. ಲೈಂಗಿಕ ಉದ್ರೇಕದ ತೊಂದರೆಗಳು:

ಲೈಂಗಿಕ ಉದ್ರೇಕ ಸ್ತ್ರೀ ಪುರುಷರಲ್ಲಿ ಬದಲಾಗುತ್ತದೆ ಎಂಬುದು ಗಮನಾರ್ಹ ಸಾಮಾನ್ಯವಾಗಿ ಪುರುಷರಲ್ಲಿ ಉದ್ರೇಕತೆಯನ್ನು ಶಿಶ್ನದ ನಿಮಿರುವಿಕೆಯಿಂದ ಸುಲಭವಾಗಿ ಗುರುತಿಸಬಹುದು. ಆದರೆ ಸ್ತ್ರೀಯು ಉದ್ರೇಕಗೊಂಡಿದ್ದಾಳೋ ಇಲ್ಲವೋ ಅರಿಯುವುದು ಕಷ್ಟ. ಕಾರಣ ಉದ್ರೇಕಗೊಳ್ಳದೆಯೂ ಸ್ತ್ರೀ ಸಂಭೋಗ ಕ್ರಿಯೆಯಲ್ಲಿ ಸುಲಭವಾಗಿ ಪಾಲ್ಗೊಳ್ಳಬಲ್ಲಳು. ಅಲ್ಲದೇ ಹೊರಲಕ್ಷಣಗಳೇನೂ ತೋರದೆ ಇರುವ ಸಾಧ್ಯತೆಯೂ ಸ್ತ್ರೀಯಲ್ಲುಂಟು. ಇದಕ್ಕೆ ಕಾರಣ ಉದ್ರೇಕಗೊಂಡಾಗ ಉಂಟಾಗುವ ಸ್ರವಿಕೆ ಯೋನಿಯೊಳಗಡೆ ಇರುವುದು ಹಾಗೂ ಭಗಾಂಕುರ ಹಾಗೂ ಇತರೆ ಸಂಬಂಧಪಟ್ಟ ಅಂಗಗಳು ಪೂರ್ಣವಾಗಿ ದೇಹದ ಒಳಗೇ ಅಡಗಿರುವುದು.

ಈ ಕಾರಣದಿಂದ ಕೆಲವು ಸ್ತ್ರೀಯರಿಗೂ ತಾವು ಉದ್ರೇಕಗೊಂಡಿರುವ ಬಗ್ಗೆ ಅರಿವಾಗದಿರಬಹುದು. ಇದಕ್ಕೆ ಮನಸ್ಸು ಕೊಟ್ಟು ಉಂಟಾಗುವ ಭಾವನೆಗಳನ್ನು ಅರಿಯುವುದು ಸ್ತ್ರೀಗೆ ಅವಶ್ಯಕವಾಗುತ್ತದೆ. ಆದುದರಿಂದಲೇ ಹಸ್ತಮೈಥುನದಿಂದ ಈ ಭಾವನೆಗಳನ್ನು ಅರಿಯುವುದು ಸ್ತ್ರೀಗೆ ಸುಲಭವಾಗುತ್ತದೆ. ಸ್ಪರ್ಶ, ಯಾವುದು ಆನಂದದಾಯಕ, ಹೇಗೆ ಎಂಬುದನ್ನೆಲ್ಲ ಇದರಿಂದ ಅವರು ಅರಿಯಬಲ್ಲರು.

ಸ್ತ್ರೀ ಉದ್ರೇಕಗೊಳ್ಳದೆಯೂ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದಾದರೂ, ಸರಿಯಾಗಿ ಉದ್ರೇಕಗೊಳ್ಳುವುದು ಮುಂದೆ ಭಾವಪ್ರಾಪ್ತಿಯ ದೃಷ್ಟಿಯಿಂದ ಬಹಳ ಮುಖ್ಯ. ಸಂಭೋಗಪೂರ್ವ ರತಿಕ್ರೀಡೆ ಈ ನಿಟ್ಟಿನಲ್ಲಿ ಸ್ತ್ರೀಯ ದೃಷ್ಟಿಯಿಂದ ಒಂದು ಪ್ರಮುಖ ಘಟ್ಟ. ಇದು ಅವಶ್ಯಕವೂ ಹೌದು.

