ಭಾರತ ಲಸಿಕೆಯ ನೀತಿಯನ್ನು ಪ್ರಕಟಿಸದೇ ಇದ್ದುದರಿಂದ ಅನೇಕ ಒತ್ತಡಗಳನ್ನ ಎದುರಿಸಲು ಸಿದ್ಧವಾಗಬೇಕಾಗುತ್ತದೆ. ಲಸಿಕೆಯ ಅಗತ್ಯತೆಯು ಹೆಚ್ಚಿದಂತೆಲ್ಲ ಲಸಿಕೆಯ ಕ್ಷೇತ್ರದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಿನ ಹಿಡಿತ ಸಾಧಿಸಲು ಮುಂದಾಗುತ್ತವೆ. ಈ ಒತ್ತಡದಿಂದಾಗಿ ಲಸಿಕಾ ನೀತಿಯೇ ವಿಕೃತವಾಗುತ್ತ ಬಂದಿದೆ.

ಇತ್ತೀಚಿನವರೆಗೆ ಭಾರತದ ಮೂರು ಸಾರ್ವಜನಿಕ ಉದ್ಯಮದ ಕಂಪನಿಗಳು ಭಾರತದ ಲಸಿಕಾ ಕಾರ್ಯಕ್ರಮ (ಯು.ಐ.ಸಿ.)ಕ್ಕೆ ಬೇಕಾಗುವ ಲಸಿಕೆಗಳನ್ನು ತಯಾರಿಸುತ್ತಾ ಬಂದಿವೆ. ಆದರೆ ಇತ್ತೀಚೆಗೆ ಭಾರತ ಸರ್ಕಾರ ಔಷಧಿ ನಿಯಂತ್ರಣದ ಮೂಲಕ ಈ ಕಂಪನಿಗಳನ್ನು ಮುಚ್ಚಲು, ಲಸಿಕೆಗಳನ್ನು ಪೂರೈಸದಿರಲು ಆದೇಶ ನೀಡಿದೆ.

ಇದೇ ವೇಳೆಗೆ ಅಂತರರಾಷ್ಟ್ರೀಯ ಸಂಸ್ಥೆಯಾದ ಗ್ಲೋಬಲ್ ಅಲೈನ್ಸ್ ಫಾರ್ ವ್ಯಾಕ್ಸಿನ್ಸ್ ಹಾಗೂ ಇಮ್ಯೂನೈಜೇಶನ್ಸ್ (ಗಾವಿ) ದೆಹಲಿಯಲ್ಲಿ ಒಂದು ಸಭೆಯನ್ನು ಏರ್ಪಡಿಸಿತ್ತು. ಈ ಸಂಸ್ಥೆ ೨೦೦೦ರ ಇಸವಿಯಲ್ಲ ಪ್ರಾರಂಭವಾಗಿದ್ದು ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಓಕ್ಕೂಟವಾಗಿದ್ದು, ಜಗತ್ತಿನಾದ್ಯಂತ ಮಕ್ಕಳ ಜೀವ ಉಳಿಸಲು ಶ್ರಮಿಸುತ್ತಿರುವ ಸಂಸ್ಥೆ ಎಂದು ಪ್ರಚಾರ ಗಿಟ್ಟಿಸಿದೆ. ಯಾವುದೇ ದೇಶ ಹೊಸ ಲಸಿಕೆಗಳನ್ನು (ಹೆಟೈಟಿಸ್ ಎ.ಬಿ., ಇನ್‌ಫ್ಲುಜೆಎನ್‌ಝಾ, ಚಿಕನ್‌ಪಾಕ್ಸ್) ಉಪಯೋಗಿಸಲು ಕಾರ್ಯಕ್ರಮ ಹಾಕಿಕೊಂಡಲ್ಲಿ ಈ ಸಂಸ್ಥೆಯಿಂದ ೩೫೦ ದಶಲಕ್ಷ ಡಾಲರ್‌ವರೆಗೆ ಸಹಾಯಧನ ಪಡೆಯಬಹುದಾಗಿದೆ.

ಬಾಹ್ಯ ಒತ್ತಡಗಳು

ಭಾರತ ಈಗಾಗಲೇ ಈ ಸಂಸ್ಥೆಯಿಂದ ೪೦ ದಶಲಕ್ಷ ಡಾಲರ್ ಸಹಾಯ ಲಸಿಕಾ ಕಾರ್ಯಕ್ರಮಕ್ಕೆ ಬಳಸಿದೆ. ಈಗ ಉಳಿದ ಹಣವನ್ನು ಹೇಗೆ ಪಡೆಯಬಹುದು ಎಂದು ತೀರ್ಮಾನಿಸಲು ಈ ಸಭೆಯನ್ನು ಕರೆಯಲಾಗಿತ್ತು. ಲಸಿಕಾ ಕಾರ್ಯಕ್ರಮ ಮಕ್ಕಳ, ಆರು ಮಾರಕ ರೋಗಗಳಿಗೆ ಲಸಿಕೆಯನ್ನು ನೀಡು, ಸಾವುಗಳನ್ನು ತಡೆಯುವ ಕಾರ್ಯಕ್ರಮವಾಗಿದೆ. ಇದನ್ನು ಯು.ಐ.ಪಿ. ಎಂದು ಕರೆಯುವರು. ಈ ಕಾರ್ಯಕ್ರಮ ಭಾರತದಲ್ಲಿ ಜಾರಿಯಲ್ಲಿದ್ದು, ಅದು ಕೇವಲ ಪ್ರತಿಶತ ೪೦ ಮಕ್ಕಳನ್ನು ಮಾತ್ರ ತಲುಪುತ್ತಿದೆ. ಈ ಸಭೆಯಲ್ಲಿ ಚರ್ಚೆಯಾದ ವಿಷಯಗಳು ಕೇವಲ ೪೦ ಪ್ರತಿಶತ ಮಕ್ಕಳಿಗೆ ಸಂಬಂಧಿಸಿದ್ದು. ಅದನ್ನು ಇತರೆ ಮಕ್ಕಳಿಗೆ ವಿಸ್ತರಿಸುವ ಪ್ರಯತ್ನ ಮಾಡಲಾಗಲಿಲ್ಲ. ಈಗಿನ ಯುಐಪಿ ಕಾರ್ಯಕ್ರಮದಲ್ಲಿ ಹೆಪಟೈಟಸ್ ‘ಬಿ’ ಚುಚ್ಚುಮದ್ದು ಕಡ್ಡಾಯವೇನಲ್ಲ. ಆದರೆ ಆ ಲಸಿಕೆಯನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಅಳವಡಿಸುವುದರ ಬಗ್ಗೆ ಚರ್ಚೆಯಾಯಿತು. ಇನ್ನೊಂದು ವರ್ಷದಲ್ಲಿ ಅದು ಜಾರಿಗೆ ಬರಲಿದೆ.

ಇದಲ್ಲದೆ ಡಿಪಿಟಿ ಹಾಗೂ ಕಡ್ಡಾಯವಾಗಿ ಹೆಫಟೈಟಿಸ್ ‘ಬಿ’ ಸಮ್ಮಿಶ್ರ ಚಚ್ಚುಮದ್ದನ್ನು ದೊರಕುವಂತೆ ಮಾಡಿ ಅದನ್ನು ಸಹಿತ ಲಸಿಕಾ ಕಾರ್ಯಕ್ರಮದಲ್ಲಿ ಉಪಯೋಗಿಸಲು ಪ್ರಯತ್ನಿಸಲಾಗುವುದು. ಒಂದು ವರ್ಷದೊಳಗೆ ನಿಮೊಕಾಕಲ್ ಲಸಿಕೆ ಹಾಗೂ ಪೆಂಟಾವ್ಯಾಲೆಂಟ್ ಲಸಿಕೆ (ಡಿಪಿಟಿ, ಹಿಪಟೈಟಿಸ್ -ಬಿ, ಹಿಮೊಫೀಲಸ್ ಇನ್‌ಫ್ಲುಯೆಂಝಾ ಹೆಚ್‌ಐವಿ) ಗಳನ್ನು ಕೂಡ ಭಾರತದಲ್ಲಿ ದೊರಕುವಂತೆ ಮಾಡಿ ಸರ್ಕಾರಿ ಕಾರ್ಯಕ್ರಮದಲ್ಲಿ ಬಳಸಲಾಗುವುದು.

ಈ ಸಭೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ನಿಗಮ ಆರೋಗ್ಯ ಮಂತ್ರಾಲಯದ ಪ್ರತಿನಿಧಿಗಳು, ಭಾರತದ ಔಷಧಿ ನಿಯಂತ್ರಣ ಅಧಿಕಾರಿ, ಯುಐಪಿ ಅಧಿಕಾರಿ ಮುಂತಾದವರು ಹಾಜರಿದ್ದರು.

ಇದರಿಂದ ತಿಳಿದುಬರುವುದೇನೆಂದರೆ ನಮ್ಮ ದೇಶದ ಲಸಿಕಾ ನೀತಿ ಹಾಗೂ ಕಾರ್ಯಕ್ರಮವನ್ನು ಗಾವಿಯಂತಹ ಅಂತರಾಷ್ಟ್ರೀಯ ಸಂಸ್ಥೆ ನಿರ್ಧರಿಸುತ್ತದೆ ಹಾಗೂ ರಾಷ್ಟ್ರೀಯ ಸರ್ಕಾರಿ ಅಧಿಕಾರಿಗಳು ಈ ಆದೇಶವನ್ನು ಪಾಲಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಒತ್ತಡದಿಂದ ಹೊಸ ಲಸಿಕೆಗಳನ್ನು ಉಪಯೋಗಿಸಲಾಗುತ್ತದೆ. ಅಂತರಾಷ್ಟ್ರೀಯ ಸಂಸ್ಥೆಯ ಹಣವನ್ನು ನಮ್ಮ ಅಗತ್ಯತೆಗೆ ಉಪಯೋಗಿಸುವ ಬದಲು ಉದಾ : ವ್ಯಾಕ್ಸಿನ್ ಕಂಪೆನಿಗಳನ್ನು ಮುಚ್ಚುವ ಬದಲು, ಅವರ ನಿರ್ದೇಶನದ ಮೇರೆಗೆ ಉಪಯೋಗಿಸಲಾಗುತ್ತದೆ. ಸ್ವಾವಲಂಬನೆ ಬದಲು ಪರಾವಲಂಬನೆಯತ್ತ ಸಾಗುವಂತಾಗುತ್ತದೆ. ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಪಲ್ಸ್‌ ಪ್ಲಸ್ ಎಂಬ ಕಾರ್ಯಕ್ರಮವನ್ನು ಭಾರತದಲ್ಲಿ ೧೯೯೫ ರಲ್ಲಿ ಜಾರಿ ಮಾಡಿತು ಹಾಗೂ ಭಾರತಕ್ಕೆ೨೦ ದಶಲಕ್ಷ ಡಾಲರ್ ಸಹಾಯಧನ ಬಂದಿತು. ಈ ಕಾರ್ಯಕ್ರಮ ಅವಧಿ ೨೦೦೦ ಇಸವಿಯವರೆಗೆ ಇದ್ದಿತು. ಆದರೆ ೨೦೦೦ ದಲ್ಲಿ ಆ ಗುರಿಯನ್ನು ಸಾಧಿಸಲಾಗಲಿಲ್ಲ. ಆಗ ಭಾರತ ವಿಶ್ವಬ್ಯಾಂಕಿನಿಂದ ೧೮೦ ದಶಲಕ್ಷ ಡಾಲರ್ ಸಾಲ ಪಡೆದು ಕಾರ್ಯಕ್ರಮವನ್ನು ಮುಂದುವರೆಸಲಾಯಿತು.

