ಇಪ್ಪತ್ತನೇ ಶತಮಾನ ಕಂಡ ಪ್ರಭಾವಶಾಲಿ ಬೌದ್ಧಿಕ ಬೆಳವಣಿಗೆಗಳಲ್ಲಿ ಮನೋವಿಶ್ಲೇಷಣಾ ಸಿದ್ಧಾಂತ (ಸೈಕೋಅನಾಲಿಟಕ್ ಥಿಯೆರಿ) ಪ್ರಮುಖವಾದದ್ದು. ಅದು ಕೇವಲ ವ್ಯಕ್ತಿತ್ವದ ಸಿದ್ಧಾಂತವಷ್ಟೇ ಅಲ್ಲ. ವೈಜ್ಞಾನಿಕ ತಳಹದಿಯುಳ್ಳ ವಿಶ್ಲೇಷಣಾ ವಿಧಾನ. ಒಂದು ಚಿಕಿತ್ಸಾ ರೀತಿ ಕೂಡ. ೧೯ನೆಯ ಶತಮಾನದ ಕೊನೆಯ ಭಾಗದಲ್ಲಿ ಸಿಗ್ಮಂಡ್ ಫ್ರಾಯ್ಡ್ ಈ ಸಿದ್ಧಾಂತವನ್ನು ಮೊದಲು ಮಂಡಿಸಿ ನಂತರ ತನ್ನ ಜೀವನದುದ್ದಕ್ಕೂ ಇದನ್ನು ಬೆಳೆಸಿದ. ಮನೋವಿಜ್ಞಾನಕ್ಕೆ ಹಲವು ಕೊಡುಗೆಗಳನ್ನು ನೀಡಿದ. ಇಂದು ಮನೋವಿಶ್ಲೇಷಣೆಯ ಪಿತಾಮಹ ಹುಟ್ಟಿ ೧೫೩ ವರ್ಷಗಳಾಗುತ್ತಿದ್ದರೆ ಮನೋವಿಶ್ಲೇಷಣಾ ಸಿದ್ಧಾಂತ ೧೧೭ ವರ್ಷಗಳಷ್ಟು ಅನುಭವಶಾಲಿ!

ಮೇ ೬, ೧೮೫೬ ರಲ್ಲಿ ಇಂದಿನ ಜೆಕೋಸ್ಲಾವಾಕಿಯ ಮೊರೆವಿಯದಲ್ಲಿ, ಯಹೂದಿ ಉಣ್ಣೆ ವ್ಯಾಪಾರಿಯ ಮಗನಾಗಿ ಜನಿಸಿದ ಫ್ರಾಯ್ಡ್‌. ನಂತರ ವಿಯನ್ನಾಗೆ ಬಂದು ಮೊದಲು ವಿಜ್ಞಾನಿಯಾಗಿ ನಂತರ ನರರೋಗತಜ್ಞನಾಗಿ ಕೊನೆಗೆ ಮನಃಶಾಸ್ತ್ರಜ್ಞನಾಗಿ ರೂಪುಗೊಂಡದ್ದು ಒಂದು ರೋಮಾಂಚಕ ಕತೆಯೇ. ವಿಜ್ಞಾನದ ಜೊತೆಜೊತೆಗೇ ಸಾಹಿತ್ಯದ ಬಗೆಗೂ, ಧರ್ಮದ ಕುರಿತೂ ಅಪಾರ ಒಲವು ಹೊಂದಿದ್ದ ಫ್ರಾಯ್ಡ್ ಎಲ್ಲ ಸಿದ್ಧಾಂತಗಳಲ್ಲೂ ಧಾರ್ಮಿಕ, ಸಾಹಿತ್ಯಕ ಲೇಪವನ್ನು ನೋಡಬಹುದು. ಮನುಷ್ಯನ ಮನಸ್ಸಿನ ಸೂಕ್ಷ್ಮಗಳನ್ನು, ಸಂಕೀರ್ಣತೆಯನ್ನು, ಸಂಕೇತಗಳನ್ನೂ ಅರ್ಥಮಾಡಿಕೊಳ್ಳುವಲ್ಲಿ ಫ್ರಾಯ್ಡನ ಸಿದ್ಧಾಂತಗಳು ಸಹಾಯಕ. ಫ್ರಾಯ್ಡ ಚಿಂತನೆ ಬರಹಗಳು ಸಾಹಿತ್ಯಕವಾಗಿಯೂ ಶ್ರೇಷ್ಠವಾದದ್ದರಿಂದಲೇ ಸಾಹಿತ್ಯದ ಗೋಥೆ ಪ್ರಶಸ್ತಿ ಆತನಿಗೆ ಸಿಕ್ಕಿದ್ದು.

ಫ್ರಾಯ್ಡ್ ಕೊಡುಗೆಗಳು

ಸುಪ್ತ ಮನಸ್ಸಿನ ಭಾವನೆಗಳನ್ನು ಹೊರತಂದು ಮನಸ್ಸಿನ ನೋವುಗಳಿಗೆ ಸಾಂತ್ವನ ನೀಡುವ ಅಬ್‌ ರಿಯಾಕ್ಷನ್, ಫ್ರೀ ಅಸೋಸಿಯೇಷನ್‌ಗಳನ್ನು ಫ್ರಾಯ್ಡ್‌ ರೂಪಿಸಿದ. ಸುಪ್ತ ಮನಸ್ಸು, ಜಾಗೃತ ಮನಸ್ಸು ಹೀಗೆ ಹಂತಗಳನ್ನು ವಿವರಿಸಿ ಅವುಗಳ ಮೂಲಕ ಮನುಷ್ಯನ ವರ್ತನೆಯನ್ನು ಅರ್ಥಮಾಡಿಕೊಳ್ಳಲು ಫ್ರಾಯ್ಡ್ ಪ್ರಯತ್ನಿಸಿದ.

ಫ್ರಾಯ್ಡ್‌ನ ಮತ್ತೊಂದು ಪ್ರಮುಖ ಸಿದ್ಧಾಂತ ಈಗೋ ಕುರಿತದ್ದು. ನಾನು ಎಂಬ ಭಾವ ಈಗೋ ಆದರೆ, ಮನಸ್ಸನ್ನು ನಿಯಂತ್ರಿಸಿ ಕಡಿವಾಣ ಹಾಕುವ ಭಾವ (ಮಗುವನ್ನು ನಿಯಂತ್ರಿಸುವ ತಂದೆಯ ರೀತಿ) ಸೂಪರ್ ಈಗೋ. ತನಗೆ ಇದು ಬೇಕೇ ಬೇಕು ಎಂದು ಹಠ ಮಾಡುವ ಇನ್ನೊಂದು ಭಾಗ ಇದ್. ಇವುಗಳ ಸಹಾಯದಿಂದ ಮಾನವನ ಮನಸ್ಸು ಸ್ವತಃ ತನ್ನೊಂದಿಗೆ, ಇತರರೊಂದಿಗೆ ಸಮಾಜದೊಂದಿಗೆ ಹೇಗೆ ಹೊಂದಿಕೊಳ್ಳಲು ಸಾಧ್ಯ. ಹೊಂದಿಕೊಳ್ಳದಿದ್ದರೆ ಅದು ಹೇಗೆ ಮಾನಸಿಕ ಅನಾರೋಗ್ಯಕ್ಕೆ ದಾರಿ ಮಾಡುತ್ತದೆ ಎಂಬುದನ್ನು ಫ್ರಾಯ್ಡ್ ವಿವರಿಸಿದ.

ಕನಸುಗಳು ನಮ್ಮ ಸುಪ್ತ ಮನಸ್ಸಿಗೆ ರಾಜಮಾರ್ಗವೆಂದು ಫ್ರಾಯ್ಡ್ ನಂಬಿದ್ದ. ನಮ್ಮ ಸುಪ್ತ ಮನಸ್ಸಿನ ಆಸೆ ಆಕಾಂಕ್ಷೆಗಳು ಸಿದ್ಧಿಸದ ಬಯಕೆಗಳು, ಬೇರೆಯವರ ಮೇಲಿನ ರಾಗ ದ್ವೇಷಗಳು ಕನಸುಗಳಾಗಿ ನಿದ್ರೆಯಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಅವನ ವಾದ.