ಬಿ. ಬೇಕಾಮನೆ (FRIGIDITY)

ಭಾವ ಪ್ರಾಪ್ತಿಯ ತೊಂದರೆಗಳು ಪುರುಷರಿಗಿಂತಲೂ ಸ್ತ್ರೀಯರಲ್ಲಿ ಹಲವು ಪಟ್ಟು ಜಾಸ್ತಿ. ಮದುವೆಯಾದ ಶೇಕಡಾ ೬೦ ಜನ ಸ್ತ್ರೀಯರು ಹಾಗೂ ಮದುವೆಯಾಗದವರಲ್ಲಿ ಶೇಕಡಾ ೩೦ ಜನರು ಮಾತ್ರ ಭಾವಪ್ರಾಪ್ತಿ ಲೈಂಗಿಕ ಕ್ರಿಯೆಯಿಂದ ಸಾಧ್ಯ ಎನ್ನುತ್ತಾರೆ. ಎಂದು ಸಮೀಕ್ಷೆಗಳು ತಿಳಿಸಿವೆ. ಸಂಭೋಗ ಕ್ರಿಯೆಯಲ್ಲಿ ಪುರುಷ ಸ್ಖಲಿಸಿದರೂ ಸ್ತ್ರೀ ಭಾವಪ್ರಾಪ್ತಿಯನ್ನು ಬಹಳ ಬಾರಿ ಪಡೆಯಲಾರಳು. ಅವಳಿಗೆ ಮುಂದುವರೆದ ಸ್ಪರ್ಶ, ಭಗಾಂಕುರದ ತೀಡುವಿಕೆ ಇಲ್ಲವೇ ಮುಖ ಮೈಥುನದ ಅವಶ್ಯಕತೆಯಿರುತ್ತದೆ. ಆದುದರಿಂದಲೇ ಪುರುಷರು ಇದನ್ನು ಗಮನಿಸಬೇಕು. ಸ್ಖಲಿಸಿದ ಕೂಡಲೇ ಪಕ್ಕಕ್ಕೆ ತಿರುಗಿ ಮಲಗಬೇಡಿ. ಸ್ಪರ್ಶವನ್ನು ಮುಂದುವರೆಸಿ. ಸ್ವಲ್ಪ ಒಳಹೋಗಿ ತೀಡಿದರೆ ಜಿ.ಸ್ಪಾಟ್‌ನ್ನು ಉದ್ರೇಕಿಸಲು ಸಾಧ್ಯ.

ಬೆರಳಿನಿಂದ ಭಗಾಂಕುರ ಯೋನಿದುಟಿಗಳನ್ನು ತೀಡಿ ಭಗಾಂಕುರವನ್ನು ಚೀಪುವುದರಿಂದಲೂ ಸ್ತ್ರಿ ಬಹಳ ಬೇಗ ಉದ್ರೇಕಗೊಂಡು ಸ್ಖಲಿಸಬಲ್ಲಳು. ಹಿಂಬದಿಯ ಸಂಭೋಗದಲ್ಲೂ ಜಿ. ಸ್ಪಾಟ್ ತೀಡುವಿಕೆ ಜಾಸ್ತಿಯಾಗುವುದರಿಂದ ಸ್ತ್ರೀಯ ಭಾವಪ್ರಾಪ್ತಿ ಸುಲಭವಾಗುತ್ತದೆ. ವೈಬ್ರೇಟರ್ ಬಹಳ ಉಪಯುಕ್ತ.

ಶೇಕಡ ೧೫ ಜನ ಸ್ತ್ರೀಯರಲ್ಲಿ ಯಾವುದೇ ರೀತಿಯ ಲೈಂಗಿಕ ಕ್ರಿಯೆಯೂ ಭಾವಪ್ರಾಪ್ತಿಗೆ ಕೊಂಡೊಯ್ಯದಿರಬಹುದು. ಕೆಲವು ಸ್ತ್ರೀಯರು ಹಸ್ತಮೈಥುನದಿಂದಷ್ಟೇ ಭಾವಪ್ರಾಪ್ತಿಯನ್ನು ಪಡೆಯಬಲ್ಲರು, ಸಂಭೋಗದಿಂದಲ್ಲ. ಕೆಲವು ಸ್ತ್ರೀಯರು ಭಾವಪ್ರಾಪ್ತಿಯನ್ನು ಹೊಂದದ್ದಿದ್ದರೂ ಸಂಭೋಗವೇ ಸಾಕು. ಅದು ಸಂತೋಷದಾಯಕ ಎನ್ನುವವರಿದ್ದಾರೆ. ಆದರೆ ಉದ್ರೇಕಗೊಂಡು ಸಂಭೋಗ ಭಾವಪ್ರಾಪ್ತಿಯ ಮಟ್ಟಕ್ಕೆ ಹೋಗದಿದ್ದರೆ ಸ್ತ್ರೀಗೆ ಯಾತನೆಯಾಗುತ್ತದೆ. ಯೋನಿಯುರಿತ, ದೇಹದ ಉರಿ, ಆತಂಕ, ಕೋಪ ಎಲ್ಲವೂ ಸಾಧ್ಯ. ಕೆಲವು ಸ್ತ್ರೀಯರಿಗೆ ಭಾವಪ್ರಾಪ್ತಿಯಾದರೂ ಅರಿವಾಗದಿರಬಹುದು. ಇನ್ನು ಕೆಲವರಿಗೆ ಭಾವಪ್ರಾಪ್ತಿಯೆಂದರೇನೆಂದೇ ತಿಳಿಯದಿರಬಹುದು.