ಈಗಲೂ ಆ ಕಾರ್ಯಕ್ರಮ ಸಂಪೂರ್ಣಗೊಳ್ಳದಿರುವುದನ್ನು ನಾವು ಗಮನಿಸಬಹುದಾಗಿದೆ. ಗಾವಿಯಂತಹ ಸಂಸ್ಥೆಗಳು ಪ್ರಾರಂಭದಲ್ಲಿ ಸಹಾಯಧನ ನೀಡಿ, ಕಾರ್ಯಕ್ರಮದ ಪ್ರಾರಂಭದಲ್ಲೇ ಖರ್ಚಿಲ್ಲದ ಅನುಭವವನ್ನು ಉಂಟು ಮಾಡುತ್ತವೆ. ಆದರೆ ಇದರಿಂದಾಗಿ ನಂತರ ಹೆಚ್ಚು ಸಾಲವನ್ನು ಪಡೆಯಲು ಸಿದ್ಧರಾಗಿ ಅಪಾಯಕ್ಕೆ ಒಳಗಾಗಬೇಕಾಗುತ್ತದೆ. ಇದನ್ನು ಅಂತರರಾಷ್ಟ್ರೀಯ ಸಂಸ್ಥೆಗಳು ಹಾಗೂ ಮುಂದುವರೆದ ದೇಶಗಳ ವ್ಯವಸ್ಥಿತ ಸಂಚು ಎನ್ನಬಹುದಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ನಮ್ಮ ದೇಶದ ಲಸಿಕಾ ನೀತಿಯನ್ನು ದಾನಿ ಸಂಸ್ಥೆಗಳು ತೀರ್ಮಾನಿಸುತ್ತಿರುವುದು ಹಾಗೂ ನಂತರ ಸಾಲ ತೆಗೆದುಕೊಳ್ಳುವ ಅನಿವಾರ್ಯತೆ ಉಂಟುಮಾಡುವುದು. ಈ ದಾನಿಗಳು ನಾವು ಉಪಯೋಗಿಸದ ಲಸಿಕೆಗಳನ್ನು ಉಪಯೋಗಿಸಲು ಒತ್ತಡ ತರುತ್ತಿರುವುದು. ನಾವು ಉಪಯೋಗಿಸುವ ಲಸಿಕೆಯಿಂದ ಆಗಬಹುದಾದ ಸಾವುಗಳ ಬಗ್ಗೆ ಉತ್ಪ್ರೇಕ್ಷೆ ಮಾಡಿ ಆ ಲಸಿಕೆ ಅಗತ್ಯವೆಂದು ತೋರಿಸುವುದು. ಆ ಲಸಿಕೆಗಳನ್ನು ನಮ್ಮ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಳ್ಳಲು ಒತ್ತಡ ತರುವುದು. ಇದೇ ವೇಳೆ ಅನೇಕ ತಜ್ಞರು, ಸಂಸ್ಥೆಗಳು ಆ ಲಸಿಕೆ ಅಗತ್ಯವೆಂಬ ವೈಜ್ಞಾನಿಕ ಸತ್ಯವನ್ನು ಹೇಳುವುದರಿಂದ ಕೆಲವರಿಗೆ ಈ ಹೊಸ ಲಸಿಕೆಗಳು ಕಡ್ಡಾಯವೆನಿಸಬಹುದು. ಆದರೆ ಲಸಿಕಾ ನೀತಿ ವೈಜ್ಞಾನಿಕ ಸತ್ಯದೊಂದಿಗೆ ಆರ್ಥಿಕ ಹಿನ್ನೆಲೆ, ಲಸಿಕೆಯ ದೊರಕುವಿಕೆ, ತಯಾರಿಕೆಯ ಆಧಾರದ ಮೇಲೆ ತೀರ್ಮಾನಗೊಳ್ಳುತ್ತದೆ. ಹೊರದೇಶದಲ್ಲಿ ತಯಾರಿಸಿದ ಲಸಿಕೆ ಭಾರತದಲ್ಲಿ ಉಪಯೋಗಿಸಿದಲ್ಲಿ ಪರಿಣಾಮಕಾರಿಯಾಗಬಹುದು ಎಂಬ ವೈಜ್ಞಾನಿಕ ಸತ್ಯವನ್ನು ಯಾವ ತಜ್ಞ ಅಥವಾ ಸಂಸ್ಥೆ ವ್ಯಾಪಕ ಅಧ್ಯಯನ ಕೈಗೊಂಡು ಹೇಳುತ್ತಿದ್ದಾರೆ?

ಈಗಿನ ದಿನಗಳಲ್ಲಿ ಖಾಸಗಿ, ಸಾರ್ವಜನಿಕ ಕಂಪನಿಗಳ ಒಡಂಬಡಿಕೆಯಲ್ಲಿ ಈ ಲಸಿಕೆಗಳನ್ನು ಪರಿಚಯಿಸುವ ಹುನ್ನಾರ ನಡೆಯುತ್ತಿದೆ. ಬಡ ದೇಶಗಳಿಗೆ ಖಾಸಗೀ ಸಂಸ್ಥೆಯಿಂದ ಸಹಾಯ ಪಡೆಯದೇ ವಿಧಿಯೇ ಇಲ್ಲವೆಂಬ ತೀರ್ಮಾನಕ್ಕೆ ಬರುವಂತೆ ಎಲ್ಲರಿಗೂ ಮನದಟ್ಟು ಮಾಡಿಕೊಡಲಾಗುತ್ತಿದೆ. ಆದರೆ ಇಲ್ಲಿ ಔಷಧಿ ಕಂಪನಿಗಳ ಲಾಭಕೋರ ನೀತಿ, ವಿಜ್ಞಾನಕ್ಕಿಂತ ಹೆಚ್ಚು ಮಹತ್ವ ಪಡೆಯುತ್ತದೆ ಎಂಬುದು ಸಾರ್ವಜನಿಕರ ಅರಿವಿಗೆ ಬರುವುದೇ ಇಲ್ಲ.

ಗಾವಿಯಂತಹ ಸಂಸ್ಥೆಯ ಹಿಂದೆ ಈ ಖಾಸಗಿ ಔಷಧಿ, ಕಂಪನಿಗಳು ತಮ್ಮ ನೀತಿಯನ್ನು ತುರುಕುತ್ತಿವೆ ಎಂಬುದನ್ನು ಇಲ್ಲಿ ಗಮನಿಸಬಹುದು. ಗಾವಿ ಬದಲು ಸರ್ಕಾರಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನಿಸೆಫ್‌ನೊಂದಿಗೆ ಸೇರಿ ರಾಷ್ಟ್ರೀಯ ಲಸಿಕಾ ನೀತಿಯ ಹಲವಾರು ವಿಷಯಗಳನ್ನು ತೀರ್ಮಾನಿಸಿದ್ದರೆ ಅದು ಸೂಕ್ತವಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಯುನಿಸೆಫ್ ಅಭಿವೃದ್ಧಿ ಹೊಂದಿದ ದೇಶಗಳ ಕೈಗೊಂಬೆಯಾಗಿರುವುದರಿಂದ ಇಂತಹ ಸನ್ನಿವೇಶಗಳನ್ನು ನಾವು ನೋಡಬೇಕಾಗಿದೆ.

