ರಾಘವ್ ಆಯುರ್ವೇದಿಕ್ ಸೆಂಟರ್, ೨೧೫, ೪ನೇ ಕ್ರಾಸ್, ರಹಮತ್‌ನಗರ (ಬಸ್‌ಸ್ಟಾಪ್), ಆರ್.ಟಿ.ನಗರ ಮುಖ್ಯರಸ್ತೆ, ಬೆಂಗಳೂರು-೩೨ ಮೊಬೈಲ್: ೯೪೪೮೧೮೨೦೩೭

 

“ಕುರಿ ಕೊಬ್ಬಿದಷ್ಟು ಕುರುಬನಿಗೆ ಲಾಭ. ಜನ ಕೊಬ್ಬಿದಷ್ಟೂ ವೈದ್ಯರಿಗೆ ಲಾಭ” ದೇಹದಲ್ಲಿ ಅಧಿಕಗೊಂಡ ಕೊಬ್ಬು ಅನೇಕ ವ್ಯಾಧಿಗಳಿಗೆ ತವರಾಗುವುದರಿಂದ  ಅದರ ಸಮತೋಲನದ ಬಗ್ಗೆ ಗಮನ ವಹಿಸಬೇಕು.

ಮೈಕಾಂತಿ, ಚರ್ಮದ ಹೊಳಪು, ನುಣುಪು, ಚಳಿ ತಡೆಯುವಿಕೆ, ಬಲ, ದೇಹದ ವಿವಿಧ ಅಂಗಾಂಶಗಳ ಉತ್ಪತ್ತಿ ಮತ್ತು ಸುಸ್ಥಿತಿಗೆ ಕಾರಣವಾಗಿರುವ ಮೇದಸ್ಸು. (ಕೊಬ್ಬಿನಂಶ) ಹೃದಯ ಮೂತ್ರಪಿಂಡ, ಕರುಳು ಮುಂತಾದ ಪ್ರಬಲ ಅಂಗಗಳಿಗೂ ರಕ್ಷಣೆಯನ್ನೊದಗಿಸುತ್ತದೆ. ಆದರೆ ಅದೇ ಮೇದಸ್ಸಿನ ಅಂಶ ದೇಹದಲ್ಲಿ ಅಸಮತೋಲನಗೊಂಡಾಗ ವ್ಯಕ್ತಿಯನ್ನು ಅನೇಕ ಬಾಧೆಗಳಿಗೆ ಈಡು ಮಾಡುವುದರಲ್ಲಿ ಸಂದೇಹವಿಲ್ಲ.

ವ್ಯಕ್ತಿಯ ದೇಹದ ಶೇ.೧೦ರಿಂದ ೧೫ರಷ್ಟು ತೂಕ ಕೊಬ್ಬಿನ ಅಂಶದಿಂದ ಕೂಡಿರುತ್ತದೆ. ಆಹಾರದಿಂದ ದೇಹಕ್ಕೆ ಒದಗುವ ಒಟ್ಟು ಶಕ್ತಿಯಲ್ಲಿ ಶೇ.೨೦ರಿಂದ ೩೦ರಷ್ಟು ಜಿಡ್ಡಿನ ಅಂಶದಿಂದಲೇ ಬರುತ್ತದೆ. ಸಾಮಾನ್ಯವಾಗಿ ಜಿಡ್ಡಿನ ಪದಾರ್ಥಗಳು ೨೦ ಡಿಗ್ರಿ ಸೆಲ್ಸಿಯಸ್‌ನಲ್ಲಿ ಘನರೂಪದಲ್ಲಿರುತ್ತದೆ. ಅವು ದ್ರವರೂಪದಲ್ಲಿದ್ದರೆ ಅದನ್ನೇ ನಾವು ಎಣ್ಣೆ ಎಂದು ಕರೆಯುತ್ತೇವೆ.

ಕೊಬ್ಬಿನಂಶದ ಮೂಲ:

೧. ಪ್ರಾಣಿಜನ್ಯ: ಬೆಣ್ಣೆ, ತುಪ್ಪ, ಹಾಲು, ಮೊಟ್ಟೆ, ಮಾಂಸ, ಮೀನು ಮುಂತಾದವು.
೨. ಸಸ್ಯಜನ್ಯ: ಶೇಂಗಾ, ಕೊಬ್ಬರಿ, ಸಾಸಿವೆ, ಎಳ್ಳುತಾಳೆ, ಸೂರ್ಯಕಾಂತಿ, ಸೊಯಾಬೀನ್, ಕುಸುಬೆ, ಜೋಳ, ಹತ್ತಿಬೀಜ ಮುಂತಾದವುಗಳಿಂದ ಬರುವ ಎಣ್ಣೆ.
೩. ಇತರೆ: ಅಕ್ಕಿ, ಬೇಳೆ, ಕಾಳು, ಗೋಧಿ, ಮುಂತಾದವುಗಳಲ್ಲಿ ಅಡಗಿರುವ ಅಲ್ಪ ಪ್ರಮಾಣದ ಅದೃಶ್ಯಕೊಬ್ಬು.