ಭಾವಪ್ರಾಪ್ತಿಯ ವಿಚಾರವೂ ಕಲಿಕೆಯಿಂದಲೇ ಬರಲು ಸಾಧ್ಯ. ಸಂಗಾತಿಯೊಂದಿಗೆ ಸಂತೋಷ, ಧೈರ್ಯ, ಹೊಂದಾಣಿಕೆಯುಂಟಾಗುವುದು ಮುಖ್ಯ. ಹಿರಿಯರು ನಡೆಸುವ, ಮೊದಲು ಯಾವುದೇ ಸಂಬಂಧವಿಲ್ಲದ ಮದುವೆಗಳಲ್ಲಿ ಮೊದಲ ರಾತ್ರಿ ಸ್ತ್ರೀಗೆ ಕಹಿ ಅನುಭವಾಗುವುದು ಇದಕ್ಕೆ ಕಾರಣವಾಗುವುದು. ಭಾವಪ್ರಾಪ್ತಿಗೆ ಸ್ಪರ್ಶ, ಮುಖಮೈಥುನ, ಬೆರಳಿನಿಂದ ಜನನೇಂದ್ರಿಯಗಳ ತೀಡುವಿಕೆ ಅವಶ್ಯಕ. ಹಸ್ತಮೈಥುನದಲ್ಲೂ ಸ್ತ್ರೀಗೆ ಇದುವೇ ಅವಶ್ಯಕ. ಬೆರಳಿನಿಂದ ಅಥವಾ ವೈಬ್ರೇಟರ್‌ನಿಂದ ಒಂದು ಮಟ್ಟದ ಸಂವೇದನೆಯನ್ನುಂಟು ಮಾಡಲು ಸಾಧ್ಯ. ಭಗಾಂಕುರವನ್ನು ನೇರವಾಗಿ ಘರ್ಷಿಸುವುದು ಕೆಲವರಿಗೆ ಅತಿ ಸಂವೇದನೆಯಿಂದ ನೋವಾಗಬಹುದು. ಏನಿದ್ದರೂ ಸ್ತ್ರೀಯೇ ಯಾವುದು ಸರಿ, ಹೇಗೆ ಎಂದು ನಿರ್ಧರಿಸಬಲ್ಲಳು. ಪುರುಷ ಅವಳನ್ನು ನೋಡಿ ಅವಳಿಗೆ ಯಾವುದು ಸರಿಯೋ ಅದನ್ನು ಮಾಡಲು ಸಹಕರಿಸಬೇಕು.