ಸಮ್ಮಿಶ್ರ ಲಸಿಕೆಗಳಿಗೆ ಈಗ ಪ್ರಾಮುಖ್ಯತೆ ಬರುತ್ತಿದೆ. ಸಂಯುಕ್ತ ಔಷಧಿಗಳಿಗೆ ಯಾವ ವೈಜ್ಞಾನಿಕ ಆಧಾರವಿಲ್ಲದಿದ್ದರೂ, ಭಾರತದಲ್ಲಿ ಸಮ್ಮಿಶ್ರ ಔಷಧಿಗಳ ಹಾವಳಿ ಈಗಲೂ ಹೆಚ್ಚಾಗಿಯೇ ಇದೆ. ವೈದ್ಯರು ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈಗ ಸಂಯುಕ್ತ ಲಸಿಕೆಗಳು ಮಾರುಕಟ್ಟೆಗೆ ಲಗ್ಗೆ ಹಾಕಲು ಮುಂದಾಗುತ್ತಿವೆ. ಉದಾ: ಡಿಪಿಟಿ ಮತ್ತು ಹಿಪೆಟೈಟಿಸ್. ಡಿಪಿಟಿ ಹಿಪೆಟೈಟಿಸ್ ಬಿ, ಇನ್‌ಫ್ಲುಯೆಂಝಾ ಹೆಚ್‌ಐವಿ ಈ ಸಮ್ಮಿಶ್ರ ಲಸಿಕೆಗಳಿಗೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ. ಈ ಲಸಿಕೆಗಳಿಂದ ನಮ್ಮಲ್ಲಿ ಪ್ರಾಥಮಿಕ ಲಸಿಕೆಗಳ ಕೊರತೆ ಉಂಟಾಗುತ್ತದೆ.

ಈ ಲಸಿಕೆಗಳ ಬಗ್ಗೆ ಆರೋಗ್ಯ ಮಂತ್ರಿಗಳು ಏನು ಹೇಳುತ್ತಾರೆ?

ಈ ಲಸಿಕೆಗಳು ೧೦೫ ರಾಷ್ಟ್ರಗಳಲ್ಲಿ ಉಪಯೋಗಿಸಲಾಗುತ್ತಿದೆ. ‘ನಮ್ಮ ದೇಶದಲ್ಲೇಕೆ ಬೇಡ’!

ಸಾಹಿತಿಯಾಗಿ ನನ್ನ ಅನುಭವ
ವೈದ್ಯ ಸಾಹಿತ್ಯ ರಚನೆಯ ಪ್ರಯತ್ನದಲ್ಲಿ
ಡಾ| ಪ್ರಕಾಶ್ ಸಿ.ರಾವ್ ನಾನು ಕಾಲೇಜಿನಲ್ಲಿದ್ದಾಗ ಕನ್ನಡ ಹಾಗೂ ಇಂಗ್ಲೀಷ್ ಕಾದಂಬರಿಗಳನ್ನು ಓದುತ್ತಿದ್ದೆ. ಲೈಬ್ರರಿಯಲ್ಲಿದ್ದ ಎಲ್ಲಾ ಕಾದಂಬರಿಗಳನ್ನು ಓದಿ ಮುಗಿಸಿದ್ದೆ! ಅವುಗಳಲ್ಲಿನ “ಸಾಲುಗಳು, ಪ್ಯಾರಾಗಳು” ನನ್ನನ್ನು ಆಕರ್ಷಿಸಿದ್ದವು. ಆದರೂ ನನ್ನೊಳಗೊಂದು philosophy ರೂಪುಗೊಂಡಿರಲಿಲ್ಲ. ಅಷ್ಟರಲ್ಲಿ ಕಾಲೇಜ್, ಹಾಗೂ ಇಂಟರ್ನ್‌‌ಶಿಪ್ ಮುಗಿದೇ ಹೋಯಿತು. ಹಾಗೂ ನಾನು ಮುಂದೇನು ಮಾಡಬೇಕು ಎಂಬ ಗೊಂದಲಕ್ಕೊಳಗಾಗದೇ ವೈದ್ಯ ವೃತ್ತಿಯನ್ನು ಪ್ರಾರಂಭಿಸಿಯೇ ಬಿಟ್ಟೆ.,

ನಾನು ವೈದ್ಯ ವೃತ್ತಿಯೆಂದರೆ ಏನು? ಹೇಗೆ? ಮುಂತಾದವುಗಳನ್ನು ತಿಳಿದುಕೊಳ್ಳಲು ಕೆಲವರನ್ನು ಭೇಟಿಮಾಡಿದೆ. ಆದರೆ ಅವರಿಂದ ವೈದ್ಯ ವೃತ್ತಿಯ ಬಗ್ಗೆ ನಿರಾಶೆಯೇ ವ್ಯಕ್ತವಾಯಿತು. ಆದರೆ ವೈದ್ಯ ವೃತ್ತಿ ಜೀವಂತ, ಸ್ವಾಭಾವಿಕ, ಆಕರ್ಷಕವಾದುದೆಂದು ಕಂಡುಬಂದುದು family Medicine ಹಾಗೂ General Practice ನ ಇಂಗ್ಲೀಷ್‌ ಸಾಹಿತ್ಯದಿಂದ. ಈ ಸಾಹಿತ್ಯ ಪ್ರಾಥಮಿಕ ಪಾಲನೆ (PRIMARY CARE)ಯನ್ನು ವೈಜ್ಞಾನಿಕವಾಗಿ ಅಭ್ಯಸಿಸುವ ವಿಧಾನವನ್ನು ತಿಳಿಸಿಕೊಟ್ಟಿತು.

