗೆಳೆಯ ದುಃಖದಿಂದ ಆಕ್ರೋಶಗೊಂಡಿದ್ದ. ಕಾರಣ ವೈದ್ಯರ ನಡವಳಿಕೆ. ಅಲ್ಲಿ ರೋಗಿಯನ್ನು ನೋಡಲು ಬಂದ ವೈದ್ಯರುಗಳು ರೋಗಿಯ ಮೇಲ್ವಿಚಾರಣೆಗೆ ನಿಂತ ಅವನ ಬಳಿ ಏನೊಂದೂ ಹೇಳುತ್ತಿರಲಿಲ್ಲ. ದಿನಕ್ಕೊಂದು ಬಗೆಯ ಪರೀಕ್ಷೆ ಮಾಡಿಸಿದರೂ ಅದು ಯಾವ ಟೆಸ್ಟ್, ಏತಕ್ಕಾಗಿ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿಸುತ್ತಿರಲಿಲ್ಲ. ಬರೆದುಕೊಟ್ಟ ಚೀಟಿಯಲ್ಲಿರುವ ಭಾಷೆ ಅರ್ಥವಾಗುತ್ತಿರಲಿಲ್ಲ.

ಕೊನೆಗೆ ನರ್ಸುಗಳ ಮನವೊಲಿಸಿ ಕೇಸ್‌ಶೀಟ್ ತೆಗೆದು ನೋಡಿದರೂ ಅದರಲ್ಲಿ ಕೋಡ್‌ವರ್ಡ್‌ಗಳಿರುವ ಕಾರಣ ತಾಯಿಗೆ ನೀಡುತ್ತಿರುವ ಚಿಕಿತ್ಸೆಯು ಯಾವುದೆಂದು ತಿಳಿಯಲೇ ಇಲ್ಲ. ಈತನೇ ವೈದ್ಯ ಮಹಾಶಯರಲ್ಲಿ ಕೇಳಿದರೆ ನಿಮ್ಮ ತಾಯಿಯನ್ನು ಉಳಿಸಲು ನಾವು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ. ನೀವು ಅದನ್ನು ಅರ್ಥಮಾಡಿಕೊಳ್ಳಿ. ಹೆಚ್ಚು ಪ್ರಶ್ನೆ ಕೇಳಿ ತಲೆಕೆಡಿಸಿಕೊಳ್ಳಬೇಡಿ ಎನ್ನುವ ಬಿಗುಮೊಗದ ಉತ್ತರ ಅವರಿಂದ. ಅವರವರೇ ಆಡುವ ರೋಗಿಯ ಬಗೆಗಿನ ಮಾತುಗಳೂ ಈತನಿಗೆ ಅರ್ಥವಾಗದೇ ಮುಖ ಮುಖ ನೋಡುವ ಪರಿಸ್ಥಿತಿ. ಇಷ್ಟೆಲ್ಲಾ ಆಗಿದ್ದು ಕೊನೆಗೆ ಮಾಡಿದ ಆಪರೇಷನ್ ಹಾಗೂ ಪರೀಕ್ಷೆಗಳು, ನೀಡಿದ ಔಷಧಗಳೆಲ್ಲಾ ಪ್ರಯೋಗವೆಂದು ತಿಳಿದಿದ್ದು ಆತನಿಗೆ ಇಡೀ ವೈದ್ಯರ ಸಮೂಹಗಳ ಮೇಲೆ ಜಿಗುಪ್ಸೆ, ಆಕ್ರೋಶ ಉಂಟಾಗಿತ್ತು.

