ಆರೋಗ್ಯ ಭಾಗ್ಯ ಎನ್ನುವುದು ಹಿಂದಿನಿಂದಲೂ ಹಿರಿಯರು ನುಡಿದು ನಡೆದುಕೊಂಡು ಮತ್ತೆ ಕಿರಿಯರಿಗೆ ಆಶೀರ್ವಾದ ಮಾಡುವುದು ಒಂದು ಸಂಪ್ರದಾಯವಾಗಿತ್ತು. ಆದರೆ ಈಗ ಕಾಲ ಬದಲಾವಣೆಯಾಗಿದೆ ಎಂದು ಹೇಳುವುದಕ್ಕಿಂತ ಕಾಲವು ಮುಂದುವರೆದು ಸುಸಂಸ್ಕೃತ ಜೀವನದ ಶೈಲಿಯಲ್ಲಿ ಸಾಗಿದೆ ಎಂದು ಹೇಳುವುದು ಸೂಕ್ತ.

ಒಂದು ಕಾಲದಲ್ಲಿ ರೋಗವು ಇರುವುದೇ ಎಂದು ತಪಾಸಣೆ ಮಾಡುವ ಪದ್ಧತಿಯನ್ನು ಹಿಂದಿನ ವೈದ್ಯರು ಅಳವಡಿಸಿಕೊಂಡಿದ್ದರು. ಆದರೆ ಈಗಿರುವಷ್ಟು ಸವಲತ್ತು ಸಲಕರಣೆ ಉಪಕರಣಗಳು, ತಾಂತ್ರಿಕ ಮಾಹಿತಿ, ಸಂಪರ್ಕ ವ್ಯವಸ್ಥೆ ಆಗಿನ ಕಾಲದಲ್ಲಿ ಇರಲಿಲ್ಲ. ಈಗಿನ ಪರಂಪರೆಯ ವೈದ್ಯರು ಕೂಡ ಕೂಲಂಕಷವಾಗಿ ಹುಟ್ಟುವ ಮಗುವಿನಿಂದ ಹಿಡಿದು ವ್ಯಕ್ತಿ ಸಾಯುವ ಸಂದರ್ಭದವರೆಗೂ ತಪಾಸಣೆಯನ್ನು ಮಾಡುತ್ತಾರೆ. ಅದು ರೋಗ ನಿರ್ಧಾರಕ್ಕಲ್ಲ. ಎಲ್ಲಾದರೂ ಸ್ವಲ್ಪವಾದರೂ ಆರೋಗ್ಯವಿರುವ ಅಂಶವಿದೆಯೆ ಎಂದು ತಿಳಿದುಕೊಳ್ಳಲು. ಈಗ ಜನರಿಗೆ ಸ್ವಲ್ಪ ಮಟ್ಟಿನ ಆರೋಗ್ಯದ ಬಗ್ಗೆ ಅರಿವು ಜಾಗೃತವಾಗಿದೆ. ಅದು ವಿದ್ಯಾಭ್ಯಾಸದ ಮಟ್ಟದ ಕಾರಣವಿರಬಹುದು ಅಥವಾ ಮಾಧ್ಯಮಗಳಲ್ಲಿ ದೃಶ್ಯಮಾಧ್ಯಮವು ಅತಿ ಪ್ರಭಾವವಾದುದು ಆಗಿದ್ದರೂ ಅದು ಅಲ್ಪಕಾಲಿಕ ಬದಲಾವಣೆ ಮತ್ತು ಜಾಗೃತಿಯನ್ನು ತರಬಹುದು ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಅಚ್ಚು ಮುದ್ರೆ ಅಥವಾ ಮುದ್ರಣದ ಮಾಧ್ಯಮವು ಕೆಲವೇ ಜನರಿಗೆ ಸೀಮಿತವಾದರೂ ಸ್ಮರಣೆಯಲ್ಲಿ ಬಹಳ ಕಾಲ ಉಳಿಯುವಂತಹುದು ಮತ್ತು ವಿಷಯದ ಪ್ರಸರಣದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಪುಸ್ತಕದ ಎರವಲು ಮುಖಾಂತರವೂ ಆರೋಗ್ಯದ ಕುರಿತು ಹರಡು ಜಾಗೃತಿ ಮೂಡುವಲ್ಲಿ ಫಲಕಾರಿಯಾದ ಪರಿಣಾಮವನ್ನು ಬೀರುತ್ತದೆ.