ಕುಟುಂಬ ವೈದ್ಯಕೀಯದಲ್ಲಿ ರೋಗಿಯನ್ನು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆಯಾಮಗಳಲ್ಲಿ ನೋಡುವುದನ್ನು ತಿಳಿಸುತ್ತದೆ. ನಾನು ಪ್ರಾರಂಭದಿಂದಲೂ ಅದೇ ವಿಧಾನವನ್ನು ಅನುಸರಿಸುತ್ತ ಬಂದೆ. ರೋಗವನ್ನು ಪ್ರಾಥಮಿಕ ಹಂತದಲ್ಲಿ ಹೇಗೆ ಗುರುತಿಸಬೇಕು, ಚಿಕಿತ್ಸೆ ನೀಡಬೇಕೆಂಬುದರ ಬಗ್ಗೆ ಗಮನಹರಿಸಿದೆ. ಈ ವಿಧಾನ ಸಾಮಾನ್ಯ ವೈದ್ಯಕೀಯ ಪಠ್ಯ ಪುಸ್ತಕಗಳಲ್ಲಿ ದೊರಕುವುದಿಲ್ಲ ಹಾಗೂ ವೈದ್ಯಕೀಯ ಕಾಲೇಜುಗಳು ಈ ವೈದ್ಯ ವಿಭಾಗದಬಗ್ಗೆ ಗಮನಹರಿಸೇ ಇಲ್ಲ. ಅದೇ ಸಮಯದಲ್ಲ ದೆಹಲಿಯ ಒಂದು ವೈದ್ಯಕೀಯ ಕಾಲೇಜ್ ಏರ್ಪಡಿಸಿದ್ದ ‘ಆದರ್ಶ ಕುಟುಂಬ ವೈದ್ಯ’ ಎಂಬ ಲೇಖನ ಸ್ಪರ್ಧೆ (೧೯೭೮) ಯಲ್ಲಿ ಭಾಗವಹಿಸಿ ಭಾರತಮಟ್ಟದಲ್ಲಿ ಎರಡನೆಯ ಬಹುಮಾನವನ್ನು ದೊರಕಿಸಿಕೊಂಡೆ. ಕುಟುಂಬ ವೈದ್ಯಕೀಯಕ್ಕೆ ಸಂಬಂಧಿಸಿದ ಹಲವಾರು ಇಂಗ್ಲೀಷ್ ಲೇಖನಗಳನ್ನು ದಿನಪತ್ರಿಕೆಯಲ್ಲಿ ಬರೆದೆ. ಆ ಲೇಖನಗಳನ್ನು ಓದಿದ ಸ್ನೆಹಿತರು, ಕನ್ನಡದಲ್ಲಿ ಬರೆಯಲು ಸೂಚಿಸಿದರು. ಅದು ನನ್ನಲ್ಲಿ ಬದಲಾವಣೆ ತರಲು ಸಹಾಯವಾಯಿತು. ಆದರೆ ನನಗೆ ಕನ್ನಡದಲ್ಲಿ ಬರೆಯಲು ಸಾಧ್ಯವಾಗಿರಲಿಲ್ಲ. ಅದೇ ವೇಳೆಗೆ ರೋಗಿಯೊಂದಿಗೆ ವಿವರವಾಗಿ ಮಾತನಾಡಲು ರೋಗಿಯ ಸಮಸ್ಯೆಗಳಿಗೆ ಪರಿಹಾರ ನೀಡಲು ಕನ್ನಡದಲ್ಲಿ ಮಾತನಾಡಬೇಕಾಗಿತ್ತು. ಆ ಹಂತದಲ್ಲಿ ನನಗೆ ನನ್ನ ಕನ್ನಡ ಭಾಷೆಯನ್ನು ಸುಧಾರಿಸಿಕೊಳ್ಳಬೇಕೆಂದೆನಿಸಿತು. ಕೂಡಲೆ ಕನ್ನಡ- ಇಂಗ್ಲಿಷ್ ನಿಘಂಟು, ಹಾಗೂ ಕೆಲವು ಒಳ್ಳೆಯ ಕನ್ನಡ ಕಾದಂಬರಿಗಳನ್ನು ಕೊಂಡುಕೊಂಡೆ. ಪಾರಭಾಷಿಕ ಪದಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿದೆ. ನಾನು ಕನ್ನಡವನ್ನು ಸುಧಾರಿಸಿಕೊಂಡು ಒಳ್ಳೆಯ ಕುಟುಂಬ ವೈದ್ಯನಾಗುವ ಪ್ರಯತ್ನವನ್ನು ಮಾಡಿದೆ. ಒಳ್ಳೆಯ ಕುಟುಂಬ ವೈದ್ಯ ರೋಗಿಗೆ ಒಬ್ಬ ಒಳ್ಳೆಯ ಗೆಳೆಯ, ತತ್ವಜ್ಞಾನಿ ಹಾಗೂ ಮಾರ್ಗದರ್ಶಿ (A FRIEND PHILOSOPHER & a GUIDE) ಎಂದು ಹೇಳುತ್ತಾರೆ. ಆ ದಿನದಿಂದ ರೋಗಿಯೊಂದಿಗೆ ನನ್ನ ಪರಸ್ಪರ ಪ್ರತಿಕ್ರಿಯೆ (PERSONAL INTERACTION) ಸುಧಾರಿಸುತ್ತ ಬಂದಿತು. ಕುಟುಂಬ ವೈದ್ಯನಾಗಿ ರೋಗಿಗೆ ರೋಗದ ಬಗ್ಗೆ ಔಷಧಿಯ ಬಗ್ಗೆ, ರೋಗ ತಡೆಗಟ್ಟುವ ಬಗ್ಗೆ ಆತಂಕ ನಿವಾರಣೆ ಮುಂತಾದವುಗಳ ಬಗ್ಗೆ ಅವರ ಅಗತ್ಯತೆಗೆ ತಕ್ಕಂತೆ ಮಾತನಾಡಬೇಕಾಗುತ್ತದೆ. ರೋಗಿಯಲ್ಲಿದ್ದ ತಪ್ಪು ನಂಬಿಕೆಗಳನ್ನು ಸರಿಪಡಿಸುತ್ತ ವೈಜ್ಞಾನಿಕ ಮನೋಭಾವನೆಯನ್ನು ತುಂಬಬೇಕಾಗುತ್ತದೆ. ಈ ಎಲ್ಲವುಗಳಲ್ಲಿ ಗಮನ ಹರಿಸುವುದರೊಂದಿಗೆ ಈ ಎಲ್ಲ ವಿಷಯಗಳನ್ನೊಳಗೊಂಡ ಕನ್ನಡದ ವೈದ್ಯಕೀಯ ಲೇಖನಗಳನ್ನು ಬರೆಯಲು ಪ್ರಯತ್ನ ಮಾಡಿದೆ. ನನ್ನ ಕ್ಲೀನಿಕ್‌ನಲ್ಲಿ ಸಮಯಸಿಕ್ಕಾಗಲೆಲ್ಲ ಓದುವುದು ಬರೆಯುವದನ್ನು ಮುಂದುವರೆಸಿದೆ.

