ಮನುಷ್ಯರಿಗೂ ಪ್ರಾಣಿಗಳಿಗೂ ಇರುವ ಅತೀ ಮುಖ್ಯವಾದ ವ್ಯತ್ಯಾಸಗಳೆಂದರೆ, ಮನುಷ್ಯ ಮಾತನಾಡಬಲ್ಲ, ಹಾಡಬಲ್ಲ, ಬರೆಯಬಲ್ಲ, ನಗಬಲ್ಲ ಹಾಗೂ ಆಳಬಲ್ಲ. “ಮ್ಯಾನ್ ಈಸ್ ದ ಓನ್ಲೀ ಅನಿಮಲ್ ದಟ್ ಕ್ಯಾನ್ ಲಾಫ್ ಅಂಡ್ ವೀಪ್”. ಪ್ರಾಣಿಗಳು ನಗಲಾರವು ಹಾಗೂ ಆಳಲಾರವು. ಕಾರಣ ಅವಕ್ಕೆ ನಗೋಕೆ ಆಳೋಕೆ ಬರೋದಿಲ್ಲ. ನಗು ದೇವರು ನಮಗೆ ಮಾತ್ರ ಕೊಟ್ಟ ಒಂದು ವರ. ಮಂದಹಾಸ ತುಂಬಿದ ನಗುಮುಖ ನಮ್ಮೊಳಗಿನ ಸಂತುಷ್ಟ ಮನಸ್ಸಿನ ಆನಂದಮಯ ಸ್ಥಿತಿಯನ್ನು ಸೂಚಿಸುತ್ತದೆ. ಅಂತೆಯೇ ಅಳು ನಮ್ಮೊಳಗಿನ ದುಃಖವನ್ನು ಹೊರಸೂಸುತ್ತದೆ. ಆರೋಗ್ಯದ ದೃಷ್ಟಿಯಿಂದ ನಗುವುದು ಒಳಿತು. ಸಾಮಾನ್ಯವಾಗಿ ಮನಸಾರೆ ನಗುವವರು ಆರೋಗ್ಯವಂತರಾಗಿಯೇ ಇರುತ್ತಾರೆ. ನಗುವುದರಿಂದ ಶರೀರದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಹಾಗೂ ದೇಹದ ಅಂಗಾಂಗ ರಕ್ತ ಸಂಚಾರ ವೃದ್ಧಿಯಾಗಿ ಅವು ಚುರುಕುಗೊಳ್ಳುತ್ತವೆ.

ಯಾವಾಗ ನೋಡಿದರೂ ಎಲ್ಲದಕ್ಕೂ ಒತ್ತಡ (ಸ್ಟ್ರೆಸ್) ಹೇರಿಕೊಂಡು ಜೀವನವನ್ನೇ ಕಳೆದುಕೊಂಡವರಿಗೆ (ಲೈಫ್‌ನ್ನು ಮಿಸ್ ಮಾಡಿಕೊಂಡವರಿಗೆ) ಲಾಫ್ಟರ್‌ ಈಸ್ ದ ಬೆಸ್ಟ್ ಮೆಡಿಸನ್ ಅಂತಾರೆ. ನಗು ಒಂದು ಒಳ್ಳೆಯ ಔಷಧವಿದ್ದ ಹಾಗೆ. ಯಾಕೆಂದರೆ ‘ಇಟ್ ಈಸ್ ದ ಓನ್ಲಿ ಮೆಡಿಸನ್ ವಿಚ್ ಹ್ಯಾಸ್ ನೋ ಎಕ್ಸ್‌ಪೈರಿ ಡೇಟ್ ಅಂಡ್ ಸೈಡ್ ಎಫೆಕ್ಟ್, ನಗುವ ಪ್ರಕ್ರಿಯೆ ವ್ಯಕ್ತಿಯ ಮಾನಸಿಕ ಸ್ಥಿತಿಯನ್ನು ಸೂಚಿಸುತ್ತದೆ. ಒಬ್ಬ ವ್ಯಕ್ತಿ, ಎಲ್ಲಿ ನಗಬೇಕೋ ಅಲ್ಲಿ ನಗದೇ ಇದ್ದರೆ ಅಥವಾ ಕಾರಣವಿಲ್ಲದೇ ಅವನೊಬ್ಬನೇ ನಗ್ತಾ ಇದ್ದರೆ ಅದು ಅವನ ಮಾನಸಿಕ ಅಸ್ವಸ್ಥತೆಯನ್ನು ಸೂಚಿಸುತ್ತದೆ. ಆದುದರಿಂದಲೇ ಹಿಂದಿನವರು ಹೇಳಿದ್ದು: ತಾನೊಬ್ಬನೇ ನಗುತ್ತಿರುವವನು ಹುಚ್ಚ, ಒಳಗೊಳಗೆ ನಗುತ್ತಿರುವವನು ಜ್ಞಾನಿ, ಬಿದ್ದು ಬಿದ್ದು ಮೈ ಮರೆತು ನಗುತ್ತಿರುವನು ರಸಿಕ, ಇನ್ನೊಬ್ಬರನ್ನು ನೋಡಿ ಅವರಿಗೆ ನೋವಾಗುವಂತೆ ನಗುವವನು ದಡ್ಡ, ಇತರರನ್ನು ನಗಿಸಿ ರಂಜಿಸುವವನು ವಿದೂಷಕ, ನಗುತ್ತಲೇ ವಿಜಯ ಸಾಧಿಸಿಕೊಳ್ಳುವವನು ಜಾಣ ಎಂಬುದಾಗಿ ಹೇಳಿದ್ದಾರೆ. ನಗೆಗಿಲ್ಲ ಹಗೆ ಅಂತಾರೆ. ಆದರೆ ಕೆಲವರ ಮುಖದಲ್ಲಿ ನಗುವೇ ಇರೋದಿಲ್ಲ. ಯಾವಾಗ ನೋಡಿದರೂ ಮುಖ ಗಂಟು ಹಾಕಿಕೊಂಡಿರುತ್ತಾರೆ. ಆದರೆ ನಗಲು ಬೇಕಾದ ಶಕ್ತಿಗಿಂತ ಗಂಟು ಮೋರೆ ಮಾಡಿಕೊಳ್ಳಲು ಬೇಕಾದ ಶಕ್ತಿಯ ವ್ಯಯ ಹೆಚ್ಚು ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ನಗೆಯಲ್ಲೂ ತರತರದ ನಗೆಗಳಿವೆ; ಸಹಜ ನಗೆ, ಕೃತಕ ನಗೆ, ತುಂಟನಗೆ, ತುಟಿನಗೆ, ಹೃದಯದ ತುಂಬಾ ಬಂದ ನಗೆ, ಒತ್ತಾಯದ ನಗೆ, ಕಿರು ನಗೆ, ಕೊರಳ್ ನಗೆ, ಮುಗುಳ್ನಗೆ, ಹುಸಿನಗೆ, ಇತ್ಯಾದಿ. ಅಂತೆಯೇ ನಗುವ ರೀತಿಗಳೂ ತರತರವಾಗಿರುತ್ತವೆ. ಕೆಲವರು ಗಹಗಹಿಸಿ ನಕ್ಕರೆ, ಕೆಲವರು ಒಳಗೊಳಗೇ ನಗುತ್ತಾರೆ. ಕೆಲವರು ಮುಸಿಮುಸಿ ನಕ್ಕರೆ, ಕೆಲವರು ಕಿಸಿಕಿಸಿ ನಗುತ್ತಾರೆ. ಕೆಲವರು ಬಿದ್ದೂ ಬಿದ್ದೂ ನಕ್ಕರೆ, ಕೆಲವರು ಕದ್ದೂ ಕದ್ದೂ ನಗುತ್ತಾರೆ. ಒಟ್ಟಿನಲ್ಲಿ ನಕ್ಕಂತೆ ನಟಿಸಬೇಡಿ. ಮನಸಾರೆ ನಕ್ಕುಬಿಡಿ ಅಂತಾರೆ ರಾಷ್ಟ್ರಕವಿ ಕುವೆಂಪುರವರು. ವೈಯಕ್ತಿಕವಾಗಿ ನಗು ಮನಸ್ಸಿಗೆ ಆನಂದವನ್ನೂ ಆರಾಮವನ್ನೂ ನೀಡುತ್ತದೆ. ಸಾಮಾಜಿಕವಾಗಿ ಎಂತಹ ಬಿಗು ವಾತಾವರಣವನ್ನೂ ತಿಳಿಗೊಳಿಸಿ ಸ್ನೇಹದ ಲಘು ವಾತಾವರಣವನ್ನು ಸೃಷ್ಟಿಸಬಲ್ಲ ಶಕ್ತಿ ನಗುವಿಗಿದೆ. ನಗೋದಂದ್ರೆ ಎಲ್ಲರಿಗೂ ಬಹಳ ಇಷ್ಟ. ಹಾಸ್ಯ ಎಂದರೆ ಜನ ಪ್ರಾಣ ಬಿಡ್ತಾರೆ. ಆದುದರಿಂದಲೇ, ಈ ನಡುವೆ ಹಾಸ್ಯೋತ್ಸವಗಳು ನಗೆ ಹಬ್ಬಗಳು ನಗೆ ಕೂಟಗಳು ಭಾರಿ ಜನಪ್ರಿಯವಾಗುತ್ತಿವೆ.

ಈ ದಿನಗಳಲ್ಲಂತೂ ಪಟ್ಟಣದ ಬಿಡುವಿಲ್ಲದ ಯಾಂತ್ರಿಕ ಬದುಕಿನಿಂದ ಜನ ಬೇಸತ್ತಿದ್ದಾರೆ. ಕೆಲವರಂತೂ ನಗೋದನ್ನೇ ಮರೆತುಬಿಟ್ಟಿದ್ದಾರೆ. ಹೀಗಾಗಬಾರದು. ನಗುವ ಸಮಯ ಸಂದರ್ಭ ಸಿಕ್ಕಿದಾಗಲೆಲ್ಲಾ ನಕ್ಕುಬಿಡಬೇಕು. ನಗುವಿನ ಮೂಲ ಹಾಸ್ಯ. ಹಾಸ್ಯ ನವರಸಗಳಲ್ಲಿ ಒಂದು. ಹಾಸ್ಯ ಎಲ್ಲೆಡೆ ಇರುತ್ತದೆ. ಆದರೆ ಅದನ್ನು ನೋಡುವ ಕಣ್ಣುಗಳು ಬೇಕು. ಕೇಳುವ ಕಿವಿಗಳು ಬೇಕು. ಅಷ್ಟೆ. ಕೆಲವರಂತೂ ಹಾಸ್ಯಪ್ರಜ್ಞೆಯನ್ನು ಚೆನ್ನಾಗಿ ಬೆಳೆಸಿಕೊಳ್ಳುತ್ತಾರೆ. ಇಂತಹವರು ಅತ್ಯಂತ ಜನಪ್ರಿಯ ವ್ಯಕ್ತಿಗಳಾಗುತ್ತಾರೆ ಮಾತ್ರವೇ ಅಲ್ಲ, ಜನರು ಇವರ ಸ್ನೇಹವನ್ನು ಬಯಸುತ್ತಾರೆ. ಆದರೆ ಹಾಸ್ಯ, ಅಪಹಾಸ್ಯ ಅಥವಾ ಪರಿಹಾಸ್ಯವಾಗಿರಬಾರದು. ಯಾರಿಗೂ ನೋವಾಗದ ತಿಳಿ ಹಾಸ್ಯವಾಗಿರಬೇಕು. ಅದನ್ನು ಹೇಳುವವರೂ ಆನಂದಿಸಬೇಕು. ಕೇಳುವವನೂ ಆನಂದಿಸಬೇಕು. ಬನ್ನಿ ಅಂತಹ ಹಾಸ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳೋಣ, ತನ್ಮೂಲಕ ಆರೋಗ್ಯವನ್ನು ವರ್ಧಿಸೋಣ.

* * *