ಪುರುಷರು ಶೀಘ್ರವಾಗಿ ಸ್ಖಲಿಸಬಲ್ಲರಾದ್ದರಿಂದ ಅವರಿಗೆ ಸ್ತ್ರೀಗೆ ಏಕಿಷ್ಟು ತಡ ಎಂದು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಅದನ್ನು ಅರಿಯಲು ಬಹಳ ಜನ ಪ್ರಯತ್ನಿಸುವುದಿಲ್ಲ ಎಂಬುದು ವಿಪರ್ಯಾಸವೇ ಸರಿ. ಕೆಲವು ಸ್ತ್ರೀಯರು ಪುರುಷನಿಗೆ ಧೈರ್ಯ ತುಂಬಲು ಅಥವಾ ಕೀಳರಿಮೆಯನ್ನುಂಟು ಮಾಡದಿರಲು ಭಾವಪ್ರಾಪ್ತಿಯನ್ನು ಹೊಂದಿದಂತೆ ನಟಿಸುವುದುಂಟು. ಇದು ಸಲ್ಲದು. ಈ ನಟನೆ ನಿಜವಾದ ಭಾವಪ್ರಾಪ್ತಿಯೆಡೆಗೆ ಹೋಗಲು ತಡೆಯಾಗುತ್ತದೆ. ಪುರುಷನಿಗೂ ತಾನು ಮಾಡುತ್ತಿರುವುದು ಸರಿಯೆನಿಸಬಹುದು. ಪುರುಷನಿಗೂ ಸ್ತ್ರೀಗೆ ಭಾವಪ್ರಾಪ್ತಿಗೆ ಶಿಶ್ನವೇ ಪ್ರಮುಖ ಸಾಧನ ಎಂಬ ತಪ್ಪುಕಲ್ಪನೆ ಸಾಧ್ಯ. ಆದ್ದರಿಂದ ಸ್ಪರ್ಶ, ಮುಖ ಮೈಥುನವನ್ನು ಕಡೆಗಣಿಸಬಹುದು.

ಲೈಂಗಿಕ ಶಾಸ್ತ್ರಜ್ಞರ ಪ್ರಕಾರ ಬೇಕಾಮನೆಯುಳ್ಳವರನ್ನು ಸುಲಭವಾಗಿ ಚಿಕಿತ್ಸೆಯಿಂದ ಸರಿ ಮಾಡಬಹುದು. ಶೇಕಡ ೯೦ಕ್ಕೂ ಜಾಸ್ತಿ ಜನರಲ್ಲಿ ನಡವಳಿಕೆ ಚಿಕಿತ್ಸೆಯಿಂದಲೇ ಸರಿಮಾಡಬಹುದು ಎಂದು ತಿಳಿದಿದೆ.

ನಡವಳಿಕೆ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಲೈಂಗಿಕ ಶಿಕ್ಷಣ, ದೇಹ ಸಡಿಲಿಸುವಿಕೆಯ ಚಿಕಿತ್ಸೆ ಮೊದಲು ಮುಖ್ಯ. ಹಲವು ಸ್ತ್ರೀಯರು ಲೈಂಗಿಕ ಕ್ರಿಯೆಯೇ ತಪ್ಪೆಂಬ ಭಾವನೆಯಿಂದ ಬಳಲುತ್ತಿರುತ್ತಾರೆ. ಜನನೇಂದ್ರಿಯಗಳ ಬಗ್ಗೆ ಗಲೀಜು ಎಂಬ ಭಾವನೆ ಸಾಧ್ಯ. ಕೆಲವು ಕೆಟ್ಟ ಘಟನೆಗಳು ಭಾವಪ್ರಾಪ್ತಿಗೆ ಕಂದಕವಾಗಬಹುದು ಅದಕ್ಕಾಗಿ ಚಿಕಿತ್ಸೆ ಅವಶ್ಯಕ.

ನಡವಳಿಕೆಗೆ ಚಿಕಿತ್ಸೆಯಲ್ಲಿ ಮೇಲಿನ ಘಟ್ಟಗಳ ನಂತರ ಸ್ತ್ರೀಗೆ ಮುಖ್ಯವಾಗಿ ಹಸ್ತಮೈಥುನದಲ್ಲಿ ತರಬೇತಿ ಕೊಡುವುದೇ ಅಗಿದೆ. ಏಕಾಂತದಲ್ಲಿ ತನ್ನದೇ ದೇಹವನ್ನು ಅರಿಯುವುದು, ಸರಿಯೆಂಬ ಭಾವನೆ ಬರಿಸಿಕೊಳ್ಳುವುದು ಮುಖ್ಯ. ಸ್ಪರ್ಶದಿಂದ ಯಾವುದು ಸುಖದಾಯಕ ಎಂಬುದನ್ನು ಅರಿಯಬೇಕು. ದೇಹದ ಭಾಗಗಳು, ಎದೆ, ತೊಡೆಯ ಸಂದಿ, ಯೋನಿದುಟಿಗಳು, ನಂತರ ಭಗಾಂಕುರದ ತೀಡುವಿಕೆ ಭಾವಪ್ರಾಪ್ತಿಗೆ ಸಹಾಯವಾಗುತ್ತವೆ. ಈ ರೀತಿಯ ಹೋಂ ವರ್ಕ್ ನಂತರ, ಪುರುಷನೊಂದಿಗೆ ಹಸ್ತಮೈಥುನದ ಅಭ್ಯಾಸ, ನಂತರ ಪುರಷನೇ ಹಸ್ತಮೈಥುನದಿಂದ ಸ್ತ್ರೀಗೆ ಭಾವಪ್ರಾಪ್ತಿಗೆ ಸಹಕರಿಸಬೇಕಾಗುತ್ತದೆ. ಇಲ್ಲಿ ಬೆರಳುಗಳು ಇಲ್ಲವೇ ವೈಬ್ರೇಟರಿನಿಂದಲೂ ಸ್ವತಃ ನಂತರ ಸಂಗಾತಿಯೊಂದಿಗೆ ಭಾವಪ್ರಾಪ್ತಿಯ ತರಬೇತಿ ಸಾಧ್ಯ. ತದನಂತರ ಸಂಭೋಗ ಕ್ರಿಯೆಯ ಮೂಲಕ ಭಾವಪ್ರಾಪ್ತಿಯನ್ನು ತಲುಪಲು ಸಾಧ್ಯವಾಗುತ್ತದೆ.