ನನ್ನ ಸ್ನೇಹಿತನಿಂದ ವಿಜ್ಞಾನ ಪರಿಷತ್ತಿನ ಸಂಪರ್ಕ ಬಂದಿತು. ಅಲ್ಲಿಯ ಕಾರ್ಯಕರ್ತರಿಗೆ ವೈದ್ಯ ವಿಜ್ಞಾನದ ಆಧಾರ, ಆರೋಗ್ಯದ ಬಗ್ಗೆ ವೈಜ್ಞಾನಿಕ ಮನೋಭಾವನೆ ರೂಢಿಸಿಕೊಳ್ಳುವುದು. ಸಾಮಾನ್ಯ ರೋಗಗಳ ಬಗ್ಗೆ ವೈಜ್ಞಾನಿಕ ಚಿಕಿತ್ಸೆ ಮುಂತಾದವುಗಳ ಬಗ್ಗೆ ತಿಳಿಸುವವಕಾಶ ಒದಗಿತು. ಆ ಹಂತದಲ್ಲಿ ಚರ್ಚಿಸುವ ವಿಷಯಗಳನ್ನು ಕನ್ನಡದಲ್ಲಿ ಬರೆದು, ಲೇಖನಗಳನ್ನು ತಯಾರಿಸಿ ಅವುಗಳನ್ನು ದಿನಪತ್ರಿಕೆಗೆ ಕಳುಹಿಸುತ್ತಿದ್ದೆ. ಆರೋಗ್ಯ ಸುಧಾರಿಸಿಕೊಳ್ಳಲು ಮೊದಲ ಹೆಜ್ಜೆ “ನೈರ್ಮಲ್ಯ ಮತ್ತು ಆರೋಗ್ಯ” ಎಂಬ ವಿಷಯವಾಗಿ ಒಂದು ಕಿರು ಹೊತ್ತಿಗೆಯನ್ನು ಬರೆದೆ ಹಾಗೂ ಅದನ್ನು ಪರಿಷತ್ತು ಪ್ರಕಟಿಸಿತು. ನಂತರ ಇನ್ನೊಂದು ಸಾಮಾನ್ಯ ವಿಷಯವಾದ “ರೋಗ ಉಂಟಾಗಲು ಕಾರಣವೇನು?” ಎಂಬ ವಿಷಯದ ಬಗ್ಗೆಯೂ ಒಂದು ಕಿರು ಹೊತ್ತಿಗೆಯನ್ನು ತಯಾರಿಸಿದೆ. ಅದನ್ನು ಬಿ.ಜಿ.ವಿ.ಎಸ್. ಎಂಬ ಸಂಘಟನೆ ಪ್ರಕಟಿಸಿತು. ನಾನು ದೇಶದ ಔಷಧಿ ಕ್ಷೇತ್ರದ ಬಗ್ಗೆ ಕೆಲವು ವಿಷಯಗಳನ್ನು ಪತ್ರಿಕೆಗಳಲ್ಲಿ ಓದಿದ್ದೆ. ಆ ವಿಷಯದ ಬಗ್ಗೆ ಅಧ್ಯಯನ ಮಾಡಿದೆ. ನಮ್ಮ ದೇಶದಲ್ಲಿ ಅಗತ್ಯ ಔಷಧಿಗಿಂತ ಹೆಚ್ಚು ಅನಗತ್ಯ, ಅಪಾಯಕರ, ಬೇರೆ ದೇಶದಲ್ಲಿ ನಿಷೇಧಿಸಲ್ಪಟ್ಟ ಔಷಧಿಗಳೇ ಹೆಚ್ಚು ದೊರಕುತ್ತವೆ ಎಂದು ತಿಳಿದು ಬಂದಿತು. ಆರೋಗ್ಯ ನೀತಿ, ಔಷಧಿ ನೀತಿ, ಔಷಧಿ ಕಂಪನಿಗಳ ರಾಜಕೀಯದ ಬಗ್ಗೆ ಸರಕಾರ ಹಾಗೂ ಔಷಧಿ ನಿಯಂತ್ರಣ ಏಕೆ ಮೌನವಾಗದೆ ಎಂಬುದರ ಬಗ್ಗೆ ದಿನಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದೆ. ಇನ್ನೊಬ್ಬ ಸ್ನೇಹಿತನೊಂದಿಗೆ ಸೇರಿಕೊಂಡು ‘ಔಷಧಿ ಮತ್ತು ಶ್ರೀ ಸಾಮಾನ್ಯ’ ಎಂಬ ಕಿರುಹೊತ್ತಿಗೆಯನ್ನು ಬರೆದೆ ಹಾಗೂ ವಿಜ್ಞಾನ ಪರಿಷತ್ತು ಅದನ್ನು ಪ್ರಕಟಿಸಿತು. ಅದೇ ವೇಳೆಗೆ ದಿನ ನಿತ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಒಂದು “ಆರೋಗ್ಯ ಕೈಪಿಡಿ”ಯನ್ನು ವಿಜ್ಞಾನ ಪರಿಷತ್ತು ಪ್ರಕಟಿಸಿತು. ಹಾಗು ನಾನು ಅದರ ಸಂಪಾದಕನಾಗಿದ್ದೆ. ಔಷಧಿ ಕ್ಷೇತ್ರದಲ್ಲಿ ಒಂದು ಮಹತ್ವದ ಬದಲಾವಣೆ ಕಂಡುಬಂದಿತು. ಅದುವೇ ಡಂಕೆಲ್ ಪ್ರಸ್ತಾವನೆಗೆ ಸರಕಾರ ಸಹಿ ಹಾಕಿದುದು. ಅದರಿಂದಾಗಿ ಔಷಧಿ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆ ಬಂತು. ಈ ಬದಲಾವಣೆ ಭಾರತದ ಔಷಧಿ ಕ್ಷೇತ್ರಕ್ಕೆ ಮಾರಕವಾಗಲಿದೆಯೆಂದು ದಿನಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದೆನು. ಡಂಕಲ್ ಪ್ರಸ್ತಾವನೆ ಬಗ್ಗೆ ಇಂಗ್ಲೀಷ್‌ನಲ್ಲಿ ಒಂದು ಕಿರುಹೊತ್ತಿಗೆಯನ್ನು ಬರೆದೆ. ಹಾಗೂ ಅದರ ಕನ್ನಡ ಅನುವಾದವನ್ನು ನವಕರ್ನಾಟಕ ಪ್ರಕಟಣೆ ಮಾಡಿತು. ಡಂಕೆಲ್ ಪ್ರಸ್ತಾವನೆಗೆ “A DESIGN FOR DISASTERS” ಎಂದು ಕರೆಯುವ ಒಂದು ಪುಸ್ತಕದಲ್ಲಿ ಒಂದು ಇಂಗ್ಲಿಷ್ ಲೇಖನವನ್ನು ಬರೆದುಕೊಟ್ಟಿದ್ದೆ. ಅದನ್ನು ನವಕರ್ನಾಟಕ ಪ್ರಕಟಣೆ ಮಾಡಿದೆ.