ಬರೆಯುವುದೆಲ್ಲ ಸಾಹಿತ್ಯವೇ ಅಥವಾ ಬರೆಯುವ ಶೈಲಿಯಲ್ಲಿ ಸಾಹಿತ್ಯವಿದೆಯೇ ಎಂಬುದೇ ಗೊಂದಲದ ವಿಚಾರ! ಈ ನಿಟ್ಟಿನಲ್ಲಿ ಅನೇಕ ವೈದ್ಯರು ಅಥವಾ ವೈದ್ಯಕೀಯ ವಿಷಯದಲ್ಲಿ ಪರಿಣತಿ ಹೊಂದಿದವರು ಅನೇಕ ವಿಷಯಗಳನ್ನು ಸಮಕಾಲೀನ ಪತ್ರಿಕೆಗಳಲ್ಲಿ ಬರೆಯುತ್ತಾರೆ ಅಥವಾ ಪುಸ್ತಕ ರೂಪದಲ್ಲಿ ಹೊರತಂದು ಮಾರಾಟದ ಮೂಲಕ ತೃಪ್ತಿಪಟ್ಟಿದ್ದಾರೆ ಎನ್ನಬಹುದು.

ಕನ್ನಡ ವೈದ್ಯಸಾಹಿತ್ಯದಲ್ಲಿ ಇರಬಹುದಾದಂತಹ ಒಂದು ಮುಖ್ಯ ಸಮಸ್ಯೆಯೆಂದರೆ ಈ ವೈದ್ಯಕೀಯ ವಿಷಯದಲ್ಲಿ ಪರಿಣತಿ ಹೊಂದಿದವರೆಲ್ಲಾ ಕನ್ನಡ ಸಾಹಿತ್ಯದಲ್ಲಿ ಪರಿಣತಿ ಹೊಂದಿದವರಲ್ಲ ಎಂಬುದು. ಅದೇ ರೀತಿ ಕನ್ನಡ ಸಾಹಿತ್ಯ ಸಂಪೂರ್ಣ ಪರಿಚಯವನ್ನು ಪಡೆದುಕೊಂಡಿರುವ ವೈದ್ಯರು ವಿರಳ. ಈ ಕ್ಷೇತ್ರದಲ್ಲಿ ಬರುತ್ತಿರುವ ಸಾಹಿತಿಗಳು ಅಥವಾ ಲೇಖಕರು ಎನ್ನಬಹುದಾದ ಮಹನೀಯರು ತಮ್ಮ ವೈದ್ಯಕೀಯ ವ್ಯಾಸಂಗಕ್ಕೂ ಮೊದಲು ಕಲಿತಿರುವ ಅಲ್ಪಸ್ವಲ್ಪವಾದ ಕನ್ನಡ ಭಾಷೆಯ ಬಗೆಗಿನ ಅರಿವು ಹಾಗೂ ಹವ್ಯಾಸದಿಂದ ಬರೆಯುವವರೇ ಆಗಿದ್ದಾರೆ. ಈ ಕಾರಣದಿಂದ ಯಾವುದೇ ಒಂದು ರೀತಿಯ ಆಚಾರ ಕ್ರಮ, ಕನ್ನಡ ವೈದ್ಯಸಾಹಿತ್ಯದಲ್ಲಿ ಮೀಸಲಿರದೇ ಇರುವುದು. ಹಾಗೆಂದು ವೈದ್ಯಕೀಯ ಸಾಹಿತ್ಯಕ್ಕೆ ಬೇರೆಯೇ ವ್ಯಾಕರಣ ಬರೆಯುವ ಅವಶ್ಯಕತೆಯಿದೆ ಎಂದು ಅರ್ಥವಿಲ್ಲ.