ಜಿಡ್ಡಿನ ಪದಾರ್ಥಗಳನ್ನು ಕಣ್ಣಿಗೆ ಕಾಣುವ ಹಾಗೂ ಕಾಣದ ಕೊಬ್ಬು ಎಂದು ಎರಡು ವಿಧವಾಗಿ ವಿಂಗಡಿಸಬಹುದು.

ಕಾಣುವ ಕೊಬ್ಬು: ಶೇಂಗಾ ಮುಂತಾದ ಬೀಜಗಳಿಂದಾದ ಎಣ್ಣೆಗಳು, ಬೆಣ್ಣೆ, ತುಪ್ಪ, ಮೊಟ್ಟೆ ಮೀನು ಮುಂತಾದವುಗಳಲ್ಲಿ ಕೊಬ್ಬನ್ನು ಪ್ರತ್ಯೇಕವಾಗಿ ಕಾಣಬಹುದು.

ಕಾಣದ ಕೊಬ್ಬು: ಅಕ್ಕಿ, ಬೇಳೆ, ಕಾಳು ಮುಂತಾದವುಗಳಲ್ಲಿ ಅಡಗಿರುವ ಕೊಬ್ಬನ್ನು ಪ್ರತ್ಯೇಕವಾಗಿ ಕಾಣಲಾಗದು.

ದಿನನಿತ್ಯದ ಆಹಾರ ಸೇವನೆಯಲ್ಲಿ ನಾವು ಅದೃಶ್ಯ ರೀತಿಯ ಕೊಬ್ಬನ್ನೇ ಜಾಸ್ತಿ ಬಳಸುವುದು ಸೂಕ್ತ. ಸಾಧಾರಣ ಶಾರೀರಿಕ ಕ್ರಮ ಕ್ರಮ ಮಾಡುವವರಿಗೆ ಪ್ರತಿನಿತ್ಯ ೨೦ರಿಂದ ೨೫ಗ್ರಾಂ ಜಿಡ್ಡಿನಾಂಶ ಸಾಕಾಗುತ್ತದೆ. ಅದರೆ ಹೆಚ್ಚಿನ ಶಾರೀರಿಕ ಶ್ರಮ ಮಾಡುವವರಿಗೆ ಪ್ರತಿನಿತ್ಯ ೩೦ರಿಂದ ೪೦ ಗ್ರಾಂ ಜಿಡ್ಡಿನಾಂಶ ಬೇಕಾಗುತ್ತದೆ.

ಒಂದು ಗ್ರಾಂ ಜಿಡ್ಡಿನಿಂದ ಒಂಭತ್ತು ಕಿಲೋ ಕ್ಯಾಲರಿಗಳ ಶಕ್ತಿದೊರೆಯುತ್ತದೆ. ಹಾಗಾಗಿ ಶಕ್ತಿ ನೀಡುವ ಆಹಾರ ಪದಾರ್ಥಗಳಲ್ಲಿ ಜಿಡ್ಡು ಪ್ರಮುಖ ಪಾತ್ರ ವಹಿಸುತ್ತದೆ.

ಸ್ಯಾಚುರೇಟೆಡ್ ಹಾಗೂ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಎಂದು ಕೊಬ್ಬಿನಲ್ಲಿ ಎರಡು ವಿಧ.ಮೊದಲನೆಯದಲ್ಲಿ ‘ಕೊಲೆಸ್ಟ್ರಾಲ್’ ಅಂಶ ಹೆಚ್ಚಿರುತ್ತದೆ. ಎರಡನೆಯದರ ಬಳಕೆಯೇ ದೇಹಕ್ಕೆ ಉತ್ತಮ. ಹೆಚ್ಚಾಗಿ ಪ್ರಾಣಿಜನ್ಯ ಕೊಬ್ಬಿನ ಪದಾರ್ಥಗಳು ಕೊಬ್ಬರಿ ಎಣ್ಣೆ, ತಾಳೆ ಎಣ್ಣೆ, ಡಾಲ್ಡಾ ಇವುಗಳಲ್ಲಿ ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‌ನ ಅಂಶ ಹೆಚ್ಚಿರುತ್ತದೆ. ಹಾಗಾಗಿ ಇವುಗಳ ಸೇವನೆ ಅಧಿಕಗೊಂಡಾಗ ಕೊಲೆಸ್ಟ್ರಾಲ್ ಅಂಶವೂ ದೇಹದಲ್ಲಿ ಅಧಿಕಗೊಳ್ಳುತ್ತದೆ.