ಡಂಕೆಲ್ ಪ್ರಸ್ತಾವನೆಗೆ ಭಾರತ ಸಹಿ ಹಾಕಿದ್ದುದರಿಂದ, ಭಾರತ ತನ್ನ ಪೇಟೆಂಟ್ ತಿದ್ದುಪಡಿ ಮಾಡಿಕೊಳ್ಳಬೇಕಾಯಿತು. ಇದರ ಬಗ್ಗೆ ಹಲವಾರು ಕನ್ನಡ ಲೇಖನಗಳನ್ನು ಬರೆದೆ. ಈ ಲೇಖನಗಳು ರಾಜಕಿಯ ವೈದ್ಯಕೀಯ, ಸಾಮಾಜಿಕ ಆಯಾಮವನ್ನು ಹೊಂದಿವೆ. ಈ ಲೇಖನಗಳಿಗೆ ಜನರು ಒಳ್ಳೆಯ ಪ್ರತಿಕ್ರಿಯೆಯನ್ನು ಪೋಸ್ಟ್‌ಕಾರ್ಡ್ ಮೂಲಕ ವ್ಯಕ್ತಪಡಿಸಿದ್ದಾರೆ. ೧೯೭೮ರ ವಿಶ್ವ ಆರೋಗ್ಯ ಸಂಸ್ಥೆಯ ಪೋಷಣೆಯಿಂದ ‘೨೦೦೦ದ ಹೊತ್ತಿಗೆ ಎಲ್ಲರಿಗೂ ಆರೋಗ್ಯ’ ಭಾರತದಲ್ಲಿಯಲ್ಲದೇ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಜಾರಿಯಾಗಲಿಲ್ಲ. ರಾಷ್ಟ್ರದ ಆರೋಗ್ಯ ನೀತಿ, ಔಷಧಿ ನೀತಿ, ವಿಶ್ವ ಆರೋಗ್ಯ ಸಂಸ್ಥೆಯ ಪೋಷಣೆ ಯಾಕೆ ಜಾರಿಯಾಗಲಿಲ್ಲ. ಕುರಿತು ಹಲವಾರು ಲೇಖನಗಳನ್ನು ಬರೆದೆ. ಅದೇ ನಿಯಮ ಜನಾರೋಗ್ಯ ಆಂದೋಲನ ಕರ್ನಾಟಕ ಹಲವಾರು ಹೋರಾಟಗಳನ್ನು ಹಮ್ಮಿಕೊಂಡಿತ್ತು. ಆ ವಿಷಯಗಳ ಬಗ್ಗೆಯೂ ಲೇಖನಗಳನ್ನು ಬರೆದಿದ್ದೇನೆ.

ನಾನು ಆಗಾಗ ಬೇರೆ ಬೇರೆ ವಿಷಯಗಳ ಬಗ್ಗೆಯೂ ಲೇಖನಗಳನ್ನು ಬರೆದಿದ್ದೇನೆ. ಉದಾ : ‘ಭಾರತ ಪ್ರಕಾಶಿಸುತ್ತಿದೆ’, ಈ ಘೋಷಣೆ ಬಿ.ಜೆ.ಪಿ. ಸರಕಾರ ತನ್ನ ಸಾಧನೆ ಬಗ್ಗೆ ಹೇಳಿಕೊಳ್ಳುವ ಘೋಷಣೆಯಾಗಿತ್ತು. ಆರೋಗ್ಯ ಸಾಧನೆಯಲ್ಲಿ ಆ ಸರ್ಕಾರ ಏನನ್ನೂ ಮಾಡದಿದ್ದಾಗ ತನ್ನ ಸಾಧನೆಯನ್ನು ಹೇಳಲು ‘ಭಾರತ ಪ್ರಕಾಶಿಸುತ್ತಿದೆ’ ಎಂಬುದು ಅಸಂಬದ್ಧವಾಗುತ್ತದೆ. “ಭಾರತ ಪ್ರಕಾಶಿಸಲು” ಏನು ಮಾಡಬಹುದು ಎಂಬುದನ್ನು ಆ ಲೇಖನದಲ್ಲಿ ಬರೆಯಲಾಗಿದೆ.

ಮಹಿಳಾ ದಿನಾಚರಣೆಯ ಸಮಯದಲ್ಲಿ ಮಹಿಳಾ ಆರೋಗ್ಯಕ್ಕೆ ಸಂಬಂಧಿಸಿದ ಲೇಖನ ಪ್ರಸ್ತುತವಾಗಿತ್ತು, ಹಾಗೂ ನಾನು ಅದನ್ನು ಬರೆದೆ. ‘ಆಪ್ತಮಿತ್ರ’ ಚಲನಚಿತ್ರ ಒಂದು ಜನಪ್ರಿಯ ಚಿತ್ರವಾಗಿತ್ತು. ಆದರೆ ಆ ಚಲನಚಿತ್ರದಲ್ಲಿ ಜನರಿಗೆ ಮಾನಸಿಕ ರೋಗದ ಬಗ್ಗೆ ಹೇಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆಂಬ ವಿಷಯವಾಗಿ ಒಂದು ಲೇಖನ ಬರೆದಿದೆ. ಅದನ್ನು ಹೊಸತು ಮಾಸಪತ್ರಿಕೆ ಪ್ರಕಟಿಸಿದೆ. ಅದರಂತೆಯೇ ನನ್ನ ಹಲವಾರು ಲೇಖನಗಳನ್ನು ಹೊಸತು ಮಾಸಪತ್ರಿಕೆ ಪ್ರಕಟಿಸಿದೆ.