ಕನ್ನಡ ವೈದ್ಯ ಲೇಖನಗಳಿಗೆ ಈಗ ಹೆಚ್ಚಿನ ಆದ್ಯತೆಯಿರುವುದು ಸಮಕಾಲೀನ ಪತ್ರಿಕೆಗಳಲ್ಲಿ ದಿನಪತ್ರಿಕೆ, ವಾರಪತ್ರಿಕೆ ಅಥವಾ ಮಾಸಪತ್ರಿಕೆಯೇ ಆಗಿರಬಹುದು. ಅವುಗಳಲ್ಲಿ ಪ್ರಚಲಿತವಿರುವ ರೋಗಗಳ ಬಗೆಗಿನ ವಿಚಾರ ಆರೋಗ್ಯ ರಕ್ಷಣೆ ಮತ್ತು ಪ್ರಶ್ನೋತ್ತರ ಮಾದರಿಗಳು ಮೇಲುಗೈ ಸಾಧಿಸಿವೆ. ಕೆಲವೇ ಕೆಲವು ವೈದ್ಯರು ತಮ್ಮ ಮನಸ್ಸಿನ ಉತ್ಕರ್ಷದ ತುಡಿತಕ್ಕೆ ಮತ್ತು ಬರೆಯುವ ಹವ್ಯಾಸದ ನೆವದಿಂದಾಗಿ ಕೆಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆದರೆ ವೈದ್ಯಸಾಹಿತ್ಯಕ್ಕು ಮತ್ತು ಇತರೆ ಸಾಹಿತ್ಯಕ್ಕು ಇರುವ ವಿಚಾರವೆಂದರೆ ವೈದ್ಯಸಾಹಿತ್ಯ ಹಣ ಮಾಡುವ ಉದ್ದೇಶದಿಂದ ಕೂಡಿದ್ದಲ್ಲ ಎಂಬುದು ಎಲ್ಲಾ ವೈದ್ಯ ಲೇಖಕರು ಹೇಳುವ ಮಾತು. ಹೀಗಿರುವಾಗ ಮುಂದಿನ ಪರಂಪರೆಗೆ ಸಮಕಾಲೀನ ಪತ್ರಿಕೆಯಲ್ಲಿ ಬರೆಯುವ ಕನ್ನಡದ ವೈದ್ಯ ಲೇಖನಗಳೇ ವೈದ್ಯಸಾಹಿತ್ಯ ಎಂದು ತಿಳಿಸುವ ಸಂಭವವಿದೆಯೇನೋ ಎಂಬ ಗೊಂದಲವಿದೆ.

ವೈದ್ಯಕೀಯ ವಿಷಯದ ಕುರಿತು ತಿಳಿಸುವಾಗ ವೈದ್ಯಕೀಯ ಕ್ಷೇತ್ರದಲ್ಲಿ ಬರುವ ಮತ್ತೊಂದು ತೊಡಕೆಂದರೆ ಅಶ್ಲೀಲ ಸಾಹಿತ್ಯ. ಅಶ್ಲೀಲ ಸಾಹಿತ್ಯವೆಂದು ಕರೆಯುವ ಉದ್ದೇಶವೇನೆಂದರೆ ಅಸಭ್ಯ ವಿಷಯದ ಅವಶ್ಯಕತೆಗೂ ಮೀರಿದ ಲೇಖನದ ವಿಷಯಕ್ಕೆ ಸಮರ್ಪಕವಲ್ಲ. ಕೆಲವು ಯುವಕರಿಗೇ ಓದಲು ಮೀಸಲಾಗುವಂತಹ ಪತ್ರಿಕೆಯ ಮಾರಾಟದ ದೃಷ್ಟಿಯಿಂದ ಉಂಟಾದ ಲೈಂಗಿಕತೆ ವಿಷಯಗಳಿಗೆ ಸಂಬಂಧಪಟ್ಟಿದ್ದು. ಲೈಂಗಿಕ ಆರೋಗ್ಯ ಮುಂತಾದವು ವೈದ್ಯಕೀಯ ವಿಷಯವಾದರೂ ಅತಿರೇಕದ ಅಸಂಬದ್ಧವಾದ ರೀತಿ ಓದುಗರಿಗೆ ಮನೋವೈಕಲ್ಯ ಉಂಟುಮಾಡುವ ರೀತಿ ಬರೆದು ಕನ್ನಡ ವೈದ್ಯಸಾಹಿತ್ಯ ಎಂದರೆ ಹೀಗೆ ಎನ್ನುವ ಹಾಗೆ ನಡೆಯುತ್ತಿದೆ.

