ಆರೋಗ್ಯವೇ ಭಾಗ್ಯವೆಂದು ಎಲ್ಲ ಜನಾಂಗಗಳು ಪರಿಗಣಿಸಿವೆ. ‘ಯಾರು ಆರೋಗ್ಯ ಹೊಂದಿದ್ದಾರೋ ಅವರಿಗೆ ಭರವಸೆಯಿದೆ, ಯಾರಿಗೆ ಭರವಸೆಯಿದೆಯೋ ಅವರಿಗೆ ಎಲ್ಲವೂ ಇದೆ ಎಂದು ಅರಬ್ಬಿಗಾದೆ ಹೇಳುತ್ತದೆ. ಆರೋಗ್ಯ ಕಾಯ್ದುಕೊಂಡು ದೇಹದಾರ್ಢ್ಯ ಬೆಳೆಸಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ. ‘ನಿಮ್ಮ ಆರೋಗ್ಯದ ರಕ್ಷಣೆ ಮಾಡಿಕೊಳ್ಳಿ. ನೀವು ಅದನ್ನು ಅಲಕ್ಷಿಸುವ ಅಧಿಕಾರ ಪಡೆದಿಲ್ಲ. ಹಾಗೆ ಮಾಡಿ ನಿಮಗೂ ಬಹುಶಃ ಇತರರಿಗೂ ಭಾರವಾಗಬೇಡಿ’ ಎಂದು ಇಂಗ್ಲೀಷ್‌ಕವಿ ವಿಲಿಯಂ ಹಾಲ್ ಮಾಡಿದ ಸಸೂಚನೆಯ ಮಹತ್ವ ಇಂದು ಎಲ್ಲರಿಗೂ ಮನವರಿಕೆಯಾಗಿದ್ದು ‘ಜೀವನ’ ಎಂದರೆ ಬರೀ ಬದುಕುವುದಲ್ಲ ಅದು ಚೆನ್ನಾಗಿ ಬದುಕುವುದಾಗಿದೆ ಎಂದು ತಿಳಿದಿದ್ದಾರೆ.