ಹಿಂದೊಮ್ಮೆ ಹೆಪಟೈಟಿಸ್ ಬಿ.ಚುಚ್ಚುಮದ್ದು ಕೊಡಲು ಕ್ಯಾಂಪ್‌ಗಳನ್ನು ಏರ್ಪಡಿಸಿ “ಕಾಮಾಲೆ ತಡೆಗಟ್ಟಿ” ಅದು ಏಡ್ಸ್‌ಗಿಂತಲೂ ಹೆಚ್ಚು ಅಪಾಯಕಾರಿ ಎಂಬ ಮಾಹಿತಿಕೊಟ್ಟು ಜನರಿಗೆ ಮೋಸ ಮಾಡುವ ಪ್ರಚಾರಾಂದೋಲನ ಜಾರಿಯಲ್ಲಿತ್ತು. ಅದರ ಬಗ್ಗೆ ಲೇಖನ ಬರೆದು ಅವರ ತಪ್ಪು ಮಾಹಿತಿಗಳನ್ನು ಎತ್ತಿ ತೋರಿಸಿದೆ.

ಲೇಖನ ಬರೆಯಬೇಕು, ಪ್ರಕಟಿಸಬೇಕು ಎಂಬುದು ಸಾಮಾನ್ಯ ಹಂಬಲ. ಅದರಲ್ಲೇನೂ ತಪ್ಪಿಲ್ಲ. ಲೇಖನ ಬರೆಯಬೇಕು ಜನರಿಗೆ ಮಾಹಿತಿ ನೀಡಬೇಕು, ತಪ್ಪುನಂಬಿಕೆ ಸರಿಪಡಿಸಬೇಕು. ಎಂಬ ಉದ್ದೇಶದಿಂದ ಮಾತ್ರ ನಾನು ಲೇಖನಗಳನ್ನು ಬರೆದಿದ್ದೇನೆ. ಇಲ್ಲಿಯವರೆಗೆ ಬರೆದ ಲೇಖನಗಳು ಒಂದೇ ಶೈಲಿಯಲ್ಲಿವೆ ಎಂಬ ಕೊರತೆ ನನ್ನ ಅರಿವಿಗೆ ಬಂದಿದೆ. ಇನ್ನು ಮುಂದೆಬೇರೆ ತರಹದ ಸಾಹಿತ್ಯ ರಚನೆಗೆ ಪ್ರಯತ್ನ ಮಾಡಲು ಪ್ರಯತ್ನಿಸುವನಿದ್ದೇನೆ.

ಒಂದು ಲೇಖನವನ್ನು ಮೂರುಬಾರಿ ಬರೆದಾಗಲೇ ಅಂತಿಮಗೊಳಿಸಲು ಸಾಧ್ಯವಾಗಿದೆ. ಆದರೂ ಅನೇಕ ಬಾರಿ ಅದರ ನಂತರವೂ ತಪ್ಪು ಕಂಡು ಬಂದು ಸರಿಪಡಿಸಿದ ಸನ್ನಿವೇಶಗಳು ಹಲವಾರು.

ನಾನು ನನ್ನ ಲೇಖನಗಳನ್ನು ಯಾರಾದರೊಬ್ಬರಿಗೆ ಕೊಟ್ಟು ಓದಿಸಿ ಅವರ ಸಲಹೆ ಪಡೆದು, ತಿದ್ದುಪಡಿತಂದು, ನಂತರವೇ ಪ್ರಕಟಿಸುತ್ತ ಬಂದಿದ್ದೇನೆ. ವೈದ್ಯ ಸಾಹಿತ್ಯದಲ್ಲಿ ನನಗೆ ಕಂಡು ಬಂದ ವಿಷಯವೇನೆಂದರೆ ಎಲ್ಲಾ ವಿಷಯಗಳ ಬಗ್ಗೆ ಸಾಹಿತ್ಯ ಪ್ರಕಟಣೆಯಾಗಿಲ್ಲ. ವೈದ್ಯರು ಸಾಹಿತ್ಯ ರಚನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ವೈದ್ಯರಲ್ಲದೇ ಸಾಮಾನ್ಯ ಜನರೂ ವೈದ್ಯ ಸಾಹಿತ್ಯ ರಚನೆಗೆ ಮುಂದಾಗಬೇಕು. ಆಗ ಮಾತ್ರ ವೈದ್ಯ ಸಾಹಿತ್ಯ ಸಮೃದ್ಧಿಯಾಗಲು ಸಾಧ್ಯ.

ವೈದ್ಯ ಸಾಹಿತ್ಯ ಜನಸಾಮಾನ್ಯರಿಗೆ ಎಲ್ಲ ಸಾಮಾನ್ಯ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡುತ್ತ. ಗೊಂದಲಗಳನ್ನು ನಿವಾರಿಸುತ್ತ, ದಿನನಿತ್ಯ ಚಿಕಿತ್ಸೆಗಳಿಗೆ ಪ್ರೋತ್ಸಾಹಿಸುವಂತಹದ್ದಾಗಿರಬೇಕು. ಅದಲ್ಲದೆ ಅದು ವೈಜ್ಞಾನಿಕವಾಗಿದ್ದು, ಆಧುನಿಕ ಹಾಗೂ ಸಾಂಪ್ರದಾಯಿಕ ಚಿಕಿತ್ಸೆಗಳ ಬಗ್ಗೆ ಸ್ಪಷ್ಟಮಾಹಿತಿ ಕೊಡುವಂತಹದ್ದಾಗಿರಬೇಕು. ಈ ನಿಟ್ಟಿನಲ್ಲಿ ನಾನು ನನ್ನ ಪ್ರಯತ್ನವನ್ನು ಮುಂದುವರೆಸುತ್ತೇನೆ.

* * *