ವೈದ್ಯರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಗಳ ಕುರಿತು, ಬಳಕೆದಾರ ವೇದಿಕೆ, ಲೋಕಾಯುಕ್ತ ಅಥವಾ ನ್ಯಾಯಾಯಲಗಳಲ್ಲಿ ದೂರು ನೀಡಬಹುದು ಅಥವಾ ಪತ್ರಿಕೆಗಳು ವಾಚಕರ ವಿಭಾಗದಲ್ಲಿ ಬರೆದು ಅವರ ಅನ್ಯಾಯವನ್ನು ಬಯಲಿಗೆಳೆಯಬಹುದು. ಇದೆಲ್ಲಾ ಆದೀತೆಂದು ತಿಳಿದೇ ವೈದ್ಯರು ರೋಗಿಯ ಬಗೆಗಿನ ವಿವರ ಹಾಗೂ ನೀಡುತ್ತಿರುವ ಔಷಧಗಳ ವಿವರಗಳನ್ನು ನೀಡದೇ ಉಳಿಯುತ್ತಾರೆ. ಈಗೀಗ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಕೇಸ್‌ಶೀಟ್, ರೋಗಿಯ ವಿವಿಧ ಪರೀಕ್ಷೆಗಳನ್ನು ಮಾಡಿಸಿದ ದಾಖಲೆಗಳನ್ನು ರೋಗಿಗೆ ಸಂಬಂಧಪಟ್ಟವರಿಗೆ ಸಿಗದಂತೆ ಮಾಡುತ್ತಾರೆ. ಒಂದೊಮ್ಮೆ ರೋಗಿ ಆಸ್ಪತ್ರೆಯಲ್ಲೇ ತೀರಿಹೋದರೆ (ವೈದ್ಯರ ಅನಾಹುತದಿಂದಾಗಿ) ರೋಗಿಗೆ ಸಂಬಂಧಿಸಿದ ಯಾವ ಮಾಹಿತಿಗಳೂ ಸಿಗದಂತೆ ಇಡೀ ಆಸ್ಪತ್ರೆಯ ತಂಡದವರು ಕಾರ್ಯ ನಿರ್ವಹಿಸುತ್ತಾರೆ. ಇದೆಲ್ಲದರ ವಿರುದ್ಧ ಹೋರಾಡಲು ಅಥವಾ ಈ ಎಲ್ಲಾ ಮಾಹಿತಿಗಳನ್ನು ಪಡೆಯಲು ವೈದ್ಯಕೀಯ ಲೋಕದ ಒಂದಿಷ್ಟು ವಿವರಗಳನ್ನು ವೈದ್ಯಕೀಯ ಭಾಷೆಯನ್ನು ತಿಳಿದಿರುವುದು ಮುಖ್ಯ.