ಆರು ಹಂತಗಳಲ್ಲಿ ಆಗುವ ಈ ಮನೋಲೈಂಗಿಕ ಬೆಳವಣಿಗೆ ಜೀವನದುದ್ದಕ್ಕೂ ನಡೆಯುತ್ತದೆ. ಉದಾಹರಣೆಗೆ ಮಗುವಿನ ಮೊದಲ ೧೮ ತಿಂಗಳುಗಳಲ್ಲಿ ಓರಲ್ ಹಂತ. ಇಲ್ಲಿ ಮಗುವಿನ ಉದ್ದೇಶ ಮೊಲೆ ಕುಡಿಯುವುದು, ನಿದ್ದೆ ಮಾಡುವುದು ಮತ್ತು ನಿದ್ದೆ ಬರುವ ಮುನ್ನ ಮೊಲೆ ಕುಡಿದ ನಂತರ ಉಂಟಾಗುವ ವಿಶ್ರಾಂತ ಸ್ಥಿತಿಯನ್ನು ತಲುಪುವುದು. ಮೊಲೆಯನ್ನು ಚೀಪುವ ಕುಡಿಯುವ, ಆಟವಾಡುವ ಚಟುವಟಿಕೆ ಇಲ್ಲಿರುತ್ತದೆ. ಈ ಹಂತವನ್ನು ಯಶಸ್ವಿಯಾಗಿ ದಾಟುವ ಮಗು ವ್ಯಕ್ತಿತ್ವದಲ್ಲಿ ಇತರರಲ್ಲಿ ವಿಶ್ವಾಸ ನಂಬಿಕೆ, ಸ್ವತಂತ್ರತೆ, ಕೊಡುವ ತೆಗೆದುಕೊಳ್ಳುವ ಪ್ರವೃತ್ತಿಗಳನ್ನು ಬೆಳೆಸಿಕೊಳ್ಳಲು ಸಾಧ್ಯ. ಅದಾಗದೇ ಇದ್ದಾಗ ಖಿನ್ನತೆ, ಆತಂಕ, ಇತರರ ಮೇಲೆ ಅತಿಯಾದ ಅವಲಂಬನೆ ತಲೆದೋರುತ್ತದೆ. ಇದೇ ಸಿದ್ಧಾಂತದ ಇನ್ನೊಂದು ಹಂತದಲ್ಲಿ ಕಾಣಿಸಿಕೊಳ್ಳುವಂಥವು ಈಡಿಪಸ್ ಮತ್ತು ಎಲೆಕ್ಟ್ರಾ ಕಾಂಪ್ಲೆಕ್ಸ್‌ಗಳು. ಮಗ ತಂದೆಯೊಡನೆ ತನ್ನನ್ನು ಹೋಲಿಸಿಕೊಂಡು ತಾಯಿಯ ಪ್ರೀತಿಗೆ ಹಂಬಲಿಸಿ ನಂತರ ತಂದೆಯಂತೆ ತಾನಾಗಬಯಸುವುದು. (ಈಡಿಪಸ್ ತನ್ನ ತಾಯಿಯೊಡನೆಯೇ ಮದುವೆಯಾದ ಗ್ರೀಕ್ ದೊರೆ). ಎಲೆಕ್ಟ್ರಾ ಕಾಂಪ್ಲೆಕ್ಸ್ ಅಂದರೆ ಮಗಳು ತಾಯಿಯೊಡನೆ ತನ್ನನ್ನು ಹೋಲಿಸಿಕೊಂಡು ತಂದೆಯ ಪ್ರೀತಿಗೆ ಹಾತೊರೆದು ನಂತರ ತಾಯಿಯೊಡನೆ ಗುರುತಿಸಿಕೊಳ್ಳುವುದು.