ಮುಂದಿನ ದಿನಗಳಲ್ಲಿ ಯುವ ಪತ್ರಿಭೆಯ ವೈದ್ಯರು ತಮ್ಮ ಅನುಭವ ಪಡೆದಿರುವ ವಿಷಯಗಳಲ್ಲಿ ಲೇಖನದ ಸೃಷ್ಟಿಯಾಗಬೇಕಾಗಿದೆ. ಅದಕ್ಕೆ ಬೇಕಾಗಿರುವುದು ಎರಡು ಪೂರಕ ಕಾರ್ಯಕ್ರಮಗಳು. ಮೊದಲನೆಯದಾಗಿ ವೈದ್ಯಕೀಯ ವ್ಯಾಸಂಗದಲ್ಲಿರುವಾಗಲೇ ಆಸಕ್ತರ ಸಂಘ ನಿರ್ಮಾಣ ಮಾಡಿ ಸರಿಯಾದ ಮಾರ್ಗದರ್ಶನದಿಂದ ವೈದ್ಯಕೀಯ ವಿಷಯದ ಸಂಬಂಧದ ಕುರಿತು ವಿವಿಧ ರೀತಿಯ ಲೇಖನಗಳನ್ನು ಬರೆಸುವುದು ಮತ್ತು ಹವ್ಯಾಸವನ್ನು ರೂಢಿಸುವುದು. ಎರಡನೆಯ ಕಾರ್ಯಕ್ರಮವೆಂದರೆ ಈಗಾಗಲೇ ಲೇಖನ ಬರೆದಿರುವ ಲೇಖಕರಿಗೆ ಅಥವಾ ಹವ್ಯಾಸಿ ಲೇಖಕ ವೈದ್ಯರಿಗೆ ಅವಕಾಶವನ್ನು ಕಲ್ಪಿಸಿ, ಗುರುತಿಸಿ, ಅವುಗಳು ನಶಿಸಿಹೋಗದಂತೆ ಪ್ರಕಟಣೆ ಮಾಡುವುದು. ನೂರು ಪುಟಗಳಿಗೂ ಮೀರಿ ಪುಸ್ತಗಳನ್ನು ಬರೆದು ಮಾರಾಟ ಮಾಡುವ ಉದ್ದೇಶ ಹೆಚ್ಚಿನ ವೈದ್ಯರುಗಳಿಗೆ ಇರುವುದಿಲ್ಲ. ಆದರೆ ಅವರುಗಳು ಬರೆದ ಲೇಖನಗಳನ್ನೂ ಒಟ್ಟುಮಾಡಿ ಸಣ್ಣಪುಸ್ತಕದ ರೂಪದಲ್ಲಿ ಹೊರಡಿಸುವಂತಹ ಪುಸ್ತಕಗಳನ್ನು ಬಿಡುಗಡೆ ಮಾಡುವುದು ಸೂಕ್ತ.