ಕೆಲವೊಮ್ಮೆ ಪುರುಷ ಹಾರ್ಮೋನ್‌ಗಳೂ ಸ್ತ್ರೀಗೆ ಭಾವಪ್ರಾಪ್ತಿಗೆ ಸಹಕಾರಿ ಎಂದು ತಿಳಿಸಿದೆ. ಇವು ಆಸಕ್ತಿಯನ್ನು ಹೆಚ್ಚಿಸುವಂತೆ ಭಾವಪ್ರಾಪ್ತಿಗೂ ಸಹಕಾರಿ. ಆದರೆ ಅಡ್ಡ ಪರಿಣಾಮಗಳೂ ಜಾಸ್ತಿಯಾದುದುರಿಂದ ಅಷ್ಟಾಗಿ ಬಳಕೆಯಲಿಲ್ಲ.

ವಯಾಗ್ರ ಪುರುಷರಲ್ಲಿ ಮಾತ್ರ ಉಪಯೋಗಿಸಬೇಕೆಂದು ಪಾಶ್ಚಾತ್ಯದೇಶಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಪುರುಷರಲ್ಲಿ ಹೇಗೋ ಹಾಗೆಯೇ ಸ್ತ್ರೀಯರಲ್ಲಿ ಇದು ಕೆಲಸ ಮಡುವುದರಿಂದ ಮುಂದೆ ಅದರ ಉಪಯೋಗವು ಸಾಧ್ಯವಾಗಬಹುದು. ವಯಾಗ್ರ ಆಸಕ್ತಿಯನ್ನು ಹೆಚ್ಚಿಸುವುದಿಲ್ಲ ಎಂಬುದನ್ನು ಗಮನದಲ್ಲಿಡಿ.

ಸಿ. ಯೋನಿ ನೋವು (ವಜೈನಿಸ್ಮಸ್)

ಇದರಲ್ಲಿ ಸ್ತ್ರೀ ಯೋನಿಯ ಸುತ್ತ ಇರುವ ಮಾಂಸಖಂಡಗಳನ್ನು ತನಗರಿವಿಲ್ಲದೆಯೇ ಬಿಗಿ ಹಿಡಿಯುವುದರಿಂದ ಶಿಶ್ನ ಯೋನಿ ಪ್ರವೇಶ ಮಾಡಲಾಗುವುದಿಲ್ಲ. ತೀವ್ರ ತೊಂದರೆಯಿದ್ದಾಗ ಸಂಭೋಗವೇ ಸಾಧ್ಯವಾಗದಿರಬಹುದು. ಈ ರೀತಿಯ ತೊಂದರೆ ಸಾಮಾನ್ಯವಾಗಿ ಹಿಂದೆ ಅತ್ಯಾಚಾರ ಇಲ್ಲವೆ ಯಾವುದೇ ಭಯವನ್ನುಂಟು ಮಾಡುವ ಅನುಭವವಿದ್ದಾಗ ಸಾಮಾನ್ಯ. ಗರ್ಭಧಾರಣೆಯ ಭಯವೂ ಕೆಲವರಲ್ಲಿ ಯೋನಿ ನೋವು ಸೆಡೆತಕ್ಕೆ ಕಾರಣವಾಗುತ್ತದೆ. ಲೈಂಗಿಕ ಕ್ರಿಯೆ ತಪ್ಪು, ಶಿಶ್ನ ದೊಡ್ಡದು, ಯೋನಿ ಸಣ್ಣದು, ಅದು ಹರಿದು ಹೋಗುತ್ತದೆ ಮತ್ತು ನೋವಾಗುತ್ತದೆ. ರಕ್ತ ಸ್ರಾವಾಗುತ್ತದೆ ಎಂಬ ಮೊದಲಾದ ಭಯಗಳೂ ಇದಕ್ಕೆ ಕಾರಣವಾಗಬಹುದು. ಅತಿ ಹತ್ತಿರದ ಸಂಬಂಧದಲ್ಲಿ ಮದುವೆ ಸ್ತ್ರೀಗೆ ಅತಿ ಸಣ್ಣ ವಯಸ್ಸಿನಲ್ಲಿ ಮದುವೆಯಾದಾಗಲೂ ಇದು ಸಾಮಾನ್ಯ.