‘ನಮ್ಮ ಆರೋಗ್ಯ ಕಾಪಾಡುವುದು ನಮ್ಮ ನೈತಿಕ ಮತ್ತು ಧಾಮಿರ್ಕ ಕರ್ತವ್ಯವಾಗಿದೆ. ಆರೋಗ್ಯವೇ ಎಲ್ಲ ಸಾಮಾಜಿಕ ಗುಣಧರ್ಮಗಳಿಗೆ ತಳಹದಿ. ನಾವು ಅನಾರೋಗ್ಯದಿಂದ ಇರುವಾಗ ಯಾರಿಗೂ ಉಪಯೋಗವಾಗುವುದಿಲ್ಲ’, ಎಂದು ಇಂಗ್ಲೀಷ್ ಲೇಖಕ ಮತ್ತು ನಿಘಂಟುಕಾರ ಸಾಮ್ಯುಯೆಲ್ ಜಾನಸನ್  ಹೇಳಿದ್ದಾನೆ. ಆರೋಗ್ಯ ಸಂವರ್ಧನೆಯ ಈ ಕಾರ್ಯದಲ್ಲಿ ಪ್ರಾಥಮಿಕ ಸ್ವಾಸ್ಥ್ಯ ಪಾಲನೆಯು ಬಹುಮುಖ್ಯವಾದುದು. ಅದರ ಮೂಲಕವಾಗಿ ಸಮಾಜದ ಮೂಲ ಘಟಕವಾದ ವ್ಯಕ್ತಿಯು ತನ್ನ ಆರೋಗ್ಯ ಕಾಯ್ದುಕೊಂಡು ಬಲಸಂವರ್ಧನೆಯನ್ನು ಮಾಡಿಕೊಳ್ಳುವ ಅವಕಾಶ ಪಡೆಯುತ್ತಾನೆ. ಯೋಗ್ಯ ಪುಷ್ಠಿಕರ ಆಹಾರ, ಪರಿಶುದ್ಧ ನೀರು, ನಿರ್ಮಲ ಪರಸರ, ತಾಯಂದಿರ-ಮಕ್ಕಳ ಆರೋಗ್ಯ, ರೋಗ ನಿರೋಧಕ ಲಸಿಕೆ ನೀಡಿಕೆ, ರೋಗಗಳ ಚಿಕಿತ್ಸೆ, ಸ್ವಾಸ್ಥ್ಯ ರಕ್ಷಣೆಯ ಬಗ್ಗೆ ತಿಳಿವಳಿಕೆ ಮತ್ತು ರೋಗ ಚಿಕಿತ್ಸೆಗೆ ಸಹಾಯ ಇವುಗಳೆಲ್ಲ ಪ್ರಾಥಮಿಕ ಸ್ವಾಸ್ಥ್ಯ ಪಾಲನೆಯ ಕಾರ್ಯದಿಂದ ಲಭಿಸುತ್ತವೆ. ಈ ದಿಶೆಯಲ್ಲಿ ವೈದ್ಯ ಪ್ರಮುಖ ವಹಿಸುತ್ತಾನೆ. ಸ್ವಾಸ್ಥ್ಯವೆಂದರೆ ಅದು ರೋಗ ಅಥವಾ ದೇಹದಾರ್ಢ್ಯ ಇಲ್ಲದಿರುವಿಕೆ ಎಂದಲ್ಲ. ಅದು ದೈಹಿಕ ಮಾನಸಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಸುಸ್ಥಿತಿಯಾಗಿದ್ದು, ಮನುಷ್ಯನ ಮೂಲಭೂತ ಹಕ್ಕಾಗಿದೆ. ಆ ದಿಶೆಯಲ್ಲಿ ವೈದ್ಯ ಕಾರ್ಯ ಮಾಡುತ್ತ ಆರೋಗ್ಯ ಸಂವರ್ಧನೆಗೆ ಸಹಾಯವಾಗುತ್ತಾನೆ. ರೋಗ ಬಾರದಂತೆ ಪ್ರಯತ್ನಿಸುತ್ತಾನೆ. ರೋಗ ಬಂದಾಗ ಅದರ ನಿದಾನ ಮಾಡಿ, ಅದಕ್ಕೆ ಚಿಕಿತ್ಸೆ ನೀಡಿ ಆತನನ್ನು ಪುನಃ ಮುನ್ನಾಸ್ಥಿತಿಗೆ ಬರುವಂತೆ ಮಾಡುತ್ತಾನೆ. ಅದಕ್ಕಾಗಿಯೇ ರೋಗವಿದ್ದಾಗ ವೈದ್ಯ ತಂದೆಯಿದ್ದಂತೆ,  ರೋಗದಿಂದ ಚೇತರಿಸಿಕೊಳ್ಳುವಾಗ ಸ್ನೇಹಿತನಿದ್ದಂತೆ ಮತ್ತು ಆರೋಗ್ಯ ಮರಳಿದ ಮೇಲೆ ಆತ ರಕ್ಷಕನಿದ್ದಂತೆ ಎಂದು ಸಂಸ್ಕೃತ ಸುಭಾಷಿತ ಹೇಳುತ್ತದೆ. ಜನರ ಸ್ವಾಸ್ಥ್ಯ ಸಂವರ್ಧನೆ ಮತ್ತು ರಕ್ಷಣೆ ನಿರಂತರ ವಾದ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಪೂರಕವಾಗಿದ್ದು ಅದು ಸುಖಕರ ಜೀವನಕ್ಕೆ ಸಹಾಯಕವಾಗಿದೆ.

ಈ ದಿಶೆಯಲ್ಲಿ ಇಂದು ಗ್ರಾಮಾಂತರ ಪ್ರದೇಶಗಳಲ್ಲಿನ ಮತ್ತು ನಗರದ ಕೊಳಚೆ ಪರದೇಶಗಳಲ್ಲಿನ ವೈದ್ಯ ಸಮಾಜದ ಬಹುಮುಖ್ಯ ಆರೋಗ್ಯ ಸಮಸ್ಯೆಗಳತ್ತ ಗಮನ ನೀಡಿ ಅವರ ಬಲಸಂವರ್ಧನೆ, ನಿರೋಧಕ, ಚಿಕಿತ್ಸೆಕ ಮತ್ತು ಪುರನರುಜ್ಜೀವನವ ವ್ಯವಸ್ಥೆಯನ್ನು ಸಾಧಿಸಬೇಕಾಗಿದೆ. ಪ್ರಚಲಿತರವಿರುವ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳನ್ನು ಪ್ರತಿಬಂಧಿಸಿ, ನಿಯಂತ್ರಿಸುವ ವಿಧಾನಗಳ ಬಗ್ಗ ಎತಿಳಿವಳಿಕೆ ನೀಡುವುದು. ಆಹಾರ ಪೂರೈಕೆ ಮತ್ತು ಯೋಗ್ಯ ಪೌಷ್ಠಿಕ ಆಹಾರ ಸೇವನೆಗೆ ಉತ್ತೇಜನ, ಪರಿಶುದ್ಧ ಕುಡಿಯುವ ನೀರಿನ ಪೂರೈಕೆ ಮತ್ತು ಅವಶ್ಯಕ ನೈರ್ಮಲ್ಯ ಕಾಯ್ದುಕೊಳ್ಳುವಿಕೆ, ಕುಟುಂಬ ಕಲ್ಯಾನವನ್ನೊಳಗೊಂಡ ತಾಯಂದಿರ ಮತ್ತು ಮಕ್ಕಳ ಆರೋಗ್ಯ ರಕ್ಷಣೆ, ಮುಖ್ಯ ಸೋಂಕು ರೋಗಗಳ ವಿರುದ್ಧ ಲಸಿಕೆ ನೀಡಿಕೆ, ಸ್ಥಾನಿಕವಾಗಿ ಪ್ರಚಲಿತವಿರುವ ರೋಗಗಳ ಪ್ರತಿರೋಧ ಮತ್ತು ನಿಯಂತ್ರಣ, ಸಾಮಾನ್ಯ ರೋಗಗಳಿಗೆ ಮತ್ತು ಗಾಯಗಳಿಗೆ ಯೋಗ್ಯ ಚಿಕಿತ್ಸೆ ಮತ್ತು ಅವಶ್ಯಕ ಔಷಧಗಳ ಪೂರೈಕೆಗಳನ್ನೊಳಗೊಂಡಿದೆ.