ಈ ಕೆಲಸಗಳಿಗೆ ಅಥವಾ ಕೃಷಿಗೆ ಮುಖ್ಯವಾಗಿ ವೈದ್ಯಕೀಯ ವಿಷಯ ಕುರಿತು ಬರೆಯುವ ವೈದ್ಯರುಗಳನ್ನು ಪರಿಷತ್ತು ಅಥವಾ ಸಂಸ್ಥೆಗಳಿಗೆ ಪರಿಚಯ ಮಾಡಬೇಕಾಗಿದೆ. ಎರಡನೆಯದಾಗಿ ಈಗಾಗಲೇ ಪ್ರಕಟಗೊಂಡು ಅಥವಾ ಪ್ರಕಟಗೊಳ್ಳುವ ಉತ್ತಮ ಲೇಖನಗಳನ್ನು ಪರಿಷತ್ತು ಕಿರುಪುಸ್ತಕದ ರೀತಿಯಲ್ಲಿ ಬಿಡುಗಡೆ ಮಾಡಿ ಜನಸಾಮಾನ್ಯರಿಗೆ ತಲುಪಿಸಬೇಕಾಗಿದೆ. ಇದಕ್ಕೆ ಸಾಕಷ್ಟು ಕನ್ನಡ ಸಂಘಗಳು ಕಾಲೇಜು ಅಧಿಕಾರಿಗಳನ್ನು ಸಂಪರ್ಕಿಸಿ ಮುಂದುವರಿಯುವ ವ್ಯಕ್ತಿಯನ್ನು ಪರಿಷತ್ತಿನಲ್ಲಿ ಭರ್ತಿ ಮಾಡಬೇಕು ಮತ್ತು ಎಲ್ಲ ನಿರ್ದಿಷ್ಟವಾದ ವಿಳಾಸವಿರಬೇಕು. ಕನ್ನಡ ವೈದ್ಯಸಾಹಿತ್ಯದ ಉಳಿವು ವೈದ್ಯಲೋಕದ ಮೇಲೆ ಅವಲಂಬಿತವಾಗಿಲ್ಲ. ಅದನ್ನು ಪೋಷಿಸುವ ಸಾಹಿತ್ಯ ಪರಿಷತ್ತು ಮತ್ತು ಮುದ್ರಣದ ಮಾಧ್ಯಮದವರ ಮೇಲೆ ಅವಲಂಬಿತವಾಗಿದೆ. ಈಗಲೂ ಮತ್ತು ಮುಂದೆಯೂ ಕನ್ನಡದ ಮಾತೃಭಾಷೆಯ ವೈದ್ಯರ ಮನದಲ್ಲಿ ಬರೆಯುವ ತುಡಿತವಿರುವುದು ಖಂಡಿತ. ಅದಕ್ಕೆ ಬೇಕಾಗಿರುವುದು ಒಂದು ಒಳ್ಳೆಯ ಪ್ರೋತ್ಸಾಹ ಪೂರ್ವಕವಾದ ಮಾರ್ಗದರ್ಶನ ಮತ್ತು ಹಂಚಿಕೊಳ್ಳುವ ಅವಕಾಶ.

ವೈದ್ಯಸಾಹಿತಿಯಾಗಿನನ್ನಅನುಭವ
“ಲೇಖನ ಬರೆಯುವುದು ಆರ್ಥಿಕವಾಗಿ ಲಾಭದಾಯಕವಲ್ಲ. ಆದರೆ ಅದು ತರುವ ಆನಂದ ಅಪರಿಮಿತ
ಡಾ| ಕೆ.ಎನ್. ಪ್ರಸಾದ್ನಾನು ವೈದ್ಯಕೀಯ ವ್ಯಾಸಂಗ ಮಾಡುವಾಗಲೇ ಸಣ್ಣ ಲೇಖನಗಳನ್ನು ಬರೆದು ಪತ್ರಿಕೆಗಳಿಗೆ ಕಳುಹಿಸಿ ಪ್ರಕಟಿಸಿದ ನೆನಪಿದೆ. ಒಂದು ಸಣ್ಣ ವೈದ್ಯಕೀಯ ಕಥೆಯನ್ನು ಆಗ ಬರೆದಿದ್ದೆ. ಅದನ್ನು ನನ್ನ ಸ್ನೇಹಿತರಿಗೆಲ್ಲ ಓದಲು ಕೊಟ್ಟು ಅವರಿಂದ ಭೇಷ್ ಎನಿಸಿಕೊಂಡಿದ್ದೆ. ಅವರು ನನ್ನ ಲೇಖನವನ್ನು ಅಂದರೆ ಆ ಕಥೆಯನ್ನು ಪತ್ರಿಕೆಗೆ ಕಳುಹಿಸಲು ಬಹಳ ಒತ್ತಾಯ ಮಾಡಿದರು. ನಾನು ಮನಸ್ಸಿನ ಹಿಂಜರಿಕೆಯಿಂದ ಕಳುಹಿಸಲೇ ಇಲ್ಲ. ಬಹಳ ವರ್ಷಗಳ ಕಾಲ ಆ ಕಥೆಯು ನನ್ನ ಫೈಲ್‌ನಲ್ಲಿ ಇತ್ತು. ಆಗಾಗ ಓದುತ್ತಿದ್ದೆ. ನಂತರ ಹರಿದು ಹಾಕಿದೆ ಎಂಬುದು ವಿಷಯವಾದರೂ ಬಹುಶಃ ನನ್ನ ಮನಸ್ಸಿನ ಹಿಂಜರಿಕೆಯನ್ನು ಕೂಡ ತೊಡೆದುಹಾಕಿದೆ ಎಂದೇ ಹೇಳಬಹುದು.