ಇವುಗಳ ಜೊತೆಗೇ ಮನಸ್ಸು ಹತಾಶೆ, ದ್ವೇಷ, ನೋವುಗಳಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಉಪಯೋಗಿಸುವ ರಕ್ಷಣಾತ್ಮಕ ವಿಧಾನಗಳ ಬಗ್ಗೆಯೂ ಫ್ರಾಯ್ಡ್ ಕೆಲಸ ಮಾಡಿದ್ದ. ದ್ರಾಕ್ಷಿ ಕೈಗೆಟುಕದ ನರಿ, ಅದು ಹುಳಿ ಎಂದು ಸಮಾಧಾನ ಮಾಡಿಕೊಳ್ಳುವ ಕಥೆ ಒಂದು ರಕ್ಷಣಾತ್ಮಕ ವಿಧಾನಕ್ಕೆ ಉದಾಹರಣೆಯಾದರೆ, ಸಹೋದರರ ದ್ವೇಷದಿಂದ, ತಮ್ಮನನ್ನು ಹೊಡೆಯಲು ಹೆದರಿ ಆತನ ಗೊಂಬೆಯನ್ನು ಅಣ್ಣ ಮುರಿಯುವುದು ಇನ್ನೊಂದು ರೀತಿಯ ರಕ್ಷಣಾತ್ಮಕ ವಿಧಾನ.

ಪ್ರಾಯಶಃ ಇವೆಲ್ಲಕ್ಕಿಂತ ಮನೋವಿಜ್ಞಾನಕ್ಕೆ ಫ್ರಾಯ್ಡ್ ನೀಡಿದ ಬಹುದೊಡ್ಡ ಕೊಡುಗೆ ಆತನ ಮಗಳಾದ ಆನ್ಯಾಫ್ರಾಯ್ಡ್. ತನ್ನ ಬೌದ್ದಿಕ ಮಾನಸಿಕ ಸಾಮರ್ಥ್ಯಗಳನ್ನು ಅನುವಂಶಿಕವಾಗಿ, ಬೆಳಸುವಾಗಿನ ವಾತಾವರಣಯುಕ್ತವಾಗಿ ಮಗಳಿಗೆ ಧಾರೆಯೆರೆದಿದ್ದ ಎನ್ನಬಹುದು.

ಪ್ರಸ್ತುತ ಮನಶಾಸ್ತ್ರದಲ್ಲಿ ಸಾವಿರಾರು ಸಾಮಾನ್ಯ ಜನರಿಂದ, ವಿಜ್ಞಾನಿಗಳಿಂದ ಟೀಕೆಗೊಳಗಾದವನು. ಮನೋವಿಶ್ಲೇಷಣೆಯಲ್ಲಿರುವಂತಹುದು ಯಾವುದು ಸತ್ಯವಲ್ಲ, ಸತ್ಯವೇನಾದರೂ ಇದ್ದರೆ ಅದೇನೂ ಹೊಸತಲ್ಲ ಎಂದು ಐಸೆನೆಕ್ ಹೇಳಿದರೆ ಮನೋವಿಶ್ಲೇಷಣೆ ಉಪಯುಕ್ತ ಎನ್ನುವುದಕ್ಕಿಂತ ರೋಚಕವಾದ ಕಾಲ್ಪನಿಕ ಕಟ್ಟುಕತೆ ಎಂದವರಿದ್ದಾರೆ. ಆದರೆ ಮನೋವಿಶ್ಲೇಷಣೆ ಫ್ರಾಯ್ಡ್ ಸಂಶೋಧನೆಗಳನ್ನೂ ಮೀರಿ ಇಂದು ಬೆಳೆದು ನಿಂತಿದೆ. ಫ್ರಾಯ್ಡ್ ಬದುಕಿದ್ದರೆ ಇಂದಿನ ಮನೋವಿಶ್ಲೇಷಣಾ ಸಿದ್ಧಾಂತ ಗುರುತಿಸಲಾರದಷ್ಟು ಅದು ಬದಲಾಗಿದೆ. ಆದರೆ ಮಾನವನ ಮನಸ್ಸಿನ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಫ್ರಾಯ್ಡ್ ನಿರೂಪಿಸಿದ ಮೂಲಭೂತ ಸಿದ್ಧಾಂತಗಳು, ಅದರ ಸಂಶೋಧನೆಯನ್ನು ಆತ ಶ್ರದ್ಧೆಯಿಂದ ಮಾಡಿದ ರೀತಿ ಇಂದಿಗೂ ಪ್ರಸ್ತುತವೇ. ಮನೋರೋಗ ತಜ್ಞನು ಅಬ್‌ರಿಯಾಕ್ಷನ್, ಫ್ರೀ ಅಸೋಸಿಯೇಶನ್‌ಗಳನ್ನು ರೋಗಿಯ ಚಿಕಿತ್ಸೆಗಾಗಿ ಉಪಯೋಗಿಸದಿದ್ದರೂ, ಔಷಧಿಗಳನ್ನು ಸರಿಯಾಗಿ ತೆಗೆದುಕೊಳ್ಳದೇ ಚಿಕಿತ್ಸೆಯಲ್ಲಿ ಆಸಕ್ತಿ ತೋರಿಸದೆ, ವೈದ್ಯನಲ್ಲಿ ಕೋಪ/ಅತಿಯಾದ ಅವಲಂಬನೆ ತೋರಿಸುವ ರೋಗಿಯನ್ನು ಅರ್ಥಮಾಡಿಕೊಳ್ಳಲು ಮನೋವೈದ್ಯರಷ್ಟೇ ಅಲ್ಲ, ಎಲ್ಲಾ ವೈದ್ಯರೂ ಫ್ರಾಯ್ಡ್‌ನ ತತ್ವಗಳನ್ನೇ ಉಪಯೋಗಿಸಬೇಕಾಗುತ್ತದೆ.