ರೋಗಾಣುಜನ್ಯ ರೋಗಗಳು, ಸಾಂಕ್ರಾಮಿಕ ಜಾಡ್ಯಗಳು ಮತ್ತು ನ್ಯೂನ ಪೋಷಣೆಯಿಂದ ಬರುವ ರೋಗಗಳನ್ನು ತಡೆಗಟ್ಟುವಲ್ಲಿ ಎಳೆಯರ ಮತ್ತು ಗರ್ಭಿಣಿಯರ ಸಾವುನೋವುಗಳನ್ನು ತಡೆಗಟ್ಟುವಲ್ಲಿ ಗ್ರಾಮಾಂತರ ಮತ್ತು ನಗರದ ಸ್ವಾಸ್ಥ್ಯ ಕೇಂದ್ರಗಳು ಬಹು ಪರಿಣಾಮಕಾರಿ ಪಾತ್ರವಹಿಸಿವೆ. ಎಳೆಯ ಮಕ್ಕಳಿಗೆ ಮಾರಕವಾದ ಡಿಫ್ತೀರಿಯಾ, ಧನುರ್ವಾಯು, ನಾಯಿಕೆಮ್ಮು, ಪೋಲಿಯೋ, ಕ್ಷಯ ಮತ್ತು ಗೊಬ್ಬರ ರೋಗಗಳು ಬಾರದಂತೆ ನೋಡಿಕೊಳ್ಳಬೇಕು.

ಸ್ಟ್ರೆಪ್ಟೊಕಾಕಸ್ ಸೋಂಕಿನಿಂದ ಗಂಟಲು ನೋವು ಕಾಣಿಸಿಕೊಂಡಾಗ ಹಿಗ್ಗುವಿಕೆ ರೋಗದ ತೊಂದರೆ ತಪ್ಪಿಸಲು ವೈದ್ಯ ಕೆಲವು ಕಾಲ ಜೀವಾಣು ರೋದಕಗಳನ್ನು ಕೊಡಬೇಕು. ಶಾಲಾ ಮಕ್ಕಳ ಆರೋಗ್ಯವನ್ನು ನ್ಯೂನ ಪೋಷಣೆಯ ಪರಿಣಾಮಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಬೇಕು.

ನವಜಾತ ಶಿಶುಗಳಿಗೆ ಎದೆ ಹಾಲು ಕೊಡುಗೆಯ ಮಹತ್ವವನ್ನು ತಾಯಂದಿರಿಗೆ ಹೇಳಿ, ಅವರು ಮೊಲೆಹಾಲಿನ ಬದಲು ಬಾಟಲಿ ಹಾಲಿನತ್ತ ಧಾವಿಸದಂತೆ ನೋಡಬೇಕು. ಗರ್ಭತಳೆದ ಕಾಲದಲ್ಲಿ ಮತ್ತು ಹಾಲುಣಿಸುವ ಕಾಲದಲ್ಲಿ ಅವರ ಆರೋಗ್ಯ ಪರಿಶೀಲಿಸಿ, ಯೋಗ್ಯ ಬಲಸಂವರ್ಧಕಗಳು ಮತ್ತು ಪುಷ್ಠಿಕರ ಆಹಾರವನ್ನು ತೆಗೆದುಕೊಳ್ಳುವ ಮಹತ್ತ್ವ ಒತ್ತಿ ಹೇಳಬೇಕು. ಅವರು ತಮ್ಮ ಆರೋಗ್ಯವನ್ನು ತನ್ಮೂಲಕ ಬೆಳೆಯುವ ಕೂಸಿನ ಸ್ವಾಸ್ಥ್ಯ ಸಂವರ್ಧನೆಗೆ ಸಹಾಯ ಮಾಡಬೇಕು.