ಆರೋಗ್ಯವಂತರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಪ್ರತಿ ಡೆಸಿಲೀಟರ್‌ಗೆ ೨೪೦ ಮಿಂಗ್ರಾಂ ಗಿಂತ ಹೆಚ್ಚಾಗದಂತೆ ನಿಗಾ ವಹಿಸಬೇಕು. ಹೃದ್ರೋಗ ಪೀಡಿತರದಲ್ಲಿ ಅದರ ಪ್ರಮಾಣ ೧೬೦ ಮಿ ಗ್ರಾಂ ಕ್ಕಿಂತ ಹೆಚ್ಚಾಗಬಾರದು.

ಅಕ್ಕಿ ತೌಡಿನಿಂದ ತೆಗೆದ ಎಣ್ಣೆಯೂ ಹಿತಕರ. ರಿಫೈನ್ಡ್‌ಎಣ್ಣೆಗಳಲ್ಲಿ ವಾಸನೆ ಇರುವುದಿಲ್ಲ ಹಾಗೂ ಗುಣದಲ್ಲಿ ಯಾವುದೇ ವ್ಯತ್ಯಾಸ ಕಂಡುಬರುವುದಿಲ್ಲ. ಇದರಲ್ಲಿ ರುಚಿಯ ಗುಣಮಟ್ಟವೂ ಹೆಚ್ಚಿರುತ್ತದೆ ಮತ್ತು ಶುದ್ಧವಾಗಿರುತ್ತದೆ.

ಎಣ್ಣೆ, ಬೆಣ್ಣೆ, ತುಪ್ಪ ಮುಂತಾದ ಜಿಡ್ಡಿನ ಪದಾರ್ಥಗಳು ಆಹಾರಕ್ಕೆ ಹೆಚ್ಚಿನ ರುಚಿ ಒದಗಿಸಿಕೊಡುತ್ತವಾದರೂ ಇವುಗಳಿಂದಾದ ಆಹಾರ ಪದಾರ್ಥಗಳು ಅದಷ್ಟೂ ತಾಜಾತನದಿಂದ ಕೂಡಿರಬೇಕು. ಬಿಸಿಯಾಗಿರುವ ಆಹಾರಕ್ಕೆ ಜಿಡ್ಡಿನ ಪದಾರ್ಥಗಳನ್ನು ಬಳಸುವುದು ಉತ್ತಮ.

ಈ ಹಿಂದೆ ತಿಳಿಸಿದ ಪ್ರಮಾಣದಲ್ಲಿ ಅಂದರೆ ೨೦ರಿಂದ ೪೦ ಗ್ರಾಂ ಜಿಡ್ಡಿನ ಅಂಶವನ್ನು ದೈಹಿಕ ಶ್ರಮ ಹಾಗೂ ವಯೋಮಿತಿಗನುಗುಣವಾಗಿ ಪ್ರತಿನಿತ್ಯ ಬಳಸಬೇಕು. ಇದರಲ್ಲಿ ದೃಶ್ಯ ಜಿಡ್ಡಿನ ಅಂಶ ಅರ್ಥಾತ್ ಎಣ್ಣೆ ಬೆಣ್ಣೆ ತುಪ್ಪ ಇವುಗಳ ಪ್ರಮಾಣ ೧೦ರಿಂದ ೧೫ಗಿಂತ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಉಳಿದ ಜಿಡ್ಡಿನ ಅಂಶ ನಾವು ಸೇವಿಸುವ ಇತರೆ ಆಹಾರ ಪದಾರ್ಥಗಳಲ್ಲಿನ ಅದೃಶ್ಯ ಕೊಬ್ಬಿನಿಂದ ದೊರೆಯುತ್ತದೆ.

ಬಾಲ್ಯದಲ್ಲಿ ದೇಹಕ್ಕೆ ಒದಗುವ ಒಟ್ಟು ಶಕ್ತಿಯಲ್ಲಿ ೪೦ರಿಂದ ೫೦ ರಷ್ಟನ್ನೂ ಜಿಡ್ಡಿನ ಪದಾರ್ಥಗಳೇ ಪೂರೈಸುತ್ತವೆ. ಆದರೆ ಮಧ್ಯವಯಸ್ಕರಲ್ಲಿ ಆ ಪ್ರಮಾಣ ಶೇ. ೨೦ರಿಂದ ೩೦ಕ್ಕೆ ಇಳಿಮುಖವಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಉತ್ತಮವೂ ಹೌದು.