ನಾಜೀಗಳ ಭಯದಿಂದ, ಆಸ್ಟ್ರಿಯಾದಿಂದ ಪಲಾಯನ ಮಾಡಿದ ಫ್ರಾಯ್ಡ್ ಇಂಗ್ಲೆಂಡಿನಲ್ಲಿ ೧೯೩೮ ರಲ್ಲಿ ಮರಣ ಹೊಂದಿದ. ಆತನ ಸಂಶೋಧನೆಗಳನ್ನು ಮಗಳು ಆನ್ನಾ ಮುಂದುವರಿಸಿದಳು. ಇಂದಿಗೂ ಫ್ರಾಯ್ಡ್‌ನ ಮನೋವಿಜ್ಞಾನದ ಚಿಂತನೆಗಳು, ಸಂಶೋಧನೆಗಳು, ಬರಹಗಳು ಮನೋವಿಜ್ಞಾನಿಗಳಿಗೆ ಆಸಕ್ತಿದಾಯಕವೂ, ಮನೋಚಿಕಿತ್ಸೆಗೆ ತಳಹದಿಯೂ ಆಗಿದೆ.

* * *

ವೈದ್ಯಸಾಹಿತಿಯಾಗಿನನ್ನಅನುಭವ
ಸಾಹಿತ್ಯದ ಗುರಿ ಸಮಾಜೋಪಕಾರವೂ ಹೌದು
ಡಾ| ಕೆ.ಎಸ್. ಪವಿತ್ರ ಸಾಹಿತ್ಯ ಮತ್ತು ವೈದ್ಯಕೀಯ ಕ್ಷೇತ್ರಗಳಲ್ಲಿ ನನಗೆ ಬಹಳಷ್ಟು ಒಲವು ಬಾಲ್ಯದಿಂದಲೇ ಇತ್ತು ಎನ್ನಬಹುದು. ಆದರೆ ಕಥೆ-ಕಾದಂಬರಿ-ಕವನಗಳಷ್ಟೆ ‘ನಿಜವಾದ’ ಸಾಹಿತ್ಯ ಎಂಬ ನಂಬಿಕೆ ನನ್ನದಾಗಿತ್ತು. ಆ ದಿಕ್ಕಿನಲ್ಲಿ ನನ್ನ ದೃಷ್ಟಿಕೋನವನ್ನು ಬದಲಿಸಿದವರು ನನ್ನ ಹಿತಚಿಂತಕರಾದ ಶಬ್ದಬ್ರಹ್ಮ ಪ್ರೊ.ಜಿ. ವೆಂಕಟಸುಬ್ಬಯ್ಯನವರು ಮತ್ತು ನನ್ನ ಗುರುಗಳೂ, ಹಿರಿಯ ವೈದ್ಯ ಸಾಹಿತಿಗಳೂ ಆದ ಪ್ರೊ.ಸಿ.ಆರ್. ಚಂದ್ರಶೇಖರ್‌ರವರು. ಇರುವ ಸತ್ಯಸಂಗತಿ (facts) ಗಳಾದ ವೈಜ್ಞಾನಿಕ ವಿಷಯಗಳನ್ನು ಸರಳವಾದ ರೀತಿಯಲ್ಲಿ, ಆಸಕ್ತಿಕರವಾಗಿ ಬರೆಯುವುದು ಸುಲಭ ಸಂಗತಿಯಲ್ಲ. “Recreate” ಮಾಡುವುದೂ ಸೃಜನಶೀಲತೆಯೇ ಮತ್ತು ಸಾಹಿತ್ಯ ಎನ್ನುವುದು ಕೇವಲ ಚರ್ಚೆಗೆ, ರಸಸೃಷ್ಟಿಗಷ್ಟೇ ಅಲ್ಲ. ಸಾಹಿತ್ಯದ ಗುರಿ ಸಮಾಜೋಪಕಾರವೂ ಹೌದು ಎಂಬುದನ್ನು ಈ ಇಬ್ಬರು ಹಿರಿಯರು ನನಗೆ ಮನಗಾಣಿಸಿದರು.