ವೈದ್ಯಕೀಯ ಭಾಷೆ ಕಬ್ಬಿಣದ ಕಡಲೆಯಲ್ಲ. ವೈದ್ಯರುಗಳು ಆಯಾ ರೋಗಕ್ಕೋ, ಔಷಧಿಗೋ, ಚಿಕಿತ್ಸೆಗೋ ಅಥವಾ ಇನ್ಯಾವುದಕ್ಕೋ ಇಂಗ್ಲೀಷ್, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿರುವ ಉದ್ದುದ್ದ ಪದಗಳನ್ನು ಸಣ್ಣಗೊಳಿಸಿ ಮಾತನಾಡುತ್ತಿರುತ್ತಾರೆ, ಬರೆದುಕೊಡುತ್ತಿರುತ್ತಾರೆ. ಹಾಗಂತ ಆ ವೈದ್ಯರು ಅದರ ವಿವರಣೆಯನ್ನು ತಿಳಿಸಲು ಹೋದರೆ ಒಂದು ವೈದ್ಯಕೀಯ ಲೈಬ್ರರಿಯ ಪುಸ್ತಕವೆಲ್ಲಾ ಬೇಕಾದೀತು. ಎಷ್ಟೋ ವೈದ್ಯರಿಗೆ ಅದರ ಅರ್ಥ ತಿಳಿಯದಿರುವ ಸಾಧ್ಯತೆಯುಂಟು ಅಥವಾ ಅರ್ಥ ವಿವರಿಸಲು ಬರದಿರಬಹುದು. ಆದರೆ ವೈದ್ಯಕೀಯ ಭಾಷೆಯನ್ನು ರಹಸ್ಯವಾಗಿಡುವ ಯೋಚನೆಯಂತೂ ಇವರದ್ದಲ್ಲ. ರೋಗಿಗಳು, ಆಸಕ್ತರು ಈ ಕುರಿತು ವೈದ್ಯರುಗಳ ಬಿಡುವಿನ ಸಮಯದಲ್ಲಿ ಕೇಳಿದರೆ ತಿಳಿದವರು ಖಂಡಿತಾ ನಿರ್ವಂಚನೆಯಿಂದ ಹೇಳುತ್ತಾರೆ. ಆದರೆ ವೈದ್ಯರ, ನರ್ಸ್‌ಗಳ ವಿನಃ ಉಳಿದವರಿಗೆ ಆಸ್ಪತ್ರೆಯಲಿದ್ದಷ್ಟು ಹೊತ್ತು ಈ ಆಸಕ್ತಿಯೇ ಹೊರತು ಅನಂತರದಲ್ಲಿ ಮರೆತುಹೋಗುವ ಸಾಧ್ಯತೆಯೇ ಹೆಚ್ಚು. ವೈದ್ಯಕೀಯ ಪದಕೋಶ, ಮೆಡಿಕಲ್ ಎನ್‌ಸೈಕ್ಲೋಪೀಡಿಯಾಗಳೂ ವೈದ್ಯಲೋಕದ ಅರ್ಥ ಹೇಳುತ್ತವೆ. ಈಗ ಕನ್ನಡದಲ್ಲೂ ವೈದ್ಯಕೀಯ ಭಾಷೆಯ ಅರ್ಥ ವಿವರಣೆ ಇರುವ ಪುಸ್ತಕಗಳು ಬರುತ್ತಿವೆ. ಇಲ್ಲಿ ನೀವು ತಿಳಿಯಬೇಕೆಂದಿರುವ ಪದದ ಪ್ರತಿ ಅಕ್ಷರಗಳೂ ತಪ್ಪಿಲ್ಲದೇ ತಿಳಿದಿರುವುದು ಮುಖ್ಯ. ಹಾಗೇ ಅದನ್ನು ಅನುಸರಿಸುವುದೂ ಮುಖ್ಯ. ಅಂತಹ ಕೆಲವು ಪದಗಳ ವಿವರಗಳನ್ನು ಅನುಕೂಲಕ್ಕಾಗಿ ಇಲ್ಲಿ ನೀಡಲಾಗಿದೆ. ಇನ್ನಷ್ಟು ಶಬ್ದಗಳನ್ನು ಆಸಕ್ತರು ಪದಕೋಶಗಳ ಮೂಲಕ ಅರಿತುಕೊಂಡರೆ ಒಳಿತು.