ಈ ತರಹದ ಸ್ಥಿತಿಯಲ್ಲಿ ಬಲವಂತದ ಸಂಭೋಗ ಸಲ್ಲದು. ಅದು ಅತ್ಯಾಚಾರವೇ ಆದೀತು. ಸಮಾಧಾನಕರ ರೀತಿಯಲ್ಲಿ ಸ್ತ್ರೀಯನ್ನು ಒಲಿಸಿಕೊಂಡು ಹೋಗಬೇಕು. ಲೈಂಗಿಕ ಶಿಕ್ಷಣ, ದೇಹ ಸಡಿಲಿಸುವ ಚಿಕಿತ್ಸೆ (ರಿಲ್ಯಾಕ್ಷೇಶನ್) ಎರ್ಕ್ಸ್‌ಸೈಸ್) ಯೋಗಾಭ್ಯಾಸ, ಹಿಪ್ನೋಸಿಸ್ ಸಹಾಯಕ, ಹಸ್ತಮೈಥುನದ ತರಬೇತಿ ಮುಖ್ಯ. ಇದರಲ್ಲಿ ಮೊದಲು ಸ್ಪರ್ಶ, ನಂತರ ಒಂದು ಬೆರಳಿನಿಂದ ಯೋನಿ ಪ್ರವೇಶ ನಂತರ ಎರಡು ಹೀಗ ನಿಧಾನವಾಗಿ ಹಲವು ದಿನಗಳಲ್ಲಿ ಮುಂದುವರಿಯಬೇಕು. ನಂತರ ಪುರುಷ ಹಸ್ತಮೈಥುನ ಮಾಡಿಸುವುದರ ಬಗ್ಗೆ ತರಬೇತಿ ನೀಡಬೇಕಾಗುತ್ತದೆ. ಡೈಲೇಟರ್‌ಗಳ ಸಹಾಯದಿಂದ ನಡವಳಿಕೆ ಚಿಕಿತ್ಸೆ ಸಾಧ್ಯ. ಸಣ್ಣ ಸೈಜಿಂದ ದೊಡ್ಡ ಸೈಜ್‌ಗೆ ಮುಂದುವರಿಯಬೇಕು. ಪಾಶ್ಚಾತ್ಯ ದೇಶಗಳಿಂದ ತರಿಸುವ ಡೈಲೇಟರ್‌ಗಳು ದುಬಾರಿ. ಬೇರೆ ಬೇರೆ ಸೈಜಿನ ಮೇಣದ ಬತ್ತಿಗಳಿಗೆ ಕಾಮಡೋಮ್ ಹಾಕಿ ಡೈಲೇಟ್‌ಗಳಂತೆ ಉಪಯೋಗಿಸಬಹುದು. ಶಿಶ್ನದ ಸೈಜಿನ ಡೈಲೇಟರ್‌ಗೆ ಹೊಂದಿಕೊಂಡಾದ ಮೇಲೆ ಸಂಭೋಗಕ್ಕೆ ಆತಂಕವಿಲ್ಲದ ರೀತಿ ತೊಡಗಬೇಕಾಗುತ್ತದೆ. ಯೋನಿ ನೋವು, ಸೆಡೆತ ಸಹಕರಿಸಿದರೆ ಸುಲಭವಾಗಿ ಸರಿಮಾಡಬಹುದಾದ ತೊಂದರೆ.