ನಾನು ಬರೆದ ವೈದ್ಯ ಲೇಖನದಿಂದ ಹಲವರಿಗೆ ಅನುಕೂಲವಾಗಿದೆ ಎಂದು ಹೇಳಲು ಇಚ್ಛಿಸುತ್ತೇನೆ. ನಾನು ಪೂರ್ಣ ಪ್ರಮಾಣದ ಸಾಹಿತ್ಯದಲ್ಲಿ ತೊಡಗದಿದ್ದರೂ ನನಗೆ ಅನಿಸಿದ, ನನಗೆ ತಿಳಿದಿರುವ ವೈದ್ಯಕೀಯ ಮಾಹಿತಿಯನ್ನು ಜನಸಾಮಾನ್ಯರಿಗೆ ತಿಳಿಸುವ ತುಡಿತ ನನಗೆ ಆಗಾಗ ಆಗುತ್ತಿತ್ತು. ಆದ್ದರಿಂದ ‘ವೈದ್ಯಕೀಯ ವಿಕಾಸ’ ಎಂಬ ಅಂಕಣವನ್ನು ಬರೆದಾಗ ಹಲವಾರು ರೋಗಿಗು ನನ್ನ ವಿಳಾಸ ಹುಡುಕಿಕೊಂಡು ನನ್ನ ನೆರವನ್ನು ಪಡೆದು ಅವರ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಆಗ ನನಗಿಸಿದ್ದು ನನ್ನ ಈ ಬರೆಯುವ ಹವ್ಯಾಸದ ತುಡಿತ, ಬೇರೆಯವರಿಗೆ ಒಳ್ಳೆಯದು ಅಥವಾ ಸರಿಯಾದ ಮಾರ್ಗದರ್ಶನ ನೀಡಿತಲ್ಲ ಎನ್ನುವ ಸಮಾಧಾನ.

ಮಹಿಳೆಯರ ಸಮಸ್ಯೆಯನ್ನು ಹಲವು ಲೇಖಕರು ಬರೆಯುತ್ತಾರೆ. ಪುರುಷರ ಸಮಸ್ಯೆ ಅದರಲ್ಲೂ ವೈಯಕ್ತಿಕ ಸಮಸ್ಯೆ- ಲೈಂಗಿಕ ರೋಗವಲ್ಲದ ಸಮಸ್ಯೆಗಳು ಹೇಳಿಕೊಳ್ಳದೆ ಮನಸ್ಸಿನಲ್ಲೇ ನರಳುವವರ ಗುಪ್ತ ಸಮಸ್ಯೆಗಳನ್ನು ಪತ್ರಿಕೆಯಲ್ಲಿ ಬರೆದಾಗ, ನನ್ನ ಅನುಭವದಲ್ಲಿ ಹಲವು ಯುವಕರು ತಮ್ಮ ಸಮಸ್ಯೆಯಿಂದ ನನ್ನನ್ನು ಸಂಪರ್ಕಿಸಿದಾಗ ನನಗೆ ಮತ್ತಷ್ಟು ಲೇಖನವನ್ನು ಬರೆಯಲು ಅವರೇ ಪ್ರೇರಣೆ ನೀಡಿದರು ಎಂದರೆ ತಪ್ಪಾಗುವುದಿಲ್ಲ.