ನಾನು ವೈದ್ಯಸಾಹಿತ್ಯವನ್ನು ಬರೆಯಲಾರಂಭಿಸಿದ ಹೊಸತರಲ್ಲಿ ಅಂದರೆ ಸುಮಾರು ೬ ವರ್ಷಗಳ ಹಿಂದೆ ಪರಿಸ್ಥಿತಿ ತುಂಬಾ ಪ್ರೋತ್ಸಾಹದಾಯಕವೇ ಆಗಿತ್ತು. ಅಂದರೆ ಹೊಸ ಸಾಹಿತಿಗಳಿಗೆ, ಪತ್ರಿಕೆಗಳಿಗೆ ಲೇಖನಗಳನ್ನು ಕಳಿಸಿದಾಗ ಆಗುವ ಕಹಿ ಅನುಭವಗಳು ಅಷ್ಟಾಗಿ ನನಗಾಗಲಿಲ್ಲ. ಮನೋವೈದ್ಯಕೀಯದ ಬಗ್ಗೆ ಸಮಾಜಕ್ಕೆ, ಮಾಧ್ಯಮಗಳಿಗೆ ಇರುವ ಆಕರ್ಷಣೆ- ಕುತೂಹಲಗಳೂ ಇದಕ್ಕೆ ಕಾರಣವಿರಬಹುದು. ಇದಾದ ನಂತರದಲ್ಲಿ ಎಷ್ಟೋ ಬಾರಿ ವೈಜ್ಞಾನಿಕ ಸತ್ಯಗಳಾಗಿ ನನಗೆ ‘ಸರಳ’ ಎನಿಸಿದ ಲೇಖನಗಳನ್ನು ‘ಆಸಕ್ತಿಪೂರ್ಣವಾಗಿ – ಆಕರ್ಷಕ ಮಾಡಿ’ ಬರೆದುಕೊಡುವಂತೆ ಪತ್ರಿಕೆಗಳು ಕೋರಿವೆ. ಅವನ್ನು ಹಲವು ಬಾರಿ ತಿರಸ್ಕರಿಸಿ, ಹಲವು ಬಾರಿ ಜಾಣತನದಿಂದ ಅವನ್ನು ಹೇಗೋ ನನ್ನ ವೈದ್ಯಕೀಯ ನಿಷ್ಠೆಯೊಂದಿಗೇ, ಮಾಧ್ಯಮದ ಅವಶ್ಯಕತೆಯನ್ನು ಸೇರಿಸಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಕೆಲವೊಮ್ಮೆ ಎಲ್ಲ ವೈದ್ಯಕೀಯ ವಿಷಯಗಳ ಬಗ್ಗೆ ಎಲ್ಲರೂ (ವೈದ್ಯರಲ್ಲದಿರುವವರು, ವೈದ್ಯರಾಗಿರುವವರು) ಬರೆಯುವುದನ್ನು ನೋಡಿ, ಗಾಬರಿ-ಬೇಸರಗಳಿಂದ ಬರೆಯುವುದೇ ಬೇಡ ಎನಿಸಿದ್ದಿದೆ ಅಥವಾ ನಾನೇನು ಬರೆದರೂ ಅದೀಗಾಗಲೇ ಮತ್ತೊಬ್ಬರು ಬರೆದಿದ್ದಾರೆ, ಇನ್ನೊಬ್ಬರು ಬರೆಯುತ್ತಾರೆ ಅಥವಾ ತಪ್ಪು ಮಾಹಿತಿಗಳ ಮಧ್ಯೆ ಸರಿ ಮಾಹಿತಿಗೂ ಬೆಲೆಯಿಲ್ಲ ಎನಿಸಿದೆ. ಪ್ರೊ. ಸಿ.