ಡಿ. ಹೆದರಿಕೆ ತೊಂದರೆ (ಸಂಭೋಗಕ್ಕೆ ಸೇರದ ತೊಂದರೆ) (Sexual Aversion Disorder)

ಕೆಲವರಿಗೆ ಲೈಂಗಿಕಾಸಕ್ತಿ ಕಡಿಮೆಯಿರಬಹುದಾದರೆ, ಇನ್ನೂ ಕೆಲವರಲ್ಲಿ ಸಂಭೋಗವೇ ಆಗದು ಎನ್ನುವವರಿದ್ದಾರೆ.  ಈ ಸ್ತ್ರೀಯರು ಪುರುಷನಿಗೆ ಸಂಭೋಗಕ್ಕೆ ಅವಕಾಶವೇ ಕೊಡದಿರಬಹುದು. ಕೆಲವರಿಗೆ ಪತಿ ಹತ್ತಿರ ಬಂದೊಡನೆ ಅತಿಯಾದ ಆತಂಕ, ಗಾಭರಿಯಾಗಬಹುದು. ತೀವ್ರವಾದ ಯೋನಿ ನೋವು ಸೆಡೆತವೂ ಸಾದ್ಯ. ಮದುವೆಯ ನಂತರ ಸಂಭೋಗವೇ ಇವರಲ್ಲಿ ಸಾಧ್ಯವಾಗಿರುವುದಿಲ್ಲ. ಲೈಂಗಿಕತೆಯ ಬಗ್ಗೆ ಕೀಳಾದ ಭಾವನೆ ಎಳೆಯವಯಸ್ಸು, ಹತ್ತಿರದ ಸಂಬಂಧದಲ್ಲಿ ಮದುವೆ, ಲೈಂಗಿಕವಾಗಿ ಕೆಟ್ಟ ಅನುಭವಗಳು, ನೋವಾಗಬಹುದೆಂಬ ಭಯ. ಘಾತಿಯಾಗುವುದೆಂಬ ಸಾಧ್ಯ. ನಡವಳಿಕೆ ಚಿಕಿತ್ಸೆಯಿಂದ ನಿಧಾನವಾಗಿ ಇದನ್ನು ಸರಿಮಾಡಬಹುದು. ವ್ಯಕ್ತಿತ್ವ ತೊಂದರೆಗಳು ಇದರಲ್ಲಿ ಸಾಧ್ಯ. ಕೆಲವೊಮ್ಮೆ ಕೆಲವು ತಿಂಗಳು, ವರ್ಷಗಳ ಚಿಕಿತ್ಸೆಗೆ ಬೇಕಾಗಬಹುದು. ಆತಂಕ ನಿವಾರಕ ಹಾಗೆಯೇ ಬೇಜಾರು ನಿವಾರಕ ಔಷಧಿಗಳು ಕೆಲವರಲ್ಲಿ ಉಪಯೋಗವಾಗಬಹಯುದು.

. ನೋವು ಕೂಟ (Dyspareunia)

ಸಂಭೋಗ ಸಾಮಾನ್ಯವಾಗಿ ಸ್ತ್ರೀ ಪುರುಷರಿಬ್ಬರಿಗೂ ಸಂತೋಷದಾಯಕ ಕ್ರಿಯೆ. ಆದರೆ ಕೆಲವೊಮ್ಮೆ ಸಂಭೋಗ ನೋವುಂಟು ಮಾಡಬಹುದು. ಯಾವುದೇ ರೀತಿಯ ನೋವಿದ್ದರೂ ಏನೋ ತೊಂದರೆಯಿದೆಯೆನ್ನುವುದನ್ನು ತೋರಿಸುತ್ತದೆ. ಇಲ್ಲಿ ತಾತ್ಸರ ಸಲ್ಲದು.