ನನ್ನ ಲೇಖನ ಓದಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಯುವಕರು ಅಥವಾ ರೋಗಿಗಳು ನಾನು ಲೇಖನದ ಪ್ರಾರಂಭದಲ್ಲಿ ಪರಿಚಯಿಸಿದಂತೆ ಬಂದು ನನ್ನನ್ನು ಭೇಟಿಯಾಗುವುದು. ತಕ್ಷಣ ನನಗೆ ಆಗುವ ಆನಂದವೆಂದರೆ ಬಹುಶಃ ಆ ಲೇಖನವನ್ನು ಆತ ಹಲವು ಬಾರಿ ಓದಿದ್ದಾನೆ. ಅದೇ ರೀತಿ ನನ್ನನ್ನು ಪರಿಚಯ ಮಾಡಿಕೊಳ್ಳಲು ಬಯಸಿರುವುದು. ತಮ್ಮ ಸಮಸ್ಯೆಯನ್ನು ಆ ಲೇಖನದೊಂದಿಗೆ ಸ್ಪಂದಿಸಿಕೊಂಡು ಪರಿಹಾರ ಕಂಡುಕೊಳ್ಳಲು ನನ್ನ ಬಳಿಗೆ ಬಂದಾಗ ನಾನು ಮೊದಲ ಭೇಟಿಯಲ್ಲಿ ಅವರಿಗೆ ಬಹಳ ಆಪ್ತ ವ್ಯಕ್ತಿಯಂತೆ ಅವರಿಗೆ ಆಗುವ ಅನುಭವ. ಈ ವಿಷಯವನ್ನು ಹಲವು ಓದುಗರು, ರೋಗಿಗಳು ತಿಳಿಸಿದ್ದಾರೆ.

ಯಾವುದೋ ಹಳೆಯ ಲೇಖನದಲ್ಲಿ ನನ್ನ ವಿಳಾಸವನ್ನು ಗುರುತು ಮಾಡಿಕೊಂಡು, ಇವರು ಈ ಕಾಯಿಲೆಯನ್ನು ಚೆನ್ನಾಗಿ ನೋಡುತ್ತಾರೆ. ಔಷಧಿ ಕೊಡುತ್ತಾರೆ ಎಂದು ಇತರ ಸ್ನೇಹಿತರಿಗೆ ತಿಳಿಸುವ ಮಂದಿಯೇ ನನಗೆ ಇದ್ದಾರೆ. ಆದರೆ ಅವರನ್ನು ನಾನು ಪ್ರತ್ಯಕ್ಷ ನೋಡಿಲ್ಲ. ಇದು ನನಗೆ ವೈದ್ಯಲೇಖಕನಾಗಿ ಕಂಡುಬಂದ ಇನ್ನೊಂದು ಅನುಭವ. ಅಂದರೆ ತಮಗೆ ಗೊತ್ತಿರುವ ವಿಷಯವನ್ನು ಇತರರಿಗೆ ತಿಳಿಸಿ, ಅವರಲ್ಲಿ ಸಮಸ್ಯೆಯಿದೆಯೆಂದು ಕಂಡುಬಂದರೆ ಸರಿಯಾದ ವೈದ್ಯ ಅಥವಾ ತಜ್ಞರನ್ನು ಭೇಟಿಯಾಗಲು ಮಾರ್ಗದರ್ಶನ ನೀಡುವುದನ್ನು ನನ್ನ ಕೆಲವು ಓದುಗರು ಮಾಡುತ್ತಿದ್ದಾರೆ.