ಚಿಕ್ಕ ಕುಟುಂಬ ಕೊಡ ಮಾಡುವ ಸುಖ ಸಂತೋಷದ ಬಗ್ಗೆ ಮಾಹಿತಿ ನೀಡಿ ಅವರ ಕುಟುಂಬ ಚಿಕ್ಕದಾಗಿರುವಂತೆ ಮತ್ತು ಒಂದು ಹೆರಿಗೆಗೂ ಮತ್ತೊಂದಕ್ಕೂ ಸಾಕಷ್ಟು ಅಂತರವನ್ನು ಗರ್ಭನಿರೋಧಕಗಳ ಬಳಕೆಯಿಂದ ಸಾಧಿಸುವ ಬಗ್ಗೆ ತಿಳಿಸಿ ಕುಟುಂಬದ ಸೌಖ್ಯ ಹೆಚ್ಚುವಂತೆ ಮಾಡುವಲ್ಲಿ ವೈದ್ಯ ಸಹಾಯ ಮಾಡುತ್ತಾನೆ.

ಅನೇಕ ಹಳ್ಳಿಗಳು ನೀರಿನಿಂದ ಹೊತ್ತು ತರಬೇಕಾಗುತ್ತದೆ. ಇವುಗಳಲ್ಲಿ ಮಲಮೂತ್ರ ವಿಸರ್ಜನೆ, ಕಶ್ಮಲಗಳ ಸೇರಿಕೆ, ಪ್ರಾಣಿ, ಬಟ್ಟೆಗಳನ್ನು ತೊಳೆಯುವುದರಿಂದ ನೀರು ಕಲುಷಿತಗೊಂಡು ರೋಗಾಣು ಜೀವಿಗಳ ಬೆಳವಣಿಗೆಗೆ ಯೋಗ್ಯ ಭೂಮಿಕೆಯನ್ನೊದಗಿಸುತ್ತದೆ. ಕಾಲರಾ, ವಾಂತಿಭೇದಿ, ವಿಷಮಶೀತ ಜ್ವರ ಕಾಮಾಲೆ ಪೋಲಿಯೋ ರೋಗಗಳಿಗೆ ಜನ ಈಡಾಗುತ್ತಾರೆ. ಪರಿಶುದ್ಧ ನೀರು ಜಗತ್ತಿನಲ್ಲಿ ಮೊಟ್ಟ ಮೊದಲನೆಯ ಔಷಧಿ ಎಂದು ಸ್ಲೋವಾಕಿಯನ್ ಗಾದೆ ಹೇಳುತ್ತದೆ. ಕಲ್ಮಶ ಕುಡಿಯುವ ನೀರಿನೊಡನೆ ಮಿಶ್ರವಾಗದಂತೆ ನೋಡಿಕೊಳ್ಳುವ ಬಗ್ಗೆ ತಿಳಿವಳಿಕೆಯನ್ನು ನೀಡಬೇಕು. ತಮ್ಮ ವೈಯಕ್ತಿಕ ನೈರ್ಮಲ್ಯ ಮತ್ತು ಪರಿಸರ ನೈರ್ಮಲ್ಯ ಕಾಯ್ದಿರಿಸಿದಲ್ಲಿ ಅನೇಕ ರೋಗಗಳು ಬಾರದಂತೆ ತಡೆಯುಂಟಾಗುತ್ತದೆ.