ಕೊಬ್ಬಿನ ಅಸಮತೋನದಿಂದ ಬರುವ ಕೆಲವು ಪ್ರಮುಖ ವ್ಯಾಧಿಗಳು

೧. ಬೊಜ್ಜು: ಇವರಲ್ಲಿ ದೇಹದ ಶೇ. ೩೦ಕ್ಕಿಂತಲೂ ಹೆಚ್ಚು ತೂಕ ಮೇದಸ್ಸಿನಿಂದ ಕೂಡಿರುತ್ತದೆ. ಇದು ಅನೇಕ ವ್ಯಾಧಿಗಳಿಗೆ ಅನುವು ಮಾಡಿಕೊಡುವುದರಿಂದ ಅಂಥವರು ಆಹಾರ ಮತ್ತು ವ್ಯಾಯಾಮದ ಬಗ್ಗೆ ಹೆಚ್ಚು ಗಮನ ಕೊಡಬೇಕು.

೨. ಕರೋನರಿ ಹೃದ್ರೋಗ: ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುವುದೇ ಇದಕ್ಕೆ ಪ್ರಮುಖ ಕಾರಣ.

೩. ಮಧುಮೇಹ: ಸಿಹಿ ಹಾಗೂ ಕೊಬ್ಬಿನ ಪದಾರ್ಥಗಳ ಮೇಲಿನ ಮೋಹ ಮತ್ತು ಶ್ರಮರಹಿತ ಜೀವದಿಂದಾಗಿ ಬರುವ ಕಾಯಿಲೆ.

೪. ಕ್ಯಾನ್ಸರ್: ಹೆಚ್ಚು ಕೊಬ್ಬಿನ ಸೇವನೆಯಿಂದಾಗಿ ಕರುಳು ಹಾಗೂ ಸ್ತನ ಕ್ಯಾನ್ಸರ್ ಬರುತ್ತವೆಂದು ಹಲವು ಅಧ್ಯಯನಗಳು ದೃಢಿಕರಿಸಿವೆ.

ಕೊಬ್ಬಿನಾಂಶ ಕಡಿಮೆಯಾದಲ್ಲಿ

೧. ಕೃಶತ್ವ: ತೂಕ ಹಾಗೂ ಮೈಕಟ್ಟಿನಲ್ಲಿ ಅಗತ್ಯ ಪ್ರಮಾಣಕ್ಕಿಂತ ಕಡಿಮೆ ಇರುವುದು.

೨. ಚರ್ಮವ್ಯಾಧಿಗಳು: ಚರ್ಮದ ಸುಕ್ಕುಗಟ್ಟುವಿಕೆ, ಒರಟುತನ, ಒಡೆಯುವುದು (ಸೀಳುವುದು)

೩. ಸಂಧಿನೋವು, ಮೈಕೈ ನೋವು: (ಕುಳಿತೇಳುವಾಗ ‘ಟಕ್ ಟಕ್’ ಶಬ್ದ ಬರುವುದು) ಇವೆಲ್ಲ ದೇಹದಲ್ಲಿ ಜಿಡ್ಡಿನಾಂಶ ಕಡಿಮೆಯಾಗುವುದರಿಂದ ಬರುತ್ತವೆ.

ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ಎಣ್ಣೆಗಳ ಗುಣಪಟ್ಟಿ

ಎ-ಉತ್ತಮ
ಬಿ-ಮದ್ಯಮ
ಸಿ-ಅಹಿತಕರ

ಎಣ್ಣೆಗಳ ಹೆಸರು

ಸ್ಯಾಚುರೇಟೆಡ್
ಪ್ಯಾ.ಆ (ಶೇಕಡವಾರು)

ಪಾಲಿಅನ್‌ಸ್ಯಾಚುರೇಟೆಡ್
ಪ್ಯಾ.ಆ(ಶೇಕಡವಾರು)

ಸಿ ಕೊಬ್ಬರಿಎಣ್ಣೆ ೯೨
ಸಿ ತಾಳೆ ಎಣ್ಣೆ ೪೬ ೧೦
ಬಿ ಶೇಂಗಾ ಬೀಜದ ಎಣ್ಣೆ ೧೯ ೩೧
ಬಿ ಹತ್ತಿಬೀಜದ ಎಣ್ಣೆ ೨೫ ೫೦
ಕುಸುಬೆ ಎಣ್ಣೆ ೧೦ ೭೫
ಸೂರ್ಯಕಾಂತಿ ಎಣ್ಣೆ ೬೫
ಜೋಳದ ಎಣ್ಣೆ ೬೫
ಸೋಯಾಬಿನ್ ಎಣ್ಣೆ ೧೪ ೬೨
ಎಳ್ಳೆಣ್ಣೆ ೨೦ ೪೦

* * *