ವೈದ್ಯ ಲೇಖಕನಾಗಿ ಅಥವಾ ವೈದ್ಯನಾಗಿ ರೇಡಿಯೋ, ಟಿವಿ ಮಾಧ್ಯಮದಲ್ಲಿ ಸ್ವಲ್ಪ ಮಟ್ಟಿಗೆ ಜನಪ್ರಿಯವಾಗಿದ್ದರೂ, ಆರ್ಥಿಕವಾಗಿ ಈ ಲೇಖನಗಳು ಹೆಚ್ಚು ಉಪಯೋಗವಾಗಿಲ್ಲ. ಆದರೆ ಜನಮೆಚ್ಚುವುದು ಬರೆಯುವ ಶೈಲಿ ಮತ್ತು ನಿರೂಪಣಾ ಶೈಲಿ.

ಸಾಕಷ್ಟು ಸಲ ನನ್ನ ವೈದ್ಯಲೇಖನದಿಂದ ಪ್ರೇರೇಪಿತರಾಗಿ ನನ್ನನ್ನು ಭೇಟಿಯಾಗಿ, ಸಮಸ್ಯೆಗಳನ್ನು ತಿಳಿಸುವ ಮುನ್ನ ಹೇಳುವುದು, ‘ಸಾರ್ ದಯವಿಟ್ಟು ನನ್ನ ಈ ಸಮಸ್ಯೆಯನ್ನು ಯಾರಿಗೂ ಹೇಳಬೇಡಿ. ಮತ್ತು ಬರೆಯಬೇಡಿ ಸಾರ್’ ಎಂದು ಅವರಿಗೆ ಸಮಾಧಾನದ ಉತ್ತರ ಹೇಳುತ್ತೇನೆ. ಆದರೆ ಗಮನಿಸಬೇಕಾದ ವಿಷಯವೆಂದರೆ ಲೇಖನದಲ್ಲಿ ಮೂಡಿರುವ ಸಮಸ್ಯೆಗೆ ಸ್ಪಂದಿಸಿ ತಮ್ಮದೇ ಸಮಸ್ಯೆಯನ್ನು ಹೇಳುತ್ತಿರುವರು ಅಥವಾ ನನ್ನ ಸಮಸ್ಯೆಯನ್ನು ಮುಂದಿನ ಲೇಖನದಲ್ಲಿ ಬರೆದು ಪತ್ರಿಕೆಯಲ್ಲಿ ಪ್ರಕಟವಾದರೆ ಗತಿಯೇನು? ನನ್ನ ವೈಯಕ್ತಿಕ ಸಮಸ್ಯೆ ಪ್ರಪಂಚಕ್ಕೆ ಗೊತ್ತಾಗುವುದಿಲ್ಲ ಎಂಬ ಭಯ.

ಕೆಲವು ಪತ್ರಗಳ ಜೊತೆಗೆ ನನ್ನ ವಿಳಾಸಕ್ಕೆ ಮನಿಯಾರ್ಡರ್, ಚೆಕ್, ಮುಖಾಂತರವು ನನಗೆ ಸೇರಿದೆ. ಹಣ ತೆಗೆದುಕೊಳ್ಳದೆ ನಾನು ಅವರ ಸಮಸ್ಯೆಗಳನ್ನು ಉತ್ತರಿಸುವುದಿಲ್ಲವೇನೋ ಎಂಬ ಗೊಂದಲವು ಕೂಡ ಓದುಗರಿಗೆ ಇರಬಹುದು ಎನ್ನುವ ಅನುಭವವಾಗಿದೆ.

ನನ್ನ ಸಿಹಿ ಅನುಭವಕ್ಕೆ ಸದ್ಯಕ್ಕೆ ಕೊನೆಯಿಲ್ಲವೆಂಬುದು ಖಾತ್ರಿಯಾಗಿದೆ. ಹೀಗಾಗಿ ನಾನು ಬರೆಯುವುದನ್ನು ನಿಲ್ಲಿಸುವುದಿಲ್ಲ.

* * *