ಹೊಲ ಗದ್ದೆಗಳು, ರಸ್ತೆಗಳಲ್ಲಿ ಕೆಲಸ ಮಾಡುವಾಗ ಅನೇಕ ಬಾರಿ ಗಾಯಗಳುಂಟಾಗುತ್ತವೆ. ಅವುಗಳನ್ನು ಅಲಕ್ಷಿಸಿದಾಗ ಧನುರ್ವಾಯುವಿನಂತಹ ರೋಗ ತಲೆದೋರುವುದನ್ನು ಕಾಣುತ್ತೇವೆ. ಗಾಯಗಳಿಗೆ ಮದ್ದು ನೀಡಿ ಪಟ್ಟಿ ಕಟ್ಟಿ ನಿರೋಧಕ ಲಸಿಕೆಗಳನ್ನು ಕೊಡಬೇಕು. ನ್ಯೂನ ಪೋಷಣೆಯಿಂದ ಇರುಳ್ಗುರುಡು, ಕಾರ್ದೋಗಲು, ರಕ್ತ ಕೊರೆ, ಅಭದ್ರ ಮೂಳೆ, ರಕ್ತಕೊರೆ ಸುಸ್ತು, ಉಬ್ಬಸ, ಕಾಲುಬಾವು ಮುಂತಾದ ತೊಂದರೆಗಳು ಗೋಚರಿಸುತ್ತವೆ. ಅವರ ರೋಗ ನಿರೋಧಕ ಸಾಮರ್ಥ್ಯ ಕುಗ್ಗುತ್ತದೆ. ಅವರ ಆಹಾರದ ಬಗ್ಗೆ ಸಲಹೆ ನೀಡಿ ಹಾಲು ಹೈನು ವಸ್ತುಗಳು, ತರಕಾರಿ, ಹಣ್ಣುಗಳು ಅದರಲ್ಲಿ ಸೇರ್ಪಡೆಯಾಗುವಂತೆ ನೋಡಿಕೊಳ್ಳಬೇಕು. ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಕಬ್ಬಿಣ, ಕ್ಯಾಲ್ಸಿಯಂಗಳನ್ನು ಪೂರಕವಾಗಿ ನೀಡಬೇಕು. ದ್ರವರೂಪಿ ದೆವ್ವವಾದ ಅಲ್ಕೋಹಾಲ್ ಅನೇಕರ ಹಾಳುಮಾಡಿ ಜಠರ ಈಲಿಯ ರೋಗಗಳಿಗೆ ಕಾರಣವಾಗುತ್ತದೆ. ಕುಡಿತದಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಿ ಅವರು ಸುರೆಯ ದಾಸರಾಗುವದನ್ನು ತಪ್ಪಿಸಬೇಕು.

ಕ್ಷಯ ರೋಗ ತುಂಬಾ ಸಾಮಾನ್ಯ, ಅದರ ಚಿಕಿತ್ಸೆಯನ್ನು ಸಮರ್ಪಕವಾಗಿ ನಿಗದಿತ ಕಾಲಾವಧಿಯಲ್ಲಿ ಕೈಗೊಳ್ಳದಿದ್ದರೆ ಕ್ಷಯಾಣುಗಳು ಅಜೇಯತ್ವ ಹೊಂದಿ ರೋಗ ಚಿಕಿತ್ಸೆಗೆ ಮಣಿಯದಂತಾಗುತ್ತವೆ. ಅದನ್ನು ತಪ್ಪಿಸಲು ಕ್ರಮಬದ್ಧವಾಗಿ ಔಷಧಿ ಸೇವನೆ ಮಾಡುವುದರ ಅಗತ್ಯವನ್ನು ಒತ್ತಿಹೇಳಬೇಕು. ಅದೇ ರೀತಿ ಅಪಸ್ಮಾರ, ಕುಷ್ಠದಂತಹ ರೋಗಗಳಿಗೆ ಚಿಕಿತ್ಸೆಯನ್ನು ದೀರ್ಘಾವಧಿ ಕಾಲ ಕೈಕೊಳ್ಳಬೇಕು. ಏರಿದ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತ, ಲಕ್ವ, ಕಷ್ಟದ ಹೆರಿಗೆ ಮತ್ತು ನಂಜು, ಇವುಗಳನ್ನು ಗುರುತಿಸಿ ಹೆಚ್ಚಿಸಿ ಪರೀಕ್ಷೆಯನ್ನು, ತಜ್ಞ ಚಿಕಿತ್ಸಯನ್ನು ರೋಗಿಗಳಿಗೆ ದೊರಕಿಸಿಕೊಡಬೇಕು. ಇಂತಹ ಸನ್ನಿವೇಶಗಳು ಸಾಮಾನ್ಯ. ಅಂತೆಯೇ ತೀವ್ರತೆರನಾದ ರಕ್ತಕೊರೆ, ಮೂಳೆ ಮುರಿತ, ಕರುಳ ಬಾಲದುರಿತ, ಒಡಲ ತುರ್ತು ಪರಿಸ್ಥಿತಿ, ರಂಧ್ರಗೊಂಡ ಪಚನಿಕನಾಳ, ಪಕ್ಕಪರೆಯಲ್ಲಿ ಗಾಳಿ ಸೇರಿಕೆ, ಮುಂತಾದ ಪರಿಸ್ಥಿತಿಗಳನ್ನು ಕೂಡಲೇ ಗುರುತಿಸಿ ಚಿಕಿತ್ಸೆಗೆ ಏರ್ಪಾಡು ಮಾಡಬೇಕು.