ಕಲಿಯಿರಿ ಮತ್ತು ಕಲಿಸಿರಿ

Rx ನೀವು ತೆಗೆದುಕೊಳ್ಳಿ
Div ಭಾಗ ಮಾಡಿ
a.c. ಊಟಕ್ಕೆ ಮೊದಲು
F.m. ಬೆರೆಸಿಕೊಡಿ
p.c. ಊಟದ ನಂತರ
Cyath ಲೋಟದ ತುಂಬಾ
i.c. ಎರಡು ಊಟಗಳ ಮಧ್ಯೆ
tsf ಟೀ ಚಮಚದ ತುಂಬಾ
cap ಕೊಳವೆ ಮಾತ್ರೆ
stat ತತ್‌ಕ್ಷಣ
tab ಗುಳಿಗೆ ಮಾತ್ರೆ
suppos ಇಟ್ಟುಕೊಳ್ಳುವುದು
agit ಚೆನ್ನಾಗಿ ಕಲಕಿ
Syr ಸಿರಪ್ ಕುಡಿಸಿ
 dil ಕರಗಿಸಿ
Cont ಮುಂದುವರೆಸಿ
gtt ಹನಿ ಹನಿಯಾಗಿ
Cap ಅವನೇ ತೆಗೆದುಕೊಳ್ಳಲಿ
o.d. ದಿನಕ್ಕೊಂದು ಸಲ
Cm ನಾಳೆ ಬೆಳಗ್ಗೆ
b.i.d. ದಿನಕ್ಕೆರಡು ಸಾರಿ
Cm ನಾಳೆ ರಾತ್ರಿ
p.i.d. ದಿನಕ್ಕೆ ಮೂರು ಸಲ
Omn bih ಪ್ರತಿ ಎರಡು ಗಂಟೆಗೊಮ್ಮೆ
q.i.d. ದಿನಕ್ಕೆ ನಾಲ್ಕು ಬಾರಿ
q.h. ಪ್ರತಿ ಒಂದು ಗಂಟೆಗೊಮ್ಮೆ
Ind ದಿನಾಲೂ
0-೧-0 ಬೆಳಗ್ಗೆ ಬೇಡ-ಮಧ್ಯಾಹ್ನ ಒಂದು ಮಾತ್ರೆ-ರಾತ್ರಿಬೇಡ
Bis ದಿನದಲ್ಲಿ ಎರಡು ಬಾರಿ
Pharm  ಔಷಧಿ ಅಂಗಡಿ
o.m. ದಿನಾ ಬೆಳಗ್ಗೆ
a.d. ದಿನ ಬಿಟ್ಟು ದಿನ
O.T. ಆಪರೇಶನ್ ನಡೆಯುವ ಸ್ಥಳ
I.C.U. ತೀವ್ರ ನಿಗಾ ಘಟಕ
I.C.C.U ಹೃದಯ ರೋಗಿಗಳನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳುವ ವಿಭಾಗ
ICG ಹೃದಯಬಡಿತ ವಿವರಿಸುವ ನಕ್ಷೆ
CTG ಭ್ರೂಣದ ಸ್ಥಿತಿ ವಿವರಿಸುವ ನಕ್ಷೆ
U.S.S. ಸೂಕ್ಷ್ಮ ತರಂಗಗಳ ಮೂಲಕ ತಪಾಸಣೆ ನಡೆಸುವಿಕೆ
Dose ಒಮ್ಮೆಲೆ ಕೊಡಬೇಕೆಂದು ಸೂಚಿತವಾದ ಔಷಧಿಗಳು
* ಹುಟ್ಟು
+ ಸಾವು
ing ಚುಚ್ಚುಮದ್ದು
s.o.s. ಅಗತ್ಯ ಬಿದ್ದಾಗ
q.i. ಎಷ್ಟು ಬೇಕೋ ಅಷ್ಟೇ ಕೊಡಿ
D ಒಂದು ಡೋಸ್
d ಕೊಡಿ

 ವಿವಿಧ ಚುಚ್ಚುಮದ್ದು ನೀಡುವಿಕೆ

I.M. ಸ್ನಾಯುಗಳಿಗೆ
I.V. ರಕ್ತನಾಳಗಳಲ್ಲಿ ಅಭಿಧಮನಿಗೆ
S.C. ಚರ್ಮದ ಕೆಳಗೆ
I.Ac. ಕೀಲುಗಳಿಗೆ
I.T. ಬೆನ್ನುಹುರಿಗೆ
I.A. ರಕ್ತನಾಳಗಳಲ್ಲಿ ಅಪಧಮನಿಗೆ
Aq ನೀರು
Aqbull ಕಾದಾರಿದ ನೀರು
Aq dist (ಸೋಸಿದ) ಭಟ್ಟಿ ಇಳಿಸಿದ ನೀರು
Orally ಬಾಯಿಯ ಮುಖಾಂತರ
P ಮುಂದುವರೆಸಿ
Rec ಚೀಪಲು ಕೊಡಿ
Rep ಮತ್ತೊಮ್ಮೆ ಅದನ್ನೇ ಮರುಕಳಿಸಿ ಕೊಡಿ
Die balt ಒಂದು ದಿನ ಬಿಟ್ಟು ಮತ್ತೊಂದು ದಿನ
H.S. ರಾತ್ರಿ ಮಲಗುವ ವೇಳೆ
೧-೧-೧ ಬೆಳಗ್ಗೆ ಮಧ್ಯಾಹ್ನ ರಾತ್ರಿ ಒಂದೊಂದು ಮಾತ್ರೆ

– ಈ ಲೇಖನ ವಿವಿಧ ಪತ್ರಿಕೆಗಳ ವರದಿಯನ್ನು ಆಧರಿಸಿದೆ. ಹೆಚ್ಚುವರಿ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಹ ಸಂಪರ್ಕಿಸಲಾಗಿದೆ.