ಆರ್.ಸಿ. ರಂತಹ ಹಿರಿಯ ವೈದ್ಯಕೀಯ ಸಾಹಿತಿಗಳು, ಪತ್ರಿಕೆಗಳಿಗೂ, ಸಾಹಿತಿಗಳಿಗೂ ವೈದ್ಯಕೀಯ ಸಾಹಿತ್ಯ ಸಂಹಿತೆಯೊಂದನ್ನು ರೂಪಿಸಬೇಕು ಎಂದು ಹಲವು ಬಾರಿ ಯೋಚಿಸಿದ್ದೇನೆ. ಇವೆಲ್ಲದರ ಮಧ್ಯೆಯೂ ವೈದ್ಯಕೀಯ ಲೇಖನಗಳನ್ನು ಬರೆಯುವುದನ್ನು ಮುಂದುವರಿಸಲು ಮನಸ್ಸು ತುಡಿಯುತ್ತದೆ. ಮನೋವೈದ್ಯಕೀಯ ಕ್ಷೇತ್ರದ ಬಗೆಗಿರುವ ಧೋರಣೆ-ತಪ್ಪು ನಂಬಿಕೆಗಳನ್ನು ಹೋಗಲಾಡಿಸಲು ವಿದ್ಯಾಭ್ಯಾಸದಿಂದ ಮಾತ್ರ ಸಾಧ್ಯ ಎಂಬ ಸತ್ಯ ನನ್ನ ಮುಂದಿದೆ. ಆ ವಿದ್ಯಾಭ್ಯಾಸ ಲೇಖನಿಯಿಂದಲೇ ಸಾಧ್ಯ ಎಂಬ ನಾನು ಬಲವಾಗಿ ನಂಬಿದ್ದೇನೆ. ಹಿರಿಯ ಮನೋವೈದ್ಯರೂ, ವೈದ್ಯಸಾಹಿತಿಗಳೂ ಆದ ನನ್ನ ತಂದೆ ಡಾ| ಕೆ.ಆರ್. ಶ್ರೀಧರ್, ನನ್ನ ಗುರು ಪ್ರೊ. ಸಿ.ಆರ್.ಸಿ. ಸಾಹಿತ್ಯದ ಬಗ್ಗೆ ನನ್ನನ್ನು ಸದಾ ಪ್ರೋತ್ಸಾಹಿಸುವ ನನ್ನಮ್ಮ ವಿಜಯಾ ಶ್ರೀಧರ್ ಮತ್ತು ಕಾಲಕಾಲಕ್ಕೆ ನನ್ನ ಲೇಖನಗಳನ್ನು ಪ್ರಕಟಿಸಿ, ನನ್ನ ಸಾಹಿತ್ಯ ಶಕ್ತಿಯ ಬಗ್ಗೆ ಆತ್ಮ ವಿಶ್ವಾಸ ಹುಟ್ಟಿಸುವ ಪತ್ರಿಕೆಗಳು, ಲೇಖನಗಳನ್ನು ಮೆಚ್ಚಿ ಓದುವ, ಉಪಯೋಗ ಪಡೆಯುವ ಓದುಗರು ಮತ್ತು ಲೇಖನ ಬರೆದ ನಂತರದಲ್ಲಿ ಮನಸ್ಸಿಗಾಗುವ ಒಂದು ರೀತಿಯ ಭಾವ (ಸಂತೋಷ-ತೃಪ್ತಿ-ಅತೃಪ್ತಿ-ನಿರಾಳತೆ ಇತ್ಯಾದಿ ಇತ್ಯಾದಿ) ಇವೆಲ್ಲವೂ ವೈದ್ಯಕೀಯ ಸಾಹಿತ್ಯದಲ್ಲಿ ನಾನು ಮುಂದುವರೆಯಲು ಪ್ರೇರೇಪಿಸಿವೆ.

* * *