ವೈದ್ಯಸಾಹಿತಿಯಾಗಿನನ್ನಅನುಭವ
ಬರವಣಿಗೆಯಲ್ಲಿ ಸಂತೋಷವನ್ನು ಕಾಣುತ್ತೇನೆ
– ಡಾ.ಪಿ.ಎಸ್.ಶಂಕರ್ವೈದ್ಯ ವಿಷಯಗಳಿಗೆ ಸಂಬಂಧಿಸಿದ ಬರವಣಿಗೆಯನ್ನು ವೈದ್ಯ ವಿಜ್ಞಾನದ ಅಧ್ಯಯನ ಮಾಡಿದ ವ್ಯಕ್ತಿಗಳು ಮಾಡುವುದು ಹೆಚ್ಚು ಸೂಕ್ತ ಎಂದು ನನ್ನ ಅನಿಸಿಕೆ. ಕೇವಲ ವಿಷಯ ಜ್ಞಾನ ಹೊಂದಿದ್ದರೆ ಸಾಲದು, ಅವರು ಭಾಷಾ ಜ್ಞಾನವನ್ನೂ ಅತ್ಯಗತ್ಯವಾಗಿ ಪಡೆದಿರಬೇಕು. ಜೊತೆಯಲ್ಲಿ ಸಾಹಿತ್ಯ, ಜನಪದ ಮತ್ತು ಜನಜೀವನದ ಬಗ್ಗೆ ವ್ಯಾಪಕ ಓದು ಇದ್ದರೆ, ಅದು ಬರವಣಿಗೆಗೆ ಹೆಚ್ಚಿನ ಮೆರುಗನ್ನು ನೀಡುತ್ತದೆ.

ಕನ್ನಡ ಮಾಧ್ಯಮದಲ್ಲಿ ವಿಜ್ಞಾನವನ್ನು ಪ್ರೌಢಶಾಲೆ ಮುಗಿಸುವವರೆಗೂ ಓದಿದ ನಾನು ಇಂಗ್ಲಿಷ್‌ನ್ನು ಒಂದು ಭಾಷೆಯಾಗಿ ಅಭ್ಯಸಿಸಿದುದರಿಂದ ಇಂಟರ‍್ಮೀಡಿಯಟ್ ಕಾಲೇಜಿನಲ್ಲಿ ಇಂಗ್ಲಿಷ್ ಮೂಲಕ ವಿಜ್ಞಾನವನ್ನು ಮತ್ತು ವೈದ್ಯಕಾಲೇಜಿನಲ್ಲಿ ವೈದ್ಯ ವಿಷಯವನ್ನು ಅಭ್ಯಸಿಸುವಲ್ಲಿ ಯಾವ ತೊಂದರೆಯುಂಟಾಗಿರಲಿಲ್ಲ.

ಕಥೆ, ನಾಟಕ, ಕವನಗಳನ್ನು ರಚಿಸುವ ಹವ್ಯಾಸವನ್ನು ವಿದ್ಯಾರ್ಥಿ ದೆಶೆಯಿಂದಲೇ ಬೆಳೆಸಿಕೊಂಡಿದ್ದ ನಾನು ಆ ಬಗೆಯ ಸಾಹಿತ್ಯ ರಚನೆ ಮಾಡುವವರು ಕನ್ನಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇರುವುದರಿಂದ ನನ್ನ ಬರವಣಿಗೆಯನ್ನು ವೈದ್ಯ ವಿಜ್ಞಾನಕ್ಕೆ ಸೀಮಿತಗೊಳಿಸುವ ನಿರ್ಧಾರಕ್ಕೆ ಬಂದು, ಆ ವಿಷಯಕ್ಕೆ ಸಂಬಂಧಿಸಿದ ಬರವಣಿಗೆಯನ್ನು ಮಾಡುತ್ತ ನಾಲ್ಕು ದಶಕಗಳನ್ನು ಕಳೆದಿದ್ದೇವೆ.