ಪುರುಷರಿಗೆ ಹೋಲಿಸಿದರೆ ಸ್ತ್ರೀಯರಲ್ಲಿ ನೋವು ಕೂಟದ ಸಾಧ್ಯತೆ ಜಾಸ್ತಿ. ಇದಕ್ಕೆ ಸ್ತ್ರೀಪುರುಷರ ದೇಹದ ಬದಲಾವಣೆಗಳು ಕಾರಣ. ಜನನೇಂದ್ರೀಯಗಳ ತೊಂದರೆ ಸ್ತ್ರೀಯರಲ್ಲಿ ಜಾಸ್ತಿ, ಗರ್ಭಧಾರಣೆ, ಜನನ, ಮುಟ್ಟು ಹೀಗೆ ಹಲವು ಸ್ತ್ರೀಯರಿಗೆ ಮೀಸಲಾದವು. ನೋವಿಗೂಕಾರಣವಾಗಬಹುದು. ಆದುದರಿಂದಲೇ ಕಾಯಿಲೆ, ಯೋನಿಯುರಿಯೂತ ಅಥವಾ ಶಸ್ತ್ರಕ್ರಿಯೆ ಹಾಗೂ ಮಗುವಿನ ಜನನದ ನಂತರ ಕೆಲದಿನಗಳ ಸಂಭೋಗ ಸಲ್ಲದು ಎನ್ನಲಾಗುತ್ತದೆ. ಮಗುವಿನ ಜನನದ ನಂತರ ೩ ತಿಂಗಳು, ಕೊನೆ ಪಕ್ಷ ೬ ವಾರ ಸಂಭೋಗ ಸಲ್ಲದು. ಯೋನಿ, ಗರ್ಭಕೋಶದ ಶಸ್ತಚಿಕಿತ್ಸೆಯ ನಂತರವೂ ಮೇಲೆ ತಿಳಿದಷ್ಟು ದಿನವಾದರೂ ಸಂಭೋಗ ಸಲ್ಲದು. ಲೈಂಗಿಕ ಕ್ರಿಯೆಯಿಂದಲೇ ದೂರವಿರಬೇಕೆಂದಿಲ್ಲ. ಸ್ಪರ್ಶ, ಹಸ್ತಮೈಥುನ, ಮುಖಮೈಥುನಕ್ಕೆ ಯಾವ ತೊಂದರೆಯೂ ಇಲ್ಲ.

ಸ್ತ್ರೀಯರಲ್ಲಿ ನೋವು ಕೂಟವಿದ್ದಾಗ ದೈಹಿಕ ಅಥವಾ ಮಾನಸಿಕ ಕಾರಣಗಳಿಂದ ಹಿಗಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು. ದೈಹಿಕ ಕಾರಣಗಳನ್ನು ವಿವರವಾದ ಪರೀಕ್ಷೆಗಳಿಂದ ಇಲ್ಲವೆಂದು ಖಾತ್ರಿ ಮಾಡಿಕೊಳ್ಳಬೇಕು. ಗಾಯ, ಘಾತಿ, ಉರಿಯೂತ ಅಥವಾ ಜನನೇಂದ್ರಿಯಗಳ ಶಸ್ತ್ರಚಿಕಿತ್ಸೆಗಳು ಪ್ರಮುಖ ಕಾರಣಗಳು. ಪುರುಷನಲ್ಲಿ ಶಿಶ್ನ ಒಂದೆಡೆ ಬಗ್ಗಿದರೆ ಫೆರೋನೀಸ್ ಕಾಯಿಲೆಯ ಬಗ್ಗೆ ಖಾತ್ರಿ ಮಾಡಿಕೊಳ್ಳಿ. ಎಡೆಗಟ್ಟ ಗರ್ಭದೊಳ್ಪರೆ ಬೇನೆ (Endometriosis) ಅಥವಾ ಕೀಳ್ಗುಳಿಯ ಉರಿಯೂತವಿದ್ದಾಗ ಸಂಭೋಗ ಕ್ರಿಯೆಯಲ್ಲಿ ನೋವು ಸಾಮಾನ್ಯ. ಸಂಭೋಗದ ಬಗ್ಗೆ ಆತಂಕ, ಭಯ, ಯೋನಿಯು ಹಿರಿದಾಗುವುದರ ಬಗ್ಗೆ ಭಯ, ಸಂಭೋಗದಲ್ಲಿ ಘಾತಿಯಾಗುವುದೆಂಬ ಹೆದರಿಕೆ, ಜನನೇಂದ್ರೀಯಗಳೂ, ಸಂಭೋಗದ ಬಗ್ಗೆ ತಪ್ಪು ಅಭಿಪ್ರಾಯಗಳು, ಕೆಟ್ಟ ಅನುಭವಗಳು ನೋವು ಕೂಟಕ್ಕೆ ಕಾರಣವಾಗುತ್ತದೆ. ದೈಹಿಕ ಚಿಕಿತ್ಸೆ ಹಾಗೆಯೇ ಮನೋಚಿಕಿತ್ಸೆ ಹಾಗೂ ನಡವಳಿಕೆ ಚಿಕಿತ್ಸೆ ಅವಶ್ಯಕ.

* * *