ವೈದ್ಯ ವಿಜ್ಞಾನ ಬರವಣಿಗೆಗೆ ವಿಷಯದ ಆಯ್ಕೆ ಕಷ್ಟಕರ. ಹಿಂದೆ ಆಕಾಶವಾಣಿ, ವಿಶ್ವಕೋಶಕ್ಕೆ ಸಂಬಂಧಿಸಿದವರು, ವಿಶ್ವವಿದ್ಯಾಲಯ ಪ್ರಸಾರಾಂಗದವರು ಕೇಳಿ ಸೂಚಿಸುತ್ತಿದ್ದ  ವಿಷಯಗಳನ್ನು ಕುರಿತ ಲೇಖನಗಳನ್ನು ಬರೆಯುತ್ತಿದ್ದೆ. ಆಮೇಲೆ ನಾನು ಹೊಂದಿದ್ದ ವಿಷಯ ಜ್ಞಾನದ ಹಿನ್ನೆಲೆಯಲ್ಲಿ ಸಂಬಂಧಿಸಿದ ಪುಸ್ತಕ, ಪತ್ರಿಕೆಗಳನ್ನು ಓದಿ, ಟಿಪ್ಪಣಿ ಮಾಡಿ, ನಂತರ ಅವುಗಳನ್ನು ಕ್ರೋಢೀಕರಿಸಿ ಬರೆಯಲು ಪ್ರಾರಂಭಿಸಿದೆ; ಲೇಖನಕ್ಕೆ ಪ್ರಾರಂಭ ಮತ್ತು ಅಂತ್ಯವಿದೆ. ಅವರೆಡರ ಮಧ್ಯ ವಿಷಯದ ವಿಶಾಲ ಒಡಲು. ನಾನು ಹೇಳಬೇಕೆಂಬುದನ್ನು ಕಡಿಮೆ ಶಬ್ದಗಳಲ್ಲಿ ಸುತ್ತಬಳಸು ಇಲ್ಲದೇ ನೇರವಾಗಿ ಮತ್ತು ಸ್ಪಷ್ಟವಾಗಿ ಬರೆಯುವುದು ನನ್ನ ಪದ್ಧತಿ. ಬರೆದುದನ್ನು ಪುಷ್ಟೀಕರಿಸಲು ಗಾದೆ, ಒಗಟು, ಪಡೆನುಡಿಗಳು ಮತ್ತು ಸುಭಾಷಿತಗಳನ್ನುಸಂದರ್ಭೋಚಿತವಾಗಿ ಬಳಸುತ್ತೇನೆ.

ಪ್ರತಿದಿನ ಪತ್ರಿಕೆಗಳನ್ನು ಓದುವಾಗ ವೈದ್ಯ ವಿಷಯಕ್ಕೆ ಸಂಬಂಧಿಸಿದ ವರದಿಗಳು, ಹೊಸ ಕಾಯಿಲೆಗಳು, ಹೊಸ ರೂಪಧಾರಣ ಮಾಡಿದ ಹಳೆಯ ಕಾಯಿಲೆಗಳು, ಹೊಸ ಚಿಕಿತ್ಸಾ ವಿಧಾನಗಳು, ಹೊಸ ಸಂಶೋಧಕರು ಲೇಖನಕ್ಕೆ ಹೂರಣವನ್ನು ಒದಗಿಸಿ ಕೊಡುತ್ತವೆ. ವಿಶ್ವ ಆರೋಗ್ಯ  ದಿನಾಚರಣೆ, ನೋಬೆಲ್ ಪ್ರಶಸ್ತಿ, ವಿವಿಧ ರೋಗಗಳಿಗೆ ಸಂಬಂಧಿಸಿದ ವಾರ್ಷಿಕ ದಿನಗಳ ಹೊಸ ವಿಷಯಗಳನ್ನು ಬರೆಯುವಂತೆ ಮಾಡುತ್ತವೆ. ಅವುಗಳ ಬಗೆಗಿನ ವಿಷಯವನ್ನು ಬೇರೆ ಬೇರೆ ಮೂಲಗಳಿಂದ (ಪುಸ್ತಕ, ಪತ್ರಿಕೆ, ಅಂತರ್ಜಾಲ) ಸಂಗ್ರಹಿಸಿ, ಆವಿಷಯದ ಬಗ್ಗೆ ಇತಿಹಾಸ ಕೊಡಮಾಡುವ ಅಂಶಗಳನ್ನು ಸೇರಿಸಿ ಬರೆಯುವುದು ನನ್ನ ರೂಢಿ. ಬರೆದ ಮೇಲೆ ಅದಕ್ಕೊಂದು ಆಕರ್ಷಕ ಶಿರೋನಾಮೆಯನ್ನು ನೀಡಲು ಚಿಂತನೆ.

ಈಗಾಗಲೇ ಪ್ರಚಲಿತ ರೋಗಗಳ ಬಗ್ಗೆ ಮಾಹಿತಿಯನ್ನು ವೈದ್ಯಪುಸ್ತಕಗಳು ಒದಗಿಸಿಕೊಡುತ್ತವೆ. ದೇಹರಚನೆ ಬಗ್ಗೆ, ವಿವಿಧ ಅಂಗಭಾಗಗಳು ವ್ಯವಸ್ಥೆ ಕಾರ್ಯ ನಿರ್ವಹಿಸುವ ಬಗ್ಗೆ ಬೇರೆ ಬೇರೆ ಪುಸ್ತಕಗಳಿಂದ ಮಾಹಿತಿ ದೊರಕಿಸಿಕೊಳ್ಳಬೇಕು. ಕೆಲವೊಮ್ಮೆ ಇತ್ತೀಚಿನ ವೈದ್ಯ ಪತ್ರಿಕೆ ಸಂಚಿಕೆಗಳು ಇದುವರೆಗೆ ಗೊತ್ತಿರದ ಮಾಹಿತಿಯನ್ನು ಒದಗಿಸುತ್ತವೆ. ಅವೆಲ್ಲವನ್ನು ಸಂಗ್ರಹಿಸಿ ವಿಷಯಕ್ಕೆ ಧಕ್ಕೆ ಬಾರದಂತೆ ಬರೆಯುವುದು ನನ್ನ ಪದ್ಧತಿ.

ಅನೇಕ ಬಾರಿ ಪಾರಿಭಾಷಿಕ ಶಬ್ದಗಳಿಗೆ ನಮ್ಮಲ್ಲಿ ಸಮರ್ಪಕ ಅರ್ಥ ಕೊಡುವ ಶಬ್ದಗಳು ಇವೆಯೂ ಹೇಗೆ ಎಂದು ಚಿಂತನೆ ಮಾಡಬೇಕಾಗುತ್ತದೆ. ಪದಕೋಶಗಳು ಅನೇಕ ಬಗೆಯ ಅರ್ಥ ನೀಡುವ ಸಮಾನ ಶಬ್ದಗಳನ್ನೂ ಕೊಡಮಾಡುತ್ತವೆ. ಕೆಲವೊಮ್ಮೆ ಅವು ತಪ್ಪು ಅರ್ಥವನ್ನು ಕೊಡುವುದುಂಟು. ವಿಷಯ ಜ್ಞಾನದಿಂದ ಅದಕ್ಕೆ ಸರಿಯಾದ ಅರ್ಥಕೊಡುವ ಶಬ್ದವನ್ನು ಅನೇಕ ಬಾರಿ ಠಂಕಿಸಬೇಕಾಗುತ್ತದೆ. ಅದು ಅತ್ಯಂತ ಪಾರಿಭಾಷಿಕ ಶಬ್ದವಾಗಿದ್ದರೆ ಅದನ್ನು ಹಾಗೆಯೇ ಬಳಸುತ್ತೇನೆ.

ವೈದ್ಯ ಬರವಣಿಗೆಯಲ್ಲಿ ವಿಷಯಕ್ಕೆ ಪ್ರಾಧಾನ್ಯತೆ. ನಾವು ಹೇಳಬೇಕೆಂದಿರುವುದನ್ನು ಸರಿಯಾದ ಭಾಷೆ ಬಳಸಿ ಬರೆಯುವುದು ತುಂಬಾ ಚೇತೋಹಾರಿ, ಒಮ್ಮೆ ಬರೆದುದನ್ನು ಓದಿ, ತಿದ್ದಿ, ನಂತರ ಅಚ್ಚುಕಟ್ಟಾಗಿ ಬರೆಯುವುದು ನನ್ನ ರೂಢಿ. ಬರವಣಿಗೆಗೆ ಕಾಲ, ಸ್ಥಳ ಎಂಬುದು ಮಹತ್ವ ಪಡೆದಿಲ್ಲ. ಬರೆಯಲು ಯಾವ ಸ್ಥಳವಾದರೂ ಸರಿ ಆದೀತು, ಬರವಣಿಗೆಯ ಮೇಲಿನ ಆಸಕ್ತಿ ನನ್ನಲ್ಲಿ ಸದಾ ಜೀವಂತ. ಬರವಣಿಗೆಯಲ್ಲಿ ಸಂತೋಷ ಕಾಣುತ್ತೇನೆ.

* * *